ಭಾನುವಾರ, ಜೂನ್ 28, 2020

ಅನೂಹ್ಯ 31

ಅಭಿರಾಮ್ ಹೊರಟುಹೋದ ನಂತರವೂ ಅವನ ಮಾತುಗಳೇ ಸಮನ್ವಿತಾಳ ಮನಸಿನಲ್ಲಿ ಮಾರ್ದನಿಸುತ್ತಿದ್ದವು. ಅವನೇನೋ ತನ್ನ ಮನದ ಭಾವನೆಗಳನ್ನೆಲ್ಲಾ ಅವಳ ಮುಂದೆ ಚೆಲ್ಲಿದ್ದ. ಆದರೆ ಅವಳ ಮನವೆಂಬ ತಿಳಿನೀರ ಕೊಳದಲ್ಲಿ ಅವನ ಮಾತುಗಳು ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು.

ಈ ಮದುವೆ ಮಾತುಕತೆ ಹಿಂದಿರುವ ಸತ್ಯ ಅರಿಯದೇ ಅವನು ಭಾವಿ ಹೆಂಡತಿ ಎಂದೆಲ್ಲಾ ಮಾತನಾಡುತ್ತಿದ್ದಾನೆ ಎಂದೇ ಭಾವಿಸಿದ್ದಳು. ಆದರೆ ಅವನು ಅವಳ ಎಣಿಕೆಯನ್ನು ಸುಳ್ಳಾಗಿಸಿದ್ದ. ಪ್ರತಿಯೊಂದು ವಿಷಯದ ಅರಿವಿದೆ ಅವನಿಗೆ. ಹಾಗಿದ್ದೂ ಮತ್ತೇಕೆ? ತಮಾಷೆ ಮಾಡಿರಬಹುದೇ? ಆದರೆ ಕೊನೆಯಲ್ಲಿ ಅವನಾಡಿದ ಮಾತುಗಳು? ಅವನ ಮಾತಿನ ರೀತಿ,‌ ಅವನ ಕಣ್ಣಲ್ಲಿ ಸ್ಫುರಿಸುತ್ತಿದ್ದ ಭಾವಗಳು.....? ಎಲ್ಲಾ ವಿಷಯ‌ ತಿಳಿದೂ ನನ್ನಪ್ಪನ ಜಾಲದಲ್ಲಿ ಸಿಲುಕಲು ಅವನಿಗೇನು ಹುಚ್ಚೇ? ಮತ್ತೇಕೆ?

ಯೋಚನೆಗೆ ಬಿದ್ದ ಹುಡುಗಿ ಹಣೆಯೊತ್ತಿಕೊಂಡಳು ಏನೂ ಅರ್ಥವಾಗದೆ.

ಅವಳ ಅನ್ಯಮನಸ್ಕತೆಯನ್ನೇ ಗಮನಿಸುತ್ತಿದ್ದ ನವ್ಯಾ, "ನೋಡಿ ಕಿಶೋರ್, ಮೇಡಂ ಎಷ್ಟೊಂದು ಗಾಢವಾದ ಯೋಚನೆಯಲ್ಲಿದ್ದಾರೆ. ಏನಾದ್ರೂ ಆಗ್ಲೀ ಸಮಾ... ಅಭಿರಾಮ್ ಅಷ್ಟು ಚೆನ್ನಾಗಿ ನಿನ್ನ ಯಾರೂ ಅರ್ಥ ಮಾಡ್ಕೊಂಡಿಲ್ಲ ಬಿಡು. 'ಡಾಕ್ಟ್ರ ಮೇಲೆ ಸ್ವಲ್ಪ ಜಾಸ್ತಿನೇ ಗಮನ ಇರ್ಲಿ. ಏನೇನೋ ಯೋಚನೆ ಮಾಡ್ಕೊಂಡು ಕೂತಿರುತ್ತಾರೆ' ಅಂತ ಎಷ್ಟು ಕರೆಕ್ಟಾಗಿ ಹೇಳಿದ್ರು ನೋಡು" ಅವಳ ಪಕ್ಕದಲ್ಲಿ ಕುಳಿತು ಭುಜ ಬಳಸಿ ಹೆಗಲಿಗೆ ತನ್ನ ಗದ್ದವನ್ನೂರಿ ಹೇಳಿದಳು. 

ಕಿಶೋರನೂ ಅವಳನ್ನೇ ಅನುಮೋದಿಸುತ್ತಾ, "ಹೌದು ಕಣೇ ಸಮನ್ವಿತಾ. ನವ್ಯಾ ಹೇಳಿದ್ದು ನೂರಕ್ಕೆ ನೂರು ಸತ್ಯ. ಅದ್ಸರಿ ಈಗೇನು ಇಷ್ಟು ಗಹನವಾದ ಯೋಚನೆ ರಾಜಕುಮಾರಿಯವರಿಗೆ?" 

ನವ್ಯಾ ಅವಳ ಪಕ್ಕದಿಂದ ಎದ್ದು ಕಿಶೋರನ ಬಳಿ ಕುಳಿತು ಸಮನ್ವಿತಾಳ ಮುಖವನ್ನೇ ಪರೀಕ್ಷಿಸುತ್ತಾ, "ನನ್ನ ಪ್ರಕಾರ ರಾಜಕುಮಾರಿಯ ಈ ಯೋಚನೆಯ ಮೂಲ ಕೀಲಿಕೈ ರಾಜಕುಮಾರನ ಹತ್ರ ಇದ್ಯಾಂತ? ಅಭಿರಾಮ್ ಬಂದು ಹೋದ್ಮೇಲೆ ನಿಮ್ಮ ಮನಸ್ಸು ನಿಮ್ಮ ಮಾತನ್ನು ಕೇಳುತ್ತಿಲ್ಲವೇ ದೇವಿ?" ನವ್ಯಾ ಕೀಟಲೆಯಾಗಿ ಪ್ರಶ್ನಿಸಿದಳು.

ಎದುರು ಕುಳಿತಿದ್ದ ಗಂಡ ಹೆಂಡತಿಯತ್ತ ಒಂದು ತೀಕ್ಷ್ಣ ನೋಟದ ಬಾಣ ಬಿರುಸಾಗಿ ಬಂದಾಗ, "ಅಮ್ಮಾ ತಾಯಿ, ಹೀಗೆ ಕಣ್ಣಲ್ಲೇ ಸುಡೋ ತರ ನೋಡ್ಬೇಡ. ಭಯ ಆಗುತ್ತೆ" ಎಂದ ಕಿಶೋರ್.

"ಅಲ್ವೇ, ಆಗ್ಲಿಂದ ಹೀಗೆ ಯೋಚಿಸ್ತಾ ಕೂತಿದ್ದೀಯಲ್ಲ. ಅದೇನು ಅಂತ ಹೇಳ್ಬಾರ್ದಾ?" ಕೇಳಿದಳು ನವ್ಯಾ..

"ನನ್ಗೇ ಏನೂ ಅರ್ಥ ಆಗ್ತಿಲ್ಲ ಇನ್ನು ನಿಮಗೇನು ಹೇಳ್ಲಿ? ಬರೀ ಗೊಂದಲಗಳಷ್ಟೇ….." ನಿಟ್ಟುಸಿರಿಟ್ಟಳು. 

ಕಿಶೋರ್ ನವ್ಯಾಳಿಗೆ ಕಣ್ಣಲ್ಲೇ ಏನೋ ಸನ್ನೆ ಮಾಡಿದವನು, "ಒಂದು ಇಂಪಾರ್ಟೆಂಟ್ ಕಾಲ್ ಮಾಡ್ಲಿಕ್ಕಿದೆ. ಮಾಡಿ ಬರ್ತೀನಿ" ಹೊರಹೋದ. ಅಭಿರಾಮ್ ಸಮನ್ವಿತಾಳಿಗೆ ಸರಿಯಾದ ಜೋಡಿ ಎಂದು ನವ್ಯಾ ಕಿಶೋರ್ ಕೆಲ ದಿನಗಳ ಹಿಂದೆಯೇ ಲೆಕ್ಕ ಹಾಕಿದ್ದರು. ಆದರೆ ಅವಳು ಇತರೆ ಹುಡುಗಿಯರಂತಲ್ಲ. ಅವಳ ಬಾಹ್ಯಲೋಕ ಹಾಗೂ ಭಾವಲೋಕದ ನಡುವೆ ಬಾನು ಭೂಮಿಗಳ ನಡುವಿನ ಅಂತರವಿದೆ. ಅದನ್ನು ಅಭಿರಾಮ್ ಸ್ಪಷ್ಟವಾಗಿ ಅರಿಯಬೇಕೆಂದರೆ ನಾವೇ ಅವನಿಗೆ ಎಲ್ಲವನ್ನೂ ತಿಳಿಸಬೇಕೆಂದು ನಿರ್ಧರಿಸಿದ್ದರು. ಆ ಬಗ್ಗೆ ಅಭಿರಾಮನಲ್ಲಿ ಮಾತನಾಡುವ ಮೊದಲು ಸಮನ್ವಿತಾಳ ಸ್ಪಷ್ಟ ಅಭಿಪ್ರಾಯದ ಅಗತ್ಯವಿತ್ತು. ಆ ಕೆಲಸಕ್ಕೆ ಇದೇ ಸರಿಯಾದ ಸಮಯವೆನಿಸಿತ್ತು. ಹಾಗಾಗಿಯೇ ನವ್ಯಾಳಿಗೆ ಕೆಲಸ ಒಪ್ಪಿಸಿ ತಾನು ಹೊರ ನಡೆದಿದ್ದ.

