ಭಾನುವಾರ, ಜೂನ್ 21, 2020

ಅನೂಹ್ಯ 7

ಇದು ನಿಶಾ ಲೋಕ….. ನಿಶಾಚರಿಗಳ ಲೋಕ…..

ಇಡೀ ಭೂಲೋಕಕ್ಕೆ ಮೂಡಣದಿಂದೇರುವ ಸೂರ್ಯನೊಂದಿಗೆ ಬೆಳಗು, ಪಡುವಣಕೆ ವಾಲುವ ಸೂರ್ಯನೊಂದಿಗೆ ಬೈಗು. ಬೆಳಕಿನ ರಂಗೋಲಿಯೊಂದಿಗೆ ಆರಂಭವಾಗುವ ಚಟುವಟಿಕೆ ಸಂಧ್ಯೆಯ ಗೋಧೂಳಿ ರಂಗಿನೊಂದಿಗೆ ಸಮಾಪ್ತಿಗೊಳ್ಳುತ್ತದೆ.

ಆದರೆ ಈ ನಿಶೆಯ ಲೋಕ ಕಣ್ತೆರೆಯುವುದೇ ಸಂಧ್ಯೆಯೊಂದಿಗೆ. ಸಂಧ್ಯೆ ಜಾರಿ ರಜನಿಯ ಆಗಮನದೊಂದಿಗೆ ಚಟುವಟಿಕೆ ಗರಿಗೆದರುತ್ತವೆ. ಚಂದ್ರಿಕೆಯ ಕಾಂತಿ ಪಸರಿಸುತ್ತಾ ಹೋದಂತೆ, ರಾತ್ರಿರಾಣಿಯ ನಶೆಯೇರಿ ಉತ್ತುಂಗ ತಲುಪಿ, ಮೂಡಣದರವಿಯ ಹೊಳಪಿನೊಂದಿಗೆ ಅಂತ್ಯವಾಗುತ್ತದೆ.

ಸಾಮಾನ್ಯ ಲೋಕದ ಜನರು ಜೀವನೋಪಾಯಕ್ಕಾಗಿ ಹತ್ತು ಹಲವು ಬಗೆಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಲವಾರು ವಿಧದ ವೃತ್ತಿಗಳಿವೆ ಅಲ್ಲಿ. ಆದರೆ ಈ ನಿಶಾಲೋಕಲ್ಲಿ ಅಸ್ತಿತ್ವದಲ್ಲಿರುವುದು ಒಂದೇ ವೃತ್ತಿ........... ವೇಶ್ಯಾವೃತ್ತಿ. ವೃತ್ತಿಗಿಂತ ಇದನ್ನು ದಂಧೆ ಅನ್ನುವುದೇ ಸೂಕ್ತ.

ಇದರ ಕಾರ್ಯನಿರ್ವಹಣೆ ಸಾಮಾನ್ಯರ ಲೋಕದ ಮಾರುಕಟ್ಟೆಯಂತೆಯೇ.....

ಮಾರುಕಟ್ಟೆಯಲ್ಲಿ ವರ್ತಕರು, ಗ್ರಾಹಕರು, ಕ್ರಯಕ್ಕೆ ಮಾರಾಟವಾಗುವ ವಸ್ತುಗಳು, ಮಧ್ಯವರ್ತಿಗಳು ಹಾಗೂ ಇದರ ಸೂಕ್ತ ನಿರ್ವಹಣೆಗೆ ಯೂನಿಯನ್ ಗಳು, ಪೋಲೀಸ್ ವ್ಯವಸ್ಥೆ ಇರುತ್ತದೆ.

