ಶನಿವಾರ, ಮೇ 30, 2020

ಅನೂಹ್ಯ 2

ಸತ್ಯನಾರಾಯಣರದ್ದು ಮೇಲು ಮಧ್ಯಮ ವರ್ಗದ ಕುಟುಂಬ. ಅವರು ಸಾರಿಗೆ ಇಲಾಖೆಯಲ್ಲಿದ್ದು ನಿವೃತ್ತರಾದರು. ಉದ್ಯೋಗದಲ್ಲಿದ್ದಾಗಲೇ ಸ್ವಂತ ಮನೆ ಕಟ್ಟಿಸಿದ್ದರು. ಇನ್ನು ಮಂಗಳಾ ಅಲ್ಪತೃಪ್ತೆ. ದುಂದುವೆಚ್ಚದಿಂದ ಮಾರುದೂರ. ಹಾಗಾಗಿ ಇಬ್ಬರದ್ದೂ ಅನ್ಯೋನ್ಯ ದಾಂಪತ್ಯ ಎನ್ನಲಡ್ಡಿಯಿಲ್ಲ.

             

ಇವರಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡವನು ಕಿಶೋರ್. ಓದಿನಲ್ಲಿ ಜಾಣ. ಮೃದುಮನಸು. ಮೊದಲಿಂದಲೂ ಸಮಾಜ ಸೇವೆಯಲ್ಲಿ ಆಸಕ್ತಿ. ಯಾರೇ ಕಷ್ಟದಲ್ಲಿದ್ದರೂ ಕೈಲಾದಷ್ಟು ಸಹಾಯ ಮಾಡುತ್ತಾನೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ಜೊತೆಗೆ " ಆಶ್ರಯ" ಎಂಬ NGO ದ ಸಕ್ರಿಯ ಕಾರ್ಯಕರ್ತ.
 

ಇನ್ನು ಚಿಕ್ಕವನು ಕಾರ್ತಿಕ್. ಬಿ.ಕಾಂ ಓದುತ್ತಿದ್ದಾನೆ. ಕಿಶೋರ್ ಎಷ್ಟು ಮೃದುವೋ ಇವನು ಅಷ್ಟೇ ಜೋರಿನವ. ಗೆಳೆಯರ ‌ಬಳಗ ಹೆಚ್ಚು. ಅವರೊಂದಿಗೆ ಬೈಕಿನಲ್ಲಿ ಊರು ಸುತ್ತೋದು, ಕ್ರಿಕೆಟ್ ಆಡೋದು, ಟಿವಿಯಲ್ಲಿ ಮ್ಯಾಚ್ ನೋಡೋದು ಅಷ್ಟೇ ಇವನ ಕೆಲಸ ಪುಸ್ತಕ ಮುಟ್ಟೋಲ್ಲ ಅನ್ನೋದು ಮಂಗಳಾ ಅವರ ಫಿರ್ಯಾದು. ಆದರೆ ಅವನೇನು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 

 

ಕಿಶೋರನಿಗೆ ಕೆಲಸ ಸಿಕ್ಕಿದ ನಂತರ ವಿವಾಹದ ಪ್ರಸ್ತಾಪಗಳು ಬರತೊಡಗಿತು. ಸತ್ಯನಾರಾಯಣರಿಗೂ ಮಗನಿಗೆ ಮದುವೆ ಮಾಡಲು ಇದೇ ಸಕಾಲ ಎನಿಸಿತು. ಕೆಲವು ಕಡೆ ಹೆಣ್ಣು ನೋಡುವ ಶಾಸ್ತ್ರವನ್ನು ಮಾಡಿಯಾಗಿತ್ತು. ಆದರೆ ಅವನು ಯಾವ ಸಂಬಂಧಕ್ಕೂ ಸುಮುಖನಾಗದ್ದು ಸಮಸ್ಯೆಯಾಯಿತು. ಇದು ಇನ್ನೂ ಹೀಗೆ ಮುಂದುವರೆದರೆ ಕಷ್ಟವೆಂದು ಅರಿತ ಮಂಗಳಾ 'ಕಿಶೋರನೊಂದಿಗೆ ನೇರವಾಗಿ ಮಾತನಾಡಿ' ಎಂಬ ಸಲಹೆ ಕೊಟ್ಟರು. ಸತ್ಯನಾರಾಯಣರಿಗೂ ಅದೇ ಸರಿಯೆನಿಸಿತು. 

ಆ ರಾತ್ರಿ ಊಟವಾದ ಬಳಿಕ "ಕಿಶೋರ ನಿನ್ಹತ್ರ ಸ್ವಲ್ಪ ಮಾತಾಡ್ಬೇಕು ಬಾ" ವರಾಂಡದತ್ತ ನಡೆದವರನ್ನು ಮೌನವಾಗಿ ಹಿಂಂಬಾಲಸಿದ್ದ. ಮಂಗಳಾ ಕೂಡ ಅಲ್ಲೇ ಒಂದೆಡೆ ಕೂತರು.  

"ಏನಪ್ಪಾ ವಿಷಯ? ಏನೋ ಯೋಚಿಸುತ್ತ ಇರೋ ಹಾಗಿದೆ" 

"ನಿನ್ನ ಬಗ್ಗೇನೇ ಕಣೋ. ಈಗ ನಿನಗೆ ಮದುವೆ ಮಾಡಲು ಸರಿಯಾದ ಸಮಯ. ನಿನಗೆ ಮದುವೆಯಾದ್ರೆ ನಮ್ಮ ಜವಾಬ್ದಾರಿ ಕಡಿಮೆಯಾಗುತ್ತೆ. ನಮ್ಗೂ ವಯಸ್ಸಾಯ್ತ. ಕಾರ್ತಿಕ್ ಅಂತೂ ಹೇಳಿದ ಮಾತು ಕೇಳೋಲ್ಲ. ಸೊಸೆ ಬಂದ್ರೆ ಈ ಮನೆ ಜವಾಬ್ದಾರಿ ಅವಳಿಗೆ ವಹಿಸಿ ನಾನು, ನಿನ್ನಮ್ಮ ತೀರ್ಥಯಾತ್ರೆ ಹೋಗೋಣ ಅಂತ" ಮಡದಿಯ ಮುಖ ನೋಡಿ ನಕ್ಕರು. 

ತಂದೆಯ ಮಾತು ಕೇಳಿ ಮೌನವಾಗಿ ಆಕಾಶ ನೋಡುತ್ತಾ ನಿಂತ ಕಿಶೋರ್. ಉತ್ತರ ಬರದಾಗ ಮತ್ತೆ ಅವರೇ ಮಾತು ಮುಂದುವರಿಸಿ "ಒಂದೆರೆಡು ಸಂಬಂಧಗಳು ನಮ್ಮ ಮನಸ್ಸಿಗೆ ಬಂದಿದ್ವು. ಆದ್ರೆ ನಿನಗೆ ಹಿಡಿಸಲಿಲ್ಲ. ಜೀವನ ಪೂರ್ತಿ ಜೊತೆಗೆ ಇರ್ಬೇಕಾದವರು ನೀವೇ....., ಹಾಗಾಗಿ ನಿನ್ಗೆ ‌ಎಂಥ ಹುಡುಗಿ ಬೇಕೋ ಹೇಳು. ಅಂತಹವಳನ್ನೇ ಹುಡುಕೋಣ. ಆದ್ರೆ ಈ ವರ್ಷ ಮದುವೆ ಆಗ್ಲೇ ಬೇಕು" ಅಂದವರ ಮಾತಿನಲ್ಲಿ ಒತ್ತಾಯವಿತ್ತು.

ಅರೆ ಘಳಿಗೆ ಮೌನವಾಗಿದ್ದವನು ಇಂದು ಎಲ್ಲಾ ಇತ್ಯರ್ಥವಾಗಿ ಬಿಡಲಿ ಎಂದು ನಿಶ್ಚಯಿಸಿ ತಂದೆಯೆಡೆಗೆ ತಿರುಗಿದವನು "ಅಪ್ಪಾ ನಾನೊಂದು ಹುಡ್ಗಿನ ಇಷ್ಟ ಪಟ್ಟೀದ್ದೀನಿ. ಅವಳನ್ನೇ ಮದುವೆ ಆಗ್ಬೇಕು ಅಂತ ತೀರ್ಮಾನಿಸಿದ್ದೀನಿ" ಎಂದ ಅವರ ಮುಖದ ಭಾವನೆಗಳನ್ನು ಅಳೆಯುತ್ತಾ.
             

ಅಷ್ಟು ಹೊತ್ತು ಸುಮ್ಮನೆ ಕೂತಿದ್ದ ಮಂಗಳಾ, ಈ ಮಾತು ಕೇಳಿದ್ದೇ "ಏನೋ ಇದು ಕಿಶೋರ, ನೀನು ಈ ರೀತಿ ಮಾಡ್ತೀಯಾ ಅಂತ ನಾನು ಅಂದುಕೊಂಡಿರಲಿಲ್ಲ" ಎಂದರು ಕಣ್ಣಲ್ಲಿ ನೀರು ತುಂಬಿಕೊಂಡು.

ಸತ್ಯನಾರಾಯಣರಿಗೆ ಇಂಥದ್ದೊಂದು ಅನುಮಾನ ಇದ್ದರೂ ಮಗನ ಬಾಯಿಂದಲೇ ಬರಲಿ ಎಂದು ಸುಮ್ಮನಿದ್ದರು. ವಿಶಾಲ ಮನೋಭಾವದ ಅವರಿಗೆ ಇದರಲ್ಲಿ ತಪ್ಪೇನೂ ಕಾಣಿಸಲಿಲ್ಲ. ಎಲ್ಲಕ್ಕಿಂತ ಅವರಿಗೆ ಮಗನ ಮೇಲೆ ಅದಮ್ಯ ನಂಬಿಕೆ. 

"ಸರಿ. ಹುಡುಗಿ ಯಾರು? ನಾಳೆನೇ ಅವಳ ಮನೆಗೆ ಹೋಗಿ ಅವಳ ತಂದೆ-ತಾಯಿ ಹತ್ರ ಮಾತಾಡೋಣ. ಅವಳ ಮನೆಲೀ ನಿನ್ನ ಬಗ್ಗೆ ಗೊತ್ತಿದ್ಯಾ?" ಮಗನನ್ನು ಪ್ರಶ್ನಿಸಿದರು. 

"ಏನ್ರೀ ಇದು? ಅವನೇನೊ ಹೇಳ್ತಾನೆ ಅಂದ್ರೆ ಬೈದು ಬುದ್ಧಿ ಹೇಳೋದು ಬಿಟ್ಟು ನೀವೂ ಅವನ್ಹಂಗೆ ಕುಣೀತೀರಲ್ಲ. ಅವಳು ಯಾವ ಜನಾನೋ, ಯಾವ ಕುಲಾನೋ. ಸಂಬಂಧಿಕರ ಮುಂದೆ ನಮ್ಮ ಮಾನ ಹೋಗುತ್ತೆ" ಉರಿದು ಬಿದ್ದರು ಮಂಗಳಾ. 

"ನೀನು ಸುಮ್ಮನೆ ಇದ್ದು ಬಿಡು ಮಂಗಳಾ. ಮದ್ವೆ ಮಾಡ್ಕೊಂಡು ಜೀವನ ನಡೆಸಬೇಕಾಗಿರೋನು ಅವ್ನು. ಆದರ್ಶ ದಾಂಪತ್ಯದ ತಳಹದಿ ಪರಸ್ಪರ ಪ್ರೀತಿ ಅಭಿಮಾನ ಆದರವೇ ಹೊರತು ಜಾತಿ ಕುಲ ಗೋತ್ರ ಅಲ್ಲ. ನೀನು ಹೇಳಪ್ಪಾ. ಅವಳ ತಂದೆ-ತಾಯಿ ನಿನ್ನ ಒಪ್ಪಿದ್ದಾರ?"

'ತಂದೆಯ ಮಾತುಗಳಿಗೆ ಹೇಗೆ ಉತ್ತರಿಸುವುದು, ಹೇಗೆ ಹೇಳಿದರೆ ಸರಿಯಾದೀತು? ಅಮ್ಮ ಒಪ್ಪಿಯಾಳ......?' ಎಂದೆಲ್ಲಾ ಯೋಚಿಸತೂಡಗಿದ ಕಿಶೋರ.


ಮುಂದುವರೆಯುತ್ತದೆ

          ‌
            


ಗುರುವಾರ, ಮೇ 28, 2020

ಅನೂಹ್ಯ 1

'ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ         
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು 
ಮದುವೆಗೋ ಮಸಣಕೋ ಬೇಕೆಂದ ಕಡೆಗೋಡು ಪದಕುಸಿಯೇ ನೆಲವಿಹುದು ಮಂಕುತಿಮ್ಮ'
         
ಎಷ್ಟು ಅರ್ಥಪೂರ್ಣ ಈ ಕವಿವಾಣಿ. ವಿಧಾತನ ಇಚ್ಚೆಯಂತೆ ಈ ಬದುಕು. ನಾವೇನೇ ಎಣಿಸಿದರೂ ದೈವದ ಎಣಿಕೆಯಂತೆಯೇ ಜೀವನ ಪಥ. ಹಾಗಿಲ್ಲವಾದರೆ ನನ್ನ ಬಾಳಬಂಡಿ ಮಸಣದಿಂದ ಮದುವೆಗೆ, ಮದುವೆಯಿಂದ ನಂದನದಂತಹ ಈ ಮನೆಗೆ ಬಂದು ನಿಲ್ಲುತ್ತಿತ್ತೇ? ಆ ಮಸಣ ಸದೃಶ ನರಕದಿಂದ ಬಿಡುಗಡೆ ಸಿಗಬಹುದೆಂಬ ಸಣ್ಣ ಆಸೆಯೂ ನನಗಿರಲಿಲ್ಲ. ಆದರೆ ವಿಧಿ ನನ್ನ ಕೈ ಬಿಡಲಿಲ್ಲ. ಎಷ್ಟಾದರೂ ಭಗವಂತ ಕರುಣಾಮಯಿ ಅಲ್ಲವೇ? ನನ್ನ ಅಧಃಪತನ ಕಂಡು ಅವನಿಗೂ ಮರುಕ ಹುಟ್ಟಿರಬೇಕು. ಇಬ್ಬರು ದೈವಸ್ವರೂಪಿ ಮನುಜರನ್ನು ನನ್ನ ಕರ ಹಿಡಿದು ನಡೆಸಲು ಕಳಿಸಿದ್ದ. 
           
ನಾನೀಗ ಪರಮಸುಖಿ ಎಂದರೆ ತಪ್ಪಾಗಲಾರದು. ಈ ಮನೆಯವರೆಲ್ಲರಿಗೂ ನಾನೆಂದರೆ ಪ್ರಾಣ. ನಮ್ಮನ್ನು ಪ್ರೀತಿಸುವ, ಆದರಿಸುವ ಜೀವಗಳಿದ್ದರೇ ಬದುಕೇ ಸುಂದರ. 
         
ಆದರೇ...............

ಇದೆಲ್ಲಾ ಎಲ್ಲಿಯವರೆಗೆ??? 
ನನ್ನ ಹಿನ್ನೆಲೆ, ಪೂರ್ವಾಪರ ಇವರಿಗೆಲ್ಲಾ ತಿಳಿಯುವ ತನಕ. ನನ್ನ ಸತ್ಯ ತಿಳಿದಾಗ? ಆಗಲೂ ಹೀಗೇ ಆದರಿಸುವರೇ? ಇಲ್ಲಾ.. ಖಂಡಿತ ಇಲ್ಲ. ಆಗ ಇವರು ನನ್ನ ಈ ಮನೆಯಿಂದ ತಮ್ಮ ಮನದಿಂದ ಹೊರಹಾಕಲು ಯತ್ನಿಸುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಯಾವ ಮನೆಯವರು ನನ್ನಂಥವಳನ್ನು ಮನೆಯಲ್ಲಿರಿಸಿಕೊಂಡಾರು? 

ಈ ವಿಚಾರ ತಲೆಗೆ ಬಂದೊಡನೆ ನವ್ಯಾಳಿಗೆ ನಿಂತಲ್ಲೇ ಬವಳಿ ಬಂದಂತಾಯಿತು. ಒಡಲಾಳದಲ್ಲಿ ಅವ್ಯಕ್ತ ಸಂಕಟ..... 'ಈ ಕಿಶೋರನಿಗೆ ತಾನು ಮದುವೆಗೆ ಮೊದಲೇ ಹೇಳಿದ್ದೆ. ಈ ಸುಳ್ಳಿನ ಕಣ್ಣಾಮುಚ್ಚಾಲೆ ಬೇಡ. ಇರೋ ಸತ್ಯ‌ ಎಲ್ಲಾ ಹೇಳ್ಬೇಡಿ ಅಂತ. ಆದರೆ ಅವರೋ, ಈಗ ಬೇಡ ನವ್ಯಾ. ಸರಿಯಾದ ಸಮಯ ನೋಡಿ ಹೇಳೋಣ ಅಂದ್ಬಿಟ್ರು. ಸಮಾ ಕೂಡಾ ಹಾಗೇ ಅಂದಾಗ ನಾನು ಸುಮ್ಮನಾದೆ. ಇವರಿಬ್ಬರಿಗೂ ನನ್ನ ಭಯ ಯಾಕೆ ಅರ್ಥವಾಗುತ್ತಿಲ್ಲ? ನಂಗೋ ಕಣ್ಮುಚ್ಚಿದ್ರೂ ನಿದ್ದೆ ಹತ್ತೋಲ್ಲ.  ಏನೇನೋ ಕೆಟ್ಟ ಯೋಚನೆಗಳು. ಅದೇ ನರಕದ ನೆನಪು. ಛೇ....'  ಯೋಚಿಸುತ್ತಲೇ ತಲೆ ಕೊಡವಿದಳು.
            
