ಸೋಮವಾರ, ಜೂನ್ 29, 2020

ಅನೂಹ್ಯ 39

ಅಳುವಿನ ನಡುವಿಂದ ನಡುಗುವ ದನಿಯಲ್ಲಿ ಬಂದ ನವ್ಯಾಳ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದ ಮಂಗಳಾ ಅವಳಾಡಿದ ಕೊನೆಯ ಪದ ಕೇಳಿ ಸ್ಥಬ್ದರಾದರು. ಸೊಸೆಯ ತಲೆಯನ್ನು ಸವರುತ್ತಿದ್ದ ಕೈ ತಟಸ್ಥವಾಯಿತು.

ಮಂಗಳಮ್ಮ, ಸತ್ಯನಾರಾಯಣರಿಬ್ಬರೂ ಅವಳ ಮಾತು ಕೇಳಿ ಗರಬಡಿದವರಂತೆ ಕುಳಿತುಬಿಟ್ಟರು. ಒಂದಿಷ್ಟು ಸಮಯ ಕಳೆದು ತಾವೇ ತಪ್ಪಾಗಿ ಕೇಳಿಸಿಕೊಂಡಿರಬಹುದು ಎಂದುಕೊಂಡವರು, "ಏನ್ ಹೇಳ್ದೇ ನವ್ಯಾ ನೀನು?" ಎಂದು ಮತ್ತೊಮ್ಮೆ ಅಪನಂಬಿಕೆಯಿಂದ ಕೇಳಿದರು ಮಂಗಳಾ.

"ನಾನು ವೇಶ್ಯೆಯಾಗಿದ್ದೆ....." ಬಿಕ್ಕುವಿಕೆಯ ನಡುವೆಯೇ ಈ ಬಾರಿ ಸ್ಪಷ್ಟವಾಗಿ ಹೇಳಿದಳು. 

ಆ ಮಾತು ಕೇಳಿದ್ದೇ ಮಂಗಳಾ ತಟ್ಟನೆ ಎದ್ದರು. ಅವರೆದ್ದ ರಭಸಕ್ಕೆ ಒರಗಿದ್ದ ನವ್ಯಾ ನೆಲಕ್ಕೆ ಬಿದ್ದಳು. 'ಕಟ್ಟಿದ ಬದುಕು ಮಣ್ಣುಪಾಲಾಗುವ ಸೂಚನೆಯಾ?' ಮನ ಶಂಕಿಸಿತು. ಕಣ್ಣೊರೆಸಿಕೊಂಡು ಎದ್ದು ಗೋಡೆಗೊರಗಿ ಮುದುರಿ ಕುಳಿತಳು. ತಲೆಯೆತ್ತಿ ಅತ್ತೆ ಮಾವನ ಮುಖ ನೋಡುವ ಆಸೆ. ಆದರೆ ಧೈರ್ಯ ಸಾಲದಾಗಿತ್ತು. ಎಷ್ಟು ಹೊತ್ತು ಹಾಗೆಯೇ ಬಿಕ್ಕಳಿಸುತ್ತಾ ಕುಳಿತಳೋ ಅವಳಿಗೇ ತಿಳಿಯದು.

ಬಹಳ ಹೊತ್ತಿನ ಮೇಲೆ ಇದ್ದಬದ್ದ ಧೈರ್ಯವನ್ನೆಲ್ಲಾ ಕೂಡಿಸಿ ಕಷ್ಟಪಟ್ಟು ನೆಲದ ಮೇಲಿದ್ದ ದೃಷ್ಟಿಯನ್ನು ನಿಧಾನವಾಗಿ ಮೇಲೇರಿಸಿದಳು.......

ಸತ್ಯನಾರಾಯಣರು ಸೋಫಾದ ಮೇಲೆ ತಲೆಗೆ ಕೈಯೊಡ್ಡಿ ಕುಳಿತಿದ್ದರು. ವೇದನೆಯ ಗೆರೆಯೊಂದು ಸ್ಪಷ್ಟವಾಗಿತ್ತು ಮುಖದಲ್ಲಿ. ಆ ಗೆರೆಗಳ ಆಳದಲ್ಲಿ 'ಏಕೆ ಹೀಗೆ ಮಾಡಿಬಿಟ್ಟೆ' ಎಂಬ ಪ್ರಶ್ನೆಯಿತ್ತಾ? ಅವಳಿಗೆ ಗೊತ್ತಾಗಲಿಲ್ಲ.

