ಸೋಮವಾರ, ಜೂನ್ 29, 2020

ಅನೂಹ್ಯ 38

ಅಭಿರಾಮ್ ತಾನವಳನ್ನು ನವ್ಯಾಳೊಂದಿಗೆ ಧನ್ವಂತರಿಯಲ್ಲಿ ನೋಡಿದ್ದಲ್ಲವೆಂದು ಹೇಳಿದಾಗ ಅಚ್ಚರಿಗೊಳಗಾದಳು ಸಮನ್ವಿತಾ. 

"ಮತ್ತೆ ನೀವು ನನ್ನ ಎಲ್ಲಿ ನೋಡಿದ್ದು? ಅದೂ ನವ್ಯಾ ಜೊತೆಯಲ್ಲಿ.....?"

"ಪೋಲಿಸ್ ಸ್ಟೇಷನಲ್ಲಿ. ಸುಮಾರು ನಾಲ್ಕು ವರ್ಷಗಳ ಹಿಂದೆ.... ನೀನು, ನವ್ಯಾ ಜೊತೆಗೆ ಇನ್ನೂ ನಾಲ್ವರು ಹುಡುಗಿಯರಿದ್ದರು..." ನಿಧಾನವಾಗಿ ಅವನು ಹೇಳುತ್ತಿದ್ದರೇ ಸಮನ್ವಿತಾ ಅವನನ್ನೇ ಬೆರಗುಗಣ್ಣಿನಿಂದ ದಿಟ್ಟಿಸುತ್ತಾ ಶಿಲೆಯಿಂತೆ ಕುಳಿತುಬಿಟ್ಟಳು.....

'ನಾಲ್ಕು ವರ್ಷಗಳ ಹಿಂದೆ ಸ್ಟೇಷನ್ನಿನಲ್ಲಿ.....!! ಇನ್ನೂ ನಾಲ್ವರು ಹುಡುಗಿಯರಿದ್ದರು........! ಅಂದರೇ….. ಇವನು ನಮ್ಮಿಬ್ಬರನ್ನು ನೋಡಿರುವುದು…… ನಾನು ನವ್ಯಾಳನ್ನು ಬಿಡಿಸಿಕೊಂಡು ಬಂದಾಗ…...

ಅಂದ.....ರೇ..... ಇವನಿಗೆ ನವ್ಯಾಳ ಬಗ್ಗೆ...... ಎಲ್ಲಾ ಗೊತ್ತಾ!? ಗೊತ್ತಿದ್ದೂ ಸುಮ್ಮನಿದ್ದನಾ? ಹೌದೆಂದಲ್ಲಿ ಇವನ ಉದ್ದೇಶ......? ಇವನನ್ನು ನೋಡಿದರೆ ಯಾರಿಗೂ ಕೆಡುಕನ್ನು ಉಂಟುಮಾಡುವ ಉದ್ದೇಶವಂತೂ ಇದ್ದಂತಿಲ್ಲ.... ಮತ್ತೇಕೇ?' ಅವಳ ಮನಸ್ಸು ಮಂಥನದಲ್ಲಿ ತೊಡಗಿತ್ತು.

ಅದೇ ಯೋಚನೆಯಲ್ಲಿ ಮುಳುಗಿ ಹೋದವಳಿಗೆ ಅವನು ಮೂರ್ನಾಲ್ಕು ಬಾರಿ ಕರೆದರೂ ಅರಿವಾಗಲಿಲ್ಲ. "ಡಾಕ್ಟ್ರೇ…..." ಎಂದು ಅವನು ಭುಜ ಹಿಡಿದು ಅಲುಗಿಸಿದಾಗ ಇಹಕ್ಕೆ ಬಂದವಳ ಮುಖದಲ್ಲಿ ಬರೀ ಪ್ರಶ್ನೆಗಳೇ.

ಹಣೆ ಚಚ್ಚಿಕೊಂಡ ಅಭಿ, "ಏನಮ್ಮಾ ನೀನು, ಯಾವಾಗ ನೋಡಿದ್ರೂ ಯಾವ್ದೋ ಲೋಕದಲ್ಲಿ ಇರ್ತೀಯಾ. ನಿನ್ನಂತಾ ಡಾಕ್ಟ್ರನ್ನ ಇದೇ ಫಸ್ಟ್ ಟೈಮ್ ನೋಡ್ತಿರೋದು ನಾನು. ಈಗೇನಾಯ್ತು ಅಂತ ಇಷ್ಟು ಯೋಚನೆ ಮಾಡ್ತಿದ್ದೀ? ನನ್ನಿಂದ ನವ್ಯಾಗೆ ಏನಾದ್ರೂ ಸಮಸ್ಯೆಯಾಗಬಹುದು ಅಂತಾನಾ? ಇಲ್ಲಾ ಅವಳ ಬಗ್ಗೆ ನನಗೆ ಏನೇನು ಗೊತ್ತು ಅಂತಾನಾ?" ಕೇಳಿದ.

"ನೀವು ಸ್ಟೇಷನ್ನಿನಲ್ಲಿ ನಮ್ಮಿಬ್ಬರನ್ನು ನೋಡಿದ್ದೀರಾ ಅಂದ್ರೇ ನಿಮಗೆ....... ಅದೂ..... ನವ್ಯಾ....." ಯಾಕೋ ಮಾತು ಮುಂದುವರೆಸಲಾರದೇ ಹೋದಳು ಸಮಾ.

"ನನಗೆ ಎಲ್ಲಾ ವಿಷಯ ಗೊತ್ತಿದೆ ಸಮನ್ವಿತಾ. ಐ ಮೀನ್…... ನವ್ಯಾಳ ಹಿನ್ನೆಲೆ ನನಗೆ ಅವತ್ತೇ ಗೊತ್ತಾಗಿತ್ತು" ಅವಳು ಕೇಳಲಾರದೇ ಅರ್ಧದಲ್ಲೇ ನಿಲ್ಲಿಸಿದ ಪ್ರಶ್ನೆಗೆ ಅವನೇ ಉತ್ತರಿಸಿದ. ಅವಳಿಗೆ ಮುಂದೇನು ಮಾತನಾಡಬೇಕೆಂಬುದೇ ತಿಳಿಯಲಿಲ್ಲ. ಸುಮ್ಮನೆ ಕುಳಿತು ಬಿಟ್ಟಳು. 

"ನನ್ನಿಂದ ನವ್ಯಾಗೆ ಏನೆಲ್ಲಾ ಸಮಸ್ಯೆಗಳಾಗಬಹುದು ಅಂತ ಯೋಚಿಸ್ತಿದ್ದೀಯಾ?" ಎಂದವನನ್ನೇ ದೀರ್ಘವಾಗಿ ನೋಡಿದವಳು ಇಲ್ಲವೆಂದು ತಲೆಯಾಡಿಸಿದಳು.

