ಸೋಮವಾರ, ಸೆಪ್ಟೆಂಬರ್ 5, 2022

ಲಹರಿ ೩

"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಇಲ್ಲಿ 'ಗುಲಾಮ' ಎನ್ನುವ ಪದಕ್ಕೆ ದಾಸರು ಕಲ್ಪಿಸಿರುವ ಅರ್ಥ ದಾಸ್ಯತ್ವದ್ದಲ್ಲ. 'ಗುರು' ಎಂಬುದು ಗುರುತರವಾದ ಜವಾಬ್ದಾರಿ. ಶಿಷ್ಯವೃಂದದಿಂದ ಅಭಿವಂದನೆ ಸ್ವೀಕರಿಸಿ, ಅವರುಗಳು ಹಾಕುವ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ವಾಟ್ಸಾಪ್ ಸ್ಟೇಟಸ್ ಹಂಚಿಕೊಳ್ಳುವಲ್ಲಿಗೆ ಮುಗಿಯುವುದಲ್ಲ ಗುರುವೆಂಬ ಪದವಿ. ಇರುವ ಅರೆಬರೆ ಜ್ಞಾನವನ್ನೇ ಅತಿರೇಕದಲ್ಲಿ ಪ್ರದರ್ಶಿಸುತ್ತಾ, ತಾನೇ ಸರ್ವಜ್ಞನೆಂಬ ಅಹಮ್ಮಿಕೆಯಲ್ಲಿ ಮೆರೆಯುವವರು ಸದಾ ನೆನಪಿನಲ್ಲಿಡಬೇಕಾದ ಸಂಗತಿ......... ಗುರುವಿನ ಕಲಿಕೆ ಮಣ್ಣಿಗೆ ಸೇರುವ ತನಕ ನಿರಂತರ. ತನ್ನ ಕಲಿಕೆಗೆ ಪೂರ್ಣವಿರಾಮ ಹಾಕಿಕೊಂಡ ಗುರು ವಿದ್ಯಾರ್ಥಿಯ ಭವಿಷ್ಯ ರೂಪಿಸಲಾರ. ಗುರುವಿನ ಅಹಮ್ಮಿಕೆ, ಗುರುವಿನ ಒಂದು ಸಣ್ಣ ತಪ್ಪು ಶಿಷ್ಯನ ಉಜ್ವಲ ಭವಿತವ್ಯವನ್ನು ಕಸಿಯದಿರಲಿ. ಶಿಷ್ಯಂದಿರ ಸಂದೇಶಗಳನ್ನು, ಹೊಗಳಿಕೆಗಳನ್ನು ಪ್ರದರ್ಶಿಸುವಾಗ ಇರುವಷ್ಟೇ ಹೆಮ್ಮೆ ಕರ್ತವ್ಯಕ್ಕೆ ನ್ಯಾಯ ಒದಗಿಸುವಾಗಲೂ ಇರಲಿ. ಕರ್ತವ್ಯಕ್ಕೆ ವಿಮುಖರಾಗಿ ಹೊಗಳಿಕೆಗೆ ಮಾತ್ರ ಸುಮುಖರಾಗುವ ಗುರುಗಳಿಗೆ ಧಿಕ್ಕಾರವಿರಲಿ.......

ಹೊಗಳಿಕೆಯಲ್ಲೇ ಮೈಮರೆಯದ, ಕರ್ತವ್ಯದಿಂದ ವಿಮುಖರಾಗದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 

