ಮಂಗಳವಾರ, ಜೂನ್ 9, 2020

ಅನೂಹ್ಯ 6

ರಾತ್ರಿಯೆಲ್ಲಾ ಕಾಡುವ ನೆನಪುಗಳೊಂದಿಗೆ ಹೋರಾಡಿದವಳಿಗೆ ಬೆಳಗಿನ ಜಾವವೇ ಸ್ವಲ್ಪ ಜೊಂಪು ಹತ್ತಿದ್ದು. ಎಚ್ಚರವಾದಾಗ ಗಡಿಯಾರ ಒಂಬತ್ತರ ಅಂಕಿ ತೋರುತ್ತಿತ್ತು. ತಲೆ ಭಾರವೆನಿಸಿತು  ಅವಳಿಗೆ. 'ಸುಮ್ಮನೆ ಮಲಗಿಬಿಡಲೇ?' ಎನಿಸಿದರೂ ಮನೆಯಲ್ಲಿ ಉಳಿದರೆ ತಲೆಭಾರ ಇನ್ನೂ ಹೆಚ್ಚಾಗುವದೆನಿಸಿ ಎದ್ದು ಬಾತ್ ರೂಮಿನತ್ತ ನಡೆದಳು.

ಲಗುಬಗೆಯಲ್ಲಿ ಸ್ನಾನ ಮುಗಿಸಿ ಹೊರಬಂದಾಗ ಲವಲವಿಕೆ ಮೂಡಿತ್ತು. ಯಾವುದೋ ಹಾಡು ಗುನುಗುತ್ತಾ ಉಡುಪು ಧರಿಸಿ, ಹೆರಳು ಬಾಚಿ , ಹಣೆಗೊಂದು ಬಿಂದಿ ಇಟ್ಟು ಹಾಲ್ ಗೆ ಬಂದಳು.

ಮನೆ ರಾತ್ರಿಯ ಪಾರ್ಟಿ ಸುಳಿವಿಲ್ಲದಂತೆ ನಿಶ್ಯಬ್ದವಾಗಿತ್ತು. ಮಾಲಿನಿ ಹಾಲ್ ನಲ್ಲಿದ್ದ ಸೋಫಾದಲ್ಲಿಯೇ ಮಲಗಿದ್ದರು. ಬಹುಶಃ ನಶೆ ಹೆಚ್ಚಾಗಿರಬಹುದು ಎಂದುಕೊಂಡಳು. ಮುಖದ ಮೇಕಪ್ ಬೆವರಿನೊಂದಿಗೆ ಬೆರೆತು ಅಸಹ್ಯವಾಗಿ ಕಾಣುತ್ತಿತ್ತು. ಮೇಕಪ್ಪಿನಡಿಗೆ ಮುಚ್ಚಿ ಹೋಗಿದ್ದ ಮುಖದ ನೆರಿಗೆಗಳು ಕಾಣುತ್ತಿತ್ತು. ಕಣ್ಣಿಗೆ ಬಳಿದುಕೊಂಡ ಐ ಲೈನರ್, ಮಸ್ಕರಾ ಕಣ್ಣಿನ ಸುತ್ತಲೂ ಹರಡಿ ಅಸಹ್ಯ ಬರಿಸುವಂತಿತ್ತು. ಪ್ರೇತಕಳೆ....... ತೊಟ್ಟ ಬಟ್ಟೆ ಅಸ್ತವ್ಯಸ್ತ. ಆಕೆಗೆ ಮೈಮೇಲೆ ಪ್ರಜ್ಞೆ ಇರಲಿಲ್ಲ. ಅಸಹ್ಯಕ್ಕೂ ಮೀರಿದ ಭಾವವೊಂದು ಮಿನುಗಿತು ಸಮನ್ವಿತಾಳಲ್ಲಿ. 

ಸುಮ್ಮನೇ ಡೈನಿಂಗ್ ಟೇಬಲ್ ಹತ್ತಿರ ಹೋದಳು. ಕೆಲಸದವನು ತಿಂಡಿ ಬಡಿಸಿದ. ತರಹೇವಾರಿ ಅಡುಗೆ....  ರುಚಿಯೂ ಇತ್ತು. ಆದರೆ ತಿನ್ನಲು ಮನಸ್ಸಾಗಲಿಲ್ಲ.  ತಿನ್ನದೇ ಎದ್ದು ಕೈ ತೊಳೆಯಲು ಹೊರಟಾಗ ಅಡಿಗೆಯವನು ಗಾಬರಿಯಾದ.

