ಮಂಗಳವಾರ, ಜೂನ್ 30, 2020

ಅನೂಹ್ಯ 41

ವಿವೇಚನಾರಹಿತ ಯೋಚನೆಗಳ ಹೊಡೆತಕ್ಕೆ ಸಿಕ್ಕಿ ಜರ್ಜರಿತವಾಗಿದ್ದ ಮಂಗಳಾರ ಮನಸ್ಸು ನವ್ಯಾಳನ್ನು ಅಪರಾಧಿಯೆಂದು ನಿರ್ಧರಿಸಿಬಿಟ್ಟಿತ್ತು. ಸೊಸೆಯ ದೆಸೆಯಿಂದ ಅಕ್ಕಪಕ್ಕದವರ ಬಾಯಲ್ಲಿ ಕೇಳಬೇಕಾದ ಬಿರುನುಡಿಗಳನ್ನು, ಸಮಾಜದಲ್ಲಿ ಎದುರಿಸಬೇಕಾದ ಸನ್ನಿವೇಶಗಳನ್ನು ಈಗಿನಿಂದಲೇ ಯೋಚಿಸಿ ಕಂಗೆಟ್ಟಿದ್ದರಾಕೆ. 'ಭವಿಷ್ಯದಲ್ಲಿ ತಮ್ಮನ್ನು ಸಮುದಾಯದಿಂದ ಬಹಿಷ್ಕರಿಸಿದರೇ…...' ಎಂಬ ಯೋಚನೆ ಪದೇಪದೇ ತಲೆಯಲ್ಲಿ ಸುಳಿಯತೊಡಗಿದಾಗ ವಿಹ್ವಲರಾದರು ಆಕೆ. ಇಷ್ಟು ವರುಷಗಳ ಗೌರವ, ಮರ್ಯಾದೆಯೆಲ್ಲಾ ಮಣ್ಣುಪಾಲಾಗುವುದನ್ನು ನೆನೆದಾಗ ಒತ್ತರಿಸಿ ಬಂದ ಕಣ್ಣೀರನ್ನು ತಡೆಯಲಾರದೇ ಕುಳಿತಲ್ಲೇ ನಿಶ್ಯಬ್ದವಾಗಿ ಅಳತೊಡಗಿದರು.

ನವ್ಯಾ ಹಾಗೂ ಕಿಶೋರನ ಸಂಬಂಧದ ಭವಿಷ್ಯವೇನು? ಎಂಬ ಯೋಚನೆಯಲ್ಲಿಯೇ ಮುಳುಗಿದ್ದ ಸತ್ಯನಾರಾಯಣರು ಕೊಂಚ ಸಮಯದ ತರುವಾಯ ಮಡದಿ ಅಳುತ್ತಿರುವುದನ್ನು ಗಮನಿಸಿದ್ದರು. ಮಧ್ಯಾಹ್ನದಿಂದ ಕಲ್ಲಿನಂತೆ ಕುಳಿತಿದ್ದ ಹೆಂಡತಿ ಈಗ ಅತ್ತು ದುಃಖವನ್ನು ಹೊರಹಾಕುತ್ತಿರುವುದು ಒಳ್ಳೆಯದೇ ಎನಿಸಿತು. ಅವರನ್ನು ಹಾಗೆ ಅಳಲು ಬಿಟ್ಟರು... 

ರಾತ್ರಿ ಹನ್ನೊಂದರ ಜಾವ……. ಆದರೂ ಯಾರಿಗೂ ಹಸಿವು, ನಿದ್ರೆಯ ಪರಿವೆಯಿರಲಿಲ್ಲ. 

ಸಮನ್ವಿತಾ ನವ್ಯಾಳನ್ನು ಮಡಿಲಿಗೆ ಹಾಕಿಕೊಂಡು ಸಮಾಧಾನಿಸುತ್ತಿದ್ದಳು. ಆದರೆ ಅವಳ ಬೇಗುದಿ ಶಮನವಾಗುವ ಲಕ್ಷಣಗಳೇನೂ ಇರಲಿಲ್ಲ. ಭಾವರಹಿತವಾಗಿ ಶೂನ್ಯದಲ್ಲಿ ನೋಟ ನೆಟ್ಟಿದ್ದಳಷ್ಟೇ. ನವ್ಯಾಳ ಮನ ಅವಳೊಂದಿಗೆ ಕದನ ಸಾರಿತ್ತು. 'ನೀನು ಕಿಶೋರನನ್ನು ಮದುವೆಯಾಗಲೇಬಾರದಿತ್ತು. ಅದರಿಂದಲೇ ಎಲ್ಲಾ ಸಮಸ್ಯೆಗಳೂ ಉದ್ಭವವಾಗಿದೆ' ಎಂದು ಅಣಕವಾಡುತ್ತಿದ್ದ ಮನಸ್ಸು ಅವಳನ್ನು ದಗ್ಧಗೊಳಿಸುತ್ತಿತ್ತು.

ಸಮನ್ವಿತಾಳ ಮನ ಸರಿ ತಪ್ಪುಗಳ ವಿಶ್ಲೇಷಣೆಗೆ ಬಿದ್ದಿತ್ತು. ಸತ್ಯವನ್ನು ಮುಚ್ಚಿಟ್ಟಿದ್ದು ತಪ್ಪೇ. ಆದರೆ ಆ ತಪ್ಪು ನಡೆದಿದ್ದು ತನ್ನ ಹಾಗೂ ಕಿಶೋರನ ಹಠದಿಂದ. ಕಿಶೋರ್ ಮದುವೆಯ ಮಾತೆತ್ತಿದಲ್ಲಿಂದ ಇಂದಿನವರೆಗೂ ನವ್ಯಾ ಸತ್ಯ ಮುಚ್ಚಿಡುವುದು ಬೇಡಾ ಎಂದೇ ವಾದಿಸಿದ್ದಳಲ್ಲವೇ? ಹಾಗಿದ್ದ ಮೇಲೆ ಅವಳ ತಪ್ಪೇನು? ಏನೇನೂ ತಪ್ಪಿಲ್ಲದೇ ಅವಳೇಕೆ ಆದರಿಸುವ ಪತಿಯಿಂದ, ಮಮತೆ ತೋರುವ ಮನೆಯಿಂದ ದೂರಾಗಬೇಕು? ಅವಳು ಈ ಹಿಂದೆ ವೇಶ್ಯೆಯಾಗಿದ್ದಳೆಂಬ ಕಾರಣಕ್ಕೇ…..? ಅವಳೇನು ಸ್ವಇಚ್ಛೆಯಿಂದ ತಾನು ವೇಶ್ಯೆಯಾಗಲೇಬೇಕೆಂದು ಬಯಸಿ ಆಯ್ದುಕೊಂಡ ವೃತ್ತಿಯೇನು ಅದು? 