ಅಮ್ಮನ ಅರಸಿತು ಅವಳ ಕಣ್ಣು..... ಅವರ ಮನಸ್ಸಿಗೆ ತನ್ನಿಂದ ತುಂಬಾ ಘಾಸಿಯಾಗಿದೆ ಎಂಬ ಅರಿವಿತ್ತು ಅವಳಿಗೆ. ಅದು ಬಹಳವಾಗಿ ಹಿಂಸಿಸಿತು ನವ್ಯಾಳನ್ನು. ತನ್ನ ಆಯಿ ತೀರಿದ ಹಲವು ವರ್ಷಗಳ ನಂತರ ಅವಳ ಬದುಕಿನಲ್ಲಿ ಮತ್ತೆ ಅಮ್ಮನ ಮಮತೆ ಹೊತ್ತು ತಂದಿದ್ದು ಮಂಗಳಮ್ಮ. ಹಾಗೆ ನೋಡಿದರೆ ಅವಳಿಗೆ ಅತ್ತೆಯ ಮೇಲಿನ ಅಕ್ಕರೆ ಗಂಡನ ಮೇಲಿನ ಪ್ರೀತಿಗಿಂತಲೂ ತುಸು ಹೆಚ್ಚೇ. ಅವರಿಗೂ ಅವಳೆಂದರೆ ಕಿಶೋರ್ ಹಾಗೂ ಕಾರ್ತಿಗಿಂತಲೂ ಒಂದು ಕೈ ಮೇಲು.

ಸುತ್ತಲೂ ನೋಟ ಹರಿಸಿದಳು. ದೇವರ ಕೋಣೆಯ ಎದುರಿನ ಗೋಡೆಗೊರಗಿ ಕುಳಿತಾಕೆ ಕಣ್ಣಿಗೆ ಬಿದ್ದರು. 

ಅವರ ಮುಖದಲ್ಲಿ ಏನಿತ್ತು…...? ಅದು ವಿಷಾದವೇ? ಅಸಹ್ಯವೇ? ನೋವೇ?  ಕೋಪವೇ? ದ್ವೇಷವೇ? ಇಲ್ಲ ಇವೆಲ್ಲವೂ ಮಿಳಿತಗೊಂಡ ಭಾವವಾ.......?  ಊಹ್ಮೂಂ...... ಯಾವುದೂ ಅಲ್ಲ…... ಅವರ ಮುಖ ಭಾವಶೂನ್ಯವಾಗಿತ್ತು. ಗಾಢ ನಿರ್ಲಿಪ್ತತೆಯೊಂದು ಅವರನ್ನಪ್ಪಿತ್ತು. ಈಗ ಅವಳಿಗೆ ನಿಜಕ್ಕೂ ಭಯವಾಗತೊಡಗಿತು. 

ಸತ್ಯ ತಿಳಿದಾಗ ಕೋಪಿಸಿಕೊಂಡು ಬೈದು ಕೂಗಾಡಬಹುದು, ಮನೆಯಿಂದ ಹೊರಹಾಕಬಹುದು ಎಂದೆಲ್ಲಾ ನಿರೀಕ್ಷಿಸಿದ್ದಳು ನವ್ಯಾ. ಆದರೆ ಮಂಗಳಾ ಮೌನಿಯಾಗಿದ್ದರು. ಆ ಮೌನವೇ ಮಾತಿಗಿಂತಲೂ ಮೊನಚಾಗಿ ಅವಳನ್ನು ಕೊಲ್ಲತೊಡಗಿತು‌. ಎದ್ದು ಅವರ ಬಳಿ ಬಂದು ಎದುರಿನಲ್ಲಿ ಕುಸಿದು ಕುಳಿತು ಅವರ ಕಾಲನ್ನು ಹಿಡಿದಳು.

"ಅಮ್ಮಾ, ಮಾಡಿದ ತಪ್ಪಿಗೆ ನೀವು ನನ್ನ ಬೈಯಿರಿ, ಹೊಡೀರಿ, ಬೇಕಾದ್ರೇ ನನ್ನ ಕೊಂದೇ ಬಿಡಿ. ಬೇಜಾರಿಲ್ಲ ನಂಗೆ. ಆದ್ರೆ ದಯವಿಟ್ಟು ಏನಾದ್ರೂ ಮಾತಾಡಿ........" ಗೋಗರೆದಳು. ಏನಾದರೂ ಮಾತನಾಡಿದರೆ ಅವರ ಮನದ ಬೇಗೆ ತುಸುವಾದರೂ ನೀಗುತ್ತದೆ ಎಂಬ ಆಸೆ ಅವಳದು. ಆದರವರದು ಅದೇ ಮೌನ. ಪರಿ ಪರಿಯಾಗಿ ಕೇಳಿದಳು. ಯಾವುದಕ್ಕೂ ಕಿಂಚಿತ್ ಪ್ರತಿಕ್ರಿಯೆ ಸಿಗಲಿಲ್ಲ ಆಕೆಯಿಂದ. ಆಕೆ ಶಿಲೆಯಂತೆ ಕುಳಿತುಬಿಟ್ಟಿದ್ದರು. ಅವರ ಮನದಲ್ಲಿ ಏನು ನಡೆಯುತ್ತಿರಬಹುದೆಂದು ಗ್ರಹಿಸಲೂ ಸಾಧ್ಯವಾಗದೇ ತಲ್ಲಣಿಸಿದಳು.