"ಚಿಕ್ಕಮ್ಮಾವ್ರೇ, ಅಡಿಗೆ ಸರಿಯಾಗಿಲ್ವಾ?" ಕೇಳಿಯೇಬಿಟ್ಟ. ಒದ್ದೆ ಕೈ ಒರೆಸುತ್ತಿದ್ದವಳು ನಕ್ಕಳು.

"ಅಡಿಗೆ ಚೆನ್ನಾಗಿದೆ ಆದ್ರೆ ತಿನ್ನೋ ಮನಸಿಲ್ಲ ಅಷ್ಟೇ" ಕಾರ್ ಕೀ ತೆಗೆದುಕೊಂಡು ಹೊರಟವಳ ಮನದಲ್ಲೊಂದು ದೃಢನಿಶ್ಚಯವಿತ್ತು. ''ತಿನ್ನಲು ಮನಸ್ಸೂ ಬೇಕಾ' ಅಡಿಗೆಯವನು ತಲೆಕೆರೆದುಕೊಂಡು ಯೋಚಿಸುವಷ್ಟರಲ್ಲಿ ಕಾರು ಕಾಂಪೌಂಡ್ ದಾಟಿ ಮುಂದೆ ಹೋಯಿತು.

         *****************************

"ಧನ್ವಂತರಿ" ಬರೀ ಆಸ್ಪತ್ರೆಯೆಂದರೆ ತಪ್ಪಾಗುತ್ತದೆ. ಅದು ಡಾ. ಮೀರಾ ಅವರ ಕನಸಿನ ಕೂಸು. ಬಡ ರೋಗಿಗಳ ಪಾಲಿನ ಆಶಾಕಿರಣ.

ಮೀರಾ ಉತ್ತಮ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ನಲವತೈದರ ಆಸುಪಾಸಿನ ಅವಿವಾಹಿತೆ. ಹಣ ಗುಣ ಎರಡರಲ್ಲೂ ಸಿರಿವಂತರು. ಅವರ ತಂದೆ ಸೇನೆಯಲ್ಲಿ ಮೇಜರ್ ಜನರಲ್ ಆಗಿದ್ದವರು. ತಾಯಿ ಅಧ್ಯಾಪಕಿ. ಚಿಕ್ಕಂದಿನಿಂದಲೂ ಶಿಸ್ತಿನಲ್ಲಿ ಬೆಳೆದಾಕೆ. ತಂದೆತಾಯಿ ಇಬ್ಬರೂ ಮಾನವೀಯ ಮೌಲ್ಯಗಳನ್ನು ಧಾರೆಯೆರೆದಿದ್ದರು. ವೃತ್ತಿ ಜೀವನದ ಆರಂಭದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ದುಡಿದರೂ ಅಲ್ಲಿನ ಅಕ್ರಮ, ಕುಸಿಯುತ್ತಿರುವ ಮೌಲ್ಯಗಳು, ಹಣಗಳಿಕೆಯ ಹಪಾಹಪಿ ಆಕೆಗೆ ಹಿಡಿಸಲಿಲ್ಲ. ತಾವೇ ಒಂದು ಆಸ್ಪತ್ರೆ ಯಾಕೆ ತೆರೆಯಬಾರದೆಂಬ ಯೋಚನೆ ಬಂತು. ತಂದೆ ತಾಯಿ ಕೂಡಾ  ಬೆನ್ನುತಟ್ಟಿದ್ದರು. ಸಮಾಜದ ಬಗ್ಗೆ ಕಾಳಜಿ ಇದ್ದ ಕೆಲ ದಾನಿಗಳೂ ಪ್ರೋತ್ಸಾಹಿಸಿದರು. ಅದರ ಫಲವೇ ಧನ್ವಂತರಿ. ಇಲ್ಲಿ ಎಲ್ಲಾ ರೀತಿಯ ಆಧುನಿಕ ಶಸ್ತ್ರಚಿಕಿತ್ಸಾ ಪರಿಕರಗಳು, ಸುಸಜ್ಜಿತ ಲ್ಯಾಬೋರೇಟರಿ, ಡ್ರಗ್ ಹೌಸ್ಗಳೊಂದಿಗೆ ಸಿಬ್ಬಂದಿಗಳಿಗಾಗಿ ಸ್ಟಾಫ್ ಕ್ವಾಟ್ರಸ್ , ಕ್ಯಾಂಟಿನ್ ಸೌಲಭ್ಯಗಳೂ ಇವೆ.