ಅಸಲಿಗೆ ಯಾವ ಹೆಣ್ಣು ಸ್ವಇಚ್ಛೆಯಿಂದ ಆಸೆಪಟ್ಟು ಈ ವೃತ್ತಿಯನ್ನು ಆಯ್ದುಕೊಳ್ಳುತ್ತಾಳೆ? ಹೆಚ್ಚಿನ ಪ್ರಕರಣಗಳಲ್ಲಿ ಬದುಕಿನ ಅನಿವಾರ್ಯತೆಗಳೇ ಅವರನ್ನು ಇಂತಹ ಕೂಪಕ್ಕೆ ದಬ್ಬುವುದು. ವೇಶ್ಯಾವಾಟಿಕೆಯಲ್ಲಿರುವ ಬಹುಪಾಲು ಹೆಣ್ಣುಮಕ್ಕಳ ಅಂತರಾಳದಲ್ಲಿ ಈ ಸಮಾಜದ ಕ್ರೌರ್ಯವನ್ನು ಅನಾವರಣಗೊಳಿಸುವ ವ್ಯಥೆಯ ಕಥೆಯೊಂದಿರುತ್ತದೆ. ಪರಿಚಿತರು, ಅಪರಿಚಿತರು, ಸಂಬಂಧಿಗಳು, ಪ್ರೇಮಿ......  ಹೀಗೇ ಯಾರದೋ ಪಗಡೆಯಾಟದಲ್ಲಿ ದಾಳಗಳಾಗಿ ಒಡೆದ ಬದುಕ ಭಿತ್ತಿಯ ಮೇಲೆ ಮನದ ಕುಂಚದಿಂದ ಕನಸ ಬಣ್ಣಗಳನ್ನು ಚಿತ್ರಿಸಲಾಗದೇ, ಹರಿದು ಚಿಂದಿಯಾದ ಬದುಕನ್ನೂ ಸಂಕಲಿಸಲಾಗದೇ ಅನಿವಾರ್ಯವಾಗಿ ವೇಶ್ಯಾವಾಟಿಕೆಯ ನರಕದಲ್ಲಿ ಬಂಧಿಯಾಗುತ್ತಾರೆ. ಒಮ್ಮೆ ಈ ಬಂಧಿಖಾನೆಯನ್ನು ಹೊಕ್ಕರೆ ಮುಗಿಯಿತು. ಅವರ ದೇಹದಲ್ಲಿನ ಯೌವ್ವನದ ಕಸುವು ಕರಗಿ ಮುಪ್ಪಿನ ಗೆರೆಗಳು ಆವರಿಸುವ ತನಕ ಕ್ಷಣಕ್ಷಣವೂ ಗಂಡಸಿನ ದೈಹಿಕ ತೃಷೆ ತಣಿಸುವ ಆಟಿಕೆಯಾಗಿ ಇಂಚಿಂಚಾಗಿ ಸಾಯುತ್ತಾ ಬದುಕುತ್ತಾರೆ. ಮುಪ್ಪಡರಿ ವೃದ್ಧಾಪ್ಯ ಆವರಿಸಿ ದೇಹ ಆಕರ್ಷಣೆ ಕಳೆದುಕೊಂಡಾಗಲೇ ಆ ನರಕದಿಂದ ಮುಕ್ತಿ. ಅದೂ ಅಲ್ಲಿಯವರೆಗೂ ಕುಟುಕು ಜೀವ ಉಳಿದಿದ್ದರೇ..... ಹಾಗೆ ಉಳಿದ ಬದುಕನ್ನು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಾ ಕೊನೆಗೊಮ್ಮೆ ಬೀದಿ ಹೆಣವಾಗಿ ಹೋಗುತ್ತಾರೆ.

ಇಂತಹ ಲಕ್ಷಾಂತರ ಹೆಣ್ಣುಮಕ್ಕಳು ನಮ್ಮ ಸಮಾಜದಲ್ಲಿದ್ದಾರೆ. ಸತ್ತಿರುವರೋ ಇಲ್ಲ ಬದುಕಿರುವರೋ ಎಂದು ಕೇಳುವವರೂ ಗತಿಯಿಲ್ಲದೇ ಬೀದಿನಾಯಿಗಳಿಗಿಂತಲೂ ಹೀನ ಸ್ಥಿತಿಯಲ್ಲಿ ಜೀವಿಸುವವರಿದ್ದಾರೆ. ದಂಧೆಗೆ ಇಳಿಯಲೊಪ್ಪದ ಹುಡುಗಿಯರಿಗೆ ಅನ್ನ ನೀರು ಕೊಡದೆ ಬಡಿದು ಬೆದರಿಸುತ್ತಾರೆ. ಅದಕ್ಕೂ ಮಣಿಯದಿದ್ದರೆ ದಲ್ಲಾಳಿಗಳೋ ಇಲ್ಲಾ ಕೋಠಿಗಳ ಕಾವಲಿಗಿರುವ ಗೂಂಡಾಗಳೋ ಅವರನ್ನು ಸಾಮೂಹಿಕವಾಗಿ ಬಲಾತ್ಕರಿಸಿ ದಂಧೆಗೆ ನೂಕುತ್ತಾರೆ. ಅದಕ್ಕೂ ಬಗ್ಗದ ಇನ್ನೂ ಕೆಲವು ಗಟ್ಟಿಗಿತ್ತಿ ಹೆಣ್ಣುಗಳನ್ನು ಬಡಿದು ಕೊಲ್ಲುವುದೂ ಉಂಟು. ಅವರ ಶವಗಳು ಎಲ್ಲಿ ಮಣ್ಣಾಗುತ್ತವೆಯೆಂಬುದು ಕೂಡಾ ಯಾರೂ ಅರಿಯಲಾರದ ರಹಸ್ಯ…..