"ಇಲ್ಲಾ ಅಭಿರಾಮ್, ನಿಮ್ಮಿಂದ ಅವಳಿಗೆ ತೊಂದರೆ ಆಗೋಕೆ ಸಾಧ್ಯಾನೇ ಇಲ್ಲ. ಹಾಗೆ ಮಾಡೋರಾಗಿದ್ರೆ ಇಷ್ಟು ದಿನ ಕಾಯೋ ಅಗತ್ಯ ಇರಲಿಲ್ಲ ನಿಮಗೆ. ಮೋರ್ ಓವರ್, ನೀವು ಅಂತಹ ಮನಸ್ಥಿತಿ ಇರೋ ವ್ಯಕ್ತಿಯೇ ಅಲ್ಲ. ನಿಮ್ಗೆ ಬದುಕುವ ಕಲೆ, ಬದುಕಿನ ಬೆಲೆ ಎರಡೂ ಗೊತ್ತಿದೆ. ಇನ್ನೊಬ್ಬರ ಪರಿಸ್ಥಿತಿಯನ್ನು ಅವರ ಜಾಗದಲ್ಲಿ ನಿಂತು ಅವಲೋಕಿಸುವ ಮನಸ್ಸು ಎಲ್ಲರಿಗೂ ಇರೋಲ್ಲ. ಆ ವಿಶಾಲ ಮನೋಭಾವ ನಿಮಗಿದೆ. ಬಹುಶಃ ಅದು ನಿಮ್ಮ ಹೆತ್ತವರಿಂದ ಬಂದ ಬಳುವಳಿಯೇನೋ. ನಿಮ್ಮಲ್ಲಿ ನನಗೆ ಅತೀ ಇಷ್ಟ ಆಗೋ ಗುಣ ಅದು. ಆದರೆ ನಿಮಗೆ ನವ್ಯಾ ವಿಚಾರ ಗೊತ್ತಿರಬಹುದು ಅನ್ನೋ ಸಣ್ಣ ಊಹೆಯೂ ನನಗಿರಲಿಲ್ಲ. ಅದಕ್ಕೇ ಆಶ್ಚರ್ಯ ಆಯ್ತು ಅಷ್ಟೇ. ಎಷ್ಟೋ ಸಲ ನೀವು ಕಿಶೋರ್ ಇಬ್ರೂ ಒಂದೇ ಅನ್ನಿಸಿಬಿಡುತ್ತೆ ನನಗೆ. ಅವನೂ ಡಿಟ್ಟೋ ನಿಮ್ಮ ಹಾಗೆಯೇ ಯೋಚನೆ ಮಾಡ್ತಾನೆ...." ಅವಳ ಮಾತುಗಳನ್ನು ಕೇಳಿ ಕಣ್ಣರಳಿಸಿದ ಅಭಿ.

"ಧನ್ಯೋಸ್ಮಿ .... ಅಂತೂ ನನ್ನಂತಹ ಪಾಮರನನ್ನೂ ಗಮನಿಸಿದ್ದೀರಾ ಅಂತಾಯ್ತು. ನಂಗಂತೂ ಯುದ್ಧ ಗೆದ್ದಷ್ಟು ಖುಷಿ ಆಯ್ತು ಡಾಕ್ಟ್ರೇ. ನಾನು ತುಂಬಾ ಸಲ ನವ್ಯಾ ಬಗ್ಗೆ ಕೇಳೋಣ ಅಂದ್ಕೊಂಡೆ. ಆದ್ರೆ ಕಿಶೋರ್ ಮತ್ತವರ ಮನೆಯವರಿಗೆ ವಿಷಯ ಗೊತ್ತಿಲ್ಲದಿದ್ರೆ ಅಂತ ಅಂದುಕೊಂಡು ಸುಮ್ಮನಾಗ್ತಿದ್ದೆ‌. ಇವತ್ತು ನೀನೇ ಆ ವಿಷಯ ತೆಗೆದು ನನಗೆ ಕೇಳೋಕೆ ಅವಕಾಶ ಸಿಕ್ಕಿತಷ್ಟೇ"

"ಕಿಶೋರನಿಗೆ ಎಲ್ಲವೂ ಗೊತ್ತು. ಅವನೂ ನಿಮ್ಮ ರೀತಿಯೇ ಗೊತ್ತಿದ್ದೂ ಗೊತ್ತಿಲ್ಲದವನ ಹಾಗಿದ್ದ. ಒಮ್ಮೆ ನೇರವಾಗಿ ನನಗೆ ಅವ್ಳಂದ್ರೆ ಇಷ್ಟ. ಮದುವೆಗೆ ಒಪ್ಪಿಸು ಅಂದಾಗ ನನಗೆ ಗಾಬರಿ ಆಗೋಯ್ತು. ನವ್ಯಾ ಆಗೋದೇ ಇಲ್ಲ ಅಂತ ಹಠ ಹಿಡಿದು ಕುಳಿತಾಗ್ಲೇ ಅವನಿಗೆ ಎಲ್ಲಾ ವಿಷಯ ಗೊತ್ತು ಅಂತ ನಮ್ಮಿಬ್ಬರಿಗೆ ಗೊತ್ತಾಗಿದ್ದು. ಆದರೆ ಮನೆಯವರಿಗೆ ವಿಷಯ ಗೊತ್ತಿಲ್ಲ. ಅದೇ ಎಲ್ಲಾ ಸಮಸ್ಯೆಗಳಿಗೂ ಮೂಲ ಆಗಿರೋದು. ಮನೆಯವರಿಗೆ ನಿಜ ಹೇಳೋಣ ಅಂತ ನವ್ಯಾ ಮದುವೆಗೆ ಮುಂಚೆಯೇ ಪಟ್ಟು ಹಿಡಿದಿದ್ಲು. ನಾವಿಬ್ಬರೂ ಏನೇನೋ ಹೇಳಿ, ಹರಸಾಹಸಪಟ್ಟು ಒಪ್ಪಿಸಿದ್ವಿ. ಈಗ ಮನೆಯವರಿಗೆ ಸತ್ಯ ಹೇಳಿದ್ರೆ ಅವರೆಲ್ಲಿ ನವ್ಯಾನ ತನ್ನಿಂದ ದೂರ ಮಾಡ್ತಾರೋ ಅನ್ನೋ ಭಯದಲ್ಲಿ ಕಿಶೋರ್ ಸತ್ಯ ಹೇಳೋಕೆ ತಯಾರಿಲ್ಲ. ಆದರೆ ಸತ್ಯ ಮುಚ್ಚಿಟ್ಟು ಇಷ್ಟು ದಿನ ಮನೆಯವರನ್ನು ಕತ್ತಲಲ್ಲಿಟ್ಟಿದ್ದು ಸಾಕು, ಸತ್ಯ ಹೇಳೋಣ ಅಂತ ನವ್ಯಾ ವಾದ. ಇಬ್ಬರ ಹೇಳಿಕೆಯಲ್ಲೂ ಸತ್ಯವಿದೆ. ಆದರೆ ಎರಡೂ ವಿರುದ್ಧ ದಿಕ್ಕಿನ ಯೋಚನೆಗಳು. ಕಿಶೋರ್ ಅಹಮದಾಬಾದಿಗೆ ವರ್ಗಾವಣೆ ಮಾಡಿಸಿಕೊಂಡು ನವ್ಯಾನ ಸಧ್ಯಕ್ಕೆ ಮನೆಯಿಂದಲೇ ದೂರ ಕರೆದೊಯ್ಯುವ ನಿರ್ಧಾರದಲ್ಲಿದ್ದಾನೆ. ಆದರೆ ಅವನು ನವ್ಯಾ ಮನಸ್ಥಿತಿನ ಅರ್ಥಾನೇ ಮಾಡ್ಕೋತಿಲ್ಲ. ಮುಚ್ಚಿಟ್ಟಿರುವ ಸತ್ಯ ಅವಳನ್ನು ಬೆಂಕಿಯಂತೆ ಸುಡುತ್ತಿದೆ. ಮನೆಯವರ ಅಕ್ಕರೆ, ಮಮತೆ ಕಂಡಾಗಲೆಲ್ಲಾ ಬೆಂಕಿಯ ಕೆನ್ನಾಲಿಗೆ ಇನ್ನಷ್ಟು ಪ್ರಜ್ವಲಿಸುತ್ತದೆ. ಇತ್ತೀಚೆಗಂತೂ ಅವಳ ವರ್ತನೆ ಭಯ ಹುಟ್ಟಿಸುವಂತಿದೆ. ಒಂದು ವೇಳೆ ಅವಳನ್ನು ಅಹಮದಾಬಾದಿಗೆ ಕರೆದೊಯ್ಯದರೆ ಅವಳು ಮಾನಸಿಕ ರೋಗಿಯಾಗುವುದಂತೂ ಖಚಿತ. ಇದೇ ನನ್ನ ಚಿಂತೆ ಅಭಿ" ಮನಸ್ಸು ಬಿಚ್ಚಿ ಹೇಳಿಕೊಂಡಳು.

