ಪುಸ್ತಕಾವಲೋಕನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುಸ್ತಕಾವಲೋಕನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 22, 2022

ಮಳೆಮಲೆಗಳಲ್ಲಿನ ಮದುಮಗಳು

ಮೂರು ಬಾರಿ ಓದಲೆಂದು ಹಿಡಿದು ಇಪ್ಪತ್ತು, ಐವತ್ತು, ಎಪ್ಪತ್ತು ಪುಟಗಳ ನಡುವೆಯೇ ಗಿರಕಿ ಹೊಡೆದು ಏನೆಂದರೂ ಮುಂದೆ ಓದಲಾಗದು ಎಂದು ಕೈಬಿಟ್ಟಿದ್ದ ಹೊತ್ತಿಗೆಯನ್ನು ಅಮೋಘ ನಾಲ್ಕನೇ ಬಾರಿಗೆ ಹಿಡಿಯಲು ಹೊರಟಾಗ ಈ ಬಾರಿ ಪುಟಗಳ ಲೆಕ್ಕಾಚಾರದಲ್ಲಿ ಕನಿಷ್ಟ ಶತಕ ಸಂಭ್ರಮ ಪೂರೈಸಿಯೇನೆಂಬ ನಂಬುಗೆಯೂ ಇರಲಿಲ್ಲ (ಒಮ್ಮೊಮ್ಮೆ ಓದಲೇಬೇಕೆಂದು ಹಠದಲ್ಲಿ ಶೀರ್ಷಾಸನ ಹಾಕಿ ಕೂತರೂ ಕೆಲವು ಹೊತ್ತಿಗೆಗಳ ಹೊತ್ತು ಮುಂದೆ ಸಾಗಲಾಗುವುದಿಲ್ಲ ನನಗೆ). ಆದರೂ ಗೆಳತಿ ಜಯಾ ಹಲವು ಬಾರಿ " ನೀತಾ, ಒಮ್ಮೆ ಮೊದಲ ನೂರು ನೂರಿಪ್ಪತ್ತು ಪುಟ ದಾಟಿ. ಆಮೇಲೆ ನೀವು ಪುಸ್ತಕ ಮುಗಿಸದೇ ಕೆಳಗಿಟ್ಟರೆ ಕೇಳಿ" ಎಂದು ಒತ್ತಾಸೆ ನೀಡಿದ್ದನ್ನು ಸ್ಮರಿಸಿ ಅದೂ ಒಂದು ಕೈ ನೋಡೇ ಬಿಡುವಾ ಎಂದು ಚತುರ್ಥ ಯಾತ್ರೆ ಆರಂಭಿಸಿದ್ದು. ಎಪ್ಪತ್ತು ದಾಟಿ, ಎಂಬತ್ತು ಕಳೆದು, ತೊಂಬತ್ತು ಬಂದು ತೊಂಬತ್ತೊಂಬತ್ತಾಗಿ ನೂರನೇ ಪುಟಕ್ಕೆ ಬರುವಾಗ ಗುತ್ತಿಯ ಹುಲಿಯ, ಹುಲಿಯನ ಗುತ್ತಿಯ ಜೊತೆ ನಾನೇ ಹುಲಿಕಲ್ಲು ನೆತ್ತಿಯ ಮೇಲೇರಿದಷ್ಟು ಸಂಭ್ರಮ..... 