ಆದರೆ ಇಲ್ಲಿ ಬಡವ-ಬಲ್ಲಿದ ಭೇದವಿಲ್ಲ. ಎಲ್ಲರಿಗೂ ಒಂದೇ ತೆರನಾದ ಚಿಕಿತ್ಸೆ. ಹಾಗೆಯೇ ಸೇವಾ ಮನೋಭಾವ ಉಳ್ಳವರಿಗೆ ಮಾತ್ರ ಇಲ್ಲಿ ವೃತ್ತಿಯ ಅವಕಾಶ.

             *************************

ಸಮನ್ವಿತಾ ಆ ದಿನ ಎರಡು ಡೆಲಿವರಿ ಕೇಸ್ ಇದ್ದಿದ್ದರಿಂದ ಮಧ್ಯಾಹ್ನದ ನಂತರವೇ ಬಿಡುವಾಗಿದ್ದು. ಸಂಜೆ ಕಿಶೋರ್ ನ ಬೇರೆ ಭೇಟಿಯಾಗಬೇಕಿತ್ತು.  ಹಸಿವೆನಿಸಿದಾಗ ಬೆಳಿಗ್ಗೆ ತಿಂಡಿತಿನ್ನದ್ದು ನೆನಪಾಗಿ ಕ್ಯಾಂಟೀನಿನಲ್ಲಿ ಊಟಮಾಡಿ ಮೀರಾ ಅವರನ್ನು ಹುಡುಕಿಕೊಂಡು ಹೊರಟಳು. ತಮ್ಮ ಕ್ಯಾಬಿನ್ ನಲ್ಲಿ ಕುಳಿತು ಕೇಸ್ ಹಿಸ್ಟರಿ ನೋಡುತ್ತಿದ್ದವರು "ಒಳಗೆ ಬರಬಹುದಾ ಡಾಕ್ಟರ್" ಎಂಬ ಸ್ವರ ಬಂದತ್ತ ತಿರುಗಿದರು.

"ಧಾರಾಳವಾಗಿ ಬರಬಹುದು"  ಅಂದಾಗ ಒಳ ಬಂದು ಅವರೆದುರು ಕುಳಿತವಳನ್ನೇ ಪರೀಕ್ಷಿಸುತ್ತಾ

"ಹೇ ಲಿಟಲ್ ಪ್ರಿನ್ಸೆಸ್, ಯಾಕೆ ಒಂಥರಾ ಇದ್ದಿ? ಹುಷಾರಿಲ್ವಾ?" ಕೇಳಿದರು.

"ಹಾಗೇನಿಲ್ಲ. ನಾನು ಆರಾಮಾಗಿದ್ದೀನಿ. ನಿಮ್ಹತ್ರ ಸ್ವಲ್ಪ ಮಾತಾಡ್ಬೇಕಿತ್ತು"

"ಸ್ವಲ್ಪ ಯಾಕೆ? ಪೂರ್ತಿ ಮಾತಾಡು ಏನದು"

"ಮೇಡಂ, ನನಗೆ ಒಂದು ಸ್ಟಾಫ್ ಕ್ವಾಟ್ರಸ್ ಬೇಕು. ನಾನು ಇಲ್ಲಿಗೇ ಶಿಫ್ಟ್ ಆಗೋಣ ಅಂತಿದ್ದೀನಿ" ಸಮನ್ವಿತಾ ನಿಧಾನವಾಗಿ ಹೇಳಿದಾಗ ಮೀರಾ ಹುಬ್ಬೇರಿಸಿದರು. 

"ಖಂಡಿತಾ ಸಿಗುತ್ತೆ. ಆದ್ರೆ ಯಾಕೆ ಅಂತ ಕೇಳಬಹುದಾ. ಐ ಮೀನ್ ನಿಮ್ಮನೆ ಹತ್ತಿರದಲ್ಲೇ ಇದೆ."

"ಅಲ್ಲಿ ಇರೋಕೆ ಆಗ್ತಾ ಇಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ"

"ಸರಿ, ನನಗೆ ಒಂದು ವಾರ ಸಮಯ ಕೊಡು. ಅರೇಂಜ್ ಮಾಡ್ತೀನಿ " ಮತ್ತೇನು ಕೇಳಲಿಲ್ಲ ಮೀರಾ.

"ಥ್ಯಾಂಕ್ಸ್ ಮೇಡಂ" ಎಂದು ಹೊರಹೋದಳು ಸಮನ್ವಿತಾ.

