ಮಂಗಳವಾರ, ಜೂನ್ 23, 2020

ಅನೂಹ್ಯ 15

ತನ್ನ ಕೋಣೆಯಲ್ಲಿ ನೇಮಿಚಂದ್ರ ಅವರ "ಯಾದ್ ವಶೇಮ್" ಹಿಡಿದು ಕುಳಿತಿದ್ದಳು ಸಮನ್ವಿತಾ. ಓದಿದ್ದು ಮೆಡಿಕಲ್ ಆದರೂ ಅವಳಿಗೆ ಇತಿಹಾಸದಲ್ಲಿ ಅದಮ್ಯ ಆಸಕ್ತಿಯಿತ್ತು. ಅಡಾಲ್ಫ್ ಹಿಟ್ಲರ್ ನ ಗತಕಾಲದ ಕ್ರೌರ್ಯ ಹಾಗೂ ಇಂದಿನವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿರುವ ಅದರ ಪ್ರಭಾವ, ನಾಜ಼ಿಗಳ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ತಮ್ಮ ನಾಡನ್ನು ಬಿಟ್ಟು ಸುರಕ್ಷಿತ ಬದುಕನ್ನರಸಿ ತಂದೆಯೊಂದಿಗೆ ಭಾರತಕ್ಕೆ, ಕರ್ನಾಟಕಕ್ಕೆ ಬಂದು ಇಲ್ಲಿಂದ ಪುನಃ ತಾಯ್ನಾಡಿಗೆ ಮರಳಲಾಗದ ಅನಿವಾರ್ಯತೆಗೆ ಸಿಲುಕಿದ ಹೆಣ್ಣೊಬ್ಬಳ‌ ಕಥನ "ಯಾದ್ ವಶೇಮ್". ಸಣ್ಣ ವಯಸ್ಸಿನಲ್ಲೇ ಇಲ್ಲಿ ಬಂದು ನೆಲೆ ನಿಂತು, ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಇಲ್ಲಿನ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಇಲ್ಲಿಯವಳೇ ಆಗಿ ಬದಲಾದರೂ ಸಾಯುವ ಮುನ್ನ ಒಮ್ಮೆಯಾದರೂ ತನ್ನವರನ್ನು, ತನ್ನ ದೇಶವನ್ನು ಮತ್ತೆ ನೋಡಬೇಕೆಂದು ಹಂಬಲಿಸುವಾಕೆ ಬಹಳ ಆಪ್ತಳಾದಳು ಸಮನ್ವಿತಾಳಿಗೆ.

(ನೇಮಿಚಂದ್ರರ "ಯಾದ್ ವಶೇಮ್" ಒಂದು ಅತ್ಯುತ್ತಮ ಕಾದಂಬರಿ. ನೈಜ ಘಟನೆಗಳ ಆಧಾರದಲ್ಲಿರುವ ಕಾದಂಬರಿ ಇತಿಹಾಸ ಪ್ರಿಯರಲ್ಲದವರಿಗೂ ಮಾನವೀಯ ನೆಲೆಗಟ್ಟಿನಲ್ಲಿ ಇಷ್ಟವಾಗುತ್ತದೆ.)

ಬಾಗಿಲು ಬಡಿದ ಸದ್ದಿಗೆ ಪುಸ್ತಕ ಮಡಚಿಟ್ಟು ಕದ ತೆರೆದಳು. ಎದುರಿಗೆ ಚೈತಾಲಿ ಅದೇ ಸುಂದರ ನಗುವಿನೊಂದಿಗೆ ನಿಂತಿದ್ದಳು.

"ಮ್ಯಾಮ್......" ಎಂದು ಅವಳು ಶುರುಮಾಡುವ ಮುಂಚೆಯೇ, 

"ಚೈತಾಲಿ ನೋಡು. ನೀನು ಹೇಳಿದ ಹಾಗೆ ನಾನು ಮನೆಯಲ್ಲೇ ಇದ್ದೀನಿ. ಈಗ ಸಮಾಧಾನ ಆಯ್ತಾ?" ನಗುತ್ತಾ ಕೇಳಿದಳು.

