ಭಾನುವಾರ, ಡಿಸೆಂಬರ್ 24, 2023

The Railway Men - ಸಾಮಾನ್ಯರ ಅಸಾಮಾನ್ಯ ಕಥೆ

One of the best in recent times. Story of real heroes and a tight slap on the face of corrupt system. ಭ್ರಷ್ಟ ವ್ಯವಸ್ಥೆಯ ಹೊಣೆಗೇಡಿತನದ ಪರಮಾವಧಿಯ ನಡುವಲ್ಲೇ ಸಾಮಾನ್ಯರು ಅಸಾಮಾನ್ಯರಾದ, ಸಾವಿರಾರು ಜೀವಗಳ ಪಾಲಿಗೆ ಆಸರೆಯಾದ ವಾಸ್ತವತೆಯನ್ನು ಯಾವುದೇ ಉತ್ಪ್ರೇಕ್ಷೆಯ ಹಂಗಿಲ್ಲದೇ ನಾಲ್ಕು ಸಂಚಿಕೆಗಳಲ್ಲಿ ಕಟ್ಟಿಕೊಡುತ್ತದೆ ಈ ವೆಬ್ ಸರಣಿ. ತಮ್ಮದೇ ಪ್ರಜೆಗಳ ನೋವಿಗೆ ಬೆನ್ನು ತೋರಿಸಿ ಯಾತನೆಗೆ ಮೂಲವಾದವರನ್ನು ಸುರಕ್ಷಿತವಾಗಿ ದೇಶದಿಂದ ಹೊರ ರವಾನಿಸಲು ಟೊಂಕ ಕಟ್ಟಿ ನಿಂತ ಅಮಾನವೀಯ ರಾಜಕೀಯ ವ್ಯವಸ್ಥೆಯ ತಣ್ಣಗಿನ ಕ್ರೌರ್ಯದೆಡೆಗೆ ಹೇವರಿಕೆ ಹುಟ್ಟಿಸುತ್ತಲೇ, ಮಸಣಸದೃಶ ನಗರದಲ್ಲಿ ಮಾನವೀಯತೆಯನ್ನು ಜೀವಂತವಿರಿಸಲು ತಮ್ಮನ್ನೇ ಪಣವಾಗಿಸಿಯೂ ಅನಾಮಧೇಯರಾಗುಳಿದ ಜನಸಾಮಾನ್ಯರ ಬಗೆಗೊಂದು ವ್ಯಕ್ತಪಡಿಸಲಾಗದ ಅಭಿಮಾನ ಸೃಷ್ಟಿಸುವ ಈ ಸರಣಿ ಭೋಪಾಲ್ ದುರಂತವನ್ನು ಬೇರೆಯೇ ದೃಷ್ಟಿಕೋನದಿಂದ ತೆರೆದಿಡುತ್ತದೆ. 
ಕೆ ಕೆ ಮೆನನ್, ಬಾಬಿಲ್ ಖಾನ್, ದಿವ್ಯೇಂದು ಶರ್ಮಾ ಹಾಗೂ ಮಾಧವನ್ 1984ರ ಡಿಸೆಂಬರ್ 2 ಹಾಗೂ 3ರ ಭೋಪಾಲ್ ನಗರದಲ್ಲೇ ಜೀವಿಸಿದಂತೆ ಭಾಸವಾಗುತ್ತದೆ. ಕಂಪನಿಯಲ್ಲಿನ ಸುರಕ್ಷತಾ ಲೋಪಗಳ ಬಗ್ಗೆ ಅರಿವಿದ್ದೂ ಎಲ್ಲವನ್ನೂ ನಿರ್ಲಕ್ಷಿ‌ಸಿ ಹೀಗೊಂದು ದುರಂತಕ್ಕೆ ಮೂಲವಾಗಿ ದೇಶಬಿಟ್ಟು ಪಲಾಯನಗೈದ ವಾರೆನ್ ಆಂಡರ್ಸನ್ ಅವರ ತಪ್ಪು ಹಿರಿದೋ ಇಲ್ಲವೇ ಆತನನ್ನು ವಿಮಾನ ನಿಲ್ದಾಣದ ತನಕ ಸುರಕ್ಷಿತವಾಗಿ ಕಳಿಸಿಕೊಟ್ಟು ವಿಮಾನ ಏರಿಸಿದ ನಮ್ಮ ರಾಜಕೀಯ ವ್ಯವಸ್ಥೆಯ ಭ್ರಷ್ಟತೆ ಹಿರಿದೋ ಎಂಬ ಉತ್ತರ ಸಿಗದ ಪ್ರಶ್ನೆಯೊಂದೇ ಕೊನೆಗೆ ಉಳಿಯುವುದು ಸತ್ಯ.

ಶನಿವಾರ, ಆಗಸ್ಟ್ 26, 2023

ನೆನಪಿನ ಪುಟಗಳ ನಡುವೆ.....