ವೇಶ್ಯಾವಾಟಿಕೆಯಲ್ಲಿಯೂ ಇವರೆಲ್ಲ ಇರುತ್ತಾರೆ. ಇಲ್ಲಿ ವೇಶ್ಯಾಗೃಹದ ಮಾಲೀಕರೇ ವರ್ತಕರು, ಗಿರಾಕಿಗಳು ಗ್ರಾಹಕರು, ಹೆಣ್ಣಿನ ದೇಹವೇ ಮಾರಾಟದ ಸರಕು, ದಲ್ಲಾಳಿಗಳು, ತಲೆಹಿಡುಕರೇ ಮಧ್ಯವರ್ತಿಗಳು, ಇನ್ನು ವ್ಯವಸ್ಥೆ ನಿರ್ವಹಣೆ, ವ್ಯಾಜ್ಯ ಪರಿಹಾರ ಮಾಡುವುದು ಮಾಲೀಕರು ಸಾಕಿದ ಗೂಂಡಾಗಳು....

ಅಂದಹಾಗೆ ಈ ದಂಧೆಗೆ ಸುದೀರ್ಘ ಇತಿಹಾಸವಿದೆ. ಆ ಕಾಲದ ಗೆಜ್ಜೆಪೂಜೆ, ದೇವದಾಸಿ ಪದ್ದತಿಯಿಂದ ಹಿಡಿದು ಇಂದಿನ ಸ್ಪಾ, ಮಸಾಜ್ ಪಾರ್ಲರ್ ವರೆಗೆ ಇದು ಹರಡಿಕೊಂಡಿದೆ. ಈ ದಂಧೆ ನಿರ್ಮೂಲನೆಗೆ ಸಾವಿರಾರು ರೀತಿಯ ಪ್ರಯತ್ನಗಳಾಗಿದ್ದರೂ ಹಲವು ರೀತಿಗಳಲ್ಲಿ ಅಸ್ತಿತ್ವದಲ್ಲಿ ಇದ್ದೇ ಇದೆ.

ಇಲ್ಲಿ ಮಾನ ಮರ್ಯಾದೆ, ನ್ಯಾಯ ಅನ್ಯಾಯ, ಸರಿ ತಪ್ಪುಗಳ ಮಂಥನವಿಲ್ಲ. ತಪ್ಪೆಲ್ಲಾ ಸರಿಯೇ.  ಈ ದಂಧೆಯ ರೀತಿನೀತಿಗಳು ಕಠೋರ. ಅತೀಕ್ರೂರ. ಇಲ್ಲಿ ಕೇವಲ ಹಣಕ್ಕೆ ಬೆಲೆಯೇ ಹೊರತು ಜೀವಕ್ಕಲ್ಲ. ಇಷ್ಟ ಕಷ್ಟಗಳ ಪ್ರಶ್ನೆ ಇಲ್ಲಿಲ್ಲ. ಇಲ್ಲಿ ಹೆಣ್ಣುಗಳಿಗೆ ಒಳಬರುವ ಹಾದಿಗಳು ಹಲವು. ಆದರೆ ಹೊರಹೋಗುವುದು ಕಷ್ಟಸಾಧ್ಯ ಅಥವಾ ಅಸಾಧ್ಯವೇ ಅನ್ನಬಹುದು.

ಇನ್ನು ಈ ನರಕದಲ್ಲಿ ಸಿಕ್ಕಿ ನರಳುವ ಒಬ್ಬೊಬ್ಬಳದ್ದೂ ಒಂದೊಂದು ಕಥೆ..... ಇಲ್ಲಿನ ಹೆಚ್ಚಿನ ಹೆಣ್ಣುಗಳು ಇಷ್ಟಪಟ್ಟು ಈ ಅಂಧಕಾರ ಕೂಪದಲ್ಲಿ ಕಾಲಿರಿಸುವುದಿಲ್ಲ. ಒಂದಿಲ್ಲೊಂದು ಅನಿವಾರ್ಯತೆಗೆ, ಮೋಸದ ಜಾಲಕ್ಕೆ ಸಿಲುಕಿ ಈ ದಂಧೆಯ ಪಾಲಾಗುತ್ತಾರೆ. ಪ್ರೀತಿ ಪ್ರೇಮದ ಸೋಗಿನಲ್ಲಿ, ಕೆಲಸದ ಆಮಿಷವೊಡ್ಡಿ, ಅಪಹರಿಸಿ ಅಥವಾ ಕೆಲವರಂತೂ ತಮ್ಮ ಸ್ವಂತದವರಿಂದಲೇ ಮಾರಾಟವಾಗಿ ಈ ಪಾಪಕೂಪ ಸೇರುತ್ತಾರೆ.

