ಸೋಮವಾರ, ಜೂನ್ 29, 2020

ಅನೂಹ್ಯ 33

ತನ್ನ ಕಾಲೆಳೆದು ಗೋಳು ಹೊಯ್ದುಕೊಳ್ಳುತ್ತಿದ್ದ ಅಣ್ಣನಿಗೆ ಹೊಡೆಯಲು ಸ್ಟೀಲ್ ಜಗ್ ಎತ್ತಿಕೊಂಡಳು ಆಕೃತಿ. ಅದೇ ಸಮಯಕ್ಕೆ ಸರಿಯಾಗಿ ವಾರ್ಡಿನೊಳಗೆ ಪ್ರವೇಶಿಸಿದ್ದ ಡಿಟೆಕ್ಟಿವ್ ವೈಭವ್........

ಬಾಗಿಲಿಗೆ ಬಂದ ಅಭಿ ಎದುರು ಸಿಕ್ಕ ಪತ್ತೇದಾರನನ್ನು ತನ್ನ ಮುಂದೆ ರಕ್ಷಾ ಕವಚದಂತೆ ಹಿಡಿಯೋದಕ್ಕೂ....

ನಮ್ಮ ಪತ್ತೇದಾರರು ತಮ್ಮ ಅರ್ಧ ಮುಖ ಮುಚ್ಚೋ ಹ್ಯಾಟನ್ನು ಸ್ಟೈಲಾಗಿ ತೆಗ್ಯೋದಕ್ಕೂ....

ಆಕೃತಿ ಗುರಿ ಇಟ್ಟು ಜಗ್ ಎಸಿಯೋದಕ್ಕೂ....

ಆ ಜಗ್ ಪತ್ತೇದಾರರ ಬುರುಡೆ ಬಿಚ್ಚೋದಕ್ಕೂ......

ಟೈಮು ಫುಲ್ ಸಿಂಕ್.......

ಆಕೃತಿ ಅಣ್ಣನಿಗಿಟ್ಟ ಗುರಿ ಪತ್ತೇದಾರನ ಮುಖದ ನೀಲಿ ನಕ್ಷೆಯನ್ನು ಬದಲಿಸಿ ಹಣೆಯನ್ನು ನೀಲಿಯಾಗಿಸಿತು. ಏಟು ಬೀಳುವ ಸಣ್ಣ ಸುಳಿವೂ ಪತ್ತೇದಾರರಿಗೆ ಇರದ ಕಾರಣ ಬ್ಯಾಲೆನ್ಸ್ ತಪ್ಪಿ ದೊಪ್ಪನೆ ನೆಲ ಸೇರಿ ಕಣ್ಮುಚ್ಚಿದ.

ಮೃದುಲಾ, ಸಚ್ಚಿದಾನಂದ ತಲೆತಗ್ಗಿಸಿ ನಿಂತಿದ್ದ ಅಣ್ಣತಂಗಿಯರಿಗೆ ಮಂಗಳಾರತಿ ಎತ್ತಿದರೆ, ನವ್ಯಾ, ಕಿಶೋರ್ ವೈಭವವನ್ನು ಎಚ್ಚರಿಸಲು ನೋಡಿದರು. ಸಮನ್ವಿತಾ ತಾನು ಡ್ರಿಪ್ಸ್ ತೆಗೆದು ಏಳಲಾಗದ ಕಾರಣ ಪಕ್ಕದಲ್ಲಿದ್ದ ನರ್ಸ್ ಒಬ್ಬಳನ್ನು ಕರೆದಳು.

ನರ್ಸ್ ಬಂದವಳೇ ಸ್ವಲ್ಪ ನೀರನ್ನು ಮುಖದ ಮೇಲೆ ಸಿಂಪಡಿಸಿದಳು. ನೀರು ಮುಸುಡಿಯ ಮೇಲೆ ಬಿದ್ದದ್ದೇ ಎಚ್ಚರಗೊಂಡ ವೈಭವನಿಗೆ ಚೈತಾಲಿಯ ಮನೆಯ ಹಸುವಿನ ನೆನಪಾಗಿ 'ನಾನು ಸತ್ತೆ ಅಂತ ಬಾಯಿಗೆ ಗೋಜಲ(he meant ಗೋಮೂತ್ರ) ಸುರಿದರಾ' ಎನಿಸಿತು. ಆಮೇಲೆ ನೆನಪಾಯ್ತು ಸತ್ತಾಗ ಸುರಿಯೋದು ಗಂಗಾಜಲ, ಗೋಜಲ ಅಲ್ಲ ಅಂತ. 

