ಶುಕ್ರವಾರ, ಜೂನ್ 12, 2020

ಮನ್ವಂತರ

ಇದೆಂತಹ ಪ್ರಶ್ನೆ ಕೇಳಿಬಿಟ್ಟಿತು ನನ್ನ ಪುಟ್ಟ ಕಂದ!!!!
ಇದು ಈ ಹಾಲುಗಲ್ಲದ ಕಂದಮ್ಮನ ಬಾಯಿಯಿಂದ ಬರುವ ಪ್ರಶ್ನೆಯೇ? ಈಗಿನ್ನೂ ಎರಡನೇ ತರಗತಿಯಲ್ಲಿರುವ ಮುಗ್ಧತೆ ಮಾಸದ ಜೀವವದು.
ಈ ಜಗದ ಸೌಂದರ್ಯ-ಕ್ರೌರ್ಯಗಳೆರಡರ ಅರಿವೂ ಇಲ್ಲದ ಆ ಹಸುಳೆಯ ಮನದಲ್ಲಿ ಇಂತಹ ವಿಚಾರವೊಂದು ನುಸುಳಿದ್ದಾದರೂ ಹೇಗೆ?
ನನ್ನ ತಲೆ ತುಂಬಾ ಸಾವಿರ ಯೋಚನೆಗಳು ಕೊರೆಯತೊಡಗಿದವು.

ನನ್ನ ಕೆಲಸದ ಒತ್ತಡದಲ್ಲಿ ಇವನ ಮೇಲೆ ಗಮನ ಕಡಿಮೆಯಾಗುತ್ತಿದೆಯೇ?
ಮತ್ತೊಮ್ಮೆ ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. 

ಹೌದು ಎಂದಿತು ಅಂತರಾತ್ಮ.......

ಆದರೇನು ಮಾಡಲಿ? ಉದ್ಯೋಗ ನನ್ನ ಆಯ್ಕೆಯಲ್ಲ, ಅದು ನನ್ನ ಅನಿವಾರ್ಯತೆ. ನಮ್ಮದೇನು ಸಿರಿವಂತ ಕುಟುಂಬವಲ್ಲ. ನನ್ನವರು ಖಾಸಗಿ ಕಂಪೆನಿಯೊಂದರಲ್ಲಿ ದುಡಿಯುವುದು.ಬೆಂಗಳೂರಿನಂತಹ ಶಹರದಲ್ಲಿ ಒಬ್ಬರ ದುಡಿಮೆಯಿಂದ ಜೀವನ ಸಾಗಿಸುವುದು ಕಷ್ಟಸಾಧ್ಯವಾದ ಮಾತು. ಬಾಡಿಗೆ, ಕರೆಂಟ್ ಬಿಲ್ಲು, ನೀರಿನ ಬಿಲ್ಲು, ದಿನವಹಿ ಖರ್ಚು, ಮಗನ ಶಾಲೆ ಎಲ್ಲ ನಡೆಯಬೇಕಲ್ಲ. ಹಾಗಾಗಿ ನಾನೂ ಉದ್ಯೋಗಕ್ಕೆ ಹೋಗಲೇಬೇಕಾಯ್ತು.

ಆದರೆ ಎಲ್ಲಾ ದುಡಿಯುವ ಮಹಿಳೆಯರಂತೆಯೇ ನನ್ನದೂ ಅಡಕತ್ತರಿಯಲ್ಲಿ ಸಿಕ್ಕಿದಂತಹ ಪರಿಸ್ಥಿತಿ......
ಮನೆ - ಉದ್ಯೋಗ ಎರಡನ್ನೂ ಒಟ್ಟಿಗೇ ಸಂಭಾಳಿಸಬೇಕು.

ಹೆರಿಗೆ ರಜೆಯ ನಂತರ ಕೆಲಸಕ್ಕೆ ಮರಳಿದಾಗ ಒಂದೈದು ತಿಂಗಳು ಅಮ್ಮ, ಇನ್ನೊಂದಾರು ತಿಂಗಳು ಅತ್ತೆ ಬಂದಿದ್ದರು. ಆದರೆ ಅವರಿಗೂ ಅವರದೇ ಆದ ಜವಾಬ್ದಾರಿಗಳಿವೆ. ಮನೆ, ಗದ್ದೆ, ತೋಟ ಎಲ್ಲ ಬಿಟ್ಟು ಇಲ್ಲಿ ಎಷ್ಟು ದಿನ ಉಳಿಯಲಾದೀತು ಅವರಿಗೆ?
ಅದೂ ಅಲ್ಲದೇ ಈ ನಗರದ ತೋರಿಕೆಯ ಜೀವನ ಒಂದು ಚೂರೂ ಹಿಡಿಸದು‌ ಅವರಿಗೆ. ಹಳ್ಳಿಯ ಜನ ಇಡೀ ಊರಿನವರೆಲ್ಲಾ ತಮ್ಮ ಬಂಧು ಬಳಗ ಎನ್ನುವವರು. ಒಬ್ಬರಿಗೆ ಏನಾದರೂ ತೊಂದರೆಯಾದರೆ ಇಡೀ ಊರೇ ಒಟ್ಟಾಗಿ ಹೆಗಲು ಕೊಡುವಂತಹ ಮನಸ್ಥಿತಿಯಲ್ಲಿ ಇರುವವರು. ಈ ನಗರದಲ್ಲಿಯ ನಾಲ್ಕು ಗೋಡೆಗಳ ನಡುವೆ ಹುದುಗಿ ಆಚೀಚೆ ಮನೆಯಲ್ಲಿರುವವರು ಬದುಕಿದ್ದಾರೋ ಇಲ್ಲ ಸತ್ತಿರುವರೋ ಎಂದೂ ತಿಳಿಯದೇ ಜೀವನ ನಡೆಸುವ ಪರಿ ಅವರಿಗೆ ಹಿಡಿಸದು. ಇಲ್ಲಿಗೆ ಬಂದರೆ ಜೈಲಿನಲ್ಲಿದ್ದಂತೆ ಚಡಪಡಿಸುತ್ತಾರೆ. ಹಳ್ಳಿಗೆ ವಾಪಾಸಾದ ಮೇಲೆಯೇ ನೆಮ್ಮದಿ ಅವರಿಗೆ.

