ಮಂಗಳವಾರ, ಜೂನ್ 23, 2020

ಅನೂಹ್ಯ 16

ಆ ದಿನ ಪೂರ್ತಿ ಮನೆಯಲ್ಲಿಯೇ ಉಳಿದ ಸಮನ್ವಿತಾಳಿಗೆ ಅಂದಿನ ಪಾರ್ಟಿಯ ತಯಾರಿಯೇ ವಿಶಿಷ್ಟವೆನಿಸಿತು. ಈ ಬಂಗಲೆಯ ಪಾರ್ಟಿಗಳು ಅವಳಿಗೆ ಹೊಸದಲ್ಲ. ಆ ಅಬ್ಬರದ ವಿದೇಶಿ ಸಂಗೀತ, ಆಲ್ಕೋಹಾಲ್ ಹೊಳೆ, ತಿಂದುಳಿದು ಬಿಸಾಡಬಹುದಾದಷ್ಟು ನಾನ್ ವೆಜ್ ಸಮಾರಾಧನೆ...... ಇವೆಲ್ಲಾ ಸರ್ವೇಸಾಮಾನ್ಯ.

ಆದರೆ ಇಂದಿನ ತಯಾರಿ ವಿಭಿನ್ನವೆಂದು ಅವಳ ಕಣ್ಣು, ಕಿವಿ ಹಾಗೂ ನಾಸಿಕಗಳು ಸಾರುತ್ತಿದ್ದವು. ಕಿವಿ ಹರಿಯುವ ಡಿ.ಜೆ ಬದಲಿಗೆ ಸುಮಧುರವಾದ ಶಾಸ್ತ್ರೀಯ ಆಲಾಪವೊಂದು ಮಂದ್ರಸ್ಥಾಯಿಯಲ್ಲಿ ಕೇಳಿಬರುತ್ತಿತ್ತು. ಅಲಂಕಾರಕ್ಕೆ ಬಳಸಲಾದ ಬಗೆಬಗೆಯ ಹೂಗಳ ಕಂಪು ಮನೆತುಂಬಾ ಪಸರಿಸಿತ್ತು. ಪಾಕಶಾಲೆಯಲ್ಲೂ ಭಾರತೀಯ ಖಾದ್ಯಗಳದೇ ಕಾರುಬಾರು...... ಅವಳಿಗೆ ಪ್ರಪಂಚದ ಎಂಟನೇ ಅದ್ಭುತವನ್ನು ಕಂಡಂತಾಯಿತು.

ಯಾವಾಗಲೂ ವಿದೇಶದ ಅಮಲಿನಲ್ಲಿ ಪರದೇಸಿಗಳಂತಾಡುವ ಮಿಸ್ಟರ್ ಅಂಡ್ ಮಿಸ್ಸೆಸ್ ರಾವ್ ಅವರು ಈ ರೀತಿಯ ಪಾರ್ಟಿಗಳನ್ನೂ ಆಯೋಜಿಸಬಲ್ಲರೇ? ಅವಳಿಗಂತೂ ನಂಬಲಸಾಧ್ಯವಾಯಿತು. 

ಇದೆಲ್ಲವನ್ನೂ ನೋಡಿ ಒಂದು ವಿಷಯ ಅವಳಿಗೆ ಸ್ಪಷ್ಟವಾಯಿತು......

something extraordinary is going to happen today....

ಆದರೆ ಹಾಗೆ ಸಂಭವಿಸಲಿರುವ ಘಟನೆ ನೇರವಾಗಿ ತನ್ನ ಬದುಕಿನೊಂದಿಗೆ ತಳುಕು ಹಾಕಿಕೊಂಡಿದೆ ಎಂಬುದರ ಪರಿವೆಯೇ ಇರಲಿಲ್ಲ ಆಕೆಗೆ. ಅದು ಶೀಘ್ರದಲ್ಲೇ ತನ್ನ ಮುಂದೆ ಅನಾವರಣಗೊಳ್ಳುವ ಪರಿಗೆ ತನ್ನ ಅಸ್ತಿತ್ವದ ಮೇಲೆಯೇ ಅಪನಂಬಿಕೆ ಹುಟ್ಟುವುದೆಂದೂ, ತಾಯ್ತಂದೆ ಎನಿಸಿಕೊಂಡವರನ್ನು ತನ್ನ ಜೀವನದಿಂದಲೇ ಅಳಿಸಿ ಹಾಕುವಷ್ಟು ಅಸಹ್ಯ ಆರಂಭವಾಗುವುದೆಂಬ ಸತ್ಯದ ಅರಿವಿಲ್ಲದೆ ಆರಾಮಾಗಿದ್ದಳು ಸಮನ್ವಿತಾ...

                   *****************

"ಆರ್ ಯೂ ರೆಡಿ ಸಮನ್ವಿತಾ" ಎಂದು ಕೇಳುತ್ತಲೇ ಒಳಬಂದ ಮಾಲಿನಿಯವರನ್ನು ಕಂಡು ಬಿಟ್ಟ ಕಣ್ಣು ಮುಚ್ಚದೇ ನೋಡುತ್ತಾ ಕುಳಿತುಬಿಟ್ಟಳು. 

ತನ್ನ ನೆನಪಿನಾಳವನ್ನೆಲ್ಲಾ ಕೆದಕಿ ಹುಡುಕಿದಳು. ಇಷ್ಟು ವರ್ಷಗಳಲ್ಲಿ ಎಂದಾದರೂ ಈಕೆ ಈ ಕೋಣೆಗೆ ಬಂದಿದ್ದಳೇ? ಇಲ್ಲವೆಂದಿತು ಅವಳ‌ ಬುದ್ಧಿ....

ಮಕ್ಕಳ ಕೋಣೆಗೆ ಬರುವುದು, ಅವರೊಂದಿಗೆ ಪ್ರೀತಿಯಿಂದ ನಾಲ್ಕು ಮಾತನಾಡುವುದು, ಅವರ ಬಗ್ಗೆ ವಿಚಾರಿಸುವುದೆಲ್ಲಾ ಮಕ್ಕಳನ್ನು ತಾಯ್ತಂದೆಯರ ಮೇಲೆ ಅವಲಂಬಿತರನ್ನಾಗಿಸುತ್ತದೆ. ಅವರಿಗೆ ಸ್ವಾತಂತ್ರ್ಯ ಕೊಡಬೇಕು, ಯಾರನ್ನೂ ಅವಲಂಬಿಸದೆ ಬದುಕುವುದು ಕಲಿಸಬೇಕು ಎಂಬುದು ಇವರ ಅಭಿಮತ. ಆದರೆ ಅದನ್ನು ಜಾರಿಗೆ ತಂದ ವಿಧಾನ ಮಾತ್ರ ಅತ್ಯದ್ಭುತ. 

