ಗುರುವಾರ, ಜೂನ್ 4, 2020

ಅನೂಹ್ಯ 4

ನವ್ಯಾ ರೂಮಿಗೆ ಬಂದಾಗ ಕಿಶೋರ್ ಛಾವಣಿ ದಿಟ್ಟಿಸುತ್ತಿದ್ದವನು ಅವಳನ್ನು ನೋಡಿ ನಸುನಗುತ್ತಾ   "ಏನು ಮೇಡಂನೋರು ಬೆಳಿಗ್ಗೆಯಿಂದ ಏನೋ ತುಂಬಾ ಯೋಚನೆ ಮಾಡಿ ಕೊರಗ್ತಿರೋ ಹಾಗಿದೆ. ಅದೇನು ಅಂತ ಗೊತ್ತಾದ್ರೆ ನಾನು ನಿಂಜೊತೆ ಕುತ್ಕೊಂಡು ಬಾಯಿ ಬಡ್ಕೋಬಹುದು" ಅಂದಿದ್ದೇ ತಡ.... ಮನದ ಅಳಲೆಲ್ಲಾ ಒಂದೇ ಸಮನೆ ಉಮ್ಮಳಿಸಿ ಅವನನ್ನಪ್ಪಿ ಅಳತೊಡಗಿದಳು.

"ಯಾಕಮ್ಮ ಬಂಗಾರಿ, ಏನೇನೋ ಯೋಚನೆ ಮಾಡಿ ಮನಸ್ಸಿಗೆ ಯಾಕಿಷ್ಟು ಹಿಂಸೆ ಮಾಡ್ಕೋಳ್ತೀ? ಎಷ್ಟು ಸಾರಿ ಹೇಳಿದ್ದೀನಿ, ಹಳೆದೆಲ್ಲಾ ಮರ್ತು ಬಿಡು ಅಂತ. ನೋಡು ಪುಟ್ಟಾ, ಸುಮ್ಮನೆ ಏನೇನೋ ನೆನಸ್ಕೊಂಡು ಈಗಿನ ನೆಮ್ಮದಿ ಹಾಳ್ಮಾಡ್ಕೋಬೇಡ್ವೋ" ಎಂದ ಸಾಂತ್ವನಿಸುತ್ತಾ.

ಅವಳು ನಿಧಾನವಾಗಿ ಕಣ್ಣೀರೊರೆಸಿಕೊಂಡಳು. ಕಿಟಕಿಯ ಬಳಿ ನಿಂತು ಬೀಸುತ್ತಿದ್ದ ತಂಗಾಳಿಗೆ ಮುಖವೊಡ್ಡಿದಳು. ಹಾಯೆನಿಸಿತು. ಆಗಸದಲ್ಲಿನ ಮೋಡಗಳು ಗಾಳಿ ಬೀಸುವ ದಿಕ್ಕಿನಲ್ಲಿ ರಭಸವಾಗಿ ದಿಗಂತದೆಡೆಗೆ ಸರಿಯುತ್ತಿವೆ. ಮೋಡಗಳೆಲ್ಲಾ  ಚದುರಿದರೆ ನೀಲಾಕಾಶದಲ್ಲಿ ಜೋತ್ಸ್ನೆಯ ಜ್ಯೋತಿರ್ಲಹರಿ. ಅದೇ ಮೋಡ ಮುಸುಕಿದರೇ ಕಾರಿರುಳು. ಅವ್ಯಕ್ತ ಭಾವವೊಂದು ಅವಳ ಮುಖದಲ್ಲಿ ಹಾದುಹೋಯಿತು.

"ಹಳೆಯದನ್ನು ನಾನೆಂದೂ ನೆನಪಿಟ್ಟುಕೊಂಡಿಲ್ಲ ಕಿಶೋರ್. ಅಲ್ಲಿ ಜೀವ ಹಿಂಡುವ ಯಾತನೆಯ ಹೊರತು ನೆನಪಿನಲ್ಲಿಡುವಂಥ ಒಂದು ಅಣುವೂ ಇಲ್ಲ. ನನ್ನ ಕೊಲ್ಲುತ್ತಿರೋದು ನನ್ನ ಅತೀತದ ಮೇಲೆ ವರ್ತಮಾನದಲ್ಲಿ ಹರಡಿರುವ ತೆರೆ. ನಾನೆಷ್ಟು ಪ್ರಯತ್ನಿಸಿದರೂ ನನ್ನ ಇಂದಿನಿಂದ ನಿನ್ನೆಯ ನೆರಳನ್ನು ತೊಡೆಯಲಾಗದೆ ಸೋತಿದ್ದೇನೆ"

"ನವ್ಯಾ, ನಿನ್ನ ಅತೀತದಿಂದ ಬಹುದೂರ ಸಾಗಿದ್ದೀಯ. ಮತ್ತೆ ತಿರುಗಿ ನೋಡಬೇಡ. ಅದರಿಂದ ಸಿಗುವುದು ನೋವು ಮಾತ್ರ"

"ಕಿಶೋರ್, ನೀವು ಈ ಮದುವೆಗೆ ಮೊದಲೇ ಎಲ್ಲವನ್ನೂ ಮನೆಯಲ್ಲಿ ಹೇಳಿಬಿಡ್ಬೇಕಿತ್ತು. ಅವರಿಗೆಲ್ಲಾ ನನ್ನ ಮೇಲೆ ಇರೋ ನಂಬಿಕೆ ನನ್ನ ಮನಸ್ಸನ್ನ ಚುಚ್ಚಿ ಘಾಸಿಗೊಳಿಸುತ್ತೆ. ಎಲ್ಲರಿಗೂ ಮೋಸ ಮಾಡ್ತಿದ್ದೀನಿ ಅನ್ಸುತ್ತೆ"