ಹಾಗೆ ಅವರು ಹೋದ ನಂತರ ನಾನೇ ಎಲ್ಲವನ್ನು ನಿಭಾಯಿಸಬೇಕಾಯಿತು. ಸ್ವಲ್ಪ ಸಮಯ ಕೆಲಸದಾಕೆ ಒಬ್ಬಳನ್ನು ನೇಮಿಸಿಕೊಂಡೆವಾದರೂ ಅದು ಖರ್ಚಿನ ಬಾಬ್ತಾಯಿತು. ಹಾಗಾಗಿ ನಾನೇ ಮನೆ ಹಾಗೂ ಮಗನನ್ನು ಸಂಭಾಳಿಸಿದ್ದೆ ಪತಿಯ ಸಹಕಾರದೊಂದಿಗೆ. ಎರಡೂವರೆ ವರ್ಷಕ್ಕೆಲ್ಲಾ ಪ್ಲೇ ಹೋಮ್, ಕಿಂಡರ್ ಗಾರ್ಡನ್ ಎಂದು ಆ ಮಗುವನ್ನು ನನ್ನಿಂದ ದೂರಗೊಳಿಸಿದ್ದಕ್ಕೆ ಬೇಸರವಿತ್ತಾದರೂ ಬೇರಾವ ಉಪಾಯವೂ ಇರಲಿಲ್ಲ ನನ್ನ ಬಳಿ. ಆದರೂ ಆಫೀಸ್ ಮುಗಿಸಿ ಮನೆಗೆ ಬಂದ ನಂತರ ಅವನೊಂದಿಗೆ ಆದಷ್ಟು ಸಮಯ ಕಳೆದು ಒಂದು ಸುರಕ್ಷತೆಯ ಭಾವ ಕಟ್ಟಿಕೊಡಲು ಸಾಕಷ್ಟು ಪ್ರಯತ್ನಿಸಿದ್ದವು ನಾವಿಬ್ಬರು. ನಂತರ ಶಾಲೆಗೆ ದಾಖಲಾದ ಮೇಲೆ ಸ್ನೇಹಿತರು, ಆಟ, ಪಾಠ, ಹೊಂವರ್ಕ್ ಎಂದು ಸಮಯ ಸರಿಯುತ್ತಿತ್ತು. ದಿನಂಪ್ರತಿ ಅವನ ಎಲ್ಲಾ ಚಟುವಟಿಕೆಗಳ ಮೇಲೆ ಗಮನವಿರಿಸುತ್ತೇನೆ. ಆದರೂ ಹೀಗೇಕಾಯಿತು?

ಕಳೆದೆರಡು ದಿನಗಳಿಂದ ಅವನ ವರ್ತನೆಯಲ್ಲಿ ಏನೋ ಬದಲಾವಣೆಯಾಗಿದೆ ಎಂದು ಭಾಸವಾಗಿತ್ತು ನನಗೆ. ಆಟ ಕಡಿಮೆಯಾಗಿತ್ತು. ಬಹಳ ಚೂಟಿಯಾಗಿದ್ದವ ತುಂಬಾ ಮೌನವಾಗಿದ್ದ. ಏನೋ ಯೋಚನೆ ಮಾಡುತ್ತಿರುತ್ತಿದ್ದ. ಆದರೆ ಈ ವಾರವಿಡೀ ಆಡಿಟಿಂಗ್. ಅದರ ತಲೆಬಿಸಿಯಲ್ಲಿ ಇದ್ದದ್ದರಿಂದ ಅವನನ್ನು ನಾವಿಬ್ಬರೂ ಸರಿಯಾಗಿ ಗಮನಿಸಲಿಲ್ಲವೇನೋ? ನನ್ನನ್ನು ನಾನೇ ಹಳಿದುಕೊಂಡೆ.

ಆದರೆ ಇವತ್ತು......

ಅಡುಗೆ ಮಾಡುತ್ತಿದ್ದಾಗ ಆಗಷ್ಟೇ ನಿದ್ದೆಯಿಂದ ಎದ್ದು ಬಂದು ಕಾಲನ್ನು ತಬ್ಬಿದ್ದವನನ್ನು ಎತ್ತಿ ಮುದ್ದಿಸಿದ್ದೆ. ಆಗ ಹೆಗಲಿನ ಸುತ್ತ ಕೈ ಹಾಕಿ ಕೇಳಿತ್ತು ನನ್ನ ಕಂದ...
"ಮಮ್ಮಾ ಟೆಲಲಿಸ್ಟ್ ಅಂದ್ರೇನು?" ಅವನ ತೊದಲು ಪ್ರಶ್ನೆ ನನ್ನನ್ನು ಬೆಚ್ಚಿಬೀಳಿಸಿತ್ತು. ಪ್ರಶ್ನೆಯೊಂದಿಗೆ ದಾಳಿಯಿಟ್ಟ ಹಲವು ಯೋಚನೆಗಳೊಂದಿಗೆ ಬಡಿದಾಡುತ್ತಿದ್ದ ನನ್ನನ್ನು ಮತ್ತೆ ಅವನೇ ಎಚ್ಚರಿಸಿದ್ದ..