"ಇದಕ್ಕೆಲ್ಲಾ ಪರಿಹಾರ ಇರುವ ಸತ್ಯವನ್ನು ಮನೆಯವರಿಗೆ ಹೇಳಿಬಿಡುವುದು. ಕಿಶೋರ್ ಭಯಪಟ್ಟಂತೆ ದೊಡ್ಡ ಗಲಾಟೆಯೇ ನಡೆದು ನವ್ಯಾ ಆ ಮನೆಯಿಂದ ಹೊರಬೀಳಬಹುದು ಅಥವಾ…….. ಕಿಶೋರನ ಮನೆಯವರು ವಿಚಾರವಂತರು. ನವ್ಯಾಳ ಸ್ಥಿತಿಯನ್ನು ಅರ್ಥೈಸಿಕೊಳ್ಳಲಾರರೇ ಸಮಾ?"

"ನನಗಂತೂ ಏನೂ ತೋಚುತ್ತಿಲ್ಲ ಅಭಿ. ಈ ಬಗ್ಗೆ ಯೋಚಿಸಿದಷ್ಟೂ ಸಮಸ್ಯೆ ಉಲ್ಬಣವಾಗುವಂತೆ ಕಾಣುತ್ತಿರುವುದೇ ಹೊರತು ಪರಿಹಾರದ ಲವಲೇಶವೂ ಗೋಚರಿಸುತ್ತಿಲ್ಲ"

"ಈ ಸಮಸ್ಯೆಗೆ ಸತ್ಯದ ಅನಾವರಣವೊಂದೇ ಪರಿಹಾರ ಸಮಾ. ಕಿಶೋರ್ ಈಗ ಅದರಿಂದ ತಪ್ಪಿಸಿಕೊಳ್ಳಲು ಪರ ಊರಿಗೆ ಹೋದರೂ ಮುಂದೊಂದು ದಿನ ಸತ್ಯ ಹೊರಬೀಳುವುದು ಖಚಿತ. ಆಗಲೂ ಪರಿಣಾಮ ಇದೇ. ಎಷ್ಟೇ ಕಾದರೂ ಪರಿಣಾಮವನ್ನು ಬದಲಿಸುವ ಸಾಧ್ಯತೆಯೇ ಇಲ್ಲದಿರುವಾಗ ಸತ್ಯವನ್ನು ಹೇಳಿ ಪರಿಣಾಮವನ್ನು ಎದುರಿಸುವುದೇ ಸರಿಯಾದ ನಿರ್ಧಾರ. ಆಗ ನವ್ಯಾಳ ಬೇಗುದಿಯಾದರೂ ಕಡಿಮೆಯಾಗುತ್ತದೆ. ಕಿಶೋರ್ ನವ್ಯಾಳೊಂದಿಗೆ ಅಹಮದಾಬಾದಿಗೆ ಹೋಗುವ ಮುನ್ನವೇ ನೀನು ಇರುವ ವಿಷಯವನ್ನು ಮನೆಯಲ್ಲಿ ಹೇಳಿಬಿಡು. ಆದದ್ದಾಗಲೀ" ಅಭಿಯ ಮಾತು ಸಮನ್ವಿತಾಳಿಗೆ ಅಕ್ಷರಶಃ ಸರಿಯೆನಿಸಿದರೂ ಅವನ ಪೂರ್ತಿ ಮಾತು ಒಪ್ಪಲಿಲ್ಲ.

"ನೀವು ಹೇಳುವುದು ಸರಿಯೇ. ಆದರೆ ನಾನು ಮನೆಯಲ್ಲಿ ಈ ವಿಷಯ ಹೇಳುವಂತಿಲ್ಲ ಅಭಿ. ಒಂದೋ ಕಿಶೋರ್ ಇಲ್ಲಾ ನವ್ಯಾ ಹೇಳಬೇಕು ಸತ್ಯವನ್ನು. ನಾನು ಹೇಳಿದರೆ ಕೊನೆಗೂ ಮಗ, ಸೊಸೆ ಸತ್ಯ ಹೇಳಲೇ ಇಲ್ಲ ಎಂಬ ಭಾವನೆ ಉದ್ಬವಿಸಿಬಿಡುತ್ತದೆ. ಅದು ಇನ್ನೂ ಅಪಾಯಕಾರಿ. ಅದರಿಂದಾಗಿ ಅಪ್ಪ ಅಮ್ಮ ತಮ್ಮ ಮಗ ಸೊಸೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬಿಡಬಹುದು. ಹಾಗಾಗಕೂಡದು." 

"ಅದೂ ಸರಿ, ನಾನು ಆ ಬಗ್ಗೆ ಯೋಚಿಸಲೇ ಇಲ್ಲ ನೋಡು. ಆದರೆ….... ನವ್ಯಾಳ ಸಧ್ಯದ ಪರಿಸ್ಥಿತಿ ನೋಡಿದರೆ ಅವಳೇ ಎಲ್ಲಾ ವಿಚಾರ ಹೇಳುವಳೇನೋ ಅನಿಸುತ್ತಿದೆ"

"ನನಗೂ ಹಾಗೆಯೇ ಅನಿಸುತ್ತಿದೆ ಅಭೀ. ಏನಾದರಾಗಲೀ,  ಈ ಬಾರಿ ಅವಳನ್ನು ತಡೆಯಲಾರೆ. ಆದರೆ ದೇವರು ಅವಳ ಕೈ ಬಿಡದಿರಲಿ ಅನ್ನುವುದೊಂದೇ ಬೇಡಿಕೆ. ಅಮ್ಮ ಅಪ್ಪ ಅವಳನ್ನು ಅರ್ಥೈಸಿಕೊಂಡರೇ..... ಎಷ್ಟು ಚೆನ್ನಾಗಿರುತ್ತೆ" ಅವಳ ಧ್ವನಿಯಲ್ಲಿ ಸಂತಸದ ಜೊತೆ ಅನುಮಾನವೂ ಮಿಳಿತವಾಗಿತ್ತು.