ಇವೆಲ್ಲವೂ ಎಲ್ಲೋ ಅನ್ಯಗ್ರಹದಲ್ಲಿ ನಡೆಯುವುದಿಲ್ಲ. ಈ ನಮ್ಮ ಸಭ್ಯ ಸಮಾಜದಲ್ಲಿಯೇ ನಡೆಯುತ್ತದೆ. ಪ್ರತೀ ನಗರಗಳಲ್ಲೂ ಇದಕ್ಕೆಂದೇ ರೈಡ್ ಲೈಟ್ ಏರಿಯಾಗಳಿಲ್ಲವೇ? ಈ ಬಗ್ಗೆ ನಮ್ಮ ಸಮಾಜಕ್ಕೆ ತಿಳಿದಿಲ್ಲವೇ? ಇದೇ ಸಮಾಜದ ಹಲವು ಮಂದಿ ಅದೇ ಏರಿಯಾಗಳಲ್ಲಿ ತಮ್ಮ ರಾತ್ರಿಗಳನ್ನು ರಂಗೀನ್ ಆಗಿಸಿಕೊಳ್ಳುವುದಿಲ್ಲವೇ? ಇದರ ಬಗ್ಗೆ ಕಟುವಾಗಿ ವಿರೋಧ ವ್ಯಕ್ತಪಡಿಸಿ ಎಂದಾದರೂ ಈ ಸಮಾಜ ತಿರುಗಿಬಿದ್ದಿದೆಯೇ? ಈ ಕೋಠಿ ನಡೆಸುವವರನ್ನು, ಅದಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡುವ ವ್ಯಕ್ತಿಗಳನ್ನು, ಹೆಣ್ಣನ್ನು ವಸ್ತುವಿನಂತೆ ಸರಬರಾಜು ಮಾಡುವ ತಲೆಹಿಡುಕ ದಲ್ಲಾಳಿಗಳನ್ನು ಪ್ರಶ್ನಿಸುವ ಧೈರ್ಯ ಸಮಾಜಕ್ಕಿದೆಯೇ? ಖಂಡಿತಾ ಇಲ್ಲಾ....... ಏಕೆಂದರೆ ಈ ದಂಧೆ ನಡೆಸುವವರಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವವರಲ್ಲಿ ಹಲವರು ಸಮಾಜದಲ್ಲಿ ಅತೀ ಗಣ್ಯರೆನಿಸಿಕೊಂಡವರು. ಜನ, ಹಣ ಹಾಗೂ ಅಧಿಕಾರಬಲ ಹೊಂದಿರುವ ಕಾನೂನನ್ನು ಖರೀದಿಸಬಲ್ಲ ಪ್ರಭಾವಿ ವ್ಯಕ್ತಿಗಳು. ಅವರ ಬಗ್ಗೆ ಸೊಲ್ಲೆತ್ತುವ ಧೈರ್ಯ ನಮ್ಮ ಸಮಾಜಕ್ಕೆಲ್ಲಿಯದು? ಅದರ ದಬ್ಬಾಳಿಕೆ ಏನಿದ್ದರೂ ಹೇಳಿದ್ದನ್ನು ಕೇಳುವ ಹಣ ಹಾಗೂ ಅಧಿಕಾರದ ಬಲವಿರದ ದಮನಿತ ವರ್ಗಕ್ಕೆ ಮಾತ್ರ ಸೀಮಿತ. ಅಷ್ಟಕ್ಕೂ ಈ ವೇಶ್ಯಾಗೃಹಗಳು ಅಸ್ತಿತ್ವದಲ್ಲಿರುವುದೇ ಗಿರಾಕಿಗಳಿಗಾಗಿ. ಈ ಗಿರಾಕಿಗಳು ನಮ್ಮ ಮಡಿವಂತ ಸಮಾಜದ ಭಾಗವೇ ಅಲ್ಲವೇ?  ಹಗಲೆಲ್ಲಾ ಮಾನ, ಮರ್ಯಾದೆಗಳ ಬಗ್ಗೆ ಭಾಷಣ ಕೊಚ್ಚುವ ಹಲವರು ರಾತ್ರಿಯಾದರೆ ವೇಶ್ಯಾಗೃಹಗಳಿಗೆ ಎಡತಾಕುವುದು ಸುಳ್ಳೇ?

ಪರಿಸ್ಥಿತಿಯ ಕೈಗೊಂಬೆಯಾಗಿಯೋ ಇಲ್ಲಾ ದುರುಳರ ಕೈಗೆ ಸಿಕ್ಕಿಯೋ ಹೆಣ್ಣೊಬ್ಬಳು ವೇಶ್ಯಾಗೃಹ ಸೇರಿದರೆ ಅವಳನ್ನು ಅಲ್ಲಿಂದ ಬಿಡಿಸಿ ಹೊರತರಲು ಸಮಾಜ ಒಗ್ಗಟ್ಟಾಗಿ ಕೈಜೋಡಿಸುವುದಿಲ್ಲ. ಮೌಲ್ಯಗಳನ್ನು ನೆಚ್ಚಿಕೊಂಡ ಕೆಲವೇ ಕೆಲವು ವ್ಯಕ್ತಿಗಳೋ, ಇಲ್ಲಾ ಸಾಮಾಜಿಕ ಹೊಣೆಗಾರಿಕೆಗೆ ಬದ್ಧವಾದ ಕೆಲವು NGOಗಳೋ ಮಾತ್ರ ಈ ಬಗ್ಗೆ ಹೋರಾಟ ನಡೆಸುತ್ತವೆ. 

