ಶುಕ್ರವಾರ, ಜೂನ್ 26, 2020

ಭಿನ್ನ...... the broken are different

#spoiler_alert 


ಜೂಲಿಯಸ್ ಸೀಜ಼ರ್ ನ Vini vidi vici…… ಅನ್ನುವ ಪ್ರಖ್ಯಾತ ಲ್ಯಾಟಿನ್ ಉಕ್ತಿಯನ್ನು ಕನ್ನಡಿಗರ ನಾಲಿಗೆತುದಿಯಲ್ಲಿ ಮೆರೆಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ 'ಶರಪಂಜರ'. ಕಲ್ಪನಾ ಎಂದರೆ 'ನಾ ಬಂದೆ, ನಾ ನೋಡ್ದೆ, ನಾ ಗೆದ್ದೇ' ಎಂದು ಉನ್ಮಾದದಿಂದ ಬಡಬಡಿಸುವ ಕಾವೇರಿಯೇ ಮೊದಲು ನೆನಪಾಗುವುದು. ಅಂತಹ ಕ್ಲಾಸಿಕ್ ಚಿತ್ರದ ಮೂಲ ಎಳೆಯಿಂದ ಸ್ಪೂರ್ತಿ ಪಡೆದು ಅದಕ್ಕೊಂದು ಬೇರೆಯದೇ ಆಯಾಮವನ್ನು ನೀಡಿರುವ ಸಿನಿಮಾ 'ಭಿನ್ನ'. 

'The broken are different' ಎಂಬ ವಿಶಿಷ್ಟ ಅಡಿಬರವನ್ನು ಹೊಂದಿರುವ 'ಭಿನ್ನ' ಹೆಸರಿನಷ್ಟೇ ವಿಭಿನ್ನವಾದ ಸಿನಿಮಾ. ತಮ್ಮ ಮೊದಲ ಚಿತ್ರದಲ್ಲಿ ವಾಸ್ತವಿಕ ಘಟನೆಗಳನ್ನು ಸಮಯದ ಸೂತ್ರದಲ್ಲಿ ಪೋಣಿಸಿ ಕುತೂಹಲ ಕೆರಳಿಸಿದ್ದ ನಿರ್ದೇಶಕರು ಈ  ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನೋಡುಗರನ್ನು ಭಯಗೊಳಿಸಿ ಬೆಚ್ಚಿಬೀಳಿಸುತ್ತಲೇ ನಮ್ಮ ಕಲ್ಪನೆಯ ಪಕ್ಷಿಗೆ ರೆಕ್ಕೆ ತೊಡಿಸಿದ್ದಾರೆ.

ಮೇಲ್ನೋಟಕ್ಕೆ ತನ್ನ ಬದುಕಿನಲ್ಲಿ ಘಟಿಸಿದ ಘಟನೆಗಳಿಂದ ಖಿನ್ನತೆಯ ಕೂಪಕ್ಕೆ ಜಾರಿ, ವಾಸ್ತವ ಹಾಗೂ ಭ್ರಮೆಯ ನಡುವಿನ ಅಂತರ ಗುರುತಿಸಲಾಗದೇ ತೊಳಲಾಡುವ ಮಹಿಳೆಯೊಬ್ಬಳ ಮನೋವಲಯವನ್ನು ಕೇಂದ್ರವಾಗಿಸಿಕೊಂಡ ಕಾಣುವ ಈ ಸಿನಿಮಾದ ಆಂತರ್ಯ ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದುದು. ಈ ಸಂಕೀರ್ಣತೆಗೆ ಮುಖ್ಯ ಕಾರಣ ಚಿತ್ರದ ನಿರೂಪಣೆ. ಇಡೀ ಚಿತ್ರದಲ್ಲಿ ವಾಚ್ಯವಾಗದೇ ಸೂಚ್ಯವಾಗಿಯೇ ಉಳಿದ ಹಲವು ವಿಚಾರಗಳಿವೆ. ಆ ಸಂಗತಿಗಳ ಬಗ್ಗೆ ಒಂದಿಷ್ಟು ಸುಳಿವುಗಳನ್ನು ಮಾತ್ರ ಬಿಟ್ಟುಕೊಟ್ಟು ನಿರ್ಧಾರವನ್ನು ವೀಕ್ಷಕರಿಗೇ ಬಿಟ್ಟಿದ್ದಾರೆ. ಆ ಕಾರಣದಿಂದಲೇ ಸಾಮಾನ್ಯವಾಗಿ ಎಲ್ಲವನ್ನೂ ವಾಚ್ಯವಾಗಿಯೇ ನೋಡಿ ಅಭ್ಯಾಸವಿರುವ ನೋಡುಗರಿಗೆ 'ಭಿನ್ನ' ಅಸಂಪೂರ್ಣ ಎನಿಸಲೂಬಹುದು. ಸಣ್ಣಪುಟ್ಟ ಸಂಗತಿಗಳನ್ನೂ ನಿರ್ಲಕ್ಷಿಸದೇ ಸಂಪೂರ್ಣ ಗಮನದಿಂದ ಚಿತ್ರವನ್ನು ನೋಡಿ ಸನ್ನಿವೇಶಗಳನ್ನು ಒಂದಕ್ಕೊಂದು ಹೊಂದಿಸಿಕೊಂಡರೆ ಮಾತ್ರವೇ 'ಒಡೆದ ಚೂರುಗಳು ಭಿನ್ನ ಏಕೆ' ಎನ್ನುವ ಪ್ರಶ್ನೆಗೆ ಸಮರ್ಪಕವಾದ ಉತ್ತರ ದೊರಕುತ್ತದೆ‌.

