ಪತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 24, 2020

ಹೀಗೊಂದು ಪತ್ರ.....

ಪ್ರಿಯ ಮಾನವನಿಗೆ.........

ಮನುಕುಲವನ್ನು ಸೃಷ್ಟಿಸಿ, ಜಗತ್ತಿನ ಅತ್ಯಂತ ಬುದ್ಧಿಶಾಲಿ ಪ್ರಾಣಿ ಎಂಬ ವಿಶೇಷ ಸ್ಥಾನಮಾನದೊಂದಿಗೆ ಭೂಲೋಕಕ್ಕೆ ನಿನ್ನನ್ನು ನಿವಾಸಿಯಾಗಿಸಿದ ಕ್ಷಣ ಮುಂದೊಮ್ಮೆ ಇದೇ ಬುದ್ಧಿವಂತ ಜೀವಿಗೆ ಬುದ್ಧಿ ಹೇಳಲು ಇಂತಹದೊಂದು ವಿಚಿತ್ರ ಪತ್ರ ಬರೆಯಬೇಕಾದ ಸನ್ನಿವೇಶ ಉದ್ಭವವಾಗಬಹುದೆಂದು ಸ್ವತಃ ಸೃಷ್ಟಿಕರ್ತನಾದ ನಾನೇ ಎಣಿಸಿರಲಿಲ್ಲ. ಆ ಮಟ್ಟಿಗೆ ನನ್ನನ್ನೂ ಮೀರಿಸಿದ ನೀನು 'ಬುದ್ಧಿಶಾಲಿ' ಜೀವಿಯೇ ಬಿಡು.

ನಾನು, ಭೂ ದೇವಿಯ ಸಂಪದ್ಭರಿತ, ಸಮೃದ್ಧ ಒಡಲನ್ನೇ ನಿನಗೆ ಉಡುಗೊರೆಯಾಗಿ ನೀಡಿದ್ದು ಅವಳ ಸಹಕಾರದಿಂದ ನೀನು ಬದುಕನ್ನು ಕಟ್ಟಿಕೋ ಎಂದು. ಆದರೆ ನೀನು ಮಾಡಿದ್ದೇನು? ಅವಳ ಮೇಲೆ ಒಡೆತನ ಸಾಧಿಸಿ ಅವಳನ್ನೇ ಹರಿದು ಭಾಗವಾಗಿಸಿ ಬೇಲಿಗಳನ್ನು ನಿರ್ಮಿಸಿಕೊಂಡಿರುವೆ. ಅವಳ ಒಡಲನ್ನೇ ಬಗೆದು, ಸಾರವ ಮೊಗೆದು, ಆಪೋಶನ ತೆಗೆದುಕೊಂಡಿರುವೆ. ಪ್ರಕೃತಿ ಜವನಿಕೆಯ ಹಚ್ಚಹಸಿರ ಪತ್ತಲವನ್ನೇ ಸೆಳೆದು ಆಕೆಯನ್ನು ಬೆತ್ತಲಾಗಿಸುವ ದುಸ್ಸಾಹಸ ಮಾಡಿದ ನಿನ್ನದು ಅತೀ ಬುದ್ಧಿವಂತಿಕೆಯೋ ಇಲ್ಲಾ ಧೂರ್ತತನದ ಪರಮಾವಧಿಯೋ....?

ನಾನು ಸೃಷ್ಟಿಸಿದ ಅಖಂಡ ಭೂಮಂಡಲದ ನೀಲಿನಕ್ಷೆಯನ್ನು ನಾನೇ ಗುರುತಿಸಲಾರದಂತೆ ಬದಲಾಯಿಸಿ ಖಂಡ, ದೇಶ, ರಾಜ್ಯಗಳೆಂದು ವಿಭಜಿಸಿರುವೆ. ಅದರ ಮೇಲೆ ಜಾತಿ, ಮತ, ವರ್ಣ, ಭಾಷೆ ಎಂಬ ಹತ್ತು ಹಲವು ಪರಿಧಿಗಳನ್ನು ಆದೇಶಿಸಿಕೊಂಡು ಬೇಧವನ್ನು ಆವಾಹಿಸಿಕೊಂಡು ನಿತ್ಯ ಸಂಘರ್ಷದಲ್ಲಿ ಮುಳುಗಿರುವೆ. ಮನುಜತ್ವದ ಮೂಲಗುಣವಾದ ಮಾನವೀಯತೆಯನ್ನೇ ಮರೆತು ಸಂಪತ್ತನ್ನು ಕ್ರೋಢೀಕರಿಸುವುದರಲ್ಲೇ ತಲ್ಲೀನನಾಗಿರುವೆ. ಹಣದ ಮುಂದೆ ಮೌಲ್ಯಗಳೇ ಮರೆಯಾಗುವಷ್ಟು ಗಾಢವಾಗಿ ಧನಕನಕಗಳ ಗುಲಾಮನಾಗಿರುವೆ.