"ನೀನೇನೂ ಯೋಚಿಸಬೇಡ ಸಮಾ. ನಿನ್ನೆಲ್ಲಾ ನಿರ್ಧಾರಗಳಲ್ಲಿ ನಾನು ನಿನ್ನೊಂದಿಗಿದ್ದೇನೆ. ಅವರು ನವ್ಯಾಳನ್ನು ಒಪ್ಪಿಕೊಳ್ಳುತ್ತಾರೆಂದು ಆಶಿಸೋಣ. ಹಾಗೊಂದು ವೇಳೆ ಒಪ್ಪದಿದ್ದರೆ ನಾವಿರುವೆವಲ್ಲ ಅವಳಿಗೆ. ನನಗೂ ಆಕೃತಿಯೊಂದಿಗೆ ಇನ್ನೊಬ್ಬಳು ತಂಗಿ…….. ಅಣ್ಣನಂತೆ ಬೆನ್ನೆಲುಬಾಗಿ ನಿಂತು ಅವಳ ಬದುಕನ್ನು ರೂಪಿಸುತ್ತೇನೆ. ದಟ್ಸ್ ಮೈ ಪ್ರಾಮಿಸ್ ಟು ಯು ಡಿಯರ್" ಅವನ ಧ್ವನಿಯಲ್ಲಿ ದೃಢತೆಯಿತ್ತು. ಹುಡುಗಿ ಅವನ ಮಾತುಗಳಲ್ಲಿ ಕಳೆದುಹೋಗಿದ್ದಳು.

ನವ್ಯಾಳನ್ನು ಮನೆಯಿಂದ ಹೊರಹಾಕಿದರೆ ಅವಳು ನನ್ನೊಂದಿಗಿರಬಹುದೇ ಎಂದು ಕೇಳಿದ್ದಳು ಸ್ವಲ್ಪ ಮುಂಚೆ. ಅರೆಘಳಿಗೆಗೂ ಯೋಚಿಸದೇ, ಮರುಪ್ರಶ್ನಿಸದೆ ಸರಿ ಎಂದಿದ್ದ. 'ಅಣ್ಣನಂತೆ ನೆರಳಾಗಿ ನಿಲ್ಲುತ್ತೇನೆ. ಆಕೃತಿಯೊಂದಿಗೆ ಇನ್ನೊಬ್ಬಳು ತಂಗಿ…....' ಎಂತಹ ಮಾತು. ಅವಳು ನವ್ಯಾಳನ್ನು ಅವನ ಮನೆಗೆ ಕರೆತರಲು ಒಪ್ಪಿಗೆ ಕೇಳಿದರೆ, ಅವನು ಅದಾಗಲೇ ನವ್ಯಾಳನ್ನೇ ಅವನ ಮನೆಯ ಸದಸ್ಯೆಯಾಗಿ ಸೇರಿಸಿಕೊಂಡಿದ್ದ. ಅವನ ವ್ಯಕ್ತಿತ್ವದ ಎತ್ತರವನ್ನು ಅಳೆಯಲಾರದೇ ಹೋದಳು ಸಮಾ. ಜೀವನದಲ್ಲಿ ಪ್ರಪ್ರಥಮಬಾರಿಗೆ ತಂದೆ ಮಾಡಿದ ಕುಂತತ್ರಿ ಕೆಲಸವೊಂದರ ಬಗ್ಗೆ ಅತಿಯಾದ ಅಪ್ಯಾಯಮಾನತೆ ಮೂಡಿತು. 

ಸದಾ ತನ್ನ ಭಾವನೆಗಳನ್ನು ಒಂದು ಪರಿಧಿಯೊಳಗೇ ಇರಿಸಿ ಅವುಗಳು ತನ್ನನುಮತಿ ಇರದೇ ಹೊರಚೆಲ್ಲದಂತೆ ಬಂಧಿಸಿಡುವ ಹುಡುಗಿ ಅವಳು. ಆದರೆ ಇಂದು ಭಾವನೆಗಳ ಸಾಗರ ಉಕ್ಕೇರಿ ಪರಿಧಿ ದಾಟಿತ್ತು. ಲಯ ತಪ್ಪಿದ ಮನಸ್ಸು ಹುಚ್ಚುಖೋಡಿಯೇ ತಾನೇ...... ಹಿಂದುಮುಂದು ಯೋಚಿಸದೇ ಅವನನ್ನು ಬಿಗಿದಪ್ಪಿದ್ದಳು ಹುಡುಗಿ.

ಅವಳಿಂದ ಒಪ್ಪಿಗೆ, ಅಪ್ಪುಗೆ ಎರಡನ್ನೂ ನಿರೀಕ್ಷಿಸಿ, ಅದಕ್ಕಾಗಿ ಸಾಕಷ್ಟು ಉಪಾಯಗಳನ್ನು ಹೂಡಿ, ಸೋತು, ಅಷ್ಟು ಸುಲಭಕ್ಕೆ ಸಿಗದೆಂದು ಸ್ವಲ್ಪ ನಿರಾಶನಾಗಿದ್ದ ಹುಡುಗ. ಅಂತಹದರಲ್ಲಿ ಅವನು ಏನೂ ಪ್ಲಾನ್ ಮಾಡದೇ, ನಿರೀಕ್ಷೆಯೇ ಮಾಡಿರದ ಸಂದರ್ಭದಲ್ಲಿ ಅವನ ಊಹೆಗೂ ನಿಲುಕದಂತೆ ಹುಡುಗಿ ಅಪ್ಪಿಕೊಂಡುಬಿಟ್ಟಿರೆ……. ಅಭಿಯ ಪರಿಸ್ಥಿತಿ, ಮನಸ್ಥಿತಿ ಎರಡನ್ನೂ ನನಗಿಂತಲೂ ಚೆನ್ನಾಗಿ ನೀವೇ ಊಹಿಸಿರುತ್ತೀರಲ್ಲ….

ಕ್ಯೂನಲ್ಲಿ ನಿಲ್ಲದೇ ಸೀದಾ ತಿರುಪತಿ ತಿಮ್ಮಪ್ಪನ ದರುಶನ ಭಾಗ್ಯ ವಿತ್ ಪ್ರಸಾದ ಲಭಿಸಿದಂತಾಗಿತ್ತು ಹುಡುಗನಿಗೆ. ಸಧ್ಯಕ್ಕೆ ಈ ಅಪ್ಪಿಕೋ ಚಳುವಳಿಗೆ ಕಾರಣಕರ್ತೆಯಾದ ನವ್ಯಾ ಅವನ ಪಾಲಿಗೆ ವೆಂಕಟರಮಣನಿಗಿಂತಲೂ ಒಂದು ಕೈ ಮೇಲು. ಅವಳಿಗೆ ಮನದಲ್ಲೇ ಧನ್ಯವಾದ ಹೇಳುತ್ತಾ ತನ್ನ ಹಿಡಿತ ಬಿಗಿಗೊಳಿಸಿದ. ತನ್ನ ಸುತ್ತ ಅವನ ಹಿಡಿತ ಬಲವಾದಾಗ ಎಚ್ಚೆತ್ತಳು. ತನ್ನ ಹಿಡಿತ ಸಡಿಲಿಸಿ ಅವನನ್ನು ತನ್ನಪ್ಪುಗೆಯಿಂದ ಮುಕ್ತಗೊಳಿಸಿದಳು ಅದನ್ನೇ ಅವನಿಂದ ನಿರೀಕ್ಷಿಸಿ.