ಆದರೆ....... ಅದೇ ಹೆಣ್ಣು ಹೇಗೋ ಅಲ್ಲಿಂದ ಹೊರಬಂದು ಒಂದೊಳ್ಳೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದರೇ ಆಗ ಅವಳ ಹಿನ್ನೆಲೆ ಕೆದಕಲು ಮುಂದಾಗುತ್ತದೆ ಈ ಸಮಾಜ. ಅತೀತದ ಬಗ್ಗೆ ಪ್ರಶ್ನೆಗಳ ಸರಮಾಲೆಗಳು, ಕುಹಕ ಕುಚೋದ್ಯದ ನೋಟಗಳು, ಚುಚ್ಚುನುಡಿಗಳು, ಚಾರಿತ್ರ್ಯ ಹರಣ..... ಅವಳ ಆತ್ಮಬಲವನ್ನು, ಮನೋಸ್ಥೈರ್ಯವನ್ನು ಕುಗ್ಗಿಸಲು ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಮಾಡುತ್ತದೆ. ಅವಳನ್ನು ಸಮಾಜದ ಮುಖ್ಯವಾಹಿನಿಯಿಂದ ಬಹಿಷ್ಕರಿಸಲು ಶಕ್ತಿಮೀರಿ ಪ್ರಯತ್ನಿಸುತ್ತದೆ.

ವಿಪರ್ಯಾಸವೆಂದರೆ ಈ ಕಾರ್ಯದಲ್ಲಿ ಹೆಂಗಸರದ್ದೇ ಮೇಲುಗೈ..‌‌.... ಇನ್ನೊಬ್ಬ ನೊಂದ ಹೆಣ್ಣಿನ ಕಣ್ಣೀರನ್ನು ಒರೆಸುವುದಕ್ಕಿಂತ ಅವಳ ಹಿನ್ನೆಲೆ ಕೆದಕಿ ಆಡಿಕೊಳ್ಳುವುದರಲ್ಲೇ ಅವರಿಗೆ ವಿಕೃತ ಆನಂದ.

ಏಕಿಷ್ಟು ವಿಲಕ್ಷಣ ನಮ್ಮ ಸಮಾಜ......?

ಹೆಣ್ಣು ಹಾಗಿರಬೇಕು, ಹೀಗಿರಬೇಕು, ಇದನ್ನು ಮಾಡಬೇಕು, ಅದನ್ನು ಮಾಡಬಾರದೆಂದು ಸಾವಿರ ಕಟ್ಟಳೆಗಳನ್ನು ವಿಧಿಸುವ ಸಮಾಜ ಗಂಡಸಿಗೂ ಈ ರೀತಿಯ ನಿಯಮಗಳ ಕಟ್ಟಳೆಗಳ ಬೇಲಿಯನ್ನು ಹಾಕುತ್ತದೆಯೇ? ಇಲ್ಲವಲ್ಲ…… ನೀತಿ, ನಿಯಮ, ಕಟ್ಟಳೆಗಳು, ಮಡಿವಂತಿಕೆ ಎಲ್ಲವೂ ಹೆಣ್ಣಿಗೆ ಮಾತ್ರ........

ಹಾಗಂತ ಆ ನಿಯಮಗಳೆಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸುವ ಹೆಣ್ಣಿನ ಮೇಲೆ ಗಂಡಿನ ಕಾಮದ ಕಣ್ಣು ಬೀಳುವುದಿಲ್ಲ ಎಂದರ್ಥವಲ್ಲ.

ಹೆಣ್ಣು............

ಅದು ಓದು ಬರಹ ತಿಳಿದಿಲ್ಲದ ಅನಕ್ಷರಸ್ಥೆ ಇರಲಿ ಇಲ್ಲಾ ಓದಿ ಜ್ಞಾನ ಪಡೆದುಕೊಂಡಿರುವ ಅಕ್ಷರಸ್ಥೆಯಿರಲಿ, ಬಡವಳಿರಲಿ ಇಲ್ಲಾ ಸಿರಿವಂತಳಿರಲಿ, ಪ್ರಪಂಚ ಜ್ಞಾನವಿಲ್ಲದ ಮುಗುದೆ ಇರಲಿ ಇಲ್ಲಾ ಲೋಕ ತಿಳಿದ ಪ್ರಾಜ್ಞೆಯಿರಲಿ, ಅಂದಗಾತಿಯಿರಲಿ ಇಲ್ಲಾ ಕುರೂಪಿಯಾಗಲೀ, ಮನೆಬಿಟ್ಟು ಹೊರಹೋಗದ ಭಯಸ್ಥೆಯಾಗಿರಲೀ ಇಲ್ಲಾ ಗಂಡಿನ ಸಮಾನಕ್ಕೆ ದುಡಿವಾಕೆಯಾಗಿರಲೀ, ಸನಾತನ ವಿಚಾರಗಳ ಸಂಪ್ರದಾಯಸ್ಥೆಯಾಗಿರಲಿ ಇಲ್ಲಾ ಪಾಶ್ಚಾತ್ಯ ವಿಚಾರಧಾರೆಯ ಆಧುನಿಕ ನಾರಿಯಾಗಿರಲೀ.........

ಹೆಣ್ಣಿನ ವ್ಯಕ್ತಿತ್ವದಲ್ಲಿ ಅದೇನೇ ವ್ಯತ್ಯಾಸಗಳಿದ್ದರೂ, ಹೆಣ್ಣು ಭೋಗದ ವಸ್ತುವಲ್ಲ ಎಂದು ಜನಾಭಿಪ್ರಾಯ ಸಂಗ್ರಹಿಸಿದರೂ, ಲಿಂಗ ಸಮಾನತೆಯ ಬಗ್ಗೆ ವರ್ಷಗಟ್ಟಲೆ ಚರ್ಚಿಸಿದರೂ....... 

ಅಂತಿಮವಾಗಿ ಗಂಡಸಿನ ಪಾಲಿಗೆ ಹೆಣ್ಣೆಂದರೆ

ಕೈಚಾಚಿದರೆ ತೋಳು ತುಂಬುವ, ಹಾಸಿಗೆಗೆ ಬರುವ ಅವಳ ದೇಹವಷ್ಟೇ......

ಇದನ್ನು ಮೀರಿ ಯೋಚಿಸಬಲ್ಲ ಗಂಡಸರು ಬೆರಳೆಣಿಕೆಯಷ್ಟು ಮಂದಿ ಇರಬಹುದೇನೋ. ತೀರಾ ಇತ್ತೀಚಿನ ಪೀಳಿಗೆಯಲ್ಲಿ ಅಂತಹ ಗಂಡಸರ ಸಂಖ್ಯೆ ಹೆಚ್ಚುತ್ತಿರುವುದೊಂದು ಒಳ್ಳೆಯ ಬೆಳವಣಿಗೆ ಎನ್ನಬಹುದು.