ಹೋಗಲೀ........ ಆ ಸಂಪತ್ತನ್ನಾದರೂ ಸಮವಾಗಿ ಹಂಚಿಕೊಂಡಿರುವೆಯಾ...? ಅದೂ ಇಲ್ಲ. ಕೆಲವೇ ಕೆಲವು ಕೈಗಳಲ್ಲಿ ಹಣ, ಅಧಿಕಾರ ಎಲ್ಲವನ್ನೂ ಕೇಂದ್ರಿಕೃತಗೊಂಡಿದೆ. ನಿನ್ನ ಬಳಿ ಇರುವ ಪೂಂಜಿಯನ್ನು ಪರರೊಂದಿಗೆ ಹಂಚಿಕೊಳ್ಳುವ ಸಣ್ಣ ಉದಾರತೆಯೂ ನಿನಗಿಲ್ಲ. ಸ್ವಾರ್ಥದ ಕಡಲಲ್ಲಿ ತೇಲುತ್ತಾ ಅಹಂಕಾರ ಮೆರೆವ ನಿನ್ನ ಇಂತಹ ಸಣ್ಣತನ ಕಂಡಾಗಲೆಲ್ಲಾ 'ಯಾಕಾದರೂ ಈ ಮನುಜನೆಂಬ ಪ್ರಾಣಿಯನ್ನು ಸೃಷ್ಟಿಸಿದೆನೋ' ಎಂಬ ಯೋಚನೆಯಲ್ಲಿ ಬೀಳುತ್ತೇನೆ.

ಹೋಗಲಿ ಬಿಡು. ನಾನು ಹೇಳಿದೊಡನೆ ತಪ್ಪನ್ನು ತಿದ್ದಿಕೊಂಡು ಬದಲಾಗುವ ಹಂತವನ್ನು ದಾಟಿ ಹೋಗಿದ್ದೀಯಾ ನೀನು. ಇನ್ನು ಹೇಳಿ ಪ್ರಯೋಜನವೇನು?
ನಿನ್ನಿಷ್ಟದಂತೆ ಮಾಡಿಕೋ..... ಆದರೆ ನಿನ್ನ ಸೃಷ್ಟಿಕರ್ತನಾದ ತಪ್ಪಿಗೆ, ನಿನ್ನ ಮುಗಿಯದ ಗೋಳುಗಳ ಪಟ್ಟಿಗೆ ಕಿವಿಯಾಗಬೇಕಾದ ಅನಿವಾರ್ಯ ಬಾಧ್ಯತೆ ನನಗಿರುವುದರಿಂದ ನಿನಗೆ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಬೇಕಿದೆ.  ಅದಕ್ಕಾಗಿಯೇ ಈ ಪತ್ರ. ಗಮನವಿಟ್ಟು ಓದಿಕೋ.....

ಮಂದಿರ, ಇಗರ್ಜಿ, ಮಸೀದಿ ಇತ್ಯಾದಿಗಳಲ್ಲಿ ನಾನು ನೆಲೆಸಿರುವೆನೆಂದೂ, ತೀರ್ಥಯಾತ್ರೆ, ಹಜ್ ಯಾತ್ರೆ ಮತ್ತಿದ್ಯಾದಿಗಳ ಮೂಲಕ ಪುಣ್ಯ ಸಂಪಾದಿಸಿ ಸ್ವರ್ಗ ಪ್ರಾಪ್ತಿಸಿಕೊಳ್ಳಬಹುದೆಂದು ನಿನಗೇಕೆ ಅನಿಸಿತೋ ನನಗಂತೂ ತಿಳಿದಿಲ್ಲ. ಇಂತಹದೊಂದು ವ್ಯವಸ್ಥೆಯನ್ನು ನೀನು ಸೃಷ್ಟಿಸಿಕೊಂಡಿರುವೆಯಷ್ಟೇ ಹೊರತು ನನಗೂ ಇದಕ್ಕೂ ಸಂಬಂಧವಿಲ್ಲ. ನೀನು ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿ, ತೀರ್ಥಯಾತ್ರೆಗಳನ್ನು ಮಾಡಿ ಬೇಡಿಕೊಂಡಿರುವುದೆಲ್ಲಾ ನನಗೆ ಸ್ವೀಕೃತಿ ಎಂಬ ಭ್ರಮೆಯಲ್ಲಿ ನೀನಿದ್ದರೆ ಅದನ್ನು ಈ ಕ್ಷಣವೇ ಮರೆತುಬಿಡು.

