ಪ್ರೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜೂನ್ 21, 2020

ನೀ ಇಲ್ಲವಾದರೆ ನಾ....


'ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ       ನಿನ್ನ ಜೊತೆ ಇಲ್ಲದೆ ಮಾತಿಲ್ಲದೆ ಮನ ವಿಭ್ರಾಂತ

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ
ಚಿನ್ನ ನೀನಿಲ್ಲದೆ ದಿಮ್ಮೆನ್ನುತಿದೆ ರಮ್ಯೋದ್ಯಾನ......'

ಪ್ರತೀ ಸಂಜೆಯೂ ಇದೇ ಸಂಧ್ಯಾರಾಗ ಹೃದಯದ್ದು.... ಇಳಿಸಂಜೆಯ ಏಕಾಂತದಲ್ಲಿ, ನಟ್ಟಿರುಳ ನೀರವತೆಯಲ್ಲಿ ಬಿಟ್ಟೂ ಬಿಡದೆ ದಾಳಿಯಿಡುವ ನೆನಪುಗಳ ಮೆರವಣಿಗೆ ಹಿತವೇ ನನಗೆ. ಕಾಡುವ ನಿನ್ನ ಅನುಪಸ್ಥಿತಿಯಲ್ಲಿ ನನ್ನ ಜೀವಕ್ಕೆ ಚೈತನ್ಯದ ಒರತೆ ಆ ನೆನಪುಗಳೇ ತಾನೇ?

ಈ ಘಳಿಗೆ ಏನು ಮಾಡುತ್ತಿರುವೆ ಹುಡುಗಾ ನೀನು.....?
ಕೊರೆವ ಚಳಿಯಲ್ಲೂ ಕೊರಡಿನಂತೆ ನಿಂತು ಸರಹದ್ದನ್ನು ಕಾಯುತ್ತಿರುವೆಯಾ? ಇಲ್ಲಾ ಶತ್ರುಗಳ ದಾಳಿಗೆ ಎದೆಯೊಡ್ಡಿ ಕಾದಾಡುತ್ತಿರುವೆಯಾ? ಇಲ್ಲವೇ ಕೊಂಚ ವಿರಮಿಸಿಕೊಳ್ಳುತ್ತಾ ನಮ್ಮನ್ನು ನೆನೆಯುತ್ತಿರುವೆಯಾ? ವಾರಗಳೇ ಉರುಳಿವೆ ನಿನ್ನ ಧ್ವನಿ ಕೇಳದೇ.... ತಿಂಗಳುಗಳೇ ಕಳೆದಿವೆ ನಿನ್ನ ನಗುಮೊಗ ಕಾಣದೇ. ಕ್ಷೇಮವಾಗಿರುವೆಯಲ್ಲವೇ ನೀನು? ನೀನು ಸುರಕ್ಷಿತವಾಗಿರುವೆ ಎಂಬ ನಂಬಿಕೆಯ ಭರವಸೆಯಲ್ಲಿಯೇ ನಮ್ಮ ಬದುಕು......

ಅಬ್ಬಾ...... ಅದೆಷ್ಟು ಬದಲಾಗಿರುವೆ ನಾನು. ಇದು ನಾನೇ ಹೌದೇ ಅನ್ನುವ ಅಚ್ಚರಿ ನನಗೇ ಉಂಟಾಗುತ್ತದೆ ಒಮ್ಮೊಮ್ಮೆ. ಒಂದು ಕಾಲದಲ್ಲಿ ಹೇಗಿತ್ತು ನನ್ನ ಜೀವನಶೈಲಿ.  ಸ್ಥಿತಿವಂತ ಅಪ್ಪ ಅಮ್ಮನ ಏಕೈಕ ಸಂತಾನ ನಾನು. ಅತೀವ ಮುದ್ದಿನಿಂದ ಬೆಳೆದ ಕೊಂಚ ಹಠಮಾರಿ ಹೆಣ್ಣು. ಮನೆಯ ಕೆಲಸ, ಬೊಗಸೆಗಳೆಲ್ಲ ಎಂದಿಗೂ ನನ್ನ ಆದ್ಯತೆಯಾಗಿರಲಿಲ್ಲ. ಮೆಲುಮಾತು, ನಯ ನಾಜೂಕುಗಳಿಗೂ ನನಗೂ ದೂರದೂರದವರೆಗೂ ಯಾವುದೇ ಸಂಬಂಧವಿರಲಿಲ್ಲ. ಅಪ್ಪ ಅಮ್ಮನನ್ನು ಬಿಟ್ಟರೆ ಗೆಳೆಯರು, ನಗರ ಸಂಚಾರ, ಮೋಜು ಮಸ್ತಿ ಇಷ್ಟೇ ಜೀವನ ಎಂದುಕೊಂಡಾಕೆ. ಮೂಗಿನ ತುದಿಯಲ್ಲೇ ಕೋಪ, ಜವಾಬ್ದಾರಿಗಳಿಂದ ದೂರ ಓಡುವ ಪರಮ ಬೇಜವಾಬ್ದಾರಿಯ ಹೆಣ್ಣು. ಅಪ್ಪ ಅಮ್ಮನ ಚೆಲುವನ್ನು ಧಾರಾಳವಾಗಿ ಪಡೆದಿದ್ದ ನನಗೆ ನನ್ನ ಸೌಂದರ್ಯದ ಬಗ್ಗೆ ಎಲ್ಲೋ ಸ್ವಲ್ಪ ಅಹಂಕಾರವೂ ಇತ್ತು.

ಹಾಗಂತ ನಾನೇನು ದಾರಿತಪ್ಪಿದ ಮಗಳಲ್ಲ. ಅಪ್ಪ ಅಮ್ಮ ನೀಡಿದ ಸ್ವಾತಂತ್ರ್ಯವನ್ನು ಎಂದೂ ದುರುಪಯೋಗ ಪಡಿಸಿಕೊಂಡವಳಲ್ಲ. ಒಂದು ಮಿತಿಯನ್ನು ನನಗೆ ನಾನೇ ವಿಧಿಸಿಕೊಂಡು ಆ ಮಿತಿಯೊಳಗೆ ಸ್ವಚ್ಛಂದವಾಗಿ ಬದುಕುತ್ತಿದ್ದವಳು ನಾನು. ಅರಿಯದ ನಾಳೆಗಳ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲದೇ ಈ ಕ್ಷಣದ ಬದುಕನ್ನು ಈಗಲೇ ಉತ್ಕಟವಾಗಿ ಜೀವಿಸಿಬಿಡಬೇಕು ಎಂಬ ಬಯಕೆಯ ಹುಡುಗಿ. ಪರಸ್ಪರ ಸಾಮೀಪ್ಯವಿಲ್ಲದ, ಕಾಯುವಿಕೆಯ ಭಾವದಲ್ಲೇ ಒಲವ ಸುಧೆ ಹರಿಸುವಂತಹ ಪ್ರೀತಿ ಇರುವುದೇ ಸುಳ್ಳು ಎನ್ನುತ್ತಿದ್ದೆ ನಾನು........ ನೀನು ನನ್ನ ಬದುಕನ್ನು ಪ್ರವೇಶಿಸುವವರೆಗೆ........

ನೀ ನನ್ನ ನೋಡಲು ಬಂದ ದಿನ ನನ್ನ ನೆನಪಿನಾಳದಲ್ಲಿ ಇಂದಿಗೂ ಹಚ್ಚಹಸಿರಾಗಿದೆ. ನನಗಂತೂ ಮೊದಲ ನೋಟಕ್ಕೆ ಇಷ್ಟವಾಗಿದ್ದೆ ನೀನು. ಯಾರಾದರೂ ಇಷ್ಟ ಪಡುವಂತಹ ವ್ಯಕ್ತಿತ್ವ ನಿನ್ನದು. ಆದರೆ ಆ ದಿನಗಳಲ್ಲಿ ವ್ಯಕ್ತಿತ್ವ, ಗುಣ, ನಡವಳಿಕೆಯಂತಹ ಗಂಭೀರ ವಿಚಾರಗಳು ನನ್ನ ತಲೆಗೇ ಹೋಗುತ್ತಲೇ ಇರಲಿಲ್ಲ ಬಿಡು. ನನಗೆ ನಿನ್ನ ಹ್ಯಾಂಡ್ಸಮ್ ಪರ್ಸನಾಲಿಟಿ ಹಿಡಿಸಿತ್ತು. ಜೊತೆಗೆ ನೀನು ಆರ್ಮಿ ಮ್ಯಾನ್ ಎಂಬುದೂ ಹೆಮ್ಮೆಯ ವಿಷಯವಾಗಿತ್ತು ನನಗೆ. ಅದಷ್ಟೇ ಸಾಕಿತ್ತು ನನಗೆ ನಿನ್ನ ಒಪ್ಪಲು. ಆದರೆ ಯೋಧನೊಬ್ಬನ ಮಡದಿಯಾಗುವವಳ ಮಾನಸಿಕವಾಗಿ ಅದೆಷ್ಟು ಸದೃಢಳಾಗಿರಬೇಕು, ಅವಳ ಭಾವಪ್ರಪಂಚ ಹೇಗಿರುತ್ತದೆ ಎಂಬ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ ನಾನು. ನೀನೂ ನನ್ನನ್ನು ಒಪ್ಪಿದಾಗ ನನ್ನ ರೂಪ ಲಾವಣ್ಯದ ಬಗ್ಗೆ ಇನ್ನಷ್ಟು ಹಮ್ಮುಂಟಾಗಿತ್ತು ನನಗೆ.

ಅಪ್ಪ ಹಾಗೆ ಯಾರನ್ನೂ ನಂಬುವವರಲ್ಲ. ಅದರಲ್ಲೂ ಅವರ ಮುದ್ದಿನ ಅರಗಿಣಿಯಾದ ನನ್ನ ವಿಷಯದಲ್ಲಂತೂ ಅತೀವ ಕಾಳಜಿ ಅವರದು. ನನ್ನ ಮದುವೆಗಾಗಿ ಬಂದ ಪ್ರಸ್ತಾಪಗಳಲ್ಲಿ ಅವರು ಅಳಿಯನನ್ನು ಹುಡುಕುತ್ತಿರಲಿಲ್ಲ. ಬದಲಾಗಿ ಮಗನನ್ನು ಅರಸುತ್ತಿದ್ದರು. ಹಾಗಾಗಿಯೇ ಎಷ್ಟೋ ಪ್ರಸ್ತಾಪಗಳು ತಿರಸ್ಕೃತಗೊಂಡಿದ್ದವು. ಅಂತಹ ಅಪ್ಪ ಮದುವೆ ದಿನ ನನ್ನ ಕೈಯನ್ನು ನಿನ್ನ ಹಸ್ತದೊಳಗಿರಿಸಿ,
"ಒಬ್ಬಳೇ ಮಗಳು.... ನಮ್ಮ ಕಣ್ಬೆಳಕು. ಬಹಳ ಮುದ್ದಿನಿಂದ ಬೆಳೆದವಳು. ಹುಡುಗು ಬುದ್ದಿ. ಬದುಕಿನ ಬಗ್ಗೆ ಗಂಭೀರತೆ ಕೊಂಚ ಕಡಿಮೆ. ಅವಳ ಬದುಕನ್ನು ನಮ್ಮಷ್ಟೇ ಕಾಳಜಿ ಮಾಡುವ ಕೈಗಳಲ್ಲಿ ಇರಿಸಿರುವೆ ಎಂಬ ನಿಶ್ಚಿಂತೆ ನನಗಿದೆ" ಎಂದು ಹೇಳಿದ್ದು ನನಗಿನ್ನೂ ನೆನಪಿದೆ. ಆ ಕ್ಷಣ ನಿನ್ನ ಬಗೆಗೊಂದು ಅಚ್ಚರಿ ಭರಿತ ಹೆಮ್ಮೆ ಮೂಡಿತ್ತು. ನೀನಾದರೂ ಅಷ್ಟೇ. ಅಪ್ಪನ ಮಾತುಗಳನ್ನು ಎಂದೂ ಸುಳ್ಳಾಗಿಸಲಿಲ್ಲ.

ಮದುವೆಯವರೆಗೆ ನನ್ನದೇ ಲೋಕದಲ್ಲಿ ವಿಹರಿಸುತ್ತಿದ್ದವಳಿಗೆ ಮದುವೆಯ ನಂತರದ ಬದಲಾವಣೆಗೆ ಒಗ್ಗಿಕೊಳ್ಳಲು ಉಸಿರುಗಟ್ಟಿದಂತಾಗಿದ್ದು ಸುಳ್ಳಲ್ಲ ಹುಡುಗಾ. ನಿನ್ನ ಕುಟುಂಬದವರೆಲ್ಲರೂ ಸಂಸ್ಕಾರವಂತರೇ. ಎಂದೂ ನನಗೆ ನೋವು ಕೊಟ್ಟವರಲ್ಲ. ಆದರೆ ಅಪ್ಪ ಅಮ್ಮನ ಮುಚ್ಚಟೆಯಲ್ಲಿ ಬೆಳೆದ ನನ್ನನ್ನು ಒಮ್ಮೆಲೆ ಬದಲಾದ ಬದುಕು, ಹೆಗಲೇರಿದ ಹೊಸ ಜವಾಬ್ದಾರಿಗಳು ದಿಗಿಲಿಗೆ ನೂಕಿತ್ತು. ನಿನ್ನ ಮಡದಿಯಾಗುವ ಬಗ್ಗೆ ಮಾತ್ರ ಯೋಚಿಸಿದ್ದ ನನಗೆ ನಿನ್ನ ಹೆತ್ತವರಿಗೆ ಸೊಸೆಯಾಗಿ, ನಿನ್ನ ತಮ್ಮನಿಗೆ ಅತ್ತಿಗೆಯಾಗಿ ಜವಾಬ್ದಾರಿ ನಿಭಾಯಿಸುವುದು ಕ್ಲಿಷ್ಟಕರವಾಗಿತ್ತು. ಬಹುಶಃ ಮದುವೆಯ ಆರಂಭಿಕ ಹಂತದಲ್ಲಿ ಪ್ರತೀ ಹೆಣ್ಣೂ ಇಂತಹದೊಂದು ಸವಾಲಿಗೆ ಮುಖಾಮುಖಿಯಾಗಿಯೇ ಇರುತ್ತಾಳೆ. ಮದುವೆ ಎಂಬ ಮೂರುಗಂಟಿನ ನಂಟು ಅವಳ ಬದುಕಿನಲ್ಲಿ ತರುವ ಬದಲಾವಣೆಗಳನ್ನು ಅರಗಿಸಿಕೊಂಡು ನಿಭಾಯಿಸಲು ಅವಳಿಗೆ ಅಗತ್ಯವಾಗಿ ಬೇಕಾಗುವುದು ಒಂದಿಷ್ಟು ಸಮಯ ಹಾಗೂ ಕೈ ಹಿಡಿದವನ ಭರವಸೆಯ ಸಹಕಾರ....... ಅದೇ ನನ್ನ ಪಾಲಿಗೆ ಇಲ್ಲವಾಗಿದ್ದು. ಮದುವೆಯಾಗಿ ಸ್ವಲ್ಪ ಸಮಯಕ್ಕೇ ರಜೆ ಮುಗಿದು ನೀನು ಕರ್ತವ್ಯಕ್ಕೆ ವಾಪಾಸಾಗಿದ್ದೆ. ಆ ನಿನ್ನ ಅನುಪಸ್ಥಿತಿ ನನ್ನನ್ನು ಅತಿಯಾಗಿ ಕಾಡಿತ್ತು. ಬಹುಶಃ ನೀನು ಸದಾಕಾಲ ನನ್ನ ಜೊತೆಗಿದ್ದರೆ ನಿನ್ನ ಬೆಂಬಲದಿಂದ ಎಲ್ಲವನ್ನೂ ಕಷ್ಟಪಡದೇ, ಗೊಂದಲಗಳಿಲ್ಲದೇ ನಿಭಾಯಿಸುತ್ತಿದ್ದೆನೇನೋ.... ಆದರೆ ನೀನು ದೇಶಕ್ಕಾಗಿ ನಿನ್ನನ್ನು ಮುಡಿಪಿಟ್ಟವನು. ಸದಾ ನನ್ನೊಂದಿಗಿರಲು ನಿನಗಾದರೂ ಎಲ್ಲಿಂದ ಸಾಧ್ಯವಿತ್ತು?
ವೈವಾಹಿಕ ಬದುಕಿನ ಸವಿಗನಸುಗಳನ್ನು ಹೆಣೆಯುವ ಆ ಸಮಯದಲ್ಲಿ ನೀನಿರದೇ ಹೋದುದು ನನ್ನನ್ನು ಕಲ್ಪನಾ ಪ್ರಪಂಚದಿಂದ ವಾಸ್ತವಕ್ಕೆ ದೂಕಿತ್ತು. ಯಾವ ಸಂಬಂಧವನ್ನು ನಿಭಾಯಿಸಲಿ, ಹೇಗೆ ನಿಭಾಯಿಸಲಿ ಎಂಬ ಗೊಂದಲ...... ಯಾಕೆ ಬೇಕಿತ್ತು ಈ ಮದುವೆಯೆಂಬ ಜಂಜಾಟ ಎನ್ನುವ ತನಕವೂ ಯೋಚನೆ ಬಂದಿದ್ದಿದೆ.

ಆದರೆ ಒತ್ತಡಗಳ ಸಂಘರ್ಷದಲ್ಲಿ ಹೈರಾಣಾಗಿದ್ದ ನನ್ನ ಕೈ ಹಿಡಿದು ನಡೆಸಿದ್ದು ಮಾತ್ರ.......  ನೀನೇ......

ಮೇರುವಿನೆತ್ತರದ ವ್ಯಕ್ತಿತ್ವದವನು ನೀನು. ನಿನ್ನ ಯೋಚನೆ, ಚಿಂತನೆಗಳೆಲ್ಲ ಮೇಲ್ಮಟ್ಟದ್ದು. ನಿನ್ನ ಪ್ರತೀ ಮಾತಿಗೂ ಒಂದು ತೂಕವಿರುತ್ತದೆ. ಇಂತಹ ನೀನು ಅದ್ಯಾಕೆ ನನ್ನನ್ನು ಇಷ್ಟಪಟ್ಟು ಒಪ್ಪಿದೆಯೋ ಇಂದಿಗೂ ಅರ್ಥವಾಗದ ಚಿದಂಬರ ರಹಸ್ಯ ನನ್ನ ಪಾಲಿಗೆ. ಎಷ್ಟು ಬಾರಿ ನಿನ್ನಲ್ಲಿ ಈ ಪ್ರಶ್ನೆ ಕೇಳಿದ್ದೇನೆಯೋ ಲೆಕ್ಕವಿಲ್ಲ. 'ನೋಡಿದ ಕೂಡಲೇ ಮನಸಿಗೆ ಬಂದವಳು, ನನ್ನ ಹೃದಯದ ಮಿಡಿತವಾದವಳು, ಆತ್ಮಸಂಗಾತಿ ಎನಿಸಿದವಳು ನೀನೊಬ್ಬಳೇ ಕಣೇ ಹುಡುಗಿ' ಎನ್ನುವೆ ಪ್ರತೀ ಬಾರಿ....

ಅದೇನೇ ಆದರೂ ನನ್ನ ಪಾಲಿಗೆ ನೀನೆಂದರೆ ನಾನು.... ನಾನು ನನಗೆಷ್ಟು ಆಪ್ತಳೋ ಅಷ್ಟೇ ಆಪ್ತ ನನಗೆ ನೀನು.  ದೂರವಿದ್ದೂ ಮನಕ್ಕೆ ಅತೀ ಸಮೀಪವಾದವನು, ಆಗೀಗ ಮಾಡುವ ಕರೆಗಳ ಮೂಲಕವೇ ನಮ್ಮ ನಡುವಿನ ಭೌತಿಕ ಅಂತರಕ್ಕೆ ಭಾವಗಳ ಸೇತುವೆ ಕಟ್ಟಿದವನು, ಒಲವ ಮಳೆ ಸುರಿಸಿ ಒಲುಮೆಯಲಿ ತೋಯಿಸಿದವನು.......

ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲಾರೆ ಎಂಬ ನನ್ನ ಭಯವನ್ನು ಹೋಗಲಾಡಿಸಿ ನನ್ನಲ್ಲಿ ಭರವಸೆ ತುಂಬಿದವನು ನೀನು. ಅದೆಷ್ಟು ಸಹನೆ ನಿನಗೆ? ಭೂಮಿ ತೂಕದ ಸಹನೆ ಎಂಬ ಪದಕ್ಕೆ ಅನ್ವರ್ಥ ನೀನು. ನಾನೆಷ್ಟೇ ಕಿರುಚಿ, ಸಿಟ್ಟು ತೋರಿದರೂ ಅದೇ ನಿಷ್ಕಲ್ಮಶ ನಗುವಿನೊಂದಿಗೆ ಅಮ್ಮನಂತೆ ನನ್ನ ಮೇಲೆ ಮಮತೆಯ ಹೊಳೆ ಹರಿಸಿದವನು, ಅಪ್ಪನಂತೆ ನನ್ನ ಕಾಳಜಿ ಮಾಡಿದವನು, ಗೆಳೆಯನಂತೆ ನನಗೆ ಬೆನ್ನೆಲುಬಾಗಿ ನಿಂತವನು, ಗುರುವಿನಂತೆ ತಿದ್ದಿದವನು...... ಇನಿಯನಾಗಿ ಒಲವ ಮಳೆ ಸುರಿಸುವುದರಲ್ಲಿಯಂತೂ ನಿನಗೆ ಸಾಟಿ ಯಾರಿಲ್ಲ ಬಿಡು..... ಆ ನಿನ್ನ ಕಾಡಿಸುವಿಕೆಯ ಚೇಷ್ಟೆಗಳು ನೆನೆದಾಗಲೆಲ್ಲಾ ತುಟಿಯಂಚಿನಲ್ಲಿ ಹೂನಗೆಯನ್ನರಳಿಸುತ್ತವೆ......