"ಸಮಾ, ನಾನೊಂದು ವಿಷ್ಯ ಕೇಳ್ತೀನಿ. ನಿಜ ಹೇಳ್ತೀಯಾ?" ಪೀಠಿಕೆ ಹಾಕಿದಳು. ಏನು ವಿಷಯ ಎಂಬಂತೆ ನೋಡಿದಳು ಸಮನ್ವಿತಾ.

"ನಿನ್ನ ಮತ್ತೆ ಅಭಿರಾಮ್ ಮದುವೆ ಬಗ್ಗೆ ನಿನ್ನ ಅಭಿಪ್ರಾಯ ಏನು?"

"ಬಹಳ ನೇರವಾಗಿದೆ ನವ್ಯಾ ನಿನ್ನ ಪ್ರಶ್ನೆ. ಆದರೆ ಉತ್ತರ? ಅಭಿರಾಮ್ ಬಗ್ಗೆ ನನ್ನ ಅಭಿಪ್ರಾಯ… ಈ ಸಂಜೆಯ ತನಕ ನನ್ನಲ್ಲಿ ನಿನ್ನ ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿತ್ತು. ಆದರೆ ಈಗ ನನಗೇ ಈ ಬಗ್ಗೆ ಸ್ಪಷ್ಟನೆ ಇಲ್ಲದಂತಾಗಿದೆ. ನನ್ನ ಯೋಚನೆಗಳು, ಅಭಿಪ್ರಾಯಗಳು ಪಥ ಬದಲಿಸಿ ದಿಕ್ಕಾಪಾಲಾಗಿವೆ."

"ನನಗೆ ನಿನ್ನ ಮಾತುಗಳು ‌ಅರ್ಥವಾಗುತ್ತಿಲ್ಲ ಸಮಾ‌. ಬಿಡಿಸಿ ಹೇಳ್ತಿಯಾ?"

"ಈ ಮದುವೆ ಸತ್ಯಂ ರಾವ್ ಅವರ ಹಳ್ಳಹತ್ತಿದ ಬಿಸ್ನೆಸ್ ಮೇಲೆತ್ತಲು ಅವರು ಕಂಡುಕೊಂಡ ಉಪಾಯ. ಹಾಗಾಗಿ ಇರೋ ವಿಷಯ ಸಚ್ಚಿದಾನಂದ್ ಅಂಕಲ್ ಮನೆಯವರಿಗೆ ಹೇಳಿ ಈ ಮದುವೆಯ ವಿಷಯಕ್ಕೆ ಅಂತ್ಯ ಹಾಡಬೇಕು ಅಂತ ನಾನು ನಿರ್ಧಾರ ಮಾಡಿದ್ದೆ. ಈಗ ಸ್ವಲ್ಪ ಹೊತ್ತಿನ ಹಿಂದಿನ ತನಕವೂ ಅದೇ ನಿರ್ಧಾರವೇ ಖಾಯಂ ಆಗಿತ್ತು..... ಆದರೆ...."

"ಆದರೆ ಏನು?"

"ಆದರೀಗ ನಾನೇನೂ ಹೇಳಬೇಕಾದ ಅಗತ್ಯವಿಲ್ಲ. ಅಭಿರಾಮ್ ಗೆ ಎಲ್ಲಾ ವಿಷಯ ಗೊತ್ತಿದೆ. ಐ ಮೀನ್ ಗೊತ್ತಾಗಿದೆ. ಸೋ….. ಹೇಳುವಂತಹದೇನೂ ಬಾಕಿ ಉಳಿದಿಲ್ಲ."

"ಒಳ್ಳೆಯದೇ ಆಯ್ತು ಬಿಡು. ಸತ್ಯ ಎಲ್ಲಾ ತಿಳೀತಲ್ಲ."

"ಆದ್ರೆ…...."

"ಯಾಕೆ ನಿಲ್ಲಿಸಿದೆ? ಏನಾಯ್ತು? ಅವರೇನಾದ್ರೂ ಬೈದ್ರಾ ನಿಂಗೆ?" ನವ್ಯಾಳ ಮಾತಿಗೆ ಇಲ್ಲವೆಂದು ತಲೆಯಾಡಿಸಿದಳು.

"ಮತ್ತೇನಕ್ಕೆ ಹೀಗೆ‌ ಆಕಾಶ ತಲೆ ಮೇಲೆ ಬಿದ್ದಂತೆ ಯೋಚಿಸ್ತಿದ್ದೀಯಾ?" ಅವಳ ಪ್ರಶ್ನೆಗೆ ಉತ್ತರವಿರಲಿಲ್ಲ ಇವಳ ಬಳಿ.

ನವ್ಯಾ ಕ್ಷಣ ಸುಮ್ಮನಿದ್ದವಳು ಒಂದೇ ಬಾರಿಗೆ "ಸಮನ್ವಿತಾ, ನಿನ್ಗೆ ಅಭಿರಾಮ್ ಅಂದ್ರೆ ಇಷ್ಟನಾ?" ಎಂದು ಕೇಳಿದ್ದಳು ಈ ಪ್ರಶ್ನೆಯಿಂದ ಗೆಳತಿ ಅಚ್ಚರಿಗೊಳಗಾಗುವಳೆಂಬ ನಿರೀಕ್ಷೆಯಲ್ಲಿ. ಆದರೆ ಅವಳೇನೂ ಗಾಬರಿಯಾಗಲಿಲ್ಲ. ಈಗ ನವ್ಯಾ ಮನದಲ್ಲೊಂದು ಅನುಮಾನ ಹುಟ್ಟಿಕೊಂಡಿತು. 'ಇವಳಿಗೂ ಅವನೆಂದರೆ ಇಷ್ಟವೇನೋ……' ಎಂಬ ಯೋಚನೆಯೇ ಖುಷಿ ತಂದಿತವಳಿಗೆ. ಇವಳು ಬಾಯ್ತೆರೆಯುವ ಲಕ್ಷಣ ಕಾಣದಾಗ ಮತ್ತೆ ತಾನೇ ಮಾತು ಮುಂದುವರೆಸಿದಳು.

"ಹೇಳೇ ಸಮಾ, ಡು ಯು ಲೈಕ್ ಹಿಮ್?"

"ಇಷ್ಟವೇ ನವ್ಯಾ. ಒಮ್ಮೆ ನೋಡಿ ಮಾತಾಡಿದ ಯಾರಾದರೂ ಇಷ್ಟ ಪಡುವಂತಹ ವ್ಯಕ್ತಿತ್ವವಿದೆ ಅವನಿಗೆ. ಅವನ ಸುತ್ತಮುತ್ತಲಿನ ಜನರೂ ಅಷ್ಟೇ ಸಂಸ್ಕಾರವಂತರು.  ಇಷ್ಟವಿಲ್ಲ ಎನ್ನಲು ಒಂದಾದರೂ ಕಾರಣ ಬೇಕಲ್ಲವೇ?"

"ಅಯ್ಯೋ ಅದು ಹಾಗಲ್ವೇ. ಹೋಗ್ಲಿ ಡೈರೆಕ್ಟಾಗಿ ಕೇಳ್ತೀನಿ, ಡು ಯು ಲವ್ ಹಿಮ್?"

