ಸೋಮವಾರ, ಜೂನ್ 1, 2020

ಅನೂಹ್ಯ 3

ಮಗ ಮೌನವಾಗಿ ಯೋಚಿಸುತ್ತ ನಿಂತಿದ್ದು ನೋಡಿ "ಕಿಶೋರ, ಅದೇನೇ ಇದ್ದರೂ ಹೇಳು. ಯಾಕಿಷ್ಟು ಯೋಚನೆ?" ಎಂದರು ಸತ್ಯನಾರಾಯಣ.

"ಅದು...... ಅಪ್ಪಾ...., ಅವಳಿಗೆ ಯಾರೂ ಇಲ್ಲ. ಅವಳ ತಂದೆ-ತಾಯಿ ಆಕ್ಸಿಡೆಂಟ್ ಆಗಿ ತೀರಿಕೊಂಡಿದ್ದಾರೆ. ಅವಳು ಇಲ್ಲಿಯವಳಲ್ಲ. ಪಶ್ಚಿಮ ಬಂಗಾಳದವಳು. ಅವಳಪ್ಪ- ಅಮ್ಮ ಹೋದ್ಮೇಲೆ ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದಿದ್ದು. ಈಗ ಇಲ್ಲೇ ಇದ್ದಾಳೆ. ಇಲ್ಲಿನ ಭಾಷೆ, ರೀತಿ ರಿವಾಜು ಕಲ್ತಿದ್ದಾಳೆ" ಸತ್ಯ-ಸುಳ್ಳು ಎರಡೂ ಬೆರೆಸಿ ಹೇಳಿದವನು ತಾಯಿಯ ಕಡೆ ವಾರೆ ನೋಟ ಹರಿಸಿದ.

"ಬೇಡ ಕಣೋ ಕಿಶೋರ, ಇದು ನಂಗ್ಯಾಕೋ ಸರಿ ಕಾಣ್ತಿಲ್ಲ" ಬಿಕ್ಕುತ್ತಲೇ ನುಡಿದರು ಮಂಗಳಾ. ಅವರು ಬಳಿ ಬಂದು ಅವರ ಕೈ ಹಿಡಿದು, "ಅಮ್ಮಾ, ನವ್ಯಾ ತುಂಬಾ ಒಳ್ಳೆ ಹುಡುಗಿ. ನಿನ್ನ ಸ್ವಂತ ತಾಯಿ ಥರಾ ನೋಡ್ಕೊಳ್ತಾಳೆ. ತುಂಬಾ ಸರಳ ಮೃದು ಸ್ವಭಾವದವಳಮ್ಮ. ಖಂಡಿತ ಎಲ್ಲರಿಗೂ ಹೊಂದಿಕೊಂಡು ಹೊಗ್ತಾಳೆ. ಪ್ಲೀಸ್, ಒಪ್ಕೊ ಅಮ್ಮ" ಅಂದ.

"ಹೌದು ಮಂಗಳಾ, ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತ ಗಾದೆಯೇ ಇಲ್ವಾ. ನನ್ನ ಮಗ ಹಾಗೆಲ್ಲಾ ಯೋಚಿಸದೆ ಹೆಜ್ಜೆ ಇಡೋಲ್ಲ"  ಅಂದ ಗಂಡನ ಮಾತು ಸರಿಯೆನಿಸಿತು ಅವರಿಗೂ. ಆದರೂ ಅಸಮಾಧಾನ ಇದ್ದೇ ಇತ್ತು.

"ಎಲ್ಲಾ ಸರಿ, ಅವಳು ಏನು ಕೆಲಸ ಮಾಡುತ್ತಿದ್ದಾಳೆ? ಇರೋದು ಎಲ್ಲಿ?" ಕೇಳಿದರು ಸತ್ಯನಾರಾಯಣ.

"ನವ್ಯಾ ನಮ್ಮ ಸಮ್ಮು ಕ್ಲೋಸ್ ಫ್ರೆಂಡ್. ಅವಳು ಕೆಲ್ಸ ಮಾಡೋ ಆಸ್ಪತ್ರೆಯಲ್ಲೇ ಅಕೌಂಟ್ ಸೆಕ್ಷನ್ನಲ್ಲಿ ಇದ್ದಾಳೆ. ಆಸ್ಪತ್ರೆ ಹತ್ರ ಒಂದ್ಕಡೆ ಪೇಯಿಂಗ್ ಗೆಸ್ಟ್ ಆಗಿದ್ದಾಳೆ"