"ಹೇಳಮ್ಮಾ" ಗೋಗರೆಯುತ್ತಿದ್ದವನನ್ನು ಅಲ್ಲೇ ಕಟ್ಟೆಯ ಮೇಲೆ ಕೂರಿಸಿ,
"ಇದನ್ಯಾರು ಕೇಳಿದ್ದು ಪುಟ್ಟುಮರಿ ನಿನ್ಹತ್ರ?" ರಮಿಸಿ ಕೇಳಿದೆ.

"ಸ್ಕೂಲಲ್ಲಿ ನನ್ನ ಬೆಸ್ಟ್ ಫ್ರೆಂಡ್ ಇದ್ದಾನಲ್ಲ ಅವನ ಹತ್ರ ಬೇರೆ ಫ್ರೆಂಡ್ಸ್ ಯಾರೂ ಮಾತಾಡ್ತಿಲ್ಲ ಒಂದು ವಾರದಿಂದ. ನಾನೂ ಮಾತಾಡ್ಬಾರದು ಅಂತ ಉಳಿದ ಫ್ರೆಂಡ್ಸ್ ಎಲ್ಲಾ ಹೇಳಿದ್ರು. ಅವನ ಜಾತಿ ಬೇರೆದಂತೆ. ಅವನ ಜಾತಿಯೋರು ಟೆಲಲಿಸ್ಟ್ ಬಾಂಬ್ ಹಾಕ್ತಾರಂತೆ. ಇನ್ನೂ ಏನೇನೋ ಹೇಳಿದ್ರು. ನನಗೆ ಅರ್ಥ ಆಗಿಲ್ಲ. ನಾನು ಅವನತ್ರ ಮಾತಾಡಿದ್ರೇ ನನ್ಹತ್ರ ಯಾರೂ ಮಾತಾಡಲ್ವಂತೆ" ಅವನು ಗಿಣಿಮರಿಯಂತೆ ಉಲಿಯುತ್ತಿದ್ದರೆ ನನಗೆ ತಲೆ ಸುತ್ತತೊಡಗಿತು.

"ಆದ್ರೆ ಅವ್ನು ನನ್ನ ಬೆಸ್ಟ್ ಫ್ರೆಂಡ್ ಪಾಪ ಅಲ್ವಾ ಅಮ್ಮ. ಅವನೊಬ್ನೇ ಲಾಸ್ಟ್ ಬೆಂಚಲ್ಲಿ ಬೇಜಾರಲ್ಲಿ ಕೂತಿರ್ತಾನೆ. ನಂಗೂ ಬೇಜಾರಾಗುತ್ತೆ ಮಮ್ಮಾ. ಅವ್ನ ಮಮ್ಮಿ ನಂಗೆ ಯಾವಾಗ್ಲೂ ಎಷ್ಟು ಚಂದ ಬಿರಿಯಾನಿ ಮಾಡಿ ಕೊಡ್ತಾರೆ. ಅಂಕಲ್ ಪೇರೆಂಟ್ಸ್ ಮೀಟಿಂಗಿಗೆ ಬಂದಾಗೆಲ್ಲ ಚಾಕ್ಲೇಟ್ ಕೊಡ್ತಾರೆ. ಮತ್ತೆ ನಾನ್ಯಾಕೆ ಅವನತ್ರ ಮಾತಾಡ್ಬಾರದು?
ಟೆಲಲಿಸ್ಟ್ ಅಂದ್ರೆ ಏನು? ಜಾತಿ ಅಂದ್ರೇನು? ಅವನು ಯಾವ ಜಾತಿ? ನಾವು ಯಾವ ಜಾತಿ?" ಅವನ ಪುಟ್ಟ ಮನದಲ್ಲಿದ್ದ ಗೊಂದಲಗಳೆಲ್ಲಾ ಪ್ರಶ್ನೆಗಳ ರೂಪತಳೆದು ಅವ್ಯಾಹತವಾಗಿ ದಾಳಿ ನೆಡೆಸಿದ್ದವು. ಆದರೆ‌ ನಾನು ಉತ್ತರಿಸುವ ಚೈತನ್ಯ ಕಳೆದುಕೊಂಡಿದ್ದೆ.....

"ಹೋಗು ಅಮ್ಮ, ನಾನೇನು ಕೇಳಿದ್ರೂ ಆನ್ಸರ್ ಮಾಡಲ್ಲ. ಬ್ಯಾಡ್ ಮಮ್ಮಾ ನೀನು" ಕೋಪದಿಂದ ಮುಖವೂದಿಸಿದ ಅವನ ಪರಿ ಕಂಡು ಅವನಿಗೆ ಏನು ಉತ್ತರಿಸಬೇಕೋ ತಿಳಿಯದಾದೆ.