"ನಿಂಗೇನು ಹುಚ್ಚಾ? ನಾನವನನ್ನು ನೋಡಿದ್ದೇ ಮೂರು ಸಲ. ಮಾತಾಡಿರೋದು ಎರಡು ಸಲ. ಅದೂ ಉಭಯಕುಶಲೋಪರಿಯ ಮಾತುಕತೆ. ಅಂತದ್ರಲ್ಲಿ ಕೇಳೋ ಪ್ರಶ್ನೆ ನೋಡು….... 'ಡು ಯು ಲವ್ ಹಿಮ್' ಅಂತೆ. ನಿನ್ಗೇನು ಲೂಸಾ." ರೇಗಿದಳು.

"ಸಮಾ, ನಾನು ನೀವಿಬ್ರೂ ಎಷ್ಟು ಸಲ ಮೀಟ್ ಆಗಿ ಮಾತಾಡಿದ್ದೀರ ಅಂತ ಕೇಳ್ಲಿಲ್ಲ. ನಾನು ಕೇಳಿದ್ದು ಬಹಳ ಸರಳವಾದ ಪ್ರಶ್ನೆ. 'ನೀನು ಅವನನ್ನು ಪ್ರೀತಿಸ್ತಿದ್ದೀಯಾ?' ಅಂತ. ಹೌದಾದ್ರೆ ಹೌದು ಅನ್ನು, ಇಲ್ಲಾಂದ್ರೆ ಇಲ್ಲ. ಅಷ್ಟೇ. ಅದ್ಯಾಕೆ ಸುತ್ತಿ ಬಳಸಿ ಮಾತಾಡ್ತೀ?"

"ನವ್ಯಾ ಮೊದಲೇ ನನ್ನ ತಲೆ ಕೆಟ್ಟಿದೆ. ನೀನು ಏನೇನೋ ಕೇಳಿ ನನ್ನ ಕನ್ಫ್ಯೂಸ್ ಮಾಡಬೇಡ"

"ಓಕೆ ಅದು ಬಿಡು. ಈಗ ಅಭಿರಾಮ್ ನಿನ್ಹತ್ರ ಏನು ಮಾತಾಡಿದ್ರು ಅಂತ ಹೇಳು. ನಿನ್ನೆಲ್ಲಾ ಕನ್ಫ್ಯೂಷನ್ ಗೆ ಅದೇ ಮೂಲ ಅಂತ ನಂಗೊತ್ತು. ಅದೇನು ಅಂತಹ‌ ವಿಚಾರ?" 

"ನವ್ಯಾ, ನಾನು ಇರೋ ಎಲ್ಲಾ ವಿಷ್ಯ ಅವನತ್ರ ಹೇಳ್ಬೇಕು ಅಂದ್ಕೊಂಡೆ. ಆದ್ರೇ ನಾನು ಹೇಳ್ಬೇಕು ಅಂದ್ಕೊಂಡಿದ್ದೆಲ್ಲಾ ಅವನೇ ಹೇಳಿದ. ಅವನಿಗೆಲ್ಲಾ ಗೊತ್ತು ಅಂತ ಸಮಾಧಾನ ಆಯ್ತು ನಂಗೆ. ಆದ್ರೆ ಎಲ್ಲಾ ಗೊತ್ತಿದ್ದೂ ಅವನು ಮಾತಾಡಿದ ರೀತಿ, ಕೊನೆಯಲ್ಲಿ ಅವನೇನು ಹೇಳಿದ ಅಂತ ಈಗ್ಲೂ ಅರ್ಥ ಆಗ್ತಿಲ್ಲ ನಂಗೆ. ಅವನು ಮಾತಾಡಿದ ವರಸೆ ನೋಡಿದ್ರೆ....." ಮುಂದುವರೆಸಲಾರದೇ ನಿಲ್ಲಿಸಿದಳು.

"ಲೇ ಬುದ್ಧು, ಅವನಿಗೆ ನೀನಂದ್ರೆ ತುಂಬಾ ಇಷ್ಟ. ಅಷ್ಟೂ ಅರ್ಥ ಆಗ್ಲಿಲ್ವಾ ನಿಂಗೆ. ಅಲ್ವೇ ಅವನು ನಿನ್ಹತ್ರ ಮಾತಾಡೋ ರೀತಿ, ಅವನ ಕಣ್ಣಲ್ಲಿನ ಕಾಳಜಿ ನೋಡಿದ್ರೇ ಯಾರಿಗಾದ್ರೂ ಗೊತ್ತಾಗುತ್ತೆ. ಮೋಸ್ಟ್ ಲೀ ಅವ್ನು ನಿಂಗೆ ನೇರವಾಗೇ ಹೇಳ್ತಿದ್ದ ಅನ್ಸುತ್ತೆ. ಅಷ್ಟರಲ್ಲಿ ಶಿವಪೂಜೆಲೀ ಕರಡಿ ತರ ನಾವಿಬ್ರೂ ಬಂದ್ವಿ ನೋಡು" 

"ಅವನು ಮಾತಾಡಿದ ರೀತಿ ನೋಡಿ ನನಗೂ ಹಾಗೆ ಅನ್ನಿಸ್ತು" ಎಂದಳು ಸಮನ್ವಿತಾ.

"ಈಗ ನಿನ್ನ ನಿರ್ಧಾರ ಏನು?"

"ಏನನ್ನೂ ನಿರ್ಧರಿಸೋಕೆ ಆಗ್ತಿಲ್ಲ ನನಗೆ. ಯಾವುದು ಸರಿ, ಯಾವುದು ತಪ್ಪು ಒಂದೂ ಗೊತ್ತಾಗ್ತಿಲ್ಲ."

"ಸಮಾ.... ಬದುಕಿನಲ್ಲಿ ನೀನು ಎದುರಿಸಿದ ಸನ್ನಿವೇಶಗಳು ನಿನ್ನ ನಿರಾಶಾವಾದಿಯಾಗಿಸಿವೆ. ನೀನು ಬದುಕಿನಿಂದ ನಿರೀಕ್ಷೆ ಮಾಡಿದಾಗಲೆಲ್ಲ ನಿನಗೆ ಎದುರಾದದ್ದು ಭ್ರಮನಿರಸನ. ಅದೇ ನಿನ್ನ ಮನದಲ್ಲಿ ಆಳವಾಗಿ ಬೇರೂರಿದೆ. ನನ್ನ ಬದುಕಲ್ಲಿ ಸಂತೋಷದ ಕ್ಷಣಗಳು ನಿಷಿದ್ಧ ಅಂತ ನಿನಗೆ ನೀನೇ ಬೇಲಿ ಹಾಕ್ಕೊಂಡಿದ್ದೀಯಾ. ಸ್ವರವೆತ್ತಿ ಅಳೋದಕ್ಕೂ ಹಿಂಜರಿಕೆ ನಿನಗೆ. ಆ ಗಡಿ ದಾಟಿ ಹೊರಗೆ ಬಾ. ಚೆಂದದ ಬದುಕೊಂದು ನಿನಗಾಗಿ ಕಾಯುತ್ತಿದೆ. ಎಲ್ಲರೂ ನಿನ್ನಪ್ಪನಂತೆಯೇ ಇರೋಲ್ಲ ಕಣೇ. ಅಭಿರಾಮ್ ಮತ್ತವನ ಮನೆಯವರು ತುಂಬಾ ಒಳ್ಳೆಯವರು. ಅದು ನಿನಗೂ ಗೊತ್ತು. ಮತ್ಯಾಕೆ ಹಿಂಜರಿಕೆ? ನೀನು ಅಭಿರಾಮ್ ವಿಷ್ಯ ಹೇಳಿದ ದಿನವೇ ನಾನು, ಕಿಶೋರ್ ಯೋಚಿಸಿದ್ವಿ. ನಿನಗೆ ತಕ್ಕ ಜೋಡಿ ಅವ್ನು ಅಂತ. ನಿಮ್ಮಿಬ್ಬರ ಯೋಚನೆ, ನಡವಳಿಕೆಗಳಲ್ಲಿ ಅಪರೂಪದ ಹೊಂದಾಣಿಕೆ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವನಿಗೆ ನೀನಂದ್ರೆ ಬರೀ ಇಷ್ಟವಲ್ಲ, ನಿನ್ನ ಬಗ್ಗೆ ತುಂಬಾ ಗೌರವವಿದೆ. ಸರಿಯಾಗಿ ವಿಚಾರ ಮಾಡು ಸಮಾ. ನಿನ್ನೆಲ್ಲಾ ಹಿಂಜರಿಕೆ ತೊರೆದು ನೀನು ಸೃಷ್ಟಿಸಿಕೊಂಡಿರೋ ವರ್ತುಲದಿಂದ ಒಮ್ಮೆ ಹೊರಗೆ ಬಾ. ಅಭಿರಾಮ್ ಯಾವತ್ತೂ ನಿನ್ನ ಕೈ ಬಿಡೋಲ್ಲ ಅನ್ನೋ ನಂಬಿಕೆ ನನಗಿದೆ. ನಾನು ಇನ್ನೇನೂ ಹೇಳೊಲ್ಲ. ಆದ್ರೆ ನೀನು ಈ ವಿಚಾರವಾಗಿ ಯೋಚಿಸು. ನಾಳೆ ಅವರೆಲ್ಲರೂ ಬರ್ತಾರೆ. ಅಷ್ಟರಲ್ಲಿ ಸರಿಯಾದ ನಿರ್ಧಾರಕ್ಕೆ ಬಾ. ಈಗ ಸುಮ್ನೇ ಮಲ್ಕೋ" ಅವಳನ್ನು ಒತ್ತಾಯದಿಂದ ಮಲಗಿಸಿದಳು. ಗೊಂದಲದ ಯೋಚನೆಗಳ ದಾಳಿಗೆ ಸಿಲುಕಿ ಸುಸ್ತಾಗಿದ್ದವಳನ್ನು ನಿದ್ರಾದೇವಿ ಬೇಗನೆ ಆವರಿಸಿಕೊಂಡಿದ್ದಳು.