ನಿನ್ನ ಈ ಪರಿಯಿಂದಲೇ ಜವಾಬ್ದಾರಿಗಳನ್ನು, ಸಂಬಂಧಗಳನ್ನೂ ನಿಭಾಯಿಸಲು ಕಲಿತಿದ್ದು ನಾನು. ನನಗೇ ಅರಿವಿಲ್ಲದ ನನ್ನ ಸಾಮರ್ಥ್ಯಗಳನ್ನು ಪರಿಚಯಿಸಿ ಕೊಟ್ಟವನು ನೀನು. ನನ್ನಿಂದ ಎಲ್ಲವೂ ಸಾಧ್ಯ ಎಂಬ ಭರವಸೆಯನ್ನು ನೀಡಿದ್ದು ನೀನು. ಒಬ್ಬ ಬೇಜವಾಬ್ದಾರಿ ಕೊಂಚ ಗರ್ವಿಷ್ಟ ಹುಡುಗಿ ಅದ್ಯಾವಾಗ ಬದಲಾದಳೋ, ಪ್ರಿಯನ ಒಲುಮೆಗೆ ಒಡತಿಯಾಗುವುದರ ಜೊತೆಗೆ ಅದ್ಯಾವ ಕ್ಷಣದಲ್ಲಿ ಅತ್ತೆ ಮಾವನ ಪ್ರೀತಿಯ ಸೊಸೆಯಾಗಿ, ಮೈದುನನ ಅಕ್ಕರೆಯ ಅತ್ತಿಗೆಯಾಗಿ, ಪರಿಪೂರ್ಣ ಗೃಹಿಣಿಯಾಗಿ ಬದಲಾದಳೋ ಖುದ್ದು ಅವಳರಿವಿಗೇ ಬರಲಿಲ್ಲ. ನೀನು ನನ್ನೊಂದಿಗೆ ಕಳೆದ ಕ್ಷಣಗಳು ಕಡಿಮೆಯೇ ಆದರೂ ಆ ಅಲ್ಪ ಸಮಯದಲ್ಲೇ ನೀ ನನ್ನನ್ನು ಆವರಿಸಿದ ಪರಿಗೆ ಏನೆನ್ನಲ್ಲಿ? ಅದ್ಯಾವ ಕ್ಷಣದಲ್ಲಿ ನೀನೇ ನಾನಾಗಿ, ನಾನೇ ನೀನಾಗಿ, ನೀನು ನನ್ನ ಅಸ್ತಿತ್ವವಾಗಿಬಿಟ್ಟೆಯೋ ಅರಿವೇ ಆಗಲಿಲ್ಲ ನನಗೆ.

ಈಗ ನಿನ್ನ ಪತ್ನಿಯಾಗಿ ನನ್ನ ಪಾಲಿನ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸಲೀಸಾಗಿ ನಿರ್ವಹಿಸುತ್ತಿರುವೆ ನಾನು. ಎಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ಸನ್ನಿವೇಶಗಳನ್ನು ಎದುರಿಸುವುದನ್ನು ನಿನ್ನಿಂದಲೇ ಕಲಿತಿರುವೆ. ಮಾವ ರಾತ್ರೋರಾತ್ರಿ ಪಾರ್ಶ್ವವಾಯುವಿನ ಹೊಡೆತಕ್ಕೆ ಸಿಲುಕಿದಾಗ ನೀನು ಸೀಕ್ರೆಟ್ ಮಿಷನ್ ನ ಭಾಗವಾಗಿ ಇಂಡೋ ಚೈನಾ ಗಡಿಯಲ್ಲೆಲ್ಲೋ ಕಾದಾಡುತ್ತಿದ್ದೆ. ಎಲ್ಲರೂ ಕಂಗಾಲಾದಾಗಲೂ ನಾನು ಧೈರ್ಯಗೆಡದೆ ಎಲ್ಲವನ್ನೂ ನಿಭಾಯಿಸಿದ್ದೆ.

ಚಿಂಟು ಕಾಲೇಜಿನಲ್ಲಿ ಅಪಾತ್ರರ ಸಂಗ ಬೆಳೆಸಿ ಸಿಗರೇಟು, ಶರಾಬು, ಹುಡುಗಿಯರು ಎಂದು ಸುತ್ತುತ್ತಿರುವ ವಿಚಾರ ಕಿವಿಗೆ ಬಿದ್ದಾಗ ಅದೆಷ್ಟು ಯಾತನೆಯಾಗಿತ್ತು ನನಗೆ... ಈ ವಿಚಾರ ತಿಳಿದರೆ ನಿನಗೆ, ಅತ್ತೆ ಮಾವನಿಗೆ ಹೇಗಾಗಬಹುದು ಎಂಬ ಚಿಂತೆಯೇ ನನ್ನನ್ನು ಹೈರಾಣಾಗಿಸಿತ್ತು. ಅತ್ತೆ ಮಾವನ ಮುಂದೆಯೂ ಈ ವಿಚಾರ ಮಾತನಾಡುವಂತಿರಲಿಲ್ಲ.
ಮರುದಿನ ಮಧ್ಯಾಹ್ನ ಚಿಂಟುವಿನ ಕಾಲೇಜಿನತ್ತ ನಡೆದಿದ್ದೆ. ಕಾಲೇಜು ರಸ್ತೆಯಲ್ಲಿ ಸಿಗರೇಟು ಹೊಗೆಯುಗುಳುತ್ತಾ, ಹುಡುಗಿಯರನ್ನು ಛೇಡಿಸುತ್ತಿದ್ದವನ ಕೆನ್ನೆಗೆರಡು ಬಿಗಿದು ಹತ್ತಿರದ ಪಾರ್ಕಿಗೆ ಎಳೆತಂದಿದ್ದೆ. ನನ್ನೆತ್ತರಕ್ಕೆ ಬೆಳೆದು ನಿಂತವನಿಗೆ ಕೋಪದ ಭರದಲ್ಲಿ ಹೊಡೆದಿದ್ದಕ್ಕೆ ನನಗೇ ನೋವಾಗಿತ್ತು. ತಲೆತಗ್ಗಿಸಿ ನಿಂತವನನ್ನು ಕಂಡು ಅವನಿಗೆ ಹೇಗೆ, ಏನು ವಿವರಿಸಬೇಕೋ ಅರಿವಾಗದೇ ಹೋಗಿತ್ತು. ಈಗ ನೀನಿರಬೇಕಿತ್ತು ಚಿಂಟೂವಿಗೆ ತಿಳಿಹೇಳಲು ಎನಿಸಿಬಿಟ್ಟಿತು. ಎಲ್ಲಾ ವಿಚಾರ ನಿನ್ನಲ್ಲಿ ಹೇಳಿಕೊಂಡು ನಿನ್ನ ಮಡಿಲ ಸಾಂತ್ವನದಲ್ಲಿ ನಿರಾಳವಾಗಲು ಮನ ರಚ್ಚೆ ಹಿಡಿದಿತ್ತು. ಆದರದು ಸಾಧ್ಯವೇ...? ಯಾಕೋ ತಡೆಯಲಾರದೇ ಕಂಬನಿ ಜಾರತೊಡಗಿತ್ತು. ಎಂದೂ ಮನೆಯವರೆದುರು ಕಣ್ಣೀರು ತೋರಗೊಟ್ಟವಳಲ್ಲ ನಾನು. ಸದಾ ನಿನ್ನ ಕುಶಲದ ಚಿಂತೆಯಲ್ಲಿರುವವರನ್ನು ನನ್ನ ಅಳು ಇನ್ನಷ್ಟು ದುರ್ಬಲವಾಗಿಸುತ್ತದೆ ಎಂಬುದನ್ನು ಬಲ್ಲೆ. ಆದರೆ ಅಂದೆಕೋ ಹರಿವ ಕಣ್ಣೀರನ್ನು ತಡೆಯಲಾರದಷ್ಟು ದುರ್ಬಲಳಾಗಿಬಿಟ್ಟಿದ್ದೆ. ನನ್ನ ಅಳುವನ್ನು ಕಂಡು ಬೆದರಿ ಚಿಂಟು ತಾನೂ ಅಳತೊಡಗಿದಾಗಲೇ ವಾಸ್ತವದ ಅರಿವಾಗಿದ್ದು ನನಗೆ. ನನ್ನ ನಾನು ನಿಯಂತ್ರಿಸಿಕೊಂಡು ಅವನನ್ನು ಬಳಿಯಲ್ಲಿ ಕೂಡಿಸಿಕೊಂಡು ಅಮ್ಮನಂತೆ ಸಮಾಧಾನಿಸಿದ್ದೆ. ಹಿರಿಯಕ್ಕನಂತೆ ಸೂಕ್ಷ್ಮವಾಗಿ ಅವನು ಹೋಗುತ್ತಿರುವ ಹಾದಿ ತಪ್ಪೆಂದು ಬುದ್ಧಿ ಹೇಳಿದ್ದೆ. ಅಪ್ಪ ಅಮ್ಮ, ಅಣ್ಣನ ಬಗ್ಗೆ ಯೋಚಿಸಲಿಲ್ಲವೇ ನೀನು ಎಂದು ಗದರಿಸಿದ್ದೆ ಕೂಡಾ. ಬಾರಿ ಬಾರಿ ಕ್ಷಮೆ ಕೇಳಿದವನು ಇನ್ನೆಂದೂ ಇಂತಹ ಕೆಲಸಗಳನ್ನು ಮಾಡುವುದಿಲ್ಲವೆಂದು ಮಾತು ಕೊಟ್ಟಿದ್ದ. ಯಾವುದೋ ಆಕರ್ಷಣೆಯಲ್ಲಿ ಬಿದ್ದಿದ್ದನಷ್ಟೇ.... ಒಳ್ಳೆಯ ಹುಡುಗ ಅವನು... ಕೊಟ್ಟ ಮಾತನ್ನು ಉಳಿಸಿಕೊಂಡ ಕೂಡಾ.... ಅವನು ತನ್ನ ಸ್ನೇಹಿತರ ಬಳಗ ಬದಲಿಸಿ, ಓದಿನೆಡೆಗೆ ಮತ್ತೆ ಆಸಕ್ತಿ ಬೆಳೆಸಿಕೊಂಡಾಗ ಅದೆಷ್ಟು ಸಂತೋಷವಾಗಿತ್ತು ಗೊತ್ತೇ.... ನೀನು ಶತ್ರುಗಳ ಮೇಲೆ ಯುದ್ಧ ಗೆದ್ದಾಗ ಆಗುವುದಲ್ಲ ಅಂತಹದೇ ಸಂಭ್ರಮ ನನ್ನಲ್ಲಿ......

ಅತ್ತೆ ಮಾವನ ಆರೈಕೆ, ಆಸ್ಪತ್ರೆ ಹಾಗೂ ಔಷಧೋಪಚಾರಗಳು, ಚಿಂಟೂವಿನ ಓದು, ಸ್ನೇಹಿತರು, ಸಂಗ, ಸಹವಾಸಗಳು ಎಲ್ಲವನ್ನೂ ಅತ್ಯಂತ ಪ್ರೀತಿಯಿಂದ, ಅಕ್ಕರಾಸ್ಥೆಯಿಂದ ನಿಭಾಯಿಸುತ್ತೇನೆ ನಾನು. ಮದುವೆಗೆ ಮುನ್ನ ಒಂದು ಕಡ್ಡಿ ಎತ್ತಿ ಬದಿಗಿರಿಸದವಳು ಈಗ ಇಡೀ ಮನೆಯನ್ನು ನಿಭಾಯಿಸುತ್ತೇನೆ. ದಿನಸಿಯಿಂದ ಹಿಡಿದು ಅಡುಗೆಯ ತನಕ ಎಲ್ಲವೂ ನನ್ನದೇ....ಇಂದು ಊರಿಗೆ ಊರೇ ಹೇಳುತ್ತದೆ 'ಕುಟುಂಬದ ಜವಾಬ್ದಾರಿ ನಿರ್ವಹಿಸುವುದನ್ನು ಇವಳ ನೋಡಿ ಕಲಿಯಬೇಕು' ಎಂದು‌. ಅಪ್ಪ ಅಮ್ಮನಿಗೂ ಆಶ್ಚರ್ಯ ಇದು ನಮ್ಮ ಮಗಳೇನಾ ಎಂದು.....!!

ಈ ಕೆಲಸಗಳೆಲ್ಲವೂ ನನಗೆ ಅತೀವ ಸಂತಸ ನೀಡುತ್ತವೆ. ಏಕೆಂದರೆ ಇವೆಲ್ಲವೂ ನಾನು ನೀನಾಗಿ, ನೀನೇ ನಾನಾಗಿರುವ ಕ್ಷಣಗಳು. ಆದ ಕಾರಣದಿಂದಲೇ ಅತ್ತೆಮಾವ ನನ್ನಲ್ಲಿ ನಿನ್ನನ್ನು ಕಾಣುತ್ತಾರೆ. ಚಿಂಟೂಗೆ ಅಣ್ಣನ ಅನುಪಸ್ಥಿತಿ ಕಾಡುವುದಿಲ್ಲ. ಇದಕ್ಕಿಂತ ಹೆಚ್ಚು ನನಗೇನು ಬೇಕು ಹೇಳು? ನಿನ್ನ ಇಲ್ಲದಿರುವಿಕೆಯಲ್ಲೂ ನಿನ್ನ ಇರುವನ್ನು ಅನುಭವಿಸಿ ಖುಷಿಪಡುತ್ತೇವೆ ನಾವು.....

ಪರಸ್ಪರ ಸಾಮೀಪ್ಯವಿಲ್ಲದ, ಕಾಯುವಿಕೆಯ ಭಾವದಲ್ಲೇ ಒಲವ ಸುಧೆ ಹರಿಸುವಂತಹ ಪ್ರೀತಿ ಇರುವುದೇ ಸುಳ್ಳು ಎನ್ನುತ್ತಿದ್ದ ನನಗೆ ಈಗ ಕಾಯುವಿಕೆಯೇ ಅತ್ಯಾಪ್ತ. ನಿನ್ನ ಪರವಾಗಿ, ನಿನ್ನ ಜವಾಬ್ದಾರಿಗಳನ್ನು ನಿಭಾಯಿಸುವ ಪ್ರತೀ ಘಳಿಗೆಯಲ್ಲೂ ನಿನ್ನ ಅಗೋಚರ ಸಾಮೀಪ್ಯದ ಭಾವವಿರುತ್ತದೆ ನನ್ನಲ್ಲಿ. ಆ ಸಾಮೀಪ್ಯದ ಸವಿಯನ್ನು ಅನುಭವಿಸುತ್ತಾ ನಿನ್ನ ಸಾಂಗತ್ಯಕ್ಕಾಗಿ ಕಾಯುವುದು ಬಹಳ ಹಿತವೆನಿಸಿಬಿಟ್ಟಿದೆ. ನನ್ನ ಹಾಗೆ ನೀನೂ ಅಲ್ಲಿ ನನ್ನ ಸಾಮೀಪ್ಯದ ಭಾವದಲ್ಲಿ ಬಂಧಿಯಾಗಿರುವೆ ಎಂಬುದು ತಿಳಿದಿದೆ ಈ ಹೃದಯಕ್ಕೆ ‌‌...... ಆದರೂ..... ನಿನ್ನ ನೋಡಿ ಕಣ್ತುಂಬಿಕೊಳ್ಳುವ ಆಸೆ ನಮಗೆಲ್ಲಾ. ಎಷ್ಟು ಸಮಯವಾಗಿಹೋಯ್ತು‌ ನಿನ್ನ ಮೊಗ ಕಾಣದೇ? ಎಂದು ಬರುವೆ ನೀನು?

ನಿನಗೆ ಗೊತ್ತೇನು? ನಮ್ಮ ಪ್ರೀತಿಯ ಕುಡಿ ನನ್ನುದರದಲ್ಲಿ ಚಿಗುರೊಡೆಯುತ್ತಿದೆ. ಇನ್ನೂ ಯಾರಲ್ಲೂ ಹೇಳಿಲ್ಲ ನಾನು. ನಮ್ಮ ದಾಂಪತ್ಯದ ಸಾರ್ಥಕತೆಯ ಈ ಸಂತೋಷವನ್ನು ನಿನ್ನೊಂದಿಗೇ ಮೊದಲು ಹಂಚಿಕೊಳ್ಳಬೇಕು ಎಂಬ ಪುಟ್ಟ ಆಸೆ. ಆ ಘಳಿಗೆ ನಿನ್ನ ಮೊಗದಲ್ಲಿ ಸ್ಫುರಿಸುವ ಸಂತೋಷದಲ್ಲಿ ಭಾಗಿಯಾಗುವ ನನ್ನ ಆಸೆಯನ್ನು ನೆರವೇರಿಸುವೆಯಾ.....? ನನಗಂತೂ ಮಗಳೇ ಬೇಕು.... ನಿನಗೂ ನನ್ನ ತರ ಇರೋ ಮಗಳೇ ಬೇಕು ಅಂತ ಆಸೆ ಅಲ್ವಾ......?
ಮತ್ತೆ ಈಗಲೇ ಹೇಳುತ್ತಿದ್ದೀನಿ....... ನಮ್ಮ ಮಗಳು ಹುಟ್ಟುವಾಗ ನನ್ನ ಬದಿಯಲ್ಲೇ ಇರಬೇಕು ನೀನು‌. ಅವಳು ಈ ಜಗತ್ತಿನಲ್ಲಿ ಮೊದಲು ಕಾಣುವ ವ್ಯಕ್ತಿ, ಅವಳ ಹೀರೋ ಅವಳಪ್ಪನೇ ಆಗಿರಬೇಕು ಗೊತ್ತಾಯಿತಲ್ಲ.....

ಏನು ಅಷ್ಟೊಂದು ಯೋಚನೆ ಮಾಡ್ತೀದ್ದೀ? ಓಹ್....... ನನ್ನ ಹೆರಿಗೆ ಸಮಯದಲ್ಲಿ ನಿನಗೆ ನನ್ನ ಬಳಿ ಇರಲು ಆಗುವುದೋ ಇಲ್ಲವೋ ಅನ್ನುವ ಚಿಂತೆಗೆ ಬಿದ್ದೆಯಾ....? ಚೋ.... ಚ್ವೀಟ್ ನೀನು....   ನಿನ್ನ ಸಮಸ್ಯೆ ನನಗೆ ಅರ್ಥ ಆಗೋಲ್ಲವೆ ಹುಡುಗಾ? ನೀನು ನನ್ನ ಬಳಿ ಇರಬೇಕು ಅನ್ನೋ ಆಸೆ ಇದೆಯಾದರೂ ನಿನ್ನ ಕರ್ತವ್ಯಗಳ ಅರಿವೂ ನನಗಿದೆ. ನನ್ನ ಬಳಿ ನೀನಿಲ್ಲದಿದ್ದರೂ ನಿನ್ನ ಮನಸು, ಹೃದಯ ಸದಾ ಕಾಲ ನನ್ನ ಬಳಿಯಲ್ಲೇ ಇರುತ್ತೆ. ಅದೆಂದೂ ನನ್ನಿಂದ ದೂರಾಗದು‌‌......

ನೀನೇನೂ ಯೋಚಿಸಬೇಡ. ಅತ್ತೆ, ಮಾವ, ಚಿಂಟುವಿನ ಜೊತೆಗೆ ನನ್ನನ್ನೂ, ನನ್ನೊಳಗಿನ ನಿನ್ನನ್ನೂ, ನಮ್ಮ ಮಗಳನ್ನೂ ಜೋಪಾನ ಮಾಡುವೆ ನಾನು. ಆ ಬಗ್ಗೆ ನಿಶ್ಚಿಂತೆಯಾಗಿ ನಿನ್ನ ಕರ್ತವ್ಯಗಳೆಡೆಗೆ ಗಮನ ಹರಿಸು. ತಿಂಗಳುಗಟ್ಟಲೆ ನಿನ್ನ ಕರೆ ಬಾರದಿದ್ದರೂ, ವರ್ಷಗಟ್ಟಲೆ ನಿನ್ನ ಮೊಗ ಕಾಣದಿದ್ದರೂ ನೀನು ಕ್ಷೇಮವಾಗಿರುವೆ ಎಂಬ ಭಾವವನ್ನು ನಿನ್ನ ಉಸಿರಿನ ಮಂದಾನಿಲ ಹೊತ್ತು ನನ್ನ ಬಳಿ ತರುತ್ತಿದ್ದರೆ ನನಗಷ್ಟೇ ಸಾಕು...... ಆ ಮಂದಾನಿಲವನ್ನು ಉಸಿರಾಡುತ್ತಲೇ ನಿನ್ನೊಳಗೆ ಐಕ್ಯಳಾಗಬಲ್ಲೆ ನಾನು....

ಆದರೆ.........

ಆ ಮಂದಾನಿಲದಲ್ಲಿ ನಿನ್ನ ಉಸಿರಾಟದ ಕುರುಹುಗಳು ಕಾಣದ ದಿನವನ್ನು ಮಾತ್ರ ಎಂದೂ ನನಗಾಗಿ ತರಬೇಡ ಗೆಳೆಯಾ........ ಅದನ್ನು ಮಾತ್ರ ನಾನು ಸಹಿಸಲಾರೆ. ನೀನು ಆಗಾಗ ಮನೆಗೆ ಬಾರದಿದ್ದರೂ ತೊಂದರೆಯಿಲ್ಲ..... ಆದರೆ ದಯವಿಟ್ಟು ತ್ರಿವರ್ಣ ಧ್ವಜವನ್ನು ಹೊದ್ದ ಪೆಟ್ಟಿಗೆಯೊಳಗೆ ಶಾಶ್ವತವಾಗಿ ವಿರಮಿಸಿ ನೀ ನನ್ನ ದ್ವಾರಕ್ಕೆ  ಬರಬೇಡ....... ಇದೊಂದೇ ಬೇಡಿಕೆ ನನ್ನದು....'

ಹೀಗಂದುಕೊಳ್ಳುತ್ತಲೇ ಮಲಗಿದಲ್ಲೇ ಮಗ್ಗುಲಾದಳು ಅವಳು......

ಬೀಸಿ ಬಂದು ಸೋಕಿದ ತಂಗಾಳಿಯ ಪಿಸುಮಾತುಗಳನ್ನು ಆಲಿಸಿದಂತೆ ಬಸ್ಸಿನ ಸೀಟಿಗೊರಗಿ ಕಿಟಕಿಯಿಂದಾಚೆ ನೋಡುತ್ತಿದ್ದ ಅವನ ತುಟಿಯಂಚಿನಲ್ಲಿ ನವಿರಾದ ಮಂದಹಾಸವೊಂದು ಅರಳಿತು. ಹೃದಯದ ತುಂಬಾ ಹರುಷದ ಬುಗ್ಗೆಗಳು.‌.... ಬೀಸುವ ಗಾಳಿಯ ತುಂಬಾ ತನ್ನವಳ ಮನದ ಮಾತುಗಳ ಸಂದೇಶದ ಕಂಪಿದೆ ಎಂದು ಅವನೂ ಬಲ್ಲ...... ಅದನ್ನೇ ತನ್ಮಯವಾಗಿ ಆಲಿಸುತ್ತಾ ಸಂತಸಗೊಂಡ ಮನ ಮನದನ್ನೆಯೊಂದಿಗೆ ಸ್ವಗತಕ್ಕಿಳಿದಿತ್ತು.....