"ಅದು ಹಾಗಲ್ಲ ಮ್ಯಾಮ್. ಒಂದು ವೇಳೆ ನೀವು ಆಸ್ಪತ್ರೆಯತ್ತ ಹೋಗಿದ್ರೆ ಸರ್ ನನ್ಗೆ ಬೈತಿದ್ರು. ಅದಕ್ಕೆ...."

"ಸರಿ ಹೋಗ್ಲಿ ಬಿಡು. ನಿನ್ನೆ ಎಷ್ಟೊತ್ತಾಗಿತ್ತು ಮನೆಗೆ ಹೋದಾಗ. ಏನೂ ತೊಂದ್ರೆ ಆಗ್ಲಿಲ್ಲ ಅಲ್ವಾ?" ವಿಚಾರಿಸಿದಳು. 

"ಅರ್ಧ ಗಂಟೆಯಲ್ಲಿ ಹೋದ್ವಿ ಮ್ಯಾಮ್. ತಮ್ಮ ಬಂದಿದ್ನಲ್ವಾ. ತೊಂದ್ರೆ ಏನಾಗ್ಲಿಲ್ಲ. ಆದ್ರೆ ನಮ್ಮಮ್ಮನ ಕೈಲಿ ಸರೀ ಪೂಜೆಯಾಯ್ತು. 'ಒಬ್ಬಳೇ ಹುಡ್ಗೀ ಮನೆಗೆ ಬರೋಕೆ ಹೊತ್ತು ಗೊತ್ತು ಇಲ್ವಾ? ಸುಮ್ನೆ ಕೆಲ್ಸ ಬಿಟ್ಟು ಮನೆಯಲ್ಲಿರು' ಅಂತೆಲ್ಲ ಉಗ್ದು ಮಂಗಳಾರತಿ ಎತ್ತಿದ್ರು" ಬೇಸರದ ಮುಖದಲ್ಲಿ ಹೇಳಿದಳು.

"ನಿಮ್ಮಮ್ಮ ನೀನು ಮನೆಗೆ ಹೋಗೋವರ್ಗೂ ಕಾಯ್ತಿದ್ರಾ?" ಕೇಳಿದವಳ ಧ್ವನಿಯಲ್ಲಿ ಆರ್ದ್ರತೆಯಿತ್ತು.

"ಅಯ್ಯೋ…. ನೀವೊಳ್ಳೆ ಕೇಳಿದ್ರೀ. ನಾನು ಮನೆಗೆ ಹೋಗಿ, ಊಟಮಾಡಿ ಮಲ್ಗೋವರ್ಗೂ ನಮ್ಮಮ್ಮಂಗೆ ಸಮಾಧಾನ ಆಗೋಲ್ಲ. ನಾನು ಹೋಗೋತಂಕ ಬಾಗಿಲಲ್ಲೇ ಕಾಯ್ತಿರ್ತಾಳೆ. ಸ್ವಲ್ಪವಾದರೂ ಊಟ ಮಾಡ್ದೇ ಬಿಡೋಲ್ಲ. ಅಬ್ಬಾ ಅವಳ ಕಣ್ಣ್ ತಪ್ಪಿಸೋಕಾಗುತ್ತಾ?" ಕೈ ಮುಗಿದಳು ಚೈತಾಲೀ.

ಅವಳ ಮಾತುಗಳು ಸಮನ್ವಿತಾಳ ಅಂತರಾಳವನ್ನು ಕಲಕಿ ರಾಡಿಮಾಡಿತು. ತನ್ನ ತಾಯಿಗೆ ಮನೆಯಲ್ಲಿ ಇದ್ದೀನಾ ಇಲ್ವೋ ಅನ್ನೋದಿರಲಿ, ತಾನು ಬದ್ಕಿದ್ದೀನಾ ಸತ್ತಿದ್ದೀನಾ ಅಂತ ಕೇಳೋ ಪುರುಸೊತ್ತಿಲ್ಲ..... ಆ ದಿ ತನ್ನ ಬದುಕಿನಲ್ಲೆಂದೂ ಬರದು. ಅಂತ ಅದೃಷ್ಟ ನನ್ನ ಹಣೆಯಲ್ಲಿ ಬರೆದಿಲ್ಲ ಎಂದು ಬೇಯುವ ಮನವನ್ನು ಸಾಂತ್ವನಿಸಿದಳು.