"ನಾನು ಹೇಳುವ ಪ್ರಯತ್ನ ಮಾಡಿದ್ದೆ ನವ್ಯಾ. ಆದರೆ ಯಾಕೋ ಸಾಧ್ಯವೇ ಆಗ್ಲಿಲ್ಲ. ಹೇಳಿದ್ರೆ ಖಂಡಿತ ಈ ಮದ್ವೆ ಆಗ್ತಿರ್ಲಿಲ್ಲ"

"ಆಗ ಇಷ್ಟೆಲ್ಲಾ ಸಮಸ್ಯೆನೇ ಆಗ್ತಿರ್ಲಿಲ್ಲಾ. ಹೋಗಿ ಹೋಗಿ ನನ್ನಂಥವಳನ್ನು ಮದ್ವೆ ಆಗೋಂಥ ಹುಚ್ಚು ನಿಮಗ್ಯಾಕೆ ಬಂತೋ? "

"ನವ್ಯಾ, ಸಾಕ್ಮಾಡು. ಇನ್ನೊಂದು ಮಾತಾಡ್ಬೇಡ. ಪ್ರೀತಿ ಅನ್ನೋದು ಕುಲ ಗೋತ್ರ ಹಿನ್ನೆಲೆ ತಿಳಿದು ಹುಟ್ಟೋದಲ್ಲ. ಅದು ನದಿಯಂತೆ. ಒಂದುಕಡೆ ತಡೆ ಇದ್ರೆ ಪಥ ಬದಲಿಸಿ ಬೇರೆ ಹಾದಿಯಲ್ಲಿ ಹರಿಯುತ್ತೆ. ಮನುಷ್ಯ ಅದಕ್ಕೆ ಅಣೆಕಟ್ಟು ಕಟ್ಟಿ ಕ್ಷಣಕಾಲ ಹಿಡಿದಿಡಬಹುದೇ ಹೊರತು ಶಾಶ್ವತವಾಗಿ ಅದನ್ನು ಬಂಧಿಸೋಕಾಗೋಲ್ಲ.  ಅದೇ ಪ್ರೀತಿಯ ರೀತಿ. ನಾನು ಯಾವುದೇ ಕಾರಣಕ್ಕೂ ನಿನ್ನ ಕಳ್ಕೊಳೋಕೆ ತಯಾರಿಲ್ಲ. ಸತ್ಯ ಗೊತ್ತಾದ್ರೂ, ಯಾರು ನಿನ್ನ ಜೊತೆ ಇದ್ರೂ ಇಲ್ದಿದ್ರೂ ನಾನು ಮಾತ್ರ ನನ್ನ ಕೊನೆ ಉಸಿರಿರೋ ತನಕ ನಿನ್ನ ಜೊತೆ ಇರ್ತೀನಿ. ಇದು ನನ್ನ ಪ್ರಾಮಿಸ್" ಒಂದೇ ಏಟಿಗೆ ಹೇಳಿ ಸುಮ್ಮನಾದ. ಅವಳೂ ಮೌನವಾಗಿ ಕೂತಳು. ಇಬ್ಬರ ನಡುವೆ ನೀರವತೆ ಬಿದ್ದುಕೊಂಡಿತು.

ಮೌನ ಅಸಹನೀಯವೆನಿಸಿದಾಗ ತಾನೇ ಮೌನ ಮುರಿಯುತ್ತಾ, "ನಿನ್ನ ನೋವು ಏನೂಂತ ನನಗೆ ಅರ್ಥ ಆಗುತ್ತೆ ನವ್ಯಾ. ಆಗಸದಲ್ಲಿ ಮೋಡ ತುಂಬಿದಾಗ ಕತ್ತಲು ಕವಿಯುತ್ತೆ. ಆದ್ರೆ ಆ ಕತ್ತಲೇ ಶಾಶ್ವತ ಅಲ್ಲ. ಒಮ್ಮೆ ಹನಿ ಒಡೆದು ಮಳೆ ಬಿದ್ದ ಮೇಲೆ ಮತ್ತೆ ಬೆಳಕು ಬಂದೇ ಬರುತ್ತೆ. ಕಾಯ್ಬೇಕು ಅಷ್ಟೇ. ನೀನೇನೂ ಯೋಚನೆ ಮಾಡಬೇಡ. ನಾಳೆನೇ ಇಬ್ರೂ ಸಮ್ಮು ಹತ್ರ ಮಾತಾಡಿ ಏನು ಮಾಡಬಹುದೋ ನೋಡೋಣ" ಭರವಸೆ ನೀಡಿದ.

"ಸರಿ ತುಂಬಾ ಹೊತ್ತಾಯ್ತ. ಮಲಗು ಇನ್ನು" ಎಂದು ಅವಳನ್ನು ಮಲಗಿಸಿ, ಹಲವು ಯೋಚನೆಗಳ ಭಂಡಾರವಾಗಿದ್ದ ತಲೆಯನ್ನು ಶಾಂತಗೊಳಿಸಿ ಮಲಗಲು ಪ್ರಯತ್ನಿಸಿದ.

ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗ;

ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ,ತೊಳೆದೀತು ಒಳಗು ಹೊರಗ......

ಸೋದೆ ಮಳೆ ಮನದ ಒಳ ಹೊರಗನ್ನು ತೊಳೆಯುವುದೋ, ಇಲ್ಲಾ ಬಿರುಗಾಳಿಗೆ ಬಾಳೆ ನೌಕೆ‌ ಮುಳುಗುವುದೋ????? ಕಾಲವೇ ಉತ್ತರಿಸಬೇಕು.......

ಮುಂದುವರೆಯುತ್ತದೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