ಪುಸ್ತಕ ವಿಮರ್ಶೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುಸ್ತಕ ವಿಮರ್ಶೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 8, 2022

ಮುಳುಗಿದ್ದು ಭಾರಂಗಿಯೇ, ಭರವಸೆಯೇ, ಬದುಕೇ....? ಪುನರ್ವಸು


ಆತ್ಮೀಯ ಸಹೋದರ ವೀರೇಂದ್ರ 'ನೀವು ಓದಲೇಬೇಕು' ಎಂದು ಒತ್ತಾಯಿಸಿದ್ದಲ್ಲದೇ ತಾನೆ ಉಡುಗೊರೆಯಾಗಿ ಕಳಿಸಿಕೊಟ್ಟ ಗಜಾನನ ಶರ್ಮರ 'ಪುನರ್ವಸು' ಕಾದಂಬರಿಯ ಕೊನೆಯ ಪುಟವನ್ನು ಮುಗಿಸಿ ಕೆಳಗಿಟ್ಟ ಈ ಘಳಿಗೆ ಬಾಲ್ಯದ ದಿನಗಳು ಪದೇಪದೇ ಕಣ್ಮುಂದೆ ಹಾಯುತ್ತಿವೆ. ನನ್ನ ತಂದೆಯ ಊರು ಹಾಗೂ ಅಮ್ಮನ ತವರು ಎರಡೂ ಮಲೆನಾಡು ಪ್ರದೇಶಗಳೇ. ತಂದೆಯ ಊರಾದ ಕಳಸ ಸಮೀಪದ ದಟ್ಟಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ನನಗೆ ಅಲ್ಲಿಗೂ ಅಮ್ಮನ ತವರಾದ ಹೊಸನಗರದ ಕೊಡಚಾದ್ರಿ ತಪ್ಪಲಿನ ಹಳ್ಳಿಗೂ ಹೇಳಿಕೊಳ್ಳುವಂತಹ ದೊಡ್ಡ ವ್ಯತ್ಯಾಸವಿದೆಯೆಂದು ಎಂದೂ ಅನಿಸಿದ್ದಿಲ್ಲ. ಮಳೆಗಾಲದಲ್ಲಿ ಅಪರೂಪಕ್ಕೊಮ್ಮೆ ಮಳೆ ಬಿಡುವು ಕೊಟ್ಟರೆ ಬಗಲಿನಲ್ಲಿದ್ದವರೂ ಕಾಣದಂತೆ ಕವಿಯುವ ಮೈಂದು ಹಾಗೂ ತಲೆತನಕ ಏರುವ ಉಂಬಳಗಳ ಹಾವಳಿ ಹೊರತು ಪಡಿಸಿದರೆ ಎರಡೂ ಪ್ರದೇಶಗಳೂ ಹೆಚ್ಚುಕಡಿಮೆ ಒಂದೇ. ಆದರೂ ದಸರಾ ರಜೆ, ಬೇಸಿಗೆ ರಜೆ ಬಂತೆಂದರೆ ಸಾಕು..... ತಮ್ಮ ಮತ್ತು ನಾನು ತುದಿಗಾಲಲ್ಲಿ ಬಕಪಕ್ಷಿಗಳಂತೆ ಅಜ್ಜನ(ಅಮ್ಮನ ತಂದೆ) ಬರುವಿಕೆಗೆ ಕಾಯುತ್ತಿದ್ದೆವು. ಬಸ್ ಹಾರನ್ ಶಬ್ದ ಕಿವಿಗೆ ಬಿದ್ದೊಡನೆ ತಡಬೆಯ ಬಳಿ ಓಡಿ ಅದರ ಮೇಲೇರಿ ರಸ್ತೆಯತ್ತ ನೋಟವಿಟ್ಟು ನಿಲ್ಲುವುದೇ ಸಂಭ್ರಮ. ಅಜ್ಜ ಬಂದರೆಂದರೆ ನಾಲ್ಕುದಿನ ಮನೆಯಲ್ಲಿ ನಿಲ್ಲಲು ಬಿಡದೇ ವಾಪಾಸ್ ಹೊರಡಿಸಿ ಬಿಡುವಷ್ಟು ಆತುರ ನಮಗೆ ಅಜ್ಜಿ ಮನೆಗೆ ಹೋಗಲು. ದೊಡ್ಡಮ್ಮ ಚಿಕ್ಕಮ್ಮಂದಿರ ಮಕ್ಕಳೆಲ್ಲಾ ಅಲ್ಲಿ ಒಟ್ಟಾಗುವುದು ನಮ್ಮ ಉಮೇದಿಗೆ ಮುಖ್ಯ ಕಾರಣವಾದರೂ ಅದನ್ನು ಮೀರಿದ ಇನ್ನೊಂದು ಸೆಳೆತವಿತ್ತು ನಮಗಲ್ಲಿ. ಅದೇ ಮನೆಯಿಂದ ಕೂಗಳತೆ ದೂರದಲ್ಲಿ ಆವರಿಸಿಕೊಂಡ ಅಗಾಧ ಜಲರಾಶಿ....... ನೀರೆಂದರೆ ಸಾಮಾನ್ಯ ನೀರಲ್ಲ ಅದು. ಸಮುದ್ರದೋಪಾದಿಯಲ್ಲಿ ವಿಶಾಲವಾಗಿ ಆವರಿಸಿಕೊಂಡ ನೀಲ ಜಲರಾಶಿ. ಕುದುರೆಮುಖದ ತಪ್ಪಲಿನ ನಾವು ನದಿ, ನೀರು 
ಕಾಣದವರೇನಲ್ಲವಾದರೂ ಆ ಪರಿ ವಿಶಾಲವಾಗಿ ಚಲನೆಯಿಲ್ಲದೇ ನಿಂತ ನೀರು, ಅದರ ನಡುನಡುವಲ್ಲೇ ಕರ್ರಗೆ ರೆಂಬೆಚಾಚಿ ನಿಂತ ಬೋಳು ಮರಗಳನ್ನು ನಮ್ಮೂರಲ್ಲಿ ಎಂದೂ ಕಾಣದ ಅಚ್ಚರಿ ನಮಗೆ. ಅಜ್ಜಿಮನೆಯಲ್ಲಿದ್ದಷ್ಟೂ ದಿನ ನಮ್ಮ ಬೆಳಗುಬೈಗುಗಳ ನಿತ್ಯಸಾಥಿ ಆ ನೀರದಂಡೆಯಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಮಳೆಗಾಲದಲ್ಲಿ ತೋಟದ ತನಕ ಏರುತಿದ್ದ ನೀರು ಬೇಸಿಗೆಯಲ್ಲಿ ಸಂಪೂರ್ಣ ಇಳಿದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗುತ್ತಿತ್ತು. ಕೆಲವೆಡೆ ಗದ್ದೆಯಂತೆ ಕಾಣುವ ಸಮತಟ್ಟು ಬಯಲು, ಇನ್ನು ಕೆಲವೆಡೆ ಹಳ್ಳ ದಿಣ್ಣೆಗಳು, ಒಂದೆರಡುಕಡೆ ಒಡೆದಿದ್ದರೂ ಉಳಿದಂತೆ ಗಟ್ಟಿಮುಟ್ಟಾದ ಒಂದು ಉದ್ದದ ರಸ್ತೆ, ಒಂದೆಡೆ ಸಾಲು ಕಲ್ಲುಗುಡ್ಡಗಳು, ಅದರ ಮೇಲಿನ ಯಾವುದೋ ದೇವಾಲಯದ ಅವಶೇಷಗಳು.......... ಮಳೆಗಾಲದಲ್ಲಿ ನೀಲಸಮುದ್ರದಂತೆ ಕಾಣುವ ಈ ಜಾಗ ಬೇಸಿಗೆಯಲ್ಲಿ ಇಂತಹದ್ದೊಂದು ಅವತಾರ ಎತ್ತುವ ಪರಿ ಸೋಜಿಗ ಹುಟ್ಟಿಸುತ್ತಿತ್ತು. ಬೇಸಿಗೆಯಲ್ಲಿ ಅಲ್ಲಿನ ಸಮತಟ್ಟು ಬಯಲುಗಳಲ್ಲಿ ಭತ್ತದ ಗದ್ದೆಯೊಂದಿಗೆ ಸವ್ತೇಕಾಯಿ, ಬೀನ್ಸ್ ಮೊದಲಾಗಿ ತರಕಾರಿಗಳನ್ನು ಬೆಳೆಯುತ್ತಿದ್ದ ನೆನಪು. ಬೆಳಗ್ಗೆ ಅಲ್ಲಿಗೆ ದಾಳಿಯಿಟ್ಟು ಎಳೆಸವತೆ ಮೆದ್ದು ಒಂದಿಷ್ಟು ಹಾರಾಟ ನಡೆಸಿ ವಾಪಾಸಾದರೆ ಮತ್ತೆ ಸಂಜೆ ನಾಲ್ಕರ ನಂತರ ಪೇರಲೆ ಗಿಡಗಳ ಮೇಲೆ ದಂಡೆತ್ತಿ ಹೋಗಿ ನಂತರ ಆರು ಗಂಟೆಯ ತನಕವೂ ಅಲ್ಲೇ ಸುತ್ತಮುತ್ತಲಿನ ದಿಬ್ಬ ಹಳ್ಳಗಳನ್ನೆಲ್ಲಾ ಸುತ್ತುವುದೇ ದೈನಂದಿನ ಕಾಯಕ ಆಗ. 

ನಂತರದ ದಿನಗಳಲ್ಲಿ ಓದು, ಹಾಸ್ಟೆಲ್, ಉದ್ಯೋಗ, ಮದುವೆ, ಸಂಸಾರ ಎಂಬ ಹಲವು ಜಂಜಡಗಳಲ್ಲಿ ಅಜ್ಜಿಮನೆಯ ಭೇಟಿ ವಿರಳವಾದರೂ ಇಂದಿಗೂ ಹೋದಾಗಲೆಲ್ಲಾ ಒಮ್ಮೆ ಹಿನ್ನೀರಿನ ದಡದಲ್ಲಿ ಕುಳಿತು ಬರದಿದ್ದರೆ ಏನೋ ಕಳೆದುಕೊಂಡ ಭಾವ ಕಾಡುವುದು ಸುಳ್ಳಲ್ಲ. ಮೊದಮೊದಲು ವಿಸ್ಮಯದ ತಾಣವಾಗಿ ಕಾಣುತ್ತಿದ್ದ ಆ ಜಲರಾಶಿ ಬುದ್ಧಿ ಬೆಳೆದಂತೆಲ್ಲಾ ಮುಳುಗಡೆ ಸಂತ್ರಸ್ತರ ಚದುರಿ ಚೂರಾದ ಬದುಕಿನ ಪ್ರತಿಬಿಂಬದಂತೆ ಅನ್ನಿಸತೊಡಗಿದ್ದು ನಿಜವೇ ಆದರೂ ಆ ಭಾವ ಮನಕಲಕುವಷ್ಟು ಗಾಢವಾಗಿ ಕಾಡಿದ್ದು 'ಪುನರ್ವಸು'ವಿನಿಂದ. 'ಜೋಗ ಪಟ್ಣ ಆಗ್ತು' ಅನ್ನುವಾಗಿನಿಂದಲೇ ನಾಭಿಯಾಳದಲ್ಲಿ ಶುರುವಾದ ವಿಷಾದ ಕಾದಂಬರಿ ಮುಗಿಯುವ ಹೊತ್ತಿಗೆ ಇಡೀ ಜೀವವನ್ನೇ ವ್ಯಾಪಿಸಿ ಮುಳುಗಿಸಿದಂತಿದೆ. ಅಜ್ಜಿಮನೆಯ ಹಿನ್ನೀರಲ್ಲಿ ಬೇಸಿಗೆಯಲ್ಲಿ ಗೋಚರವಾಗುವ ಆ ರಸ್ತೆ ವಿನಾಕಾರಣ ನೆನಪಾಗುತ್ತಿದೆ. ಆ ಜಾಗವೂ ಜೀವಚಟುವಟಿಕೆಯ ಚಿಲುಮೆಯಾಗಿದ್ದ ಒಂದು ಕಾಲದಲ್ಲಿ ದತ್ತಪ್ಪ ಹೆಗಡೆಯವರೋ, ತುಂಗಕ್ಕಯ್ಯನೋ, ಶರಾವತಿಯೋ, ಮುರಾರಿಯೋ ಆ ರಸ್ತೆಗುಂಟ ಸಾಗಿದ್ದಿರಬಹುದೇ.......? ಎಲ್ಲವನ್ನೂ ಆಪೋಶನ ತೆಗೆದುಕೊಂಡು ಅಚಲವಾಗಿ ನಿಂತಿರುವ ಆ ನೀರಿನಾಳದ ನೆಲದಲ್ಲಿ ದೋಣಿಗಣಪ, ನ್ಯಾಮಯ್ಯ, ಮಾಣಿಚಿಕ್ಕಯ್ಯ, ಭವಾನಕ್ಕ, ಚೆನ್ನಮ್ಮ, ರತ್ನಕ್ಕನಂತಹವರ ಹೆಜ್ಜೆಗುರುತುಗಳ ಸುಳಿವಿರಬಹುದೇ.......?  ಜಗತ್ತಿಗೆ ಬೆಳಕನ್ನೀಯಲು ಕತ್ತಲಲ್ಲಿ ಕರಗಿಹೋದವರ ಕಣ್ಬೆಳಕು ರಾತ್ರಿಯ ನೀರವದಲ್ಲಿ ಮಿನುಗುತ್ತಿರಬಹುದೇ........? ಈ ಕ್ಷಣವೇ ಅಲ್ಲಿಗೆ ಹಾರಿ ಆ ಕುರುಹುಗಳನ್ನು ಅರಸಬಯಸುತ್ತಿದೆ ಮನ......

ಭಾನುವಾರ, ಜುಲೈ 26, 2020

ಕಾರ್ಗಿಲ್ ಕಂಪನ

ಪುಸ್ತಕದ ಹೆಸರು.        : ಕಾರ್ಗಿಲ್ ಕಂಪನ
ಪ್ರಕಾಶಕರು                 : ರಾಷ್ಟ್ರೋತ್ಥಾನ ಸಾಹಿತ್ಯ
ಮೊದಲ ಮುದ್ರಣ       : 1999
ಪುಟಗಳು : 135          ಬೆಲೆ : 30 ರೂಪಾಯಿಗಳು

ಇಂದು ಕಾರ್ಗಿಲ್ ವಿಜಯ ದಿನ. ಇಪ್ಪತ್ತೊಂದು ವರ್ಷಗಳ ಹಿಂದೆ 1999ರ ಫೆಬ್ರವರಿಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ದೆಹಲಿ ಲಾಹೋರ್ ನಡುವಿನ ಬಸ್ ಸೇವೆ ಆರಂಭಿಸಿ ಪಾಕಿಸ್ತಾನದೆಡೆಗೆ ಸ್ನೇಹಹಸ್ತ ಚಾಚಿದ್ದರು. ಯುದ್ಧ, ಜಗಳಗಳಿಲ್ಲದೇ ಸೌಹಾರ್ದಯುತವಾಗಿ ಬಾಳಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ ಕಾಶ್ಮೀರವನ್ನು ತನ್ನೆಲ್ಲಾ ಕುಯುಕ್ತಿಗಳಿಗೆ ದಾಳದಂತೆ ಬಳಸುವ ಪಾಕಿಸ್ತಾನ ವಚನಕ್ಕೆ ಬದ್ಧವಾಗಿ ನಡೆದ ಇತಿಹಾಸವುಂಟೇ? ಪಾಕಿಸ್ತಾನದ ಕುತಂತ್ರಿ ಚಟುವಟಿಕೆಯಿಂದಾಗಿ 1999ರ ಮೇ ಆರಂಭದಿಂದಲೇ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿ ಪರಿಸ್ಥಿತಿ ಹದೆಗೆಟ್ಟಿದ್ದು, ಆ ನಂತರದಲ್ಲಿ ನಿಯಮಗಳನ್ನು ಮೀರಿ ಪಾಕಿಸ್ತಾನಿ ಅತಿಕ್ರಮಣಕಾರರು ಭಾರತದೊಳಕ್ಕೆ ನುಸುಳಿದ್ದು, ಕಡೆಗೆ ಯುದ್ಧದಲ್ಲಿ ಪರ್ಯಾವಸನವಾದದ್ದು ಪ್ರತೀ ಭಾರತೀಯನಿಗೂ ತಿಳಿದಿರುವಂತಹದ್ದೇ. ಕಾರ್ಗಿಲ್ ಎನ್ನುವ ಹೆಸರೇ ಪ್ರತೀ ದೇಶಭಕ್ತನೊಳಗೂ ಒಂದು ರೋಮಾಂಚನವನ್ನು ಸೃಷ್ಟಿಸುತ್ತದೆ. 

ಅಂತಹ ಕಾರ್ಗಿಲ್ ಸಮರದ ಹಿನ್ನೆಲೆ, ಕಾರಣಗಳು, ಯುದ್ಧಭೂಮಿಯಲ್ಲಿ ನಮ್ಮ ವೀರ ಯೋಧರ ಸಾಹಸಗಾಥೆ, ಯುದ್ಧದ ಪರಿಣಾಮಗಳು, ಭವಿಷ್ಯದ ಸವಾಲುಗಳು ಬಗೆಗಿನ ಸಮಗ್ರ ಮಾಹಿತಿಯುಳ್ಳ ಪುಸ್ತಕ "ಕಾರ್ಗಿಲ್ ಕಂಪನ". ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಈ ಪುಸ್ತಕದಲ್ಲಿ 'ಕದನಸರಣಿಯ ಬೀಜ'(ಎಸ್. ಆರ್. ರಾಮಸ್ವಾಮಿ), 'ಕಾರ್ಗಿಲ್ ರಣಾಂಗಣ'(ದು. ಗು. ಲಕ್ಷ್ಮಣ) ಹಾಗೂ 'ಕದನ ವಿರಾಮ - ಮುಂದೇನು'(ಚಂದ್ರಶೇಖರ ಭಂಡಾರಿ) ಎಂಬ ಮೂರು ಭಾಗಗಳಿವೆ.

ಮೊದಲ ಭಾಗದಲ್ಲಿ ದೇಶ ವಿಭಜನೆಯಿಂದ ಹಿಡಿದು ಧರ್ಮದ ಹೆಸರಿನ ಭಯೋತ್ಪಾದನೆ, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಿಕ್ಕ ಅವಕಾಶಗಳನ್ನೆಲ್ಲಾ ಕೈ ಚೆಲ್ಲಿದ ನಾಯಕರು, ನೆಹರು ಅವರ ಸ್ವಕೇಂದ್ರಿತ ನಾಯಕತ್ವದಿಂದಾಗಿ ಅಪಾತ್ರರ ಕೈಗೆ ಸಿಕ್ಕಿದ ರಕ್ಷಣಾ ಖಾತೆ, ತೆಗೆದುಕೊಂಡ ತಪ್ಪು ನಿರ್ಣಯಗಳು, ಚೀನಾದಿಂದ ದೇಶಕ್ಕೆ ಅಪಾಯವಾಗುವ ಸಂಭವವಿದೆಯೆಂದು ಸೇನಾಧಿಕಾರಿಗಳು ಪದೇ ಪದೇ ಎಚ್ಚರಿಸುತ್ತಿದ್ದರೂ ಅದನ್ನು ನಿರ್ಲಕ್ಷಿಸಿ 'ಚೀನಾ ನಮ್ಮ ಮಿತ್ರ ದೇಶ' ಎಂಬ ಭ್ರಮೆಯಲ್ಲೇ ಉಳಿದ ನೆಹರೂ ಹಾಗೂ ರಕ್ಷಣಾ ಸಚಿವ ಕೃಷ್ಣ ಮೆನನ್, ದೂರದರ್ಶಿತ್ವವಿಲ್ಲದ ಕಾಂಗ್ರೆಸ್ ನಾಯಕರು ಸೃಷ್ಟಿಸಿದ ಸಮಸ್ಯೆಗಳು, ಹಿಂದಿನ ಇಂಡೋ ಪಾಕ್ ಹಾಗೂ ಇಂಡೋ ಚೀನಾ ಯುದ್ಧಗಳಲ್ಲಿನ ಅವೈಜ್ಞಾನಿಕ ರಣನೀತಿ ಮೊದಲಾದವೆಲ್ಲಾ ಹೇಗೆ ಪರೋಕ್ಷವಾಗಿ ಕಾರ್ಗಿಲ್ ಸಮರಕ್ಕೆ ಕಾರಣವಾದವು ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.

ಎರಡನೇ ಭಾಗ ಯುದ್ಧಾರಂಭದಿಂದ ಹಿಡಿದು ವಿಜಯ ಸಾಧಿಸಿದಲ್ಲಿಯವರೆಗಿನ ಮಾಹಿತಿಯನ್ನು ಒಳಗೊಂಡಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಅತಿಕ್ರಮಣ, ಕಾರ್ಗಿಲ್ ಬಟಾಲಿಕ್ ಹಾಗೂ ದ್ರಾಸ್ ವಲಯದಲ್ಲಿನ ತೀವ್ರ ಹೋರಾಟ, ಗಡಿನಿಯಂತ್ರಣ ರೇಖೆಯೇ ಅಸ್ಪಷ್ಟವಾಗಿದೆ ಎಂದು ಹೊಸ ಕ್ಯಾತೆ ತೆಗೆದ ಪಾಕಿಸ್ತಾನ, ಕಕ್ಸರ್ ಪ್ರದೇಶದಲ್ಲಿ ಅತಿಕ್ರಮವಾಗಿ ಪ್ರವೇಶಿಸಿದ ಪಾಕ್ ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸಲು ತೆರಳಿದ ಲೆಫ್ಟಿನೆಂಟ್ ಸೌರವ್ ಕಾಲಿಯಾ ನೇತೃತ್ವದ ಆರು ಭಾರತೀಯ ಸೈನಿಕರನ್ನು ಬರ್ಬರವಾಗಿ ಹತ್ಯೆಗೈದ ಪಾಕ್,  ಖುದ್ದು ಯುದ್ಧಭೂಮಿಗೆ ಭೇಟಿಕೊಟ್ಟು ಸೈನ್ಯದಲ್ಲಿ ಉತ್ಸಾಹ, ಹುರುಪು, ಆತ್ಮವಿಶ್ವಾಸ ತುಂಬಿದ ಪ್ರಧಾನಿ ವಾಜಪೇಯಿ, ತೊಲೊಲಿಂಗ್ ಪರ್ವತ ವಿಮೋಚನೆ, ಅಮೇರಿಕಾ ಹಾಗೂ ಜಿ 8 ರಾಷ್ಟ್ರಗಳು ಭಾರತದ ನಿಲುವನ್ನು ಸಮರ್ಥಿಸಿದ್ದರಿಂದ ಜಾಗತಿಕ ಮಟ್ಟದಲ್ಲಿ ಒಂಟಿಯಾದ ಪಾಕಿಸ್ತಾನ, ಟೈಗರ್ ಹಿಲ್ಸ್ ಮರುವಶ, ಪಾಕ್ ಪಲಾಯನ ಹಾಗೂ ಭಾರತದ ಜೈತ್ರಯಾತ್ರೆಯ ವಿವರಗಳು ಇಲ್ಲಿವೆ. ಸಾಹಸಗಾಥೆ ಎನ್ನುವ ಶೀರ್ಷಿಕೆಯಡಿಯಲ್ಲಿರುವ ಆಯ್ದ ಹದಿನೈದು ಹುತಾತ್ಮ ಯೋಧರ ಜೀವನ ಪುಟಗಳು, ಅವರ ಕುಟುಂಬದವರ ನುಡಿಗಳು ಮನವನ್ನು ಆರ್ದ್ರಗೊಳಿಸುತ್ತವೆ. ಜೊತೆಗೆ ಕಾರ್ಗಿಲ್ ಯೋಧರಿಗಾಗಿ ಮಿಡಿದ, ತಮ್ಮ ಕೈಲಾದ ರೀತಿಯಲ್ಲಿ, ಸಾಧ್ಯವಾದಷ್ಟು ಸಹಾಯ ಮಾಡಿದ ಕೆಲ ಜನಸಾಮಾನ್ಯರ ವಿವರಗಳೂ ಇವೆ.

ಮೂರನೇ ಭಾಗ ಸಮರಾನಂತರದ ಪರಿಣಾಮಗಳು, ಬೆಳವಣಿಗೆಗಳ ಜೊತೆಗೆ ಭವಿಷ್ಯದ ಅಪಾಯಗಳು ಹಾಗೂ ಪರಿಹಾರ ಮಾರ್ಗಗಳ ಕುರಿತಾಗಿದೆ. ಭಾರತ ಪಾಕ್ ನಡುವಿನ ಸಮಸ್ಯೆಗೆ ಮೂಲಕಾರಣಗಳಲ್ಲಿ ಒಂದಾದ ಕಾಶ್ಮೀರ ವಿವಾದದ ಹಲವು ಆಯಾಮಗಳ ಬಗ್ಗೆ ಬೆಳಕು ಚೆಲ್ಲಿರುವುದಲ್ಲದೇ ಆ ಸಮಸ್ಯೆಯ ಪರಿಹಾರವಾಗಿ ಕೆಲ ತುರ್ತು ಕ್ರಮಗಳು ಹಾಗೂ ಹಲವು ದೀರ್ಘಕಾಲೀನ ಕ್ರಮಗಳ ಬಗ್ಗೆ ವಿಚಾರಗಳಿವೆ.

ಕಾರ್ಗಿಲ್ ಯುದ್ಧದ ಬಗೆಗಿನ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರತಿಯೊಬ್ಬರೂ ಓದಲೇಬೇಕಾದ ಸಂಗ್ರಹಯೋಗ್ಯ ಪುಸ್ತಕ.

ಶನಿವಾರ, ಜುಲೈ 25, 2020

ಆರ್ತನಾದ - ಪುಸ್ತಕ ಪರಿಚಯ

ಪುಸ್ತಕದ ಹೆಸರು         : ಆರ್ತನಾದ
ಮೂಲ ಲೇಖಕರು.      : ಯಂಡಮೂರಿ ವೀರೇಂದ್ರನಾಥ್
ಅನುವಾದಕರು.          : ರಾಜಾ ಚೆಂಡೂರ್
ಪ್ರಕಾಶಕರು.               : ಸೌಮ್ಯ ಎಂ, ಬಸವನಗುಡಿ
ಮುದ್ರಣ.                     : 2004
ಪುಟಗಳು : 180.          ಬೆಲೆ: 80 ರೂಪಾಯಿಗಳು

ನೂರೆಂಬತ್ತು ಪುಟಗಳ ಈ ಪುಟ್ಟ ಕಾದಂಬರಿಯಲ್ಲಿ ಹೆಣ್ಣು ಎಲ್ಲರೆದುರು ಬಹಿರಂಗವಾಗಿ ವ್ಯಕ್ತಪಡಿಸಲಾಗದ/ವ್ಯಕ್ತಪಡಿಸಲು ಹಿಂಜರಿಯುವ ಲೈಂಗಿಕ ದೌರ್ಜನ್ಯದ ವಿವಿಧ ಮುಖಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಯಂಡಮೂರಿಯವರು. ಮನೆಯಿಂದ ಆರಂಭಿಸಿ ದಿನಂಪ್ರತಿ ಸಂಚಾರಕ್ಕೆಂದು ನಾವು ಅವಲಂಬಿಸುವ ಬಸ್ಸುಗಳು, ಕಛೇರಿ, ಶಾಲೆ ಹೀಗೆ ಎಲ್ಲೆಡೆ ವ್ಯಾಪಿಸಿರುವ ಶೋಷಣೆಯನ್ನು, ಅದನ್ನು ವ್ಯಕ್ತಪಡಿಸಲು ಇರುವ ಅಡೆತಡೆಗಳ ಸಮೇತ ತೆರೆದಿಡುತ್ತದೆ ಈ ಕಾದಂಬರಿ. ಗಂಟಲಿನಾಚೆ ಸ್ವರವಾಗಿ ಹೊರಬರದ ದಮನಿತ ದೌರ್ಜನ್ಯಗಳ ಈ ಮೂಕ ಆರ್ತನಾದ ಇಂದಿಗೂ ಪ್ರಸ್ತುತ.