ಮೀರಾರಿಗೆ ರಾವ್ ಅವರ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಅವರ ಅಕ್ರಮ ವ್ಯವಹಾರಗಳು, ತೋರಿಕೆಯ ಜೀವನ, ಬೌದ್ಧಿಕ ದಿವಾಳಿತನ ಎಲ್ಲಾ ಗೊತ್ತಿತ್ತು. ಮೊದಲಬಾರಿ ಸಮನ್ವಿತಾ ಮೀರಾ ಬಳಿ ಧನ್ವಂತರಿಯಲ್ಲಿ ವೈದ್ಯೆಯಾಗುವ ಇಚ್ಚೆ ವ್ಯಕ್ತಪಡಿಸಿದಾಗ ಅವರಿಗೆ ಅಚ್ಚರಿಯಾಗಿತ್ತು. ವಿದೇಶದಲ್ಲಿ ವ್ಯಾಸಂಗ ಮಾಡಿರುವ ರಾವ್ ಅವರ ಮಗಳು ಇಲ್ಲಿ ಕೆಲಸ ಮಾಡುವುದೇ? ಅದನ್ನೇ ಕೇಳಿದ್ದರೂ ಕೂಡಾ. "ಅಲ್ವೇ ಹುಡುಗಿ, ನಿಮ್ಮಪ್ಪ ನಿನ್ಗೆ ಒಂದು ಆಸ್ಪತ್ರೆನೇ ಕಟ್ಸಿಕೊಡ್ತಾರೆ ಕೇಳಿದ್ರೆ. ಹೋಗಿ ಹೋಗಿ ಇಲ್ಲಿ ಕೆಲ್ಸ ಮಾಡ್ತೀನಿ ಅಂತೀಯಲ್ಲ? ಏನಿದೆ ಇಲ್ಲಿ"

"ಮೆಡಿಕಲ್ ನಾನು ಇಷ್ಟಪಟ್ಟು ಆಯ್ದುಕೊಂಡು ಓದಿದ್ದು. ಇಂಟರ್ನ್ಶಿಪ್ ಕೂಡಾ ಅಷ್ಟೇ ಶ್ರದ್ಧೆಯಿಂದ ಮಾಡಿದ್ದೀನಿ. ಆದರೂ ಏನೋ ಕೊರತೆ ಅನ್ನಿಸೋದು. ಕಳೆದ ಎರಡು ದಿನಗಳಿಂದ ನಾನು ಇಲ್ಲಿಗೆ ಬರ್ತಿದ್ದೀನಿ. ಯಾಕೋ ಗೊತ್ತಿಲ್ಲ. ಇಲ್ಲಿ ಬಂದಾಗಲೆಲ್ಲಾ ಅದೇನೋ ಸಂತೋಷ, ಆತ್ಮತೃಪ್ತಿ  ಸಿಗುತ್ತೆ. ಈ ಎರಡು ದಿನಗಳಲ್ಲಿ ಸಿಕ್ಕ ನೆಮ್ಮದಿ ನನಗೆ ಯಾವತ್ತೂ ಸಿಕ್ಕಿರಲಿಲ್ಲ" ಅಂದ ಹುಡುಗಿಯ ಕಣ್ಣುಗಳಲ್ಲಿ ಸಂತೋಷವಿತ್ತು. ಆ ಮಾತುಗಳಿಂದಲೇ ಮೀರಾ ಪ್ರಭಾವಿತರಾಗಿದ್ದು ಹಾಗೂ ಸಮನ್ವಿತಾ ಧನ್ವಂತರಿಯ ಸದಸ್ಯಳಾದದ್ದು. ಅವಳು ಮೀರಾ ನಂಬಿಕೆಯನ್ನು ಉಳಿಸಿಕೊಂಡಿದ್ದಳು. ಅವಳೆಂದರೆ ಅದೇನೋ ಅಕ್ಕರೆ ಮೀರಾಗೆ.

ಸಮನ್ವಿತಾಳನ್ನು ಕಂಡಾಗಲೆಲ್ಲ ಅವರಿಗೆ ಅನಿಸುವುದು "ದಿಸ್ ಗರ್ಲ್ ಡಿಸರ್ವ್ಡ್ ಬೆಟರ್ ಫ್ಯಾಮಿಲಿ"

              ****************************

ಕಿಶೋರ್, ನವ್ಯಾ ಇಬ್ಬರು ಹಿಲ್ ವ್ಯೂ ರೆಸಾರ್ಟ್ ಗೆ ಬಂದಾಗ ಸಮನ್ವಿತಾ ಆಗಲೇ ಬಂದು ಕೂತಿದ್ದಳು. ಇವರನ್ನು ಕಂಡು ಕೈ ಬೀಸಿ ನಕ್ಕವಳತ್ತ ನಡೆದರು.

