ಮಂಗಳವಾರ, ಜೂನ್ 23, 2020

ಅನೂಹ್ಯ 19

ಮಧ್ಯಾಹ್ನವೇ ಕಾರ್ತಿಕ್ ಕಾಲೇಜಿನಿಂದ ಮನೆಗೆ ಬಂದಿದ್ದು ಕಂಡು ಕಣ್ಣರಳಿಸಿದಳು ನವ್ಯಾ.

"ಅದೇನು ಮಧ್ಯಾಹ್ನವೇ ಬಂದ್ಬಿಟ್ಟೇ? ಕಾಲೇಜಿಗೆ ರಜೆಯೇನು?" ಕೇಳಿದ್ದಳು.

"ಹೂಂ ಒಂಥರಾ ರಜೆನೆ ಅತ್ತಿಗೆ. ಆದರೆ ಅವರು ಕೊಟ್ಟಿದ್ದಲ್ಲ ನಾನೇ ತಗೊಂಡಿದ್ದು" ನಕ್ಕ.

"ಏನು ಹಾಗಂದ್ರೆ? ಕ್ಲಾಸ್ ಬಂಕ್ ಮಾಡಿದ್ಯಾ?" ಕೋಪದಲ್ಲಿ ಕೇಳಿದಳು.

"ಅಯ್ಯೋ ಸುಮ್ನಿರಿ ಅತ್ತಿಗೆ. ಅದೇ ಕಾಲೇಜು, ಅದೇ ಕ್ಲಾಸ್ ರೂಂ, ಅದೇ ಡೆಸ್ಕ್, ಅದೇ ಲೆಕ್ಚರ್…. ಬೋ‌ರು." ಎಂದವನ ಕಿವಿ ಹಿಡಿದು,

"ಏನಂದೆ? ನೀನು ಮಾಡಿರೋ ಕೆಲ್ಸ ಅಮ್ಮನಿಗೆ ಗೊತ್ತಾದ್ರೆ ಯಾತ್ರೆ ಅರ್ಧದಲ್ಲೇ ಬಿಟ್ಟು ಓಡೋಡಿ ಬರುತ್ತಾರೆ. ನಿಂದ್ಯಾಕೋ ತುಂಬಾ ಅತಿಯಾಯ್ತು" ಎಂದಳು.

"ಅತ್ಗೇ, ಕಿವಿ ನೋಯ್ತಿದೆ ಪ್ಲೀಸ್ ಬಿಡಿ" ಅವಲತ್ತುಕೊಂಡ.

"ನಿಮ್ಮಣ್ಣ ಬರ್ಲೀ ಇರು. ಇವತ್ತು ಅವರಿಗೆಲ್ಲಾ ಹೇಳ್ತೀನಿ" ಎಂದಾಗ ಮಾತ್ರ ಹೆದರಿದ. ಅವನು ಹೆದರುವುದು ಅಣ್ಣನಿಗೆ ಮಾತ್ರ.

"ಹಾಗೊಂದು ಮಾಡ್ಬೇಡಿ ಅತ್ಗೇ. ಪ್ಲೀಸ್ ಅಣ್ಣನಿಗೆ ಹೇಳ್ಬೇಡಿ. ಅಮ್ಮನೂ ಮನೇಲಿಲ್ಲ. ನಿಮಗೊಬ್ಬರಿಗೇ ಬೇಜಾರಾಗುತ್ತೆ ಅಂತ ನಾನು ಬೇಗ ಬಂದೆ. ಅಮ್ಮ ಹೇಳಿದ್ರಲ್ಲ ನಿಮ್ಮನ್ನು ಚೆನ್ನಾಗಿ ನೋಡ್ಕೊಳ್ಳೋಕೆ. ನಿಮ್ಮ ಕೆಲಸದಲ್ಲಿ ಕೈ ಜೋಡಿಸೋಕೆ. ಅದಕ್ಕೆ ಬಂದೆ ಅಷ್ಟೇ" ಗೋಗರೆದ.

"ಸರಿ ಸರಿ ಹೇಳೋಲ್ಲ. ಹೋಗಿ ಕೈ ಕಾಲು ಮುಖ ತೊಳೆದು ಬಾ. ಊಟಕ್ಕೆ ರೆಡಿ ಮಾಡ್ತೀನಿ. ನಾನೂ ಒಬ್ಳೇ ಊಟ ಮಾಡ್ಬೇಕಲ್ಲ ಅಂದ್ಕೋತಿದ್ದೆ" ಹೇಳಿದಳು.