"ಮ್ಯಾಮ್, ಮಾತಾಡ್ತಾ ನಾನು ಬಂದ ವಿಷಯನೇ ಮರ್ತು ಬಿಟ್ಟೆ. ನೀವು ನಾಲ್ಕೂವರೆ ಹೊತ್ತಿಗೆ ರೆಡಿಯಾಗಬೇಕಂತೆ" 

"ನೀನು ಮ್ಯಾಮ್ ಅಂತಿಯೋ ಮ್ಯಾವ್ ಅಂತಿಯೋ ನಿಂಗೇ ತಿಳೀಬೇಕು ಚೈತಾಲಿ. ಒಮ್ಮೊಮ್ಮೆ ನೀನು ಬೆಕ್ಕನ್ನು ಕರೀತಿದಿಯೇನೋ ಅನ್ಸುತ್ತೆ. ಸರಿ ನಾನು ಹೊರಟಿರ್ತೀನಿ ಆಯ್ತಾ? ಈಗ ಸಮಾಧಾನನಾ?" ಕೇಳಿದಾಗ ಖುಷಿಯಿಂದ ತಲೆಯಾಡಿಸಿ ಸರಿದು ಹೋದಳು ಚೈತಾಲಿ.

ಅವಳನ್ನು ಕಳಿಸಿ ಕೋಣೆಯ ಕದವಿಕ್ಕಿ ಮತ್ತೆ ಪುಸ್ತಕದೊಳಗೆ ಮುಳುಗಿದಳು.

           ****************************

ಉನ್ ಸೇ ನಜ಼ರೆ ಕ್ಯಾ ಮಿಲೀ 

ರೋಶನ್ ಫಿ಼ಜಾ಼ಯೇಂ ಹೋ ಗಯೀ

ಆಜ್ ಜಾನಾ ಪ್ಯಾರ್ ಕಿ 

ಜಾದೂಗರೀ ಕ್ಯಾ ಚೀಜ಼್ ಹೈ


ಹೋಶ್ ವಾಲೋಂ ಕೋ ಖಬರ್ ಕ್ಯಾ 

ಬೇಖುದಿ ಕ್ಯಾ ಚೀಜ಼್ ಹೈ

ಇಶ್ಕ್ ಕೀಜೆ ಫಿರ್ ಸಮಜಿಯೆ 

ಜಿ಼ಂದಗಿ ಕ್ಯಾ ಚೀಜ಼್ ಹೈ

ಜಗ್ ಜೀತ್ ಸಿಂಗ್ ಅವರ ಕಂಠಸಿರಿ ಆ ಕೋಣೆಯ ತುಂಬಾ ಹರಡಿತ್ತು. ಅದರೊಂದಿಗೆ ದನಿಗೂಡಿಸುತ್ತಿದ್ದವನ ಕೈಗಳು ಕ್ಯಾನ್ವಾಸಿನ ತುಂಬಾ ಹರಿದಾಡುತ್ತಿದ್ದವು.ಬೆಳಗ್ಗಿನಿಂದ ಅದರೊಳಗೆ ಮುಳುಗಿಹೋಗಿದ್ದವನಿಗೆ ಹಸಿವಿನ ಅರಿವಾಗಿರಲಿಲ್ಲ .  ಅದು ಅವನ ಸ್ವಭಾವ. ಕುಂಚ ಕೈಯಲ್ಲಿ ಬಂದಿತೆಂದರೆ ಊಟ ನಿದಿರೆಗಳೆಲ್ಲವನ್ನು ಮರೆಯಬಲ್ಲ. ಬಣ್ಣಗಳ ಸಾಮೀಪ್ಯ ಸಿಕ್ಕ ದಿನ ಅವನಿಗೆ ಬೇಕಾಗುವುದು ಗಜ಼ಲ್ ಗಳ ಆಲಾಪ ಮಾತ್ರ. ಅವೆರಡು ಅವನಿಗೆ ಅತೀ ಪ್ರಿಯ. ತನ್ನ ಬಿಡುವಿರದ ಕೆಲಸಗಳ ನಡುವೆಯೂ ಕುಂಚ ಹಿಡಿಯಲು ಹೇಗಾದರೂ ಸಮಯ ಹೊಂದಿಸಿಕೊಳ್ಳುತ್ತಾನವನು.

