ಸೋಮವಾರ, ಜೂನ್ 22, 2020

ಅನೂಹ್ಯ 11

ನಾನು ವಾಪಾಸು ಹೊರಟಿದ್ದೆನಷ್ಟೇ........

ಬಂದು ನನ್ನ ಕೈಹಿಡಿದವಳೇ ಇನ್ನಿಲ್ಲದ ಅಪ್ಯಾಯಮಾನತೆಯಿಂದ ಆಗ ಕೇಳಿದ್ದಳವಳು............

"ಸಮಾ, ಯಾಕೆ ನನ್ನ ಮೇಲೆ ನಿನಗಿಷ್ಟು ಕಾಳಜಿ?  ನಾನೇ ಆ ಕಮಲಾಬಾಯಿ ಕೋಠಿಯಿಂದ ಹೊರಬರೋ ಆಸೆ ಬಿಟ್ಟಿದ್ದೆ. ಯಾಕೆ ನಂಗೋಸ್ಕರ ಇಷ್ಟು ರಿಸ್ಕ್ ತಗೋತಿದ್ದೀಯ? ನಾಳೆ ನನ್ನಿಂದಾಗಿ ನೀನೂ ಸಾವಿರ ಮಾತು ಕೇಳ್ಬೇಕಾಗುತ್ತೆ. ಅದೆಲ್ಲಾ ಬೇಡ ಕಣೇ" ಹನಿಗಣ್ಣಾಗಿದ್ದಳು.

ಅವಳ ಕೇಳಿಕೆಗೆ ಹೇಗೆ ಉತ್ತರಿಸುವುದು......?

ಅರೆಕ್ಷಣ ಆತ್ಮಾವಲೋಕನ ಮಾಡಿಕೊಂಡೆ.

