ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಸ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಏಪ್ರಿಲ್ 15, 2023

ಪಾಪಾಸ್ ಕಳ್ಳಿ ಪರ್ಮೇಶಿಯ ಪೊಲಿಟಿಕಲ್ ಸ್ಟ್ರಾಟಜಿ

ನಮ್ ಪೊಲಿಟೀಷಿಯನ್ ಪರ್ಮೇಶಿ ಚುನಾವಣಾ ಸಮಯದಲ್ಲಿ ಕಂಡಕಂಡಲ್ಲಿ  ಅಬ್ಬೇಪಾರಿಯಾಗಿ ಜೋತಾಡೋ ಪಾರ್ಟಿ ಫ್ಲೆಕ್ಸ್ ಗಳ ರೀತಿಯಲ್ಲೇ ಸೀಲಿಂಗಿಗೆ  ಜೋತುಬಿದ್ದು ಗರಗರನೆ ತಿರ್ಗ್ತಿರೋ ಫ್ಯಾನನ್ನೇ ತದೇಕಚಿತ್ತದಿಂದ ನೋಡ್ತಾ ಒಂದೇ ಸಮ್ನೆ ಚಿಂತೆ ಮಾಡ್ತಾ ಪಾರ್ಟಿ ಆಫೀಸಲ್ಲಿ ಕೂತಿದ್ದ. ಹತ್ತು ವರ್ಷದಿಂದ ರಾಜಕೀಯ ಸಾಗರದಲ್ಲಿ ಧುಮುಕಿ, ತೇಲಿ, ಈಜಿ, ಮುಳುಗಿ ಎಕ್ಸ್ಪೀರಿಯೆನ್ಸ್ ಇರೋ ಪರ್ಮೇಶಿ ಮೊದ್ಲಿಗೆ 'ಕರಾ'ಗ್ರೇ ವಸತೇ ಲಕ್ಷ್ಮೀ ಅಂತ 'ಕರದಂಟು' ಮೆಲ್ಲುತ್ತಾ ರಾಜಕೀಯಕ್ಕೆ ಕಾಲಿಟ್ಟ. ಆಮೇಲೆ ಈ 'ಕರ'ಕ್ಕೆ ದಂಟೇ ಗತಿ, ಗಂಟು ಸಿಗಾಕಿಲ್ಲ ಅಂತ ತಿಳಿದ್ಮೇಲೆ, 'ಕಮಲ'ದ ದಂಟೇ ವಾಸಿ ಅಂತ ಪರ್ಮೇಶಿಯ ಕರದಲ್ಲಿ 'ಪದ್ಮ' ಶೋಭಿಸಿತು. 'ತಾವರೆ'ಯ ದಳಗಳೆಲ್ಲಾ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ವಲಸೆ ಹೋಗಿ 'ದಿ ಗ್ರೇಟ್ ಮೈಗ್ರೇಶನ್' ಆರಂಭವಾದಾಗ ಪರ್ಮೇಶಿಗೆ ಪದುಮಕ್ಕಿಂತ ಪದುಮ'ದಳ'ಕ್ಕೆ ವ್ಯಾಲ್ಯೂ ಜಾಸ್ತಿ ಅನ್ನಿಸೋಕೆ ಶುರುವಾಯ್ತು. ಸಮೃದ್ಧ ಗಂಟಿನ 'ತೆನೆ ಹೊರುವ' ಆಸೆಯಿಂದ ಕಮಲಕ್ಕೆ ಕೈ ಕೊಟ್ಟು 'ದಳ'ವೇ ಪರಂಧಾಮವಯ್ಯ ಅಂತ ಪಾಡಿದ್ದಾಯ್ತು. ಒಂದಿಷ್ಟು ಟೈಂ ' ಆನೆ ಸವಾರಿ' ಆಮೇಲೆ 'ಸೈಕಲ್ ವಿಹಾರಿ', ಕೊನೆಕೊನೆಗೆ 'ಕಸ ಗುಡಿಸಿ' ಎಲ್ಲೆಡೆಯೂ ಭ್ರಮನಿರಸನವೇ ಅಂತ ಜ್ಞಾನೋದಯವಾದ್ಮೇಲೆ ಎಲ್ಲಕ್ಕಿಂತ ದೊಡ್ಡದು ಆಜಾ಼ದಿ ಅಂತ 'ಸ್ವತಂತ್ರ್ಯತೆ'ಯ ಸವಿಯನ್ನು ಸವಿಯುತ್ತಿರೋನು ನಮ್ಮ ಪರ್ಮೇಶಿ. ಅಂಟಿಯೂ ಅಂಟದಂತಿರು ಅನ್ನೋದಕ್ಕಿಂತ ಯಾರಿಗೂ ಅಂಟಿಕೊಳ್ಳಲು ಧೈರ್ಯ ಬಾರದಂತಿರು ಎಂಬ ತತ್ವಕ್ಕೆ ಬದ್ಧನಾಗಿ 'ಪಾಪಾಸ್ ಕಳ್ಳಿ'ಯನ್ನೆ ತನ್ನ ಸರ್ವಸ್ವತಂತ್ರ ಪಕ್ಷದ ಚಿನ್ಹೆಯಾಗಿಸಿಕೊಂಡ ಪರ್ಮೇಶಿಗೆ ಹೆಂಗಾರಾ ಮಾಡಿ ಈ ಸಲದ ಎಲೆಕ್ಷನ್ನಲ್ಲಿ ಗೆದ್ದು ಗದ್ದುಗೆಗೇರೋ ಹುಚ್ಚು ನೆತ್ತಿಗೇರಿದೆ. ಗೆದ್ದೆತ್ತಿನ ಬಾಲ ಹಿಡ್ಯೋಕಿಂತ ತಾನೇ ಆ ಎತ್ತಾಗಿ ಗತ್ತಿಂದ ಮೆರೀಬೇಕು, ತನ್ನನ್ನು ಕಾಲಿನ ಕಸವಾಗಿ ಕಂಡವರನ್ನ ಕಾಲಡಿ ಹಾಕಿ ತುಳೀಬೇಕು, ತಾನೂ ವಿಶ್ವದ ಧೀಮಂತ ರಾಜಕಾರಣಿಗಳಲ್ಲಿ ಒಬ್ಬ ಆಗ್ಬೇಕು...... ಹೀಗೆ ಲೆಕ್ಕವಿಲ್ಲದಷ್ಟು ಹಗಲುಗನಸುಗಳಲ್ಲಿ ತೇಲ್ತಾ ತನ್ನ ಹೆಸರಿನ ಹಿಂದೆ ಪೊಲಿಟೀಷಿಯನ್ ಅನ್ನೋದ್ನ ಪ್ರಿಫಿಕ್ಸ್ ಮಾಡ್ಕೊಂಡಿರೋ ಮಹಾನುಭಾವ ನಮ್ ಪರ್ಮೇಶಿ.

ಇದಿಷ್ಟು ನಮ್ ಪರ್ಮೇಶಿಯ ಇತಿಹಾಸ. ಈಗ ವರ್ತಮಾನದ ವಿಚಾರಕ್ಕೆ ಬರುವ. ತಾನು ಇಷ್ಟು ವರ್ಷದಿಂದ ಏನೆಲ್ಲಾ ಸರ್ಕಸ್ ಮಾಡಿ, ಪಕ್ಷಾಂತರೀ ತಳಿಯಾಗಿ ಹಾರಿ ಕುಣಿದು ಕುಪ್ಪಳಿಸಿದ್ರೂ ಮತದಾರ ಬಂಧು ಭಗಿನಿಯರು ತನ್ನನ್ನು ಮೂಸಿಯೂ ನೋಡ್ತಾ ಇಲ್ವಲ್ಲ ಅಂತ ಶ್ಯಾನೆ ಬ್ಯಾಸರದಾಗೆ ಫ್ಯಾನನ್ನೇ ನೋಡ್ತಾ ಇದ್ದ ಪರ್ಮೇಶಿಗೆ ತನ್ನ ದಿಮಾಗ್ ಕೀ ಬಲ್ಬ್ ಆನ್ ಆಗ್ತಿಲ್ಲ ಅಂತ ಅನ್ನಿಸ್ತು. ಮೆದುಳಿನ ಬಲ್ಬ್ ಆನ್ ಆಗ್ಲಿಕ್ಕೆ ಒಂದು ಕಪ್ ಟೀ ಅನ್ನೋ ಎಲೆಕ್ಟ್ರಿಸಿಟಿ ದೇಹದ ನರತಂತುಗಳಲ್ಲಿ ಸಂಚರಿಸ್ಬೇಕು ಅಂತ ಮನಸ್ಸಿಗೆ ಬಂದಿದ್ದೇ, "ಲೇ ಇವ್ಳೇ..... ಒಂದು ಕಪ್ ಚಾ ಕೊಡೇ" ಅಂತ ಪಾಕಶಾಲೆಯಲ್ಲಿ ಪಾತ್ರೆಗಳ ಸಂಗೀತ ಕಛೇರಿ ನಡೆಸ್ತಿದ್ದ ಎಲೆಕ್ಟ್ರಿಸಿಟಿ ಬೋರ್ಡ್ ಹೆಡ್ ಗೆ ಬೇಡಿಕೆ ಸಲ್ಲಿಸಿದ.

ಪರ್ಮೇಶಿಯ ಸಂದೇಶ ಭಾಮೆಯ ಕಿವಿ ತಲುಪಿದ್ದೇ ಅಡುಗೆಮನೆಯಿಂದ ಮಂದಗತಿಯಲ್ಲಿ ಕೇಳ್ತಿದ್ದ ಪಾತ್ರೆಗಳ ಸಂಗೀತ ಕಛೇರಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುವಷ್ಟು ಡೆಸಿಬಲ್ಲುಗಳಿಗೆ ಏರಿಕೆಯಾಯ್ತು. ಭಾರ್ಯೆಯ ಬಾಯಿಂದ ಹೊರಟ ಬಂದೂಕು ಸಿಡಿಗುಂಡುಗಳು, ಪಾತ್ರೆ ಮಿಸೈಲುಗಳು ಬಾಂಬುಗಳು, ದಡಬಡ ಹೆಜ್ಜೆಯ ಭೂಕಂಪನಗಳೆಲ್ಲಾ ಒಟ್ಟಾಗಿ ಅನಿಶ್ಚಿತ ಭೀತಿಯ ವಾತಾವರಣ ಸೃಷ್ಟಿಯಾಯ್ತು. ಎರಡೇ ನಿಮಿಷಗಳಲ್ಲಿ ಲಾಸ್ಟ್ ಸಪ್ಪರ್ ಹಿಡ್ಕೊಂಡು ಬಂದ ಮಾನವ ಬಾಂಬರ್ ರೀತಿ ಕಣ್ಣಲ್ಲೇ ಜ್ವಾಲಾಮುಖಿ ಉಗುಳುತ್ತಾ ಟೇಬಲ್ ಮೇಲೆ ಚಾ ಕಪ್ ತಂದು ಕುಕ್ಕಿದ ಮಡದಿ, 
" ಲೋ ದರ್ಬೇಸಿ ಪರ್ಮೇಶಿ, ನನ್ನನ್ನೇನು ಸ್ವಿಗ್ಗಿ, ಜೊ಼ಮ್ಯಾಟೋ ಡೆಲಿವರಿ ಗರ್ಲ್ ಅಂದ್ಕೊಂಡ್ಯಾ? ಮೂರ್ಹೊತ್ತೂ ನಿಂಗೆ ಊಟ, ತಿಂಡಿ, ಚಾ, ಕಾಫಿ ಸೇವೆ ಮಾಡೋದ್ ಬಿಟ್ಟು ನಂಗೇನು ಬೇರೆ ಕೆಲ್ಸ ಇಲ್ವಾ? ದಂಡಪಿಂಡದ ತರ ತಿನ್ನೋದು, ಹೆಬ್ಬಾವಿನ್ ತರ ಸುತ್ಕೊಂಡು ಬೀಳೋದ್ ಬಿಟ್ಟು ನಿನ್ಗೇನ್ ಕೆಲ್ಸ ಹೇಳು? ಇನ್ನೊಂದ್ಸಲ ಚಾ, ಕಾಫಿ ಅಂತ ಕೇಳು ಆಗಿದೆ ನಿಂಗೆ ಮಾರಿಹಬ್ಬ" ಅಂತ ಒಂದೇ ಸಮನೆ ಪರ್ಮೇಶಿ ತಲೆನ ಕುಕ್ಕೋಕೆ ಶುರು ಮಾಡಿದ್ಲು.