ನನ್ನ ಶಿಲೆಯಾಗಿಸಿ ಪಂಚಾಮೃತ, ರಾಶಿ ಫಲ, ಚರುಗಳ ಸಮಾರಾಧನೆ ಮಾಡುವ ನೀನು ದಾರಿಯಲ್ಲಿ ಎದುರಾಗುವ ನಿರ್ಗತಿಕನಿಗೆ ಒಂದು ದಮ್ಮಡಿ ಕಾಸು ಕೊಡಲು ಮಾಡುವ ಯೋಚನೆಯೆಷ್ಟು? ಪಂಚಭಕ್ಷ್ಯ ಪರಮಾನ್ನ ತಯಾರಿಸಿ ನನಗೆ ನೈವೇದ್ಯ ನೀಡುವ ನೀನು ನಿನ್ನದೇ ಅಕ್ಕಪಕ್ಕದಲ್ಲಿರುವ ಒಂದು ಹೊತ್ತಿನ ಕೂಳಿಗೂ ತತ್ವಾರ ಪಡುತ್ತಿರುವ ದೀನರಿಗೆ ಒಂದು ಹಿಡಿ ಆಹಾರ ನೀಡುವ ಮನಸ್ಸು ಮಾಡುವೆಯಾ?

ಇಷ್ಟಕ್ಕೂ ಈ ಧನಕನಕ, ಫಲ, ಪಂಚಭಕ್ಷ್ಯ ಪರಮಾನ್ನಗಳೆಲ್ಲವೂ ನಾನೇ ನಿನಗಿತ್ತ ಭಿಕ್ಷೆ. ನಿನ್ನ ಕೊನೆಗಾಣದ ಬೇಡಿಕೆಗಳಿಗೆ ಕಿವಿಯಾಗುವೆನೇ ಹೊರತು ನಾನು ನಿನ್ನಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ನಿನ್ನ ಉಸಿರಿನ ಸಮೇತ ನಿನ್ನ ಬಳಿಯಿರುವುದೆಲ್ಲವೂ ನನ್ನದೇ ಆಗಿರುವಾಗ, ನನಗೇ ಧನ‌ ಕನಕಗಳ ಕಾಣಿಕೆಯ ಆಮಿಷ ತೋರಿ ನಿನ್ನ ಇಷ್ಟಾರ್ಥಗಳ ಬೇಡುವ ನಿನ್ನದು ಮೂರ್ಖತನವೋ ಇಲ್ಲಾ ಉದ್ಧಟತನವೋ?

ನಿನಗೆ ನಿಜವಾಗಿಯೂ ನನ್ನನ್ನು ತಲುಪುವಂತಹ ಸೇವೆ ಮಾಡಬೇಕೆಂಬ ಮನಸ್ಸಿದ್ದರೆ ನಿನ್ನ ನಡುವೆ ಇರುವ ದೀನದಲಿತರಿಗೆ, ಅಗತ್ಯವುಳ್ಳ ಮನುಜರಿಗೆ ಹೆಗಲಾಗು. ನನಗೆ ನೀಡುವ ಧನಕನಕಗಳನ್ನು ಬಡಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೋ ಇಲ್ಲವೇ ನಿರಾಶ್ರಿತರ ತಲೆ ಮೇಲೆ ಸೂರು ನಿರ್ಮಿಸಲೋ ಬಳಸು. ಅವರ ಸಂತಸದಲ್ಲಿ ನಾನಿರುತ್ತೇನೆ. ನನ್ನ ಹೆಸರಿನ ನೈವೇದ್ಯವನ್ನು ಹೊತ್ತಿನ ಕೂಳಿಗೆ ಪರದಾಡುವ ದೀನರಿಗೆ ಬಡಿಸು. ಅವರ ನೀಗಿದ ಹಸಿವಿನಲ್ಲಿ ನನ್ನ ಉದರ ತುಂಬುತ್ತದೆ. ದೀಪ, ಧೂಪ, ಮೊಂಬತ್ತಿಗಳ ಬೆಳಗಿ ಮಕ್ಕಳ ಭಾಗ್ಯ ಕರುಣಿಸೆಂದು ಬೇಡುವ ಬದಲು ಅನಾಥ ಹಸುಳೆಯ ದತ್ತು ಪಡೆದು ಅದರ ಬಾಳನ್ನು ಬೆಳಗು. ಆ ಮಗುವಿನ ಹಸನಾದ ಬದುಕಿನಲ್ಲಿ ನಾನು ನೆಲೆಸಿರುತ್ತೇನೆ. ದರ್ಗಾದಲ್ಲಿ ಚಾದರ ಹೊದಿಸಿ, ತಾಯತ ಕಟ್ಟಿ ಮನ್ನತ್ ಕೇಳಿಕೊಳ್ಳುವ ಬದಲು ಪರರ ನೋವಿಗೆ ಸ್ಪಂದಿಸು. ನೀ ಅವರಿಗೆ ನೀಡುವ ಸಾಂತ್ವನದಲ್ಲಿ ನಾನು ಹರಸುತ್ತೇನೆ.....