"ನೋಡಿದ್ರಾ….. ನಂಗೊತ್ತಿತ್ತು. ನಿಮ್ಗೆ ಒಬ್ಬರಿಗೆ ಬೇಜಾರಾಗುತ್ತೆ ಅಂತ. ಅದಕ್ಕೆ ಬಂದೆ." ಎಂದವನೇ ಫ್ರೆಶ್ ಆಗಲು ರೂಮಿಗೆ ಹೋದ. ಅವನು ತಯಾರಾಗಿ ಬರುವಾಗ ಅವಳು ಊಟ ಬಡಿಸಿ ಅವನಿಗಾಗಿಯೇ ಕಾಯುತ್ತಿದ್ದಳು. ಅವನ ಕಾಲೇಜಿನ ಪ್ರವರಗಳನ್ನು ಕೇಳುತ್ತಲೇ ಊಟ ಮುಗಿಯಿತು. ಇಬ್ಬರೂ ಒಂದು ರೌಂಡ್ ಹರಟೆ ಮುಗಿಸುವುದರೊಳಗೆ ಕಿಶೋರ್ ಹಾಜರಾಗಿದ್ದ.

"ಅರೇ, ಇದೇನು ನೀವೂ ಬೇಗ ಬಂದ್ಬಿಟ್ರೀ ಇವತ್ತು" ಅವಳ ಪ್ರಶ್ನೆಗೆ ನಕ್ಕನಷ್ಟೇ.

"ಕಾಫೀ ಕೊಡ್ತೀಯಾ?" ಎಂದು ಕೇಳುತ್ತಲೇ ರೂಮಿನತ್ತ ಹೊರಟ ಬಟ್ಟೆ ಬದಲಾಯಿಸಲು.

"ನೋಡಿದ್ರಾ ಅತ್ಗೇ, ನನಗೆ ಕ್ಲಾಸ್ ಬಂಕ್ ಮಾಡಿದ್ದೇ ಅಂತ ಬೈದ್ರಲ್ಲಾ ಈಗ ಅಣ್ಣ ಆಫೀಸ್ ಬಂಕ್ ಮಾಡಿದ್ದಾನೆ. ಅವನಿಗೂ ಬೈಬೇಕು ನೀವು" ಅಣಕಿಸಿದ.

"ಅಣ್ಣ ತಮ್ಮ ಇಬ್ಬರೂ ಸರಿ ಇದ್ದೀರಾ. ಯಾರೂ ಕಡ್ಮೇ ಇಲ್ಲಾ" ಎಂದವಳು ಅಡುಗೆ ಮನೆಗೆ ನಡೆದಳು.

ಮೂವರೂ ಒಟ್ಟಿಗೆ ಕಾಫಿ ಕುಡಿದರು ಹರಟುತ್ತಾ.

"ಅಣ್ಣ ಹೊರಗೆ ಎಲ್ಲಾದ್ರೂ ಹೋಗಿ ಸುತ್ತಾಡಿಕೊಂಡು ಬರೋಣ್ವಾ?" ಮೆಲ್ಲಗೆ ಪೀಠಿಕೆ ಹಾಕಿದ. ಕಿಶೋರನಿಗೂ ತಮ್ಮನ ಮಾತು ಸರಿಯೆನಿಸಿತು. ಸರಿ ಹೋಗೋಣವೆಂದು ಹೊರಟರು ಮೂವರು. ಎಲ್ಲಿಗೆ ಎಂದೇನೂ ನಿರ್ಧರಿಸಿರಲಿಲ್ಲ. ಕಾರ್ತಿಕ್ ಸಿನಿಮಾ ನೋಡುವ ಎಂದಾಗ ಮೂವರು ಥಿಯೇಟರ್ ಹೊಕ್ಕರು. ಸಿನಿಮಾ ಮುಗಿದಾಗ ರಾತ್ರಿಯಾಗಿತ್ತು. ಹೋಟೆಲಿನಲ್ಲಿ ಊಟ ಮಾಡಿ ಹೊರಡುವ ಎಂದೆನಿಸಿ ದೊಡ್ಡ ಹೋಟೆಲ್ ಒಂದನ್ನು ಹೊಕ್ಕರು. 

ಹೋಟೆಲಿಗೆ ಹೋದ ಕ್ಷಣದಿಂದ ಅಲ್ಲಿಂದ ಹೊರಬರುವವರೆಗೂ ನವ್ಯಾ ಚಡಪಡಿಸುತ್ತಿದ್ದಳು......