" ಏನೇ ನೀನು ಬಾಯಿಗ್ ಬಂದ್ಹಂಗೆ ಮಾತಾಡ್ತಿ? ಗಂಡ ಅನ್ನೋ ಗೌರವ ಇಲ್ಲ, ಒಂದು ಭಯಭಕ್ತಿ ಇಲ್ಲ. ಅಲ್ಲಾ ಈಗ ನಾನೇನ್ ಕೇಳ್ದೇ ಅಂತ ಈ ಪಾಟಿ ಬೈತಿದ್ದೀ ನಂಗೆ ಅಂತ. ಎಲ್ಲರ್ ಮನೆಲೂ ಚಾ ಜೊತೆ ಸ್ನಾಕ್ಸ್, ಡೆಸರ್ಟು, ಕುರ್ಕು, ಮುರ್ಕು ಎಲ್ಲಾ ಮಾಡಿ ತಿನ್ನಿ ತಿನ್ನಿ ಅಂತ ತಿನ್ನಿಸ್ತಾರಪ್ಪಾ. ನೀನೇ ನೋಡಿಲ್ವಾ ಆ ಪಕ್ಕದ್ಮನೆ ಪಂಕಜಾ, ಆಚೆ ಮನೆ ಅಚಲಾ, ಈಚೆ ಮನೆ ಈಶ್ವರಿ ಎಲ್ಲಾ ಎಷ್ಟೊಂದು ಚೆನ್ನಾಗಿ ಅಡ್ಗೆ ಮಾಡಿ ವಾಟ್ಸಾಪ್ ಸ್ಟೇಟಸಲ್ಲಿ ಹಾಕ್ಕೊಂಡಿರ್ತಾರೆ. ಅವ್ರನ್ನ ನೋಡಿ ಸ್ವಲ್ಪ ಕಲಿ" ಅಂತ ಪರ್ಮೇಶಿ ಹೇಳಿದ್ದೇ ಹೇಳಿದ್ದು..... ಪರ್ಮೇಶಿಯ ಪಾರೋ ಚಂದ್ರಮುಖಿ ಒಂದೇ ಏಟಿಗೆ ನಾಗವಲ್ಲಿ ರೂಪಧಾರಣೆ ಮಾಡಿ ಲಕಲಕಲಕಲಕ ಅಂತ ಉರಿದುಬಿದ್ಲು.

"ಪಕ್ಕದ್ಮನೆ ಪಂಕಜಾ, ಆಚೆ ಮನೆ ಅಚಲಾ, ಈಚೆ ಮನೆ ಈಶ್ವರಿ ಎಲ್ರ ಸ್ಟೇಟಸ್ ನೋಡುವಷ್ಟು ಪುರ್ಸೊತ್ತಿದ್ಯೇನೋ ನಿಂಗೆ? ಸ್ಟೇಟಸ್ ಅಂತೆ ಸ್ಟೇಟಸ್.... ಅಷ್ಟು ಆಸೆ ಇದ್ರೆ ಆ ಸ್ಟೇಟಸ್ನ ಡೈನಿಂಗ್ ಟೇಬಲ್ ಮೇಲೆ ಡೈರೆಕ್ಟ್ ಡೌನ್ಲೋಡ್ ಮಾಡ್ಕೊಳ್ಳೋ ಅಪ್ಲಿಕೇಶನ್ ಕಂಡ್ಹಿಡಿ. ಆಮೇಲೆ ಆ ಮೂದೇವಿಯರ ಸೊಡ್ಡು ನೋಡ್ಕೊಂಡು, ಅವ್ರು ಮಾಡೋ ಪಡ್ಡು ತಿಂದ್ಕೊಂಡು, ಹ್ಯಾಷ್ಟ್ಯಾಗ್ ಪಕ್ಕದ್ಮನೆ ಫುಡ್ಡೇ ಗುಡ್ಡು ಅಂತ ಸ್ಟೇಟಸ್ ಹಾಕ್ಕೊಂಡು ಸಾಯಿ ಬಿಕ್ನಾಸಿ" ಅಂತ ಮಖಕ್ಕೆ ಉಗ್ದು ಟೇಬಲ್ ಮೇಲಿದ್ದ ಚಾ ಕಪ್ ಸಮೇತ ಚಂಡಮಾರುತದಂಗೆ ವಾಪಾಸ್ ಹೋದ್ಲು.

ಹೆಂಡ್ತಿ ಮಾತು ಕೇಳಿದ್ದೇ ಚಾ ಕುಡೀದೇನೇ ಮೆದುಳಿನೊಳಗೆ ಸಿಸ್ಕಾ ಎಲ್ ಈ ಡಿ ಚಾರ್ ಸೌ ಚಾಲೀಸ್ ವೋಲ್ಟ್ ಆನ್ ಆಯ್ತು ಪರ್ಮೇಶಿಗೆ. 'ಅಬ್ಬಾ ನನ್ ಹೆಂಡ್ತಿ ಎಂಥಾ ಐಡಿಯಾ ಕೊಟ್ಲಲ್ಲಪ್ಪೋ' ಅಂತ ಬ್ಯಾಗ್ರೌಂಡ್ ಮ್ಯೂಸಿಕ್ ಇಲ್ದೇ ಕುಣಿದಾಡಿಬಿಟ್ಟ. 

'ನನ್ ಪಾಪಾಸ್ ಕಳ್ಳಿ ಪಕ್ಷನ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸೋಕೆ ಇದೇ ಒಳ್ಳೆ ಉಪಾಯ. ಆಹಾ.... ವಾಟ್ಸಾಪ್ ಸ್ಟೇಟಸಲ್ಲಿರೋ ಫುಡ್ಡು ಡೈರೆಕ್ಟಾಗಿ ಡೈನಿಂಗ್ ಟೇಬಲ್ ಮೇಲೆ ಡೌನ್ಲೋಡ್ ಆಗ್ಬಿಟ್ರೆ...... ಆಹಾಹಾ.... ರಾಜ್ಯ ಏನು, ದೇಶ ಏನು.... ಇಡೀ ಪರಪಂಚದಲ್ಲಿರೋ ಮಹಿಳಾ ಮತಬಾಂಧವರೆಲ್ಲರ ಓಟೂ ಈ ಪರ್ಮೇಶಿ ಜೇಬಿಗೇ ಪಕ್ಕಾ. ಆಮ್ಯಾಕೆ ನಾನು ಅಂದ್ರೆ ಕುರ್ಚಿ ಕುರ್ಚಿ ಅಂದ್ರೆ ನಾನು. ಫೆವಿಕಾಲ್ ಹಂಗೆ ಅಂಟ್ಕೊಂಬಿಡ್ತದೆ ಕುರ್ಚಿ ನಂಗೆ. 

ಮನೆಮನೆಗೂ ವಾಟ್ಸಾಪ್ ಫುಡ್ಡು,
ಬಾಯಿಗ್ ಬಂದು ಬಿತ್ತಾ ಮಗಾ ಲಡ್ಡು,
ಪೊಲಿಟೀಷಿಯನ್ ಪರ್ಮೇಶಿನೇ ಗುಡ್ಡು,
ಪರ್ಮೇಶಿ ಕೈಲಾಸದ ತುಂಬಾ ದುಡ್ಡೋ ದುಡ್ಡು.....

ಹಂಗೆ ಆ ಅಪ್ಲಿಕೇಷನ್ ಇನ್ನೊಂಚೂರು ಅಪ್ಗ್ರೇಡ್ ಮಾಡಿ 'ಮನೆಗೊಂದು ಬಾರು ಕುಡಿದು ಹಗುರಾಗಿ ಚೂರು' ಅನ್ನೋ ಆಫರ್ ಬಿಟ್ಟಾಂದ್ರೆ ಪುರುಷೋತ್ತಮರೆಲ್ಲಾ 'ವೇರೆವರ್ ಯು ಗೋ ವಿ ಫಾಲೋ' ಅಂತ ಹುಚ್ ನಾಯಿ..... ಥತ್ತೇರಿಕೆ..... ಅಲ್ಲಲ್ಲಾ.... ಹಚ್ ನಾಯಿ ತರ ಹಿಂದೆ ಬಂದ್ಬಿಡ್ತಾರೆ. ಅಲ್ಲಿಗೆ 'ಪರಪಂಚ ಈ ಪರಪಂಚ, ಪರ್ಮೇಶಿಯೇ ಇದ್ರ ಸರಪಂಚ'..... 

ಆಮೇಲೆ.....

ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ, 
ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ..... 
ಆ ಫ್ಲೆಕ್ಸಲ್ಲೂ ನಾನೇ, 
ಈ ಟಿವಿಲೂ ನಾನೇ, 
ಆ ಪೇಪರ್ರಲ್ಲೂ ನಾನೇ, 
ಈ ಬಾನುಲಿಯಲ್ಲೂ ನಾನೇ, 
ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾ ಟ್ವಿಟ್ಟರ್
ಅಮೇಜಾನ್ ಫ್ಲಿಪ್ಕಾರ್ಟ್ ನೈಕಾ ಮೀಶೋ 
ವಾಲ್ಮಾರ್ಟ್ ಡಿ ಮಾರ್ಟ್ ರಾಯಲ್ ಮಾರ್ಟ್ ವಿಶಾಲ್ ಮಾರ್ಟ್ 
ಕೆಜಿಎಫ್ ಕಾಂತಾರಾ ಆರ್ ಆರ್ ಆರ್ ಪಠಾಣ್
ಎಲ್ಲೆಲ್ಲೂ ನಂದೇ ಹವಾ.....
ಸಬ್ ಪರ್ಮೇಶಿ ಕೆ ಲಿಯೇ ಮಾಂಗೋ ದುವಾ....'

ಹೀಗೇ ಮೈ ಮೇಲೆ ಖಬರಿಲ್ದೇ ಖಬರ್ಸ್ತಾನದಲ್ಲಿರೋ ಹೆಣದ ತರ ಬಿದ್ಕೊಂಡು ತಿರುಕನ ಕನಸು ಕಾಣ್ತಿದ್ದ ಪರ್ಮೇಶಿಗೆ ಅಡುಗೆಮನೆಯೊಳಗೆ ಭಾಮೆ ನಡೆಸ್ತಿದ್ದ ತೆಹೆಲ್ಕಾದಿಂದಾಗಿ ಮತ್ತೆ ಹೋಶ್ ಬಂತು.

ಆ ಕೂಡಲೇ ತನ್ನ ಕನಸಿನ ಕೂಸಾದ 'ದಿ ಜರ್ನಿ ಆಫ್ ಫುಡ್ - ಫ್ರಂ ವಾಟ್ಸಾಪ್ ಸ್ಟೇಟಸ್ ಟು ಡೈನಿಂಗ್ ಟೇಬಲ್'ನ ಪ್ರಸವ ಪೂರ್ವ ಹಾಗೂ ಪ್ರಸವಾನಂತರದ ಆರೈಕೆಗೆ ನುರಿತ ಶುಶ್ರೂಷಕರ ತಂಡದ ಆಯ್ಕೆಗಾಗಿ ಅಪ್ಲಿಕೇಶನ್ ಡೆವಲಪರ್ಸ್ ಹುಡುಕಾಟಕ್ಕೆ ಹೊರಟೇಬಿಟ್ಟ. 

ಹೋದಾ ಹೋದಾ ಹೋದಾ ಹೋದಾ...... ಅಪ್ಲಿಕೇಶನ್ ಡೆವಲಪರ್ಸ್'ಗಳ ರೆಸ್ಯೂಮೆ ಅಪ್ಲಿಕೇಶನ್ ಸ್ಕ್ರೂಟನಿ ಮಾಡೋಕೆ ಬೇಟೆಗಾರರ ಬೇಟೆಯಾಡೋ ರಣ ಬೇಟೆಗಾರ ಹೋದಾ......

ಸೋ.... ನಲ್ಮೆಯ ಮಹಿಳೆಯರೇ, ಅಡುಗೆ ಮನೆಯ ಪಾತ್ರೆ ಪಗಡೆಗಳನ್ನು ಗಂಟು ಕಟ್ಟಿ ಅಟ್ಟಕ್ಕೆ ಎಸ್ದು, ಈ ಬೆಲೆ ಏರಿಕೆ ಕಾಲದಲ್ಲಿ ದಿನಸಿ ಸಾಮಾನಿಗಂತ ದುಡ್ಡು ಖರ್ಚು ಮಾಡ್ದೇ, ಆರಾಮಾಗಿ ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು ವಾಟ್ಸಾಪ್ ಸ್ಟೇಟಸ್ಸಲ್ಲಿರೋ ತರಹೇವಾರಿ ಅಡುಗೆಯ ಸ್ಕ್ರೀನ್ ಶಾಟ್ ತೆಗೀತಾ, ಈ ಸಲದ ಎಲೆಕ್ಷನ್ನಲ್ಲಿ ಯಾರಿಗೂ ನಿಮ್ಮ ಮತವನ್ನು ದಾನ ಮಾಡದೇ ಕಾಯ್ತಾ ಇರಿ. ಇನ್ನೇನು ನಮ್ ಪಾಪಾಸ್ ಕಳ್ಳಿ ಪರ್ಮೇಶಿ ಅಪ್ಲಿಕೇಶನ್ ರೆಡಿ ಮಾಡಿಸ್ಕೊಂಡು ಬಂದ್ಬಿಡ್ತಾನೆ. ಆಮೇಲೇನಿದ್ರೂ ನಿಮ್ದೇ ಹವಾ..... ಓಕೆನಾ....

ಪುರುಷ ಪುಂಗವರ ಗಮನಕ್ಕೆ- ನೀವೂ ನಿಮ್ಮ ಮತವನ್ನು ನಮ್ ಪರ್ಮೇಶಿಗೇ ಡೊನೇಟ್ ಮಾಡಿ ಮತ್ತೆ. ಈ ಡೊನೇಷನ್ ಗೆ ಪ್ರತಿಯಾಗಿ ನಿಮ್ಗೂ ಒನ್ 'ಕೇಸ್' ಗ್ಲುಕೋಸ್ ವಿತ್ 'ಸೋಡಾ ಎಂಡ್ ಸೈಡ್ಸ್' ಆಫರ್ರನ್ನೂ ಇನ್ಬಿಲ್ಟ್ ಇನ್ಸ್ಟಾಲ್ ಮಾಡ್ಕೊಂಡು ಬರ್ತಿದ್ದಾರೆ ನಮ್ ಪಾಪಾಸ್ ಕಳ್ಳಿ ಪೊಲಿಟೀಷಿಯನ್ ಪರ್ಮೇಶಿ. ಕಾಯ್ತಿರಿ ಆಯ್ತಾ.....

ಶನಿವಾರ, ಜೂನ್ 13, 2020

ವಧು ಬೇಕಾಗಿದ್ದಾಳೆ........

ಹೋಯ್.... ಇವತ್ತು ಒಂದು ಭಯಾನಕ ದಾರುಣ ಘಟನೆ ಸಂಭವಿಸಿರುವುದು ಗೊತ್ತುಂಟಾ ನಿಮಗೆ... ಗೊತ್ತಿಲ್ದಿದ್ರೆ ನಾ ಹೇಳ್ತೆ ಕೇಳಿ....

ಇವತ್ತು.... ನಾವು(ಅಂದ್ರೆ ನಾನು) MBBS (ಮನೆ ಬಿಟ್ಟ್ ಬೀದಿ ಸುತ್ತ್) ಫಿನಿಶ್ ಮಾಡಿ ನಮ್ಮ ಪರ್ಮನೆಂಟ್ ಅಡ್ರೆಸ್ ಒಳಗೆ(ನಮ್ಮನೆ ಒಳಗೆ ಕಣ್ರಪ್ಪಾ) ಕಾಲಿಡ್ತಿದ್ದಂಗೆ ಕಂಡಿತ್ತು ಆ ದಾರುಣ ಹೃದಯ ವಿದ್ರಾವಕ ಸನ್ನಿವೇಶ.....

ಚೊರೆರಾಯನಪುರ ಎಂಬ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದಾದಷ್ಟು ದೊ.....ಡ್ಡ ಊರಿನಲ್ಲಿ ಮಾಮಲ್ಲ(ಬಹಳ ದೊಡ್ಡ) ಕಿರಿಕ್ ಪಾರ್ಟಿ, ಭಯಂಕರ ಪೆಟ್ಟಿಷ್ಟ್, ಅಂಡೆಪಿರ್ಕೀಸು ಎಂದು ವಿಶ್ವವಿಖ್ಯಾತಿ ಪಡೆದ ನಮ್ಮ ಪಿತಾಜಿ ಮ್ಯಾಚ್ ಮೇಕರ್ ಮ್ಯಾರೇಜ್ ಬ್ರೋಕರ್ ಗುಂಡೂರಾಯರು ಲೈಫಲ್ಲಿ ಫಸ್ಟ್ ಟೈಮು ಒಂದು ಕೈಯಲ್ಲಿ ಎಳನೀರಿಗೆ ಗ್ಲೂಕೋಸ್ ಸೇರ್ಸಿಕೊಂಡು, ಪಕ್ಕದಲ್ಲಿ  ಪೌಷ್ಟಿಕ ಆಹಾರ ಅಂಗನವಾಡಿ ಫುಡ್ಡಿನಲ್ಲಿ ತಯಾರಿಸಿದ ಲಡ್ಡು ಹಿಡ್ಕೊಂಡು ಫೀಲಿಂಗಲ್ಲಿ ಸೀಲಿಂಗ್ ನೋಡ್ತಾ ಕೂತಿದ್ರು. 

ಅಯ್ಯೋ ಕರ್ಮವೇ.....!! ಇದೆಂತಹ ಹೃದಯವಿದ್ರಾವಕ ದಾರುಣ ಘಟನೆ ಅಂತ ನೀವು ಕೇಳ್ಬೋದು. ಆದ್ರೆ ಒಂದ್ಸಾರಿ ನಮ್ಮ ಪಿತಾಮಹರ ಹಿಸ್ಟರಿ ಜಿಯಾಗ್ರಫಿ ಗೊತ್ತಾದ್ರೆ ಆ ಪ್ರಶ್ನೆ ಕೇಳಲ್ಲ ನೀವು.

ಐತಿಹಾಸಿಕ ಪ್ರತೀತಗಳ ಪ್ರಕಾರ ನಮ್ಮೂರಿನ ಹೆಸರು ಮುಂಚೆ ಹರಿರಾಯನಪುರ ಅಂತ ಇತ್ತಂತೆ. ಯಾವಾಗ ನಮ್ಮ ಗುಂಡಪ್ಪ ಒಂಬತ್ತನೇ ಮನೆಯ ಶನಿಯಾಗಿ ಭೂಮಿಗೆ ಅಟ್ಕಾಯಿಸ್ಕೊಂಡ್ನೋ ಆಗಿಂದ ಹರಿರಾಯನಪುರ ಚೊರೆರಾಯನಪುರ ಆಯ್ತು ಅಂತ ಪ್ರತೀತಿ. ಈಗ ನೀವೇ ಲೆಕ್ಕ ಹಾಕಿ. ಎಂತಾ ಯದ್ವಾತದ್ವಾ ಗ್ರೇಟ್ ಪೀಸ್ ಅವ್ನು ಅಂತ. ಈ ಪುರಾತತ್ವ ಇಲಾಖೆಯವರು ಚೊರೆ ಅನ್ನೋದು ಮೊದಲು ಹುಟ್ಟಿದ್ದಾ ಇಲ್ಲ ನಮ್ಮ ಜನಕ ಹುಟ್ಟಿದ ಮೇಲೆ ಚೊರೆ ಹುಟ್ಟಿದ್ದಾ ಅಂತ ಇನ್ನೂ ಡಿಸ್ಕವರಿ ಮಾಡ್ತಿದ್ದಾರೆ. ಅದೆಂತಹ ಗಟ್ಟಿ ತಲೆಯ ಮನುಷ್ಯನಾದ್ರೂ ಸರಿಯೇ ನಮ್ಮಪ್ಪ ಕೇವಲ ತನ್ನ ಚೊರೆಯ ಬಲದಿಂದಲೇ ಅವರ ಬುರುಡೆಲೀ ಬೋರ್ವೆಲ್ ಕೊರ್ದು, ಸುರಂಗ ತೋಡಿ, ಪೈಪ್ಲೈನ್ ಹಾಕ್ಬಿಡ್ತಾನೆ.... ಈಗ ಗೊತ್ತಾಯ್ತಲ್ಲ ನಮ್ಮ ಪಿತಾಜಿ ಪವರ್ರು.

ಇಂತಿಪ್ಪ ನಮ್ಮಪ್ಪ ಗುಂಡಪ್ಪ ಹೀಗೆ ಗ್ಲುಕೋಸ್ ಏರ್ಸಿಕೊಂಡ್ರೇ ಅದು ಭಯಂಕರ ದಾರುಣ ಹೃದಯವಿದ್ರಾವಕ ಸಂಗತಿಯೇ ತಾನೇ....?
ನಮ್ಮ ಹಾರ್ಟೂ ಡೈರೀಮಿಲ್ಕ್ ಸಿಲ್ಕ್ ತರ ಮೆಲ್ಟಾಯ್ತು.
"ಏನಾಯ್ತು ತಂದೆ ನಿಮಗೆ" ಅಂತ ಕೇಳ್ದೆ.