"ವಾಟ್ ಈಸ್ ದಿಸ್? ವೈ ಆರ್ ಯು ಸೋ ಕೇರ್ ಲೆಸ್? ಯಾಕಿನ್ನೂ ರೆಡಿಯಾಗಿಲ್ಲ?" ಅವರ ಪ್ರಶ್ನೆಗಳ ಸರಮಾಲೆಗೆ ಉತ್ತರಿಸದೇ,

"ಮಾಮ್, ಆರ್ ಯು ಆಲ್ರೈಟ್?" ಮರುಪ್ರಶ್ನೆ ಹಾಕಿದಳು.

"ನಾನು ಸರಿಯಾಗೇ ಇದ್ದೀನಿ. ನೋಡು ಬೇಗ ರೆಡಿಯಾಗು. ಪಾರ್ಟಿ ಶುರುವಾಗೋ ಟೈಮಾಯ್ತು. ಅಂದಹಾಗೆ ತಗೋ ಇದ್ರಲ್ಲಿ ಡ್ರೆಸ್ ಮತ್ತೆ ಮ್ಯಾಚಿಂಗ್ ಜ್ಯುವೆಲ್ಸ್ ಇದೆ. ಬ್ಯೂಟೀಷಿಯನ್ ನ ಕಳಿಸುತ್ತೀನಿ. ಅವ್ರು ರೆಡಿ ಮಾಡ್ತಾರೆ....." ಇನ್ನೇನು ಹೇಳಲಿದ್ದರೇನೋ....

"ಮಮ್ಮಿ, ನಾನಾಗ್ಲೇ ಹೇಳಿದ್ದೆ. ನಂಗೆ ಪಾರ್ಟೀಸ್ ಅಂದ್ರೆನೇ ಅಲರ್ಜಿ. ನಿನ್ನೆಯಿಂದ ಚೈತಾಲಿ ಕಾಟ, ನಿಮ್ಮ ನಾಟಕ ನೋಡೋಕಾಗ್ದೆ ಬರ್ತೀನಿ ಅಂದಿದ್ದು. ಈಗ ನನ್ನ ಪಾಡಿಗೆ ನನ್ನ ಬಿಟ್ರೆ ಬರ್ತೀನಿ. ಇದೇ ಬಟ್ಟೆ, ಅದೇ ಒಡವೆ, ಹೀಗೆ ಮೇಕಪ್ ಅಂತೇನಾದ್ರೂ ಇದ್ರೆ ನಿಮಗೊಂದು ದೊಡ್ಡ ನಮಸ್ಕಾರ. ನಿಮ್ಮ ಪಾರ್ಟಿ ನೀವೇ ಮಾಡ್ಕೋಳಿ. ನೀವೊಂದು ಕೆಲ್ಸ ಮಾಡಿ ಅಲ್ಲಿ ಹೇಗೆ ಬಿಹೇವ್ ಮಾಡ್ಬೇಕು, ಎಲ್ಲಿ ನಿಲ್ಲಬೇಕು, ಏನ್ ಮಾತಾಡ್ಬೇಕು, ಹೇಗೆ ತಿನ್ನಬೇಕು ಅನ್ನೋದ್ರದ್ದೂ ಒಂದು ಚಾರ್ಟ್ ಮಾಡಿ ಕೊಟ್ಟುಬಿಡಿ. ಜೀವನ ಪಾವನ ಆಗುತ್ತೆ. ಅದೆಲ್ಲಾ ಇರಲಿ...‌.. ಇಷ್ಟು ದಿನ ನಾನು ಬದ್ಕಿದ್ದೀನಾ ಇಲ್ಲಾ ಸತ್ತಿದೀನಾ ಅಂತ ಕೇಳೋರೂ ಗತಿ ಇರ್ಲಿಲ್ಲ. ಅದೇನು ನಿನ್ನೆಯಿಂದ ಮಗಳ ಮೇಲೆ ಪ್ರೀತಿ ಉಕ್ಕಿ ಹರೀತಿದೆ? ಏನೋ ಮಾಸ್ಟರ್ ಪ್ಲಾನ್ ತಯಾರಾಗ್ತಿರೋ ಹಾಗಿದೆ?" ಅವಳ ಹರಿತವಾದ ಮಾತಿಗೆ ಹೆದರಿ,

"ಅಯ್ಯೋ ಹಾಗೇನಿಲ್ಲಪ್ಪ. ನಿನಗೆ ಬೇಕಾದ ಹಾಗೆ ಇರಮ್ಮ" ಅಂದವರೆ ಅವಳ ಉತ್ತರಕ್ಕೂ ಕಾಯದೇ ಒಡವೆ, ವಸ್ತ್ರಗಳ ಸಮೇತ ಅವಳ ರೂಮಿನಿಂದ ಕಾಲ್ಕಿತ್ತರು ಮಾಲಿನಿ. ಅವರಿಗೆ ಗಂಡ ಹೇಳಿದ ಮಾತುಗಳು ನೆನಪಿತ್ತು. 'ಹಾಳಾದ ಹುಡುಗಿ ಹೇಳಿದಂತೆ ಮಾಡೋಳೆ……  ಹೇಗಾದ್ರೂ ಪಾರ್ಟಿ ಅಟೆಂಡ್ ಆದ್ರೆ ಸಾಕಪ್ಪ. ಇವಳ ದೆಸೆಯಲ್ಲಿ ಪ್ಲಾನ್ ಫ್ಲಾಪ್ ಆದ್ರೆ ಕಷ್ಟ' ಎಂದುಕೊಂಡರು.

ಅವರು ಹಾಗೆ ಮರುನುಡಿಯದೆ ಓಡಿದ ಪರಿಗೆ ಮತ್ತದೇ ಅನುಮಾನದಲ್ಲಿ ಬಿದ್ದಳು ಸಮನ್ವಿತಾ.

ಎಲ್ಲೋ ಏನೋ ತಪ್ಪಾಗಿದೆಯಾ.... ಅವಳ‌ ಮನ ಮತ್ತೆ ಮತ್ತೆ ಪ್ರಶ್ನಿಸತೊಡಗಿತು. 