#ಅರಿಯೋಗುರುವೇಶಿಷ್ಯನಂತರಂಗವಾ

ಶನಿವಾರ, ಸೆಪ್ಟೆಂಬರ್ 3, 2022

ಛೇದ

ನಟನಾರಂಗದಲ್ಲಿ "method acting" ಎನ್ನುವ ಒಂದು ಪರಿಕಲ್ಪನೆಯಿದೆ. ಪರಕಾಯ ಪ್ರವೇಶವನ್ನು ಬಯಸುವಂತಹ ಸಂಕೀರ್ಣ ಪಾತ್ರಗಳನ್ನು ನಿಭಾಯಿಸುವಾಗ ಆ ಪಾತ್ರದ ಆಂತರಿಕ ಒಳತೋಟಿಗಳು, ಭಾವ ಸಂಘರ್ಷಗಳನ್ನು ಅನುಭವಿಸುವ ಮೂಲಕ ಆ ಪಾತ್ರದೊಂದಿಗೆ ನಟ ತನ್ನನ್ನೇ ಗುರುತಿಸಿಕೊಳ್ಳುವ ಕಲೆಯೇ method acting. ಇಲ್ಲಿ ಪಾತ್ರದ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ವಿಶ್ಲೇಷಿಸಿ ಅದರಿಂದ ಪಾತ್ರದ ನಡವಳಿಕೆಯನ್ನು ನಟ ಅಭ್ಯಸಿಸುತ್ತಾನೆ ಹಾಗೂ ತನ್ಮೂಲಕ ಆದಿಯಿಂದ ಅಂತ್ಯದ ತನಕ ಆ ಪಾತ್ರವನ್ನೇ ಆತ ಜೀವಿಸುತ್ತಾನೆ. ಇದೇ ರೀತಿ ಸಾಹಿತ್ಯಲೋಕದಲ್ಲಿ "method writing" ಅನ್ನುವ ಪರಿಕಲ್ಪನೆಯಿದೆ. ಇಲ್ಲಿ ಬರಹಗಾರ ತಾನು ಸೃಷ್ಟಿಸುವ ಪಾತ್ರಗಳ ಮನೋವಲಯವನ್ನು ಪ್ರವೇಶಿಸಿ ವಿಭಿನ್ನ ಸನ್ನಿವೇಶಗಳಲ್ಲಿ ಅವುಗಳ ನಡವಳಿಕೆಯನ್ನು ಗ್ರಹಿಸುತ್ತಾನೆ. ಬಹುಶಃ ಇವೆರಡನ್ನೂ ಒಟ್ಟಿಗೆ ಎರಕ ಹೊಯ್ದರೆ ಅದು ಯಶವಂತ ಚಿತ್ತಾಲರ ಬರವಣಿಗೆಯಾಗಬಹುದೇನೋ....... 

'ಈ ಮಟ್ಟಿಗೆ ಇನ್ನೊಬ್ಬರ ಮನದೊಳಗೆ ಇಳಿದು ಭಾವಗಳನ್ನು ಅಕ್ಷರಕ್ಕಿಳಿಸಲು ಹೇಗೆ ಸಾಧ್ಯ? ಅದೂ ಓದುಗನ ಅಂತರಾಳವನ್ನು ಬಗೆಯುವಷ್ಟು ಭಾವತೀವ್ರತೆಯಿಂದ?' - "ಶಿಕಾರಿ" ಕಾದಂಬರಿಯ ಪ್ರತಿ ಪುಟವನ್ನು ಮಗಚುವಾಗಲೂ ಮನದೊಳಗೆ ಮೂಡಿದ ಇಂತದೊಂದು ಪ್ರಶ್ನೆಗೆ "ಛೇದ" ಎನ್ನುವ ನೂರಿಪ್ಪತ್ತು ಪುಟಗಳ ಕಿರುಹೊತ್ತಿಗೆಯನ್ನು ಮುಗಿಸುವ ಹೊತ್ತಿಗೆ ದೊರೆತ ಉತ್ತರವಿದು. ಚಿತ್ತಾಲರು ಖಂಡಿತಾ ಲೇಖನಿ ಹಿಡಿದು ಹಾಳೆಯ ಮೇಲೆ ಬರೆದ ಲೇಖಕರಲ್ಲ. ಮನುಜನ ಯೋಚನೆಗಳ ದಿಕ್ಕು ದಾರಿಯ ಜಾಡು ಹಿಡಿದು ಅದನ್ನು ಓದುಗರ ಮನೋಭಿತ್ತಿಯಲ್ಲಿ ಚಿತ್ರಿಸಿದವರು. ಇವರ ಬರವಣಿಗೆ ಆದಿಯಿಂದ ಅಂತ್ಯದ ತನಕ ನಮ್ಮೊಂದಿಗೆ ಸಂವಾದಿಸುತ್ತದೆ, ಅಂತರ್ಮಥನಕ್ಕೆ ಕಡಗೋಲಾಗುತ್ತದೆ. ಓದುಗನಿಗೆ ಈ ಮಟ್ಟದ Introspection Theropy ನಾ ಕಂಡಿದ್ದು ಚಿತ್ತಾಲರ ಬರವಣಿಗೆಯಲ್ಲೇ. 
ಕೊಲೆಯೊಂದರಿಂದ ತೆರೆದುಕೊಳ್ಳುವ ಈ ಕಥನ ನಮ್ಮೊಳಗಿನ ಭಾವಸಂಘರ್ಷಗಳು, ಸಂಕೀರ್ಣ ಸ್ವರೂಪದ ಮಾನವ ಸಂಬಂಧಗಳು, ನಮ್ಮ ಬದುಕಿನ ಪರಿಧಿಯೊಳಗಿನ ವ್ಯಕ್ತಿಗಳ ಬಗ್ಗೆ ನಾವೇ ನಿರ್ಮಿಸಿಕೊಳ್ಳುವ ಹಾಗೂ ಪದೇಪದೇ ಬದಲಾಗುವ ಅಭಿಪ್ರಾಯಗಳು, ಹೇಳಲೇಬೇಕೆಂದುಕೊಂಡು ಮನದೊಳಗೇ ಉಳಿಸಿಕೊಳ್ಳುವ ಸಾವಿರ ಮಾತುಗಳು, ಹೇಳಬಾರದೆಂದುಕೊಂಡೂ ಅರಿವಿಗೆ ಬರುವ ಮುನ್ನವೇ ಮಾತಾಗುವ ಪದಗಳು, ಏನೋ ಹೇಳಬೇಕೆಂದು ಹೊರಟು ಇನ್ನೇನನ್ನೋ ಹೇಳಿ ಮುಗಿಸುವ ರೀತಿ .......... ಹೀಗೆ ನಮ್ಮದೆ ಹಲವು ಪ್ರತಿಬಿಂಬಗಳಿಗೆ ಕನ್ನಡಿ ಹಿಡಿಯುತ್ತದೆ. 