"ಅಮ್ಮಾ….. ಪ್ಲೀಸ್, ಮಾತಾಡಿಮ್ಮ. ಈ ರೀತಿ ಎಲ್ಲಾ ಮನಸ್ಸಲ್ಲಿಟ್ಕೊಂಡು ಕಲ್ಲಿನ ರೀತಿ ಕೂತ್ಕೋಬೇಡಿ. ನಾನು ಇಲ್ಲಿರೋಲ್ಲ‌ ಮನೆ ಬಿಟ್ಹೋಗ್ತೀನಿ. ಮನೆ ಯಾಕೆ, ಈ ಊರೇ ಬಿಟ್ಹೋಗ್ತೀನಿ. ಇನ್ಯಾವತ್ತೂ ನಿಮ್ಮ ಕಣ್ಣಿಗೆ ಕಾಣ್ಸೋಲ್ಲ. ನಂದೇ ತಪ್ಪು. ಹೌದು. ನಾನು ಸಮನ್ವಿತಾ ಸಿಗುವ ಮುಂಚೆ ವೇಶ್ಯಾವಾಟಿಕೆಯ ದಂಧೆಯಲ್ಲಿದ್ದೆ. ಆದ್ರೆ ಸತ್ಯವಾಗ್ಲೂ ನಂದೇನೂ ತಪ್ಪಿಲ್ಲ ಅದ್ರಲ್ಲಿ. ನನ್ನ ಆಯೀ ಬಾಬ ತೀರಿದ ಮೇಲೆ ಸಂಬಂಧಿಕ ಅನ್ನಿಸಿಕೊಂಡವನೊಬ್ಬ ದಿಕ್ಕುದೆಸೆಯಿಲ್ಲದ ನನ್ನನ್ನು ಇಪ್ಪತೈದು ಸಾವಿರದ ಆಸೆಗೆ ಮಾರಿಬಿಟ್ಟ. ಅವ್ನು ನನ್ನ ಮಾರಿದ್ದಾನೆ ಅಂತಲೂ ಆಮೇಲೇ ಗೊತ್ತಾಗಿದ್ದು ನನಗೆ. ಅಲ್ಲಿದ್ದವರೆಲ್ಲಾ ನರರೂಪಿ ರಾಕ್ಷಸರು. ನನ್ನಂತಹವಳು ಅವರನ್ನು ಎದುರಿಸೋಕಾಗುತ್ತಾ? ಆದ್ರೂ ನನ್ನ ಕೈಲಾದಷ್ಟು ಹೋರಾಡಿದೆ. ಅವರ ಹೊಡೆತ ಬಡಿತಗಳನ್ನು ಸಹಿಸಿ ಅನ್ನ, ನೀರು ಬಿಟ್ಟು ಕುಳಿತೆ. ಚಿಕ್ಕೋಳು ನಾನಿನ್ನೂ ಆಗ. ಈ ಲೋಕದ ಕಠೋರತೆಯ ಅರಿವಿರಲಿಲ್ಲ ನನಗೆ. ನಾನು ಹೀಗೆ ಉಪವಾಸ ಮಾಡಿದೊಡನೆ ನನ್ನ ಬಿಟ್ಟು ಕಳಿಸ್ತಾರೆ ಅನ್ನೋ ಮುಗ್ಧ ಯೋಚನೆ ನನ್ನದು. ಆದರೆ ದಿನಾ ನನ್ನಂತಹ ಸಾವಿರಾರು ಹೆಣ್ಣುಗಳನ್ನು ಸರ್ಕಸ್ಸಿನ ಪ್ರಾಣಿಗಳಂತೆ ಪಳಗಿಸೋ ಅವರಿಗೆ ನಾನ್ಯಾವ ಲೆಕ್ಕ. ಅವರೇ ಊಟ, ತಿಂಡಿ ಕೊಡೋದು ನಿಲ್ಲಿಸಿದ್ರು. ಊಟ ಬೇಕೋ ದಂಧೆಗೆ ಇಳಿ ಇಲ್ಲಾ ಹೀಗೆ ಉಪವಾಸ ಸಾಯಿ ಎಂದರು‌. ಇಲ್ಲಿಂದ ಹೊರ ಹೋಗುವುದು ನನ್ನ ಭ್ರಮೆಯಷ್ಟೇ ಅಂತ ಆಗಲೇ ಅನ್ನಿಸತೊಡಗಿತ್ತು. ಆದ್ರೂ ಹಠ ಹಿಡಿದು ಉಪವಾಸ ಮುಂದುವರೆಸಿದೆ. ಜೊತೆಗೆ ದೈನಂದಿನ ಹೊಡೆತಗಳನ್ನು ಬೇರೆ ಸಹಿಸಬೇಕಿತ್ತು..... ಎಷ್ಟು ದಿನ? ಒಂದು, ಎರಡು, ಮೂರು? ನನ್ನ ಮನೆಯಲ್ಲಿ ಬಡತನವಿತ್ತಾದರೂ ಒಪ್ಪತ್ತಿನ ಊಟಕ್ಕೆ ತೊಂದರೆ ಇರಲಿಲ್ಲ. ಆದರೆ ಆ ನರಕದಲ್ಲಿ ಮೊದಲ ಬಾರಿಗೆ ಹಸಿವಿನ ಅಸಲೀ ಮುಖದ ಪರಿಚಯವಾಗಿತ್ತು. ಕೊನೆಗೂ ನಾನು ಸೋತೆ. ಅಗಾಧ ಹಸಿವಿನೆದುರು, ಆ ಅಸಾಧ್ಯ ನೋವಿನೆದುರು....... ಸೋತು ಹೋದೆ. ಅಷ್ಟೇ..... ನಾನು ಆ ನರಕದೊಳಗೆ ಬಂಧಿಯಾದೆ. ಅಲ್ಲಿಂದ ನನ್ನ ಬದುಕಿನ ತುಂಬಾ ರೌರವ ನರಕವೇ. ಉದರದ ಹಸಿವೇನೋ ನೀಗಿತು. ಆದರೆ ಎಂದಿಗೂ ನೀಗದ ಗಂಡಸಿನ ಕಾಮಾಗ್ನಿಯೆಂಬ ಹಸಿವು.....? ಅದರ ಚಿತ್ರವಿಚಿತ್ರ ವಿಕೃತಗಳ ವಿಶ್ವರೂಪ ದರ್ಶನ…. ಬದುಕಿನ ಆಸೆಯನ್ನೇ ಬಿಟ್ಟೆ. ದೇಹವಿತ್ತೇ ಹೊರತು ಅದರೊಳಗೆ ಉಸಿರಿರಲಿಲ್ಲ. ಆ ಜಾಗಕ್ಕೆ ಬೇಕಾದುದು ದೇಹವೇ ಹೊರತು ಜೀವವಲ್ಲ. ಅಲ್ಲೇ ಹಿಂಡಿಹಿಪ್ಪೆಯಾಗಿ ಬೀದಿ ಹೆಣವಾಗುವೆ ಅನ್ನುವ ಭವಿಷ್ಯ ತಿಳಿದಿತ್ತು. ಆದರೆ ವಿಧಿ ಒಂದಿಷ್ಟು ಕರುಣೆ ತೋರಿತು ನನ್ನ ಬಗ್ಗೆ. ಕಗ್ಗತ್ತಲಿನ ಕೂಪದಲ್ಲಿದ್ದ ನನಗಾಗಿ ದಾರಿದೀಪವೊಂದನ್ನು ಕರುಣಿಸಿತು. ಆ ದಾರಿದೀಪ ತನ್ನ ಮಂತ್ರ ದಂಡದ ಚಮತ್ಕಾರವನ್ನು ತೋರಿಸಿತು. ಕಣ್ಮುಚ್ಚಿ ಬಿಡುವುದರೊಳಗೇ ಸಮಾಧಿಯಿಂದ ಎದ್ದು ಬಂದಿದ್ದೆ. ಹೊಸ ಜಗತ್ತಿಗೆ…… ಬೆಳಕಿನ ನಂದನಕ್ಕೆ…..‌ ಇಲ್ಲಿ ಕಿಶೋರ್ ಸಿಕ್ಕರು.... ಈ ಬೃಂದಾವನ ದಕ್ಕಿತು.... ನಿಮ್ಮೆಲ್ಲರಿಗೂ ಮೊದಲೇ ನನ್ನ ಅತೀತದ ಬಗ್ಗೆ ಎಲ್ಲಾ ಹೇಳಬೇಕು ಎಂದುಕೊಂಡೆ. ನಿಮ್ಮ ಪ್ರೀತಿ, ವಿಶ್ವಾಸ, ಅಕ್ಕರೆ ನನ್ನ ಕಟ್ಟಿ ಹಾಕಿತ್ತು ಅಮ್ಮಾ. ನಾನು ತೀರಾ ಸ್ವಾರ್ಥಿಯಾದೆ. ಅಷ್ಟು ವರ್ಷಗಳು ನರಕ ನೋಡಿದವಳು ಈಗ ಸಿಕ್ಕಿರೋ ಸ್ವರ್ಗವನ್ನು ಯಾಕೆ ಬಿಡಬೇಕು? ನನಗೂ ಎಲ್ಲರ ತರ ಬದುಕೋ ಹಕ್ಕಿದೆ ಅಂತ ನನ್ನ ಅಂತರಾತ್ಮದ ಜೊತೆ ವಾದ ಮಾಡಿ ಗೆದ್ದೆ. ಸತ್ಯ ಹೇಳಿ ನಿಮ್ಮನ್ನೆಲ್ಲಾ ಕಳ್ಕೊಳ್ಳಬಾರದು ಅನ್ನೋ ಸ್ವಾರ್ಥಕ್ಕಾಗಿ ಸತ್ಯ ಮುಚ್ಚಿಟ್ಟೆ ಅಮ್ಮಾ. ದೇವರಾಣೆ ಇದನ್ನು ಬಿಟ್ಟು ಬೇರ್ಯಾವ ಉದ್ದೇಶವೂ ಇರಲಿಲ್ಲ ನನಗೆ. ಸುಳ್ಳು ಹೇಳಿದ ಆರಂಭದಲ್ಲಿ ಎಲ್ಲವೂ ಸುಂದರವಾಗಿತ್ತು. ಆದರೆ ಸಮಯ ಕಳೆದಂತೆ ಮುಚ್ಚಿಟ್ಟ ಸತ್ಯ ಸುಡತೊಡಗಿತು. ನನ್ನ ಮುಖವನ್ನು ನಾನೇ ದಿಟ್ಟಿಸಿ ನೋಡಲಾಗದಷ್ಟು ಹೀನ ಸ್ಥಿತಿಗೆ ತಲುಪಿರುವೆ. ಮನಸ್ಸು ಮನಮಂಥನದಲ್ಲಿ ತೊಡಗಿದೆ. ಸಮುದ್ರ ಮಂಥನದಲ್ಲಿ ಅಮೃತದೊಂದಿಗೆ ಹಾಲಾಹಲ ಉಕ್ಕಿದಂತೆ, ಮನಮಂಥಿಸಿದಾಗ ಸಿಹಿನೆನಪುಗಳ ಅಮೃತದೊಂದಿಗೆ ಅತೀತದ ಭೂತವೂ ಉಕ್ಕಿ ನರ್ತಿಸತೊಡಗಿದೆ. ಇನ್ನೂ ಸುಳ್ಳಿನ ಬಂಗಾರದ ಸಿಂಹಾಸನದಲ್ಲಿ ಕುಳಿತು ಮೆರೆಯುವ ಶಕ್ತಿಯಿಲ್ಲ ಅಮ್ಮಾ. ಸತ್ಯ ಶರಶಯ್ಯೆಯಾದರೂ ಸರಿಯೇ.... ನನ್ನ ಅತೀತದ ನರಕಕ್ಕಿಂತ ಭೀಭತ್ಸವೇನಲ್ಲ ಈ ಮುಳ್ಳಿನ ಹಾಸಿಗೆ. ನಾ ಏರಲು ತಯಾರಿರುವೆ. ಮಾಡಿದ ತಪ್ಪನ್ನು ಮನ್ನಿಸಿ ನನ್ನ ಒಪ್ಪಿಕೊಳ್ಳಿ ಎಂದೂ ಕೇಳಲಾರೆ. ಅದು ಮನ್ನಿಸುವಷ್ಟು ಸಣ್ಣ ತಪ್ಪಲ್ಲ. ಖಂಡಿತಾ ನಾನಿಲ್ಲಿಂದ ದೂರ ಹೊರಟುಹೋಗುವೆ. ನಿಮ್ಯಾರ ಕಣ್ಣಿಗೂ ಕಾಣದಷ್ಟು ದೂರ. ಅದಕ್ಕೆ ಮುನ್ನ ಒಂದೇ ಒಂದು ಸಾರಿ ಮಾತಾಡಿ ಅಮ್ಮಾ....." ತನ್ನ ಮನದಲ್ಲಿದ್ದುದ್ದನ್ನೆಲ್ಲಾ ಹೊರಹಾಕಿದಳು ಮಂಗಳಾ ಮಾತನಾಡಲಿ ಎಂದು.