ಸ್ಕ್ರಿಜೋಫೇನಿಯಾದಿಂದ ಬಳಲುತ್ತಿದ್ದ ಕಾವೇರಿ ಆತ್ಮಹತ್ಯೆಯ ಪ್ರಯತ್ನ ಮಾಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅವಳಿಗೆ ಆರಂಭಿಕ ಚಿಕಿತ್ಸೆ ನೀಡುವ ವೈದ್ಯರು ಇದು ಆತ್ಮಹತ್ಯೆ ಯತ್ನವಾದ ಕಾರಣ ಪೋಲಿಸರಿಗೆ ವಿಚಾರ ತಿಳಿಸಿ ನಿಯಮಗಳನ್ನು ಆಕೆಯನ್ನು ಸರ್ಕಾರಿ ನಿಯೋಜಿತ ಮನೋವೈದ್ಯರ ಬಳಿಗೆ ಕಳಿಸುತ್ತಾರೆ. ಆ ಮನೋವೈದ್ಯರು ಅವಳ ಪತಿ ಸತೀಶನ ಬಳಿ ಕಾವೇರಿಯನ್ನು ಭೇಟಿಯಾಗುವ ಮೊದಲು ಅವಳ ಬಗ್ಗೆ ಚೆನ್ನಾಗಿ ತಿಳಿದಿರುವ, ಅವಳಿಗೆ ಆಪ್ತರಾಗಿದ್ದ ಕೆಲ ವ್ಯಕ್ತಿಗಳೊಂದಿಗೆ ಮಾತನಾಡಬೇಕೆಂಬ ಬೇಡಿಕೆಯನ್ನಿಡುತ್ತಾರೆ. ಹಾಗೆ ಅವರನ್ನು ಭೇಟಿಯಾಗುವ ಮೋಹನ್ - ವಿಮಲಾ ದಂಪತಿ ಹಾಗೂ ಖುದ್ದು ಸತೀಶ್ ವೈದ್ಯರಿಗೆ ಕಾವೇರಿಯ ಬದುಕಿನ ಬಗ್ಗೆ ಹೇಳುವ ಮೂಲಕ ನೋಡುಗರೆದುರು ಅವಳ ಸಂಕ್ಷಿಪ್ತ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅವಳ ಶೋಷಿತ ಬಾಲ್ಯ, ಅವಳೆಡೆಗಿನ ಸತೀಶನ ನಿರ್ಲಕ್ಷ್ಯ, ಗರ್ಭಪಾತದ ನಂತರ ಅವಳನ್ನಾವರಿಸುವ ಖಿನ್ನತೆ, ವಿಮಲಾಳೊಂದಿಗಿನ ಸತೀಶನ ವಿವಾಹೇತರ ಸಂಬಂಧ, ಮೋಹನ್ ಹಾಗೂ ಕಾವೇರಿಯ ನಡುವಿನ ಸಂಬಂಧ….. ಹೀಗೆ ಕಾವೇರಿಯ ಬದುಕಿನ ಹಲವು ಚದುರಿದ ಅಸ್ಪಷ್ಟ ಚಿತ್ರಗಳನ್ನು ಈ ಆರಂಭಿಕ ಸನ್ನಿವೇಶದಲ್ಲಿ ಸುಳಿವಿನಂತೆ ನೀಡುವ ಮೂಲಕ ಚಿತ್ರ ನೋಡುಗರನ್ನೂ ತನ್ನೊಳಗೆ ಸೆಳೆದುಕೊಳ್ಳಲು ತಯಾರಾಗುತ್ತದೆ. ಇತ್ತ ವಿಶುವಲ್ ಸೈಕೋ ಡ್ರಾಮಾ ಥೆರಪಿಯೊಂದಿಗೆ ಕಾವೇರಿಗೆ ಚಿಕಿತ್ಸೆ ಆರಂಭವಾಗುವುದರೊಟ್ಟಿಗೆ ಕಥೆ ಕಾವೇರಿಯ ಕೆಲ ಸಮಯದ ಹಿಂದಿನ ಬದುಕಿನೊಳಗೆ ಸಾಗುತ್ತದೆ.