"ಅಯ್ಯೋ, ಏನೂಂತ ಹೇಳ್ಲೋ..... ಇವತ್ತು ಬೆಳ್ಳಂಬೆಳಿಗ್ಗೆ ಅದ್ಯಾವ ದರಬೇಸಿ ಮುಸುಡು ನೋಡಿದ್ನೋ..... ನನಗೊಂದು ಹುಡುಗಿ ಹುಡುಕಿಕೊಡಿ ಅಂತ ಒಬ್ಬ ಬಂದಿದ್ದ ಕಣ್ಲಾ..... ಅಯ್ಯೋ ಅಯ್ಯೋ..... ಅವನಿಗ್ ಆಪತ್ತ್ ಬಂದ್ ಚಾಪೆಲ್ ಸುತ್ಕೊಂಡ್ಹೋಗ, ಅವನಿಗೆ ಬರ್ಬಾರ್ದು ಬರ, ನೆಗ್ದ್ ಬಿದ್ದ್ ನೆಲ್ಲಿಕಾಯಾಗೋಗ......" ಅಂತ ಶುರುಹಚ್ಚ್ಕೊಂಡ್ರು ನೋಡಿ ಪಿತಾಜೀ... ಥೂಥೂಥೂಥೂ... ಅದೇನ್ ಬಾಯಾ ಇಲ್ಲ ಬಚ್ಚಲು ಮೋರಿಯಾಂತ ಡೌಟಾಯ್ತು.

ಆದ್ರೂ ನಂಗ್ ಭಯಂಕರ ಕ್ಯೂರಿಯಾಸಿಟಿ ಮಾರಾಯ್ರೇ.... ಅಲ್ಲ ನಮ್ಮಪ್ಪ ಎಂಥಾ ಅಂಡೆದುರ್ಸು.... ಇವನಂಥಾ ಇವ್ನಿಗೇ ಈ ರೇಂಜಿಗೆ ಬೋರ್ವೆಲ್ ಕೊರ್ದಿದ್ದಾನೆ ಅಂದ್ರೆ ಅವ್ನಿನ್ನೆಂತಾ ಹೆಲ್ಮೆಟ್ಟ್ ಪಾರ್ಟಿ ಇರ್ಬಹುದು.

"ಅದೇ ಏನಾಯ್ತು ಪಿತಾಮಹ" ಅಂತ ಸಂದರ್ಭ ಸಹಿತ ವಿವರಣೆ ಕೇಳಿದೆ..

"ಅಲ್ಲಾ ಕಣ್ಲಾ.... ನನಗೆ ಹುಡುಗಿ ಹುಡ್ಕೊಡೀ ಅಂತ ಬಂದ. ನಾನೂ ಕೇಳ್ದೇ. ಎಂತಾ ವಧು ಬೇಕಪ್ಪಾ ನಿಂಗೆ ಬೇಕೂಫಾ ಅಂತ. ನಂದು ಒಂದು ಲಿಸ್ಟಿದೆ. ಆ ಲಿಸ್ಟಲ್ಲಿರೋ ಎಲ್ಲಾ ಗುಣಲಕ್ಷಣಗಳು ಇರೋ ಹುಡುಗಿ ಬೇಕು ಅಂದ. ಅದೇನಪ್ಪಾ ಲಿಸ್ಟೂ ಅಂದೆ. ಅವನ ದೊಡ್ಡ ಚೀಲದಿಂದ ಶೆಟ್ರಂಗಡಿ ಸಾಮಾನಿನ ಲಿಸ್ಟ್ ತರ ಉದ್ದ ಚೀಟಿ ತೆಗ್ದು ಓದೋಕೆ ಶುರು ಮಾಡ್ದಾ ನೋಡು..... ಥೊಕ್...... ಬೆಳಿಗ್ಗೆ ಕುಡ್ದ ಕಾಪಿ ಪವರ್ರೂ ಸಾಲ್ದಷ್ಟು ಮಂಡೆಬೇನೆ ಶುರುವಾತು" ಎಂದ ಗುಂಡಪ್ಪ.

"ಅದೇನು ಅಂತಾ ಕಂಡೀಷನ್ನುಗಳು...." ನಮ್ಮ ಪೂಜ್ಯ ತಂದೆಯವರ ಒಂದು ಹಂಡೆ ಕಾಫಿಗಿಂತ ಪವರ್ಫುಲ್ ತಲೆಬೇನೆ ದಯಪಾಲಿಸಿದ ಲಿಸ್ಟಿನ ಬಗ್ಗೆ ನಾನೂ ಆಸಕ್ತಿಯಿಂದ ಕೇಳಿದೆ.

"ಮೊದಲನೆಯದಾಗಿ ಹುಡುಗಿ ಹಾಲ್ಬಿಳುಪು ಇಲ್ಲಾ ಕೇದಿಗೆಯ ಬಣ್ಣದವಳಾಗಿರಬೇಕು ಅಂದ್ನಪ್ಪ. ನಾನೂ ಚೆನ್ನಾಗಿರೋ ಒಂದಷ್ಟು ಹುಡುಗಿಯರ ಫೋಟೋ ತೋರ್ಸಿದೆ. ಅದ್ನೆಲ್ಲಾ ನೋಡಿ ನಿಮ್ಗೇನ್ ಕಣ್ಣ್ ಐಬಾ ಅಂತ ಕೇಳ್ತಾನೆ ಐನಾತೀ. ಏ ಯಾಕಲಾ ಹೆಂಗೈತೆ ಮೈಗೆ ಅಂತ ಕೇಳ್ದೇ. ಅದಕ್ಕೆ ಅವ್ನ ಬ್ಯಾಗಿಂದ ಒಂದ್ ಪ್ಯಾಕೆಟ್ಟು ನಂದಿನಿ ಹಾಲು ಇನ್ನೊಂದು ಕೇದಿಗೆ ಹೂವಾ ತೆಗ್ದು, ನೋಡ್ರೀ ಮಿಸ್ಟರ್ ಇವ್ರಲ್ಲಿ ಯಾರಾದ್ರೂ ಈ ಎರಡು ಕಲರ್ರಿಗೆ ಮ್ಯಾಚ್ ಆಗ್ತಿದ್ದಾರಾ ಅಂತ ಕೇಳ್ಬಿಡೋದಾ? ಅಯ್ಯೋ ನಿನ್ನ.... ಲೇ ಯಾವ ಹುಡ್ಗಿ ಈ ಬಣ್ಣ ಇರ್ತಾಳಲಾ ಅಂತ ಕೇಳ್ದೆ. ಏ.... ಬಿಡಿ ಸ್ವಾಮಿ, ನಾನೆಷ್ಟು ಪಿಕ್ಚರ್ ನೋಡಿಲ್ಲ, ಎಂತೆಂಥಾ ಕಥೆ ಕಾದಂಬರಿ ಓದಿಲ್ಲಾ. ಎಲ್ಲಾದ್ರಲ್ಲೂ ಹೀರೋಯಿನ್ನು ಹಾಲ್ಬಿಳುಪು ಇಲ್ಲಾ ಕೇದಿಗೆ ಬಣ್ಣನೇ ಇರೋದು ಅಂತ ಲಾಯರ್ ಪಿ.ಎಸ್.ಡಿ(ಸಿ.ಎಸ್.ಪಿ) ತರಾ ವಾದಕ್ಕೇ ನಿಂತ ಕಣ್ಲಾ. ನಂಗೆ ಇವ್ನಾರೋ ತಿಕ್ಕಲು ಅಂತ ಗೊತ್ತಾಗೋಯ್ತು.

ನೋಡಲಾ, ಅದೆಲ್ಲಾ ವ್ಯಾಕರಣದ ಅಲಂಕಾರ. ಉಪಮಾನ, ಉಪಮೇಯ, ರೂಪಕ. ಹಾಲ್ಬಿಳುಪು ಇಲ್ಲಾ ಕೇದಿಗೆ ಬಣ್ಣ ಅಂದ್ರೆ ಹುಡುಗಿ ಬೆಳ್ಳಗೆ ಚೆನ್ನಾಗಿದ್ದಾಳೆ ಅಂತ ಅಷ್ಟೇ. ಈ ಹಾಲಿನ ತರ ಬಿಳಿ ಇದ್ರೆ ಗೋಡೆಗೆ ಸುಣ್ಣ ಬಳ್ದಂಗಿರಲ್ವೇನ್ಲಾ? ನಿಜ ಜೀವನದಲ್ಲೇನಿದ್ರೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮಾತ್ರ ಇರೋದು ಅಂತ  ನಿಧಾನಕ್ಕೆ ಕೂಡಿಸಿ ಅವ್ನಿಗೆ ಅರ್ಥ ಆಗೋಹಾಗೆ ಹೇಳೋಕೆ ನೋಡ್ದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎಲ್ಲಾ ಚಂದನ ಚಾನೆಲ್ನಲ್ಲಿ ಕಾಣೆಯಾದವರ ವಿವರದ್ದು ಅಂದ  ಆಸಾಮಿದು ಒಂದೇ ಹಠ. ಅದೇ ಕಲರ್ ಬೇಕು ಅಂತ. ನನ್ಗೂ ನೋಡಿ ಸಾಕಾಯ್ತು. ನೋಡಪ್ಪಾ,ನಿಂಗೆ ಹಾಲ್ಬಿಳುಪು ಹುಡುಗಿನೇ ಬೇಕು ಅಂದ್ರೆ ಅಮಾಸೆ ರಾತ್ರಿ ಹನ್ನೆರಡು ಗಂಟೆಗೆ ಮಸಾಣಕ್ಕೆ ಹೋಗು. ಮೋಹಿನಿ ಇರ್ತಾಳೆ. ಅವ್ಳು ಕಲರ್ ಪಕ್ಕಾ ಇದೇ ಬಿಳಿ ಇರುತ್ತೆ. ಇನ್ನು ಈ ಕೇದಿಗೆ ಕಲರ್ ಬೇಕು ಅಂದ್ರೆ ಒಂದಾ ನಿನ್ಗೆ ಜಾಂಡೀಸ್ ಬರ್ಬೇಕು ಇಲ್ಲಾ ಅವ್ಳಿಗೆ ಜಾಂಡೀಸ್ ಇರ್ಬೇಕು. ಇಬ್ಬರಿಗೂ ಜಾಂಡೀಸ್ ಇದ್ರೆ ದೇವ್ರು ಮಾಡಿದ ಜೋಡಿ ಆಯ್ತದೆ. ಇನ್ನು ಹಾಲ್ಬಿಳುಪು, ಕೇದಿಗೆ ಎರಡೂ ಕಲರ್ ಇರೋಳ್ನೇ ಮದ್ವೆ ಆಗ್ಬೇಕು ಅಂದ್ರೆ ನೀನು ಬಾಳೆಹಣ್ಣನ್ನ ಮದ್ವೆ ಆಗ್ಬೇಕು. ಸಿಪ್ಪೆ ಕೇದಿಗೆ, ಹಣ್ಣು ಹಾಲ್ಬಿಳುಪು ಇರ್ತದೆ ಅಂದೆ.