ಕಿಶೋರ್ ವಾರ್ಡಿಗೆ ಬಂದಾಗ ಸಮನ್ವಿತಾ ಒಳ್ಳೆಯ ನಿದ್ದೆಯಲ್ಲಿದ್ದಳು. ನಡೆದದ್ದೆಲ್ಲ ವಿವರಿಸಿದಳು ನವ್ಯಾ. ಇಬ್ಬರೂ ನಾಳೆ ಎಲ್ಲವನ್ನು ಅಭಿರಾಮನಿಗೆ ಹೇಳಬೇಕೆಂದು ನಿರ್ಧರಿಸಿದರು.

                **********************

ಇತ್ತ ಅಭಿರಾಮ್ ಮನೆಯಲ್ಲಿ ಯಾರೂ ಮಲಗಿರಲಿಲ್ಲ. ಮೂವರೂ ಅವನ ದಾರಿಯನ್ನೇ ಕಾದಿದ್ದರು. ತಮ್ಮ ಮನೆಗೆ ಬರುವಾಗ ಆರಾಮಾಗಿದ್ದ ಸಮನ್ವಿತಾ ಮದುವೆ ವಿಷಯ ಕೇಳಿ ಏಕೆ ಹಾಗೆ ವರ್ತಿಸಿದಳು ಎನ್ನುವುದರಿಂದ ಹಿಡಿದು ಇದ್ದಕ್ಕಿದ್ದಂತೆ ಆಸ್ಪತ್ರೆ ಸೇರಿದ್ದು ಹೇಗೆ ಎನ್ನುವವರೆಗೆ ಅವರಲ್ಲಿ ಸಾವಿರ ಪ್ರಶ್ನೆಗಳಿದ್ದವು. ಅಭಿ ನಿನ್ನೆಯಿಂದ ಏನೇ ಕೇಳಿದರೂ ಸರಿಯಾಗಿ ಉತ್ತರಿಸಿರಲಿಲ್ಲ. ಇವತ್ತು ಉತ್ತರ ಪಡೆದೇ ತೀರಬೇಕೆಂಬ ಪಟ್ಟು ಬಲವಾಗಿತ್ತು. 

ಅವನು ಮನೆಗೆ ಬಂದಾಗ ಮಧ್ಯರಾತ್ರಿಯ ಸಮೀಪ. ಪ್ರಶ್ನೆಗಳ ಸುರಿಮಳೆ ಎದುರಾಗುತ್ತದೆ ಎಂದು ತಿಳಿದಿತ್ತು ಅವನಿಗೆ. ಹಾಗಾಗಿ ಮೂವರೂ ಎದ್ದಿದ್ದು ಅಚ್ಚರಿ ಎನಿಸಲಿಲ್ಲ. 

"ಆಸ್ಪತ್ರೆಯಿಂದ ಬಂದ್ಯಾ? ಸಮನ್ವಿತಾ ಹೇಗಿದ್ದಾರೆ? ಅಣ್ಣಾ ಏನೋ ಇದೆಲ್ಲಾ? ಏನಾಗ್ತಿದೆ ಇಲ್ಲಿ?" ಅವನು ಮನೆಯೊಳಗೆ ಅಡಿ ಇಡುತ್ತಿದ್ದಂತೆಯೇ ಕೇಳಿದಳು ಆಕೃತಿ. ಅವನಿಗೆ ಸುಸ್ತಾಗಿತ್ತು. ಇಷ್ಟರವರೆಗೆ ಸೊಲ್ಲೆತ್ತದ ಹಸಿವು ಈಗ ತನ್ನಿರವನ್ನು ನೆನಪಿಸುತ್ತಿತ್ತು.

"ಆಕೃತಿ, ಈಗಿನ್ನೂ ಬಂದಿದ್ದಾನೆ. ಅವ್ನು ಫ್ರೆಶ್ ಆಗಿ ಬರ್ಲಿ ಇರು" ಮೃದುಲಾ ಮಗನ ಸಹಾಯಕ್ಕೆ ಬಂದರು.

"ಥ್ಯಾಂಕ್ಸ್ ಮಾ" ಸೀದಾ ರೂಮಿನತ್ತ ನಡೆದ. ಮೃದುಲಾ ಊಟಕ್ಕೆ ರೆಡಿ ಮಾಡುವ ಹೊತ್ತಿಗೆ ಹಾಜರಾಗಿದ್ದ.

"ಅಮ್ಮಾ, ಬೇಗ ಊಟ ಹಾಕು. ತುಂಬಾ ಹಸಿವಾಗ್ತಿದೆ" ಗೋಗರೆದ. ಬಡಿಸಿದ ಊಟ ಹಸಿವಿಗೆ ಇನ್ನಷ್ಟು ರುಚಿಕಟ್ಟಾಗಿತ್ತು. "ತುಂಬಾ ರುಚಿಯಾಗಿದೆ ಅಮ್ಮಾ" ಎಂಬ ಮಗನ ಮಾತಿಗೆ ನಕ್ಕರು ಮೃದುಲಾ.

"ಊಟ ಯಾವತ್ತಿನ ಹಾಗೇ ಇದೇ. ಆದ್ರೆ ಇವತ್ತು ಹಸಿವು ಜಾಸ್ತಿ ಆಗಿರೋದ್ರಿಂದ ರುಚಿ ಹೆಚ್ಚಾದಂತೆ ಅನಿಸಿದೆ ಅಷ್ಟೇ. ನಿನ್ನ ಮುಖ ನೋಡಿದ್ರೆ ಬೆಳಿಗ್ಗೆ ತಿಂಡಿ ತಿಂದಿದ್ದು ಬಿಟ್ಟು ಬೇರೇನೂ ತಿಂದಿಲ್ಲ ಅನ್ಸುತ್ತೆ." 

"ಅದ್ಕೇ ಹೇಳೋದು ಅಮ್ಮನಿಗೆ ಮಾತ್ರ ಮಕ್ಕಳ ಮನಸ್ಸಿನಲ್ಲಿ ಏನಿದೇ, ಅವರಿಗೆ ಏನು ಬೇಕು ಅಂತ  ಅರಿವಾಗೋದು ಅಂತ" ನಕ್ಕವನು ತಕ್ಷಣ ಗಂಭೀರನಾದ. 

