ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜುಲೈ 2, 2020

ಅವರೋಹಣ

ಈ ಜಗ ಸೋಜಿಗ ಬಲು ಡಾಂಭಿಕ ಇಲ್ಲಿನ ಲೆಕ್ಕಾಚಾರ

ಮಾತಿಗೂ ಕೃತಿಗೂ ಸಂಬಂಧವಿಲ್ಲದ ಜೀವನವಿದು ಆತ್ಮವಂಚನೆ 

ಎದುರಿಗೊಂದು ನೀತಿ ಬೆನ್ನ ಹಿಂದೆ ಬೇರೆಯದೇ ರೀತಿ ನಯವಂಚನೆ

ಸಕಲವೂ ತೋರಿಕೆ ಭಾವಗಳ ಸೋರಿಕೆ ಬದುಕೇ ಆಡಂಬರದ ಪ್ರದರ್ಶನ

ಅಂಕೆಗಳಲಿನ ಗಳಿಕೆಯೊಂದೇ ಪ್ರಧಾನ ಆತ್ಮವೇ ಬಿಖರಿಯಾದದ್ದು ನಿದರ್ಶನ

ನಾ ಮೇಲು ತಾ ಮೇಲು ಎಂಬ ದೊಂಬರಾಟದೊಳು ಜ್ಞಾನಕ್ಕೂ ಪಕ್ಷಪಾತ

ಅರಿವಿಗೂ ತಾರತಮ್ಯದ ಅರಿವೆ ತೊಡಿಸಿರೆ ಮೌಲ್ಯಗಳ ಉಲ್ಕಾಪಾತ 

ಇದುವೇ ಅಧಃಪತನದ ಹಾದಿ 

ಇದುವೇ ಅವಸಾನಕ್ಕೆ ನಾಂದಿ




ಭಾನುವಾರ, ಜೂನ್ 21, 2020

ವಿದಾಯ.... ಕಣ್ಣಹನಿಯೊಂದಿಗೆ.....

ನೆನಪಿಳಾದಲ್ಲಿ  ಎಂದೆಂದಿಗೂ ಹಚ್ಚಹಸಿರು...

ನಮ್ಮ ಮಡಿಲೊಳು ನಿನ್ನ ಮೊದಲ ಬೆಚ್ಚನೆ ಉಸಿರು...


ಮರೆವುದೆಂತು ನಿನ್ನ ತುಂಟಾಟದ ಕಲರವ 

ಪುಟ್ಟ ಪಾದದ ಕಾಲ್ಗೆಜ್ಜೆ ಘಲಘಲ.....

ಆ ಕುಡಿಹುಬ್ಬಡಿಯ ತುಂಟ ಕಣ್ಣೋಟ ಬಣ್ಣಿಸಲಸದಳ

ಹವಳದ ತುಟಿಯಂಚಿನ ಮುಗ್ಧ ನಗೆಯ ಕಿಲಕಿಲ....


ಮನೆಮನದ ತುಂಬಾ ಅಚ್ಚಳಿಯದ ನಿನ್ನ ಹೆಜ್ಜೆಯ ಗುರುತು...

ಬದುಕು ಘನಘೋರ ಅತಿ ದುರ್ಭರ ನಿನ್ನ ಹೊರತು....

ಎಂದಾದರೂ ಉಸಿರಾಡಬಹುದೇ ನಾವು ನಿನ್ನ ಮರೆತು?


ಕೋಟಿ ಕನಸುಗಳ ಹೂಮಾಲೆ ನಿನ್ನ ಭವ್ಯ ಭವಿತವ್ಯ ದ್ವಾರದ ತೋರಣವಾಗಿ...

ನಮ್ಮ ಮುಪ್ಪಿನ ಹಾದಿಗೆ ನಿನ್ನ ಸವಿನಗೆ ದೀವಟಿಗೆ ಚೈತನ್ಯದ ಹೂರಣವಾಗಿ....

ಕಂಡೆವೇ ಸ್ವಪ್ನಗಳ ತೇರ ಮೆರವಣಿಗೆ ಅಕಾರಣವಾಗಿ???