ಆದರೆ ಯೋಚಿಸುತ್ತಾ ಕುಳಿತುಕೊಳ್ಳಲು ಸಮಯವಿರಲಿಲ್ಲ. ಬೇಗ ಬೇಗ ತಯಾರಾಗತೊಡಗಿದಳು. ಅದರರ್ಥ ಅವಳಿಗೆ ಪಾರ್ಟಿಗೆ ಹೋಗುವ ಆಸೆ ಎಂದಲ್ಲಾ..... ತಾನಿನ್ನೂ ಹೊರಡದಿದ್ದರೆ ಇನ್ಯಾವ ಹೊಸ ನಾಟಕ ಪ್ರದರ್ಶನ ಆರಂಭವಾಗುವುದೋ ಎಂಬ ಭಯವಿತ್ತು ಅವಳಿಗೆ...

               ******************

ಅಂತೂ ರಾವ್ ದಂಪತಿಗಳು ಕಾತುರದಿಂದ ಕಾಯುತ್ತಿದ್ದ ಸಮಯ ಬಂದೇಬಿಟ್ಟಿತು. ಪಾರ್ಟಿ ಆರಂಭವಾಗಿತ್ತು. ಅತಿಥಿಗಳು ಆಗಮಿಸುತ್ತಿದ್ದರು. ಆದರೆ ಇವರು ನಿರೀಕ್ಷಿಸುತ್ತಿದ್ದ ವ್ಯಕ್ತಿಗಳು ಇನ್ನೂ ಬಂದಿರಲಿಲ್ಲ. ಬಂದವರನ್ನೆಲ್ಲಾ ಮಾತನಾಡಿಸುತ್ತಿದ್ದರೂ ಅವರ ಕಣ್ಣುಗಳು ಬರುವವರ ನಿರೀಕ್ಷೆಯಲ್ಲಿಯೇ ಇತ್ತು. ಈ ಪಾರ್ಟಿಗೆ ಅವರ ರೆಗ್ಯುಲರ್ ಗೆಳೆಯರಿಗೆ ಆಮಂತ್ರಣವಿರಲಿಲ್ಲ. ಹೇಳಿಕೇಳಿ ಅವರೆಲ್ಲಾ ಗುಂಡು ತುಂಡಿನ ಗೆಳೆಯರು. ಆದರೆ ಈ ಕೂಟ ಬಹಳ ಸಂಸ್ಕಾರಯುತವಾಗಿರಬೇಕಿತ್ತು. ಏಕೆಂದರೆ ಶರ್ಮಾ ಪರಿವಾರ ಅಂತಹ ಡಾಂಭಿಕ ಪಾರ್ಟಿಗಳಿಂದ ಬಲುದೂರ. 

ರಾವ್ ದಂಪತಿಗಳ ಮಾತಿನಲ್ಲೇ ಹೇಳಬೇಕೆಂದರೆ "Sharma's are very boring and unfit to live in hi society" 

ಆದರೂ ಅವರಿಗೋಸ್ಕರ ಈ ಪಾರ್ಟಿ ಏಕೆ ಎಂದಿರಾ…..?  because Sharma's are more powerful than Rao's

ಇದೇ ಹಣವಂತರ ಲೆಕ್ಕಾಚಾರ. ಇಲ್ಲಿ ಎಲ್ಲಾ ಸಂಬಂಧಗಳ ಮೂಲ ಹಣ ಅಷ್ಟೇ. ಹಣದಿಂದಲೇ ಆರಂಭ ಅದರಿಂದಲೇ ಅಂತ್ಯ. 

ರಾವ್ ದಂಪತಿಗಳಿಗೆ ಜೀವನದಲ್ಲಿ ಪ್ರಪ್ರಥಮವಾಗಿ ಪಾರ್ಟಿ ಬೇಸರ ತರಿಸತೊಡಗಿತು. ತಮ್ಮ ನಿತ್ಯದ ಗೆಳೆಯರ ಬಳಗವಿಲ್ಲ, ಗುಂಡಿನ ನಶೆಯಿಲ್ಲ, ಹಾಡು ಕುಣಿತಗಳಿಲ್ಲ, ಚೆಂದದ ಲಲನೆಯರಿಲ್ಲ, ತಮ್ಮ ನೃತ್ಯ ಕೌಶಲ ಪ್ರದರ್ಶಿಸುವ ಎಂದರೆ ಆ ಡಿ.ಜೆ ಯೂ ಇಲ್ಲ....... ಛೇ....!! ಇದೆಂಥಾ ಪಾರ್ಟಿಯೋ…! ಶರ್ಮಾರನ್ನು ಒಲಿಸಿಕೊಳ್ಳಬೇಕಲ್ಲಾ ಅನ್ನೋ ಒಂದೇ ಕಾರಣಕ್ಕೆ ಎಲ್ಲಾ ಸಹಿಸಿಕೊಂಡು ನಗುಮುಖದಿಂದ ಓಡಾಡುತ್ತಿದ್ದರಷ್ಟೇ.

ಇನ್ನೊಂದೆಡೆ ಸಮನ್ವಿತಾಳಿಗೆ ಜೀವನದಲ್ಲಿ ಪ್ರಪ್ರಥಮವಾಗಿ ಪಾರ್ಟಿಯೊಂದು ಸಂತಸ ತಂದಿತ್ತು. ಪ್ರತಿಯೊಂದು ವಿಷಯವೂ ಖುಷಿ ಕೊಟ್ಟಿತು. ಎಲ್ಲವನ್ನೂ ಆಸ್ವಾದಿಸುತ್ತಾ ಪರಿಚಯವಿದ್ದ ಕೆಲವರೆಡೆ ಒಂದು ನಸುನಗು ಹರಿಸುತ್ತಾ ಮುನ್ನಡೆಯುತ್ತಿದ್ದಳು. 

ಮೆರೂನ್ ಕೋಟಾ ಸಿಲ್ಕ್ ಸೀರೆಗೆ ಅದೇ ಬಣ್ಣದ ಉದ್ದ ತೋಳಿನ ರವಿಕೆ, ಕೈಗೆರೆಡು ಬಳೆಗಳು, ಕಿವಿಗೊಂದು ಜುಮ್ಕಿ, ಕತ್ತಿನಲ್ಲಿ ಮುತ್ತಿನಹಾರ, ಕೂದಲನ್ನೆಲ್ಲಾ ಸೇರಿಸಿ ಕ್ಲಿಪ್ ಹಾಕಿ, ಹಣೆಗೊಂದು ಬೊಟ್ಟು…… ಇಷ್ಟೇ ಅವಳ ಅಲಂಕಾರ.