ಸರಿ ಸಿವಾ ಮುಂದಿನ ಗುಣಲಕ್ಷಣ ಏನಪ್ಪಾ ಅಂದೆ. ಅವಳ ಮುಖ ಹುಣ್ಣಿಮೆ ಚಂದ್ರನಂತೆ ಇರ್ಬೇಕು ಅಂದ. ಅಂದ್ರೆ ಅವ್ಳು ತಿಂಗಳಲ್ಲಿ ಒಂದೆ ಸಲ ಕಾಣಿಸ್ಕೋಬೇಕಾ, ಇಲ್ಲಾ ಅವ್ಳ ಮುಖದಲ್ಲಿ ಕಲೆ ಇರ್ಬೇಕಾ, ಇಲ್ಲಾ ಮುಖ ಚಂದ್ರನಷ್ಟು ಗುಂಡಗಿರ್ಬೇಕಾ ಅಂತ ಕೇಳ್ದೆ. ಸಿಕ್ಕಾಕ್ಕೊಂಡ ಕಳ್ಳ. ಅವ್ನಿಗೆ ಡೌಟಾಯ್ತು. ಮೂರರಲ್ಲಿ ಯಾವ್ದು ಅಂತ‌. ಸರಿ ಅದು ಬಿಡಿ ಆಮೇಲೆ ನೋಡುವ ಮುಂದಿನದ್ದು ಕೇಳಿ ಅಂದ. ಅದೇನೇನ್ ಇದೆ ಎಲ್ಲಾ ಒದರಿ ಸಾಯಿ ಅಂದೆ. ಲಿಸ್ಟು ಹೇಳ್ದಾ ನೋಡ್ಲಾ...... ಬಿಲ್ಲಿನಂತೆ ಹುಬ್ಬು, ಕಮಲದ ಎಸಳಿನ ಕಣ್ಣು, ಸಂಪಿಗೆ ಮೂಗು, ದಾಳಿಂಬೆ ಹಲ್ಲು, ಶಂಖದ ಕಿವಿ, ಹವಳದ ತುಟಿ, ಬಾದಾಮಿ ಗಲ್ಲ.... ಅಬ್ಬಾ ಅಬ್ಬಾ... ಅದೇನು ಲಿಸ್ಟಾ... ದಾಳಿಂಬೆ ಹಲ್ಲು ಕೆಂಪು ಕಲರ್ ಇರ್ಬೇಕಾ? ಅಂತ ಕೇಳ್ದೆ. ದಾಳಿಂಬೆನೇ ಹಲ್ಲಾಗಿರ್ಬೇಕು ಅಂದ. ನಿನ್ಗೆ ಹಿಡಿಂಬೆಯೇ ಆಗ್ಬೇಕಪ್ಪಾ, ಮುಗಿತಲ್ಲಪ್ಪ ನಿನ್ನ ಲಿಸ್ಟು ಅಂದೆ. ಇನ್ನೊಂಚೂರು ಉಂಟು ಅಂದ. ಇನ್ನೆಂತ ಸಾವು ಉಳ್ದಿರೋದು ಅಂದೆ. ಮತ್ತೆ ಹುಡುಗಿ ಪುಟ್ಟ್ಗೌರಿ ತರ ಹುಲಿ ಜೊತೆ ಫೈಟ್ ಮಾಡೋ ಧೈರ್ಯಸ್ಥೆ, ಮಂಗಳಗೌರಿ ತರ ದೇವಸ್ಥಾನದ ಕಂಬಕ್ಕೆ ತಲೆ ಚಚ್ಚಿಕೊಂಡು ಗಂಡನ ಪ್ರಾಣ ಉಳಿಸೋ ದೇವತೆ, ಸನ್ನಿಧಿ ತರ ಮನೆಯವ್ರಿಗೆಲ್ಲಾ ಕಾಫಿ,ಟೀ ಸಪ್ಲೈ ಮಾಡಿ, ಮನೆಯವರ ಬಟ್ಟೆನೆಲ್ಲಾ ಒಗ್ದು ಇಸ್ತ್ರೀ ಮಾಡಿ, ಚಂದ್ರಿಕಾನಿಂದ ಮನೆಯವ್ರನೆಲ್ಲಾ ಸೇವ್ ಮಾಡೋ ಸದ್ಗೃಹಸ್ತೆ ಆಗಿರ್ಬೇಕು ಅಂದ‌. ನಂಗೆ ನವರಂಧ್ರಗಳಲ್ಲೂ ಉರಿ ಹತ್ಕೊಂಡು, 'ಲೇ ಮೂದೇವಿ, ನಿಂಗೆ ಹುಡುಗಿ ಹುಡ್ಕೋಕೆ ರಾಮ್ ಜೀ ಮತ್ತೆ ಮೈಸೂರ್ ಮಂಜನೇ ಆಗ್ಬೇಕು. ಹೋಗ್ಲಾ ಕಲರ್ಸ್ ಕನ್ನಡ ಆಫೀಸಿಗೆ' ಅಂತ ಒದ್ದು ಕಳ್ಸಿ ಬರೋವಾಗ ಎನರ್ಜಿ ಪೂರಾ ಖಾಲಿಯಾಗಿ ಇಲ್ಲಿ ಪೌಷ್ಟಿಕ ಆಹಾರ ತಿಂತಾ ಕೂತೀನಿ ನೋಡ್ಲಾ." ಎಂದು ತಮ್ಮ ಸುದೀರ್ಘ ಸಂದರ್ಭ ಸಹಿತ ವಿವರಿಸಿ ಮುಗಿಸಿದರು ಪಿತಾಮಹ.

ಇದನ್ನೆಲ್ಲ ಕೇಳಿ ನಂಗೊಂದು ಡೌಟು ಬಂತು.
"ಪಿತ್ತಾಜೀ.....ನಿಮ್ಮ ಆಫೀಸಿಗೆ ಬಂದು ಇಷ್ಟೆಲ್ಲಾ ಲಿಸ್ಟು ಕೊಟ್ಟವನ ಹೆಸರು ವೈಭವ್ ಅಂತಲಾ...."

ಇದು ಕೇಳಿದ್ದೇ ನಮ್ಮಪ್ಪನಿಗೆ ಕುಡೀತಿದ್ದ ಎನರ್ಜಿ ಡ್ರಿಂಕ್ ನೆತ್ತಿಗೆ ಹತ್ತಿ, "ಲೇ ಹೌದು ಕಣ್ಲಾ.. ನಿಂಗೆಂಗೆ ಗೊತ್ತಾಯ್ತು. ಅದೇನೋ ಡಿಟೆಕ್ಟಿವ್ ಬೇರೆ ಅಂತೆ ಅವ್ನು. ಎಲ್ಲಾ ಕಥೆ, ಕಾದಂಬರಿ, ಸಿನಿಮಾದಲ್ಲೂ ಏಕಕಾಲಕ್ಕೆ ಸುತ್ತುತ್ತಿರೋ ಆ ಹಾಲ್ಬಿಳುಪು, ಕೇದಿಗೆ ಬಣ್ಣ, ಬಿಲ್ಲು ಹುಬ್ಬು, ಸಂಪಿಗೆ ಮೂಗು, ಹವಳ ತುಟಿ, ಕಮಲ ಕಣ್ಣು, ಶಂಖ ಕಿವಿ, ಬಾದಾಮಿ ಗಲ್ಲ, ದಾಳಿಂಬೆ ಹಲ್ಲಿನ ಹುಡುಗಿ ಯಾರೂ ಅಂತ ಕಂಡ್ಹಿಡಿ ಅಂತ ಅದ್ಯಾವನೋ ಗುಜುರಿ ಇನ್ಸ್ಪೆಕ್ಟರ್ ಹೇಳಿದ್ನಂತೆ ಅದಕ್ಕೆ ಬಂದಿದ್ದೀನಿ ಅಂದ" ಎಂದರು ಗುಂಡಪ್ಪ.

"ಅಲ್ಲಿಗೆ ಸರಿಹೋಯ್ತು.... ಅಲ್ಲಾ ಪಿತಾಮಹ, ಆ ತ್ರಿಮೂರ್ತಿಗಳೇ ಅವನ ಕಾಟ ತಾಳೋಕಾಗ್ದೇ ತಮ್ಮ ಅಡ್ರೆಸ್ ಚೇಂಜ್ ಮಾಡಿದ್ದಾರೇ. ನೀವು ಹೋಗಿ ಹೋಗಿ ಅವನತ್ರ ತಗ್ಲಾಕ್ಕೊಂಡ್ರಲ್ಲಾ" ಅಂತ ಬಾಯ್ಮಾತಿಗೆ ಹೇಳಿ ನಮ್ಮ ಜನಕನಂತಹ ಜನಕನ ತಲೆಯನ್ನೇ ಎಗ್ ಬುರ್ಜಿ ಮಾಡಿದ ವೈಭವನಿಗೆ ಮನದಲ್ಲೇ ಶಭಾಷ್ಗಿರಿ ಕೊಡುತ್ತಾ ಮಾತಾನ್ನಪೂರ್ಣೆಯನ್ನು ಹುಡುಕಿಹೊರಟೆ.

ಮಂಗಳವಾರ, ಮೇ 26, 2020

ಇವರನ್ನೇನ್ರೀ ಮಾಡೋಣ.....??

ನನಗೆ ಮಗಳು ಹುಟ್ಟಿದಾಗಲೇ ನಿರ್ಧರಿಸಿಬಿಟ್ಟಿದ್ದೆ. ಅವಳು ನನ್ನ ಅಮ್ಮ, ಆಯಿ, ಮಾ, ಮಾಯಿ, ಅಪ್ಪೆ, ಅಬ್ಬೆ, ಅವ್ವ ಏನಾರಾ ಅನ್ಲೀ ಇಲ್ಲಾ ಹೆಸರು ಹಿಡಿದು "ಲೇ ನೀತಾ ಬಾರೇ ಇಲ್ಲಿ" ಅಂತ ಕರೆದ್ರೂ ತೊಂದ್ರೆ ಇಲ್ಲ ಆದ್ರೆ ಅಪ್ಪಿ ತಪ್ಪಿನೂ ಅವಳ ಬಾಯಲ್ಲಿ "ಈಜಿಪ್ಟಿಯನ್ ಮಮ್ಮಿ" ಆಗ್ಬಾರ್ದು ಅಂತ ಪ್ರತಿಜ್ಞೆ ಮಾಡಿದ್ದೆ.

ಹುಟ್ಟಿದಾಗಿನಿಂದ ಇದೇ ಟ್ರೈನಿಂಗು. ಬಾಣಂತನದಲ್ಲಿ ಯಾವೆಲ್ಲ ಐಟಂಗಳು ನಿಷಿದ್ಧವೋ ಆ ಲಿಸ್ಟಿಗೆ ಮಮ್ಮಿ ಅನ್ನೋದ್ನೂ ಸೇರಿಸಿ ಮೂಟೆ ಕಟ್ಟಿ ಅಟ್ಟಕ್ಕೆ ಎಸೆದಾಯ್ತು. ಇನ್ನು ಮನೆಗೆ ಮಗು ನೋಡೋಕೆ ಬರೋ ನೆಂಟ್ರು "ಎಲ್ಲಿ ಮಮ್ಮಿ ಅನ್ನು" ಅಂದಾಗೆಲ್ಲಾ ಅವ್ರನ್ನ ಬಡ್ದು ಬಾಯಿಗ್ ಹಾಕ್ಕೊಂಬಿಡ್ಲಾ ಅನ್ಸೋದು. ನೋಡೋಷ್ಟು ನೋಡ್ದೇ... ಆಮೇಲೆ ನೈಸಾಗಿ ಅವರಿಗೇ ಹೇಳೋಕೆ ಶುರು ಮಾಡ್ದೆ.. "ನೋಡಿ ಅಮ್ಮಾ ಅಂತ ಹೇಳ್ಕೊಡಿ.." ಅಂತ. ಅವಳು ತೊದಲುತ್ತಾ ನುಡಿ ಕಲಿತು "ಅಮ್ಮಾ" ಅನ್ನೋಕೆ ಶುರು ಮಾಡ್ದಾಗ ಯುದ್ಧ ಗೆದ್ದಷ್ಟು ಖುಷಿ.

