ಭಾನುವಾರ, ಜೂನ್ 21, 2020

ಕೆನ್ನೆ ಮೇಲೊಂದು ಸಿಹಿ ಮುತ್ತು

ಇಂದು ತಾಯಂದಿರ ದಿನದ ಸಂಭ್ರಮ. ನಮ್ಮೆಲ್ಲಾ ದಿನಗಳೂ ಅವಳದೇ ಉಡುಗೊರೆಯಾದ ಕಾರಣ ಅವಳಿಗೊಂದು ದಿನದ ಚೌಕಟ್ಟು ಸಮುದ್ರಕ್ಕೆ ಅಣೆಕಟ್ಟು ಕಟ್ಟಿದಂತೆಯೇ ಸೈ. ಹಾಗಿದ್ದೂ ಅವಳಿಗಾಗಿ ಮೀಸಲಾದ ಈ ದಿನದಂದು ನನ್ನನ್ನು ಸದಾ ಕಾಡುವ ಚಲನಚಿತ್ರವೊಂದರ ಕುರಿತು ಒಂದಿಷ್ಟು ಅನಿಸಿಕೆ ಹಂಚಿಕೊಳ್ಳಬೇಕೆನಿಸುತ್ತಿದೆ.

ಚಿತ್ರ ಮಾಂತ್ರಿಕ ಮಣಿರತ್ನಂ, ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಕಾಂಬಿನೇಷನ್ ನಲ್ಲಿ 2002ರಲ್ಲಿ ತೆರೆಗೆ ಬಂದ ಈ ತಮಿಳು ಚಿತ್ರವೇ 'ಕನ್ನತ್ತಿಲ್ ಮುತ್ತಮಿಟ್ಟಾಲ್'. ಕಾಡಿ ಕಂಗೆಡಿಸುವ ಕಥಾಹಂದರ, ಮನವನ್ನು ಆರ್ದ್ರಗೊಳಿಸುವ ಸಹಜ ನಟನೆ, ಕಣ್ಣಂಚಿನಲ್ಲಿ ಹನಿಗಳನ್ನು ಸಾಂದ್ರಗೊಳಿಸುವ ಸಾಹಿತ್ಯ, ಭಾವಗಳೇ ಮೇಳೈಸಿದ ಸಂಗೀತ....... ಇವೆಲ್ಲವುಗಳ ಸಂಕಲಿತ ಸಂಪುಟ ಕನ್ನತ್ತಿಲ್ ಮುತ್ತಮಿಟ್ಟಾಲ್.

'ಸುಜಾತಾ' ಎಂಬ ಕಾವ್ಯನಾಮದಿಂದಲೇ ಖ್ಯಾತರಾದ ಸಾಹಿತಿ ಎಸ್. ರಂಗರಾಜನ್ ಅವರ 'ಅಮುದಾವುಂ ಅವನುಂ' ಎಂಬ ಸಣ್ಣ ಕಥೆ ಆಧಾರಿತವಾದ ಈ ಚಿತ್ರ ತಾನು ದತ್ತು ಪುತ್ರಿಯೆಂಬ ಸತ್ಯ ತಿಳಿದು ತನ್ನ ಹೆತ್ತಮ್ಮನನ್ನು ಹುಡುಕಿಹೊರಡುವ ಅಮುದಾ ಎಂಬ ಒಂಬತ್ತು ವರ್ಷದ ಶ್ರೀಲಂಕನ್ ತಮಿಳು ಬಾಲಕಿಯ ಕಥೆಯನ್ನು ಶ್ರೀಲಂಕಾ ಆಂತರಿಕ ಯುದ್ಧದ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. 

ಚಿತ್ರ ಆರಂಭವಾಗುವುದು ತಮಿಳರ ಪ್ರಾಬಲ್ಯದ ಶ್ರೀಲಂಕಾದ ಮಾಂಗುಳಂ ಗ್ರಾಮದ ಶ್ಯಾಮಾ ಹಾಗೂ ದೀಲೀಪನ್ ಅವರ ವಿವಾಹದಿಂದ. ದೀಲೀಪನ್ ಆ ಗ್ರಾಮದ ಇತರ ಯುವಕರೊಂದಿಗೆ ತಮಿಳರ ಸ್ವಾತಂತ್ರಕ್ಕಾಗಿ ಹೋರಾಡುವ ಗುಂಪಿನಲ್ಲಿ ಸಕ್ರಿಯನಾಗಿರುವಾತ. ಶ್ಯಾಮಾಳ ಸಾಂಸಾರಿಕ ಜೀವನ ಸುಗಮವಾಗಿ ಸಾಗುತ್ತಿದ್ದಾಗಲೇ ಶ್ರೀಲಂಕಾ ಸೇನೆಯು ಮಾಂಗುಳಂನಲ್ಲಿ ಕಾರ್ಯಾಚರಣೆಗೆ ಬಂದಿರುವುದು ತಿಳಿದು ದೀಲೀಪನ್ ದಟ್ಟ ಕಾಡಿನಲ್ಲಿ ತಲೆಮರೆಸಿಕೊಳ್ಳುತ್ತಾನೆ. ತಮಿಳರ ಪ್ರಾಂತ್ಯದ ಮೇಲೆ ಸೇನಾ ಕಾರ್ಯಾಚರಣೆ ತೀವ್ರವಾಗತೊಡಗಿ ಹೆಚ್ಚಿನ ತಮಿಳರು ಸುರಕ್ಷಿತ ತಾಣ ಅರಸಿ ಭಾರತದತ್ತ ವಲಸೆ ಹೊರಡುತ್ತಾರೆ. ಗರ್ಭಿಣಿ ಶ್ಯಾಮಾ ಇತ್ತ ದೀಲೀಪನ್ ಬಗ್ಗೆ ಸುದ್ದಿಯೂ ತಿಳಿಯದೇ ಅತ್ತ ಭಾರತಕ್ಕೂ ಹೋಗುವ ಮನವಿಲ್ಲದೇ ತೊಳಲಾಡುವಾಗ ಅವಳ ಮನೆಯವರು, ಸಂಬಂಧಿಕರು ಮಗುವಿನ ಭವಿಷ್ಯದ ದೃಷ್ಟಿಯಿಂದ ವಲಸೆ ಹೋಗುವುದೇ ಸೂಕ್ತವೆಂದು ಅವಳನ್ನು ಒಪ್ಪಿಸುತ್ತಾರೆ. ಹಲವರೊಂದಿಗೆ ರಾಮೇಶ್ವರಂಗೆ ತೆರಳುವ ಶ್ಯಾಮಾಳಿಗೆ ಪ್ರಯಾಣ ಮಧ್ಯದಲ್ಲಿ ದೀಲೀಪನ್ ಕಾಡಿನಲ್ಲಿ ಗುಂಡೇಟಿನಿಂದ ಗಾಯಗೊಂಡಿರುವನೆಂದು ತಿಳಿಯುತ್ತದೆ. ರಾಮೇಶ್ವರಂನ ನಿರಾಶ್ರಿತ ಶಿಬಿರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡುವ ಶ್ಯಾಮಾ ತನ್ನ ಪತಿ ಹಾಗೂ ತನ್ನ ಜನರ ಹೋರಾಟದಲ್ಲಿ ಜೊತೆಯಾಗುವ ಉದ್ದೇಶದಿಂದ ಮಗುವನ್ನು ಶಿಬಿರದಲ್ಲೇ ತೊರೆದು ತನ್ನ ತಾಯ್ನೆಲಕ್ಕೆ ವಾಪಾಸಾಗುತ್ತಾಳೆ.

ಇದೆಲ್ಲಾ ನಡೆದು ಒಂಬತ್ತು ವರ್ಷಗಳ ತರುವಾಯ ಕಥೆ ಚೆನ್ನೈಗೆ ಹೊರಳುತ್ತದೆ. 'ಇಂದಿರಾ' ಎಂಬ ಕಾವ್ಯನಾಮದಲ್ಲಿ ಬರೆಯುವ ಖ್ಯಾತ ಲೇಖಕ ತಿರುಸೆಲ್ವನ್ ಹಾಗೂ ಇಂದಿರಾ ದಂಪತಿಗಳ ಮುದ್ದಿನ ಮಗಳು ಅಮುದಾ. ಅಪ್ಪ, ಅಮ್ಮ, ಇಬ್ಬರು ತಮ್ಮಂದಿರು, ಅಜ್ಜ ಇವರೆಲ್ಲರ ತುಂಬು ಪ್ರೀತಿ, ಮಮತೆಯಲ್ಲಿ ನಲಿಯುವ ಅಮುದಾಳ ಒಂಬತ್ತನೇಯ ಹುಟ್ಟುಹಬ್ಬ ಅವಳ ಈ ಸುಂದರ ಪ್ರಪಂಚದ ಬುನಾದಿಯನ್ನೇ ಕೆಡವುವ ಸತ್ಯವೊಂದಕ್ಕೆ ಅವಳನ್ನು ಮುಖಾಮುಖಿಯಾಗಿಸುತ್ತದೆ. ಈ ಮುಂಚೆಯೇ ನಿರ್ಧರಿಸಿದಂತೆ ಜನ್ಮದಿನದ ಸಂತಸದಲ್ಲಿ ಮುಳುಗಿರುವ ಮಗಳಿಗೆ ಅವಳು ತಮ್ಮ ಸ್ವಂತ ಮಗಳಲ್ಲ, ತಾವಾಕೆಯನ್ನು ರಾಮೇಶ್ವರಂನ ನಿರಾಶ್ರಿತ ಶಿಬಿರದಿಂದ ದತ್ತು ತೆಗೆದುಕೊಂಡು ಸಾಕಿದೆವೆಂಬ ಸತ್ಯವನ್ನು ತಿಳಿಸುತ್ತಾನೆ ತಿರು. ತಂದೆಯ ಮಾತುಗಳು ಅಮುದಾಳ ಎಳೆಯ ಮನವನ್ನು ವಿಪರೀತ ಘಾಸಿಗೊಳಿಸುತ್ತವೆ. 

ತನ್ನ ಹೆತ್ತ ತಾಯಿ ಯಾರು, ಎಲ್ಲಿದ್ದಾಳೆ ಎಂದು ಮನೆಯವರನ್ನೆಲ್ಲಾ ಪ್ರಶ್ನಿಸತೊಡಗುತ್ತಾಳೆ ಅಮುದಾ. ಆಗ ಅವಳಿಗೆ ಒಂಬತ್ತು ವರ್ಷಗಳ ಹಿಂದಿನ ಕಥೆ ತಿಳಿಯುತ್ತದೆ. ರಾಮೇಶ್ವರಂನಲ್ಲಿ ತನ್ನಕ್ಕನೊಂದಿಗೆ ವಾಸಿಸುವ ತಿರು ಆಗಿನ್ನೂ ಲೇಖಕನಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಅವನ ಪಕ್ಕದ ಮನೆಯಲ್ಲಿ ವಾಸಿಸುವ ಇಂದಿರಾಳಿಗೆ ಅವನ ಮೇಲೆ ಒಲವು. ತಿರು ಅಲ್ಲಿನ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿ ಅಲ್ಲಿರುವ ಜನರನ್ನು ಮಾತನಾಡಿಸಿ ಅವರ ಬದುಕು ಬವಣೆಗಳಿಗೆ ಅಕ್ಷರ ರೂಪ ನೀಡುವ ಹವ್ಯಾಸ ಉಳ್ಳವನು. ಇಂತಹದೇ ಒಂದು ಭೇಟಿಯಲ್ಲಿ ಆತ ಶ್ಯಾಮಾ ತೊರೆದು ಹೋದ ಹಸುಗೂಸನ್ನು ಕಂಡು ಆ ಮಗುವಿನ ಮೇಲೆ ಒಂದು ಕಥೆಯನ್ನು ಬರೆಯುತ್ತಾನೆ. ಆ ಕಥೆಯನ್ನು ಓದಿ ಮಗುವನ್ನು ನೋಡಬೇಕೆಂದು ಹಠ ಹಿಡಿದು ಅವನೊಂದಿಗೆ ಶಿಬಿರಕ್ಕೆ ಬರುವ ಇಂದಿರಾ ಆ ಮಗುವಿಗೆ ಅಮುದಾ ಎಂಬ ಹೆಸರನ್ನಿಡುವುದಲ್ಲದೇ ಅವನ ಮನದಲ್ಲಿ ಆ ಮಗುವನ್ನು ದತ್ತು ಪಡೆಯಬೇಕೆಂಬ ಭಾವದ ಉಗಮಕ್ಕೆ ಕಾರಣರಾಗುತ್ತಾಳೆ. ಮಗುವನ್ನು ದತ್ತು ಪಡೆಯಲು ಆತ ನಿರ್ಧರಿಸಿ ಆ ಬಗ್ಗೆ ಶಿಬಿರದಲ್ಲಿ ವಿಚಾರಿಸಿದಾಗ ಅವಿವಾಹಿತರಿಗೆ ಮಗುವನ್ನು ದತ್ತು ನೀಡುವುದಿಲ್ಲ ಎಂಬ ವಿಚಾರ ಆತನಿಗೆ ತಿಳಿಯುತ್ತದೆ. ಬೇರೆ ದಾರಿ ಕಾಣದೆ ಮಗುವನ್ನು ದತ್ತು ಪಡೆಯುವ ಉದ್ದೇಶದಿಂದ ಇಂದಿರಾಳೊಂದಿಗೆ ಮದುವೆಯ ಪ್ರಸ್ತಾಪವನ್ನು ಮಾಡುತ್ತಾನೆ ತಿರು. ತಿರುವಿನ ಮೇಲಿನ ಪ್ರೇಮದೊಂದಿಗೆ ಅಮುದಾಳ ಮೇಲೂ ಮಮಕಾರವುಳ್ಳ ಇಂದಿರಾ ತಿರುವಿನ ಪ್ರಸ್ತಾಪವನ್ನು ಒಪ್ಪುವುದರೊಂದಿಗೆ ಇಬ್ಬರೂ ವಿವಾಹವಾಗಿ ಅಮುದಾಳನ್ನು ದತ್ತು ಪಡೆಯುತ್ತಾರೆ.

ಈ ವಿಚಾರ ತಿಳಿದ ನಂತರವೂ ಅಮುದಾಳ ಮನಸ್ಸು ಶಾಂತವಾಗುವುದಿಲ್ಲ. ಇಷ್ಟು ವರ್ಷ ತಾನು ತನ್ನದೆಂದುಕೊಂಡ ಬಂಧಗಳ್ಯಾವವೂ ತನ್ನವಲ್ಲ ಎಂಬ ಸತ್ಯವನ್ನು ‌ಹೇಗೆ ನಿಭಾಯಿಸುವುದೆಂದು ಅರಿಯದ ಆ ಪುಟ್ಟ ಜೀವ ಕೋಪವನ್ನೇ ಆಸರೆಯಾಗಿಸಿಕೊಂಡು ಇಷ್ಟು ದಿನ ತನ್ನವರೆಂದುಕೊಂಡವರಿಂದ ಅದರಲ್ಲೂ ಮುಖ್ಯವಾಗಿ ತಾಯಿ ಇಂದಿರಾಳಿಂದ ಅಂತರ ಕಾಯ್ದುಕೊಳ್ಳತೊಡಗುತ್ತದೆ.  ಅಪ್ಪನೊಂದಿಗೆ ಮಾಮೂಲಾಗಿಯೇ ವರ್ತಿಸುವ ಅಮುದಾಳ ಮನ ಅದೇಕೋ ಅಮ್ಮನೊಂದಿಗೆ ಅದೇ ತೆರನಾದ ಬಾಂಧವ್ಯವನ್ನು ಹಿಂದಿನಂತೆಯೇ ಮುಂದುವರೆಸಲು ಒಂಡಂಬಡುವುದಿಲ್ಲ. ಇಂದಿರಾಳ ಮೇಲೆ ಹೇಳಲಾರದ ಕೋಪ,  ಕಾರಣವಿಲ್ಲದ ಸಿಡಿಮಿಡಿಯನ್ನು ವ್ಯಕ್ತಪಡಿಸತೊಡಗುತ್ತಾಳೆ. ತನ್ನೀ ವರ್ತನೆಯಿಂದ ತನ್ನಮ್ಮನ ಮನಸ್ಸಿಗೆಷ್ಟು ನೋವಾಗುತ್ತಿದೆ, ಆಕೆ ಒಳಗೊಳಗೇ ಅದೆಷ್ಟು ಯಾತನೆಯನ್ನು ಅನುಭವಿಸುತ್ತಿದ್ದಾಳೆಂಬುದನ್ನು ಗ್ರಹಿಸುವಷ್ಟು ಪ್ರಬುದ್ಧ ವಯಸ್ಸಲ್ಲ ಆಕೆಯದ್ದು. ಆಕೆಯ ಮನದ ತುಂಬಾ ಇರುವುದು ಒಂದೇ ವಿಚಾರ. ಆದಷ್ಟು ಬೇಗ ತನ್ನ ಹೆತ್ತಮ್ಮನನ್ನು ಕಾಣಬೇಕು, ಆಗಿನ್ನೂ ಕಣ್ತೆರೆದು ಜಗ ಕಾಣುತ್ತಿದ್ದ ತನ್ನನ್ನು ತೊರೆದು ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತೆಂದು ಆಕೆಯನ್ನು ಪ್ರಶ್ನಿಸಬೇಕು ಎಂಬುದಷ್ಟೇ ಆಕೆಯ ಗುರಿ.

ಹೆತ್ತವಳನ್ನು ಕಾಣಬೇಕೆಂಬ ಆಸೆ ದಿನೇ ದಿನೇ ಅಮುದಾಳಲ್ಲಿ ಬಲವಾಗತೊಡಗುತ್ತದೆ. ಒಮ್ಮೆ ಇದೇ ಉದ್ದೇಶದಿಂದ ಮನೆಯವರಿಗೆ ತಿಳಿಯದಂತೆ ತನಗಿಂತ ಕೊಂಚ ಹಿರಿಯನಾದ ಅತ್ತೆಯ ಮಗನೊಂದಿಗೆ ರಾಮೇಶ್ವರಂಗೆ ಪ್ರಯಾಣಬೆಳೆಸಿ ಅಲ್ಲಿನ ಅನಾಥಾಲಯದಲ್ಲಿ ತನ್ನಮ್ಮನ ಬಗೆಗಿನ ಮಾಹಿತಿ ಕಲೆಹಾಕಲು ಯತ್ನಿಸುತ್ತಾಳೆ‌. ಮಕ್ಕಳಿಬ್ಬರೂ ರಾಮೇಶ್ವರಂನಲ್ಲಿರುವ ವಿಚಾರ ತಿಳಿದು ಅವರನ್ನು ಹಿಂಬಾಲಿಸಿ ಬರುವ ಮನೆಯವರನ್ನು ಅಮುದಾಳ ಹಠ ಕಂಗಾಲಾಗಿಸುತ್ತದೆ. ಬೇರೆ ದಾರಿ ಕಾಣದ ತಿರು ಅಮುದಾಳ ಹೆತ್ತಮ್ಮನನ್ನು ಹುಡುಕಿ ಅವಳನ್ನು ಭೇಟಿಮಾಡಿಸಲು ಶ್ರೀಲಂಕಾಕ್ಕೆ ಹೊರಡಲು ನಿರ್ಧರಿಸುತ್ತಾನೆ. ಉಳಿದಿಬ್ಬರು ಮಕ್ಕಳನ್ನು ತಾತನ ಸುಪರ್ದಿನಲ್ಲಿ ಬಿಟ್ಟು ಪತ್ನಿ ಹಾಗೂ ಮಗಳೊಂದಿಗೆ ಶ್ರೀಲಂಕೆಗೆ ಬರುವ ತಿರುಸೆಲ್ವನ್ ಗೆ ಅಲ್ಲಿ ತಂಗುವ ವ್ಯವಸ್ಥೆಗೆ ಹಾಗೂ ಈ ಹುಡುಕಾಟಕ್ಕೆ ಅವನ ಸಿಂಹಳೀ ಸ್ನೇಹಿತ ಡಾ. ಹೆರಾಲ್ಡ್ ವಿಕ್ರಮಸಿಂಘೆ ನೆರವಾಗುತ್ತಾನೆ. ಶ್ರೀಲಂಕಾಕ್ಕೆ ಬಂದ ನಂತರದಲ್ಲಂತೂ ಇಂದಿರಾಳೆಡೆಗಿನ ಅಮುದಾಳ ವರ್ತನೆ ಬಹಳಷ್ಟು ಕಠೋರವಾಗುತ್ತದೆ. ಆಕೆಯ ಪ್ರತೀ ಮಾತನ್ನು ವಿರೋಧಿಸುವುದನ್ನು ರೂಢಿಸಿಕೊಳ್ಳುತ್ತಾಳೆ. ತನ್ನನ್ನು ವೈರಿಯೆಂಬಂತೆ ಕಾಣುವ ಮಗಳ ನಡವಳಿಕೆ ಇಂದಿರಾಳಲ್ಲಿ ಹೇಳತೀರದ ಸಂಕಟವನ್ನುಂಟುಮಾಡುತ್ತದೆ. 


ಆದರೆ ಇಲ್ಲಿಯವರೆಗೆ ಶಾಂತಿ, ನೆಮ್ಮದಿಗಳ ಪರಿಧಿಯಲ್ಲೇ ಜೀವಿಸಿದ್ದ ಪುಟ್ಟ ಅಮುದಾ ತನ್ನಮ್ಮನನ್ನು ಅರಸುವ ಈ ಪಯಣದಲ್ಲಿ ಯುದ್ಧದ ಭೀಕರತೆಗೆ ಸಾಕ್ಷಿಯಾಗುತ್ತಾಳೆ. ತನ್ನೊಂದಿಗೆ ಮಾತಾನಾಡುತ್ತಾ ಕುಳಿತ್ತಿದ್ದ ವ್ಯಕ್ತಿ ತನ್ನ ಕಣ್ಣೆದುರೇ ಮಾನವ ಬಾಂಬರ್ ಆಗಿ ಬಾಂಬ್ ಸ್ಪೋಟಿಸಿಕೊಳ್ಳುವ ಸನ್ನಿವೇಶ ಆಕೆಯೊಳಗೆ ವಿಚಿತ್ರ ದಿಗಿಲನ್ನು ಸೃಷ್ಟಿಸುತ್ತದೆ. ಅಮುದಾಳ ಹೆತ್ತ ತಾಯಿಯ ಹೆಸರು ಶ್ಯಾಮಾ ಹಾಗೂ ಅವಳ ಊರು ಮಾಂಗುಳಂ ಎಂಬ ಮಾಹಿತಿಯನ್ನೇ ಆಧಾರವಾಗಿಸಿಕೊಂಡು ಮಾಂಗುಳಂ ಎಂಬ ಹೆಸರಿನ ಎರಡು ಹಳ್ಳಿಗಳಿಗೆ ಭೇಟಿ ಕೊಡುವ ಸಂದರ್ಭದಲ್ಲಿ ಶ್ರೀಲಂಕಾದ ತಮಿಳಿರ ಬವಣೆಗಳ ಪ್ರತ್ಯಕ್ಷ ದರ್ಶನವಾಗುತ್ತದೆ. ಹೀಗೇ ಒಮ್ಮೆ ತಿರು ಹಾಗೂ ವಿಕ್ರಮಸಿಂಘೆ ಸಮೀಪದ ಕಾಡೊಂದರ ಬಳಿ ವಿಹಾರಕ್ಕೆಂದು ತೆರಳಿದಾಗ LTTEನ ಬಂಡಾಯಗಾರರ ಕೈಯಲ್ಲಿ ಸಿಕ್ಕಿಬೀಳುತ್ತಾರೆ. ತಿರುಸೆಲ್ವನ್ ಆ ಕೂಡಲೇ ಒಂದು ತಮಿಳು ಕವಿತೆ ಹೇಳುತ್ತಾನೆ. ಆಗ ಆ ಗುಂಪಿನ ನಾಯಕ ಪಸುಪತಿ ಅವನನ್ನು ಇಂದಿರಾ ಎಂದು ಗುರ್ತಿಸುತ್ತಾನೆ. ಶ್ಯಾಮಾಳ ಬಗ್ಗೆ ಅವರಿಗೆ ತಿಳಿದಿರಬಹುದೆಂಬ ಆಸೆಯಿಂದ ತಿರು ತಾವು ಶ್ರೀಲಂಕಾಕ್ಕೆ ಬಂದ ಉದ್ದೇಶವನ್ನು ವಿವರಿಸುತ್ತಾನೆ. ವಾಸ್ತವದಲ್ಲಿ ಶ್ಯಾಮಾಳ ಸಹೋದರನಾದ ಪಸುಪತಿ ತಾನು ಮರುದಿನ ಶ್ಯಾಮಾಳನ್ನು ಅಮುದಾಳ ಭೇಟಿಗೆ ಕರೆತರುವುದಾಗಿ ಭರವಸೆ ನೀಡುತ್ತಾನೆ.  

ಮರುದಿನ ನಾಲ್ವರೂ ಪಸುಪತಿ ಹೇಳಿದ ಸ್ಥಳದಲ್ಲಿ ಶ್ಯಾಮಾಳ ಭೇಟಿಗೆ ಕಾದಿರುವಾಗಲೇ ಆ ಪ್ರದೇಶದಲ್ಲೇ ಅವಿತಿದ್ದ ಬಂಡುಕೋರರು ಹಾಗೂ ಸೈನ್ಯದ ನಡುವೆ ಹೋರಾಟವೇರ್ಪಟ್ಟು ಬಾಂಬ್ ಹಾಗೂ ಗುಂಡುಗಳ ಅವಿರತ ಮೊರೆತ ಆರಂಭವಾಗುತ್ತದೆ. ಕಣ್ಣೆದುರೇ ಹೊತ್ತಿ ಉರಿಯುತ್ತಿರುವ ಕಟ್ಟಡ, ನಿರ್ಜೀವವಾಗುತ್ತಿರುವ ಮನುಜರು, ಗುಂಡಿನ ಮೊರೆತ ಪುಟ್ಟ ಅಮುದಳ ಕಣ್ಣಲ್ಲಿ ಅಚ್ಚಳಿಯದಂತೆ ಮೂಡತೊಡಗುತ್ತದೆ. ಇದೇ ಸಂದರ್ಭದಲ್ಲಿ ಅವಳೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಇಂದಿರಾಳ ತೋಳಿಗೆ ಗುಂಡು ತಗಲುತ್ತದೆ. ಹೇಗೋ ನಾಲ್ವರೂ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ತನ್ನ ಹಠದಿಂದಲೇ ಅಮ್ಮನಿಗೆ ಹೀಗಾಯಿತು ಎಂದರಿತ ಅಮುದಾ ಇಂದಿರಾಳಲ್ಲಿ ತನ್ನೆಲ್ಲಾ ವರ್ತನೆಗಳಿಗೂ ಸೇರಿಯೋ ಎಂಬಂತೆ ಕ್ಷಮೆ ಕೋರುತ್ತಾಳೆ. ಯುದ್ಧದ ಕ್ರೌರ್ಯದಲ್ಲಿ ಬದುಕಿನ ಇನ್ನೊಂದು ಮುಖವನ್ನು ಕಂಡು ಘಾಸಿಗೊಂಡ ಮಗುವಿನ ಮನ ಚೆನ್ನೈನಲ್ಲಿಯ ಶಾಂತ ನೆಲೆಗೆ, ಮನುಜನೇ ಮನುಜನನ್ನು ಕೊಲ್ಲುವ ಜಾಗದಿಂದ ಸಮುದ್ರದ ಪ್ರಶಾಂತ ತೀರಕ್ಕೆ ಹಿಂದಿರುಗಲು ಬಯಸುತ್ತದೆ. ಮನೆಗೆ ವಾಪಾಸಾಗೋಣ ಎಂದು ಅವಳೇ ಅಪ್ಪ ಅಮ್ಮನನ್ನು ಹೊರಡಿಸುತ್ತಾಳೆ. ಮರುದಿನ ಮೂವರೂ ವಿಕ್ರಮಸಿಂಘೆಯೊಂದಿಗೆ ವಿಮಾನ ನಿಲ್ದಾಣಕ್ಕೆ ಹೋಗುವಾಗ ಪಸುಪತಿ ಭೇಟಿಯಾಗಲು ಹೇಳಿದ್ದ ಪ್ರದೇಶದ ರಸ್ತೆಯಲ್ಲೇ ಹೋಗಲು ಸೂಚಿಸುವ ಇಂದಿರಾ ಈ ದಿನವಾದರೂ ಶ್ಯಾಮಾ ಬರಬಹುದೆಂಬ ಆಸೆಯಿಂದ ಆ ಜಾಗದಲ್ಲಿ ಕೆಲವು ಕ್ಷಣ ಕಾಯೋಣವೆಂದು ಸೂಚಿಸುತ್ತಾಳೆ. ಅವಳ ನಿರೀಕ್ಷೆಯಂತೇ ಶ್ಯಾಮಾ ಬರುತ್ತಾಳೆ. 

ತನ್ನ ಹೆತ್ತಮ್ಮನನ್ನು ಕಂಡಾಗ ಅವಳೊಡನೆ ಏನೆಲ್ಲಾ ಪ್ರಶ್ನೆ ಕೇಳಬೇಕೆಂದು ಎಷ್ಟೋ ತಯಾರಿ ಮಾಡಿಕೊಂಡಿದ್ದ ಅಮುದಾ ಶ್ಯಾಮಾ ಎದುರಾದಾಗ ಮಾತನಾಡುವಲ್ಲಿ ಸೋಲುತ್ತಾಳೆ. ನಡೆದ ಎಲ್ಲಾ ಘಟನೆಗಳಿಂದ ಜರ್ಝರಿತವಾದ ಆಕೆ ಹಿಂಜರಿಕೆಯಿಂದ ಇಂದಿರಾಳ ಮಡಿಲಿನಲ್ಲಿ ಹುದುಗಿಕೊಳ್ಳುತ್ತಾಳೆ. ಕಡೆಗೆ ಇಂದಿರಾಳೇ ಆಕೆಯನ್ನು ಸಂತೈಸಿ ಅವಳು ತಯಾರಿಸಿದ್ದ ಇಪ್ಪತ್ತು ಪ್ರಶ್ನೆಗಳನ್ನು ಕೇಳುವಂತೆ ಓಲೈಸುತ್ತಾಳೆ. ಮಗು ಪ್ರಶ್ನೆಗಳನ್ನು ಕೇಳುತ್ತಾ ಹೋದಂತೆ ಹನಿಗಣ್ಣಾಗುವುದರ ಹೊರತು ಬೇರ್ಯಾವ ಉತ್ತರವನ್ನೂ ಕೊಡಲಾರದೇ ಹೋಗುತ್ತಾಳೆ ಶ್ಯಾಮಾ. ತನ್ಯಾವ ಪ್ರಶ್ನೆಗಳಿಗೂ ಹೆತ್ತಮ್ಮ ಉತ್ತರವನ್ನು ಕೊಡಲಾರಳೆಂಬುದನ್ನು ಅರಿತ ಅಮುದಾ ಪ್ರಶ್ನೆಗಳನ್ನು ನಿಲ್ಲಿಸುತ್ತಾಳೆ. ಭೇಟಿ ಮುಗಿದು ಹೊರಟು ನಿಂತಾಗ 'ನೀನೂ ನಮ್ಮೊಂದಿಗೆ ಈ ಕ್ರೌರ್ಯ ತುಂಬಿದ ಜಾಗದಿಂದ ನಮ್ಮ ಶಾಂತಿಯೇ ಮೈವೆತ್ತ ಸುಂದರ ಊರಿಗೆ ಬಾ' ಎಂದು ಅಕ್ಕರೆಯಿಂದ ಕರೆಯುವ ಮಗಳ ಮಾತಿಗೆ ದ್ರವಿಸುವ ತಾಯಿ 'ನಾನು ಜನಿಸಿದ ಈ ನೆಲದ ಪ್ರತಿಯಾಗಿ ತನ್ನ ಕರ್ತವ್ಯವಿನ್ನೂ ಮುಗಿದಿಲ್ಲ. ಮುಂದೊಮ್ಮೆ ಇಲ್ಲೂ ಶಾಂತಿ ನೆಲೆಯೂರುತ್ತದೆ. ಆ ದಿನ ನೀನು ಇಲ್ಲಿಗೇ ವಾಪಾಸಾಗುವೆಯಂತೆ' ಎಂದುತ್ತರಿಸಿ ಆರ್ದ್ರ ಮನದೊಂದಿಗೆ ತೆರಳುವುದರೊಂದಿಗೆ ಚಿತ್ರ ಮುಗಿಯುತ್ತದೆ. ಆದರೆ ಚಿತ್ರ ಸೃಷ್ಟಿಸುವ ಭಾವಗಳು ಮನದಲ್ಲಿ ಚಿರಸ್ಥಾಯಿಯಾದಂತೆ ಭಾಸವಾಗುತ್ತದೆ. ಕೇವಲ ಚಿತ್ರವನ್ನು ನೋಡಿಯೇ ಅನುಭವಿಸಬಹುದಾದ ಹಲವು ಸನ್ನಿವೇಶಗಳು ಸದಾ ಕಾಡುತ್ತವೆ.

ತಿರು, ಇಂದಿರಾ ಹಾಗೂ ಅಮುದಾ ಆಗಿ ಮಾಧವನ್, ಸಿಮ್ರನ್ ಹಾಗೂ ಬೇಬಿ ಕೀರ್ತನಾ ಪಾತ್ರವನ್ನೇ ಜೀವಿಸಿದ್ದಾರೆ. ಅದರಲ್ಲೂ ಸಿಮ್ರನ್ ಹಾಗೂ ಕೀರ್ತನಾ ಇಬ್ಬರಿಗಾಗಿಯೇ ಈ ಪಾತ್ರಗಳನ್ನು ರಚಿಸಿದಂತಿದೆ. ಮಾತಿಗಿಂತ ಹೆಚ್ಚಾಗಿ ಕಣ್ಣು ಹಾಗೂ ದೇಹಭಾಷೆಯಲ್ಲೇ ಭಾವನೆಗಳನ್ನು ಅಭಿವ್ಯಕ್ತಿಸಿರುವ ಕೀರ್ತನಾ ಈ ಚಿತ್ರದಲ್ಲಿನ ನಟನೆಗಾಗಿ 2003ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಶ್ಯಾಮಾ ಆಗಿ ನಂದಿತಾ ದಾಸ್ ಹಾಗೂ ವಿಕ್ರಮಸಿಂಘೆಯಾಗಿ ಪ್ರಕಾಶ್ ರಾಜ್ ಅವರದ್ದೂ ಮನೋಜ್ಞ ಅಭಿನಯ. 

ಭಾವಗಳ ಕಡಲಿನಂತಹ ಸಂಗೀತ, ಸದಾ ಕಾಡುವ ಸಾಲುಗಳು ಈ ಚಿತ್ರದ ಇನ್ನೊಂದು ಹೈಲೈಟ್. ಮಗಳಿಂದ ಪರಿತ್ಯಕ್ತಳಾಗುವ ಭಯದಲ್ಲಿರುವ ತಾಯಿಯೊಬ್ಬಳ ಮನದ ತಾಕಲಾಟಗಳಿಗೆ ಕನ್ನಡಿ ಹಿಡಿಯುವ 'ಒರು ದೈವಂ ತಂದ ಪೂವೇ ಕಣ್ಣಿಲ್ ತೇಡಲ್ ಎನ್ನ ತಾಯೇ', ಶಾಂತಿಯೇ ಮೈವೆತ್ತಂತಹ 'ವೆಳ್ಳೈ ಪೂಕ್ಕಳ್ ಉಲಗಂ ಎಂಗುಂ ಮಲರುಮೇ', ಸಿಂಹಳೀ ಸಾಹಿತ್ಯದ 'ಸಿನ್ಯೋರೇ', ನಿರಾಶ್ರಿತರ ಮನದ ದನಿಯಂತಿರುವ 'ವಿಡೆ ಕೊಡು ಎಂಗಳ್ ನಾಡೇ'..... ಹೀಗೆ ಪ್ರತೀ ಗೀತೆ, ಅದರ ಸಾಹಿತ್ಯ ಚಲನಚಿತ್ರದಷ್ಟೇ ಕಾಡುತ್ತದೆ. ಚಿತ್ರವನ್ನು ಇನ್ನಷ್ಟು ಭಾವಪೂರ್ಣಗೊಳಿಸುವಲ್ಲಿ ಈ ಹಾಡುಗಳು ಬಹುಮುಖ್ಯ ಪಾತ್ರ ವಹಿಸಿವೆ. 

ಅತ್ಯುತ್ತಮ ತಮಿಳು ಚಿತ್ರ, ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಗೀತ ಸಾಹಿತ್ಯ ಸೇರಿದಂತೆ ಒಟ್ಟು ಆರು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಈ ಚಿತ್ರ ಆರು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಿಗೂ ಭಾಜನವಾಗಿದೆ. 

ಒಟ್ಟಿನಲ್ಲಿ ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ ಅರ್ಥಪೂರ್ಣ ಸಿನಿಮಾ ಕನ್ನತ್ತಿಲ್ ಮುತ್ತಮಿಟ್ಟಾಲ್. ಅಮೆಜಾನ್ ಪ್ರೈಮ್ ಹಾಗೂ ಯೂ ಟ್ಯೂಬ್ ನಲ್ಲಿಯೂ ಲಭ್ಯವಿದೆ. ಸಮಯ ಸಿಕ್ಕಾಗ ಒಮ್ಮೆ ನೋಡಿ. ಖಂಡಿತಾ ನಿಮಗೂ ಇಷ್ಟವಾಗುತ್ತದೆ. (ಈ ಚಿತ್ರ 'ಅಮೃತಾ' ಎಂಬ ಹೆಸರಿನಲ್ಲಿ ತೆಲುಗಿಗೂ ಡಬ್ ಆಗಿದೆ.)

ಧನ್ಯವಾದಗಳು 😊☺️🙏



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