ಅವಳನ್ನು ಕಂಡು ಮಾಲಿನಿ ಹಣೆಗೆ ಕೈಯೊತ್ತಿ "ನಮ್ಮ ಮರ್ಯಾದೆ ತೆಗೆಯೋಕಂತಲೇ ಹುಟ್ಟಿದ್ದಾಳೆ ಇವಳು. ಇವಳನ್ನು ನೋಡಿದ್ರೆ ನಮ್ಮ ಮನೆ ಕೆಲಸದೋಳ ಮಗಳೇನೋ ಅಂದ್ಕೋತಾರೆ. ಸೀರೇನೆ ಉಡ್ಬೇಕು ಅಂತಿದ್ರೆ ಯಾವ್ದಾದ್ರೂ ಫ್ಯಾನ್ಸಿ ಸೀರೆ ಉಡೋದು ಬಿಟ್ಟು ಅದೇನು ಸುತ್ತಿಕೊಂಡಿದಾಳೇನೋ. ಒಂದು ಮೇಕಪ್ ಇಲ್ಲ ಏನಿಲ್ಲ. ಛೀ…..! ಮಾತಾಡಿದ್ರೆ ನಾನು ಬರೋದೇ ಇಲ್ಲಾ ಅಂತಾಳೇ" ಹಳಿದರು.

ರಾವ್ ಅವರು ಕೋಪವನ್ನು ಹತ್ತಿಕ್ಕುತ್ತಾ, " ಹೋಗ್ಲಿ ಬಿಡು.ಹೇಗಾದ್ರೂ ಇರಲಿ. ಆದ್ರೆ ಶರ್ಮಾ ಕುಟುಂಬ ಬಂದು ಹೋಗೋವರೆಗೂ ಅವಳು ಇಲ್ಲಿರಲೇಬೇಕು. ಅಷ್ಟು ನೋಡ್ಕೋ" ಎಂದವರ ಮುಖದಲ್ಲಿ ಒಂದು ಕುಟಿಲ ನಗುವಿತ್ತು.

ಇದಾವುದರ ಅರಿವಿಲ್ಲದೇ ಸಮನ್ವಿತಾ ಒಂದೆಡೆ ಕುಳಿತು ಗಜ಼ಲ್ ಆಲಿಸುತ್ತಾ ಹೂವಿನ ಅಲಂಕಾರವನ್ನು ನೋಡುವುದರಲ್ಲಿ ಮಗ್ನಳಾಗಿದ್ದಳು. ಅಲ್ಲೇ ಓಡಾಡುತ್ತಿದ್ದ ಚೈತಾಲಿ ಕಣ್ಣಿಗೆ ಬಿದ್ದಾಗ ಅವಳನ್ನು ಕರೆದು ಮಾತಿಗೆತೊಡಗಿದಳು.

                 ********************

"ನಾನು ಆಗ್ಲೇ ಹೇಳಿದ್ದೆ ಬೇಗ ಹೊರಡೋಣ ಅಂತ. ಈಗ್ನೋಡು, ಎಷ್ಟೊಂದು ಲೇಟಾಯ್ತು" ಎಂದ ಆಕೃತಿಗೆ

"ಲೇ ಕೋತಿ, ಸುಮ್ಮನೆ ಇರ್ತೀಯಾ ಇಲ್ಲಾ ಕಾರಿಂದ ಎತ್ತಿ ಹೊರಗೆ ಎಸೀಲಾ? ನಮ್ಗೇ ಇಲ್ದೀರೋ ಟೆನ್ಷನ್ ಇವ್ಳಿಗೆ" ಗದರಿದ ಅಭಿರಾಮ್.

"ಇಂಥಾ ಪಾರ್ಟಿಗಳಿಗೆ ಲೇಟಾಗಿ ಹೋದ್ರೇನೆ ಒಳ್ಳೇದು ಮಗಳೇ" ಸಚ್ಚಿದಾನಂದ ಶರ್ಮಾ ಹೇಳಿದಾಗ "ಅರ್ಥ ಆಯ್ತಾ ಕೋತಿ" ಮತ್ತೆ ಅಣಕಿಸಿದ. ಅಣ್ಣ ತಂಗಿಯರ ಜಗಳ್ಬಂದಿಯಲ್ಲಿ ಅಂತೂ ಇಂತೂ ಕಾರು ರಾವ್ ಮ್ಯಾನ್ಶನ್ ತಲುಪಿತ್ತು. ಪಾರ್ಕಿಂಗ್ ಏರಿಯಾದಿಂದ ಮನೆಯೊಳಗೆ ಹೋಗುವ ಮುನ್ನ, 

"ಅನಾವಶ್ಯಕ ಮಾತುಗಳು ಅಪಾಯಕ್ಕೆ ಆಹ್ವಾನ ನೀಡಿದಂತೆ. ನೆನಪಿರಲಿ" ಎಚ್ಚರಿಸುವವನಂತೆ ಹೇಳಿದ್ದು ಅಭಿರಾಮ್.

ಅವರ ಬರುವಿಕೆಗೇ ಕಾದಿದ್ದಂತೆ ಒಳ ಪ್ರವೇಶಿಸಿದೊಡನೆ ಅತಿಯಾದ ಆತ್ಮೀಯತೆಯನ್ನು ಪ್ರದರ್ಶಿಸುತ್ತಾ ಸ್ವಾಗತಿಸಿದರು ರಾವ್ ದಂಪತಿ.

"welcome welcome, ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂತೆ ಆಯಿತು. ತುಂಬಾ ಸಂತೋಷವಾಯಿತು ನೀವು ಪರಿವಾರ ಸಮೇತ ಬಂದಿದ್ದು" ತಮ್ಮೆಲ್ಲಾ ಹಲ್ಲುಗಳನ್ನು ಪ್ರದರ್ಶಿಸುತ್ತಾ ಸತ್ಯಂ ರಾವ್ ಹೇಳುತ್ತಿದ್ದರೆ ಶರ್ಮಾ ಪರಿವಾರಕ್ಕೆ ಆ ತೋರಿಕೆ ಉಸಿರುಗಟ್ಟಿಸಿದಂತಾಯಿತು. ಅದೆಷ್ಟೇ ಸಿರಿವಂತರಾದರೂ ಸಚ್ಚಿದಾನಂದ ಶರ್ಮಾ ತಮ್ಮ ಪರಿವಾರವನ್ನು ಇಂತಹ ಸೋಗಿನ ಜನರಿಂದ ದೂರವಿಟ್ಟಿದ್ದರು.