ಇಷ್ಟೆಲ್ಲಾ ಸಾಹಸ ಮಾಡಿ ಜತನದಿಂದ ಮಗಳನ್ನು "ಮಮ್ಮಿ"ಯಿಂದ ಕಾಪಾಡಿಕೊಂಡಿದ್ದೆ. "ಮಮ್ಮಿ" ವೈರಸ್ ಅಟ್ಯಾಕ್ ಆಗ್ದೇ ಇನ್ನೇನು ಎರಡು ವರ್ಷ ತುಂಬುತ್ತೆ  ಅಂತ ಖುಷಿಯಲ್ಲಿರೋವಾಗ್ಲೇ ನಿನ್ನೆ ಮಟಮಟ ಮಧ್ಯಾಹ್ನ "ಮsssಮ್ಮೀsss" ಅಂತ ರಾಗವಾಗಿ ಹೇಳ್ಕೊಂಡು ಓಡ್ಬಂದಿದ್ದು ನೋಡಿ ನನಗೆ ಹೇಗಾಗ್ಬೇಡ ನೀವೇ ಹೇಳಿ? 

ನನ್ನ ಪ್ರತಿಜ್ಞೆ ನುಚ್ಚು ನೂರಾಗಿ, ನಂಗೆ ತಾರಾಮಾರ ಸಿಟ್ಟು ಬಂದು ಈ ವೈರಸ್ ಎಲ್ಲಿಂದ ಅಟ್ಯಾಕ್ ಆಯ್ತು ಅಂತ ಕಂಡ್ಹಿಡಿಲೇ ಬೇಕು ಅಂತ ಹೊಸ ಪ್ರತಿಜ್ಞೆ ಮಾಡಿದೆ. ನಮ್ಮ ವೈಭವನಿಗಿಂತ ಫಾಸ್ಟ್ ಎಂಡ್ ಪರ್ಫೆಕ್ಟ್ ಆಗಿ ಪತ್ತೇದಾರಿಕೆ ಮಾಡಿ ಹತ್ತೇ ಹತ್ತು ನಿಮಿಷದಲ್ಲಿ ಕಂಡ್ಹಿಡಿದೂ ಬಿಟ್ಟೆ.

ಆ ಸಿಟ್ಟನ್ನು ಹೊರಗೆ ಹಾಕ್ಲಿಕಂತಲೇ ಪೆನ್ನು ಹಿಡಿದು... ಸಾರಿ ಮೊಬೈಲ್ ಹಿಡಿದು ಸ್ಕ್ರೀನ್ ಒಟ್ಟೆಯಾಗಿ ಮೊಬೈಲ್ ಗುಡ್ಸಿ ಗುಂಡಾಂತ್ರ ಆದ್ರೂ ತೊಂದ್ರೆ ಇಲ್ಲ ಅಂತ ಕೀಪ್ಯಾಡ್ ಕುಟ್ಟಿ ಈ ಲೇಖನ ಬರೀತಿದ್ದೀನಿ ಆಯ್ತಾ.

ಇದಿಷ್ಟು ಮುನ್ನುಡಿ. ಈಗ ವಿಷ್ಯಕ್ಕೆ ಬರ್ತೀನಿ.

ನನ್ನ ಮಗಳಿಗೆ ಈ ಮಮ್ಮಿ ವೈರಸ್ ಹತ್ತಿಸಿದೋಳು ಯಾರು ಗೊತ್ತಾ.... 

ಅವಳೇ... ಅವಳೇ..

"ಸಮಯವು ನಿಮ್ಮತ್ತ ಮಂದಹಾಸ ಬೀರುವಂತಾಗಿದೆ...ನಾನು ನಿಮ್ಮವಳೇ ವಿಜೆ ಅಮೈರಾ... 

ಸರಿ ಹೇಳಿದ್ನಾ ಮಮ್ಮಿ?....

ಮಮ್ಮಿ….???

ಮಮ್ಮಿ….???

ಮಮ್ಮಿ…..!!????"

ಈ ಸಂತೂರ್ ಮಮ್ಮಿನೇ ನನ್ನ ಮಗಳಿಗೆ ಮಮ್ಮಿ ವೈರಸ್ ಹತ್ಸಿದ್ದು ನೋಡಿ….

ಅವಳ ಮುಸುಂಟಿಗೆ ನಾಲ್ಕು ಬಡ್ದು ಹಾಕಿರೋ ಮೇಕಪ್ ಅಷ್ಟೂ ಉದ್ರಿಸಿಬಿಡೋಣ ಅನ್ಸಿತ್ತು. ಆದ್ರೆ 20 ರುಪಾಯಿ ಸೋಪಿಗೋಸ್ಕರ ಸಾವ್ರಾರು ರೂಪಾಯಿಯ ಟಿವಿಯನ್ನು ಯಾಕೆ ಒಡ್ಯೋದು ಅಂತ ಸೈಲೆಂಟಾದೆ...

ಮಾಯಾ ಪೆಟ್ಟಿಗೆಯೆಂಬ ಮಾಯಾಂಗನೆಯ ಕೈಯಲ್ಲಿರುವ ಮಂತ್ರದಂಡವೇ ಈ ಜಾಹೀರಾತು... ಇದು ಮಾಡೋ ಅವಾಂತರ ಒಂದಾ ಎರಡಾ? ಈ ಸೋಪಿನ ವಿಷ್ಯನೇ ತಗೋಳಿ... 

'ಮಗಳಿಗಿಂತಲೂ ಚಿಕ್ಕಪಾಪು ಸಂತೂರ್ ಮಮ್ಮಿ

ಗುಲಾಬಿಗಿಂತಲೂ ಒನಪು ಲಕ್ಸ್ ಮಮ್ಮಿ

ಹಾಲಿಗಿಂತ ಬಿಳುಪು ಡವ್ ಮಮ್ಮಿ

ಅಮೃತಶಿಲೆಗಿಂತ ನುಣುಪು ರೆಕ್ಸೋನಾ ಮಮ್ಮಿ

ಎಲ್ಲರಿಗಿಂತಲೂ ಶಾನೇ ಟಾಪು ಪತಂಜಲಿ ಮಮ್ಮಿ...'

ನಮ್ಮನೆ ಹಳೆಯಮ್ಮ(ನನ್ನಜ್ಜಿ)  90+ ವಯಸ್ಸಿನ ಚಿರಯುವತಿ. ಇವ್ರು ಡೈಲೀ ಲಕ್ಸ್ ಮಾರ್ಜಕದಲ್ಲೇ ಮಜ್ಜನ ಮಾಡೋದು. ಅದು ಬಿಟ್ಟು ಬೇರೆ ಬ್ರಾಂಡ್ ಆಗೋಲ್ಲ ನಮ್ಮಜ್ಜಿಗೆ. ಇಂತಹ ನೀಯತ್ತಿರೋ ನಮ್ಮಜ್ಜಿನ ಲಕ್ಸ್ ಮಾರ್ಜಕಕ್ಕೆ ಬ್ರಾಂಡ್ ಮಾಡೆಲ್ ಮಾಡ್ಬಹುದಾ ಅಂತ….? ವಯಸ್ಸಾಗಿದೇ ಅನ್ನೋದೊಂದು ಬಿಟ್ರೆ ನಮ್ಮಜ್ಜಿನೂ ಕರೀನಾ ಕಪೂರೇ…..

ಇನ್ನು ಈ ಮುಸುಡನ್ನು ಗೋಡೆ ಸುಣ್ಣದಷ್ಟು ಬೆಳ್ಳಗಾಗಿಸುವ ಫೇಸ್ ಕ್ರೀಮುಗಳದ್ದೋ ಇನ್ನೊಂದು ವ್ಯಥೆ.

ಇವರ ಪ್ರೋಡಕ್ಟುಗಳ ಮೇಲೆ ಇವರಿಗೇ ನಂಬಿಕೆ ಇರುವುದಿಲ್ಲ. ಕೇಸರಿ, ಚಂದನ, ಲೋಳೆಸರ,ಪಪ್ಪಾಯಿ, ಸ್ಟ್ರಾಬೆರಿ, ಕಲ್ಲಂಗಡಿ, ನಿಂಬೆ, ಜೇನು, ಮಣ್ಣು ಮಸಿ ಅಂತ ದಿನಕ್ಕೊಂದು ಐಟಂ ಹಾಕಿ ರುಬ್ಬಿ ನಮ್ಮ ಮುಖಾರವಿಂದವನ್ನು ಬ್ಲೀಚಿಂಗ್ ಪೌಡರ್ ಹಾಕಿ ತಿಕ್ಕಿರೋ ಬಚ್ಚಲಿನ ತರ ಪಳ್ಗುಟ್ಟಿಸ್ತೀವಿ ಅಂತಾರೇ.

ಈ anti wrinkle ಕ್ರೀಮ್ ಹೇಗೆ ಕೆಲ್ಸ ಮಾಡುತ್ತೆ ಅನ್ನೋ ಜಿದ್ದಿಗೆ ಬಿದ್ದಿದ್ದ ನನ್ನ ಪ್ರಯೋಗಮುಖಿ ತಮ್ಮನ ಕಣ್ಣಿಗೆ ಬಿದ್ದದ್ದು ನಮ್ಮಜ್ಜಿ.. ಅಜ್ಜಿ ಮುಖದ ರಿಂಕಲ್ ಗಳನ್ನೆಲ್ಲಾ ತೆಗೆದು ಅವರ ಮುಖನಾ ರಿಂಗಾ ರಿಂಗಾ ರೋಸಸ್ ತರ ಮಾಡ್ಬೇಕು ಅಂತ ಒಂದು ತಿಂಗ್ಳು ಕ್ರೀಮ್ ಬಳ್ದಿದ್ದೇ ಬಳ್ದಿದ್ದು...ಬುಲ್ ಡಾಗ್ ತರ ಇದ್ದ ಅಜ್ಜಿ ಮುಖ ಲ್ಯಾಬ್ರಡಾರ್  ತರ ಆಗ್ಲೇ ಇಲ್ಲ ನೋಡಿ....

ಈಗ ಅದೇನೋ ಹೊಸದಾಗಿ HD ಗ್ಲೋ ಕ್ರೀಮ್ ಬೇರೇ ಬಂದಿದ್ಯಲ್ಲಾ... ಅದ್ನ ಹಚ್ಕೊಂಡವರು ಬರೀ ಕಣ್ಣಿಗೆ ಕಾಣ್ತಾರಾ ಇಲ್ಲ HD ಗ್ಲಾಸ್  ಹಾಕ್ಕೊಂಡ್ರೆ ಮಾತ್ರಾ ಕಾಣ್ತಾರಾ ಅನ್ನೋದು ನನ್ನ ಹೈ ಡೆಫಿನಿಷನ್ ಡೌಟ್..

ಇವರೆಲ್ಲರಿಗಿಂತ ಭಯಂಕರ ವಿಚಿತ್ರ ನಮ್ಮ ದಾಳಿಂಬೆ ಹಲ್ ಸೆಟ್ಟುಗಳ ರಕ್ಷಣೆಕಾರರದ್ದು. 