ಕಂಡ ಕನಸೆಲ್ಲವೂ ಆಯಿತು ಬಿಸಿಲ ಕುದುರೆಯಂತೆ ಮರೀಚಿಕೆ...

ಆದರಿದು ವಿಧಿಯಾಟವಲ್ಲ ನಿನ್ನ ಬದುಕಾಯ್ತು ಕಾಮಾಂಧ ದುರುಳರ ಆಟಿಕೆ...

ಮೇಲೆರಗಿ ಘಾಸಿಗೊಳಿಸಿದ್ದು ಸಾಲದೇ ವಿರೂಪಗೊಳಿಸಿ ನಿನ್ನ ಚಂದಿರ ವದನ....

ಬಿಸುಟರು ಉಂಡೆಸೆವ ಎಲೆಯಂತೆ ಬೀದಿಯಲ್ಲಿ ದೇವ ಕಿನ್ನರಿಯಂತಹ ನಮ್ಮ ಕಂದನ...


ಅಂದು ನಗುವ ನಿನ್ನ ಬೆನ್ನ ಮೇಲೇರಿಸಿ ಕೂಸುಮರಿ ಅಂಬಾರಿ ಜಾತ್ರೆ.......

ಇಂದು ಉಸಿರಿಲ್ಲದ ನಿನ್ನ ಹೆಗಲ ಮೇಲೇರಿಸಿ ಹೊರಟಿದೆ ಅಂತಿಮಯಾತ್ರೆ.....


ಕಿಣಿ ಕಿಣಿ ನಾದದ ಕೈ ಬಳೆಗಳು ಮೌನ ಘಲ್ ಘಲ್ ಗೆಜ್ಜೆಯೂ ಸ್ತಬ್ಧ....

ಕಾಡಿಗೆ ಕಂಗಳು, ಸಂಪಿಗೆ ಮೂಗು, ಹವಳದಾ ತುಟಿಯ ಒಡತಿ ನಿಶ್ಯಬ್ದ .....


ಇದೇ ಕೈಗಳಲಿ ಉಣಿಸಿ ಎತ್ತಾಡಿಸಿದ್ದೆವು ಪುಟ್ಟ ದೇವತೆಯ ನೋಡಿ ನಲಿದಿದ್ದೆವು...‌.

ಇದೇ ಕೈಗಳಲಿ ಹಿಡಿದು ನಡೆಸಿದ್ದೆವು ಅಂಬೆಗಾಲಿಡುವ ಪುಟ್ಟ ಪಾದಗಳ ಮುದ್ದಿಸಿದ್ದೆವು.....


ಇಂದು......


ಇದೇ ನಡುಗುವ ಕೈಗಳಲಿ ಕನಸುಗಳ ಸಮಾಧಿಗೆ ಹಿಡಿ ಮಣ್ಣು ಹಾಕುವ ಮುನ್ನ......

ಕ್ಷಮಿಸು ಮಗಳೇ ನಿನ್ನ ಜತನದಿ ಕಾಪಿಡಲಾಗದ ಈ ನಿರ್ಭಾಗ್ಯ ಹೆತ್ತವರನ್ನ......


ವಿದಾಯ ದೇವತೆಯೇ ನಿನಗೆ ಜಾರುವ ಕಣ್ಣಹನಿಯೊಂದಿಗೆ.........