ಇಲ್ಲಾ...‌‌….. ಎಲ್ಲರಿಗೂ ಅರಿವಾಗುವುದಿಲ್ಲ. ರಾವ್ ದಂಪತಿಗಳಿಗೆ ಮಗಳ ಮನಸ್ಸಿನಲ್ಲೇನಿದೆ, ಅವಳ ಆಸೆ, ನಿರಾಶೆಗಳೇನು ಎಂಬುದು ಅರಿವಾಗಲೇ ಇಲ್ಲ. ಅಥವಾ ಅರಿಯುವ ಆಸ್ತೆಯೇ ಅವರಿಗಿರಲಿಲ್ಲವೇನೋ. 'ಪುತ್ರ ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನ ಭವತೀ' ಎನ್ನುವ ಮಾತೊಂದಿದೆ. ಜಗದಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲವಂತೆ. ಆದರೆ ಸಮನ್ವಿತಾಳ ತಾಯಿ ಇದಕ್ಕೆ ಹೊರತಾದದ್ದು ಹೇಗೆ? ಮಾಲಿನಿಯವರಿಗೂ ಮಗಳ ಬಗ್ಗೆ ಯಾವುದೇ ಮಮಕಾರವಿದ್ದಂತಿಲ್ಲ. ಒಂದು ವೇಳೆ ಮಗಳ ಬಗ್ಗೆ ಅಕ್ಕರೆ ಇದ್ದಿದ್ದರೆ ಈ ಮದುವೆ ಪ್ರಸ್ತಾಪವನ್ನು ಹೇಗಾದರೂ ತಡೆಯುತ್ತಿದ್ದರು. ಆದರೆ ಆಕೆ ರಾವ್ ಅವರಿಗೆ ಈ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆಂದು ಚೈತಾಲಿ ಹೇಳಿದಳಲ್ಲ. ಯಾಕೆ ಹೀಗೆ? ರಾವ್ ದಂಪತಿಗಳಿಗೆ ಮನಸ್ಸು, ಹೃದಯವೆಂಬುದೇ ಇಲ್ಲವೇ? ಸಮನ್ವಿತಾ ಅನುಮಾನ ಪಟ್ಟಂತೆ ಅವರು ಅವಳ ಹೆತ್ತವರಲ್ಲವೇ? ದತ್ತು ಮಗಳಾಗಿರಬಹುದೇ? ಇಲ್ಲಾ ಅವರಿಗೆ ಗಂಡು ಮಗು ಬೇಕಿತ್ತೇನೋ? ಮಗಳು ಹುಟ್ಟಿದಳೆಂಬ ತಿರಸ್ಕಾರವೇ? ಯಾರಿಗಾದರೂ ಪುರಸ್ಕರಿಸಬೇಕೆನಿಸುವ ವ್ಯಕ್ತಿತ್ವವುಳ್ಳ ಹೆಣ್ಣೊಬ್ಬಳು ಹೆತ್ತವರಿಂದ ತಿರಸ್ಕೃತಳಾದ್ದದ್ದು ಏತಕ್ಕಾಗಿ? ಬಹುಶಃ ಅವಳ ನಡವಳಿಕೆಯಿಂದಲೇನೋ….. ರಾವ್ ದಂಪತಿಗಳಿಗೆ ಮಗಳಿಂದ, ಅವಳ ವೃತ್ತಿಯಿಂದ ಇನ್ನಷ್ಟು ಹಣ ಸಂಪಾದಿಸುವ ಆಕಾಂಕ್ಷೆ ಇತ್ತೇನೋ? ಆದರೆ‌ ಇವಳ ನಿರ್ಧಾರಗಳು ಅವರಿಗೆ ನುಂಗಲಾರದ ತುತ್ತಾಗಿರಬೇಕು….

ಯೋಚನೆಗಳ ನಡುವೆ ಊಟಮಾಡುತ್ತಿದ್ದವನಿಗೆ ತಟ್ಟೆ ಖಾಲಿಯಾದದ್ದೂ ತಿಳಿಯಲಿಲ್ಲ.

"ಅಭಿ, ಏನೋ ಯೋಚ್ನೆ ಮಾಡ್ತಿದ್ದೀಯಾ? ಇನ್ನೂ ಸ್ವಲ್ಪ ಅನ್ನ ಬಡಿಸ್ಲಾ?" ತಾಯಿಯ ಕರೆಗೆ ಬೇಡವೆಂದು ತಲೆಯಾಡಿಸಿದವನು ಕೈ ತೊಳೆದು ಹಾಲಿನ ಸೋಫಾದಲ್ಲಿ ಮೈ ಚೆಲ್ಲಿದ.

ಸಚ್ಚಿದಾನಂದ್, ಆಕೃತಿ ಅವನೆದುರು ಬಂದು ಕುಳಿತರು. ಮೃದುಲಾ ಕೂಡಾ ಅವನ ಪಕ್ಕದಲ್ಲಿ ಕುಳಿತು, "ಸಮನ್ವಿತಾ ಹೇಗಿದ್ದಾಳೆ?" ಕೇಳಿದರು ಕಾತರದ ಕಣ್ಣುಗಳಲ್ಲಿ. 

"ಈಗ ಆರಾಮಾಗಿದ್ದಾಳೆ. ಪ್ರಜ್ಞೆ ಬಂದಿದೆ. ಜ್ವರ ಎಲ್ಲಾ ಕಡಿಮೆಯಾಗಿದೆ. ನಿಶ್ಯಕ್ತಿ ಇರೋದ್ರಿಂದ ಡ್ರಿಪ್ಸ್ ನಾಳೇವರೆಗೂ ಕಂಟಿನ್ಯೂ ಮಾಡ್ತೀನಿ ಅಂದ್ರು ಮೀರಾ" ಹೇಳಿ ಉಸಿರುದಬ್ಬಿದ. ಮಗನ ಮಾತು ಕೇಳಿ ಸಮಾಧಾನವಾಯಿತು ಅವರಿಗೆ.

"ಅಭಿ ಏನಾಯ್ತು? ಸಮನ್ವಿತಾಗೆ ಏನಾಗಿದೆ? ನಮ್ಮನೆಗೆ ಬರೋವಾಗ ಸರಿಯಾಗಿದ್ದ ಹುಡುಗಿ. ಆಮೇಲೆ ಆ ರೀತಿ ಇಲ್ಲಿಂದ ಹೋಗಿದ್ಯಾಕೆ? ಮತ್ತೀಗ ಆಸ್ಪತ್ರೆ? ಏನಾಗ್ತಿದೆ ಅಂತ ಕೇಳಿದ್ರೆ ನೀನೂ ಸರಿಯಾಗಿ ಏನೂ ಹೇಳ್ತಿಲ್ಲ. ಯಾಕೋ?" ಸಚ್ಚಿದಾನಂದ್ ಕೇಳಿದರು ಮಗನನ್ನು. ಅವರ ಧ್ವನಿಯಲ್ಲಿ ಇವತ್ತು ಎಲ್ಲಾ ವಿಷಯ ತಿಳಿಯಲೇ ಬೇಕೆಂಬ ಕಾತರವಿತ್ತು.

ಮತ್ತೆ ನಿಟ್ಟುಸಿರಿಟ್ಟವನು ಸೀಲಿಂಗ್ ದಿಟ್ಟಿಸಿದ.