ಹೆಜ್ಜೆ ಮೂಡದ ಹಾದಿಯಲ್ಲೂ ಗೆಜ್ಜೆ ಕಟ್ಟಿ ಕುಣಿವ ನೆನಪುಗಳ ಮೆರವಣಿಗೆಗೆ ಸಾಟಿಯಾವುದುಂಟು ಈ ಜಗದೊಳಗೆ..... ಬಾಳ ಪುಟಗಳಲ್ಲಿ ಎಂದೆಂದೂ ಅಳಿಯದ ಮಧುರ ಸ್ಮೃತಿಯಾಗಿ ಉಳಿದಿರುವ ಅದೇ ಹಾದಿಗಳಲ್ಲಿ ಹದಿನೈದು ವರ್ಷಗಳ ತರುವಾಯ ಹೆಜ್ಜೆಯಿಟ್ಟ ಕ್ಷಣಗಳಲ್ಲಿ ಮನದೊಳಗೆ ಸುಳಿದ ಸಾಸಿರ ಭಾವಗಳು ಪದಗಳ ವ್ಯಾಪ್ತಿಗೆ ನಿಲುಕದ್ದು. ಈ ಊರು, ಈ ಹಾದಿ, ಈ ಮೈದಾನ, ಈ ಸಭಾಂಗಣ, ಈ ಕಟ್ಟಡ...... ನನ್ನ ಮಟ್ಟಿಗೆ ಮೆಲುಕು ಹಾಕಲಾರದಷ್ಟು ನೆನಪುಗಳ ಭಂಡಾರವಿದು. ಕಾಲಾಂತರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದರೂ ಈ ದಾರಿಯಲ್ಲಿನ ಹದಿನೈದು ವರ್ಷಗಳ ಹಿಂದಿನ ಹೆಜ್ಜೆ ಗುರುತುಗಳು ನನ್ನ ಮನದ ಹಾದಿಯಲ್ಲಿ ಒಂದಿನಿತೂ ಮುಕ್ಕಾಗದೆ ಉಳಿದಿವೆ. ಇಂದು ಅದೇ ಹಾದಿಯಲ್ಲಿ ಸಾಗುವಾಗ ಸಮಯ ಹಿಂದಕ್ಕೆ ಚಲಿಸಿ ಅಂದಿನ ತುಂಟಾಟ, ತರಲೆ, ಉತ್ಸಾಹ, ಹುಮ್ಮಸ್ಸು, ಕುತೂಹಲ, ಗುರಿ, ಕನಸು, ಹಾಸ್ಯ, ಕೋಪ, ದುಃಖ..... ಎಲ್ಲವೂ ಮರುಕಳಿಸಿದಂತಹ ಭಾವ. ಯಾವ ಜವಾಬ್ದಾರಿ ಚಿಂತೆಗಳ ಗೊಡವೆಯಿಲ್ಲದ ಆ ದಿನಗಳು ಒಮ್ಮೆ ಮರಳಿ ಸಿಗಬಾರದಿತ್ತೇ ಎಂಬಂತಹ ತಪನ..... ಬದುಕಿಗೆ ಉತ್ಸಾಹ ತುಂಬುತ್ತಿದ್ದ ಯಾವುದೋ ಚೈತನ್ಯ ಲುಪ್ತವಾದಂತಹ ವಿಷಾದ..... ಏನೂ ಇಲ್ಲದೆಯೂ ಎಲ್ಲವೂ ಕೈ ಬೆರಳ ತುದಿಯಲ್ಲಿದೆ ಎನ್ನುವಷ್ಟು ನೆಮ್ಮದಿಯಿದ್ದ ಅಂದಿಗೂ, ಎಲ್ಲಾ ಇದ್ದೂ ಏನೇನೂ ಇಲ್ಲ ಎಂಬ ಯಾಂತ್ರಿಕ ಇಂದಿಗೂ ಅದೆಷ್ಟು ವ್ಯತ್ಯಾಸ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಬಸವವಾಣಿಯಂತೆ ಊರಿನ ರೂಪುರೇಷೆ ಬದಲಾಗಬಹುದೇನೋ ಆಗಲಿ ಅಲ್ಲಿ ಕಳೆದ ಕ್ಷಣಗಳಿಗೆ ವಿಸ್ಮೃತಿಯಿಲ್ಲ. ನನ್ನ ಇಂದಿನ ವ್ಯಕ್ತಿತ್ವಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಸ್ಥಳವಿದು. ನಾನಿಂದು ಏನೇ ಇದ್ದರೂ ಅದರ ಶ್ರೇಯ ಮುಖ್ಯವಾಗಿ ಸಲ್ಲುವುದು ಎರಡು ಸಂಸ್ಥೆಗಳಿಗೆ. ಒಂದು ನನ್ನ ಬಾಲ್ಯವನ್ನು ಹಸನಾಗಿಸಿ ನನ್ನೊಳಗೆ ಔಪಚಾರಿಕ ಶಿಕ್ಷಣಕ್ಕೂ ಮೀರಿದ ಸಂಸ್ಕಾರಗಳನ್ನು ಹಾಸುಹೊಕ್ಕಾಗಿಸಿದ ಪ್ರಬೋಧಿನಿ ವಿದ್ಯಾಕೇಂದ್ರವಾದರೆ ಮತ್ತೊಂದು ನನ್ನ ಬದುಕಿನ ಗುರಿಗಳನ್ನು ಸುಸ್ಪಷ್ಟವಾಗಿಸಿದ ಧವಲಾ ಮಹಾವಿದ್ಯಾಲಯ. ಈ ಎರಡೂ ಸಂಸ್ಥೆಗಳೂ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ವಹಿಸಿರುವ ಪಾತ್ರ ಮಹತ್ವದ್ದು. ಅಂತಹ ಸಂಸ್ಥೆಗೆ ಹಲವು ವರ್ಷಗಳ ನಂತರ ಮತ್ತೆ ಭೇಟಿ ನೀಡುವುದೆಂದರೆ ನೆನಪಿನ ಜೋಕಾಲಿಯಲ್ಲಿ ಜೀಕುತ್ತಾ ಕಳೆದ ಕ್ಷಣಗಳನ್ನು ಮರುಜೀವಿಸುವ ಸಂಚಾರ. ನಿನ್ನೆಯ ಧವಲಾ ಕಾಲೇಜಿನ ಭೇಟಿ ಅಂತಹುದೇ ನೆನಪಿನ ಓಣಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ಸುಣ್ಣ ಬಣ್ಣ ಬದಲಾಗಿರುವುದನ್ನು