"ನವ್ಯಾ, ನಾನು ನಿನ್ನ ಸ್ಟೇಷನ್ನಿಂದ ನಮ್ಮನೆಗೆ ಕರ್ಕೊಂಡು ಹೋಗ್ಲಿಲ್ಲ. ಇಲ್ಲಿಗೆ ಬಂದ್ವಿ. ನೀನು ಈ ಹಿಂದೆ ವೇಶ್ಯೆಯಾಗಿದ್ದೆ. ಆ ಕಾರಣ ನಿನ್ನ ಮನೇಲಿ ಪರಿಚಯ ಮಾಡ್ಸೋಕಾಗಲ್ಲ ಅಂತ ಇಲ್ಲಿಗೆ ತಂದು ಬಿಟ್ಟಿದ್ದೀನಿ ಅಂತ ನಿನಗನಿಸಬಹುದು. ನಿನ್ನ ಯೋಚ್ನೆ ತಪ್ಪಲ್ಲ. ಆದ್ರೆ ನಿಜ ಏನಂದ್ರೆ ಆ ಮನೆಗೆ ನನ್ನ ಶತ್ರುಗಳನ್ನೂ ನಾನು ಕರ್ಯೋಲ್ಲ. ಇನ್ನು ನಿನ್ನನ್ನು ಕರೆಯಬಲ್ಲೆನೇ......? ನನ್ನನ್ನು ನೋಡಿದವರ ಮನಸ್ಸಿನಲ್ಲಿ ಮೊದಲು ಮೂಡೋ ಭಾವ, 'ಅಬ್ಬಾ ಎಂಥಾ ಅದೃಷ್ಟವಂತೆಯಪ್ಪ ಈಕೆ' ಅನ್ನುವುದು. ಆದರೆ ನನ್ನ ಅದೃಷ್ಟದ ಕಥೆ ಅನುಭವಿಸಿದವರಿಗೆ ಮಾತ್ರವೇ ಗೊತ್ತಾಗೋದು. ಶ್ರೀಮಂತಿಕೆಯ ಮದ ನೆತ್ತಿಗೇರಿರೋ ಅಪ್ಪ ಅಮ್ಮನ ಒಬ್ಬಳೇ ಮಗಳು ನಾನು. ಅವರಿಬ್ಬರಿಗೂ ದುಡ್ಡಿನ ಹೊರತು ಬೇರೇನೂ ಕಾಣಲ್ಲ. ಆ ದುಡ್ಡು ನನಗೆ ಬೇಕಿಲ್ಲ. ಆ ಮನೆಯಲ್ಲಿ ಮನುಷ್ಯರು ವಾಸ ಇಲ್ಲ. ಬರೀ ಧನಪಿಪಾಸುಗಳಿವೆ. ನನಗೆ ಯಾವತ್ತೂ ಅನ್ಸೋದು ನನಗೊಬ್ಬ ಅಕ್ಕ/ ಅಣ್ಣನೋ ಇಲ್ಲ ತಮ್ಮ/ತಂಗಿನೋ ಇರ್ಬೇಕಿತ್ತು ಕಷ್ಟ ಸುಖ ಹಂಚ್ಕೊಳ್ಳೋಕೆ, ಏನಿಲ್ಲಾಂದ್ರೂ ಕಡೇ ಪಕ್ಷ ಒಬ್ಬರಿಗೊಬ್ರು ಸಮಾಧಾನ ಮಾಡ್ಕೊಳ್ಳೋಕೆ ಅಂತ. ನಾನ್ಯಾಕೆ, ಯಾರಿಗೋಸ್ಕರ ಬದುಕ್ಬೇಕು ಅಂತ ಯೋಚ್ಸೋಷ್ಟು ಡಿಪ್ರೆಸ್ ಆಗಿದ್ದೆ. ಆ ಸಮಯದಲ್ಲೇ ನಾನು ನಿನ್ನ ನೋಡಿದ್ದು. ನಿನ್ನ ನೋಡಿದ ಕೂಡಲೇ ಅದ್ಯಾಕೋ ನೀನು ನನ್ನ ಒಡಹುಟ್ಟಿದವಳೇನೋ ಅನ್ನೋ ಭಾವನೆ ಮೂಡಿಬಿಟ್ಟಿತು. ನಿನ್ ಜೊತೆ ಮಾತಾಡ್ತಾ, ನಿನ್ನ ಅರ್ಥ ಮಾಡ್ಕೋತಾ ಹೋದಂತೆ ನನ್ನ ಸಮಸ್ಯೆಗಳೆಲ್ಲಾ ಮರೀತಾ ಹೋದ್ವು. ನೀನು ಅಷ್ಟೆಲ್ಲ ಪಾಡುಪಟ್ಟೂ ಹೋರಾಡ್ತಿರೋವಾಗ ನಾನ್ಯಾವ ಲೆಕ್ಕ ಅನ್ನಿಸ್ತು. ನಾನು ನಿಂಗೋಸ್ಕರ ರಿಸ್ಕ್ ತಗೊಂಡಿರೋದಲ್ಲ. ನಾನಿವತ್ತು ಹೀಗಿರೋದೇ ನಿನ್ನಿಂದ ನವ್ಯಾ. ನಾನು ನಿನಗಿಂತ ಒಳ್ಳೆ ಪರಿಸ್ಥಿತಿಯಲ್ಲಿ ಇದ್ದೂ ನಿರಾಶವಾದಿಯಾಗಿದ್ದೆ. ಆದ್ರೆ ನೀನು ಅಂತ ಹೀನ ಪರಿಸ್ಥಿತಿಯಲ್ಲೂ ಆಶಾವಾದಿಯಾಗಿದ್ದೆ. ಅದೇ ನನ್ನ ಪ್ರೇರೇಪಿಸಿದ್ದು ನನ್ನ ಯೋಚನಾ ವಿಧಾನವನ್ನು ಬದಲಾಯಿಸಿಕೊಳ್ಳೋಕೆ. ನಿನ್ನ ಅಲ್ಲಿಂದ ಹೊರಗೆ ಕರ್ಕೊಂಡು ಬರೋ ಪ್ರಯತ್ನದಲ್ಲಿ ನನ್ನೊಳಗೆ ನಾನು ಸೃಷ್ಟಿಸಿಕೊಂಡಿದ್ದ ಪಂಜರದಿಂದ ನನಗೂ ಮುಕ್ತಿ ಸಿಕ್ಕಿತು. ನೀನು ಹೊರಗೆ ಬಂದಾಗ ನಿನ್ನ ಕಣ್ಣಲ್ಲಿ ಮೂಡೋ ಸಂತೋಷದಲ್ಲಿ ನನ್ನ ಅಸ್ತಿತ್ವ ಹುಡುಕಬೇಕೆಂಬ ಆಸೆ ನಂದು" ಸಣ್ಣಗೆ ನಕ್ಕೆ. ಅವಳಲ್ಲಿ ಹೇಳಿಕೊಂಡು ಮನಸ್ಸು ಹಗುರವಾದಂತೆನಿಸಿತು.