ನಿದಿರೆ ಹತ್ತಿರ ಸುಳಿಯದ ಸಮನ್ವಿತಾಳ ವಿಚಾರಧಾರೆ ಈ ರೀತಿಯಲ್ಲಿ ಸಾಗಿತ್ತು..... 

              **************************

ಇತ್ತ ಅತ್ತು ಅತ್ತು ಸುಸ್ತಾದ ಮಂಗಳಮ್ಮನವರ ಮನಸ್ಸು ಕೊಂಚ ತಹಬಂದಿಗೆ ಬಂದಿತ್ತು. ಅದನ್ನು ಗ್ರಹಿಸಿದ ಸತ್ಯನಾರಾಯಣರು ಮಾತು ಪ್ರಾರಂಭಿಸಲು ಇದೇ ಸಕಾಲ ಎಂದುಕೊಂಡು ಮಡದಿಯ ಬಳಿ ಬಂದು ಕುಳಿತರು..

"ಏನ್ರೀ ಇದು, ಹೀಗಾಯ್ತಲ್ಲ…..." ಗಂಡ ಪಕ್ಕದಲ್ಲಿ ಕುಳಿತು ಕ್ಷಣಗಳು ಉರುಳಿದ ಮೇಲೆ ನಡುಗುವ ಸಣ್ಣ ದನಿಯಲ್ಲಿ ಕೇಳಿದರು.

"ಇದೇನು? ಯಾಕೆ ಹೀಗಾಯ್ತು? ಎನ್ನುವುದಕ್ಕಿಂತ ಮುಂದೇನು ಅನ್ನುವುದು ಈಗ ಬಹಳ ಮುಖ್ಯವಾದ ಪ್ರಶ್ನೆ ಮಂಗಳಾ. ಘಟಿಸಿಹೋಗಿದ್ದನ್ನು ಈಗ ಬದಲಿಸಲಾಗದು. ಈಗೇನಿದ್ದರೂ ವರ್ತಮಾನಕ್ಕೆ ಬಂದು ಭವಿಷ್ಯತ್ತಿನ ಬಗ್ಗೆ ಚಿಂತಿಸಬೇಕಷ್ಟೇ. ನವ್ಯಾಳ ಬಗ್ಗೆ ಏನು ಯೋಚಿಸಿರುವೆ?" ನೇರವಾಗಿ ವಿಷಯಕ್ಕೆ ಬಂದಿದ್ದರು.

"ನಾನಿಲ್ಲಿ ಕಿಶೋರ್ ಹಾಗೂ ನಮ್ಮ ಬಗ್ಗೆ ಯೋಚನೆಗೆ ಬಿದ್ದಿದ್ದರೆ…... ನಿಮಗೆ ಅವಳ ಚಿಂತೆಯೇ? ಮೊದಲು ಹಳಿತಪ್ಪುತ್ತಿರುವ ನಮ್ಮ ಭವಿಷ್ಯದ ಬಗ್ಗೆ ಯೋಚಿಸಿ" ಸಿಟ್ಟಿನಲ್ಲಿ ಹೇಳಿದರಾಕೆ.

ಮಡದಿಯ ಮಾತುಗಳಿಗೆ ನಗಬೇಕೋ ಅಳಬೇಕೋ ತಿಳಿಯದೇ ತಲೆಯಾಡಿಸಿದವರು, "ನಾನು ನಿನ್ನ ಬಗ್ಗೆ ಏನೇನೋ ಕಲ್ಪಿಸಿಕೊಂಡಿದ್ದೆ. ಕಡೆಗೆ ನೀನೂ ವಾರಗೆಯ ಹೆಂಗಸರಂತೆಯೇ ಎಂಬುದನ್ನು ರುಜುವಾತು ಮಾಡಿದೆ ಮಂಗಳಾ....." ಎಂದುಬಿಟ್ಟರು ಸತ್ಯನಾರಾಯಣ.

ಗಂಡನಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರದ ಮಂಗಳಾರಿಗೆ ಅವರೇನು ಹೇಳುತ್ತಿದ್ದಾರೆಂಬುದೇ ಅರ್ಥವಾಗಲಿಲ್ಲ. ಗಲಿಬಿಲಿಯ ನೋಟಹರಿಸಿದರು ಪತಿಯೆಡೆಗೆ.

"ಇನ್ನೇನು………? ನಾನು ನಿನ್ನನ್ನು ಬಹಳ ತಿಳುವಳಿಕೆಯುಳ್ಳ ಪ್ರಾಜ್ಞೆ ಎಂದುಕೊಂಡಿದ್ದೆ. ಆದರೆ ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ನೀನೂ ಎಲ್ಲರಂತೆ ಪೂರ್ವಾಗ್ರಹ ಪೀಡಿತವಾಗಿ ನಿನ್ನ ಮೂಗಿನ ನೇರಕ್ಕೆ ಮಾತ್ರ ಯೋಚಿಸುವಷ್ಟು ಸಂಕುಚಿತ ಮನೋಭಾವದವಳೆಂಬುದು ಸ್ಪಷ್ಟವಾಗುತ್ತಿದೆ. ಇನ್ನು ನಿನ್ನಲ್ಲಿ ಈ ಬಗ್ಗೆ ಮಾತನಾಡುವ ಇಚ್ಛೆ ನನಗಿಲ್ಲ ಬಿಡು" ಎಂದು ಕ್ಷಣ ಮಾತು ನಿಲ್ಲಿಸಿದವರು ಮತ್ತೆ ಮುಂದುವರೆಸುತ್ತಾ,