ಪ್ರತಿ ಪಾತ್ರದ ಮನಸ್ಸು ಹೊಕ್ಕಂತೆ ಆ ಪಾತ್ರದ ಭಾವಲೋಕದ ಕದ ತೆರೆಯುವ ಚಿತ್ತಾಲರ ಬರವಣಿಗೆಯಲ್ಲಿ ಬೆಹರಾಮ್ ಮತ್ತು ಅಗರ್ವಾಲ್ ನಡುವಿನ ಭಾವಸೂಕ್ಷ್ಮ ಹಾಗೂ ಸಂಕೀರ್ಣ ಬಾಂಧವ್ಯ ಅನಾವರಣವಾಗಲು ಕರುಣಾಕರನ್ ಮತ್ತು ವಾಸುದೇವನ್ ಮೆಟ್ಟಿಲುಗಳಾಗುತ್ತಾರೆ. ಶಿರೀನ್ ಮತ್ತು ಆಕೆಯ ತಾಯಿ ಅನಪೇಕ್ಷಿತವಾಗಿ ಸೃಷ್ಟಿಯಾಗುವ ಸನ್ನಿವೇಶದ ಇತರೆ ಸಾಧ್ಯತೆಗಳ ಅವಲೋಕನಕ್ಕೆ ದಾರಿಯಾದರೆ ಪಾರ್ವತಿಯ ನಡೆನುಡಿ ಒಂದು ಬಗೆಯ ಗೌಪ್ಯತೆಯನ್ನು ಕಾಯುತ್ತದೆ. ಕೊನೆಯಲ್ಲಿ ಅಗರ್ವಾಲನೊಡನೆ ಫೋನಿನಲ್ಲಿ ಸಂಭಾಷಿಸಿ ತನ್ನ ಮನದೊಳಗೆ ಹೆಪ್ಪುಗಟ್ಟಿದ್ದ ವರ್ಷಗಳ ಬೇಗುದಿಯನ್ನೆಲ್ಲಾ ಕಕ್ಕಲು ಬೆಳಕನ್ನು ಆರಿಸಿ ಕತ್ತಲನ್ನು ಆಶ್ರಯಿಸುವ ಬೆಹರಾಮನ ವರ್ತನೆ ಅಷ್ಟೂ ವರ್ಷಗಳು ಅವನು ಕತ್ತಲಿನಲ್ಲೇ ಇದ್ದನೆಂಬ ಸತ್ಯಕ್ಕೆ ಸಮರ್ಥ ರೂಪಕವಾಗಿದೆ. 

ಒಟ್ಟಿನಲ್ಲಿ ಬರಹಗಾರನೊಬ್ಬನ method writing ಓದುಗನ ಮನಃಪಟಲದಲ್ಲಿ method acting ಕೌಶಲ್ಯದಲ್ಲಿ ಬಿತ್ತರವಾಗುವ ರೀತಿಗೆ ಸಮರ್ಥ ಉದಾಹರಣೆ "ಛೇದ".