ಅದನ್ನು ಗಮನಿಸಿದ ಕಿಶೋರ್. ಇಲ್ಲಿಯವರೆಗೆ ಸರಿಯಾಗಿದ್ದವಳು ಈಗೇನಾಯಿತು ಎಂದು ಅರ್ಥವಾಗಲಿಲ್ಲ ಅವನಿಗೆ. ಹೋಟೆಲಿನಲ್ಲಿ ಇದ್ದಷ್ಟು ಹೊತ್ತೂ ಅವಳ‌ ಸಂಶಯದ ನೋಟ ಆಚೀಚೆ ಹರಿದಾಡುತ್ತಿತ್ತು….‌‌. ಅಂತೂ ಊಟ ಮುಗಿಸಿ ಹೊರಬಂದಾಗ ನಿಟ್ಟುಸಿರು ಬಿಟ್ಟು "ಸೀದಾ ಮನೆಗೆ ಹೋಗೋಣ " ಎಂದಳು.

ಮನೆಗೆ ಬಂದವನೆ ಕಾರ್ತಿಕ್ "ಅತ್ಗೇ, ನನಗೆ ಹೊಟ್ಟೆ ಫುಲ್ ಆಗಿದೆ. ಹಾಲು ಬೇಡ. ನಾನು ಮಲಗೋಕೆ ಹೊರಟೆ. ಗುಡ್ ನೈಟ್"  ಎಂದು ಮಲಗಲು ಹೊರಟ.

ಕಿಶೋರ್ ತನಗೂ ಏನು ಬೇಡವೆಂದ. ಅವಳಿಗೂ ಏನೂ ಬೇಡವಾಗಿತ್ತು. ರೂಮಿಗೆ ಬಂದವಳೇ ಬಟ್ಟೆ ಬದಲಾಯಿಸಿ ಟೆರೇಸಿಗೆ ಹೋಗಿ ನಿಂತಳು. 

ತಣ್ಣನೆಯ ಗಾಳಿ ಬೀಸುತ್ತಿತ್ತಾದರೂ ಅದು ಅವಳ ಮನದ ಬೇಗುದಿಯನ್ನು ಶಮನಗೊಳಿಸಲು ವಿಫಲವಾಗಿತ್ತು. ಕಿಶೋರ್ ಅವಳನ್ನು ಹುಡುಕಿ ಬಂದವನು ಸುಮ್ಮನೆ ಅವಳ ಭುಜ ಬಳಸಿ ಪಕ್ಕ ನಿಂತ. ಅವಳು ಅವನ ಎದೆಗೊರಗಿ ಕಣ್ಮುಚ್ಚಿದಳು.

"ಏನಾಯ್ತು. ಹೋಟೆಲಿನಲ್ಲಿ ಯಾರನ್ನಾದರೂ ನೋಡಿ ಹೆದರಿಕೊಂಡ್ಯಾ?" ಕೇಳಿದ.

ಇಲ್ಲವೆಂದು ತಲೆಯಾಡಿಸಿದಳು. 

"ಮತ್ಯಾಕೆ ಒಂಥರಾ ಇದ್ದೀಯಾ? ನಾನು ಗಮನಿಸುತ್ತಾ ಇದ್ದೆ. ಹೋಟೆಲಿಗೆ ಹೋಗೋವರೆಗೆ ನೀನು ಆರಾಮಾಗಿದ್ದೆ. ಆಮೇಲೆ ಏನಾಯ್ತು? ನನ್ಹತ್ರನೂ ಹೇಳೋಲ್ವೇನು?"

"ಹಳೆಯ ನೆನಪುಗಳು ಬೆನ್ನಟ್ಟಿದಂತಾಯ್ತು ಕಿಶೋರ್"

"ನನಗೆ ನಿನ್ನ ಮಾತು ಅರ್ಥವಾಗಲಿಲ್ಲ. ಏನು ನೆನಪಾಯ್ತು?"

"ಮುಂಚೆ ಕೆಲವು ಕಸ್ಟಮರ್ಸ್..... ಹೀಗೇ.... ಹೋ... ಹೋಟೆಲುಗಳಿಗೆ ಕರ್ಕೊಂಡು ಹೋಗುತ್ತಿದ್ದರು. ಅದ್ಯಾಕೋ ಇಂದು ತುಂಬಾ ನೆನಪಾಯ್ತು."

"ನವ್ಯಾ, ಯಾಕಮ್ಮಾ ಅದನ್ನೆಲ್ಲಾ ನೆನಪಿಸಿಕೊಳ್ತೀಯಾ? ಅದು ಮುಗಿದಿರೋ ಅಧ್ಯಾಯ."

ಅಲ್ಲೊಂದು ಮೌನ ಕೆಲಘಳಿಗೆ ಉಸಿರಾಡಿತು. ಆ ಮೌನದ ಎದೆಬಗೆದಂತೆ ಮಾತನಾಡತೊಡಗಿದ್ದಳು ನವ್ಯಾ.