ಅವರ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ಮೃದುಲಾ, ಆಕೃತಿ ಸುಮ್ಮನೆ ನಕ್ಕರೆ, ಅಭಿರಾಮ್ ನಿಜಕ್ಕೂ ನೀವು ಬಡವರೇ ಗುಣದಲ್ಲಿ ಎಂದುಕೊಂಡ. ಸಚ್ಚಿದಾನಂದರು ನಕ್ಕು, "ನಿಮ್ಮಂಥಾ ಬಡವರು ದೇಶದಲ್ಲಿದ್ರೆ ಬಡತನ ಅಳೆಯುವ ಮಾನದಂಡ ಬದಲಾಯಿಸಬೇಕಾಗುತ್ತೆ ರಾವ್" ಎಂದರು. 

ಮಾಲಿನಿ ಮೃದುಲಾರ ಕೈ ಹಿಡಿದುಕೊಂಡು ಅತೀವ ಸ್ನೇಹ ತೋರುತ್ತಾ, "ಬಹಳ ಸಂತೋಷ ಆಯ್ತು ನೀವು ಬಂದಿದ್ದು. ಹೀಗೆ ಭೇಟಿಯಾಗ್ತಿದ್ರೆ ತಾನೇ ಸ್ನೇಹ ಗಟ್ಟಿಯಾಗೋದು. ಆಕೃತಿ ಪುಟ್ಟ ಹೇಗಿದ್ದೀ? ಎಷ್ಟು ಲಕ್ಷಣವಾಗಿದ್ದೀಯ. ಸಣ್ಣವಳಿದ್ದಾಗ ನೋಡಿದ್ದು" ಅಂದಾಗ ನಸುನಕ್ಕಳವಳು.

"ಸರಿಯಾಗಿ ಹೇಳಿದೆ ಮಾಲತಿ, ಯಾವಾಗ್ಲೋ ಒಮ್ಮೊಮ್ಮೆ ಭೇಟಿಯಾಗ್ತಿದ್ರೆ ಸಂಬಂಧಗಳು ಉಳ್ಕೊಳ್ಳೋದಿಲ್ಲ. ಆವಾಗಾವಾಗ ನಾವು ನಿಮ್ಮಲ್ಲಿಗೆ, ನೀವು ನಮ್ಮಲ್ಲಿಗೆ ಬರ್ತಾ ಇದ್ರೆ ಮಕ್ಕಳ ನಡುವೆಯೂ ಪರಿಚಯವಿರುತ್ತದೆ." ಹೇಳಿದವರು ಅಭಿರಾಮ್ ಬೆನ್ನು ತಟ್ಟಿ, "ಏನಪ್ಪಾ ಯುವರಾಜ, ಹೇಗಿದ್ದೀಯಾ?" ಎಂದರು ರಾವ್.

"ಇಲ್ಲಿಯತನಕ ಎಲ್ಲಾ ಕ್ಷೇಮ. ಮುಂದೇನೋ ಗೊತ್ತಿಲ್ಲ ಅಂಕಲ್" ನಗುತ್ತಾ ಹೇಳಿದ.

"ಮುಂದೆನೂ ಹೀಗೆ ಇರ್ತೀಯಾ ಬಿಡು. ಹುಲಿ ನೀನು" ಎಂದವರಿಗೆ

"ನಾನೇನೋ ಹುಲಿನೇ…… ಆದ್ರೆ ನಮ್ಮ ಫೀಲ್ಡಲ್ಲಿ ಗುಳ್ಳೆನರಿಗಳ ಕಾಟ ಜಾಸ್ತಿ" ಅವನ ನುಡಿ ಹರಿತವಾಗಿತ್ತಾದರೂ ಅದರ ಗೂಢಾರ್ಥ ಅರಿವಾಗಲಿಲ್ಲ ರಾವ್ ಅವರಿಗೆ.

ತಾನೇ ವಿಷಯಾಂತರಿಸುತ್ತಾ, "ಐ ಮಸ್ಟ್ ಸೇ, ಪಾರ್ಟಿ ಬಹಳ ಚೆನ್ನಾಗಿ ಅರೇಂಜ್ ಮಾಡಿದ್ದೀರಾ ಅಂಕಲ್. ನಿಮ್ಮ ರೆಗ್ಯುಲರ್ ಪಾರ್ಟಿಗಳಿಗಿಂತ ಬಹಳ ಡಿಫರೆಂಟಾಗಿದೆ" ಹೇಳಿದ.

ಅವನ ಮಾತನ್ನು ಅನುಮೋದಿಸಿ ಸಚ್ಚಿದಾನಂದ ಅವರೂ "ಯು ಆರ್ ರೈಟ್ ಅಭಿ. ಬಹಳ ಒಳ್ಳೆ ಅಭಿರುಚಿ ರಾವ್ ನಿಮ್ಮದು" ಎಂದರು.

ರಾವ್ ಅವರಿಗೆ ತಮ್ಮ ಕಾರ್ಯಸಾಧನೆಗೆ ಇದೇ ಸುಸಂದರ್ಭ ಎನಿಸಿತು. "ಇವತ್ತಿನ ಪಾರ್ಟಿಯ ಎಲ್ಲಾ ಅರೇಂಜ್ಮೆಂಟ್ ನನ್ನ ಮಗಳದ್ದು. ಪ್ಲಾನ್ ನಿಂದ ಹಿಡಿದು ಎಕ್ಸಿಕ್ಯೂಷನ್ ತನಕ ಎಲ್ಲಾ ಕ್ರೆಡಿಟ್ ಅವಳಿಗೇ" ಎಂದು ಹಗಲು ರಾತ್ರಿ ಕಷ್ಟಪಟ್ಟ ಚೈತಾಲಿಯ ಕೆಲಸದ ಕ್ರೆಡಿಟ್ ಅನ್ನು ಮಗಳಿಗೆ ಕೊಟ್ಟು, "ಅಂದಹಾಗೆ ನೀವು ನನ್ನ ಮಗಳನ್ನು ಮೀಟ್ ಆಗಿಲ್ಲ ಅಲ್ವಾ?" ಕೇಳಿದವರು ಮಗಳಿಗಾಗಿ ಸುತ್ತಲೂ ಅರಸುತ್ತಿದ್ದರೆ, 

"ಯಾರ ಹತ್ರನೋ ಮಾತಾಡ್ತಿರ್ಬೇಕು. ಕರೀತೀನಿ ಇರಿ" ಎಲ್ಲೂ ಕಾಣದವಳನ್ನು ಮನದಲ್ಲೇ ಶಪಿಸುತ್ತಾ ಹುಡುಕಿಹೊರಟರು ಮಾಲಿನಿ. ಈ ಮನುಷ್ಯ, ಇವನ ಹೆಂಡತಿ ಸಾಲದು ಅಂತ ಇವನ ಮಗಳ ಟಾರ್ಚರ್ ಬೇರೆ ತಡ್ಕೋಬೇಕಾ ಎಂದುಕೊಂಡ ಅಭಿರಾಮ್.