ಅಷ್ಟರಲ್ಲೇ ಮನೆ ಮುಂದೆ ಬೈಕ್ ನಿಂತ ಸದ್ದಾಯಿತು. "ಅತ್ಗೇ, ಒಂದ್ಲೋಟ ಕಾಫಿ" ಕೂಗುತ್ತಲೇ ಒಳಬಂದ ಕಾರ್ತಿಕ್ ಅಲ್ಲೇ ಸೋಫಾ ಮೇಲೆ ಧೊಪ್ಪೆಂದು ಕುಳಿತ. 

"ಅಲ್ವೋ, ಸ್ವಲ್ಪ ಕೈಕಾಲು ಮುಖ ತೊಳ್ಕೊಂಡ್ ಬಟ್ಟೆ ಬದಲಾಯಿಸಿ ಕೂತ್ಕೋಬಾರ್ದ?" ಎಂದರು ಮಂಗಳಾ.
        
"ಇವತ್ತು ಕಾಲೇಜಲ್ಲಿ ಫುಲ್ ಕ್ಲಾಸ್. ಲೆಕ್ಚರ್ ಕೇಳಿ ಕೇಳಿ ಸಾಕಾಗಿದೆ. ಸಾಲದ್ದಕ್ಕೆ ಬಿಸ್ಲು ಬೇರೆ. ನೀನು ಸುಮ್ನಿರಮ್ಮ" ಅಂದ. 
         
"ಅದೇನು ಕಾಲೇಜಿಗೆ ಹೋಗ್ತೀಯೋ, ಏನ್ ಓದ್ತೀಯೋ. ಒಂದು ದಿನ ಪುಸ್ತಕ ಹಿಡಿದಿದ್ದು ನಾಕಾಣೆ" ಗೊಣಗಿದರು ಮಂಗಳಾ. 
          
"ಅಯ್ಯೋ ಅಮ್ಮಾ, ಇನ್ನೂ ಚಿಕ್ಕೋನು. ಸರಿ ಹೋಗ್ತಾನೆ ಯೋಚನೆ ಮಾಡಬೇಡಿ" ಅಂತ ಮೈದುನನ ಪರ ವಹಿಸಿದಳು ನವ್ಯಾ.
           
"ಏನೋಮ್ಮ, ನೀನುಂಟು ಅವನುಂಟು. ನನಿಗಂತೂ ಸಾಕಾಗಿದೆ. ಇವ್ನು ನಿನ್ನ ಜವಾಬ್ದಾರಿ. ನಿನ್ನ ಮಾವನಿಗಂತೂ ಪೇಪರ್ ಒಂದು ಇದ್ಬಟ್ರೇ ಲೋಕವೇ ಬೇಡ. ಇನ್ನು ಕಿಶೋರ ಒಬ್ಬನೇ ಪಾಪ ಎಷ್ಟೂಂತ ಮಾಡ್ತಾನೆ?" ಅಂದಿದ್ದೇ ತಡ, 
"ಏನೇ, ನನ್ನ ಬಗ್ಗೆ ಸೊಸೆ ಹತ್ರ ಚಾಡಿ ಹೇಳ್ತಿದ್ದೀ. ನೋಡು ನವ್ಯಾ, ನಿಮ್ಮತ್ತೇ ನಿಧಾನಕ್ಕೆ ಒಂದೊಂದೇ ಜವಾಬ್ದಾರಿ ನಿನ್ನ ಹೆಗಲಿಗೇರಿಸ್ತಾ ಇದ್ದಾಳೆ" ಗುಟುರು ಹಾಕಿದರು ಸತ್ಯನಾರಾಯಣ.
         ‌‌ 
"ಅಪ್ಪಾ..... ಅಮ್ಮಂಗೆ ತುಂಬಾ ವಯಸ್ಸಾಗಿದ್ಯಂತೆ. ಹಾಗಾಗಿ ಜವಾಬ್ದಾರಿ ಬೇರೆಯೋರಿಗೆ ವಹಿಸ್ತಿದ್ದಾಳೆ. ಇದೇ ಛಾನ್ಸು. ನಿನ್ನ ಜವಾಬ್ದಾರಿನೂ ಯಾರಿಗಾದ್ರೂ ವಹಿಸೋಕ್ಹೇಳು" ಕಾರ್ತಿಕ್ ಅಂದಾಗ ಸತ್ಯನಾರಾಯಣ ಜೋರಾಗಿ ನಕ್ಕರೆ, ನವ್ಯಾಳಿಗೂ ನಗು ತಡೆಯಲಾಗಲಿಲ್ಲ. 
          
"ಒದೋ ಅಂದ್ರೆ ತಲೆ ಎಲ್ಲಾ ಮಾತಾಡ್ತೀಯ" ಮಂಗಳಾ ಹೊಡೆಯಲು ಹೊರಟಾಗ,  ತನ್ನ ರೂಮಿಗೆ ಓಡಿದ.
     
"ಅಮ್ಮ, ನೀವೇನೂ ಯೋಚನೆ ಮಾಡಬೇಡಿ. ಇವ್ನು ನನ್ನ ಜವಾಬ್ದಾರಿ" ಅಂದ ಸೊಸೆಯ ತಲೆ ಸವರಿದರು ಮಂಗಳಾ. ರೂಮಿನಲ್ಲಿ ಬ್ಯಾಗ್ ಎಸೆದು ಬಂದವನೇ, "ಬನ್ನೀ ಅತ್ಗೇ, ಒಂದು ರೌಂಡ್ ವಾಕಿಂಗ್ ಹೋಗೋಣ" ಎಂದ. "ಇಲ್ಲ ಕಾರ್ತಿಕ್, ರಾತ್ರಿ ಅಡಿಗೆ ಇನ್ನೂ ಆಗಿಲ್ಲ" ಅಂದಳು. 
        
"ಯಾವಾಗ್ಲೂ ಮನೇಲೇ ಇರ್ತೀ. ನೀನು ಬಂದ್ಮೇಲೆ ನನಗೆ ಕೆಲಸವೇ ಇಲ್ಲ. ಎಲ್ಲ ನೀನೇ ಮಾಡ್ತೀ. ಇವತ್ತಿನ ಅಡಿಗೆ ನಾನು ಮಾಡ್ತೀನಿ. ನೀನು ಹೋಗಿ ಬಾ" ಅಂದವರ ಕಣ್ಣಲ್ಲಿನ ಮೆಚ್ಚುಗೆ, ಅಂತಃಕರಣಕ್ಕೆ ನವ್ಯಾಳ ಕಣ್ಣು ತುಂಬಿತು. 'ದೇವರೇ, ಇವರ ಆಸರೆಯನ್ನು ನನ್ನಿಂದ ಕಸಿಯಬೇಡ ತಂದೇ' ಎಂದು ಮನ ಪ್ರಾರ್ಥಿಸಿತು. ಇಬ್ಬರೂ ಹೊರಟು ರಸ್ತೆಯ ತಿರುವಿನಲ್ಲಿ ಮರೆಯಾಗುವವರೆಗೂ ನಿಂತು ನೋಡಿದರು ಮಂಗಳಾ.

ಮುಂದುವರೆಯುತ್ತದೆ.....

ಬುಧವಾರ, ಮೇ 27, 2020

ಲೈಫ್ ಈಸ್ ಬ್ಯೂಟಿಫುಲ್


ಕಣ್ಣೆದುರಿಗಿರುವ ಸಾವನ್ನು ಪ್ರತೀ ಘಳಿಗೆ ಕಾಣುತ್ತಾ ಬದುಕುವುದು ಅದೆಷ್ಟು ಘೋರ....? ಸಾವನ್ನು ಕಣ್ಣೆದುರಿಗಿಟ್ಟುಕೊಂಡೂ ನಗುನಗುತ್ತಾ ದಕ್ಕಿದಷ್ಟು ಬದುಕನ್ನು ಸುಂದರವಾಗಿಸಿಕೊಳ್ಳುವವರ ಸಂಖ್ಯೆ ಎಷ್ಟಿರಬಹುದು? ಬಲು ಕಠಿಣವಲ್ಲವೇ ಈ ಹಾದಿ...?

ಈ ಜಗತ್ತು ಕಂಡ ಅತೀ ಭೀಭತ್ಸ ರಕ್ತಚರಿತ್ರೆಗಳಲ್ಲಿ ಒಂದು ಹಿಟ್ಲರ್ ಅವಧಿಯಲ್ಲಿನ ಯಹೂದಿಗಳ ನರಮೇಧ‌. ಅವನ 'ಡೆತ್ ಕ್ಯಾಂಪ್'ಗಳು ಅದೆಷ್ಟು ಜೀವಗಳ ಯಾತನಾಮಯ ನಿಟ್ಟುಸಿರ ಶಾಪವನ್ನು ಕಂಡಿವೆಯೋ ಬಲ್ಲವರಾರು? ಈ ರಕ್ತಸಿಕ್ತ ಅಧ್ಯಾಯ ದೇಶಭಾಷೆಗಳ ಹಂಗಿಲ್ಲದೇ ಹತ್ತುಹಲವು ಕಥೆ, ಕಾದಂಬರಿ, ಚಲನಚಿತ್ರಗಳಿಗೆ ಪ್ರೇರಣೆಯಾಗಿರುವುದು ಎಲ್ಲರಿಗೂ ತಿಳಿದ ಸತ್ಯ.  ಅಂತಹ ಪ್ರತಿಯೊಂದು ಕೃತಿಯೂ ಹಿಟ್ಲರ್ ಅವಧಿಯಲ್ಲಿ ಯಹೂದಿಗಳು ಅನುಭವಿಸಿದ ನರಕ ಸದೃಶ ಬವಣೆಯ ಹಲವು ಆಯಾಮಗಳನ್ನು, ವಿಭಿನ್ನ ಮಜಲುಗಳನ್ನೂ ಅನಾವರಣಗೊಳಿಸುತ್ತವೆ. ಆದರೆ ಇಂತಹ ಕೃತಿಗಳಲ್ಲಿ ನಾಜಿ಼ಗಳ ಕೌರ್ಯ ಹಾಗೂ ಯಹೂದಿಗಳ ನಿಸ್ಸಾಹಯಕತೆಯ ಚಿತ್ರಣವೇ ಹೆಚ್ಚು. ಅದು ಆ ಕೃತಿಗಳ ಬಲದೊಂದಿಗೆ ಮಿತಿಯೂ ಕೂಡಾ ಹೌದು. ಕೆಲವೇ ಕೆಲವು ಅತ್ಯುತ್ಕೃಷ್ಟ ಕೃತಿಗಳು ಮಾತ್ರವೇ ಈ ಮಿತಿಗಳೆಲ್ಲವನ್ನೂ ಮೀರಿ ಬೇರೆನನ್ನೋ ಹೇಳುತ್ತವೆ. ಅಂತಹ ಕೃತಿಗಳ ಸಾಲಿಗೆ ಸೇರುವುದು 1997 ರ ಇಟಾಲಿಯನ್ ಸಿನಿಮಾ ಲೈಫ್ ಈಸ್ ಬ್ಯೂಟಿಫುಲ್ (ಇಟಾಲಿಯನ್ ಭಾಷೆಯಲ್ಲಿ "La vita è bella").

ರೊಬೆರ್ಟೋ ಬೆನಿನಿ(Roberto Benigni) ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಲನಚಿತ್ರ ಡೆತ್ ಕ್ಯಾಂಪಿನೊಳಗಿದ್ದು, ಪ್ರತಿಕ್ಷಣ ಹಿಂಸೆ ಹಾಗೂ ಜೀವಭಯದೊಂದಿಗೆ ಬದುಕುತ್ತಿದ್ದರೂ ಜೀವನ ಪ್ರೀತಿ ಕಳೆದುಕೊಳ್ಳದೇ ತನ್ನೊಳಗಿರುವ ಅದ್ಬುತ ಕಲ್ಪನಾ ಶಕ್ತಿಯನ್ನು ಬಳಸಿ ತನ್ನ ಮಗನಿಗೆ ಸೆರೆಶಿಬಿರದ ನರಕಯಾತನೆ ಹಾಗೂ ಬಂಧನದ ಭೀಕರತೆಗಳ ಅರಿವಾಗದಂತೆ ಕಾಯ್ದುಕೊಳ್ಳುವ ತಂದೆಯೊಬ್ಬನ ಅನನ್ಯ ಕಥೆಯನ್ನು ಹೇಳುತ್ತದೆ.

ರುಬಿನೋ ರೋಮಿಯೋ ಸಾಲ್ಮೋನೆ ಅವರು ಬರೆದ "ಇನ್ ದಿ ಎಂಡ್, ಐ ಬೀಟ್ ಹಿಟ್ಲರ್" ಕೃತಿಯಿಂದ ಭಾಗಶಃ ಸ್ಪೂರ್ತಿ ಪಡೆದಿರುವ ಈ ಚಿತ್ರ, ಖುದ್ದು ನಿರ್ದೇಶಕ ಬೆನಿನಿಯವರ ತಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಕಾರ್ಮಿಕ ಶಿಬಿರದಲ್ಲಿ ಕಳೆದ ಎರಡು ವರ್ಷಗಳ  ಸ್ವಾನುಭವದಿಂದಲೂ ಪ್ರೇರಣೆ ಪಡೆದಿದೆ.

ಚಿತ್ರದ ಕಥೆಯ ವಿಚಾರಕ್ಕೆ ಬರುವುದಾದರೆ ಲೈಫ್ ಈಸ್ ಬ್ಯೂಟಿಫುಲ್ ಚಿತ್ರವು 1939ರ ಕಾಲಘಟ್ಟದ ಇಟಲಿ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಗೈಡೋ ಓರೆಫೈಸ್ ಎಂಬ ಯಹೂದಿ ಯುವಕನ ಬದುಕಿನ ಏರಿಳಿತಗಳನ್ನು ದಾಖಲಿಸುತ್ತದೆ. ಗೈಡೋ ಬದುಕಿನ ಪ್ರತಿ ಕ್ಷಣವನ್ನೂ ಸಕಾರಾತ್ಮಕವಾಗಿ ಆಸ್ವಾದಿಸುವ, ತನ್ನ ಸುತ್ತಲಿರುವ ಎಲ್ಲರನ್ನೂ ಸಂತೋಷವಾಗಿರಿಸಿಕೊಳ್ಳುವ ಕಲೆ ಅರಿತ, ಅತ್ಯದ್ಬುತ ಕಲ್ಪನೆಗಳ ಹೆಣೆಯಬಲ್ಲ ಲವಲವಿಕೆಯ ಯುವಕ. ತನ್ನ ಚಿಕ್ಕಪ್ಪ ಎಲಿಸಿಯೋ ಅವರ ರೆಸ್ಟೋರೆಂಟಿನಲ್ಲಿ ಕೆಲಸಮಾಡಲು ಅರೇಝೋ಼ ನಗರಕ್ಕೆ ಆಗಮಿಸುವ ಗೈಡೋ ಆಕಸ್ಮಿಕವಾಗಿ ಭೇಟಿಯಾಗುವ ದೋರಾ ಎಂಬ ಶಿಕ್ಷಕಿಯ ಪ್ರೇಮ ಪಾಶದಲ್ಲಿ ಸಿಲುಕುತ್ತಾನೆ. ಈಗಾಗಲೇ ಅಹಂಕಾರಿ ಸಿರಿವಂತ ವ್ಯಕ್ತಿಯೋರ್ವನೊಂದಿಗೆ ವಿವಾಹ ನಿಷ್ಕರ್ಷೆಯಾಗಿರುವ ದೋರಾಳಿಗೆ ತನ್ನ ಪ್ರೇಮವನ್ನು ಅರಿಕೆ ಮಾಡಲು ಗೈಡೋ ಹಲವಾರು ಕಸರತ್ತುಗಳನ್ನು ನಡೆಸುತ್ತಾನೆ. ತಾಯಿಯ ಒತ್ತಾಯದ ಮೇರೆಗೆ ಇಷ್ಟವಿಲ್ಲದ ಸಂಬಂಧದಲ್ಲಿ ಸಿಲುಕಿ ಅಸಂತುಷ್ಟಳಾಗಿದ್ದ ದೋರಾ, ಗೈಡೋನ ನೈಜ ಪ್ರೀತಿಗೆ ಮನಸೋಲುತ್ತಾಳೆ. ಅವಳ ನಿಶ್ಚಿತಾರ್ಥದ ಔತಣಕೂಟದ ದಿನವೇ  ಅವಳ ಅನುಮತಿಯೊಂದಿಗೆ ಗೈಡೋ ದೋರಾಳನ್ನು ಅಪಹರಿಸಿ ವಿವಾಹವಾಗುತ್ತಾನೆ. ದಂಪತಿಗಳು ಪುಸ್ತಕದ ಮಳಿಗೆಯೊಂದನ್ನು ಆರಂಭಿಸುತ್ತಾರೆ. ಅವರಿಗೆ ಗಿಯೋಸುಕ್(ಜೋಶುವಾ) ಎಂಬ ಮಗನೂ ಜನಿಸುತ್ತಾನೆ.  ಮಡದಿ, ಮಗ ಹಾಗೂ ಪುಸ್ತಕದ ಮಳಿಗೆಯೊಂದಿಗೆ ಸುಲಲಿತವಾಗಿ ಗೈಡೋನ ಬದುಕು ಸಾಗುತ್ತಿರುವಾಗಲೇ ಎರಡನೇ ಮಹಾಯುದ್ಧ ಆರಂಭವಾಗುತ್ತದೆ.