"ಡ್ಯಾಡ್. ನಾನು ನಿಮಗೆ ಅವತ್ತೊಂದು ಮಾತು ಹೇಳಿದ್ದೆ ನೆನಪಿದ್ಯಾ? ಸತ್ಯಂ ರಾವ್ ಏನೇ ಮಾಡಿದರೂ ಅದರ ಹಿಂದೆ ಏನೋ ಭಯಂಕರವಾದ ಉದ್ದೇಶ ಇರುತ್ತೆ ಅಂತ. ಅದೇ ಆ ಪಾರ್ಟಿಯ ದಿನ….. ಅಂದು ನಾನು ಹೇಳಿದ್ದೇ ನಿಜ ಡ್ಯಾಡ್. ಅಸಲಿಗೆ ಅದೊಂದು ಪಾರ್ಟಿನೇ ಅಲ್ಲ. ಅದು ನಮ್ಮನ್ನು ಹಳ್ಳಕ್ಕೆ ಬೀಳಿಸಲು ತೋಡಿದ್ದ ಖೆಡ್ಡಾ. ಈ ಔತಣಕೂಟ ರಾವ್ ಅವರ ಪ್ಲಾನಿಂಗ್ ಒಂದು ಭಾಗ. ಆ ಪಾರ್ಟಿ ನೆಪದಲ್ಲಿ ಸಮನ್ವಿತಾನ ನಮಗೆ ಪರಿಚಯಿಸುವುದು ಅವರ ಅಸಲಿ ಉದ್ದೇಶ ಆಗಿತ್ತು. ಅವರ ಯೋಜನೆ ಯಶಸ್ವಿಯಾಯಿತು. ನಿಮಗೆಲ್ಲಾ ಸಮನ್ವಿತಾ ಬಹಳ ಹಿಡಿಸಿದಳು. ಅದೇ ಸಮಯಕ್ಕೆ ನಾನು ಜರ್ಮನಿಗೆ ಹೋದೆ. ಈ ಟೈಮನ್ನ ಸರಿಯಾಗಿ ಬಳಸಿಕೊಂಡು ನಮ್ಮಿಬ್ಬರ ಮದುವೆ ಪ್ರಪೋಸಲ್ ತಂದ್ರು. ಆಲ್ರೆಡಿ ನಿಮ್ಮ ಮನಸ್ಸು ಆ ಕಡೆಗೇ ಇತ್ತು. ಅದನ್ನು ಸರಿಯಾಗಿ ಬಳಸ್ಕೊಂಡು ನಿಮ್ಮನ್ನು ಒಪ್ಪಿಸಿದ್ರು. ನೀವೆಲ್ಲಾ ನನ್ನ ಒಪ್ಸೇ ಒಪ್ಪಿಸ್ತೀರಾ ಅಂತ ಗ್ಯಾರಂಟಿ ಇತ್ತು ಅವರಿಗೆ‌. ಹಾಗೇ ಆಯ್ತು ಕೂಡಾ. ನೀವು ಮೂವರೂ ಹಠ ಹಿಡಿದು ನಾನು ಒಪ್ಪಲೇ ಬೇಕು ಅನ್ನೋ ವಾತಾವರಣ ಸೃಷ್ಟಿಸಿದ್ರಿ. ಅಲ್ಲಿಗೆ ರಾವ್ ಅವರು ಸ್ವರ್ಗದ ಬಾಗಿಲಲ್ಲಿದ್ರು. ಎಲ್ಲಾ ಅವರೆಣಿಕೆಯಂತೆ, ಕಷ್ಟವೇ ಇಲ್ದೇ ಆರಾಮಾಗಿ ನಡೀತಿತ್ತು. ಆದ್ರೆ…... ಆಗ್ತಿರೋ ಅನ್ಯಾಯ ದೇವರಿಗೂ ಹಿಡಿಸಲಿಲ್ವೇನೋ….. ನನ್ನ ತಲೆಯಲ್ಲಿ ಸಮನ್ವಿತಾ ಬಗ್ಗೆ ಅನುಮಾನದ ಹುಳ ಕೊರೆಯತೊಡಗಿತು. ನೀವೆಲ್ಲಾ ಎಷ್ಟೇ ಒತ್ತಾಯ ಮಾಡಿದ್ರೂ ನಿಮ್ಮ ಮಾತು ಕೇಳಲು ನನ್ನ ಮನಸ್ಸು ಒಪ್ಪಲೇ ಇಲ್ಲ. ಏನೋ ಗೊಂದಲ. ಆ ಗೊಂದಲವೇ ನಾನು ಸಮನ್ವಿತಾನ ಮನೆಗೆ ಕರೆಯೋಹಾಗೆ ಮಾಡಿತು. ಅಲ್ಲೇ.... ಅಲ್ಲೇ..... ರಾವ್ ದಂಪತಿಗಳ ಮಾಸ್ಟರ್ ಪ್ಲಾನ್ ಹಳಿ ತಪ್ಪಿದ್ದು. ಇದನ್ನು ಅವರು ನಿರೀಕ್ಷಿಸಿರಲೇ ಇಲ್ಲ‌. ಅವರ ಇಡೀ ಯೋಜನೆಯ ಕೇಂದ್ರ  ಸಮನ್ವಿತಾ. ಆದರೆ ಅವಳಿಗೆ ಇದರ ಸಣ್ಣ ಸುಳಿವನ್ನೂ ನೀಡಿರಲಿಲ್ಲ ಇಬ್ಬರೂ…...."

"ಏನೋ ಹಾಗಂದ್ರೆ? ಏನು ತಮಾಷೆ ಮಾಡ್ತಿದ್ದೀಯಾ? ಅವಳಿಗೆ ಸುಳಿವೇ ಇರ್ಲಿಲ್ಲ ಅಂದ್ರೆ ಏನರ್ಥ? ಅದೂ ಅವಳ ಮದುವೆ ಬಗ್ಗೆ. ಅವಳಿಗೇ ಗೊತ್ತಿರ್ಲಿಲ್ಲ ಅಂತಾನಾ?" ಅಪನಂಬಿಕೆಯಿಂದ ಕೇಳಿದರು ಮೃದುಲಾ. 

"ಹೋಗಣ್ಣ. ಏನೇನೋ ಮಾತಾಡ್ಬೇಡ ನೀನು" ಆಕೃತಿಯದೂ ಅದೇ ಮಾತು.

"ವಿಚಿತ್ರವಾದರು ಇದೇ ಸತ್ಯ ಅನ್ನೋದನ್ನ ನೀವು ನಂಬಬೇಕು. ಅವಳನ್ನು ಮನೆಗೆ ಕರೆಯೋಕೆ ಫೋನ್ ಮಾಡಿದಾಗ್ಲೇ ಅನುಮಾನ ಬಂದಿತ್ತು. ನಿನ್ನೆ ಎಲ್ಲಾ ಕ್ಲಿಯರ್ ಆಯ್ತು. ಅದಕ್ಕೇ ಅವಳಿಗೆ ಅಷ್ಟು ಶಾಕ್ ಆಗಿದ್ದು. ಅವ್ಳು ಹಾಗೆ ಬಿಹೇವ್ ಮಾಡಿದ್ದು. ಇಲ್ಲಿಂದ ರಾವ್ ಮ್ಯಾನ್ಶನ್ ಗೆ ಹೋಗಿದ್ಲು. ನಾನೇ ಡ್ರಾಪ್ ಮಾಡಿದ್ನಲ್ಲ" ಎಂದವ ಅಲ್ಲಿ ನಡೆದ ಚೈತಾಲಿ ಹೇಳಿದ ಮಾತುಕತೆಯನ್ನೆಲ್ಲಾ ವಿವರಿಸಿದ.

"ತುಂಬಾ ಬೇಜಾರಾಗಿರುತ್ತೆ. ಬೇಸರ, ನೋವು ಅನ್ನೋದೆಲ್ಲಾ ಸಣ್ಣ ಪದಗಳಾಗುತ್ತೆ. ರಾತ್ರಿ ಬೆಳಗ್ಗೂ ಶವರ್ ಕೆಳಗೆ ಕೂತಿದ್ಲಂತೆ. ಎಷ್ಟು ಫೋನ್ ಮಾಡಿದ್ರೂ ರಿಸೀವ್ ಮಾಡ್ತಿಲ್ಲ ಅನ್ನೋ ಗಾಬರಿಯಲ್ಲಿ ನವ್ಯಾ ಮತ್ತೆ ಕಿಶೋರ್ ಕ್ವಾಟ್ರಸ್ಸಿಗೆ ಹುಡ್ಕೊಂಡು ಹೋಗಿದ್ದಾರೆ. ಜ್ವರ ವಿಪರೀತ ಇದ್ದಿದ್ರಿಂದ ಅಡ್ಮಿಟ್ ಮಾಡಿದ್ದಾರೆ." 

ಮೂವರೂ ಸ್ತಬ್ಧರಾಗಿದ್ದರು. ಯೋಚನೆಗಳು ಹಲವು ದಿಕ್ಕಿನಲ್ಲಿದ್ದವು. ರಾವ್ ಕೆಟ್ಟ ವ್ಯಕ್ತಿ ಎಂದು ತಿಳಿದಿತ್ತಾದರೂ ಸ್ವಂತ ಮಗಳೊಡನೆ ಈ ರೀತಿ ವರ್ತಿಸಬಹುದೆಂದು ಎಣಿಸಿರಲಿಲ್ಲ ಸಚ್ಚಿದಾನಂದ್. ಮೃದುಲಾಗೆ ಆ ದಂಪತಿಗಳ ಬಗ್ಗೆ ಅದರಲ್ಲೂ ಮಾಲಿನಿಯ ಬಗ್ಗೆ ರೇಜಿಗೆ ಹುಟ್ಟಿತು. ಅಸಹ್ಯವೆನಿಸತೊಡಗಿತು ಅವರ ವ್ಯವಹಾರಿಕ ಬದುಕು. ಇನ್ನು ಆಕೃತಿ ತನ್ನ ಬದುಕನ್ನು ಸಮನ್ವಿತಾಳ ಬದುಕಿನೊಡನೆ ತಾಳೆ ಹಾಕುತ್ತಿದ್ದಳು. ತನಗಾಗಿ ಒಂದು ಬಟ್ಟೆ ಖರೀದಿಸುವಾಗಲೂ ತನ್ನ ಆಯ್ಕೆ ಕೇಳುವ ತನ್ನ ಹೆತ್ತವರೆಲ್ಲಿ, ಮಗಳ ಮದುವೆಯನ್ನು ಅವಳಿಗೊಂದು ಮಾತು ಹೇಳದೆ ನಿಶ್ಚಯಿಸುವ ಜನರೆಲ್ಲಿ...‌?