ಅನ್ಯಾಯವನ್ನು ಸಹಿಸದೇ ಪ್ರಶ್ನಿಸುವ ಸ್ವಭಾವದ ಧರಣಿಯ ಬದುಕನ್ನು ಕೇಂದ್ರವಾಗಿಸಿಕೊಂಡು ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಸೂಕ್ಷ್ಮವಾಗಿ ತೋರುತ್ತಲೇ ಸಾಗುವ ಕಥೆ ನಂತರದಲ್ಲಿ ಪುಟ್ಟ ಮಕ್ಕಳ ಮೇಲಿನ ದೌರ್ಜನ್ಯದ ಹೀನ ರೂಪವೊಂದಕ್ಕೆ ನಮ್ಮನ್ನು ಮುಖಾಮುಖಿಯಾಗಿಸುತ್ತದೆ. ಜನರಿಂದ ತುಂಬಿದ ಬಸ್ಸಿನಲ್ಲಿ ಹೆಣ್ಣು ಮಕ್ಕಳ ಮೈ ಕೈ ಸವರುತ್ತಾ ವಿಕೃತ ಆನಂದ ಪಡುವವರಿಂದ ಹಿಡಿದು, ಆಫೀಸಿನಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳೆಲ್ಲಾ ತನ್ನ ಕಾಮನೆಗಳನ್ನು ತಣಿಸುವ ಸಾಧನಗಳೆಂದುಕೊಳ್ಳುವ ಮೇಲಾಧಿಕಾರಿ, ಎಲ್ಲಾ ತಪ್ಪಿಗೂ ನೀನೇ ಕಾರಣ ಎನ್ನುವ ಪತಿ, ತಮ್ಮ ಮೇಲಾಗುತ್ತಿರುವ ಶೋಷಣೆ ಎಂತದ್ದು ಎಂಬುದನ್ನೂ ವಿವರಿಸಲು ಬಾರದಂತಹ ಎಳೆಯ ಮಕ್ಕಳ ಮುಗ್ಧತೆಯನ್ನು ಕಸಿಯುವ ಪಿಪಾಸುಗಳು ಹಾಗೂ ಇವೆಲ್ಲವನ್ನೂ ಬಾಯ್ತೆರೆದು ಹೇಳಿಕೊಳ್ಳಲು ಅಡ್ಡಿಯಾಗುವ ಸಂಗತಿಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ. 

ಈ ಕಾದಂಬರಿಯಲ್ಲಿ ಪ್ರಸ್ತಾಪವಾಗಿರುವ ಪ್ರತಿಯೊಂದು ಸಂಗತಿಯೂ ಒಂದಿಲ್ಲೊಂದು ಸಂದರ್ಭದಲ್ಲಿ ಪ್ರತೀ ಮಹಿಳೆಯ ಅನುಭವಕ್ಕೂ ಬಂದಿರುತ್ತದೆ. ಅವುಗಳ ರೂಪ ಬೇರೆ ಬೇರೆ ಇರಬಹುದಷ್ಟೇ. ಒಂದರ್ಥದಲ್ಲಿ ವಾಸ್ತವ ಸ್ಥಿತಿಯನ್ನೇ ಬರಹವಾಗಿಸಿದ್ದಾರೆ ಎನ್ನಬಹುದು. ಅದನ್ನು ಪುಷ್ಠೀಕರಿಸುವಂತೆ ಕೆಲವು ಪ್ರಕರಣಗಳನ್ನು ಲೇಖಕರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ ಕೂಡಾ. ಹಾಗೆಯೇ ಕಥೆಯ ಕ್ಲೈಮ್ಯಾಕ್ಸ್ ನಿಜವಾಗಿ ನಡೆದದ್ದು ಎಂಬುದನ್ನೂ ಉಲ್ಲೇಖಿಸಿದ್ದಾರೆ. ಸಣ್ಣ ಕಾದಂಬರಿಯಾದರೂ ಪ್ರತೀ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಹೆಣ್ಣು ಧರಣಿಯಂತೆ ಇರಬೇಕು ಅನ್ನಿಸುವಷ್ಟು ಪರಿಣಾಮಕಾರಿಯಾಗಿ ಆ ಪಾತ್ರವನ್ನು ಚಿತ್ರಿಸಿದ್ದಾರೆ. ಪತ್ನಿಯ ಮಾತುಗಳನ್ನು ತಾಳ್ಮೆಯಿಂದ ಕೇಳಿ ವಿವೇಚಿಸುವ, ಆಕೆಯನ್ನು ಅರ್ಥೈಸಿಕೊಳ್ಳುವ ಶ್ರೀಧರ್ ಆಪ್ತನೆನಿಸುತ್ತಾನೆ. ವಿಕ್ರಂ, ಜಾನ್ ಅಬ್ರಹಾಂ ಮತ್ತು ಹಾಗೆ ಬಂದು ಹೀಗೆ ಹೋಗುವ ಸುಕುಮಾರಿ ಪಾತ್ರಗಳು ತುಂಬಾ ಇಷ್ಟವಾದವು.

ಇದರ ಮೂಲ ತೆಲುಗು ಕಾದಂಬರಿಯನ್ನು ಯಂಡಮೂರಿಯವರು ಯಾವಾಗ ಬರೆದಿರುವರೋ ನನಗೆ ತಿಳಿದಿಲ್ಲ. ಆದರೆ ನನ್ನ ಬಳಿಯಿರುವ ಈ ಪುಸ್ತಕ ಪ್ರಕಟವಾಗಿರುವುದು 2004ರಲ್ಲಿ. ಅಂದರೆ ಇಂದಿಗೆ ಸರಿಸುಮಾರು ಹದಿನಾರು ವರ್ಷಗಳ ಹಿಂದೆ. ಹದಿನಾರು ವರ್ಷಗಳ ನಂತರವೂ ಈ ಕಾದಂಬರಿಯಲ್ಲಿ ಪ್ರಸ್ತಾಪಿತ ಸಂಗತಿಗಳು ನಮ್ಮ ಸಮಾಜದಲ್ಲಿ ಪ್ರಸ್ತುತವಾಗಿದೆ ಎನ್ನುವುದು ವಿಪರ್ಯಾಸವಲ್ಲದೇ ಮತ್ತೇನು? ಇಂದಿಗೂ ಇದೇ ವಿಚಾರದ ಬಗ್ಗೆ ಬರೆದು, ಸಿನಿಮಾ ಮಾಡಿ ಜನರ ಚಿಂತನೆಗಳನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ನಾಚಿಕೆಗೇಡಿನ ಸಂಗತಿಯಲ್ಲವೇ?
"ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆಂದು ಚಿಕ್ಕಂದಿನಲ್ಲಿ ಓದಿದ್ದೆವು. ಆದರೆ ಆ ದೇವತೆಗಳು ಇಂದು ಇಲ್ಲಿ ಇದ್ದರೆ ಯಾರು ಪೀತಾಂಬರ ಎಳೆಯುತ್ತಾರೋ, ಯಾರು ಇನ್ನೇನು ಮಾಡುತ್ತಾರೋ ಎಂದು ಓಡಿಹೋಗುತ್ತಿದ್ದರು" ಎನ್ನುವ ಧರಣಿಯ ಮಾತಿಗೂ "ಗುಂಪಿನಲ್ಲಿರುವಾಗ ಯಾವ ಗಂಡಸಾದರೂ ಹೆಣ್ಣನ್ನು ತನಗೆ ಬೇಕಾದಾಗ ಬೇಕಾದಂತೆ ಮುಟ್ಟಬಹುದು. ಏಕೆಂದರೆ ಯಾವಾಗ ಹೆಣ್ಣು ಸಾರ್ವಜನಿಕ ಪ್ರದೇಶದಲ್ಲಿರುತ್ತಾಳೋ ಆಗ ಆಕೆ ಸಾರ್ವಜನಿಕ ಆಸ್ತಿಯಾಗಿಬಿಡುತ್ತಾಳೆ" ಎಂಬ ಇತ್ತೀಚಿನ ಮರ್ದಾನಿ 2 ಸಿನಿಮಾದ ಸಂಭಾಷಣೆಗೂ ನಡುವೆ ಸಮಯದ ಹೊರತು ಯಾವ ವ್ಯತ್ಯಾಸವೂ ಕಾಣದು ಅಲ್ಲವೇ? ಎರಡೂ ಕೂಡಾ ಸತ್ಯವೇ...... ಅಂದಿಗೂ ಇಂದಿಗೂ....... ಹೀಗೇ ಮುಂದುವರೆದರೆ ಪ್ರಾಯಶಃ ಎಂದೆಂದಿಗೂ......

ಸೋಮವಾರ, ಜುಲೈ 20, 2020

ಚಿತಾದಂತ

ಪುಸ್ತಕದ ಹೆಸರು          : ಚಿತಾದಂತ

ಲೇಖಕರು                  : ಡಾ. ಕೆ.ಎನ್. ಗಣೇಶಯ್ಯ

ಪ್ರಕಾಶಕರು                : ಅಂಕಿತ ಪುಸ್ತಕ

ಪ್ರಸ್ತುತ ಮುದ್ರಣ         : 2017 

ಪುಟಗಳು : 248          ಬೆಲೆ : 150 ರೂ

ಚರಿತ್ರೆ ಎನ್ನುವುದು ಹಲವು ರಹಸ್ಯಗಳ ನಿಗೂಢ ಸಂಪುಟ. ಆ ಸಂಪುಟದೊಳಗಿನ ಪುಟಗಳಲ್ಲಿ ದಾಖಲಾದ ವಿಚಾರಗಳಿಗಿಂತ ಪುಟಗಳ ನಡುವೆ ಅಜ್ಞಾತವಾಗುಳಿದು ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯಗಳೇ ಹೆಚ್ಚು ಎನ್ನುವುದು  ಒಪ್ಪಲೇಬೇಕಾದ ಸತ್ಯ. ಭಾರತದ ಮಟ್ಟಿಗೆ ನೋಡುವುದಾದರೆ ಇತಿಹಾಸವನ್ನೇ ತಿರುಚಿ ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಅದನ್ನೇ ನಮ್ಮ ಇತಿಹಾಸವೆಂಬಂತೆ ಬಿಂಬಿಸುವ ಹುನ್ನಾರ ಸ್ವಾತಂತ್ರ್ಯಾನಂತರದಿಂದ ವ್ಯವಸ್ಥಿತವಾಗಿ ನಮ್ಮದೇ ಶಿಕ್ಷಣ ವ್ಯವಸ್ಥೆಯ ಮೂಲಕ ನಡೆದಿದೆ ಎನ್ನುವ ಗಂಭೀರ ಆರೋಪ ಇತ್ತೀಚಿನ ದಿನಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಕೆಲ ಅಪಾತ್ರರನ್ನು ವೈಭವೀಕರಿಸುತ್ತಾ ಅವರನ್ನು ವೀರರಂತೆ, ದೇಶಭಕ್ತರೆಂಬಂತೆ ಬಿಂಬಿಸಿ ಅಸಲೀ ನಾಯಕರನ್ನು ಅಜ್ಞಾತವಾಗಿಯೇ ಉಳಿಸಲಾಗಿದೆ ಎನ್ನುವ ವಾದ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರಹಗಾರರೂ ಕೂಡಾ ಗತದಲ್ಲಿ ಎಲ್ಲೋ ಮರೆಯಾಗಿ ಉಳಿದಿರುವ ಅವ್ಯಕ್ತ ಸತ್ಯಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಭೈರಪ್ಪನವರ 'ಆವರಣ', ವಸುಧೇಂದ್ರರ 'ತೇಜೋ ತುಂಗಭದ್ರಾ' ಮೊದಲಾದವುಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ಅಂತಹದೇ ಐತಿಹಾಸಿಕ ಸತ್ಯಾಸತ್ಯತೆಗಳ ಜೊತೆಗೆ ಕಲ್ಪನೆಯನ್ನು ಬೆರೆಸಿ ಕಟ್ಟಿರುವ ಕಾದಂಬರಿ "ಚಿತಾದಂತ".

ತಮಗೇ ಅರಿವಾಗದಂತೆ ಕಾಲಗರ್ಭದಲ್ಲಿ ಹುದುಗಿದ ಐತಿಹಾಸಿಕ ರಹಸ್ಯವೊಂದರ ಸುಳಿಯಲ್ಲಿ ಸಿಲುಕುವ ಇಬ್ಬರು ಪುರಾತತ್ವಶಾಸ್ತ್ರಜ್ಞೆಯರು ಹೇಗೆ ಆ ಸಿಕ್ಕುಗಳನ್ನು ಬಿಡಿಸಿ ಅದರಿಂದ ಹೊರಬರುತ್ತಾರೆ ಎನ್ನುವುದೇ ಇಲ್ಲಿನ ಕಥೆಯಾದರೂ ಈ ಪ್ರಕ್ರಿಯೆಯಲ್ಲಿ ಅನಾವರಣಗೊಳ್ಳುವ ಇತಿಹಾಸದ ಅನುಕ್ತ ಪುಟಗಳೇ ಈ ಕಾದಂಬರಿಯ ಜೀವಾಳ. ಅಲೆಕ್ಸಾಂಡರ್ ನ ಗುಪ್ತನಿಧಿಯ ಅನ್ವೇಷಣೆ ಕಥೆಯ ಕೇಂದ್ರವೆನಿಸಿದರೂ ಕೂಡಾ ಅಲೆಗ್ಸಾಂಡರನ ದಂಡಯಾತ್ರೆಯಿಂದ ಹಿಡಿದು ನಂದರು, ಮೌರ್ಯರು, ಧಾರ್ಮಿಕ ಒಳಸುಳಿಗಳು, ಕ್ಯಾಂಡಿಯ ಪ್ರಸಿದ್ಧ ಬುದ್ಧದಂತ ಹೀಗೆ ಹಲವು ಐತಿಹಾಸಿಕ ವಿಚಾರಗಳು ಕಥೆಯಲ್ಲಿ ಅಂತರ್ಗತವಾಗಿವೆ. ಅಜೈವಿಕ ಪಂಥ, ಸಿಕಂದರ್, ಅಮಾರ್ತ್ಯ ರಾಕ್ಷಸ, ಚಾಣಕ್ಯ, ಅಶೋಕ ಮೊದಲಾದವರಿಗೆ ಸಂಬಂಧಿಸಿದ ಹಲವು ಸೂಕ್ಷ್ಮ ವಿವರಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ಬೌದ್ಧ ಧರ್ಮದ ಉಗಮದಿಂದ ಆರಂಭಿಸಿ ಕಾಲಕ್ರಮೇಣ ಬಾಹ್ಯ ಪ್ರಭಾವದಿಂದ ಅದರಲ್ಲಾದ ಬದಲಾವಣೆಗಳು, ಬುದ್ಧನ ಮೂಲ ತತ್ವಗಳ ಉಳಿವಿಗಾಗಿ ಶ್ರಮಿಸುವ ತೇರವಾದಿಗಳು, ಅವರ ಹಾಗೂ ಮಹಾಯಾನರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಘರ್ಷಣೆಗಳು ಮೊದಲಾದ ಐತಿಹಾಸಿಕ ವಿಚಾರಗಳೊಂದಿಗೆ ಕಲಾಶ್ ಪಂಗಡದ ಬದುಕು ಬವಣೆಗಳು, ನ್ಯೂಟನ್ ಸ್ಟೋನ್, ಭಾಷೆ ಹಾಗೂ ಅದನ್ನು ಬಳಸುವ ಜನಾಂಗದ ನಡುವಿನ ಸಂಬಂಧ, ಪ್ರಾಚ್ಯವಸ್ತು ಮಾಫಿಯಾ ಮುಂತಾದ ವಿವರಗಳೂ ಇದರಲ್ಲಿವೆ.

ಲೇಖಕರು ಪ್ರಸ್ತಾವನೆಯಲ್ಲೇ ಸ್ಪಷ್ಟಪಡಿಸಿರುವಂತೆ ಸತ್ಯ ಮತ್ತು ಕಲ್ಪನೆಗಳನ್ನು ಬೆರೆಸುವಲ್ಲಿ ಅವರು ಯಾವುದೇ ಮಿತಿಯನ್ನು ಇರಿಸಿಕೊಂಡಿಲ್ಲ. ಕಲ್ಪನೆ ಯಾವುದು ಹಾಗೂ ಸತ್ಯ ಘಟನೆಗಳ್ಯಾವುವು ಎಂಬುದನ್ನು ಓದುಗರೇ ವರ್ಗೀಕರಿಸಿಕೊಳ್ಳಬೇಕು. ಹಾಗಂತ ಪುರಾವೆಗಳೊಂದಿಗೆ ನೀಡಿರುವ ವಿಚಾರಗಳು ಮಾತ್ರ ಸತ್ಯ ಉಳಿದವೆಲ್ಲವೂ ಲೇಖಕರ ಕಲ್ಪನೆ ಎಂದು ಸಾರಾಸಗಟಾಗಿ ನಿರ್ಧರಿಸಲೂ ಸಾಧ್ಯವಿಲ್ಲ. ಪುರಾವೆಗಳ ಹೊರತಾಗಿಯೂ ಲೇಖಕರು ಪ್ರಸ್ತುತಪಡಿಸಿರುವ ಹಲವು ಸಿದ್ಧಾಂತಗಳು, ಹಾಗೂ ಅವುಗಳ ಸಮರ್ಥನೆಗೆ ನೀಡಿರುವ ವಿವರಗಳು ಒಪ್ಪುವಂತಹದ್ದು. ಏಕೆಂದರೆ ಗತದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಗಳಿಲ್ಲ. ರಾಜರ ಆಸ್ಥಾನ ಕವಿಗಳು ಬರೆದ ಕಾವ್ಯಗಳು, ಸ್ವತಃ ರಾಜರೇ ಕೆತ್ತಿಸಿದ ಶಾಸನಗಳು ಮುಂತಾದವೇ ಚರಿತ್ರೆಯ ಮರುಸೃಷ್ಟಿಗೆ ಆಕರ. ಹಾಗಿರುವಾಗ ಆ ವಿವರಗಳು ಸಂಪೂರ್ಣ ಸತ್ಯ ಎನ್ನುವುದು ಮೂರ್ಖತನವೇ ಸೈ. ಹಾಗಾಗಿ ಚರಿತ್ರೆಯನ್ನು ಬೇರೆ ಬೇರೆ ಆಯಾಮಗಳಿಂದ ಪರಾಮರ್ಶಿಸುವುದು ಅತ್ಯಗತ್ಯ. ಅದನ್ನೇ ಲೇಖಕರು ಇಲ್ಲಿ ಅಳವಡಿಸಿಕೊಂಡಿದ್ದಾರೆ. ಚರಿತ್ರೆಯಲ್ಲಿನ ಹಲವು ಘಟನೆಗಳನ್ನು ಬೆದಕಿ ತೆಗೆದು ಅದನ್ನು ಕಾಲಾನುಕ್ರಮದಲ್ಲಿ ಜೋಡಿಸುವಲ್ಲಿ ಇತಿಹಾಸದ ವಾಸ್ತವಿಕ ಅಂಶಗಳನ್ನು ಪರಿಗಣಿಸಿದ್ದರೆ ಅವುಗಳ ನಡುವೆ ಸಂಪರ್ಕದ ಕೊಂಡಿ ಬೆಸೆಯುವಲ್ಲಿ ಓದುಗರನ್ನು ಅವಲೋಕನಕ್ಕೆ ಒಳಪಡಿಸುವ ಕೆಲವು ಸುಳಿವುಗಳನ್ನು ನೀಡಿದ್ದಾರೆ. ಆ ಮೂಲಕ ಚರಿತ್ರೆಯ ಕೆಲ ಭೂಗತ ಸತ್ಯಗಳತ್ತ ಓದುಗರನ್ನು ಚಿಂತನೆಗೆ ಹಚ್ಚಿದ್ದಾರೆ. ಹಲವು ಚದುರಿದ ಚೂರುಗಳನ್ನು ಕ್ರೋಢೀಕರಿಸಿಕೊಂಡಾಗ ಮೂಡುವ ಚಿತ್ರ ನಾವು ಇದುವರೆಗೆ ಓದಿದ ಚರಿತ್ರೆಗಿಂತ ಭಿನ್ನವಾಗಿ ಕಾಣುತ್ತದೆ ಎಂಬುದು ಗಮನಿಸಬೇಕಾದ ಅಂಶ.

ಇದೆಲ್ಲವನ್ನೂ ಹೊರತುಪಡಿಸಿ ಕಾದಂಬರಿಯ ಬಗ್ಗೆ ಹೇಳುವುದಾದರೆ ಓದುಗರನ್ನು ಭೂತ, ವರ್ತಮಾನಗಳೆರಡರ ನಡುವೆ ಕೊಂಡೊಯ್ಯುತ್ತಾ ಕುತೂಹಲಕಾರಿಯಾಗಿ ಸಾಗುವ ಚಿತಾದಂತ ಒಂದಿಷ್ಟೂ ಬೇಸರಗೊಳಿಸದೆ ಓದಿಸಿಕೊಳ್ಳುತ್ತದೆ. ಸನ್ನಿವೇಶ ಸಂಬಂಧಿತ ನಕ್ಷೆ, ಚಿತ್ರಗಳು, ಬ್ರಾಹ್ಮಿ ಹಾಗೂ ಗ್ರೀಕ್ ಲಿಪಿಯ ಕೋಡ್ ಗಳು ಈ ಪಯಣವನ್ನು ಇನ್ನಷ್ಟು ರೋಚಕವಾಗಿಸುವ ಜೊತೆಗೆ ಪ್ರತೀ ಸನ್ನಿವೇಶವನ್ನೂ ಚಿತ್ರಿಸಿಕೊಳ್ಳಲು ಸಹಕಾರಿಯಾಗಿವೆ. ಇದಕ್ಕಾಗಿ ಲೇಖಕರು ನಡೆಸಿರುವ ಅಧ್ಯಯನ, ತೆಗೆದುಕೊಂಡಿರುವ ಶ್ರಮ ಶ್ಲಾಘನೀಯ. ಒಂದೇ ಗುಟುಕಿಗೆ ಓದಿ ಮುಗಿಸಬಹುದಾದಂತಹ ಕಾದಂಬರಿಯಾದರೂ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪುರಾತತ್ವ ಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ ಮೊದಲಾದವುಗಳಲ್ಲಿ ಆಸಕ್ತಿ ಹೊಂದಿರುವವರು ವಿವರವಾಗಿ ವಿಶ್ಲೇಷಿಸಿ ಅವಲೋಕಿಸುತ್ತಾ ಓದುವಂತಹ ಸಂಗ್ರಹಯೋಗ್ಯ ಪುಸ್ತಕ ಎನಿಸಿತು. ಅಂದು ಹಾಗೆ ಇದು ನಾನೋದಿದ ಗಣೇಶಯ್ಯನವರ ಮೊದಲ ಕಾದಂಬರಿ. ಈವರೆಗೆ ಅದೇಕೆ ಇವರ ಬರಹಗಳನ್ನು ಓದಲಿಲ್ಲ ಎನ್ನುವ ಭಾವ ಕಾಡಿದ್ದು ಸುಳ್ಳಲ್ಲ.

(ಇದು ಪುಸ್ತಕದ ವಿಮರ್ಶೆಯಲ್ಲ. ಪುಸ್ತಕ ಓದಿದ ನಂತರ ನನಗನ್ನಿಸಿದ್ದನ್ನು ಅನಿಸಿಕೆಯಾಗಿ ಬರೆದಿರುವೆನಷ್ಟೇ)

ಶನಿವಾರ, ಜುಲೈ 4, 2020

ಪುಸ್ತಕ ವಿಮರ್ಶೆ - ವೈದೇಹಿಯವರ ಆಯ್ದ ಕಥೆಗಳು

ಪುಸ್ತಕದ ಹೆಸರು   : ಮೊದಲ ಓದು - ವೈದೇಹಿ       ಅವರ ಆಯ್ದ ಕಥೆಗಳು
ಪ್ರಕಾಶಕರು         : ಅಕ್ಷರ ಪ್ರಕಾಶನ, ಹೆಗ್ಗೋಡು
ಪ್ರಥಮ ಮುದ್ರಣ : 2006
ಪುಟಗಳು     : 108      ಬೆಲೆ    : 75 ರೂ

ಈ ಪುಸ್ತಕವನ್ನು ಪರಿಚಯಿಸುವ ಮೊದಲು 'ಮೊದಲ ಓದು' ಎಂಬ ಅದ್ಭುತ ಪುಸ್ತಕ ಮಾಲೆಯ ಬಗ್ಗೆ ಒಂದಿಷ್ಟು ಹೇಳಬಯಸುತ್ತೇನೆ. ಸಾಮಾನ್ಯವಾಗಿ ಓದುಗರು ತಮ್ಮ ಆಯ್ಕೆ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಆಯ್ದು ಓದುತ್ತಾರೆ. ಎಲ್ಲಾ ಲೇಖಕರು, ಎಲ್ಲಾ ಪ್ರಬೇಧದ ಬರಹಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಲೇಖಕರ ಬರವಣಿಗೆಯ ಶೈಲಿ, ಪ್ರಬೇಧ, ವಸ್ತುವಿಷಯ ಎಲ್ಲವನ್ನೂ ಗಮನಿಸಿ ಪುಸ್ತಕಗಳನ್ನು ಆರಿಸುವುದು ಕೊಂಚ ಕಠಿಣವಾದ ಕೆಲಸ. ಈ ನಿಟ್ಟಿನಲ್ಲಿ ಓದುಗರಿಗೆ ಬಹಳಷ್ಟು ಸಹಾಯ ಮಾಡಬಲ್ಲ ಪುಸ್ತಕ ಸರಣಿ ಈ 'ಮೊದಲ ಓದು'.