ಹೊರತು ಪಡಿಸಿ ಹೆಚ್ಚು ಕಡಿಮೆ ಅದೇ ಕಟ್ಟಡ, ಅದೇ ಮೈದಾನ, ಅದೇ ಸಭಾಂಗಣ, ಅದೇ ಗ್ರಂಥಾಲಯ,ಅದೇ ತರಗತಿಗಳು, ಅದೇ ಸ್ಟಾಫ್ ರೂಂ...... ಆದರೂ ಅಂದಿದ್ದ ವಿದ್ಯಾರ್ಥಿಗಳು ಇಂದಿಲ್ಲ. ಅಂದಿನ ತಲೆಹರಟೆ ವಿದ್ಯಾರ್ಥಿಗಳು ಇಂದು ಸಾವಿರ ಜವಾಬ್ದಾರಿ ಹೊತ್ತು ಎಲ್ಲೆಲ್ಲೋ ಬದುಕು ಕಟ್ಟಿಕೊಂಡಿದ್ದಾರೆ. ಅಂದಿದ್ದ ಶಿಕ್ಷಕರಲ್ಲಿ ಹೆಚ್ಚು ಕಡಿಮೆ ಎಲ್ಲರೂ ವೃತ್ತಿವೇದಿಕೆಯಿಂದ ನಿವೃತ್ತರಾಗಿದ್ದಾರೆ. ಕೆಲವರು ಬದುಕಿನ ಪರದೆಯಿಂದಲೇ ಜಾರಿ ಬಾನಂಗಳದಲ್ಲಿ ನಕ್ಷತ್ರವಾಗಿದ್ದಾರೆ. ಸೆಮಿನಾರ್ ಎನ್ನುವ ಪದವನ್ನು ಮೊದಲ ಬಾರಿಗೆ ಪರಿಚಯಿಸಿದ ಕನ್ನಡ ಮೇಷ್ಟ್ರು ಅಜಿತ್ ಪ್ರಸಾದ್, ಪ್ರಾಚ್ಯವಸ್ತು ಶಾಸ್ತ್ರ, ಶಾಸನ ಶಾಸ್ತ್ರ, ನಾಣ್ಯಶಾಸ್ತ್ರಗಳ ಅದ್ಬುತ ಲೋಕವನ್ನು ಅನಾವರಣಗೊಳಿಸಿ ಇತಿಹಾಸದ ಇನ್ನೊಂದು ಮಜಲನ್ನು ಪರಿಚಯಿಸಿದ ಪುಂಡಿಕೈ ಗಣಪಯ್ಯ ಭಟ್ ಸರ್, ಅರ್ಥಶಾಸ್ತ್ರದ ಮೂಲಪರಿಕಲ್ಪನೆಗಳನ್ನು ಮೆದುಳಿಗೆ ಮನನಗೊಳಿಸಿದ ವಾಸುದೇವ ಭಟ್, ಸುದರ್ಶನ್ ಕುಮಾರ್ ಹಾಗೂ ಗೋಪಾಲ್ ಸರ್ ಈಗ ಇಲ್ಲಿಲ್ಲ. ಸಾಮಾಜಿಕ ಸಂಶೋಧನೆ ಅನ್ನುವ ವಿಷಯದ ಮುಖೇನ ಆಗಲೇ ಸಂಶೋಧನೆಯ ಪ್ರಾಥಮಿಕ ಪಟ್ಟುಗಳನ್ನು ಕಲಿಸಿ ಕಿರು ಸಂಶೋಧನೆಯನ್ನೇ ನಮ್ಮಿಂದ ಮಾಡಿಸಿದ್ದ ನೆಚ್ಚಿನ ಸ್ನೇಹಲತಾ ಮೇಡಂ ಈಗ ಈ ಜಗತ್ತಿನಲ್ಲೇ ಇಲ್ಲ. ಆದರೂ ಕಾಲೇಜಿನ ಪ್ರತೀ ಗೋಡೆ, ಕಾರಿಡಾರ್, ತರಗತಿಗಳು, ಬೆಂಚುಗಳು ಇವರೆಲ್ಲರನ್ನೂ ಅವರ ಹಾವಭಾವ ಶೈಲಿಯ ಸಮೇತ ನೆನಪಿಸಿದ್ದು ಸುಳ್ಳಲ್ಲ.
ಇವರೆಲ್ಲರೊಂದಿಗಿನ ಬಾಂಧವ್ಯದ ಕೊನೆಯ ಕೊಂಡಿಯಂತೆ ಹಳೆಯ ನೆನಪಿನ ಬುತ್ತಿಯಲ್ಲಿ ಉಳಿದ ಕೊನೆಯ ತುತ್ತಿನಂತೆ ನಿನ್ನೆ ಸಿಕ್ಕವರು ಪದ್ಮಜಾ ಮೇಡಂ. ಪಿಯುಸಿಯ ತನಕ ಅಚ್ಚ ಕನ್ನಡ ಮಾಧ್ಯಮದ ಅಮೃತದಲ್ಲಿ ತೇಲಿ ಪದವಿಯಲ್ಲಿ ಒಮ್ಮೆಗೇ ಆಂಗ್ಲ ಮಾಧ್ಯಮದ ಕುದಿತೈಲದ ಬಾಣೆಲೆಗೆ ಬಿದ್ದು ಒದ್ದಾಡುತ್ತಿದ್ದ ನನ್ನಂತಹ ಸಾವಿರ ವಿದ್ಯಾರ್ಥಿಗಳಿಗೆ ಶೀತಲ ಜಲಬಿಂದುವಿನಂತಹ ಮದ್ದಾದವರು ಈಕೆ. ಕಡಿಮೆ ಮಾತಿನ, ಏರುಪೇರಿಲ್ಲದ ಮೃದು ಸ್ವರದ ಹಸನ್ಮುಖಿಯಾಗಿ ನನ್ನ ಮನೋವಲಯದಲ್ಲಿ ಅಚ್ಚಾಗಿರುವ ಪದ್ಮಜಾ ಮೇಡಂರದ್ದು ಅಂದಿಗೂ ಇಂದಿಗೂ ಅದೇ ಸ್ಥಿತಪ್ರಜ್ಞತೆ. ಅವರನ್ನು ಕಂಡ ಖುಷಿಗೆ ನನ್ನ ಸ್ಥಿತಪ್ರಜ್ಞತೆ ಚಂದ್ರಮಂಡಲದಾಚೆಗೆ ಓಡಿತ್ತೆಂಬುದು ನೂರಕ್ಕೆ ನೂರು ಪ್ರತಿಶತ ಸತ್ಯ. ನಾನಂತೂ ಅವರೆದುರಿದ್ದಷ್ಟು ಹೊತ್ತೂ ಅದೇ ಪ್ರಥಮ ಬಿಎ ಕ್ಲಾಸಿನ ವಿದ್ಯಾರ್ಥಿನಿಯಂತಾಗಿದ್ದೆ. ನಿನ್ನೆಯ ನನ್ನಿಡೀ ದಿನದ ಸಂತಸಕ್ಕೆ ಕಾರಣವಾಗಿದ್ದು ಈ ಭೇಟಿ. ಎಲ್ಲಾ ತಲೆನೋವುಗಳೂ ನೇಪಥ್ಯಕ್ಕೆ ಸರಿದು ಅಂದಿನ ದಿನಗಳ ನೆಮ್ಮದಿಯನ್ನು ಕೆಲವು ಗಂಟೆಗಳ ಮಟ್ಟಿಗಾದರೂ ಮರಳಿ ತಂದುಕೊಟ್ಟ ಈ ಭೇಟಿ ನೆನಪಿನ ಹೊತ್ತಿಗೆಯೊಳಕ್ಕೊಂದು ಮಧುರ ಸೇರ್ಪಡೆ.....