ಇಲ್ಲಿ ಬಂದು ನಂತರ ಶುರುವಾಗುತ್ತದೆ ನರಕದ ತರಹೇವಾರಿ ಚಿತ್ರಹಿಂಸೆಗಳು....

ಮೊದಲು ದಂಧೆಗೆ ಒಪ್ಪುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತದೆ. ಒಪ್ಪಿದರೆ ಸರಿ.. ಇಲ್ಲವೆಂದರೆ ಉಪವಾಸ ಕೆಡವುತ್ತಾರೆ, ಮೈಮೇಲೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ, ಅದೂ ಕೆಲಸಮಾಡದ ಪಕ್ಷದಲ್ಲಿ ಕೊನೆಯ ಅಸ್ತ್ರ... ಗೂಂಡಾಗಳಿಂದ ನಿರಂತರ ಅತ್ಯಾಚಾರ...

ಅವಳು ಎಷ್ಟು ಸಹಿಸಬಲ್ಲಳು...... 

ಈ ಸಮಾಜ ಮೊದಲೇ ಹೆಣ್ಣಿಗೆ ಅಬಲೆ, ಕೋಮಲೆ ಎಂಬ ವಿಶೇಷ ಬಿರುದು ಕೊಟ್ಟಿದೆಯಲ್ಲವೇ?????

ಕೊನೆಗೊಮ್ಮೆ ಹಿಂಸೆಯನ್ನೂ ತಾಳಲಾರದೇ,  ಅದರಿಂದ ತಪ್ಪಿಸಿಕೊಂಡು ಹೊರಬರುವ ದಾರಿಯೂ ಕಾಣದೇ ತನ್ನ ಭಾವನೆಗಳನ್ನು ಕೊಂದುಕೊಂಡು, ಜೀವಚ್ಛವವಾಗಿ ಶರಣಾಗಿ ಈ ದಂಧೆಯಲ್ಲಿ ಮಾರಾಟವಾಗುವ ದೇಹವಾಗಿಬಿಡುತ್ತಾಳೆ.

ಅಲ್ಲಿಂದ ಆರಂಭವಾಗುತ್ತದೆ ಭೀಭತ್ಸ ಪರ್ವ......  ಕೊನೆಮೊದಲಿಲ್ಲದ ಕಾಮಯಾತ್ರೆ........

ರಾತ್ರಿಗಳಲ್ಲಿ ಅಗಣಿತ ಕಾಮಾತುರರು...... ಅದಕ್ಕೆ ಲೆಕ್ಕವಿಲ್ಲ.

ಹಗಲಿನಲ್ಲಿ ಆಗಸದೆಡೆಗೆ ಶೂನ್ಯನೋಟ....., ಹಗಲಲ್ಲಾದರೂ ಕ್ಷಣ ವಿಶ್ರಾಂತಿ ಸಿಕ್ಕಿತಲ್ಲ ಎಂಬ ಸಣ್ಣ ಸಾಂತ್ವನ... ಹಾಗೇ ಮತ್ತೆ ರಾತ್ರಿಯಾಗುವುದಲ್ಲಾ ಎಂಬ ನೋವಿನ ನಿಟ್ಟುಸಿರು..... ಅಷ್ಟೇ ದಿನಚರಿ...