ಇಟಲಿ ಸಾಮ್ರಾಜ್ಯವನ್ನು ಆಕ್ರಮಿಸಿಕೊಳ್ಳುವ ಹಿಟ್ಲರ್ ಇಟಲಿಯಲ್ಲಿರುವ ಯಹೂದಿಗಳ ಮಾರಣಹೋಮಕ್ಕೆ ಆದೇಶ ಹೊರಡಿಸುತ್ತಾನೆ. ಇಟಲಿಯಲ್ಲಿನ ಯಹೂದ್ಯರನ್ನು ಹುಡುಕಿ ಅವರನ್ನು ಬಲವಂತವಾಗಿ ರೈಲುಗಳಲ್ಲಿ ತುಂಬಿ ಸೆರೆಶಿಬಿರಗಳಿಗೆ ಒಯ್ಯಲಾರಂಭಿಸುತ್ತಾರೆ.

ಜೋಶುವಾನ ಐದನೇ ಜನ್ಮದಿನದಂದೇ ಗೈಡೋ, ಅವನ ಚಿಕ್ಕಪ್ಪ ಎಲಿಸಿಯೋ ಹಾಗೂ ಜೋಶುವಾನನ್ನು ವಶಪಡಿಸಿಕೊಂಡು ಸೆರೆಶಿಬಿರಕ್ಕೆ ಒಯ್ಯಲಾಗುತ್ತದೆ. ಅವರನ್ನು ಅರಸಿ ಬರುವ ದೋರಾಳಿಗೆ ಯಹೂದ್ಯಳಲ್ಲದ ಕಾರಣ ಸೆರೆಶಿಬಿರದಿಂದ ವಿನಾಯಿತಿ ಸಿಗುತ್ತದೆ. ಆದರೆ ಗೈಡೋ ಹಾಗೂ ಜೋಶುವಾನನ್ನು ಅಗಲಿರಲು ಬಯಸದ ದೋರಾ ಸ್ವ ಇಚ್ಛೆಯಿಂದ ತಾನೂ ರೈಲನ್ನೇರಿ ಸೆರೆಶಿಬಿರಕ್ಕೆ ಪ್ರಯಾಣಿಸುತ್ತಾಳೆ‌. ಸೆರೆಶಿಬಿರದಲ್ಲಿ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ ಶಿಬಿರಗಳಲ್ಲಿ ಇರಿಸುವುದರಿಂದ ಗೈಡೋ ಮತ್ತು ಜೋಶುವಾ ದೋರಾಳಿಂದ ಬೇರಾಗುತ್ತಾರೆ. ಹಾಗಿದ್ದೂ ಶಿಬಿರದ ಧ್ವನಿವರ್ಧಕಗಳ ಸಹಾಯದಿಂದ ಗೈಡೋ ಮತ್ತು ಜೋಶುವಾ ದೋರಾಳಿಗೆ ಕ್ಷೇಮ ಸಂದೇಶ ಕಳಿಸುತ್ತಿರುತ್ತಾರೆ.

ಸೆರೆಶಿಬಿರದ ನಿಯಮಗಳ ಪ್ರಕಾರ ದುಡಿಯುವ ಸಾಮರ್ಥ್ಯ ಇಲ್ಲದವರನ್ನು (ವಯಸ್ಸಾದವರು ಹಾಗೂ ಮಕ್ಕಳು) ಶಿಬಿರಕ್ಕೆ ಕರೆತಂದ ತಕ್ಷಣವೇ ಕೊಲ್ಲಬೇಕು. ಅದರಂತೆ ವಯಸ್ಸಾದ ಎಲಿಸಿಯೋ ಶಿಬಿರಕ್ಕೆ ಬಂದು ಸ್ವಲ್ಪ ಸಮಯದ ತರುವಾಯ ಗ್ಯಾಸ್ ಛೇಂಬರಿನಲ್ಲಿ ಕೊಲ್ಲಲ್ಪಡುತ್ತಾರೆ. ಈಗ ಮಕ್ಕಳ ಸರದಿ. ಸ್ನಾನ ಮಾಡಿಸುವ ನೆಪದಲ್ಲಿ ಗ್ಯಾಸ್ ಛೇಂಬರಿಗೆ ಮಕ್ಕಳನ್ನು ಕರೆದೊಯ್ಯುತ್ತಾರೆ ಜರ್ಮನ್ ಕಾವಲುಗಾರರು. ಆದರೆ ಸ್ನಾನ ಮಾಡುವುದನ್ನು ದ್ವೇಷಿಸುವ ಜೋಶುವಾ ಉಳಿದ ಮಕ್ಕಳೊಂದಿಗೆ ಹೋಗದೇ ಬದುಕುಳಿಯುತ್ತಾನೆ.

ಗಾಳಿ ಬೆಳಕು ಸರಿಯಾಗಿ ಬರದ ಗೂಡಿನಂತಹ ಸೆರೆಶಿಬಿರದ ವಾತಾವರಣನ್ನೂ, ತಾಯಿಯಿಂದ ದೂರವಿರುವುದನ್ನೂ ಸಹಿಸಲಾರದ ಜೋಶುವಾ ಅಲ್ಲಿಂದ ಹೊರಹೋಗುವಾ ಎಂದು ಗೈಡೋಗೆ ದುಂಬಾಲು ಬೀಳುತ್ತಾನೆ. ಅಂತಹ ಯಾವುದೇ ಸಾಧ್ಯತೆಗಳೂ ಕನಸಿನಲ್ಲೂ ಸಾಧ್ಯವಿಲ್ಲದಂತಹ ದುಃಸ್ಥಿತಿ ಅವರದು.
ಆದರೆ ಆಶಾವಾದಿ ಗೈಡೋ ಶಿಬಿರದ ನರಕಯಾತನೆಗಳನ್ನು, ತಮ್ಮ ಹೀನ ಸ್ಥಿತಿಯನ್ನು ಮಗನಿಂದ ಮುಚ್ಚಿಡಲು ತನ್ನ ಅದ್ಬುತ ಕಲ್ಪನಾಶಕ್ತಿಯ ಸಹಾಯವನ್ನು ಪಡೆದು ಮಗನ ಆಲೋಚನೆಯಲ್ಲಿ  ಸೆರೆಶಿಬಿರಕ್ಕೆ ಭಿನ್ನ ಆಯಾಮವೊಂದನ್ನು ಸೃಷ್ಟಿಸುತ್ತಾನೆ. 

ಇಡೀ ಶಿಬಿರವನ್ನು ಒಂದು ಸಂಕೀರ್ಣವಾದ ಆಟ ಎಂದು ಮಗನಿಗೆ ವಿವರಿಸುವ ಗೈಡೋ 'ಈ ಆಟದಲ್ಲಿ ಪ್ರತಿಯೊಬ್ಬರಿಗೂ ಹಲವು ಕಠಿಣವಾದ ಚಟುವಟಿಕೆಗಳನ್ನು ನೀಡಿರುತ್ತಾರೆ. ಆ ಚಟುವಟಿಕೆಗಳು ಅದೆಷ್ಟೇ ಕಠೋರ ಹಾಗೂ ಹಿಂಸೆ ನೀಡುವಂತಹದ್ದಾಗಿದ್ದರೂ ಅದನ್ನು ನಿರ್ವಹಿಸದೇಬಿಡುವಂತಿಲ್ಲ. ಅಂತಹ ಪ್ರತಿಯೊಂದು ಚಟುವಟಿಕೆಗಳಿಗೂ ಅಂಕಗಳಿದ್ದು ಯಶಸ್ವಿಯಾಗಿ ಅದನ್ನು ಮುಗಿಸುವವರು ಅಂಕಗಳನ್ನು ಪಡೆಯುತ್ತಾರೆ. ಯಾರು ಮೊದಲು 1000 ಅಂಕಗಳನ್ನು ಪಡೆಯುತ್ತಾರೋ ಅವರಿಗೆ ಒಂದು ನೈಜವಾದ ಯುದ್ಧ ಟ್ಯಾಂಕರ್ ಅನ್ನು ಬಹುಮಾನವಾಗಿ ನೀಡಲಾಗುತ್ತದೆ. ಆದರೆ ಯಾರು ಅಮ್ಮನನ್ನು ನೋಡಬೇಕೆಂದು ಬಯಸಿ ಅಳುತ್ತಾರೋ ಹಾಗೂ ಹಸಿವೆಯಾಗುತ್ತದೆ ಎಂದು ಹಠ ಮಾಡುತ್ತಾರೋ ಅವರು ತಮ್ಮ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಅದೇ ರೀತಿ ಶಿಬಿರದ ಕಾವಲುಗಾರರಿಂದ ಅವಿತುಕೊಳ್ಳುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ' ಎಂದು ಇಡೀ ಸೆರೆಶಿಬಿರದ ದಿನಚರಿಯನ್ನು ಒಂದು ಆಟದ ಚೌಕಟ್ಟಿನಲ್ಲಿ ನಿರೂಪಿಸಿ ಜೋಶುವಾನ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾನೆ ಗೈಡೋ.

ಜೀವಹಿಂಡುವ ನಾಜಿ಼ ಡೆತ್ ಕ್ಯಾಂಪಿನ ಹಿಂಸೆಗಳನ್ನು, ತನ್ನೆಲ್ಲಾ ಯಾತನೆಗಳನ್ನು ಆಟದ ಭಾಗವೆಂಬಂತೆ ಮಗನ ಕಣ್ಣಿಗೆ ಅರಿಕೆ ಮಾಡಿಸುವಲ್ಲಿ ಯಶಸ್ವಿಯಾಗುವ ಗೈಡೋ ತಾನು ಸಾವಿಗೆ ಅತೀ ಸನಿಹದಲ್ಲಿರುವೆ ಎಂಬ ಸತ್ಯ ಜೋಶುವಾನ ಅರಿವಿಗೇ ಬಾರದಂತೆ ಅವನ ಮನಸ್ಸನ್ನು ಆಟದಲ್ಲೇ ಕೇಂದ್ರಿಕರಿಸುವಲ್ಲಿ ಗೆಲ್ಲುತ್ತಾನೆ.

ಮಹಾಯುದ್ಧದಲ್ಲಿ ಅಮೇರಿಕಾ ಮುಂದಾಳತ್ವದ ಮಿತ್ರಪಕ್ಷಗಳ ಕೈ ಮೇಲಾಗಿ ಹಿಟ್ಲರ್ ಹಾಗೂ ಮುಸಲೋನಿಯ ಶತ್ರುಪಕ್ಷಗಳ ಸೋಲು ಖಚಿತವಾಗುತ್ತದೆ. ಅಮೇರಿಕನ್ ಸೇನಾಪಡೆಗಳು ಆಗಮಿಸುವ ಮುನ್ನವೇ ಸೆರೆಶಿಬಿರಗಳನ್ನ ಖಾಲಿಯಾಗಿಸುವ ಗಡಿಬಿಡಿಯಲ್ಲಿ ಅಲ್ಲಿರುವವರನ್ನೆಲ್ಲಾ ಬೇರೆಡೆಗೆ ಸಾಗಿಸಲು ಆರಂಭಿಸಲಾಗುತ್ತದೆ. ಈ ಸಂದರ್ಭದಲ್ಲಿ ಜೋಶುವಾನನ್ನು ರಸ್ತೆ ಬದಿಯ ಮುಚ್ಚಿದ ಪೆಟ್ಟಿಗೆಯೊಂದರಲ್ಲಿ ಕುಳ್ಳಿರಿಸಿ 'ಹೊರಗಿನ ಸದ್ದೆಲ್ಲಾ ಅಡಗಿ ಸಂಪೂರ್ಣ ಶಾಂತತೆ ನೆಲೆಸುವವರೆಗೂ ಆ ಪೆಟ್ಟಿಗೆಯಿಂದ ಹೊರಬರದೇ ಕುಳಿತರೆ 1000 ಅಂಕಗಳಿಸಿ ನೀನೇ ಈ ಆಟದಲ್ಲಿ ವಿಜೇತನಾಗುತ್ತೀಯಾ' ಎಂದು ಮಗನನ್ನು ನಂಬಿಸಿ ಯಾವುದೇ ಕಾರಣಕ್ಕೂ ಆತ ಗಲಭೆ ಶಾಂತವಾಗುವವರೆಗೆ ಹೊರಬಾರದಂತೆ ಮನವೊಲಿಸಿ ತಾನು ದೋರಾಳನ್ನು ಅರಸಿ ಹೊರಡುತ್ತಾನೆ ಗೈಡೋ.

ಆದರೆ ಹಾಗೆ ಹೊರಟ ಗೈಡೋ ಜರ್ಮನ್ ಸೈನಿಕರ ಕೈಯಲ್ಲಿ ಸಿಕ್ಕಿಬೀಳುತ್ತಾನೆ ಹಾಗೂ ಜರ್ಮನ್ ಅಧಿಕಾರಿ ಅವನನ್ನು ಕೊಲ್ಲಲ್ಲೆಂದು ಕರೆದೊಯ್ಯುತ್ತಾನೆ. ಹಾಗೆ ಹೋಗುವಾಗ ಗೈಡೋ ಜೋಶುವಾ ಅವಿತಿರುವ ಪೆಟ್ಟಿಗೆಯ ಮುಂಭಾಗದಿಂದಲೇ ಹಾದು ಹೋಗುತ್ತಾನೆ. ಪೆಟ್ಟಿಗೆಯ ಕಿಂಡಿಯಿಂದ ತನ್ನನ್ನೇ ನೋಡುತ್ತಿದ್ದ ಮಗನಿಗೆ ಕಣ್ಣು ಮಿಟುಕಿಸಿ ತಾನು ಆ ಸೈನಿಕರು ಹಾಗೂ ಅಧಿಕಾರಿಗಳಿಗೆ ಆದೇಶ ನೀಡುವವನಂತೆ ನಟಿಸುತ್ತಾ ಮಗನಿಗೆ ತನ್ನ ಸ್ಥಿತಿ ಅರಿವಾಗದಂತೆ, ಅವನ ಆತ್ಮಸ್ಥೈರ್ಯ ಕುಗ್ಗದಂತೆ ನಟಿಸುತ್ತಾನೆ. ನಂತರದಲ್ಲಿ ಗೈಡೋನನ್ನು ಕೊಲ್ಲಲಾಗುತ್ತದೆ.

ತಂದೆಯ ಮಾತಿನಂತೆ ಎಲ್ಲಾ ಶಾಂತವಾಗುವವರೆಗೂ ಪೆಟ್ಟಿಗೆಯೊಳಗೇ ಕುಳಿತ ಜೋಶುವಾ ಮರುದಿನ ಬೆಳಗ್ಗೆ ಎಲ್ಲೆಡೆ ನೀರವತೆ ಆವರಿಸಿ, ಅವಿತ್ತಿದ್ದ ಯಹೂದಿಗಳೆಲ್ಲಾ ನಿಧಾನವಾಗಿ ಹೊರಬರುವಾಗ ತಾನೂ ಪೆಟ್ಟಿಗೆಯಿಂದ ಹೊರಬರುತ್ತಾನೆ. ಏನು ಮಾಡಬೇಕೆಂದು ಅರಿವಾಗದೇ ಸುತ್ತಮುತ್ತ ನೋಟ ಹರಿಸುತ್ತಾ ರಸ್ತೆ ಮಧ್ಯೆ ನಿಂತವನನ್ನು ಒಂದು ಶಬ್ದ ಎಚ್ಚರಿಸುತ್ತದೆ. ಶಬ್ದ ಬಂದತ್ತ ನೋಟ ಹರಿಸುವವನಿಗೆ ಅಮೇರಿಕಾದ ಸೈನಿಕ ಚಲಾಯಿಸಿಕೊಂಡು ಬರುತ್ತಿದ್ದ ಶೆರ್ಮನ್ ಟ್ಯಾಂಕರ್ ಕಣ್ಣಿಗೆ ಬೀಳುತ್ತದೆ‌. ಅದನ್ನು ಕಂಡೊಂಡನೆ ತಂದೆ ಹೇಳಿದ ಬಹುಮಾನದ ಟ್ಯಾಂಕರ್ ತನಗೆ ದೊರಕಿತೆಂದು ಸಂತಸಪಡುವ ಪುಟ್ಟ ಜೋಶುವಾನಿಗೆ ತಂದೆ ಸತ್ತಿರುವನೆಂಬುದು ಅರಿವಾಗುವುದಿಲ್ಲ. ಅಮೇರಿಕನ್ ಸೈನಿಕ ಜೋಶುವಾನನ್ನು ಟ್ಯಾಂಕರ್ ಸವಾರಿಗೆ ಆಹ್ವಾನಿಸಿದಾಗ ಖುಷಿಯಿಂದ ಟ್ಯಾಂಕರ್ ಮೇಲೇರುವ ಜೋಶುವಾ ಅಕ್ಕಪಕ್ಕ ಸಾಗುತ್ತಿದ್ದ ಜನರನ್ನು ನೋಡತೊಡಗುತ್ತಾನೆ. ಶೀಘ್ರದಲ್ಲೇ ಆ ಗುಂಪಿನಲ್ಲಿ ತಾಯಿಯನ್ನು ಕಾಣುವ ಜೋಶುವಾ ಟ್ಯಾಂಕರಿನಿಂದ ಇಳಿದು ದೋರಾಳ ಬಳಿಗೋಡುತ್ತಾನೆ. ಅಮ್ಮನ ಬಳಿ ಅತೀವ ಸಂತೋಷದಿಂದ "ಅಮ್ಮಾ, ನಾನು ಗೆದ್ದೆ" ಎನ್ನುವ ಜೋಶುವಾನನ್ನು ಅಪ್ಪಿ ದೋರಾಳೂ ಮಗನನ್ನು ಅಪ್ಪಿ, "ಹೌದು ಮಗೂ, ನಾವು ಗೆದ್ದೆವು" ಎನ್ನುತ್ತಾಳೆ.