ಆದರವನು ಜಾಣ..... ಸಿಕ್ಕ ಅವಕಾಶ ಬಿಡುವುದುಂಟೇ...? ಅವನ ಅಪ್ಪುಗೆ ಇನ್ನೂ ಕೊಂಚ ಬಲವಾಯಿತೇ ಹೊರತು ಸಡಿಲವಾಗುವ ಲಕ್ಷಣವೇ ಕಾಣಲಿಲ್ಲ. ಕೊಸರಿಕೊಂಡು ಅವನಿಂದ ಬಿಡಿಸಿಕೊಳ್ಳಲು ನೋಡಿದಳು. ಅವನ ಬಲದ ಮುಂದೆ ಅದು ಸಾಧ್ಯವಾಗಲಿಲ್ಲ. ಮೈಯ ರಕ್ತವೆಲ್ಲಾ ಮುಖಕ್ಕೆ ನುಗ್ಗಿ ಮೊಗವೆಲ್ಲಾ ರಕ್ತಚಂದನ ಪಸರಿಸಿದಂತೆ ಕೆಂಪಾಯಿತು......

ನಾಚಿ ನೀರಾದವಳ ವದನ ಪ್ರತ್ಯೂಷೆಯೇ.....

"ಅಭಿ ಪ್ಲೀಸ್ ಬಿಡಿ...." ಗೋಗರೆದಳು.

"ನೋಡಿ ಡಾಕ್ಟ್ರೇ, ಮೊದಲು ತಬ್ಬಿಕೊಂಡಿದ್ದು ನೀವು. ಆಗ ನಾನು ಒಳ್ಳೇ ಹುಡುಗನ ತರ ನೀವು ಬಿಡೋವರೆಗೂ ಸುಮ್ಮನಿದ್ದೆ ತಾನೇ? ಈಗ ನೀವೂ ನಾನು ಬಿಡೋವರೆಗೆ ಸುಮ್ಮನೆ ಕೂತಿರ್ಬೇಕಪ್ಪಾ" ಅವನದು ಲಾ ಪಾಯಿಂಟ್.

"ಪ್ಲೀಸ್....." ಮನವಿ ಸಲ್ಲಿಸುವಂತೆ ರಾಗ ಎಳೆದಳು ಅವಳು. ಅವಳ ಹಣೆಯನ್ನೊಮ್ಮೆ ಚುಂಬಿಸಿದವನು ನಿಧಾನವಾಗಿ ಹಿಡಿತ ಸಡಿಲಿಸಿದ. ಅವನು ಬಿಟ್ಟಿದ್ದೇ ಸಾಕೆಂಬಂತೆ ಸರಿದು ಕುಳಿತು ಹೊರಗೆ ನೋಡತೊಡಗಿದಳು. 

"ಏನೋ ಪಾಪ ಇಷ್ಟೊಂದು ರಿಕ್ವೆಸ್ಟ್ ಮಾಡಿದ್ದೀರಾ ಅಂತ ಬಿಟ್ಟಿದ್ದೀನಿ ಡಾಕ್ಟ್ರೇ. ಆದ್ರೂ ನೀವು ಇಷ್ಟು ಅದ್ಭುತವಾದ ಪ್ರತಿಕ್ರಿಯೆ ಕೊಡ್ತೀರಿ ಅಂತ ಗೊತ್ತಿದ್ರೆ ಮೊನ್ನೆ ರಕ್ಷಾಬಂಧನದ ದಿನವೇ ನವ್ಯಾ ಹತ್ರ ರಾಖಿ ಕಟ್ಟಿಸ್ಕೋತಿದ್ದೆ ನಾನು. ಅವತ್ತು ಮಿಸ್ ಆಯ್ತು ಆದ್ರೂ ಪರ್ವಾಗಿಲ್ಲ. ನನ್ನ ತಂಗ್ಯವ್ವನಿಂದಾಗಿ ಇವತ್ತು ಸೂಪರಾಗಿರೋ ಗಿಫ್ಟ್ ಅಂತೂ ಸಿಕ್ಕಿತು. ಆ ಕೋತಿ ಕೃತಿಗಿಂತ ನನ್ನ ಹೊಸ ತಂಗಿ ಗ್ರೇಟ್......" ನವ್ಯಾಳನ್ನು ಹೊಗಳಿದ.

ಕೆಂಪೇರಿದ ವದನವನ್ನು ಅವನಿಗೆ ಅಭಿಮುಖವಾಗಿಸಿ ಹೊರನೋಡುತ್ತಾ ಕುಳಿತವಳು ಮನೆ ತಲುಪುವವರೆಗೂ ಅವನ ಮುಖ ನೋಡುವ ಧೈರ್ಯ ಮಾಡಲಿಲ್ಲ. ಮನೆ ಮುಂದೆ ಕಾರು ನಿಂತಾಗ ಇಳಿದವಳು ಅವನಿಗೆ ಕಣ್ಣಿನಲ್ಲೇ ಧನ್ಯವಾದ ತಿಳಿಸಿ ಅಲ್ಲಿ ನಿಲ್ಲದೇ ಒಳಗೋಡಿದಳು. ನವ್ಯಾ ಬಾಗಿಲಿಗೆ ಬಂದು ನಿಂತಿದ್ದಳು ಅವಳನ್ನು ಎದುರುಗೊಳ್ಳಲು. ಸಮಾ ಒಳಹೋಗುವುದನ್ನೇ ನೋಡುತ್ತಿದ್ದವ ನೋಟ ಬಾಗಿಲಿಗೆ ಒರಗಿದ್ದ ನವ್ಯಾಳತ್ತ ಹರಿಯಿತು. ಇವನನ್ನು ನೋಡಿ ಜೀವವಿಲ್ಲದ ನಗೆಯೊಂದನ್ನು ಅರಳಿಸಿದಳು. ಇವನೂ ನಸುನಕ್ಕ. ಮನೋರೋಗಿಯಾಗುವ ಹಂತದಲ್ಲಿರುವಂತೆ ಕಂಡಳು. ಅಂದು ಪೋಲೀಸ್ ಠಾಣೆಯಲ್ಲಿ ಅವಳನ್ನು ನೋಡಿದ್ದನ್ನು ನೆನಪಿಸಿಕೊಂಡ. ಅವತ್ತೂ ಅವಳ ಬಗ್ಗೆ ತಿಳಿದಾಗ ಆಕೃತಿಯೇ ಅವನಿಗೆ ನೆನಪಾಗಿದ್ದು. 

'ಈ ಮನೆಯವರೊಂದಿಗೆ ಬೆರೆತುಹೋಗಿರುವಾಕೆ ಇಲ್ಲಿಂದ ಹೊರಬಿದ್ದರೆ ಬದುಕಬಲ್ಲಳೇ?' ಎಂಬ ಪ್ರಶ್ನೆ ಕಾಡಿತು ಅವನನ್ನು. ಈ ಮನೆಯಿಂದ ಅವಳನ್ನು ಬೇರ್ಪಡಿಸಬೇಡವೆಂದು ಭಗವಂತನಲ್ಲಿ ಪ್ರಾರ್ಥಿಸಿತು ಅವನ ಮನ. ನಿಟ್ಟುಸಿರಿನೊಂದಿಗೆ ಮನೆಯತ್ತ ಕಾರನ್ನು ಚಲಾಯಿಸಿದ.

ಅವನ ಪ್ರಾರ್ಥನೆಯನ್ನು ಭಗವಂತ ಮನ್ನಿಸುವನೋ ಇಲ್ಲವೋ ಕಾಲವೇ ಉತ್ತರಿಸಬೇಕು…..... 