"ನಾಟಕ ಮಾಡೋದು ಆ ಸಮಯಕ್ಕೆ ಸುಲಭ ಅನ್ಸುತ್ತೆ ಕಿಶೋರ್. ಆ ಕ್ಷಣಕ್ಕೆ ಮನಸಿಗೆ ಹಿತವನ್ನೂ ನೀಡುತ್ತೆ. ಆದರದು ಕ್ಷಣಿಕವಷ್ಟೇ….. ಸತ್ಯ ಅನಾವರಣ ಆಗೋವರೆಗೂ, ನಾಟಕ ಬಯಲಾಗೋವರೆಗೂ ಆರಾಮಾಗಿರಬಹುದು, ಗೊತ್ತಾದಾಗ ಶಿಕ್ಷೆ ಅನುಭವಿಸಿದರಾಯ್ತು ಅಂದುಕೊಳ್ಳುತ್ತೇವೆ. ಆದರೆ ಅದು ಕೇವಲ ನಮ್ಮ ಭ್ರಮೆಯಷ್ಟೇ. ಸತ್ಯ ಈಗ ಗೊತ್ತಾಗಬಹುದು, ನಾಟಕದ ಪರದೆ ಮುಂದಿನ ಕ್ಷಣದಲ್ಲಿ ಸರಿಯಬಹುದೆಂಬ ಭಯದಲ್ಲೇ ಬದುಕುವ ಅನಿವಾರ್ಯತೆ ಇದೆಯಲ್ಲ ಅದು ತಪ್ಪಿಗೆ ದೊರಕುವ ನಿಜವಾದ ಶಿಕ್ಷೆ. ಈಗ ನನ್ನ ಪರಿಸ್ಥಿತಿ ಕೂಡಾ ಹಾಗೇ ಇದೆ ಕಿಶೋರ್. ಹಗ್ಗ ಕಂಡರೂ ಹಾವನ್ನು ಕಂಡ ಭಾವ. ಯಾರಾದರೂ ನನ್ನನ್ನು ಸುಮ್ಮನೆ ದಿಟ್ಟಿಸಿ ನೋಡಿದರೂ ಸಾಕು, ಇವರಿಗೆ ನನ್ನ ಪೂರ್ವಾಪರ ತಿಳಿದಿರಬಹುದು ಎಂಬ ಅನುಮಾನ ವಿಪರೀತವಾಗುತ್ತದೆ" ತನ್ನ ಸಮಸ್ಯೆ ಅವನ ಮುಂದೆ ಬಿಡಿಸಿಟ್ಟಳು.

ಅವನೇನು ಮಾತಾಡಲಿಲ್ಲ. ಸುಮ್ಮನೆ ಅವಳನ್ನು ಬಳಸಿ ನೆತ್ತಿಗೆ ಮುತ್ತಿಟ್ಟ. ಅವಳು ಮತ್ತೆ ಮೌನವಾಗಿ ಅವನೆದೆಗೆ ಒರಗಿದಳು. ಆ ಮೌನದಲ್ಲಿ, ಅವನ ನೇವರಿಕೆಯಲ್ಲಿ ಮಾತಿನಲ್ಲಿ ಹೇಳಲಾರದಷ್ಟು ಕಾಳಜಿಯಿತ್ತು. ಎಷ್ಟು ಹೊತ್ತು ಹಾಗೇ ನಿಂತಿದ್ದರೋ.... ಬಹಳ ಸಮಯದ ನಂತರ, 

"ತುಂಬಾ ಹೊತ್ತಾಗಿದೆ ಕೆಳಗೆ ಹೋಗೋಣ ಬಾ" ಅವನೆಂದಾಗ, ಅವನೊಂದಿಗೆ ಹೆಜ್ಜೆ ಹಾಕಿದಳು.

"ನಾಳೆ ನಾನು ರಜೆ ತಗೋತೀನಿ. ಮನೆಯಲ್ಲಿ ನಿನಗೊಬ್ಬಳಿಗೆ ಬೇಸರವಾಗಬಹುದು" ಎಂದಾಗ ಅವಳಿಗೆ ನೆನಪಾಯಿತು.

"ಬೇಡ, ನೀವು ಆಫೀಸಿಗೆ ಹೋಗಿ. ಸಮಾ ಫೋನ್ ಮಾಡಿದ್ಲು. ಅವಳು ಕ್ವಾಟ್ರಸ್ ಗೆ ಶಿಫ್ಟ್ ಆಗಿದ್ದಾಳಲ್ಲ. ಒಂದಷ್ಟು ಪರ್ಚೇಸಿಂಗ್ ಇದೆ ಬಾ ಅಂದಿದ್ದಾಳೆ. ಹೋಗ್ತೀನಿ" ಎಂದಾಗ,

"ಒಳ್ಳೇದಾಯ್ತು. ಹೋಗಿ ಬಾ. ಈಗ ಮಲ್ಕೋ" ಎಂದವನು ತನ್ನ ಮಡಿಲಲ್ಲಿ ಮಲಗಿಸಿ ತಲೆ ತಟ್ಟತೊಡಗಿದ. ಅವಳು ಹಾಗೇ ನಿದ್ರೆಗೆ ಜಾರಿದಳು.