ಪಂಕ್ಚರ್ ಆದ ಮುಖವನ್ನು, ಭಾರವಾದ ತಲೆಯನ್ನು ಕಷ್ಟಪಟ್ಟು ಎತ್ತಿ ಎದುರು ನೋಡಿದರೆ.......

ಕಂಡಳು ಸುಂದರಿ, ಗಂಧರ್ವ ಕಿನ್ನರಿ, ನಗುವ ಹೊನ್ನಝರಿ...

ಅವಳನ್ನು ಕಂಡದ್ದೇ ತಾನು ಸತ್ತು ಸ್ವರ್ಗಕ್ಕೆ ಬಂದಿರುವುದು ಖಚಿತವಾಯಿತು ವೈಭವನಿಗೆ. ಸತ್ತ ದುಃಖಕ್ಕಿಂತ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರ ನೋಡುವ ಪುಳಕಕ್ಕೆ ಅವನಿಗೆ ಖುಷಿಯೊಂಬೋತ್ಲಿ ಖುಷಿಯಾಗಿತ್ತು. ಆ ಸಂತೋಷದಿಂದ ಅವಳನ್ನು ನೋಡುತ್ತಿದ್ದಾಗಲೇ,

"ಎಂದಾ ಸಾರ್, ಇಪ್ಪೋ ಸುಗಮಾಣೋ" ಎಂದು ಕೇಳಿದಳು ಮಲೆಯಾಳಿ ನರ್ಸಮ್ಮ.

'ಯಪ್ಪೋ, ಬರೀ ಭೂಲೋಕದಲ್ಲಿ ಮಾತ್ರ ಅಂದ್ಕೊಂಡಿದ್ದೆ. ಈ ಸ್ವರ್ಗದಲ್ಲೂ ಲ್ಯಾಂಗ್ವೇಜ್ ಪ್ರಾಬ್ಲಂ ಇದ್ಯಲ್ಲಪ್ಪಾ ದೇವ್ರೇ. ಇವಳೇನೋ ಹೇಳ್ತಿದ್ದಾಳಲ್ಲ.... ಎಂತ ಹೇಳಿದ್ದವಳು?? ಹಾಂ... ಟ್ರಿಪ್ಪೋ ಸೊಗಮಾಣೋ ..... ಅಂದ್ರೆ? ಸೊಗಮಾಣೋ ಅಂದ್ರೆ ಸುಖವಾಗಿತ್ತಾ ಅಂತಲ್ವಾ? ಓಹ್.... ಟ್ರಿಪ್. ಪ್ರಯಾಣ ಅನ್ನೋಕೆ ಟ್ರಿಪ್ಪೋ ಅಂದಿರಬೇಕು  ಮೋಸ್ಟಲೀ ಸ್ವರ್ಗದ ಪ್ರಯಾಣ ಸುಖಕರವಾಗಿತ್ತಾ? ಅಂತ ಕೇಳಿರ್ಬೇಕು' ಎಂದು ತನ್ನಲ್ಲೇ ವಿಚಾರ ವಿಮರ್ಶೆ ನಡೆಸಿದವನು,

"ಯಾ ಟ್ರಾವೆಲಿಂಗ್ ವಾಸ್ ನೈಸ್. ಬಟ್ ಲಿಟಲ್ ಪೇನ್ ಫುಲ್" ಹಲ್ಕಿರಿದು ಹೇಳಿದ ಊದಿದ ಹಣೆ ಸವರಿಕೊಳ್ಳುತ್ತಾ. ಇಂಗ್ಲೀಷ್ ಯುನಿವರ್ಸಲ್ ಭಾಷೆಯಾದ ಕಾರಣ ಸ್ವರ್ಗದಲ್ಲೂ ನಡೆಯುತ್ತದೆ ಎಂಬ ಭಾವನೆ ಅವನದು.