ಕಾವೇರಿ ಮೆಥೆಡ್ ಆಕ್ಟಿಂಗ್ ಬಗ್ಗೆ ವಿಶೇಷ ಒಲವುಳ್ಳ ಉದಯೋನ್ಮುಖ ನಟಿ. ಬದುಕಿನ ಜಂಜಡಗಳಿಂದ ಬೇಸತ್ತಾಗ ಬೈಕಿನಲ್ಲಿ ಸೋಲೋ ರೈಡ್ ಹೋಗುವುದು ಅವಳ ಹವ್ಯಾಸ. ತನ್ನ ಮುಂದಿನ ಚಿತ್ರದ ನಿರ್ದೇಶಕರಿಂದ ತನ್ನ ಪಾತ್ರದ ಸ್ಕ್ರಿಪ್ಟ್ ಪಡೆದುಕೊಳ್ಳುವ ಕಾವೇರಿ ಅದನ್ನೋದಿ ಪಾತ್ರಕ್ಕೆ ತಯಾರಿ ನಡೆಸಲು ಸೋಲೋ ಟ್ರಿಪ್ ಗೆ ಹೊರಡುತ್ತಾಳೆ. ನಗರದ ಬಿಡುವಿರದ ಗೌಜಿನಿಂದ ದೂರ ಪ್ರಕೃತಿಯ ಮಡಿಲಲ್ಲಿನ ಒಂದು ಮನೆಯಲ್ಲಿ ಉಳಿದುಕೊಳ್ಳುವ ಅವಳು ಸ್ಕ್ರಿಪ್ಟ್ ಅನ್ನು ಓದಲು ತೊಡಗುತ್ತಾಳೆ. ಈ ಹಂತದಿಂದ ಚಿತ್ರದ ಗತಿ ಬದಲಾಗುತ್ತದೆ. 