"ಬಂದು ತುಂಬಾ ಹೊತ್ತಾಯ್ತಾ?" ಕೇಳಿದ.

"ಹತ್ತು ನಿಮಿಷವಾಯಿತು ಅಷ್ಟೇ. ಏನು ಮೇಡಂ... ಗಂಡ ಹೆಂಡತಿ ಸೇರಿ ಅರ್ಜೆಂಟ್ ಮೀಟಿಂಗ್ ಕರ್ದಿದ್ದೀರಾ. ಏನು ವಿಷಯ?" ಛೇಡಿಸಿದಳು.

"ಮೊದ್ಲು ಕಾಫಿ ತಗೋಳೋಣ. ಆಮೇಲೆ ಮಾತು" ಕಾಫಿಗೆ ಹೇಳಿದ ಕಿಶೋರ್. ತಂಗಾಳಿ ಹಿತವಾಗಿ ಬೀಸುತ್ತಿತ್ತು. ಕಾಫಿ ಕುಡಿಯುವವರೆಗೂ ಯಾರೂ ಮಾತಾಡಲಿಲ್ಲ. ಕಾಫಿ ಮುಗಿದ ಮೇಲೂ ಇಬ್ಬರೂ ಬಾಯ್ತೆರೆಯುವ ಸೂಚನೆ ಕಾಣದಾಗ "ನೀವಿಬ್ಬರೂ ಹೀಗೆ ಕೂತ್ರೆ ನಾನೇನು ಅಂತ ಅರ್ಥ ಮಾಡ್ಕೋಬೇಕು?" ಅಂದಳು.

ಕಿಶೋರ್ ಹಿಂದಿನ ರಾತ್ರಿಯ ಘಟನೆ ವಿವರಿಸಿ "ಈ ತರ ದಿನ ಇವ್ಳು ಹಿಂಸೆ ಪಡೋದು ನನ್ಕೈಲಿ ನೋಡೋಕಾಗಲ್ಲ. ನೀನೇ ಏನಾದ್ರೂ ಪರಿಹಾರ ಹೇಳಮ್ಮ" ಎಂದು ನಿಡುಸುಯ್ದ.

ಕ್ಷಣಕಾಲ ಸುಮ್ಮನಿದ್ದವಳು ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ಮಾತಿಗಾರಂಭಿಸಿದಳು ಸಮನ್ವಿತಾ. "ನವ್ಯಾ, ನೀನು ಬದುಕಿನ ಬಹುಮೂಲ್ಯ ಸಮಯವನ್ನು ನೋವಿನಲ್ಲೇ ಜೀವಿಸಿದ್ದೀಯ. ಆ ಕಳೆದ ದಿನಗಳು ನಿನ್ನನ್ನು  ಅತಿಯಾಗಿ ಪ್ರಭಾವಿಸಿವೆ. ನಿನ್ನ ಬದುಕಿನಲ್ಲಿ ಸಂತೋಷದ ಕ್ಷಣಗಳು ಬರೋಕೆ ಸಾಧ್ಯವೇ ಇಲ್ಲ ಅಂತ ನೀನೇ ನಿರ್ಧರಿಸಿಬಿಟ್ಟಿದ್ದೀಯ. ಅದರಿಂದಲೇ ಇವೆಲ್ಲ ಸಮಸ್ಯೆ. ಒಮ್ಮೆ ಮನಸಿನ ಬಾಗಿಲು ತೆರೆದು ಬಂದಿರುವ ಸಂತೋಷದ ಕ್ಷಣಗಳನ್ನು ಆಸ್ವಾದಿಸು. ಎಲ್ಲಾ ಸರಿ ಹೋಗುತ್ತೆ"

"ನೀನು ಹೇಳ್ತಿರೋದು ನಿಜವೇ ಸಮಾ. ಹಿಂದೆ ನನ್ನ ಬದುಕಿನಲ್ಲಿ ಕಳೆದುಕೊಳ್ಳಲು ಇದ್ದುದ್ದಾದರೂ ಏನು? ಪ್ರಾಣವೊಂದಿತಷ್ಟೇ. ಅದು ಹೋದರೂ ಚಿಂತೆಯಿರಲಿಲ್ಲ. ಆದರೆ ಈಗ? ಈಗ ನನ್ನ ಅತೀತ ತಿಳಿದ್ರೆ ನಾನು ಕಳ್ಕೊಳ್ಳೋದು ಬೆಲೆ ಕಟ್ಟಲಾಗದ್ದು"

"ಅದ್ಕೆ ಹೇಳ್ತಿರೋದು ನವ್ಯಾ, ಹಳೇದ್ನ  ಮರ್ತು ಹೊಸದನ್ನು ಸ್ವಾಗತಿಸು ಅಂತ" ಕಿಶೋರ್ ಹೇಳಿದ.