ವಿಪರ್ಯಾಸವೆಂದರೆ ಈ ವೇಶ್ಯಾವಾಟಿಕೆ ನಡೆಸುವಾಕೆಯೂ ಹೆಣ್ಣೇ..... ಮತ್ತು ಆಕೆಯೂ ಕೂಡಾ ಒಂದು ಕಾಲದಲ್ಲಿ ಇತರ ಹೆಣ್ಣುಗಳಂತೆ ಮಾರಾಟದ ಸರಕಾಗಿಯೇ ಈ ದಂಧೆಯನ್ನು ಪ್ರವೇಶಿಸಿರುತ್ತಾಳೆ. ಆದರೂ ತನ್ನ ಕಣ್ಣೆದುರು ಅಂಗಲಾಚುವ, ನರಳುವ ಇನ್ನೊಂದು ತನ್ನಂತಹದೇ ಜೀವವನ್ನು ಕಂಡು ಅವಳಿಗೆ ಮರುಕವುಕ್ಕದು. ಬಹುಶಃ ಆ ನರಕದ ಸಾಂಗತ್ಯದಲ್ಲಿ ಅವಳ ಭಾವನೆಗಳು ಬರಡಾಗಿರಬಹುದು..........

ಇನ್ನು ಯಾರೋ ಒಬ್ಬಳು ಈ ಹಿಂಸೆಯೆಲ್ಲ ಸಹಿಸಿ, ಧೈರ್ಯಗೂಡಿಸಿ, ಶತಪ್ರಯತ್ನ ಪಟ್ಟು ಈ ನರಕದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದಳೆಂದರೆ ಅದನ್ನೂ ಈ ನೀಚರು ಸಹಿಸರು... ಆಕೆಯನ್ನು ಹಿಡಿದು ತರಲು ಭೂಮಿ ಆಕಾಶ ಒಂದುಗೂಡಿಸುತ್ತಾರೆ. ಕೆಲವು ಪೊಲೀಸ್ ಅಧಿಕಾರಿಗಳು, ಪುಡಾರಿಗಳು, ಸಮಾಜದ ಕೆಲವು ಖ್ಯಾತನಾಮರು ಈ ದಂಧೆಯ ಬೆನ್ನಿಗಿರುತ್ತಾರೆ. ಅಷ್ಟು ಪ್ರಭಾವಶಾಲಿ ವ್ಯವಸ್ಥೆಯಿದು.

ಇವರ ಕೈಗೆ ಆಕೆ ಸಿಕ್ಕರೆ ಮುಗಿಯಿತು. ಒಂದೋ ಸಾವು ಇಲ್ಲವಾದರೇ ಮತ್ತೆಂದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತೆ ಆಕೆಯ ಕಾಲು ಮುರಿದು ಶಾಶ್ವತ ಅಂಗವಿಕಲೆಯನ್ನಾಗಿಸುತ್ತಾರೆ.

ಇನ್ನು ಪೋಲಿಸ್ ರೈಡ್ ಮಾಡಿದಾಗ ಬಚಾವಾಗುವ ಹುಡುಗಿಯರದ್ದು ಇನ್ನೊಂದು ಕಥೆ.  ಅತ್ತ ಮನೆಗೂ ಹೋಗಲಾರದೇ, ಇತ್ತ ಸಮಾಜದೊಂದಿಗೆ ಬೆರೆಯಲೂ ಆಗದೇ, ಬೇರೆ ವೃತ್ತಿಯನ್ನೂ ಹಿಡಿಯಲಾಗದೇ ಹೆಚ್ಚಿನವರು ಮತ್ತದೇ ಕೆಲಸಕ್ಕೆ ತೊಡಗುತ್ತಾರೆ. ಕೇವಲ ಬೆರಳೆಣಿಕೆಯಷ್ಟು ಹೆಣ್ಣುಗಳು ಮಾತ್ರ ಮತ್ತೆ ತಮ್ಮ ಮನೆ ಸೇರುವಲ್ಲಿ ಅಥವಾ NGOಗಳ ಮುಖಾಂತರ ಪುನರ್ವಸತಿ ಕೇಂದ್ರದಲ್ಲಿ ಸ್ವವೃತ್ತಿ ತರಬೇತಿ ಪಡೆದು ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ

ಈ ದಂಧೆಯಲ್ಲಿ ಹುಡುಗಿಯರಿಗೆ ಮಾರುಕಟ್ಟೆ ಇರುವುದು ದೇಹದಲ್ಲಿ ಕಸುವಿರುವವರೆಗೆ ಮಾತ್ರ. ವಯಸ್ಸಾಗಿ ಮುಪ್ಪು ಆವರಿಸಿದ ಮೇಲೆ ಈ ಹೆಣ್ಣುಗಳ ಸ್ಥಿತಿ ಕಸಾಯಿಖಾನೆಗೆ ಒಯ್ಯುವ ಮೂಕ ಪಶುವಿನಂತೆಯೇ. ಆ ಸಮಯಕ್ಕಾಗಲೇ ದೇಹ ರೋಗದ ಗೂಡಾಗಿರುತ್ತದೆ. ಆಗ ಇವರನ್ನು ಕೇಳುವವರಿಲ್ಲ. ಯಾರಿಗಾದರೂ ಮಾರುತ್ತಾರೆ ಅಥವಾ ನಿರ್ದಾಕ್ಷಿಣ್ಯವಾಗಿ ಬೀದಿಗೆ ದೂಡುತ್ತಾರೆ.  ಕೊನೆಗೊಮ್ಮೆ ಬೀದಿಹೆಣವಾಗಿ ಬದುಕಿನಯಾನ ಮುಗಿಸುತ್ತಾರೆ.

ಹೀಗಿರುತ್ತದೆ ಇವರ ಜೀವನ. 

ಇಂಥಾ ಶೋಷಣೆಗೆ ಕಾರಣರಾರು…? ಹೇಳುವುದು ಕಷ್ಟ. ಇದು ಬಹಳ ಪುರಾತನ ಕಾಲದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ವ್ಯವಸ್ಥೆ. ಮೇಲ್ನೋಟಕ್ಕೆ ಹಲವಾರು ಕಾರಣಗಳಿದ್ದರೂ ಇದರ ಮೂಲದಲ್ಲಿರುವುದು ನಮ್ಮ ಸಮಾಜವೇ ಅರ್ಥಾತ್ ನಾವೇ….. "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ" ಎಂದಿದ್ದೂ ಇದೇ ವ್ಯವಸ್ಥೆ, " ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ. ಆಕೆ ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಯವ್ವನದಲ್ಲಿ ಪತಿಯ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕು" ಅಂದದ್ದೂ ಅದೇ ವ್ಯವಸ್ಥೆ. ಹೆಣ್ಣು ಹುಟ್ಟುವ ಮುಂಚೆಯೇ ಕೊಲ್ಲಲು ಹವಣಿಸುವವರೂ ಅವರೇ, ಮತ್ತೆ ಗಂಡಿಗೆ ಮದುವೆ ಮಾಡಲು ಹೆಣ್ಣು ಸಿಗುತ್ತಿಲ್ಲ ಎಂದು ಹಪಹಪಿಸುವವರೂ ಅವರೇ‌. ಹೆಣ್ಣನ್ನು ದೇವದಾಸಿ ಮಾಡುವವರೂ ಇವರೇ, ಆಕೆಯನ್ನು ಭೋಗದ ವಸ್ತು ಎಂದು ಭಾವಿಸುವವರೂ ಇವರೇ........

ಹೀಗಿದೆ ನಮ್ಮ ಸಮಾಜ.....

ಇಂಥಾ ನಿಶಾಲೋಕದಲ್ಲಿಯೇ ನಾನವಳನ್ನು ಮೊದಲು ಕಂಡದ್ದು......

ಇವಳ ಬದುಕಿನ ದಾರುಣತೆಯ ಮುಂದೆಯೇ ನನ್ನ ಬದುಕಿನ ಕೊರತೆ ಕನಿಷ್ಠ ಎನಿಸಿದ್ದು......

              ***ಮುಂದುವರೆಯುತ್ತದೆ***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