ತಂದೆಯ ಕಲ್ಪನಾಶಕ್ತಿಯ ಸಹಾಯದಿಂದ ಹೇಗೆ ಕೊನೆಯವರೆಗೂ ತಾನು ಸೆರೆಶಿಬಿರದ ಕಠೋರತೆಯ ಅರಿವೇ ಆಗದಂತೆ ಅಲ್ಲಿ ದಿನಗಳನ್ನು ಕಳೆದೆ ಎಂದು ತನ್ನ ತಂದೆಯ ತ್ಯಾಗದ ಕಥನವನ್ನು ವಯಸ್ಕ ಜೋಶುವಾ ಸ್ವಗತದಲ್ಲಿ ನೆನಪಿಸಿಕೊಳ್ಳುವುದರೊಂದಿಗೆ ಚಿತ್ರ ಮುಗಿಯುತ್ತದೆ.

ಪ್ರಥಮಾರ್ಧದಲ್ಲಿ ಕೊಂಚ ಬೋರಿಂಗ್ ಎನಿಸುವ ಕಥೆ ದ್ವಿತಿಯಾರ್ಧದಲ್ಲಿ ಮಾತ್ರ ನೋಡುಗರ ಮನಸ್ಸನ್ನು ಅಲುಗಾಡಿಸುತ್ತದೆ. ಮಕ್ಕಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಅವರ ಅನುಮಾನಗಳನ್ನು ತೊಡೆಯುವುದು ಇಡೀ ಪ್ರಪಂಚದಲ್ಲಿ ಅತೀ ಕಠಿಣವಾದ ಕೆಲಸ. ಒಂದು ಪ್ರಶ್ನೆಗೆ ಉತ್ತರಿಸುವುದರೊಳಗೆ ಇನ್ನೊಂದು ಅನುಮಾನ ಅವರ ಪುಟ್ಟ ಮೆದುಳಿನೊಳಗೆ ತಯಾರಾಗಿರುತ್ತದೆ. ಅಂತಹುದೇ ಐದು ವರ್ಷದ ಮಗುವಿಗೆ ಇಡೀ ಸೆರೆಶಿಬಿರವನ್ನು ಒಂದು ಆಟದ ರೂಪದಲ್ಲಿ ಸಮರ್ಪಕವಾಗಿ ನಿರೂಪಿಸಿರುವ ರೀತಿ ಎಂತಹವರ ಮನಸ್ಸಿಗಾದರೂ ನಾಟದೇ ಬಿಡದು. ಈ ಒಂದು ಅಂಶದಿಂದಾಗಿಯೇ ಈ ಸಿನಿಮಾ ಹಿಟ್ಲರ್ ಇತಿಹಾಸ ಆಧಾರಿತ ಬೇರೆಲ್ಲಾ ಚಿತ್ರಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಇಡೀ ಚಿತ್ರದುದ್ದಕ್ಕೂ ನಾಜಿ಼ ಕ್ರೌರ್ಯದ ಕರಿಛಾಯೆ ಕಾಣಸಿಗುತ್ತದಾದರೂ ಅದನ್ನೂ ಮೀರಿದ ಜೀವನ ಪ್ರೀತಿ, ಸಕರಾತ್ಮಕತೆ, ಆಶಾವಾದ ಚಿತ್ರವನ್ನು ಮೇರುಕೃತಿಯನ್ನಾಗಿಸಿದೆ‌.

ರಾಬರ್ಟೋ ಬೆನಿನಿ, ನಿಕೋಲೆಟ್ಟಾ ಬ್ರಾಸ್ಚಿ, ಜಾರ್ಜಿಯೋ ಕ್ಯಾನ್ತರಿನಿ ಅವರು ಕ್ರಮವಾಗಿ ಗೈಡೋ ಓರೆಫೈಸ್, ದೋರಾ ಓರೆಫೈಸ್ ಹಾಗೂ ಜೋಶುವಾ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇಟಲಿಯಾದ್ಯಂತ ಅತ್ಯಂತ ಯಶಸ್ವಿಯಾಯಿತು. ಬೆನಿನಿ ಅವರಿಗೆ ಇಟಲಿಯ ನ್ಯಾಷನಲ್ ಹೀರೋ ಇಮೇಜ್ ತಂದುಕೊಟ್ಟ ಸಿನಿಮಾ ಇದು. ಪೋಪ್ ಜಾನ್ ಪಾಲ್ II ಅವರು ಈ ಚಿತ್ರವನ್ನು ತಮ್ಮ ಅತೀ ಇಷ್ಟದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ಒಂದು ಎಂದು ಹೆಸರಿಸಿದ್ದಾರೆ.

1998ರ ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಗ್ರಾಂಡ್ ಪ್ರಿಕ್ಸ್  ಪ್ರಶಸ್ತಿಯಿಂದ ಪುರಸ್ಕೃತವಾಗಿರುವ ಲೈಫ್ ಈಸ್ ಬ್ಯೂಟಿಫುಲ್, 71ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಬೆನಿನಿಯವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಮೇತ, ಅತ್ಯುತ್ತಮ ಮೂಲ ಸಂಗೀತ ಹಾಗೂ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 1998ರ ಟೊರೆಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜನರ ಆಯ್ಕೆಯ ಪ್ರಶಸ್ತಿಯೊಂದಿಗೆ ಇನ್ನೂ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ.

ಚಿತ್ರ ಬಿಡುಗಡೆಯಾದ ನಂತರ ಯಹೂದಿಗಳ ಹತ್ಯಾಕಾಂಡವನ್ನು ಹಾಸ್ಯಾಸ್ಪದವಾಗಿ ತೋರಿಸಿ ಪೀಡಿತರ ನೋವನ್ನು ಹಗುರವಾಗಿ ಕಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತಾದರೂ ಕಠಿಣ ಸಂದರ್ಭಗಳಲ್ಲಿ ಕಲ್ಪನಾಶಕ್ತಿಯನ್ನು ಬಳಸಿಕೊಂಡು ನಕರಾತ್ಮಕತೆಯಲ್ಲಿಯೂ ಹೇಗೆ ಸಕರಾತ್ಮಕತೆಯನ್ನು ಕಾಣಬಹುದು ಎಂಬುದಕ್ಕೆ ಭಾಷ್ಯದಂತಿದೆ ಈ ಚಿತ್ರ. ನಮ್ಮ ಕೈ ಮೀರಿ ಎದುರಾಗುವ, ನಾವು ಪರಿಹರಿಸಲಾಗದ ಸಮಸ್ಯೆಗಳ ಬಗ್ಗೆಯೇ ಯೋಚಿಸುತ್ತಾ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬಾರದು ಎಂಬುದನ್ನು ಅತ್ಯಂತ ಸಕಾರಾತ್ಮಕವಾಗಿ ಹೇಳುವ ಈ ಚಿತ್ರ ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಇಂಗ್ಲೀಷ್ ಅಡಿಬರಹದೊಂದಿಗೆ ಹಾಗೂ ಇಂಗ್ಲೀಷ್ ಭಾಷೆಯಲ್ಲೂ ಲಭ್ಯವಿರುವ ಈ ಚಿತ್ರವನ್ನು ಆಸಕ್ತರು ಯೂ ಟ್ಯೂಬಿನಲ್ಲಿ ವೀಕ್ಷಿಸಬಹುದು.


ಮಂಗಳವಾರ, ಮೇ 26, 2020

ಇವರನ್ನೇನ್ರೀ ಮಾಡೋಣ.....??

ನನಗೆ ಮಗಳು ಹುಟ್ಟಿದಾಗಲೇ ನಿರ್ಧರಿಸಿಬಿಟ್ಟಿದ್ದೆ. ಅವಳು ನನ್ನ ಅಮ್ಮ, ಆಯಿ, ಮಾ, ಮಾಯಿ, ಅಪ್ಪೆ, ಅಬ್ಬೆ, ಅವ್ವ ಏನಾರಾ ಅನ್ಲೀ ಇಲ್ಲಾ ಹೆಸರು ಹಿಡಿದು "ಲೇ ನೀತಾ ಬಾರೇ ಇಲ್ಲಿ" ಅಂತ ಕರೆದ್ರೂ ತೊಂದ್ರೆ ಇಲ್ಲ ಆದ್ರೆ ಅಪ್ಪಿ ತಪ್ಪಿನೂ ಅವಳ ಬಾಯಲ್ಲಿ "ಈಜಿಪ್ಟಿಯನ್ ಮಮ್ಮಿ" ಆಗ್ಬಾರ್ದು ಅಂತ ಪ್ರತಿಜ್ಞೆ ಮಾಡಿದ್ದೆ.

ಹುಟ್ಟಿದಾಗಿನಿಂದ ಇದೇ ಟ್ರೈನಿಂಗು. ಬಾಣಂತನದಲ್ಲಿ ಯಾವೆಲ್ಲ ಐಟಂಗಳು ನಿಷಿದ್ಧವೋ ಆ ಲಿಸ್ಟಿಗೆ ಮಮ್ಮಿ ಅನ್ನೋದ್ನೂ ಸೇರಿಸಿ ಮೂಟೆ ಕಟ್ಟಿ ಅಟ್ಟಕ್ಕೆ ಎಸೆದಾಯ್ತು. ಇನ್ನು ಮನೆಗೆ ಮಗು ನೋಡೋಕೆ ಬರೋ ನೆಂಟ್ರು "ಎಲ್ಲಿ ಮಮ್ಮಿ ಅನ್ನು" ಅಂದಾಗೆಲ್ಲಾ ಅವ್ರನ್ನ ಬಡ್ದು ಬಾಯಿಗ್ ಹಾಕ್ಕೊಂಬಿಡ್ಲಾ ಅನ್ಸೋದು. ನೋಡೋಷ್ಟು ನೋಡ್ದೇ... ಆಮೇಲೆ ನೈಸಾಗಿ ಅವರಿಗೇ ಹೇಳೋಕೆ ಶುರು ಮಾಡ್ದೆ.. "ನೋಡಿ ಅಮ್ಮಾ ಅಂತ ಹೇಳ್ಕೊಡಿ.." ಅಂತ. ಅವಳು ತೊದಲುತ್ತಾ ನುಡಿ ಕಲಿತು "ಅಮ್ಮಾ" ಅನ್ನೋಕೆ ಶುರು ಮಾಡ್ದಾಗ ಯುದ್ಧ ಗೆದ್ದಷ್ಟು ಖುಷಿ.

ಇಷ್ಟೆಲ್ಲಾ ಸಾಹಸ ಮಾಡಿ ಜತನದಿಂದ ಮಗಳನ್ನು "ಮಮ್ಮಿ"ಯಿಂದ ಕಾಪಾಡಿಕೊಂಡಿದ್ದೆ. "ಮಮ್ಮಿ" ವೈರಸ್ ಅಟ್ಯಾಕ್ ಆಗ್ದೇ ಇನ್ನೇನು ಎರಡು ವರ್ಷ ತುಂಬುತ್ತೆ  ಅಂತ ಖುಷಿಯಲ್ಲಿರೋವಾಗ್ಲೇ ನಿನ್ನೆ ಮಟಮಟ ಮಧ್ಯಾಹ್ನ "ಮsssಮ್ಮೀsss" ಅಂತ ರಾಗವಾಗಿ ಹೇಳ್ಕೊಂಡು ಓಡ್ಬಂದಿದ್ದು ನೋಡಿ ನನಗೆ ಹೇಗಾಗ್ಬೇಡ ನೀವೇ ಹೇಳಿ? 

ನನ್ನ ಪ್ರತಿಜ್ಞೆ ನುಚ್ಚು ನೂರಾಗಿ, ನಂಗೆ ತಾರಾಮಾರ ಸಿಟ್ಟು ಬಂದು ಈ ವೈರಸ್ ಎಲ್ಲಿಂದ ಅಟ್ಯಾಕ್ ಆಯ್ತು ಅಂತ ಕಂಡ್ಹಿಡಿಲೇ ಬೇಕು ಅಂತ ಹೊಸ ಪ್ರತಿಜ್ಞೆ ಮಾಡಿದೆ. ನಮ್ಮ ವೈಭವನಿಗಿಂತ ಫಾಸ್ಟ್ ಎಂಡ್ ಪರ್ಫೆಕ್ಟ್ ಆಗಿ ಪತ್ತೇದಾರಿಕೆ ಮಾಡಿ ಹತ್ತೇ ಹತ್ತು ನಿಮಿಷದಲ್ಲಿ ಕಂಡ್ಹಿಡಿದೂ ಬಿಟ್ಟೆ.

ಆ ಸಿಟ್ಟನ್ನು ಹೊರಗೆ ಹಾಕ್ಲಿಕಂತಲೇ ಪೆನ್ನು ಹಿಡಿದು... ಸಾರಿ ಮೊಬೈಲ್ ಹಿಡಿದು ಸ್ಕ್ರೀನ್ ಒಟ್ಟೆಯಾಗಿ ಮೊಬೈಲ್ ಗುಡ್ಸಿ ಗುಂಡಾಂತ್ರ ಆದ್ರೂ ತೊಂದ್ರೆ ಇಲ್ಲ ಅಂತ ಕೀಪ್ಯಾಡ್ ಕುಟ್ಟಿ ಈ ಲೇಖನ ಬರೀತಿದ್ದೀನಿ ಆಯ್ತಾ.

ಇದಿಷ್ಟು ಮುನ್ನುಡಿ. ಈಗ ವಿಷ್ಯಕ್ಕೆ ಬರ್ತೀನಿ.

ನನ್ನ ಮಗಳಿಗೆ ಈ ಮಮ್ಮಿ ವೈರಸ್ ಹತ್ತಿಸಿದೋಳು ಯಾರು ಗೊತ್ತಾ.... 

ಅವಳೇ... ಅವಳೇ..

"ಸಮಯವು ನಿಮ್ಮತ್ತ ಮಂದಹಾಸ ಬೀರುವಂತಾಗಿದೆ...ನಾನು ನಿಮ್ಮವಳೇ ವಿಜೆ ಅಮೈರಾ... 

ಸರಿ ಹೇಳಿದ್ನಾ ಮಮ್ಮಿ?....

ಮಮ್ಮಿ….???

ಮಮ್ಮಿ….???

ಮಮ್ಮಿ…..!!????"

ಈ ಸಂತೂರ್ ಮಮ್ಮಿನೇ ನನ್ನ ಮಗಳಿಗೆ ಮಮ್ಮಿ ವೈರಸ್ ಹತ್ಸಿದ್ದು ನೋಡಿ….

ಅವಳ ಮುಸುಂಟಿಗೆ ನಾಲ್ಕು ಬಡ್ದು ಹಾಕಿರೋ ಮೇಕಪ್ ಅಷ್ಟೂ ಉದ್ರಿಸಿಬಿಡೋಣ ಅನ್ಸಿತ್ತು. ಆದ್ರೆ 20 ರುಪಾಯಿ ಸೋಪಿಗೋಸ್ಕರ ಸಾವ್ರಾರು ರೂಪಾಯಿಯ ಟಿವಿಯನ್ನು ಯಾಕೆ ಒಡ್ಯೋದು ಅಂತ ಸೈಲೆಂಟಾದೆ...

ಮಾಯಾ ಪೆಟ್ಟಿಗೆಯೆಂಬ ಮಾಯಾಂಗನೆಯ ಕೈಯಲ್ಲಿರುವ ಮಂತ್ರದಂಡವೇ ಈ ಜಾಹೀರಾತು... ಇದು ಮಾಡೋ ಅವಾಂತರ ಒಂದಾ ಎರಡಾ? ಈ ಸೋಪಿನ ವಿಷ್ಯನೇ ತಗೋಳಿ... 