ಲಾನ್ ಬಳಿ ಚೈತಾಲಿಯೊಂದಿಗೆ ಮಾತನಾಡುತ್ತಿದ್ದವಳನ್ನು ಕರೆದರು. 

"ಏನು ಮಮ್ಮೀ?" ಅಲ್ಲಿಂದಲೇ ಕೇಳಿದವಳಿಗೆ ನಾಲ್ಕು ಬಾರಿಸುವ ಮನಸ್ಸಾದರೂ ಅದು ಸಾಧ್ಯವಿಲ್ಲವೆಂಬುದು ತಿಳಿದ ವಿಷಯ. ಏನಾದರಾಗಲೀ ಬಂದ ಕೆಲಸ ನೋಡೋಣ ಎಂದುಕೊಂಡವರು

"ಕೆಲವು ಇಂಪಾರ್ಟೆಂಟ್ ಗೆಸ್ಟ್ ಗಳನ್ನು ಮೀಟ್ ಮಾಡಿಸಬೇಕು ಬಾ" ಚೈತಾಲಿ ಕಡೆಗೆ ಉರಿನೋಟ ಬೀರುತ್ತಾ ಹೇಳಿದರು. 

ಚೈತಾಲಿ "ಪ್ಲೀಸ್ ಹೋಗಿ ಮ್ಯಾಮ್, ಇಲ್ಲಾಂದ್ರೆ ನನಗೆ ಬೈತಾರೆ" ಪಿಸುನುಡಿದಾಗ ಅವಳ ಪೆಚ್ಚು ಮುಖ ನೋಡಲಾರದೆ ಅವಳನ್ನು ಅಲ್ಲಿಂದ ಕಳಿಸಿ ತಾನು ಮಾಲಿನಿಯೊಂದಿಗೆ ಹೊರಟಳು.

ಅವರಿಬ್ಬರೂ ಶರ್ಮಾ ಪರಿವಾರವಿದ್ದಲ್ಲಿಗೆ ಬಂದಾಗ ರಾವ್ ಅವಳ ಕೈ ಹಿಡಿದು, "ಮೀಟ್ ಮೈ ಸ್ವೀಟ್ ಡಾಟರ್ ಸಮನ್ವಿತಾ…… ಸಮನ್ವಿತಾ ದಿಸ್ ಈಸ್ ಮಿಸ್ಟರ್ ಎಂಡ್ ಮಿಸ್ಸೆಸ್ ಶರ್ಮಾ. ಇವರ ಮಕ್ಕಳು ಅಭಿರಾಮ್ ಎಂಡ್ ಆಕೃತಿ ಶರ್ಮಾ" ಒಂದೇ ಏಟಿಗೆ ಪರಿಚಯಿಸಿದರು.

ತನ್ನೆದುರು ನಗುತ್ತಾ ನಿಂತಿದ್ದ ದಂಪತಿಗಳನ್ನು ನೋಡಿದ್ದೆ ಅಪ್ರಯತ್ನವಾಗಿ ಕೈಜೋಡಿಸಿದಳು ಸಮನ್ವಿತಾ. ಅವಳು ಯಾರ ಮಾತನ್ನೂ ಕೇಳುವವಳಲ್ಲ. ತನ್ನ ಮನಸ್ಸಿಗೆ ಯಾವುದು ಸರಿಯೆನಿಸುವುದೋ ಅದನ್ನು ಮಾತ್ರವೇ ಮಾಡುವಾಕೆ. ಅದೇಕೋ ಅವರಿಬ್ಬರನ್ನೂ ಕಂಡು ಮನಸ್ಸಿಗೆ ಮುದವೆನಿಸಿತ್ತು. ಅರಿವಾಗದ ಆತ್ಮೀಯತೆಯ ಅಲೆಯೊಂದು ಅವಳಲ್ಲಿ ತೇಲಿತ್ತು. 

ಅವಳ ಮಾತಿಗೆ ನಸುನಕ್ಕು ಪ್ರತಿವಂದಿಸಿದ ಸಚ್ಚಿದಾನಂದ, ಮೃದುಲಾ ಮತ್ತು ಆಕೃತಿ ಅವಳನ್ನು ಕಂಡು ಅಚ್ಚರಿಗೊಂಡಿದ್ದರು. ರಾವ್ ದಂಪತಿಗಳ ಮಗಳ ಬಗ್ಗೆ ಅವರು ಕಲ್ಪಿಸಿಕೊಂಡಿದ್ದ ಚಿತ್ರವೇ ಬೇರೆಯದು. ಆದರೆ ಎದುರು ಕೈಜೋಡಿಸಿ ನಸುನಗುತ್ತಿದವಳ ನಿಲುವಿನಲ್ಲೊಂದು ಪ್ರಬುದ್ಧತೆಯಿತ್ತು. ಆ ಕಣ್ಣುಗಳಲ್ಲಿ ಅಪಾರ ಶಾಂತಿಯಿತ್ತು. ಅವಳಲ್ಲಿ ನಿಷ್ಕಪಟತೆಯ ಹೊರತು ಕುಟಿಲತೆಯ ಲವಲೇಶವೂ ಕಾಣಲಿಲ್ಲ. 

"ನಿನ್ನನ್ನು ನೋಡಿ ತುಂಬಾ ಸಂತೋಷವಾಯಿತಮ್ಮ" ತಲೆಸವರಿ ನುಡಿದರು ಮೃದುಲಾ.

"ಇನ್ನು ಇವರು ನಿನ್ನ ಜವಾಬ್ದಾರಿ. ಅವರಿಗೆ ಬೋರಾಗದಂತೆ ನೋಡ್ಕೋ"  ರಾವ್ ದಂಪತಿಗಳು ತಮ್ಮ ಪ್ಲಾನಿನ ಮೊದಲ ಹಂತ ಯಶಸ್ವಿಯಾದ ಖುಷಿಯಲ್ಲಿ ಅಲ್ಲಿಂದ ಕಾಲ್ತೆಗೆದರು.