ಕರ್ನಾಟಕ ಸಾಹಿತ್ಯ, ರಂಗಭೂಮಿ ಹಾಗೂ ಪ್ರದರ್ಶನ ಕಲೆಗೆ ಅಪಾರ ಕೊಡುಗೆ ನೀಡಿರುವ, ನೀನಾಸಂ ಹಾಗೂ ಅಕ್ಷರ ಪ್ರಕಾಶನ, ಹೆಗ್ಗೋಡು ಸಂಸ್ಥೆಗಳ ಸಂಸ್ಥಾಪಕ ಮಹಾನ್ ಚೇತನ ದಿವಂಗತ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ಹೊರತಂದಿರುವ ಸರಣಿ ಪುಸ್ತಕ ಮಾಲಿಕೆ 'ಮೊದಲ ಓದು'. ಕನ್ನಡ ಸಾಹಿತ್ಯದ ಹೊಸ ಓದುಗರಿಗೆ ಇಲ್ಲಿನ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕೆಂಬುದು ಇದರ ಉದ್ದೇಶ. ಮೊದಲ ಕಂತಿನಲ್ಲಿ ತಲಾ 108 ಪುಟಗಳ 25 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.(ಪ್ರಸ್ತುತ ಈ 'ಮೊದಲ ಓದು' ಸರಣಿಯಲ್ಲಿ ನಲ್ವತ್ತೆಂಟು ಪುಸ್ತಕಗಳು ಪ್ರಕಟಗೊಂಡಿವೆ) ಹಳಗನ್ನಡ ಕಾವ್ಯಗಳಿಂದ ಹಿಡಿದು, ಹೊಸಗನ್ನಡದ ಕವಿತೆ, ಕಥೆ, ಬರಹಗಳು ಇದರಲ್ಲಿ ಸೇರಿವೆ. (ಮೊದಲ ಸರಣಿಯ ಇಪ್ಪತ್ತೈದು ಪುಸ್ತಕಗಳ ಪಟ್ಟಿಯನ್ನು ಫೋಟೋದಲ್ಲಿ ಹಾಕಿರುವೆ). ಆಯಾ ಕವಿ/ಸಾಹಿತಿಗಳ ಬರವಣಿಗೆಯ ಶೈಲಿ, ಪ್ರಕಾರಗಳ ಬಗ್ಗೆ ಅರಿಯಲು ಈ ಪುಸ್ತಕಗಳು ಓದುಗರಿಗೆ ಸಹಾಯ ಮಾಡುತ್ತವೆ. ತಲಾ ಎಪ್ಪತ್ತೈದು ರೂಪಾಯಿ ಬೆಲೆಯುಳ್ಳ ಇವು ನಿಜಕ್ಕೂ ಸಂಗ್ರಹಯೋಗ್ಯ ಪುಸ್ತಕಗಳು(ಹೊಸ ಅವತರಣಿಕೆಗಳ ಬೆಲೆ ನೂರು ರೂಪಾಯಿಗಳು ಇರಬೇಕು.)
ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾದ ಜಾನಕಿ ಶ್ರೀನಿವಾಸ ಮೂರ್ತಿ(ವಾಸಂತಿ) ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲೊಬ್ಬರು. ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಹೆಣ್ಣಿನ ಮನೋಲೋಕದ ಸೂಕ್ಷ್ಮಗಳನ್ನು ಯಾವುದೇ ಉತ್ಪ್ರೇಕ್ಷೆಗಳಿಲ್ಲದೇ ಚಿತ್ರಿಸುವುದರಲ್ಲಿ ಇವರು ಸಿದ್ಧಹಸ್ತರು. ಕುಂದಗನ್ನಡದ ಪ್ರಾದೇಶಿಕ ಸೊಗಡಿನಲ್ಲಿ ನಮ್ಮ ನಡುವಿನ ಅತೀ ಸಾಮಾನ್ಯ ಹೆಣ್ಮಕ್ಕಳ ಬದುಕು ಬವಣೆಗಳನ್ನು ಅತ್ಯಂತ ಸಮರ್ಥವಾಗಿ ಧ್ವನಿಸುತ್ತವೆ ಇವರ ಕಥನಗಳು. 

ಪ್ರಸ್ತುತ ಪುಸ್ತಕ ವೈದೇಹಿ ಅವರ ಎಂಟು ಕಥೆಗಳನ್ನು ಒಳಗೊಂಡಿದೆ (ಅಕ್ಕು, ಅವಲಂಬಿತರು, ಶಕುಂತಲೆಯೊಡನೆ ಕಳೆದ ಅಪರಾಹ್ನ, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಸೌಗಂಧಿಯ ಸ್ವಗತಗಳು, ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿಯೆಂಬ ನೆನಪು). ಈ ಎಂಟೂ ಕಥೆಗಳೂ ಪುರುಷ ಪ್ರಧಾನ ಸಮಾಜದಡಿಯಲ್ಲಿ ಉಡುಗುವ ಹೆಣ್ಣಿನ ದನಿಯನ್ನೂ, ಸಂಪ್ರದಾಯ ಕಟ್ಟಳೆಗಳ ಹೆಸರಿನಲ್ಲಿ ಬಂಧಿಯಾದ ಅವಳ ಒಳತೋಟಿಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ನಮ್ಮ ಕುಟುಂಬ, ನಮ್ಮ ಮನೆಯವರು, ನಮ್ಮ ಬಂಧುಗಳು ಎನ್ನುವ ಸಂಬಂಧಗಳೆಲ್ಲಾ ಒಂದು ಭದ್ರತೆಯ ಸುರಕ್ಷತಾ ಭಾವವನ್ನು ನೀಡುವಂತಹದ್ದು. ಆದರೆ ಆ ಕೌಟುಂಬಿಕ ವ್ಯವಸ್ಥೆಯೊಳಗೇ ಉಸಿರಾಡುವ ತಣ್ಣಗಿನ ಕ್ರೌರ್ಯವನ್ನು ಇಲ್ಲಿನ ಕಥೆಗಳು ತೆರೆದಿಡುವ ಪರಿ ಮೈನಡುಗಿಸುತ್ತದೆ. ಅಂದಿನ ಶಕುಂತಲೆಯಿಂದ ಹಿಡಿದು ಇಂದಿನ ಅಕ್ಕು, ಅಹಲ್ಯ, ಪುಟ್ಟಮ್ಮತ್ತೆ, ಕಮಲಾವತೀ, ಸೌಗಂಧಿ, ಅಮ್ಮಚ್ಚಿಯ ತನಕ ಎಲ್ಲರೂ ತಮ್ಮವರೆನಿಸಿಕೊಂಡವರಿಂದಲೇ ದಮನಿತರಾದವರು. ಕೆಲವರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಇನ್ನು ಕೆಲವರು ಮೌನವಾಗಿ ಸಹಿಸಿ ಹೊಂದಾಣಿಕೆಯನ್ನೇ ಬದುಕಾಗಿಸಿಕೊಂಡವರು. 
ಬಂಡಾಯದ ಧ್ವನಿಯಂತೆ ಕಾಣುವ ಅಕ್ಕುವಿನ ಮಾತುಗಳು ಲೋಕಕ್ಕೆ ಹುಚ್ಚು ಬಡಬಡಿಕೆಯಷ್ಟೇ. ಎಲ್ಲರೂ ಅವಳನ್ನು ಆಡಿಕೊಳ್ಳುವವರೇ. ಅವಳಿಗೆ ಮರುಳಿನ ಬಿರುದು ನೀಡುವ ಮನೆಯವರ ಉದ್ದೇಶ ಅವಳ ಮಾತಿನಲ್ಲಿನ ಸತ್ಯವನ್ನು ಭ್ರಾಂತಿಯ ಸೋಗಿನಲ್ಲಿ ಮುಚ್ಚಿಹಾಕುವುದಷ್ಟೇ ಆಗಿಬಿಡುತ್ತದೆ. 'ಅವಲಂಬಿತರು' ಸಣ್ಣ ವಯಸ್ಸಿನ ಅಹಲ್ಯೆಯ ಕನಸುಗಳನ್ನು ಅವಳ ಸುತ್ತಲಿನ ಜನರು ಚಿವುಟುವ ಪರಿಯನ್ನು ತೆರೆದಿಡುತ್ತಲೇ ಯಾರು ಯಾರ ಮೇಲೆ ಅವಲಂಬಿತರು ಎನ್ನುವ ಜಿಜ್ಞಾಸೆಯನ್ನು ಹುಟ್ಟಿಹಾಕುತ್ತದೆ.

ಸ್ವತಃ ಕೆ.ವಿ ಸುಬ್ಬಣ್ಣನವರೇ ರಚಿಸಿದ "ಲೋಕ ಶಾಕುಂತಲ" ನಾಟಕದಿಂದ ಪ್ರೇರಣೆ ಪಡೆದ 'ಶಕುಂತಲೆಯೊಂದಿಗೆ ಕಳೆದ ಅಪರಾಹ್ನ' ದುಷ್ಯಂತನಿಂದ ತಿರಸ್ಕೃತಳಾದ ಶಕುಂತಲೆಯ ಭಾವಾಂತರಂಗವನ್ನು ನಿರೂಪಿಸುತ್ತದೆ. ಅರಸೊತ್ತಿಗೆಯ ರಾಜಧರ್ಮದ ಹಮ್ಮಿನೊಳಗೆ ನರಳುವ ಹೆಣ್ಮನದ ಸೂಕ್ಷ್ಮಗಳು ಇಲ್ಲಿ ಸಮರ್ಥವಾಗಿ ಅನಾವರಣಗೊಂಡಿವೆ. ಧರ್ಮ, ದ್ವಂದ್ವ, ಶಾಪ ಮೊದಲಾದವುಗಳ ಸೋಗಿನಲ್ಲಿ ಪುರುಷ ಲಂಪಟತ್ವವನ್ನು ಮುಚ್ಚಿಡಲು/ಸಮರ್ಥಿಸಿಕೊಳ್ಳಲು ಹವಣಿಸುವ ಲೋಕರೀತಿಯನ್ನು ಪ್ರಶ್ನಿಸುತ್ತದೆ ಈ ಕಥೆ. 'ಪ್ರಪಂಚ ಇವತ್ತು ಕಾಳಿದಾಸನನ್ನು ನಂಬುವಷ್ಟು ಶಕುಂತಲೆಯನ್ನು ನಂಬುತ್ತದೆಯೇ" ಎನ್ನುವ ಶಕುಂತಲೆಯ ಪ್ರಶ್ನೆಗೆ ಉತ್ತರವಿದೆಯೇ ನಮ್ಮಲ್ಲಿ?

'ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು' ಎರಡು ತಲೆಮಾರಿನ ಜೀವಗಳ ಭಾವ ಸಂಘರ್ಷದೊಂದಿಗೆ ಅಂದಿಗೂ ಇಂದಿಗೂ ಪ್ರಾಯಶಃ ಮುಂದೆಂದಿಗೂ ಬದಲಾಗದೇನೋ ಎನ್ನಿಸುವ ಉಳ್ಳವರ ಕ್ರೌರ್ಯವನ್ನು ತೋರಿಸುತ್ತದೆ. ಪುಟ್ಟಮ್ಮತ್ತೆಯ ತಾಯಿ, ಪುಟ್ಟಮ್ಮತ್ತೆ ಹಾಗೂ ಅವಳ ಮಗಳು ಮೂವರದ್ದೂ ಹೆಚ್ಚು ಕಡಿಮೆ ಒಂದೇ ರೀತಿಯ ಬದುಕು ಹಾಗೂ ಚಿಂತನೆಗಳು. ತಮ್ಮ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಎಸೆದು ಬದುಕಿದವರು. ಶ್ರಮಜೀವಿಗಳಾಗಿಯೂ ಶೋಷಿತರಾದವರು ಆದರೆ ಅದನ್ನು ವಿರೋಧಿಸದೇ ಮೌನವಾಗಿ ಅಲೆಗಳೊಂದಿಗೆ ಈಜಿದವರು. ಆದರೆ ಪುಟ್ಟಮ್ಮತ್ತೆಯ ಮೊಮ್ಮಗಳು ಕಮಲಾವತೀ ಮಾತ್ರ ಇವರಂತಲ್ಲ. ಆಕೆ ಎಲ್ಲವನ್ನೂ ಸಹಿಸುವ ಮನಸ್ಥಿತಿಯವಳಲ್ಲ. ತನ್ನ ಬದುಕಿನ ಬಗ್ಗೆ ಕನಸು ಕಲ್ಪನೆಗಳನ್ನು ಹೆಣೆದವಳು. ಈ ಕಾರಣಕ್ಕೇ ಅವಳು ಎಲ್ಲರಿಗೂ ಆಡಿಕೊಳ್ಳುವ ವಸ್ತು. ಅತ್ತ ಆಸೆ ಆಕಾಂಕ್ಷೆಗಳೊಂದಿಗೆ ರಾಜಿಯಾಗಲೂ ಸಾಧ್ಯವಾಗದೇ ಇತ್ತ ಬದುಕನ್ನು ತನ್ನಿಷ್ಟದಂತೆ ಕಟ್ಟಿಕೊಳ್ಳಲೂ ಸಾಧ್ಯವಾಗದೇ ಕಡೆಗೆ ಉಳ್ಳವರ ಸಂಪತ್ತನ್ನು ವೃದ್ಧಿಸಿಕೊಡುವ ಸಾಧನ ಮಾತ್ರವಾಗುವ ಕಮಲಾವತೀ ಕಾಡುತ್ತಾಳೆ.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನ, ಉಮಾಶ್ರೀ ಹಾಗೂ ಎಂ.ಡಿ ಪಲ್ಲವಿ ಅವರ ಮುಖ್ಯ ಭೂಮಿಕೆಯಲ್ಲಿ 'ಗುಲಾಬಿ ಟಾಕೀಸ್' ಎಂಬ ಹೆಸರಿನಲ್ಲಿ ಸಿನಿಮಾ ಅಗಿರುವ 'ಗುಲಾಬಿ ಟಾಕೀಸು & ಸಣ್ಣ ಅಲೆಗಳು' ಸಂಪ್ರದಾಯದ ಹೆಸರಿನ ನಿಯಮ ಕಟ್ಟಳೆಗಳಲ್ಲಿ ಮುಳುಗಿದ ಪ್ರಾತಿನಿಧಿಕ ಊರೊಂದರಲ್ಲಿ ಹೊಸದಾಗಿ ಆರಂಭವಾಗುವ ಟಾಕೀಸ್ ಒಂದು ಸೃಷ್ಟಿಸುವ ಬದಲಾವಣೆಯ ತರಂಗಗಳನ್ನು ವಿವರಿಸುತ್ತದೆ. ಟಾಕೀಸಿಗೆ ಮಹಿಳೆಯರ ಬದಿಯ ಗೇಟ್ ಕೀಪರ್ ಆಗಿ ಲಿಲ್ಲೀಬಾಯಿ ನೇಮಕವಾಗುವುದರೊಂದಿಗೆ ಊರಿನಲ್ಲುಂಟಾಗುವ ಬದಲಾವಣೆಗಳೊಂದಿಗೇ ಗಂಡಸರೆದುರು ಬಾಯ್ತೆರೆಯಲು ಹೆದರುವ ಮನೆಯಿಂದ ಹೊರಗೆ ಕಾಲಿಡದ ಊರಿನ ಮಹಿಳೆಯರ ಪ್ರಪಂಚದಲ್ಲಾಗುವ ಕ್ರಾಂತಿಯನ್ನು ಬಹಳ ಸೊಗಸಾಗಿ ಈ ಕಥೆ ವಿವರಿಸುತ್ತದೆ.

ಕೌಟುಂಬಿಕ ಕ್ರೌರ್ಯದ ಅತೀ ಸೂಕ್ಷ್ಮ ಪ್ರಕಾರವೊಂದನ್ನು ಹೆಣ್ಣಿನ ಅಂತರಾಳದ ಬಯಕೆಗಳು ಹಾಗೂ ಅವಳನ್ನು ಸಮಾಜಕ್ಕೆ ತೆರೆದುಕೊಳ್ಳಲು ಬಿಡದ ಕಟ್ಟಳೆಗಳ ಸಮೇತ ತೆರೆದಿಡುವ 'ಸೌಗಂಧಿಯ ಸ್ವಗತಗಳು' ಮನವನ್ನು ಆರ್ದ್ರಗೊಳಿಸುತ್ತದೆ. ಮಗಳ ಬದುಕಿನ ಎಲ್ಲಾ ನಿರ್ಧಾರಗಳೂ ತಮ್ಮ ಅಧೀನವೇ ಎಂದುಕೊಳ್ಳುವ ಹೆತ್ತವರ ನಿರ್ಧಾರಗಳಿಗೆ ತಲೆಕೊಟ್ಟ ಸುಗಂಧಿ, ಚಿಕ್ಕಂದಿನಿಂದಲೂ ಒಂದು ಕಟ್ಟಳೆಯೊಳಗೇ ಬಂಧಿಯಾಗಿ ತನ್ನೊಳಗಿನ ತನ್ನನ್ನು ಪಂಜರದೊಳಗೆ ಬಂಧಿಸಿಕೊಂಡಿರುವ ಅವಿವಾಹಿತೆ ಸುಗಂಧಿ, ಈಗ ಬದಲಾಗಬೇಕೆನಿಸಿದರೂ ಸಾಧ್ಯವಾಗದೇ ಒಳಗೊಳಗೇ ಕಾಮನೆಗಳನ್ನು ಕೊಂದುಕೊಂಡು ನರಳುವ ಸುಗಂಧಿ ಅಂತರಂಗವನ್ನು ಕಲುಕುತ್ತಾಳೆ.

ಒಂದು ಮದುವೆ ಮನೆಯಲ್ಲಿ ನೆರೆದ ಹೆಂಗೆಳೆಯರ ಸಂಭಾಷಣೆಗಳ ಸಾರಾಂಶದಂತೆ ತೋರುವ 'ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ' ವಿವಿಧ ವ್ಯಕ್ತಿತ್ವಗಳ ಅನಾವರಣದಂತೆ ಕಾಣುತ್ತದೆ. ಮದುವೆ ಮನೆಯಲ್ಲಿ ಉಪಸ್ಥಿತಳಿದ್ದ ಸಮಾಜಶಾಸ್ತ್ರದ ವಿದ್ಯಾರ್ಥಿನಿಯೊಬ್ಬಳ ನೋಟದಲ್ಲಿ ಅಲ್ಲಿನ ಹೆಂಗಸರ ನಡುವಣ ಮಾತುಕತೆಗಳನ್ನು ವಿಶ್ಲೇಷಿಸುವ ಈ ಕಥೆ ಹತ್ತು ಹಲವು ವಿಚಾರಗಳ ಸುತ್ತ ಗಿರಕಿ ಹೊಡೆಯುತ್ತದೆ.

ಸಂಕಲನದ ಕೊನೆಯ ಕಥೆ 'ಅಮ್ಮಚ್ಚಿಯೆಂಬ ನೆನಪು' ಮಹಾಲಕ್ಷ್ಮಿ ಎಂಬ ಪುಟ್ಟ ಬಾಲೆಯ ಮನದ ಭಿತ್ತಿಯಲ್ಲಿ ಅಚ್ಚಾದ ಅಮ್ಮಚ್ಚಿಯ ಕಥನ. ಸ್ವತಂತ್ರವಾಗಿ ಹಾರಾಡುವ ಸ್ವಚ್ಛಂದ ಮನದ ಅಮ್ಮಚ್ಚಿ, ಮಗಳ ಮನವನ್ನು ಅರಿಯದ ಸೀತತ್ತೆ, ಅವಳನ್ನು ಪಂಜರದಲ್ಲಿ ಬಂಧಿಸಲು ಹವಣಿಸುವ ವೆಂಕಪ್ಪಯ್ಯ ಇಲ್ಲಿನ ಪ್ರಧಾನ ಪಾತ್ರಗಳು. ಅಮ್ಮಚ್ಚಿ ತನ್ನ ಸ್ವತ್ತೆಂಬಂತೆ ವರ್ತಿಸುವ ವೆಂಕಪ್ಪಯ್ಯ, ಅವನ ತಾಳಕ್ಕೆ ತಕ್ಕಂತೆ ಕುಣಿಯುವ ತಾಯಿಯನ್ನು ವಿರೋಧಿಸುವ, ನೋವು ಸಿಟ್ಟು ಸೆಡವನ್ನೆಲ್ಲಾ ಕಣ್ಣ ಹೊಳಪಿನಲ್ಲಿ ಅಡಗಿಸಿ ನಗುವ ಅಮ್ಮಚ್ಚಿ ಕಥೆಯ ಕೊನೆಯಲ್ಲಿ ಸ್ತ್ರೀ ಸ್ವಾತಂತ್ರ್ಯದ ಪ್ರತೀಕವೆನಿಸುತ್ತಾಳೆ. 

ಇಲ್ಲಿನ ಎಲ್ಲಾ ಕಥೆಗಳೂ ಬರೀ ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯವನ್ನಷ್ಟೇ ಧ್ವನಿಸುವುದಿಲ್ಲ. ಅದನ್ನು ಬೆಂಬಲಿಸುವ ಭಾನು, ಶಾರದೆ, ದೊಡ್ಡತ್ತೆ, ಸುಗಂಧಿಯ ತಾಯಿ, ಸೀತತ್ತೆ ಮೊದಲಾದವರ ಮೂಲಕ ಆ ಕ್ರೌರ್ಯದೊಳಗೆ ಪಾಲುದಾರರಾಗಿ ಸ್ವತಃ ಮಹಿಳೆಯರೂ ನಿಂತಿದ್ದಾರೆ ಎಂಬುದನ್ನೂ ತೋರಿಸುತ್ತದೆ. ಇನ್ನು ಕುಂದಗನ್ನಡದ ಭಾಷಾ ಸೊಗಡಿನ ಸ್ವಾದವನ್ನು ಓದಿಯೇ ಸವಿಯಬೇಕು.

(ಇವುಗಳಲ್ಲಿ ಅಮ್ಮಚ್ಚಿಯೆಂಬ ನೆನಪು, ಅಕ್ಕು ಹಾಗೂ ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು ಈ ಮೂರು ಕಥೆಗಳನ್ನು ಸೇರಿಸಿ ಚಂಪಾ ಶೆಟ್ಟಿಯವರು 'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ನಿರ್ದೇಶಿಸಿದ್ದಾರೆ. ವೈಜಯಂತಿ ಅಡಿಗ, ದೀಪಿಕಾ ಆರಾಧ್ಯ, ರಾಧಾಕೃಷ್ಣ ಊರ್ಲ, ರಾಜ್ ಶೆಟ್ಟಿ ಮೊದಲಾದವರು ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾವನ್ನು ಖುದ್ದು ವೈದೇಹಿ ಅವರೇ ನಿರೂಪಿಸಿದ್ದಾರೆ. ಈ ಸಿನಿಮಾ ಕೂಡಾ ಪುಸ್ತಕದಷ್ಟೇ ಸೊಗಸಾಗಿದೆ.)

ಭಾನುವಾರ, ಜೂನ್ 21, 2020

ಸ್ನೇಹ ಪ್ರೇಮ

ಪುಸ್ತಕದ ಹೆಸರು : ಸ್ನೇಹ - ಪ್ರೇಮ                  

ತೆಲುಗು ಮೂಲ : ಯಂಡಮೂರಿ ವೀರೇಂದ್ರನಾಥ್ 

ಅನುವಾದಕರು : ರಾಜಾ ಚೆಂಡೂರ್            

ಪ್ರಕಾಶಕರು : ಹಂಸಧ್ವನಿ ಪ್ರಕಾಶನ, ಬೆಂಗಳೂರು  

ಪ್ರಥಮ ಮುದ್ರಣ : 1986                          

ಪುಟಗಳು : 135

"ಮಾನಸಿಕವಾಗಿ ಕೃಷ್ಣನ ವರಿಸಿದ ರಾಧೆ ಕೆಟ್ಟವಳೇ? ವಿವಾಹವಾಗದೇ ಕರ್ಣನ ಹಡೆದ ಕುಂತಿ ಕೆಟ್ಟವಳೇ?" ಎಂಬೆರಡು ಭಾವ ಸೂಕ್ಷ್ಮ ಪ್ರಶ್ನೆಗಳನ್ನಿಟ್ಟುಕೊಂಡು ನಾಲ್ಕು ವಿಭಿನ್ನ ಮನಸ್ಸತ್ವಗಳ ಮುಖೇನ ಬದುಕಿನ ಪರಿಧಿಯೊಳಗಣ ಸ್ನೇಹ, ಪ್ರೇಮ, ವಾಂಛೆಗಳ ಮೇಲಾಟದ ಬಗ್ಗೆ ವಿಶ್ಲೇಷಿಸುವ ಕಿರು ಕಾದಂಬರಿಯಿದು. 

ಸ್ನೇಹ, ಪ್ರೇಮಕ್ಕೆಲ್ಲಾ ವಿವಾಹವೇ ಮೆಟ್ಟಿಲೆನ್ನುವ ರಾಧಾ, ಪ್ರೇಮವೆನ್ನುವುದಕ್ಕೆ ಅಸ್ತಿತ್ವವೇ ಇಲ್ಲವೆನ್ನುವ ಜಯಾ, ಒಂದು ರಾತ್ರಿಯ ನಿಕಟತ್ವದಿಂದ ಪ್ರೇಮದಲ್ಲಿ ಬೀಳುವ ಪಾರ್ಥಸಾರಥಿ, ಸ್ನೇಹ ಪ್ರೇಮಗಳೆಲ್ಲಾ ಕೇವಲ ದೈಹಿಕ ಸಾಮೀಪ್ಯ ಸಾಧನೆಗಾಗಿ ಎಂಬ ಮನೋಭಾವದ ಕೃಷ್ಣ. ಈ ನಾಲ್ಕು ಪಾತ್ರಗಳ ಭಿನ್ನ ವಿಚಾರಧಾರೆಗಳ ಮೂಲಕ ಗಂಡು ಹೆಣ್ಣಿನ ನಡುವಿನ ಸ್ನೇಹ - ಪ್ರೇಮದ ಮೂಲವೇನು? ದೈಹಿಕ ಸಾಮೀಪ್ಯವೇ ಸ್ನೇಹ/ಪ್ರೇಮದಲ್ಲಿ ಆತ್ಮೀಯತೆಯನ್ನು ಬೆಸೆಯುವ ಸಾಧನವೇ ಎಂಬಂತಹ ಸೂಕ್ಷ್ಮ ಪ್ರಶ್ನೆಗಳಿಗೆ ನೈತಿಕತೆಯ ನೆಲೆಗಟ್ಟಿನಲ್ಲಿ ಉತ್ತರ ನೀಡಲು ಯತ್ನಿಸುತ್ತದೆ ಈ ಕಾದಂಬರಿ. 

ಮದುವೆಗೆ ಮುನ್ನವೇ ದೈಹಿಕ ಸಾಮೀಪ್ಯ ಎನ್ನುವ ಸ್ತ್ರೀ ಮೋಹಿ ಕೃಷ್ಣ ರಾಧಾಳ ಸ್ನೇಹ ಬಯಸುತ್ತಾನೆ. ಸ್ನೇಹ, ಪ್ರೇಮಗಳೆಲ್ಲಾ ವಿವಾಹದ ಚೌಕಟ್ಟಿನಲ್ಲೇ ಎಂಬ ಚಿಂತನೆಯ ರಾಧಾ ಆತನ ಸ್ನೇಹವನ್ನು ನಿರಾಕರಿಸುತ್ತಾಳೆ. ಇದರಿಂದ ಕಂಗೆಡುವ ಕೃಷ್ಣ ಅವಳದೇ ಹಾದಿಯಲ್ಲಿ ಸಾಗಿ ವಿವಾಹದ ನಾಟಕವಾಡಿ ತನ್ನ ಕಾರ್ಯಸಾಧಿಸಿಕೊಂಡು ರಾಧಾಳಿಗೆ ಆಘಾತ ನೀಡುತ್ತಾನೆ. ಶೀಲ, ಪಾವಿತ್ರ್ಯತೆ ಮುಂತಾದ ಪರಿಕಲ್ಪನೆಗಳಿಂದ ಮಾರು ದೂರ ನಿಲ್ಲುವ ಜಯಾಳ ಪ್ರಕಾರ ಪ್ರೇಮವೆಂಬುದು ವಾಂಛೆಯ ಮೇಲೆ ಹೊದಿಸಿದ ನವಿರಾದ ಆತ್ಮವಂಚನೆಯ ಪರದೆಯಷ್ಟೇ. ಆಕೆ ಆ ಪರದೆಯಿಲ್ಲದೇ ನೇರಾನೇರ ತನಗಿಷ್ಟ ಬಂದಂತೆ ಬದುಕುವವಳು. ಹಾಗಾಗಿಯೇ ಪಾರ್ಥಸಾರಥಿಯೊಂದಿಗಿನ ಸಂಬಂಧ ಆಕೆಗೆ ಕ್ಯಾಶುಯಲ್ ಎನ್ನಿಸುತ್ತದೆ. ಆದರೆ ವಯಸ್ಸು ಮೀರುತ್ತಿದ್ದರೂ ಏಕಾಂಗಿಯಾಗಿ ಒಂಟಿತನದ ಬೇಗೆಯಿಂದ ನರಳುವ ಪಾರ್ಥಸಾರಥಿಯವರಿಗೆ ಆಕೆಯ ಸಾಮೀಪ್ಯದಲ್ಲಿ ದೈಹಿಕ ಆನಂದಕ್ಕಿಂತ ಮಾನಸಿಕ ಆಸರೆ ಸಿಕ್ಕಂತೆ ಭಾಸವಾಗುತ್ತದೆ. ಆ ಕಾರಣದಿಂದಲೇ ಸಂಪೂರ್ಣ ಹಿನ್ನೆಲೆ ತಿಳಿದಿದ್ದೂ ಆಕೆಯನ್ನು ವಿವಾಹವಾಗಲು ಬಯಸುತ್ತಾರೆ ಅವರು. ಕೃಷ್ಣನಿಂದ ನಂಬಿಕೆದ್ರೋಹಕ್ಕೊಳಗಾದ ರಾಧಾಳ ನಡೆಯೇನು, ಅವರಿಬ್ಬರ 'ವಿವಾಹವಲ್ಲದ' ವಿವಾಹ ಅಸ್ತಿತ್ವ ಕಳೆದುಕೊಂಡಿತೇ, ಜಯಾ ಸಾರಥಿಯವರನ್ನು ವಿವಾಹವಾಗುವಳೇ ಎಂಬುದೇ ಕಥಾ ಸಾರ.