'ಮಗಳಿಗಿಂತಲೂ ಚಿಕ್ಕಪಾಪು ಸಂತೂರ್ ಮಮ್ಮಿ

ಗುಲಾಬಿಗಿಂತಲೂ ಒನಪು ಲಕ್ಸ್ ಮಮ್ಮಿ

ಹಾಲಿಗಿಂತ ಬಿಳುಪು ಡವ್ ಮಮ್ಮಿ

ಅಮೃತಶಿಲೆಗಿಂತ ನುಣುಪು ರೆಕ್ಸೋನಾ ಮಮ್ಮಿ

ಎಲ್ಲರಿಗಿಂತಲೂ ಶಾನೇ ಟಾಪು ಪತಂಜಲಿ ಮಮ್ಮಿ...'

ನಮ್ಮನೆ ಹಳೆಯಮ್ಮ(ನನ್ನಜ್ಜಿ)  90+ ವಯಸ್ಸಿನ ಚಿರಯುವತಿ. ಇವ್ರು ಡೈಲೀ ಲಕ್ಸ್ ಮಾರ್ಜಕದಲ್ಲೇ ಮಜ್ಜನ ಮಾಡೋದು. ಅದು ಬಿಟ್ಟು ಬೇರೆ ಬ್ರಾಂಡ್ ಆಗೋಲ್ಲ ನಮ್ಮಜ್ಜಿಗೆ. ಇಂತಹ ನೀಯತ್ತಿರೋ ನಮ್ಮಜ್ಜಿನ ಲಕ್ಸ್ ಮಾರ್ಜಕಕ್ಕೆ ಬ್ರಾಂಡ್ ಮಾಡೆಲ್ ಮಾಡ್ಬಹುದಾ ಅಂತ….? ವಯಸ್ಸಾಗಿದೇ ಅನ್ನೋದೊಂದು ಬಿಟ್ರೆ ನಮ್ಮಜ್ಜಿನೂ ಕರೀನಾ ಕಪೂರೇ…..

ಇನ್ನು ಈ ಮುಸುಡನ್ನು ಗೋಡೆ ಸುಣ್ಣದಷ್ಟು ಬೆಳ್ಳಗಾಗಿಸುವ ಫೇಸ್ ಕ್ರೀಮುಗಳದ್ದೋ ಇನ್ನೊಂದು ವ್ಯಥೆ.

ಇವರ ಪ್ರೋಡಕ್ಟುಗಳ ಮೇಲೆ ಇವರಿಗೇ ನಂಬಿಕೆ ಇರುವುದಿಲ್ಲ. ಕೇಸರಿ, ಚಂದನ, ಲೋಳೆಸರ,ಪಪ್ಪಾಯಿ, ಸ್ಟ್ರಾಬೆರಿ, ಕಲ್ಲಂಗಡಿ, ನಿಂಬೆ, ಜೇನು, ಮಣ್ಣು ಮಸಿ ಅಂತ ದಿನಕ್ಕೊಂದು ಐಟಂ ಹಾಕಿ ರುಬ್ಬಿ ನಮ್ಮ ಮುಖಾರವಿಂದವನ್ನು ಬ್ಲೀಚಿಂಗ್ ಪೌಡರ್ ಹಾಕಿ ತಿಕ್ಕಿರೋ ಬಚ್ಚಲಿನ ತರ ಪಳ್ಗುಟ್ಟಿಸ್ತೀವಿ ಅಂತಾರೇ.

ಈ anti wrinkle ಕ್ರೀಮ್ ಹೇಗೆ ಕೆಲ್ಸ ಮಾಡುತ್ತೆ ಅನ್ನೋ ಜಿದ್ದಿಗೆ ಬಿದ್ದಿದ್ದ ನನ್ನ ಪ್ರಯೋಗಮುಖಿ ತಮ್ಮನ ಕಣ್ಣಿಗೆ ಬಿದ್ದದ್ದು ನಮ್ಮಜ್ಜಿ.. ಅಜ್ಜಿ ಮುಖದ ರಿಂಕಲ್ ಗಳನ್ನೆಲ್ಲಾ ತೆಗೆದು ಅವರ ಮುಖನಾ ರಿಂಗಾ ರಿಂಗಾ ರೋಸಸ್ ತರ ಮಾಡ್ಬೇಕು ಅಂತ ಒಂದು ತಿಂಗ್ಳು ಕ್ರೀಮ್ ಬಳ್ದಿದ್ದೇ ಬಳ್ದಿದ್ದು...ಬುಲ್ ಡಾಗ್ ತರ ಇದ್ದ ಅಜ್ಜಿ ಮುಖ ಲ್ಯಾಬ್ರಡಾರ್  ತರ ಆಗ್ಲೇ ಇಲ್ಲ ನೋಡಿ....

ಈಗ ಅದೇನೋ ಹೊಸದಾಗಿ HD ಗ್ಲೋ ಕ್ರೀಮ್ ಬೇರೇ ಬಂದಿದ್ಯಲ್ಲಾ... ಅದ್ನ ಹಚ್ಕೊಂಡವರು ಬರೀ ಕಣ್ಣಿಗೆ ಕಾಣ್ತಾರಾ ಇಲ್ಲ HD ಗ್ಲಾಸ್  ಹಾಕ್ಕೊಂಡ್ರೆ ಮಾತ್ರಾ ಕಾಣ್ತಾರಾ ಅನ್ನೋದು ನನ್ನ ಹೈ ಡೆಫಿನಿಷನ್ ಡೌಟ್..

ಇವರೆಲ್ಲರಿಗಿಂತ ಭಯಂಕರ ವಿಚಿತ್ರ ನಮ್ಮ ದಾಳಿಂಬೆ ಹಲ್ ಸೆಟ್ಟುಗಳ ರಕ್ಷಣೆಕಾರರದ್ದು. 

ನಿಮ್ಮ ಟೂತ್ಪೇಸ್ಟಿನಲ್ಲಿ......

ಉಪ್ಪು ಇದೆಯೇ?

ಬೇವು ಇದೆಯೇ?

ಲವಂಗ ಇದೆಯೇ?

ಕರ್ಪೂರ ಇದೆಯೇ?....

ಇನ್ನು ಸ್ವಲ್ಪ ದಿನ ಹೋದ್ರೆ ಈ ಪುಣ್ಯಾತ್ಮರು 'ನಿಮ್ಮ ಟೂತ್ಪೇಸ್ಟಿನಲ್ಲಿ ಹಲ್ಲು ಇದೆಯೇ?' ಅಂತಲೇ ಕೇಳ್ತಾರೆ ನೋಡ್ತಿರಿ. ಈ ದಂತಮಂಜಕದ ವರಸೆನೇ ನಂಗೆ ಬೇಜಾರು.

ನಾವು ಭಾರತೀಯರು ಪುರಾತನ ಕಾಲದಿಂದಲೂ ಮರ್ಯಾದೆಯಿಂದ ಒಲೆ ಕೆಂಡದ ಚೂರಲ್ಲಿ ಜೀಂಕ್ ಜೀಂಕ್ ಅಂತ ಹಲ್ ತಿಕ್ಕಿ ಬಿಸಾಕ್ತಿದ್ವಿ. ಈ ಯುವನ ದೇಶದ ಬಿಳಿತಲೆ ಕೆಂಪು ಮುಸುಡಿನ ಮಹಾನುಭಾವರು ಬಂದು ಈ ತರ ಮಾಡ್ಬಾರ್ದು, ಇದು ಅನ್ ಹೈಜೀನಿಕ್ ಕಣ್ರೋ ಅಂತ ಕರಿ ಮಸಿ ಬಿಸಾಡಿ ಶ್ವೇತ ಬಿಳುಪಿನ ಪೇಸ್ಟ್ ಕೈಗಿಟ್ರು. ಅಲ್ಲಿಂದ ತಗೊಳಪ್ಪ ಶುರುವಾಯ್ತು…. ಬ್ರಶ್ ತಗೊಂಡು ಗಸ ಗಸ ಉಜ್ಜಿದ್ದೇ ಉಜ್ಜಿದ್ದು....

ನಿಮ್ಮ ಬ್ರಶ್ ಹಲ್ಲಿನ ಕೋಣೆಗಳನ್ನು ತಲುಪುತ್ತಿಲ್ಲ, ಅದು ಫ್ಲೆಕ್ಸಿಬಲ್ ಇಲ್ಲ, ಸ್ಮೂತ್ ಇಲ್ಲ, ಕ್ರಿಸ್ಕ್ರಾಸ್ ಇಲ್ಲ ಅಂತ ನೂರಾರು ತರದ ಬ್ರಷ್ಗಳು ಬೇರೆ.

ಬೆಳ್ಳಗಿದ್ದ ಪೇಸ್ಟ್ ಕೆಂಪಾಯ್ತು, ನೀಲಿ ಆಯ್ತು, ಬಿಳಿ ನೀಲಿ ಪಟ್ಟಾಪಟ್ಟಿನೂ ಆಯ್ತು ಅರಿಶಿನ, ಚಂದನದ ಬಣ್ಣ ಆಯ್ತು, ಪೇಸ್ಟೊಳಗೆ ಕೂಲಿಂಗ್ ಕ್ರಿಸ್ಟಲ್ಸ್ ಬಂದು ಬೆಳಿಗ್ಗೆ ಬ್ರಷ್ ಬಾಯಿಗೆ ಹೆಟ್ಟಿದ ಕೂಡ್ಲೇ ಶಿಮ್ಲಾ, ಕಾಶ್ಮೀರಕ್ಕೆ ಹೋಗ್ಬಂದ ಫೀಲ್ ತಗೊಂಡು ಆಯ್ತು, ಮೌತ್ ವಾಶ್ ಬಂತು ಬಾಯೆಲ್ಲಾ ಸು'ನಾಥ' ಬರೋ ತರ ಆಯ್ತು. ಈ ಬದಲಾವಣೆಗಳ ಬಗ್ಗೆ ಬೇಜಾರಿಲ್ಲ ನಂಗೆ..... 

ಆದ್ರೆ… ಆದ್ರೆ....

ಇಷ್ಟೆಲ್ಲಾ ಆದ್ಮೇಲೆ ಈಗ..... ಈಗ..... 

ಈ ಡಬ್ಬಾ ನನ್ಮಕ್ಕಳು ಆಕ್ಟೀವೇಟೆಡ್ ಚಾರ್ಕೋಲ್ ಟೂತ್ಪೇಸ್ಟ್ ಬಳಸಿ ಹಲ್ಲನ್ನು ಹೊಳೆಸಿ ಅಂತಿದ್ದಾರಲ್ಲ..,

ಮುಂಚೆ ನಾವ್ ಹಿಡ್ಕೊಂಡಿದ್ದ ಮಸಿಕೆಂಡ ಏನ್ ಸುಟ್ಟ ಗೇರ್ ಬೀಜದ್ಹಾಗೆ ಕಾಣ್ಸಿತ್ತಾ ನಿಮ್ಗೆ????

ಇದೆಲ್ಲಕ್ಕಿಂತ ಹೈಲೀ ಇರಿಟೇಟಿಂಗ್ ಅಂದ್ರೆ.....

ಈ ಟಾಯ್ಲೆಟ್ ಕ್ಲೀನರುಗಳು...

ಏನಾದ್ರೂ ತಿನ್ನೋಣ ಅಂತ ಕೈಗೆ ತಗೊಂಡ್ರೇ ಸಾಕು…. ಕೈ ಬಾಯಿಯ ಸನಿಹವಾಗೋ ಟೈಮಲ್ಲಿ ಠಣ್ ಅಂತ ಪ್ರತ್ಯಕ್ಷವಾಗ್ತಾರೆ ಈ ಕ್ಲೀನರುಗಳು.

ವಾಹ್.... ಏನ್ ಟೈಮಿಂಗೂ ಗುರೂ...

ಯಾರ್ಯಾರ್ದೋ ಮನೆಯ ಶುಭ್ರವಾದ ಟಾಯ್ಲೆಟ್ಟಿಗೆ  ಹೋಗಿ ಕ್ಲೀನ್ ಮಾಡೋದಲ್ದೇ,

"ನಾವು ನಿಮ್ಮ ಮನೆಗೂ ಬರಬೇಕೇ???? ಹಾಗಿದ್ದರೆ ಈ ಕೂಡಲೇ ಮಿಸ್ ಕಾಲ್ ಕೊಡಿ......" ಅಂತ ಚಮಕ್ ಬೇರೆ.

ಇಷ್ಟೆಲ್ಲಾ ಬಿಲ್ಡಪ್ ಕೊಡ್ತೀರಲ್ಲಾ, ಅಷ್ಟು ಧಮ್ ಇದ್ರೆ, ಕೊಳೆತು ಗಬ್ಬು ನಾರುವ ಪಬ್ಲಿಕ್ ಟಾಯ್ಲೆಟ್ಗಳನ್ನು ಒಂದ್ಸಾರಿ ಕ್ಲೀನ್ ಮಾಡಿ ತೋರ್ಸಿಬಿಡಿ ನೋಡುವಾ..

ಅಂದ್ಹಾಗೆ ಈ ಟಾಯ್ಲೆಟ್ ಕ್ಲೀನರ್ ಹಾಗೇ ಫ್ಲೋರ್ ಕ್ಲೀನರ್ ಕಂಪನಿಯವರಿಗೆ ನನ್ನದೊಂದು ಡೌಟ್.

ಅಲ್ಲಾ ಸ್ವಾಮಿ, ನಿಮ್ಮ ಎಲ್ಲಾ ಪ್ರಾಡಕ್ಟ್ಸ 99.9% ಜೆರ್ಮ್ಸ್ ಕಿಲ್ ಮಾಡಿ, ಒಂದು ಕೀಟಾಣುನ ಮಾತ್ರ ಉಳ್ಸಿರುತ್ತಲ್ಲ ಅದ್ಯಾಕೆ? ಅವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಂತಲಾ?? ಇಲ್ಲಾ ಕೀಟಾಣುಗಳ ಸಂತತಿ ಸಂಪೂರ್ಣ ನಶಿಸದಿರಲಿ ಅಂತಲಾ? ನಂಗ್ಯಾಕೋ ಅನುಮಾನ.... 100% ಕೀಟಾಣುಗಳು ಸತ್ರೆ ನಿಮ್ಮ ಪ್ರಾಡಕ್ಟ್ ಯಾರೂ ಪರ್ಚೇಸ್ ಮಾಡಲ್ಲ ಅಂತ್ಹೇಳಿ ಆ .1% ಕೀಟಾಣು ಉಳ್ಸಿದ್ರೇನೋ ಅಂತ.

ಹೀಗೆ ಹೇಳ್ತಾ ಹೋದ್ರೆ ಇವ್ರ ಪುರಾಣ ಇನ್ನೂ ತುಂಬಾ ಇದೆ. ಅದು ಬಿಟ್ಹಾಕಿ. ಈ ಮಂಡೆಕೆಟ್ ಜಾಹೀರಾತುಗಳು ಸಾಲ್ದೂ ಅಂತ ನಮ್ಮನ್ನ ಮಂಗ್ಯ ಮಾಡೋಕೇ ಇವರತ್ರ ಇರೋ ಇನ್ನೆರಡು ಅಸ್ತ್ರಗಳು..... 

ಒಂದು ಡಿಸ್ಕೌಂಟು..... ಇನ್ನೊಂದು ನೋ ಕೌಂಟು.....

ಅರೇ... ಡಿಸ್ಕೌಂಟೇನೋ ಗೊತ್ತಾಯ್ತು, ಇದೇನು ನೋ ಕೌಂಟು ಅಂದ್ರಾ????

ನೌ ಕೌಂಟ್ ಅಂದ್ರೇ.... ಇದು ಕೊಂಡರೆ ಅದು ಸಂಪೂರ್ಣ ಫ್ರೀ..... ಫ್ರೀ...... ಫ್ರೀ..... ಅಂತಾರಲ್ಲ ಅದು.

ಈ ಡಿಸ್ಕೌಂಟ್ ಅನ್ನೋದು ನಮಗೇ ತಿಳಿಯದೇ ನಮ್ಮನ್ನು ಮುಂಡಾಯ್ಸೋ ಸೂಪರ್ ವಿಧಾನ. ಇದ್ರ ಬೇಸ್ ವೆರಿ ಸಿಂಪಲ್. 1 ರೂಪಾಯಿ ಐಟಂನ 10ರೂಪಾಯಿ ಅನ್ನೋದು. ಆಮೇಲೆ ನೀವು ನಿಮ್ಮ ಚೌಕಾಸಿ ಕೌಶಲ್ಯ ಎಲ್ಲಾ ತೋರ್ಸಿ ಮುಗ್ದ ಮೇಲೆ, ಏನೋ ಪಾಪ ನಿಮ್ಗೆ ಅಂತ ಲಾಸ್ಟ್ 5ರೂಪಾಯಿಗೆ ಕೊಡ್ತೀನಿ. ಬೇಕಾದ್ರೇ ತಗೊಳ್ಳಿ ಅನ್ನೋದು.

ಆಗ ನಾವು 10 ರೂಪಾಯಿ ವಸ್ತು 5ರೂಪಾಯಿಗೆ ಬಂತು ಅಂತ ನಮ್ಮ 4ರೂಪಾಯಿ ಮುಂಡಾಮೋಚ್ತು ಅನ್ನೋ ಐಡಿಯಾನೇ‌ ಇಲ್ದೇ  ಜಂಬದ ಕೋಳಿ ಆಗೋದು.