ಸ್ಕ್ರಿಪ್ಟ್ ಓದತೊಡಗಿದಂತೆ ಕಾವೇರಿಗೆ ಅದರಲ್ಲಿನ ಕಥೆಗೂ ತನ್ನ ನೈಜ ಬದುಕಿಗೂ ಸಾಮ್ಯತೆ ಕಾಣುತ್ತದೆ. ಕ್ರಮೇಣ ತನ್ನನ್ನೇ ಕಥೆಯೊಳಗಿನ ಮುಖ್ಯಪಾತ್ರ ದೇವಕಿಯಾಗಿ, ಸತೀಶ್, ಮೋಹನ್ ಹಾಗೂ ವಿಮಲಾರನ್ನು ಉಳಿದ ಮೂರು ಪಾತ್ರಗಳಾಗಿ ಭ್ರಮಿಸತೊಡಗುವ ಕಾವೇರಿಯೊಂದಿಗೆ ನಾವೂ ಕೂಡಾ ಯಾವುದು ಭ್ರಮೆ ಯಾವುದು ವಾಸ್ತವ ಎಂಬುದನ್ನು ಗುರುತಿಸಲಾಗದೇ ಹೋಗುತ್ತಿದ್ದೇವೆ ಎನ್ನಿಸತೊಡಗುತ್ತದೆ. ಕಾವೇರಿ ಉಳಿದುಕೊಂಡಿರುವ ಮನೆ ಹಾಗೂ ಸ್ಕ್ರಿಪ್ಟಿನೊಳಗಣ ಕಥೆ ನಡೆಯುವ ಮೋಹನನ ಮನೆಯ ನಡುವೆ ಹಠಾತ್ತನೆ ಬದಲಾಗುವ ದೃಶ್ಯಗಳು, ಹಾಗೆ ಬದಲಾದ ದೃಶ್ಯಗಳಲ್ಲಿರುವ ಕಂಟಿನ್ಯೂಯಿಟಿ ನಿಜಕ್ಕೂ ನಮ್ಮನ್ನು ಗೊಂದಲದಲ್ಲಿ ಬೀಳಿಸುತ್ತದೆ. ಹೀಗೆ ಪ್ರತೀ ಹಂತದಲ್ಲೂ ಭಯ, ಗೊಂದಲಗಳನ್ನು ಸೃಷ್ಟಿಸುತ್ತಾ ಸಮಾನಾಂತರವಾಗಿ ಸಾಗುವ ಎರಡು  ಕಥೆಗಳು ಕೊನೆಗೊಮ್ಮೆ ಮುಖಾಮುಖಿಯಾಗುತ್ತದೆ. ಅಲ್ಲೊಂದು ರೋಚಕ ಅಂತ್ಯವಿದೆ. ಆ ನಂತರದಲ್ಲಿ ಕಾವೇರಿಯ ಮಾನಸಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟು ಆಕೆ ಆತ್ಮಹತ್ಯೆ ಪ್ರಯತ್ನ ಮಾಡಿಕೊಳ್ಳುವ ಮೂಲಕ ಮತ್ತೆ ಕಥೆ ಆರಂಭದ ಸನ್ನಿವೇಶಕ್ಕೆ ಮರಳುತ್ತದೆ.

ಹದಿನಾಲ್ಕು ವಾರಗಳ ಥೆರಪಿಯ ನಂತರವೂ ಕಾವೇರಿಯ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ಅವಳನ್ನು ಮನೆಗೆ ಕರೆದೊಯ್ಯುವೆನೆಂಬ ಸತೀಶನ ಬೇಡಿಕೆಗೆ ವೈದ್ಯರಿಂದ ಸಹಮತಿ ಸಿಗುವುದಿಲ್ಲ. ಕಾವೇರಿಯ ಆಸ್ಪತ್ರೆ ವಾಸ ಅನಿರ್ದಿಷ್ಟಾವಧಿಗೆ ಮುಂದುವರೆಯುತ್ತದೆ. ಆದರೆ ಇಡೀ ಚಿತ್ರದ ಅಸಲಿ ತಾತ್ಪರ್ಯವಿರುವುದು ಕೊನೆಯ ಸನ್ನಿವೇಶದಲ್ಲಿ.

