ಶನಿವಾರ, ಆಗಸ್ಟ್ 26, 2023

ನೆನಪಿನ ಪುಟಗಳ ನಡುವೆ.....


ಹೆಜ್ಜೆ ಮೂಡದ ಹಾದಿಯಲ್ಲೂ ಗೆಜ್ಜೆ ಕಟ್ಟಿ ಕುಣಿವ ನೆನಪುಗಳ ಮೆರವಣಿಗೆಗೆ ಸಾಟಿಯಾವುದುಂಟು ಈ ಜಗದೊಳಗೆ..... ಬಾಳ ಪುಟಗಳಲ್ಲಿ ಎಂದೆಂದೂ ಅಳಿಯದ ಮಧುರ ಸ್ಮೃತಿಯಾಗಿ ಉಳಿದಿರುವ ಅದೇ ಹಾದಿಗಳಲ್ಲಿ ಹದಿನೈದು ವರ್ಷಗಳ ತರುವಾಯ ಹೆಜ್ಜೆಯಿಟ್ಟ ಕ್ಷಣಗಳಲ್ಲಿ ಮನದೊಳಗೆ ಸುಳಿದ ಸಾಸಿರ ಭಾವಗಳು ಪದಗಳ ವ್ಯಾಪ್ತಿಗೆ ನಿಲುಕದ್ದು. ಈ ಊರು, ಈ ಹಾದಿ, ಈ ಮೈದಾನ, ಈ ಸಭಾಂಗಣ, ಈ ಕಟ್ಟಡ...... ನನ್ನ ಮಟ್ಟಿಗೆ ಮೆಲುಕು ಹಾಕಲಾರದಷ್ಟು ನೆನಪುಗಳ ಭಂಡಾರವಿದು. ಕಾಲಾಂತರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದರೂ ಈ ದಾರಿಯಲ್ಲಿನ ಹದಿನೈದು ವರ್ಷಗಳ ಹಿಂದಿನ ಹೆಜ್ಜೆ ಗುರುತುಗಳು ನನ್ನ ಮನದ ಹಾದಿಯಲ್ಲಿ ಒಂದಿನಿತೂ ಮುಕ್ಕಾಗದೆ ಉಳಿದಿವೆ. ಇಂದು ಅದೇ ಹಾದಿಯಲ್ಲಿ ಸಾಗುವಾಗ ಸಮಯ ಹಿಂದಕ್ಕೆ ಚಲಿಸಿ ಅಂದಿನ ತುಂಟಾಟ, ತರಲೆ, ಉತ್ಸಾಹ, ಹುಮ್ಮಸ್ಸು, ಕುತೂಹಲ, ಗುರಿ, ಕನಸು, ಹಾಸ್ಯ, ಕೋಪ, ದುಃಖ..... ಎಲ್ಲವೂ ಮರುಕಳಿಸಿದಂತಹ ಭಾವ. ಯಾವ ಜವಾಬ್ದಾರಿ ಚಿಂತೆಗಳ ಗೊಡವೆಯಿಲ್ಲದ ಆ ದಿನಗಳು ಒಮ್ಮೆ ಮರಳಿ ಸಿಗಬಾರದಿತ್ತೇ ಎಂಬಂತಹ ತಪನ..... ಬದುಕಿಗೆ ಉತ್ಸಾಹ ತುಂಬುತ್ತಿದ್ದ ಯಾವುದೋ ಚೈತನ್ಯ ಲುಪ್ತವಾದಂತಹ ವಿಷಾದ..... ಏನೂ ಇಲ್ಲದೆಯೂ ಎಲ್ಲವೂ ಕೈ ಬೆರಳ ತುದಿಯಲ್ಲಿದೆ ಎನ್ನುವಷ್ಟು ನೆಮ್ಮದಿಯಿದ್ದ ಅಂದಿಗೂ, ಎಲ್ಲಾ ಇದ್ದೂ ಏನೇನೂ ಇಲ್ಲ ಎಂಬ ಯಾಂತ್ರಿಕ ಇಂದಿಗೂ ಅದೆಷ್ಟು ವ್ಯತ್ಯಾಸ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಬಸವವಾಣಿಯಂತೆ ಊರಿನ ರೂಪುರೇಷೆ ಬದಲಾಗಬಹುದೇನೋ ಆಗಲಿ ಅಲ್ಲಿ ಕಳೆದ ಕ್ಷಣಗಳಿಗೆ ವಿಸ್ಮೃತಿಯಿಲ್ಲ. ನನ್ನ ಇಂದಿನ ವ್ಯಕ್ತಿತ್ವಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಸ್ಥಳವಿದು. ನಾನಿಂದು ಏನೇ ಇದ್ದರೂ ಅದರ ಶ್ರೇಯ ಮುಖ್ಯವಾಗಿ ಸಲ್ಲುವುದು ಎರಡು ಸಂಸ್ಥೆಗಳಿಗೆ. ಒಂದು ನನ್ನ ಬಾಲ್ಯವನ್ನು ಹಸನಾಗಿಸಿ ನನ್ನೊಳಗೆ ಔಪಚಾರಿಕ ಶಿಕ್ಷಣಕ್ಕೂ ಮೀರಿದ ಸಂಸ್ಕಾರಗಳನ್ನು ಹಾಸುಹೊಕ್ಕಾಗಿಸಿದ ಪ್ರಬೋಧಿನಿ ವಿದ್ಯಾಕೇಂದ್ರವಾದರೆ ಮತ್ತೊಂದು ನನ್ನ ಬದುಕಿನ ಗುರಿಗಳನ್ನು ಸುಸ್ಪಷ್ಟವಾಗಿಸಿದ ಧವಲಾ ಮಹಾವಿದ್ಯಾಲಯ. ಈ ಎರಡೂ ಸಂಸ್ಥೆಗಳೂ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ವಹಿಸಿರುವ ಪಾತ್ರ ಮಹತ್ವದ್ದು. ಅಂತಹ ಸಂಸ್ಥೆಗೆ ಹಲವು ವರ್ಷಗಳ ನಂತರ ಮತ್ತೆ ಭೇಟಿ ನೀಡುವುದೆಂದರೆ ನೆನಪಿನ ಜೋಕಾಲಿಯಲ್ಲಿ ಜೀಕುತ್ತಾ ಕಳೆದ ಕ್ಷಣಗಳನ್ನು ಮರುಜೀವಿಸುವ ಸಂಚಾರ. ನಿನ್ನೆಯ ಧವಲಾ ಕಾಲೇಜಿನ ಭೇಟಿ ಅಂತಹುದೇ ನೆನಪಿನ ಓಣಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ಸುಣ್ಣ ಬಣ್ಣ ಬದಲಾಗಿರುವುದನ್ನು ಹೊರತು ಪಡಿಸಿ ಹೆಚ್ಚು ಕಡಿಮೆ ಅದೇ ಕಟ್ಟಡ, ಅದೇ ಮೈದಾನ, ಅದೇ ಸಭಾಂಗಣ, ಅದೇ ಗ್ರಂಥಾಲಯ,ಅದೇ ತರಗತಿಗಳು, ಅದೇ ಸ್ಟಾಫ್ ರೂಂ...... ಆದರೂ ಅಂದಿದ್ದ ವಿದ್ಯಾರ್ಥಿಗಳು ಇಂದಿಲ್ಲ. ಅಂದಿನ ತಲೆಹರಟೆ ವಿದ್ಯಾರ್ಥಿಗಳು ಇಂದು ಸಾವಿರ ಜವಾಬ್ದಾರಿ ಹೊತ್ತು ಎಲ್ಲೆಲ್ಲೋ ಬದುಕು ಕಟ್ಟಿಕೊಂಡಿದ್ದಾರೆ. ಅಂದಿದ್ದ ಶಿಕ್ಷಕರಲ್ಲಿ ಹೆಚ್ಚು ಕಡಿಮೆ ಎಲ್ಲರೂ ವೃತ್ತಿವೇದಿಕೆಯಿಂದ ನಿವೃತ್ತರಾಗಿದ್ದಾರೆ. ಕೆಲವರು ಬದುಕಿನ ಪರದೆಯಿಂದಲೇ ಜಾರಿ ಬಾನಂಗಳದಲ್ಲಿ ನಕ್ಷತ್ರವಾಗಿದ್ದಾರೆ. ಸೆಮಿನಾರ್ ಎನ್ನುವ ಪದವನ್ನು ಮೊದಲ ಬಾರಿಗೆ ಪರಿಚಯಿಸಿದ ಕನ್ನಡ ಮೇಷ್ಟ್ರು ಅಜಿತ್ ಪ್ರಸಾದ್, ಪ್ರಾಚ್ಯವಸ್ತು ಶಾಸ್ತ್ರ, ಶಾಸನ ಶಾಸ್ತ್ರ, ನಾಣ್ಯಶಾಸ್ತ್ರಗಳ ಅದ್ಬುತ ಲೋಕವನ್ನು ಅನಾವರಣಗೊಳಿಸಿ ಇತಿಹಾಸದ ಇನ್ನೊಂದು ಮಜಲನ್ನು ಪರಿಚಯಿಸಿದ ಪುಂಡಿಕೈ ಗಣಪಯ್ಯ ಭಟ್ ಸರ್, ಅರ್ಥಶಾಸ್ತ್ರದ ಮೂಲಪರಿಕಲ್ಪನೆಗಳನ್ನು ಮೆದುಳಿಗೆ ಮನನಗೊಳಿಸಿದ ವಾಸುದೇವ ಭಟ್, ಸುದರ್ಶನ್ ಕುಮಾರ್ ಹಾಗೂ ಗೋಪಾಲ್ ಸರ್ ಈಗ ಇಲ್ಲಿಲ್ಲ. ಸಾಮಾಜಿಕ ಸಂಶೋಧನೆ ಅನ್ನುವ ವಿಷಯದ ಮುಖೇನ ಆಗಲೇ ಸಂಶೋಧನೆಯ ಪ್ರಾಥಮಿಕ ಪಟ್ಟುಗಳನ್ನು ಕಲಿಸಿ ಕಿರು ಸಂಶೋಧನೆಯನ್ನೇ ನಮ್ಮಿಂದ ಮಾಡಿಸಿದ್ದ ನೆಚ್ಚಿನ ಸ್ನೇಹಲತಾ ಮೇಡಂ ಈಗ ಈ ಜಗತ್ತಿನಲ್ಲೇ ಇಲ್ಲ. ಆದರೂ ಕಾಲೇಜಿನ ಪ್ರತೀ ಗೋಡೆ, ಕಾರಿಡಾರ್, ತರಗತಿಗಳು, ಬೆಂಚುಗಳು ಇವರೆಲ್ಲರನ್ನೂ ಅವರ ಹಾವಭಾವ ಶೈಲಿಯ ಸಮೇತ ನೆನಪಿಸಿದ್ದು ಸುಳ್ಳಲ್ಲ.