ನಿಮ್ಮ ಟೂತ್ಪೇಸ್ಟಿನಲ್ಲಿ......

ಉಪ್ಪು ಇದೆಯೇ?

ಬೇವು ಇದೆಯೇ?

ಲವಂಗ ಇದೆಯೇ?

ಕರ್ಪೂರ ಇದೆಯೇ?....

ಇನ್ನು ಸ್ವಲ್ಪ ದಿನ ಹೋದ್ರೆ ಈ ಪುಣ್ಯಾತ್ಮರು 'ನಿಮ್ಮ ಟೂತ್ಪೇಸ್ಟಿನಲ್ಲಿ ಹಲ್ಲು ಇದೆಯೇ?' ಅಂತಲೇ ಕೇಳ್ತಾರೆ ನೋಡ್ತಿರಿ. ಈ ದಂತಮಂಜಕದ ವರಸೆನೇ ನಂಗೆ ಬೇಜಾರು.

ನಾವು ಭಾರತೀಯರು ಪುರಾತನ ಕಾಲದಿಂದಲೂ ಮರ್ಯಾದೆಯಿಂದ ಒಲೆ ಕೆಂಡದ ಚೂರಲ್ಲಿ ಜೀಂಕ್ ಜೀಂಕ್ ಅಂತ ಹಲ್ ತಿಕ್ಕಿ ಬಿಸಾಕ್ತಿದ್ವಿ. ಈ ಯುವನ ದೇಶದ ಬಿಳಿತಲೆ ಕೆಂಪು ಮುಸುಡಿನ ಮಹಾನುಭಾವರು ಬಂದು ಈ ತರ ಮಾಡ್ಬಾರ್ದು, ಇದು ಅನ್ ಹೈಜೀನಿಕ್ ಕಣ್ರೋ ಅಂತ ಕರಿ ಮಸಿ ಬಿಸಾಡಿ ಶ್ವೇತ ಬಿಳುಪಿನ ಪೇಸ್ಟ್ ಕೈಗಿಟ್ರು. ಅಲ್ಲಿಂದ ತಗೊಳಪ್ಪ ಶುರುವಾಯ್ತು…. ಬ್ರಶ್ ತಗೊಂಡು ಗಸ ಗಸ ಉಜ್ಜಿದ್ದೇ ಉಜ್ಜಿದ್ದು....

ನಿಮ್ಮ ಬ್ರಶ್ ಹಲ್ಲಿನ ಕೋಣೆಗಳನ್ನು ತಲುಪುತ್ತಿಲ್ಲ, ಅದು ಫ್ಲೆಕ್ಸಿಬಲ್ ಇಲ್ಲ, ಸ್ಮೂತ್ ಇಲ್ಲ, ಕ್ರಿಸ್ಕ್ರಾಸ್ ಇಲ್ಲ ಅಂತ ನೂರಾರು ತರದ ಬ್ರಷ್ಗಳು ಬೇರೆ.

ಬೆಳ್ಳಗಿದ್ದ ಪೇಸ್ಟ್ ಕೆಂಪಾಯ್ತು, ನೀಲಿ ಆಯ್ತು, ಬಿಳಿ ನೀಲಿ ಪಟ್ಟಾಪಟ್ಟಿನೂ ಆಯ್ತು ಅರಿಶಿನ, ಚಂದನದ ಬಣ್ಣ ಆಯ್ತು, ಪೇಸ್ಟೊಳಗೆ ಕೂಲಿಂಗ್ ಕ್ರಿಸ್ಟಲ್ಸ್ ಬಂದು ಬೆಳಿಗ್ಗೆ ಬ್ರಷ್ ಬಾಯಿಗೆ ಹೆಟ್ಟಿದ ಕೂಡ್ಲೇ ಶಿಮ್ಲಾ, ಕಾಶ್ಮೀರಕ್ಕೆ ಹೋಗ್ಬಂದ ಫೀಲ್ ತಗೊಂಡು ಆಯ್ತು, ಮೌತ್ ವಾಶ್ ಬಂತು ಬಾಯೆಲ್ಲಾ ಸು'ನಾಥ' ಬರೋ ತರ ಆಯ್ತು. ಈ ಬದಲಾವಣೆಗಳ ಬಗ್ಗೆ ಬೇಜಾರಿಲ್ಲ ನಂಗೆ..... 

ಆದ್ರೆ… ಆದ್ರೆ....

ಇಷ್ಟೆಲ್ಲಾ ಆದ್ಮೇಲೆ ಈಗ..... ಈಗ..... 

ಈ ಡಬ್ಬಾ ನನ್ಮಕ್ಕಳು ಆಕ್ಟೀವೇಟೆಡ್ ಚಾರ್ಕೋಲ್ ಟೂತ್ಪೇಸ್ಟ್ ಬಳಸಿ ಹಲ್ಲನ್ನು ಹೊಳೆಸಿ ಅಂತಿದ್ದಾರಲ್ಲ..,

ಮುಂಚೆ ನಾವ್ ಹಿಡ್ಕೊಂಡಿದ್ದ ಮಸಿಕೆಂಡ ಏನ್ ಸುಟ್ಟ ಗೇರ್ ಬೀಜದ್ಹಾಗೆ ಕಾಣ್ಸಿತ್ತಾ ನಿಮ್ಗೆ????

ಇದೆಲ್ಲಕ್ಕಿಂತ ಹೈಲೀ ಇರಿಟೇಟಿಂಗ್ ಅಂದ್ರೆ.....

ಈ ಟಾಯ್ಲೆಟ್ ಕ್ಲೀನರುಗಳು...

ಏನಾದ್ರೂ ತಿನ್ನೋಣ ಅಂತ ಕೈಗೆ ತಗೊಂಡ್ರೇ ಸಾಕು…. ಕೈ ಬಾಯಿಯ ಸನಿಹವಾಗೋ ಟೈಮಲ್ಲಿ ಠಣ್ ಅಂತ ಪ್ರತ್ಯಕ್ಷವಾಗ್ತಾರೆ ಈ ಕ್ಲೀನರುಗಳು.

ವಾಹ್.... ಏನ್ ಟೈಮಿಂಗೂ ಗುರೂ...

ಯಾರ್ಯಾರ್ದೋ ಮನೆಯ ಶುಭ್ರವಾದ ಟಾಯ್ಲೆಟ್ಟಿಗೆ  ಹೋಗಿ ಕ್ಲೀನ್ ಮಾಡೋದಲ್ದೇ,

"ನಾವು ನಿಮ್ಮ ಮನೆಗೂ ಬರಬೇಕೇ???? ಹಾಗಿದ್ದರೆ ಈ ಕೂಡಲೇ ಮಿಸ್ ಕಾಲ್ ಕೊಡಿ......" ಅಂತ ಚಮಕ್ ಬೇರೆ.

ಇಷ್ಟೆಲ್ಲಾ ಬಿಲ್ಡಪ್ ಕೊಡ್ತೀರಲ್ಲಾ, ಅಷ್ಟು ಧಮ್ ಇದ್ರೆ, ಕೊಳೆತು ಗಬ್ಬು ನಾರುವ ಪಬ್ಲಿಕ್ ಟಾಯ್ಲೆಟ್ಗಳನ್ನು ಒಂದ್ಸಾರಿ ಕ್ಲೀನ್ ಮಾಡಿ ತೋರ್ಸಿಬಿಡಿ ನೋಡುವಾ..

ಅಂದ್ಹಾಗೆ ಈ ಟಾಯ್ಲೆಟ್ ಕ್ಲೀನರ್ ಹಾಗೇ ಫ್ಲೋರ್ ಕ್ಲೀನರ್ ಕಂಪನಿಯವರಿಗೆ ನನ್ನದೊಂದು ಡೌಟ್.

ಅಲ್ಲಾ ಸ್ವಾಮಿ, ನಿಮ್ಮ ಎಲ್ಲಾ ಪ್ರಾಡಕ್ಟ್ಸ 99.9% ಜೆರ್ಮ್ಸ್ ಕಿಲ್ ಮಾಡಿ, ಒಂದು ಕೀಟಾಣುನ ಮಾತ್ರ ಉಳ್ಸಿರುತ್ತಲ್ಲ ಅದ್ಯಾಕೆ? ಅವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಂತಲಾ?? ಇಲ್ಲಾ ಕೀಟಾಣುಗಳ ಸಂತತಿ ಸಂಪೂರ್ಣ ನಶಿಸದಿರಲಿ ಅಂತಲಾ? ನಂಗ್ಯಾಕೋ ಅನುಮಾನ.... 100% ಕೀಟಾಣುಗಳು ಸತ್ರೆ ನಿಮ್ಮ ಪ್ರಾಡಕ್ಟ್ ಯಾರೂ ಪರ್ಚೇಸ್ ಮಾಡಲ್ಲ ಅಂತ್ಹೇಳಿ ಆ .1% ಕೀಟಾಣು ಉಳ್ಸಿದ್ರೇನೋ ಅಂತ.

ಹೀಗೆ ಹೇಳ್ತಾ ಹೋದ್ರೆ ಇವ್ರ ಪುರಾಣ ಇನ್ನೂ ತುಂಬಾ ಇದೆ. ಅದು ಬಿಟ್ಹಾಕಿ. ಈ ಮಂಡೆಕೆಟ್ ಜಾಹೀರಾತುಗಳು ಸಾಲ್ದೂ ಅಂತ ನಮ್ಮನ್ನ ಮಂಗ್ಯ ಮಾಡೋಕೇ ಇವರತ್ರ ಇರೋ ಇನ್ನೆರಡು ಅಸ್ತ್ರಗಳು..... 

ಒಂದು ಡಿಸ್ಕೌಂಟು..... ಇನ್ನೊಂದು ನೋ ಕೌಂಟು.....

ಅರೇ... ಡಿಸ್ಕೌಂಟೇನೋ ಗೊತ್ತಾಯ್ತು, ಇದೇನು ನೋ ಕೌಂಟು ಅಂದ್ರಾ????

ನೌ ಕೌಂಟ್ ಅಂದ್ರೇ.... ಇದು ಕೊಂಡರೆ ಅದು ಸಂಪೂರ್ಣ ಫ್ರೀ..... ಫ್ರೀ...... ಫ್ರೀ..... ಅಂತಾರಲ್ಲ ಅದು.

ಈ ಡಿಸ್ಕೌಂಟ್ ಅನ್ನೋದು ನಮಗೇ ತಿಳಿಯದೇ ನಮ್ಮನ್ನು ಮುಂಡಾಯ್ಸೋ ಸೂಪರ್ ವಿಧಾನ. ಇದ್ರ ಬೇಸ್ ವೆರಿ ಸಿಂಪಲ್. 1 ರೂಪಾಯಿ ಐಟಂನ 10ರೂಪಾಯಿ ಅನ್ನೋದು. ಆಮೇಲೆ ನೀವು ನಿಮ್ಮ ಚೌಕಾಸಿ ಕೌಶಲ್ಯ ಎಲ್ಲಾ ತೋರ್ಸಿ ಮುಗ್ದ ಮೇಲೆ, ಏನೋ ಪಾಪ ನಿಮ್ಗೆ ಅಂತ ಲಾಸ್ಟ್ 5ರೂಪಾಯಿಗೆ ಕೊಡ್ತೀನಿ. ಬೇಕಾದ್ರೇ ತಗೊಳ್ಳಿ ಅನ್ನೋದು.