ಆದರೆ ಆ ತರುವಾಯ ಈ ಜಡಿಮಳೆಯ ದಟ್ಟ ಮಲೆಗಳಲ್ಲಿನ ಮದ್ಗೋಳು ಕಟ್ಟಿಕೊಟ್ಟ ರಸಾನುಭವ ಅನಿರ್ವಚನೀಯ. ಮುಕುಂದಯ್ಯ - ಚಿನ್ನಕ್ಕನ ಪ್ರೇಮ, ಐತ - ಪೀಂಚಲುವಿನ ದಾಂಪತ್ಯ, ಗುತ್ತಿ-ತಿಮ್ಮಿ ಹಾಗೂ ಹುಲಿಯನ 'ಓಡಿಸಿಕೊಂಡು' ಹೋಗುವ ಸಾಹಸ, ದೇವಯ್ಯನೆಂಬ ನವನಾಗರೀಕನ ಕಿಲಿಸ್ತಗಿರಿಯ ಪ್ರಹಸನ, ಮನುಷ್ಯನೆಂಬ ಪದಕ್ಕೇ ಅವಮಾನ ತರುವಷ್ಟು ಅಮಾನುಷ ಚೀಂಕ್ರ, ನೆನಪಿನಲ್ಲುಳಿವ ನಾಗಕ್ಕ ಮತ್ತು ಧರ್ಮು, ಮತಪ್ರಚಾರಕ್ಕಾಗಿ ಯಾವ ಹಂತಕ್ಕೂ ತಲುಪಬಲ್ಲ ಉಪದೇಶಿ ಜೀವರತ್ನಯ್ಯ, ಸ್ವಾಮಿ ವಿವೇಕಾನಂದರ ವಾಣಿಯನ್ನು ಪಸರಿಸುವ ಗಡ್ಡದಯ್ಯ, ಹೊನ್ನಳ್ಳಿ ಹೊಡ್ತದ ಸಾಬರ ಗುಂಪು, ದೇಯಿ, ಅಂತಕ್ಕ ಸೆಡ್ತಿ, ಕಾವೇರಿ,ಅಕ್ಕಣಿ, ಪಿಜಿನ......... ಹೀಗೆ ಮುಂಬರಿಯುವ ಅಗಣಿತ ಪಾತ್ರಗಳು ಜೀವ ಮೇಳೈಸಿ ಹರಿದಿರುವುದು ಆ ಮಲೆನಾಡಿನ ಸೊಬಗನ್ನು ಪದಗಳಲ್ಲಿ ಪೋಣಿಸಿ ಹೆಣೆದ ವೈಖರಿಯಲ್ಲಿ. ಅಂದಿನ ಕಾಲದ ಪುರುಷ ಪ್ರಧಾನ ವ್ಯವಸ್ಥೆ, ಮಹಿಳೆಯರ ಬದುಕು ಬವಣೆ, ಸಂಸ್ಕೃತಿ ಆಚರಣೆ ನಂಬಿಕೆಗಳು, ವರ್ಣಾಧಾರಿತ ಜಾತಿ ಪದ್ಧತಿ, ಮತಾಂತರ ಮೊದಲಾದ ಸಂಗತಿಗಳೊಂದಿಗೆ ಸಾಗುವ ಕಾದಂಬರಿಯೊಳಗೆ ಆ ಮಲೆಗಳು, ತರಹೇವಾರಿ ಮರಮಟ್ಟುಗಳು, ಪ್ರಾಣಿ ಪಕ್ಷಿಗಳು, ನಿಲ್ಲದೆ ಸುರಿವ ದನಗೋಳು ಮಳೆಗೆ ಸಾಥು ಕೊಡುವ ಕಪ್ಪೆ, ಜೀರುಂಡೆ, ಬೀರ್ಲಕ್ಕಿಗಳು ರಸಋಷಿಯ ಲೇಖನಿಯಲ್ಲಿ ಹೊಮ್ಮಿದ ಪರಿಗೆ ಅಂದಿನ ಮಲೆನಾಡು ಬದುಕು ಓದುಗನಿಗೆ ದೃಗ್ಗೋಚರವಾಗುಷ್ಟು ಸ್ಪಷ್ಟ. ಮೊದಲ ಕೆಲ ಅಧ್ಯಾಯಗಳು ಕಾರ್ಯಕಾರಣ ಸಂಬಂಧ ಸಿಗದೇ ಎತ್ತೆತ್ತಲೋ ಓಡಿದಂತೆ ಅನಿಸಿದರೂ ನಂತರದಲ್ಲಿ ಓದಿ ಮುಗಿಸದೇ ಕೆಳಗಿಡಲಾರದ ಮದುವಣಗಿತ್ತಿ ಇವಳು........ 

#ರಸಋಷಿಯರಸಕಾವ್ಯ