ಕೆಲ ಸಮಯದಲ್ಲೇ ಅವರ ನಡುವೆ ಆತ್ಮೀಯತೆ ಬೆಳೆದಿದ್ದು ವಿಸ್ಮಯವೋ ಮತ್ತೇನೋ, ಅಂತೂ ಎಷ್ಟೋ ವರ್ಷಗಳ ಪರಿಚಿತರಂತೆ ಹರಟಿದ್ದರು ಸಮನ್ವಿತಾ, ಮೃದುಲಾ ಹಾಗೂ ಆಕೃತಿ. ಅದರಲ್ಲಿ ಸಂಪೂರ್ಣ ಭಾಗಿಯಾಗಿ ನಡುನಡುವೆ ತಮ್ಮದೊಂದು ಮಾತು ಸೇರಿಸುತ್ತಿದ್ದರು ಸಚ್ಚಿದಾನಂದ. 

ಆದರೆ...........

ಅವರ ಮಾತು, ಹರಟೆಯೆಡೆಗೆ ಗಮನವೇ ಇಲ್ಲದೆ, ಸುತ್ತಮುತ್ತಲಿನ ಪರಿವಿಲ್ಲದವನಂತೆ ಇದ್ದವನು ಅಭಿರಾಮ್. ಆಗಾಗ ಅವರು ಕೇಳಿದ್ದಕ್ಕೆ ಉತ್ತರಿಸುವುದನ್ನು ಬಿಟ್ಟರೆ ಅವನು ಮೌನವಾಗಿದ್ದ. ಮೌನವಾಗಿದ್ದ ಎನ್ನುವುದಕ್ಕಿಂತ ಅವನು ತೀವ್ರವಾದ ಆಲೋಚನೆಗೆ ಬಿದ್ದಿದ್ದ...... ಹಾಗೆ ಯೋಚಿಸುತ್ತಿದ್ದವನ ನೋಟ ಆಗಾಗ ಸಮನ್ವಿತಾಳನ್ನು ಮುತ್ತಿಕ್ಕುತ್ತಿತ್ತು. ಆದರೆ ತಮ್ಮ ಮಾತಿನ ಲಹರಿಯಲ್ಲಿ ಕಳೆದುಹೋಗಿದ್ದವರು ಇದ್ಯಾವುದನ್ನೂ ಗಮನಿಸಲಿಲ್ಲ. 

ರಾವ್ ದಂಪತಿಗಳು ಅವರತ್ತ ಬಂದು, "ಬೇರೆ ಗೆಸ್ಟ್ ಗಳನ್ನು ಮಾತನಾಡಿಸುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ" ಎಂದಾಗಲೇ ಅವರಿಗೆ ಸಮಯದ ಅರಿವಾದದ್ದು.

"ಅಯ್ಯೋ ಇಷ್ಟು ಹೊತ್ತಾಯ್ತಾ? ಗೊತ್ತೇ ಆಗ್ಲಿಲ್ಲ. ಸಮನ್ವಿತಾ ಹತ್ತಿರ ಮಾತಾಡ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ" ಎಂದು ಎದ್ದರು ಸಚ್ಚಿದಾನಂದ.

"ಹೌದು ಪುಟ್ಟಾ. ನಿನ್ ಹತ್ರ ಮಾತಾಡ್ತಾ ಟೈಮೇ ನೋಡ್ಲಿಲ್ಲ ನೋಡು ನಾವು. ಅಭೀ ನೀನಾದ್ರೂ ಹೇಳೋದಲ್ವೇನೋ" ಮಗನೆಡೆ ನೋಡಿದರು ಮೃದುಲಾ.

"ಅದು…... ನೀವು ಮಾತಾಡೋದ್ರಲ್ಲಿ ಮುಳುಗಿದ್ರಿ. ಏನೋ ಖುಷಿಲೀ ಮಾತಾಡ್ತಿರೋರನ್ನ ನಾನ್ಯಾಕೆ ಡಿಸ್ಟರ್ಬ್ ಮಾಡ್ಲೀ ಅಂತ ಸುಮ್ಮನಾದೆ" ಎಂದನಾದರೂ ಹೇಳಿದ್ದು ಸುಳ್ಳೆಂದು ಅವನಿಗೆ ತಿಳಿದಿತ್ತು.

"ನಿಮ್ಗೆ ಬೋರ್ ಆಗ್ಲಿಲ್ಲ ಅಂದ್ಕೋತೀವಿ." ಮಾಲಿನಿಯವರ ಮಾತಿಗೆ "ಖಂಡಿತಾ ಇಲ್ಲಾ. ನಿಮ್ಮ ಮಗಳ ಜೊತೆ ಮಾತಾಡಿ ತುಂಬಾ ಖುಷಿಯಾಯ್ತು. ನೀವು ಕರೀಲಿಲ್ಲ ಅಂದಿದ್ರೆ ಬಹುಶಃ ಬೆಳಿಗ್ಗೆವರೆಗೂ ಮಾತಾಡ್ತಿದ್ವೇನೋ" ಎಂದ ಮೃದುಲಾ, ಸಮನ್ವಿತಾಳ ಕೈಹಿಡಿದು,

"ನಮ್ಮನೆಗೆ ಯಾವಾಗ ಬರ್ತೀಯಾ ಪುಟ್ಟಾ?" ಅಕ್ಕರೆಯಿಂದ ಕೇಳಿದ್ದರು. ಅದಕ್ಕೆ ಆಕೃತಿಯ ಒತ್ತಾಯವೂ ಸೇರಿ, "ಸರಿ ಬರ್ತೀನಿ ಸಧ್ಯದಲ್ಲೇ" ಎಂದಳು. 

ಆಕೃತಿ "ಮತ್ತೆ ಮತ್ತೆ ನೆನಪಿಸುತ್ತೇನೆ, ಬರೋವರೆಗೂ ಬಿಡಲ್ಲ" ಎಂದು ಸಮನ್ವಿತಾಳ ನಂಬರ್ ತಗೊಂಡಳು.

ಇವರೆಲ್ಲಾ ಪಾರ್ಟಿಯಿಂದ ಹೊರಟಾಗ ಕಾರಿನವರೆಗೂ ಬಂದು ಬಿಳ್ಕೊಟ್ಟವಳನ್ನು ಕಂಡು ರಾವ್ ದಂಪತಿಗಳಿಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು. 