"ಅದು ಹಾಗಲ್ಲ ಕಂದಾ, ನಿನ್ನ ಪ್ರಶ್ನೆಗೆ ಸರಿಯಾದ ಉತ್ತರ ನನ್ನ ಹತ್ರನೇ ಇಲ್ಲ. ನಾನು ಉತ್ತರ ಹುಡುಕಿ ಆಮೇಲೆ ನಿನ್ಗೆ ಹೇಳ್ತಿನಿ ಓಕೆನಾ?" ಕೇಳಿದೆ. ಸರಿಯೆಂದು ತಲೆಯಾಡಿಸಿದವನ ಬೆನ್ನುದಡವಿ ಹಾರ್ಲಿಕ್ಸ್ ಕೊಟ್ಟು ಆಟವಾಡಲು ಕಳಿಸಿದೆ...

ಇಲ್ಲದಿದ್ದರೂ ಅವನ ಪ್ರಶ್ನೆಗಳಿಗೆ ಮೊದಲು ನಾನು ಉತ್ತರ ಹುಡುಕಿಕೊಳ್ಳಬೇಕಿತ್ತು. ಅವನು ಕೇಳಿದ ಪ್ರಶ್ನೆಗಳೇ ಹಾಗಿತ್ತು. ಇಂತಹ‌ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು? ಈ ಪ್ರಶ್ನೆಗಳಿಗೆ ಒಂದೇ ತೆರನಾದ ಉತ್ತರ ಇರುವುದಿಲ್ಲ. ಅವರವರ ಭಾವಕ್ಕೆ ತಕ್ಕಂತೆ ಉತ್ತರಗಳು ಬದಲಾಗುತ್ತದೆ.

ಆಧುನಿಕ ಯುಗದ ಅಗಣಿತ ನ್ಯೂಸ್ ಚಾನೆಲ್ಲುಗಳು, ಅವರ ಪ್ರೈಮ್ ಟೈಮ್, ಬ್ರೇಕಿಂಗ್ ನ್ಯೂಸುಗಳ ಹಾವಳಿ, ಫೇಸ್ಬುಕ್, ವಾಟ್ಸಾಪ್, ಹಾಳು ಮೂಳುಗಳು ಮಕ್ಕಳ ಬಾಲ್ಯದ ಮುಗ್ಧತೆಯನ್ನೇ ಕಸಿಯುತ್ತಿವೆಯೇ?

ಈ ಆಧುನಿಕ ಸಮೂಹ ಸಂವಹನ ಮಾಧ್ಯಮಗಳ ಟಿ. ಆರ್. ಪಿ, ರೇಟಿಂಗ್ ಹೆಚ್ಚಿಸಿಕೊಳ್ಳುವ ಭರಾಟೆಯಲ್ಲಿ ನೈತಿಕ ಜವಾಬ್ದಾರಿ, ಸಾಮಾಜಿಕ ಕಳಕಳಿ, ಸಾಮರಸ್ಯವೆಂಬುದು ಮೂಲೆಗುಂಪಾಗಿದೆ. ಸಿಕ್ಕದ್ದೆಲ್ಲಾ ಬ್ರೇಕಿಂಗ್ ನ್ಯೂಸೇ... ವಿಷಯದ ಸತ್ಯಾಸತ್ಯತೆ ಪರಿಶೀಲಿಸುವುದು, ಅದನ್ನು ಯಾರ ಮನಸ್ಸಿಗೂ ಘಾಸಿಯಾಗದಂತೆ ಸಹಜವಾಗಿ ಪ್ರಸ್ತುತಪಡಿಸುವುದು ಇದನ್ನೆಲ್ಲಾ ಹೆಚ್ಚಿನ ಚಾನೆಲ್ಲುಗಳು ಮರೆತೇ ಬಿಟ್ಟಿವೆ. ಈಗಿನ ಮಕ್ಕಳೋ... ಅವರಿರುವುದೇ ಒಂದೋ ಟಿ.ವಿಯ ಮುಂದೆ, ಇಲ್ಲಾ ಮೊಬೈಲ್ ಫೋನ್ ಒಳಗೆ.... ಅವರ ಮುಗ್ಧ ಮನಸ್ಸುಗಳಲ್ಲಿ ಇಂತಹ ವಿಚಾರಗಳು ಯೋಚನಾವಲಯಕ್ಕೆ ದಕ್ಕಿದ ರೂಪವನ್ನು ಪಡೆದುಕೊಳ್ಳುತ್ತವೆ....

ಅದರೊಂದಿಗೆ ದೊಡ್ಡವರೆನಿಸಿಕೊಂಡ ನಾವೂ ಆ ನ್ಯೂಸ್ ಗಳ ಮೇಲೆ ನಮ್ಮ ಮೂಗಿನ ನೇರದ ಕಾಮೆಂಟುಗಳನ್ನು ಮಾಡುತ್ತೇವೆ. ಇದೆಲ್ಲವನ್ನೂ ಮಕ್ಕಳು ಗಮನಿಸುತ್ತಾರೆ. ಅವರ ಮುಗ್ಧ ಮನದಲ್ಲಿ ನಮ್ಮ ಮಾತುಗಳು ಮೂಡಿಸುವ ಪ್ರಭಾವ?? ಅದರ ಬಗ್ಗೆ ನಾವೆಷ್ಟು ಯೋಚಿಸುತ್ತಿದ್ದೇವೆ?