ಇನ್ನಾದರೂ ಕಟ್ಟಡದ ನಾಲ್ಕು ಗೋಡೆಗಳಲ್ಲಿ, ಶಿಲೆಗಳಲ್ಲಿ, ಅರ್ಥವಿಲ್ಲದ ಆಚರಣೆಗಳಲ್ಲಿ ನನ್ನನ್ನು ಅರಸುವುದನ್ನು ಬಿಟ್ಟು ನಿನ್ನ ಹೃದಯದ ಅಂತಃಕರಣದಲ್ಲಿ, ಮನುಷ್ಯತ್ವದಲ್ಲಿ ಅಡಗಿರುವ ನನ್ನನ್ನು ಹುಡುಕಿ ಅರಿತುಕೋ. ನಾನು ನೀಡಿದ ಸಂಪತ್ತನ್ನು ನನಗೇ ಕಾಣಿಕೆಯಾಗಿ ನೀಡುವ ಬದಲು ಇಲ್ಲದವರೊಂದಿಗೆ ಹಂಚಿಕೊಂಡು, ಕೂಡಿ ಬಾಳುವುದನ್ನು ಕಲಿತುಕೋ.....

ಹೇಳಬೇಕಾದುದ್ದನ್ನು ಹೇಳಿರುವೆ. ಅರಿತುಕೊಳ್ಳುವುದು ಬಿಡುವುದು ನಿನ್ನಿಷ್ಟ. ಅರಿತು ತಿದ್ದಿಕೊಂಡರೆ ಸಂತೋಷ. ಇಲ್ಲವಾದರೆ ನಿನ್ನ ಹಣೆಬರಹಕ್ಕೆ ನನ್ನನ್ನು ದೂಷಿಸಲು ಬರಬೇಡ......

ಅಷ್ಟೇ.....

ಇಂತಿ ನಿನ್ನ ಕಲ್ಪನೆಗಿಂತ ಭಿನ್ನ ಯೋಚನೆಯ ಭಗವಂತ......


      ****************


ಮೆ ತೋ ನಹೀ ಹೂ ಇನ್ಸಾನೋಂ ಮೇ
ಬಿಕ್ತಾ ಹೂ ಮೆ ತೋ ಇನ್ ದುಕಾನೋಂ ಮೇ
ದುನಿಯಾ ಬನಾಯಿ ಮೈನೆ ಹಾಥೊಂಸೇ
ಮಿಟ್ಟಿ ಸೇ ನಹೀ ಜಸ್ಬಾತೊಂ ಸೇ
ಫಿರ್ ರಹಾ ಹೂಂ ಢೂಂಡತಾ.....
ಮೇರೆ ನಿಶಾನ್ ಹೇ ಕಹಾಂ.....???

'ಓ ಮೈ ಗಾಡ್' ಹಿಂದಿ ಚಿತ್ರದ ಈ ಸಾಲುಗಳು ಕೇಳಿದಾಗಲೆಲ್ಲ ಅರಿಯದ ಭಾವವೊಂದು ನನ್ನ ಆವರಿಸುತ್ತದೆ. ಅರ್ಥಹೀನ ಆಚರಣೆಗಳನ್ನು ಕಂಡಾಗಲೆಲ್ಲಾ ಮತ್ತೆ ಮತ್ತೆ ಇದೇ ಸಾಲುಗಳು ಮನದೊಳಗೆ ಸುಳಿಯುತ್ತವೆ. 'ಕೇವಲ ಜೀವವಿಲ್ಲದ ಮೂರ್ತಿಯಾಗಿ ಅಂಗಡಿಗಳಲ್ಲಿ ಮಾರಲ್ಪಡುತ್ತಿರುವೆನೇ ಹೊರತು, ಮನುಜರಲ್ಲಿ ನನ್ನ ಅಸ್ತಿತ್ವದ ಕುರುಹೂ ಇಲ್ಲ . ಈ ಜಗತ್ತನ್ನು ಮಣ್ಣಿನಿಂದಲ್ಲ ಭಾವನೆಗಳಿಂದ ಸೃಷ್ಟಿಸಿರುವೆ. ಅಂತಹ ಜಗತ್ತಿನಲ್ಲಿ ನನ್ನ ಕುರುಹನ್ನು(ಮಾನವೀಯ ಮೌಲ್ಯದ ಭಾವಗಳನ್ನು) ಹುಡುಕಿ ಅಲೆಯುವಂತಾಗಿದೆ' ಎಂಬರ್ಥದ ಸಾಲುಗಳು ನಿಜಕ್ಕೂ ಭಗವಂತನ ಸ್ವಗತದ ಭಾವಗಳಿರಬಹುದೇ....?