ಟ್ರಬಲ್ ಷಟ್ಟರ್ಸ್ ಸಂಸ್ಥೆಯ ಪ್ರೆಸಿಡೆಂಟ್ ಆಪತ್ಭಾಂದವ ಟಿ.ಎಸ್, ತನ್ನ ಹುಚ್ಚು ವಿಚಾರಧಾರೆಗಳಿಗೆ ಕ್ರಾಂತಿಕಾರಿ ವೇಷ ತೊಡಿಸಿ ಚಿತ್ರವಿಚಿತ್ರ ಯೋಜನೆಗಳನ್ನು ಹೆಣೆಯುವ ಮಾಡಿಸಂ(ಮ್ಯಾಡಿಸಂ) ಸಂಸ್ಥೆಯ ಪರಶುರಾಮ್ ಪಾತ್ರಗಳಿಗೂ ಕೂಡಾ ಕಥೆಯಲ್ಲಿ ಪ್ರಾಮುಖ್ಯತೆಯಿದೆ. ತಮ್ಮ ವಿಚಿತ್ರ ವ್ಯಕ್ತಿತ್ವ, ಲಘು ಹಾಸ್ಯ ಲೇಪಿತ ಮಾತುಗಳಿಂದಾಗಿ ಈ ಎರಡೂ ಪಾತ್ರಗಳು ನೆನಪಿನಲ್ಲುಳಿಯುತ್ತವೆ. ಆಲ್ ಇಂಡಿಯಾ ರೇಡಿಯೋ ಸ್ಥಾಪನೆ, ಅದರ ಕಾರ್ಯನಿರ್ವಹಣೆ, ಅಲ್ಲಿನವರ ಕೆಲಸದ ವೈಖರಿಯ ಬಗೆಗಿನ ಸಂಪೂರ್ಣ ವಿವರಣೆಯೂ ಈ ಕಾದಂಬರಿಯಲ್ಲಿದೆ.

ಪರಸ್ಪರ ವಿರುದ್ಧ ಚಿಂತನೆಗಳ ರಾಧಾ ಹಾಗೂ ಜಯಾರಲ್ಲಿ ಯಾರ ಚಿಂತನೆಗಳು ಸರಿಯಾದುದು ಎಂಬುದನ್ನು ಲೇಖಕರು ಓದುಗರ ತರ್ಕಕ್ಕೇ ಬಿಟ್ಟಿದ್ದಾರೆ. ಯಾವುದೇ ಪೂರ್ವಾಗ್ರಹವಿಲ್ಲದೇ ಯೋಚಿಸಿ ನೋಡಿದರೆ ಬಹುಶಃ ಇಬ್ಬರ ಚಿಂತನೆಗಳೂ ಸಂಪೂರ್ಣ ಸರಿ/ತಪ್ಪಲ್ಲವೇನೋ ಎನ್ನಿಸಿತು. ಮಾಮೂಲಿ ಯಂಡಮೂರಿ ಅವರ ಶೈಲಿಗಿಂತ ಕೊಂಚ ಭಿನ್ನವೆನಿಸುವ ಕಾದಂಬರಿ ಒಮ್ಮೆ ಓದಲಡ್ಡಿಯಿಲ್ಲ.

ಅಕ್ಷರಯಜ್ಞ ೧ & ೨

ಪುಸ್ತಕದ ಹೆಸರು : ಅಕ್ಷರಯಜ್ಞ ಭಾಗ 1 & 2    

ತೆಲುಗು ಮೂಲ : ಸೂರ್ಯದೇವರ ರಾಮ್ ಮೋಹನರಾವ್                                

ಅನುವಾದಕರು : ಶ್ರೀಮತಿ ಸರಿತಾ ಜ್ಞಾನಾನಂದ 

ಪ್ರಕಾಶಕರು : ಭಾಗ 1 - ಸ್ನೇಹಾ ಪಬ್ಲಿಷಿಂಗ್ ಹೌಸ್ (2012 ಮುದ್ರಿತ), ಭಾಗ 2 - ಬನಶಂಕರಿ ಪ್ರಿಂಟರ್ಸ್ (1992 ಮುದ್ರಿತ)                                     

ಪುಟಗಳು : 200 + 216                                  

ಬೆಲೆ : 120 + (ಈಗ ಎರಡನೇ ಭಾಗದ ಬೆಲೆ ಕೂಡಾ ಪ್ರಾಯಶಃ 120ರೂಪಾಯಿಗಳೇ ಇರಬೇಕು)

ಸೂರ್ಯದೇವರ ಅವರ ಈ ಕಾದಂಬರಿ ವಿಶ್ವ ಉದ್ಯಮ ವಲಯದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಬಿಸಿನೆಸ್ ಎಂಪೈರ್ ಒಂದು ಎದುರಿಸುವ ಅನಿರೀಕ್ಷಿತ ಸಮಸ್ಯೆ, ಅದರ ಪರಿಣಾಮ, ಸಮಸ್ಯೆಯ ಮೂಲ ಮುಂತಾದವುಗಳನ್ನು ಕೆದಕುತ್ತಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ಜಾಹೀರಾತು ಲೋಕದ ಒಳಸುಳಿಗಳು, ಕೌತುಕಗಳನ್ನು ತೆರೆದಿಡುತ್ತಾ ಸಾಗುತ್ತದೆ. ಎರಡು ಭಾಗಗಳಲ್ಲಿರುವ ಈ ಕಾದಂಬರಿಯ ಮೊದಲ ಭಾಗ ಉದ್ಯಮ ಜಗತ್ತು ಹಾಗೂ ಜಾಹೀರಾತು ವಲಯಕ್ಕಿರುವ ಅವಿನಾಭಾವ ಸಂಬಂಧ, ಇವೆರಡು ಒಂದಕ್ಕೊಂದು ಪೂರಕ/ಮಾರಕವಾಗಿ ಕಾರ್ಯನಿರ್ವಹಿಸುವ ರೀತಿ, ಬ್ರಾಂಡ್ ವಾರ್, ಜಾಹೀರಾತು ಲೋಕಕ್ಕೆ ಅತ್ಯಗತ್ಯವಾದ ಸೃಜನಾತ್ಮಕ ಚಿಂತನೆ ಮೊದಲಾದವುಗಳ ಬಗ್ಗೆ ಸೂಕ್ಷ್ಮವಾಗಿ ಹೇಳಿದರೆ ಎರಡನೇ ಭಾಗದಲ್ಲಿ ಕಥೆಗೆ ಪ್ರಾಧಾನ್ಯತೆ ದೊರಕಿದೆ. 

ವಾಣಿಜ್ಯ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರಭಾವಿ ಸಂಸ್ಥೆ ಜೆ.ಜೆ ಬಿಸ್ನೆಸ್ ಎಂಪೈರ್ ನ ಮಾಲೀಕ, ಇಂಡಸ್ಟ್ರಿಯಲ್ ಎಂಪರರ್ ಎನಿಸಿಕೊಂಡಿರುವ ಜೆ.ಜೆ ಸೋಲನ್ನು ಎಂದಿಗೂ ಸಹಿಸದ ವ್ಯಕ್ತಿ. ಗೆಲುವನ್ನೇ ಜೀವನ ಧ್ಯೇಯವನ್ನಾಗಿಸಿಕೊಂಡ ವೃದ್ಧ ಜೆ.ಜೆ ಗೆ ತನ್ನ ಮೊಮ್ಮಗಳಾದ ಮೌನಿಕಾಳನ್ನು ತನ್ನ ಸಾಮ್ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡಿ ತಾನು ವಿಶ್ರಾಂತಿ ಪಡೆಯಬೇಕೆಂಬ ಹಂಬಲ. ಹಾಗಾಗಿಯೇ ಮೌನಿಕಾಳನ್ನು ಜೆ.ಜೆ ಎಂಪೈರಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಿಸಿ ಅವಳಿಗೆ ವ್ಯವಹಾರದ ಒಳ ಹೊರಗುಗಳನ್ನು ಪರಿಚಯಿಸುವ ಕೆಲಸ ಆರಂಭಿಸುತ್ತಾನೆ. ಆದರೆ ಮೌನಿಕಾ ಇ.ಡಿ ಯಾಗಿ ನೇಮಕಗೊಂಡ ತಿಂಗಳೊಳಗೇ ಜೆ.ಜೆ ಕಂಪನಿ ಇಟಲಿಯ ಫಿಯೆಟ್ ಕಂಪನಿಯ ಕೊಲ್ಯಾಬರೇಷನ್ ನಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ವ್ಯಾನ್ ಗಳು ಮಾರಾಟವಾಗದೇ ಗೋಡೌನಿನಲ್ಲಿ ಉಳಿದು ಅನಿರೀಕ್ಷಿತವಾಗಿ ಸೋಲಿನ ರುಚಿ ಕಾಣಬೇಕಾಗುತ್ತದೆ. ಈ ಸೋಲು ತನ್ನ ಅಸ್ತಿತ್ವಕ್ಕೆ, ಕಾರ್ಯಕ್ಷಮತೆಗೆ, ಸಾಮರ್ಥ್ಯಕ್ಕೆ ಸವಾಲೆಸೆಯುವಂತೆ ಕಾಣುತ್ತದೆ ಮೌನಿಕಾಳಿಗೆ. ಹಾಗಾಗಿಯೇ ತಾತನ ಆರು ತಿಂಗಳ ಗಡುವನ್ನು ಒಪ್ಪಿಕೊಂಡು ಈ ಸೋಲಿನ ತಳಬುಡ ಶೋಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಆ ಮೂಲಕ ಸೋಲನ್ನು ಗೆಲುವಾಗಿ ಪರಿವರ್ತಿಸುವ ಪಣ ತೊಡುವಾಕೆ ಜೆ.ಜೆ ಎಂಪೈರಿಗೆ ಅತ್ಯಂತ ನಿಷ್ಠ ಸಲಹೆಗಾರ, ಜೆ.ಜೆಯ ಪರಮಾಪ್ತ ರಮಣಯ್ಯನ ಸಹಕಾರ ಪಡೆಯುತ್ತಾಳೆ.

ರಮಣಯ್ಯನ ಮುಖಾಂತರ ಮಾರ್ಕೆಟಿಂಗ್ ಡೈರೆಕ್ಟರ್ ಸಿಂಘಾನಿಯಾನ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ ಎಂಬುದನ್ನು ಅರಿಯುವ ಮೌನಿಕಾಳಿಗೆ ಮಾರ್ಕೆಟಿಂಗ್ ಸೆಕ್ಷನ್ನಿನಲ್ಲಿ ಮುಂಚೆ ಸೇಲ್ಸ್ ಮ್ಯಾನೇಜರ್ ಆಗಿದ್ದು ಸಿಂಘಾನಿಯಾನ ಕಿರುಕುಳದಿಂದ ರಾಜೀನಾಮೆ ಕೊಟ್ಟು ಹೋದ ಮಾಥುರ್ ಎಂಬ ಪ್ರತಿಭಾನ್ವಿತ ಯುವಕನ ಬಗ್ಗೆ ಮಾಹಿತಿ ದೊರಕುತ್ತದೆ. ತನ್ನ ಸಮಸ್ಯೆಯನ್ನು ಪರಿಹರಿಸಲು ಕೇವಲ ಮಾಥುರ್ ನಿಂದ ಮಾತ್ರ ಸಾಧ್ಯ ಎಂದು ನಿರ್ಧರಿಸಿ ಅವನನ್ನು ಹುಡುಕುವ ಕಾರ್ಯ ಆರಂಭಿಸುತ್ತಾಳೆ.

ರವಿ ಮಾಥುರ್ ಬುದ್ಧಿ, ಪ್ರತಿಭೆ, ಕ್ರಿಯಾತ್ಮಕ ಚಿಂತನೆಗಳೆಲ್ಲವನ್ನೂ ಭರಪೂರ್ಣವಾಗಿ ಹೊಂದಿದ್ದೂ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಭಾರದ್ವಾಜ್, ಅವನ ಮಗಳು ವೀನಸ್ ಹಾಗೂ ತನ್ನ ಅತ್ತಿಗೆ ಪ್ರಮೀಳಾಳ ಕಾರಣ ಹಲವು ತೊಂದರೆ ಅನುಭವಿಸಿ, ಜೆ.ಜೆ ಎಂಪೈರಿನ ಕೆಲಸವನ್ನೂ ಬಿಟ್ಟು ಕುಡಿತದ ದಾಸನಾಗಿ ಬದುಕುತ್ತಿರುವವನು. ಇಂತಹ ಮಾಥುರ್ ಕಠಿಣ ಸನ್ನಿವೇಶವೊಂದರಲ್ಲಿ ತನ್ನ ಜೀವನ ವಿಧಾನವನ್ನು ಬದಲಿಸಿಕೊಂಡು ತಾನೂ ಸಂಪಾದಿಸಬೇಕೆಂಬ ಜಿದ್ದಿಗೆ ಬೀಳುತ್ತಾನೆ. ಹಿಂದೊಮ್ಮೆ ತಾನು ಪ್ರಜ್ಞೆಯೇ ಇಲ್ಲದಂತೆ ಕುಡಿದು ಬಿದ್ದಿದ್ದಾಗ ತನ್ನನ್ನು ಉಪಚರಿಸಿದ ಗಂಗಾಧರರಾಯರ 'ಕಲ್ಪನಾ ಅಡ್ವರ್ಟೈಸರ್ಸ್' ಎಂಬ ಹಾಳುಬಿದ್ದ ಕಂಪನಿಯನ್ನು ಪುನಶ್ಚೇತನಗೊಳಿಸಿ ಆ ಮೂಲಕ ತನ್ನ ವೈರಿ ಭಾರದ್ವಾಜನಿಗೆ ಬುದ್ಧಿ ಕಲಿಸಲು ನಿರ್ಧರಿಸುತ್ತಾನೆ. ಗಂಗಾಧರರಾಯರ ಅಡ್ವರ್ಟೈಸಿಂಗ್ ಏಜೆನ್ಸಿ ಅಧೋಗತಿ ತಲುಪಿದ್ದೂ ಭಾರದ್ವಾಜನಿಂದಲೇ ಎಂಬುದು ತಿಳಿದ ನಂತರವಂತೂ ಅವನ ನಿರ್ಧಾರ ಇನ್ನೂ ಬಲವಾಗುತ್ತದೆ. ಗಂಗಾಧರರಾಯನ ಮಗ ಭಾರ್ಗವ ಮಾಥುರ್ ಗೆ ಒತ್ತಾಸೆಯಾಗಿ ನಿಲ್ಲುತ್ತಾನೆ. ಇವೆಲ್ಲಾ ವಿಚಾರಗಳೂ ಮೌನಿಕಾಳಿಗೆ ತಿಳಿಯುತ್ತದೆ. ಶ್ರೀಮಂತರ ಬಗ್ಗೆ ಅಪಾರ ತಿರಸ್ಕಾರ ಹೊಂದಿರುವ ಮಾಥುರ್ ತಾನು ಯಾರೆಂಬ ಸತ್ಯ ತಿಳಿದರೆ ದಾಸ್ತಾನಿರುವ ವ್ಯಾನುಗಳನ್ನು ಮಾರಲು ಸಹಾಯ ಮಾಡುವುದಿರಲಿ ತನ್ನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ ಎಂಬುದನ್ನು ಗ್ರಹಿಸುವ ಮೌನಿಕಾ ಮಧ್ಯಮ ವರ್ಗದ ನಿರುದ್ಯೋಗಿ ಯುವತಿಯ ಸೋಗಿನಲ್ಲಿ ಮಾಥುರ್ ಆಗಿನ್ನೂ ಆರಂಭಿಸಿದ್ದ 'ಮೆಡಿಸನ್ ಅವೆನ್ಯೂ ಅಡ್ವರ್ಟೈಸಿಂಗ್ ಏಜೆನ್ಸಿ'ಯ ಮೂರನೇ ಪಾಲುದಾರಳಾಗಿ ಅವರೊಂದಿಗೆ ಸೇರಿಕೊಳ್ಳುತ್ತಾಳೆ.

ಮಾಥುರ್ ತನ್ನ ಬುದ್ಧಿಮತ್ತೆಯಿಂದ ಹಂತಹಂತವಾಗಿ ಪ್ರಚಾರರಂಗದಲ್ಲಿ ಮೇಲೇರುತ್ತಾ ಹೋಗುತ್ತಾನೆ. ಜೊತೆಗೇ ತನ್ನ ವೈರಿ ಭಾರದ್ವಾಜನಿಗೆ ಏಟು ನೀಡುವ ಯಾವ ಅವಕಾಶವನ್ನೂ ಬಿಡದೇ ಬಳಸಿಕೊಂಡು ನಷ್ಟದ ರುಚಿ ತೋರಿಸುತ್ತಾನೆ. ಇತ್ತ ಜಾಣ್ಮೆಯಲ್ಲಿ ಮಾಥುರನಿಂದ ತನ್ನ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವ ಮೌನಿಕಾ ರಮಣಯ್ಯನ ನೇತೃತ್ವದಲ್ಲಿ 'ಎಂ.ಎಂ ಅಡ್ವರ್ಟೈಸಿಂಗ್ ಏಜೆನ್ಸಿ' ಸ್ಥಾಪಿಸಿ ಮಾಥುರ್ ನೀಡಿದ ಸೃಜನಾತ್ಮಕ ಉಪಾಯಗಳ ಬಲದಿಂದ ಗೋಡೌನಿನಲ್ಲಿದ್ದ ಎಲ್ಲಾ ವ್ಯಾನುಗಳನ್ನೂ ಮಾರಾಟವಾಗುವಂತೆ ಮಾಡುತ್ತಾಳೆ. ಇದು ಜೆ.ಜೆ ಎಂಪೈರಿನ ಪ್ರಚಾರದ ಹೊಣೆಹೊತ್ತ 'ಕ್ವೀನ್ಸ್ ಅಡ್ವರ್ಟೈಸಿಂಗ್ ಏಜೆನ್ಸಿ'ಗೆ ಪ್ರಬಲವಾದ ಆಘಾತ ನೀಡುತ್ತದೆ. ಇದರಿಂದಾಗಿ ಕೆಂಡಾಮಂಡಲವಾಗುವ ವೀನಸ್ ತಮ್ಮ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ಮುರಿದ ಬಗ್ಗೆ ಮೌನಿಕಾಳನ್ನು ಪ್ರಶ್ನಿಸುತ್ತಾಳೆ. ಜೆ.ಜೆ ಕಂಪನಿಯ ವ್ಯಾನುಗಳು ಮಾರಾಟವಾಗದೇ ಉಳಿಯಲು ಕ್ವೀನ್ಸ್ ಏಜೆನ್ಸಿಯ ಕಳಪೆ ಪ್ರಚಾರವೇ ಕಾರಣ ಎಂದು ನೇರವಾಗಿ ಆಪಾದಿಸುವ ಮೌನಿಕಾ ಕ್ವೀನ್ಸ್ ಏಜೆನ್ಸಿಯೊಂದಿಗಿನ ಒಪ್ಪಂದವನ್ನು ರದ್ದುಪಡಿಸುತ್ತಾಳೆ. 


ಆರಂಭದಲ್ಲಿ ಮಾಥುರ್ ನ ಬುದ್ಧಿವಂತಿಕೆ, ದೂರದೃಷ್ಟಿ, ಎಂತಹ ಕ್ಲಿಷ್ಟ ಸಮಸ್ಯೆಯನ್ನಾದರೂ ಕ್ಷಣದೊಳಗೆ ಪರಿಹರಿಸಬಲ್ಲ ಅವನ ಕುಶಾಗ್ರಮತಿಯ ಬಗ್ಗೆ ಗೌರವತಾಳುವ ಮೌನಿಕಾ ಕ್ರಮೇಣ ಅವನಲ್ಲಿ ಅನುರಕ್ತಳಾಗುತ್ತಾಳೆ. ತನ್ನ ಅಸಲೀ ಅಸ್ತಿತ್ವವನ್ನು ಮರೆಮಾಚಿ ಆತನಿಗೆ ಮೋಸಮಾಡುತ್ತಿದ್ದೇನೆಂಬ ಭಾವ ತೀವ್ರವಾಗಿ ಆಕೆಯನ್ನು ಕಾಡತೊಡಗುತ್ತದೆ. ಇತ್ತ ಮಾಥುರ್ ಮನ ಕೂಡಾ ಮೌನಿಕಾಳೆಡೆಗಿದೆ ಎಂಬುದು ಭಾರ್ಗವನಿಗೆ ತಿಳಿದ ವಿಚಾರ. ಆದರೆ ತಾನು ಮಾಥುರ್ ನ ಹೆಂಡತಿಯೆಂದು ಆಗೀಗ ಪ್ರತ್ಯಕ್ಷಳಾಗುವ ವೀನಸ್, ಅವಳ ಮಾತಿಗೆ ವಿರೋಧ ಸೂಚಿಸದೇ ಸುಮ್ಮನಿರುವ ಮಾಥುರ್ ಅವನಿಗೆ ಯಕ್ಷಪ್ರಶ್ನೆ. 

ವೀನಸ್ ಹಾಗೂ ಮಾಥುರ್ ಗೆ ವಿವಾಹವಾಗಿತ್ತೇ, ಆಗಿದ್ದರೆ ಅವರಿಬ್ಬರೂ ಏಕೆ ದೂರವಾದರು, ಭಾರದ್ವಾಜನ ಮೇಲೆ ಮಾಥುರನಿಗೆ ಏಕಷ್ಟು ದ್ವೇಷ, ಭಾರದ್ವಾಜನಿಗೇಕೆ ಜೆ.ಜೆ ಎಂಪೈರ್ ಮೇಲೆ ಕಣ್ಣು ಎಂಬೆಲ್ಲಾ ಪ್ರಶ್ನೆಗಳ ಜೊತೆಗೆ ಮೌನಿಕಾ ಜೆ.ಜೆ ಎಂಪೈರಿನ ಉತ್ತರಾಧಿಕಾರಿಯಾಗುವಳೇ, ಅವಳ ಪ್ರೇಮ ಸಫಲವಾಗುವುದೇ ಎಂಬುದನ್ನು ಪುಸ್ತಕ ಓದಿಯೇ ತಿಳಿಯಬೇಕು.

ಮಾಥುರ್ ಎಂಬುದು ಕೇವಲ ಪಾತ್ರವಾಗದೇ ಲೇಖಕರ ಸೃಜನಾತ್ಮಕ ಚಿಂತನೆಗಳ ಮೂರ್ತರೂಪವೆನಿಸುತ್ತದೆ. ಅಷ್ಟು ಚೆನ್ನಾಗಿದೆ ಪಾತ್ರ ಪೋಷಣೆ. ಮೌನಿಕಾ ತನ್ನ ಏಕಾಗ್ರತೆ, ಸಾಧಿಸುವ ಛಲ ಹಾಗೂ ಜೀವನದ ಬಗೆಗಿನ ತನ್ನ ನಿಲುವಿನ ಕಾರಣ ಸದಾ ನೆನಪಿನಲ್ಲಿ ಉಳಿಯುತ್ತಾಳೆ. ಕಥೆಯ ಕೊನೆಯಲ್ಲಿ ಅಜ್ಜ ಹಾಗೂ ಮೊಮ್ಮಗಳ ನಡುವಿನ ಮಾತುಕತೆ ಬಹಳ ಅರ್ಥಪೂರ್ಣವಾಗಿದೆ. ವೀನಸ್ ಪಾತ್ರ ಮುಂದಾಲೋಚನೆಯಿಲ್ಲದ ಜಾಣ್ಮೆ, ಅಹಂಕಾರ, ನಿರ್ಲಕ್ಷ್ಯತನಕ್ಕೆ ಪ್ರತಿರೂಪವೆನಿಸುತ್ತದೆ. ರಮಣಯ್ಯನ ನಿಷ್ಠೆ, ಗಂಗಾಧರರಾಯರ ಸತ್ಯಸಂಧತೆ, ಭಾರ್ಗವನ ಸ್ನೇಹಪರತೆ, ಭಾರದ್ವಾಜನ ಕಪಟ, ಪ್ರಮೀಳಾ ರಾಣಿಯ ದಾಷ್ಟೀಕತೆ ಹೀಗೆ ಪ್ರತೀ ಪಾತ್ರವೂ ಅಚ್ಚಳಿಯದೆ ಮನದಲ್ಲಿ ಉಳಿಯುತ್ತದೆ. ಕಥೆಯ ಕೊನೆಯಲ್ಲಂತೂ ಊಹಾತೀತ ಅಚ್ಚರಿಗಳ ರಾಶಿಯೇ ಇದೆ.

ಈ ಕಾದಂಬರಿಯಲ್ಲಿ ಅಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಜಾಹೀರಾತಿನ ಪ್ರಾಮುಖ್ಯತೆಯನ್ನು ವಿವರಿಸಿರುವ ಪರಿ ನನಗೆ ಬಹಳ ಇಷ್ಟವಾಯಿತು. ಬಹುಜನ ಸ್ವಾಮ್ಯ ಹಾಗೂ ಕೆಲಜನ ಸ್ವಾಮ್ಯ ಮಾರುಕಟ್ಟೆಗಳೇ ಪ್ರಧಾನವಾಗಿರುವ ಇಂದಿನ ಉದ್ಯಮರಂಗದಲ್ಲಿ ಜಾಹೀರಾತು ಸೃಷ್ಟಿಸುವ ಸಂಚಲನವನ್ನು ಬಹಳ ಚೆನ್ನಾಗಿ ಪ್ರಸ್ತುತಪಡಿಸಿದ್ದಾರೆ ಲೇಖಕರು. ಅಡ್ವರ್ಟೈಸಿಂಗ್ ಪರಿಕಲ್ಪನೆಗಳು, ಬ್ರಾಂಡ್ ವಾರ್, ಮೋಡಿ ಮಾಡುವ ಪ್ರಚಾರದ ಸಾಲುಗಳು ಕಾದಂಬರಿಯುದ್ದಕ್ಕೂ ಕಾಣುತ್ತವೆ. ವಾಣಿಜ್ಯ ಅಥವಾ ಅರ್ಥಶಾಸ್ತ್ರದ ಹಿನ್ನೆಲೆಯವರಿಗೆ ಅಧ್ಯಯನದ ದೃಷ್ಟಿಯಿಂದ ಈ ಪುಸ್ತಕ ಬಹಳ ಖುಷಿ ಕೊಡಬಹುದು. ಈ ಬಗ್ಗೆ ತಿಳಿಯದವರೂ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೇ ಓದಿ ಆನಂದಿಸಬಹುದಾದ ಒಂದು ಉತ್ತಮ ಕಾದಂಬರಿ ಅಕ್ಷರಯಜ್ಞ.