#Nostalgia

ಶನಿವಾರ, ಏಪ್ರಿಲ್ 15, 2023

ವೈಯೆನ್ಕೆ ಅನ್ಲಿಮಿಟೆಡ್

ಸಣ್ಣವಳಿದ್ದಾಗಿನಿಂದಲೂ ವೃತ್ತಪತ್ರಿಕೆ ಎಂದರೆ ಪ್ರಜಾವಾಣಿ ಎನ್ನುವಷ್ಟು ಪ್ರಜಾವಾಣಿಯ ನಿಷ್ಠಾವಂತ ಓದುಗಳಾದ ಕಾರಣ YNK ಅನ್ನೋ ಹೆಸರು ಪರಿಚಿತ ಅನ್ನೋದು ಸತ್ಯವಾದರೂ ಅವರ ಬರಹಗಳನ್ನು ಓದಿದ ನೆನಪು ನನಗಿಲ್ಲ. ತಿಂಗಳ ಹಿಂದೆ ಅಂಕಿತ ಪುಸ್ತಕದವರು ಏರ್ಪಡಿಸಿದ್ದ ಜೋಗಿ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಬೇಕೆಂದುಕೊಂಡಾಗಲೂ ಫಿಕ್ಷನ್ ಪ್ರಿಯೆಯಾದ ನನಗೆ 'ಹಸ್ತಿನಾವತಿ'ಯ ಬಗ್ಗೆ ಆಸಕ್ತಿಯಿತ್ತೇ ವಿನಃ ಅದರೊಂದಿಗಿದ್ದ ಇನ್ನೊಂದು ಪುಸ್ತಕ ನನ್ನನ್ನು ಅಷ್ಟೇನೂ ಆಕರ್ಷಿಸಿರಲಿಲ್ಲ ಅನ್ನೋದೂ ಸತ್ಯ. ಆದರೆ ಆ ದಿನ ಸಮಾರಂಭಕ್ಕೆ ಹೋದಾಗ ಅಲ್ಲಿ ಟಿ ಎನ್ ಸೀತಾರಾಂ, ಅನಂತ್ನಾಗ್, ಬಿ ಆರ್ ಎಲ್, ರವಿ ಹೆಗಡೆ ಹಾಗೂ ಜೋಗಿಯವರ ಮಾತುಗಳಲ್ಲಿ ರೂಪುಗೊಂಡ YNK ಅನ್ನುವ ವ್ಯಕ್ತಿ ಒಂದೇ ಏಟಿಗೆ ತುಂಬಾ ಇಂಟರೆಸ್ಟಿಂಗ್ ಅನ್ನಿಸಿಬಿಟ್ಟರು. ಅದರಲ್ಲೂ ರವಿಯವರು ಹಾಗೂ ಅನಂತ್ ಸರ್ ಹಂಚಿಕೊಂಡ ವೈಯನ್ಕೆ ಅವರೊಂದಿಗಿನ ಒಡನಾಟ, ಕೆಲ ಕವಿ-ತೆಗಳ ತುಣುಕುಗಳು ಹಾಗೂ ವೈಯನ್ಕೆಯವರ 'ಘಾ' ಬಗೆಗಿನ ಸ್ವಾರಸ್ಯಕರ ಸಂಗತಿಗಳು ಈ ಪುಸ್ತಕವನ್ನು ಓದಲೇಬೇಕೆಂಬ ತುಡಿತವನ್ನು ಹುಟ್ಟುಹಾಕಿದ್ದವು. 
ಏನೇನೋ ಅಡಚಣೆಗಳ ಕಾರಣ ಒಮ್ಮೆ ಓದಲು ಕೈಗೆತ್ತಿಕೊಂಡ ಪುಸ್ತಕವನ್ನು ಒಂದಿಷ್ಟು ಸಮಯಗಳ ಕಾಲ ಬದಿಗಿರಿಸಿದ್ದೆ. ಈಗ ವೈಯನ್ಕೆಯವರ unlimited ಪ್ರಪಂಚದೊಳಗೊಂದು ಸುತ್ತು ಹಾಕಿ ಬಂದು ನಿಂತಿರುವ ಈ ಹೊತ್ತು ತಲೆಯಲ್ಲಿ ಸುತ್ತುತ್ತಿರುವ ಒಂದೇ ಸಂಗತಿಯೆಂದರೆ.... 'ವಾವ್...
.... How someone can write like this? Wordplay at its best. ಒಂದೇ ಪದದ ಭಿನ್ನಾರ್ಥಗಳ ನಡುವೆ ಈ ರೀತಿಯಾಗಿಯೂ ಆಡಬಹುದೇ? ಪದ, ಪ್ರಾಸ, ಪಂಚ್, ಪನ್, ಫನ್...... ಬರೀ ಅಷ್ಟೇ ಆಗಿದ್ದರೆ ಸುಮ್ಮನೆ ನಗಿಸಲು ಬರೆದ ಲಲಿತ ಪ್ರಬಂಧವಾಗುತ್ತಿತ್ತೇನೋ ಆದರೆ ಇದರೊಳಗಿರುವುದು ಅಪ್ಪಟ ಸತ್ಯ. ತಮ್ಮ ಸುತ್ತಲಿನ ನೈಜ ವೃತ್ತಾಂತಗಳನ್ನೇ ತಮ್ಮದೇ ವಿಶಿಷ್ಟ ರೂಪದಲ್ಲಿ ಕಟ್ಟಿಕೊಡುವ ಈ ಕಲೆ ಬಹುಶಃ ವೈಯೆನ್ಕೆ ಅವರಿಗೆ ಮಾತ್ರ ಸಿದ್ಧಿಸಿದ್ದೇನೋ. ಪ್ರಪಂಚದ ಎಲ್ಲಾ ವಲಯಗಳಲ್ಲಿನ ಆಗುಹೋಗುಗಳ ಬಗ್ಗೆ ಇಲ್ಲಿ ಲಘುರೂಪದ ವಿವರಗಳಿವೆ. ಹೆವೀ ವಿಷಯವೂ ಇಲ್ಲಿ 'ಲೈಟೇ' ಸ್ವಾಮಿ. ಈ ಪುಸ್ತಕ ಓದಿದ ಮೇಲೆ ರವಿಯವರು ಹಾಗೂ ಅನಂತ್ನಾಗ್ ಅಂದು ಹೇಳಿದ 'ಶ್ರೀಮಾನ್ ಘಾ' ಸಂಪೂರ್ಣವಾಗಿ ಅರ್ಥವಾದರು. 
ವೈನಯ್ಕೆಯವರು ಇವುಗಳನ್ನೆಲ್ಲಾ ಬರೆದಿದ್ದು 1999ಕ್ಕೂ ಹಿಂದೆ. ಇಂದು ಅವುಗಳನ್ನು ಓದುತ್ತಿರುವ ನನಗೆ ಅವುಗಳು ಅಂದಿಗಿಂತ ಇಂದೇ ಹೆಚ್ಚು ರಿಲೇಟೆಬಲ್ ಅನಿಸಿದವೆಂಬುದು ಈ ಬರಹಗಳ ಹೆಚ್ಚುಗಾರಿಕೆ ಎಂದೇ ಭಾಸವಾಗುತ್ತದೆ ನನಗೆ. ಸಾಮಾನ್ಯವಾಗಿ ಕಾಲ ಬದಲಾದಂತೆ ಅಂದಿನ ಬರಹಗಳು ಇಂದಿಗೆ ಔಟ್ ಡೇಟೆಡ್ ಅನ್ನಿಸುವುದು ಸಾಮಾನ್ಯ. ಆದರೆ ಈ ಪುಸ್ತಕದ ಪ್ರತಿಯೊಂದು ಪುಟವೂ ನಿಮಗೆ ಇವತ್ತಿನ ವರ್ತಮಾನದ ಹಲವು ಸಂಗತಿಗಳನ್ನು ಕಣ್ಣೆದುರು ತರುತ್ತವೆ ಎಂದರೆ ಈ ಬರಹಗಳ ದೂರದೃಷ್ಟಿ ಎಷ್ಟಿರಬಹುದಲ್ಲವೇ? I can just say this man blowed my mind 🙏🙏🙏


ಸುಮ್ನೆ 'ಇರಾನ್' ಅಂದ್ರೆ 'ಇರಾಕ್' ಬಿಡಾಕಿಲ್ಲ....

ಸುಂದರಿ ಜಾಹಿರಾ-ಥೂ....

ದೂರವಿರು ದೂರ್ವಾಸನೆ ಬರುತಲಿದೆ ದುರ್ವಾಸನೆ....

ಕಪಿಲವಸ್ತುವಿನ ರಾಜ ಶುದ್ಧೋದನ, ಅವನ ಮಗ ರಾತ್ರೋರಾತ್ರಿ ಎದ್ಹೋದನ

ನಾವು ಸ್ಥಾವರ, ರೂಮು ಜಂಗಮ, ಅದು ಹೆಂಗಮ?

His man's puns are world class.....