ಇದೇ ಪ್ರಶ್ನೆಗಳು ಯಾರೋ ವಯಸ್ಕರ ಬಾಯಿಂದ ಬಂದಿದ್ದರೆ ಒಂದು ಬಗೆ. ಆದರೆ ಎರಡನೇ ತರಗತಿಯ ಮಕ್ಕಳ ತಲೆಯಲ್ಲಿ ಇಂಥಾ ಯೋಚನೆಗಳು.... ಹಾಗಾದರೆ ಈ ವಿಚಾರಕ್ಕೆ ಆ ಎಳೆಯ ತಲೆಗಳಲ್ಲಿ ಸಿಕ್ಕಿರುವ ಪ್ರಾಮುಖ್ಯತೆ ಎಂತಹದು? ಅದೆಷ್ಟು ಗೊಂದಲಗಳಿರಬಹುದು ಅವರಲ್ಲಿ..
ಆ ಸ್ನೇಹಿತರಿಂದ ಬೇರ್ಪಟ್ಟ ಮಗುವಿನ ಪಾಡೇನು? ತಾನು ಎಲ್ಲರಿಂದ ದೂರವಾದಂತಹ ಪರಕೀಯ ಭಾವವೊಂದು ಕಾಡದೇ ಆ ಹಸುಳೆಯನ್ನು? ಆ ಮಗುವಿನ ಭಾವವಲಯದಲ್ಲೊಂದು ಅಸಹನೆಯ ಭಾವ ಸುಳಿದಾಡದೇ? ಒಂದು ವೇಳೆ ಆ ಭಾವ ಹೆಮ್ಮರವಾದರೆ???? ಭವಿಷ್ಯತ್ತಿನಲ್ಲಿ ಮತ್ತದೇ ಜಗಳ, ಕದನ.......

ಇದು ಹೀಗೆ ಮುಂದುವರೆದರೆ ಈ ಮಕ್ಕಳೂ ಮುಂದೆ ರೋಗಗ್ರಸ್ತ ಯೋಚನೆಗಳನ್ನು ತುಂಬಿಕೊಂಡ ನಾಗರೀಕರಾಗಿ ತಯಾರಾಗುತ್ತಾರೆ. ಇದೇ ಜಗಳ, ದೊಂಬಿ, ಕದನಗಳನ್ನೇ ನಾವು ನಮ್ಮ ಮುಂದಿನ ತಲೆಮಾರಿಗೆ ಉಡುಗೊರೆಯಾಗಿ ಕೊಡುವುದೇ? ನಾವು ಹೊಡೆದಾಡಿಕೊಂಡು ಸಾಯುತ್ತಿದ್ದೇವೆ, ನೀವೂ ಅದನ್ನೇ ಮುಂದುವರೆಸಿ ಎಂದು ಸುಮ್ಮನಿದ್ದುಬಿಡುವುದೇ? ನಮ್ಮ ಪೀಳಿಗೆಯಂತೂ ಭೇದ ಭಾವಗಳ ಸುಳಿಗೆ ಸಿಕ್ಕು ಮನುಷ್ಯತ್ವವೆಂಬ ನೌಕೆಯು ಜಾತಿ,ಧರ್ಮ,ವರ್ಗ, ವರ್ಣಗಳೆಂಬ ಕೆಸರಲ್ಲಿ ಮುಳುಗತೊಡಗಿದೆ...... ಭವಿಷ್ಯತ್ತಿನ ಮಾನವೀಯತೆಯ ಭರವಸೆಯ ನೌಕೆಯನ್ನೂ ಈಗಿನಿಂದಲೇ ಹಾಳುಗೆಡವಲು ಹವಣಿಸುವುದು ಸರಿಯೇ??? ನಾವು ಹಾಳಾಗಿರುವುದು ಸಾಲದೆಂದು ಭವಿಷ್ಯದ ಭರವಸೆಯ ಕುಡಿಗಳನ್ನೂ ಚಿವುಟುವುದು ಯಾವ ನ್ಯಾಯ?

ಈಗ ಇವನಿಗೆ ಏನೆಂದು ಉತ್ತರಿಸಲಿ? ಹೇಗೆ ಅವನ ಮನದಲ್ಲಿರುವ ಗೊಂದಲಗಳನ್ನು ಪರಿಹರಿಸಲಿ? ಪ್ರಪಂಚದಲ್ಲಿ ಯಾರ ಪ್ರಶ್ನೆಗಳಿಗಾದರೂ ಉತ್ತರಿಸಿ ಸಮಾಧಾನಿಸಬಹುದೇನೋ. ಆದರೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಒಂದು ಉತ್ತರಕ್ಕೆ ಹತ್ತು ಪ್ರಶ್ನೆಗಳು ತಯಾರಾಗಿರುತ್ತವೆ ಆ ಪುಟ್ಟ ಮೆದುಳಲ್ಲಿ. ಹೊಡೆದು, ಬಡಿದು ಹೇಳಿಕೊಡಲಾಗದು ಇದನ್ನೆಲ್ಲಾ. ಉತ್ತರಿಸುವ ಪ್ರಕಾರದಲ್ಲಿ ಸ್ವಲ್ಪ ಎಡವಿದರೂ ಗೊಂದಲಗಳು ಹೆಚ್ಚಾಗಿ ಪರಿಣಾಮ ಘೋರ. ಅದರಲ್ಲೂ ಇದು ಬಹಳ‌ ಸೂಕ್ಷ್ಮ ವಿಚಾರ.ಅವನು ಇವನ ಆಪ್ತಮಿತ್ರ. ಒಡಹುಟ್ಟಿದ ಸಹೋದರರಂತಹ ಅವಿನಾಭಾವ ಒಡನಾಟವಿದೆ ಆ ಎರಡು ಮುಗ್ಧ ಜೀವಗಳ ನಡುವೆ. ಹೇಗೆ ವಿವರಿಸಿ ಹೇಳುವುದು ಆ ಮುಗ್ಧ ಮನಕ್ಕೆ ಘಾಸಿಯಾಗದಂತೆ??? ಎಂದು ಯೋಚಿಸುತ್ತಾ ಕಿಟಕಿಯಿಂದ ಮನೆಯ ಹೊರಗೆ ನೋಡತೊಡಗಿದೆ.