ಸಂಹಾರ - ಪುಸ್ತಕ ವಿಮರ್ಶೆ

ಪುಸ್ತಕದ ಹೆಸರು       : ಸಂಹಾರ                    

ತೆಲುಗು ಮೂಲ        : ಯರ್ರಂಶೆಟ್ಟಿಸಾಯಿ 

ಅನುವಾದ              : ರಾಜಾ ಚೆಂಡೂರ್  

ಪ್ರಕಾಶಕರು             : ಸ್ನೇಹಾ ಎಂಟರ್ಪ್ರೈಸಸ್,ಬೆಂಗಳೂರು                        

ಪ್ರಥಮ ಮುದ್ರಣ     : 1994                        

ತೃತೀಯ ಮುದ್ರಣ    : 2019                    

ಪುಟಗಳು                : 204                              

ಬೆಲೆ                       :150 ರೂ      

ತೆಲುಗು ಕಾದಂಬರಿಕಾರರೆಂದೊಡನೆ ತಟ್ಟನೆ ನನ್ನ ತಲೆಗೆ ಬರುವುದು ಯಂಡಮೂರಿ ವೀರೇಂದ್ರನಾಥ್. ಯಂಡಮೂರಿ ಅವರ ಕಾದಂಬರಿಗಳ ಬಗ್ಗೆ ನನ್ನದು ಎಂದಿಗೂ ತೀರದ ಸೆಳೆತ. ಕಾಲೇಜು ದಿನಗಳಲ್ಲಿ ಓದಿದ್ದ ಸೂರ್ಯದೇವರ ರಾಂಮೋಹನ್ ಅವರ ಕೆಲ ಕೃತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ತೆಲುಗು ಲೇಖಕರೂ ಹೆಚ್ಚುಕಡಿಮೆ ಅಪರಿಚಿತರೇ ನನ್ನ ಪಾಲಿಗೆ. ಇತ್ತೀಚಿಗೆ ಗೆಳತಿ ರೂಪಾ ಮಂಜುನಾಥ್ ಅವರಿಂದಾಗಿ ತೆಲುಗು ಅನುವಾದಿತ ಸಾಹಿತ್ಯದೆಡೆಗೆ ಆಸಕ್ತಿ ಮೂಡತೊಡಗಿದ್ದು. ಯಂಡಮೂರಿ, ಸೂರ್ಯದೇವರಾ ಅವರೊಂದಿಗೆ ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಚಲ್ಲಾ ಸುಬ್ರಮಣ್ಯಂ ಮೊದಲಾದ ಸಾಹಿತಿಗಳ ಕೃತಿಗಳನ್ನು ಓದಲಾರಂಭಿಸಿದ್ದು. 


'ಸಂಹಾರ'... ಇದು ಇನ್ನೊರ್ವ ತೆಲುಗು ಕಾದಂಬರಿಕಾರ ಯರ್ರಂ ಶೆಟ್ಟಿಸಾಯಿ ಅವರ ಕಾದಂಬರಿ. ರಾಜಾ ಚೆಂಡೂರ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾನು ಓದಿದ ಯರ್ರಂಶೆಟ್ಟಿಸಾಯಿ ಅವರ ಮೊದಲ ಕಾದಂಬರಿಯಿದು. ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆಯ ಹಲವು ಆಯಾಮಗಳನ್ನು ತೋರುವ ಈ ಕಥೆಯು ಇಂತಹ ಅರಾಜಕತೆ ಸಾಮಾನ್ಯನೊಬ್ಬನ ಬದುಕನ್ನು ನುಚ್ಚುನೂರಾಗಿಸುವ ಪರಿಯನ್ನು ತೆರೆದಿಡುತ್ತದೆ. ವ್ಯವಸ್ಥೆಯ ಪ್ರತೀ ಹಂತದಲ್ಲೂ ಭ್ರಷ್ಟರೇ ತುಂಬಿರುವಾಗ ನಿಷ್ಠಾವಂತ ವ್ಯಕ್ತಿಯೇ ಗುಂಪಿಗೆ ಸೇರದ ಪದವಾಗಿ ಅನುಭವಿಸುವ ಕಷ್ಟನಷ್ಟಗಳನ್ನು ಸಂಹಾರ ಚಿತ್ರಿಸುತ್ತದೆ.

ಐವತ್ತೆರಡು ವರ್ಷದ ಮಧ್ಯಮವರ್ಗೀಯ ರಾಮಚಂದ್ರಮೂರ್ತಿ ಕಥಾನಾಯಕ. ಮಡದಿ ಸೀತಾ ಹಾಗೂ ಅಡುಗೆಯ ನಟರಾಜನೊಂದಿಗೆ ವಾಸ. ತನ್ನ ನೀತಿಯುತ ಸಿದ್ಧಾಂತಗಳ ಕಾರಣದಿಂದಾಗಿ ತನ್ನ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವುದಷ್ಟೇ ಅಲ್ಲದೇ ಲಂಚ ತೆಗೆದುಕೊಂಡ ಆರೋಪದಲ್ಲಿ ಭ್ರಷ್ಟಾಚಾರಿಯ ಪಟ್ಟ ಹೊತ್ತು ಸಸ್ಪೆನ್ಷನ್ ಬಹುಮಾನ ಪಡೆದಿರುವ ವ್ಯಕ್ತಿ. ಈ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಯಂ ನಿವೃತ್ತಿ ತೆಗೆದುಕೊಂಡರೂ ಕೇಸ್ ಮುಗಿಯದೇ ಅವನಿಗೆ ಬರಬೇಕಾದ ಸೆಟಲ್ಮೆಂಟ್ ಹಣ, ಪಿಂಚಣಿ ಎಲ್ಲವೂ ತಡೆಹಿಡಿಯಲ್ಪಟ್ಟಿದೆ. ವರ್ಷಗಳ ಹಿಂದೆಯೇ ಅವನ ಒಬ್ಬಳೇ ಮಗಳು ಸರಿತಾ ಆಸಿಡ್ ದಾಳಿಗೆ ತುತ್ತಾಗಿ ಅಸುನೀಗಿದ್ದಾಳೆ.  ಆ ಏರಿಯಾದ ಎಂಎಲ್ಎ ಮಾರ್ತಾಂಡನ ಮಗ ಮಹಿಪಾಲ ತನಗೆ ನೀಡಿದ ಕಿರುಕುಳದ ಬಗ್ಗೆ ಪೋಲೀಸರಿಗೆ ದೂರು ನೀಡಿದಳೆಂಬ ಕಾರಣಕ್ಕೆ ಅವನೇ ತನ್ನ ಗೂಂಡಾ ಸಹಚರರೊಂದಿಗೆ ಸೇರಿ ಸರಿತಾಳ ಮೇಲೆ ಆಸಿಡ್ ಎರಚಿರುವುದು ತಿಳಿದಿದ್ದರೂ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲಾಗದೇ ಸೋತು ಹೋಗಿದ್ದಾನೆ ಮೂರ್ತಿ. ಕಾರಣ ಮಹಿಪಾಲನ ಅಪ್ಪನಿಗಿರುವ ಹಣ ಹಾಗೂ ಜನಬಲ. ಅಧಿಕಾರಬಲದ ಮುಂದೆ ತನ್ನ ಹೋರಾಟ ಸಾಗದೆಂದು ಕೋರ್ಟಿನಲ್ಲಿ ಸಾಕ್ಷಾಧಾರಗಳ ಕೊರತೆಯಿಂದ ಕೇಸು ಬಿದ್ದು ಹೋದಾಗಲೇ ತಿಳಿದುಕೊಂಡಿದ್ದಾನೆ. ಜೀವನ ನಿರ್ವಹಣೆಗಾಗಿ ಮನೆಯಲ್ಲಿನ ವಸ್ತುಗಳನ್ನೇ ಮಾರಬೇಕಾದಂತಹ ದುಸ್ಥಿತಿ. ಸಮಸ್ಯೆಗಳ ನಡುವಲ್ಲೂ ಮೂರ್ತಿ ದಂಪತಿಗಳ ಬದುಕಿನಲ್ಲಿ ನಗುವಿಗೆ ಕೊರತೆಯಿಲ್ಲ ಎಂದರೆ ಅದಕ್ಕೆ ಕಾರಣ ನಟರಾಜನ ಹಾಸ್ಯಪ್ರಜ್ಞೆ. ತನ್ನ ಸ್ವಾರಸ್ಯಕರ ಮಾತಿನ ಲಹರಿಯಿಂದ ಸೀತಮ್ಮನ ಕೋಪವನ್ನೂ ಕರಗಿಸಬಲ್ಲ ಚತುರನವನು. 

ಹೀಗೆ ಮನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹದೆಗೆಟ್ಟಿದ್ದಾಗಲೇ ನಟರಾಜ ಮೂರ್ತಿ ಹಾಗೂ ಸೀತಾರಿಗೆ ಪೇಯಿಂಗ್ ಗೆಸ್ಟ್ ಒಬ್ಬರಿಗೆ ಮನೆಯ ಒಂದು ಭಾಗವನ್ನು ಬಾಡಿಗೆ ಕೊಟ್ಟು ಆ ಮೂಲಕ ಒಂದಿಷ್ಟು ವರಮಾನ ಸಂಪಾದಿಸುವ ಬಗ್ಗೆ ಹೇಳುತ್ತಾನೆ. ಇದು ದಂಪತಿಗಳಿಗೆ ಒಪ್ಪಿಗೆಯಾಗುತ್ತದೆ ಕೂಡಾ. ಮೊದಲಿಗೆ ಸಿನಿಮಾ ನಟ ರೇವಂತ್ ಪೇಯಿಂಗ್ ಗೆಸ್ಟಾಗಿ ಬರುತ್ತಾನಾದರೂ ಅವನ ಕುಡಿತದ ಚಟ ತಂದೊಡ್ಡುವ ಸಮಸ್ಯೆಗಳ ಕಾರಣ ಮೂರ್ತಿ ದಂಪತಿಗಳು ಪೇಚಿಗೆ ಸಿಲುಕುತ್ತಾರೆ. ಅಷ್ಟರಲ್ಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ಅವನು ಮೂರ್ತಿಯ ಮನೆ ಖಾಲಿ ಮಾಡಿ ಹೊರಡುತ್ತಾನೆ. ಆ ನಂತರದಲ್ಲಿ ಪೇಯಿಂಗ್ ಗೆಸ್ಟಾಗಿ ಬರುವವಳೇ ಪತ್ರಕರ್ತೆ ಸರಿತಾ. ಕಾಕತಾಳೀಯವಾಗಿ ಮೂರ್ತಿ ದಂಪತಿಗಳ ಮಗಳು ಸರಿತಾಳಿಗೂ ಈ ಸರಿತಾಳಿಗೂ ಹೆಸರಿನಂತೆಯೇ ಚಹರೆಯಲ್ಲೂ ಬಹಳಷ್ಟು ಸಾಮ್ಯತೆಯಿರುತ್ತದೆ. ತಮ್ಮ ಗತಿಸಿದ ಮಗಳೇ ಮತ್ತೆ ಸಿಕ್ಕಂತೆ ಸಂಭ್ರಮಿಸುವ ಮೂರ್ತಿ ಹಾಗೂ ಗೀತಾ ಸರಿತಾಳೊಂದಿಗೆ ಭಾವನಾತ್ಮಕ ನಂಟನ್ನು ಬೆಳೆಸಿಕೊಳ್ಳುತ್ತಾರೆ. ಅವರ ನೋವಿನ ಹಿನ್ನೆಲೆ ತಿಳಿದ ಸರಿತಾ ಕೂಡಾ ಅವರನ್ನು ಅಕ್ಕರೆಯಿಂದ ಹಚ್ಚಿಕೊಳ್ಳುತ್ತಾಳೆ. ನಟರಾಜ ತನ್ನ ಹಳೆಯ ರಿಕಾರ್ಡ್ ಡ್ಯಾನ್ಸ್ ಕಂಪನಿ ಮತ್ತೆ ಆರಂಭವಾದ ಕಾರಣ ಮೂರ್ತಿಯವರ ಮನೆಯನ್ನು ಬಿಟ್ಟು ಹೊರಡುತ್ತಾನೆ.

ಈ ಸಂದರ್ಭದಲ್ಲೇ ಮೂರ್ತಿಯ ಮನೆಯ ರಸ್ತೆಯ ಸರ್ಕಲ್ಲಿನಲ್ಲಿ ಸರಳ ಎಂಬಾಕೆಯನ್ನು ಕೆಲ ಗೂಂಡಾಗಳು ಪೆಟ್ರೋಲ್ ಹಾಕಿ ಸಜೀವವಾಗಿ ದಹಿಸುತ್ತಾರೆ. ಇದಕ್ಕೆ ಸರಿತಾಳ ಪ್ರಿಯಕರ ಸುಧೀರ್ ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾನೆ. ಇದರ ಹಿನ್ನೆಲೆ ಶೋಧಿಸ ಹೊರಡುವ ಸರಿತಾಳಿಗೆ ಸಹಾಯ ಮಾಡಿದ ಕಾರಣಕ್ಕೆ ಸುಧೀರ್ ಕೊಲ್ಲಲ್ಪಡುತ್ತಾನೆ. ಈ ಎರಡೂ ಕೊಲೆಗಳ ಹಿಂದಿರುವುದು ಮಾರ್ತಾಂಡನ ಮಗ ಡಿಸಿಪಿ ಮಹಿಪಾಲ್ ಎಂಬುದು ಖಚಿತವಾಗುತ್ತದೆ. ಈ ವಿಚಾರ ತಿಳಿದು ಮೂರ್ತಿ ದಂಪತಿಗಳ ಭಯ ಇನ್ನಷ್ಟು ಹೆಚ್ಚುತ್ತದೆ. ಈ ಸರಿತಾಳ ಸ್ಥಿತಿ ಕೂಡಾ ತಮ್ಮ ಮಗಳು ಸರಿತಾಳಂತಾಗಬಾರದೆಂದು ಅವಳಿಗೆ ತಿಳಿಹೇಳಲು ಪ್ರಯತ್ನಿಸುತ್ತಾರೆ. ಆದರೆ ಆಕೆ ಹಿಂದೆಗೆಯುವುದಿಲ್ಲ. ಕಡೆಗೆ ಅವರ ಭಯವೇ ನಿಜವಾಗಿ ಪತ್ರಕರ್ತೆ ಸರಿತಾ ಕೂಡಾ ಆಸಿಡ್ ನಲ್ಲಿ ಸುಟ್ಟು ಕರಕಲಾಗಿ ಕೊನೆಯುಸಿರೆಳೆಯುತ್ತಾಳೆ. 

ಅಲ್ಲಿಗೆ ಮೂರ್ತಿಯ ಸಹನೆ ಸಾಯುತ್ತದೆ ಆಕ್ರೋಶ ಭುಗಿಲೇಳುತ್ತದೆ. ಇನ್ನು ತಮಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ, ಕಳೆದುಕೊಂಡ ಬಹುಮೂಲ್ಯ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸ ಮಾತ್ರವೇ ಬಾಕಿ ಉಳಿದಿರುವುದು ಎಂದು ನಿರ್ಧರಿಸಿದ ಘಳಿಗೆ ತನ್ನ ಯೌವ್ವನದ ದಿನಗಳಲ್ಲಿನ ಸಿಟ್ಟು, ಪ್ರತೀಕಾರದ ಛಾಯೆ ಅವನಲ್ಲಿ ಮತ್ತೆ ಜಾಗೃತವಾಗುತ್ತದೆ. ಜಾಣತನ, ಹಣ ಹಾಗೂ ದೈಹಿಕ ಬಲದಿಂದ ಮೂರ್ತಿ ತನ್ನ ಪ್ರತೀಕಾರವನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆಯ ತಿರುಳು. 

ಸರಳ ಭಾಷೆಯ ಈ ಸೇಡಿನ ಕಥನದ ವೈಶಿಷ್ಟ್ಯತೆ ಇರುವುದು ನಿರೂಪಣಾ ಶೈಲಿಯಲ್ಲಿ. ಇಡೀ ಕಥೆಯ ಮುಕ್ಕಾಲು ಭಾಗ ಸಂಭಾಷಣೆಯಲ್ಲಿಯೇ ಇದೆ. ಹರಿತವಾದ ಹಾಸ್ಯ ವ್ಯಂಗ್ಯ ಮಿಶ್ರಿತ ಸಂಭಾಷಣೆಯೇ ಈ ಕಾದಂಬರಿಯ ಹೈಲೈಟ್. ಸಂಭಾಷಣಾ ಪ್ರಧಾನವಾದ್ದರಿಂದ ವೇಗವಾಗಿ ಓದಿಸಿಕೊಳ್ಳುತ್ತದೆ ಈ ಕಥೆ. ಅದರಲ್ಲೂ ನಟರಾಜನ ಸಂಭಾಷಣೆಗಳು ನಗುವನ್ನು ಉಕ್ಕಿಸುವುದರೊಂದಿಗೆ ಹಲವೆಡೆ ನಮ್ಮ ವ್ಯವಸ್ಥೆಯ ದೋಷಕ್ಕೆ ಚಾಟಿ ಬೀಸುತ್ತವೆ. ಅದರೊಂದಿಗೆ ಅವಕಾಶವಾದಿ ರೇವಂತ್, ಭ್ರಮೆಗಳನ್ನೇ ನಂಬುವ, ಅದನ್ನೇ ಸತ್ಯವೆನ್ನುವ ವಿಲಕ್ಷಣ ವ್ಯಕ್ತಿತ್ವದ ಶಾಂತಿ, ಸಮಾನತೆಯ ಬಗ್ಗೆ ಚಿಂತಿಸುತ್ತಾ ವರದಕ್ಷಿಣೆ ನೀಡದೇ ಮದುವೆಯಾಗುವ ಕನಸು ಕಾಣುತ್ತಾ ಅತ್ತ ಕನಸೂ ಕೈಗೂಡದೇ ಇತ್ತ ದೈಹಿಕ ಕಾಮನೆಗಳನ್ನೂ ಅದುಮಿಡಲಾಗದೇ ತಳಮಳಿಸುವ ಅವಿವಾಹಿತೆ ಉಮಾದೇವಿ, ಮಸ್ತಾನ್ ಮೊದಲಾದ ಅಲ್ಪಾವಧಿ ಪಾತ್ರಗಳೂ ನೆನಪಿಪಲ್ಲಿ ಉಳಿಯುತ್ತವೆ. 

'ಬಾಳೊಂದು ನಂದನ, ಅನುರಾಗ ಬಂಧನ' ಗೀತೆಯಿಂದ ಆರಂಭವಾಗಿ ಅದೇ ಗೀತೆಯೊಂದಿಗೆ ಅಂತ್ಯವಾಗುವ ಕಥೆ ಈ ಅನೀತಿಯ ಲೋಕದಲ್ಲಿ ಕೈ ಮುಗಿದರೆ ಬೆಲೆಯಿಲ್ಲ ಕೈ ಎತ್ತಿದರೆ ಮಾತ್ರವೇ ವ್ಯಕ್ತಿಗೆ ಬೆಲೆ ಎಂದು ಸಾರುತ್ತದೆ.

(ನನ್ನ ಬಳಿಯಿರುವುದು 2019ರಲ್ಲಿ ಮುದ್ರಣಗೊಂಡಿರುವ ಪ್ರತಿ. ಹಳೆಯ ಪ್ರತಿಗಳು ಹೇಗೋ ಎಂತೋ ಆದರೆ ಈ ಪ್ರತಿಯಲ್ಲಿ ಮಾತ್ರ ಮುದ್ರಾರಾಕ್ಷಸನ ಹಾವಳಿ ವಿಪರೀತವಾಗಿದೆ. ಬಹಳಷ್ಟು ಕಡೆಗಳಲ್ಲಿ ಪದಗಳು ಬದಲಾಗಿವೆ. ಹಾಗೆ ಹಲವೆಡೆ ಪದಗಳು, ಕೆಲವೆಡೆ ಸಂಪೂರ್ಣ ವಾಕ್ಯಗಳೇ ಮಾಯವಾಗಿವೆ. ಓದುವಾಗ ಅಡಚಣೆ ಎನ್ನಿಸಿದ್ದು ಸುಳ್ಳಲ್ಲ)

ಗುರುವಾರ, ಜೂನ್ 18, 2020

ರೂಪದರ್ಶಿ....

ಪುಸ್ತಕದ ಹೆಸರು       : ರೂಪದರ್ಶಿ

ಲೇಖಕರು               : ಕೆ.ವಿ‌. ಅಯ್ಯರ್

ಪ್ರಕಾಶಕರು             : ಮುರಳಿ ಪ್ರಕಾಶನ,ಬೆಂಗಳೂರು

ಪ್ರಥಮ ಮುದ್ರಣ     : 1950

ಪುಟಗಳು                : VIII+292

ಬೆಲೆ                       :190 ರೂ      


ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳಲ್ಲಿ ಕೆ.ವಿ ಅಯ್ಯರ್ ಕೂಡಾ ಒಬ್ಬರು. ವೃತ್ತಿಯಿಂದ ಒಬ್ಬ ಅತ್ಯುತ್ತಮ ದೇಹದಾರ್ಢ್ಯ ಪಟು, ದೈಹಿಕ ಶಿಕ್ಷಣ ತಜ್ಞರಾಗಿದ್ದ ಅಯ್ಯರ್ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಕಾದಂಬರಿ, ಕಥಾಸಂಕಲನಗಳಷ್ಟೇ ಅಲ್ಲದೇ ಟಿ.ಪಿ ಕೈಲಾಸಂ ಅವರ ಪ್ರಭಾವದಿಂದಾಗಿ ನಾಟಕಗಳಲ್ಲೂ ಆಸಕ್ತಿಬೆಳೆಸಿಕೊಂಡವರು ಅಯ್ಯರ್. 'ಶಾಂತಲಾ', 'ರೂಪದರ್ಶಿ' ಹಾಗೂ  'ಸಮುದ್ಯತಾ' ಕನ್ನಡ ಸಾಹಿತ್ಯದ ಕ್ಲಾಸಿಕ್ ಶ್ರೇಣಿಯ ಕೃತಿಗಳೆಂದರೆ ಅತಿಶಯೋಕ್ತಿಯಲ್ಲ.

'ರೂಪದರ್ಶಿ' ಲೇಖಕರೇ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ 1942ರಲ್ಲಿ 'Reader's Digest' ಎಂಬ ಅಮೇರಿಕನ್ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ 'The face of Judas inscariot' ಎಂಬ ಸಣ್ಣ ಕಥೆಯನ್ನು ಆಧಾರವಾಗಿರಿಸಿಕೊಂಡು ಬೆಳೆಸಿದ ಕಾದಂಬರಿ. ಅದನ್ನು ಓದಿ ಈ ಕಥಾವಸ್ತುವನ್ನು ಎಂಟು ಹತ್ತು ಪುಟಗಳ ಸಣ್ಣ ಕಥೆಯಾಗಿ ಬರೆಯಬಹುದು ಎಂದುಕೊಂಡಿದ್ದರಂತೆ ಅವರು. ಆದರೆ ಬರೆಯಲು ತೊಡಗಿಸಿಕೊಂಡ ನಂತರ ಆ ಮುಕ್ಕಾಲು ಪುಟದ ಕಥೆ ಈ ರೂಪತಾಳಿತು ಎಂದಿದ್ದಾರೆ ಅಯ್ಯರ್. ಹಾಗೆಯೇ 'ನಾನು ಯಾವೊಂದು ಉದ್ದೇಶದಿಂದಲೂ ಈ ಕಥೆಯನ್ನು ಬರೆಯಲಿಲ್ಲ. ಇದು ಏನು ಸಾಧಿಸಬಲ್ಲದೆಂಬುದನ್ನೂ ನಾನು ಅರಿಯೆ.' ಎಂದಿದ್ದಾರೆ. ಆದರೆ ಈ ಕಥೆಯನ್ನು ಓದಿ ಮುಗಿಸಿದ ನಂತರ ನಮ್ಮ ಮನದಲ್ಲಿ ಉಂಟಾಗುವ ತಳಮಳಗಳು, ಮಸ್ತಿಷ್ಕದಲ್ಲಿ ಉದ್ಭವಿಸುವ ಪ್ರಶ್ನೆಗಳಿಂದ ಈ ಕಥೆಯ ಉದ್ದೇಶ ಹಾಗೂ ಅದು ಏನನ್ನು ಸಾಧಿಸಿದೆ ಎಂಬುದು ಓದುಗರಿಗೇ ಸ್ಪಷ್ಟವಾಗುತ್ತದೆ. 

ಅಯ್ಯರ್ ಅವರ ಮೇರುಕೃತಿಗಳಲ್ಲಿ ಒಂದಾದ 'ರೂಪದರ್ಶಿ' ಬದುಕಿನ ವಿವಿಧ ಮುಖಗಳನ್ನು ಹಾಗೂ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಅನ್ವೇಷಿಸುತ್ತಾ ಸಾಗುತ್ತದೆ. ಇಡೀ ಕಥನ ಇಟಲಿಯ ಪರಿಸರದಲ್ಲಿ ನಡೆಯುತ್ತದಾದರೂ ಕಥೆಯೊಳಗಿನ ಪಾತ್ರಗಳು, ಅವುಗಳ ಸಂಘರ್ಷಗಳು ನಮ್ಮದೇ ಎನ್ನಿಸಿಬಿಡುವುದು ಈ ಕೃತಿಯ ವೈಶಿಷ್ಟ್ಯ. ಮುಗ್ಧತೆ, ಪ್ರೀತಿ, ಮಮತೆಯೊಂದಿಗೇ ಕ್ರೌರ್ಯ, ದ್ವೇಷ, ದುರಾಸೆ, ವಂಚನೆ, ಹಣದೊಂದಿಗೆ ಬದಲಾಗುವ ಮನುಜನ ವಿಚಾರಧಾರೆ…. ಹೀಗೆ ಹತ್ತು ಹಲವು ಭಾವಗಳ ಹೂರಣ ಇಲ್ಲಿದೆ.