ಕಾವೇರಿಯ ಇಂದಿನ ಸ್ಥಿತಿಗೆ ತಾನೇ ಕಾರಣ ಎಂಬ ಪಶ್ಚಾತಾಪದಲ್ಲಿ ದಗ್ಧನಾಗಿ ದೀನ ನೋಟದಿಂದ ಚಿಕಿತ್ಸಾ ಕೇಂದ್ರದೊಳಗೆ ಸಾಗುವ ಕಾವೇರಿಯನ್ನೇ ಸತೀಶ್ ದಿಟ್ಟಿಸುತ್ತಿರುವಂತೆಯೇ ಅಲ್ಲಿನ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ. ತನ್ನ ವಾರ್ಡಿನಲ್ಲಿ ಕುಳಿತ ಕಾವೇರಿ ತನ್ನ ಕೈಯಲ್ಲಿ ಗ್ಲಾಸ್ ಇರುವಂತೆ, ತಾನು ಅದರೊಳಗಿನ ಪೇಯವನ್ನು ಆಘ್ರಾಣಿಸಿ ಕುಡಿಯುವಂತೆ ನಟಿಸುತ್ತಾ ನಗು ಬೀರುತ್ತಾಳೆ. ಬಾಗಿಲಿನ ಹೊರಗಿರುವ ಸತೀಶ ಪಶ್ಚಾತಾಪದ ಪಂಜರದೊಳಗೆ ಜೀವನ ಪರ್ಯಂತ ಬಂಧಿಯಾದರೆ, ಒಳಗಿರುವ ಕಾವೇರಿಯ ವಿಜಯದ ನಗುವಿನಲ್ಲಿ ತನಗೆ ದ್ರೋಹ ಬಗೆದ ಸತೀಶನ ಮೇಲೆ ಹಗೆ ತೀರಿಸಿಕೊಂಡ ಭಾವ ನಿಚ್ಚಳವಾಗಿದೆ. ಮೆಥೆಡ್ ಆಕ್ಟಿಂಗ್ ಪರಿಣಿತಳಾದ ಕಾವೇರಿ ಸ್ಕ್ರಿಜೋಫೇನಿಯಾ ರೋಗಿಯಾಗಿ ನಟಿಸಿ ಯಾರೊಬ್ಬರಿಗೂ ಅರಿವಾಗದಂತೆ ತನ್ನ ದ್ವೇಷವನ್ನು ತೀರಿಸಿಕೊಳ್ಳುತ್ತಾಳೆ. ಚಿತ್ರದ ಪೋಸ್ಟರಿನಲ್ಲಿರುವ 'vini vidi vici' ಯನ್ನು ಸೋತಂತೆ ಕಂಡರೂ ಗೆದ್ದವಳು ಕಾವೇರಿಯೇ ಎಂದು ಅರ್ಥೈಸಿಕೊಳ್ಳಬಹುದು. ಇದನ್ನು ಧ್ವನಿಸುವ ಹಲವು ಪ್ರತಿಮೆಗಳನ್ನು ಚಿತ್ರದುದ್ದಕ್ಕೂ ಕಾಣಬಹುದು(ವರ್ಣಚಿತ್ರ, ವಾಲ್ ಕ್ಲಾಕ್, ಪಂಜರದೊಳಗಿನ ಪಕ್ಷಿಯ ಶೋ ಪೀಸ್, ಕೊನೆಯಲ್ಲಿ ಕಾವೇರಿ ಮಾಡಿರುವ ಡ್ರಾಯಿಂಗ್ ಇತ್ಯಾದಿ).

ಈ ಚಿತ್ರದ ವೈಶಿಷ್ಟ್ಯತೆ ಎಂದರೆ ಇಡೀ ಚಿತ್ರ ಯಾವ ಸಂಗತಿಯನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ಉತ್ತರವಿಲ್ಲದ ಹಲವು ಪ್ರಶ್ನೆಗಳು ಇಲ್ಲಿವೆ. ನಡೆಯುವ ಘಟನೆಗಳು, ಅಸ್ಪಷ್ಟ ಮಾಹಿತಿಗಳನ್ನು ಊಹೆಗೆ‌ ತಕ್ಕಂತೆ ಜೋಡಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ನೋಡುಗರಿಗೇ ನೀಡಿದ್ದಾರೆ ನಿರ್ದೇಶಕರು. ಸ್ಕ್ರಿಪ್ಟ್ ಓದುತ್ತಿರುವ ಕಾವೇರಿಗಾಗುವ ವಿಚಿತ್ರ ಅನುಭವಗಳಿಗೂ ಹಾಗೂ ಸ್ಕ್ರಿಪ್ಟಿನೊಳಗಣ ಕಥೆಯಲ್ಲಿ ಘಟಿಸುವ ಘಟನೆಗಳಿಗೂ ಸಂಬಂಧ ಕಲ್ಪಿಸಲು ಅನುವಾಗುವಂತೆ ದೊರಕುವ ಸುಳಿವುಗಳು ವೀಕ್ಷಕರಿಗೆ ತಾವೇ ವಾಸ್ತವ ಹಾಗೂ ಭ್ರಮೆಯ ಜಾಲದೊಳಗೆ ಸಿಲುಕಿದ್ದೇವೇನೋ ಎನ್ನುವ ಭಾವನೆ ಹುಟ್ಟಿಸುವಷ್ಟು ಟ್ರಿಕ್ಕಿಯಾಗಿವೆ. ಖಂಡಿತವಾಗಿಯೂ ಒಂದೇ ವೀಕ್ಷಣೆಗೆ ದಕ್ಕುವ ಸಿನಿಮಾ ಇದಲ್ಲ. ಕಥೆಯ ಹೊಳಹುಗಳನ್ನು ಅರ್ಥೈಸಿಕೊಂಡು ಕಥೆಯ ಸಾರವನ್ನು ಗ್ರಹಿಸಲು ಹಲವು ಬಾರಿ ಸಿನಿಮಾವನ್ನು ನೋಡಬೇಕು.