                     *****************

ಸಮನ್ವಿತಾ ಮನೆ ತೊರೆದು ಹೊರಟಿದ್ದೇ ರಾವ್ ಅವರ ಚಟುವಟಿಕೆಗಳು ಗರಿಗೆದರಿದವು. ಒಂದಷ್ಟು ಫೋನ್ ಕಾಲ್ ಗಳು, ಕೆಲವರ ಭೇಟಿ....... ಅವುಗಳಲ್ಲಿ ತುಂಬಾ ಮುಖ್ಯವಾದುದು ಸಚ್ಚಿದಾನಂದ ಶರ್ಮಾ ದಂಪತಿಗಳನ್ನು ಎರಡು ಬಾರಿ ಸತ್ಯಂ ರಾವ್ ಪತ್ನಿ ಸಮೇತ ಭೇಟಿಯಾಗಿದ್ದು…... ಈ ಎರಡು ಭೇಟಿ ಅವರ ಪ್ಲಾನಿನ ಎರಡನೇ ಹಂತ.

ಎರಡನೇ ಭೇಟಿಯಲ್ಲಿ ತಮ್ಮ ಮನದಿಂಗಿತ ವ್ಯಕ್ತಪಡಿಸಿ 'ನಮ್ಮ ಮಗಳನ್ನು ನಿಮ್ಮ ಸೊಸೆಯಾಗಿ ಕಳಿಸುವ ಇಚ್ಛೆ ಇದೆ' ಎಂದು ನೇರವಾಗಿಯೇ ಹೇಳಿದ್ದರು. ಶರ್ಮಾ ದಂಪತಿಗಳು ಅಭಿರಾಮ್ ಊರಲ್ಲಿರದ ಕಾರಣ ಅವನು ಬಂದ ನಂತರ ಅಭಿಪ್ರಾಯ ಕೇಳಿ ಮಾತನಾಡುವುದಾಗಿ ಹೇಳಿದ್ದರು. 

ಅವರು ಮಗನ ಅಭಿಪ್ರಾಯ ಕೇಳುವಾಗ ನಾವೂ ಕೂಡ ಮಗಳ ಅಭಿಪ್ರಾಯ ಕೇಳಬೇಕು ಎಂದು ರಾವ್ ದಂಪತಿಗಳಿಗೆ ಹೊಳೆಯದೇ ಹೋದದ್ದು ವಿಪರ್ಯಾಸವೇ ಸರಿ....

ಇಷ್ಟು ಕೆಲಸ ಮಾಡಿ ರಾವ್ ನಿರಾಳರಾದರು. ಶರ್ಮಾ ಕುಟುಂಬದವರಿಗೆ ಮಗಳು ಇಷ್ಟವಾಗಿದ್ದಾಳೆಂದು ಅವರಿಗೆ ತಿಳಿದುಹೋಗಿತ್ತು. ಇನ್ನು ಅಭಿರಾಮ್ ಮನೆಯವರ ಮಾತಿಗೆ ಎದುರಾಡಲಾರ ಎಂದು ಅವರ ನಂಬಿಕೆ. ಬಹಳ ಸಂತೋಷವಾಗಿತ್ತು ಅವರಿಗೆ. 

ಮಾರ್ಕೆಟ್ ನಲ್ಲಿ ಅವರ ಕಂಪನಿಯ ಷೇರು ಮೌಲ್ಯ ನೆಲಕ್ಕಚ್ಚಿತ್ತು. ಕಳೆದ ಐದು ತಿಂಗಳಿಂದ ಇದೇ ಸ್ಥಿತಿ. ಇದೇ ರೀತಿ ಮುಂದುವರೆದರೆ ಕಂಪನಿ ದಿವಾಳಿಯೆದ್ದು ಮುಚ್ಚಬೇಕಾಗುವುದು ಖಚಿತವಿತ್ತು. ಬ್ಯಾಂಕಿನಿಂದ ಪಡೆದ ಸಾಲದ ಮೊತ್ತ ಬಡ್ಡಿಯೊಂದಿಗೆ ಹೆಗಲ ಮೇಲಿತ್ತು. ಇದರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದವರಿಗೆ ಹೊಳೆದ ಅತ್ಯದ್ಭುತ ಮಾರ್ಗವಿದು. 