ಇಟಲಿಯ ಫ್ಲಾರೆನ್ಸ್ ನಗರದಲ್ಲೊಂದು ಭವ್ಯವಾದ ಮನಮೋಹಕ ಕ್ರಿಸ್ತದೇವಾಲಯ. ಕಟ್ಟಡ ನಿರ್ಮಾಣ ಕಾರ್ಯ ಪೂರ್ಣವಾದ ನಂತರ ಅಲ್ಲಿನ ಧರ್ಮದರ್ಶಿಗಳು ಸಭೆ ಸೇರಿ ಆ ಭವ್ಯ ದೇವಾಲಯದಲ್ಲಿ ಏಸುಕ್ರಿಸ್ತನ ಸಂಪೂರ್ಣ ಜೀವನಚರಿತ್ರೆಯನ್ನು ಸೊಗಸಾಗಿ ಚಿತ್ರಿಸಬೇಕೆಂದು ನಿರ್ಧರಿಸಿ ತಮ್ಮದೇ ಊರಿನ ಜಗದ್ವಿಖ್ಯಾತ ಚಿತ್ರಕಾರ ಮೈಕೆಲ್ ಆಂಜೆಲೋನನ್ನು ಈ ಕಾರ್ಯಕ್ಕಾಗಿ ಆರಿಸುತ್ತಾರೆ. ಪರಮ ದೈವ ಭಕ್ತನಾದ ಮೈಕೆಲ್ ಬಲು ಸಂತೋಷದಿಂದ ಈ ಕಾರ್ಯವನ್ನು ಒಪ್ಪಿಕೊಂಡು ಒಂದಿಷ್ಟು ಒಪ್ಪಂದಗಳ ಆಧಾರದಲ್ಲಿ ತನ್ನ ಕೆಲಸವನ್ನು ಆರಂಭಿಸುತ್ತಾನೆ. ಕ್ರಿಸ್ತನ ಆದಿಪರ್ವಕ್ಕೆ ಸಂಬಂಧಿತ ಮೂರು ಚಿತ್ರಗಳನ್ನು ಅತ್ಯಂತ ಸುಂದರವಾಗಿ ಬರೆದ ನಂತರ ಈಗ ಅವನಿಗೆ ಬಾಲ ಏಸುವನ್ನು ಚಿತ್ರಿಸಬೇಕಿರುತ್ತದೆ. ಏನೇ ಮಾಡಿದರೂ ಅವನ ಮನದಲ್ಲಿ ಮೂಡಿದ ಚಿತ್ರವನ್ನು ಕುಂಚದಲ್ಲಿ ಮೂಡಿಸುವಲ್ಲಿ ಸೋಲುತ್ತಾನೆ ಮೈಕೆಲ್. ಇಂತಹ ಸನ್ನಿವೇಶದಲ್ಲಿ ತನ್ನ ಮನದ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯನ್ನು ಹುಡುಕಿ ಹೊರಡುತ್ತಾನೆ. ಊರೂರು ಅಲೆದ ನಂತರ ಕೊನೆಗೆ ಪೀಸಾ ನಗರದಲ್ಲಿಯ ತನ್ನ ಸ್ನೇಹಿತ ಬೆನೆಟ್ಟೋನನ್ನು ಭೇಟಿಯಾಗಲು ಹೋದಾಗ ಅಲ್ಲಿಯ ಭಿಕಾರಿ ಮಕ್ಕಳ ನಡುವಿವಲ್ಲಿ ಒಬ್ಬ ಬಾಲಕ ಮೈಕೆಲ್ ಕಣ್ಣಿಗೆ ಬೀಳುತ್ತಾನೆ. ಅತೀ ಸೌಮ್ಯ ಮುಖಮುದ್ರೆಯ ಆ ಬಾಲಕನಲ್ಲಿ ಬಾಲಕ್ರಿಸ್ತನಲ್ಲಿ ಇದ್ದಿರಬಹುದಾದ ವರ್ಚಸ್ಸು ಕಾಣುತ್ತದೆ. ಜೊತೆಗೆ ಸ್ವಲ್ಪ ಹೊತ್ತಿನಲ್ಲೇ ಆ ಬಾಲಕನ ಹೃದಯವಂತಿಕೆಯ ಅರಿವೂ ಆಗುತ್ತದೆ. ತನ್ನ ಮನದಲ್ಲಿ ರೂಪುಗೊಂಡಿದ್ದ ಬಾಲಕ್ರಿಸ್ತನೇ ಜೀವಂತವಾಗಿ ತನ್ನೆದುರು ನಿಂತಂತೆ ಎನ್ನಿಸಿ ಮೈಕೆಲ್ ಅವನನ್ನೇ ತನ್ನ ರೂಪದರ್ಶಿಯನ್ನಾಗಿ ಆರಿಸಿಕೊಳ್ಳುತ್ತಾನೆ. ತಂದೆ ತಾಯಿಯಿಲ್ಲದೇ ಅಜ್ಜಿಯ ಆಶ್ರಯದಲ್ಲಿ ಬೆಳೆದ ಆ ಬಾಲಕನೇ ಅರ್ನೆಸ್ಟೋ. ಮೈಕೆಲ್ ಬೆನೆಟ್ಟೋನೊಂದಿಗೆ ಅರ್ನೆಸ್ಟೋನ ಅಜ್ಜಿಯನ್ನು ಭೇಟಿಯಾಗಿ ಅವಳನ್ನು ಒಪ್ಪಿಸಿ ಅವರಿಬ್ಬರನ್ನೂ ಕರೆದುಕೊಂಡು ಫ್ಲಾರೆನ್ಸ್ ನಗರಕ್ಕೆ ವಾಪಾಸಾಗುತ್ತಾನೆ. ಅರ್ನೆಸ್ಟೋನನ್ನು ರೂಪದರ್ಶಿಯಾಗಿಸಿ ಬಾಲಕ್ರಿಸ್ತನ ಐದು ಚಿತ್ರಗಳನ್ನು ಬರೆದು ಪೂರ್ಣವಾಗಿಸುತ್ತಾನೆ. ಬಲು ಸುಂದರವಾಗಿ ಮೂಡಿದ್ದ ಚಿತ್ರಗಳನ್ನು ಕಂಡು ಪ್ರಸನ್ನರಾದ ಧರ್ಮದರ್ಶಿ ಸಂಘದವರು ರೂಪದರ್ಶಿಯಾದ ಅರ್ನೆಸ್ಟೋಗೆ ಬಟ್ಟೆಬರೆ, ಸಾಕಷ್ಟು ಹಣವನ್ನು ಕೊಟ್ಟು ಗೌರವಿಸುತ್ತಾರೆ. ಅರ್ನೆಸ್ಟೋ ಮತ್ತು ಅವನ ಅಜ್ಜಿ ಪೀಸಾ ನಗರಕ್ಕೆ ಹಿಂದಿರುಗುತ್ತಾರೆ. ಅದರೊಂದಿಗೆ ಅವರ ಬಡತನದ ಬದುಕೂ ಬದಲಾಗಿ ಸುಭೀಕ್ಷವಾದ ಜೀವನ ಅವರದಾಗುತ್ತದೆ. ಆದರೆ ಈ ಬದಲಾವಣೆಯಿಂದಾಗಿ ವೃದ್ಧೆಯ ಮನಸ್ಥಿತಿ ಬದಲಾಗುತ್ತದೆ. ಮುಂಚೆ ಬಡತನದಲ್ಲೂ ನೆಮ್ಮದಿಯಿಂದ ಬದುಕಿದಾಕೆಯ ಮನಸ್ಸು ಇಲ್ಲಸಲ್ಲದ ಯೋಚನೆಗಳ ಗೂಡಾಗುತ್ತದೆ. ತುದಿಮೊದಲಿಲ್ಲದ ಆಸೆಗಳ ಗೂಡಾಗುತ್ತದೆ ಆಕೆಯ ಮೆದುಳು. 

ಇತ್ತ ಮೈಕೆಲ್ ಏಸುವಿನ ಜೀವನಸಂಬಂಧಿ ಉಳಿದ ಚಿತ್ರಗಳನ್ನು ರಚಿಸುವಲ್ಲಿ ನಿರತನಾಗುತ್ತಾನೆ. ಹಲವು ಚಿತ್ರಗಳನ್ನು ರಚಿಸಿ ಕ್ರಿಸ್ತನ ಅಂತಿಮ ದಿನಗಳ ಚಿತ್ರರಚನೆಗೆ ಕೈ ಹಾಕುತ್ತಾನೆ. ಇಲ್ಲಿ ಅವನು ಯೇಸುವಿನ ಆಪ್ತಶಿಷ್ಯರಲ್ಲಿ ಒಬ್ಬನಾಗಿದ್ದುಕೊಂಡು ವಿಶ್ವಾಸಘಾತ ಮಾಡಿ ಶತ್ರುಗಳಿಗೆ ಏಸುವನ್ನು ತೋರಿದ 'ಜುದಾಸ'ನ ಚಿತ್ರವನ್ನು ಬರೆಯಬೇಕಾಗಿ ಬರುತ್ತದೆ. ಗುರು ದ್ರೋಹಿ, ಕಪಟಿಯಾದ ಜುದಾಸ ಅದೆಷ್ಟು ಕ್ರೂರವಾಗಿದ್ದಿರಬಹುದು ಎಂಬುದನ್ನು ಊಹಿಸಿ ಚಿತ್ರಿಸುವಲ್ಲಿ ಸೋಲುತ್ತಾನೆ ಮೈಕೆಲ್. ಎಷ್ಟೇ ಪ್ರಯತ್ನಿಸಿದರೂ ಪೈಶಾಚಿಕ ಭಾವದ ಜುದಾಸನ ರೂಪವನ್ನು ಚಿತ್ರಿಸಲಾಗದೇ ಅವನ ರೂಪರೇಷೆಗಳಿಗೆ ಹೋಲುವ ರೂಪದರ್ಶಿಯ ಹುಡುಕಾಟಕ್ಕೆ ತೊಡಗುತ್ತಾನೆ. ಆದರೆ ಈ ನಡುವೆ ತನ್ನ ಪರಮಾಪ್ತ ಸ್ನೇಹಿತ ಬೆನೆಟ್ಟೋ ಮರಣದ ವಾರ್ತೆ ತಿಳಿದು ರೋಂ ನಗರಕ್ಕೆ ಧಾವಿಸುತ್ತಾನೆ ಮೈಕೆಲ್. ಬೆನೆಟ್ಟೋನ ಹಿಂದೆಯೇ ಅವನ ಹೆಂಡತಿಯೂ ಇಹಲೋಕ ತ್ಯಜಿಸಿ ಅವರ ಇಬ್ಬರು ಮಕ್ಕಳು ಅನಾಥರಾಗುತ್ತಾರೆ. ಆ ಮಕ್ಕಳ ಭವಿಷ್ಯದ ಬಗ್ಗೆ ಸಕಲ ವ್ಯವಸ್ಥೆ ಮಾಡಲು ವ್ಯಾಟಿಕನ್ ನಗರಕ್ಕೆ ಬಂದೆ ಪೋಪರನ್ನು ಭೇಟಿಯಾಗುತ್ತಾನೆ ಮೈಕೆಲ್. ಅವರ ಬಳಿ ಮಾತನಾಡಿ ಆ ಇಬ್ಬರು ಮಕ್ಕಳ ಜೀವನಕ್ಕೊಂದು ವ್ಯವಸ್ಥೆ ಮಾಡಿ ಇನ್ನೇನು ಫ್ಲಾರೆನ್ಸ್ ಗೆ ಹಿಂದಿರುಗಬೇಕೆನ್ನುವಾಗ ಪೋಪರು ಅವನಿಗೆ ಅಮೃತಶಿಲೆಯ ಸಮಾಧಿ ಹಾಗೂ ಇನ್ನೂ ಬಹಳಷ್ಟು ಚಿತ್ರ, ವಿಗ್ರಹಗಳನ್ನು ರಚಿಸಲು ಹೇಳುತ್ತಾರೆ. ಹಾಗಾಗಿ ಮುಂದಿನ ಹಲವು ವರ್ಷಗಳು ಅದೇ ಕೆಲಸದಲ್ಲಿ ವ್ಯಸ್ತನಾಗುತ್ತಾನೆ ಮೈಕೆಲ್. ಈ ಸಮಯದಲ್ಲಿ ಬೆನೆಟ್ಟೋವಿನ ಮಗ ವಿದ್ಯಾಭ್ಯಾಸ ಮುಗಿಸಿ ವ್ಯಾಟಿಕನ್ನಿನಲ್ಲಿ ಕೆಲಸ ಹಿಡಿದರೆ, ಮಗಳು ಲೀಸಾ ಮದುವೆಯಾಗಿ ತನ್ನ ಗಂಡ ಟಾಯೆಟ್ ನೊಂದಿಗೆ ಕರಾರಾ ನಗರಕ್ಕೆ ಹೊರಟುಹೋಗಿರುತ್ತಾಳೆ. 

ಕೊನೆಗೂ ಮೈಕೆಲ್ ವ್ಯಾಟಿಕನ್ನಿನಲ್ಲಿ ಕೈಗೆತ್ತಿಕೊಂಡ ಕೆಲಸ ಮುಗಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಫ್ಲಾರೆನ್ಸಿನ ಧರ್ಮದರ್ಶಿಗಳು ಇಲ್ಲಿನ ಕೆಲಸ ಸಂಪೂರ್ಣ ಗೊಳಿಸುವಂತೆ ಅವನನ್ನು ಕೇಳಿಕೊಳ್ಳುತ್ತಾರೆ. ವಯಸ್ಸಾಗಿ, ಕಣ್ಣಿನ ದೃಷ್ಟಿ ಮಂದವಾಗಿದ್ದ ಮೈಕೆಲ್ ಸಾವಿರ ಕಾರಣಗಳನ್ನು ಹೇಳಿದರೂ ಕೇಳದೇ ಅವನನ್ನು ಒಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇನ್ನೊಮ್ಮೆ ಮೈಕೆಲ್ ನಿಂದ 'ಜುದಾಸ'ನಿಗಾಗಿ ರೂಪದರ್ಶಿಯ ಹುಡುಕಾಟ ಆರಂಭವಾಗುತ್ತದೆ. ಹೀಗೇ ಹುಡುಕುತ್ತಿರುವಾಗ ಎಂಪೊಲಿ ಎಂಬ ಸಣ್ಣ ಗ್ರಾಮದಲ್ಲಿ ಅತ್ಯಂತ ವಿಕಾರ ರೂಪದ, ಕಡುಕ್ರೂರ ಕಪಟ ಮನಸ್ಥಿತಿಯ ಗ್ಯಾರಿಬಾಲ್ಡಿ ಎಂಬ ವ್ಯಕ್ತಿ ಎದುರಾಗುತ್ತಾನೆ. ಜುದಾಸನ ಚಿತ್ರಕ್ಕೆ ಇವನೇ ಸರಿಯಾದ ರೂಪದರ್ಶಿಯೆಂದು ನಿರ್ಧರಿಸಿ ಬಹಳಷ್ಟು ಪ್ರಯತ್ನ ಹಾಗೂ ಆಮಿಷದ ನಂತರ ಅವನನ್ನು ಒಪ್ಪಿಸಿ ಫ್ಲಾರೆನ್ಸ್ ಕರೆತರುವಲ್ಲಿ ಯಶಸ್ವಿಯಾಗುತ್ತಾನೆ ಮೈಕೆಲ್. 

ಯಾವಾಗ ಗ್ಯಾರಿಬಾಲ್ಡಿ ಫ್ಲಾರೆನ್ಸ್ ನಗರದ ಆ ಕ್ರಿಸ್ತಾಲಯದೊಳಗೆ ಕಾಲಿಟ್ಟು ಅಲ್ಲಿನ ಬಾಲಕ್ರಿಸ್ತನ ಚಿತ್ರಗಳನ್ನು ಕಾಣುತ್ತಾನೋ ಆಗ ಅವನ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಅವನ ಅಸಂಬದ್ಧ ಮಾತುಗಳನ್ನು ಕೇಳಿ ಮೈಕೆಲ್ ಅಚ್ಚರಿಗೊಳ್ಳುತ್ತಾನೆ. ಆದರೆ ಮೈಕೆಲ್ ನಿಗೆ ಆಘಾತವಾಗುವಂತಹ ಸತ್ಯ ಗ್ಯಾರಿಬಾಲ್ಡಿಯ ಬಾಯಿಂದ ಹೊರಬರುತ್ತದೆ. ಅಂದಿನ ಅರ್ನೆಸ್ಟೋವೇ ಇಂದಿನ ಗ್ಯಾರಿಬಾಲ್ಡಿಯಾಗಿರುತ್ತಾನೆ. ಬಾಲಕ್ರಿಸ್ತನ ಅಭೂತಪೂರ್ವ ವರ್ಚಸ್ಸುಳ್ಳ ದಯಾಗುಣದ ಸುಂದರ ಮೂರ್ತಿಯಾಗಿದ್ದ ಅರ್ನೆಸ್ಟೋ ಜುದಾಸನ ಅಪರಾವತಾರದಂತಹ ಕಟುಕ ಗ್ಯಾರಿಬಾಲ್ಡಿಯಾಗಿ ಬದಲಾದುದ್ದಾದರೂ ಏಕೆ ಎಂಬುದನ್ನು ಓದಿಯೇ ತಿಳಿಯಬೇಕು. ವ್ಯಕ್ತಿಯ ಆತ್ಮದ ಮುಗ್ಧತೆಯ ಕೊಲೆಯಾಗಿ ಆತ್ಮವೇ ಇರದ ದೇಹದೊಳಗೆ ದಾನವತ್ವ ಬೆಳೆಯಲು ಸಮಾಜ ಹೇಗೆ ಕಾರಣೀಭೂತವಾಗುತ್ತದೆ ಎಂಬುದನ್ನು ಅರ್ನೆಸ್ಟೋ ಗ್ಯಾರಿಬಾಲ್ಡಿಯಾದ ಪ್ರಕ್ರಿಯೆಯು ವಿವರಿಸುತ್ತದೆ. ಅವನು ಅನುಭವಿಸಿದ ಯಾತನೆಗಳು ಮನಕಲುಕುತ್ತವೆ.

ಇಡೀ ಕಾದಂಬರಿಯಲ್ಲಿ ಮೈಕೆಲ್ ಹಾಗೂ ಅರ್ನೆಸ್ಟೋ/ಗ್ಯಾರಿಬಾಲ್ಡಿ ಪಾತ್ರಗಳನ್ನೇ ಕೇಂದ್ರವಾಗಿಸಿಕೊಂಡರೂ ಮನುಷ್ಯನ ಹಲವು ಮುಖಗಳನ್ನು ಅನಾವರಣಗೊಳಿಸುವ ಪಾತ್ರಗಳು ಕಥೆಯುದ್ದಕ್ಕೂ ಇವೆ. ದುಶ್ಚಟಗಳ ದಾಸನಾದ ಗಂಡನ ದೌರ್ಜನ್ಯಕ್ಕೆ ಸಿಲುಕಿ ನಲುಗಿದರೂ ಅವನನ್ನು ಬದಲಾಯಿಸಲು ಹೆಣಗುವ ಪರಿಶುದ್ಧ ಮನದ ಲೀನಾ, ಮಮತೆಯೇ ಮೈವೆತ್ತ ಲಿಸ್ಸಾತಾಯಿ ಮತ್ತು ನನ್ನೆಟ್ಟಿ, ಬಡತನದಲ್ಲೂ ನೆಮ್ಮದಿಯಿಂದಿದ್ದು ಸಿರಿವಂತಿಕೆ ಬಂದೊಡನೆ ಲೋಭಿಯಾಗತೊಡಗಿದ ಅರ್ನೆಸ್ಟೋನ ಅಜ್ಜಿ,  ವಿಷಯಲಂಪಟ ಟಾಯಿಟ್, ಹೃದಯಹೀನ ಧೂರ್ತ ಜಿಯೋವನಿ ಹೀಗೇ ಹಲವು ಪಾತ್ರಗಳ ಮೂಲಕ ಮನುಷ್ಯನ ಮನದ ಹಲವು ಭಾವಗಳನ್ನು ಕಟ್ಟಿಕೊಟ್ಟಿದ್ದಾರೆ ಲೇಖಕರು. 

'ಪ್ರಪಂಚದ ಬಹುಪಾಲು ಜನರೆಲ್ಲರೂ ಜುದಾಸನಂತಹವರೇ. ವ್ಯತ್ಯಾಸವೆಂದರೆ ಇವರು ಒಳಗೆ ಜುದಾಸರಾಗಿದ್ದರೂ ಹೊರಗೆ ಅದನ್ನು ತೋರ್ಪಡಿಸದೇ ಕುರಿಯ ಚರ್ಮವನ್ನು ಹೊದ್ದ ತೋಳಗಳಂತೆ ಇರುತ್ತಾರೆ' ಎಂಬ ಸಾಲು ಈ ಜಗತ್ತಿನ ವಿಲಕ್ಷಣ ವಾಸ್ತವವನ್ನು ಎತ್ತಿ ಹಿಡಿಯುತ್ತದೆ. 'ನಾಲ್ಕು ಜನರ ಮುಂದೆ ಧೈರ್ಯವಾಗಿ ಮಾಡಲಾಗದ ಕೆಲಸವನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟುಕೊಂಡು ಮಾಡಬಾರದು. ಇದು ಆತ್ಮವಂಚನೆ' ಎಂಬ ಸಾಲುಗಳಲ್ಲಿ ಆತ್ಮಾವಲೋಕನದ ಹಾದಿಯಿದೆ. ಈ ರೀತಿಯ ಹಲವು ಸನ್ನಿವೇಶಗಳು, ಸಾಲುಗಳು ಇಲ್ಲಿವೆ. ಕಾದಂಬರಿಯ ಕೊನೆಯಲ್ಲಿ ಮೈಕೆಲ್ ನಿಗೆ "ಹಣದ ಆಸೆ ತೋರಿಸಿ ನೀನು ನಮ್ಮನ್ನು ಹೆಣವಾಗಿಸಿದೆ" ಎನ್ನುವ ಅರ್ನೆಸ್ಟೋನ ಮಾತು ಓದುಗರಿಗೂ ನಿಜವೆನಿಸಿಬಿಡುತ್ತದೆ. ಒಂದೇ ಜೀವಿತಾವಧಿಯಲ್ಲಿ ಬಾಲಕ್ರಿಸ್ತ ಹಾಗೂ ಜುದಾಸ ಎಂಬ ಎರಡು ತದ್ವಿರುದ್ದ ಭಾವಗಳಿಗೆ ರೂಪದರ್ಶಿಯಾಗಿ ಅರ್ನೆಸ್ಟೋ/ ಗ್ಯಾರಿಬಾಲ್ಡಿಯ ಸಾವಿನೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ. ಆದರೆ ಮನದೊಳಗೆ ಹುಟ್ಟಿಕೊಳ್ಳುವ ಸಾವಿರಾರು ಪ್ರಶ್ನೆಗಳಲ್ಲಿ, ಚಿಂತನೆಗಳಲ್ಲಿ ಅರ್ನೆಸ್ಟೋ ಜೀವತಳೆದಂತೆ ಭಾಸವಾಗುತ್ತದೆ.

ಒಟ್ಟಿನಲ್ಲಿ ಒಮ್ಮೆ ಓದಲೇಬೇಕಾದ ವಿಭಿನ್ನ ಕಥಾಹಂದರದ ವಿಶಿಷ್ಟ ಕೃತಿಯಿದು. ಒಮ್ಮೆ ಓದಿದರೆ ಅದೇ ಮತ್ತೆ ಮತ್ತೆ ಓದಿಸಿಕೊಳ್ಳುವುದು ಸುಳ್ಳಲ್ಲ.

ಸೋಮವಾರ, ಜೂನ್ 8, 2020

ವಿಮುಕ್ತೆ

ಪುಸ್ತಕದ ಹೆಸರು : ವಿಮುಕ್ತೆ
ತೆಲುಗು ಮೂಲ : ಓಲ್ಗಾ
ಅನುವಾದ : ಅಜಯ್ ವರ್ಮಾ ಅಲ್ಲೂರಿ
ಪ್ರಕಾಶಕರು : ಪಲ್ಲವ ಪ್ರಕಾಶನ, ಚನ್ನಪಟ್ಟಣ
ಪ್ರಥಮ ಮುದ್ರಣ : 2019
ಪುಟಗಳು : 178
ಬೆಲೆ :150 ರೂ      

ಓಲ್ಗಾ ಎಂದೇ ಖ್ಯಾತರಾದ ಪೋಪೂರಿ ಲಲಿತ ಕುಮಾರಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಕಥಾಸಂಕಲನ 'ವಿಮುಕ್ತ'ದ ಕನ್ನಡಾನುವಾದ ವಿಮುಕ್ತೆ. ಸೀತೆಯ ಜೀವನದ ಏರಿಳಿತಗಳನ್ನೇ ಕೇಂದ್ರವಾಗಿರಿಸಿಕೊಂಡು ರಾಮಾಯಣದ ಕೆಲ ಸ್ತ್ರೀ ಪಾತ್ರಗಳ ಮೂಲಕ ಇಡೀ ಮಹಾಕಾವ್ಯವನ್ನೇ ಹೊಸದೊಂದು ಒಳನೋಟದಲ್ಲಿ ತೆರೆಯುತ್ತಾ ಎಲ್ಲಾ ಅಧಿಕಾರಗಳಿಂದ, ಬಂಧಗಳಿಂದ ಮುಕ್ತಗೊಂಡು ನಮ್ಮನ್ನು ನಾವು ಪಡೆದುಕೊಳ್ಳುವ ಸಂಕೀರ್ಣ ಪ್ರಕ್ರಿಯೆಯನ್ನು ಇಲ್ಲಿನ ಕಥೆಗಳು ಧ್ವನಿಸುತ್ತವೆ. 

ತನ್ನದ್ಯಾವ ತಪ್ಪೂ ಇಲ್ಲದೇ ಘೋರ ನಿಂದನೆ, ಅಪಮಾನಗಳಿಗೆ ಪಾತ್ರಳಾದ ಸೀತೆ ರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿಯ ಆಶ್ರಮದಲ್ಲಿ ಲವ ಕುಶರನ್ನು ಬೆಳೆಸುತ್ತಿದ್ದಾಳೆ. ಸಹಜವಾಗಿಯೇ ತನ್ನ ಭವಿತವ್ಯದ ಬಗ್ಗೆ ಆಕೆ ಚಿಂತಿತಳಾಗಿದ್ದಾಳೆ. ಇಂದಲ್ಲ ನಾಳೆ ಮಕ್ಕಳಿಗೆ ತಾವು ರಘುವಂಶದ ವಾರಸುದಾರರೆಂಬ ಸತ್ಯ ತಿಳಿಯಲೇಬೇಕು. ತಿಳಿದ ನಂತರ ಅವರು ತನ್ನೊಂದಿಗೆ ನಿಲ್ಲುವವರಲ್ಲ. ಆ ನಂತರ ತನ್ನ ಬದುಕೇನು ಎಂಬ ಯೋಚನೆಯಲ್ಲಿರುವ ಸೀತೆಯ ಚಿಂತನೆಗಳಲ್ಲಿ ಅವಳ ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಭೇಟಿಯಾದ ಕೆಲ ಸ್ತ್ರೀಯರು ಮುಖಾಮುಖಿಯಾಗುತ್ತಾರೆ. ಅವರು ಭೇಟಿಯಾದಾಗ ಹೇಳಿದ ಮಾತುಗಳು ಮತ್ತೆ ಮತ್ತೆ ಅವಳಾಂತರ್ಯದಲ್ಲಿ ಅನುರಣಿಸುತ್ತವೆ. ಆಗ ಅರ್ಥವಾಗದ ಪದಗಳ ಹಿಂದಿನ ಭಾವಗಳು, ಮಾತಿನ ಆಳ ವಿಸ್ತಾರಗಳು ಈಗ ಕಾಲನ ಹೊಡೆತಕ್ಕೆ ಮಾಗಿದ ಸೀತೆಯ ಗ್ರಹಿಕೆಗೆ ನಿಲುಕತೊಡಗುತ್ತವೆ. ಆ ಸ್ತ್ರೀಯರ ಮಾತುಗಳೇ ಸೀತೆಗೆ ತನ್ನನ್ನು, ತನ್ನ ಅಸ್ತಿತ್ವವನ್ನು, ತನ್ನ ಅಸ್ಮಿತೆಯನ್ನು ಅನ್ವೇಷಿಸಿಕೊಳ್ಳಲು ಪ್ರೇರಕ ಶಕ್ತಿಯಾಗುತ್ತವೆ. ತನ್ನ ಮೇಲಿನ ಇತರರ ಎಲ್ಲಾ ಅಧಿಕಾರಗಳನ್ನು ವಿಮುಕ್ತಗೊಳಿಸಿಕೊಂಡು ತನ್ನನ್ನು ತಾನು ಗಳಿಸಿಕೊಳ್ಳಲು ದಾರಿದೀಪವಾಗುತ್ತವೆ. ಜನಕ ಪುತ್ರಿ, ಶ್ರೀರಾಮನ ಪಟ್ಟಮಹಿಷಿ, ಲವಕುಶರ ಮಾತೆ ಎಂಬೆಲ್ಲಾ ಗುರುತುಗಳಾಚೆಗೆ ಭೂ ಸಂಜಾತೆ ಸೀತೆಯೆಂಬ ತನ್ನ ಅಸಲೀ ಅಸ್ತಿತ್ವವನ್ನು ಕಂಡುಕೊಳ್ಳುವ ವೈದೇಹಿಯ ಪಯಣವೇ ಈ ವಿಮುಕ್ತೆ. ಈ ಅನ್ವೇಷಣೆಯ ಹಾದಿಯಲ್ಲಿ ಈಗಾಗಲೇ ಬದುಕಿನ ಅರ್ಥವನ್ನು ಕಂಡುಕೊಂಡ ಶೂರ್ಪನಖಿ, ಅಹಲ್ಯೆ, ರೇಣುಕೆ ಹಾಗೂ ಊರ್ಮಿಳೆ ಸೀತೆಯ ಚಿಂತನೆಗಳನ್ನು ಗಟ್ಟಿಗೊಳಿಸಿ ಅವಳಿಗೆ ತನ್ನತನವನ್ನು ಪಡೆದುಕೊಳ್ಳುವ ಹಾದಿಯನ್ನು ತೋರುತ್ತಾರೆ.