"ಹೆಸರು ಬದಲಾದರೆ ಹಣೆಬರಹ ಬದ್ಲಾಗುತ್ತಾ? ನಾನು ಮರೆತ ಮಾತ್ರಕ್ಕೆ ನನ್ನ ಅತೀತ ಸುಳ್ಳಾಗದು. ಒಂದು ವೇಳೆ ನಾವು ಮುಚ್ಚಿಟ್ಟ ಸತ್ಯ ಇನ್ಯಾರ ಮೂಲಕವೋ ಮನೆಯಲ್ಲಿ ಗೊತ್ತಾದ್ರೆ?"

"ಹಾಗೆ ಗೊತ್ತಾದ ದಿನ ನೋಡ್ಕೊಳ್ಳೋಣ. ಆಗ ಏನೇ ಆದ್ರೂ ನಾನು ನಿನ್ನ ಜೊತೆ ಇರ್ತೀನಿ ನವ್ಯಾ" ಕಿಶೋರನೆಂದ.

"ಹಾಗೆ ಯಾರೋ ಮೂರನೇ ವ್ಯಕ್ತಿಯಿಂದ ವಿಷಯ ತಿಳಿದರೆ ಮನೆಯವರಿಗಾಗುವ ನೋವಿನ ಆಳವನ್ನು ಎಂದಾದರೂ ಗ್ರಹಿಸಿದ್ದೀರಾ? ಆ ಸತ್ಯದ ತೀವ್ರತೆಗಿಂತ ಇಷ್ಟು ವರ್ಷದಿಂದ ಮಗ ಸೊಸೆ ನಮಗೆ ಸುಳ್ಳು ಹೇಳಿದ್ರಲ್ಲಾ, ಯಾರೋ ಮೂರನೇ ವ್ಯಕ್ತಿಯಿಂದ ಸತ್ಯ ತಿಳಿಯೋ ಹಾಗಾಯ್ತಲ್ಲ ಅನ್ನೋ ನೋವೇ ಹೆಚ್ಚು ತೀವ್ರವಾಗಿರುತ್ತೆ"

ಸಮನ್ವಿತಾ ಕೂಡಾ "ನವ್ಯಾ ಹೇಳ್ತೀರೋದು ಸತ್ಯನೇ ಕಿಶೋರ್. ಗೊತ್ತಾಗೋ ಸತ್ಯಕ್ಕಿಂತಲೂ ನೀವಿಬ್ರೂ ಅದ್ನ ಮುಚ್ಚಿಟ್ರಿ ಅನ್ನೋದೇ ಅವ್ರನ್ನ ತುಂಬಾ ಕಾಡುತ್ತೆ. ಅದೆಂಥಾ ಸತ್ಯಾನೇ ಆದ್ರೂ ಮನೆಯವರಿಂದ ಗೊತ್ತಾಗೋದಕ್ಕೂ, ಯಾರೋ ಹೊರ್ಗಿನವರಿಂದ ತಿಳಿಯೋಕೂ ತುಂಬಾ ವ್ಯತ್ಯಾಸವಿದೆ" ಅಂದಳು.

"ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಮನಸ್ಸನ್ನ ನಾನು ಸಮಾಧಾನಿಸಲಾಗದೆ ಹೋಗ್ತಿದ್ದೀನಿ. ಪ್ರತಿ ಬಾರಿ ಅಪ್ಪಾಜಿ, ಅಮ್ಮಾ, ಕಾರ್ತಿಕ್ ನ ನೋಡಿದಾಗಲೂ 'ಇಷ್ಟೊಂದು ಪ್ರೀತಿ, ಕಾಳಜಿ ಮಾಡೋ ಜೀವಗಳಿಗೆ ಎಷ್ಟೊಂದು ಮೋಸ ಮಾಡ್ತಿದ್ದೀ, ಎಂಥಾ ದ್ರೋಹಿ ನೀನು' ಅಂತ ನನ್ನ ಅಂತರಾತ್ಮ ಚೀರುತ್ತೆ. ಮಾಡಿರೋ ತಪ್ಪನ್ನು ಯಾರ ಮುಂದೆ ಬೇಕಾದರೂ ಸಮರ್ಥಿಸಿಕೊಳ್ಳಬಹುದು. ದೇವರ ಮೇಲೆ ಪ್ರಮಾಣಿಸಿಯೂ ಸುಳ್ಳು ಹೇಳಬಹುದು. ಆದರೆ ಮನಃಸಾಕ್ಷಿಗೆ ಸುಳ್ಳು ಹೇಳಿ ಸಮಾಧಾನಿಸೋಕಾಗೋಲ್ಲ. ಬದುಕಿನಲ್ಲಿ ಅತೀ ಘೋರವಾದ ಸ್ಥಿತಿ ಅಂದ್ರೆ ಕನ್ನಡಿಯಲ್ಲಿನ ನಮ್ಮ ಪ್ರತಿಬಿಂಬವನ್ನು ನಾವೇ ದಿಟ್ಟಿಸಿ ನೋಡೋಕಾಗ್ದೆ ಇರೋದು. ಈಗ ನಾನಿರೋದು ಅದೇ ಸ್ಥಿತಿಯಲ್ಲಿ‌...."   ನವ್ಯಾಳ ಮಾತಿನ ತೀವ್ರತೆಗೆ ಇಬ್ಬರೂ ಸ್ಥಬ್ದರಾದರು.