ಬಾಂದಳದಲ್ಲಿ ನಿಶಾದೇವಿಯ ಮಡಿಲಿಗೆ ಜಾರಲು ತವಕಿಸುತ್ತಿರುವ ರವಿಯ ಕಿರಣಗಳಿಗೆ ಭೇದಭಾವದ ಹಂಗಿಲ್ಲ. ಹಾರಾಡುವ ಬಾನಾಡಿಗಳಿಗೆ, ಭೂಲೋಕದ ಸಕಲ ಜೀವಜಂತುಗಳಿಗೆ ಜಾತಿ, ಮತ, ವರ್ಗ, ವರ್ಣಗಳೆಂಬ ಸಾವಿರ ಕಟ್ಟಳೆಗಳಿಲ್ಲ....ಮಾನವನೆಂಬ ಪ್ರಾಣಿಯೊಂದನ್ನು ಹೊರತುಪಡಿಸಿ.... ಜಗದ ಎಲ್ಲಾ ನೀತಿ, ನಿಯಮ, ಕಟ್ಟುಪಾಡುಗಳಿರುವುದು ಮನುಜನಿಗೆ. ವಿಪರ್ಯಾಸವೆಂದರೆ ಅದನ್ನು ಸೃಷ್ಟಿಸಿಕೊಂಡಿರುವವರೂ ನಾವೇ.

ನನ್ನದೇ ಯೋಚನೆಯೊಳಗೆ ಮುಳುಗಿದ್ದವಳನ್ನು ಮತ್ತೆ ಎಚ್ಚರಿಸಿದ್ದು ಆಟ ಮುಗಿಸಿ ಮನೆಗೆ ಬಂದ ಮಗನೇ..
"ಅಮ್ಮಾ, ಆಟ ಆಡೋಕೆ ಬೇಜಾರು" ಬಂದು ಮಡಿಲೇರುತ್ತಾ ಹೇಳಿದವನ ತಲೆ ಸವರಿ ಸ್ನಾನಕ್ಕೆ ಕರೆದೊಯ್ದೆ. ಸ್ನಾನ ಮುಗಿಯುವ ವೇಳೆಗೆ ಅವನ ಅಪ್ಪನೂ ಬಂದಿದ್ದರಿಂದ ಅವರ ಹೆಗಲೇರಿದ. ಅಪ್ಪ ಬಂದ ಮೇಲೆ ಅವರದ್ದೇ ಬಾಲ ಅವನು. ಊಟಮಾಡಿಸಿ ಅವನನ್ನು ಮಲಗಿಸಿದೆ. ನಾಳೆ ಭಾನುವಾರವಾದ್ದರಿಂದ ಸ್ವಲ್ಪ ನಿರಾಳ.

ನಾವಿಬ್ಬರೂ ಊಟಕ್ಕೆ ಕುಳಿತಾಗ ಮನೆಯವರಿಗೆ ಇವತ್ತಿನ ಘಟನೆ ವಿವರಿಸಿದೆ. ಅವರೂ ದಂಗಾದರು ಪುಟ್ಟ ಮಕ್ಕಳ ಯೋಚನಾ ಲಹರಿಗೆ. ಇದೇ ವಿಷಯ ಚರ್ಚಿಸುತ್ತಾ ಬಹಳ ಹೊತ್ತು ಕುಳಿತೆವು. ಆದರೆ ಮಗುವಿಗೆ ಉತ್ತರಿಸುವ ಪರಿ ತಿಳಿಯಲಿಲ್ಲ.

ಮರುದಿನ ಬೆಳಿಗ್ಗೆ ಮನೆಯ ಮುಂದಿದ್ದ ಪುಟ್ಟ ಕೈತೋಟದಲ್ಲಿದ್ದ ಗಿಡಗಳ ಆರೈಕೆಗೆ ತೊಡಗಿದ್ದೆ. ಇದು ಭಾನುವಾರದ ಕೆಲಸ. ಅಂದು ಮಾತ್ರ ಸಾಧ್ಯವಾಗುವುದು. "ಅಮ್ಮಾ" ಎಂದು ಕಣ್ಣು ಹೊಸಕಿ ಕೊಳ್ಳುತ್ತಾ ಬಂದಿದ್ದ ನನ್ನ ರಾಜಕುಮಾರ. ಅವನಿಗೊಂದು ಗುಡ್ ಮಾರ್ನಿಂಗ್ ಹೇಳಿ ಅಲ್ಲೇ ಕಟ್ಟೆಯ ಮೇಲೆ ಕೂರಿಸಿ ಕೆಲಸ ಮುಂದುವರೆಸಿದೆ. ಕೆಲವು ಗಿಡಗಳಿಗೆ ಹುಳುವಿನ ಕಾಟ... ನಾನು ಗಿಡದ ಹುಳು ಹಿಡಿದ ಭಾಗಗಳನ್ನು ತೆಗೆಯುತ್ತಿದ್ದುದ್ದನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದವನು " ಅಮ್ಮಾ ಅದ್ಯಾಕೆ ಆ ಎಲೆಗಳನೆಲ್ಲಾ ತೆಗೀತಿದ್ದೀಯಾ?" ಎಂದ.