ಇಷ್ಟೇ ಲಾಜಿಕ್. ಈ ಡಿಸ್ಕೌಂಟಿಂಗಿನ ಇನ್ನೊಂದು ಪ್ರಸಿದ್ದ ಸ್ಟ್ರಾಟೆಜಿ "ಡಿಜಿಟ್ಸ್ ಪ್ಲೇ" ಸಂಖ್ಯೆಗಳ ಆಟ. ಒಂಬತ್ತು ಅನ್ನೋದು ಡಿಸ್ಕೌಂಟರ್ ಗಳ ಹಾಟ್ ಫೇವರಿಟ್ ಅಂಕೆ. ಕೇವಲ 99, ಕೇವಲ 999, ಕೇವಲ 9999......

"ಅಯ್ಯೋ ನೋಡೇ, ಈ ಟಾಪ್ ಜಸ್ಟ್ 999 ಗೊತ್ತಾ?" 

"ಹೌದೇನೇ 999 ಅಷ್ಟೇನಾ? ಬರೀ ತ್ರೀ ಡಿಜಿಟ್ಸ್ ಅಮೌಂಟ್" ಅಂತ ಬೀಗೋ ಮುಂಚೆ ಒಮ್ಮೆ ಯೋಚ್ನೆ ಮಾಡಿ...

999+1 =1000....... ಅಂದ್ರೆ... 3 ಡಿಜಿಟ್ಸ್ + 1= 4 ಡಿಜಿಟ್ಸ್

9999+1=10000.......

ಇಟ್ಸ್ ಸಿಂಪಲ್.....

ಇನ್ನು ಒಂದು ಕೊಂಡರೆ ಒಂದು ಉಚಿತದಷ್ಟು ಮರ್ಲ್ ಸ್ಕೀಮ್ ಇನ್ನೊಂದಿಲ್ಲ ನನಗೆ. ಈಗ 'ಪುಳಿಯೋಗರೆ ಪೌಡರ್ ತಗೊಂಡ್ರೆ ಸಾಂಬಾರ್ ಪುಡಿ ಉಚಿತ, ಟೀ ಪುಡಿಯೊಂದಿಗೆ ಗ್ಲಾಸ್ ಉಚಿತ' ಅಂದ್ರೆ ಓಕೆ. ಏನೋ ಒಂದು ಲಿಂಕ್ ಸಿಗುತ್ತೆ.

ಆದ್ರೆ ಈ ಸೋಪು ತಗೊಂಡ್ರೆ ಚಮಚ ಉಚಿತ,

ಶ್ಯಾಂಪುವಿನೊಂದಿಗೆ ಪೆನ್ನು ಉಚಿತ ಅಂತ ಕೊಡ್ತಾರಲ್ಲ… ಅದೇ ನನ್ನ ತಲೆ ಕೆಡ್ಸೋದು. ಸ್ಪೂನ್ ಫ್ರೀ ಕೊಡೋಕೆ ಅದೇನು ಸೋಪಾ ಇಲ್ಲಾ ಟೊಮೇಟೋ ಸೂಪಾ??

ಶ್ಯಾಂಪೂ ಜೊತೆ ಪೆನ್ನು ಫ್ರೀಯಾಗಿ ಕೊಡೋದು ಮಾರಾಯ್ರೇ. ಮೋಸ್ಟ್ ಲೀ ಶ್ಯಾಂಪೂ ಬಳಸೋಕೆ ಶುರು ಮಾಡಿದ್ಮೇಲೆ ತಲೆಕೂದ್ಲು ಎಷ್ಟು ಸೆಂಟಿಮೀಟರ್ ಉದ್ದ ಆಗಿದೆ ಅಂತ ವಾರವಾರ ಅಳತೆ ತೆಗ್ದು ಬರೆದಿಡಿ ಅಂತಿರ್ಬಹುದೇನೋ.

ಎಷ್ಟೋ ಸಲ ಜಾಹೀರಾತು ನೋಡಿ ನಾವು ಕಳ್ದೇ ಹೋಗಿರ್ತೀವಿ. ಆದರೆ ವಾಸ್ತವವೇ ಬೇರೆ ಇರುತ್ತೆ. ನಾನು ITCಯವರ ಕ್ಲಾಸ್ಮೇಟ್ ನೋಟ್ ಬುಕ್ಕಿನ ಜಾಹೀರಾತು ನೋಡಿ ಬಹಳ ಇಂಪ್ರೆಸ್ ಆಗಿದ್ದೆ. ಆ ಪುಸ್ತಕವೂ ಹಾಗೇ. ಚೆಂದದ ಹೊರ ರಟ್ಟು, ಓಪನ್ ಮಾಡಿದೊಡನೇ ಒಳಬದಿಯಲ್ಲಿ 'ಡು ಯು ನೋ' ಅನ್ನೋ ಮಾಹಿತಿಯುಕ್ತ ವಿಚಾರಗಳು, ಕೊನೆಯ ಪೇಜಿನ ಪದಬಂಧ ಎಲ್ಲಾ ನನ್ನನ್ನು ಮಂತ್ರಮುಗ್ಧಳನ್ನಾಗಿಸಿತ್ತು. ಯಾವಾಗಲೂ ಅದೇ ಪುಸ್ತಕ ಬೇಕಿತ್ತು ನನಗೆ. ಒಮ್ಮೆ ಉಗ್ರಕುತೂಹಲದಿಂದ ITC  ಅಂತ ಗೂಗಲ್ ಮಾಡಿದೆ. ITC ವಿಸ್ತೃತ ರೂಪ ನೋಡಿ ನನ್ನ ಕಣ್ಣನ್ನು ನನಗೇ ನಂಬೋಕಾಗ್ಲಿಲ್ಲ…. ITC ಮುಂಚೆ ಇಂಪೀರಿಯಲ್ ಟೊಬ್ಯಾಕೋ ಕಂಪನಿ ಆಗಿದಿದ್ದು ಈಗ ಇಂಡಿಯನ್ ಟೊಬ್ಯಾಕೋ ಕಂಪನಿ ಆಗಿದೆ ಅಂತಿತ್ತು. ಏಷ್ಯಾದ 81% ಬೀಡಿ, ಸಿಗರೇಟ್ ಮಾರಾಟಗಾರರು ಇವರೇ. ಗೋಲ್ಡ್ ಫ್ಲೇಕ್ಸ್ ಸಿಗರೇಟು ಬ್ರಾಂಡ್ ಇವರದ್ದೇ ಅಂತ ಆಗ ಗೊತ್ತಾಯ್ತು ನನಗೆ. ಆಶೀರ್ವಾದ್, ಸನ್ ಫೀಸ್ಟ್, ಬಿಂಗೋ, ಯಿಪ್ಪೀ, ಫಿಯಾಮಾ, ವಿವೆಲ್, ಸ್ಯಾವ್ಲಾನ್ ಎಲ್ಲಾ ಇವ್ರದ್ದೇ ಅಂತ ಅವತ್ತೇ ಗೊತ್ತಾಗಿದ್ದು.

ವಿಮಲ್ ಅಡ್ವರ್ಟೈಸ್ಮೆಂಟ್ ನೋಡಿದ್ರೆ ಅದು ಪಾನ್ ಮಸಾಲನೋ ಇಲ್ಲಾ ಕೇಸರಿ ಪ್ಯಾಕೇಟ್ಟೋ ಅನ್ನೋ ಅನುಮಾನ ಬರೋದು ಸಹಜವೇ. 'ಬಸುರಿ ಹೆಣ್ಣಿಗೆ ಹಾಲಿಗೆ ಒಂದು ಪ್ಯಾಕ್ ವಿಮಲ್ ಬೆರೆಸಿ ಕೊಡಿ. ಕೇಸರಿಯಂತ ಪಾನ್ ಪರಿಮಳದ ಮಗು ಪಡೆಯಿರಿ' ಅನ್ನೋದೊಂದು ಬಾಕಿ ಇದೆ. ಈ ವಾಷಿಂಗ್ ಪೌಡರ್ ಗಳ ಅವತಾರವೋ ದೇವರಿಗೆ ಪ್ರೀತಿ. ಪೋರಪೋ ಅಂತೆ, ಗುಲೆಗುಲೆ ಅಂತೆ ಎಲ್ಲಾ ನೋಡಿ ನಾವು ಕುಲೆಕುಲೆ(ಪ್ರೇತ) ಆಗ್ದಿದ್ರೆ ಸಾಕು.

ತಮಾಷೆಯನ್ನು ಒತ್ತಟ್ಟಿಗಿಟ್ಟು ನೋಡಿದ್ರೂ ಈ ಜಾಹೀರಾತು ಎಂಬ ಮಾಯಾಜಾಲದ ಮಹಿಮೆಯೇ ಅಪಾರ. ಇದು ಇಲ್ಲದ್ದನ್ನು ಇದೆ ಎಂದು ಭ್ರಾಂತಿಗೊಳಿಸುವ‌ ಇಂದ್ರಜಾಲ. ಈ ಇಂದ್ರಜಾಲ ಬೇಡಬೇಡವೆಂದರೂ ನಮ್ಮನ್ನು ಸೆಳೆದು ನಮ್ಮ ದೈನಂದಿನ ವಸ್ತುಗಳ ಆಯ್ಕೆಯಲ್ಲಿ ತನ್ನಿರುವನ್ನು ಸ್ಪಷ್ಟಪಡಿಸುತ್ತದೆ.

ಬೇಡಬೇಡವೆಂದರೂ ಹುಚ್ಚುಚ್ಚು ಜಾಹೀರಾತುಗಳ ಮೂಲಕ ನಮ್ಮನ್ನು ಹಾಳ್ಮಾಡಿದ್ದು ಸಾಲ್ದು ಅಂತ ನನ್ನ ಪ್ರತಿಜ್ಞೆ ಯಕ್ಕುಟ್ಸಿ ನನ್ನ ಮಗಳ ಬಾಯಲ್ಲಿ ನನ್ನ ಈಜಿಪ್ಟಿಯನ್ ಮಮ್ಮಿ ಮಾಡಿದ ಇವರನ್ನೇನ್ರೀ ಮಾಡೋಣ?????

ಅಗೋ ಮತ್ತೆ ಬಂತು ನನ್ನ ಜಾನ್ಸನ್ ಬೇಬಿ….

'ಮಮ್ಮಿsss'....... ಅಂದ್ಕೊಂಡು.

ಥೋ….. ಮೊದ್ಲು ಇವಳ ಮಮ್ಮಿ ವೈರಸ್ ಗೆ ಮದ್ದು ಮಾಡ್ಬೇಕು. ನಾ ಹೊಂಟೆ.

ಹೋಗೋಕೂ ಮುನ್ನ.....

ನೀವೇ ಹೇಳಿ.....

ಇವರನ್ನೇನ್ರೀ ಮಾಡೋಣ???


ಅರ್ಪಣೆ: ಸಂತೂರ್ ಮಮ್ಮಿಗೆ



ಸೋಮವಾರ, ಮೇ 25, 2020

ಶಿಕ್ಷೆ

ಇದೆಂಥಾ ಮಂಪರು.....

ಕಣ್ತೆರೆಯಲೂ  ಸಾಧ್ಯವಾಗುತ್ತಿಲ್ಲ. ಕಣ್ರೆಪ್ಪೆಗಳು ತೆರೆದುಕೊಳ್ಳಲೇ ನಿರಾಕರಿಸುತ್ತಿವೆ. ಚಳಿ ಎನಿಸುತ್ತಿದೆ. ಕಾರಿನ ಎ.ಸಿ ಜಾಸ್ತಿಯಾಗಿದೆಯೇ? ಏನೋ ಚುಚ್ಚುತ್ತಿದೆಯಲ್ಲ ಬೆನ್ನಿಗೆ.... ಏನಿದು? 

ಕಲ್ಲು......!! ಕಾರಿನಲ್ಲಿ ಕಲ್ಲೇ??.... 

ಅಯ್ಯೋ......, ಇದು ಕಾರಲ್ಲ. ನೆಲ ...... ಮಣ್ಣು.....!! 
ನೆಲದಲ್ಲಿ ಮಲಗಿದ್ದೀನಲ್ಲ......
ಇದೆಲ್ಲಿದ್ದೀನಿ ನಾನು? ಕಾಡಿನಂತಿದೆ. ಇಲ್ಲಿಗೆ ಹೇಗೆ ಬಂದೆ ನಾನು? ಬೆಳಿಗ್ಗೆ ಪ್ರಸಾದನೊಂದಿಗೆ ಆಸ್ಪತ್ರೆಗೆ ಹೋಗಿದ್ದೆನಲ್ಲಾ? ಮಾಮೂಲಿ ಜ್ವರವೆಂದು ಮಾತ್ರೆ ಕೊಟ್ಟರು. ನನ್ನ ಮನೆಗೆ ಬಿಟ್ಟು ಆಫೀಸಿಗೆ ಹೋಗ್ತೀನಿ ಅಂದ. ಕಾರಿನಲ್ಲಿ ಮನೆಗೆ ಹೊರಟ್ವಿ......... 


ಮತ್ತೆ ಪ್ರಸಾದ ಎಲ್ಲಿ?? ಕಾರೂ ಕಾಣ್ತಿಲ್ಲ.
ಆಕ್ಸಿಡೆಂಟ್ ಏನಾದ್ರೂ ಆಗಿರ್ಬಹುದಾ????
ಹಾಗಿದ್ರೆ ನನಗೂ ಗಾಯ ಆಗಿರ್ಬೇಕಿತ್ತು. ಆದ್ರೆ ನಂಗೇನೂ ಆಗಿಲ್ಲ. ಮತ್ತೆ ಇವನೆಲ್ಲಿ ಹೋದ? ಕಾರು  ಹಾಳಾಗಿರಬಹುದಾ? ಅದಕ್ಕೆ ನನ್ನ ಇಲ್ಲಿ ಬಿಟ್ಟು ಮೆಕ್ಯಾನಿಕ್ ಕರ್ಕೊಂಡ್ ಬರೋಕೆ ಹೋಗಿರ್ಬಹುದಾ?
ಎಲ್ಲೇ ಹೋದ್ರೂ ಹೇಳಿ ಹೋಗ್ಬೇಕು ತಾನೇ? ಹೀಗೆ ಹೋದ್ರೆ ನನ್ಗೆ ಭಯ ಆಗೋಲ್ವೇ?


ಜಲಜಾ.... ನೋಡು ನಿನ್ನ ಮಗನ್ನ......ಛೇ, ಅದೇನು ಹುಡ್ಗನೋ. ಹೇಳ್ದೆ ಕೇಳ್ದೆ ಹೋಗಿದ್ದಾನೆ ನನ್ನೊಬ್ಬನ್ನೇ ಬಿಟ್ಟು. ಈಗಿನ ಕಾಲದ ಹುಡುಗ್ರನ್ನ ಅರ್ಥ ಮಾಡ್ಕೊಳ್ಳೋಕೇ ಆಗೋಲ್ಲ. ಮೆಕ್ಯಾನಿಕ್ ಕರ್ಕೊಂಡ್ ಬರೋಕೆ ಹೋಗ್ತೀನಿ ಅಂತ ಹೇಳ್ಬಿಟ್ಟು ಹೋಗೋಕಾಗೋಲ್ಲ್ವೇ?

ಇವ್ನು ಮೊದ್ಲಿಂದನೂ ಹೀಗೇನೇ ನೋಡು
ಆತುರಗಾರ. ಹಿಡಿದಿದ್ದೇ ಹಠ. ನೀನು ಮೊದ್ಲಿಂದನೂ ಹೇಳ್ತಿದ್ದೇ. ಜಾಸ್ತೀ ತಲೆಮೇಲಿಟ್ಟು ಮೆರೆಸಬೇಡಿ ಅಂತ. ಆದ್ರೆ ನಾನು ಕೇಳ್ಬೇಕಲ್ಲ ನಿನ್ನ ಮಾತು.
ಇವ್ನು ಹುಟ್ಟಿದಾಗ ಅದೆಷ್ಟು ಖುಷಿಯಾಗಿತ್ತು ನನಿಗೆ. ವಂಶೋದ್ದಾರಕ ಹುಟ್ಟಿದ ಅಂತ.  ಮುದ್ದಿಸಿದಷ್ಟೂ ಸಾಲ್ದು.  ನಿನ್ನಂತೂ ಎಷ್ಟು ಗೋಳ್ಹೊಕೊಳ್ಳೋನು.
ಕೇಳಿದ್ದಲ್ಲಾ ಬೇಕೇ ಬೇಕು. ಎಷ್ಟು ಹಠ. ನಾನಾದ್ರೂ ಯಾವುದನ್ನು ಕೊಡ್ಸಲ್ಲಾ ಅಂತಿದ್ದೇ ಹೇಳು? ಅವನ್ಕೇಳೋ ಮುಂಚೆನೇ ಎಲ್ಲಾ ಕಾಲ್ಬುಡದಲ್ಲಿ ಇಡ್ತಿದ್ದೆ.
ಕ್ಲಾಸಿಗೆ ಫಸ್ಟ್ ಬಂದಾಗೆಲ್ಲಾ ಇಡೀ ಬೀದಿಗೆ ಸಿಹಿ ಹಂಚ್ತಾ ಇರ್ಲಿಲ್ವಾ ನಾನು.