ಅದರೊಂದಿಗೆ ಹೊರಡುವ ಮುನ್ನ "ಮಿಸ್ಟರ್ ರಾವ್, ಇಂಥಾ ಮಗಳನ್ನು ಪಡೆಯಲು ನೀವು ತುಂಬಾ ಅದೃಷ್ಟ ಮಾಡಿದ್ರಿ" ಎಂದಿದ್ದರು ಸಚ್ಚಿದಾನಂದ ಶರ್ಮಾ. ಅದರಿಂದ ತಮ್ಮ ಕೆಲಸ ಕೈಗೂಡಿತೆಂದು ಹರ್ಷಿಸಿದ್ದರೇ ಹೊರತು ಅವರ ಮಾತು ಅಂತರಾಳ ತಲುಪಲಿಲ್ಲ......

ಜೊತೆಗೆ ಕಾರ್ ಡ್ರೈವ್ ಮಾಡಿಕೊಂಡು ಹೊರಡುವ ಮುನ್ನ ಅಭಿರಾಮ್ ನೋಟ ಸಮನ್ವಿತಾಳತ್ತ ಇದ್ದದ್ದನ್ನು ರಾವ್ ಗಮನಿಸಿಬಿಟ್ಟಿದ್ದರು. ಆದರೆ ಅವನ ನೋಟದ ಹಿಂದಿನ ತರ್ಕ ಅವರಿಗೆ ಅರ್ಥವಾಗುವ ಸಾಧ್ಯತೆ ಇರಲಿಲ್ಲ…..!

ಎಲ್ಲಾ ಅವರ ಎಣಿಕೆಗಿಂತಲೂ ಅದ್ಭುತವಾಗಿ ನಡೆಯುತ್ತಿತ್ತು. ಎಲ್ಲಕ್ಕಿಂತ ಅವರಿಗೆ ಅತೀ ಹೆಚ್ಚು ಭಯವಿದ್ದದ್ದು ಮಗಳ ಬಗ್ಗೆ... ಯಾರೊಂದಿಗೂ ಹೆಚ್ಚು ಬೆರೆಯದ ಮಗಳು ಶರ್ಮಾ ಪರಿವಾರದೊಂದಿಗೆ ಹೊಂದಿಕೊಂಡದ್ದು ತುಂಬಾ ಖುಷಿಕೊಟ್ಟಿತ್ತು. ಅವರಿಗೆ ಬೇಕಾಗಿದ್ದು ಅದೇ.... ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತ್ತು......

ಇತ್ತ ಮನೆಗೆ ಹೊರಟ ಶರ್ಮಾ ಪರಿವಾರದವರೂ ತುಂಬಾ ಉಲ್ಲಾಸದಲ್ಲಿದ್ದರು. ಸಂಜೆ ಮನೆಯಿಂದ ಹೊರಟಾಗ ಇದ್ದ ಅನುಮಾನ, ಬೇಸರ ಹೇಳಹೆಸರಿಲ್ಲದಂತೆ ಮಾಯವಾಗಿತ್ತು. ಅವರ ಮಾತುಗಳೆಲ್ಲ ಸಮನ್ವಿತಾಳ ಸುತ್ತವೇ ಎಂದು ಬೇರೆ ಹೇಳಬೇಕಿಲ್ಲ. ಅವರಿಗೆ ಅವಳ ನಡೆ, ನುಡಿ, ಗುಣ, ಸ್ವಭಾವ ಪ್ರತಿಯೊಂದು ಇಷ್ಟವಾಗಿತ್ತು....

ಅವರೆಲ್ಲರ ನಡುವೆ ಮೌನವಾಗಿದ್ದವನು ಅಭಿ ಮಾತ್ರ....... 

ಇವರ ಅವ್ಯಾಹತ ಮಾತುಗಳನ್ನು ಕೇಳಿ ತಲೆಚಿಟ್ಟಿಡಿದು, "ಅಬ್ಬಾ ಅದೆಷ್ಟು ಮಾತಾಡ್ತೀರಾ. ಪಾರ್ಟಿಗೆ ಹೋದಲ್ಲಿಂದ ಶುರುವಾಗಿರೋ ಮಾತು ಇನ್ನೂ ಮುಗೀತಿಲ್ವಲ್ಲ. ಚರ್ಮದ ಬಾಯಾಗಿರೋದಕ್ಕೆ ಆಯ್ತು. ಮರದ ಬಾಯಿ ಆಗಿದ್ರೆ ಇಷ್ಟೊತ್ತಿಗೆ ಮುರಿದೇ ಹೋಗಿರೋದು" ರೇಗಿದ.

ಮನೆಗೆ ಬಂದವನೇ "ಅಮ್ಮ ,ನನ್ಗೆ ತುಂಬಾ ನಿದ್ರೆ ಬರ್ತಿದೆ. ಯಾರೂ ಡಿಸ್ಟರ್ಬ್ ಮಾಡಬೇಡಿ" ಎಂದವನು ಸೀದಾ ರೂಮಿಗೆ ನಡೆದಿದ್ದ. ಬಟ್ಟೆ ಬದಲಾಯಿಸಿ ಟೆರೇಸಿಗೆ ಹೋಗಿ ಅಲ್ಲಿದ್ದ ಉಯ್ಯಾಲೆಯಲ್ಲಿ ಕುಳಿತವನೇ ತನ್ನ ನೆನಪಿನಾಳವನ್ನೆಲ್ಲಾ ಕೆದಕತೊಡಗಿದ...... ಊಹ್ಮೂಂ..... ಏನೂ ನೆನಪಾಗದು.....

ಆದರೆ ಸಮನ್ವಿತಾಳನ್ನು ಪಾರ್ಟಿಯಲ್ಲಿ ನೋಡಿದ ಕ್ಷಣವೇ ಅವನ ಮನಕ್ಕೆ ಒಂದು ವಿಷಯ ಸ್ಪಷ್ಟವಾಗಿತ್ತು….....

ತಾನಿವಳನ್ನು ಈ ಮೊದಲು ನೋಡಿದ್ದೇನೆ.........

ಮಾತನಾಡಿಸಿರುವೆನಾ…...? ಹೆಸರು ಗೊತ್ತಿತ್ತೇ…..? ಅದೊಂದೂ ತಿಳಿಯದು‌..... 

ಆದರೆ ಈ ಮೊದಲು ಈಕೆಯನ್ನು ನೋಡಿರುವುದಂತೂ ಸತ್ಯ

ಆದರೆ ಎಲ್ಲಿ???......    

      *********ಮುಂದುವರೆಯುತ್ತದೆ*********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