ಇವನ ಉತ್ತರದಿಂದ ಕಕ್ಕಾಬಿಕ್ಕಿಯಾದ ನರ್ಸಮ್ಮನಿಗೆ ಇವನಿಗೆ ಮಲೆಯಾಳಂ ಬರುವುದಿಲ್ಲ ಎಂದು ಖಚಿತವಾಗಿದ್ದೇ,

"ಸಾರ್, ನೀಂಗಳು ಈಗ ಉಸರಾಗಿದ್ದೀರಾ?" ಎಂದು ತನ್ನ ಹರಕು ಕನ್ನಡದಲ್ಲಿ ಕೇಳಿದಳು.

"ಏ…. ಇಲ್ಲ ಕಣೇ ರಂಭೆ. ನನ್ನ ಉಸಿರು ಇಲ್ಲ. ಉಸಿರು ಹೋಗಿರೋಕೆ ತಾನೆ ಸ್ವರ್ಗಕ್ಕೆ ಬಂದಿದ್ದು. ಅದು ಬಿಡು, ನೀನ್ಯಾಕೆ ಹಾಸ್ಪಿಟಲ್ ನರ್ಸ್ ತರ ಡ್ರೆಸ್ ಹಾಕ್ಕೊಂಡು ಸ್ವರ್ಗದಲ್ಲೂ ಆಸ್ಪತ್ರೆ ಫೀಲ್ ಕೊಡ್ತಿದ್ದಿ? ಸ್ವರ್ಗದಲ್ಲೂ ಆಸ್ಪತ್ರೆಗಳಿದ್ಯಾ? ನನ್ನ ಹಣೆಗೆ ಗಾಯ ಆಗಿರೋದಕ್ಕೆ ನೀವು ಟ್ರೀಟ್ ಮಾಡ್ತಿದ್ದೀರಾ?"  ಸ್ವರ್ಗದ ಫೆಸಿಲಿಟಿಗಳ ಬಗ್ಗೆ ಅಚ್ಚರಿಗೊಂಡು ಕೇಳಿದ.

"ಹೂಂ, ಹಾಗೇ ಅಂದ್ಕೋ. ಇಲ್ಲಿ ಒಂದು ಡಿಟೆಕ್ಟಿವ್ ಏಜೆನ್ಸಿನೂ ಇದ್ಯಂತೆ. ತಾವು ಏಜೆಂಟ್ ಆಗಿ ಸೇರ್ಕೊತೀರಾ  ಅಂತ ದೇವೇಂದ್ರ ಕೇಳ್ತಿದ್ದ" ಎಂಬ ದನಿ ಕೇಳಿ ಅನುಮಾನವಾಗಿ ಅತ್ತ ತಿರುಗಿದರೇ…..... ಅಭಿರಾಮ್!

ಸುತ್ತಲೂ ಒಂದು ರೌಂಡ್ ಕಣ್ಣು ಹಾಯಿಸಿದ್ದೇ ಅವನಿಗೆ ಖಚಿತವಾಯಿತು. ತಾನು ಇರುವುದು ಆಸ್ಪತ್ರೆಯಲ್ಲೇ ಸ್ವರ್ಗದಲ್ಲಲ್ಲ, ಹಾಗೂ ತನ್ನೆದುರು ಇದ್ದವಳು ಅಪ್ಸರೆಯಲ್ಲ ಅವಳು ನರ್ಸ್ ಎಂದು.

ಅದರ ಅರಿವಾಗಿದ್ದೇ ಮತ್ತೆ ಕಣ್ಮುಚ್ಚಿ ನೆಲಕ್ಕೆ ಬಿದ್ದ. ಈ ಬಾರಿ ಆಕೃತಿ ಅವನನ್ನು ಎಬ್ಬಿಸಲು ನೋಡಿದರೆ, ಅಭಿ ಒಂದು ಲೋಟ ನೀರು ತಂದು ಸುರಿದ ಮುಖದ ಮೇಲೆ. ಕಣ್ಬಿಟ್ಟು ಸಪ್ಪೆ ಮೋರೆಯಲ್ಲಿ ಎದ್ದು ಕುಳಿತ ವೈಭವ್.