'ಮೂಗನ್ನು ಕಳೆದುಕೊಳ್ಳುವುದು ಎಂದರೇನೆಂಬುದು ನನ್ನ ಹೊರತು ಬೇರ್ಯಾರಿಗೂ ಅರ್ಥವಿರುವುದಿಲ್ಲ ಸೀತಾ' ಎನ್ನುತ್ತಲೇ ಪ್ರಕೃತಿಗೆ ರೂಪ, ಕುರೂಪದ ಭೇದಗಳಿಲ್ಲವೆಂದು ಗ್ರಹಿಸಿ ಪ್ರಕೃತಿಯೊಳಗಿನ ಅಣುಅಣುವನ್ನೂ ಶೋಧಿಸಿ ಸೌಂದರ್ಯದ ನಿಜ ಅರ್ಥವನ್ನು ಕಂಡುಕೊಂಡೆ ಎನ್ನುವ ಶೂರ್ಪನಖಿ ಸೀತೆಗೆ ಬದುಕಿನ ಸಾರ್ಥಕತೆಯನ್ನು ತೋರಿಸಿಕೊಡುತ್ತಾಳೆ. 

ವನವಾಸದ ಸಂದರ್ಭದಲ್ಲಿ ಅಹಲ್ಯೆಯನ್ನು ಭೇಟಿಯಾದಾಗ  ಆಕೆ ಕೇಳಿದ್ದ 'ವಿಚಾರಣೆ ಮಾಡುವುದೆಂದರೆ ಏನು ಸೀತಾ? ಅಪನಂಬಿಕೆ ತಾನೆ? ಅದಕ್ಕಿಂತಲೂ ಯಾವುದೋ ಒಂದು ನಂಬಿಕೆಯೇ ಲೇಸಲ್ಲವೇ?" ಎಂಬ ಮಾತಿನ ನಿಜವಾದ ಅರ್ಥ ಶ್ರೀರಾಮಚಂದ್ರ ಶೀಲಪರೀಕ್ಷೆಗೆ ಕೋರಿದ ಸಂದರ್ಭದಲ್ಲಿ ತಿಳಿಯುತ್ತದೆ ಸೀತೆಗೆ. 'ನೀನು ಈ ಇಡೀ ಪ್ರಪಂಚಕ್ಕೆ ಸೇರಿದವಳು, ಒಬ್ಬ ರಾಮನಿಗಷ್ಟೇ ಅಲ್ಲ. ನೀನು ಯಾರೆಂದು ತಿಳಿಯಲು ಪ್ರಯತ್ನಿಸು. ಎಂದೂ ಯಾವ ವಿಚಾರಣೆಗೂ ಒಪ್ಪದಿರು ಸೀತಾ, ಅಧಿಕಾರಕ್ಕೆ ಶರಣಾಗದಿರು' ಎನ್ನುವ ಅಹಲ್ಯೆ ಸೀತೆಯಲ್ಲಿ ಸ್ವಾನ್ವೇಷಣೆಯ ಅಂಕುರ ಬಿತ್ತುತ್ತಾಳೆ.

ಗಂಡಂದಿರ ಕುರಿತು, ಮಕ್ಕಳ ಕುರಿತು ನನಗೆ ಗೊತ್ತಿದ್ದಷ್ಟು ಮತ್ಯಾರಿಗೂ ಗೊತ್ತಿಲ್ಲ ಎಂದು ನಗುನಗುತ್ತಲೇ ಹೇಳುವ ರೇಣುಕೆಯ 'ಮಕ್ಕಳು ತಮ್ಮ ತಂದೆ ಯಾರೆಂದು ಕೇಳುವ ಸಂದರ್ಭ ಅಥವಾ ಗಂಡನೇ ತನ್ನ ಮಕ್ಕಳ ತಂದೆ ಯಾರೆಂದು ಕೇಳುವ ಸಂದರ್ಭ ಕೆಲ ಹೆಂಗಸರ ಬಾಳಿನಲ್ಲಿ ಬಂದೇ ಬರುತ್ತದೆ ಸೀತಾ' ಎಂಬ ಮಾತು ಸೀತೆಯ ಬದುಕಿನಲ್ಲೇ ಸತ್ಯವಾಗುತ್ತದೆ. 'ನಿನಗೆಷ್ಟೋ ಶಕ್ತಿಯಿದೆ ಸೀತಾ. ನಿನ್ನ ಶಕ್ತಿಯೇ ನಿನಗೆ ರಕ್ಷೆ' ಎಂಬ ರೇಣುಕೆಯ ಆಶೀರ್ವಾದ ಭವಿಷ್ಯದಲ್ಲಿ ಸೀತೆಗೆ ಅವಳ ಸ್ವಸಾಮರ್ಥ್ಯದ ಅರಿವನ್ನು ನೀಡಿ ಲವಕುಶರನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ.

'ಎಲ್ಲ ದುಃಖಗಳಿಗೂ ಮೂಲ ಅಧಿಕಾರ. ಈ ಅಧಿಕಾರವನ್ನು ನಾವು ಪಡೆಯಬೇಕು ಬಿಡಬೇಕು.ನಾನು ಯಾರ ಅಧಿಕಾರಕ್ಕೂ ಅಧೀನಳಾಗದೇ, ನನ್ನ ಅಧಿಕಾರದಿಂದ ಯಾರನ್ನೂ ಬಂಧಿಸದೇ ಉಳಿದರೆ ನನ್ನನ್ನು ನಾನು ವಿಮುಕ್ತಳಾಗಿಸಿಕೊಂಡಂತೆ' ಎಂದು ಹದಿನಾಲ್ಕು ವರ್ಷಗಳಲ್ಲಿ ತಾನು ಶೋಧಿಸಿಕೊಂಡ ಸತ್ಯವನ್ನುಸುರುವ ಊರ್ಮಿಳೆ 'ನಿನ್ನ ಮೇಲಿನ ಅಧಿಕಾರವನ್ನು ನೀನೇ ತೆಗೆದುಕೋ, ಇತರರು ಮೇಲಿನ ಅಧಿಕಾರವನ್ನು ಕಳೆದುಕೋ, ಆಗ ನಿನಗೆ ನೀನು ದಕ್ಕುವೆ' ಎನ್ನುವ ಮೂಲಕ ಸೀತೆಗೆ ಅಧಿಕಾರದ ಬಂಧನದಿಂದ ವಿಮುಕ್ತಳಾಗಲು ಮಾರ್ಗದರ್ಶಕಳಾಗುತ್ತಾಳೆ.

ತನ್ನೆಲ್ಲಾ ಸಹೋದರಿಯರ ಸಹಾಯದಿಂದ ಸೀತೆ ಲವಕುಶರನ್ನು ರಾಮನಿಗೊಪ್ಪಿಸಿ ವಿಮುಕ್ತಳಾಗುತ್ತಾಳೆ. ಆದರೆ ರಾಜಧರ್ಮ ಪಾಲನೆ, ರಾಜ್ಯಾಧಿಕಾರದ ನಿರ್ವಹಣೆಯ ಬಂಧನದಲ್ಲಿ ಸಿಲುಕಿದ ರಾಮ ತನ್ನ ಮೇಲಿನ ಅಧಿಕಾರವನ್ನು ಕಳೆದುಕೊಳ್ಳುತ್ತಾನೆ. ಅವನಿಗೆ ಸೀತೆಯ ಮೇಲೆ ಪ್ರೇಮವಿಲ್ಲ ಎಂದಲ್ಲ. ಆದರೆ ಪುರುಷಪ್ರಧಾನ ವ್ಯವಸ್ಥೆಯ ಕರ್ತವ್ಯ ಪಾಲನೆಯ ಸಿಕ್ಕುಗಳು, ಧರ್ಮರಕ್ಷಣೆಯ ಭಾರ ಅವನನ್ನು ಬಿಡಿಸಿಕೊಳ್ಳಲಾರದಂತೆ ಬಂಧಿಸಿವೆ. 'ತಾನು ಸೀತೆಯನ್ನು ತ್ಯಜಿಸಬಲ್ಲ, ಏಕೆಂದರೆ ಸೀತೆ ತನ್ನವಳು. ಆದರೆ ರಾಜ್ಯವನ್ನು ತ್ಯಜಿಸಲಾರ, ಅದು ರಘುವಂಶದ್ದು.' 'ನಾನು ಸೀತೆ ಬೇರೆಬೇರೆಯಲ್ಲ ಲಕ್ಷ್ಮಣಾ. ಅದು ನಿಮಗಾರಿಗೂ ತಿಳಿಯುವುದಿಲ್ಲ' ಎನ್ನುವ ರಾಮನ ಮಾತುಗಳು ರಾಮನ ಪ್ರಕಟಪಡಿಸಲಾಗದ ಭಾವ ತೀವ್ರತೆಗೆ ಸಾಕ್ಷಿಯಂತೆ ತೋರುತ್ತವೆ. ಲವಕುಶರನ್ನು ತನಗೊಪ್ಪಿಸಿ ಒಂದರ್ಥದಲ್ಲಿ ತನಗೂ ವಿಮುಕ್ತಿಯ ಹಾದಿಯನ್ನು ತೆರೆದಿರುವ ಸೀತೆಯೇ ರಾಮನಿಗೆ ನಿಜವಾದ ರಕ್ಷೆ ಎಂಬುದು 'ಶ್ರೀರಾಮ ರಕ್ಷಾ' ಎನ್ನುವ ಲೋಕವಾಸಿಗಳಿಗೆ ಗೊತ್ತಿಲ್ಲ ಎನ್ನುವ ಸಾಲುಗಳು ರಾಮನ ಆಂತರ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಈ ಐದು ಕಥೆಗಳೊಂದಿಗೆ ಇತ್ತೀಚೆಗೆ ವೋಲ್ಗಾ ಅವರು ಮಂಡೋದರಿಯ ಬಗ್ಗೆ ಬರೆದ 'ಅಶೋಕ' ಕಥೆಯೂ ಈ ಸಂಕಲನದಲ್ಲಿ ಸೇರಿದೆ. ರಾವಣನ ಪತ್ನಿ ಮಂಡೋದರಿಯಲ್ಲಿ ಸ್ವತಂತ್ರ ಚಿಂತನೆಯ, ಸ್ತ್ರೀ ಪುರುಷ ಸಮಾನತೆಯನ್ನು ಪ್ರತಿಪಾದಿಸುವ, ಗಟ್ಟಿ ವ್ಯಕ್ತಿತ್ವದ ದ್ರಾವಿಡ ಹೆಣ್ಣೊಬ್ಬಳನ್ನು ಚಿತ್ರಿಸಿದ್ದಾರೆ. 'ನನ್ನನ್ನು ನಾನು ಇಲ್ಲವಾಗಿಸಿಕೊಂಡು ರಾವಣನನ್ನು ಹೇಗೆ ಪ್ರೀತಿಸಬಲ್ಲೆ' ಎಂಬ ಅವಳ ಪ್ರಶ್ನೆ ಸೀತೆಯ ಊಹೆಗೂ ನಿಲುಕದ್ದು. ರಾವಣನ ಎದುರು ನಿಂತು ವಾದಿಸುವ, ಅವನ ತಪ್ಪುಗಳನ್ನು ಪ್ರಶ್ನಿಸುವ ಮಂಡೋದರಿಯ ಮುಖೇನ ಆರ್ಯ ಹಾಗೂ ದ್ರಾವಿಡ ಸಂಸ್ಕೃತಿಗಳಲ್ಲಿ ಸ್ತ್ರೀ ಅಭಿವ್ಯಕ್ತಿಯ ಭಿನ್ನತೆಗಳನ್ನು ಎತ್ತಿ ಹಿಡಿದಿದ್ದಾರೆ ಲೇಖಕಿ.

ಒಟ್ಟಿನಲ್ಲಿ ರಾಮಾಯಣವನ್ನು ಹೆಣ್ಣಿನ ಒಳತೋಟಿಯಿಂದ ಚಿತ್ರಿಸುವ ವಿಮುಕ್ತೆ 'ನಮ್ಮ ಮೇಲೆ ಕೇವಲ ನಮಗೆ ಮಾತ್ರ ಅಧಿಕಾರವಿದೆ. ನಾವು ಕೊಡುವವರೆಗೂ ಬೇರ್ಯಾರೂ ನಮ್ಮ ಮೇಲೆ ಅಧಿಕಾರವನ್ನು ಹೊಂದಲಾರರು. ಆ ಅಧಿಕಾರವನ್ನು ಪಡೆದುಕೊಂಡು ನಾವು ಬಂಧಗಳಿಂದ ಮುಕ್ತರಾಗಬೇಕು ಎಂಬುದನ್ನು ಬಲವಾಗಿ ಧ್ವನಿಸುತ್ತದೆ. ಪುಸ್ತಕದ ಕೊನೆಯಲ್ಲಿರುವ ಓಲ್ಗಾ ಅವರೊಂದಿಗಿನ ಮಾತುಕಥೆ ಅವರ ಚಿಂತನೆಗಳು ಬೆಳೆದು ಬಂದ ಹಾದಿಯನ್ನು, ವಿಮುಕ್ತೆ ಹುಟ್ಟಿಕೊಂಡ ಬಗೆಯನ್ನು ಇನ್ನಷ್ಟು ಸ್ಪಷ್ಟವಾಗಿಸುತ್ತದೆ. ಹಾಗೆಯೇ ಸ್ತ್ರೀವಾದಿ ಸಾಹಿತ್ಯದ ಬಗೆಗಿನ ಸಾಕಷ್ಟು ವಿವರಗಳು ಇಲ್ಲಿವೆ. ಬಿಡಿ ಕಥನಗಳಾದರೂ ಎಲ್ಲಾ ಕಥನಗಳ ಕೇಂದ್ರ ಸೀತೆಯಾದ ಕಾರಣ ಸೀತೆಯ ಭಾವಲಹರಿಯಲ್ಲಿ ರಾಮಾಯಣ ನಿರೂಪಿತವಾದಂತೆ ಭಾಸವಾಗುತ್ತದೆ‌‌.

ಗುರುವಾರ, ಜೂನ್ 4, 2020

ಮೃತ್ಯುಂಜಯ

ಪುಸ್ತಕದ ಹೆಸರು        : ಮೃತ್ಯುಂಜಯ
ಮೂಲ ಲೇಖಕರು      : ಶಿವಾಜಿ ಸಾವಂತ(ಮರಾಠಿ)
ಅನುವಾದ               : ಅಶೋಕ ನೀಲಗಾರ
ಪ್ರಕಾಶಕರು              : ಅಮಿತ ಪ್ರಕಾಶನ, ಬೆಳಗಾವಿ
ಪ್ರಥಮ ಮುದ್ರಣ      : 1991
ಪುಟಗಳು                  : 973        
ಬೆಲೆ                          :125 ರೂ      


'ಮಹಾಭಾರತ'ವೆಂಬ ಮಹಾಕಾವ್ಯದ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿದೆ. ಪ್ರತಿಯೊಂದು ಪಾತ್ರವೂ ತನ್ನ ಗುಣ ಸ್ವಭಾವದ ಮೂಲಕ ಜಗತ್ತಿಗೆ ಯಾವುದೋ ಒಂದು ಮೌಲ್ಯವನ್ನು, ಇಲ್ಲವೇ ಕಲಿಯಬೇಕಾದ ಪಾಠವನ್ನು ಸಾರಿ ಹೇಳುತ್ತದೆ. ಮೂಲ ಮಹಾಭಾರತವು ಶತಶತಮಾನಗಳ ಅವಧಿಯಲ್ಲಿ ಬೇರೆ ಬೇರೆ ಕವಿಗಳ, ಲೇಖಕರ ಕಲ್ಪನೆಯ ಮೂಸೆಯಲ್ಲಿ ಹಲವು ಬದಲಾವಣೆಗಳೊಂದಿಗೆ ಬೇರೆ ಬೇರೆ ಸ್ವರೂಪದಲ್ಲಿ ನಮ್ಮ ಮುಂದೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ನಮ್ಮ ಕನ್ನಡದಲ್ಲೇ ಪಂಪ, ರನ್ನ, ಕುಮಾರವ್ಯಾಸ ಇನ್ನೂ ಅನೇಕ ಕವಿಗಳು ತಮ್ಮ ಕೃತಿಗಳಲ್ಲಿ ಮಹಾಭಾರತವನ್ನು ಬೇರೆ ಬೇರೆ ಆಯಾಮಗಳಿಂದ ವಿಶ್ಲೇಷಿಸಿದ್ದಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಮಹಾಭಾರತದ ಪಾತ್ರಗಳು ಅಗಣಿತ ಕಾವ್ಯ, ಕಥೆ, ಕಾದಂಬರಿ, ಲೇಖನಗಳಿಗೆ ಸ್ಪೂರ್ತಿಯಾಗಿವೆ. 

ಮಹಾಭಾರತದಲ್ಲಿ ತನ್ನ ವಿಶಿಷ್ಟ ಜೀವನಗಾಥೆಯಿಂದ ಗಮನಸೆಳೆಯುವುದು ಅಂಗರಾಜ ಕರ್ಣ. ಸಾಕ್ಷಾತ್ ಸೂರ್ಯಪುತ್ರನಾಗಿಯೂ ಸೂತಪುತ್ರನೆನೆಸಿಕೊಂಡ, ಕೌಂತೇಯನಾಗಿಯೂ ರಾಧೇಯನಾದ, ಜೇಷ್ಠ ಪಾಂಡವನಾಗಿಯೂ ಕೌರವರ ಪಕ್ಷದಲ್ಲಿ ಗುರುತಿಸಿಕೊಂಡ ಕರ್ಣನ ಬದುಕೇ ಅಪಮಾನ, ನಿಂದನೆ ಹಾಗೂ ಶಾಪಗಳಿಂದ ಕೂಡಿದ ದುರಂತ ಕಾವ್ಯ. ವೀರತ್ವ, ದಾನಶೂರತ್ವ ಹಾಗೂ ತ್ಯಾಗದ ಪ್ರತೀಕವೆನಿಸಿದರೂ ಕರ್ಣನ ಬದುಕಿನ ತುಂಬಾ ವಿಧಿಯ ಶಾಪಗಳೇ ಅಪಸವ್ಯದ ಸರಮಾಲೆಯಾಗಿ ಎದ್ದು ಕಾಣುವುದು ವಿಪರ್ಯಾಸ. ಪ್ರಾಯಶಃ ಈ ಕಾರಣಕ್ಕಾಗಿಯೇ ಮಹಾಕವಿ ಪಂಪ 'ನೆನೆಯದಿರಣ್ಣ ಭಾರತದೊಳಿನ್ ಪೆರರಾರನುಂ ಒಂದೆ ಚಿತ್ತದಿಂ ನೆನೆದುದಾರ್ದೊಡೆ ಕರ್ಣನಂ ನೆನೆಯಾ ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ' ಎಂದಿರಬಹುದೇನೋ.

ಇಂತಹ ಕರ್ಣನ ಜೀವನವನ್ನೇ ಆಧಾರವಾಗಿಸಿ ಅವನ ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಬೃಹತ್ ಕಾದಂಬರಿ 'ಮೃತ್ಯುಂಜಯ'. ಕರ್ಣ, ಕುಂತಿ, ದುರ್ಯೋಧನ, ವೃಷಾಲಿ, ಶೋಣ ಈ ಐದು ಪಾತ್ರಗಳ ಸ್ವಗತದಲ್ಲಿ ಸಾಗುವ ಕಥೆಯು ಶ್ರೀ ಕೃಷ್ಣನ ಸ್ವಗತದೊಂದಿಗೆ ಮುಕ್ತಾಯವಾಗುತ್ತದೆ. ಮೊದಲಿನ ಐದು ಪಾತ್ರಗಳ ಮೂಲಕ ಕರ್ಣನ ಜೀವನವನ್ನು ವಿಶ್ಲೇಷಿಸುತ್ತಾ ಸಾಗುವ ಕಥೆಗೆ ಭಗವಾನ್ ಶ್ರೀ ಕೃಷ್ಣನ ಸ್ವಗತದೊಂದಿಗೆ ಉಪಸಂಹಾರ ನೀಡಿರುವ ಲೇಖಕರ ಜಾಣ್ಮೆ ಅಭಿನಂದನಾರ್ಹ . ಇಲ್ಲಿ ಕರ್ಣನ ಕಥಾನಾಯಕನಾದ ಕಾರಣ ಇದು ಮೂಲ ವ್ಯಾಸ ಭಾರತಕ್ಕೆ ಸಂಪೂರ್ಣ ನಿಷ್ಠವಾದ ಕೃತಿಯಲ್ಲ. ಕರ್ಣನ ಜೀವನದ ಎಲ್ಲಾ ಮಹತ್ತರ ಘಟನೆಗಳನ್ನು ವ್ಯಾಸ ಭಾರತದಿಂದ ತೆಗೆದುಕೊಂಡು ಅದನ್ನೇ ಕೇಂದ್ರವಾಗಿಸಿದ್ದರೂ ಕೂಡಾ ಕರ್ಣನ ವ್ಯಕ್ತಿತ್ವ, ಮನಸ್ಥಿತಿಯನ್ನು ಪರಿಚಯಿಸಲು ಬೇಕಾದಂತೆ ಹಲವು ಪಾತ್ರಗಳು ಇಲ್ಲಿವೆ. ಕರ್ಣನ ಭಾವ ಪ್ರಪಂಚವನ್ನು ಅನಾವರಣಗೊಳಿಸುವ ಮಾಧ್ಯಮಗಳಾಗಿ ಅವನ ತಮ್ಮ ಶೋಣ, ಪತ್ನಿ ವೃಷಾಲಿ, ವೃಷಾಲಿಯ ಅಣ್ಣ ಸಾರಥಿ ಸತ್ಯಸೇನನ ಪಾತ್ರಗಳಿಗೆ ಇಲ್ಲಿ ಮಹತ್ವವಿದೆ. ಹಾಗೆಯೇ ಪೌರಾಣಿಕ ಹಿನ್ನೆಲೆಗೆ ಹೊರತಾಗಿ ಈ ಕಥೆಯಲ್ಲಿ ಬಹಳ ಪ್ರಬಲವಾದ ಸಾಮಾಜಿಕ ಅಂಶಗಳಿವೆ. ಹಾಗಾಗಿಯೇ ಈ ಕಾದಂಬರಿಯ ಹಲವು ವಿಚಾರಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತವೆನಿಸುತ್ತವೆ. 

ಚಂಪಾನಗರದಲ್ಲಿ ಧೃತರಾಷ್ಟ್ರನ ಸಾರಥಿ ಅಧಿರಥ ಹಾಗೂ ರಾಧೆಯ ಪುತ್ರನಾಗಿ ತಮ್ಮ ಶೋಣ(ಶತೃತಪ) ನೊಂದಿಗೆ ಗಂಗಾತೀರದಲ್ಲಿ ಬಾಲ್ಯವನ್ನು ಕಳೆಯುವ ಕರ್ಣ(ವಸುಸೇನ)ನ ಸ್ವಗತದ ಮೂಲಕ ಆರಂಭವಾಗುವ ಕಾದಂಬರಿ ಕೃಷ್ಣನಿಂದ ಕುಮಾರಿ ಭೂಮಿಯ ಮೇಲೆ ಕರ್ಣನ ಅಂತ್ಯಕ್ರಿಯೆ ಹಾಗೂ ವೃಷಾಲಿಯ ಆತ್ಮಾರ್ಪಣೆಯೊಂದಿಗೆ ಪರಿಸಮಾಪ್ತಿಯಾಗುತ್ತದೆ. ಈ ಆದಿಯಿಂದ ಅಂತ್ಯದ ನಡುವಿನ ಪಯಣದಲ್ಲಿ ಮಹಾಭಾರತವು ಕರ್ಣನ ಆಯಾಮದಲ್ಲಿ ತೆರೆದುಕೊಳ್ಳುತ್ತದೆ. 

ಜನ್ಮದಾರಭ್ಯ ದೊರೆತ ಅಭೇದ್ಯ ಕವಚ ಕುಂಡಲಗಳು, ಸೂರ್ಯಪ್ರಭೆಯ ಕಾಯ, ಕ್ಷತ್ರಿಯರಿಗೆ ಭೂಷಣವಾಗುವಂತಹ ವೀರತ್ವ, ಪರಾಕ್ರಮಗಳ ಗಣಿಯಾದ ಕರ್ಣ ಬೆಳೆಯುವುದು ಮಾತ್ರ ಸಾರಥಿ ಪುತ್ರನಾಗಿ. ಇಡೀ ಲೋಕ ಅವನನ್ನು ಅವನ ಕುಲದ ಆಧಾರದಲ್ಲಿಯೇ ಗುರುತಿಸಿ ಆ ಮಿತಿಯೊಳಗೇ ಅವನನ್ನು ಬಂಧಿಸಲು ಯತ್ನಿಸುತ್ತದೆ. ಅವನ ಪ್ರತೀ ಪರಾಕ್ರಮದ ಸನ್ನಿವೇಶದಲ್ಲೂ 'ನೀನು ಸೂತನಿರುವೆ. ಕ್ಷತ್ರಿಯನಾಗಲು ಯತ್ನಿಸಬೇಡ' ಎಂದು ಅಪಹಾಸ್ಯಗೈಯುವ ಸಮಾಜ ಅವನನ್ನು ಪದೇ ಪದೇ ಅಪಮಾನಿಸಿ ಜರ್ಜರಿತಗೊಳಿಸುತ್ತದೆ. ಇಡೀ ಲೋಕವೇ ತನ್ನನ್ನು ಕೇವಲ ಕುಲದ ಆಧಾರದಲ್ಲಿ ತಿರಸ್ಕರಿಸುವಾಗ ತನ್ನ ಸಾಮರ್ಥ್ಯವನ್ನು ಅರಿತು, ಕರ್ತೃತ್ವದ ಆಧಾರದಲ್ಲಿ ಅಂಗರಾಜನೆಂಬ ಕ್ಷತ್ರಿಯ ಪದವಿ ನೀಡಿ ಪುರಸ್ಕರಿಸುವ ದುರ್ಯೋಧನ ಸ್ವಾಭಾವಿಕವಾಗಿಯೇ ಕರ್ಣನ ಪಾಲಿಗೆ ಪರಮಾಪ್ತನೆನಿಸುತ್ತಾನೆ. ಆ ಕಾರಣಕ್ಕಾಗಿಯೇ ಕೊನೆಕೊನೆಗೆ ದುರ್ಯೋಧನನ ರಾಜಕಾರಣ ಆಟದಲ್ಲಿ ತಾನು ದಾಳವಾಗಿದ್ದೂ ತಿಳಿದರೂ ಅವನೆಡೆಗಿನ ಸ್ವಾಮಿನಿಷ್ಠೆಯನ್ನು ತೊರೆಯುವುದಿಲ್ಲ ಕರ್ಣ. 