ಇದೆಂಥಾ ಸುಳಿ. ಇದರಿಂದ ಪಾರಾಗುವ ದಾರಿ ಹೇಗೆ? ಯೋಚಿಸಿದಷ್ಟೂ ಕಗ್ಗಂಟಾಯಿತೇ ಹೊರತು ಪರಿಹಾರ ಕಾಣದಾಯಿತು.

'ಛೇ.. ನನ್ನಿಂದ ಯಾರಿಗೂ ನೆಮ್ಮದಿ ಇಲ್ಲ. ಆದಿಅಂತ್ಯವಿಲ್ಲದ ನರಕದಲ್ಲಿ ಮುಳುಗಿದ್ದವಳನ್ನು ಕೈ ಹಿಡಿದು ಬೆಳಕಿನೆಡೆಗೆ ತಂದ ಕೋಲ್ಮಿಂಚು ಸಮನ್ವಿತಾ. ಆನಂತರ ಕಿಶೋರನ ಪರಿಚಯ. ಖಾಲಿ ಹಾಳೆಯಂಥ ನನ್ನ ಬಾಳಲ್ಲಿ ಇವರಿಬ್ಬರೂ ತುಂಬಿದ ಬಣ್ಣಗಳೆಷ್ಟು? ಇವರಿಬ್ಬರೂ ನನ್ನೆರಡು ಕಣ್ಣುಗಳಂತೆ. ಒಬ್ಬಳು ಬದುಕು ಕೊಟ್ಟವಳು ಇನ್ನೊಬ್ಬ ಅಸ್ತಿತ್ವ ಕೊಟ್ಟವನು. ಆದರೆ ತಾನು ನೀಡಿದ್ದು ಬರೀ ನೋವೇ.....' ಹೀಗೇ ಸಾಗಿದ್ದ ನವ್ಯಾಳ ವಿಚಾರಲಹರಿಯನ್ನು ತುಂಡರಿಸಿದ್ದು ಸಮನ್ವಿತಾ.

"ನವ್ಯಾ ಏಳು ತುಂಬಾ ತಡವಾಗಿದೆ. ಕಿಶೋರ್ ಹೊರಡೋಣ್ವಾ?" ಎಲ್ಲರೂ ಎದ್ದರು. ಅವರಿಬ್ಬರೂ ಹೊರಟ ನಂತರ ತಾನೂ ಮನೆಗೆ ಬಂದಳು.  ಒಳಗೆ  ಹೋಗಲು ಮನಸ್ಸಾಗದೇ ಹೊರಗೆ ಲಾನ್ ನಲ್ಲಿ ಕುಳಿತಳು.

ಸುಖ್ ಕೀ ಕಲಿಯಾ ದುಃಖ್ ಕೆ ಕಾಂಟೆ

ಮನ್ ಸಬ್ ಕಾಮ್ ಆಧಾರ್

ಮನ್ ಸೆ ಕೋಯಿ ಬಾತ್ ಚುಪೆ ನಾ

ಮನ್ ಕೆ ನೈನ್ ಹಜಾ಼ರ್

ಜಗ್ ಸೆ ಚಾಹೇ ಭಾಗ್ ಲೆ ಕೋಯೀ

ಮನ್ ಸೆ ಭಾಗ್ ಪಾಯೇ 

ಮನವೆಂಬುದು ಎಷ್ಟು ಪ್ರಬಲ..... ಮನದ ನಡೆಗಳು, ಮನದೊಳಗಿನ ಭಾವನೆಗಳು ಅನೂಹ್ಯ. ಅವನ್ನು ಓದಲಾಗದು. ನವ್ಯಾಳದ್ದು ಪರಿಹಾರ ಕಾಣದ ಸಮಸ್ಯೆಯೆನಿಸಿತು ಸಮನ್ವಿತಾಳಿಗೆ.