ಆದರೆ ಈಗಲೂ ಒಂದಿಷ್ಟೂ ಬದಲಾವಣೆಯಿಲ್ಲ ಅವರಲ್ಲಿ. ಆ ಮೌನದ ಹೊಡೆತಕ್ಕೆ ತತ್ತರಿಸಿದಳು ಹುಡುಗಿ.

"ಯಾಕಮ್ಮಾ, ನಿಮ್ಮ ಮಾತಿಗೂ ಯೋಗ್ಯಳಲ್ಲವೇ ನಾನು? ಈ ಮೌನ ನನಗೆ ದಿಗಿಲು ಹುಟ್ಟಿಸಿ ಕೊಲ್ಲುತ್ತಿದೆ... ಮಾತಾಡಿ ಅಮ್ಮಾ...."

ಇವಳು ಭಕ್ತೆಯಂತೆ ಗೋಗರೆಯುತ್ತಿದ್ದರೇ ಅವರು ಗರ್ಭಗುಡಿಯೊಳಗಿನ ವಿಗ್ರಹವಾಗಿದ್ದರು.

ನವ್ಯಾಳ ಮಾತುಗಳಷ್ಟನ್ನೂ ಕೇಳಿದ್ದ ಸತ್ಯನಾರಾಯಣರು ಅವಳ ಬಳಿಬಂದು ತಲೆಸವರಿದಾಗ ಅತ್ತೆಯ ಮೇಲಿದ್ದ ನೋಟವನ್ನು ಅವರೆಡೆಗೆ ಸರಿಸಿದಳು. ಕ್ಷಣಗಳಷ್ಟೇ..... ಮತ್ತೆ ತಲೆತಗ್ಗಿಸಿ ಕುಳಿತು ಬಿಟ್ಟಳು.

ಆದರೆ ಆ ನೋಟ........