ಅವನು ಅಭಿರಾಮ್ ಶರ್ಮಾ. ಸಚ್ಚಿದಾನಂದ ಶರ್ಮಾ ಹಾಗೂ ಮೃದುಲಾ ಶರ್ಮಾ ದಂಪತಿಗಳ ಜೇಷ್ಠ ಪುತ್ರ, ಆಕೃತಿ ಶರ್ಮಾಳ ಪ್ರೀತಿಯ ಅಣ್ಣ, "ಶರ್ಮಾ ಎಂಪೈರ್" ನ ಮಾಲೀಕ. ಶರ್ಮಾ ಎಂಪೈರ್ ಎಂದರೆ ಉದ್ಯಮ ವಲಯದಲ್ಲಿಯ ಪ್ರತಿಷ್ಠಿತ ಹೆಸರು. ಟೆಕ್ಸ್ಟೈಲ್, ಸಿಮೆಂಟ್, ಹಾಗೂ ಪರ್ಫ್ಯೂಮ್ ಈ ಮೂರು ಉದ್ಯಮಗಳಲ್ಲಿ ಶರ್ಮಾ ಎಂಪೈರ್ ಹೊಂದಿರುವ ಹಿಡಿತ ಅಪಾರ.

ಸಚ್ಚಿದಾನಂದ ಶರ್ಮಾ ಅವರಿಗೆ "ಶರ್ಮಾ ಟೆಕ್ಸ್ಟೈಲ್" ತಂದೆಯಿಂದ ಬಳುವಳಿಯಾಗಿ ಬಂದಿದ್ದು. ಅವರು ಅದನ್ನು ಬೆಳೆಸುವುದರೊಂದಿಗೆ, ಹೊಸ ಉದ್ಯಮಗಳನ್ನು ಸ್ಥಾಪಿಸಿ ತಮ್ಮ ಔದ್ಯೋಗಿಕ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದರು. ಅಭಿರಾಮ್ ಅವರೊಂದಿಗೆ ಕೈ ಜೋಡಿಸಿದ ಮೇಲೆ ಆ ವಿಸ್ತಾರ ಹಾಗೂ ಉದ್ಯಮದ ಮೇಲಿನ ಹಿಡಿತ ಇನ್ನಷ್ಟು ಬಲವಾಗಿತ್ತು. 

ಇಡೀ ಶರ್ಮಾ ಎಂಪೈರ್ ನ ಕಾರ್ಯನಿರ್ವಹಣೆ ಅವನ ಕೈಗೊಪ್ಪಿಸಿದ್ದ ಸಚ್ಚಿದಾನಂದರು ತಾವು ಕೇವಲ ಸಲಹೆ, ಸೂಚನೆ ನೀಡುವ ಕಾರ್ಯವನ್ನು ಮಾತ್ರ ಉಳಿಸಿಕೊಂಡಿದ್ದರು. ತಮ್ಮ ಉಳಿದ ಅಮೂಲ್ಯ ಸಮಯವನ್ನು ಮಡದಿ ಮೃದುಲಾ ದೇವಿಯರ ತಲೆ ತಿನ್ನಲು ಸಮರ್ಥವಾಗಿ ಬಳಸಿಕೊಳ್ಳುವ ನಿರ್ಧಾರ ಮಾಡಿಬಿಟ್ಟಿದ್ದರೆನ್ನಿ.