ಕಾಲೇಜಿಗೆ ಹೋಗೋವಾಗ ಅದೇ ಬೈಕ್ ಬೇಕೂಂದಾ ಅಂತ ನಾನು ಕೊಡ್ಸಿದಾಗ, 'ಅವನು ಹೇಳ್ದಾಗೆಲ್ಲ ಕೇಳ್ಬೇಡ್ರೀ. ಸ್ವಲ್ಪ ಹದ್ದುಬಸ್ತಲ್ಲಿಡಿ' ಅಂತ ನೀನೆಷ್ಟು ಬೈದಿದ್ದೆ ನಂಗೆ. ನಾನು ಕೇಳ್ತಾನೇ ಇರ್ಲಿಲ್ಲ ನಿನ್ನ ಮಾತು. ನಿಜ ಹೇಳ್ಬೇಕಂದ್ರೆ ಇವ್ನ ಓದು ಮುಗ್ದು ಕೆಲ್ಸ ಸಿಕ್ಕದ ಮೇಲೆನೇ ನಂಗೆ ನಿನ್ನ ಮಾತುಗಳು ಎಷ್ಟು ಸತ್ಯ ಅನ್ನಿಸಿದ್ದು.


ಪ್ರಸಾದಂಗೆ ನಿನ್ನ ಅಣ್ಣನ ಮಗಳು ನರ್ಮದಾನ ತಂದ್ಕೋಬೇಕು ಅಂತ ನಿಂಗೆಷ್ಟು ಆಸೆ ಇತ್ತು. ಅವ್ನು ರುಪಾಲೀ ನ ಮದ್ವೆ ಮಾಡ್ಕೊಂಡು ಬಂದಾಗ ನೀನೆಷ್ಟು ದುಃಖಪಟ್ಟಿದ್ದೇ? ನಂಗಂತೂ ಸಿಕ್ಕಾಪಟ್ಟೆ ಕೋಪ ಬಂದಿತ್ತು. ಕೂಗಾಡಿದ್ದೆ. ಒಂದು ಮಾತು ಹೇಳಿದ್ರೆ ನಾವೇ ಮದ್ವೆ ಮಾಡ್ತಿದ್ವಲ್ಲೋ ಅಂದಿದ್ದಕ್ಕೆ, 'ರುಪಾಲೀ ಮನೆಯವ್ರು ಹೈ ಸೊಸೈಟಿಯ ಜನ.ನಿಮ್ಮನ್ನ ಅವ್ರಿಗೆ ಪರಿಚಯ ಮಾಡ್ಸೋಕೆ ಮುಜುಗರ ಆಗುತ್ತೆ' ಅಂದ್ಬಿಟ್ಟಿದ್ದ. ಅವತ್ತೇ ನನಗನ್ಸಿದ್ದು ನೀನು ಹೇಳಿದ್ನ ಕೇಳ್ಬೇಕಿತ್ತೂ ಅಂತ. ನೀನು ಈ ಆಘಾತದಲ್ಲೇ ಕೊರಗಿ ನನ್ಬಿಟ್ಟು ಹೋಗ್ಬಿಟ್ಟೆ. ಈಗ ನಾನೊಬ್ನೇ ನೋಡು.
ಅವ್ನೇ ಮುಖ ಕೊಟ್ಟು ಮಾತಾಡೋಲ್ಲ. ಇನ್ನು ಸೊಸೆ ಏನು ಮಾತಾಡ್ತಾಳೆ.

ಈಗ ಸ್ವಲ್ಪ ದಿನದಿಂದ ಹೊಸ ವರಾತ ಶುರು ಮಾಡಿದ್ದಾನೆ. ನಮ್ಮನೆನ ಅವ್ನ ಮಾವನ ಹೆಸರಿಗೆ ಮಾಡ್ಬೇಕಂತೆ. ನಮ್ಮನೆಯ ಜಾಗ  ಅವ್ರ ಹೊಸ ಹೋಟೆಲ್ ಗೆ ಚೆನ್ನಾಗಿದೆಯಂತೆ. ಅವ್ರು ಮಗಳು ಅಳಿಯಂಗೆ ಒಂದು ಫ್ಲಾಟ್ ಕೊಡ್ಸ್ತಾರಂತೆ. ನೀನೂ ಅಲ್ಲೇ ಬಾ, ಈ ಮನೆ ಬರ್ಕೊಡು ಅಂತಾನೆ.
ನಾನು ಸತ್ರೂ ಬರ್ಕೊಡಲ್ಲ ಅಂದೆ ಕಣೆ ಜಲಜಾ...
ಈ ಮನೆಗೆ ಬೆಲೆ ಕಟ್ಟೋಕಾಗುತ್ತಾ? ನೀನಂತೂ ಇಲ್ಲ. ಆದ್ರೆ ಮನೇಲಿ ಈಗ್ಲೂ ನೀನಿದ್ದಿ ಅನ್ಸುತ್ತೆ. ಆದ್ರೆ ಈ ನನ್ ಮಗನಿಗೆ ಒಂಚೂರೂ ಮಮಕಾರ ಇಲ್ಲ ಕಣೆ.
ದಿನಾ ಇದೇ ಗಲಾಟೆ. ತುತ್ತು ಎತ್ತೋದು ಕಷ್ಟ ಆಗುತ್ತೆ.
ಈ ಯೋಚ್ನೇಲೇ ಹುಷಾರ್ ತಪ್ತು ನೋಡು.
ಅದ್ಕೆ ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದು. ಈ ಪ್ರಸಾದ ಹೀಗ್ ಮಾಡಿದ್ದಾನೆ ನೋಡು. ಅಯ್ಯೋ..... ಕತ್ತಲಾಗ್ತಿದೆ. ಇವ್ನು ಇನ್ನನೂ ಪತ್ತೆ ಇಲ್ವಲ್ಲ.

ಕಾರಲ್ಲಿ ಅದೇನೋ ಮಾತ್ರೆ ಕೊಟ್ಟ. ತಿಂದ್ಮೇಲೆ ಒಂದೇ ಮಂಪರು. ಏನೂ ನೆನಪಾಗ್ತಿಲ್ಲ.........
ನನ್ನ ಕೈ ಹಿಡ್ಕೊಂಡು ಏನೋ ಮಾಡ್ತಿದ್ದ.....
ಕೈ......!!
ಹೆಬ್ಬೆರಳಿಗೆ ಶಾಯಿ ಅಂಟಿದೆಯಲ್ಲಾ........!!


ಅಯ್ಯೋ.....!! ಪಾಪಿ.....! ಮನೆ ಪತ್ರಕ್ಕೆ ಹೆಬ್ಬೆಟ್ಟು ಹಾಕ್ಸಿಕೊಂಡು ಹೋಗಿದ್ದಾನೆ. ಅಂದ್ರೆ....., ಇವ್ನು ಬೇಕಂತಾನೇ ನನ್ನ ಇಲ್ಲಿ ಬಿಟ್ಟು ಹೋಗಿರೋದು....!!
ಬಿಡಲ್ಲ ಜಲಜಾ....! ನಾನು ಅವ್ನ ಮಾತ್ರ ಸುಮ್ನೆ ಬಿಡಲ್ಲ.......!

ಇಲ್ಲೇ ಹತ್ರ ಎಲ್ಲಾದ್ರೂ ರಸ್ತೆ ಇದ್ಯಾ ಅಂತಾದ್ರೂ ನೋಡ್ತೀನಿ. ಎಲ್ಲಾ ಕಡೆನೂ ಕಾಡೆ ಇದ್ಯಲ್ಲ.

ಓ....... ಇಲ್ಲೇನೋ ಇದೆ.....

ಕೆರೆ.....!!

ಅಲ್ಲೇನು.....?

ಯಾವ್ದೋ ಮನೆ ಇದ್ದಂತಿದೆ. ದೇವ್ರೇ  ದಾರಿ ತೋರ್ಸಿದ್ಯಲ್ಲ. ಅವರತ್ರ ಸಹಾಯ ಕೇಳ್ತೀನಿ. ಮನೆಗೆ ಹೋಗಿ ಅವ್ನ ಜೈಲಿಗೆ ಹಾಕ್ಸತೀನಿ.

ಅಯ್ಯೋ...‌.! ಇದು ಮನೆಯಲ್ಲ...... ಪಾಳು ಬಂಗ್ಲೆ......!!

ಈ ಬಂಗ್ಲೆ...........!!

ಹೌದು ಇದೇ ಪಾಳು ಬಿದ್ದಿರುವ ಬಂಗ್ಲೆ......!!

ಎದುರಿಗೆ ಕೆರೆ.....!!

ಹೌದು ಇದೇ.....,
ಇಲ್ಲೇ ಅಲ್ಲವೇ ನಾನವಳನ್ನ ಬಿಟ್ಟು ಹೋದದ್ದು!? ಬಿಟ್ಟು ಹೋದದ್ದಲ್ಲ.........! ಬಿಸುಟು ಹೋದದ್ದು....!
ಹೌದು ಇದೇ ಬಾಗಿಲ ಮುಂದೆ.

ಅಯ್ಯೋ..... ಜಲಜಾ....., ನಿಂಗೊತ್ತಿಲ್ಲ. ನಿನ್ನ ಮೊದಲ ಹೆರಿಗೆಲಿ ಮಗು ಹುಟ್ದಾಗ್ಲೇ ಸತ್ತಿತ್ತು ಅಂದ್ನಲ್ಲಾ. ಆ ಮಗು....... ಅದು ಸತ್ತಿರ್ಲಿಲ್ಲ ಕಣೇ......

ಹೆಣ್ಣು ಮಗು ಅಂತಾ ನಾನೇ ನಿನಗೆ ಸತ್ತೋಯ್ತು ಅಂತ ಸುಳ್ಳು ಹೇಳಿದ್ದು.....!!

ಇಗೋ ಇಲ್ನೋಡು, ಇಲ್ಲೇ.... ಇದೇ ಬಾಗಿಲಲ್ಲಿ ಇಟ್ಟು ಬಂದಿದ್ದೇ ಕಣೇ.... ಹೌದು..... ಇಲ್ಲೆ..... ಇಲ್ಲೇ.....!!

ಅಯ್ಯೋ........!! ನೀನ್ಯಾರೂ........? ಯಾರಮ್ಮಾ ನೀನು......? ಇಷ್ಟೊತ್ತು ಇರ್ಲಿಲ್ಲ. ಈಗೆಲ್ಲಿಂದ ಬಂದೆ?
ಮಾತಾಡು, ಯಾರು ನೀನು? ನನ್ನ ಮಗಳನ್ನು ಎಸಿದೇ ಮನೆಗೆ ಕರ್ಕೊಂಡು ಹೋಗಿದ್ರೆ ನಿನ್ ಹಾಗೇ ಇರೋಳೇನೋ. ಆಗ ನಾನು ಹೀಗೆ ಕಾಡುಪಾಲಾಗೋಕೆ ಅವ್ಳು ಬಿಡ್ತಿರ್ಲಿಲ್ವೇನೋ.....!!

ನೀನೂ......... ನೀನು......... ನನ್ನ ಮಗಳಾ.........??
ಹೌದು.....!! ನೀನೆ ಅಲ್ವಾ ಮಗಳೇ.......?
ಭ್ರಮೆನಾ.......? ಇಲ್ಲ ಇಲ್ಲಾ. ಇದೇ ನಿಜ. ನೀನೇ ನಿಜ ಮಗಳೇ.......! ಮಗ ನನ್ನ ನೋಡ್ಕೋತಾನೆ ಅನ್ನೋದೇ ಭ್ರಮೆ. ನೀನೇ ನಿಜ. ನಾನು ನಿನ್ನ ಚೆನ್ನಾಗಿ ನೋಡ್ಕೋತೀನಿ ಮಗಳೇ. ಬಾ ಮನೆಗ್ ಹೋಗೋಣ. ಬಾ ಮಗೂ....

ಎಲ್ಲಿಗೆ ಹೋಗ್ತಿದ್ದೀ? ನಿಲ್ಲು ಮಗು...., ಓಡ್ಬೇಡಾ....... ನಿಲ್ಲು......! ನಾನು ಬರ್ತೀನಿ ಮಗ್ಳೇ. ನನ್ನೂ ಕರ್ಕೊಂಡು ಹೋಗು. ಎಲ್ಲಿಗೆ ಓಡ್ತಿದ್ದೀ? ಜಲಜಾ.......!! ನೀನಾದ್ರೂ ಹೇಳು ನಿಲ್ಲೋಕೆ. ನೀನು ಹೇಳಿದ್ರೆ ಕೇಳ್ತಾಳೆ.....

ಮಗೂ.......... ಓಡಿ ಓಡಿ ಸುಸ್ತಾಗ್ತಿದೆ....... ನಿಲ್ಲಮ್ಮಾ.......
ಆಗ್ತಾಇಲ್ಲಾ...... ಸುಸ್ತು.......
ನೀರು........ ಬಾಯಿ ಒಣಗ್ತಿದೇ.......
ಕಣ್ಣು ಮಂ.‌....ಜಾಗ್ತಿದೆ......
ನೀ......ನು‌...... ಕಾ.......ಣ್ತಾ........ಯಿ...............

                       ****************

ಭಾನುವಾರ, ಮೇ 24, 2020

ಹೀಗೊಂದು ಪತ್ರ.....

ಪ್ರಿಯ ಮಾನವನಿಗೆ.........

ಮನುಕುಲವನ್ನು ಸೃಷ್ಟಿಸಿ, ಜಗತ್ತಿನ ಅತ್ಯಂತ ಬುದ್ಧಿಶಾಲಿ ಪ್ರಾಣಿ ಎಂಬ ವಿಶೇಷ ಸ್ಥಾನಮಾನದೊಂದಿಗೆ ಭೂಲೋಕಕ್ಕೆ ನಿನ್ನನ್ನು ನಿವಾಸಿಯಾಗಿಸಿದ ಕ್ಷಣ ಮುಂದೊಮ್ಮೆ ಇದೇ ಬುದ್ಧಿವಂತ ಜೀವಿಗೆ ಬುದ್ಧಿ ಹೇಳಲು ಇಂತಹದೊಂದು ವಿಚಿತ್ರ ಪತ್ರ ಬರೆಯಬೇಕಾದ ಸನ್ನಿವೇಶ ಉದ್ಭವವಾಗಬಹುದೆಂದು ಸ್ವತಃ ಸೃಷ್ಟಿಕರ್ತನಾದ ನಾನೇ ಎಣಿಸಿರಲಿಲ್ಲ. ಆ ಮಟ್ಟಿಗೆ ನನ್ನನ್ನೂ ಮೀರಿಸಿದ ನೀನು 'ಬುದ್ಧಿಶಾಲಿ' ಜೀವಿಯೇ ಬಿಡು.

ನಾನು, ಭೂ ದೇವಿಯ ಸಂಪದ್ಭರಿತ, ಸಮೃದ್ಧ ಒಡಲನ್ನೇ ನಿನಗೆ ಉಡುಗೊರೆಯಾಗಿ ನೀಡಿದ್ದು ಅವಳ ಸಹಕಾರದಿಂದ ನೀನು ಬದುಕನ್ನು ಕಟ್ಟಿಕೋ ಎಂದು. ಆದರೆ ನೀನು ಮಾಡಿದ್ದೇನು? ಅವಳ ಮೇಲೆ ಒಡೆತನ ಸಾಧಿಸಿ ಅವಳನ್ನೇ ಹರಿದು ಭಾಗವಾಗಿಸಿ ಬೇಲಿಗಳನ್ನು ನಿರ್ಮಿಸಿಕೊಂಡಿರುವೆ. ಅವಳ ಒಡಲನ್ನೇ ಬಗೆದು, ಸಾರವ ಮೊಗೆದು, ಆಪೋಶನ ತೆಗೆದುಕೊಂಡಿರುವೆ. ಪ್ರಕೃತಿ ಜವನಿಕೆಯ ಹಚ್ಚಹಸಿರ ಪತ್ತಲವನ್ನೇ ಸೆಳೆದು ಆಕೆಯನ್ನು ಬೆತ್ತಲಾಗಿಸುವ ದುಸ್ಸಾಹಸ ಮಾಡಿದ ನಿನ್ನದು ಅತೀ ಬುದ್ಧಿವಂತಿಕೆಯೋ ಇಲ್ಲಾ ಧೂರ್ತತನದ ಪರಮಾವಧಿಯೋ....?

ನಾನು ಸೃಷ್ಟಿಸಿದ ಅಖಂಡ ಭೂಮಂಡಲದ ನೀಲಿನಕ್ಷೆಯನ್ನು ನಾನೇ ಗುರುತಿಸಲಾರದಂತೆ ಬದಲಾಯಿಸಿ ಖಂಡ, ದೇಶ, ರಾಜ್ಯಗಳೆಂದು ವಿಭಜಿಸಿರುವೆ. ಅದರ ಮೇಲೆ ಜಾತಿ, ಮತ, ವರ್ಣ, ಭಾಷೆ ಎಂಬ ಹತ್ತು ಹಲವು ಪರಿಧಿಗಳನ್ನು ಆದೇಶಿಸಿಕೊಂಡು ಬೇಧವನ್ನು ಆವಾಹಿಸಿಕೊಂಡು ನಿತ್ಯ ಸಂಘರ್ಷದಲ್ಲಿ ಮುಳುಗಿರುವೆ. ಮನುಜತ್ವದ ಮೂಲಗುಣವಾದ ಮಾನವೀಯತೆಯನ್ನೇ ಮರೆತು ಸಂಪತ್ತನ್ನು ಕ್ರೋಢೀಕರಿಸುವುದರಲ್ಲೇ ತಲ್ಲೀನನಾಗಿರುವೆ. ಹಣದ ಮುಂದೆ ಮೌಲ್ಯಗಳೇ ಮರೆಯಾಗುವಷ್ಟು ಗಾಢವಾಗಿ ಧನಕನಕಗಳ ಗುಲಾಮನಾಗಿರುವೆ.