"ಮಂಗಳಾ ನನ್ನದೊಂದು ಪ್ರಶ್ನೆಯಿದೆ. ಆತ್ಮವಂಚನೆ ಮಾಡಿಕೊಳ್ಳದೇ ಉತ್ತರ ಕೊಡು. ಒಂದು ಕ್ಷಣಕ್ಕೆ ನನ್ನನ್ನು ಕಿಶೋರನೆಂದೂ ನೀನು ನವ್ಯಾಳೆಂದೂ ಕಲ್ಪಿಸಿಕೋ. ಒಂದು ವೇಳೆ ಇಂದಿನ ನವ್ಯಾಳ ಪರಿಸ್ಥಿತಿಯಲ್ಲಿ ನೀನಿದ್ದು, ನಾನು ನಿನಗಾಗಿ ನನ್ನ ಹೆತ್ತವರನ್ನು ತೊರೆದು ಪರವೂರಿಗೆ ನಿನ್ನೊಂದಿಗೆ ಹೊರಡಲು ತಯಾರಾಗಿದ್ದರೆ, ನೀನು ಮನೆಯವರೆದುರು ಸತ್ಯವನ್ನು ಹೇಳುವ ನಿರ್ಧಾರ ಮಾಡುತ್ತಿದ್ದೆಯಾ? ಬದುಕು ಸುಖ ಸಂತೋಷಗಳನ್ನು ನಿನ್ನ ಮಡಿಲಿಗೆ ಸುರಿದು ನೆಮ್ಮದಿಯ ಬದುಕು ನಿನ್ನದಾಗಿರುವಾಗ ಅದೆಲ್ಲವನ್ನೂ ಹಾಳುಗೆಡಹುವ ಕಹಿ ಸತ್ಯವನ್ನು ಹೇಳಲು ತಯಾರಾಗಿರುತ್ತಿದ್ದೆಯಾ ನೀನು? ನಿನ್ನ ಬದುಕನ್ನೇ ಪಣವಾಗಿಟ್ಟು ಅಂತಹಾ ಕಟುಸತ್ಯವನ್ನು ಹೇಳುವ ಸಾಹಸಕ್ಕೆ ‌ಕೈ ಹಾಕುತ್ತಿದ್ದೆಯಾ ನೀನು?"

ಗಂಡನ ಪ್ರಶ್ನೆಗೆ ಮಂಗಳಾರ ಹೃದಯ ಕಂಪಿಸಿತು. 'ನಾನು ನವ್ಯಾಳ ಸ್ಥಾನದಲ್ಲಿ ಇದ್ದಿದ್ದರೇ…....' ಆ ಯೋಚನೆಗೇ ಬೆವರತೊಡಗಿದರು.

ಬಿಟ್ಟ ಬಾಣ ಗುರಿ ತಪ್ಪದೇ ಸರಿಯಾಗಿಯೇ ನಾಟಿತ್ತು. ಆ ಉದ್ದೇಶದಿಂದಲೇ ಉತ್ತರದ ನಿರೀಕ್ಷೆಯಿಲ್ಲದೇ ಕೇಳಿದ ಪ್ರಶ್ನೆಯದು. ಅವರೇನೋ ಪ್ರಶ್ನೆ ಕೇಳಿ ಹೆಂಡತಿಯನ್ನು ಯೋಚಿಸಲು ಬಿಟ್ಟು ಹೋದರು. ಆದರೆ ಮಂಗಳಾ...... ಬಿದ್ದ ಮಾತಿನ ಪೆಟ್ಟಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿ ಹೋದರು.

'ಇವರು ಹೇಳಿದಂತೆ........ ಒಂದು ವೇಳೆ ತಾನು ಅವಳ ಜಾಗದಲ್ಲಿದ್ದಿದ್ದರೇ..... ಸತ್ಯ ಹೇಳಿ ಕಷ್ಟಪಟ್ಟು ಕಟ್ಟಿಕೊಂಡ ಬದುಕನ್ನು ಮಣ್ಣುಪಾಲಾಗಿಸಲು ತಯಾರಾಗಿರುತ್ತಿದ್ದೆನೇ…….??' ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು.

'ಬಹುಶಃ ಇಲ್ಲವೇನೋ.........!' ಬಹಳ ಸಮಯದ ನಂತರ ಮನಃಸಾಕ್ಷಿಗೆ ಸಿಕ್ಕ ಉತ್ತರ.

ಇಂತಹ ಸತ್ಯವೊಂದನ್ನು ಹೇಳಲು ಅದೆಷ್ಟು ಧೈರ್ಯಬೇಕು? ಮುಂದಿನ ಪರಿಣಾಮ ವಿಪರೀತವಾಗಿರುತ್ತದೆ ಎಂಬ ಅರಿವಿರುವಾಗ, ಬದುಕು ಬೀದಿಗೆ ಬೀಳುವುದು ನಿಶ್ಚಿತ ಎಂಬುದನ್ನು ತಿಳಿದೂ ಸತ್ಯ ಹೇಳಲು ಎಂಟೆದೆಯ ಜೊತೆ ತನ್ನ ತಪ್ಪನ್ನು ಒಪ್ಪಿಕೊಳ್ಳುವ ನಿಸ್ವಾರ್ಥ ಯೋಚನೆಯ ಒಳ್ಳೆಯ ಮನವಿರಬೇಕು ಎನಿಸಿತು ಅವರಿಗೆ.

ಈಗ ಅವರ ಮನಸ್ಸು ನಿಧಾನವಾಗಿ ವಿವೇಚನೆಯ ಹಾದಿಗೆ ಮರಳತೊಡಗಿತು. ನವ್ಯಾಳ ಮಾತುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳತೊಡಗಿದರು. ಎಷ್ಟೇ ಯೋಚಿಸಿದರೂ ಅವಳ ಮಾತುಗಳನ್ನು ಸುಳ್ಳು ಎನ್ನಲು ಮನಸ್ಸು ಒಪ್ಪಲಿಲ್ಲ. ಯಾರೂ ಬೇಕಾಗಿ ವೇಶ್ಯೆಯಾಗುವುದಿಲ್ಲ. ಸಮಯ ಸನ್ನಿವೇಶಗಳ ಅನಿವಾರ್ಯತೆ ಅವರನ್ನು ಅಂತಹ ಜಾಲದೊಳಗೆ ನೂಕುತ್ತದೆಯಷ್ಟೇ. ಹೆತ್ತವರನ್ನು ಕಳೆದುಕೊಂಡು ಮೋಸದ ಜಾಲದಲ್ಲಿ ಸಿಲುಕಿ ಅದೆಷ್ಟು ವೇದನೆ ಪಟ್ಟಿರಬೇಕು ಅವಳು…. ಅದಕ್ಕೇ ಇರಬೇಕು ಅವಳ ಕಣ್ಣುಗಳಲ್ಲಿ ಯಾವಾಗಲೂ ಅಗೋಚರ ನೋವಿನ ಎಳೆಯೊಂದು ಆಗಾಗ ಮೂಡಿ ಮರೆಯಾಗುವುದು….