ಕುಂಚ, ಮೂರ್ತಿ ಶಿಲ್ಪ, ಗಜ಼ಲ್, ಹಾಗೂ ಸ್ನೇಹಿತರ ಸಂಗದಲ್ಲಿ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದ ಅಭಿರಾಮ್ ಗೆ ತಂದೆಯ ನಿರ್ಧಾರದಿಂದ ಕೈ ಕಟ್ಟಿದಂತಾದರೂ ಅದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೆಂದು ಅವನಿಗೂ ಅನಿಸಿದ್ದರಿಂದ ಮರುನುಡಿಯದೇ ಒಪ್ಪಿಕೊಂಡಿದ್ದ.

ಆದರೂ ಅವನ ಆಸೆ, ಆಸಕ್ತಿಗಳ ಮೇಲೆ ತಾಯ್ತಂದೆಯರಿಗೆ ಕಾಳಜಿಯಿತ್ತು. 

'ಹಣ ಬದುಕಿಗೆ ಅಗತ್ಯ ಆದರೆ ಹಣವೇ ಬದುಕಿನ ಅನಿವಾರ್ಯತೆಯಲ್ಲ…' ಇದು ಸಚ್ಚಿದಾನಂದ ಅವರ ತಂದೆ ಅವರಿಗೆ ಕಲಿಸಿದ್ದು. ಅದೇ ಗುಣವನ್ನು ಮಕ್ಕಳಲ್ಲೂ ಬೆಳೆಸಿದ್ದರು. ಹಾಗಾಗಿಯೇ ಅವನು ತನ್ನ ಹವ್ಯಾಸಗಳನ್ನು ಉಳಿಸಿಕೊಂಡಿದ್ದ.

ಕುಂಚ ಕೆಳಗಿಳಿಸಿ ಕ್ಯಾನ್ವಾಸ್ ನೋಡಿದ. ಪ್ರಕೃತಿಯ ರಮಣೀಯ ಹಿನ್ನೆಲೆಯಲ್ಲಿ ಸೂರ್ಯೋದಯದ ಕಲಾಕೃತಿ.... ನೋಡುತ್ತಾ ನಿಂತವನ ಧ್ಯಾನಕ್ಕೆ ತಡೆಯೊಡ್ಡಿದ್ದು 

"ಹಲೋ ಮಿಸ್ಟರ್ ಪೇಂಟರ್, ಬೆಳಗ್ಗಿನ ತಿಂಡಿ ಶಿವನ ಪಾದ ಸೇರ್ತು, ಊಟನಾದ್ರೂ ಮಾಡ್ತೀಯಾ ಇಲ್ಲಾ ಅದೂ ಗೋವಿಂದನಾ?" ಎಂಬ ಆಕೃತಿಯ ದನಿ.

"ನಿನ್ನ ಸೆನ್ಸ್ ಆಫ್ ಹ್ಯೂಮರ್ ಅದ್ಬುತವಾಗಿದೆ. ಪ್ರದರ್ಶನ ಮಾಡೋದೇನೂ ಬೇಕಾಗಿಲ್ಲ. ನೋಡು ಹೇಗಿದೆ?" ಕ್ಯಾನ್ವಾಸ್ ತೋರಿಸಿ ಕೇಳಿದ.

ಅದನ್ನು ನೋಡಿದವಳ ಮುಖ ಅರಳಿತು. "ಸೂಪರ್. ತುಂಬಾ ಚೆನ್ನಾಗಿದೆ ಕಣೋ. ಪ್ಲೀಸ್ ಅಣ್ಣಾ ಇದ್ನ ನಂಗೆ ಕೊಡೋ. ಫ್ರೇಮ್ ಹಾಕಿ ರೂಮಲ್ಲಿ ಇಟ್ಕೋತೀನಿ" ಗೋಗರೆದಳು.

"ಅದೇನೂ ಬೇಕಾಗಿಲ್ಲ. ನಾನು ಕೊಡೋಲ್ಲ. ಮಂಗನ ಕೈಲಿ ಮಾಣಿಕ್ಯ ಕೊಡೋಕಾಗುತ್ತಾ?" 