ಸಮನ್ವಿತಾ ಫ್ರೆಂಡ್ ಅಂದ ಕೂಡಲೇ ಮಂಗಳಾ ಪೂರ್ತಿ ಮೆತ್ತಗಾದರು. ಸಮನ್ವಿತಾಳಂದರೆ ಆ ಮನೆಯಲ್ಲಿ ಎಲ್ಲರಿಗೂ ಅತೀವ ಅಕ್ಕರೆ. ಕಿಶೋರನಿಗೆ "ಆಶ್ರಯ" NGO ದಲ್ಲಿ ಅವಳ ಪರಿಚಯವಾಗಿತ್ತು. ಅವಳೂ ಅವನಂತೆ ಆಶ್ರಯದ ಸಕ್ರಿಯ ಕಾರ್ಯಕರ್ತೆ. ಶ್ರೀಮಂತ ಉದ್ಯಮಿ ಸತ್ಯಂ ರಾವ್ ರ ಏಕೈಕ ಸಂತಾನ. ವೃತ್ತಿಯಿಂದ ವೈದ್ಯೆ. ಓದಿದ್ದೆಲ್ಲಾ ವಿದೇಶದಲ್ಲಾದರೂ ವೃತ್ತಿಗೆ ತಾಯ್ನಾಡನ್ನೇ ಆಯ್ದುಕೊಂಡವಳು.

ಇಬ್ಬರ ಆಸಕ್ತಿ ಅಭಿರುಚಿ ಒಂದೇ ತೆರನಾಗಿ ಇದ್ದುದರಿಂದ ಆತ್ಮೀಯ ಸ್ನೇಹಿತರಾದರು. ವಾರಕ್ಕೊಮ್ಮೆ ಕಿಶೋರನ ಮನೆಗೆ ವಿಸಿಟ್ ಹಾಕುವುದು ಅವಳ ಅಭ್ಯಾಸ. ಅಷ್ಟು ಶ್ರೀಮಂತ ಮನೆತನವಾದರೂ ಸ್ವಲ್ಪವೂ ಬಿಂಕ ಬಿಗುಮಾನವಿಲ್ಲದ ಹುಡುಗಿ ಮಂಗಳಾಗೆ ಅಚ್ಚುಮೆಚ್ಚು. ಅವಳ ಮಾತೂ ಹಿತ ಮಿತ. ತಮ್ಮಿಬ್ಬರು ಮಕ್ಕಳಿಗಿಂತ ಅವರಿಗೆ ಸಮನ್ವಿತಾಳ ಮೇಲೆಯೇ ಒಂದು ಹಿಡಿ ಪ್ರೀತಿ ಜಾಸ್ತಿ ಎಂದರೆ ತಪ್ಪಲ್ಲ.

ಇಂತಿಪ್ಪ ಸಮನ್ವಿತಾಳ ಸ್ನೇಹಿತೆ ಅಂದ್ರೆ ಹುಡುಗಿ ಒಳ್ಳಯವಳೇ ಇರ್ಬೇಕು ಅಂದುಕೊಂಡವರ ಮನ ನಿರಾಳವಾಯಿತು. ತಾಯ್ತಂದೆಯರು ಇಲ್ಲವಾದರೇನು, ಬೇರೆ ಪ್ರದೇಶದವಳಾದರೇನು.... ಹುಡುಗಿಯ ಗುಣ ನಡತೆ ಉತ್ತಮವಾಗಿದ್ದು ನಮಗೆ ಹೊಂದಿಕೊಂಡರೆ ಸಾಕೆಂದು ನಿರ್ಧರಿಸಿಬಿಟ್ಟಿದ್ದರು.

ಮರುದಿನ ಕಿಶೋರ್ ಮತ್ತು ಸಮನ್ವಿತಾಳ ಜೊತೆಗೆ ಬಂದ ನವ್ಯಾಳನ್ನು ನೋಡಿ ಅವರ ಅಸಮಾಧಾನ ಹೇಳಹೆಸರಿಲ್ಲದಂತೆ ಮಾಯವಾಗಿತ್ತು.  ಅವಳ ನಿಷ್ಕಲ್ಮಶ ಮುಖ, ಮೆದುಮಾತು ಅವರಿಗೆ ಹಿಡಿಸಿತ್ತು. ಆ ಕಣ್ಣಿನಾಳದಲ್ಲಿ ಅವ್ಯಕ್ತ ನೋವೊಂದು ಹೆಪ್ಪುಗಟ್ಟಿದಂತಿತ್ತು. ತಾಯ್ತಂದೆಯರನ್ನು ಕಳೆದುಕೊಂಡ ಆಘಾತಕ್ಕಿರಬಹುದೆಂದು ಊಹಿಸಿದ್ದರು. ಮೃದುವಾಗಿ ತಲೆ ಸವರಿದ್ದರು.