ಆದರೆ ಮುಚ್ಚಿಟ್ಟ ಸತ್ಯ ಮಾತ್ರಾ ಹೊರಬರಲು ಹವಣಿಸುತ್ತಿತ್ತು........ 

ಸತ್ಯದ ಅನಾವರಣಕ್ಕೆ ರಂಗ ಸಜ್ಜಾಗಿತ್ತು.........

ಅದರ ಮುಹೂರ್ತ ಯಾರೂ ಊಹಿಸದಷ್ಟು ಸನಿಹದಲ್ಲಿತ್ತು.........

          ****************************

ಅಂದು ಮನೆಯಲ್ಲಿ ನಾಲ್ವರೇ.... ಕಾರ್ತಿಕ್ ಪರೀಕ್ಷೆಯನ್ನು ಬರೆದು ಬಿಸಾಕಿದ ಸಂಭ್ರಮವನ್ನು ಆಚರಿಸಲು ತನ್ನ ಸ್ನೇಹಿತರೊಂದಿಗೆ ಹದಿನೈದು ದಿನಗಳ ದೇಶಸಂಚಾರ ಕೈಗೊಂಡಿದ್ದ. ಇನ್ನು ಅಹಮದಾಬಾದಿಗೆ ವರ್ಗಾವಣೆ ಮಾಡಿಸಿಕೊಳ್ಳಲು ದೃಢನಿಶ್ಚಯ ಮಾಡಿದ್ದ ಕಿಶೋರ್ ಅಂದು ಮುಂಜಾನೆಯೇ ಅಲ್ಲಿಗೆ ತೆರಳಿದ್ದ. ಮನೆಯಲ್ಲಿ ಎಲ್ಲರಿಗೂ ಆಫೀಸಿನ ಕೆಲಸದ ಮೇಲೆ ಹೋಗುತ್ತಿರುವೆನೆಂದು ಹೇಳಿದ್ದ. ಸಮನ್ವಿತಾ ಸತ್ಯ ತಿಳಿದೂ ಏನೂ ಮಾಡಲಾಗದೇ ಚಡಪಡಿಸಿದ್ದಳು. ಅವನು ನವ್ಯಾಳಿಗೂ ಸತ್ಯ ತಿಳಿಸದೇ ಅಹಮದಾಬಾದಿನಲ್ಲಿ ವಾಸ್ತವ್ಯ ಹೂಡಲು ತಯಾರಿ ನಡೆಸಿದ್ದು ಅಚ್ಚರಿ ಎನಿಸಿತ್ತು ಅವಳಿಗೆ. ಆದರೆ ವಾಸ್ತವದಲ್ಲಿ ನಡೆದದ್ದೇ ಬೇರೆ. ಕಿಶೋರ್ ನವ್ಯಾಳಿಗೆ ಅಹಮದಾಬಾದಿಗೆ ಹೋಗುವ ವಿಷಯವನ್ನು ತಿಳಿಸಲು ಬಹಳಷ್ಟು ಪ್ರಯತ್ನಿಸಿದ್ದ. ಆದರೆ ಅವಳ ಭಾವಹೀನ ಮುಖವನ್ನು ಕಂಡಾಗಲೆಲ್ಲಾ ಆಡಬೇಕೆಂಬ ಮಾತುಗಳು ಗಂಟಲಲ್ಲೇ ಉಳಿದಿದ್ದವು. ಹಾಗಾಗಿಯೇ ಅವಳಿಗೂ ಆಫೀಸಿನ ಕೆಲಸದ ಮೇಲೆ ಹೋಗುತ್ತಿರುವೆ ಎಂದೇ ಹೇಳಿದ್ದ. ಅಹಮದಾಬಾದ್ ತಲುಪಿ ಇರಲು ಮನೆ ಹುಡುಕಿದ ಮೇಲೆ ಫೋನಿನಲ್ಲಿ ಅವಳಿಗೆ ಸೂಕ್ಷ್ಮವಾಗಿ ವಿಚಾರ ತಿಳಿಸುವ ನಿರ್ಧಾರ ಅವನದು. 

ಆದರೆ ಈ ನಿರ್ಧಾರವೇ ನಾಳೆ ಅವನ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಲಿರುವ ಬಿರುಗಾಳಿ ಎಂಬ ಸುಳಿವೂ ಅವನಿಗಿರಲಿಲ್ಲ.

ಅವನು ಅಹಮದಾಬಾದಿಗೆ ಹೊರಟಾಗಲೇ ಏನೋ ಸರಿಯಿಲ್ಲ ಎಂಬ ಸೂಚನೆ ನವ್ಯಾಳ ಸೂಕ್ಷ್ಮ ಮನಕ್ಕೆ ಸಿಕ್ಕಿಬಿಟ್ಟಿತ್ತು. ಕಿಶೋರನ ತಲೆಯಲ್ಲಿ ಏನೋ ಯೋಜನೆಯಿದೆ ಎಂದು ಗ್ರಹಿಸಿಬಿಟ್ಟಿದ್ದಳು ಅವಳು. ಸ್ಪಷ್ಟತೆ ಸಿಕ್ಕಿರಲಿಲ್ಲ ಅಷ್ಟೇ. ಆದರೆ ಎಲ್ಲೋ ಏನೋ ತಪ್ಪಾಗಲಿದೆ ಎಂದು ಬಲವಾಗಿ ಭಾಸವಾಗತೊಡಗಿತ್ತು. ಅವಳೊಡಲ್ಲಲ್ಲಿದ್ದ ಅತೀತದ ಸತ್ಯಕ್ಕೆ ಮಾಸಗಳು ತುಂಬಿದ್ದವು. ಅಂತರಾಳವನ್ನು ಜಗ್ಗಿ ಎಳೆಯುವ ವೇದನೆಯೆಂಬ ಬೇನೆ ಆರಂಭವಾಗಿತ್ತು. 

ಅದು ಪ್ರಸವ ವೇದನೆಯಾ?

ಸತ್ಯ ಹಡೆಯಲು ಕ್ಷಣಗಣನೆ ಆರಂಭವಾಗಿತ್ತೇ?

ಆ ದಿನ ಹಾಗೇ ಕಳೆದು ಮರುದಿನ ಕಾಲಿಟ್ಟಿತ್ತು. ಅವತ್ತು ಮನೆಯಲ್ಲಿ ಸಮಾಧಾನವಾಗಿದ್ದವರು ಸತ್ಯನಾರಾಯಣ ಹಾಗೂ ಮಂಗಳಾ. 

ಉಳಿದಿಬ್ಬರದ್ದೂ ಒಂದೇ ತೆರನಾದ ಚಡಪಡಿಕೆ. ನವ್ಯಾಳಿಗೆ ಎಂದಿನ ಹಿಂಸೆಯ ಜೊತೆಗೇ ಕಿಶೋರ್ ಏನೋ ತಪ್ಪು ಮಾಡಹೊರಟಿದ್ದಾನೆ ಎಂಬ ಕಳವಳವಾದರೇ, ಅಂದೇಕೋ ಹೇಳಲಾರದಂತಹ ಸಂಕಟ ಶುರುವಾಗಿತ್ತು ಸಮನ್ವಿತಾಳ ಮನದಲ್ಲಿ. ಬೇಡವೆಂದು ದೂರ ದೂರ ಸರಿಸಿದಷ್ಟೂ ವ್ಯಾಕುಲತೆ ಮತ್ತೆ ಮತ್ತೆ ರಚ್ಚೆ ಹಿಡಿದಂತೆ ಬಂದಪ್ಪುತ್ತಿತ್ತು.