"ಏನೋ ನನ್ನೇ ಮಂಗ ಅಂತೀಯಾ? ನಾನು ಮಂಗ ಆದ್ರೆ ನೀನು ಮಂಗನ ಅಣ್ಣ ದೊಡ್ಡ ಮಂಗ" ಮುಖ ಉಮ್ಮಿಸಿ ಹೇಳಿದಳು.

"ನೋಡು ನೋಡು.... ಈಗಂತೂ ಥೇಟ್ ಕೆಂಪು ಮೂತಿ ಚಿಂಪಾಂಜಿನೇ. ಏನು ವ್ಯತ್ಯಾಸ ಇಲ್ಲ." ಅಣಕಿಸಿದ.

ಇವರ ಜಗಳ‌ ತಾರಕಕ್ಕೇರುವ ಮುನ್ನವೇ, "ಮೊದ್ಲು ಊಟಕ್ಕೆ ಬನ್ನಿ ಇಬ್ರೂ. ನಿಮ್ಮ ಕೋಳಿ ಜಗ್ಳ ಊಟ ಮಾಡ್ತಾ ಮುಂದುವರೆಯಲೀ" ಕರೆದರು ಮೃದುಲಾ.

ಇಬ್ಬರೂ ಕೆಳಗಿಳಿದು ಬಂದು ಡೈನಿಂಗ್ ಟೇಬಲ್ ಮೇಲೆ ಆಸೀನರಾಗುವ ಹೊತ್ತಿಗೆ ಸಚ್ಚಿದಾನಂದರೂ ಬಂದರು. ಮೃದುಲಾ ಮೂವರಿಗೂ ಊಟ ಬಡಿಸಿ ತಾವೂ ಊಟಕ್ಕೆ ಕುಳಿತರು. ಎಷ್ಟೇ ಕೆಲಸದವರಿದ್ದರೂ ಅಡುಗೆ ಕೆಲಸ, ಬಡಿಸುವುದೆಲ್ಲ ಮೃದುಲಾ ಅವರೇ. ಅಡುಗೆ ಮಾಡುವುದು, ಎಲ್ಲರ ಬೇಕು ಬೇಡಗಳನ್ನು ವಿಚಾರಿಸುತ್ತಾ ಬಡಿಸುವುದು ಅವರಿಗೆ ಇಷ್ಟವಾದ ಕೆಲಸ. ಅದನ್ನೆಂದೂ ಕೆಲಸದವರ ಕೈಗೊಪ್ಪಿಸರು.

"ಸಂಜೆ ಸತ್ಯಂ ರಾವ್ ಅವರ ಪಾರ್ಟಿ ಇನ್ವಿಟೇಶನ್ ಇದೆ. ಎಲ್ಲಾ ರೆಡಿಯಿರಿ" ನೆನಪಿಸಿದರು ಸಚ್ಚಿದಾನಂದ್.

"ಡ್ಯಾಡ್…. ಈ ಪಾರ್ಟಿಗೆ ಹೋಗ್ಲೇಬೇಕಾ? ಹೋಗದಿದ್ರೇನು? ಯಾಕೋ ಗೊತ್ತಿಲ್ಲ….  ಸತ್ಯಂ ರಾವ್ ಹೊರಗೆ ಕಾಣೋವಷ್ಟು ಒಳ್ಳೆ ವ್ಯಕ್ತಿ ಅಲ್ಲ ಅನ್ಸುತ್ತೆ ನಂಗೆ" ಅಭಿರಾಮ್ ಮಾತಿಗೆ ಅವರು ನಸುನಕ್ಕರು.

"ನೀನು ಅಂದ್ಕೊಂಡಿರೋದು ಸರಿಯಾಗಿದೆ. ರಾವ್ ತುಂಬಾ ಅಪಾಯಕಾರಿ ವ್ಯಕ್ತಿ. ಅದಕ್ಕಾಗೆ ನಾವು ಹೋಗ್ಲೇಬೇಕು. 