'ಕೇಳೇ ಹುಡುಗಿ..... ನೀ ಸನಿಹದಲಿಲ್ಲ ಎಂಬೊಂದು ಕೊರತೆ ಬಿಟ್ಟರೆ ಆರಾಮಾಗಿರುವೆ ನಾನು. ಇಷ್ಟಕ್ಕೂ ನನ್ನೆಲ್ಲಾ ಜವಾಬ್ದಾರಿಗಳನ್ನು ನನಗಿಂತಲೂ ಸಮರ್ಥವಾಗಿ ನೀನು ನಿರ್ವಹಿಸುತ್ತಿರುವಾಗ ನನಗ್ಯಾವ ಚಿಂತೆ ಹೇಳು. ನಾನು ದೇಶ ಕಾಯುವ ಯೋಧನಾದರೆ ನೀನು ನನ್ನ ಕಾಯುವ ಯೋಧೆ. ನನ್ನ ಬದುಕಿನ ಹೋರಾಟದ ಜವಾಬ್ದಾರಿಯನ್ನು ನೀನು ವಹಿಸಿಕೊಂಡಿರುವುದರಿಂದಲೇ ನಾನು ನಿಶ್ಚಿಂತನಾಗಿ ಮಾತೃಭೂಮಿಯ ಸೇವೆಗಾಗಿ ಹೋರಾಡುತ್ತಿರುವೆ. ಅಂದ ಮೇಲೆ ನೀ ನನ್ನ ಬೆನ್ನಿಗಿದ್ದರೆ ಮಾತ್ರವೇ ನನ್ನ ಬದುಕಿಗೆ, ಅಸ್ತಿತ್ವಕ್ಕೆ ಬೆಲೆಯಲ್ಲವೇನೇ ಚೆಲುವೆ. ಅದೆಷ್ಟು ಧೈರ್ಯವಂತೆ ಹಾಗೂ ಪ್ರಬುದ್ಧೆ ನೀನು? ಮನೆಯ ಯಾವ ಸಮಸ್ಯೆಗಳೂ ನನ್ನತ್ತ ಸುಳಿದು ಕಂಗೆಡಿಸದಂತೆ ಅದೆಷ್ಟು ಚೆನ್ನಾಗಿ ಎಲ್ಲವನ್ನೂ ನಿರ್ವಹಿಸಿಬಿಡುವೆ.... ಪದೇ ಪದೇ ಕೇಳುವೆಯಲ್ಲ ಅದೇಕೆ ನನ್ನ ಒಪ್ಪಿ ಮದುವೆಯಾದಿರಿ ಎಂದು. ನಿನ್ನ ಮೊದಲ ಬಾರಿಗೆ ಕಂಡಾಗಲೇ ನಿನ್ನ ತುಂಟ ಕಣ್ಣುಗಳ ಆಳದಲ್ಲಿ ಒಂದು ಜವಾಬ್ದಾರಿಯುತ ಪ್ರಬುದ್ಧತೆಯನ್ನು ಗುರುತಿಸಿದ್ದೆ. ಅದಕ್ಕೇ ಸೋತಿದ್ದು ನಾನು. ಯೋಧನ ಮಡದಿ ಕೂಡಾ ಯೋಧಳೇ. ಒಬ್ಬ ಯೋಧನಿಗಿರುವಷ್ಟೇ ದೃಢಮನಸ್ಕತೆ ಅವನ ಮಡದಿಗೂ ಇರಬೇಕು. ನಿಜ ಹೇಳಬೇಕೆಂದರೆ ಮಡದಿ ತನ್ನ ಕೌಟುಂಬಿಕ ಕರ್ತವ್ಯಗಳನ್ನು ನಿಭಾಯಿಸುವಳೆಂಬ ಧೈರ್ಯವೇ ಯೋಧನ ಶಕ್ತಿ. ಅಂತಹ ಧೀಶಕ್ತಿಯನ್ನು ನಿನ್ನಲ್ಲಿ ಗುರುತಿಸಿದ್ದೆ ನಾನು. ನನ್ನ ನಂಬಿಕೆಯನ್ನು ಎಂದೂ ಸುಳ್ಳಾಗಿಸಲಿಲ್ಲ ನೀನು.

ಅಪ್ಪ ಅಮ್ಮನಿಗೆ ಮಗನಾಗಿ, ಚಿಂಟುವಿಗೆ ಅಣ್ಣನಂತೆ ನನ್ನ ಜವಾಬ್ದಾರಿಗಳೆಲ್ಲವನ್ನೂ ಅಕ್ಕರೆಯಿಂದ ನಿನ್ನದಾಗಿಸಿಕೊಂಡಿರುವ ನಿನ್ನ ಋಣ ನಾನು ತೀರಿಸಲುಂಟೇ....? ನೀನಿರದೇ ಹೋಗಿದ್ದರೆ ಈ ಬದುಕು ಎಂತಿರುತ್ತಿತ್ತೋ ಊಹಿಸಲೂ ಆಗದು ನನಗೆ. ನನಗಾಗಿ, ನಮಗಾಗಿ ಇಷ್ಟೆಲ್ಲಾ ಮಾಡುವ ನಿನಗಾಗಿ ಒಂದಿಷ್ಟು ಸಮಯ ಕೊಡಲೂ ಸಾಧ್ಯವಾಗದ ಸ್ಥಿತಿ ನನ್ನದು. ಆದರೂ ನನ್ನ ಬಗ್ಗೆ ಯಾವುದೇ ದೂರುಗಳಿಲ್ಲ ನಿನ್ನಲ್ಲಿ. ಅದೆಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವೆ ನನ್ನನ್ನು..... ನನ್ನ ಮುದ್ದು ನೀನು....

ಅದ್ಯಾಕೋ ನಿನ್ನ ನೋಡಬೇಕೆಂಬ ತುಡಿತ ಬಲವಾಗಿತ್ತು. ನೀನು ನನ್ನಲ್ಲಿ ಏನೋ ಹಂಚಿಕೊಳ್ಳಲು ಬಯಸಿರುವೆಯೆಂಬ ಭಾವವನ್ನು ತಂಗಾಳಿ ಪದೇ ಪದೇ ಹೊತ್ತು ತರುತ್ತಿತ್ತು. ಅದಕ್ಕೆ ರಜೆ ಪಡೆದು ಹೊರಟುಬಿಟ್ಟೆ ಹುಡುಗಿ..... ನಿನ್ನ ಪ್ರೀತಿಗೆ ಬದಲಾಗಿ ನೀಡಲು ನನ್ನ ಬಳಿ ಸಮಯದಷ್ಟು ಮೌಲ್ಯವಾದುದು ಬೇರೇನೂ ಇಲ್ಲ. ಯೋಧನ ಮಡದಿಗೆ ಅವನ ಸಮಯ ಹಾಗೂ ಸಾಮೀಪ್ಯದಷ್ಟು ಸಂತಸ ತರುವ ಉಡುಗೊರೆ ಬೇರ್ಯಾವುದಿದೆ ಅಲ್ಲವೇ...?

ಇನ್ನೇನು ನಿಮಿಷಗಳ ಅಂತರವಷ್ಟೇ..... ನಾನು ನಿನ್ನ ಅಂಗಳದಲ್ಲಿರುವೆ. ನಿನಗೆ ಹೇಳಿಲ್ಲ ನಾ ಬರುವ ವಿಚಾರ. ನನ್ನ ಎದುರಲ್ಲಿ ಕಂಡು ಸಂತಸದಿಂದ ಅರಳುವ ಆ ಕಣ್ಣುಗಳನ್ನು, ತುಟಿಯಂಚಿನಲ್ಲಿ ಅರಳುವ ಮಂದಹಾಸವನ್ನೂ, ನಿನ್ನ ಸಂತಸವನ್ನೂ ಕಣ್ತುಂಬಿಕೊಳ್ಳಬೇಕು ನಾನು. ಅಪ್ಪನ ಆತ್ಮೀಯ ಅಪ್ಪುಗೆಯನ್ನೂ, ಅಮ್ಮನ ಮಮತೆಯನ್ನೂ, ಚಿಂಟುವಿನ ಅಕ್ಕರೆಯನ್ನೂ ಆನಂದಿಸಬೇಕು. ನಿಮ್ಮೆಲ್ಲರ ಸಂತೋಷವನ್ನೂ, ಅಚ್ಚರಿಯನ್ನೂ ಜತನದಿಂದ ನನ್ನ ನೆನಪುಗಳ ಬುತ್ತಿಗೆ ಸೇರಿಸಬೇಕು........'

ಎಂದೆಲ್ಲಾ ಯೋಚಿಸುತ್ತಲೇ ಬಸ್ಸಿಳಿದು ಐದು ನಿಮಿಷಗಳ ಹಾದಿ ಕ್ರಮಿಸಿ ತನ್ನ ಮನೆಯೆದುರು ನಿಂತಿದ್ದ ಅವನು. ತನ್ನ ಪಾಲಿನ ಸ್ವರ್ಗವನ್ನು ಕಣ್ತುಂಬಿಕೊಳ್ಳುತ್ತಲೇ ಗೇಟನ್ನು ತೆರೆದು ಒಳಗಡಿಯಿಟ್ಟ......

ಗೇಟಿನ ಶಬ್ದಕ್ಕೆ  'ಈ ಹೊತ್ತಿನಲ್ಲಿ ಯಾರಿರಬಹುದು' ಎಂದುಕೊಳ್ಳುತ್ತಲೇ ತಲೆಗೂದಲನ್ನು ತುರುಬಾಗಿಸಿಕೊಳ್ಳುತ್ತಾ ಬಾಗಿಲಿಗೆ ಬಂದವಳ ಕಾಲ ಅರಘಳಿಗೆ ಅಲ್ಲೇ ಸ್ಥಂಭಿಸಿದಂತಿತ್ತು. ಎಚ್ಚೆತ್ತವಳ ಕಣ್ಣುಗಳಲ್ಲಿ ಕೋಟಿ ನಕ್ಷತ್ರಗಳ ಪ್ರಭಾವಳಿ. ಹಾರುವ ನಡಿಗೆಯಲ್ಲಿ ಅವನ ಬಳಿ ಸಾರಿದವಳನ್ನು ಹಗುರವಾಗಿ ಬಳಸಿ ನೆತ್ತಿಗೆ ಮುತ್ತಿಕ್ಕಿದ.

ತನ್ನೆದೆಗೆ ಒರಗಿದವಳನ್ನು ಇನ್ನಷ್ಟು ಬಲವಾಗಿ ಅಪ್ಪಿ ನಿಧಾನವಾಗಿ ಮನೆಯೊಳಗೆ ಹೆಜ್ಜೆಯಿಟ್ಟನವನು ತನ್ನವಳೊಂದಿಗೆ...........

ತನ್ನವರನ್ನು ಕಾಣುವ ಕಾತರದಿಂದ.........

ಪೂರ್ಣ ಚಂದಿರ ಬೆಳದಿಂಗಳ ಚಪ್ಪರದೊಂದಿಗೆ ಇಡೀ ಭುವಿಯನ್ನು ರಜತ ಪ್ರಭೆಯಲ್ಲಿ ಆವರಿಸಿಕೊಳ್ಳುವ ವೇಳೆಗೆ ಆ ಮನೆಯಲ್ಲಿ ಸಂಭ್ರಮ ಹೊನಲಾಗಿ ಹರಿಯುತ್ತಿತ್ತು..........

****************

ಮಂಗಳವಾರ, ಜೂನ್ 16, 2020

ನೀ ರಾಧೆಯ ಶ್ಯಾಮನಾದರೆ ನಾನ್ಯಾರು ಹೇಳೋ ಮಾಧವ......


"ಪ್ರಯಾಣಿಕರ ಗಮನಕ್ಕೆ, ಗಾಡಿ ಸಂಖ್ಯೆ 11302, ಬೆಂಗಳೂರಿನಿಂದ ಸೊಲ್ಲಾಪುರ, ಧರ್ಮಾವರಂ ಮಾರ್ಗವಾಗಿ ಮುಂಬೈಗೆ ತೆರಳಲಿರುವ ಉದ್ಯಾನ್ ಎಕ್ಸ್ ಪ್ರೆಸ್ ಪ್ಲಾಟ್ ಫಾರ್ಮ್ ನಂಬರ್ ನಾಲ್ಕಕ್ಕೆ ಆಗಮಿಸಿದೆ..." ಎಂಬ ಪ್ರಕಟಣೆ ಕೇಳಿ ಎದ್ದವಳು ತನ್ನ ಪುಟ್ಟ ಲಗೇಜ್ ಬ್ಯಾಗನ್ನು ಹಿಡಿದು ನಾಲ್ಕನೇ ಪ್ಲಾಟ್ ಫಾರ್ಮಿನತ್ತ ನಿಧಾನವಾಗಿ ಹೆಜ್ಜೆ ಹಾಕಿದಳು . ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಿದ್ದರಿಂದ ನೂಕುನುಗ್ಗಲಿನಲ್ಲಿ ಸೀಟಿಗಾಗಿ ಗುದ್ದಾಡುವ ಅಗತ್ಯವಿರಲಿಲ್ಲ. ಅಸಲಿಗೆ ಅವಳಿಗೆ ರೈಲಿನಲ್ಲಿ ಹೋಗುವ ಅನಿವಾರ್ಯತೆಯೇ ಇರಲಿಲ್ಲ. ಫ್ಲೈಟಿನಲ್ಲಿ ಹೋಗೆಂದಿದ್ದರು ತಂದೆ. ಆದರೆ ಅವಳೇ ನಿರಾಕರಿಸಿದ್ದಳು. ಅವಳಿಗೆ ಈ ಪ್ರಯಾಣವೇ ಬೇಕಿತ್ತು.... 

ಹಿಂದೊಮ್ಮೆ ಇದೇ ರೈಲಿನ ಪ್ರಯಾಣದಲ್ಲಿ ಕಥೆಯೊಂದು ಆರಂಭವಾಗಿತ್ತು. ಈಗ ಆ ಕಥೆಯಿಂದ ನಿರ್ಗಮಿಸುವ ಮುನ್ನ ಮತ್ತೊಮ್ಮೆ ಅದೇ ಕಥೆಯೊಳಗೆ ಆದಿಯಿಂದ ಅಂತ್ಯದವರೆಗೆ ಪಯಣಿಸಬಯಸಿದ್ದಳಾಕೆ....... 

ಇನ್ನೆಂದೂ ತಾನು ಆ ಕಥೆಯ ಪುಟವಾಗಲಾರೆ ಎಂಬುದು ಅವಳಿಗೆ ತಿಳಿದಿತ್ತು.... ಎಷ್ಟೆಂದರೂ ಅರ್ಧ ಬರೆದ ಕಥೆಯಿಂದ ಮಧ್ಯದಲ್ಲೇ ನಿರ್ಗಮಿಸುವ ನಿರ್ಧಾರ ಅವಳದೇ ಅಲ್ಲವೇ......

ಫಸ್ಟ್ ಕ್ಲಾಸ್ ಎಸಿ ಕಂಪಾರ್ಟ್ಮೆಂಟ್ ಭಾಗಶಃ ಖಾಲಿಯಾಗಿತ್ತು. ತನ್ನ ಬರ್ತ್ ನಲ್ಲಿ ಇದ್ದೊಂದು ಲಗೇಜ್ ಬ್ಯಾಗಿನೊಂದಿಗೆ ಆಸೀನಳಾದಳು. ವ್ಯಾನಿಟಿ ಬ್ಯಾಗಿನಲ್ಲಿದ್ದ ಟಿಕೆಟ್ ತೆಗೆದು ಮತ್ತೊಮ್ಮೆ ಖಾತರಿಪಡಿಸಿಕೊಂಡಳು. ಅದನ್ನು ಮತ್ತೆ ಬ್ಯಾಗಿಗೆ ಸೇರಿಸುವ ಮುನ್ನ ಪ್ಯಾಸೆಂಜರ್ ನೇಮ್ ಎಂಬಲ್ಲಿ ದಪ್ಪ ಅಕ್ಷರಗಳಲ್ಲಿ ನಮೂದಾಗಿದ್ದ ಹೆಸರನ್ನೇ ನೋಡಿದಳು.

ವಿದಿಶಾ ವಿಹಾರಿ......

ಸಣ್ಣನೆಯ ಮುಗುಳ್ನಗು ಅರಳಿತು. ಆ ಹೆಸರನ್ನೇ ಅಪ್ಯಾಯಮಾನವಾಗಿ ಸವರಿದಳು. ಟಿಕೇಟನ್ನು ಜತನದಿಂದ ಬ್ಯಾಗಿನೊಳಗೆ ಸೇರಿಸಿದಳು. ರೈಲು ನಿಧಾನವಾಗಿ ಚಲಿಸಲಾರಂಭಿಸಿತು. ನಿದ್ರೆಯಂತೂ ಅವಳೊಂದಿಗೆ ಮುನಿಸಿಕೊಂಡು ಬಹಳ ದಿನಗಳಾಗಿತ್ತು. ಸಮಯ ಕಳೆದಂತೆ ರೈಲು ನಗರ ವಲಯವನ್ನು ದಾಟಿ ತನ್ನ ವೇಗ ಹೆಚ್ಚಿಸಿಕೊಳ್ಳುತ್ತಾ ಕತ್ತಲನ್ನು ಸೀಳಿಕೊಂಡು ಸಾಗತೊಡಗಿತು. ಆ ವೇಗದಲ್ಲಿ ಹಿಂದೆ ಹಿಂದೆ ಸಾಗುತ್ತಿರುವಂತೆ ತೋರುವ ಗಿಡಮರಗಳನ್ನೇ ನೋಡುತ್ತಾ ಕುಳಿತಳು. ಅದರೊಂದಿಗೆ ಅವಳ ನೆನಪುಗಳೂ ಹಿಂದಕ್ಕೆ ಚಲಿಸತೊಡಗಿದವು.

ವಿದಿಶೆ ನಿರ್ಗಮಿಸಲು ತಯಾರಾಗಿರುವ ಕಥೆಯೂ ಇದೇ ಉದ್ಯಾನ್ ಎಕ್ಸ್ ಪ್ರೆಸ್ಸಿಂದಲೇ ಆರಂಭಗೊಂಡಿತ್ತು.....

****************

ವಿದಿಶಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಮೊದಲಿಂದಲೂ ಬಹಳ ಚುರುಕಾದ ಹುಡುಗಿ. ಅವಳ ತಂದೆ ಡಾ.ಚಿದಂಬರ್ ಅಗ್ನಿಹೋತ್ರಿ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ನ್ಯೂರೋಸೈನ್ಸ್ ವಿಭಾಗದ ಮುಖ್ಯಸ್ಥರು. ಅಮ್ಮ ಶಾಲ್ಮಲಾ ಗೃಹಿಣಿ. ಅವಳು ಓದಿದ್ದು ಇಲ್ಲೇ ಆದರೂ ಕರ್ಮಭೂಮಿಯಾಗಿ ಸಿಕ್ಕಿದ್ದು ಮುಂಬೈ ಎಂಬ ಮಾಯಾನಗರಿ. ಚಿಕ್ಕಂದಿನಿಂದಲೂ ರೇಖೆಗಳೊಂದಿಗೆ ಸಂಗ ಬೆಳೆಸಿಕೊಂಡವಳು... ಕಾರ್ಟೂನ್ ರಚನೆಯ ಮೇಲೆ ಮುಂಚಿನಿಂದಲೂ ಬಹಳ ಆಸಕ್ತಿ ಇತ್ತವಳಿಗೆ. ಹಾಗಾಗಿಯೇ ಉನ್ನತ ಶಿಕ್ಷಣಕ್ಕೆ ಲಲಿತಕಲೆಯನ್ನು (ಫೈನ್ ಆರ್ಟ್ಸ್) ಆಯ್ದುಕೊಂಡು ಸ್ಟೋರಿ ಬೋರ್ಡಿಂಗ್(ಕಾರ್ಟೂನ್ ಅಥವಾ ಚಿತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಕ್ರಮಬದ್ಧವಾಗಿ ವಿನ್ಯಾಸಗೊಳಿಸುವ ಕಲೆ) ನಲ್ಲಿ ವಿಶೇಷ ಪರಿಣಿತಿ ಪಡೆದಿದ್ದಳು. ಅದರೊಂದಿಗೆ ಸ್ವ ಆಸಕ್ತಿಯಿಂದ ಆನಿಮೇಷನ್ಗೆ ಸಂಬಂಧಪಟ್ಟ ಹಲವಾರು ತರಬೇತಿ ಶಿಬಿರಗಳಲ್ಲೂ ಪಾಲ್ಗೊಂಡಿದ್ದಳು. ಕಾಲೇಜಿನಲ್ಲಿದ್ದಾಗಲೇ ಪತ್ರಿಕೆಗಳಿಗೆ ಹಾಗೂ ಜಾಹೀರಾತು ಕಂಪನಿಯೊಂದಕ್ಕೆ ಕೆಲವು ಸ್ಟೋರಿಬೋರ್ಡ್ ತಯಾರಿಸಿಕೊಟ್ಟಿದ್ದಳು. ಅಂತಿಮ ವರ್ಷದ ಪ್ರೊಜೆಕ್ಟಿಗಾಗಿ 'ಮೈರಾ' ಎಂಬ ಕಾರ್ಟೂನ್ ಪಾತ್ರವನ್ನು ತಾನೇ ಸ್ವತಃ ಸೃಷ್ಟಿಸಿ ವಿನ್ಯಾಸಗೊಳಿಸಿದ್ದಳು. ಅದು ಬೆಸ್ಟ್ ಪ್ರಾಜೆಕ್ಟ್ ಆಗಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇವಳ ಪ್ರತಿಭೆ ಗಮನಿಸಿ ಮುಂಬೈ ಮೂಲದ "ವಿ ಕ್ರಿಯೇಟ್" ಎಂಬ ಕಂಪನಿ ಅವಳನ್ನು ಆಹ್ವಾನಿಸಿದಾಗ ಸಂತೋಷದಲ್ಲಿ ಒಪ್ಪಿಕೊಂಡಿದ್ದಳು. ಹೀಗೆ ಆರಂಭವಾಗಿತ್ತು ಅವಳ ಮುಂಬೈ ಯಾನ.