ತನ್ನ ಜೀವನದ ಬಹುಪಾಲು ತಾನು ಯಾರಿದ್ದೇನೆ ಎಂಬ ಗೊಂದಲದಲ್ಲೇ ಜೀವಿಸುವ ಕರ್ಣನ ತಾಕಲಾಟಗಳನ್ನು ಕಾದಂಬರಿ ಬಹಳ ಸಮರ್ಥವಾಗಿ ಹಿಡಿದಿಡುತ್ತದೆ. ತಾನು ಸೂತಪುತ್ರನಿದ್ದೂ ಕೂಡಾ ತನಗೇಕೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ಸಿಗದ ಪ್ರಶ್ನೆ ಅವನನ್ನು ಹಗಲಿರುಳು ಕಾಡುತ್ತದೆ. ತನ್ನ ಪ್ರಥಮ ಪುತ್ರ ಸುದಾಮ ಕವಚ ಕುಂಡಲ ರಹಿತವಾಗಿ ಜನಿಸಿದಾಗಲಂತೂ ಅವನ ಮನೋವಿಪ್ಲವಗಳು ತೀವ್ರವಾಗುತ್ತದೆ. ತನ್ನ ಈ ಕವಚಕುಂಡಲಗಳಿಂದಲೇ ತಾನು ಸೂತಪುತ್ರನೆಂಬ ಸತ್ಯವನ್ನು ತನಗೆ ಒಪ್ಪಿಕೊಳ್ಳಲಾಗುತ್ತಿಲ್ಲ ಎಂಬ ಭಾವ ಸದಾ ಅವನನ್ನು ಕಾಡುತ್ತದೆ. ಕೊನೆಗೆ ಕೃಷ್ಣನಿಂದ ತನ್ನ ಜನ್ಮರಹಸ್ಯ ತಿಳಿದಾಗಲಷ್ಟೇ ಅವನ ಗೊಂದಲಗಳಿಗೆ ಉತ್ತರ ಸಿಗುತ್ತದೆ. ಆದರೆ ಆ ವೇಳೆಗಾಗಲೇ ಅವನ ಬದುಕು ಹಿಂದಿರುಗಿ ಬರಲಾಗದಷ್ಟು ಮುಂದೆ ಸಾಗಿಹೋಗಿರುತ್ತದೆ.

ಈ ಕಾದಂಬರಿಯಲ್ಲಿನ ಇನ್ನೊಂದು ಪ್ರಮುಖ ಅಂಶ ಕರ್ಣ ಹಾಗೂ ಅಶ್ವತ್ಥಾಮರ ಬಾಂಧವ್ಯ. ಅವರಿಬ್ಬರ ಮಿತ್ರತ್ವ ಹಾಗೂ ಅವರ ನಡುವಿನ ಚರ್ಚೆಗಳಲ್ಲಿ ಹಲವು ಸಾಮಾಜಿಕ, ಆಧ್ಯಾತ್ಮಿಕ ಚಿಂತನೆಗಳ ಹರಿವು ಕಾದಂಬರಿಯ ತುಂಬಾ ಹರಡಿಕೊಂಡಿದೆ. ಕರ್ಣನ ಪ್ರತೀ ಗೊಂದಲಕ್ಕೆ ಅಶ್ವತ್ಥಾಮನ ಸಾತ್ವಿಕ ತತ್ವದ ಉತ್ತರಗಳು ಬಹಳ ಪ್ರಸ್ತುತವೆನಿಸುತ್ತದೆ. 

ಈ ಕಾದಂಬರಿಯ ಇನ್ನೊಂದು ಪ್ರಮುಖ ಅಂಶ ಉಪಮೆ, ರೂಪಕ ಹಾಗೂ ಪ್ರತಿಮೆಗಳ ಬಳಕೆ. ಕಥೆಯ ಪ್ರತಿಯೊಂದು ಪ್ರಮುಖ ಸನ್ನಿವೇಶಗಳಲ್ಲೂ ಭವಿಷ್ಯವನ್ನು ಸೂಚಿಸುವ, ಪರಸ್ಪರ ವೈರುಧ್ಯವನ್ನು ಧ್ವನಿಸುವ ಪ್ರತಿಮೆಗಳನ್ನು ಸಮರ್ಥವಾಗಿ ಬಳಸಿದ್ದಾರೆ ಲೇಖಕರು. ಬಾಲ್ಯದಲ್ಲಿ ಮಥುರೆಯ ಅರಮನೆಯಲ್ಲಿ ಗೂಡಿನಿಂದ ಬಿದ್ದ ಚಾಂಡೋಲ ಪಕ್ಷಿಯ ಮರಿಯನ್ನು ಮರಳಿ ಗೂಡಿಗೆ ಸೇರಿಸಲು ತನ್ನ ತಂದೆ ಮಹಾರಾಜ ಶೂರಸೇನರನ್ನೇ ಮರದ ಮೇಲೆ ಹತ್ತಿಸುವ ಪೃಥೆ ಮುಂದೊಮ್ಮೆ ತಾನೇ ಹೆತ್ತ ಹಸುಗೂಸನ್ನು ತುಂಬಿ ಹರಿಯುವ ಅಶ್ವನದಿಯಲ್ಲಿ ತೇಲಿಬಿಡುತ್ತಾಳೆ. ಬದುಕಿನುದ್ದಕ್ಕೂ ಸಂಯಮ ಪಾಲಿಸುವ, ಅಪಮಾನಗಳನ್ನು ಹಲ್ಮುಡಿ ಕಚ್ಚಿ ಸಹಿಸುವ ಕರ್ಣ ದ್ರೌಪದಿಯ ವಸ್ತ್ರಾಪಹರಣದ ಸನ್ನಿವೇಶದಲ್ಲಿ ಪ್ರಜ್ಞಾಶೂನ್ಯನಾಗಿ ದ್ರೌಪದಿಯ ಅಪಮಾನಗೈಯುತ್ತಾನೆ. ದ್ರೋಣರ ಗುರುಕುಲದಲ್ಲಿ ಪ್ರಥಮ ಬಾರಿಗೆ ಕರ್ಣಾಜುನರ ಭೇಟಿಯಾಗುವ ಕ್ಷಣದಲ್ಲಿ ಹಾರುತ್ತಿದ್ದ ಗರುಡ ಪಕ್ಷಿಯ ಚುಂಚಿನಲ್ಲಿದ್ದ ಅರೆಜೀವದ ಸರ್ಪ ಇಬ್ಬರ ನಡುವೆ ಬೀಳುವುದು ಅವರಿಬ್ಬರ ವೈರತ್ವವೇ ತುಂಬಿದ ಭವಿಷ್ಯವನ್ನು ಧ್ವನಿಸುವಂತೆ ಅನ್ನಿಸಿಬಿಡುತ್ತದೆ. ರಾಜಮಾತೆ ಕುಂತೀದೇವಿ ತಮ್ಮ ಆರು ಕುದುರೆಗಳ ರಥಕ್ಕೆ ಐದೇ ಕುದುರೆಗಳನ್ನು ಕಟ್ಟುವುದು, ಪರಸ್ಪರ ಎದುರಾದಗಲೆಲ್ಲಾ ಕರ್ಣನ ಪಾದಗಳನ್ನೇ ಏಕದೃಷ್ಟಿಯಿಂದ ನೋಡುವ ಯುಧಿಷ್ಠರ…. ಹೀಗೆ ಹಲವು ಸಂಗತಿಗಳನ್ನು ಇಲ್ಲಿ ಉದಾಹರಿಸಬಹುದು.

ಕಥೆಯ ಕೊನೆಯಲ್ಲಿ ತನ್ನ ಅಂತಿಮ ಘಳಿಗೆಯಲ್ಲಿರುವ ಕರ್ಣ ತನ್ನ ಸುವರ್ಣ ದಂತಗಳನ್ನು ಯಾಚಕನಿಗೆ ದಾನ ನೀಡುವ ಸನ್ನಿವೇಶ ಅವನಿಡೀ ಬದುಕಿಗೆ ಭಾಷ್ಯ ಬರೆದಂತೆ ಕಾಣುತ್ತದೆ. ಸಾವಿನ ದ್ವಾರದಲ್ಲೂ ಬದಲಾಗದ ಅವನ ಜೀವನದೆಡೆಗಿನ ವಿಚಾರ ಧಾರೆ, ಕರ್ತವ್ಯ ನಿಷ್ಠೆ  ಆ ಸನ್ನಿವೇಶದಲ್ಲಿ ಪ್ರತಿಫಲಿತವಾಗಿದೆ. ಸಾಯುವ ಮುನ್ನಿನ ಅವನ ಅಸ್ಪಷ್ಟ ಕನವರಿಕೆಗಳು ಅವನಿಡೀ ಬದುಕಿನ ದ್ವಂದ್ವವನ್ನು ಧ್ವನಿಸಿದಂತೆ ಭಾಸವಾಗುತ್ತದೆ. ಕರ್ಣನ ಶವವನ್ನು ಶೋಧಿಸುತ್ತಾ ಬರುವ ಕೃಷ್ಣನಿಗೆ ಕಾಣುವುದು ತನ್ನ ಒಡೆಯನ ಶವದ ಹತ್ತಿರ ಕುಳಿತು ತನ್ನ ಬಾಲದ ಚಮರಿಯನ್ನು ಬೀಸುವ ವಾಯುಜಿತ….! ಅದು ಸ್ವತಃ ಕೃಷ್ಣನಿಗೇ 'ಜಗತ್ತಿನ ಮೇಲೆ ಪ್ರಕೃತಿಯ ವಿಜಯದಂತೆ ಭಾಸವಾಯಿತು' ಎಂಬ ಸಾಲುಗಳು ಕಾಡುತ್ತವೆ. ಕೈಯಲ್ಲಿ ಒಂದೊಂದು ಹಣತೆ ಹಿಡಿದು ಕೃಷ್ಣನ ಅರಸುತ್ತಾ ಕರ್ಣನ ಉರಿವ ಚಿತೆಯೆದುರು ಪಾಂಡವರು ಬರುವ ಸನ್ನಿವೇಶ ಒಂದು ಚಿತೆ ಐದು ಹಣತೆಗಳಿಗೆ ನೇಹವಾಯಿತೇನೋ ಎಂಬ ಭಾವವನ್ನು ಹುಟ್ಟಿಸಿಬಿಡುತ್ತದೆ. 

ಒಟ್ಟಿನಲ್ಲಿ ಈ ಕಾದಂಬರಿ ಓದಿ ಮುಗಿಸಿದಾಗ 
ಕರ್ಣನ ಬದುಕನ್ನು ಅವನು ರೂಪಿಸಿಕೊಳ್ಳಲಿಲ್ಲ ಅದನ್ನು ಪರಿಸ್ಥಿತಿಗಳೇ ರೂಪಿಸಿದವು ಅನ್ನಿಸಿಬಿಡುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ವಿಧಿ ನಡೆಸಿದಂತೆ ನಡೆದರೂ ತನ್ನ ವಿಚಾರಧಾರೆಗಳಿಗೆ ನಿಷ್ಠನಾದ ಕರ್ಣನಿಗೆ ಕೊನೆಯವರೆಗೂ ಸ್ಪೂರ್ತಿಯಂತೆ ಜೊತೆಯಾಗುವುದು, ಕುಗ್ಗುವ ಅವನ ಮನಕ್ಕೆ ಚೈತನ್ಯ ತುಂಬಿ ಅವನೊಂದಿಗೆ ಸಾಗುವುದು ಸೂರ್ಯದೇವನ ಪ್ರಕಾಶ ಹಾಗೂ ಹರಿವ ಗಂಗೆಯ ತೆರೆಗಳು ಮಾತ್ರವೇ. ಒಂದೇ ಮಾತಿನಲ್ಲಿ ಹೇಳುವುದಾದರೇ ಕರ್ಣನು ಯೋಧನಾಗಿ ರಣರಂಗದಲ್ಲಿ ಹೋರಾಡಿದ್ದಕ್ಕಿಂತ ತನ್ನ ಮನೋರಂಗದಲ್ಲಿನ ಅಗಣಿತ ಗೊಂದಲಗಳೊಂದಿಗೆ ಹೋರಾಡಿದ್ದೇ ಹೆಚ್ಚು. ಆ ಹೋರಾಟಗಳ ಕಥನವೇ ಮೃತ್ಯುಂಜಯ.

ಮಂಗಳವಾರ, ಜೂನ್ 2, 2020

ಯಯಾತಿ

ಪುಸ್ತಕದ ಹೆಸರು     : ಯಯಾತಿ
ಮೂಲ ಲೇಖಕರು  : ವಿ. ಎಸ್. ಖಾಂಡೇಕರ್
ಅನುವಾದ            : ವಿ. ಎಂ. ಇನಾಂದಾರ್
ಪ್ರಕಾಶಕರು           : ಅಂಕಿತ ಪುಸ್ತಕ
ಪುಟಗಳು: ೪೪೦           ಬೆಲೆ : ೨೯೫ ರೂ
ಮೊದಲ ಮುದ್ರಣ       ೧೯೭೭ 
ಒಂಬತ್ತನೇ ಮುದ್ರಣ   ೨೦೧೫

ನಾನು ಬಹಳ ಸಮಯದಿಂದ ಓದಬೇಕೆಂದುಕೊಂಡ ಕಾದಂಬರಿ. ಪೌರಾಣಿಕ ಕಥನಗಳನ್ನು ಪ್ರಸ್ತುತಪಡಿಸುವುದು ನಿಜಕ್ಕೂ ಸವಾಲಿನ ಕೆಲಸ. ಇಂತಹ ಕಥನಗಳಲ್ಲಿ ಸಾಮಾನ್ಯವಾಗಿ ಎರಡು ರೀತಿಯ ತೊಡಕುಗಳು. ಎಂದೋ ಯಾವುದೋ ಕಾಲಘಟ್ಟದಲ್ಲಿ ನಡೆದಿರಬಹುದಾದ ಕಥನಗಳ ಸಮಕಾಲೀನ ಔಚಿತ್ಯದ ಪ್ರಶ್ನೆ ಒಂದೆಡೆಯಾದರೆ, ಮೂಲ ಕಥನದ ಸಾರಕ್ಕೆ ಚ್ಯುತಿ ಬಾರದಂತೆ ಬದಲಾದ ಮೌಲ್ಯಗಳೊಂದಿಗೆ ಕಥನವನ್ನು ಪ್ರಸ್ತುತಪಡಿಸುವುದು ಇನ್ನೊಂದು ಸವಾಲು. ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿ ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ವಸ್ತುವಿಷಯವನ್ನು ನಿರೂಪಿಸುವ ಕಲೆ ಎಲ್ಲರಿಗೂ ಕರಗತವಾಗಿರುವುದಿಲ್ಲ. ಈ ವಿಚಾರದಲ್ಲಿ ವಿ.ಎಸ್ ಖಾಂಡೇಕರ್ ಅವರ ಯಯಾತಿ ಒಂದು ಪರಿಪೂರ್ಣ ಕೃತಿ. ವೈಯಕ್ತಿಕವಾಗಿ ಶಿವಾಜಿ ಸಾವಂತ್ ಅವರ 'ಮೃತ್ಯುಂಜಯ' ಕೃತಿಯ ನಂತರ ನನ್ನನ್ನು ಅತೀವವಾಗಿ ಕಾಡಿದ ಎರಡನೇಯ ಪೌರಾಣಿಕ ಕಾದಂಬರಿ ಇದು.

ಲೇಖಕರೇ ಸ್ಪಷ್ಟಪಡಿಸಿರುವಂತೆ ಯಯಾತಿ ಒಂದು ಶುದ್ಧ ಪೌರಾಣಿಕ ಕಾದಂಬರಿಯಲ್ಲ. ಮಹಾಭಾರತದ ಒಂದು ಉಪಖ್ಯಾನವನ್ನು ಆಧಾರವಾಗಿಸಿ ಬರೆದ ಸ್ವತಂತ್ರ ಕಾದಂಬರಿ. ಖಾಂಡೇಕರ್ ಅವರ ಯಯಾತಿಯ ಕಥನ ಮೂಲ ಭಾರತದ ಯಯಾತಿಯ ಉಪಖ್ಯಾನಕ್ಕಿಂತ ಬಹಳ ವಿಚಾರಗಳಲ್ಲಿ ಭಿನ್ನವಾಗಿದೆ ಮತ್ತು ಆ ಭಿನ್ನತೆಗಳೇ ಖಾಂಡೇಕರ್ ಅವರ ಯಯಾತಿ ಗೆ ಹೊಸ ಆಯಾಮವನ್ನು ನೀಡಿವೆ ಎಂದರೆ ತಪ್ಪಾಗಲಾರದು.

ಇಡೀ ಕಥೆಯ ಕೇಂದ್ರಬಿಂದು ಹಸ್ತಿನಾಪುರದ ಅರಸ ಯಯಾತಿಯಾದರೂ ಕಥೆ ಮುಂದುವರಿದಂತೆ ದೇವಯಾನಿ, ಕಚ ಹಾಗೂ ಶರ್ಮಿಷ್ಠೆಯ ಪಾತ್ರಗಳು ಯಯಾತಿಗಿಂತಲೂ ಹೆಚ್ಚು ಕಾಡುತ್ತವೆ. ಭೌತಿಕ ವಾಂಛೆಗಳೇ ತುಂಬಿದ ವಿಷಯೋಪಾಸನೆ ಎಂಬ ಕ್ಷಣಿಕ ಸುಖದ ಅಮಲಿನ ಬೆನ್ನು ಬೀಳುವ ಮನುಜ ಹೇಗೆ ಆತ್ಮವಿಹೀನನಾಗಿ ನೈತಿಕ ಅಧಃಪತನದತ್ತ ಜಾರುತ್ತಾನೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸುತ್ತದೆ ಈ ಕಾದಂಬರಿ. ಮೇಲಿನ ನಾಲ್ಕು ಪಾತ್ರಗಳೊಂದಿಗೆ ಯತಿ, ರಾಜಮಾತೆ, ಶುಕ್ರಾಚಾರ್ಯರು, ಅಲಕೆ, ಮುಕುಲಿಕೆ, ಮಾಧವ, ತಾರಿಕೆ, ಮಾಧವಿ, ಮಂದರ, ಪುರು, ಯದು ಮುಂತಾದ ಪಾತ್ರಗಳ ಮೂಲಕ ವಿವಿಧ ವ್ಯಕ್ತಿತ್ವಗಳನ್ನು, ಮನುಜನ ಮನದ ಹಲವು ಭಾವಗಳನ್ನು ಅನಾವರಣಗೊಳಿಸುತ್ತಾ ಸಾಗುವ ಕಥೆ ಬದುಕಿನ ಅಪೂರ್ಣತೆಯನ್ನು, ದೇಹ ಮತ್ತು ಆತ್ಮಗಳ ಸಂಬಂಧವನ್ನು ವಿಶ್ಲೇಷಿಸುತ್ತದೆ.

ಇಲ್ಲಿ ಯಯಾತಿ ಇಂದ್ರಿಯ ನಿಗ್ರಹವಿಲ್ಲದ ಶುದ್ಧ ಲಂಪಟ ಪಲಾಯನವಾದಿ ವ್ಯಕ್ತಿತ್ವದ ಪ್ರತೀಕವಾದರೆ, ದೇವಯಾನಿ ಅಹಂಕಾರ, ದ್ವೇಷ, ಮಾತ್ಸರ್ಯ ಹಾಗೂ ಹಠ ಸ್ವಭಾವದ ಪ್ರತಿರೂಪ. ಇಬ್ಬರೂ ತಮ್ಮ ತಪ್ಪಿಗೆ ಪರಸ್ಪರರನ್ನು ಹೊಣೆಯಾಗಿಸಿಕೊಳ್ಳುತ್ತಾ ಸದಾ ಅಶಾಂತಿ, ಅತೃಪ್ತಿಯಿಂದ ಬೇಯುತ್ತಾರೆ. ಇಲ್ಲಿನ ಶರ್ಮಿಷ್ಠೆ ಅಸೀಮ, ನಿರೀಕ್ಷೆಗಳಿಲ್ಲದ ಒಲವನ್ನು ಉಸಿರಾಗಿಸಿಕೊಂಡಾಕೆ. ತಾಳ್ಮೆ, ತ್ಯಾಗ, ಸಹನೆಯ ಪ್ರತಿರೂಪ. ದೇವಯಾನಿ ಕಚನಂತಹ ಮೇರು ವ್ಯಕ್ತಿತ್ವದ  ಋತ್ವಿಜನ ಸಾನಿಧ್ಯದಲ್ಲಿದ್ದು ಅವನ ಅದಮ್ಯ ಪ್ರೀತಿಗೆ ಪಾತ್ರಳಾದರೂ ಅಸೂಯೆ, ದ್ವೇಷ, ಅಹಂಕಾರ ಮೊದಲಾದ ತಾಮಸ ಗುಣಗಳು ಅವಳಿಂದ ಬೇರ್ಪಡುವುದೇ ಇಲ್ಲ. ಅದೇ ಕಚನ ವಿಚಾರಧಾರೆಗಳಿಂದ ಪ್ರೇರಿತಳಾದ ದಾನವ ರಾಜಕನ್ಯೆ ಶರ್ಮಿಷ್ಠೆ ತನ್ನ ಕುಲ ಬಾಂಧವರ ಒಳಿತಿಗಾಗಿ ದೇವಯಾನಿಯ ದಾಸಿಯಾಗಲು ಹಿಂತೆಗೆಯುವುದಿಲ್ಲ. ಕಚನೊಂದಿಗಿನ ಕೆಲವೇ ಭೇಟಿಗಳಲ್ಲಿ ಅವನ ಆತ್ಮವಿಕಾಸದ ಹಾದಿಯ ಚಿಂತನೆಗಳನ್ನು ಗುರುತಿಸಿ ಅದರಿಂದ ಪ್ರಭಾವಿಳಾಗುತ್ತಾಳೆ ಶರ್ಮಿಷ್ಠೆ.
ಈ ಇಡೀ ಕಥೆಯ ಆತ್ಮದಂತೆ ಶೋಭಿಸುವುದು ಕಚದೇವನ ಪಾತ್ರಪೋಷಣೆ. ಖಾಂಡೇಕರ್ ಅವರು ಕಚನ ಪಾತ್ರವನ್ನು ಮೂಲದಲ್ಲಿ ಇರುವುದಕ್ಕಿಂತಲೂ ಹೆಚ್ಚು ವಿಸ್ತರಿಸಿದ್ದಾರೆ. ಹಾಗೂ ಆ ಪಾತ್ರದ ಮೂಲಕ ಸಮಕಾಲೀನ ಸಮಾಜವನ್ನು ಚಿಂತನೆಗೆ ಹಚ್ಚುವಂತಹ ವಿಚಾರಧಾರೆಗಳನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿಯೇ ಈ ಪೌರಾಣಿಕ ಕಥೆಯಲ್ಲಿ ನಾವು ಒಂದು ಸಮಕಾಲೀನ ಸಾಮಾಜಿಕ ಆಯಾಮವನ್ನೂ ಗುರುತಿಸಬಹುದಾಗಿದೆ. ಯಯಾತಿಯ ವಿಕ್ಷಿಪ್ತ ಮನಸ್ಥಿತಿಯ ಮುಖಾಂತರ ನಮ್ಮ ಸಮಾಜದ ಹುಳುಕುಗಳಿಗೆ ಕನ್ನಡಿ ಹಿಡಿದು ವಾಸ್ತವ ದರ್ಶನ ಮಾಡಿಸಿದಂತೆ ಕಚನ ಮಾತುಗಳ ಮುಖಾಂತರ ಆ ಹುಳುಕುಗಳನ್ನು ಸರಿಪಡಿಸಿ ಆತ್ಮಾನಂದವನ್ನು ಹೊಂದಬಲ್ಲ ಪಾರಮಾರ್ಥಿಕ ಹಾದಿಯ ಬಗ್ಗೆಯೂ ವಿವರಿಸುತ್ತದೆ ಈ ಕಥನ. ಅದೇ ಈ ಕೃತಿಯ ಹೆಗ್ಗಳಿಕೆ. ಕಾದಂಬರಿಯ ಕೊನೆಯಲ್ಲಿ ಲೇಖಕರು ಬರೆದಿರುವ ಹಿನ್ನೆಲೆಯನ್ನು (ಪಾರ್ಶ್ವಭೂಮಿ) ಮೊದಲು ಓದಿ ನಂತರ ಕಥೆಯೊಳಕ್ಕೆ ಇಳಿದರೆ ಇನ್ನಷ್ಟು ಸ್ಪಷ್ಟವಾಗಿ ಯಯಾತಿ, ಕಚ, ಶರ್ಮಿಷ್ಠೆ ಹಾಗೂ ದೇವಯಾನಿಯರು ಅರ್ಥವಾಗುತ್ತಾರೇನೋ ಎಂಬುದು ನನ್ನ ಅನಿಸಿಕೆ. 

ಈ ಕಾದಂಬರಿ ಓದಿದ ನಂತರ ನನ್ನನ್ನು ಬಹುವಾಗಿ ಕಾಡಿದ ಒಂದು ಪ್ರಶ್ನೆ 'ನಹುಷ ಮಹಾರಾಜನ ಮಕ್ಕಳು ಎಂದಿಗೂ ಸುಖವಾಗಿರಲಾರರು' ಎಂಬ ಶಾಪವಿಲ್ಲದೇ ಹೋಗಿದ್ದರೆ ಅಥವಾ ಆ ಶಾಪದ ಬಗ್ಗೆ ಯಯಾತಿಗೆ ಎಂದೂ ತಿಳಿಯದೇ ಹೋಗಿದ್ದರೆ ಆತ ಸಂತೃಪ್ತನಾಗಿರುತ್ತಿದ್ದನೇ ಎಂಬುದು. ನನಗನ್ನಿಸಿದ್ದು ಪ್ರಾಯಶಃ ಆಗಲೂ ಆತ ಅತೃಪ್ತನಾಗಿಯೇ ಉಳಿಯುತ್ತಿದ್ದ. ಕಾರಣ ಆತನ ಅತೃಪ್ತಿಯ ಮೂಲ ಅವನ ಕಡಿವಾಣವಿಲ್ಲದ ವಿಷಯಾಸಕ್ತಿಯೇ ಹೊರತು ಬೇರೇನೂ ಅಲ್ಲ. ಇಲ್ಲವಾದಲ್ಲಿ ತನ್ನ ಸ್ವಂತ ಮಗನ ಯೌವ್ವನದೊಂದಿಗೆ ತನ್ನ ವಾರ್ಧಕ್ಯವನ್ನು ಬದಲಾಯಿಸಿ ಇಂದ್ರಿಯ ಭೋಗವನ್ನು ಅನುಭವಿಸುವ ಯೋಚನೆ ಅವನ ಕನಸಿನಲ್ಲೂ ಕೂಡಾ ಸುಳಿಯುತ್ತಿರಲಿಲ್ಲ. ತಾನೇ ಆಡಿಸಿದ ತಾರಕೆ ಹಾಗೂ ತನ್ನ ಆತ್ಮೀಯ ಗೆಳೆಯನ ವಧು ಮಾಧವಿಯನ್ನೂ ಉಪಭೋಗಿಸುವಷ್ಟು ಮದಿರೆಯೊಳಗೆ ಮೈಮರೆಯುತ್ತಿರಲಿಲ್ಲ ಆತ.
ಒಟ್ಟಿನಲ್ಲಿ ಕ್ಷಣಿಕ ಸುಖ ನೀಡುವ ಭೌತಿಕ ವಿಷಯ ಲೋಲುಪತೆಗೂ ಅನಂತ ಸಂತೃಪ್ತಿ ಪಾಲಿಸುವ ಪಾರಮಾರ್ಥಿಕ ಆತ್ಮಾನಂದಕ್ಕೂ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರ್ಪಡಿಸುವ ಯಯಾತಿ ಆತ್ಮವಿಕಸನದ ದೃಷ್ಟಿಯಿಂದ ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ.