ಮಂಗಳವಾರ, ಜೂನ್ 30, 2020

ಅನೂಹ್ಯ 43

ನವ್ಯಾಳ ಧೈರ್ಯದಿಂದಾಗಿ ಸತ್ಯ ಹೊರಬಿದ್ದಿತ್ತು. ತಪ್ಪು ಕಲ್ಪನೆಗಳು ದೂರಾಗಿತ್ತು. ಸಂಬಂಧಗಳ ಬೆಸುಗೆ ಇನ್ನಷ್ಟು ಗಟ್ಟಿಯಾಗಿತ್ತು. 

ನವ್ಯಾ ಬದುಕಿನ ಅತೀ ದೊಡ್ಡ ಹಾಗೂ ನಿರ್ಣಾಯಕ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಳು........

ನವ್ಯಾಳ ಬದುಕನ್ನು ಹಸನಾಗಿ ಕಟ್ಟಿಕೊಡುವ ಸಮನ್ವಿತಾಳ ಆಸೆ ಕೊನೆಗೂ ಈಡೇರಿತ್ತು.....

ಈಗ ಪ್ರಶ್ನೆಯಿದ್ದುದು ಸಮಾಜದ ಬಗ್ಗೆ......

"ನವ್ಯಾ….. ಇನ್ನು ನೀನು ನೋಯುವ, ಹೆದರುವ ಅಗತ್ಯವಿಲ್ಲ. ನೀನು ಗಟ್ಟಿಯಾಗಿರಬೇಕು. ನೀನೊಬ್ಬಳೇ ಅಲ್ಲ….. ನಾವೆಲ್ಲರೂ ಈ ಸಮಾಜವನ್ನೆದುರಿಸಲು ಸನ್ನದ್ಧರಾಗಿರಬೇಕು. ನನಗನಿಸಿದಂತೆ ಈ ವಿಷಯ ಹೊರಗೆ ತಿಳಿಯುವ ಸಾಧ್ಯತೆ ಕಡಿಮೆ. ಒಂದು ವೇಳೆ ನವ್ಯಾಳ ಹಿನ್ನೆಲೆ ತಿಳಿದ ವಿಘ್ನಸಂತೋಷಿ ಕಿಡಿಗೇಡಿಗಳ್ಯಾರಾದರೂ ಆ ಬಗ್ಗೆ ಕೆದಕಿ ವದಂತಿ ಹಬ್ಬಿಸಿದರೇ ಮಾತ್ರವೇ ವಿಷಯ ಬಹಿರಂಗವಾಗುವುದು. ಹಾಗಾಗದಿರಲೀ ಎಂದೇ ಆಶಿಸೋಣ…… ಒಂದು ವೇಳೆ ಹಾಗೆ ನಡೆದರೇ...... ಆಗ ಮುಂದಿನ ಸನ್ನಿವೇಶಗಳನ್ನು ಎದುರಿಸಲು ನಾವು ಒಗ್ಗಟ್ಟಾಗಿ ತಯಾರಿರಬೇಕು. ಹೆಚ್ಚೇನಿಲ್ಲ..... ಯಾರು ಏನೇ ಕೊಂಕಾಡಿದರೂ, ಕುಹಕ ಮಾಡಿದರೂ, ನಮ್ಮ ಚಾರಿತ್ರ್ಯ ವಧೆ ಮಾಡಿದರೂ ಅದನ್ನು ತಲೆಗೆ ಹಾಕಿಕೊಳ್ಳದಷ್ಟು ಸ್ಥಿತಪ್ರಜ್ಞರಾಗಿರಬೇಕು. ನವ್ಯಾಳ ಬಗ್ಗೆ ಬಲ್ಲವರು ಅವಳ ಬಗ್ಗೆ ಎಂದೂ ಸದರವಾಗಿ ಮಾತನಾಡಲಾರರು. ಆದರೂ ಆಡುವ ಜನರ ಬಾಯಿ ಮುಚ್ಚಿಸಲಾಗದು. ನಾವು ಹೇಗೇ ಬದುಕಿದರೂ ಆಡಿಕೊಳ್ಳುವವರು, ಟೀಕಿಸುವವರೂ ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಪಾಡಿಗೆ ನಾವಿರಬೇಕು. ಇದು ಕಷ್ಟವಾದರೂ ಅಸಾಧ್ಯವೇನಲ್ಲ. ನಾವೇನೆಂಬುದು ನಮಗೆ ತಿಳಿದಿದ್ದರೆ ಸಾಕು. ಅದನ್ನು ಲೋಕದೆದರು ರುಜುವಾತು ಪಡಿಸುವ ಅಗತ್ಯವಿಲ್ಲ. ನಮ್ಮ ಆತ್ಮಸಾಕ್ಷಿಗೆ ನಾವು ನಿಷ್ಠರಾಗಿರಬೇಕಷ್ಟೇ..... " ರಾತ್ರಿ ಪೂರಾ ಯೋಚಿಸಿ ನಿರ್ಧರಿಸಿದ್ದನ್ನು ಮನೆಯವರಿಗೆ ಮುಖ್ಯವಾಗಿ ನವ್ಯಾಳಿಗೆ ತಿಳಿಸಿ ಹೇಳಿದರು ಸತ್ಯನಾರಾಯಣ. 

ಅವರ ಮಾತುಗಳು ಎಲ್ಲರಿಗೂ ಸರಿಯೆನಿಸಿತು. ನವ್ಯಾಳತ್ತ ನೋಡಿ,

"ನಮ್ಮೆಲ್ಲರಿಗಿಂತಲೂ ಮುಖ್ಯವಾಗಿ ನೀನು ಬದಲಾಗಬೇಕು ಮಗೂ.... ನೀನು ಗಟ್ಟಿಗಿತ್ತಿಯಾಗಬೇಕು. ಹೆದರಕೂಡದು. ಸಮಯ ಬಂದರೆ ಎಲ್ಲರನ್ನು ಎದುರಿಸಲು ಸಿದ್ಧವಾಗಿರಬೇಕು. ಎರಡು ವಿಷಯಗಳು ಯಾವತ್ತೂ ನಿನ್ನ ತಲೆಯಲ್ಲಿರಲಿ. ಒಂದು ನಡೆದುಹೋದದ್ದರಲ್ಲಿ ನಿನ್ನದೇನೂ ತಪ್ಪಿಲ್ಲ. ಎರಡನೇಯದಾಗಿ ನಿನ್ನ ಕುಟುಂಬ ನಿನ್ನ ಜೊತೆಗಿದೆ. ಇದರ ಹೊರತು ಬೇರೇನನ್ನೂ ಯೋಚಿಸಬೇಡ…..." ಅವಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಹೇಳಿದರು. ಅವಳೊಬ್ಬಳು ಸಮಸ್ಯೆಯನ್ನು ಎದುರಿಸಿ ನಿಂತರೆ ಉಳಿದಿದ್ದು ಹೇಗೋ ಸಂಭಾಳಿಸಬಹುದೆಂಬ ಅನಿಸಿಕೆ ಅವರದು.

ಆದರೆ ನವ್ಯಾಳ ಉತ್ತರ ಅವರೆಣಿಕೆಗೂ ಮೀರಿತ್ತು. ಅವರ ಮಾತುಗಳನ್ನು ಕೇಳಿ ನಕ್ಕಳು ಹುಡುಗಿ…... ಆ ನಗುವಿನಲ್ಲಿ ಇದ್ದಿದ್ದು ಅಸಹ್ಯವೋ, ಕುಹಕವೋ, ಇಲ್ಲಾ ಹೃದಯಹೀನ ಲೋಕದ ಬಗೆಗಿನ ತಿರಸ್ಕಾರವೋ ಹೇಳುವುದು ಕಷ್ಟ.

"ಈ ಬಗ್ಗೆ ಚಿಂತಿಸಬೇಡಿ ಅಪ್ಪಾ. ಈ ಲೋಕ ನನ್ನ ಬಗ್ಗೆ ಏನಂದುಕೊಳ್ಳುತ್ತೇ? ಜನ ನನ್ನ ಬಗ್ಗೆ ಏನು ಮಾತಾಡ್ತಾರೆ? ಅನ್ನೋದು ನನಗ್ಯಾವತ್ತೂ ಮುಖ್ಯವಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ನಾನು ನನ್ನ ಸಂಬಂಧಿಯಿಂದಲೇ ಮೋಸಹೋಗಿ ಮಾರಾಟವಾದಾಗ ಈ ಜನರ್ಯಾರೂ ನನ್ನ ಸಹಾಯಕ್ಕೆ ಬರ್ಲಿಲ್ಲ. ಎಷ್ಟು ಜನರ ಕೈ ಕಾಲು ಹಿಡಿದಿದ್ದೆ ಅಂದು? ಆ ನರಕದಲ್ಲಿ ಇವರೂ ನಮ್ಮಂತೆ ಜೀವವಿರುವ ಮನುಷ್ಯರು ಎಂಬ ಕನಿಕರವೂ ಇಲ್ಲದೇ ಮೃಗಗಳಿಗಿಂತ ಕಡೆಯಾಗಿ ಮೈಮೇಲೆ ಎರಗುತ್ತಿದ್ದ ನರರೂಪಿ ರಾಕ್ಷಸರಿಂದ ಬಿಡಿಸಿ ಎಂದು ಚೀತ್ಕರಿಸಿ ಬೊಬ್ಬಿಡುವಾಗಲೂ ಈ ಪ್ರಜ್ಞಾವಂತ ಜನರ ಸಮಾಜ ಸಹಾಯಹಸ್ತ ಚಾಚಲಿಲ್ಲ. ಅಷ್ಟೇಕೆ? ಅಲ್ಲಿ ಬರುವ ಗಿರಾಕಿಗಳಲ್ಲಿ  ಹಲವು ಮಂದಿ ಈ ಸಮಾಜದ ಗಣ್ಯಾತಿಗಣ್ಯರು….... ಇಂತಹವರ ಮುಖವಾಡದ ಹಿಂದಿನ ಅಸಲಿ ಮುಖವನ್ನು, ಆ ಮುಖದ ಹಿಂದಿರುವ ಕ್ರೌರ್ಯವನ್ನು ನಾನು ಕಂಡಿದ್ದೇನೆ. ಸಮಾಜದ ಸ್ವಾಸ್ಥ್ಯ ಕಾಪಾಡುವ, ನ್ಯಾಯವನ್ನು ಕಾಯುವ, ಜನರನ್ನು ರಕ್ಷಿಸುವ ಹೊಣೆ ಹೊತ್ತ ಹಲವರು ಕತ್ತಲು ಕವಿದೊಡನೇ ತಮ್ಮ ಮುಖವಾಡ ಕಳಚಿ ಅದೇ ವೇಶ್ಯಾಗೃಹಗಳಿಗೆ ಬಂದು ಅಮಾಯಕ ಹೆಣ್ಣುಗಳ ಮೇಲೆರಗಿ ಹೊರಳಾಡುತ್ತಾರೆ. ಇನ್ನು ಜನಸೇವೆಯೇ ಜನಾರ್ಧನ ಸೇವೆ ಎಂದು ಪ್ರಜಾಸೇವೆಯ ಕೈಂಕರ್ಯದಲ್ಲಿ ತೊಡಗಿಕೊಳ್ಳುವ ಹಲವು ಪುಢಾರಿಗಳು, ಪ್ರಖ್ಯಾತ ಉದ್ಯಮಿಗಳು, ಅತೀ ಸಿರಿವಂತರು ಬೆಲೆವೆಣ್ಣುಗಳನ್ನು ತಮ್ಮ‌ ಖಾಸಗಿ ಗೆಸ್ಟ್ ಹೌಸುಗಳಿಗೆ ಕರೆಸಿಕೊಂಡು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಾರೆ. ಕೆಲವೊಮ್ಮೆಯಂತೂ ಅವರುಗಳ ವಿಕೃತಿಗಳಿಗೆ ಮೇರೆಯೇ ಇರುವುದಿಲ್ಲ. ಹತ್ತು, ಹದಿನೈದು ಜನರು ಒಟ್ಟಿಗೇ ಹುಚ್ಚುನಾಯಿಗಳಂತೆ ಮೈಮೇಲೆ ಎರಗುವುದೂ ಇದೆ. ಒಮ್ಮೊಮ್ಮೆ ಹೀಗೆ ಗೆಸ್ಟ್ ಹೌಸುಗಳಿಗೆ ಹೋದ ಹೆಣ್ಣುಗಳು ಜೀವಂತ ಮರಳುವುದೇ ಇಲ್ಲ….... 

ಹೌದು.......

ಆಕೆ ಬೆಲೆವೆಣ್ಣೇ ಇರಬಹುದು....... 

ಮೈ ಮಾರಿ ಹೊಟ್ಟೆ ಹೊರೆಯುವುದು ಅವಳ ವೃತ್ತಿಯೇ ಆಗಿರಬಹುದು…... 

ಆದರೆ ಅವಳಿಗೂ ಒಂದು ಮನಸ್ಸಿಲ್ಲವೇ? ಒಂದು ಹೃದಯವಿಲ್ಲವೇ? ಆಕೆಗೂ ನಿಮ್ಮಂತೆ ಜೀವವಿಲ್ಲವೇ…...? ತಮ್ಮ ಮನೆಯ ಸಾಕುನಾಯಿ ಕಳೆದುಹೋದರೆ ಕಂಪ್ಲೈಂಟ್ ಮಾಡುವ, ಹುಡುಕಿಕೊಡಿ ಎಂದು ಮಾಧ್ಯಮಗಳಲ್ಲಿ ಗೋಗರೆಯುವ, ಹುಡುಕಿಕೊಟ್ಟರೆ ಸಾವಿರಾರು ರೂಪಾಯಿ ಬಹುಮಾನ ಘೋಷಿಸುವ ಜನರಿದ್ದಾರೆ ಇಲ್ಲಿ. ಅದೇ ತಮ್ಮಂತೆ ಜೀವವಿರುವ, ಭಾವನೆಗಳಿರುವ ಹೆಣ್ಣೊಬ್ಬಳು ರಾತ್ರೋರಾತ್ರಿ ಕಣ್ಮುಚ್ಚಿ ತೆರೆಯುವುದರೊಳಗೆ ಈ ಲೋಕವನ್ನೇ ತೊರೆದರೂ ಕನಿಷ್ಠ ಅದರ ಸುಳಿವೂ ಸಿಗುವುದಿಲ್ಲ ಯಾರಿಗೂ.

ಒಬ್ಬ ಹುಡುಗಿ ಕಾಣೆಯಾಗಿದ್ದಾಳೆ, ಬಹುಶಃ ಬದುಕಿಯೇ ಇಲ್ಲವೇನೋ...... ಆದರೆ ಆ ಬಗ್ಗೆ ಯಾರಿಗೂ ಏನೂ ಚಿಂತೆಯಿಲ್ಲ ಎಂದರೆ ಅಮಾನವೀಯವಲ್ಲವೇ......? ಈ ಜಗಕ್ಕೆ ಆ ವೇದನೆಯ ಅರಿವಿಲ್ಲದಿರಬಹುದು. ಆದರೆ ನನಗಿದೆ. ನಾನದನ್ನು ಅನುಭವಿಸಿದ್ದೇನೆ. ನನ್ನ ಜೊತೆಗಿದ್ದ ಹಲವು ಹುಡುಗಿಯರು ಹೀಗೆ ಹೇಳಹೆಸರಿಲ್ಲದೇ ಅದೃಶ್ಯರಾಗಿದ್ದನ್ನು ಕಂಡಿದ್ದೇನೆ. ಹಿಂದಿನ ದಿನದವರೆಗೆ ಅವರು ಬದುಕಿದ್ದರೆಂಬ ಅಸ್ತಿತ್ವವೂ ಇಲ್ಲದಂತೆ, ಇಂತಹ‌ ಹೆಣ್ಣೊಬ್ಬಳು ಎಂದೋ ಒಂದು ಕಾಲದಲ್ಲಿ ಈ ಭೂಮಿಯಲ್ಲಿ ಜೀವಿತವಿದ್ದಳು ಎಂಬ ಕುರುಹೂ ಸಿಗದಂತೆ ಆಕೆ ಮಾಯವಾದಾಗ ಅವಳ ಬಗ್ಗೆ ವಿಚಾರಿಸಲು ಈ ಸಮಾಜ ಬರಲಿಲ್ಲ. ಅಂದಿಗೇ ನನ್ನ ಹಾಗೂ ಈ ಸಮಾಜದ ಋಣ ತೀರಿತು. ಈಗ ನನ್ನ ಪಾಲಿಗೆ ಈ ಸಮಾಜ ಅಸ್ತಿತ್ವದಲ್ಲಿಲ್ಲ. ನಾನಲ್ಲಿ ಅನುಭವಿಸಿದ ನರಕದೆದುರು ಈ ಜನ, ಇವರ ಚುಚ್ಚುನುಡಿಗಳು ತೃಣ ಸಮಾನ.

ಅದರಲ್ಲೂ ಈ ಚಾರಿತ್ರ್ಯ ಹರಣ ಮಾಡುವ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವವರು ಹೆಂಗಸರು ಎಂಬುದು ದೊಡ್ಡ ವಿಪರ್ಯಾಸ. ಒಬ್ಬ ಹೆಣ್ಣಾಗಿ ಆಕೆಯೇ ಇನ್ನೊಬ್ಬಳ ನೋವಿನಾಳವನ್ನು ಅರಿಯದೇ ಹೋಗುತ್ತಾಳೆ... 'ನೀನು ವೇಶ್ಯೆ ಅಂತ ಊರಲ್ಲಿರೋ ಗಂಡಸರೆಲ್ಲಾ ಆಡಿಕೊಳ್ಳುತ್ತಿದ್ದಾರೆ' ಎಂದು ಹಂಗಿಸುವವರು 'ಅವಳು ವೇಶ್ಯೆಯೆಂದು ನಿನಗೆ ಹೇಗೆ ಗೊತ್ತು? ನೀನೂ ಅವಳ ಗಿರಾಕಿಯೇನು?' ಎಂಬ ಪ್ರಶ್ನೆಯನ್ನು ಗಂಡಸರಿಗೆ ಎಂದೂ ಕೇಳುವುದಿಲ್ಲ‌ ಯಾಕೆ? 'ಅವನು ಏನು ಬೇಕಾದರೂ ಮಾಡ್ತಾನೆ. ಎಷ್ಟು ಹೆಂಗಸರೊಂದಿಗೆ ಬೇಕಾದರೂ ಸಂಬಂಧ ಇಟ್ಕೋತಾನೆ. ಏಕೆಂದರೆ ಅವನು ಗಂಡಸು. ಆದ್ರೆ ನೀನು ಹೆಂಗಸು….. ಹೆಂಗಸಾಗಿ ಇಂತಹ ಜಾರಿಣಿಯ ಕೆಲಸ ಮಾಡಲು ನಾಚಿಕೆ ಆಗೋಲ್ವಾ ನಿನಗೆ' ಎಂಬ ಉತ್ತರ ಈ ಸಮಾಜದ್ದಾಗಿದ್ದರೆ ನನ್ನ ಧಿಕ್ಕಾರವಿರಲೀ ಈ ಸಮಾಜಕ್ಕೆ...... ಧಿಕ್ಕಾರವಿರಲಿ ನಿಮ್ಮ ಕೀಳು ಯೋಚನೆಗೆ....... ಇಂತಹ ತುಚ್ಛ ಯೋಚನೆಯುಳ್ಳ ಜನರ ಬಗ್ಗೆ, ಜಗದ ಬಗ್ಗೆ ನಾನೆಂದೂ ಚಿಂತಿಸಲಾರೆ. ಇವರಿಗೆ ನನ್ನ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. 

ನನ್ನ ಬಗ್ಗೆ ಮಾತಾಡಲು, ಬೈಯಲು ಅಧಿಕಾರ ಇರುವುದು ಸಮನ್ವಿತಾಳಿಗೆ ಮತ್ತು ಈ ಮನೆಯವರಿಗೆ ಮಾತ್ರ. ಏಕೆಂದರೆ ಇಷ್ಟು ವಿಶಾಲ ಪ್ರಪಂಚದಲ್ಲಿ ನನ್ನನ್ನು ಅಕ್ಕರೆಯಿಂದ ಆದರಿಸಿ ಪ್ರೀತಿ ತೋರಿದವರು ನೀವುಗಳು ಮಾತ್ರವೇ. ನಿಮ್ಮ ಋಣ ಹಿರಿದಾಗಿದೆ ನನ್ನ ಮೇಲೆ. ನಿಮ್ಮ ಕಣ್ಣುಗಳಲ್ಲಿ ನನ್ನ ಬಗ್ಗೆ ಅಸಹ್ಯ, ಬೇಸರ,ತಿರಸ್ಕಾರ ಕಂಡರೆ ಮಾತ್ರ ನಾನು ಸಹಿಸಲಾರೆ. ನೀವು ನನ್ನನ್ನು ಕ್ಷಮಿಸಿ ಒಪ್ಪಿದಿರಲ್ಲ. ನನಗಷ್ಟೇ ಸಾಕು...... ಇನ್ಯಾರಿಗೂ ಹೆದರಲಾರೆ ನಾನು......" ದೃಢವಾಗಿತ್ತು ಅವಳ ನಿಲುವು.

ಅವಳೇ ಅಷ್ಟು ಧೈರ್ಯವಾಗಿದ್ದು ಕಂಡು ಮನೆಯವರಿಗೆ ನೆಮ್ಮದಿ ಎನಿಸಿತು‌. ಅವರೂ ನಿರಾಳ....

"ಆದರೆ ಕಾರ್ತಿಕ್.....?"  ಅನುಮಾನದಿಂದ ಕೇಳಿದಳು ಸಮನ್ವಿತಾ.

"ಇನ್ನು ಈ ಮನೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಬೇಡ. ಇಂದು ಇಲ್ಲಿ ನಡೆದದ್ದು ನಮ್ಮ ನಡುವೆಯಷ್ಟೇ ಇರುತ್ತದೆ. ಹಾಗೆ ಈ ಮಾತುಕತೆಯನ್ನು ನಾವು ಇಂದು ಇಲ್ಲಿಯೇ ಮರೆಯುತ್ತೇವೆ ಕೂಡಾ. ಈ ಬಗ್ಗೆ ಕಾರ್ತೀಯನ್ನೂ ಒಳಗೊಂಡು ಇನ್ಯಾರಿಗೂ ಏನನ್ನೂ ಹೇಳುವ, ಸಮಜಾಯಿಷಿ ನೀಡುವ ಅಗತ್ಯವಿಲ್ಲ. ಅಷ್ಟು ಪ್ರಮುಖವಾದ ವಿಚಾರವೂ ಇದಲ್ಲ. ನವ್ಯಾ ನಮ್ಮ ಮಗಳಷ್ಟೇ….. ಇನ್ನೆಂದೂ ಈ ವಿಚಾರ ಪ್ರಸ್ತಾಪವಾಗಬಾರದು" ಕಟ್ಟುನಿಟ್ಟಾಗಿ ನುಡಿದರು ಮಂಗಳಾ. ಸತ್ಯನಾರಾಯಣರು ಸಹ ಮಡದಿಯ ಮಾತನ್ನು ಅನುಮೋದಿಸಿ, "ಹೌದು. ಕಾರ್ತೀಗೆ ಹೇಳುವ ಅಗತ್ಯವಿಲ್ಲ. ಮುಂದೆಂದಾದರೂ ತಿಳಿದರೆ ಅವನ ನಿರ್ಧಾರವೂ ನಮ್ಮಂತೆಯೇ ಇರುತ್ತೆ ಅನ್ನೋ ಭರವಸೆ ನನಗಿದೆ" ಎಂದರು.

ಈ ಕರಾರು ಎಲ್ಲರಿಗೂ ಒಪ್ಪಿಗೆಯಾಯಿತು ಕೂಡಾ.

ನವ್ಯಾಳ ಇಷ್ಟು ವರ್ಷಗಳ ಹೋರಾಟದ ಬದುಕಿಗೆ ಇಂದು ನಿಜ ಅರ್ಥದಲ್ಲಿ ಗೆಲುವು ಸಿಕ್ಕಿತ್ತು. ಆ ಸಂತೋಷವನ್ನು ಅವಳಿಗಿಂತಲೂ ಹೆಚ್ಚಾಗಿ ಅನುಭವಿಸಿದ್ದು ಸಮನ್ವಿತಾ. ಗೆಳತಿಯ ಸಂತೋಷ ಕಂಡು ತಾನೂ ಸಂಭ್ರಮಿಸಿದಳು. ಅವಳನ್ನು ಆಲಂಗಿಸಿಕೊಂಡವಳು, "ದಯವಿಟ್ಟು ಇನ್ನಾದರೂ ನಗೋದನ್ನು ಕಲಿ.... ಇಷ್ಟು ವರ್ಷ ನಿನ್ನ ಕಳಾಹೀನ ಮುಖ ನೋಡಿದಾಗಲೆಲ್ಲಾ ನಿನಗೊಂದು ಒಳ್ಳೆಯ ಬದುಕನ್ನು ಕಟ್ಟಿಕೊಡಬೇಕೆಂಬ ನನ್ನ ಪ್ರಯತ್ನಕ್ಕೆ ಯಾಕೆ ಯಶಸ್ಸು ಸಿಗ್ತಾನೇ ಇಲ್ಲ ಅಂತ ಬೇಜಾರಾಗೋದು. ಇವತ್ತು ನಿನ್ನ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಕ್ಕಿದೆ. ಈಗ ಸಂತೋಷ ತಾನೇ? ಇನ್ನು ಜನರಿಗೆ ಗೊತ್ತಾದ್ರೆ ಹಾಗೆ ಮಾತಾಡ್ತಾರೆ, ಹೀಗೆ ಚುಚ್ಚಿ ಮಾತಾಡ್ತಾರೆ ಅಂತ ಯೋಚಿಸ್ಕೊಂಡು ಕೂತ್ಕೋಳ್ಳಲ್ಲ ಅಲ್ವಾ?" ಕೇಳಿದಳು.

"ಖಂಡಿತಾ ಇಲ್ಲಾ ಸಮಾ..... ಇನ್ಯಾವ ಬೇಸರವೂ ಇಲ್ಲ, ನೋವೂ ಇಲ್ಲ. ಸಮಾ..... ಥ್ಯಾಂಕ್ಯೂ ಫಾರ್ ಎವ್ವೆರಿಥಿಂಗ್....... ಥ್ಯಾಂಕ್ಸ್ ಅನ್ನೋದು ಬಹಳ ಚಿಕ್ಕ ಪದ. ನೀನು ಯಾರು? ನನ್ನ ಬದುಕಲ್ಲಿ ನೀನ್ಯಾಕೆ ಬಂದೆ? ನಿನಗ್ಯಾಕೆ ನನ್ನ ಮೇಲೆ ಈ ಪರಿಯ ಅಕ್ಕರೆ….? ಊಹ್ಮೂಂ...... ನಂಗೊತ್ತಿಲ್ಲ. ಆದ್ರೆ ನನ್ನ ಈ ಬದುಕು ನೀನು ನೀಡಿದ ಕಾಣಿಕೆ ಅನ್ನೋದು ಮಾತ್ರ ನನಗೆ ಗೊತ್ತು. ನೀನು ನನಗೆ ಸಿಕ್ಕಿರಲಿಲ್ಲ ಅಂದ್ರೇ ಅದೇ ನರಕದಲ್ಲಿ ಹೆಣಗಿ ಅಸ್ತಿತ್ವವಿಲ್ಲದ ಅನಾಥ ಶವವಾಗಿರ್ತಿದ್ದೆನೇನೋ...... ಅಂತಹ ಹೀನ ಸ್ಥಿತಿಗೆ ತಲುಪದಂತೆ ತಡೆದು ಚೆಂದದ ಬದುಕೊಂದನ್ನು ನನಗಾಗಿ ರೂಪಿಸಿಕೊಟ್ಟಿದ್ದಕ್ಕೆ ಉಸಿರಿರುವವರೆಗೂ ನಿನಗೆ ಅಭಾರಿ ಕಣೇ…..." ಗದ್ಗದಿತಳಾಗಿ ನುಡಿದಳು.

"ಇಂತಹ ಹುಡುಗಿನ ನನ್ನ ಜೊತೆಗಾತಿಯಾಗಿ ದಯಪಾಲಿಸಿದ್ದಕ್ಕೆ ನಾನೂ ನಿನಗೆ ಅಭಾರಿ......." ಕಿಶೋರನೂ ಮಡದಿಯೊಂದಿಗೆ ದನಿಗೂಡಿಸಿದ.

"ನಾವಿಬ್ರೂ ಕೂಡಾ ನಿನಗೆ ಚಿರ ಋಣಿಗಳೇ ಸಮನ್ವಿತಾ....." ಮಂಗಳಮ್ಮ ಪತಿಯನ್ನು ಒಡಗೂಡಿಸಿಕೊಂಡು ನುಡಿದರು.

"ಆದ್ರೆ ಇಷ್ಟೊಳ್ಳೆಯ ಮಾಣಿಕ್ಯಗಳನ್ನು ನಮಗಾಗಿ ದಯಪಾಲಿಸಿದ್ದಕ್ಕೆ ಆ ಭಗವಂತನಿಗೆ ನಾನು, ನೀನು ಎಷ್ಟು ಋಣಿಯಾಗಿದ್ರೂ ಸಾಲದು ಮಂಗಳಾ.  ನಿಜಕ್ಕೂ ಈ ದಿನ ಬಲು ಶುಭದಾಯಕ…... ಎಲ್ಲ ಸಮಸ್ಯೆಗಳು ನಮ್ಮ ಮಟ್ಟಿಗೆ ಬಗೆಹರಿದು, ಮನಗಳು ತಿಳಿಯಾಗಿರುವ ಖುಷಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರೋಣ. ಇನ್ನು ಮುಂದೆ ಯಾವುದೇ ವಿಘ್ನಗಳೂ ಬರದಿರಲಿ ಅಂತ ಭಗವಂತನಲ್ಲಿ ಬೇಡಿಕೊಂಡು ಹೊರಗೇ ತಿಂಡಿ ಮುಗಿಸಿಕೊಂಡು ಬರೋಣ. ಸಮನ್ವಿತಾ ನೀನು ಇವತ್ತು ರಜೆ ತಗೋ ಮಗಳೇ…..." ಸತ್ಯನಾರಾಯಣರು ಹೇಳಿದರು‌.

ಹಾಗೆ ತಿಳಿಯಾದ ಮನದೊಂದಿಗೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಟರು ಎಲ್ಲರೂ ಹೊಸ ಬದುಕಿನ ಹೊಸ್ತಿಲಲ್ಲಿ ಭಗವಂತನ ಅನುಗ್ರಹವನ್ನು ಆಶಿಸಿ...... 

             ***************************

ಮೇಲಿನ ಬಾಲ್ಕನಿಯಲ್ಲಿ ನಿಂತು ಎದುರಿನ ಉದ್ಯಾನವನ್ನೇ ದಿಟ್ಟಿಸುತ್ತಿದ್ದಳು ಸಮನ್ವಿತಾ….... ಅವನು ಅಷ್ಟೇ ತದೇಕಚಿತ್ತದಿಂದ ಅವಳನ್ನೇ ದಿಟ್ಟಿಸುತ್ತಿದ್ದ........

ಅವಳೊಂದು ಮುಗಿಯದ ಸೋಜಿಗ ಅವನ ಪಾಲಿಗೆ. ನೋಡಿದಷ್ಟೂ ತೀರದ ಗುಂಗು ಅವಳದು.....

ತುಸು ಸಮಯದ ನಂತರ ಅವನೆಡೆ ನೋಟ ಹರಿಸಿದವಳು ಅವನ ನೋಟ ತನ್ನಲ್ಲೇ ಇರುವುದು ಕಂಡು ನಸುನಕ್ಕಳು.

"ಏನು ಮಿಸ್ಟರ್ ಶರ್ಮಾ? ಹಾಗೆ ನೋಡ್ತಿದ್ದೀರಾ? ನನ್ನ ಚಿತ್ರ ಬರೆಯುವ ಯೋಚನೆ ಏನಾದ್ರೂ ಇದೆಯಾ ಹೇಗೆ?" ತಮಾಷೆಯಾಗಿ ಕೇಳಿದಳು.

ಅವನೇನೂ ಉತ್ತರಿಸಲಿಲ್ಲ.

ಸುಂದರ ಆಹ್ಲಾದಕರ ಸಂಜೆಯದು. ಹಕ್ಕಿಗಳ ಚಿಲಿಪಿಲಿ ಇಂಚರದ ಕಲರವ ಹಿತವಾಗಿತ್ತು.

ಆದರೆ ಅವನಿಗೆ ಅವಳ ಸಾಮೀಪ್ಯ ಎಲ್ಲಕ್ಕಿಂತಲೂ ಹೆಚ್ಚು ಹಿತವಾಗಿತ್ತು......

ಆ ದಿನ ಬೆಳಿಗ್ಗೆಯೇ ಅವಳನ್ನು ಮನೆಗೆ ಕರೆತಂದಿದ್ದ. ಅವಳಿಗೂ ಅವನ ಬಳಿ ಮನೆಯಲ್ಲಿ ನಡೆದಿದ್ದನೆಲ್ಲಾ ವಿಶದವಾಗಿ ವಿವರಿಸಬೇಕಿದ್ದರಿಂದ ಕರೆದ ಕೂಡಲೇ ಬರಲೊಪ್ಪಿದ್ದಳು. ಆದರೆ ಅವಳಿಗೆ ತಿಳಿದಿರದ ವಿಷಯ……. ಕಿಶೋರ್ ಮತ್ತು ನವ್ಯಾ ಹಿಂದಿನ ದಿನವೇ ಅವನಿಗೆ ಕರೆ ಮಾಡಿ ಈ ಮೀಟಿಂಗಿಗೆ ಅಡಿಪಾಯ ಹಾಕಿರುವುದು ಎಂದು. ಹೇಳಿದ ಮಾತು ಕೇಳದ ವೈದ್ಯೆಯನ್ನು ದಾರಿಗೆ ತರಬೇಕಿತ್ತಲ್ಲ‌.....

ಅವನೇ ಹೋಗಿ ಅವಳನ್ನು ಕರೆತಂದಿದ್ದರೂ ಬೆಳಗ್ಗಿನಿಂದ ಅವಳು, ಮೃದುಲಾ ಹಾಗೂ ಆಕೃತಿಯ ಮಾತಿನ ನಡುವೆ ಅಪ್ಪ ಮಗ ಮೂಕ ಪ್ರೇಕ್ಷಕರಾಗಿದ್ದು ವಿಧಿ ವಿಲಾಸವೇ ಸರಿ. ಸಂಜೆಯ ತನಕ ಇವರ ಬಿಡುವಿಲ್ಲದ ಹರಟೆಯಿಂದ ಬೇಸತ್ತವನು, "ಅಲ್ಲಾ, ಇಷ್ಟು ದಿನ ಆದ್ಮೇಲೆ ಏನೋ ದೇವರ ದಯೆಯಿಂದ ಒಂದು ದಿನ ಫ್ರೀಯಾಗಿ ಸಿಕ್ಕಿದ್ದಾರೆ ನಮ್ಮ ಡಾಕ್ಟ್ರು. ಒಂದಿಷ್ಟು ಮಾತಾಡೋಣ ಅಂತ ಕರ್ಕೊಂಡು ಬಂದ್ರೆ…. ಅಬ್ಬಬ್ಬಾ, ನೀವಿಬ್ಬರೂ ಅಮ್ಮ ಮಗಳು ಅದೇನು 24/7 ನ್ಯೂಸ್ ಚಾನೆಲ್ ತರ ನಾನ್ ಸ್ಟಾಪ್ ಬಡ್ಕೋತ ಇದ್ದೀರಲ್ಲ…... ಅದೇನು ಬಾಯಾ ಇಲ್ಲಾ ಬೊಂಬಾಯಾ.....? ಈಗೇನು ನಮ್ಮ ಡಾಕ್ಟ್ರನ್ನ ಬಿಡ್ತೀರಾ ಇಲ್ಲಾ ನಾನೇ ಅವರನ್ನು ಮನೆಯಿಂದ ಹೊರಗೆ ಕರ್ಕೊಂಡು ಹೋಗ್ಲಾ......?" ಧಮ್ಕಿ ಹಾಕಿ ಕೇಳಿದ.

"ಅಬ್ಬಬ್ಬಾ.... ಅಮ್ಮಾ.... ಸಮ್ ಒನ್ ಈಸ್ ಜಲಸ್. ಇರ್ಲೀ ಇರ್ಲೀ.... ನಡೀಲೀ. ನೋಡೋಣ. ಎಲ್ಲಿತನಕ ನಡಿಯುತ್ತೇ ಅಂತ..... " ಎಂದು ಅಣಕಿಸಿ ಎದ್ದು ಹೋದಳು ಆಕೃತಿ.

"ನೀನುಂಟು, ನಿನ್ನ ಡಾಕ್ಟ್ರುಂಟು….. ಕರ್ಕೊಂಡು ಹೋಗಪ್ಪಾ ಮಗನೇ......." ಕೈ ಮುಗಿದು ರೂಮಿಗೆ ಹೊರಟರು ಮೃದುಲಾ.

"ನೋಡಪ್ಪಾ, ಅಂತೂ ಇಂತೂ ಈಗ ಬಿಡುಗಡೆ ಕೊಟ್ಟಿದ್ದಾರೆ. ಅವರಿಬ್ಬರೂ ಮತ್ತೆ ದಂಡೆತ್ತಿ ಬರೋದ್ರೊಳಗೆ ಮಾತನಾಡಿ ಮುಗಿಸು…...." ಬೆನ್ನುತಟ್ಟಿ ಕಿವಿಮಾತು ಹೇಳಿದರು ಸಚ್ಚಿದಾನಂದ್.

ಅಪ್ಪನಿಗೆ ಧನ್ಯವಾದ ಸಲ್ಲಿಸಿ ಅವಳ ಕೈ ಹಿಡಿದು ಟೆರೇಸಿಗೆ ಕರೆತಂದಿದ್ದ. ಕರೆತಂದಿದ್ದು ಮಾತನಾಡಲೆಂದಾದರೂ ಬಂದಲ್ಲಿಂದ ಒಂದಕ್ಷರ ಮಾತನಾಡಿರಲಿಲ್ಲ ಅವನು…. 

"ಈಗೇನು? ಹೀಗೇ ಸ್ಟಾಚ್ಯೂ ಆಗಿರ್ತೀರಾ? ಸರಿ ಹಾಗಿದ್ರೆ ನಾನು ಕೆಳಗೆ ಹೋಗ್ತೀನಿ...." ಹೊರಟವಳ ಕೈ ಹಿಡಿದು ತನ್ನೆದುರು ಕೂಡಿಸಿಕೊಂಡ.

"ನಿನ್ನ ನೋಡ್ತಾ ಇದ್ರೆ ಮಾತಾಡ್ಬೇಕು ಅಂತ ಅನ್ನಿಸೋಲ್ಲ. ಸುಮ್ಮನೆ ಹೀಗೆ ನೋಡ್ತಾ ಕುತ್ಕೊಂಡು ಬಿಡೋಣ ಅನ್ಸುತ್ತೆ ಹುಡುಗಿ…..." ಬೀಸುತ್ತಿದ್ದ ಕುಳಿರ್ಗಾಳಿಗೆ ಹಾರಾಡುತ್ತಿದ್ದ ಅವಳ ಮುಂಗುರುಳನ್ನು ಕಿವಿಯ ಹಿಂಬದಿ ಸರಿಸುತ್ತಾ ನುಡಿದವನು,

"ನೀನಿವತ್ತು ತುಂಬಾ ಅಂದ್ರೆ ತುಂಬಾ……... ಖುಷಿಯಾಗಿದ್ದೀ. ಅದಕ್ಕೇ ಸಂತೋಷದಿಂದ ಹೊಳೆಯುತ್ತಿರೋ ಈ ನಿನ್ನ ಮುಖವನ್ನೇ ನೋಡುತ್ತಿದ್ದೆ. 'ನವ್ಯಾಳ ಸಮಸ್ಯೆ ಪರಿಹಾರ ಆಯ್ತು , ಹೇಗೆ ಏನು ಅಂತ ಆಮೇಲೆ ಹೇಳ್ತೀನಿ' ಅಂತ ಮೆಸೇಜ್ ಹಾಕಿದ್ದೆ. ಈಗ ಹೇಳು. ನೀನಿಷ್ಟು ಖುಷಿಯಾಗಿರುವಂತಹದ್ದು ಏನಾಯ್ತು ಅಂತ" ಸರಿಯಾಗಿ ಕುಳಿತು ಕೇಳಿದ.

ಅವಳು ಎಲ್ಲವನ್ನೂ ವಿವರಿಸುತ್ತಾ ಹೋದಂತೆ ಅವನ ಮೊಗದಲ್ಲಿ ನಿರಾಳತೆಯ ನಗು ಹರಡತೊಡಗಿತು. ಎದೆಯ ಮೇಲಿದ್ದ ಭಾರ ಇಳಿದಂತಹ ಭಾವ…..

"ದಟ್ಸ್ ರಿಯಲೀ ಗ್ರೇಟ್ ನ್ಯೂಸ್. ಈಗ ನವ್ಯಾಳ ಮನಸ್ಸಿಗೆ ಸಮಾಧಾನವಾಗಿರುತ್ತೆ‌. ಯಾವುದೇ ಕೆಲಸವನ್ನು ಒಳ್ಳೆಯ ಉದ್ದೇಶದಿಂದ, ಒಳ್ಳೆಯ ಮನಸ್ಸಿನಿಂದ ಮಾಡಿದರೆ ಅದಕ್ಕೆ ಯಶಸ್ಸು ಸಿಕ್ಕೇ ಸಿಗುತ್ತದೆ ಸಮನ್ವಿತಾ. ಸ್ವಲ್ಪ ತಡವಾಗಬಹುದು, ಒಂದಿಷ್ಟು ಗೊಂದಲ ಗೋಜಲುಗಳಾಗಬಹುದು. ಆದರೆ ಅಂತಿಮವಾಗಿ ಎಲ್ಲವೂ ಒಳ್ಳೆಯದಾಗುತ್ತದೆ. ನೀನು ಅಷ್ಟು ಅಕ್ಕರೆ ಆಸಕ್ತಿಯಿಂದ ನವ್ಯಾಳ ಬದುಕನ್ನು ರೂಪಿಸಲು ಪ್ರಯತ್ನಿಸಿದ್ದಕ್ಕೆ, ನವ್ಯಾಳ ನೋವಿಗೆ, ತೊಳಲಾಟಕ್ಕೆ….. ಎಲ್ಲಕ್ಕೂ ಇವತ್ತು ಸಾರ್ಥಕ್ಯ ಸಿಕ್ಕಿತು ನೋಡು. ಆಮ್ ರಿಯಲೀ ಹ್ಯಾಪಿ ಎಂಡ್ ಆಮ್ ಪ್ರೌಡ್ ಆಫ್ ಯು ಡಿಯರ್....." ಮನದುಂಬಿ ಹೇಳಿದ.

"ನನಗೂ ತುಂಬಾ ಸಂತೋಷವಾಗಿದೆ ಅಭಿ. ಇದೆಲ್ಲಾ ಇಲ್ಲಿಗೆ ಮುಗಿಯಲೀ ಅನ್ನೋ ಹಾರೈಕೆಯೊಂದೇ ಈಗ. ಮುಂದೆಂದಾದರೂ ಈ ವಿಚಾರ ಹೊರಲೋಕಕ್ಕೆ ಗೊತ್ತಾದರೂ ಅದನ್ನು ಎದುರಿಸುವೆ ಅನ್ನೋ ಧೈರ್ಯ ಇದೆ ಅವಳಲ್ಲಿ…... ಆದರೆ ಅಂತಹ ಸಂದರ್ಭ ಎಂದಿಗೂ ಬಾರದಿರಲೀ ಅನ್ನೋದೇ ನನ್ನಾಸೆ....." 

ಅವಳ ಮಾತುಗಳಿಗೆ ನಸುನಕ್ಕವನು ಅಲ್ಲಿಂದ ಎದ್ದು ಬಾಲ್ಕನಿಯ ಅಂಚಿಗೆ ಎರಡೂ ಕೈಯೂರಿ ಆಗಸವನ್ನು ದಿಟ್ಟಿಸತೊಡಗಿದ. ಅವಳೂ ಅವನನ್ನು ಹಿಂಬಾಲಿಸಿ ಬಂದು ಅಲ್ಲೇ ಕಟ್ಟೆಗೊರಗಿ ನಿಂತಳು. ತುಸು ಮೌನದ ನಂತರ ಮಾತನಾಡಿದ ಅವನು.

"ಹಾಗೆಯೇ ಆಶಿಸೋಣ ಸಮಾ.... ಒಂದು ವೇಳೆ ಗೊತ್ತಾದರೂ ಏನೀಗ? ಯಾರಿಗೆ, ಯಾಕಾಗಿ ಭಯಪಡಬೇಕು ಸಮನ್ವಿತಾ...? ಈ ಸಮಾಜ, ಕಟ್ಟುಪಾಡುಗಳು, ನೀತಿ ನಿಯಮಗಳಿಗಾ? ಇವುಗಳಿಗೇಕೆ ಹೆದರಬೇಕು? ಇವ್ಯಾವೂ ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿ ಮಾನವ ಮಾತ್ರ. ಉಳಿದವುಗಳೆಲ್ಲವೂ ನಮ್ಮದೇ‌ ಸೃಷ್ಟಿ. ನಮ್ಮನ್ನು ಒಂದು ನೈತಿಕತೆಯ ಚೌಕಟ್ಟಿನೊಳಗೆ ನಿರ್ಬಂಧಿಸಿಕೊಳ್ಳಲು ನಾವೇ‌ ಸೃಷ್ಟಿಸಿಕೊಂಡ ನಿಯಮಗಳು ಇವು. ಆದರೆ ಕಾಲಕ್ರಮೇಣ ಅವು ನಮ್ಮ ಬದುಕನ್ನೇ ಹಾಳುಗೆಡವುವ ಅಸ್ತ್ರಗಳಾಗಿದ್ದು ಕೆಲವು ಹೊಣೆಗೇಡಿ, ಅನುಕೂಲಸಿಂಧು ಹಿತಾಸಕ್ತಗಳ ಕೈಚಳಕದಿಂದಾಗಿ. ಅವರು ತಮ್ಮ ಆಸಕ್ತಿಗೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡರು. ಬೇಕಾದವರನ್ನು ಬಚಾಯಿಸಿ, ದುರ್ಬಲರನ್ನು ದಮನಿಸಿ ಕಾಲಡಿಗೆ ಹಾಕಿಕೊಂಡರಷ್ಟೇ. ಅದೆಷ್ಟೋ ಕೊಲೆ, ಸುಲಿಗೆಗಳನ್ನೂ, ಅನಾಚಾರಗಳನ್ನು ಮಾಡಿದ ಪಾಪಿಗಳು ಒಂದಿನಿತೂ ಪಾಪಪ್ರಜ್ಞೆಯಿಲ್ಲದೇ ಗಣ್ಯವ್ಯಕ್ತಿಗಳಾಗಿ ನಮ್ಮ ಸಮಾಜವನ್ನೇ ಆಳುತ್ತಿಲ್ಲವೇ…...? ಈ ನೀತಿ ನಿಯಮಗಳಿರುವುದು ಪಾಪದವರಿಗೆ ಮಾತ್ರ. ಇಂತಹ ಮಾನವನಿರ್ಮಿತ ಪಕ್ಷಪಾತಿ ನಿಯಮ, ಕಟ್ಟುಪಾಡುಗಳಿಂದ ನಮ್ಮ ಬದುಕುಗಳೇ ಹಾಳಾಗುತ್ತಿವೆ ಎಂದಾಗ ಅದನ್ನು ಮುರಿದರೇನು ತಪ್ಪು? ತಪ್ಪಿಲ್ಲ ಸಮಾ…… ಅಂತಹ ಬದಲಾವಣೆ ಒಳ್ಳೆಯದು ಹಾಗೂ ಆ ಬದಲಾವಣೆ ನಮ್ಮಿಂದಲೇ ಮೊದಲು ಆರಂಭವಾಗಬೇಕು. ಅಕ್ಕಪಕ್ಕದವರು, ಸಮಾಜ ಎಷ್ಟು ಬದಲಾಗಿದೆ ಎಂದು ಭಾಷಣ ಬಿಗಿಯುವ ಮೊದಲು ನಾವು ಬದಲಾಗಬೇಕು. ಬದಲಾವಣೆ ಆರಂಭವಾಗುವುದೇ 'ನನ್ನಿಂದ'. ನಾನು ಬದಲಾದರೆ ನನ್ನ ಮಕ್ಕಳಿಗೂ ಆ ಬದಲಾವಣೆ ಹರಡುತ್ತದೆಯಲ್ಲವೇ…..? ಆ ಮೂಲಕ ಮುಂದಿನ ಪೀಳಿಗೆಯ ಯೋಚನೆ, ಚಿಂತನೆಗಳು ಬದಲಾಗುವುದಿಲ್ಲವೇ?  ನಿಧಾನವಾಗಿಯಾದರೂ ಸಮಾಜವೂ ಬದಲಾಗುತ್ತದೆಯಲ್ಲವೇ......? ಯಾವ ನೀತಿ, ನಿಯಮ, ಕಟ್ಟುಪಾಡುಗಳೂ ಮಾನವೀಯ ಮೌಲ್ಯಗಳಿಗಿಂತ ಹಿರಿದಾದುದಲ್ಲ. ಎಲ್ಲಕ್ಕಿಂತಲೂ ಮಿಗಿಲಾದುದು ಮಾನವೀಯತೆಯಲ್ಲವೇ? ಆ ಮಾನವೀಯ ಮೌಲ್ಯಗಳ ಉಳಿಕೆಗಾಗಿ ಇಂದು ನಾವು ಬದಲಾವಣೆಯೆಡೆಗೆ ಹೆಜ್ಜೆಯಿಟ್ಟರೆ ನಾಳೆ‌ ನಮ್ಮ ಮುಂದಿನ ಪೀಳಿಗೆಗಾದರೂ ಸಮಾಜ ಬದಲಾಗುತ್ತದೆ ಸಮಾ......." 

ಅವನ ಮಾತುಗಳನ್ನೇ ಮೋಡಿಗೊಳಗಾದಂತೆ ಕೇಳುತ್ತಿದ್ದಳು ಸಮನ್ವಿತಾ. 'ಮಾನವೀಯತೆಗಿಂತ ಮಿಗಿಲಾದುದು ಏನಿದೆ ಜಗದಲ್ಲಿ' ಎಷ್ಟು ಸತ್ಯವಾದ ಮಾತು. ಆದರೂ ನಾವೇಕೆ ಅದನ್ನು ಅರಿತುಕೊಂಡು 'ಜೀವಿಸು, ಜೀವಿಸಲು ಬಿಡು' ಎಂಬ ತತ್ವವನ್ನು ಅಳವಡಿಸಿಕೊಳ್ಳುವುದಿಲ್ಲ…..? ಅದೇಕೆ ನಾವು 'ನಾನು, ನನ್ನದು' ಎಂಬ ಸಂಕುಚಿತ ಯೋಚನೆಯಿಂದ 'ನಾವು, ನಮ್ಮದು' ಎಂಬ ವಿಶ್ವಮಾನವತ್ವದ ಕಲ್ಪನೆಗೆ ಬದಲಾಯಿಸುವುದಿಲ್ಲ......? ಆದರೂ ಅಭಿ ಹೇಳಿದಂತೆ ನಾವು ಬದಲಾಗಿ, ನಮ್ಮ ಮಕ್ಕಳ ಯೋಚನಾ ಶೈಲಿಯನ್ನು ಬದಲಾಯಿಸಿದರೆ ಬಹುಶಃ ಮುಂದಿನ ಪೀಳಿಗೆಗಾದರೂ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ....? ಈಗ ಅಭಿ, ಕಿಶೋರ, ಮಂಗಳಮ್ಮ, ಸತ್ಯನಾರಾಯಣರಂತಹವರು ಸಮಾಜದ ಹಂಗನ್ನು ಮೀರಿ ಯೋಚಿಸುತ್ತಿಲ್ಲವೇ? ಇಂತಹ ಹಲವರು ನಮ್ಮ ನಡುವೆ ಇದ್ದಾರಲ್ಲವೇ…...? ಹಾಗೆಯೇ ಮುಂದೊಮ್ಮೆ ಸಮಾಜದ ಚಿಂತನಾ ಶೈಲಿ ಅನುಕೂಲಸಿಂಧುತ್ವದಿಂದ ಮಾನವೀಯತೆಯೆಡೆಗೆ ಬದಲಾಗಬಹುದು ಎನಿಸಿತವಳಿಗೆ.

ಎಷ್ಟೋ ಹೊತ್ತು ಹಾಗೆಯೇ ನಿಂತಿದ್ದರು ಇಬ್ಬರೂ ಮೌನವಾಗಿ. ಆದರೆ ಆ ಮೌನದಲ್ಲೂ ಹಲವು ಮಾತುಗಳಿದ್ದವು…….. ಅವರಿಬ್ಬರಿಗೆ ಮಾತ್ರ ವೇದ್ಯವಾಗುವಂತಹದ್ದು.....

ಬಹಳ ಸಮಯದ ನಂತರ ನಿಧಾನವಾಗಿ ಅವಳ ಬಳಿ ಸಾರಿದವನು ಹಿಂದಿನಿಂದ ಅವಳ ನಡು ಬಳಸಿ ಭುಜಕ್ಕೆ ತನ್ನ ಗದ್ದವನ್ನೊತ್ತಿದ. ಈ ಚರ್ಯೆಗೆ ನಕ್ಕು ಅವನ ತಲೆಗೂದಲನ್ನು ಕೆದರಿದಳು ಹುಡುಗಿ.....

"ಯು ನೋ? ಮೊದಲು ನಿನ್ನನ್ನು ಪೋಲಿಸ್ ಸ್ಟೇಷನಲ್ಲಿ ನೋಡಿದಾಗ, ನಿನ್ನ ಬಗ್ಗೆ ತಿಳಿದಾಗ ಆಶ್ಚರ್ಯ ಆಗಿತ್ತು. ಆಮೇಲೆ ಹಲವು ತಿಂಗಳು ಯಾವುದೇ ಸ್ಪಷ್ಟ ಉದ್ದೇಶವಿಲ್ಲದೇ ಮನಸ್ಸು ನಿನ್ನ ಹುಡುಕುವ ಪಣ ತೊಟ್ಟಾಗ ಅದ್ಯಾಕೆ ಇಂತಹ ಹುಚ್ಚು ಸೆಳೆತ ನಿನ್ನ ಮೇಲೆ ಅಂತ ತುಂಬಾ ಸಲ ಅನ್ನಿಸಿದೆ. ಅದಕ್ಕೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ನಿನ್ನ ಹುಡುಕೋದು ನಿಲ್ಲಿಸಿಬಿಟ್ಟೆ. ಬಟ್…… ಸೀ ದಿ ಡೆಸ್ಟಿನೀ..........ನೀನೆ ನನ್ನೆದುರು ಬಂದೆ. ಊಹೆಗೂ ಮೀರಿ ವಿಧಿ ನಮ್ಮಿಬ್ಬರನ್ನು ಅನೂಹ್ಯವಾಗಿ ಬೆಸೆಯಿತು‌. ಎಂಡ್ ಫೈನಲೀ....... ಯು ಆರ್ ಮೈನ್ ಎಂಡ್ ಆಮ್ ಆಲ್ ಯುವರ್ಸ್. ವೆರಿ ಫಾರ್ಚುನೇಟ್ ಟು ಹ್ಯಾವ್ ಯು ಬೈ ಮೈ ಸೈಡ್ ಸಮಾ…..." ಅವನ ಮಾತಿಗೆ ನಕ್ಕಳು.

"ನಾನೂ ಬಹಳ ಅದೃಷ್ಟವಂತೆಯೇ ಅಂತ ತೀರಾ ಇತ್ತೀಚೆಗೆ ಅನ್ನಿಸೋಕೆ ಶುರುವಾಗಿದೆ ಅಭಿ. ಕಿಶೋರ್ ನಂತಹ ಒಳ್ಳೆಯ ಗೆಳೆಯ, ನವ್ಯಾಳಂತಹ ಗೆಳತಿ, ನನ್ನ ಸ್ವಂತ ಮಗಳ ಹಾಗೆ ನೋಡೋ ಅವನ ಹೆತ್ತವರು, ಕಾರ್ತೀಯಂತಹ ಪುಟ್ಟ ತಮ್ಮ....... ಜೊತೆಗೆ ನಿಮ್ಮ ಅಪ್ಪ, ಅಮ್ಮ, ಆಕೃತಿ........ ಎಂಡ್ ಮೋಸ್ಟ್ ಇಂಪಾರ್ಟೆಂಟ್, ನೀವು........ ನನಗೆ ಯಾವತ್ತೂ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್ ಅವರನ್ನು ನೋಡಿ ಭಯ ಆಗೋದು. ಇವರಂತಹ ಮೌಲ್ಯಗಳೇ ಇಲ್ಲದ ಹಣದ ಆಧಾರದ ಬದುಕು ನನ್ನದೂ ಆಗುತ್ತೇನೋ ಅಂತ. ಮದುವೆ ಅಂದ್ರೆನೇ ಭಯ ಅನ್ನಿಸಿದ್ದು ಇದೆ.ಬ ಬಟ್...... ಮೇ ಬೀ ಮಿಸ್ಟರ್ ರಾವ್ ಅವರು ನನ್ನ ತಂದೆ ಅನ್ನಿಸಿಕೊಂಡಿದ್ದಕ್ಕೆ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಅಂದ್ರೆ ತಮ್ಮ ಸ್ವಾರ್ಥಕ್ಕಾಗಿ ಈ ಮದುವೆಯ ಪ್ಲಾನ್ ಮಾಡಿದ್ದು. ಅವರ ಸ್ವಾರ್ಥವೇ ಮುಖ್ಯವಾಗಿದ್ದರೂ ಇಟ್ ಬ್ರಾಟ್ ಮಿ ಟು ಯೂ....... ನೀವು, ನಿಮ್ಮನೆಯವರನ್ನು ನೋಡಿದ ಮೇಲೆಯೇ ಹಣವಂತರು ಹೀಗೂ ಇರ್ತಾರೆ ಅಂತ ನನಗೆ ತಿಳಿದಿದ್ದು. ಯು ಆರ್ ದಿ ಬೆಸ್ಟ್ ಥಿಂಗ್ ಎವರ್ ಹ್ಯಾಪನ್ಡ್ ಟು ಮೀ......" ಹಾಗೇ ಅವನ ಎದೆಗೊರಗಿದಳು ಸಮನ್ವಿತಾ.

ಆಗಸದ ತುಂಬಾ ಜೋತ್ಸ್ನೆ ತಂಬೆಳರು ಸುರಿದು ಆ ಜೋಡಿಗೆ ಶುಭ ಹಾರೈಸಿದಳು. ನೀನು ಬಾಲ್ಯದಿಂದ  ಕಳೆದುಕೊಂಡು, ಹಂಬಲಿಸಿದ ಹಿಡಿಪ್ರೀತಿಯನ್ನು ಅನಂತವಾಗಿಸಿ ನಿನ್ನ ಮಡಿಲಿಗೆ ಸುರಿದ್ದಿದ್ದೇನೆಂದು ಆ ಭಗವಂತ ಆಶೀರ್ವದಿಸಿದನಾ.......? ತಿಳಿಯದು.

          *****************************

ಇದೆಲ್ಲವೂ ಘಟಿಸಿ ವರ್ಷಗಳೇ ಉರುಳಿವೆ. ನವ್ಯಾ ಈಗ ಆತ್ಮವಿಶ್ವಾಸದ ಖನಿ. ಅವಳ ನಡೆ ನುಡಿಗಳಲ್ಲಿ ಸಂತೋಷ, ಆತ್ಮಸ್ಥೈರ್ಯ ತುಂಬಿತುಳುಕುತ್ತದೆ. ಆ ಮನೆಯನ್ನೆಲ್ಲಾ ಜೀವಸೆಲೆಯಂತೆ ಆವರಿಸಿಕೊಂಡಿದ್ದಾಳೆ ಅವಳು. ಅವಳ ಹಾಗೂ ಕಿಶೋರನ ದಾಂಪತ್ಯ ಲತೆಯೂ ಕುಡಿಯೊಡೆದಿದೆ. ಪುಟ್ಟ ಸೌಪರ್ಣಿಕಾ ತನ್ನ ಪುಟಾಣಿ ಹೆಜ್ಜೆಗಳಿಂದ ಆ ಇಡೀ ಮನೆಯನ್ನೇ ನಂದನವಾಗಿಸಿದ್ದಾಳೆ......

ಮಂಗಳಾ ಹಾಗೂ ಸತ್ಯನಾರಾಯಣರಿಗೆ ಮೊಮ್ಮಗಳನ್ನು ಆಡಿಸಲು ಇಪ್ಪತ್ನಾಲ್ಕು ಗಂಟೆಯೂ ಸಾಲುವುದಿಲ್ಲ. ಕಾರ್ತಿಕನಿಗಂತೂ ಅತ್ತಿಗೆಯೊಂದಿಗೆ ಪುಟ್ಟ ಸೌಪರ್ಣಿಕಾಳ ಕಂಪನಿಯೂ ಸಿಕ್ಕಿದೆ. ಅವನು ಓದು ಮುಗಿಸಿ ನೌಕರಿ ಗಿಟ್ಟಿಸಿದ್ದಾನೆ ಎಂಬುದು ಅತೀ ಸಂತೋಷದ ಹಾಗೂ ತಲೆಬಿಸಿ ಕಡಿಮೆ ಮಾಡುವ ವಿಷಯ ಮಂಗಳಮ್ಮನಿಗೆ. ಜೊತೆಗೆ ಇವನಿಗೂ ಕೆಲಸ ಕೊಡುವವರು ಭೂಲೋಕದಲ್ಲಿ ಇದ್ದಾರಾ ಎಂಬ ಅಚ್ಚರಿಯೂ......

ಹಾಗೆಯೇ ನವ್ಯಾಳ ಬಗ್ಗೆ ಈವರೆಗೂ ಯಾರ ಕೊಂಕು ನುಡಿಗಳೂ ಬಂದಿಲ್ಲ. ಅದು ಹಾಗೆ ಇರಲಿ ಎಂದು ಆಶಿಸೋಣ......

ಡಾಕ್ಟರ್ ಸಮನ್ವಿತಾ ಈಗ ಅಧಿಕೃತವಾಗಿ ಸಮನ್ವಿತಾ ಶರ್ಮಾ ಆಗಿದ್ದಾರೆ. ಸಚ್ಚಿದಾನಂದ ಹಾಗೂ ಮೃದುಲಾರ ಮುದ್ದಿನ ಮಗಳಾಗಿ, ಆಕೃತಿಯ ಅಕ್ಕರೆಯ ಒಡನಾಟದಲ್ಲಿ, ಅಭಿಯ ಪ್ರೀತಿಯ ಸಾಂಗತ್ಯದಲ್ಲಿ ಬಾಲ್ಯದಿಂದ ಹಪಹಪಿಸಿದ ಕುಟುಂಬದ ಪ್ರೀತಿಯಲ್ಲಿ ಸಂಪೂರ್ಣ ಸುಖಿ ಅವಳು. ಇವರ ನಡುವೆ ನಾನೇ ಮನೆ ಅಳಿಯನಂತಾಗಿರುವೆ ಎಂಬ ಅಳಲು ಅಭಿಯದ್ದು. ಅವನದೆಲ್ಲಾ ನಾಟಕವೇ ಬಿಡಿ....... ಅಣ್ಣ ಅಪ್ಪನನ್ನು ಮೀರಿಸುವ ಅಮ್ಮಾವ್ರ ಗಂಡ ಆಗಿದ್ದಾನೆ ಎಂದು ಅಣಕಿಸುತ್ತಾಳೆ ಆಕೃತಿ. 'ನಮ್ಮ ಡಾಕ್ಟ್ರು ಅಷ್ಟು ಜೋರಿಲ್ಲ' ಅನ್ನೋ ಜಾಣ ಸಮಜಾಯಿಷಿ ಕಲಾವಿದನದ್ದು‌‌.‌

ಮೀರಾ ಅವರು ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡು ಸಂಜೀವಿನಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದ್ದಾರೆ. 

ಮಾಲಿನಿ ರಾವ್ ಸತ್ಯಂ ಅವರಿಂದ ಡೈವೋರ್ಸ್ ಪಡೆದು ಅಣ್ಣನ ಮನೆಗೆ ಹೋಗಿ ನೆಲೆಸಿದ್ದಾರೆ. ಸತ್ಯಂ ಹೆಂಡತಿಗೆ ಪರಿಹಾರ ಕೊಟ್ಟ ನಂತರ ಅಳಿದುಳಿದ ಚೂರು ಪಾರು ಹಣದಲ್ಲಿ ಅವರ ಅಂದಕಾಲತ್ತಿಲ್ ವೈಭವದ ಪ್ರತೀಕದಂತಿರುವ ರಾವ್ ಮ್ಯಾನ್ಶನಲ್ಲಿ ಒಬ್ಬರೇ ಕೂತು ಕುಡಿಯುತ್ತಾರೆ. ಇಷ್ಟಾದರೂ ಅವರ ಅಹಂಕಾರವೇನೂ ಇಳಿದಿಲ್ಲ. ಅವರೆಂದೂ ಬದಲಾಗರು ಬಿಡಿ…...

ಇನ್ನು ಚೈತಾಲಿ ಅಭಿಯ ಆಫೀಸಿನ ಕೆಲಸದಲ್ಲಿ ಸಂತೋಷವಾಗಿ ತೊಡಗಿಕೊಂಡು ವೈಯಿಂದ ಒಂದು ಕಿಲೋಮೀಟರ್ ಡಿಸ್ಟೆನ್ಸಿನಲ್ಲಿ ಇದ್ದಾಳೆ. ನಮ್ಮ ವೈ ಚೈ ಸಿಗೋಲ್ಲ ಅಂತ ಖಚಿತವಾಗಿ ದೇವದಾಸ್ ಆಗಿ ಹಾಡ್ತಾ ಇರ್ತಾನೆ. ಆಗಾಗ ಅಭಿಯ ಮನೆಗೂ ಹಾಜರಿ ಹಾಕಿ ಕುಕ್ಕರಿನಲ್ಲಿ ಮೂರು ವಿಶಲ್ ಹಾಕಿಸಿ ಟೀ ಮಾಡ್ತಾ ಇರ್ತಾನೇ...... ಆದರೆ ಅದನ್ನು ಕುಡಿಯುವ ಧೈರ್ಯವನ್ನು ಇದುವರೆಗೂ ಯಾರೂ ಮಾಡಿಲ್ಲವೆನ್ನಿ.

ವಾರಕ್ಕೊಮ್ಮೆ ಶರ್ಮಾ ಪರಿವಾರ ಕಿಶೋರನ ಮನೆಗೆ ಹೋಗುವುದು, ಇಲ್ಲಾ ಅವರು ಇಲ್ಲಿಗೆ ಬರುವುದು ಪರಿಪಾಠವಾಗಿದೆ. ಆಗ ಇಡೀ ಜಗತ್ತಿನ ಕಾಡು ಹರಟೆಗೆಲ್ಲಾ ಪ್ರಾಮುಖ್ಯತೆ ಸಿಗುತ್ತದೆ. ಭಯಂಕರ ಕಾದಾಟಗಳಾಗುವುದೂ ಉಂಟು. ಮುಖ್ಯವಾಗಿ ಅಭಿ ಮತ್ತು ಆಕೃತಿಯ ನಡುವೆ….. ಅಭಿಗೆ ನವ್ಯಾಳ ರೂಪದಲ್ಲಿ ಇನ್ನೊಬ್ಬ ತಂಗಿ ದೊರಕಿದ್ದಾಳಲ್ಲ ಈಗ…. ಆಕೃತಿಯೊಂದಿಗೆ ಜಗಳವಾದಾಗಲೆಲ್ಲಾ ಹೊಸ ತಂಗಿ ಅಣ್ಣನ ಪಕ್ಷ ವಹಿಸಿ ಎಲ್ಲರ ಬಾಯಿ ಮುಚ್ಚಿಸುತ್ತಾಳೆ. ಅದಕ್ಕೆ ನವ್ಯಾಳೆಂದರೇ ವಿಶೇಷ ಪ್ರೀತಿ ಅವನಿಗೆ.......

ಕೊನೆಯದಾಗಿ ಒಂದು ಮಾತು......

ನಿಮಗೂ ದಿನನಿತ್ಯದ ಬದುಕಿನಲ್ಲಿ ನವ್ಯಾ ಹಾಗೂ ಸಮನ್ವಿತಾಳಂತಹ ಹಲವು ಹೆಣ್ಣುಮಕ್ಕಳು ಸಿಗಬಹುದು.

ನವ್ಯಾಳಂತಹವರು ಎದುರು ಸಿಕ್ಕರೆ ಅವಳ ಹಿನ್ನೆಲೆ ಕೆದಕಿ ಅವಮಾನಿಸಬೇಡಿ. ಕುಹಕವಾಡಿ ನೋಯಿಸಬೇಡಿ...... ಸಾಧ್ಯವಾದರೆ ಅವರ ಹೋರಾಟಕ್ಕೊಂದು ಮೆಚ್ಚುಗೆ ನೀಡಿ, ಅವರ ಆತ್ಮಸ್ಥೈರ್ಯಕ್ಕೊಂದು ಸಲಾಂ ಹೇಳಿ. ಇಲ್ಲವಾದರೇ ಸುಮ್ಮನಿದ್ದುಬಿಡಿ.

ಸಮನ್ವಿತಾಳಂತಹವರು ಸಿಕ್ಕರೆ ಊರಿನ ಚಿಂತೆ ನಿಮಗೇಕೆ ಎಂದು ಜರಿಯಬೇಡಿ…... ಸಾಧ್ಯವಾದರೆ ಅವರಿಂದ ಒಂದಿಷ್ಟು ಕಲಿಯಿರಿ. ಅವರ ಜೊತೆ ಕೈಜೋಡಿಸಿ. ಇಲ್ಲವಾದರೇ ಸುಮ್ಮನಿದ್ದುಬಿಡಿ.

ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ

ಧನ್ಯವಾದಗಳೊಂದಿಗೆ🙏🙏🙏

                           ಮುಕ್ತಾಯ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