ಎಷ್ಟು ಸರಳ ಸ್ವಭಾವದ ಹುಡುಗಿಯವಳು. ಒಂದು ದಿನಕ್ಕೂ ಒಂದಿನಿತೂ ಕೋಪಿಸಿಕೊಂಡವಳಲ್ಲ. ಅಷ್ಟು ತಾಳ್ಮೆ ಅವಳಿಗೆ. 

ಸತ್ಯ ತಿಳಿದ ಕೂಡಲೇ ಇದೆಲ್ಲವನ್ನೂ ನಾಟಕ ಎಂದು ಭ್ರಮಿಸಿಬಿಟ್ಟೆನಲ್ಲಾ…... ಅದೂ ನವ್ಯಾಳ ನಡವಳಿಕೆಯ ಬಗ್ಗೆ ಅರಿವಿದ್ದೂ…... ಕಿಶೋರನನ್ನು ಬುಟ್ಟಿಗೆ ಹಾಕಿಕೊಂಡುಬಿಟ್ಟಳು ಎನ್ನುವಷ್ಟು ಹೀನವಾಗಿ ಯೋಚಿಸಲು ಮನಸ್ಸು ಹೇಗೆ ಬಂದಿತು ನನಗೆ? ಇಷ್ಟಕ್ಕೂ ಕಿಶೋರನೇ 'ನಾನವಳನ್ನು ಪ್ರೀತಿಸಿದ್ದೇನೆ. ಮದುವೆಯಾದರೆ ಅವಳನ್ನೇ' ಎಂದು ಹಠ ಹಿಡಿದದ್ದು. ಸಮನ್ವಿತಾ ಹೇಳಿದಂತೆಯೇ ನವ್ಯಾಳ ಬಗ್ಗೆ ನಮ್ಮಲ್ಲಿ ಮಾತನಾಡಿದ ದಿನವೂ ಅವನೇನೋ ಹೇಳಲು ಬಹಳ ಪ್ರಯತ್ನಿಸಿದ್ದ. ಅದು ನೆನಪಿದೆ ನನಗೆ. ಹಾಗೆಯೇ ಮದುವೆಗೆ ಮೊದಲು ನವ್ಯಾ ಒಮ್ಮೆ ಮನೆಗೆ ಬಂದಾಗಲೂ ಅವಳ ಕಣ್ಣುಗಳಲ್ಲಿ ಏನೋ ಅವ್ಯಕ್ತ ವೇದನೆಯಿತ್ತಲ್ಲವೇ…..

'ನವ್ಯಾಳಿಗೆ ಸತ್ಯ ಮುಚ್ಚಿಟ್ಟು ಈ ಮದುವೆಯಾಗಲು ಇಷ್ಟವಿರಲಿಲ್ಲ' ಎಂಬ ಸಮನ್ವಿತಾಳ ಮಾತನ್ನೂ ಅನುಮಾನದ ದೃಷ್ಟಿಯಲ್ಲೇ ನೋಡಿಬಿಟ್ಟೆ. ಸಮನ್ವಿತಾ ಸುಳ್ಳಾಡುವ ಹುಡುಗಿಯೇ? ಅವಳನ್ನೂ ಅವಮಾನಿಸಿಬಿಟ್ಟೆ.

ಅಷ್ಟೆಲ್ಲಾ ಏಕೆ…... ಹತ್ತಿರಹತ್ತಿರ ಮೂರು ವರ್ಷಗಳಿಂದ ಈ ಮನೆಯ ಆಗುಹೋಗುಗಳಲ್ಲಿ ಹಾಸುಹೊಕ್ಕಾಗಿ ಸೇರಿ ಹೋಗಿದ್ದಾಳೆ ನವ್ಯಾ. ಅವಳ ನಡೆ, ನುಡಿ, ವರ್ತನೆ, ಮಾತು ಎಲ್ಲವೂ ನನಗೆ ಚಿರಪರಿಚಿತ. ಇಷ್ಟು ವರ್ಷಗಳು ಅವಳು ಮನದಲ್ಲೇ ಏನೋ ಚಿಂತೆಯಿಟ್ಟುಕೊಂಡು ಅತಿಯಾಗಿ ಕೊರಗಿದ್ದಾಳೆ ಎಂಬುದನ್ನು ನನಗಿಂತಲೂ ಚೆನ್ನಾಗಿ ಬಲ್ಲವರ್ಯಾರು? ನಾನೇ ಎಷ್ಟೋ ಬಾರಿ ಮಡಿಲಿಗೆಳೆದುಕೊಂಡು ಸಮಾಧಾನಿಸಲಿಲ್ಲವೇ ಅವಳನ್ನು?  ಕಿಶೋರ ಕಾರ್ತಿಗಿಂತಲೂ ಹೆಚ್ಚಾಗಿ ನನ್ನನ್ನು ಹಚ್ಚಿಕೊಂಡ ಜೀವವದು. ಅದೆಷ್ಟು ಅಕ್ಕರೆ ನನ್ನ ಮೇಲೆ…... ಆಸ್ಪತ್ರೆಯಲ್ಲಿ ಮಲಗಿದ್ದಾಗ ಅದೆಷ್ಟು ಆಸ್ತೆಯಿಂದ ನನ್ನೆಲ್ಲಾ ಕೆಲಸಗಳನ್ನು ಮಾಡಿತ್ತು ಮಗು. ತೀರ್ಥಯಾತ್ರೆಗೆ ಹೋಗುವಾಗಲಂತೂ ಹೋಗಬೇಡಮ್ಮಾ ಎಂದು ದುಂಬಾಲು ಬಿದ್ದಿರಲಿಲ್ಲವೇ…... ಆ ಪ್ರೀತ್ಯಾದರಗಳನ್ನೇ ಅನುಮಾನಿಸಿಬಿಟ್ಟೆನಲ್ಲಾ..... ಛೇ.... ಇಷ್ಟೊಂದು ಕಠೋರ ಮನವಿದೆಯೇ ನನಗೆ....?