"ಅಮ್ಮ, ನನಗೆ ಫ್ರೆಂಡ್ಸ್ ಅಂತ ಇರೋದು ಇವರಿಬ್ರೇ. ನವ್ಯಾ ಖಂಡಿತ ಈ ಮನೆಗೆ ಒಳ್ಳೇ ಸೊಸೆ ಆಗ್ತಾಳೆ. ನನ್ನ ಮಾತಿನ ಮೇಲೆ ನಂಬಿಕೆ ಇಡಿ" ಸಮನ್ವಿತಾ ಅವರ ಕೈ ಹಿಡಿದು ಹೇಳಿದ್ದಳು.

ಅದೇ ತಿಂಗಳಿನಲ್ಲಿ ಸರಳವಾಗಿ ಕಿಶೋರ-ನವ್ಯಾ ವಿವಾಹ ನೆರವೇರಿತು. ಕಿಶೋರನ ಮನದನ್ನೆಯಾಗಿ, ಮಂಗಳಾ- ಸತ್ಯನಾರಾಯಣ ಅವರ ಮುದ್ದಿನ ಸೊಸೆಯಾಗಿ, ಕಾರ್ತಿಕ್ ನ ಅಕ್ಕರೆಯ ಅತ್ತಿಗೆಯಾಗಿ‌ ಆ ಮನೆ ಹೊಕ್ಕಿದ್ದಳು ನವ್ಯಾ.

ಅಂದಿನಿಂದ ಅವಳಿಲ್ಲದೆ ಆ ಮನೆಯಲ್ಲಿ ಯಾವ ಕೆಲಸವೂ ಆಗದು ಅನ್ನುವಷ್ಟು ಆವರಿಸಿಕೊಂಡಳು. ಅವಳ ಮೆಲು ಮಾತು, ಹಿರಿಯರ ಬಗೆಗಿನ ಕಾಳಜಿ ಮಂಗಳಾರಿಗೆ ಬಲು ಹಿಡಿಸಿತ್ತು. 'ಯಾವ ಪುಣ್ಯಾತ್ಗಿತ್ತೀ ಹೆತ್ತ ಮಗಳೋ, ಮಹಾಲಕ್ಷ್ಮೀ ಥರಾ ನಮ್ಮನೆಗೆ ಬಂದಿದ್ದಾಳೆ. ನಾವು ಜನ್ಮ ಪೂರ್ತಿ ಹುಡುಕಿದರೂ ಇಂಥ ಸೊಸೆ ಸಿಗ್ತಿರ್ಲಿಲ್ಲ. ಕಿಶೋರ ಪುಣ್ಯ ಮಾಡಿದ್ದ' ಅಂತ ದೇವರಿಗೆ ಕೈ ಮುಗಿಯತ್ತಿದ್ದರು.

ಕಾರ್ತಿಕ್ ಗಂತೂ ಅತ್ತಿಗೆ ಎಂದರೆ ಅಚ್ಚುಮೆಚ್ಚು. ಅಪ್ಪ ಅಮ್ಮನೊಂದಿಗೆ ಹರಟಲು ಅವನಿಂದಾಗದು. ಇನ್ನು ಇಡೀ ಮನೆಯಲ್ಲಿ ಅವನು ಹೆದರೋದು ಕಿಶೋರನಿಗೆ. ಅವನ ಬಳಿ ಸಲಿಗೆ ಕಡಿಮೆ. ಹಾಗಾಗಿ ನವ್ಯಾಳೆ ಅವನಿಗೆ ವಾಕಿಂಗ್ ನಿಂದ ಹಿಡಿದು ಹರಟೆ ಹೊಡೆಯುವ ತನಕ ಜೊತೆಗಾತಿ.

********************

ವಾಕಿಂಗ್ ಮುಗಿಸಿ ನವ್ಯಾ, ಕಾರ್ತಿಕ್ ಮನೆಗೆ ಹಿಂದಿರುಗಿದಾಗ ಕತ್ತಲಾಗಿತ್ತು. ಮಂಗಳಾ ಅಡುಗೆ ಕೆಲಸದಲ್ಲಿ ಇದ್ದದ್ದು ಕಂಡು ನವ್ಯಾ ಅತ್ತ ಕಡೆ ಹೋದಳು. ರೂಮಿಗೆ ಹೂರಟ ಕಾರ್ತಿಕ್ ನ ಹಾಲ್ ನಲ್ಲಿದ್ದ ಕಿಶೋರ ಕರೆದು ಪಕ್ಕದಲ್ಲಿ ಕೂರಿಸಿಕೊಂಡ.

"ಹೇಗೆ ನಡಿತಿದೆ ಕಾಲೇಜು? ನೀನು ಓದಿನ ಕಡೆ ಗಮನ ಕೊಡ್ತಾ ಇಲ್ಲಾ ಅಂತ ಅಮ್ಮ ಅಂತಿದ್ರು" ಎಂದು ಕೇಳಿದ.