ಮಗ ನಿನ್ನೆ ಕೇಳಿದ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದೆಂದು ಯೋಚಿಸುತ್ತಿದ್ದವಳಿಗೆ ತಟ್ಟನೆ ಉಪಾಯವೊಂದು ಹೊಳೆಯಿತು. ಅವನನ್ನು ಆ ಗಿಡದ ಬಳಿ ಕರೆದೊಯ್ದು ಅದರ ಮೇಲೆ ಹರಿಯುತ್ತಿದ್ದ ಹುಳುಗಳನ್ನು ತೋರಿಸಿದೆ.
"ಇಲ್ಲಿ ನೋಡು ಪುಟ್ಟುಮರಿ, ಗಿಡದ ಕೆಲವು ಎಲೆಗಳಿಗೆ ಹುಳು ಹಿಡಿದಿದೆ. ಇದನ್ನು ತೆಗೆಯದೇ ಹೋದರೆ ಈ ಹುಳುಗಳು ಇಡೀ ಗಿಡವನ್ನೇ ಆವರಿಸಿ ಗಿಡವೇ ಸಾಯುತ್ತೆ. ಅದೇ ಹುಳು ಹಿಡಿದ ಭಾಗಗಳನ್ನು ತೆಗೆದರೆ ಗಿಡ ಚೆನ್ನಾಗಿ ಬೆಳೆದು ಶುದ್ಧವಾದ ಗಾಳಿಯನ್ನು, ನೆರಳನ್ನು ನೀಡುತ್ತದೆ ಅಲ್ವಾ." ಎಂದಾಗ ಹೌದೆಂದು ತಲೆಯಾಡಿಸಿದ.

ಅವನನ್ನು ನನ್ನ ಮಡಿಲಲ್ಲಿ ಕೂರಿಸಿಕೊಂಡೆ. " ಮಗೂ ನಾನು, ನೀನು, ಅಪ್ಪ, ನಿನ್ನ ಸಹಪಾಠಿ ಸ್ನೇಹಿತರು, ನಾವೆಲ್ಲರೂ ಈ ಗಿಡದ ಎಲೆಗಳಿದ್ದಂತೆ. ನಾವು ಹಿರಿಯರು ಈ ದೊಡ್ಡ ದೊಡ್ಡ ಎಲೆಗಳಂತೆ, ವಯಸ್ಸಾಗಿರುವವರು, ಉದುರಲು ತಯಾರಾಗಿರುವವರು. ನೀವು ಅಂದರೆ ಮಕ್ಕಳು ಈ ಚಿಗುರಿನಂತೆ. ಈಗಿನ್ನೂ ಕಣ್ತೆರೆಯುತ್ತಿರುವ ನಾಳೆಯ ಭರವಸೆಯ ಕುಡಿಗಳು. ಭವಿಷ್ಯ ನಿಂತಿರುವುದು ಈ ಚಿಗುರಿನ ಮೇಲೆ.

ಈ ಜಾತಿ, ಮತ, ವರ್ಗ, ವರ್ಣಗಳೆಂದು ಬೇಧಭಾವ ಮಾಡುವುದು, ಹೊಡೆದಾಡುವುದು, ಟೆರರಿಸಂ ಅಂದ್ರೆ ಭಯೋತ್ಪಾದನೆ ಎಂಬುದೆಲ್ಲಾ ಗಿಡಕ್ಕೆ ರೋಗ ತರುವ ಹುಳುಗಳಿದ್ದಂತೆ. ಇವು ನಮ್ಮ ಯೋಚನೆಗಳೆಂಬ ಎಲೆಗಳನ್ನು ಮುರುಟಿಸಿ ಮೆದುಳಿಗೆ ರೋಗ ಹರಡಲು ಪ್ರಯತ್ನಿಸುತ್ತವೆ.

ಕೆಲವು ಹಿರಿಯರು ಈ ಹುಳುವಿನ ದಾಳಿಗೆ ಸಿಕ್ಕಿ ತಾವು ಪ್ರಭಾವಿತರಾಗುವುದಲ್ಲದೇ ಮಕ್ಕಳಿಗೂ ಅದೇ ರೋಗಗ್ರಸ್ತ ಯೋಚನೆಗಳನ್ನು ಹಂಚುತ್ತಾರೆ. ಮಗುವಿನ ಯೋಚನೆಗಳಿಗೆ ಹುಳು ಹಿಡಿದು ಮೆದುಳು ಕಹಿ ಚಿಂತನೆಗಳ ಆಗರವಾಗುತ್ತದೆ. ಆಗ ಚಿಗುರಿನ ಸಹಿತ ಇಡೀ ಗಿಡ ರೋಗಗ್ರಸ್ತವಾಗಿ ಕಹಿ ಹಂಚತೊಡಗುತ್ತದೆ.

ಇನ್ನು ಕೆಲವು ಹಿರಿಯರು ಆ ಹುಳುವಿನ ದಾಳಿಗೆ ಸಿಲುಕದೇ ಇಗೋ ಈ ಹಸಿರು ಎಲೆಯಂತೆ ತಾವೂ ರೋಗ ಅಂಟಿಸಿಕೊಳ್ಳದೇ, ಮಕ್ಕಳಿಗೂ ಅಂಟಗೊಡದೇ ಕೇವಲ ಒಳ್ಳೆಯ ಯೋಚನೆಗಳನ್ನು ಮಾತ್ರ ಹಂಚುತ್ತಾರೆ.ಆಗ ಮಗುವಿನ ಯೋಚನೆಗಳು ಸಿಹಿಯಾಗಿ ಉದಾತ್ತ ಚಿಂತನೆಗಳು ಹರಡುತ್ತವೆ..." ಮುಂದೆ ನನ್ನ ಮಾತನ್ನು ತಡೆದು ಅವನೇ ಹೇಳಿದ..

"ಆಗ ಗಿಡದ ಎಲೆ, ಚಿಗುರು ಎಲ್ಲಾ ಹಸಿರಾಗಿ ಚೆಂದ ಇರುತ್ತೆ. ಗಿಡಕ್ಕೆ ಕಾಯಿಲೆನೇ ಬರೋಲ್ಲ. ಅದು ಒಳ್ಳೆ ಗಾಳಿ ನೆರಳು ಕೊಡುತ್ತೆ. ಹಸಿರು ಇದ್ರೆನೇ ನೋಡೋಕೆ ಚೆಂದ ಮಮ್ಮಾ" ಚಪ್ಪಾಳೆ ತಟ್ಟುತ್ತಾ ಹೇಳಿದವನನ್ನು ಅಪ್ಪಿಕೊಂಡೆ.

"ಕರೆಕ್ಟ್ ಕಂದಾ. ನೀನು ನಿನ್ನ ಫ್ರೆಂಡ್ಸ್ ಎಲ್ಲಾರೂ ಗಿಡದ ಚಿಗುರುಗಳು. ನಾವು ದೊಡ್ಡವರು ಹೇಗೂ ಉದುರುವ ಎಲೆಗಳು... ಆದರೆ ನಿಮ್ಮಂತಹ ಚಿಗುರಿಗೆ ಈ ರೀತಿಯ ಹುಳುಗಳು ಹಿಡಿದ್ರೆ ಭವಿಷ್ಯದಲ್ಲಿ ಇಡೀ ಮರವೇ ವಿಷಕಾರಿಯಾಗುತ್ತೆ. ಹಾಗಾಗಿ ಈ ಹುಳುಗಳನ್ನೆಲ್ಲಾ ಈಗ್ಲೇ ತಲೆ ಅನ್ನೋ ಎಲೆಯಿಂದ ಕಿತ್ತು ಬಿಸಾಕಬೇಕು. ಆಗಲೇ ಈ ಚಿಗುರು ಚೆನ್ನಾಗಿ ಬಲಿತು ನಾಳೆ ಒಳ್ಳೆಯ ಮರವಾಗೋದು. ತಿಳೀತಾ?" ಕೇಳಿದೆ.

"ಹೂಂ ಅಮ್ಮಾ, ನಾನು ಹಸಿರೆಲೆ ತರ ಈ ಹುಳಗಳನ್ನೆಲ್ಲಾ ತಲೆಗೆ ಹತ್ತಿಸ್ಕೊಳ್ಳೋಲ್ಲ. ಹಾಗೆ ನನ್ನ ಫ್ರೆಂಡ್ಸ್ ಗಳಿಗೂ ಹತ್ತೋಕೆ ಬಿಡಲ್ಲ. ನಾವೆಲ್ಲಾ ಒಳ್ಳೆ ಗಾಳಿ ಕೊಡೋ ಹಸಿರು ಮರ ಆಗ್ತೀವಿ. ನಾವು ರೋಗದ ಮರ ಆಗೋಲ್ಲ. ಎಲ್ಲಾ ಕಡೆ ಹಸಿರು ಮರನೇ ಇರ್ಬೇಕು...." ಚಪ್ಪಾಳೆ ತಟ್ಟಿ ನನ್ನ ಕೆನ್ನೆಗೆ ಮುತ್ತಿಟ್ಟು "ಲವ್ ಯು ಅಮ್ಮ" ಎಂದು ಖುಷಿಯಿಂದ ಒಳಗೆ ಓಡಿದವನನ್ನೇ ನೋಡಿದೆ.... ನಾಳಿನ ಭರವಸೆಯ ಭವಿಷ್ಯದ ಒಂದು ಸೆಳಹು ಕಂಡಂತಾಗಿ ನಾನೂ ನಿರಾಳವಾದೆ.

ಒಳಗೆ ಎಫ್. ಎಂ ನಿಂದ ಅರ್ಥಪೂರ್ಣವಾದ ಹಾಡೊಂದು ತೇಲಿ ಬರುತ್ತಿತ್ತು.

ಪಂಚೀ ನದಿಯಾ ಪವನ್ ಕೇ ಜೋ಼ಂಕೇ
ಕೋಯಿ ಸರ್ಹದ್ ನಾ ಇನ್ಹೇ ರೋಕೇ
ಸರ್ಹದ್ ಇನ್ಸಾನೋ ಕೆ ಲಿಯೆ ಹೈ
ಸೋಚೋ ತುಮ್ ನೆ ಔರ್ ಮೈನೆ
ಕ್ಯಾ ಪಾಯಾ ಇನ್ಸಾನ್ ಹೋಕೆ.......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