ಕಸಾಯಿಖಾನೆಯ ಕಟುಕನೆದುರು 'ನನ್ನ ತಲೆ ಕಡಿಯಬೇಡವೋ' ಎಂದು ಬೇಡುವ ಆಡಿನಂತಹ ದೀನ ನೋಟವದು. ಆ ನೋಟದಲ್ಲಿದ್ದ ಭಾವ ಅವರ ಅಂತಃಸತ್ವವನ್ನು ಅಲುಗಾಡಿಸಿತು. ಅವರ ಮನಸ್ಸು ಈ ಮನೆಗೆ ಬಂದಲ್ಲಿನಿಂದ ಇಂದಿನವರೆಗಿನ ನವ್ಯಾಳ ನಡವಳಿಕೆಯನ್ನು ನೆನಪಿಸಿತು. ಒಂದೆರಡು ದಿನ ಒಳ್ಳೆಯತನದ ನಟನೆ ಮಾಡಬಹುದು. ಆದರೆ ವರ್ಷಗಟ್ಟಲೇ ತಾವು ಒಳ್ಳೆಯವರೆಂದು ನಟಿಸಿ ತೋರಲು ಎಂತಹ ಮಹಾನ್ ನಟನಿಂದಲೂ ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿ ಬಲ್ಲವರು ಅವರು. ಅವಳಲ್ಲಿ ಒಳ್ಳೆಯತನದೊಂದಿಗೆ ಒಂದು ಸ್ವಾಭಾವಿಕ ಸಾತ್ವಿಕತೆ ಇತ್ತು. ಆ ಸಾತ್ವಿಕತೆ ಜನ್ಮಜಾತವಾಗಿ ಬರುವಂತಹದ್ದು. ನಟಿಸಿ ಪ್ರದರ್ಶಿಸಲಾಗದು. ಈ ಮನೆಯ ಪ್ರತಿಯೊಬ್ಬ ಸದಸ್ಯನ ಮೇಲೆ ಅವಳಿಗಿದ್ದ ಗೌರವ, ಪ್ರೀತಿ, ಅಕ್ಕರೆ ಪ್ರಶ್ನಾತೀತವಾದುದು. ಅವಳ ಮಾತುಗಳಿಂದಲೇ ಅವಳ ಆಗಿನ ಪರಿಸ್ಥಿತಿ, ಅಲ್ಲಿ ಅವಳು ಅನುಭವಿಸಿರಬಹುದಾದ ಹಿಂಸೆ ಎಲ್ಲವೂ ಅಂದಾಜಾಗಿತ್ತು. ತಾಯ್ತಂದೆಯರನ್ನು ಕಳೆದುಕೊಂಡ ಒಂಟಿ ಹೆಣ್ಣುಮಗಳು….. ತನ್ನ ಸಂಬಂಧಿಯೇ ತಾನೇ ಎಂಬ ನಂಬಿಕೆಯಲ್ಲಿ ಜೊತೆಗೆ ಹೋಗಿದ್ದಾಳೆ. ಆತ ಸಂಬಂಧಕ್ಕೆ ಬೆಲೆ ಕೊಡದೇ ಹಣಕ್ಕೆ ಬಾಯ್ಬಿಟ್ಟರೇ ಇವಳೇನು ಮಾಡಿಯಾಳು? ಇನ್ನು ಆ ವೇಶ್ಯಾಗೃಹವೆಂಬುದಂತೂ ಹೆಣ್ಣುಮಕ್ಕಳ ಕಸಾಯಿಖಾನೆಯೇ ಸರಿ. ಪರಿಚಯಸ್ಥ ಸಂಬಂಧಿಕನೇ ಕನಿಷ್ಟ ಮಾನವೀಯತೆ ಮರೆತು ತಬ್ಬಲೀ ಹೆಣ್ಣನ್ನು ಮಾರಿರುವಾಗ ಇವರೋ ಹುಟ್ಟು ಕಟುಕರು. ಇವರು ಕರುಣೆ ತೋರುವರೇ? ಇದರಲ್ಲಿ ಇವಳ ತಪ್ಪೇನಿದೆ? ಅದೇನೆನು ಅನುಭವಿಸಿದೆಯೋ, ಒಡಲಲ್ಲಿ ಎಂತೆಂತಹಾ ನೋವನ್ನು ಬಚ್ಚಿಟ್ಟುಕೊಂಡಿದೆಯೋ ಹುಡುಗಿ…... ಅದಕ್ಕೇ ಇರಬೇಕು ಭೂಮಿಯಷ್ಟು ಸಹನೆ, ತಾಳ್ಮೆ ಈ ಮಗುವಿಗೆ. ಇಷ್ಟೆಲ್ಲಾ ನೋವುಗಳ ನಂತರ ಒಂದಿನಿತು ನೆಮ್ಮದಿ ಸಿಕ್ಕಿದಾಗ ಅದು ಕೈ ತಪ್ಪದಿರಲಿ ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಅದೂ ಸ್ವಾರ್ಥವೂ ಅಲ್ಲ. ಅದು ಆ ನೋವುಂಡ ಮನ ಬಯಸಿದ ಸಾಂತ್ವನವಷ್ಟೇ. ಆದರೂ ಇಷ್ಟು ವರ್ಷಗಳಿಂದ ಸತ್ಯ ಮುಚ್ಚಿಟ್ಟು ಅವಳೇನೂ ಸುಖವಾಗಿರಲಿಲ್ಲ. ಪ್ರತೀ ಕ್ಷಣವೂ ಸತ್ಯದ ಬೆಂಕಿಯಲ್ಲಿ ಬೆಂದು ಚಡಪಡಿಸಿದೆ ಜೀವ. ಅವಳು ಪಟ್ಟ ವೇದನೆ, ಇತ್ತೀಚೆಗಿನ ಅವಳ ವಿಚಿತ್ರ ನಡವಳಿಕೆ, ಆ ಮಾನಸಿಕ ಖಿನ್ನತೆ….... ಎಲ್ಲಕ್ಕೂ ಇಂದು ಸ್ಪಷ್ಟನೆ ಸಿಕ್ಕಿತ್ತು ಅವರಿಗೆ.