"ಅವರು ಇನ್ವೈಟ್ ಮಾಡಿದಾಗ್ಲೇ ಅನ್ಸಿತ್ತು ಇದು ನಮ್ಗೋಸ್ಕರವೇ ಅರೇಂಜ್ ಮಾಡಿರೋ ಪಾರ್ಟಿ ಅಂತ. ಈ ಪಾರ್ಟಿ ಹಿಂದೆ ಏನೋ ಉದ್ದೇಶ ಇದೆ ಅಪ್ಪಾ. ಅದಕ್ಕೇ ಕೇಳಿದ್ದು ಹೋಗ್ಲೇಬೇಕಾ ಅಂತ."

"ಹೋಗಿಲ್ಲ ಅಂದ್ರೆ ಅವನನ್ನು ಎದುರು ಹಾಕ್ಕೊಂಡಹಾಗೇ. ಅದು ಅಷ್ಟು ಒಳ್ಳೆಯದಲ್ಲ. ಸೋ ಬೆಟರ್ ಹೋಗಿ ಬರೋಣ" 

ಅವನಿಗ್ಯಾಕೋ ಹೋಗುವ ಮನವಿರಲಿಲ್ಲ. ಆದರೂ ತಂದೆಯ ಮಾತಿಗೆ ಒಪ್ಪಲೇ ಬೇಕಾಯಿತು. ಸರಿ ಹೋಗಿಬಂದರಾಯಿತೆಂದು ಸುಮ್ಮನಾದ.

         *******************************

ರಾವ್ ದಂಪತಿಗಳು ತಮ್ಮ ಕೋಣೆಯಲ್ಲಿ ಗಹನವಾದ ಸಮಾಲೋಚನೆಯಲ್ಲಿ ಮುಳುಗಿದ್ದರು.

"ಅಂತೂ ಸಮನ್ವಿತಾ ಮನೇಲೇ ಇರೋಕೆ ಒಪ್ಪಿದ್ಲಲ್ಲ. ಇನ್ನೇನು ಗಲಾಟೆ ಮಾಡ್ತಾಳೋ ಅಂತ ತಲೆಬಿಸಿಯಾಗಿತ್ತು ನನ್ಗೆ" ಹೇಳುತ್ತಿದ್ದರು ಸತ್ಯಂ ರಾವ್.

"ನಾನೂ ಹಾಗೇ ಅಂದ್ಕೊಂಡಿದ್ದೆ. ಏನೋ ಜಾಸ್ತಿ ತಕರಾರು ಮಾಡದೇ ಒಪ್ಪಿಕೊಂಡ್ಲಲ್ಲ" ದೊಡ್ಡ ಸಮಸ್ಯೆಯಿಂದ ಪಾರಾದಂತೆ ಹರ್ಷಿಸಿದ ಮಾಲಿನಿ "ಶರ್ಮಾ ಫ್ಯಾಮಿಲಿ ಪಾರ್ಟಿ ಅಟೆಂಡ್ ಮಾಡ್ತಾರೆ ಅನ್ನಿಸುತ್ತಾ ನಿಮ್ಗೆ?" ತನ್ನ ಅನುಮಾನವನ್ನು ವ್ಯಕ್ತಪಡಿಸಿದರು.

"ಬಂದೇ ಬರ್ತಾರೆ. ಅವರು ತುಂಬಾ ಪ್ರಭಾವಿ ವ್ಯಕ್ತಿಗಳಾದ್ರು ನಮ್ಮ ವಿರೋಧ ಕಟ್ಟಿಕೊಳ್ಳೋದು ಒಳ್ಳೆಯದಲ್ಲ ಅಂತ ಆ ಸಚ್ಚಿದಾನಂದ ಶರ್ಮನಿಗೆ ಚೆನ್ನಾಗಿ ಗೊತ್ತು." 