ಪರಿಭ್ರಮಣ

ಬದುಕೆಂಬುದು ಮಾಯೆ ಸಿಹಿಕಹಿಗಳ ಮಿಳಿತ

ಜೀವನದ ಕಡಲಿನೊಳು ಸುಖ ದುಃಖಗಳದೇ ಏರಿಳಿತ


ಸಂತಸದ ಕ್ಷಣಗಳವು ಬಲು ಬೇಗ ಸಾಗುವವು

ಸಮಯದ ಪರಿವೆಯನೇ ಮರೆಸಿ ಉರುಳುವವು

ಆ ಕ್ಷಣದ ಬದುಕನ್ನು ಸವಿಯಬೇಕು ಮನಸಾರೆ

ಜತನದಿ ಕಾಪಿಡಬೇಕು ನೆನಪುಗಳ ಪೆಟಾರೆ


ಬದುಕ ಪರೀಕ್ಷಿಸುವ ಕಾರ್ಪಣ್ಯಗಳು ಹಲವಾರು

ತಾಳ್ಮೆಯು ಬೇಕು ಎದುರಿಸಲು ವಿಧಿ ಕೈಯ ತಲವಾರು

ನೋವ ಉಳಿಪೆಟ್ಟುಗಳ ಹೊಡೆತ ಸಹಿಸಲು ಬೇಕು

ಬವಣೆಗಳ ವೇದನೆಯ ಜಯಿಸಿ ನಿಲ್ಲಲು ಬೇಕು


ಬದುಕೊಂದು ಗೋಲ ಪರಿಚಲಿಸುವುದು ಸದಾಕಾಲ

ನೋವು ನಲಿವು ಎರಡು ಧ್ರುವಗಳು...

ಬದುಕ ನಾಣ್ಯದ ಎರಡು ಮುಖಗಳು...

ಗೋಲ ನಿರಂತರ ಪರಿಭ್ರಮಿಸಲೇ ಬೇಕು.....

ಧ್ರುವಗಳು ಅದಲು ಬದಲಾಗುತ್ತಲೇ ಇರಬೇಕು....



ನೀನೇ......

ಚುಮು ಚುಮು ನಸುಕಿನ ಇಬ್ಬನಿಯ ಹಾದಿಯಲಿ.....

ಘಮ ಘಮಿಸೋ ಮಲ್ಲಿಗೆಯ ಕಂಪಿನ ಮಾಲೆಯಲಿ......

ಮುಂಜಾವ ರವಿಕಿರಣ ಹೊಂಬೆಳಕ ತೇರಿನಲಿ.....

ಮುಸ್ಸಂಜೆ ಗೋಧೂಳಿ ನಸುಗೆಂಪು ಬಾನಿನಲಿ.....


ಬಾಂದಳದ ಖಗಪಕ್ಷಿ ಚಿಲಿಪಿಲಿ ಕಲರವದಲಿ....

ಹರಿವ ತರಂಗಿಣಿಯ ಜುಳುಜುಳು ನಿನಾದದಲಿ....

ಸಂಧ್ಯೆಯ ಬೆಡಗಿನ ಹೊನ್ನೀರ ಧಾರೆಯಲಿ...

ಇರುಳಿನ ರಜನಿಯ ತಂಬೆಳರ ತಾರೆಯಲಿ....


ಮತ್ತೆ ಮತ್ತೆ ನೆನಪಾಗಿ ಕಾಡುವ ಮಾಯಾವಿ ನೀನೇ ನೀನು.....

ಕನಸೊಳಗೂ ನನಸಾಗಿಯೇ ಉಳಿವ ಇಂದ್ರಜಾಲ  ನಿನ್ನದೇ ಅಲ್ಲವೇನು....



ತೊರೆಯದಿರು ನನ್ನ.....

ನೀನಿರದ ಮನೆ ಮನಗಳಲಿ ಎಂದೂ ತೀರದ ವಿಷಾದ

ಉದಯ ಕಾಲದೊಳೆ ಮೊಳಗಿದೆ ಸಂಧ್ಯಾರಾಗ

ಬೆಳಕ ಸುರಿವ ಭಾಸ್ಕರನಿಗೇಕೋ ಬಡಿದಿದೆ ಗ್ರಹಣ

ಮುಂಜಾವಿಗೇ ಮುಸ್ಸಂಜೆ ಕವಿದ ಬದುಕಿದು ಮಸಣ


ಜೊತೆಯಾಗಿ ಕಳೆದ ಮಧುರ ಕ್ಷಣಗಳ ನರುಗಂಪು

ಇನ್ನು ಬರಿಯ ಸವಿ ನೆನಪು.... 

ನೀನೇ ಇರದೇ ನಿನ್ನ ನೆನಪು ನಿಜಕ್ಕೂ ಸವಿಯೇ.....?

ನಾನಂತೂ ಅರಿಯೇ...


ನಿನ್ನ ಕೈ ಹಿಡಿದು ಜೊತೆ ಸಾಗಿದ ಹೆಜ್ಜೆಗಳ ಎಣಿಸಿಲ್ಲ

ಎಣಿಕೆಗೂ ಸಿಗದಂತೆ ಕೈ ಜಾರಿ ಸರಿದೆಯಲ್ಲ?

ಸದಾ ಜೊತೆಗಿರುವೆನೆಂದು ನೀಡಿದ ವಚನ ಮರೆತೆಯೇಕೆ?

ಒಂದಿನಿತು ಸುಳಿವೀಯದೇ ಎದ್ದು ಹೊರಟೆಯೇಕೆ....?

ನಡುನೀರಿನಲ್ಲಿ ಹೀಗೆ ಏಕಾಂಗಿಯಾಗಿಸಿ ತೊರೆದೆಯೇಕೆ...?


ಸುಖ- ದುಃಖಗಳೆರಡೂ ಶಾಶ್ವತವಲ್ಲವಂತೆ.....

ಈ ಸಮಯ ಸರಿದು ಹೋಗುವುದಂತೆ.......

ಅದೇನೋ ಸರಿಯೇ....

ಈ ಸಮಯ ಸರಿದು ಹೊಸಘಳಿಗೆ ಬರಬಹುದು....


ಆದರೆ......


ಆ ಘಳಿಗೆಯೊಂದಿಗೆ ನೀನು ಮರಳಿ ಬರುವೆಯೇನು...?

ಗೆಳೆಯಾ.....

ದಯಮಾಡಿ ನೀ ಒಮ್ಮೆ ಮರಳಲಾರೆಯೇನು.....?


                  ******************



ತಿದ್ದಿ ಬರೆದ ತೀರ್ಪುಗಳು

ವೈರಮುತ್ತು ರಾಮಸಾಮಿ ಅವರು ತಮಿಳಿನ ಪ್ರಖ್ಯಾತ ಕವಿ, ಗೀತ ರಚನೆಕಾರ ಹಾಗೂ ಕಾದಂಬರಿಕಾರ. ಇವರ ಕೃತಿಗಳು, ಚಲನಚಿತ್ರ ಗೀತೆಗಳು ಅತ್ಯಂತ ಅರ್ಥಗರ್ಭಿತವಾಗಿರುತ್ತವೆ. ಎಷ್ಟು ಹರಿತವಾಗಿ ಬರೆಯುತ್ತಾರೋ ಅಷ್ಟೇ ವಿವಾದಾತ್ಮಕ ವ್ಯಕ್ತಿ...

ತೊಂಬತ್ತರ ದಶಕದಲ್ಲಿ ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಇವರ ಒಂದು ಕವಿತೆಗೆ ಹಲವು ನಾಯಕ ನಟಿಯರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ೧೯೮೬ರಲ್ಲಿ ಇಳೆಯರಾಜ ಅವರೊಂದಿಗಿನ ಬೇರ್ಪಡಿಕೆಯೂ ಹಲವು ಸಿದ್ಧಾಂತಗಳನ್ನು ಹುಟ್ಟುಹಾಕಿದ್ದಿದೆ. ಪತ್ರಿಕೆಯೊಂದರಲ್ಲಿ ಆಂಡಾಳ್ ದೇವಿಯ ಬಗ್ಗೆ ಮಾತನಾಡಿ ತೀವ್ರ ವಿರೋಧ ಎದುರಿಸಿದ್ದರು.

ತೀರಾ ಇತ್ತೀಚೆಗೆ 'ಮೀ ಟೂ' ಅಭಿಯಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಸೇರಿದಂತೆ ಹಲವರು ಇವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವನ್ನೂ ಮಾಡಿದ್ದಾರೆ. ಅದನ್ನು ಇವರು ನಿರಾಕರಿಸುತ್ತಲೇ ಬಂದಿದ್ದಾರೆ. ಅದರ ಸತ್ಯಾಸತ್ಯತೆಗಳು ಇನ್ನೂ ಹೊರಬರಬೇಕಿದೆ. 

ವೈರಮುತ್ತು ಅವರು ೧೯೭೫ರಲ್ಲಿ ಬರೆದ ಕವಿತೆ "ತಿರುತ್ತಿ ಎಳುದಿಯ ತೀರ್ಪುಗಳ್". ಹಲವು ವರ್ಷಗಳ ಹಿಂದೆ ಇದರ ಕನ್ನಡಾನುವಾದವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಓದಿದ್ದೆ. ಆ ವಾಕ್ಯಗಳು, ಅದರಲ್ಲಿನ ಹರಿತ ಬಹಳವಾಗಿ ಕಾಡಿತ್ತು. ಅದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ.

ಈಗಿನ ರಾಜಕೀಯದ ದೊಂಬರಾಟ, ನಾಲಿಗೆಯ ಮೇಲೆ ಹಿಡಿತವಿಲ್ಲದಂತಹ ಹುಚ್ಚು ಹೇಳಿಕೆಗಳು, ತೋರಿಕೆಯ ಪ್ರದರ್ಶನಗಳು, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಮರೆತ ಮಾಧ್ಯಮಗಳು ಎಲ್ಲವನ್ನೂ ನೋಡಿದಾಗ ಆ ಕವಿತೆಯ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ...

ಹಾಗಾಗಿಯೇ ಅದನ್ನು ಇಲ್ಲಿ ಹಂಚಿಕೊಳ್ಳ ಬಯಸುವೆ. ಆ ಸಾಲುಗಳು ಹೀಗಿವೆ.....


ನಿಮ್ಮದೇ ವೇದಿಕೆ

ನಿಮ್ಮದೇ ನಾಲಿಗೆ

ಏನು ಬೇಕಾದರೂ ಮಾತನಾಡಿ!


ನಿಮ್ಮದೇ ಲೇಖನಿ 

ನಿಮ್ಮದೇ ಪ್ರೆಸ್

ಏನು ಬೇಕಾದರೂ ಬರೆಯಿರಿ!


ನಿಮ್ಮದೇ ತಕ್ಕಡಿ

ನಿಮ್ಮದೇ ಬಟ್ಟು

ಏನು ಬೇಕಾದರೂ ವಿಮರ್ಶಿಸಿ!


ನಿಮ್ಮದೇ ವಾದ್ಯ

ನಿಮ್ಮದೇ ಕಛೇರಿ 

ಏನು ಬೇಕಾದರೂ ನುಡಿಸಿ!


ನಿಮ್ಮದೇ ಕುಂಚ

ನಿಮ್ಮದೇ ಬಣ್ಣ

ಏನು ಬೇಕಾದರೂ ಚಿತ್ರಿಸಿ!


ಆದರೆ.....

ನಾಳಿನ....

ಕಾಲದ ವಿಮರ್ಶೆ

ನಿಮ್ಮ ಹೆಣಗಳನ್ನು ಕೂಡ

ಅಗೆದು ತೆಗೆದುಕೊಂಡು ಬಂದು

ನೇಣಿಗೆ ಹಾಕುತ್ತೆ

ಎಂಬುದು ಮಾತ್ರ ನೆನಪಿರಲಿ

ಎಷ್ಟು ಸತ್ಯವಲ್ಲವೇ? ಎಷ್ಟೇ ಸುಳ್ಳಾಡಿ, ಹಾರಾಡಿ ಮೆರೆದರೂ ಒಂದಲ್ಲಾ ಒಂದು ದಿನ ಕಾಲದ ಚಕ್ರ ತಿರುಗಿದಾಗ ಪ್ರತಿಯೊಂದಕ್ಕೂ ತಕ್ಕ ಬೆಲೆ ತೆರಲೇಬೇಕಲ್ಲವೇ????

ಅದನ್ನೇಕೆ ಮರೆಯುತ್ತೇವೆ ನಾವು?



ಒಳನೋಟ

ಕಡು ಮೌನದ ಗರ್ಭದಲೂ 

ಹುಟ್ಟುವುದು ಮಾತುಗಳು

ಅದ ಆಲಿಸುವ ತನ್ಮಯತೆ 

ಇರಬೇಕಷ್ಟೇ ನಿನ್ನ ಕರಣಗಳಿಗೆ.....


ಗಾಡಾಂಧಕಾರದ ನಡುವಲ್ಲೂ 

ಭರವಸೆಯ ಆಶಾಕಿರಣಗಳಿವೆ

ಅದ ಕಾಣಲು ತೆರೆದಿರಬೇಕಷ್ಟೇ

ನಿನ್ನ ಮನದ ಅಕ್ಷಿಪಟಲ.....


ಹರಡಿರುವ ದುರ್ಗಂಧದ ಆಳದಲೆಲ್ಲೋ

ಅಡಗಿಹುದು ಪರಿಮಳದ ಸುಗಂಧ

ಅದ‌ ಆಘ್ರಾಣಿಸುವ ಕ್ಷಮತೆ

ಇರಬೇಕಷ್ಟೇ ನಿನ್ನ ನಾಸಿಕಕೆ......


ಮುರಿದ ಸಂಬಂಧಗಳ ಆಂತರ್ಯದಲೂ

ಮಿಡಿಯುವವು ಮನಸು ಹೃದಯ

ಅದ ಗ್ರಹಿಸಿ ಮಾತುಗಳ ಹಾರ

ಪೋಣಿಸಬೇಕಷ್ಟೇ ನಿನ್ನ ಅಂತಃಕರಣ....


ನಿರಾಸೆ ಹತಾಶೆಗಳ ಮಧ್ಯದಲೇ ಇವೆ

ಕನಸ ನನಸಾಗಿಸುವ ಸಾವಿರ ಹಾದಿಗಳು

ಬೆಂಬಿಡದೆ ಬೆನ್ನತ್ತಿ ಕಾಡುವ ಸೋಲುಗಳೇ

ಬದಲಾಗುವವು ಸಾಧನೆಯ ಮೆಟ್ಟಿಲಾಗಿ


ಇದ ಅರಿತು ಎದೆಗುಂದದೆ ಛಲದಲಿ

ಮುನ್ನುಗ್ಗಬೇಕಷ್ಟೇ ನೀನು ಆತ್ಮಸ್ಥೈರ್ಯದಿಂದ....

ಪರಿಶ್ರಮದ ಬೆವರ ಹನಿ ಎಂದೂ ವ್ಯರ್ಥವಾಗದು

ಅದ ವ್ಯಯಿಸಬೇಕಷ್ಟೇ ನೀನು ಚಿಂತನೆಯಿಂದ....



ಅವಳೆಂದರೆ........

ಇಂದು 'ಅವಳ' ದಿನದ ಸಂಭ್ರಮ.....

ಅವಳೆಂಬ ಅಚ್ಚರಿಯ ದಿನದ ಚೌಕಟ್ಟಿನೊಳು ಬಂಧಿಸಲು ಸಾಧ್ಯವೇ?

ಅವಳೆಂದರೆ.....?

ಅವಳೆಂದರೆ ಕಲಾವಿದನ ಕುಂಚದಲ್ಲಿ ಅರಳಿದ ಷೋಡಶಿಯೇ?

ಅವಳೆಂದರೆ ಕವಿಯ ಕಾವ್ಯದಲಿ ಮೆರೆವ ಶೃಂಗಾರ ಜವನಿಕೆಯೇ?

ಅವಳೆಂದರೆ ಕಥೆಗಾರನ ಕಲ್ಪನೆಯ ಕಡುಚಲುವಿನ ರೂಪಸಿಯೇ?

ಅವಳೆಂದರೆ ಶಿಲ್ಪಿ ಕಡೆದ ಪರಿಮಾಣಬದ್ಧ ಶಿಲಾಬಾಲಿಕೆಯೇ? 

ಏಳು ಮಲ್ಲಿಗೆ ತೂಕದ ರಾಜಕುವರಿ          

ಮತ್ತೇರಿಸುವ ಸೌಂದರ್ಯ ಲಹರಿ                   

ಚಲುವ ಚಂದ್ರಿಕೆ ಬಿರಿವ ನೈದಿಲೆ                       

ಕಮಲ ನಯನೆ ಹರಿಣಾಕ್ಷಿ                            

ಬಿಲ್ಹುಬ್ಬು ನೀಳ ನಾಸಿಕ ಸಂಪಿಗೆ

ಹವಳದ ತುಟಿಯೊಳು ನಗುವ ಇರುವಂತಿಗೆ

ಗಿರಿಶಿಖರ ವಕ್ಷೋಜ ಪ್ರಸ್ಥಭೂಮಿ ಬಡನಡು

ಮೈಬಣ್ಣ ನಸುಗೆಂಪು ಕೇದಿಗೆ ಹಾಲ್ಬಿಳುಪು

ಚಿಗುರು ಬೆರಳು ಮೆದು ಪಾದಗಳ ಹೊನ್ನ ಹೊಳಪು


ಇದೇ ಅವಳ ಪರಿಭಾಷೆ......?