ಇವರೆಲ್ಲರೊಂದಿಗಿನ ಬಾಂಧವ್ಯದ ಕೊನೆಯ ಕೊಂಡಿಯಂತೆ ಹಳೆಯ ನೆನಪಿನ ಬುತ್ತಿಯಲ್ಲಿ ಉಳಿದ ಕೊನೆಯ ತುತ್ತಿನಂತೆ ನಿನ್ನೆ ಸಿಕ್ಕವರು ಪದ್ಮಜಾ ಮೇಡಂ. ಪಿಯುಸಿಯ ತನಕ ಅಚ್ಚ ಕನ್ನಡ ಮಾಧ್ಯಮದ ಅಮೃತದಲ್ಲಿ ತೇಲಿ ಪದವಿಯಲ್ಲಿ ಒಮ್ಮೆಗೇ ಆಂಗ್ಲ ಮಾಧ್ಯಮದ ಕುದಿತೈಲದ ಬಾಣೆಲೆಗೆ ಬಿದ್ದು ಒದ್ದಾಡುತ್ತಿದ್ದ ನನ್ನಂತಹ ಸಾವಿರ ವಿದ್ಯಾರ್ಥಿಗಳಿಗೆ ಶೀತಲ ಜಲಬಿಂದುವಿನಂತಹ ಮದ್ದಾದವರು ಈಕೆ. ಕಡಿಮೆ ಮಾತಿನ, ಏರುಪೇರಿಲ್ಲದ ಮೃದು ಸ್ವರದ ಹಸನ್ಮುಖಿಯಾಗಿ ನನ್ನ ಮನೋವಲಯದಲ್ಲಿ ಅಚ್ಚಾಗಿರುವ ಪದ್ಮಜಾ ಮೇಡಂರದ್ದು ಅಂದಿಗೂ ಇಂದಿಗೂ ಅದೇ ಸ್ಥಿತಪ್ರಜ್ಞತೆ. ಅವರನ್ನು ಕಂಡ ಖುಷಿಗೆ ನನ್ನ ಸ್ಥಿತಪ್ರಜ್ಞತೆ ಚಂದ್ರಮಂಡಲದಾಚೆಗೆ ಓಡಿತ್ತೆಂಬುದು ನೂರಕ್ಕೆ ನೂರು ಪ್ರತಿಶತ ಸತ್ಯ. ನಾನಂತೂ ಅವರೆದುರಿದ್ದಷ್ಟು ಹೊತ್ತೂ ಅದೇ ಪ್ರಥಮ ಬಿಎ ಕ್ಲಾಸಿನ ವಿದ್ಯಾರ್ಥಿನಿಯಂತಾಗಿದ್ದೆ. ನಿನ್ನೆಯ ನನ್ನಿಡೀ ದಿನದ ಸಂತಸಕ್ಕೆ ಕಾರಣವಾಗಿದ್ದು ಈ ಭೇಟಿ. ಎಲ್ಲಾ ತಲೆನೋವುಗಳೂ ನೇಪಥ್ಯಕ್ಕೆ ಸರಿದು ಅಂದಿನ ದಿನಗಳ ನೆಮ್ಮದಿಯನ್ನು ಕೆಲವು ಗಂಟೆಗಳ ಮಟ್ಟಿಗಾದರೂ ಮರಳಿ ತಂದುಕೊಟ್ಟ ಈ ಭೇಟಿ ನೆನಪಿನ ಹೊತ್ತಿಗೆಯೊಳಕ್ಕೊಂದು ಮಧುರ ಸೇರ್ಪಡೆ.....

#Nostalgia