"ನಾನ್ಯಾರು, ನನಗೇನಾಗಿದೆ, ನಾನೆಲ್ಲಿದ್ದೀನಿ, ನೀವೆಲ್ಲಾ ಯಾರು…... ಈ ತರ ರೆಗ್ಯುಲರ್ ಪ್ರಶ್ನೆಗಳನ್ನು ಕೇಳ್ಬೇಡ. ಡಿಫರೆಂಟಾಗಿ ಬೇರೆ ಏನಾದ್ರೂ ಕೇಳು" ಸಾಧುಕೋಕಿಲ ರೇಂಜಿಗೆ ಕೇಳಿದ ಅಭಿಯನ್ನು ನೋಡಿ ಸಿಟ್ಟೇರಿತು ಅವನಿಗೆ.

"ನನ್ನ ಪಿಂಡ ತಿನ್ನೋಕೆ ಗಂಡ್ ಕಾಗೆ ಬಂದಿತ್ತಾ ಇಲ್ಲಾ ಹೆಣ್ಣ್ ಕಾಗೆ ಬಂದಿತ್ತಾ?" ಕೋಪದಲ್ಲಿ ಕನಲಿ ಕೇಳಿದ.

"ಸಾರಿ ಕಾಗೆ ಹತ್ರ ಜೆಂಡರ್ ಕೇಳೋಕೆ ಮರ್ತ್ ಹೋಯ್ತು" ಕೂಲಾಗಿ ಹೇಳಿದ.

"ಥೂ ಡಬ್ಬಾ ನನ್ ಮಗನೇ ಬೀರ್, ಫ್ರೆಂಡೇನೋ ನೀನು? ನಿನ್ನ ತಲೆ ಉಳ್ಸಿಕೊಳ್ಳೋಕೆ ನನ್ನ ಬಲಿ ಹಾಕ್ದೇ ಅಂತ ಬೇಜಾರಿಲ್ಲ ನನಗೆ. ಆದ್ರೆ ನನ್ನ ಪ್ರಾಣ ಹೋದ್ರೆ ಈ ದೇಶದ ರಕ್ಷಣೆ ಮಾಡೋದ್ಯಾರು ಅಂತ ಒಂದು ಸಲವೂ ಯೋಚ್ನೆ ಮಾಡ್ಲಿಲ್ವಲ್ಲ ನೀನು. ಅದು‌..... ಅದು ಕಣೋ ನನ್ನ ಬೇಜಾರು. ನಾನು ಈ ಭವ್ಯ ಭಾರತದ ಭದ್ರ ಭವಿಷ್ಯದ ಬುನಾದಿ. ನೀನು, ನಿನ್ನ ತಂಗಿ ಸೇರ್ಕೊಂಡು ಈ ಬುನಾದಿಗೆ ಸಮಾಧಿ ಕಟ್ಟೋ ಹಾಗೆ ಮಾಡ್ತಿದ್ರಲ್ಲೋ ದೇಶದ್ರೋಹಿಗಳಾ…..." ಅವಲತ್ತುಕೊಂಡು ಎದ್ದವನು ಎಲ್ಲರನ್ನೂ ಒಮ್ಮೆ ನೋಡಿದ.

ಮತ್ತೆ ಅಣ್ಣ ತಂಗಿಯರ ಮುಖವನ್ನು ಬದಲಿಸಿ ನೋಡಿ, " ಲೋ ಬೀರ್, ನಾನು ಚೈ ಡಾರ್ಲಿಂಗ್ ನೋಡೋಕಂತ ಹೀರೋ ತರ ರೆಡಿಯಾಗಿ ಬಂದ್ರೆ ನೀವಿಬ್ರೂ ಸೇರಿ ಸವ್ತೆಕಾಯಿ ಸೈಜಿನ ಮುಖಾನ ಕುಂಬಳಕಾಯಿ ಸೈಜಿಗೆ ಊದಿಸಿಟ್ಟಿದ್ದೀರಲ್ಲ. ಐ ಹೇಟ್ ಯು. ಮಾತಾಡಲ್ಲ ನಾನು ನಿಮ್ಹತ್ರ" ಎಂದು ಹೊರನಡೆದ.

ಈಗ ವಾರ್ಡಿನಲ್ಲಿದ್ದವರ ಆಕ್ಷೇಪದ ನೋಟ ಅಣ್ಣ ತಂಗಿಯ ಮೇಲೆ‌.