"ಆದ್ರೂ ನಂಗೆ ಅವರೆಲ್ಲರಿಗಿಂತ ನಿಮ್ಮ ಮಗಳ ಮೇಲೆಯೇ ಭಯ ಜಾಸ್ತಿಯಿದೆ. ನಮ್ಮ ಪ್ಲಾನ್ ಬಗ್ಗೆ ಸಣ್ಣ ಕ್ಲೂ ಸಿಕ್ರೂ ಸಾಕು, ಅವ್ಳಂತೂ ಸುಮ್ನಿರೋಲ್ಲ. ಬೇರೆ ಯಾರನ್ನಾದ್ರೂ ಒಪ್ಪಿಸಬಹುದು. ಆದ್ರೆ ಇವ್ಳು...... ಅಬ್ಬಾ .....'ಆಗೋಲ್ಲ' ಅಂದ್ರೆ ಮುಗೀತು. ಸ್ಟುಪಿಡ್ ಗರ್ಲ್. ನಮ್ಮ ಪ್ರೆಸ್ಟೀಜ್, ಸ್ಟೇಟಸ್ ಯಾವುದರ ಬಗ್ಗೆಯೂ ಕೇರಿಲ್ಲ. ಅದ್ಯಾವ್ದೋ ಧರ್ಮಾಸ್ಪತ್ರೆ, ಆಶ್ರಮ ಅಂತ ಆ ಡರ್ಟಿ ಲೋ ಕ್ಲಾಸ್ ಪೀಪಲ್ ಜೊತೆ ಸುತ್ತುತ್ತಾ ಇರ್ತಾಳೆ. ಯೂಸ್ ಲೆಸ್ ಗರ್ಲ್" ಮಗಳ ಮುಂದೆ ಹೇಳಲಾಗದ ಅಂತರಾಳದ ಭಾವನೆಗಳು ಸಮಾಜ ಸೇವೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದ ಶ್ರೀಮತಿ ಮಾಲಿನಿಯವರ ಬಾಯಲ್ಲಿ ಮಂತ್ರಪುಷ್ಪಗಳಾಗಿ ಉದುರಿದವು. ಪುಣ್ಯ ಕೇಳಿಸಿಕೊಳ್ಳಲು ಅವಳಲ್ಲಿ ಇರಲಿಲ್ಲ. ಇವರಿಗೆ ಪ್ರಶಸ್ತಿ ಕೊಟ್ಟ ಸಮಾಜದ ಜನರು ಅಲ್ಲಿದ್ದಿದ್ದರೆ ಹಳೆಯ ಕೆರದಲ್ಲಿ ತಮಗೆ ತಾವೇ ಹೊಡೆದುಕೊಳ್ಳುತ್ತಿದ್ದರೇನೋ.....

"ಅದೇನೇ ಇರಲಿ ಯಾವುದೇ ಕಾರಣಕ್ಕೂ ಸಮನ್ವಿತಾಗೆ ಯಾವ ವಿಷಯನೂ ಗೊತ್ತಾಗಬಾರದು. ಅದಕ್ಕೆಲ್ಲ ವ್ಯವಸ್ಥೆ ಮಾಡ್ತೀನಿ. ನೀನು ಅವಳತ್ರ ಮಾತಾಡೋವಾಗ ಹುಷಾರಾಗಿರು" ಎಂದರು ರಾವ್.

"ಅಯ್ಯೋ, ನಾನಂತೂ ಅವಳ್ಹತ್ರ ಮಾತಾಡೋಕೆ ಹೋಗಲ್ಲಪ್ಪ" ಸತ್ಯ ಮಾಲಿನಿಯವರ ಬಾಯಿಂದಲೇ ಹೊರಬಿತ್ತು.

ಅಂತೂ ಗಂಡ ಹೆಂಡತಿ ಬಹಳ ಹೊತ್ತು ತಮ್ಮ ಯೋಜನೆಯ ಬಗ್ಗೆ, ಅದನ್ನು ಸುಸೂತ್ರವಾಗಿ ಜಾರಿಗೊಳಿಸುವ ಬಗ್ಗೆ ಚರ್ಚಿಸಿದರು.

      ********ಮುಂದುವರೆಯುತ್ತದೆ********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