ಮುಂಬೈಗೆ ಬಂದು ಕಂಪೆನಿ ಸೇರಿದ ನಂತರ ಹಿಂತಿರುಗಿ ನೋಡಲಿಲ್ಲ ವಿದಿಶಾ. ತನ್ನ ಸೃಜನಶೀಲತೆ, ಆವಿಷ್ಕಾರ, ಪ್ರತಿಭೆ, ಸಾಮರ್ಥ್ಯದ ಬಲದಿಂದ ಹಂತಹಂತವಾಗಿ ವೃತ್ತಿರಂಗದಲ್ಲಿ ಮೇಲೇರಿದ್ದಳು. ಎರಡೇ ವರ್ಷಗಳಲ್ಲಿ 'ಮೈರಾ ಕ್ರಿಯೇಷನ್ಸ್' ಎಂಬ ತನ್ನದೇ ಹೊಸ ಸಂಸ್ಥೆ ಆರಂಭಿಸಿದ್ದಳು. ಪತ್ರಿಕೆಗಳು, ಜಾಹೀರಾತು ಏಜೆನ್ಸಿಗಳಲ್ಲದೇ, ಕಾರ್ಟೂನ್ ಟಿ.ವಿ ಹಾಗೂ ಚಲನಚಿತ್ರ ತಯಾರಕರು, ಗೇಮ್ ಡಿಸೈನಿಂಗ್ ಕಂಪನಿಗಳವರೆಗೂ 'ಮೈರಾ'ದ ಸೇವೆ ವಿಸ್ತರಿಸಿತ್ತು. ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು. ಪೋವೈಯಲ್ಲಿ ಫ್ಲಾಟ್ ಖರೀದಿಸಿದ್ದಳು. ಅಲ್ಲಿಯೇ ಅವಳ ವಾಸ. ಪಾದರಸದಂತೆ ಚುರುಕಾಗಿ ಓಡಾಡುತ್ತಾ ಎಲ್ಲವನ್ನೂ ನಿಭಾಯಿಸುತ್ತಾಳೆ ವಿದಿಶಾ. ಅವಳಿಗೆ ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೇ, ಧೃತಿಗೆಡದೆ ಯೋಚಿಸುವಷ್ಟು ಮನೋಬಲವಿತ್ತು. ಸದಾ ತುಟಿಯಂಚಿನಲ್ಲಿ ಮಾಸದ ಮುಗುಳ್ನಗೆ ಸೂಸುವಾಕೆ ಕೋಪಗೊಳ್ಳುವುದು ಅತ್ಯಪರೂಪ. 

ಎಷ್ಟೇ ಕೆಲಸದೊತ್ತಡವಿದ್ದರೂ ಬಿಡುವು ಮಾಡಿಕೊಂಡು ತಿಂಗಳಿಗೊಮ್ಮೆ ಬೆಂಗಳೂರಿಗೆ ಬರುತ್ತಿದ್ದಳು ಅಪ್ಪ‌ ಅಮ್ಮನನ್ನು ನೋಡಲು. ಒಬ್ಬಳೇ ಮಗಳು ತಮ್ಮೊಂದಿಗೇ ಇರಲಿ ಎಂಬ ಆಸೆ ಶಾಲ್ಮಲಾರಿಗೆ. ಕಂಪನಿಯನ್ನು ಬೆಂಗಳೂರಿಗೆ ವರ್ಗಾಯಿಸು ಎಂಬ ಪಟ್ಟು ಆಕೆಯದ್ದು. ಬಂದಾಗೆಲ್ಲಾ ಅದನ್ನೇ ಹೇಳುತ್ತಿದ್ದರಾಕೆ. ಆದರೆ ಅದಷ್ಟು ಸುಲಭವೇ? ಮುಂಬೈಯಲ್ಲಾದರೆ ಅವಳ ಏಜೆನ್ಸಿಗೆ ಅದರದೇ ಆದ ಮಾರುಕಟ್ಟೆ ಇತ್ತು. ಈಗ ಇಲ್ಲಿಗೆ ವರ್ಗಾಯಿಸಬೇಕೆಂದರೆ ಅಲ್ಲಿನ ಕ್ಲೈಂಟ್ ಗಳ ಅನುಮತಿ, ಇಲ್ಲಿಯ ಮಾರುಕಟ್ಟೆ ವಿಶ್ಲೇಷಣೆ ಎಲ್ಲಾ ಆಗಬೇಕಿತ್ತು. ಹಾಗಾಗಿಯೇ ಮುಂದೆ ಹಾಕುತ್ತಿದ್ದಳಾದರೂ ಸಧ್ಯದಲ್ಲಿ ಬೆಂಗಳೂರಿಗೆ ಕಂಪನಿ ವರ್ಗಾಯಿಸುವ ಯಾವುದೇ ಯೋಚನೆಯಿರಲಿಲ್ಲ ವಿದಿಶೆಗೆ.

ನಾಲ್ಕು ವರ್ಷಗಳ ಹಿಂದಿನ ಮಾತು....

ಅಪ್ಪ ಅಮ್ಮನನ್ನು ಭೇಟಿಯಾಗಲೆಂದು ಇದೇ ಉದ್ಯಾನ್ ಎಕ್ಸ್ ಪ್ರೆಸ್ಸಿನಲ್ಲಿ ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದಳು ವಿದಿಶಾ. ಅಮ್ಮನಿಗೊಂದು ಕರೆ ಮಾಡಿ ತಾನು ಹೊರಟಿರುವೆನೆಂದು ತಿಳಿಸಿ, ಒಂದಿಷ್ಟು ಹರಟೆ ಹೊಡೆದ ನಂತರ ಮೊಬೈಲಿನ ಜಂಜಾಟ ಬೇಡವೆಂದು ಬದಿಗಿರಿಸಿದ್ದಳು. ಸಿಡ್ನಿ ಷೆಲ್ಡನ್ ನ "ಟೆಲ್ ಮಿ ಯುವರ್ ಡ್ರೀಮ್ಸ್" ಓದಲಾರಂಭಿಸಿದವಳು ಆಶ್ಲೇ ಪೀಟರ್ಸನ್, ಟೋನಿ ಪ್ರಿಸ್ಕಾಟ್ ಹಾಗೂ ಅಲೆಟ್ ಪೀಟರ್ಸ್ ಪಾತ್ರಗಳಲ್ಲಿ ಕಳೆದೇಹೋಗಿದ್ದಳು. ಬಾಹ್ಯಪ್ರಪಂಚದ ಪರಿವಿರಲಿಲ್ಲ ಅವಳಿಗೆ. ಬಹಳ ರೋಚಕವಾಗಿ ಸಾಗುತ್ತಿದ್ದ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಕೊಲೆಗಳ ಮೇಲೆ ಕೊಲೆಗಳು.... ಮೂವರಲ್ಲಿ ಯಾರು ಕೊಲೆಗಳನ್ನು ಮಾಡಿರಬಹುದೆಂಬ ಕುತೂಹಲದಲ್ಲಿ ಉಸಿರು ಬಿಗಿ ಹಿಡಿದು ಓದುತ್ತಿದ್ದವಳ ಏಕಾಗ್ರತೆಗೆ ಭಂಗ ತರುವಂತೆ ಕೇಳಿಸಿತ್ತು ಅವನ ಧ್ವನಿ......

"ಅವಳೇ ಎಲ್ಲಾ ಕೊಲೆಗಳನ್ನು ಮಾಡಿದ್ದು......." 

ಪುಸ್ತಕದಿಂದ ತಲೆಎತ್ತಿ ಧ್ವನಿಯ ಮೂಲ ಹುಡುಕಿ ಎದುರು ನೋಡಿದಳು ತೀಕ್ಷ್ಣ ನೋಟದಲ್ಲಿ. ಅಷ್ಟೇ ಚೂಪಾದ ನೋಟದಲ್ಲೇ ಅವನೂ ಅವಳನ್ನೇ ದಿಟ್ಟಿಸುತ್ತಿದ್ದ. ಯಾರೋ ಅಪರಿಚಿತ. ಇದುವರೆಗೂ ಅವನನ್ನು ಎಲ್ಲೂ ನೋಡಿದ ನೆನಪಿರಲಿಲ್ಲ ಅವಳಿಗೆ.

"ಆಶ್ಲೇ ಪೀಟರ್ಸನ್ ಇದ್ದಾಳಲ್ಲಾ..... ಅವಳೇ ಎಲ್ಲರನ್ನೂ ಸಾಯ್ಸಿರೋದು. ಆಕ್ಚುಲಿ ಏನು ಗೊತ್ತಾ? ಆಶ್ಲೇ, ಅಲೆಟ್, ಟೋನಿ ಮೂವರೂ ಒಬ್ಬಳೇ. ಅವ್ಳಿಗೆ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಇರುತ್ತೆ..." ಅವನು ಹೇಳುತ್ತಿದ್ದ.

"ರೀ ಮಿಸ್ಟರ್, ಯಾರ್ರೀ ನೀವು? ಏನೋ ನಾವಿಬ್ಬರೂ ಬಹಳ ದಿನಗಳಿಂದ ಪರಿಚಿತರು ಅನ್ನೋ ರೀತಿ ಮಾತಾಡ್ತಿದ್ದಿರಲ್ಲಾ?" ಗದರಿಸಿ ಕೇಳಿದ್ದಳು. ಅವಳಿಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಬರದೇ ಇರುತ್ತದೆಯೇ? ಅಷ್ಟು ಆಸಕ್ತಿಯಲ್ಲಿ ಯಾರು ಕೊಲೆ ಮಾಡಿರಬಹುದು ಅನ್ನೋ ಕುತೂಹಲದಲ್ಲಿ ಓದುತ್ತಿದ್ದವಳಿಗೆ ಅರ್ಧ ಕಥೆಯನ್ನೇ ಹೇಳಿ ಓದಿನ ಸ್ವಾರಸ್ಯವನ್ನೇ ಕೆಡಿಸಿದ್ದ.

"ಹಲೋ, ನಾನು ಹೃಷಿಕೇಶ್ ವಿಹಾರಿ" ಎಂದು ಕೈ ಚಾಚಿದ್ದ. ಆದರೆ ಅವಳ ಸಿಟ್ಟು ಇಳಿದಿರಲಿಲ್ಲ. ಮುಖ ತಿರುಗಿಸಿದಳು.

"ಈಗ ನಾನು ಕಥೆ ಹೇಳಿ ನಿಮ್ಮ ಕುತೂಹಲನ ಮಣ್ಣುಪಾಲು ಮಾಡಿದ್ದಕ್ಕೆ ನಿಮಗೆ ಕೋಪ ಬಂದಿರೋದು ನ್ಯಾಯವೇ. ಆದರೆ ನನ್ನ ಸೇಫ್ಟಿಗೆ ಹಾಗೆ ಮಾಡಲೇ ಬೇಕಾಯ್ತು" ಎಂದಿದ್ದ.

"ನಿಮ್ಮ ಸೇಫ್ಟಿನಾ?" ಅಚ್ಚರಿಯಿಂದ ಕೇಳಿದ್ದಳು.

"ಮತ್ತೆ? ಈಗ ನೀವು ಅಷ್ಟು ಕುತೂಹಲದಲ್ಲಿ ಉಸಿರು ಬಿಗಿ ಹಿಡಿದು ಓದಿ, ಅವಳೇ ಎಲ್ಲಾ ಕೊಲೆ ಮಾಡಿದ್ದು ಅಂತ ಗೊತ್ತಾದಾಗ ಆ ಶಾಕಿಗೆ ನಿಮ್ಮ ಬಿಗಿಹಿಡಿದ ಉಸಿರು ನಿಂತು ಹೋದರೆ??? ಆಗ ಪೋಲೀಸ್ ಬಂದು ನನ್ನ ಅರೆಸ್ಟ್ ಮಾಡೋರು...... ನಾನೇ ತಾನೆ ನಿಮ್ಮ ಏಕೈಕ ಸಹ ಪ್ರಯಾಣಿಕ. ಅಕ್ಕ ಪಕ್ಕ ಎಲ್ಲಾ ಖಾಲಿ ಹೊಡೀತಿದೆ. ಮತ್ತೆ ನಾನು ಜೈಲಿಗೋದ್ರೆ ನಮ್ಮಪ್ಪ ಅಮ್ಮ ಎಲ್ಲಾ ಪಾಪ ಅಲ್ವಾ?" ಅವನ ಮಾತು ಕೇಳಿ ನಕ್ಕಳು ವಿದಿಶೆ.

"ಅಬ್ಬಾ, ಅಂತೂ ನಿಮ್ಮ ಸಿಟ್ಟು ಕಡಿಮೆ ಆಯ್ತಲ್ಲ. ಅದೆಷ್ಟು ಸಿಟ್ಟು ಮಾಡ್ಕೋತೀರಿ ನೀವು?"

"ನನಗೆ ಕೋಪ ಬರೋದು ಬಹಳ ಕಡಿಮೆ. ಅಷ್ಟು ಆಸಕ್ತಿಯಿಂದ ಓದೋವಾಗ ಡಿಸ್ಟರ್ಬ್ ಮಾಡಿದ ಅಪರಿಚಿತ ವ್ಯಕ್ತಿ ಮೇಲೆ ಯಾರಿಗಾದರೂ ಸಿಟ್ಟು ಬಂದೇ ಬರುತ್ತೆ"

"ಹೇ ಸ್ಟ್ರೇಂಜರ್... ನಾನು ಹೃಷಿಕೇಶ್ ವಿಹಾರಿ. ಆಗಲೇ ಒಮ್ಮೆ ಪರಿಚಯ ಮಾಡ್ಕೊಂಡೆ. ನೀವು....?"

"ಹಲೋ, ನಾನು ವಿದಿಶಾ ಅಗ್ನಿಹೋತ್ರಿ. ಹೌದು.... ನೀವು ಕರ್ನಾಟಕದವರಾ? ನಾನು ಕನ್ನಡದವಳು ಅಂತ ಹೇಗೆ ಗೊತ್ತಾಯ್ತು?" ಕೇಳಿದಳು.

"ಅಯ್ಯೋ, ನೀವು ಕನ್ನಡದವರು ಅಂತ ಗೊತ್ತಾಗಿಯೇ ಅಗೋ... ಅಲ್ಲಿ ಕೂತಿದ್ದವನು ಇಲ್ಲಿಗೆ ಬಂದಿದ್ದು. ನೀವು ಆಗ್ಲೇ ನಿಮ್ಮಮ್ಮನ ಹತ್ರ ಫೋನಲ್ಲಿ ಮಾತಾಡ್ತಿದ್ರಲ್ಲ....ಹಾಗೆ ಗೊತ್ತಾಯ್ತು. ನಾನು ಮುಂಬೈಯಲ್ಲೇ ಹುಟ್ಟಿ ಬೆಳೆದಿದ್ದು. ಆದ್ರೆ ಅಪ್ಪ ಅಮ್ಮ ಕರ್ನಾಟಕದವರು. ಮನೆಯಲ್ಲಿ ಕನ್ನಡನೇ ಮಾತಾಡೋದು. ಈಗ ಬೆಂಗಳೂರಿನ ಚಿಕ್ಕಪ್ಪನ ಮನೆಗೆ ಹೊರಟಿರೋದು ಅಜ್ಜಿ ತಾತನ್ನ ಮೀಟ್ ಮಾಡೋಕೆ.... ಒಬ್ಬನೇ ಕುಳಿತು ಬೇಸರವಾಗಿತ್ತು. ನನಿಗಂತೂ ಮಾತಾಡದೇ ಸುಮ್ಮನಿರಲು ಬರೋದಿಲ್ಲ. ಏನಪ್ಪಾ ಮಾಡ್ಲಿ ಅಂತ ಯೋಚಿಸ್ತಾ ಇದ್ದೆ. ನೀವು ಕನ್ನಡದಲ್ಲಿ ಮಾತಾಡಿದ್ದು ಕೇಳಿ ಖುಷಿಯಾಗಿ ಪರಿಚಯ ಮಾಡ್ಕೊಳ್ಳೋಣ ಅಂತ ಬಂದೆ. ಆದ್ರೆ ನೀವು ಪುಸ್ತಕದಿಂದ ಹೊರಬರೋ ಸೂಚನೆ ಕಾಣ್ಲಿಲ್ಲ. ಹಾಗಾಗಿ ನಿಮ್ಮನ್ನು ಎಚ್ಚರಿಸೋಕೆ ಈ ಪ್ಲಾನ್..." ನಕ್ಕು ನುಡಿದಿದ್ದ. 

"ಸೋ ನೀವೂ ಮುಂಬೈವಾಸಿಯಾ?" ಕೇಳಿದ್ದವನಿಗೆ ತನ್ನ ಹಾಗೂ ತನ್ನ ಕುಟುಂಬದವರ ಬಗ್ಗೆ ಏಕೆ ಹೇಳಿದಳೋ ವಿದಿಶಾಳಿಗೂ ತಿಳಿಯದು. ಆದರೆ ಅವನು, ಅವನ ಆತ್ಮೀಯತೆ ಅವನೊಂದಿಗೆ ಮಾತನಾಡಲು ಪ್ರೇರೇಪಿಸಿರಬಹುದೇನೋ.....

ಅವನೂ ತನ್ನ ಹಾಗೂ ತನ್ನ ಕುಟುಂಬದ ಬಗ್ಗೆ ಅವಳಲ್ಲಿ ಹೇಳಿದ್ದ. ಅನಂತ್ ವಿಹಾರಿ ಹಾಗೂ ನಿರ್ಮಲಾ ದಂಪತಿಗಳ ಒಬ್ಬನೇ ಮಗ ಹೃಷಿ. ಅವನ ತಂದೆ IFS ಅಧಿಕಾರಿ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಅವರ ನಿಯೋಜನೆ. ನಿರ್ಮಲಾ ಗೃಹಿಣಿ. ಅಪ್ಪ ಅಮ್ಮನಿಗೆ ಮಗನೂ ನಾಗರೀಕ ಸೇವೆಗಳ ಪರೀಕ್ಷೆ ಬರೆಯಲಿ ಎಂಬ ಆಸೆ. ಆದರೆ ಅದನ್ನೆಂದೂ ಒತ್ತಾಯವಾಗಿ ಅವನ ಮೇಲೆ ಹೇರಲಿಲ್ಲ ಅವರು. ಅವನೂ ಭಿನ್ನವಾದ ಹಾದಿಯನ್ನೇ ಆಯ್ದಕೊಂಡಿದ್ದ. ಫೋಟೋಗ್ರಫಿಯಲ್ಲಿನ ಆಸಕ್ತಿಯನ್ನೇ ಕಲಿಕೆಯನ್ನಾಗಿ ಬದಲಾಯಿಸಿಕೊಂಡಿದ್ದ. ವಿಶ್ವದ ಪ್ರತಿಷ್ಠಿತ ಫೋಟೋಗ್ರಾಫಿ ಕೇಂದ್ರಗಳಲ್ಲಿ ಒಂದಾದ ಮುಂಬೈನ "ಸರ್ ಜೆಜೆ ಸ್ಕೂಲ್ ಆಫ್ ಅಪ್ಲೈಡ್ ಆರ್ಟ್ಸ್" ನಲ್ಲಿ ಮೆರಿಟ್ ಸೀಟ್ ಗಿಟ್ಟಿಸಿಕೊಂಡು, ಫೋಟೋಗ್ರಫಿಯನ್ನು ವಿಶೇಷ ಪರಿಣಿತಿ ವಿಷಯವಾಗಿ ಆಯ್ದುಕೊಂಡು ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಡಿಗ್ರಿ ಪಡೆದಿದ್ದ. ಜೊತೆಗೆ ಸ್ವಿಟ್ಜರ್ಲ್ಯಾಂಡ್ ನ "ವಿವೇ ಸ್ಕೂಲ್ ಆಫ್ ಫೋಟೋಗ್ರಫಿ" ಯಲ್ಲಿ ಒಂದು ವರ್ಷದ ವಿಶೇಷ ತರಬೇತಿ ಪಡೆದಿದ್ದ. ಪ್ರತಿಷ್ಟಿತ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಫೆಲೋಶಿಪ್ ಪಡೆಯುವ ಕನಸು ಅವನದು. 'ವೈಲ್ಡ್ ಲೈಫ್' ವಿಭಾಗದಲ್ಲಿ ಬಹಳಷ್ಟು ಪ್ರಶಸ್ತಿಗಳನ್ನು ಪಡೆದಿದ್ದರೂ, ಕ್ರಿಯೇಟಿವ್, ಫೈನ್ ಆರ್ಟ್ ಹಾಗೂ ಟ್ರಾವೆಲಿಂಗ್ ಫೋಟೋಗ್ರಫಿಯೆಡೆಗೆ ಜಾಸ್ತಿ ಒಲವು ಅವನಿಗೆ. ಯಾವಾಗಲೂ ಕ್ಯಾಮರಾ ಹೆಗಲಿನಲ್ಲಿಯೇ.

ಈಗಲೂ ಕ್ಯಾಮರಾ ಹೆಗಲಲ್ಲೇ ಇತ್ತು . 

ಹೀಗೆ ಆ ಪ್ರಯಾಣದಿಂದ ಆರಂಭವಾಗಿತ್ತು ಈ ಕಥೆ...... ತಾನು ತೆಗೆದ ಫೋಟೋಗಳನ್ನೆಲ್ಲಾ ಅವಳಿಗೆ ತೋರಿಸಿದ್ದ. ಅವಳಿಗೆ ತನ್ನ ಪೆನ್ ಮತ್ತು ಬುಕ್ ಕೊಟ್ಟು ತನ್ನ ಆಲ್ ಟೈಂ ಫೇವರಿಟ್ ಟಾಮ್ ಎಂಡ್ ಜೆರ್ರೀ ಕಾರ್ಟೂನ್ ಗಳನ್ನು ಬರೆಸಿಕೊಂಡಿದ್ದ. ಅವಳು ಬರೆದುಕೊಟ್ಟ ಖುಷಿಗೆ ಅವಳದೊಂದಷ್ಟು ಫೋಟೋಗಳನ್ನು ತೆಗೆದು ಮುಂಬೈಗೆ ವಾಪಾಸಾದ ಮೇಲೆ ಅಚ್ಚು ಹಾಕಿಸಿ ಕೊಡುವೆನೆಂದಿದ್ದ. ಮೊಬೈಲ್ ಸಂಖ್ಯೆಗಳು ಹಾಗೂ ಮನೆಯ ವಿಳಾಸಗಳು ವಿನಿಮಯಗೊಂಡವು.