ಪಾಪಾಸ್ ಕಳ್ಳಿ ಪರ್ಮೇಶಿಯ ಪೊಲಿಟಿಕಲ್ ಸ್ಟ್ರಾಟಜಿ

ನಮ್ ಪೊಲಿಟೀಷಿಯನ್ ಪರ್ಮೇಶಿ ಚುನಾವಣಾ ಸಮಯದಲ್ಲಿ ಕಂಡಕಂಡಲ್ಲಿ  ಅಬ್ಬೇಪಾರಿಯಾಗಿ ಜೋತಾಡೋ ಪಾರ್ಟಿ ಫ್ಲೆಕ್ಸ್ ಗಳ ರೀತಿಯಲ್ಲೇ ಸೀಲಿಂಗಿಗೆ  ಜೋತುಬಿದ್ದು ಗರಗರನೆ ತಿರ್ಗ್ತಿರೋ ಫ್ಯಾನನ್ನೇ ತದೇಕಚಿತ್ತದಿಂದ ನೋಡ್ತಾ ಒಂದೇ ಸಮ್ನೆ ಚಿಂತೆ ಮಾಡ್ತಾ ಪಾರ್ಟಿ ಆಫೀಸಲ್ಲಿ ಕೂತಿದ್ದ. ಹತ್ತು ವರ್ಷದಿಂದ ರಾಜಕೀಯ ಸಾಗರದಲ್ಲಿ ಧುಮುಕಿ, ತೇಲಿ, ಈಜಿ, ಮುಳುಗಿ ಎಕ್ಸ್ಪೀರಿಯೆನ್ಸ್ ಇರೋ ಪರ್ಮೇಶಿ ಮೊದ್ಲಿಗೆ 'ಕರಾ'ಗ್ರೇ ವಸತೇ ಲಕ್ಷ್ಮೀ ಅಂತ 'ಕರದಂಟು' ಮೆಲ್ಲುತ್ತಾ ರಾಜಕೀಯಕ್ಕೆ ಕಾಲಿಟ್ಟ. ಆಮೇಲೆ ಈ 'ಕರ'ಕ್ಕೆ ದಂಟೇ ಗತಿ, ಗಂಟು ಸಿಗಾಕಿಲ್ಲ ಅಂತ ತಿಳಿದ್ಮೇಲೆ, 'ಕಮಲ'ದ ದಂಟೇ ವಾಸಿ ಅಂತ ಪರ್ಮೇಶಿಯ ಕರದಲ್ಲಿ 'ಪದ್ಮ' ಶೋಭಿಸಿತು. 'ತಾವರೆ'ಯ ದಳಗಳೆಲ್ಲಾ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ವಲಸೆ ಹೋಗಿ 'ದಿ ಗ್ರೇಟ್ ಮೈಗ್ರೇಶನ್' ಆರಂಭವಾದಾಗ ಪರ್ಮೇಶಿಗೆ ಪದುಮಕ್ಕಿಂತ ಪದುಮ'ದಳ'ಕ್ಕೆ ವ್ಯಾಲ್ಯೂ ಜಾಸ್ತಿ ಅನ್ನಿಸೋಕೆ ಶುರುವಾಯ್ತು. ಸಮೃದ್ಧ ಗಂಟಿನ 'ತೆನೆ ಹೊರುವ' ಆಸೆಯಿಂದ ಕಮಲಕ್ಕೆ ಕೈ ಕೊಟ್ಟು 'ದಳ'ವೇ ಪರಂಧಾಮವಯ್ಯ ಅಂತ ಪಾಡಿದ್ದಾಯ್ತು. ಒಂದಿಷ್ಟು ಟೈಂ ' ಆನೆ ಸವಾರಿ' ಆಮೇಲೆ 'ಸೈಕಲ್ ವಿಹಾರಿ', ಕೊನೆಕೊನೆಗೆ 'ಕಸ ಗುಡಿಸಿ' ಎಲ್ಲೆಡೆಯೂ ಭ್ರಮನಿರಸನವೇ ಅಂತ ಜ್ಞಾನೋದಯವಾದ್ಮೇಲೆ ಎಲ್ಲಕ್ಕಿಂತ ದೊಡ್ಡದು ಆಜಾ಼ದಿ ಅಂತ 'ಸ್ವತಂತ್ರ್ಯತೆ'ಯ ಸವಿಯನ್ನು ಸವಿಯುತ್ತಿರೋನು ನಮ್ಮ ಪರ್ಮೇಶಿ. ಅಂಟಿಯೂ ಅಂಟದಂತಿರು ಅನ್ನೋದಕ್ಕಿಂತ ಯಾರಿಗೂ ಅಂಟಿಕೊಳ್ಳಲು ಧೈರ್ಯ ಬಾರದಂತಿರು ಎಂಬ ತತ್ವಕ್ಕೆ ಬದ್ಧನಾಗಿ 'ಪಾಪಾಸ್ ಕಳ್ಳಿ'ಯನ್ನೆ ತನ್ನ ಸರ್ವಸ್ವತಂತ್ರ ಪಕ್ಷದ ಚಿನ್ಹೆಯಾಗಿಸಿಕೊಂಡ ಪರ್ಮೇಶಿಗೆ ಹೆಂಗಾರಾ ಮಾಡಿ ಈ ಸಲದ ಎಲೆಕ್ಷನ್ನಲ್ಲಿ ಗೆದ್ದು ಗದ್ದುಗೆಗೇರೋ ಹುಚ್ಚು ನೆತ್ತಿಗೇರಿದೆ. ಗೆದ್ದೆತ್ತಿನ ಬಾಲ ಹಿಡ್ಯೋಕಿಂತ ತಾನೇ ಆ ಎತ್ತಾಗಿ ಗತ್ತಿಂದ ಮೆರೀಬೇಕು, ತನ್ನನ್ನು ಕಾಲಿನ ಕಸವಾಗಿ ಕಂಡವರನ್ನ ಕಾಲಡಿ ಹಾಕಿ ತುಳೀಬೇಕು, ತಾನೂ ವಿಶ್ವದ ಧೀಮಂತ ರಾಜಕಾರಣಿಗಳಲ್ಲಿ ಒಬ್ಬ ಆಗ್ಬೇಕು...... ಹೀಗೆ ಲೆಕ್ಕವಿಲ್ಲದಷ್ಟು ಹಗಲುಗನಸುಗಳಲ್ಲಿ ತೇಲ್ತಾ ತನ್ನ ಹೆಸರಿನ ಹಿಂದೆ ಪೊಲಿಟೀಷಿಯನ್ ಅನ್ನೋದ್ನ ಪ್ರಿಫಿಕ್ಸ್ ಮಾಡ್ಕೊಂಡಿರೋ ಮಹಾನುಭಾವ ನಮ್ ಪರ್ಮೇಶಿ.

ಇದಿಷ್ಟು ನಮ್ ಪರ್ಮೇಶಿಯ ಇತಿಹಾಸ. ಈಗ ವರ್ತಮಾನದ ವಿಚಾರಕ್ಕೆ ಬರುವ. ತಾನು ಇಷ್ಟು ವರ್ಷದಿಂದ ಏನೆಲ್ಲಾ ಸರ್ಕಸ್ ಮಾಡಿ, ಪಕ್ಷಾಂತರೀ ತಳಿಯಾಗಿ ಹಾರಿ ಕುಣಿದು ಕುಪ್ಪಳಿಸಿದ್ರೂ ಮತದಾರ ಬಂಧು ಭಗಿನಿಯರು ತನ್ನನ್ನು ಮೂಸಿಯೂ ನೋಡ್ತಾ ಇಲ್ವಲ್ಲ ಅಂತ ಶ್ಯಾನೆ ಬ್ಯಾಸರದಾಗೆ ಫ್ಯಾನನ್ನೇ ನೋಡ್ತಾ ಇದ್ದ ಪರ್ಮೇಶಿಗೆ ತನ್ನ ದಿಮಾಗ್ ಕೀ ಬಲ್ಬ್ ಆನ್ ಆಗ್ತಿಲ್ಲ ಅಂತ ಅನ್ನಿಸ್ತು. ಮೆದುಳಿನ ಬಲ್ಬ್ ಆನ್ ಆಗ್ಲಿಕ್ಕೆ ಒಂದು ಕಪ್ ಟೀ ಅನ್ನೋ ಎಲೆಕ್ಟ್ರಿಸಿಟಿ ದೇಹದ ನರತಂತುಗಳಲ್ಲಿ ಸಂಚರಿಸ್ಬೇಕು ಅಂತ ಮನಸ್ಸಿಗೆ ಬಂದಿದ್ದೇ, "ಲೇ ಇವ್ಳೇ..... ಒಂದು ಕಪ್ ಚಾ ಕೊಡೇ" ಅಂತ ಪಾಕಶಾಲೆಯಲ್ಲಿ ಪಾತ್ರೆಗಳ ಸಂಗೀತ ಕಛೇರಿ ನಡೆಸ್ತಿದ್ದ ಎಲೆಕ್ಟ್ರಿಸಿಟಿ ಬೋರ್ಡ್ ಹೆಡ್ ಗೆ ಬೇಡಿಕೆ ಸಲ್ಲಿಸಿದ.

ಪರ್ಮೇಶಿಯ ಸಂದೇಶ ಭಾಮೆಯ ಕಿವಿ ತಲುಪಿದ್ದೇ ಅಡುಗೆಮನೆಯಿಂದ ಮಂದಗತಿಯಲ್ಲಿ ಕೇಳ್ತಿದ್ದ ಪಾತ್ರೆಗಳ ಸಂಗೀತ ಕಛೇರಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುವಷ್ಟು ಡೆಸಿಬಲ್ಲುಗಳಿಗೆ ಏರಿಕೆಯಾಯ್ತು. ಭಾರ್ಯೆಯ ಬಾಯಿಂದ ಹೊರಟ ಬಂದೂಕು ಸಿಡಿಗುಂಡುಗಳು, ಪಾತ್ರೆ ಮಿಸೈಲುಗಳು ಬಾಂಬುಗಳು, ದಡಬಡ ಹೆಜ್ಜೆಯ ಭೂಕಂಪನಗಳೆಲ್ಲಾ ಒಟ್ಟಾಗಿ ಅನಿಶ್ಚಿತ ಭೀತಿಯ ವಾತಾವರಣ ಸೃಷ್ಟಿಯಾಯ್ತು. ಎರಡೇ ನಿಮಿಷಗಳಲ್ಲಿ ಲಾಸ್ಟ್ ಸಪ್ಪರ್ ಹಿಡ್ಕೊಂಡು ಬಂದ ಮಾನವ ಬಾಂಬರ್ ರೀತಿ ಕಣ್ಣಲ್ಲೇ ಜ್ವಾಲಾಮುಖಿ ಉಗುಳುತ್ತಾ ಟೇಬಲ್ ಮೇಲೆ ಚಾ ಕಪ್ ತಂದು ಕುಕ್ಕಿದ ಮಡದಿ, 
" ಲೋ ದರ್ಬೇಸಿ ಪರ್ಮೇಶಿ, ನನ್ನನ್ನೇನು ಸ್ವಿಗ್ಗಿ, ಜೊ಼ಮ್ಯಾಟೋ ಡೆಲಿವರಿ ಗರ್ಲ್ ಅಂದ್ಕೊಂಡ್ಯಾ? ಮೂರ್ಹೊತ್ತೂ ನಿಂಗೆ ಊಟ, ತಿಂಡಿ, ಚಾ, ಕಾಫಿ ಸೇವೆ ಮಾಡೋದ್ ಬಿಟ್ಟು ನಂಗೇನು ಬೇರೆ ಕೆಲ್ಸ ಇಲ್ವಾ? ದಂಡಪಿಂಡದ ತರ ತಿನ್ನೋದು, ಹೆಬ್ಬಾವಿನ್ ತರ ಸುತ್ಕೊಂಡು ಬೀಳೋದ್ ಬಿಟ್ಟು ನಿನ್ಗೇನ್ ಕೆಲ್ಸ ಹೇಳು? ಇನ್ನೊಂದ್ಸಲ ಚಾ, ಕಾಫಿ ಅಂತ ಕೇಳು ಆಗಿದೆ ನಿಂಗೆ ಮಾರಿಹಬ್ಬ" ಅಂತ ಒಂದೇ ಸಮನೆ ಪರ್ಮೇಶಿ ತಲೆನ ಕುಕ್ಕೋಕೆ ಶುರು ಮಾಡಿದ್ಲು.

" ಏನೇ ನೀನು ಬಾಯಿಗ್ ಬಂದ್ಹಂಗೆ ಮಾತಾಡ್ತಿ? ಗಂಡ ಅನ್ನೋ ಗೌರವ ಇಲ್ಲ, ಒಂದು ಭಯಭಕ್ತಿ ಇಲ್ಲ. ಅಲ್ಲಾ ಈಗ ನಾನೇನ್ ಕೇಳ್ದೇ ಅಂತ ಈ ಪಾಟಿ ಬೈತಿದ್ದೀ ನಂಗೆ ಅಂತ. ಎಲ್ಲರ್ ಮನೆಲೂ ಚಾ ಜೊತೆ ಸ್ನಾಕ್ಸ್, ಡೆಸರ್ಟು, ಕುರ್ಕು, ಮುರ್ಕು ಎಲ್ಲಾ ಮಾಡಿ ತಿನ್ನಿ ತಿನ್ನಿ ಅಂತ ತಿನ್ನಿಸ್ತಾರಪ್ಪಾ. ನೀನೇ ನೋಡಿಲ್ವಾ ಆ ಪಕ್ಕದ್ಮನೆ ಪಂಕಜಾ, ಆಚೆ ಮನೆ ಅಚಲಾ, ಈಚೆ ಮನೆ ಈಶ್ವರಿ ಎಲ್ಲಾ ಎಷ್ಟೊಂದು ಚೆನ್ನಾಗಿ ಅಡ್ಗೆ ಮಾಡಿ ವಾಟ್ಸಾಪ್ ಸ್ಟೇಟಸಲ್ಲಿ ಹಾಕ್ಕೊಂಡಿರ್ತಾರೆ. ಅವ್ರನ್ನ ನೋಡಿ ಸ್ವಲ್ಪ ಕಲಿ" ಅಂತ ಪರ್ಮೇಶಿ ಹೇಳಿದ್ದೇ ಹೇಳಿದ್ದು..... ಪರ್ಮೇಶಿಯ ಪಾರೋ ಚಂದ್ರಮುಖಿ ಒಂದೇ ಏಟಿಗೆ ನಾಗವಲ್ಲಿ ರೂಪಧಾರಣೆ ಮಾಡಿ ಲಕಲಕಲಕಲಕ ಅಂತ ಉರಿದುಬಿದ್ಲು.

"ಪಕ್ಕದ್ಮನೆ ಪಂಕಜಾ, ಆಚೆ ಮನೆ ಅಚಲಾ, ಈಚೆ ಮನೆ ಈಶ್ವರಿ ಎಲ್ರ ಸ್ಟೇಟಸ್ ನೋಡುವಷ್ಟು ಪುರ್ಸೊತ್ತಿದ್ಯೇನೋ ನಿಂಗೆ? ಸ್ಟೇಟಸ್ ಅಂತೆ ಸ್ಟೇಟಸ್.... ಅಷ್ಟು ಆಸೆ ಇದ್ರೆ ಆ ಸ್ಟೇಟಸ್ನ ಡೈನಿಂಗ್ ಟೇಬಲ್ ಮೇಲೆ ಡೈರೆಕ್ಟ್ ಡೌನ್ಲೋಡ್ ಮಾಡ್ಕೊಳ್ಳೋ ಅಪ್ಲಿಕೇಶನ್ ಕಂಡ್ಹಿಡಿ. ಆಮೇಲೆ ಆ ಮೂದೇವಿಯರ ಸೊಡ್ಡು ನೋಡ್ಕೊಂಡು, ಅವ್ರು ಮಾಡೋ ಪಡ್ಡು ತಿಂದ್ಕೊಂಡು, ಹ್ಯಾಷ್ಟ್ಯಾಗ್ ಪಕ್ಕದ್ಮನೆ ಫುಡ್ಡೇ ಗುಡ್ಡು ಅಂತ ಸ್ಟೇಟಸ್ ಹಾಕ್ಕೊಂಡು ಸಾಯಿ ಬಿಕ್ನಾಸಿ" ಅಂತ ಮಖಕ್ಕೆ ಉಗ್ದು ಟೇಬಲ್ ಮೇಲಿದ್ದ ಚಾ ಕಪ್ ಸಮೇತ ಚಂಡಮಾರುತದಂಗೆ ವಾಪಾಸ್ ಹೋದ್ಲು.

ಹೆಂಡ್ತಿ ಮಾತು ಕೇಳಿದ್ದೇ ಚಾ ಕುಡೀದೇನೇ ಮೆದುಳಿನೊಳಗೆ ಸಿಸ್ಕಾ ಎಲ್ ಈ ಡಿ ಚಾರ್ ಸೌ ಚಾಲೀಸ್ ವೋಲ್ಟ್ ಆನ್ ಆಯ್ತು ಪರ್ಮೇಶಿಗೆ. 'ಅಬ್ಬಾ ನನ್ ಹೆಂಡ್ತಿ ಎಂಥಾ ಐಡಿಯಾ ಕೊಟ್ಲಲ್ಲಪ್ಪೋ' ಅಂತ ಬ್ಯಾಗ್ರೌಂಡ್ ಮ್ಯೂಸಿಕ್ ಇಲ್ದೇ ಕುಣಿದಾಡಿಬಿಟ್ಟ. 