"ಹಾಗೇನೂ ಇಲ್ಲ ಅಣ್ಣ. ಮುಂದಿನ ವಾರ ಕಾಲೇಜ್ ಡೇ. ಅದ್ರ ಪ್ರಾಕ್ಟೀಸ್ ನಡೀತಿದೆ. ಹಾಗಾಗಿ ಕ್ಲಾಸ್ ಇರೋಲ್ಲ ಅಷ್ಟೇ" ಎಂದ ಮನದಲ್ಲೇ ಅಮ್ಮನಿಗೆ ಬೈಯುತ್ತಾ.

"ನೋಡು ಕಾರ್ತಿ, ಈ ವಯಸ್ಸಲ್ಲಿ ಸುತ್ತಾಟ, ಹುಡುಗಾಟದಲ್ಲಿ ಆಸಕ್ತಿ ಜಾಸ್ತಿ ಇರೋದು ಸಹಜ. ಆದರೆ ಎಲ್ಲವೂ ಒಂದು ಮಿತಿಯಲ್ಲೇ ಇರಲಿ. ಓದಿನ ಬಗ್ಗೆ ಹೆಚ್ಚಿನ ಗಮನ ಇರಲಿ" ಅಂದಾಗ ತಲೆ ತಗ್ಗಿಸಿದ.

"ಸರಿಯಾಗಿ ಕೇಳು ಅವನನ್ನು.ನಾನು ಕೇಳಿದ್ರೆ ನಿಂಗಿದೆಲ್ಲ ಅರ್ಥ ಆಗೋಲ್ಲ ಸುಮ್ನಿರು ಅಂತ ಬಾಯಿ ಮುಚ್ಸ್ತಾನೆ" ಸಾರಿನ ಪಾತ್ರೆಯನ್ನು ಡೈನಿಂಗ್ ಟೇಬಲ್ ಮೇಲೆ ಇಡುತ್ತಾ ಗೊಣಗಿದರು ಮಂಗಳಾ.

"ಮಾತೃಶ್ರೀ ಮಂಗಳಮ್ಮನೋರೇ, ಅದನ್ನು generation gap ಅಂತಾರೆ" ಕಾರ್ತಿಕ್ ನಾಟಕೀಯವಾಗಿ ಹೇಳಿದ.

"ನೀನೋ, ನಿನ್ನ ಇಂಗ್ಲೀಷೋ, ನನಿಗೆ ಒಂದೂ ಅರ್ಥ ಆಗಲ್ಲಪ್ಪ" 

"ನಿನಗೆ ತುಂಬಾ ವಯಸ್ಸಾಗಿದೆ, ಓಲ್ಡ್ ಮಾಡೆಲ್, ಶಿಲಾಯುಗದ ಕಾಲದೋಳು ಅಂತ ನಿನ್ ಮಗ ಹೇಳ್ತಿದ್ದಾನೆ ಕಣೇ" ಸತ್ಯನಾರಾಯಣ ಕಾಲೆಳೆದಾಗ ಎಲ್ಲರೂ ನಕ್ಕರು.

"ನೀವೊಬ್ರು ಬಾಕಿ ಇದ್ರಿ ಇವನ ಕಪಿಸೇನೆಲಿ" ನಸುಮುನಿದವರು "ಈ ಮನೆಗೊಂದು ಪುಟ್ಟ ಕಂದ ಬಂದು ನಾನು ಅಜ್ಜಿ ಆಗೋವರೆಗೂ ನನಿಗೆ ವಯಸ್ಸಾಗಿದೆ ಅಂತ ನಾನು ಒಪ್ಪಿಕೊಳ್ಳೊಲ್ಲ" ಅಂದವರ ಮಾತನ್ನು ಸತ್ಯನಾರಾಯಣ, ಕಾರ್ತಿಕ್ ಅನುಮೋದಿಸಿದರು.

"ಸರಿ ಸರಿ, ಮಾತು ಜಾಸ್ತಿ ಆಯ್ತು. ಎಲ್ಲಾ ಊಟಕ್ಕೇಳಿ" ಮಂಗಳಾ ಅಂದಾಗ ಸತ್ಯನಾರಾಯಣ, ಕಾರ್ತಿಕ್ ಎದ್ದರು.

ಕಿಶೋರ್ ಮೆಲ್ಲನೆ ಮಡದಿಯತ್ತ ನೋಟ ಹರಿಸಿದ. ಕೃತಕ ನಗು ಮೊಗದಲ್ಲಿ ಹರಡಿ ನಿಂತಿದ್ದವಳ ಮನದ ಭಾವನೆಗಳನ್ನು ಅಳೆಯಲಾಗಲಿಲ್ಲ ಅವನಿಗೆ.‌

ಮುಂದುವರೆಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