ರೈಲು ಯಾನದಿಂದ ಪರಿಚಿತರಾದವರು ನಂತರದ ದಿನಗಳಲ್ಲಿ ಆತ್ಮೀಯರಾದರು. ಜಂಗಮವಾಣಿಯ ಕರೆಗಳು ದೂರವನ್ನು ಸಮೀಪಗೊಳಿಸಿತು. ವಿದಿಶಾಳಿಗೆ ಅವನ ನೇರ ಮಾತು, ಕಪಟವಿಲ್ಲದ ನಿಷ್ಕಳಂಕ ಮನಸ್ಸು ಹಿಡಿಸಿದರೆ ಅವನಿಗೆ ಅವಳ ಪ್ರತಿಭೆ, ಬರಿಗೈಯಲ್ಲಿ ಬಂದು ಮುಂಬೈಯಂತಹ ನಗರದಲ್ಲಿ ಸ್ವಂತ ಉದ್ಯಮವೊಂದನ್ನು ಸ್ಥಾಪಿಸಿ, ನಿರ್ವಹಿಸುತ್ತಿರುವ ಅವಳ ಸ್ಥೈರ್ಯ ಒಂದು ಅದ್ಬುತ. ಎಲ್ಲಕ್ಕಿಂತ ಇಬ್ಬರೂ ಫೈನ್ ಆರ್ಟ್ಸ್ ಓದಿದ ಸೃಜನಶೀಲ ಚಿಂತಕರು. ಮಾತನಾಡಲು ಸಾವಿರ ವಿಷಯಗಳಿದ್ದವು ಇಬ್ಬರಲ್ಲಿ. ಅವಳ ಕಂಪನಿಗೆ ಅವನು ಭೇಟಿ ನೀಡುತ್ತಿದ್ದ. ಅವನ ಎಕ್ಸಿಬಿಷನ್ನುಗಳಿಗೆ ಅವಳ ಹಾಜರಿ ಇರುತ್ತಿತ್ತು. ಒಟ್ಟಿನಲ್ಲಿ ರೈಲಿನಲ್ಲಿನ ಅಪರಿಚಿತರು ನೋಡುನೋಡುತ್ತಲೇ ಪರಮಾಪ್ತ ಸ್ನೇಹಿತರಾದರು.

ವಿದಿಶೆ ಅವನನ್ನು ತನ್ನ ತಾಯ್ತಂದೆಯರಿಗೆ ಪರಿಚಯಿಸಿದ್ದಳು. ಬೆಂಗಳೂರಿಗೆ ಬಂದಾಗಲೆಲ್ಲಾ ಅಗ್ನಿಹೋತ್ರಿಯವರ ಮನೆಗೂ ತಪ್ಪದೇ ಹಾಜರಾಗುತ್ತಿದ್ದ ಹೃಷಿ. ಹಾಗೆಯೇ ಅವನ ಅಪ್ಪ ಅಮ್ಮನಿಗೂ ವಿದಿಶೆ ಚಿರಪರಿಚಿತೆಯಾಗಿದ್ದಳು. ನಿರ್ಮಲಾರಿಗಂತೂ ಅಚ್ಚುಮೆಚ್ಚು ವಿದಿಶೆ....

ಈ ಒಡನಾಟ ನಿಧಾನವಾಗಿ ವಿದಿಶೆಯೊಳಗೊಂದು ಪುಳಕವನ್ನು ಸೃಷ್ಟಿಸತೊಡಗಿತ್ತು. ಹೃಷಿಯೆಡೆಗಿನ ಅವಳ ಭಾವನೆಗಳು ನಿಚ್ಚಳವಾದ ರೂಪ ಪಡೆಯತೊಡಗಿತ್ತು. ಅವಳ ಮೇಲಿನ ಅವನ ಮೆಚ್ಚುಗೆ, ಆತ್ಮೀಯತೆ, ಕಾಳಜಿ, ಸ್ನೇಹ ಸಹಜ ಸಲುಗೆ, ಪುಟ್ಟ ಆಲಿಂಗನ ಎಲ್ಲಕ್ಕೂ ಅವಳ ಮನ ಪ್ರೀತಿಯ ಹೆಸರಿಟ್ಟಿತು. ಅವಳ ಮನಸ್ಸನ್ನು ಅವನೇ ಆವರಿಸಿಕೊಂಡಿದ್ದ. ಅವನ ಕಣ್ಣುಗಳಲ್ಲಿ, ಮನದಲ್ಲಿ ಅವಳೆಡೆಗೆ ಒಸರುವ ಭಾವನೆಗಳಿಗೆಲ್ಲ ಒಲವೆಂದು ಹೆಸರಿಟ್ಟು, ಪ್ರೀತಿಸಿ ಸಂಭ್ರಮಿಸತೊಡಗಿದ್ದಳು ವಿದಿಶೆ....

ಅವನ್ನಲ್ಲಿ ಅದನ್ನೆಲ್ಲಾ ಹೇಳಿಕೊಳ್ಳಬೇಕೆಂಬ ಆಸೆ, ತುಡಿತ... ಆದರೆ ಅರಿಯದ ಸಂಕೋಚವೊಂದು ನಾಚಿಕೆಯ ರೂಪತಾಳಿ ಅವಳನ್ನು ಬಾಧಿಸುತ್ತಿತ್ತು...... 

ಅವಳ ತುಡಿತಗಳ ಅರಿವು ಹೃಷಿಗೆ ಆಗಲೇ ಇಲ್ಲ. ಆದರೆ ಶಾಲ್ಮಲಾರಿಗೆ ಮಗಳ ಆಂತರ್ಯ ಅರಿವಾಗತೊಡಗಿತ್ತು. ಒಮ್ಮೆ ನೇರವಾಗಿಯೇ ಕೇಳಿದ್ದರು ವಿದಿಶೆಯನ್ನು. ಅವಳಿಗೆ ಹೆತ್ತವರೊಂದಿಗೆ ಮುಚ್ಚಿಡುವ ಅಗತ್ಯವಿರಲಿಲ್ಲ. ತಾನವನನ್ನು ಇಷ್ಟಪಡುತ್ತಿರುವೆನೆಂದು ಒಪ್ಪಿಕೊಂಡಿದ್ದಳು. ಚಿದಂಬರ್ ಹಾಗೂ ಶಾಲ್ಮಲಾರಿಗೂ ಸಂತೋಷವೇ. ಹೃಷಿಯನ್ನು ಹತ್ತಿರದಿಂದ ನೋಡಿ ಬಲ್ಲವರು. ಒಳ್ಳೆಯ ಹುಡುಗ, ಉತ್ತಮ ಮನೆತನದವನು, ತಮಗೂ ಮಗನಂತೆ ಹೊಂದಿಕೊಂಡಿರುವ, ಇರುವ ಒಬ್ಬಳೇ ಮಗಳ ಭವಿಷ್ಯ ಅವನ ಕೈಯಲ್ಲಿ ಭದ್ರವೆನಿಸಿತ್ತು. ಮುಂಬೈಗೆ ತೆರಳಿ ಅವನ ಮನೆಯವರೊಂದಿಗೆ ಮಾತನಾಡಿ ಮದುವೆಯ ವಿಷಯ ಪ್ರಸ್ತಾಪಿಸೋಣ ಎಂದ ಹೆತ್ತವರನ್ನು ಅವಳೇ ತಡೆದಿದ್ದಳು.

"ಈಗ್ಲೇ ಬೇಡ ಅಮ್ಮಾ. ನಾನು ಹೃಷಿನ ತುಂಬಾ ಪ್ರೀತಿಸ್ತೀನಿ. ಆದರೆ ಅವನ ಹತ್ತಿರ ಅದನ್ನು ಎಂದೂ ಹೇಳಿಕೊಂಡಿಲ್ಲ. ಅವನೂ ನನ್ನ ಇಷ್ಟ ಪಡುತ್ತಾನೆ ಅನ್ನಿಸುತ್ತೆ. ಆದ್ರೂ ಅವನ ಹತ್ತಿರ ಮಾತಾಡದೇ ನಾವೇ ನಿರ್ಧರಿಸೋದು ತಪ್ಪಾಗುತ್ತೆ. ಮೊದಲು ನಾನು ಅವನ ಬಳಿ ಮಾತನಾಡಿ ಆಮೇಲೆ ಮುಂದಿನ ಯೋಚನೆ ಮಾಡುವ" ಯೋಚಿಸಿ ನುಡಿದಿದ್ದಳು. ಮಗಳ ಮಾತು ಹೆತ್ತವರಿಗೂ ಸರಿ ಎನಿಸಿತ್ತು.

ಆದರೆ ಆ ಸಂದರ್ಭ ಒದಗಿ ಬರಲೇ ಇಲ್ಲ. ಈ ಮಾತುಕತೆಯಾಗಿ ವಾರಗಳ ನಂತರ ಅನಂತ್ ಹಾಗೂ ನಿರ್ಮಲಾರೇ ವಿದಿಶೆಯ ಮನೆಗೆ ವಿವಾಹ ಪ್ರಸ್ತಾಪದೊಂದಿಗೆ ಬಂದಿದ್ದರು. ಮಗಳ ಮನದಿಂಗಿತ ಅರಿತಿದ್ದ ಅಗ್ನಿಹೋತ್ರಿ ದಂಪತಿಗಳಿಗೆ ಈ ಪ್ರಸ್ತಾಪ ನಿರಾಕರಿಸಲು ಯಾವ ಕಾರಣಗಳೂ ಇರಲಿಲ್ಲ. 

"ಮಕ್ಕಳು ಒಪ್ಪಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದಿದ್ದರವರು. ನಿರ್ಮಲಾರ ಸಂತಸಕ್ಕೆ ಪಾರವೇ ಇರಲಿಲ್ಲ. 

ಬೆಂಗಳೂರಿನಲ್ಲಿದ್ದ ಮೈದುನನ ಮನೆಯಲ್ಲಿ ಎರಡು ದಿನ ಉಳಿದವರು ಪಂಡಿತರನ್ನು ಕರೆಸಿ ಜಾತಕ ತೋರಿಸಿ, ನಿಶ್ಚಿತಾರ್ಥಕ್ಕೆ ಮುಂದಿನ ತಿಂಗಳಿನಲ್ಲಿ ಹಾಗೂ ಮದುವೆಗೆ ಮೂರು ತಿಂಗಳುಗಳ ನಂತರದ ಮುಹೂರ್ತವನ್ನು ನಿಗದಿಪಡಿಸಿಯೇ ಬಿಟ್ಟರು ನಿರ್ಮಲಾ. 

ಆದರೆ ಹೃಷಿಯೇ ಇರಲಿಲ್ಲ...... 

ವರ್ಕ್ ಶಾಪ್ ಒಂದರಲ್ಲಿ ಭಾಗವಹಿಸಲು ಬರ್ಲಿನ್ ನಗರಕ್ಕೆ ತೆರಳಿದ್ದ. ಅವನ ಅನುಪಸ್ಥಿತಿಯಲ್ಲಿ ಮದುವೆಯಂತಹ ಪ್ರಮುಖ ನಿರ್ಧಾರ ಸರಿಯೆನಿಸಲಿಲ್ಲ ವಿದಿಶಾಳಿಗೆ. ನಿರ್ಮಲಾರ ಆತುರಾತುರದ ನಿರ್ಧಾರಗಳು ಅವಳನ್ನು ಅಚ್ಚರಿಗೆ ದೂಡಿದವು. ಜೀವನ ಪೂರ್ತಿ ಜೊತೆಗೆ ಹೆಜ್ಜೆ ಹಾಕಬೇಕಾದವರು ನಾವು. ತಾನೆಂದೂ ನೇರವಾಗಿ ಅವನಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿಲ್ಲ. ಮದುವೆಯ ನಿರ್ಧಾರಕ್ಕೆ ಮುನ್ನ ಅವನೊಂದಿಗೆ ಒಮ್ಮೆ ಮಾತನಾಡಬೇಕಿತ್ತು ಎಂದು ಬಲವಾಗಿ ಅನಿಸಿತವಳಿಗೆ. 

"ಹೃಷಿಕೇಶ್ ಬರುವವರೆಗೂ ಕಾದರಾಗದೇ? ಮದುವೆ ದಿನ ನಿಗದಿಪಡಿಸುವಾಗ ಹುಡುಗನೇ ಇಲ್ಲದಿದ್ದರೆ ಹೇಗೆ?" ಶಾಲ್ಮಲಾ ಹೇಳಿದ್ದರು. ವಿದಿಶೆಯೂ ತಾಯಿಯೊಂದಿಗೆ ದನಿಗೂಡಿಸಿ, "ಹೌದು ಆಂಟಿ, ಅವನು ವಾಪಾಸಾದ ನಂತರ ಮದುವೆಗೆ ದಿನ ನಿಶ್ಚಯಿಸಿ. ಅಷ್ಟರಲ್ಲಿ ನಾನೂ ಒಮ್ಮೆ ಅವನೊಂದಿಗೆ ಈ ವಿವಾಹದ ಬಗ್ಗೆ ಮಾತನಾಡುವೆ" ಎಂದು ನಿರ್ಮಲಾರ ಬಳಿ ಹೇಳಿದ್ದಳು.

ಆದರೆ ನಿರ್ಮಲಾರಿಗೆ ಅಷ್ಟು ಕಾಯುವ ವ್ಯವಧಾನವಿರಲಿಲ್ಲ. ಆಕೆಗೆ ಮಗ ವಿದೇಶದಿಂದ ವಾಪಾಸಾಗುವುದರೊಳಗೆ ಎಲ್ಲಾ ನಿಷ್ಕರ್ಷೆಯಾಗಬೇಕಿತ್ತು. "ಅವನಿಗೂ ನೀನೆಂದರೆ ಇಷ್ಟವೇ ವಿದಿ. ಸದಾ ನಿನ್ನದೇ ವಿಷಯ ಅವನ ಬಾಯಲ್ಲಿ. ನಿನ್ನನ್ನೇ ಧ್ಯಾನಿಸುವ ಸದಾ ಕಾಲ. ಅವನಿಗೆ ಕೇಳದೇ ಇಲ್ಲಿಯತನಕ ಬರುವೆನೇ ನಾನು? ಅವನು ನಿನ್ನ ಒಪ್ಪಿರುವುದರಿಂದಲೇ ನಾವು ಅವನ ಪರವಾಗಿ ಇಲ್ಲಿಗೆ ಬಂದಿರುವುದು....." ಎಂದಿದ್ದರು ಪತಿಯೆಡೆಗೆ ನೋಡುತ್ತಾ. ಅನಂತ್ ಬೇರೆಡೆ ನೋಟ ಹೊರಳಿಸಿದ್ದರು. ಅವರ ಮುಖದಲ್ಲೊಂದು ವೇದನೆಯ‌ ಗೆರೆ ಸ್ಪಷ್ಟವಾಗಿತ್ತು. ಆದರೆ ನಿರ್ಮಲಾರ ಹೊರತು ಇನ್ಯಾರೂ ಅದನ್ನು ಗಮನಿಸಲಿಲ್ಲ.

ಮುಂಗಾರಿನ ಮೊದಲ ವರ್ಷಧಾರೆಗೆ ಗರಿಬಿಚ್ಚಿ ನರ್ತಿಸುವ ನವಿಲಂತಾಗಿತ್ತು ವಿದಿಶಾಳ ಮನ. ಹೃದಯದ ಬಡಿತ ವೇಗ ಪಡೆದಿತ್ತು. ಪ್ರೇಮ ಸಾಫಲ್ಯವಾಗಿ, ಅದಕ್ಕೆ ಮನೆಯವರ ಒಪ್ಪಿಗೆಯ ಮುದ್ರೆ ಬಿದ್ದು, ವಿವಾಹ ನಿಗದಿಯಾದರೆ ಆ ಪ್ರೇಮಿಗೆ ಸ್ವರ್ಗವೇ ಸಿಕ್ಕಂತೆ ಅಲ್ಲವೇ? ಅವಳ ಸಂತಸ, ಸಂಭ್ರಮ ಮೊಗದ ಕಾಂತಿಯಲ್ಲಿ ಸ್ಪುರಿಸುತ್ತಿತ್ತು. ಮದುವೆ ದಿನ ನಿಶ್ಚಯಿಸಿದ ಸಂಭ್ರಮದಲ್ಲಿ ಅಲ್ಲಿಯೇ ಸಿಹಿಯೂಟ ಮುಗಿಸಿ ತಮ್ಮ ಮನೆಯೆಡೆಗೆ ಹೊರಟರು ಅಗ್ನಿಹೋತ್ರಿಗಳು. 

ಅತ್ತ ವಿದಿಶೆ ಬಣ್ಣ ಬಣ್ಣದ ಸಿಹಿ ಕನಸುಗಳನ್ನು ಕಟ್ಟುವುದರಲ್ಲಿ ನಿರತಳಾಗಿದ್ದರೆ ಇತ್ತ ಮುಂಬೈಗೆ ವಾಪಾಸಾದ ಅನಂತ್ ಮಡದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿದಿಶೆಯ ಪ್ರೇಮಪೂರಿತ ನಯನಗಳು ಅವರನ್ನು ಜರ್ಜರಿತಗೊಳಿಸಿತ್ತು. ಆದರೆ ನಿರ್ಮಲಾ ತಾವು ಮಾಡಿದ್ದೇ ಸರಿ ಎಂದು ವಾದಿಸಿದ್ದರು.

"ನಿರ್ಮಲಾ, ಮನ್ಮಯಿ ಒಳ್ಳೆಯ ಹುಡುಗಿ. ನೀನೇಕೆ ಅವಳ ಬಗ್ಗೆ ಇಷ್ಟು ಮುನಿದಿರುವೆ? ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ವಿಧಿಸುವ, ಪೂರ್ವಾಗ್ರಹ ಪೀಡಿತ ಯೋಚನೆ ಏಕೆ? ನೀನು ಹೃಷಿಯೊಂದಿಗೆ ವಿದಿಶಾಳ ಬದುಕನ್ನೂ ಹಾಳುಗೆಡವಲು ಹೊರಟಿರುವೆ. ಆ ಹುಡುಗಿಯ ತಪ್ಪಾದರೂ ಏನು? " ಗದ್ಗದಿತರಾಗಿ ಕೇಳಿದ್ದರು ಅನಂತ್.

"ಅನಂತ್, ಮನ್ಮಯಿ ಬಗ್ಗೆ ಮಾತನಾಡಲು ನನಗಿಷ್ಟವಿಲ್ಲ. ಇನ್ನು ವಿದಿಶಾ, ಹೃಷಿಯ ಬಗ್ಗೆ...... ಈಗ ನಿಮಗೆ ಹಾಗನ್ನಿಸಬಹುದು ಅನಂತ್, ಆದರೆ ಇದೆಲ್ಲ ಸ್ವಲ್ಪ ಸಮಯವಷ್ಟೇ. ವಿದಿಶಾ ಒಳ್ಳೆಯ ಹುಡುಗಿ. ಮೇಲಾಗಿ ಹೃಷಿಯ ಆಪ್ತ ಸ್ನೇಹಿತೆ. ಅವಳಿಗೆ ನೋವು ಕೊಡಲಾರ ಅವನು. ನೀವು ನೋಡುತ್ತಿರಿ. ಎಷ್ಟು ಚೆನ್ನಾಗಿ ಹೊಂದಿಕೊಂಡು ಬಾಳುತ್ತಾರೆ ಇಬ್ಬರೂ ಅಂತ. ಇನ್ನು ಈ ಬಗ್ಗೆ ಯಾವುದೇ ಮಾತುಗಳು ಬೇಡ" ಕಟ್ಟುನಿಟ್ಟಾಗಿ ಹೇಳಿ ಎದ್ದು ಹೋಗಿದ್ದರು ನಿರ್ಮಲಾ.

"ಈಗ ನಿನಗೇನೂ ಅರ್ಥವಾಗದು. ಮುಂದೊಂದು ದಿನ ನಿನ್ನೀ ನಿರ್ಧಾರಕ್ಕೆ ಬಹಳ ಪಶ್ಚಾತ್ತಾಪ ಪಡುವ ಸಂದರ್ಭ ಬರುತ್ತದೆ. ಆದರೆ ಆಗ ಯಾರ ಬದುಕು ಎಷ್ಟು ಹಾಳಾಗಿರುವುದೋ ದೇವರೇ ಬಲ್ಲ" ಹೆಂಡತಿ ಹೋದ ದಾರಿಯನ್ನೇ ನೋಡುತ್ತಾ ಮನದಲ್ಲೇ ಅಂದುಕೊಂಡಿದ್ದರು ಅನಂತ್.

*********************

ಎಲ್ಲವೂ ನಿರ್ಮಲಾರ ಎಣಿಕೆಯಂತೆಯೇ ನಡೆದಿತ್ತು. ಹೃಷಿಯ ಮಡದಿಯಾಗಿ ಸೇರಕ್ಕಿ ಚೆಲ್ಲಿ ಬಲಗಾಲಿಟ್ಟು ಅಗಣಿತ ಕನಸುಗಳೊಂದಿಗೆ ಅವನ ಮನೆಯನ್ನು ಪ್ರವೇಶಿಸಿದ್ದಳು ವಿದಿಶೆ. ದೇವರಿಗೆ ದೀಪ ಬೆಳಗಿ ಮಗನೊಂದಿಗೆ ತಮ್ಮ ಕಾಲಿಗೆರಗಿದವಳನ್ನು ಕಂಡು ಅನಂತ್ ಕಣ್ತುಂಬಿತ್ತು. ಅವಳ ಮುಖದ ನಗು ಸದಾಕಾಲ ಹಾಗೆ ಉಳಿಯಲಿ ಎಂದು ಹಾರೈಸಿತು ಅವರ ಮನ. ನಿರ್ಮಲಾ ಖುಷಿಯಿಂದ ಅವಳನ್ನು ಆಲಂಗಿಸಿಕೊಂಡಾಗ ಅವನು ಮಾತಿಲ್ಲದೇ ಸರಿದು ಹೋಗಿದ್ದ. ಪಿಚ್ಚೆನಿಸಿತು ವಿದಿಶೆಗೆ. 

"ಮದುವೆಯ ಓಡಾಟದಲ್ಲಿ ಸುಸ್ತಾಗಿದ್ದಾನೆ" ಸಮಜಾಯಿಷಿ ನೀಡಿದರು ಆಕೆ. ಸಣ್ಣಗೆ ನಕ್ಕಳು ವಿದಿಶೆ. ಆದರೆ ಮನದ ಮೂಲೆಯಲ್ಲಿ ಎಲ್ಲೋ ಅಪಸ್ವರದ ತಂತುವೊಂದು ಮಿಡಿಯತೊಡಗಿತ್ತು. ಈ ವಿವಾಹ ನಿಗದಿಯಾದಲ್ಲಿಂದ ಹೃಷಿ ಬದಲಾಗಿದ್ದು ಅವಳ ಗಮನಕ್ಕೆ ಬಂದಿತ್ತು. ಈ ಮೂರು ತಿಂಗಳಲ್ಲಿ ಅವನು ಅವಳನ್ನು ಭೇಟಿಯಾಗಿರಲಿಲ್ಲ. ಸಂದೇಶಗಳಿಗೂ ಸರಿಯಾದ ಪ್ರತಿಕ್ರಿಯೆ ಇರಲಿಲ್ಲ. ಕರೆ ಮಾಡಿದರೆ ಅದೂ ಇದೂ ಮಾತನಾಡಿ, ಕೆಲಸದಲ್ಲಿರುವೆನೆಂದು ಹೇಳಿ ಫೋನಿಡುತ್ತಿದ್ದ. ಅವನ ಚಟುವಟಿಕೆಗಳ ಬಗ್ಗೆ ಅರಿವಿದ್ದ ಅವಳೂ ಅನ್ಯಥಾ ಭಾವಿಸಲಿಲ್ಲ. ಆದರೆ ಮದುವೆಯ ಶಾಸ್ತ್ರಗಳಲ್ಲೂ ಅವನು ಮನಸ್ಪೂರ್ವಕವಾಗಿ ಭಾಗವಹಿಸದಾದಾಗ ಗೊಂದಲಕ್ಕೆ ಬಿದ್ದಿದ್ದಳು ವಿದಿಶೆ. ಅವಳೊಂದಿಗೂ ಮುಖ ಕೊಟ್ಟು ಮಾತನಾಡಲು ಹಿಂತೆಗೆಯುತ್ತಿದ್ದ ಪರಿ ಸೋಜಿಗ ಹುಟ್ಟಿಸಿತ್ತು. ಈಗ ಅವನ ನಡವಳಿಕೆ ಮತ್ತಷ್ಟು ಸಂಶಯಾಸ್ಪದ.

ನಿರ್ಮಲಾ ಅವಳನ್ನು ಹೃಷಿಯ ಕೋಣೆಗೆ ಕರೆದೊಯ್ದು, ಫ್ರೆಶ್ ಆಗಿ ಊಟಕ್ಕೆ ಕೆಳ ಬರಲು ತಿಳಿಸಿ ಹೋದರು. ಅವನ ಸುಳಿವಿರಲಿಲ್ಲ. ತನ್ನಿನಿಯನ ಕೋಣೆಯನ್ನೇ ಅವಲೋಕಿಸಿದಳು. ಅವನ ಅಭಿರುಚಿಗೆ ತಕ್ಕಂತೆ ಸುಂದರವಾಗಿತ್ತು. ಆಳೆತ್ತರದ ರಾಧಾಕೃಷ್ಣರ ಸುಂದರ ಮೂರ್ತಿ ಮನಸೆಳೆಯಿತು. ಅವಳಿಗಿಷ್ಟ ರಾಧಾಕೃಷ್ಣರ ದೈವಿಕ ಪ್ರೇಮ... ಅವಳ ಹಾಗೂ ಹೃಷಿಯ ಪ್ರೇಮವೂ ಹಾಗೆಯೇ.....!! ನಸುನಗು ಮೂಡಿತು ಮೊಗದಲ್ಲಿ.....

ಗೋಡೆಯ ತುಂಬಾ ಅವನೇ ತೆಗೆದ ಫೋಟೋಗಳು.... ಚಂದವಾಗಿ ವಿನ್ಯಾಸಗೊಳಿಸಿ ಜೋಡಿಸಿದ್ದ. ಅದರ ಮಧ್ಯದಲ್ಲಿ ತನ್ನದೇ ಭಾವಚಿತ್ರ ಕಂಡಾಗ ಮನ ಹೂವಾಯಿತು. ತಮ್ಮ ಮೊದಲನೇ ಭೇಟಿಯಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ಸಿನಲ್ಲಿ ತೆಗೆದ ಫೋಟೋ....ಅದರ ಸುತ್ತ ಅವಳೇ ಬರೆದು ಕೊಟ್ಟಿದ್ದ ಟಾಮ್ ಎಂಡ್ ಜೆರ್ರೀ ಕಾರ್ಟೂನ್.... ಅವಳ ಗೊಂದಲ, ಬೇಸರ ಎಲ್ಲಾ ಹೇಳಹೆಸರಿಲ್ಲದಂತೆ ಓಡಿತ್ತು.

"ವಿದಿ, ಊಟಕ್ಕೆ ಬಾರಮ್ಮಾ...." ಅತ್ತೆಯ ಕೂಗು ಕೇಳಿ ತನ್ನ ಸಂತಸದ ಲಹರಿಯನ್ನು ಅಲ್ಲೇ ನಿಲ್ಲಿಸಿ ಬೇಗಬೇಗನೆ ಬಟ್ಟೆ ಬದಲಿಸಿ, ಫ್ರೆಶ್ ಆಗಿ ಕೆಳಗೋಡಿದ್ದಳು. ಇಬ್ಬರನ್ನೂ ಒಟ್ಟಿಗೆ ಕೂರಿಸಿ ಬಡಿಸಿದ್ದರು. ಆಗಲೂ ಮಾತನಾಡಲಿಲ್ಲ ಅವನು. ಊಟವಾದ ಮೇಲೆ ಅಡುಗೆಮನೆಯಲ್ಲಿ ಒಂದಿಷ್ಟು ಹರಟಿದಳು ಅತ್ತೆಯೊಂದಿಗೆ. ಅಪ್ಪ ಅಮ್ಮನಿಗೆ ಕರೆ ಮಾಡಿ ಮಾತನಾಡಿದಳು.

ಅವಳ ಕೈಯಲ್ಲಿ ಹಾಲಿನ ಲೋಟ ಕೊಟ್ಟು ಕೋಣೆಗೆ ಕಳಿಸುವ ಮುನ್ನ, "ವಿದಿ ಪುಟ್ಟಾ, ಅವನು ಮದುವೆ, ಓಡಾಟ ಅಂತ ಸುಮಾರು ದಿನದಿಂದ ಸುಸ್ತಾಗಿದ್ದಾನೆ. ಸರಿ ಊಟ, ತಿಂಡಿ, ನಿದ್ರೆ ಬೇರೆ ಇಲ್ಲ. ಆ ಸಿಟ್ಟಲ್ಲಿ ಏನಾದರೂ ಹೇಳಿದರೆ ಬೇಸರಿಸಬೇಡ ಮಗಳೇ" ಎಂದಿದ್ದರು ನಿರ್ಮಲಾ. ಸರಿಯೆಂದು ತಲೆಯಾಡಿಸಿ ಕೋಣೆಗೆ ಬಂದಿದ್ದಳು. 

ರಾಧಾಕೃಷ್ಣ ವಿಗ್ರಹವನ್ನೇ ತದೇಕಚಿತ್ತನಾಗಿ ನೋಡುತ್ತಿದ್ದವನು ವಿದಿಶಾಳ ಆಗಮನದ ಅರಿವಾಗಿ ತಿರುಗಿದ್ದ. ಕೈಯಲ್ಲಿದ್ದ ಹಾಲನ್ನು ಅವನೆಡೆಗೆ ಚಾಚಿ ನಸುನಕ್ಕಳು.

"ನನಗೆ ಬೇಡ ವಿದಿ, ನೀನು ಕುಡಿ.ತುಂಬಾ ಸುಸ್ತಾಗಿದೆ. ನಾನು ಮಲಗ್ತೀನಿ" ಎಂದವ ಅವಳ ಪ್ರತಿಕ್ರಿಯೆಗೂ ಕಾಯದೇ ಪಕ್ಕದ ಸ್ಟಡೀ ರೂಮಿಗೆ ಹೋಗಿ ಬಾಗಿಲೆಳೆದು ಕೊಂಡಿದ್ದ. ಹಾಲಿನ ಗ್ಲಾಸ್ ಕೈಯಲ್ಲಿಯೇ ಇತ್ತು ಅಣಕಿಸುವಂತೆ. ಅವಳಿಗೂ ಕುಡಿಯುವ ಮನಸ್ಸಾಗಲಿಲ್ಲ. ಅಲ್ಲೇ ಟೇಬಲ್ಲಿನ ಮೇಲೆ ಮುಚ್ಚಿಟ್ಟು ಮಲಗಿದಳು. ಸುಸ್ತಾಗಿದ್ದ ದೇಹ, ಮನಸ್ಸನ್ನು ನಿದ್ರೆ ಬೇಗನೆ ಅಪ್ಪಿತು.

ಸೂರ್ಯನ ಕಿರಣಗಳು ಅವಳನ್ನು ಸವರಿದಾಗ ಎಚ್ಚರವಾಗಿತ್ತು. ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಸೀರೆಯುಟ್ಟು ತಯಾರಾಗಿ ಪಕ್ಕದ ರೂಮಿನಲ್ಲಿ ಇಣುಕಿದ್ದಳು. ಹೃಷಿ ಇರಲಿಲ್ಲ. ಕೆಳಗೆ ಹೋಗಿರಬಹುದೇನೋ ಎಂದುಕೊಂಡಳು. ಲೋಟದಲ್ಲಿದ್ದ ಹಾಲು ಒಡೆದಿತ್ತು. ಮನಸ್ಸುಗಳು ಒಡೆಯುವ ಸೂಚನೆಯಾಗಿತ್ತಾ.....? ಅದನ್ನು ವಾಷ್ ಬೇಸಿನ್ನಿಗೆ ಚೆಲ್ಲಿ ಖಾಲಿ ಲೋಟ ಹಿಡಿದು ಕೆಳಬಂದಿದ್ದಳು.

ಅಡುಗೆ ಕೋಣೆಯಲ್ಲಿದ್ದ ಅತ್ತೆಯ ಜೊತೆ ಸೇರಿದ್ದಳು ಉಪಹಾರದ ತಯಾರಿಗೆ. ತಿಂಡಿ ಮುಗಿದು ಊಟವಾಗಿ ಸಂಜೆಯ ಟೀ ಸಮಯ ಸರಿದು, ರಾತ್ರಿಯ ಊಟಕ್ಕೂ ನಲ್ಲನ ಸುಳಿವಿಲ್ಲ. ಬೇಸರವೆನಿಸಿತು ಅವಳಿಗೆ. ಕೆಲಸದ ಮೇಲೆ ಹೋಗಿರುವನೆಂದರು ಅತ್ತೆ. ಆದರೆ ಮಾವನ ಮುಖದಲ್ಲೇನೋ ನೋವು ಪ್ರತಿಫಲಿಸಿತ್ತು.

ರೂಮಿಗೆ ಬಂದು ನೆಪಕ್ಕೊಂದು ಪುಸ್ತಕ ಹಿಡಿದು ಕಾ‌ದು ಕುಳಿತಳು. ಅವಳಿಗೆ ನಿದ್ರೆಯ ಜೊಂಪು ಹತ್ತುವವರೆಗೂ ಅವನು ಬಂದಿರಲಿಲ್ಲ. ಬೆಳಿಗ್ಗೆ ಎಚ್ಚರವಾದಾಗ ಗಕ್ಕನೆ ಎದ್ದು ಪಕ್ಕದ ಕೋಣೆಯಲ್ಲಿ ನೋಡಿದಳು... 

ಊಹೂಂ...... ಇಲ್ಲ......

ಮತ್ತೆ ಅಂದೂ ಅದೇ ಪುನರಾವರ್ತನೆ...... ವಾರಪೂರ್ತಿ ಹೀಗೆ ಕಳೆಯುವುದರಲ್ಲಿ ಸೋತು ಹೋದಳು ವಿದಿಶೆ. ಇಡೀ ವಾರದಲ್ಲಿ ಅಪರೂಪಕ್ಕೆ ನಾಲ್ಕು ಬಾರಿ ಸಿಕ್ಕಿದ್ದ. ಒಂದು ನಗುವಿಲ್ಲ, ಮಾತಿಲ್ಲ, ಕಥೆಯಿಲ್ಲ... ಕಲ್ಲನ್ನೂ ಮಾತನಾಡಿಸಬಲ್ಲ ಮಹಾ ಮಾತುಗಾರ ಮೌನ ತಳೆದಿದ್ದ... ಇನ್ನೂ ಸುಮ್ಮನಿರಲು ಸಾಧ್ಯವಿಲ್ಲವೆನಿಸಿತು ವಿದಿಶೆಗೆ....

ಅಂದು ಪಟ್ಟು ಹಿಡಿದು ಕಾಯ್ದು ಕೂತಿದ್ದಳು. ಅವನು ಕೋಣೆಗೆ ಬಂದಾಗ ಮುಂಜಾನೆ ಎರಡರ ಜಾವ... ಹಾಸಿಗೆಗೊರಗಿ ಕುಳಿತ್ತಿದ್ದವಳನ್ನು ಕಂಡು ಬೆಚ್ಚಿದ್ದ. ಅವನು ಬಾಯ್ತೆರೆಯುವ ಮುನ್ನವೇ ಬಳಿಬಂದು ಅವನ ಕೈ ಹಿಡಿದವಳು,

"ನನ್ನಿಂದ ಏನಾದ್ರೂ ತಪ್ಪಾಗಿದೆಯಾ ರಿಷಿ? ಒಂದು ವಾರದಿಂದ ನಿನ್ನ ವರ್ತನೆ ನಂಗೆ ಹುಚ್ಚು ಹಿಡಿಸ್ತಿದೆ. ಕೊನೆ ಪಕ್ಷ ಯಾಕೆ ಹೀಗೆ ಮಾಡ್ತಿದ್ಯಾ ಅಂತಾದ್ರೂ ಹೇಳೋ..." ಆರ್ತಳಾಗಿ ಕೇಳಿದವಳ ಕಣ್ಣಲ್ಲಿ ನೀರಿತ್ತು. ಅವನ ಮನ ದ್ರವಿಸಿತ್ತು. ತನ್ನ ಜೀವದ ಗೆಳತಿ, ಪರಮಾಪ್ತ ಸ್ನೇಹಿತೆ ತನ್ನಿಂದಾಗಿ ಕಣ್ಣೀರು ಸುರಿಸುವುದು ಕಂಡು ಚಲಿಸಿ ಹೋಗಿದ್ದ. ಅಲ್ಲೇ ಸೋಫಾದ ಮೇಲೆ ದೊಪ್ಪನೆ ಕುಸಿದವನು, " ನೀನು ನನ್ನ ಮದುವೆಯಾಗೋಕೆ‌ ಒಪ್ಪಿಕೋಬಾರದಿತ್ತು ವಿದಿ.... ಅಟ್ಲೀಸ್ಟ್ ಅದಕ್ಕೆ ಮುಂಚೆ‌ 'ನಿಂಗೆ ಈ ಮದುವೆ ಇಷ್ಟಾನಾ ಹೃಷಿ' ಅಂತ ನನ್ನನ್ನು ಒಂದು ಮಾತು ಕೇಳಬೇಕು ಅನ್ನಿಸಲೇ ಇಲ್ವಾ ನಿನಗೆ" ಎಂದುಬಿಟ್ಟ.

ವಿದಿಶೆ ನಿಸ್ತೇಜಳಾದಳು. ಅವನಿಂದ ಇಂತಹ ಮಾತನ್ನು ನಿರೀಕ್ಷಿಸಿರಲಿಲ್ಲ ಆಕೆ. ತಲೆ ತಿರುಗಿದಂತೆ ಅನಿಸಿದಾಗ ಕಷ್ಟಪಟ್ಟು ಗೋಡೆಗೆ ಒರಗಿದವಳು ಅಲ್ಲೇ ಕುಸಿದಳು. ನೆಲ ಸೇರುವ ಮುನ್ನವೇ ಹಿಡಿದುಕೊಂಡ. ನಿಧಾನಕ್ಕೆ ನಡೆಸಿಕೊಂಡು ಬಂದು ಮಂಚಕ್ಕೆ ಒರಗಿಸಿ ಅವಳೆದುರು ಕುಳಿತಿದ್ದ.

"ಹೃಷಿ..... ನಾನು...... ನಾನೆಂದರೆ..... ನಿನಗಿಷ್ಟ ಇಲ್ಲವೇ?" ಹೃದಯ ಕೈಯಲ್ಲಿ ಹಿಡಿದು ಕೇಳಿದ್ದಳು. ಅವನು ಉತ್ತರಿಸದಾದ....

'ನಿನ್ನೊಳು ಅನುರಾಗವಿಲ್ಲ' ಎನ್ನುವ ಮಾತೊಂದ ನುಡಿಯಬೇಡವೋ ನಲ್ಲ......

ನಿನ್ನ ಧ್ಯಾನದೊಳು ಲೀನವಾಗುವ ಪರವಶತೆಯ ಹೊರತು ಬೇರೇನೂ ನನಗೆ ಸಲ್ಲ......

ಈ ನಿನ್ನ ಕಾಷ್ಠ ಮೌನದ ಇರಿತ ಕೊಲ್ಲುತಿಹುದೆನ್ನನು.....

ಹಿಡಿಪ್ರೀತಿ ಬಯಸಿರುವೆ ಉಸಿರೇ...ನೀಡಿ ಉಳಿಸೆನ್ನನು.....

"ಮದುವೆ ನಿಶ್ಚಯ ಮಾಡಲು ಅತ್ತೆ ಗಡಿಬಿಡಿ ಮಾಡಿದಾಗಲೇ ನಾನು ಹೇಳಿದ್ದೆ. 'ಹೃಷಿ ಬರುವವರೆಗೆ ಕಾಯೋಣ, ನಾನೊಮ್ಮೆ ಅವನ ಬಳಿ ಮಾತನಾಡುವೆ' ಎಂದು. ಆದರೆ ಅವರು ನೀನೇ ಒಪ್ಪಿ ಅವರನ್ನು ಕಳಿಸಿರುವೆ ಎಂದರು. ನೀನೀಗ ಹೀಗೆ ಹೇಳುತ್ತಿರುವೆ. ಯಾವುದು ಸತ್ಯ ಹೇಳಿಬಿಡೋ ಹೃಷಿ.... ನನ್ನ ಕರೆಗಳಿಗೆ, ಸಂದೇಶಗಳಿಗೂ ಸರಿಯಾದ ಪ್ರತಿಕ್ರಿಯೆ ನೀಡಲಿಲ್ಲ ನೀನು. ಇಷ್ಟು ದಿನದ ಮೌನ ಸಾಕಾಗಿದೆ.... ಈಗ ನನ್ನೆದುರು ಕುಳಿತಿರುವವನು ನನ್ನ ಹೃಷಿಯೇ ಹೌದಾ? ಅನ್ನುವ ಅನುಮಾನ.... ತುಂಬಾ ಭಯವಾಗುತ್ತಿದೆ ಕಣೋ.... ಪ್ಲೀಸ್ ಮಾತಾಡು, ಏನಾದ್ರೂ ಹೇಳೋ..." ಗೋಗರೆದಳು.

"ಈ ಮದುವೆ ಖಂಡಿತಾ ನನಗಿಷ್ಟವಿರಲಿಲ್ಲ ವಿದಿ......!!"

ಅಂತೂ ಅವನು ಮೌನ ಮುರಿದಿದ್ದ ಅವಳಿಚ್ಛೆಯಂತೆ.......

ಆದರೆ ಅವನಾಡಿದ ಮಾತು......? 

ಅದಕ್ಕಿಂತಲೂ ಅವನ ಮೌನವೇ ಸಹನೀಯವಿತ್ತಲ್ಲವೇ ವಿದಿಶೆಗೆ?

ತುಸು ಮೌನದ ನಂತರ, ಅವಳ ಕಾಲ ಬುಡದಲ್ಲಿ ಕುಳಿತು ಕೈಗಳನ್ನು ಹಿಡಿದುಕೊಂಡವನು ಮಾತು ಮುಂದುವರೆಸಿದ್ದ.

"ನೀನು ನನ್ನ ಜೀವದ ಗೆಳತಿ, ಬದುಕು ನೀಡಿದ ವರ, ನನ್ನ ಬೆಸ್ಟ್ ಫ್ರೆಂಡ್ ನೀನು. ಆದರೆ ನನ್ನ ಬಾಳಸಂಗಾತಿಯನ್ನಾಗಿ ಮಾತ್ರ ನಿನ್ನನ್ನು ಸ್ವೀಕರಿಸಲಾರೆ ವಿದಿ....... ನನ್ನ ಹೃದಯ ಮಂದಿರದಲ್ಲಾಗಲೇ ಇನ್ನೊಬ್ಬಳನ್ನು ಪ್ರತಿಷ್ಟಾಪಿಸಿಬಿಟ್ಟಿರುವೆ. ನನ್ನುಸಿರು ನಿಲ್ಲುವವರೆಗೂ ಅವಳ ಪ್ರತಿಮೆ ಅಲ್ಲಿಂದ ಕದಲದು. ಸಾಧ್ಯವಾದಲ್ಲಿ ನನ್ನನ್ನು ಕ್ಷಮಿಸಿಬಿಡು ಗೆಳತೀ....." ಅವಳ ಕೈಗಳನ್ನು ಕಣ್ಣಿಗೊತ್ತಿ ನುಡಿದಿದ್ದ.

ಅವಳೇನು ಹೇಳಿಯಾಳು? ಕನಸು ಒಡೆದಿತ್ತು....... ನುಚ್ಚುನೂರಾಗಿದ್ದ ಹೃದಯದ ಚೂರುಗಳು ಒಂದೆಡೆ ರಾಶಿ ಹಾಕಲಾರದಷ್ಟು ದೂರದೂರ ಹರಡಿದ್ದವು......

'ತಪ್ಪು ನಿನ್ನದೇ.....!!' ಮನ ಸಾರಿ ಸಾರಿ ಹೇಳಿತು.

'ಹೌದು, ತಪ್ಪು ನನ್ನದೇ. ಅವನೆಂದೂ ನನ್ನ ಪ್ರೀತಿಸುವೆನೆಂದು ಹೇಳಲಿಲ್ಲ. ಅವನ ಶುದ್ಧ ಸ್ನೇಹವನ್ನು ಪ್ರೇಮವೆಂದು ಭ್ರಮಿಸಿದವಳು ನಾನೇ ಅಲ್ಲವೇ..... ನನ್ನ ಪ್ರೇಮವನ್ನು ಅವನ ಬಳಿ ಹೇಳಲೂ ಇಲ್ಲ. ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ....ಆದರೂ ಅತ್ತೆಯೇಕೆ ಹೀಗೆ ಮಾಡಿದರು?' ಜರ್ಜರಿತ ಮನಸ್ಸು ಮನ ಮಂಥನದಲ್ಲಿ ತೊಡಗಿತು. 

ಅವಳ ಪ್ರಶ್ನೆಗಳಿಗೆಲ್ಲ ಉತ್ತರವೆಂಬಂತೆ ಮಾತನಾಡಿದ್ದ ಹೃಷಿ.....,

ತನ್ನ ಪ್ರೇಮ ಕಥೆಯನ್ನು ಹೇಳಿದ್ದ......

ಆ ಕಥೆಯಲ್ಲಿ ವಿದಿಶೆಯಿರಲಿಲ್ಲ.......!!!! 

ಅಲ್ಲಿದ್ದವಳು ಮನ್ಮಯಿ........

ಮನ್ಮಯಿ...

ಆ ಹೆಸರು ಕೇಳಿದ್ದೇ ತಲೆ ಎತ್ತಿದಳು ವಿದಿಶೆ.....

ಅವಳು ಮನ್ಮಯಿಯ ಹೆಸರನ್ನು ಅವನ ಬಾಯಲ್ಲಿ ಬಹಳಷ್ಟು ಬಾರಿ ಕೇಳಿದ್ದಳು. ವಿದಿಶೆಯ ಬಳಿ ಮಾತನಾಡುವಾಗ ಆಗಾಗ ಮನ್ಮಯಿಯ ವಿಷಯ ಬಂದುಹೋಗುತ್ತಿತ್ತು. ಅವಳು ಅವನ ಸ್ನೇಹಿತೆ ಎಂದೇ ಭಾವಿಸಿದ್ದಳು. ಆ ಬಗ್ಗೆ ಎಂದೂ ಹೆಚ್ಚು ಗಮನ ಹರಿಸಿರಲಿಲ್ಲ.

ಈಗ..... 

ಅದೇ ಮನ್ಮಯಿ......

ಮನ್ಮಯಿ........ ಹೃಷಿಕೇಶನ ಮನದರಸಿ, ಒಲವಿನೊಡತಿ, ಪ್ರೀತಿ, ಜಗತ್ತು.... ಎಲ್ಲವೂ ಅವಳೇ...... ಅವರಿಬ್ಬರದ್ದು ಆರು ವರ್ಷಗಳ ಪರಿಚಯ. 

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವಳು. ಕುಡಿತ, ಜಗಳ, ಹೊಡೆದಾಟಗಳನ್ನೇ ಬದುಕಾಗಿಸಿಕೊಂಡಿದ್ದ ಅವಳಪ್ಪ ತನ್ನ ಹೆಂಡತಿಯನ್ನೇ ಕೊಲೆಗೈದು ಜೀವಾವಧಿ ಶಿಕ್ಷೆಯೊಂದಿಗೆ ಜೈಲಿನಲ್ಲಿ ಆರಾಮಾಗಿದ್ದ. ಆದರೆ ನಿಜ ಅರ್ಥದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು ಮನ್ಮಯಿ. ಕೊಲೆಗಾರನ ಮಗಳೆಂಬ ಪಟ್ಟ ಹೊತ್ತು, ಒಂಟಿ ಹೆಣ್ಣು ಈ 'ಸಜ್ಜನರ ಸಮಾಜ'ದಲ್ಲಿ ಬದುಕುವುದು ಸುಲಭವೇ? ಮೊದಲು ಹೊಟ್ಟೆ ಹೊರೆಯಲೊಂದು ಉದ್ಯೋಗ ಬೇಕಿತ್ತು. ಉದ್ಯೋಗ ಕೊಡಲೇನೋ ಹಲವರು ನಾ ಮುಂದು ತಾ ಮುಂದು ಎಂದು ಬರುವರು. ಆದರೆ ಅವರ ಉದ್ದೇಶಗಳು ಹಸಿದ ಕಣ್ಣುಗಳ ಕಾಮನೆಯಲ್ಲಿ ಸ್ಪಷ್ಟ.... ಅಂತಹವರಿಂದ ತಪ್ಪಿಸಿಕೊಂಡು ಒಂದು ಸುರಕ್ಷಿತ ತಾಣದ ನಿರೀಕ್ಷೆಯಲ್ಲಿದ್ದವಳಿಗೆ ದೇವರು ದಾರಿ ತೋರಿದ್ದ. ತಾಯಿ ಕಲಿಸಿದ್ದ ಚೂರುಪಾರು ಸಂಗೀತ ಕೈ ಹಿಡಿದಿತ್ತು. 'ಮಾಝೀ಼ ಆಯೀ' ಎಂಬ ಅನಾಥ ಮಕ್ಕಳ ಆಶ್ರಮದಲ್ಲಿ ಮಕ್ಕಳಿಗೆ ಸಂಗೀತ ಪಾಠ ಹೇಳುವ ಕೆಲಸ ಮನಕ್ಕೂ ತೃಪ್ತಿ ನೀಡಿತ್ತು. ಇವಳ ಹಿನ್ನೆಲೆ ತಿಳಿದವರು ಅಲ್ಲೇ ಉಳಿದುಕೊಳ್ಳಲೂ ವ್ಯವಸ್ಥೆ ಮಾಡಿಕೊಟ್ಟು ಉಪಕರಿಸಿದ್ದರು. 

ಆ ಅನಾಥಾಶ್ರಮದ ಹದಿನೈದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರದ ವತಿಯಿಂದ ನಾಲ್ಕು ದಿನಗಳ ಛಾಯಾಗ್ರಹಣದ ತರಬೇತಿ ಶಿಬಿರ ಏರ್ಪಡಿಸಿದ್ದಾಗ ತರಬೇತುದಾರರಾಗಿ ಹೋಗಿದ್ದವರಲ್ಲಿ ಹೃಷಿಯೂ ಇದ್ದ. ಅಲ್ಲಿಂದಲೇ ಮನ್ಮಯಿಯ ಪರಿಚಯವಾಗಿದ್ದು ಅವನಿಗೆ. ಆ ಪರಿಚಯವನ್ನು ಅವಳು ಕೇವಲ ಪರಿಚಯವನ್ನಾಗಿಯೇ ಉಳಿಸಲು ಬಯಸಿದ್ದಳು. ಸಮಾಜದ ಅರಿವಿದ್ದ ಪ್ರಾಜ್ಞೆ. ಜಗತ್ತಿನ ಕಠೋರ ನೀತಿ ನಿಯಮಗಳ ಅರಿವಿತ್ತು ಅವಳಿಗೆ.

ಆದರೆ ಪ್ರೀತಿಗೆ ಇದ್ಯಾವುದರ ಹಂಗಿದೆ? ಮೊದಲ ಪರಿಚಯದಲ್ಲೇ ಅವನ ಮನದಾಳಕ್ಕೆ ಲಗ್ಗೆ ಹಾಕಿದ್ದಳಾಕೆ. ಅವನದು ಮೊದಲ ನೋಟದ ಪ್ರೀತಿಯಾದರೂ ಅವಳ ಬಗ್ಗೆ ತಿಳಿಯುತ್ತಾ ಹೋದಂತೆಲ್ಲಾ ಅವಳಲ್ಲಿ ಅನುರಕ್ತನಾಗಿದ್ದ ಹೃಷಿ. ಅವಳ ಗಾಂಭೀರ್ಯ, ತಿಳುವಳಿಕೆ, ಹಿಡಿತ ತಪ್ಪದ ನಡವಳಿಕೆ ಎಲ್ಲವೂ ಅತಿಯಾಗಿ ಪ್ರಭಾವಿಸಿದ್ದವು ಅವನನ್ನು. ಮನ್ಮಯಿ ಅವನನ್ನು ದೂರ ತಳ್ಳಲು ಶತ ಪ್ರಯತ್ನಿಸಿ ಕಡೆಗೂ ಅವನ ಪ್ರೇಮಕ್ಕೆ ತಲೆಬಾಗಲೇ ಬೇಕಾಯಿತು. ಹೀಗೆ ಏಕಮುಖ ಪ್ರೇಮ ದ್ವಿಮುಖ ಪ್ರೇಮವಾಗಿ ಬದಲಾಗಿತ್ತು. ಮನ್ಮಯಿಯನ್ನು ತಾಯ್ತುಂದೆಯರಿಗೂ ಪರಿಚಯಿಸಿದ್ದ ಸ್ನೇಹಿತೆಯೆಂದು. ಅವರೂ ಆದರಿಸಿದ್ದರು ಸಂತಸದಲ್ಲೇ. ಎಲ್ಲವೂ ಸರಿಯಾಗಿತ್ತು.

ಬದುಕಿನ ಹಳಿ ತಪ್ಪಲಾರಂಭಿಸಿದ್ದು ಆರು ತಿಂಗಳ ಹಿಂದೆ ನಿರ್ಮಲಾ ಮಗನ ಮದುವೆ ಮಾತೆತ್ತಿದಾಗ... ಅಪ್ಪ ಅಮ್ಮನಿಗೆ ನೇರವಾಗಿ ಮನ್ಮಯಿಯನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿದ್ದ. ಮನ್ಮಯಿಯ ಹಿನ್ನೆಲೆ ಕೇಳಿ ನಿರ್ಮಲಾ ಕೆಂಡಾಮಂಡಲವಾಗಿದ್ದರು. ಅಪ್ಪ ಮಗ ಅವರಿಗೆ ತಿಳಿ ಹೇಳಲು ಪ್ರಯತ್ನಿಸಿ ಸೋತಿದ್ದೊಂದೇ ಲಾಭ. ಕ್ರಿಮಿನಲ್ ಒಬ್ಬನ ಮಗಳು ಈ ಮನೆಯ ಸೊಸೆಯಾಗುವುದು ಸುತಾರಾಂ ಇಷ್ಟವಿಲ್ಲ ಅವರಿಗೆ. ಹೃಷಿ ತನ್ನ ಹಠ ಬಿಡಲು ತಯಾರಿರಲಿಲ್ಲ. ಮದುವೆಯಾದರೆ ಅವಳನ್ನೇ ಎಂದು ಪಟ್ಟು ಹಿಡಿದ. ಇದರ ಪರಿಣಾಮವಾಗಿದ್ದು ಮಾತ್ರ ಮನ್ಮಯಿಯ ಮೇಲೆ. ಅವಳನ್ನು ಭೇಟಿಯಾಗಿ ವಾಚಾಮಗೋಚರವಾಗಿ ಬೈದು ಇನ್ನೆಂದೂ ತನ್ನ ಮಗನ ಹಿಂದೆ ಮುಂದೆ ಸುತ್ತ ಬೇಡವೆಂದು ಕಟ್ಟಪ್ಪಣೆ ಮಾಡಿಬಿಟ್ಟರು ನಿರ್ಮಲಾ. ಅವಳೋ ಮೊದಲೇ ಸೂಕ್ಷ್ಮ ಮನಸ್ಸಿನವಳು..... ಅವರ ಮಾತಿನಲ್ಲೂ ಹುರುಳಿದೆ ಎನಿಸಿತ್ತು ಅವಳಿಗೆ. 

"ಇನ್ನೆಂದೂ ನನ್ನ ಭೇಟಿಯಾಗಬೇಡ. ಹಾಗೇನಾದರೂ ಹಿಂದೆ ಬಂದರೆ ನಾನು ಈ ಕೆಲಸ, ಊರು ಎರಡೂ ಬಿಡಬೇಕಾಗುತ್ತದೆ ಹೃಷಿ. ಇದೊಂದು ಮಾತು ನಡೆಸಿಕೊಡು" ಎಂದುಬಿಟ್ಟಳು. ಪ್ರೀತಿಯಂತೂ ಕೈಗೂಡಲಿಲ್ಲ ಕನಿಷ್ಠ ಪ್ರೀತಿಸಿದವಳಾದರೂ ಕಣ್ಮುಂದೆ ಇರಲೀ ಎಂದು ಅವಳ ಮಾತಿಗೆ ಒಪ್ಪಿದ್ದ. ಅದೇ ಬೇಸರಕ್ಕೆ ದೇಶಬಿಟ್ಟು ಜರ್ಮನಿಗೆ ಹೋಗಿ ಕುಳಿತ್ತಿದ್ದ. ಹೀಗೆ ಬಿಟ್ಟರೆ ಮಗ ಕೈ ತಪ್ಪುವನೆಂದು ಅರಿತಿದ್ದ ನಿರ್ಮಲಾರಿಗೆ ಮಗನ ಮದುವೆ ಮಾಡಿಬಿಟ್ಟರೆ ಕಾಲಾಂತರದಲ್ಲಿ ಎಲ್ಲವೂ ಸರಿಹೋಗುವುದು ಎನಿಸಿತ್ತು. ಮಗನಿಗೆ ವಿದಿಶೆಯಷ್ಟು ತಕ್ಕ ಜೋಡಿ ಬೇರ್ಯಾರೂ ಇಲ್ಲ ಎಂಬುದು ಅವರ ಅಭಿಮತ. ಕೂಡಲೇ ಕಾರ್ತಗತರಾಗಿದ್ದರು. ವಿದಿಶಾಳ ಮನೆಯವರ ಬಳಿ ಮಾತನಾಡಿ ಅವರ ಒಪ್ಪಿಗೆ ಸಿಕ್ಕ ಕೂಡಲೇ ಅಲ್ಲೇ ನಿಂತು ಎಲ್ಲವನ್ನೂ ನಿಗದಿಗೊಳಿಸಿದ್ದರು. ಅದಕ್ಕಾಗಿಯೇ 'ಹೃಷಿ ಬಂದ ಮೇಲೆ ನಿರ್ಧರಿಸುವ' ಎಂಬ ವಿದಿಶಾಳ ಮಾತುಗಳಿಗೆ ಪುರಸ್ಕಾರ ಸಿಗಲಿಲ್ಲ.

ಹೃಷಿ ಜರ್ಮನಿಯಿಂದ ಹಿಂದಿರುಗುವುದರೊಳಗೆ ಪರಿಸ್ಥಿತಿ ಅವನ ಊಹೆಗೂ ನಿಲುಕದಷ್ಟು ಕೈ ಮೀರಿತ್ತು. ತಾಯಿಯ ಬಳಿ ಜಗಳವಾಡಿದ. ಆದರೆ ಆಕೆ ಊಟ, ನೀರು ಬಿಟ್ಟು ಆಸ್ಪತ್ರೆ ಸೇರಿ ಮಗನನ್ನು ಒಪ್ಪಿಸುವಲ್ಲಿ ಸಫಲರಾದರು. ಹೀಗೆ ನಡೆದಿತ್ತು ಅವಳ ಮದುವೆ.

ಹೃಷಿಯ ಮಾತುಗಳು ಮುಗಿದಿದ್ದವು. ಸತ್ಯ ಕಣ್ಣೆದುರಿಗಿತ್ತು. ಅವಳಿಗೆ ಮಾತನಾಡಲು ಏನೂ ಉಳಿದಿರಲಿಲ್ಲ. ಮುಂದಿನ ಬಾಳ ಹಾದಿ ಕಗ್ಗತ್ತಲಲ್ಲಿ ಅಗೋಚರ..... ಅಳಬೇಕೆನಿಸಿತು.. ಆದರೆ ಕಣ್ಣೀರಿಗೂ ಕೋಪವೇನೋ ಅವಳ ಮೇಲೆ.... ಬಹುಶಃ ಅದಕ್ಕೂ ಅವಳು ಪ್ರೀತಿ ಕಸಿದ ಖಳನಾಯಕಿ ಎನಿಸಿರಬೇಕು.... ಜೋರಾಗಿ ನಕ್ಕಳು... ಆಗ ಉದುರಿದ್ದವು ಮುತ್ತಿನಂತಹ ಕಣ್ಣ ಹನಿಗಳು....

"ಕ್ಷಮಿಸು ವಿದಿ, ಗೆಳತಿಯಂತೆ ಆದರಿಸಬಲ್ಲೆ. ಅಂದಿಗೂ, ಇಂದಿಗೂ, ಇನ್ನೆಂದಿಗೂ ಆ ಸ್ಥಾನ ನಿನ್ನದೇ.... ನಿನ್ನೊಂದಿಗೆ ಮಾತು ಬಿಟ್ಟು ಮುನಿಸಿಕೊಳ್ಳಲಾರೆ.... ಮುಂಚಿನಂತೆಯೇ ಇರುವೆ ನಿನ್ನೊಂದಿಗೆ.... ಆದರೆ......."

"ಆದರೆ ಹೆಂಡತಿಯ ಹುದ್ದೆಯೊಂದನ್ನು ಬಯಸಬೇಡ. ಪತಿಯ ಪ್ರೀತಿಯನ್ನು ನಿರೀಕ್ಷಿಸಬೇಡ......." ಅವಳೇ ಮಾತನ್ನು ಪೂರ್ಣಗೊಳಿಸಿದ್ದಳು. ಉಸಿರೆಳೆದುಕೊಂಡು ಅವಳ ತಲೆದಡವಿ ಪಕ್ಕದ ಕೋಣೆಗೆ ಹೋಗಿಬಿಟ್ಟಿದ್ದ.

ಎದುರಿಗಿದ್ದ ರಾಧಾಕೃಷ್ಣರ ವಿಗ್ರಹ ಅಣಕಿಸಿದಂತಾಯಿತು. ಬೆಳಕು ಹರಿದು ಅವನೆದ್ದು ಬರುವವರೆಗೂ ಅದನ್ನೆ ದಿಟ್ಟಿಸುತ್ತಾ ಹಾಗೇ ಕುಳಿತ್ತಿದ್ದಳು ಕಲ್ಲಾದ ಅಹಲ್ಯೆಯಂತೆ...

ಅವನದೂ ಅದೇ ಸ್ಥಿತಿ..... ಇಡೀ ರಾತ್ರಿ ಬಿಟ್ಟ ಕಂಗಳಿಂದ ತಾರಸಿ ದಿಟ್ಟಿಸುವುದು.... ಅಲ್ಲೆಲ್ಲೋ ತುಸು ಮೈಲುಗಳ ದೂರದಲ್ಲಿ ಇನ್ನೊಬ್ಬಳಿಹಳು.... ಹಾಗೇ ಕುಳಿತು ರಾತ್ರಿ ಬೆಳಗು ಮಾಡುವವಳು.... ತಪ್ಪು ಯಾರದೋ.... ಶಿಕ್ಷೆ ಮಾತ್ರ ಮೂವರ ಪಾಲಾಗಿತ್ತು.

ವಿದಿಶೆಯ ಬದಲಾದ ನಡವಳಿಕೆ, ಚೈತನ್ಯ ಕಳೆದುಕೊಂಡ ಚಟುವಟಿಕೆಗಳು ನಿರ್ಮಲಾರಿಗೆ ಸತ್ಯ ದರ್ಶನ ಮಾಡಿಸಿತ್ತು. ಕೊನೆಗೆ ಆಫೀಸಿನ ಕೆಲಸಗಳನ್ನು ಮನವಿಟ್ಟು ಮಾಡಲಾಗದಾಗ ನಿಡುಸುಯ್ದಳು ವಿದಿಶೆ. ತಾನು ಕಂಪನಿಯನ್ನೂ ಬೆಂಗಳೂರಿಗೆ ಶಿಫ್ಟ್ ಮಾಡಿ ಅಪ್ಪ ಅಮ್ಮನ ಬಳಿ ಹೋಗುವೆನೆಂದಿದ್ದಳು. ತುಸು ಸಮಯ ನೀಡಿದರೆ ಎಲ್ಲವೂ ಸರಿಯಾಗುವುದೆಂದು ಸಮಾಧಾನಿಸಿ ಉಳಿಸಿಕೊಂಡರು ನಿರ್ಮಲಾ. ಮಗನನ್ನು ಬೈದು, ಬೇಡಿ, ಗೋಗರೆದು ಎಲ್ಲವೂ ಆಯಿತು. ಫಲಿತಾಂಶ ಶೂನ್ಯ. ತಾಯಿಯೊಂದಿಗೆ ಮಾತನ್ನೇ ನಿಲ್ಲಿಸಿದ್ದ. 

ಅತ್ತೆ ಹೇಳಿದಂತೆ ಸಮಯ ನೀಡಿದರೆ ತನ್ನನ್ನು ಸ್ವೀಕರಿಸುವನೆಂದು ಆಸೆಯಿಂದ ಕಾದಳು ವಿದಿಶೆ. ಒಂದೆರೆಡು ದಿನವಲ್ಲ..... ಸುದೀರ್ಘ ಎರಡು ಸಂವತ್ಸರಗಳು.... 730 ದಿನಗಳೆಂದರೆ ಸಾಮಾನ್ಯವಲ್ಲ... ಅದೂ ನಿದಿರೆ ರಹಿತ ರಾತ್ರಿಗಳೊಂದಿಗೆ, ಅನುಮತಿ ಬಯಸದೆ ಕಣ್ಣಿಂದ ಜಾರುವ ಹನಿಗಳೊಂದಿಗೆ.....

ಅವನೇನು ವಿದಿಶೆಯನ್ನು ನಿರ್ಲಕ್ಷಿಸುತ್ತಿರಲಿಲ್ಲ. ಹಿಂದಿನಂತೆಯೇ ಮಾತನಾಡುತ್ತಿದ್ದ, ಹೊರಗೆ ಕರೆದೊಯ್ಯುತ್ತಿದ್ದ, ಅದೇ ಸ್ನೇಹಿತನ ಆದರ ತೋರುತ್ತಿದ್ದ.... ಎಲ್ಲವೂ ಸರಿಯೇ.... ಆದರೆ ಅದರಲ್ಲಿ ಯಾಂತ್ರಿಕತೆ ಇತ್ತೇ ಹೊರತು ಜೀವಂತಿಕೆ ಇರಲಿಲ್ಲ. ಅವನು ಅತ್ಯದ್ಭುತವಾಗಿ ನಟಿಸತೊಡಗಿದ್ದ. ಅವಳಿಗದು ತಿಳಿಯುತ್ತಿತ್ತು.... ಅವನು ಪ್ರೀತಿಸದಿದ್ದರೂ ಅವಳು ಪ್ರೀತಿಸಿದಳಲ್ಲವೇ ಉಸಿರಿಗಿಂತ ಮಿಗಿಲಾಗಿ...... ಅವನ ನಟನೆಯ ಬದುಕು ತಿಳಿಯಲಾರಳೇ......? ಅವನ ಮನಸ್ಸು ಮನ್ಮಯಿಯಲ್ಲೇ ಇತ್ತು. ಅದೆಂದೂ ತನ್ನ ಬಳಿ ಸೇರದೆಂಬ ಸತ್ಯವೂ ನಿಚ್ಚಳವಾಗತೊಡಗಿತ್ತು....

ಈ ದಿನಗಳಲ್ಲಿಯೇ ರಾಧಾಪ್ರಿಯೆ ವಿದಿಶೆಗೆ ಮೊದಲಬಾರಿಗೆ ರುಕ್ಮಿಣಿಯ ಅಂತರಾಳ ವಿಶದವಾಗತೊಡಗಿತ್ತು. ಕೃಷ್ಣನೊಂದಿಗೆ ಭೌತಿಕವಾಗಿ ಇದ್ದೂ ಅವನ ಒಲವನ್ನು ಪಡೆಯಲಾರದೇ ಹೋದಳು ರುಕ್ಮಿಣಿ.....

ಅದೇ ರಾಧೆ ಕೃಷ್ಣನಿಂದ ದೂರವಿದ್ದೂ ಅವನೊಲವಿಗೆ ಅರಸಿಯಾದಳು..... ಲೋಕಕ್ಕೆ ರಾಧಾಕೃಷ್ಣರ ಪ್ರೇಮವೇ ಮಾದರಿ, ದೈವಿಕ ಪ್ರೀತಿ ... ಜನ್ಮಾಷ್ಟಮಿಯ ಸಡಗರದಲ್ಲಿ ರಾಧೆ ಕೃಷ್ಣರಂತೆ ವೇಷ ಧರಿಸಿ ನಲಿಯುವರು....... ಆದರೆ ರುಕ್ಮಿಣಿ ಎಲ್ಲಿಹಳು? ಬಹುಶಃ ಅವಳಲ್ಲೂ ನನ್ನಂತೆ ಸಾವಿರ ಪ್ರಶ್ನೆಗಳಿರಬಹುದು....ಏನಾದಳು ರುಕ್ಮಿಣಿ?

ಸಾವಿರ ಸಾವಿರ ಪ್ರಶ್ನೆಗಳು ಮನವನ್ನು ಘಾಸಿಗೊಳಿಸಿದರು ಹೃಷಿಕೇಶನದ್ದು ಅದೇ ಸಹಜ ಜೀವಂತ ನಟನೆ...

ನೋಡಿ ಸಾಕಾದಳು ವಿದಿಶಾ. ಎಲ್ಲರ ಬದುಕೂ ಹಳಿಗೆ ಬರಲಂತೂ ಸಾಧ್ಯವಿರಲಿಲ್ಲ. ಆದರೆ ಜೀವನಪರ್ಯಂತ ರಂಗದ ಮೇಲಿನ ನಾಟಕದಂತಹ ಬದುಕು ಬೇಡವಾಗಿತ್ತು ಅವಳಿಗೆ. ದೃಢ ನಿರ್ಧಾರವನ್ನು ಕೈಗೊಂಡಿದ್ದಳು. ಅದರ ಸಲುವಾಗಿಯೇ ಬೆಂಗಳೂರಿಗೆ ಬಂದಿದ್ದಳು. ಬಂದಿದ್ದ ಕೆಲಸ ಪೂರ್ಣಗೊಳಿಸಿ ಈ ನಾಟಕಕ್ಕೆ ತೆರೆಯೆಳೆಯಲು ಮುಂಬೈಗೆ ಹೊರಟಿದ್ದಳು‌. ರೈಲು ಮುಂಬೈ ನಗರವನ್ನು ಪ್ರವೇಶಿಸಿತ್ತು. ಪಾತ್ರವನ್ನು ಕಳಚುವ ಸಮಯ ಹತ್ತಿರದಲ್ಲಿತ್ತು.... 

*****************

ಹೃಷಿಕೇಶ್ ಮನೆಗೆ ಬಂದಾಗ ಮಧ್ಯರಾತ್ರಿ ಕಳೆದಿತ್ತು. ಅವನು ಆದಷ್ಟು ಮನೆಯಿಂದ ದೂರವಿರಲು ಬಯಸುತ್ತಿದ್ದ. ವಿದಿಶಾಳ ಎದುರು ಎಷ್ಟೇ ನಟಿಸಿದರೂ ಮನಸ್ಸು ಜೀವಂತಿಕೆಯನ್ನು ಕಳೆದುಕೊಂಡು ವರ್ಷಗಳೇ ಕಳೆದಿತ್ತು. ಮನ್ಮಯೀ ಇಲ್ಲದ ಬದುಕಿಗೆ ಅಸ್ತಿತ್ವವಿರಲಿಲ್ಲ. ಅದಕ್ಕೂ ಹೆಚ್ಚಾಗಿ ಅವಳೂ ಅವನಿಂದ ದೂರಾಗಿ ನೀರಿನಿಂದ ಹೊರಬಿದ್ದ ಮೀನಿನಂತೆ ನರಳುತ್ತಿರುವಾಗ ಅವನಿಗೆಲ್ಲಿಯ ನೆಮ್ಮದಿ? ದಿನಂಪ್ರತಿ ಅವಳ ಕಣ್ಣಿಗೆ ಬೀಳದೇ ದೂರದಿಂದ ಅವಳನ್ನು ನೋಡಿ ಕಣ್ತುಂಬಿಕೊಳ್ಳುವುದೇ ಬದುಕಾಗಿತ್ತು. ಜೊತೆಗೆ ಮೇಲ್ನೋಟಕ್ಕೆ ತನ್ನಂತೆಯೇ ನಟಿಸುತ್ತಾ ಆಂತರ್ಯದಲ್ಲಿ ದಿನೇ ದಿನೇ ಮೇಣದಂತೆ ಕರಗಿ ಇಲ್ಲವಾಗುತ್ತಿರುವ ಗೆಳತಿಯೊಬ್ಬಳು ಕಣ್ಣೆದುರಿಗೇ ಇದ್ದಳು.... ಅವನ ಮನ ಇಬ್ಬರನ್ನೂ ಸಂತೈಸಲಾರದ ಸ್ಥಿತಿಯಲ್ಲಿ ಸ್ವತಃ ಸಾಂತ್ವನ ಬಯಸಿತ್ತು.

ಇಂದು ಅವನ ಫೈನ್ ಆರ್ಟ್ ಫೋಟೋಗ್ರಾಫ್ ಗಳ ಪ್ರದರ್ಶನವಿತ್ತು. ಇಡೀ ದಿನ ಅದರಲ್ಲೇ ಮುಳುಗಿದ್ದ. ಮನ್ಮಯಿಯನ್ನೂ ನೋಡಿರಲಿಲ್ಲ. ಅವನ ಚೇತನವೆಲ್ಲಾ ಉಡುಗಿತ್ತು. ಕಾಲೆಳೆದುಕೊಂಡು ಮನೆಯೊಳಗೆ ಬಂದಾಗ ಹಾಲ್ ನಿಶ್ಯಬ್ದವಾಗಿತ್ತು. ತಾಯ್ತಂದೆಯರ ಕೋಣೆಯಿಂದ ಮೆಲುನುಡಿಗಳು ಅಸ್ಪಷ್ಟವಾಗಿ ಕೇಳಿಬರುತ್ತಿತ್ತು. ಆ ಬಗ್ಗೆ ಆಸಕ್ತಿಯಿಲ್ಲದೇ ಸೀದಾ ಕೋಣೆಗೆ ಬಂದಿದ್ದ.

ಎದುರಿನಲ್ಲಿ ಕಂಡ ವಿದಿಶಾಳನ್ನು ನೋಡಿ ಕಣ್ಣರಳಿಸಿದ....

"ಯಾವಾಗ ಬಂದೆ ವಿದಿ?" ಎಂದವನಿಗೆ, "ನಾನು ಬೆಳಿಗ್ಗೆಯೇ ಬಂದೆ. ನೀನಿರಲಿಲ್ಲ. ಎಷ್ಟು ಹೊತ್ತಿನಿಂದ ಕಾಯುತ್ತಿರುವೆ ಗೊತ್ತೇನು?" ಎಂದವಳ ಧ್ವನಿಯಲ್ಲಿ ವರ್ಷಗಳ ಹಿಂದೆ ರೈಲಿನಲ್ಲಿ ಭೇಟಿಯಾದ ವಿದಿಶಾ ಕಂಡಾಗ ನಸುನಕ್ಕು ಕೆನ್ನೆ ಹಿಂಡಿದ. 

"ಏನಿವತ್ತು, ತುಂಬಾ ಸಂತೋಷವಾಗಿದ್ದೀಯಲ್ಲ...." ಅವಳು ನಸುನಕ್ಕಳು ಮನದಾಳ ಮರೆಮಾಚಿ.... ಅವನನ್ನೇ ಎವೆಯಿಕ್ಕದೇ ನೋಡಿದವಳ ನಡವಳಿಕೆ ವಿಚಿತ್ರವೆನಿಸಿತು. 

"ವಿದಿ, ಆರ್ ಯು ಆಲ್ ರೈಟ್? ಯಾಕೆ ಹಾಗೆ ನೋಡುತ್ತಿರುವೆ?" 

"ನನ್ನ ಬೆಸ್ಟ್ ಫ್ರೆಂಡ್ ಎಷ್ಟು ಚೆನ್ನಾಗಿ ನಟಿಸ್ತಾನೆ ಅಂತ ನೋಡಿದೆ. ಅಳ್ಬೇಕು ಅನ್ನಿಸಿದರೂ ನಗುವುದನ್ನು, ಮನದಲ್ಲಿ ಇಲ್ಲದಿರೋ ಸಂತೋಷವನ್ನು ಮುಖದಲ್ಲಿ ಅರಳಿಸುವುದನ್ನು ಎಲ್ಲಿಂದ ಕಲಿತೆ ಹೃಷಿ....?"

"ನಿನ್ನಿಂದಲೇ ಕಲಿತಿರುವೆ ವಿದಿ, ನೀನೂ ಅದನ್ನೇ ತಾನೇ ಮಾಡೋದು....?"

"ಸರಿಯೇ....... ಈ ಮದುವೆಯಿಂದಾದ ಒಂದೇ ಒಂದು ಲಾಭವೆಂದರೆ ಇಬ್ಬರೂ ಮುಖವಾಡ ಹಾಕಿ ಬದುಕುವುದನ್ನು ಕಲಿತುಬಿಟ್ಟೆವು ಹೃಷಿ. ನಾನು ಒಂದಲ್ಲಾ ಒಂದು ದಿನ ನೀ ಮುಖವಾಡ ಕಳಚಿ ಅದೇ ಹಳೆಯ ಹೃಷಿಯಾಗಿ ನನ್ನ ಸ್ವೀಕರಿಸುವೆ ಎಂದು ಕಾದೆ.... ಆದರೆ ನೀನು ಮುಖವಾಡವನ್ನೇ ಬದುಕಿನುದ್ದಕ್ಕೂ ತೊಟ್ಟು ನಟಿಸಲು ನಿರ್ಧರಿಸಿರುವೆ..... ಸಾಕಾಯಿತು ಹೃಷಿ ಈ ನಟನೆಯ ಬದುಕು. ಇನ್ನಾಗದು. ನಾನು ಬೆಂಗಳೂರಿಗೆ ಶಾಶ್ವತವಾಗಿ ವಾಪಾಸಾಗಲು ನಿರ್ಧರಿಸಿರುವೆ.... ನನ್ನ ಕಂಪನಿಯನ್ನು ಅಲ್ಲಿಗೇ ಶಿಫ್ಟ್ ಮಾಡಿಕೊಂಡಿರುವೆ....."

"ವಿದಿಶಾ....!!!" ಅವಳ ಈ ನಡೆಯನ್ನು ನಿರೀಕ್ಷಿಸದವನಿಗೆ ಆಘಾತವಾಗಿತ್ತು.

"ವಿದಿ ಪ್ಲೀಸ್, ಡೋಂಟ್ ಡೂ ದಿಸ್... ನೀನು ನನ್ನ ಬೆಸ್ಟ್ ಫ್ರೆಂಡ್. ನೀನು ಹೀಗೆ ನನ್ನಿಂದಾಗಿ ಊರು ಬಿಟ್ಟು ಹೋಗೋದೂ ನನಗೆ ಖಂಡಿತಾ ಇಷ್ಟವಿಲ್ಲ. ನಿನ್ನ ಸ್ನೇಹ ಇಲ್ಲದೇ ನನಗೆ ಬದುಕೋಕಾಗಲ್ವೇ......" 

"ಹಾಗಿದ್ರೆ ನಿನ್ನ ಈ ತೋರಿಕೆಯ ನಟನೆಯ ಮುಖವಾಡ ಕಳಚಿ ನನ್ನನ್ನು ಒಪ್ಪಿಕೊಳ್ಳುವೆಯಾ ಹೃಷಿ.....?"

"ವಿದೀ.......!! ನೀನು ಹಾಗೂ ಮನ್ಮಯಿ ಇಬ್ಬರೂ ನನ್ನ ಬದುಕಿನಲ್ಲಿ ಉಸಿರಿನಂತೆ ಬೆರೆತಿರುವವರು. ನೀನು ಸ್ನೇಹ ಸುಧೆಯಾದರೆ ಅವಳು ಪ್ರೇಮಧಾರೆ. ನೀವಿಬ್ಬರೂ ಇದ್ದರೆ ಮಾತ್ರ ನನ್ನ ಬದುಕಿಗೊಂದು ಅರ್ಥ. ಆದರೆ ನಿಮ್ಮಿಬ್ಬರ ಸ್ಥಾನವನ್ನು ಎಂದಿಗೂ ಅದಲು ಬದಲು ಮಾಡಲಾಗದು. ದಯವಿಟ್ಟು ನನ್ನ ಅರ್ಥ ಮಾಡ್ಕೋ...... "

"ನನಗೆ ಗೊತ್ತು ಹೃಷಿ.... ಅದಕ್ಕೇ ನಾನು ಹೊರಟಿರುವುದು. ಈ ಜಾಗ ಮನ್ಮಯಿಯದ್ದು..... ಅವಳು ಬರಬೇಕೆಂದರೆ ನಾನು ತೆರವು ಮಾಡಲೇಬೇಕಲ್ಲವೇ...?" 

"ಇಲ್ಲ ವಿದಿ, ಆ ಅದೃಷ್ಟ ನಮಗಿಲ್ಲ. ಅಮ್ಮ ಮನ್ಮಯಿಯನ್ನು ಒಪ್ಪಲಾರರು...."

"ಅವರು ಒಪ್ಪಿದ್ದಾರೆ ಹೃಷಿ. ಆ ದಿನ ಒಬ್ಬ ತಾಯಿಯಾಗಿ ತಮ್ಮ ದೃಷ್ಟಿಕೋನದಲ್ಲಿ ಮಾತ್ರ ಯೋಚಿಸಿ, ನಿನ್ನ ಮನದ ಭಾವನೆಗಳನ್ನು ಅರಿಯದ್ದಕ್ಕೆ ದೊಡ್ಡ ಶಿಕ್ಷೆಯನ್ನೇ ಅನುಭವಿಸಿದ್ದಾರೆ. ಆ ಬಗ್ಗೆ ಅವರಿಗೆ ಪಶ್ಚಾತ್ತಾಪವಿದೆ. ಅವರನ್ನು ಕ್ಷಮಿಸಿಬಿಡು. ಬಾ ಕೆಳಗೆ ಹೋಗೋಣ..... ನಿನಗೊಂದು ಸರ್ಪ್ರೈಸ್ ಇದೆ....." ಅವನ ಕೈ ಹಿಡಿದು ಮಹಡಿಯಿಂದ ಕೆಳಗೆ ಬಂದಳು.

ಅವಳನ್ನೇ ಹಿಂಬಾಲಿಸಿ ಬಂದವನು ಅಲ್ಲೇ ನಿಂತು ಬಿಟ್ಟ.....

ಅಲ್ಲಿ ಮನ್ಮಯಿ ನಿಂತಿದ್ದಳು ನಿರ್ಮಲಾರೊಂದಿಗೆ....... ಅವನಿಗೆ ನಂಬಲೇ ಕಷ್ಟವಾಯಿತು. ಅಲ್ಲಿಂದ ಹೆಜ್ಜೆ ಕಿತ್ತಿಡಲಿಲ್ಲ. ವಿದಿಶೆಯೇ ಅವನ ಕೈ ಹಿಡಿದು ಮನ್ಮಯಿಯ ಬಳಿಗೆ ಕರೆತಂದವಳು ಅವನ ಕೈಯನ್ನು ಮನ್ಮಯಿಯ ಸುಪರ್ದಿಗೆ ನೀಡಿ,

"ನಿನ್ನ ಬದುಕನ್ನು ನಿನಗೇ ಮರಳಿಸಿರುವೆ ಮನ್ಮಯಿ. ನಿನ್ನ ಕಥೆಯಲ್ಲಿ ಅಪ್ಪಣೆಯಿಲ್ಲದೇ ಪ್ರವೇಶಿಸಿ ತೊಂದರೆ ಕೊಟ್ಟಿರುವೆ. ಕ್ಷಮಿಸುವೆಯಲ್ಲ? ನನ್ನವನಾಗಿದ್ದೂ ಎಂದೂ ನನ್ನವನಾಗದ ನಿನ್ನವನನ್ನು ನಿನಗೇ ಒಪ್ಪಿಸಿರುವೆ.... ಹಿತೈಷಿಯಾಗಿ ಹಾರೈಸುವೆನೇ ಹೊರತು ಇನ್ನೆಂದೂ ನಿಮ್ಮ ಕಥೆಯ ಮಧ್ಯೆ ಅಡಚಣೆಯಾಗಿ ಬರಲಾರೆ..... ಇಲ್ಲಿಗೆ ನನ್ನ ಪಾತ್ರ ಮುಗಿಯಿತು. ನಾ ಹೋಗಿ ಬರುವೇ......" ಬಾಗಿಲೆಡೆಗೆ ಹೊರಟವಳನ್ನು ನಿಲ್ಲಿಸುವ ಹಕ್ಕು ಯಾರಿಗಿತ್ತು?

ಒಂದು ಕ್ಷಣ ನಿಂತವಳು ಒಮ್ಮೆಲೇ ಅವನೆಡೆಗೆ ಧಾವಿಸಿ ಬಿಗಿದಪ್ಪಿದಳು......

ಒಂದು ಕೊನೆಯ ಬಾರಿಗೆಂಬಂತೆ...... 

ಅವಳ ತಲೆ ಸವರಿ ನೆತ್ತಿ ಚುಂಬಿಸಿದವನನ್ನು ತಲೆಯೆತ್ತಿ ನೋಡಿದಳು... ಕಣ್ಣೀರಿನೊಂದಿಗೆ ಕಲೆಸಿಹೋಗಿ ಅವನ ಬಿಂಬ ಅಸ್ಪಷ್ಟ.....

'ನೀನು ಅಂದು ಆ ರೈಲಿನಲ್ಲಿ ಪ್ರಯಾಣಿಸಬಾರದಿತ್ತು ಹೃಷಿ... ಬಂದರೂ ನನ್ನ ಕಣ್ಣಿಗೆ ಬೀಳಬಾರದಿತ್ತು. ನಾವಿಬ್ಬರೂ ಅಪರಿಚಿತರಾಗಿಯೇ ಉಳಿಯಬೇಕಿತ್ತು.....' ಮನ ಚೀರಿ ಚೀರಿ ಕೂಗುತ್ತಿತ್ತು.

"ಹೋಗ್ತೀನಿ ಹೃಷಿ....." ಎಂದವಳೆ ತಿರುಗಿ ನೋಡದೇ ಬಂದು ನಿಂತಿದ್ದ ಕ್ಯಾಬ್ ಹತ್ತಿ ಹೊರಟು ಹೋದಳು ವಿದಿಶೆ........

ಜೊತೆಗಿದ್ದರೂ ನಿನ್ನ ಸೇರದಾದೆ ನಾನು.....

ದೂರವಿದ್ದರೂ ನಿನ್ನಲ್ಲೇ ಲೀನವಾದಳು ಅವಳು.....

ಲೋಕವೆಲ್ಲಾ ಪೂಜಿಸುವುದು ನಿಮ್ಮ ಪ್ರೇಮವ ರಾಧಾಕೃಷ್ಣರದು ದೈವಿಕ ಪ್ರೇಮವೆಂದು.......

ನೀ ರಾಧೆಯ ಶ್ಯಾಮನಾದರೆ ನಾನ್ಯಾರು ಹೇಳೋ ಮಾಧವ.....

ಈ ರುಕ್ಮಿಣಿಯ ಅಳಲಿಗೆ ಕಿವುಡಾದೆ ಏಕೆ ಕೇಶವ.....

ಮುಕ್ತಾಯ

ಶನಿವಾರ, ಜೂನ್ 13, 2020

ನನ್ನ ಮರೆತ ನೀನು..... ನಿನ್ನೊಳಗಿನ ನಾನು....

ನೀನೆಂಬ ವಾಕ್ಯದೊಳಗಿನ ಪುಟ್ಟ ಪದ ನಾನು
ಕಂಡಿಕೆಗಳ ಸಂಗದಲ್ಲಿ ಮೈ ಮರೆತಿರುವೆ ನೀನು

ನೀನೆಂಬ ಸಂಪುಟದ ಪರಿವಿಡಿ ನಾನು
ಪುಟಗಳ ಸಾಮೀಪ್ಯದೊಳು ಹಿತವಾಗಿಹೆ ನೀನು

ನೀನೆಂಬ ಆಗಸದೊಳು ತೇಲುವ ಮೇಘ ನಾನು
ಬೆಳದಿಂಗಳ ಬೆಡಗಿಗೆ ಮನಸೋತಿಹೆ ನೀನು

ನೀನೆಂಬ ಶರಧಿಯಾಳದಲ್ಲಿ ಹುದುಗಿದ ಮುತ್ತು ನಾನು
ಅಲೆಗಳ ಚಿನ್ನಾಟದಲಿ ಸರಸಿಯಾಗಿಹೆ ನೀನು

ನೀನೆಂಬ ನಿನಗೆ ಬಿಂದು ನಾನು....
ನಿನ್ನೊಳಗಿನ ನನಗೆ ಸಿಂಧು ನೀನು.....