"ಒಂದು ವೇಳೆ ನೀವು ಹೇಳಿದ್ದಕ್ಕೆ ಒಪ್ಪಿ ನಾನವಳನ್ನು ಮದ್ವೆ ಆಗ್ತೀನಿ ಅಂದಿದ್ರೆ ಬಹುಶಃ ಮಂಟಪದಲ್ಲಿ ಅವಳಿಗೆ ಸತ್ಯ ಗೊತ್ತಾಗುತ್ತಿತ್ತು ಅನ್ಸುತ್ತೆ. ಆ ಮಟ್ಟಿಗಿತ್ತು ರಾವ್ ಅವರ ಯೋಜನೆ. ಅದ್ಯಾಕೆ ನನಗಂತಹ ಹಠ ಮೂಡಿತೋ ಗೊತ್ತಿಲ್ಲ. ಆದ್ರೆ ಬಹಳ ಒಳ್ಳೆಯದೇ ಆಯ್ತು ಅದರಿಂದ" ತಾನು ಅಷ್ಟು ಪಟ್ಟಾಗಿ ಮಾತನಾಡಲೇ ಬೇಕೆಂದು ಹಠ ಹಿಡಿದು ಅವಳನ್ನು ಏಕೆ ಮನೆಗೆ ಕರೆದೆ ಎಂಬುದು ಅವನಿಗೆ ಇಂದಿಗೂ ಅರ್ಥವಾಗಿರಲಿಲ್ಲ.

"ಪಾಪ ಸಮನ್ವಿತಾ ಆಗಿದ್ದಕ್ಕೆ ಅಷ್ಟು ಸೈಲೆಂಟಾಗಿ ತಗೊಂಡ್ರು ಈ ವಿಚಾರನ. ನಾನಾಗಿದ್ರೇ ಮನೇಲಿರೋ ವಸ್ತುಗಳೆಲ್ಲಾ ಪೀಸ್ ಪೀಸ್ ಮಾಡಿ, ಇಡೀ ಮನೇನೇ ಛಿದ್ರ ಮಾಡ್ತಿದ್ದೆ. ಬ್ಲಡೀ ಬ್ಯಾಸ್ಟರ್ಡ್ಸ್. ಅದೆಂತಾ ಪೇರೆಂಟ್ಸ್ ಅವರು" ಆಕೃತಿ ಹಲ್ಲುಮಸೆದಳು.

"ಹೂಂ, ರಾವ್ ಈ ವಿಷಯದಲ್ಲಿ ಭಾರೀ ಅದೃಷ್ಟವಂತರು. ಸಮನ್ವಿತಾ ಆಗಿದ್ದಕ್ಕೆ ತಾನು ಜ್ವರ ಬರ್ಸಿಕೊಂಡಳು. ಇಗೋ…... ಈ ರಾಕ್ಷಸಿ ಆಗಿದ್ರೆ ಅವರನ್ನೇ ಬಡ್ದು ಬಾಯಿಗೆ ಹಾಕ್ಕೋತಿದ್ಲು. ಇವಳ ಮದ್ವೆ ಅಲ್ಲಾ ತಾವು ಮದ್ವೆ ಆಗಿರೋದೇ ಮರೀಬೇಕಿತ್ತು. ಶೂಟ್ ಮಾಡಿ ಜೈಲಿಗೆ ಹೋಗ್ತಿದ್ಲೇನೋ…..." ತಂಗಿಯ ಕಾಲೆಳೆದ.

"ಅದೆಲ್ಲಾ ಬಿಡು. ಈಗ ನಿನ್ನ ನಿರ್ಧಾರ ಏನು?" ಸೊಂಟದ ಮೇಲೆ ಕೈ ಇಟ್ಟು ಕೇಳಿದಳು.

"ನೀನ್ಯಾಕೆ ಹೀಗೆ ಒನಕೆ ಓಬವ್ವನ ತರ ನಿಂತಿದ್ದೀ? ಏನು ನಿರ್ಧಾರ?"

"ಅದೇ ಅತ್ತಿಗೆನ ಯಾವಾಗ ಮನೆಗೆ ಕರ್ಕೊಂಡು ಬರ್ತೀಯಾ ಅಂತ?"

"ಅತ್ತಿಗೆನಾ? ಅಬ್ಬಾ ರಾಕ್ಷಸಿ…. ನನ್ನ ಅಣ್ಣ ಅಂತ ಕರ್ಯೋಕಾಗಲ್ಲ ನಿನ್ಗೆ. ಮಿಸ್ಟರ್ ಪೈಂಟರ್, ಮಿಸ್ಟರ್ ಉಸ್ತಾದ್ ಅಂತೆಲ್ಲಾ ಹಾರಾಡ್ತೀಯ. ಈಗ ಅತ್ತಿಗೆ ಅಂತೆ ಅತ್ತಿಗೆ…... ಮುಖ ನೋಡು…..."

"ಹೌದೋ….. ಅವಳು ಸರಿಯಾಗೇ ಕೇಳಿದ್ದಾಳೆ. ನೋಡು ಅಭಿ… ನಮಗೆ ಅವತ್ತಿಂದನೂ ಸಮನ್ವಿತಾನೇ ಸೊಸೆ ಆಗ್ಬೇಕು ಅಂತ‌ ಆಸೆ ಇತ್ತು. ನೀನು ಒಪ್ಪದೇ ಮಾತುಕತೆ ಅಂತ ಕರ್ದು ಹೀಗಾಯ್ತು. ಒಳ್ಳೇದೇ ಬಿಡು. ಈಗೆಲ್ಲಾ ಮುಗೀತಲ್ಲ. ಅವ್ಳ ಮನಸ್ಸು ಮೊದಲೇ ಸರಿ ಇಲ್ಲ. ಒಬ್ಳೇ ಇರೋದು ಬೇಡ. ಇಲ್ಲಿಗೆ ಕರ್ಕೊಂಡು ಬಂದ್ಬಿಡೋಣ" ಮಗಳ ಮಾತನ್ನು ಅನುಮೋದಿಸಿದ ಮೃದುಲಾ, "ಅಲ್ವೇನ್ರೀ?" ಎಂದರು ಪತಿಯ ಮುಖ ನೋಡುತ್ತಾ.

"ಹೈಕಮಾಂಡ್ ಆರ್ಡರ್ ಆದ್ಮೇಲೆ ಮುಗೀತು. ಈಗ್ಲೇ ಗಾಡಿ ತೆಗೀಲಾ?" ಎಂದರು ತಮಾಷೆಯಾಗಿ.

"ಅಬ್ಬಾ, ಏನು ಮೂರೂ ಜನರ ಬಾಯಲ್ಲಿ ಒಂದೇ ಕ್ಯಾಸೆಟ್ ಪ್ಲೇ ಆಗ್ತಿದೆ. ಈಗ್ಲೇ ಹೀಗೆ... ಮುಂದೆ ಇನ್ಹೇಗೋ…...." ಚಿಂತೆ ನಟಿಸಿದ.

"ಏ ಕಳ್ಳ, ಸಾಕು ಸುಮ್ನಿರೋ. ನಿನ್ನ ಮನಸ್ಸಲ್ಲಿರೋದು ನಮ್ಮ ಬಾಯಲ್ಲಿ ಅಷ್ಟೇ. ಮನಸ್ಸಲ್ಲೇ ಮಂಡಿಗೆ ತಿಂತಿದ್ದೀಯಾ ಅಂತ ಗೊತ್ತು ಸುಮ್ನಿರು" ಎಂದ ಮೃದುಲಾ ಕಡೆ ನೋಡಿ, "ಇದೂ ಗೊತ್ತಾಗುತ್ತಾ ನಿಂಗೆ. ಛೇ, ನಂಗೊಂಚೂರು ಪ್ರೈವೆಸಿನೇ ಇಲ್ಲಾ" ಎಂದ ಚಿಂತಾಕ್ರಾಂತನಾಗಿ. ಅವನ ತಲೆಗೊಂದು ಮೊಟಕಿದವರು, "ಸರಿ ಈಗೇನು ಮಾಡೋದು ಅಂತ?" ಕೇಳಿದರು.