ಎಲ್ಲವೂ ಸತ್ಯವೇ.....

ಆದರೆ ........

ಮುಚ್ಚಿಟ್ಟ ಸತ್ಯ ಬಹಳ ಸೂಕ್ಷ್ಮವಾಗಿತ್ತು. ಈ ಸಮಾಜದ ನೀತಿ ನಿಯಮಗಳು ಕಠೋರ. ಈ ವಿಷಯ ಹೊರಜಗತ್ತಿಗೆ ತಿಳಿದರೆ ತಾವು ಇಷ್ಟು ವರ್ಷ ಈ ಸಮಾಜದಲ್ಲಿ ಸಂಪಾದಿಸಿದ್ದ ಗೌರವ, ಮಾನ ಮರ್ಯಾದೆ ಎಲ್ಲವೂ ಒಂದೇ ಕ್ಷಣದಲ್ಲಿ ಮಣ್ಣುಪಾಲಾಗುತ್ತದೆ ಎಂಬುದು ತಿಳಿದಿತ್ತು ಅವರಿಗೆ. ಈಗ ಅವಳನ್ನು ಒಪ್ಪಿ ಮನ್ನಿಸಿದರೆ ನಾವು ಸಮಾಜವನ್ನು ಎದುರು ಹಾಕಿಕೊಳ್ಳಬೇಕು. ಆ ಹಾದಿ ಕಠಿಣ. ಯಾರ ಸಹಕಾರವೂ ಸಿಗದು. ಬಂದದ್ದನ್ನೆಲ್ಲಾ ಎದುರಿಸಿ ನುಗ್ಗುವ ಛಾತಿ ಬೇಕು. ಅಕ್ಕಪಕ್ಕದವರ ನಿಂದನೆ, ಕೊಂಕು, ಕಟುವಾಣಿಗಳನ್ನು ಸಹಿಸುವ ಧೈರ್ಯವಿರಬೇಕು. ಒಟ್ಟಾರೆಯಾಗಿ ಅಲೆಗಳ ವಿರುದ್ಧ ಈಜಬೇಕು. ಜಯಿಸುವುದು ಅಸಾಧ್ಯದ ಮಾತು. ಜೀವನ ಪರ್ಯಂತ ಆಡಿಕೊಳ್ಳುತ್ತದೆ ಸಮಾಜ. ನಮ್ಮನ್ನು ಬಹಿಷ್ಕರಿಸಬಹುದು. ಇಲ್ಲಾ ಕೊಲ್ಲುವ ಪ್ರಯತ್ನಗಳೂ ನಡೆಯಬಹುದು. ಇದನ್ನೆಲ್ಲಾ ಎದುರಿಸಿ ಬದುಕಬಲ್ಲೆವೇ…....?

ಯೋಚನೆಗೆ ಬಿದ್ದಿದ್ದರು ಸತ್ಯನಾರಾಯಣ.

ಒಂದೇ ಕೋಣೆಯಲ್ಲಿ ಮಾತಿಲ್ಲದೇ ಕುಳಿತಿದ್ದ ಮೂವರದ್ದೂ ಒಂದೊಂದು ಭಾವಲೋಕ........

ಇಡೀ ಕೋಣೆಯಲ್ಲಿ ಉಳಿದಿದ್ದು ಕೇವಲ ಮೌನವಷ್ಟೇ…......

ಮನ್ ಜಂಗಲ್ ಮೆ ಆಂಧೀ ಹಲ್ಚಲ್

ಪತ್ತೇ ಬಿಚ್ಡನ್ ಲಾಗೇ.....

ಲೆಹರ್ ಲೆಹರ್ ಉತ್ಪಾತ್ ನದೀ ಮೆ

ಹೃದಯ್ ಜ್ವಾರ್ ಸಾ ಜಾಗೇ......

ಜೀವನ್ ಶೋರ್ ಆಯೇ ಔರ್ ಜಾಯೇ

ಶಾಶ್ವತ್ ಬಸ್ ಸನ್ನಾಟೆ ರೇ......

(ಮನವೆಂಬ ಕಾನನದೊಳು ಬಿರುಗಾಳಿಯೆದ್ದು ಎಲೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಉದುರತೊಡಗಿವೆ.......

ತರಂಗಗಳ ಏರಿಳಿತದಿಂದ ನದಿಯೇ ಅಸ್ತವ್ಯಸ್ತಗೊಂಡು ಮನ ಅಲೆಯಂತೆ ಎಚ್ಚರಗೊಂಡಿದೆ......

ಬದುಕಿನ ಗದ್ದಲ ಹೀಗೆ ಬಂದು ಹಾಗೆ ಹೋಗುವಂತಹದು......

ನಿಶ್ಯಬ್ಧ ಮೌನವೊಂದೇ ಶಾಶ್ವತವಾದುದು.....)  