ಸಮನ್ವಿತಾ ಅಭಿರಾಮ್ ವಿವಾಹವಾದರೆ ನಾವು ಹಾಗೂ ಶರ್ಮಾ ಸಂಬಂಧಿಗಳಾಗುತ್ತೇವೆ. ಶರ್ಮಾ ಎಂಪೈರ್ ಔದ್ಯೋಗಿಕ ಕ್ಷೇತ್ರದ ಅಘೋಷಿತ ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವಿವಾಹದಿಂದ ತಮ್ಮ ಕಂಪನಿಯ ಬಗ್ಗೆ ಜನರಲ್ಲಿ ಭರವಸೆ ಹೆಚ್ಚುತ್ತದೆ. ಷೇರು ಮೌಲ್ಯ ತಾನೇತಾನಾಗಿ ಏರುತ್ತದೆ. ಅದರೊಂದಿಗೆ ಸಂಬಂಧಿಗಳಾದ ಮೇಲೆ ಅವರನ್ನು ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಲು ಒಪ್ಪಿಸಿ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವ ಯೋಚನೆಯೂ ಅವರಿಗಿತ್ತು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ತಮ್ಮ ವ್ಯವಹಾರ ಸಫಲತೆಗೆ ಮಗಳನ್ನು ಏಣಿಯನ್ನಾಗಿ ಬಳಸಲು ತೀರ್ಮಾನಿಸಿದ್ದರು ಗಂಡ ಹೆಂಡತಿ...... 

ಯಯಾತಿ ಮಹಾರಾಜನ ಶಾಪ ಪರಿಹಾರಕ್ಕಾಗಿ ತನ್ನ ಯೌವ್ವನವನ್ನು ಧಾರೆ ಎರೆದ ಪುರುವಿನಂತೆ ತಮ್ಮ ವ್ಯವಹಾರ ಉಳಿಸಿಕೊಳ್ಳಲು ಮಗಳ ತಲೆದಂಡಕ್ಕೆ ಮುಹೂರ್ತವಿಟ್ಟಿದ್ದರು. ವ್ಯತ್ಯಾಸವಿಷ್ಟೇ. ಯಯಾತಿ ಪುರುವಿನಲ್ಲಿ ಬೇಡಿಕೊಂಡಿದ್ದ ತನ್ನ ಶಾಪವನ್ನು ನೀನು ಬದಲಿಸಿಕೋ ಎಂದು......

ಆದರಲ್ಲಿ ತನ್ನ ತಲೆದಂಡವಾಗುತ್ತಿರುವ ಕಲ್ಪನೆಯೇ ಇಲ್ಲ ಮಗಳಿಗೆ.......

                   *****************

ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ್ದ ಅಭಿರಾಮ್ ಹಿಂದಿನ ರಾತ್ರಿಯಷ್ಟೇ ವಾಪಾಸಾಗಿದ್ದ. ಅವನಿಗೆ ತನ್ನ ಅನುಪಸ್ಥಿತಿಯಲ್ಲಿ ಇಲ್ಲಿ ನಡೆದ ವಿದ್ಯಮಾನಗಳ‌ ಅರಿವಿರಲಿಲ್ಲ.

ಆಫೀಸಿಗೆ ತೆರಳದೆ ನಾಲ್ಕು ದಿನಗಳಾಗಿದ್ದರಿಂದ ಬೆಳಗ್ಗೆ ಬೇಗನೆ ತಯಾರಾಗಿ ತಿಂಡಿ ಮುಗಿಸಿ ಆಫೀಸಿನತ್ತ ಹೋಗಲು ಯೋಚಿಸಿದ್ದ. ತಿಂಡಿ ಮುಗಿದು ಇನ್ನೇನು ಹೊರಡಬೇಕು ಎನ್ನುವಾಗ "ಅಭಿ ನಿನ್ಹತ್ರ ಒಂದು ಮುಖ್ಯವಾದ ವಿಷಯ ಮಾತಾಡ್ಲಿಕ್ಕಿದೆ. ಆಫೀಸಿಗೆ ಮಧ್ಯಾಹ್ನದ ನಂತರ ಹೋಗಬಹುದು" ಎಂದರು ಸಚ್ಚಿದಾನಂದ.

"ಡ್ಯಾಡ್, ಆಫೀಸ್ ಕಡೆ ಹೋಗದೆ ನಾಲ್ಕು ದಿನವಾಯ್ತು. ಇವತ್ತು ಒಂದೆರಡು ಮುಖ್ಯವಾದ ಮೀಟಿಂಗ್ ಬೇರೆ ಇದೆ. ಸಂಜೆ ಮಾತಾಡಿದ್ರೆ ಆಗೋಲ್ವಾ" ಕೇಳಿದ.