"ಮಾತೇ, ನಿನ್ನ ಸೊಸೆ ಮೊದ್ಲೇ ಹೇಳಿದ ಮಾತು ಕೇಳೋ ಪೈಕಿಯಲ್ಲ. ಇನ್ನು ಇಲ್ಲಿ ಕಥೆ ಟ್ರಾಕ್ ಬೇರೆ ಹಳಿತಪ್ಪಿದ್ದು. ಹಳಿತಪ್ಪಿದ ಟ್ರಾಕಲ್ಲಿ ಜಾಸ್ತಿ ದೂರ ಹೋದ್ರೆ ನಾನು ಹಳ್ಳ ಸೇರ್ತೀನಿ. ಬೇರೆ ಟ್ರಾಕ್ ರೆಡಿ ಮಾಡ್ಬೇಕು. ಸೋ ನಾಳೆಯಿಂದ ಆಪರೇಷನ್ ಡಾಕ್ಟ್ರಮ್ಮ ಶುರು ಮಾಡ್ಬೇಕು. ನೋಡೋಣ ಯಾರು ಯಾರಿಗೆ ಆಪರೇಷನ್ ಮಾಡೋದು ಅಂತ. ಅದೇನೇ ಇರ್ಲಿ ಅಮ್ಮಾ. ನಿನ್ನ ಸೊಸೆ ಮಾತ್ರಾ ಬುದ್ಧು ಅಂದ್ರೆ ಬುದ್ಧು... ಎಷ್ಟೆಲ್ಲಾ ಸರ್ಕಸ್ ಮಾಡಿ ಹಿಂಟ್ ಕೊಟ್ರೂ ಏನು ಹೇಳ್ತಿದ್ದೀನಿ ಅಂತಾನೇ ಅರ್ಥ ಆಗ್ಲಿಲ್ಲ ನಮ್ಮ ಡಾಕ್ಟ್ರಿಗೆ. ಪೇಷೆಂಟ್ಸ್ ನೋಡಿ ನೋಡಿ ಬುದ್ಧಿ ಮಂದ ಆಗಿದೆ…..." ಎಂದ.

"ನೋಡೋ, ನೀನು ಏನಾದ್ರೂ ಮಾಡ್ಕೋ. ನನ್ನ ಸೊಸೆ ಸುದ್ದಿಗೆ ಮಾತ್ರ ಬರ್ಬೇಡ. ಸರಿ ಇರೋಲ್ಲ ಮತ್ತೆ. ಬುದ್ಧು ಅಂತೆ ಬುದ್ಧು….. ಹೌದೋ…... ನೀವು ಗಂಡಸರಿಗೆಲ್ಲಾ ಹಾಗೇ. ಹೆಣ್ಮಕ್ಕಳು ಬುದ್ಧು ತರನೇ ಕಾಣೋದು. ಇನ್ನೊಂದ್ಸಾರಿ ಬುದ್ಧಿ ಮಂದ ಅಂದ್ರೆ ಮಗನೇ ಲಟ್ಟಣಿಗೆ ತಗೊಂಡು ಚಪಾತಿ ತರ ಲಟ್ಟಿಸಿ ಬಿಡ್ತೀನಿ ನೋಡು. ಈಗ್ಲೇ ಲೇಟಾಯ್ತು. ಹೋಗಿ ಮಲ್ಕೋ. ಬೆಳಿಗ್ಗೆ ನನ್ನ ಸೊಸೆ ನೋಡೋಕೆ ಹೋಗ್ಬೇಕು" ಎದ್ದು ಹೋದರು ಮೃದುಲಾ.

"ಅಮ್ಮ ಹೇಳಿದ್ದು ಕೇಳ್ತಲ್ಲ. ನಾನು ಲಟ್ಟಣಿಗೆ ಎಲ್ಲಾ ಇಲ್ಲ. ಡೈರೆಕ್ಟ್ ಲಾಂಗು, ಮಚ್ಚೇ. ಗೊತ್ತಾಯ್ತ. ಹೋಗಿ ಬಿದ್ಕೋ" ತಾನೂ ತಾಯಿಯ ಹಿಂದೆ ಹೊರಟಳು ಆಕೃತಿ.

ಅಪ್ಪನೆಡೆಗೆ ನೋಟ ಹರಿಸಿದ. 'ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು, ಗಂಡಸರ ನೋವಿಗೇ ಇಲ್ಲಾ ಮುಲಾಮು….' ಎಂಬಂತೆ "ನಮ್ಮ ಪಾಡು ಇಷ್ಟೇ ಕಣೋ. ಏನೇನು ಕಡ್ದು ಕಟ್ಟೆ ಹಾಕ್ಬೇಕು ಅಂದ್ಕೊಂಡಿದ್ಯೋ ಅದನ್ನೆಲ್ಲ ಮದ್ವೆಗೆ ಮುಂಚೆನೇ ಮಾಡ್ಬಿಡು. ಆಮೇಲೆ ನಮ್ಮ ಜುಟ್ಟು ಜನಿವಾರ ಎರಡೂ ಇವರ ಕೈಯಲ್ಲೇ…..." ಎನ್ನುವಾಗಲೇ "ಏನ್ರೀ ಅದು ಗುಸುಗುಸು" ಒಳಗಿಂದಲೇ ಕೂಗಿದರು ಮೃದುಲಾ.

"ಏನಿಲ್ವೇ, ಬೆಳಿಗ್ಗೆ ಹಾಸ್ಪಿಟಲ್ಲಿಗೆ ಹೋಗ್ಬೇಕಲ್ಲ. ಅದ್ಕೇ ಬೇಗ ಅಲಾರಾಂ ಇಟ್ಕೋ ಮಗನೇ ಅಂತಿದ್ದೆ ಅಷ್ಟೇ" ಎಂದು ಹೊರಡಲನುವಾದವರು ನಿಂತು, "ಆದ್ರೂ ಅಭಿ, ನಿನ್ಗೆ ನನ್ನಷ್ಟು ಸಮಸ್ಯೆ ಆಗೋಲ್ಲ ಬಿಡು. ನನ್ನ ಸೊಸೆ ಪಾಪದವಳು….." ಅವನು ಕಿರುಚುವ ಮುನ್ನ ಕಾಲ್ಕಿತ್ತರು.

'ಎಂಥಾ ಮರ್ಯಾದೆ, ಏನು ಕಥೆ…..ಅಯ್ಯೋ ಅಭಿ ನಿನ್ನ ಮುಖಕ್ಕಿಷ್ಟು ಬೆಂಕಿ ಹಾಕ. ಅಲ್ವೋ ಈಗ್ಲೇ ಹೀಗೆ, ಇನ್ನು ಅವ್ಳು ಮನೆಗೆ ಬಂದ್ಮೇಲೆ ಅಷ್ಟೇ. ಮುಗೀತು ನಿನ್ನ ಕಥೆ. ನಿನ್ನ ಮೂಸೋರೂ ಗತಿ ಇರೋಲ್ಲ. ಅಪ್ಪಾ ದೇವ್ರೇ, ನನ್ನ ಫ್ಯೂಚರ್ ನಮ್ಮಪ್ಪಗಿಂತನೂ ಹೀನಾಯ ಆಗೋ ಎಲ್ಲಾ ಲಕ್ಷಣಗಳೂ ಕಾಣ್ತಿವೆ. ನನ್ನ ಪಾಡು ನಾಯಿ ಪಾಡಾಗಿದೆ. ಇವ್ರೆಲ್ಲಾ ಸೇರಿ ನನ್ನ ಅಮ್ಮಾವ್ರ ಗಂಡ ಮಾಡ್ತಾರಾ ಅಂತ. ಏನಾದ್ರಾಗ್ಲಿ…. ಡಾಕ್ಟ್ರನ್ನೇ ನನ್ನ ಪಾರ್ಟಿಗೆ ಸೇರಿಸ್ಕೋಬೇಕು. ನನ್ನ ಗೋಳು ಕೇಳೋರು ಯಾರೂ ಇಲ್ವಾ ತಂದೇ.......' ಎಂದು ತನ್ನ ತಾನೇ ಹಳಿದುಕೊಳ್ಳುತ್ತಾ ರೂಮಿನತ್ತ ಹೆಜ್ಜೆ ಹಾಕಿದ. 

            *****ಮುಂದುವರೆಯುತ್ತದೆ*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