ಆಸ್ಪತ್ರೆಗೆ ಹೋಗುವ ಮನಸ್ಸಿರಲಿಲ್ಲ ಅವಳಿಗೆ. ಆದರೆ ಹೋಗಲೇ ಬೇಕಾದ ಅನಿವಾರ್ಯತೆ ಇತ್ತು. ಹೊರಡುವ ಮುನ್ನ ಎಂದೂ ಇಲ್ಲದ್ದು ಇಂದೇಕೋ ನವ್ಯಾಳಿಗೆ, "ಏನೇ ಇದ್ದರೂ ನನಗೊಂದು ಫೋನ್ ಇಲ್ಲಾ ಮೆಸೇಜ್ ಮಾಡೇ" ಎಂದು ಬಾರಿ ಬಾರಿ ಹೇಳಿದ್ದಳು‌. ಅಭಿಗೆ ಕ್ಲೈಂಟ್ ಜೊತೆ ಮುಖ್ಯವಾದ ಮೀಟಿಂಗ್ ಇದ್ದುದರಿಂದ ಆಸ್ಪತ್ರೆಗೆ ಆಟೋ ಹಿಡಿದು ಬಂದಿದ್ದಳು. ಕ್ಯಾಬಿನ್ನಿಗೆ ಬಂದ ಕೂಡಲೇ ಕಣ್ಣಿಗೆ ಬಿದ್ದದ್ದು ರಾಶಿ ಗುಲಾಬಿಗಳನ್ನು ಒಳಗೊಂಡಿದ್ದ ಸುಂದರ ಹೂಗುಚ್ಛ. ಕೈಗೆತ್ತಿಕೊಂಡು ಹೂಗಳನ್ನು ಸವರಿದಳು ಮೃದುವಾಗಿ. ಏನೋ ಬರವಣಿಗೆಯಿದ್ದ ಟ್ಯಾಗ್ ಕಣ್ಣಿಗೆ ಬಿತ್ತು. ತೆಗೆದು ನೋಡಿದಳು.

"To the most beautiful and pure soul I ever met........ love you to the moon and back my love" 

ಓದಿದವಳ ತುಟಿಯಂಚಿನಲ್ಲಿ ನಗು ಅರಳಿತು. ಮತ್ತೊಮ್ಮೆ ಅದನ್ನು ಸವರಿದವಳು, ಟೇಬಲ್ ಮೇಲಿನ ವಾಸ್ ಗೆ ಅದನ್ನು ಸೇರಿಸಿದಳು. ಇಡೀ ಕೋಣೆಯೇ ಸುಂದರವಾಗಿ ಕಂಡಿತು. ಕೆಲ ಹೊತ್ತು ಅದೇ ಗುಂಗಿನಲ್ಲಿದ್ದವಳಿಗೆ ಮತ್ತೆ ನವ್ಯಾಳ ನೆನಪಾಗಿತ್ತು. 

ಅವಳ ನೆನಪಿನೊಂದಿಗೆ ಮತ್ತೆ ಮನಸ್ಸು ನೀರಿಂದ ಹೊರಬಿದ್ದ ಮೀನಿನಂತೆ ಒದ್ದಾಡತೊಡಗಿದಳು. ಯಾವ ಕೆಲಸದಲ್ಲೂ ಏಕಾಗ್ರತೆ ಮೂಡಲಿಲ್ಲ. ಅರ್ಧಗಂಟೆ ಕಳೆಯುವುದರೊಳಗೆ ತಲೆ ಸಿಡಿಯತೊಡಗಿತು.

             ***************************

ಮಧ್ಯಾಹ್ನದ ಊಟ ಮುಗಿಸಿ ಸೋಫಾ ಮೇಲೆ ಸಣ್ಣ ನಿದ್ರೆಗೆ ಜಾರಿದ್ದರು ಸತ್ಯನಾರಾಯಣರು. ಮಂಗಳಮ್ಮ ಅಲ್ಲೇ ನೆಲದಲ್ಲಿ ಕುಳಿತು ಯಾವುದೋ ದೇವರ ನಾಮ ಗುನುಗುತ್ತಾ ರಾಗಿಯನ್ನು ಚೊಕ್ಕಗೊಳಿಸುತ್ತಿದ್ದರು. ನವ್ಯಾ ಅಡುಗೆ ಮನೆಯ ಕೆಲಸ ಮುಗಿಸಿ ಕೋಣೆಗೆ ಬಂದು ಎಂದಿನಂತೆ ತಾರಸಿ ದಿಟ್ಟಿಸುತ್ತಾ, ತನ್ನನ್ನು ತಾನೆ ಹಳಿದುಕೊಂಡು ಕುಳಿತಿದ್ದಳು.

ಆಗ ಬಂದಿತ್ತು ಕಿಶೋರನ ಕರೆ.......

ಉಭಯ ಕುಶಲೋಪರಿ ವಿಚಾರಿಸಿದವನು ಮುಖ್ಯವಾದ ವಿಚಾರಕ್ಕೆ ಬಂದಿದ್ದ. ಕಂಪನಿ ತನ್ನನ್ನು ಅಹಮದಾಬಾದಿಗೆ ವರ್ಗಾವಣೆ ಮಾಡಿದೆಯೆಂದೂ, ಮುಂದಿನ ಎರಡು ವಾರಗಳೊಳಗಾಗಿ ಇಲ್ಲಿ ಡ್ಯೂಟಿಗೆ ಸೇರಬೇಕಾಗಿರುವುದಾಗಿಯೂ ಹೇಳಿದ. ತಾನು ಇಲ್ಲಿ ವಾಸ್ತವ್ಯಕ್ಕೆ ಕೋಣೆಯನ್ನು ಬಾಡಿಗೆಗೆ ಪಡೆದಿರುವೆ ಎಂದವನು ನೀನೂ ಇಲ್ಲಿಗೆ ಬರಲು ತಯಾರಾಗು ಎಂದ.

ಈಗ ಕಿಶೋರನ ಯೋಜನೆಯ ಸಂಪೂರ್ಣ ನೀಲಿನಕ್ಷೆ ಸಿಕ್ಕಿತವಳಿಗೆ. ಇವನೇ ಆಫೀಸಿನಲ್ಲಿ ಕೇಳಿ ಅಹಮದಾಬಾದಿಗೆ ವರ್ಗಾವಣೆ ಪಡೆದಿದ್ದಾನೆಂದು ಅರಿಯದಷ್ಟು ದಡ್ಡಿಯಲ್ಲ ಅವಳು. ಇವಳಿಂದ ಪ್ರತಿಕ್ರಿಯೆ ಸಿಗದ ಕಾರಣ ಅವನು ಆ ಬದಿಯಿಂದ ಫೋನಿನಲ್ಲಿ ಇವಳನ್ನೇ ಕರೆಯುತ್ತಿದ್ದ. ಕೊನೆಗೊಮ್ಮೆ ಅವನ ಕರೆಗೆ ಓಗೊಟ್ಟವಳು,

"ಸಮಸ್ಯೆಗೆ ಪರಿಹಾರ ಕೇಳಿದರೆ ಸಮಸ್ಯೆಯಿಂದ ಪಲಾಯನ ಮಾಡುವ ನಿರ್ಧಾರ ಕೈಗೊಂಡಿರಲ್ಲ ಕಿಶೋರ್…...." ಎಂದಳಷ್ಟೇ. 