"ಓಕೆ, ಓಕೆ, ನಮ್ಮದೇ ತಪ್ಪು, ನಾನು ಅವನನ್ನು ಸರಿ ಮಾಡ್ತೀನಿ" ಎಂದು ಅವನ ಹಿಂದೆ ನಡೆದ ಅಭಿ.

ಇಲ್ಲಿ ಆಕೃತಿ, ಮೃದುಲಾ, ಸಚ್ಚಿದಾನಂದರು ಉಳಿದ ಮೂವರಿಗೆ ವೈಭವನ ಪತ್ತೇದಾರಿ ಪುರಾಣ ಪಾರಾಯಣ ಮಾಡಲು ತೊಡಗಿದರೆ, ಅತ್ತ ಅಭಿರಾಮ್ ಪತ್ತೇದಾರನ ಬೆನ್ನು ಬಿದ್ದಿದ್ದ ಸಮಾಧಾನಿಸಲು.

ಅಭಿರಾಮ್ ಹೊರಹೋದದ್ದು ಕಂಡು ಗಂಡನಿಗೆ ಸನ್ನೆ ಮಾಡಿದಳು ನವ್ಯಾ. ಅದನ್ನರಿತ ಕಿಶೋರ್, "ನೀವೆಲ್ಲಾ ಮಾತಾಡ್ತಿರಿ. ಒಂದು ಮುಖ್ಯವಾದ ಕೆಲಸ ಇದೆ. ಒಂದತ್ತು ನಿಮಿಷ ಬಂದ್ಬಿಡ್ತೀನಿ" ಎಂದವನೇ ಹೊರಗೆ ಬಂದ. ನವ್ಯಾ ಮತ್ತು ಅವನು ಮೊದಲೇ ಮಾತನಾಡಿಕೊಂಡಂತೆ ಸಮನ್ವಿತಾಳ ಬಗ್ಗೆ ಅಭಿರಾಮನಲ್ಲಿ ಮಾತನಾಡಬೇಕಿತ್ತು. 

"ಹೇ ವೈಭೂ ಸಾರಿ ಕಣೋ, ಅದು ಆ ಕೋತಿನ ರೇಗ್ಸೋಕೆ ಹೋಗಿ ಅವ್ಳು ಮಾರಿ ಅವತಾರ ತಾಳಿ ಈ ರೀತಿ ಆಯ್ತು. ಸಾರಿ ಮಚ್ಚಾ"  ಅಭಿ ವೈಭವನ ಓಲೈಕೆಯಲ್ಲಿ ತೊಡಗಿದ್ದ.

"ನೀನು ಮಾಡಿರೋ ಕೆಲ್ಸಕ್ಕೆ ಈ ರುಬ್ಬುಗುಂಡು ಫೇಸ್ ಇಟ್ಕೊಂಡು ನಾನು ಚೈ ಡಾರ್ಲಿಂಗಿಗೆ ಹೇಗೆ ಪ್ರಪೋಸ್ ಮಾಡ್ಲೀ?" ತನ್ನ ಸಮಸ್ಯೆ ತೋಡಿಕೊಂಡ.

"ಏನು? ಪ್ರಪೋಸಾ?" ಕಣ್ಣರಳಿಸಿ ಕೇಳಿದ ಅಭಿ.

"ಹೌದು ಬೀರ್, ನಾನು ಚೈ ಡಾರ್ಲಿಂಗಿಗೆ ಪ್ರಪೋಸ್ ಮಾಡೋಣ ಅಂತಿದ್ದೀನಿ" ನಾಚಿ ನುಲಿಯುತ್ತಾ ಹೇಳಿದ.

"ಲೋ, ಅದಕ್ಯಾಕೋ ಈ ರೇಂಜಿಗೆ ನುಲಿತಿದ್ಯಾ?" ಹಣೆಗಟ್ಟಿಸಿಕೊಳ್ಳುತ್ತಾ ಕೇಳಿದ.

"ಅದೂ... ಏನೋ ಒಂಥರಾ ನಾಚ್ಕೆ ಆಗುತ್ತೆ ಬೀರ್. ಹೌದು, ನೀನು ಅತ್ತಿಗೆಗೆ ಪ್ರಪೋಸ್ ಮಾಡಿದ್ಯಾ?"  ಅವನಿಂದ ಟಿಪ್ಸ್ ಪಡೆಯಲು ಕೇಳಿದ.