'ನನ್ ಪಾಪಾಸ್ ಕಳ್ಳಿ ಪಕ್ಷನ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸೋಕೆ ಇದೇ ಒಳ್ಳೆ ಉಪಾಯ. ಆಹಾ.... ವಾಟ್ಸಾಪ್ ಸ್ಟೇಟಸಲ್ಲಿರೋ ಫುಡ್ಡು ಡೈರೆಕ್ಟಾಗಿ ಡೈನಿಂಗ್ ಟೇಬಲ್ ಮೇಲೆ ಡೌನ್ಲೋಡ್ ಆಗ್ಬಿಟ್ರೆ...... ಆಹಾಹಾ.... ರಾಜ್ಯ ಏನು, ದೇಶ ಏನು.... ಇಡೀ ಪರಪಂಚದಲ್ಲಿರೋ ಮಹಿಳಾ ಮತಬಾಂಧವರೆಲ್ಲರ ಓಟೂ ಈ ಪರ್ಮೇಶಿ ಜೇಬಿಗೇ ಪಕ್ಕಾ. ಆಮ್ಯಾಕೆ ನಾನು ಅಂದ್ರೆ ಕುರ್ಚಿ ಕುರ್ಚಿ ಅಂದ್ರೆ ನಾನು. ಫೆವಿಕಾಲ್ ಹಂಗೆ ಅಂಟ್ಕೊಂಬಿಡ್ತದೆ ಕುರ್ಚಿ ನಂಗೆ. 

ಮನೆಮನೆಗೂ ವಾಟ್ಸಾಪ್ ಫುಡ್ಡು,
ಬಾಯಿಗ್ ಬಂದು ಬಿತ್ತಾ ಮಗಾ ಲಡ್ಡು,
ಪೊಲಿಟೀಷಿಯನ್ ಪರ್ಮೇಶಿನೇ ಗುಡ್ಡು,
ಪರ್ಮೇಶಿ ಕೈಲಾಸದ ತುಂಬಾ ದುಡ್ಡೋ ದುಡ್ಡು.....

ಹಂಗೆ ಆ ಅಪ್ಲಿಕೇಷನ್ ಇನ್ನೊಂಚೂರು ಅಪ್ಗ್ರೇಡ್ ಮಾಡಿ 'ಮನೆಗೊಂದು ಬಾರು ಕುಡಿದು ಹಗುರಾಗಿ ಚೂರು' ಅನ್ನೋ ಆಫರ್ ಬಿಟ್ಟಾಂದ್ರೆ ಪುರುಷೋತ್ತಮರೆಲ್ಲಾ 'ವೇರೆವರ್ ಯು ಗೋ ವಿ ಫಾಲೋ' ಅಂತ ಹುಚ್ ನಾಯಿ..... ಥತ್ತೇರಿಕೆ..... ಅಲ್ಲಲ್ಲಾ.... ಹಚ್ ನಾಯಿ ತರ ಹಿಂದೆ ಬಂದ್ಬಿಡ್ತಾರೆ. ಅಲ್ಲಿಗೆ 'ಪರಪಂಚ ಈ ಪರಪಂಚ, ಪರ್ಮೇಶಿಯೇ ಇದ್ರ ಸರಪಂಚ'..... 

ಆಮೇಲೆ.....

ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ, 
ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ..... 
ಆ ಫ್ಲೆಕ್ಸಲ್ಲೂ ನಾನೇ, 
ಈ ಟಿವಿಲೂ ನಾನೇ, 
ಆ ಪೇಪರ್ರಲ್ಲೂ ನಾನೇ, 
ಈ ಬಾನುಲಿಯಲ್ಲೂ ನಾನೇ, 
ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾ ಟ್ವಿಟ್ಟರ್
ಅಮೇಜಾನ್ ಫ್ಲಿಪ್ಕಾರ್ಟ್ ನೈಕಾ ಮೀಶೋ 
ವಾಲ್ಮಾರ್ಟ್ ಡಿ ಮಾರ್ಟ್ ರಾಯಲ್ ಮಾರ್ಟ್ ವಿಶಾಲ್ ಮಾರ್ಟ್ 
ಕೆಜಿಎಫ್ ಕಾಂತಾರಾ ಆರ್ ಆರ್ ಆರ್ ಪಠಾಣ್
ಎಲ್ಲೆಲ್ಲೂ ನಂದೇ ಹವಾ.....
ಸಬ್ ಪರ್ಮೇಶಿ ಕೆ ಲಿಯೇ ಮಾಂಗೋ ದುವಾ....'

ಹೀಗೇ ಮೈ ಮೇಲೆ ಖಬರಿಲ್ದೇ ಖಬರ್ಸ್ತಾನದಲ್ಲಿರೋ ಹೆಣದ ತರ ಬಿದ್ಕೊಂಡು ತಿರುಕನ ಕನಸು ಕಾಣ್ತಿದ್ದ ಪರ್ಮೇಶಿಗೆ ಅಡುಗೆಮನೆಯೊಳಗೆ ಭಾಮೆ ನಡೆಸ್ತಿದ್ದ ತೆಹೆಲ್ಕಾದಿಂದಾಗಿ ಮತ್ತೆ ಹೋಶ್ ಬಂತು.

ಆ ಕೂಡಲೇ ತನ್ನ ಕನಸಿನ ಕೂಸಾದ 'ದಿ ಜರ್ನಿ ಆಫ್ ಫುಡ್ - ಫ್ರಂ ವಾಟ್ಸಾಪ್ ಸ್ಟೇಟಸ್ ಟು ಡೈನಿಂಗ್ ಟೇಬಲ್'ನ ಪ್ರಸವ ಪೂರ್ವ ಹಾಗೂ ಪ್ರಸವಾನಂತರದ ಆರೈಕೆಗೆ ನುರಿತ ಶುಶ್ರೂಷಕರ ತಂಡದ ಆಯ್ಕೆಗಾಗಿ ಅಪ್ಲಿಕೇಶನ್ ಡೆವಲಪರ್ಸ್ ಹುಡುಕಾಟಕ್ಕೆ ಹೊರಟೇಬಿಟ್ಟ. 

ಹೋದಾ ಹೋದಾ ಹೋದಾ ಹೋದಾ...... ಅಪ್ಲಿಕೇಶನ್ ಡೆವಲಪರ್ಸ್'ಗಳ ರೆಸ್ಯೂಮೆ ಅಪ್ಲಿಕೇಶನ್ ಸ್ಕ್ರೂಟನಿ ಮಾಡೋಕೆ ಬೇಟೆಗಾರರ ಬೇಟೆಯಾಡೋ ರಣ ಬೇಟೆಗಾರ ಹೋದಾ......