ಮೂರು ದಿನಗಳ ಬಾಳ ಪಯಣವನ್ನು ಹಸನಾಗಿಸಿಕೊಳ್ಳಲು ಅದೆಷ್ಟು ಪ್ರಯತ್ನಿಸುತ್ತೇವೆ ನಾವು. ಶಾಶ್ವತವಾಗಿ ಇಲ್ಲೇ ಉಳಿದುಬಿಡುವ ಮೃತ್ಯುಂಜಯರೆಂದು  ಭ್ರಮಿಸುತ್ತೇವೆ. ಕೆಲವೊಮ್ಮೆ ಸರಿ ತಪ್ಪುಗಳ ವಿವೇಚನೆ ಮರೆತು ಜೀವಿಸುತ್ತೇವೆ. ಬದುಕಿನ ನಾಟಕರಂಗದಲ್ಲಿ ವಿವಿಧ ವೇಷ ಧರಿಸಿ ನಲಿಯುತ್ತೇವೆ. ಈ ಗದ್ದಲ, ಗೌಜು ಮೂರು ದಿನದ್ದಷ್ಟೇ….... ಕೊನೆಗೊಮ್ಮೆ ಕಾಲನ ಕೈವಶರಾಗಿ ಎದ್ದು ನಡೆಯಲೇಬೇಕು ಎಲ್ಲರೂ. ಈ ಮೂರು ದಿನಗಳ ಬದುಕಿನಲ್ಲಿ ಸಂಭ್ರಮಿಸುವ ಕ್ಷಣಗಳೆಷ್ಟು? ಬದುಕಿಗಾಗಿ ನಾವು ಪಡುವ ಬವಣೆಗಳೆಷ್ಟು? ಅಷ್ಟು ಬವಣೆಯಲ್ಲಿ ಸಂಪಾದಿಸಿದ್ದೇನಾದರೂ ನಮ್ಮೊಂದಿಗೆ ಶಾಶ್ವತವಾಗಿ ಉಳಿಯುವುದೇ? ಕಡೆಗೆ ಈ ದೇಹವೂ ಮಣ್ಣಿನ ಪಾಲೇ. ಕಡೆಯಲ್ಲಿ ಉಳಿಯುವುದು ಮೌನವೆಂಬ ನಿರ್ವಾತ ಮಾತ್ರವೇ…….

ಹುಲುಮಾನವರಾದ ನಾವು ಶ್ರಮಪಟ್ಟು ಸಿಕ್ಕಿರುವ ಬದುಕನ್ನು ಹಸನಾಗಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಬಹುದು. ಆದರೆ ವಿಧಾತನೆಂಬ ಕಡುಕ್ರೂರಿ ಮನಸ್ಸು ಮಾಡಿದರೆ ನಮ್ಮ ಶ್ರಮವನ್ನೆಲ್ಲಾ ಮಣ್ಣುಪಾಲಾಗಿಸಲು ಎಷ್ಟು ಹೊತ್ತು? ವಿಧಿಯನ್ನು ತಡೆಯುವ ಅಥವಾ ಬದಲಾಯಿಸುವ ಶಕ್ತಿ ಯಾರಿಗಿದೆ?

ನವ್ಯಾ ಬದುಕಲು ಸಿಕ್ಕ ಒಂದು ಅವಕಾಶವನ್ನು ಸಾಧ್ಯವಾದಷ್ಟು ಹಸನಾಗಿಸಿಕೊಂಡಿದ್ದೇನೋ ನಿಜ. ಆದರೆ ಇಂದು ವಿಧಿ ಅತೀತದ ರೂಪದಲ್ಲಿ ಅವಳ ಬದುಕನ್ನು ಅಗ್ನಿಪರೀಕ್ಷೆಗೆ ಗುರಿಮಾಡಿದ್ದಾನೆ. ಅವಳು ಸಮಿತ್ತಿನಂತೆ ಉರಿದು ಬೂದಿಯಾಗುವಳೋ ಇಲ್ಲಾ ಪುಟಕ್ಕಿಟ್ಟ ಚಿನ್ನದಂತೆ ಪ್ರಕಾಶಿಸುವಳೋ ಕಾದು ನೋಡಬೇಕಿತ್ತು.

ಮೂವರು ಮೂರುದಿಕ್ಕಿನಲ್ಲಿ ಮೌನದರಮನೆಯಲ್ಲಿ ಬಂಧಿಯಾಗಿದ್ದರು. ಸಮಯದ ಪರಿವಿರಲಿಲ್ಲ….....

ಹಾಗೆ ತಮ್ಮ ಆಲೋಚನೆಗಳಲ್ಲಿಯೇ ಬಂಧಿಯಾಗಿ ಕಾಷ್ಠ ಮೌನದಲ್ಲಿ ಕಳೆದುಹೋದ ಮೂವರ ನಡುವೆ ನಾಲ್ಕನೆಯವಳಾಗಿ ಪ್ರವೇಶಿಸಿದ್ದಳು ಸಮನ್ವಿತಾ......

      ********ಮುಂದುವರೆಯುತ್ತದೆ********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