ಶರಪಂಜರ ಸಿನಿಮಾಕ್ಕೊಂದು ಭಿನ್ನ ಆಯಾಮ ನೀಡಿರುವ ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಉಲ್ಲೇಖ ಒಂದಿಲ್ಲೊಂದು ರೂಪದಲ್ಲಿ ಹಲವೆಡೆ ಇದೆ. ಕಥಾನಾಯಕ ಹಾಗೂ ನಾಯಕಿಯ ಹೆಸರೂ ಶರಪಂಜರವನ್ನೇ ಧ್ವನಿಸುತ್ತದೆ. ಕಾವೇರಿಯ ಬೈಕಿನ ನಂಬರ್ ಪ್ಲೇಟ್, ಮೈಲಿಕಲ್ಲು, ಹಿನ್ನೆಲೆಯಲ್ಲಿನ ಹಾಡುಗಳು…..ಹೀಗೆ ಪುಟ್ಟಣ್ಣನವರನ್ನು ನೆನಪಿಸುವ ಹಲವು ಸಂಗತಿಗಳು ಚಿತ್ರದುದ್ದಕ್ಕೂ ಇವೆ.

ನೋಡುಗರ ಕಲ್ಪನೆಗೆ ಸಂಪೂರ್ಣ ಅವಕಾಶವಿರುವ ಕಾರಣ ಕ್ಲೈಮ್ಯಾಕ್ಸ್‌ ಹೊರತುಪಡಿಸಿ ಉಳಿದಿಡೀ ಚಿತ್ರವನ್ನು ಮೆಥೆಡ್ ಆಕ್ಟಿಂಗ್ ಪರಿಕಲ್ಪನೆಯ ಆಯಾಮದಿಂದಲೂ ಗ್ರಹಿಸಬಹುದು ಎನ್ನುವುದು ಈ ಸಿನಿಮಾದ ಇನ್ನೊಂದು ಹೆಚ್ಚುಗಾರಿಕೆ. 

ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರು ತಮ್ಮ ಎರಡನೇ ಚಿತ್ರದಲ್ಲೂ ಪ್ರಯೋಗಾತ್ಮಕ ಮಹಿಳಾ ಕೇಂದ್ರಿತ ವಿಚಾರವನ್ನೇ ಆಯ್ದುಕೊಂಡಿದ್ದಾರೆ. ಆದರೆ 'ಶುದ್ಧಿ' ಹಾಗೂ 'ಭಿನ್ನ' ಎರಡನ್ನು ಹೋಲಿಸಲಾಗದು. ಇಡೀ ಸಮಾಜದ ಭಾಗವಾಗಿ ಮಹಿಳೆಯರ ಕಥನವನ್ನು ವಿವರಿಸಿದ್ದ 'ಶುದ್ಧಿ' ಸಿನಿಮಾದ ವ್ಯಾಪ್ತಿ ಬಹಳ ವಿಶಾಲವಾದುದು. ಆದರೆ 'ಭಿನ್ನ' ಕೌಟುಂಬಿಕ ಚೌಕಟ್ಟಿನೊಳಗೆ ಮಹಿಳೆ ಎದುರಿಸುವ ಹಲವು ಸಮಸ್ಯೆಗಳ ಮೇಲೆ, ಆಕೆಯ ಮನೋವಲಯದ ಮೇಲೆ ಕೇಂದ್ರಿತವಾದ ಭಾವತೀವ್ರತೆಯ ಸಿನಿಮಾ. ಕುಟುಂಬದೊಳಗಿನ ಸೂಕ್ಷ್ಮ ಸಮಸ್ಯೆಗಳಾದ ಲೈಂಗಿಕ ದೌರ್ಜನ್ಯ, ದಾಂಪತ್ಯದ್ರೋಹ, ಮಾನಸಿಕ ತೊಳಲಾಟ ಮುಂತಾದವುಗಳ ಬಗೆಗೆ ಒಳನೋಟ ನೀಡುವ ಚಿತ್ರವಿದು.

ಇಡೀ ಚಿತ್ರದಲ್ಲಿರುವುದು ಏಳೆಂಟು ಪಾತ್ರಗಳು ಮಾತ್ರ. ಅದರಲ್ಲೂ ಮುನ್ನೆಲೆಯಲ್ಲಿರುವುದು ಕೇವಲ ನಾಲ್ಕೇ ಪಾತ್ರಗಳು. ಕಾವೇರಿ/ದೇವಕಿಯಾಗಿ ನಟಿಸಿರುವ ಪಾಯಲ್ ರಾಧಾಕೃಷ್ಣ ಅವರ ನಟನೆ ಇಡೀ ಚಿತ್ರದ ಜೀವಾಳ. ಒಮ್ಮೆ ಸೂತ್ರಧಾರಿಯಂತೆ ಇನ್ನೊಮ್ಮೆ ಪೀಡಿತೆಯಂತೆ ಕಾಣುವ ಎರಡು ಛಾಯೆಗಳ ಪಾತ್ರವನ್ನು ಅತ್ಯಂತ ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ. ಸಿದ್ಧಾರ್ಥ್ ಮಾಧ್ಯಮಿಕ, ಸೌಮ್ಯ ಜಗನ್ ಹಾಗೂ ಶಶಾಂಕ್ ಪುರುಷೋತ್ತಮ್ ಅವರು ಸತೀಶ್, ವಿಮಲಾ, ಮೋಹನ್ ಆಗಿ ಕಾಣಿಸಿಕೊಂಡಿದ್ದಾರೆ. ಮೂವರಲ್ಲಿ ಸೌಮ್ಯ ಉಳಿದಿಬ್ಬರಿಗಿಂತ ಹೆಚ್ಚು ಗಮನಸೆಳೆಯುತ್ತಾರೆ. ಜೆಸ್ಸಿ ಕ್ಲಿಂಟನ್ ಅವರ ಸಂಗೀತ ಹಾಗೂ ಆಂಡ್ರೀವ್ ಅಯಿಲೋ ಅವರ ಛಾಯಾಗ್ರಹಣ ನೋಡುಗರನ್ನು ಬೆಚ್ಚಿಬೀಳಿಸುತ್ತಾ ಸಿನಿಮಾಕ್ಕೆ ಹಾರರ್ ಅಂಶವನ್ನು ಅಳವಡಿಸುವಲ್ಲಿ ಸಮರ್ಥವಾಗಿದೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿ ಹಾಡಿರುವ ಶೀರ್ಷಿಕೆ ಗೀತೆ ಇಡೀ ಕಥೆಯ ಪರಿಭಾಷೆಯಂತಿದೆ.

'ನಾ ಮುರಿದ ಕನ್ನಡಿ ಚೂರಿನಂತೆ, ನಾ ಕಾಣೋ ಲೋಕ ನೂರರಂತೆ……' ಅನ್ನುವ ಸಾಲಿನಂತೆ ಒಡೆದ ಮನದ ನೂರು ಬಿಂಬಗಳ ಅಮೂರ್ತ ಯಾನವೇ ಭಿನ್ನ. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