ಹೋಗಲೀ........ ಆ ಸಂಪತ್ತನ್ನಾದರೂ ಸಮವಾಗಿ ಹಂಚಿಕೊಂಡಿರುವೆಯಾ...? ಅದೂ ಇಲ್ಲ. ಕೆಲವೇ ಕೆಲವು ಕೈಗಳಲ್ಲಿ ಹಣ, ಅಧಿಕಾರ ಎಲ್ಲವನ್ನೂ ಕೇಂದ್ರಿಕೃತಗೊಂಡಿದೆ. ನಿನ್ನ ಬಳಿ ಇರುವ ಪೂಂಜಿಯನ್ನು ಪರರೊಂದಿಗೆ ಹಂಚಿಕೊಳ್ಳುವ ಸಣ್ಣ ಉದಾರತೆಯೂ ನಿನಗಿಲ್ಲ. ಸ್ವಾರ್ಥದ ಕಡಲಲ್ಲಿ ತೇಲುತ್ತಾ ಅಹಂಕಾರ ಮೆರೆವ ನಿನ್ನ ಇಂತಹ ಸಣ್ಣತನ ಕಂಡಾಗಲೆಲ್ಲಾ 'ಯಾಕಾದರೂ ಈ ಮನುಜನೆಂಬ ಪ್ರಾಣಿಯನ್ನು ಸೃಷ್ಟಿಸಿದೆನೋ' ಎಂಬ ಯೋಚನೆಯಲ್ಲಿ ಬೀಳುತ್ತೇನೆ.

ಹೋಗಲಿ ಬಿಡು. ನಾನು ಹೇಳಿದೊಡನೆ ತಪ್ಪನ್ನು ತಿದ್ದಿಕೊಂಡು ಬದಲಾಗುವ ಹಂತವನ್ನು ದಾಟಿ ಹೋಗಿದ್ದೀಯಾ ನೀನು. ಇನ್ನು ಹೇಳಿ ಪ್ರಯೋಜನವೇನು?
ನಿನ್ನಿಷ್ಟದಂತೆ ಮಾಡಿಕೋ..... ಆದರೆ ನಿನ್ನ ಸೃಷ್ಟಿಕರ್ತನಾದ ತಪ್ಪಿಗೆ, ನಿನ್ನ ಮುಗಿಯದ ಗೋಳುಗಳ ಪಟ್ಟಿಗೆ ಕಿವಿಯಾಗಬೇಕಾದ ಅನಿವಾರ್ಯ ಬಾಧ್ಯತೆ ನನಗಿರುವುದರಿಂದ ನಿನಗೆ ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಬೇಕಿದೆ.  ಅದಕ್ಕಾಗಿಯೇ ಈ ಪತ್ರ. ಗಮನವಿಟ್ಟು ಓದಿಕೋ.....

ಮಂದಿರ, ಇಗರ್ಜಿ, ಮಸೀದಿ ಇತ್ಯಾದಿಗಳಲ್ಲಿ ನಾನು ನೆಲೆಸಿರುವೆನೆಂದೂ, ತೀರ್ಥಯಾತ್ರೆ, ಹಜ್ ಯಾತ್ರೆ ಮತ್ತಿದ್ಯಾದಿಗಳ ಮೂಲಕ ಪುಣ್ಯ ಸಂಪಾದಿಸಿ ಸ್ವರ್ಗ ಪ್ರಾಪ್ತಿಸಿಕೊಳ್ಳಬಹುದೆಂದು ನಿನಗೇಕೆ ಅನಿಸಿತೋ ನನಗಂತೂ ತಿಳಿದಿಲ್ಲ. ಇಂತಹದೊಂದು ವ್ಯವಸ್ಥೆಯನ್ನು ನೀನು ಸೃಷ್ಟಿಸಿಕೊಂಡಿರುವೆಯಷ್ಟೇ ಹೊರತು ನನಗೂ ಇದಕ್ಕೂ ಸಂಬಂಧವಿಲ್ಲ. ನೀನು ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿ, ತೀರ್ಥಯಾತ್ರೆಗಳನ್ನು ಮಾಡಿ ಬೇಡಿಕೊಂಡಿರುವುದೆಲ್ಲಾ ನನಗೆ ಸ್ವೀಕೃತಿ ಎಂಬ ಭ್ರಮೆಯಲ್ಲಿ ನೀನಿದ್ದರೆ ಅದನ್ನು ಈ ಕ್ಷಣವೇ ಮರೆತುಬಿಡು.

ನನ್ನ ಶಿಲೆಯಾಗಿಸಿ ಪಂಚಾಮೃತ, ರಾಶಿ ಫಲ, ಚರುಗಳ ಸಮಾರಾಧನೆ ಮಾಡುವ ನೀನು ದಾರಿಯಲ್ಲಿ ಎದುರಾಗುವ ನಿರ್ಗತಿಕನಿಗೆ ಒಂದು ದಮ್ಮಡಿ ಕಾಸು ಕೊಡಲು ಮಾಡುವ ಯೋಚನೆಯೆಷ್ಟು? ಪಂಚಭಕ್ಷ್ಯ ಪರಮಾನ್ನ ತಯಾರಿಸಿ ನನಗೆ ನೈವೇದ್ಯ ನೀಡುವ ನೀನು ನಿನ್ನದೇ ಅಕ್ಕಪಕ್ಕದಲ್ಲಿರುವ ಒಂದು ಹೊತ್ತಿನ ಕೂಳಿಗೂ ತತ್ವಾರ ಪಡುತ್ತಿರುವ ದೀನರಿಗೆ ಒಂದು ಹಿಡಿ ಆಹಾರ ನೀಡುವ ಮನಸ್ಸು ಮಾಡುವೆಯಾ?

ಇಷ್ಟಕ್ಕೂ ಈ ಧನಕನಕ, ಫಲ, ಪಂಚಭಕ್ಷ್ಯ ಪರಮಾನ್ನಗಳೆಲ್ಲವೂ ನಾನೇ ನಿನಗಿತ್ತ ಭಿಕ್ಷೆ. ನಿನ್ನ ಕೊನೆಗಾಣದ ಬೇಡಿಕೆಗಳಿಗೆ ಕಿವಿಯಾಗುವೆನೇ ಹೊರತು ನಾನು ನಿನ್ನಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ನಿನ್ನ ಉಸಿರಿನ ಸಮೇತ ನಿನ್ನ ಬಳಿಯಿರುವುದೆಲ್ಲವೂ ನನ್ನದೇ ಆಗಿರುವಾಗ, ನನಗೇ ಧನ‌ ಕನಕಗಳ ಕಾಣಿಕೆಯ ಆಮಿಷ ತೋರಿ ನಿನ್ನ ಇಷ್ಟಾರ್ಥಗಳ ಬೇಡುವ ನಿನ್ನದು ಮೂರ್ಖತನವೋ ಇಲ್ಲಾ ಉದ್ಧಟತನವೋ?

ನಿನಗೆ ನಿಜವಾಗಿಯೂ ನನ್ನನ್ನು ತಲುಪುವಂತಹ ಸೇವೆ ಮಾಡಬೇಕೆಂಬ ಮನಸ್ಸಿದ್ದರೆ ನಿನ್ನ ನಡುವೆ ಇರುವ ದೀನದಲಿತರಿಗೆ, ಅಗತ್ಯವುಳ್ಳ ಮನುಜರಿಗೆ ಹೆಗಲಾಗು. ನನಗೆ ನೀಡುವ ಧನಕನಕಗಳನ್ನು ಬಡಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೋ ಇಲ್ಲವೇ ನಿರಾಶ್ರಿತರ ತಲೆ ಮೇಲೆ ಸೂರು ನಿರ್ಮಿಸಲೋ ಬಳಸು. ಅವರ ಸಂತಸದಲ್ಲಿ ನಾನಿರುತ್ತೇನೆ. ನನ್ನ ಹೆಸರಿನ ನೈವೇದ್ಯವನ್ನು ಹೊತ್ತಿನ ಕೂಳಿಗೆ ಪರದಾಡುವ ದೀನರಿಗೆ ಬಡಿಸು. ಅವರ ನೀಗಿದ ಹಸಿವಿನಲ್ಲಿ ನನ್ನ ಉದರ ತುಂಬುತ್ತದೆ. ದೀಪ, ಧೂಪ, ಮೊಂಬತ್ತಿಗಳ ಬೆಳಗಿ ಮಕ್ಕಳ ಭಾಗ್ಯ ಕರುಣಿಸೆಂದು ಬೇಡುವ ಬದಲು ಅನಾಥ ಹಸುಳೆಯ ದತ್ತು ಪಡೆದು ಅದರ ಬಾಳನ್ನು ಬೆಳಗು. ಆ ಮಗುವಿನ ಹಸನಾದ ಬದುಕಿನಲ್ಲಿ ನಾನು ನೆಲೆಸಿರುತ್ತೇನೆ. ದರ್ಗಾದಲ್ಲಿ ಚಾದರ ಹೊದಿಸಿ, ತಾಯತ ಕಟ್ಟಿ ಮನ್ನತ್ ಕೇಳಿಕೊಳ್ಳುವ ಬದಲು ಪರರ ನೋವಿಗೆ ಸ್ಪಂದಿಸು. ನೀ ಅವರಿಗೆ ನೀಡುವ ಸಾಂತ್ವನದಲ್ಲಿ ನಾನು ಹರಸುತ್ತೇನೆ.....

ಇನ್ನಾದರೂ ಕಟ್ಟಡದ ನಾಲ್ಕು ಗೋಡೆಗಳಲ್ಲಿ, ಶಿಲೆಗಳಲ್ಲಿ, ಅರ್ಥವಿಲ್ಲದ ಆಚರಣೆಗಳಲ್ಲಿ ನನ್ನನ್ನು ಅರಸುವುದನ್ನು ಬಿಟ್ಟು ನಿನ್ನ ಹೃದಯದ ಅಂತಃಕರಣದಲ್ಲಿ, ಮನುಷ್ಯತ್ವದಲ್ಲಿ ಅಡಗಿರುವ ನನ್ನನ್ನು ಹುಡುಕಿ ಅರಿತುಕೋ. ನಾನು ನೀಡಿದ ಸಂಪತ್ತನ್ನು ನನಗೇ ಕಾಣಿಕೆಯಾಗಿ ನೀಡುವ ಬದಲು ಇಲ್ಲದವರೊಂದಿಗೆ ಹಂಚಿಕೊಂಡು, ಕೂಡಿ ಬಾಳುವುದನ್ನು ಕಲಿತುಕೋ.....

ಹೇಳಬೇಕಾದುದ್ದನ್ನು ಹೇಳಿರುವೆ. ಅರಿತುಕೊಳ್ಳುವುದು ಬಿಡುವುದು ನಿನ್ನಿಷ್ಟ. ಅರಿತು ತಿದ್ದಿಕೊಂಡರೆ ಸಂತೋಷ. ಇಲ್ಲವಾದರೆ ನಿನ್ನ ಹಣೆಬರಹಕ್ಕೆ ನನ್ನನ್ನು ದೂಷಿಸಲು ಬರಬೇಡ......

ಅಷ್ಟೇ.....

ಇಂತಿ ನಿನ್ನ ಕಲ್ಪನೆಗಿಂತ ಭಿನ್ನ ಯೋಚನೆಯ ಭಗವಂತ......


      ****************


ಮೆ ತೋ ನಹೀ ಹೂ ಇನ್ಸಾನೋಂ ಮೇ
ಬಿಕ್ತಾ ಹೂ ಮೆ ತೋ ಇನ್ ದುಕಾನೋಂ ಮೇ
ದುನಿಯಾ ಬನಾಯಿ ಮೈನೆ ಹಾಥೊಂಸೇ
ಮಿಟ್ಟಿ ಸೇ ನಹೀ ಜಸ್ಬಾತೊಂ ಸೇ
ಫಿರ್ ರಹಾ ಹೂಂ ಢೂಂಡತಾ.....
ಮೇರೆ ನಿಶಾನ್ ಹೇ ಕಹಾಂ.....???

'ಓ ಮೈ ಗಾಡ್' ಹಿಂದಿ ಚಿತ್ರದ ಈ ಸಾಲುಗಳು ಕೇಳಿದಾಗಲೆಲ್ಲ ಅರಿಯದ ಭಾವವೊಂದು ನನ್ನ ಆವರಿಸುತ್ತದೆ. ಅರ್ಥಹೀನ ಆಚರಣೆಗಳನ್ನು ಕಂಡಾಗಲೆಲ್ಲಾ ಮತ್ತೆ ಮತ್ತೆ ಇದೇ ಸಾಲುಗಳು ಮನದೊಳಗೆ ಸುಳಿಯುತ್ತವೆ. 'ಕೇವಲ ಜೀವವಿಲ್ಲದ ಮೂರ್ತಿಯಾಗಿ ಅಂಗಡಿಗಳಲ್ಲಿ ಮಾರಲ್ಪಡುತ್ತಿರುವೆನೇ ಹೊರತು, ಮನುಜರಲ್ಲಿ ನನ್ನ ಅಸ್ತಿತ್ವದ ಕುರುಹೂ ಇಲ್ಲ . ಈ ಜಗತ್ತನ್ನು ಮಣ್ಣಿನಿಂದಲ್ಲ ಭಾವನೆಗಳಿಂದ ಸೃಷ್ಟಿಸಿರುವೆ. ಅಂತಹ ಜಗತ್ತಿನಲ್ಲಿ ನನ್ನ ಕುರುಹನ್ನು(ಮಾನವೀಯ ಮೌಲ್ಯದ ಭಾವಗಳನ್ನು) ಹುಡುಕಿ ಅಲೆಯುವಂತಾಗಿದೆ' ಎಂಬರ್ಥದ ಸಾಲುಗಳು ನಿಜಕ್ಕೂ ಭಗವಂತನ ಸ್ವಗತದ ಭಾವಗಳಿರಬಹುದೇ....?

ಶನಿವಾರ, ಮೇ 23, 2020

ನಿರೀಕ್ಷೆ



ನಿಗಿನಿಗಿ ಉರಿದು ಕೆಂಡ ಸುರಿವ ಸೂರ್ಯನ ತಾಪಕೆ....
ಬಳಲಿ ಬರಡು ಬೆಂಗಾಡಾಗಿ ಬಾಯಾರಿದ ಇಳೆಗೆ....
ಇರುವುದು ಒಂದೇ ಪ್ರತೀಕ್ಷೆ.......
ಮೈ ಮನಕೆ ತಂಪೆರೆವ ಮುಸಲಧಾರೆಯ ನಿರೀಕ್ಷೆ.....
ಕಡಲ ತಟದಲಿ ಉಸುಕು ಹಾಸಿದೆ ಚಾದರ....
ಅಲೆಗಳ ಏರಿಳಿತದ ನಾದ ಸಂಗೀತದ ಝೇಂಕಾರ....
ದಿಗಂತಕೆ ಬಾಯ್ತೆರೆದ ಚಿಪ್ಪಿನದು ಒಂದೇ ಪ್ರತೀಕ್ಷೆ....
ಬಿದ್ದ ವರ್ಷ ಬಿಂದು ಮುತ್ತಾಗುವ ನಿರೀಕ್ಷೆ.......
ಗಿರಿಮಲೆಗಳ ದಟ್ಟ ಕಾನನದ ನಡುವಲೆಲ್ಲೋ ಉಗಮಿಸಿ...
ನದಿ, ತೊರೆ, ಝರಿಯಾಗಿ ಬಳುಕಿ ಇಳಿಜಾರಿನೊಳು ಧುಮ್ಮಿಕ್ಕಿ....
ಜೀವಸೆಲೆಯಾಗಿ ಹರಿವ ವಾಹಿನಿಯದು ಒಂದೇ ಪ್ರತೀಕ್ಷೆ...
ಶರಧಿಯನು ಸಂಗಮಿಸಿ ಬೆರೆಯುವ ನಿರೀಕ್ಷೆ......
ಮನದ ಕೋಣೆಯಲ್ಲೆಲ್ಲೋ ಆವಿರ್ಭವಿಸುವ ಸೆಳೆತ....
ಹೃದಯಾಂತರಾಳದಲ್ಲಿ ನವಿರು ಭಾವನೆಗಳದೇ ಮಿಡಿತ...
ಧಮನಿಯ ಪ್ರತಿ ಬಡಿತದ ರಾಗತಾಳಕ್ಕೂ ಒಂದೇ ಪ್ರತೀಕ್ಷೆ....
ಉಸಿರ ಬಾಂದಳದಲ್ಲಿ ಒಲವ ಶಶಿ ಮೂಡುವಾ ನಿರೀಕ್ಷೆ.....