ಅವನು ಅವಳನ್ನು ಸಮಾಧಾನಿಸಿ, ಕಂಪನಿಯವರ ಒತ್ತಾಯದಿಂದ ಕಳಿಸಿರುವರೆಂದು ಓಲೈಸಿದ. ಈ ಬಗ್ಗೆ ಯೋಚಿಸು ಎಂದು ಹೇಳಿ ಫೋನಿಟ್ಟಿದ್ದ ಕಿಶೋರ್ ಅವಳು ಈ ಬಗ್ಗೆ ಯೋಚಿಸುವಳು ಎಂಬ ನಂಬಿಕೆಯಲ್ಲಿ……..

ಆದರೆ ಅವಳು ಯೋಚಿಸಲಿಲ್ಲ….....

ಅವಳು ನಿರ್ಧರಿಸಿಬಿಟ್ಟಳು.........!!!!

ಕಾಡುವ ಕನಸುಗಳು, ಸುಡುವ ಸತ್ಯ, ಕಣ್ಮುಂದೆ ಕುಣಿವ ಭವಿಷ್ಯವೆಂಬ ಭೂತ....... ಇವುಗಳ ನಿಲ್ಲದ ಹೊಡೆತದಿಂದ ಜರ್ಜರಿತಳಾಗಿ ಶವಪೆಟ್ಟಿಗೆ ಸೇರಿದ್ದವಳಿಗೆ ಕಿಶೋರನ ನಿರ್ಧಾರ ಕೊನೆಯ ಮೊಳೆಯ ಹೊಡೆತದಂತೆ ಭಾಸವಾಗಿಬಿಟ್ಟಿತು. ಏನನ್ನೂ ಉಳಿಸಿಕೊಳ್ಳುವ ಚೈತನ್ಯ ಉಳಿದಿರಲಿಲ್ಲ ಅವಳಲ್ಲಿ.......

ಸತ್ಯವೆಂಬ ಭ್ರೂಣವನ್ನು ಉದರದಿಂದ ಬಿಡುಗಡೆಗೊಳಿಸಲು ನಿರ್ಧರಿಸಿದಳು ನವ್ಯಾ......!

ಗಂಡನ ಪ್ರೀತಿ, ಮನೆಯವರ ಅಕ್ಕರೆ, ಸಮಾಜದ ಗೌರವ ಕಳೆದುಕೊಳ್ಳಬೇಡವೆಂದು ಕೂಗುತ್ತಿದ್ದ ಮನದ ಆಸೆಯ ಮೇಲೆ ಬಂಡೆಗಲ್ಲನ್ನು ಹೇರಿ ಗಟ್ಟಿಯಾದ ನಿಶ್ಚಯದೊಂದಿಗೆ ಹಜಾರಕ್ಕೆ ಬಂದು ಮಂಗಳಮ್ಮನ ತೊಡೆಯ ಮೇಲೆ ತಲೆಯಿಟ್ಟಳು.

ಒಮ್ಮೆಲೇ ಬಂದು ತೊಡೆಯ ಮೇಲೆ ತಲೆಯಿಟ್ಟ ಸೊಸೆಯ ತಲೆ ಸವರಿದರು ಮಂಗಳಾ. "ಏನಾಯ್ತು ನವ್ಯಾ? ಕಿಶೋರ, ಕಾರ್ತೀ ಇಬ್ಬರೂ ಇಲ್ಲ ಅಂತ ಬೇಜಾರಾಗ್ತಿದೆಯೇನು?" ಕೇಳಿದರು. ಅವಳಿಂದ ಉತ್ತರ ಬರಲಿಲ್ಲ. ಆದರೆ ಅವಳ ಉಸಿರಾಟದ ಏರಿಳಿತ ಅವಳು ಅಳುತ್ತಿದ್ದಾಳೆ ಎಂಬುದನ್ನು ತಿಳಿಸಿತು. ಗಾಬರಿಗೊಂಡು, "ಯಾಕಮ್ಮಾ ಅಳ್ತಿದ್ದೀ? ಏನಾಯ್ತು? ಕಿಶೋರ ಏನಾದ್ರೂ ಅಂದ್ನಾ?" ಅವಳನ್ನು ಮಡಿಲಿಂದ ಎಬ್ಬಿಸಿ ಎದೆಗೊರಗಿಸಿಕೊಂಡು ಕೇಳಿದರು. ಅವಳ ಅಳು ಮತ್ತೂ ಜೋರಾಯಿತು. ಬಿಕ್ಕಳಿಕೆಯ ಸದ್ದಿಗೆ ಸತ್ಯನಾರಾಯಣರಿಗೂ ಎಚ್ಚರವಾಯಿತು. ಇಬ್ಬರೂ ಸಮಾಧಾನಿಸಿದರೂ ಅವಳ ಅಳು ನಿಲ್ಲಲೇ ಇಲ್ಲ.

"ಯಾಕೆ ಅಳ್ತಿದ್ದೀಯಾ ತಾಯಿ, ಅದನ್ನಾದರೂ ಹೇಳು..." ಪದೇ ಪದೇ ಕೇಳಿದರು ಗಂಡ ಹೆಂಡತಿ.

"ಅಮ್ಮ..... ನಾನು ನಿಮ್ಮ ಹತ್ರ ಒಂದು ದೊಡ್ಡ ಸತ್ಯ ಮುಚ್ಚಿಟ್ಟಿದ್ದೀನಿ....." ಕೇವಲ ತನ್ನನ್ನು ಮಾತ್ರ ಒಳಗೊಂಡು ಹೇಳಿದಳು.

"ಎಂತಾ ಸತ್ಯ? ಅಷ್ಟು ಅಳೋವಂತಹದ್ದು ಏನೇ ಅದೂ" ಕೇಳಿದರು ಮಂಗಳಾ. ಇತ್ತೀಚೆಗೆ ತೀರಾ ಮಂಕಾಗಿರುತ್ತಿದ್ದ ಸೊಸೆಯ ಮನದಲ್ಲೇನೋ ನೋವಿದೆ ಎಂಬುದು ಅವರ ಗ್ರಹಿಕೆ.

"ಅಮ್ಮಾ...... ಅ..... ಅಮ್ಮ...... ನಾನು..... ಸಮಾ... ಸಮಾ ನನಗೆ ಪರಿಚಯ ಆಗೋಕೆ ಮುಂಚೆ ನಾನು..... ನಾನು.....ನಾ...... ವೇ...... ವೇಶ್ಯೆಯಾಗಿದ್ದೆ…..." 

ಅಳುವಿನ ನಡುವಿಂದ ನಡುಗುವ ದನಿಯಲ್ಲಿ ಬಂದ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದ ಮಂಗಳಾ ಅವಳಾಡಿದ ಕೊನೆಯ ಪದ ಕೇಳಿ ಸ್ಥಬ್ದರಾದರು. ಸೊಸೆಯ ತಲೆಯನ್ನು ಸವರುತ್ತಿದ್ದ ಕೈ ತಟಸ್ಥವಾಯಿತು.

       *******ಮುಂದುವರೆಯುತ್ತದೆ********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