ಆಗ ನಾವು 10 ರೂಪಾಯಿ ವಸ್ತು 5ರೂಪಾಯಿಗೆ ಬಂತು ಅಂತ ನಮ್ಮ 4ರೂಪಾಯಿ ಮುಂಡಾಮೋಚ್ತು ಅನ್ನೋ ಐಡಿಯಾನೇ‌ ಇಲ್ದೇ  ಜಂಬದ ಕೋಳಿ ಆಗೋದು.

ಇಷ್ಟೇ ಲಾಜಿಕ್. ಈ ಡಿಸ್ಕೌಂಟಿಂಗಿನ ಇನ್ನೊಂದು ಪ್ರಸಿದ್ದ ಸ್ಟ್ರಾಟೆಜಿ "ಡಿಜಿಟ್ಸ್ ಪ್ಲೇ" ಸಂಖ್ಯೆಗಳ ಆಟ. ಒಂಬತ್ತು ಅನ್ನೋದು ಡಿಸ್ಕೌಂಟರ್ ಗಳ ಹಾಟ್ ಫೇವರಿಟ್ ಅಂಕೆ. ಕೇವಲ 99, ಕೇವಲ 999, ಕೇವಲ 9999......

"ಅಯ್ಯೋ ನೋಡೇ, ಈ ಟಾಪ್ ಜಸ್ಟ್ 999 ಗೊತ್ತಾ?" 

"ಹೌದೇನೇ 999 ಅಷ್ಟೇನಾ? ಬರೀ ತ್ರೀ ಡಿಜಿಟ್ಸ್ ಅಮೌಂಟ್" ಅಂತ ಬೀಗೋ ಮುಂಚೆ ಒಮ್ಮೆ ಯೋಚ್ನೆ ಮಾಡಿ...

999+1 =1000....... ಅಂದ್ರೆ... 3 ಡಿಜಿಟ್ಸ್ + 1= 4 ಡಿಜಿಟ್ಸ್

9999+1=10000.......

ಇಟ್ಸ್ ಸಿಂಪಲ್.....

ಇನ್ನು ಒಂದು ಕೊಂಡರೆ ಒಂದು ಉಚಿತದಷ್ಟು ಮರ್ಲ್ ಸ್ಕೀಮ್ ಇನ್ನೊಂದಿಲ್ಲ ನನಗೆ. ಈಗ 'ಪುಳಿಯೋಗರೆ ಪೌಡರ್ ತಗೊಂಡ್ರೆ ಸಾಂಬಾರ್ ಪುಡಿ ಉಚಿತ, ಟೀ ಪುಡಿಯೊಂದಿಗೆ ಗ್ಲಾಸ್ ಉಚಿತ' ಅಂದ್ರೆ ಓಕೆ. ಏನೋ ಒಂದು ಲಿಂಕ್ ಸಿಗುತ್ತೆ.

ಆದ್ರೆ ಈ ಸೋಪು ತಗೊಂಡ್ರೆ ಚಮಚ ಉಚಿತ,

ಶ್ಯಾಂಪುವಿನೊಂದಿಗೆ ಪೆನ್ನು ಉಚಿತ ಅಂತ ಕೊಡ್ತಾರಲ್ಲ… ಅದೇ ನನ್ನ ತಲೆ ಕೆಡ್ಸೋದು. ಸ್ಪೂನ್ ಫ್ರೀ ಕೊಡೋಕೆ ಅದೇನು ಸೋಪಾ ಇಲ್ಲಾ ಟೊಮೇಟೋ ಸೂಪಾ??

ಶ್ಯಾಂಪೂ ಜೊತೆ ಪೆನ್ನು ಫ್ರೀಯಾಗಿ ಕೊಡೋದು ಮಾರಾಯ್ರೇ. ಮೋಸ್ಟ್ ಲೀ ಶ್ಯಾಂಪೂ ಬಳಸೋಕೆ ಶುರು ಮಾಡಿದ್ಮೇಲೆ ತಲೆಕೂದ್ಲು ಎಷ್ಟು ಸೆಂಟಿಮೀಟರ್ ಉದ್ದ ಆಗಿದೆ ಅಂತ ವಾರವಾರ ಅಳತೆ ತೆಗ್ದು ಬರೆದಿಡಿ ಅಂತಿರ್ಬಹುದೇನೋ.

ಎಷ್ಟೋ ಸಲ ಜಾಹೀರಾತು ನೋಡಿ ನಾವು ಕಳ್ದೇ ಹೋಗಿರ್ತೀವಿ. ಆದರೆ ವಾಸ್ತವವೇ ಬೇರೆ ಇರುತ್ತೆ. ನಾನು ITCಯವರ ಕ್ಲಾಸ್ಮೇಟ್ ನೋಟ್ ಬುಕ್ಕಿನ ಜಾಹೀರಾತು ನೋಡಿ ಬಹಳ ಇಂಪ್ರೆಸ್ ಆಗಿದ್ದೆ. ಆ ಪುಸ್ತಕವೂ ಹಾಗೇ. ಚೆಂದದ ಹೊರ ರಟ್ಟು, ಓಪನ್ ಮಾಡಿದೊಡನೇ ಒಳಬದಿಯಲ್ಲಿ 'ಡು ಯು ನೋ' ಅನ್ನೋ ಮಾಹಿತಿಯುಕ್ತ ವಿಚಾರಗಳು, ಕೊನೆಯ ಪೇಜಿನ ಪದಬಂಧ ಎಲ್ಲಾ ನನ್ನನ್ನು ಮಂತ್ರಮುಗ್ಧಳನ್ನಾಗಿಸಿತ್ತು. ಯಾವಾಗಲೂ ಅದೇ ಪುಸ್ತಕ ಬೇಕಿತ್ತು ನನಗೆ. ಒಮ್ಮೆ ಉಗ್ರಕುತೂಹಲದಿಂದ ITC  ಅಂತ ಗೂಗಲ್ ಮಾಡಿದೆ. ITC ವಿಸ್ತೃತ ರೂಪ ನೋಡಿ ನನ್ನ ಕಣ್ಣನ್ನು ನನಗೇ ನಂಬೋಕಾಗ್ಲಿಲ್ಲ…. ITC ಮುಂಚೆ ಇಂಪೀರಿಯಲ್ ಟೊಬ್ಯಾಕೋ ಕಂಪನಿ ಆಗಿದಿದ್ದು ಈಗ ಇಂಡಿಯನ್ ಟೊಬ್ಯಾಕೋ ಕಂಪನಿ ಆಗಿದೆ ಅಂತಿತ್ತು. ಏಷ್ಯಾದ 81% ಬೀಡಿ, ಸಿಗರೇಟ್ ಮಾರಾಟಗಾರರು ಇವರೇ. ಗೋಲ್ಡ್ ಫ್ಲೇಕ್ಸ್ ಸಿಗರೇಟು ಬ್ರಾಂಡ್ ಇವರದ್ದೇ ಅಂತ ಆಗ ಗೊತ್ತಾಯ್ತು ನನಗೆ. ಆಶೀರ್ವಾದ್, ಸನ್ ಫೀಸ್ಟ್, ಬಿಂಗೋ, ಯಿಪ್ಪೀ, ಫಿಯಾಮಾ, ವಿವೆಲ್, ಸ್ಯಾವ್ಲಾನ್ ಎಲ್ಲಾ ಇವ್ರದ್ದೇ ಅಂತ ಅವತ್ತೇ ಗೊತ್ತಾಗಿದ್ದು.

ವಿಮಲ್ ಅಡ್ವರ್ಟೈಸ್ಮೆಂಟ್ ನೋಡಿದ್ರೆ ಅದು ಪಾನ್ ಮಸಾಲನೋ ಇಲ್ಲಾ ಕೇಸರಿ ಪ್ಯಾಕೇಟ್ಟೋ ಅನ್ನೋ ಅನುಮಾನ ಬರೋದು ಸಹಜವೇ. 'ಬಸುರಿ ಹೆಣ್ಣಿಗೆ ಹಾಲಿಗೆ ಒಂದು ಪ್ಯಾಕ್ ವಿಮಲ್ ಬೆರೆಸಿ ಕೊಡಿ. ಕೇಸರಿಯಂತ ಪಾನ್ ಪರಿಮಳದ ಮಗು ಪಡೆಯಿರಿ' ಅನ್ನೋದೊಂದು ಬಾಕಿ ಇದೆ. ಈ ವಾಷಿಂಗ್ ಪೌಡರ್ ಗಳ ಅವತಾರವೋ ದೇವರಿಗೆ ಪ್ರೀತಿ. ಪೋರಪೋ ಅಂತೆ, ಗುಲೆಗುಲೆ ಅಂತೆ ಎಲ್ಲಾ ನೋಡಿ ನಾವು ಕುಲೆಕುಲೆ(ಪ್ರೇತ) ಆಗ್ದಿದ್ರೆ ಸಾಕು.

ತಮಾಷೆಯನ್ನು ಒತ್ತಟ್ಟಿಗಿಟ್ಟು ನೋಡಿದ್ರೂ ಈ ಜಾಹೀರಾತು ಎಂಬ ಮಾಯಾಜಾಲದ ಮಹಿಮೆಯೇ ಅಪಾರ. ಇದು ಇಲ್ಲದ್ದನ್ನು ಇದೆ ಎಂದು ಭ್ರಾಂತಿಗೊಳಿಸುವ‌ ಇಂದ್ರಜಾಲ. ಈ ಇಂದ್ರಜಾಲ ಬೇಡಬೇಡವೆಂದರೂ ನಮ್ಮನ್ನು ಸೆಳೆದು ನಮ್ಮ ದೈನಂದಿನ ವಸ್ತುಗಳ ಆಯ್ಕೆಯಲ್ಲಿ ತನ್ನಿರುವನ್ನು ಸ್ಪಷ್ಟಪಡಿಸುತ್ತದೆ.

ಬೇಡಬೇಡವೆಂದರೂ ಹುಚ್ಚುಚ್ಚು ಜಾಹೀರಾತುಗಳ ಮೂಲಕ ನಮ್ಮನ್ನು ಹಾಳ್ಮಾಡಿದ್ದು ಸಾಲ್ದು ಅಂತ ನನ್ನ ಪ್ರತಿಜ್ಞೆ ಯಕ್ಕುಟ್ಸಿ ನನ್ನ ಮಗಳ ಬಾಯಲ್ಲಿ ನನ್ನ ಈಜಿಪ್ಟಿಯನ್ ಮಮ್ಮಿ ಮಾಡಿದ ಇವರನ್ನೇನ್ರೀ ಮಾಡೋಣ?????

ಅಗೋ ಮತ್ತೆ ಬಂತು ನನ್ನ ಜಾನ್ಸನ್ ಬೇಬಿ….

'ಮಮ್ಮಿsss'....... ಅಂದ್ಕೊಂಡು.

ಥೋ….. ಮೊದ್ಲು ಇವಳ ಮಮ್ಮಿ ವೈರಸ್ ಗೆ ಮದ್ದು ಮಾಡ್ಬೇಕು. ನಾ ಹೊಂಟೆ.

ಹೋಗೋಕೂ ಮುನ್ನ.....

ನೀವೇ ಹೇಳಿ.....

ಇವರನ್ನೇನ್ರೀ ಮಾಡೋಣ???


ಅರ್ಪಣೆ: ಸಂತೂರ್ ಮಮ್ಮಿಗೆ