ನವ್ಯಾ .......!!

ಹಳೆಯದ್ದೆಲ್ಲಾ ಮರೆತು ಹೊಸ ಜೀವನದ ಆರಂಭ ಹೊಸತರಿಂದಲೇ ಆಗಲಿ ಎಂದು ತಾನೇ ಇಟ್ಟ ಹೆಸರು. ಇಂದಿನ ನವ್ಯಾಳಿಗೆ ನಾಳಿನ ಬಗ್ಗೆ ಕನಸುಗಳಿವೆ. ತಡೆಯೊಡ್ಡುತ್ತಿರುವ ಅತೀತವೆಂಬ ಅಡ್ಡಿ ಇದ್ದರೂ ಅದರಿಂದ ಪಾರಾಗಿ ತನ್ನ ಬದುಕನ್ನು ಉಳಿಸಿಕೊಳ್ಳಲು ಬಯಸುತ್ತಿರುವ ಜೀವನ್ಮುಖಿ ಈಕೆ.

ಆದರೆ ಅತೀತದಲ್ಲಿದ್ದಾಕೆ...........?

ಅವಳು ನಿರ್ಲಿಪ್ತೆ, ಬದುಕಿನ ಬಗ್ಗೆ ಆಕೆಗಿದ್ದುದು ದಿವ್ಯ ನಿರ್ಲಕ್ಷ್ಯ

ಅಂದಿಗೂ ಇಂದಿಗೂ ಬದಲಾಗದ್ದು ಅವಳ ತುಟಿಯಂಚಿನ ಆ ಮುಗುಳ್ನಗೆ.....

ಹೌದು....... ಅವಳ ದುಃಖ ಇತರರಿಗೆ ತಿಳಿಯದು......

ಕಾರಣ ಅದೇ ಮುಗುಳ್ನಗೆ.....

ಕರ್ಣನ ಕವಚ ಕುಂಡಲಗಳಂತೆಯೇ ಅವಳ ಆ ನಗು ಅಭೇದ್ಯ........!!

ಕಷ್ಟ ಸುಖ ಎರಡರಲ್ಲೂ ಅವಳ ಜೊತೆಗಾತಿ.

ಆ ನಗುವೇ ಅಲ್ಲವೇ ಈ ಸಮನ್ವಿತಾಳನ್ನು ಸೆಳೆದದ್ದು......

ಅವಳ ಮನ ಬೇಡವೆಂದರೂ ಕೇಳದೆ ನವ್ಯಾಳ ಅತೀತದೆಡೆ ಓಡತೊಡಗಿತು..

ಸುಶ್ರಾವ್ಯ ಕಂಠದ ಮಧುರಗಾನ ಮನವನ್ನು ಆವರಿಸತೊಡಗಿತು......

 **** ಮುಂದೆ........ ನವ್ಯಾಳ ಅತೀತ.........****

2 ಕಾಮೆಂಟ್‌ಗಳು:

  1. ಕಥೆ ಸೊಗಸಾಗಿ ಮೂಡಿ ಬರುತ್ತಿದೆ. ಗತಕಾಲದ ಯಾವುದೋ ಗುಟ್ಟನ್ನು ಮನೆಯವರ ಮುಂದೆ ಬಿಚ್ಚಿಡಲಾಗದೇ ಪರಿತಪಿಸುತ್ತಿರುವ ಕಿಶೋರ್, ನವ್ಯಾ. ಬೇಕಾದಷ್ಟು ಸಿರಿವಂತಿಕೆ ಇದ್ದರೂ, ಅಪ್ಪ ಅಮ್ಮನಿಂದ ದೂರವಾಗಿ, ಅವರ ಪ್ರೀತಿ ಸಿಗದೇ ಹೆತ್ತವರನ್ನೇ ದ್ವೇಷಿಸುತ್ತಿರವ ಸಮಾ.... ಮುಂದೆ???? Waiting....

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ವೀರೇಂದ್ರ. ಗತಕಾಲದ ಸತ್ಯ ಮುಂದಿನ ಸಂಚಿಕೆಯಲ್ಲಿ ಅನಾವರಣಗೊಳ್ಳುತ್ತದೆ.

    ಪ್ರತ್ಯುತ್ತರಅಳಿಸಿ