ನಿಟ್ಟುಸಿರು ಬಿಟ್ಟು ಅವಳೆಡೆಗೆ ತಿರುಗಿದೆ. ಅವಳ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. "ಸಾರಿ ನವ್ಯಾ ಬೇಜಾರು ಮಾಡಿದ್ನಾ? ಯಾಕೋ ಎಲ್ಲಾ ಹೇಳ್ಕೋಬೇಕು ಅನ್ನಿಸ್ತು. ಅಳ್ಬೇಡ್ವೇ ಪ್ಲೀಸ್" ಎಂದೆ.

ಅವಳು ಕಣ್ಣೀರೊರೆಸಿಕೊಂಡವಳೇ ನನ್ನ ಕೈ ಹಿಡಿದು "ಮಾ ಬಾಬಾ ಹೋದ್ಮೇಲೆ ನಂಗೆ ದೇವರ ಮೇಲೆ ನಂಬಿಕೆಯೇ ಹೋಗಿತ್ತು. ಇವತ್ತು ಆ ನಂಬಿಕೆ ಮರಳಿ ಬಂದಿದೆ. ಭಗವಂತ ನನಗಾಗಿಯೇ ಈ ಪುಟ್ಟ ದೇವತೆಯನ್ನು ಸೃಷ್ಟಸಿದ್ದಾನೆ. ನಾನು ಕಳ್ಕೊಂಡಿರೋ ಸಂತೋಷನೆಲ್ಲಾ ತಂದು ಬೊಗಸೆಗೆ ಸುರಿಯೋಕೆ.  ಹಾಗಾಗಿಯೇ ನೀನು ನನ್ನ ಆ ನರಕದಿಂದ ಹೊರತಂದಿದ್ದು. ಅಲ್ಲಿಂದ ಹೊರಗೆ ಕಾಲಿಟ್ಟ ಕೂಡಲೇ ನಂಗೆ ಎಷ್ಟು ಖುಷಿಯಾಯ್ತು ಗೊತ್ತಾ ಸಮಾ….. ಆ ಬಿಡುಗಡೆಯ ಭಾವವಿದೆಯಲ್ಲ......... ಅಹಾ....... ಬಂಧಮುಕ್ತಿಯ ಆಸೆಯೇ ಇಲ್ಲದೇ ಜನ್ಮಾಂತರಗಳಿಂದ ಪಂಜರದಲ್ಲಿದ್ದ ಹಕ್ಕಿಯೊಂದು ಬಿಡುಗಡೆ ಪಡೆದು ಮರಳಿ ನಭಕ್ಕೇರಿದಂತಹ ಆ ಭಾವ......... ಸೆರೆಯಲ್ಲಿ ಮರಣದಂಡನೆಗೆ ಗುರಿಯಾಗಿ ಅಂತಿಮ ದಿನಗಳ ಎಣಿಕೆಯಲ್ಲಿದ್ದವನಿಗೆ ಅನಿರೀಕ್ಷಿತವಾಗಿ ಬಿಡುಗಡೆಯಾದರೆ ಹೇಗಿರಬಹುದು ಅವನ ಭಾವಲೋಕ....... ಆ ಖುಷಿಗೆ ಎಣೆಯುಂಟೇ?ಹಾಗೇ ಅನ್ನಿಸ್ತಿದೆ ನನಗೆ. ಕೃತಜ್ಞತೆ ಅನ್ನೋ ಪದ ತುಂಬಾ ಸಣ್ಣದು. ನೀನಿಲ್ಲದೇ ಇದ್ದಿದ್ರೆ........  ಪ್ರಾಯಶಃ ನನ್ನ ಬದುಕು ಬೆಂಕಿಯಲ್ಲಿ ಸುಟ್ಟು ಕರಕಲಾಗ್ತಿತ್ತೇನೋ " ಅನ್ನುತ್ತಾ ತಬ್ಬಿಕೊಂಡಳು.

ಅವಳ ಆ ಕ್ಷಣದ ಪ್ರತಿಕ್ರಿಯೆ ಇದೆಯಲ್ಲ.....

ಅದು ನನಗೆ ನೀಡಿದ ಸಂತಸವನ್ನು, ಅವಳ ಅಪ್ಪುಗೆ ನೀಡಿದ ಸಾಂತ್ವನವನ್ನು ನಾನು ಖಂಡಿತಾ ಪದಗಳಲ್ಲಿ ವರ್ಣಿಸಲಾರೆ..... ಆ ಭಾವವನ್ನು ವಿವರಿಸಬಲ್ಲ ಒಂದು...‌.  ಒಂದೇ ಒಂದು ಪದವೂ ಜಗದಲಿಲ್ಲ.

ಅವಳ ಈ ನೆಮ್ಮದಿಯನ್ನೇ ತಾನೇ ನಾನು ಬಯಸಿದ್ದು......... ಎದೆಯ ಮೇಲಿನ ಭಾರ ಇಳಿದಂತಾ ಭಾವ.........

ಅವಳೇ ನನ್ನ ಸಮಾಧಾನಿಸಿ ಕಳಿಸಿದ್ದಳು ಅಂದು.

ಅವಳು ಆಶ್ರಯ ಸಂಸ್ಥೆಗೆ ಬಹುಬೇಗ ಹೊಂದಿಕೊಂಡಿದ್ದಳು. ಅಲ್ಲಿನ ಕೆಲಸ ಕಾರ್ಯಗಳನ್ನು ಬಹಳ ಆಸ್ತೆಯಿಂದ ಮಾಡುತ್ತಿದ್ದಳು. ಈ ವಾತಾವರಣ ಅವಳಿಗೆ ನೆಮ್ಮದಿ ನೀಡಿದ್ದಂತು ಸತ್ಯ. ನಾನು ದಿನವೂ ಅವಳನ್ನು ಭೇಟಿಯಾಗುತ್ತಿದ್ದೆ. ಯಾವುದೇ ವಿಷಯದ ಹಂಗಿಲ್ಲದೇ ಗಂಟೆಗಟ್ಟಲೆ ಹರಟುತ್ತಿದ್ದೆವು. ಈ ನಡುವೆ ಅವಳ ಕೆಲಸದ ವಿಷಯ ನನ್ನ ತಲೆ ಕೊರೆಯುತ್ತಿತ್ತು. 

ಒಂದು ಸಂಜೆ ಅವಳೇ ಮೆಲ್ಲಗೆ ನನ್ನಲ್ಲಿ ಕೇಳಿದ್ದಳು "ಇಲ್ಲಿನ ವಾತಾವರಣದಲ್ಲಿ ಸಮಯ ಹೋಗುವುದೇ ತಿಳಿಯುವುದಿಲ್ಲ. ಆದರೂ...... ಸಮಾ, ನೀನು ತಪ್ಪು ತಿಳಿಯಲ್ಲ ಅಂದ್ರೆ..... ನನಗೊಂದು ಕೆಲಸ ಹುಡುಕಬಹುದಾ? ಒಂದು ಕೆಲಸ ಅಂತಿದ್ರೆ ಅದೊಂದು ಸ್ವಾತಂತ್ರ್ಯ ಕೊಡುತ್ತೆ. ನಾನಿಲ್ಲಿ ಖುಷಿಯಾಗಿಲ್ಲ ಅಂತಲ್ಲ. ಆದ್ರೆ ಎಷ್ಟು ದಿನ ಅಂತ ಹೀಗೆ ಇರೋದು....‌" 

"ಇಲ್ಲಾ ನವ್ಯಾ, ನಾನೂ ಆ ಹುಡುಕಾಟದಲ್ಲೇ ಇದ್ದೀನಿ. ವಿದ್ಯಾಭ್ಯಾಸದ ದಾಖಲೆಗಳಿಲ್ಲದೇ ಯಾರೂ ಕೆಲಸ ಕೊಡಲಾರರು. ಹಿಂದುಮುಂದು ನೋಡದೆ ಯಾರ್ಯಾರ‌ ಬಳಿಯೋ ನಿನ್ನನ್ನು ಕೆಲಸಕ್ಕೆ ಕಳಿಸಲಾಗದು. ಕೆಲವು ಕಡೆ ನೋಡಿದೆ ಆದ್ರೆ ನಂಗಿಷ್ಟ ಆಗ್ಲಿಲ್ಲ ಕಣೇ. ಸ್ವಲ್ಪ ಸಮಯ ಕೊಡು. ನಾನು ವ್ಯವಸ್ಥೆ ಮಾಡ್ತೀನಿ" ಅಂದಿದ್ದೆ. ಆದರೆ ನನಗ್ಯಾವ ದಾರಿಯೂ ಕಾಣುತ್ತಿರಲಿಲ್ಲ. ಅದೇ ಯೋಚನೆಯಲ್ಲೇ ಮುಳುಗಿದ್ದ ನನ್ನನ್ನು ಸರಿಯಾಗಿ ಗಮನಿಸಿದ್ದರು ಮೀರಾ.

"ಎರಡು ದಿನದಿಂದ ನೋಡ್ತಿದ್ದೀನಿ. ನಿನ್ನ ಗಮನ ಇಲ್ಲಿಲ್ಲ. ಏನಾದ್ರೂ ಸಮಸ್ಯೆ ಇದ್ಯಾ?" ಕೇಳಿದ್ದರು. ಅವರಿಗೆ ಹೇಳಬೇಕೆನಿಸಿತು. ಅವರು ಬೇರೆಯವರ ನೋವಿಗೆ ಸ್ಪಂದಿಸುವ ಗುಣ ಹೊಂದಿದಾಕೆ. ಏನಾದರೂ ಸಹಾಯ ಮಾಡಬಹುದು ಎನಿಸಿದಾಗ ಅವರಿಗೆ ಸಂಕ್ಷಿಪ್ತವಾಗಿ ಅವಳ ಬಗ್ಗೆ ವಿವರಿಸಿದೆ. ತುಂಬಾ ತೊಂದರೆಯಲ್ಲಿದ್ದಳು ಎಂದೆನಾದರೂ ಎಲ್ಲಿ, ಏನು ಮಾಡುತ್ತಿದ್ದಳೆಂದು ಹೇಳಲಿಲ್ಲ. ಅವರೂ ಕೇಳಲಿಲ್ಲ. ಈಗ ಅವಳಿಗೆ ಕೆಲಸ ಹುಡುಕಬೇಕಾಗಿದೆ ಆದರೆ ಅವಳ ವಿದ್ಯಾಭ್ಯಾಸ ಕಡಿಮೆ ಮತ್ತದರ ದಾಖಲೆಗಳೂ ಇಲ್ಲ ಎಂದೆ. ಅವರಿಗೆ ನನ್ನ ಸಮಸ್ಯೆ ಅರ್ಥವಾಗಿತ್ತು. 

ಸ್ವಲ್ಪ ಯೋಚಿಸಿದವರೇ "ನೀನು ನಾಳೆ ಅವಳನ್ನು ಇಲ್ಲಿಗೆ ಕರೆತಾ. ಅಕೌಂಟ್ ಸೆಕ್ಷನ್ನಲ್ಲಿ ವರ್ಕ್ ಲೋಡ್ ಜಾಸ್ತಿ ಇದೆ ಅಂತಿದ್ರು. ಹೇಗೂ ಕಲಿಯೋದರಲ್ಲಿ ಚುರುಕು ಅಂತೀಯಲ್ಲ. ಒಂದು ತಿಂಗಳು ಟ್ರೈನಿಂಗ್ ಕೊಟ್ಟು ನೋಡೋಣ. ಕೆಲಸ ಗೊತ್ತಾದ್ರೆ ಅಲ್ಲೇ ಮುಂದುವರೀಲೀ ಇಲ್ಲಾ ಆಮೇಲೆ ಬೇರೆ ನೋಡೋಣ" ಅಂದಿದ್ದರು. ನನಗಂತೂ ವಿಪರೀತ ಖುಷಿ. ನವ್ಯಾ ಇಲ್ಲೇ ನನ್ನ ಜೊತೆಯೇ ಇರ್ತಾಳೆ ಅನ್ನೋ ನೆಮ್ಮದಿ ಬೇರೆ.

ಮರುದಿನದಿಂದಲೇ ನವ್ಯಾ ಧನ್ವಂತರಿಯ ಅಕೌಂಟ್ ಡಿಪಾರ್ಟ್ಮೆಂಟ್ ಸೇರಿದಳು. ಕಲಿಯುವ ಅಪಾರ ಆಸಕ್ತಿ ಇತ್ತವಳಿಗೆ. ಕೆಲವೇ ದಿನಗಳಲ್ಲೇ ಕೆಲಸದಲ್ಲಿ ಪರ್ಫೆಕ್ಟ್ ಅಂತ ಸರ್ಟಿಫಿಕೇಟ್ ತೆಗೆದುಕೊಂಡುಬಿಟ್ಟಿತ್ತು ಹುಡುಗಿ. ಅವತ್ತು ಅನಿಸಿತ್ತು ಇವಳು ಆ ನರಕದೊಳಗೆ ಸಿಕ್ಕಕೊಳ್ಳದೇ ಇದ್ದಿದ್ದರೆ ಖಂಡಿತಾ ಬಹಳ ಸಾಧಿಸುತ್ತಿದ್ದಳು ಎಂದು.

ಹೀಗೆ ನವ್ಯಾ ಧನ್ವಂತರಿ ಬಳಗಕ್ಕೆ ಸೇರಿದ್ದಳು. ನಂತರದ ದಿನಗಳಲ್ಲಿ ಆಸ್ಪತ್ರೆಗೆ ಹತ್ತಿರವೇ ಒಂದು ಪುಟ್ಟ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾಯಿತು. ನಾನು ಮಿಸ್ಟರ್ ಸತ್ಯಂ ರಾವ್ ಅವರ ಬಂಗಲೆಯ ಕಡೆ ಹೋಗುವುದೂ ಕಡಿಮೆ ಆಯಿತು. ವಾರದಲ್ಲಿ ಮೂರ್ನಾಲ್ಕು ದಿನ ಇಲ್ಲೇ ನನ್ನ ವಾಸ್ತವ್ಯ. ನಮ್ಮಿಬ್ಬರ ಅವ್ಯಾಹತ ಕಾಡುಹರಟೆಗಳಲ್ಲಿ, ಪರಸ್ಪರ ಅಕ್ಕರೆಯ ಆಸರೆಯಲ್ಲಿ, ಇಬ್ಬರು ಪಾಕಪ್ರವೀಣೆಯರ ನಳಪಾಕದಲ್ಲಿ, ಕೊನೆಮೊದಲಿಲ್ಲದ ಸಂವಾದಗಳಲ್ಲಿ, ಹುಚ್ಚು ಅಲೆದಾಟಗಳಲ್ಲಿ ಸಮಯ ಅಂಕೆಗೆ ಸಿಗದಂತೆ ಸರಿಯುತ್ತಿತ್ತು........

ಈ ನಡುವೆ ಯಾರದೋ ಹೃದಯದಲ್ಲಿ ಪ್ರೀತಿಯ ಮೊಳಕೆಯೊಂದು ಕುಡಿಯೊಡೆದಿತ್ತೇ???? 

ಆ ಕ್ಷಣಕ್ಕೆ ನನಗೆ ತಿಳಿಯಲಿಲ್ಲ..... ಅವಳಿಗೋ ಅದರ ಪರಿವೆಯೇ ಇರಲಿಲ್ಲ.....

ಆದರೆ ಬಹುಬೇಗ ಆ ಪ್ರೀತಿಯ ಘಮಲು ನನ್ನ ಕಣ್ಣ್ಮುಂದೆಯೇ ವ್ಯಾಪಿಸಿದಾಗ........

ಅವನು ನನ್ನೆದುರಲ್ಲೇ ನಿಂತು ಅವಳ ಮೇಲೆ ತನಗಿರುವ ಪ್ರೇಮವನ್ನೂ, ಅವಳೊಂದಿಗಿನ ತನ್ನ ಭವಿಷ್ಯದ ಕನಸುಗಳ ಮೆರವಣಿಗೆಯನ್ನೂ ಹಂಚಿದಾಗ......... 

ಅವನ ಅದಮ್ಯ ಪ್ರೇಮಕ್ಕೆ ಕೈ ಮುಗಿಯಲೋ ಇಲ್ಲಾ ಅವಳ ಹಿನ್ನೆಲೆಯೆಂಬ ಪ್ರೇತಕ್ಕೆ ತಲೆಬಾಗಲೋ ಎಂದು ಅರಿವಾಗದೇ ಬೆಚ್ಚಿದ್ದೆ............

ಹಾಗೆ ಶುರುವಾಗಿತ್ತು ಒಂದು ಪ್ರೇಮ ಪರ್ವ..........

                 ಮುಂದುವರೆಯುತ್ತದೆ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