"ಮೀಟಿಂಗ್ಸ್ ನಾಳೆಗೆ ಮುಂದೂಡೋಕೆ ಹೇಳಿದ್ದೀನಿ. ಇದು ತುಂಬಾ ಮುಖ್ಯವಾದ ವಿಷಯ" ಎಂದ ತಂದೆಯ ಮಾತಿಗೆ, 

"ಒಕೆ ಡ್ಯಾಡ್. ಹೇಳಿ. ಏನು ವಿಷ್ಯ?" ಸೋಫಾದಲ್ಲಿ ಕುಳಿತು ಕೇಳಿದ.

ಸಚ್ಚಿದಾನಂದರು ಮಡದಿ, ಮಗಳೆಡೆ ನೋಟ ಹರಿಸಿದರು. ಅವನನ್ನು ಬಿಟ್ಟು ಉಳಿದ ಮೂವರು ಈ ಬಗ್ಗೆ ಚರ್ಚಿಸಿದ್ದರು. ಅವರೆಲ್ಲರಿಗೂ ಸಮ್ಮತವೇ. ಸಚ್ಚಿದಾನಂದರಿಗೆ ಸಮನ್ವಿತಾಳ ಪ್ರೌಢತೆ, ನೇರಮಾತು ಹಿಡಿಸಿತ್ತು. ಮೃದುಲಾ ಅವರು ಈ ಕ್ಷಣವೇ ಮನೆತುಂಬಿಸಿಕೊಳ್ಳಲೂ ತಯಾರು. ಇನ್ನು ಆಕೃತಿಯಂತು ತಮ್ಮ ಒಪ್ಪಿಗೆಯನ್ನು ಸಮನ್ವಿತಾಳಿಗೆ ತಿಳಿಸಲು ತುದಿಗಾಲಿನಲ್ಲಿ ನಿಂತಿದ್ದಳು. ಆದರೆ ಸಚ್ಚಿದಾನಂದ ಅವರು ಮಗನ ಅಭಿಪ್ರಾಯ ತಿಳಿಯುವ ತನಕ ಯಾರಿಗೂ ಏನೂ ಹೇಳುವಹಾಗಿಲ್ಲವೆಂದು ಕಟ್ಟಪ್ಪಣೆ ಹೊರಡಿಸಿದ್ದರಿಂದ ಸುಮ್ಮನಿದ್ದಳು. ಹಾಗಾಗಿ ಮೂವರೂ ಚರ್ಚಿಸಿ, ತಮಗೆಲ್ಲರಿಗೂ ಒಪ್ಪಿಗೆ ಆದರೂ ಮಗನ ತೀರ್ಮಾನವೇ ಅಂತಿಮ ಎಂದು ನಿರ್ಧರಿಸಿದ್ದರು. ಅದಕ್ಕಾಗಿಯೇ ಈ ದುಂಡು ಮೇಜಿನ ಪರಿಷತ್ತು.

ಮಾತನಾಡಲಿದೆ ಎಂದು ತನ್ನನ್ನು ಉಳಿಸಿಕೊಂಡು ಸುಮ್ಮನೆ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತಿದ್ದುದು ಕಂಡು ಏನೋ ಗಹನವಾದ ವಿಚಾರವೆಂದು ಅನಿಸಿತು ಅವನಿಗೆ.

"ಯಾಕೆ ಡ್ಯಾಡ್, ಏನಾಯ್ತು? ಮಾತಾಡ್ಬೇಕು ಅಂತ ಹೇಳಿ ಎಲ್ಲಾ ಸುಮ್ನಿದ್ದೀರಲ್ಲ" ಕೇಳಿದ.

ಮತ್ತೆ ತನ್ನೆಡೆ ನೋಡಿದ ಗಂಡನಿಗೆ, "ಅಯ್ಯೋ ರಾಮಾ, ಅದೇನು ನನ್ನ ಮುಖ ನೋಡ್ತಿದ್ದೀರಾ. ಇಡೀ ದಿನ ಆ ನ್ಯೂಸ್ ರೀಡರ್ ನ ಕಣ್ಣು ಬಾಯಿ ಬಿಟ್ಟುಕೊಂಡು ನೋಡ್ತೀರಾ. ಅವಳು ನ್ಯೂಸ್ ಓದೋ ಹಾಗೆ ವಿಷಯ ಹೇಳಿ ಅವನಿಗೆ" ಗದರಿದರು ಮೃದುಲಾ. ಯಾಕೋ ಇದು ತನ್ನ ಬುಡಕ್ಕೆ ಬರುತ್ತದೆ ಅನಿಸಿದಾಗ ಸಚ್ಚಿದಾನಂದ್ ತಾವೇ ಮಾತನಾಡುವುದು ಒಳಿತೆಂದು,

"ಅಭಿ, ಸತ್ಯಂ ರಾವ್ ಒಂದು ಪ್ರಸ್ತಾಪ ತಂದಿದ್ದಾರೆ" ಎಂದರು.

ರಾವ್ ಅವರ ಹೆಸರು ಕೇಳಿದ್ದೇ, 'ಮಗಳು ನನ್ನ ಮೆದುಳಿಗೆ ಕೈಹಾಕಿ ಒಂಥರಾ ಕಾಟ ಕೊಡ್ತಾ ಇದ್ದಾಳೆ, ಈಗ ಅಪ್ಪನ ಕಾಟ ಬೇರೆ. ಈ ಅಪ್ಪ ಮಗಳು ಏನು ಮಾಡಬೇಕು ಅಂದ್ಕೋಡಿದ್ದಾರೋ' ಎಂದುಕೊಂಡವ,

"ಡ್ಯಾಡ್, ನಾನು ನಿಮಗೆ ಅವತ್ತೇ ಹೇಳಿದ್ದೆ. ಪಾರ್ಟಿಗೆ ಕರೆದಿರುವ ಹಿಂದೆ ಏನೋ ಉದ್ದೇಶ ಇದೆ ಅಂತ. ಐ ನ್ಯೂ ಇಟ್. ಏನಂತೆ ಅವರ ಪ್ರಸ್ತಾಪ" ಕೇಳಿದ ವಿಷಯದ ಅರಿವಿಲ್ಲದೇ.

"ಹೆಚ್ಚೇನಿಲ್ಲ. ನಿನಗೊಂದು ಮೂಗುದಾರ ಹಾಕಿ, ನಿನ್ನ ಜುಟ್ಟನ್ನು ಅವರ ಮಗಳ ಕೈಗೆ ಕೊಡೋ ಪ್ರಸ್ತಾಪ" ಕಿಸಕ್ಕನೆ ನಗುತ್ತಾ ಹೇಳಿದಳು ಆಕೃತಿ.

ಅವಳ ಮಾತಿನ ತಲೆಬುಡ ಅರ್ಥವಾಗಲಿಲ್ಲ ಅವನಿಗೆ. 

"ಏನು ಹಾಗಂದ್ರೆ. ನನಗೆ ಅರ್ಥ ಆಗ್ತಿಲ್ಲ" ಕೇಳಿದ.

"ಸತ್ಯಂ ರಾವ್ ದಂಪತಿಗಳು ಸಮನ್ವಿತಾ ಮತ್ತೆ ನಿನ್ನ ಮದುವೆ ಪ್ರಸ್ತಾಪ ಮಾಡಿದ್ದಾರೆ" ತಾಯಿ ಹೇಳುತ್ತಿದ್ದರೆ ಗರಬಡಿದವನಂತೆ ಕುಳಿತಿದ್ದ ಅಭಿರಾಮ್. ಅವನಿಗೆ ಏನು ಪ್ರತಿಕ್ರಿಯಿಸಬೇಕೋ ತಿಳಿಯದೇ ಮೌನವಾಗಿದ್ದ.

ಅವನು ಮೌನವಾಗಿರುವುದನ್ನು ಕಂಡು ಸಚ್ಚಿದಾನಂದ್ ಅವನ ಮನೋವಿಪ್ಲವ ಅರಿತವರಂತೆ,

"ನೋಡು ಅಭಿ, ಇದಕ್ಕೆ ನಮ್ಮ ವಿರೋಧವಿಲ್ಲ. ನಮಗೆಲ್ಲಾ ಸಮನ್ವಿತಾ ಬಹಳ ಹಿಡಿಸಿದ್ದಾಳೆ. ಆದರೆ ನಿನ್ನ ಅಭಿಪ್ರಾಯವಿಲ್ಲಿ ಬಹಳ ಮುಖ್ಯ. ಏಕೆಂದರೆ ಅವಳೊಂದಿಗೆ ಜೀವನ ಸವೆಸಬೇಕಾಗಿರುವವನು ನೀನು. ನಿನಗೆ ಯಾರ ಒತ್ತಾಯವೂ ಇಲ್ಲ. ಸರಿಯಾಗಿ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಾ. ಆಮೇಲೆ ಮಾತನಾಡೋಣ" ಎಂದು ಅವನಿಗೆ ಯೋಚಿಸಲು ಅವಕಾಶ ಕೊಟ್ಟರು.

"ಥ್ಯಾಂಕ್ಸ್ ಡ್ಯಾಡ್, ನಾನು ಯೋಚಿಸ್ತೀನಿ" ಎಂದವನೇ ನೇರ ತನ್ನ ರೂಮಿನತ್ತ ನಡೆದ.

       *********ಮುಂದುವರೆಯುತ್ತದೆ*********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