ಇದೇ ಅವಳ ವ್ಯಾಖ್ಯಾನ ಆಖ್ಯಾನ...?

ಇದೇ ಅವಳೆಂದರೆ......?

ಇಲ್ಲ ಖಂಡಿತಾ ದಿಟವಲ್ಲಾ ಇದು

ಅವಳೆಂದರೆ ಕೇವಲ ಬಾಹ್ಯ ಸೌಂದರ್ಯವಲ್ಲ.....


ಅವಳೊಂದು ಶರಧಿ ಎಂದೂ ಮುಗಿಯದ ಅಚ್ಚರಿ

ಅವಳಾಂತರ್ಯ ಮೀನ ಹೆಜ್ಜೆ ಹಾಕಲಾಗದು ಹಾಜರಿ

ಸಹನೆಯ ಪ್ರತಿರೂಪ ಅವಳು ಕ್ಷಮಯಾ ಧರಿತ್ರಿ

ಸಹನೆ ಮೀರಿದರೆ ಸುಡುವ ಅನಲಶಿಖೆ ಈ ಧಾತ್ರಿ


ಅವಳೆಂದರೆ ಸಂಸಾರದ ರಥವ ಎಳೆವ ನೊಗದ ಹೆಗಲು

ಅವಳೆಂದರೆ ಬಾಡಿ ಬಸವಳಿದು ಸುಕ್ಕುಗಟ್ಟಿದ ತೊಗಲು

ಅವಳೆಂದರೆ ಗುಳಿಬಿದ್ದ ಕಣ್ಣ ಕೆಳಗಿನ ಕಪ್ಪು ವರ್ತುಲ

ಅವಳೆಂದರೆ ಎಂದೂ ಬತ್ತದ ಜೀವಿಸುವ ಛಲ

ಅವಳೆಂದರೆ ಬಸಿರು ಬಾಣಂತನಗಳೆಂದು ಆಕಾರ ಕಳೆದುಕೊಂಡ ದೇಹ

ಅವಳೆಂದರೆ ಬದುಕಿನ ದೀವಿಗೆಯ ಅನವರತ ಉರಿಸುವ ನೇಹ

ಅವಳೆಂದರೆ ಜಡ್ಡುಗಟ್ಟಿದ ಕೈಗಳು ಒಡಕು ಹಿಮ್ಮಡಿಗಳ ಶ್ರಮಜೀವಿ

ಅವಳೆಂದರೆ ಬದುಕಲು ಕಲಿಸುವ ಗುರು ಅಂಧಕಾರ ಓಡಿಸುವ ಬೆಳಕಿಂಡಿ

ಅವಳೆಂದರೆ ಆಕರ್ಷಕ ತೊಗಲಿನ ಏರುತಗ್ಗುಗಳ ದೇಹವಲ್ಲ

ಅವಳೆಂದರೆ ಮೂಳೆ ಮಾಂಸದ ಹಂದರದೊಳಗಿನ ಹೃದಯದ ಬಡಿತ

ಅವಳೆಂದರೆ ಪಲ್ಲಂಗದೊಳು ಉಪಭೋಗಕ್ಕೆ ಸಿಗುವ ಚೆಲುವ ಕಾಯುವಲ್ಲ

ಅವಳೆಂದರೆ ಅಸಂಖ್ಯಾತ ಭಾವಗಳ ಒರತೆ ಹೊತ್ತ ಮನಸಿನ ಮಿಡಿತ


ಅವಳೆಂದರೆ ಸೌಂದರ್ಯದ ಸರೋವರವಲ್ಲ

ಜೀವನ ಸಾರ ಬಸಿದು ಸಾರ್ಥಕ್ಯದೆಡೆಗೆ ಹರಿವ ಮಹಾನದಿ.....!!

                  *****************