ಸೋ.... ನಲ್ಮೆಯ ಮಹಿಳೆಯರೇ, ಅಡುಗೆ ಮನೆಯ ಪಾತ್ರೆ ಪಗಡೆಗಳನ್ನು ಗಂಟು ಕಟ್ಟಿ ಅಟ್ಟಕ್ಕೆ ಎಸ್ದು, ಈ ಬೆಲೆ ಏರಿಕೆ ಕಾಲದಲ್ಲಿ ದಿನಸಿ ಸಾಮಾನಿಗಂತ ದುಡ್ಡು ಖರ್ಚು ಮಾಡ್ದೇ, ಆರಾಮಾಗಿ ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು ವಾಟ್ಸಾಪ್ ಸ್ಟೇಟಸ್ಸಲ್ಲಿರೋ ತರಹೇವಾರಿ ಅಡುಗೆಯ ಸ್ಕ್ರೀನ್ ಶಾಟ್ ತೆಗೀತಾ, ಈ ಸಲದ ಎಲೆಕ್ಷನ್ನಲ್ಲಿ ಯಾರಿಗೂ ನಿಮ್ಮ ಮತವನ್ನು ದಾನ ಮಾಡದೇ ಕಾಯ್ತಾ ಇರಿ. ಇನ್ನೇನು ನಮ್ ಪಾಪಾಸ್ ಕಳ್ಳಿ ಪರ್ಮೇಶಿ ಅಪ್ಲಿಕೇಶನ್ ರೆಡಿ ಮಾಡಿಸ್ಕೊಂಡು ಬಂದ್ಬಿಡ್ತಾನೆ. ಆಮೇಲೇನಿದ್ರೂ ನಿಮ್ದೇ ಹವಾ..... ಓಕೆನಾ....

ಪುರುಷ ಪುಂಗವರ ಗಮನಕ್ಕೆ- ನೀವೂ ನಿಮ್ಮ ಮತವನ್ನು ನಮ್ ಪರ್ಮೇಶಿಗೇ ಡೊನೇಟ್ ಮಾಡಿ ಮತ್ತೆ. ಈ ಡೊನೇಷನ್ ಗೆ ಪ್ರತಿಯಾಗಿ ನಿಮ್ಗೂ ಒನ್ 'ಕೇಸ್' ಗ್ಲುಕೋಸ್ ವಿತ್ 'ಸೋಡಾ ಎಂಡ್ ಸೈಡ್ಸ್' ಆಫರ್ರನ್ನೂ ಇನ್ಬಿಲ್ಟ್ ಇನ್ಸ್ಟಾಲ್ ಮಾಡ್ಕೊಂಡು ಬರ್ತಿದ್ದಾರೆ ನಮ್ ಪಾಪಾಸ್ ಕಳ್ಳಿ ಪೊಲಿಟೀಷಿಯನ್ ಪರ್ಮೇಶಿ. ಕಾಯ್ತಿರಿ ಆಯ್ತಾ.....

ಭಾನುವಾರ, ಜನವರಿ 1, 2023

ಕಾಲೇಜೆಂಬ ರಂಗಸ್ಥಳ

ಜಗತ್ತೇ ಒಂದು ನಾಟಕರಂಗ - ಷೇಕ್ಸ್ಪಿಯರ್
ಪ್ರಾಧ್ಯಾಪಕನ ಜಗತ್ತೇ ಕಾಲೇಜೆಂಬ ರಂಗಮಂದಿರವಾದ ಕಾರಣ ಷೇಕ್ಸ್ಪಿಯರ್'ನ ಜಗತ್ತೇ ಒಂದು ನಾಟಕರಂಗ ಎಂಬುದನ್ನು ನಾವು 'ಕಾಲೇಜೇ ಒಂದು ನಾಟಕರಂಗ' ಎಂಬುದಾಗಿ ಪರಿಗಣಿಸಿದರೆ ಅದರ ಮುಂದಿನ ಪ್ರಾಸಬದ್ಧ ಸಾಲು 'ನೀನೇ ಅದರೊಳಗೆ ದೊಡ್ಡ ಮಂಗ' ಎಂದಾಗಿರುತ್ತದೆ. (ಇಲ್ಲಿ 'ನೀನೇ' ಎಂಬ ಪದಕ್ಕೆ ನೈತಿಕತೆಯನ್ನು ಇನ್ನೂ ಕೊಂಡುಕೊಳ್ಳದ ಶಿಕ್ಷಕರನ್ನು ಅನ್ವರ್ಥವಾಗಿಸಿಕೊಳ್ಳಬೇಕೆಂದು ಕೋರಿಕೆ)

ಕಾಲೇಜಿನಲ್ಲಿ ತಾವು ಪ್ರಾಂಶುಪಾಲರಾಗಿದ್ದ ಅವಧಿಯ ಸ್ವಾನುಭವಗ(ಗೋ)ಳನ್ನು ಸಂಕಲಿಸಿ ಸ್ವಾಮಿಯವರು ಬರೆದ ಈ ಕೃತಿ ಪ್ರಥಮ ಮುದ್ರಣ ಕಂಡಿದ್ದು 1973ರಲ್ಲಂತೆ. 1973ರ ಅನುಭವಗಳು 2023ಕ್ಕೂ ಅದೆಷ್ಟು ಕರಾರುವಾಕ್ಕಾಗಿ ಹೊಂದಿಕೊಳ್ಳುತ್ತವೆಂದರೆ ಓದುಗನಿಗೆ ಎಲ್ಲೂ ಇದು ಅಂದಿನ ಕಾಲಘಟ್ಟದ ಕಥೆ ವ್ಯಥೆ ಎನಿಸದೇ ಹೋಗುವುದು ಹದೆಗೆಟ್ಟ ಶಿಕ್ಷಣ ವ್ಯವಸ್ಥೆ ಪುನಶ್ಚೇತನವನ್ನು ಕಂಡೇ ಇಲ್ಲ ಎಂಬುದರ ಸ್ಪಷ್ಟ ದ್ಯೋತಕ. ಇನ್ನೂ ಅಂದಿಗಿಂತ ಇಂದು ಪರಿಸ್ಥಿತಿ ಇನ್ನಷ್ಟು ಹೆಚ್ಚು ಹದೆಗೆಟ್ಟಿದೆ ಎಂಬುದು ನಾವು ತಲೆತಗ್ಗಿಸಿ ಒಪ್ಪಿಕೊಳ್ಳಲೇಬೇಕಾದ ಸತ್ಯ. ಸ್ವತಃ ಇದೇ ವ್ಯವಸ್ಥೆಯ ಒಂದು ಭಾಗವಾಗಿರುವ ನನ್ನಂತಹವರ ಪಾಲಿಗೆ ಈ ಕೃತಿ ಶಿಕ್ಷಣ ವ್ಯವಸ್ಥೆ ಉಚ್ಛ್ರಾಯ ಮಟ್ಟದಿಂದ ಅಧೋಗತಿಗೆ ಹೇಗೆ ಹಂತಹಂತವಾಗಿ ಇಳಿದಿರಬಹುದೆಂಬುದರ ಪರಿವಿಡಿ. ವಿದ್ಯಾರ್ಥಿಗಳ ಬದುಕನ್ನು, ದೇಶದ ಭವಿತವ್ಯವನ್ನು ರೂಪಿಸಿಕೊಡಬೇಕಾದ ಪರಮ ಔನ್ನತ್ಯದ ವ್ಯವಸ್ಥೆಯೊಂದು ಜಾತಿ, ವರ್ಗ, ವರ್ಣ, ರಾಜಕೀಯ ಮೊದಲಾದ ವಿಷಸುಳಿಗಳಲ್ಲಿ ಸಿಲುಕಿ ಹೇಗೆ ಅಧಃಪತನಕ್ಕೆ ಜಾರುತ್ತದೆ ಎಂಬುದನ್ನು ತಮ್ಮ ಎಂದಿನ ಲಘುಹಾಸ್ಯದ ಶೈಲಿಯಲ್ಲಿ ಸ್ವಾಮಿ ದಾಟಿಸಿದ್ದಾರೆ. ಬರಹದ ಧಾಟಿ ಹಾಸ್ಯವಾದರೂ ಅದರೊಳಗೆ ಅಂತರ್ಗತವಾಗಿರುವುದು ನೀತಿಗೆಟ್ಟ ವ್ಯವಸ್ಥೆಯ ವಿಂಡಬನೆಯಷ್ಟೇ.