ಮಧ್ಯಾಹ್ನದಿಂದ ಒಂದಕ್ಷರ ಮಾತನಾಡದೇ ಹಠ ಸಾಧಿಸಿದೆ. ಏನೆಲ್ಲಾ ಹೇಳಿ ಓಲೈಸಿತು. ಕಡೆಗೆ 'ನಾನು ಈ ಮನೆಯಲ್ಲ. ಊರೇ ಬಿಟ್ಟು ಹೋಗುವೆ, ಒಮ್ಮೆ ಮಾತಾಡಿ' ಎಂದೂ ಗೋಗರೆದಳು. ಅಷ್ಟಾದರೂ ನನ್ನ ಕೆಟ್ಟ ಮನಸ್ಸು ಕರಗದೇ ಹೋಯಿತು.

ಒಂದು ವೇಳೆ ನವ್ಯಾ ಇಂದು ಸತ್ಯ ನುಡಿಯದಿದ್ದರೆ ಈ ವಿಚಾರ ನಮಗೆ ತಿಳಿಯುತ್ತಲೇ ಇರಲಿಲ್ಲವೇನೋ….. ಕಿಶೋರನೇ ಅವಳನ್ನು ಬೇರೆ ಊರಿಗೆ ಕರೆದೊಯ್ಯಲು ಎಲ್ಲಾ ವ್ಯವಸ್ಥೆ ಮಾಡಿದ್ದ. ಆರಾಮವಾಗಿ ಇಲ್ಲಿಂದ ಎದ್ದು ಹೋಗಿಬಿಡಬಹುದಿತ್ತು. ಕಿಶೋರನನ್ನೇ ನಮ್ಮಿಂದ ದೂರಮಾಡಬಹುದಿತ್ತು. ಮೂರನೇ ಬೀದಿಯ ಕಮಲಮ್ಮನವರ ಸೊಸೆ ಅವರ ಮಗನನ್ನು ಮನೆಯಿಂದ ಬೇರಾಗಿಸಿ ಅಲ್ಲೆಲ್ಲೋ ಹೋಗಿ ನೆಲೆಸಿಲ್ಲವೇ…...? ಮೊದಲು ಆಗೊಮ್ಮೆ ಈಗೊಮ್ಮೆಯಾದರೂ ಬರುತ್ತಿದ್ದವನು ಕಳೆದೊಂದು ವರ್ಷದಿಂದ ಈ ಕಡೆ ತಲೆ ಹಾಕಿಲ್ಲ. ವಿಧವೆ ಕಮಲಮ್ಮ ಪಾಪ, ಗಾರ್ಮೆಂಟ್ಸಿನಲ್ಲಿ ಕಷ್ಟಪಟ್ಟು ದುಡಿದು ಮಗನನ್ನು ಸಾಕಿ, ಈಗ ಈ ವಯಸ್ಸಿನಲ್ಲಿ ಸೊಸೆಯ ಚಿತಾವಣೆಯಿಂದ ಮಗನಿಂದ ದೂರಾಗಿ ಕಣ್ಣೀರಿಡುತ್ತಿಲ್ಲವೇ? 

ಆದರೆ ನವ್ಯಾ.....? ಹೆತ್ತವರಿಂದ ಮಗನನ್ನು ದೂರ ಮಾಡಬಾರದೆಂಬ ಕಾರಣಕ್ಕೆ ಹಿಂದೂ ಮುಂದೂ ಯೋಚಿಸದೇ ಸತ್ಯ ನುಡಿದುಬಿಟ್ಟಿತಲ್ಲ ಹುಡುಗಿ…… ಅದೆಷ್ಟು ಪ್ರೀತಿ ವಿಶ್ವಾಸವಿರಬೇಕು ಅವಳಿಗೆ ನಮ್ಮ ಮೇಲೆ.....? ಅದಕ್ಕೇ ನಾನು ಯೋಗ್ಯಳೇ?

ಅವಳೆಂದೂ ನನ್ನನ್ನು ಅತ್ತೆಯ ರೀತಿ ಕಾಣಲೇ ಇಲ್ಲ. ಹಾಗೆ ಸಂಬೋಧಿಸಲೂ ಇಲ್ಲ. 'ಅಮ್ಮಾ' ಎಂದೇ ಕರೆಯುತ್ತಿದ್ದುದು. ಮಗಳಿಗೆ ಅಮ್ಮನ ಮೇಲಿರುವಂತಹ ಕಾಳಜಿ, ಅಕ್ಕರೆ ಅವಳಿಗೆ ನನ್ನ ಮೇಲೆ.

ಆದರೆ ನಾನು.....? 'ಮಗಳಂತೆ' ಅನ್ನುತ್ತಲೇ ಅವಳನ್ನು ಕ್ಷಣಾರ್ಧದಲ್ಲಿ ಪರಕೀಯಳನ್ನಾಗಿಸಿಬಿಟ್ಟೆನಲ್ಲ......

ಮಂಗಳಮ್ಮನವರು ತಮ್ಮ ವರ್ತನೆಗೆ ತಾವೇ‌ ಅಸಹ್ಯಿಸಿಕೊಳ್ಳತೊಡಗಿದ್ದರು. ಮನದ ಕಣ್ಣಿಗೆ ಅಡ್ಡಲಾಗಿದ್ದ ಸಮಾಜ, ಜನ ಎಂಬ ಪೊರೆ ನಿಧಾನವಾಗಿ ಹರಿಯತೊಡಗಿತ್ತು...... 

'ಜನರ ಮಾತಿಗಿಂತ, ಲೋಕದ ನೀತಿಗಿಂತ ಬದುಕು ಅಮೂಲ್ಯವಲ್ಲವೇ......?'  ಮನ ಜಿಜ್ಞಾಸೆಗೆ ಬಿದ್ದಿತ್ತು..... 

     *********ಮುಂದುವರೆಯುತ್ತದೆ*********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