"ಅಪ್ಪಾ ತಂದೆ, ಮೇಡಂ ಮೊದ್ಲೇ ಡಾಕ್ಟರ್ ಬೇರೆ. ನಾನೇನಾದ್ರೂ ನಿನ್ನ ಹಾಗೆ ವಾಲಾಡ್ಕೊಂಡು ಪ್ರಪೋಸ್ ಮಾಡಿದ್ರೆ, ನಿಶ್ಯಕ್ತಿ ಆಗಿದೆ ಅಂತ ಡ್ರಿಪ್ಸ್ ಹಾಕ್ತಾಳಷ್ಟೇ. ನನ್ನ ಕತೆ ಬಿಡು. ನಿನ್ನ ಮ್ಯಾಟರ್ ಏನು ಅದ್ನ ಹೇಳು."

"ಅದೇ ನಾನು ಚೈಗೆ ಪ್ರೊಪೋಸ್ ಮಾಡ್ಬೇಕಿತ್ತು. ಆದ್ರೇ ಇವತ್ತು ನೀವಿಬ್ರೂ ಸೇರಿ ನನ್ನ ಮುಖ ಪಚ್ಚುಡಿ ಮಾಡಿರೋದು ನೋಡಿದ್ರೆ ಇವತ್ಯಾಕೋ ನನ್ನ ಗ್ರಹಗತಿ ಸರಿಯಾಗಿಲ್ಲ ಅನ್ಸುತ್ತೆ. ಇನ್ಯಾವಾಗ ಪ್ರಪೋಸ್ ಮಾಡ್ಲೀ? ಮೊದ್ಲೇ ನನ್ನ ಬೇಬಿ ಕೆಲ್ಸ ಬೇರೆ ಬಿಟ್ಟಿದಾಳಂತೆ. ಇನ್ಯಾವಾಗ ಮನೆಯಿಂದ ಹೊರಗೆ ಬರ್ತಾಳೋ? ಅವಳ ಮನೆಗೆ ಹೋಗಿ ಪ್ರಪೋಸ್ ಮಾಡೋಣ ಅಂದ್ರೆ ಆ ಮಡಿ ಮುದುಕಿ, ಆ ಡೈನೋಸಾರ್ ಹಸು, ಉಸೇನ್ ಬೋಲ್ಟ್ ತರ ಇರೋ ಆ ಹಸುವಿನ ಮರಿ(he meant ಕರು) ಎಲ್ಲಾ ನೆನೆಸಿದ್ರೇ ಭಯ ಆಗುತ್ತೆ ಬೀರ್ " ಹಲುಬಿದ.

"ಅಯ್ಯಾ ನಕ್ಷತ್ರಿಕ ನನ್ ಮಗನೆ, ನಿನ್ನ ಚೈ ಡಾರ್ಲಿಂಗ್ ಮುಂದಿನ ವಾರದಿಂದ ನನ್ನ ಆಫೀಸಿಗೆ ಸೇರ್ಕೋತಿದ್ದಾಳೆ. ಆಗ ಅದೇನ್ ಹೇಳ್ಬೇಕೋ ಹೇಳಿ ಸಾಯಿ" ಪರಿಹಾರ ಸೂಚಿಸಿದ.

"ವಾಟ್? ರಿಯಲೀ.... ಬೀರ್? ನೀನು ಚೈ ಬೇಬಿಗೆ ಕೆಲಸ ಕೊಟ್ಟಿದ್ದೀಯಾ? ವಾವ್….. ಲವ್ ಯು ಬೀರ್.  ಲವ್ ಯು. ನೀನು ಮನುಷ್ಯ ಅಲ್ಲಾ. ಯು ಆರ್ ಗಾಡ್ ಮ್ಯಾನ್. ಐ ವಾನ ಹಗ್ ಯು. ಈ ಖುಷಿಗೆ ನೀವಿಬ್ಬರೂ ನನ್ನ ಮುಖ ಡ್ಯಾಮೇಜ್ ಮಾಡಿದ್ದು ಮಾಫಿ…...." ಎಂದು ಕುಣಿದು ಕುಪ್ಪಳಿಸಿ ಅಭಿಯನ್ನು ಅಪ್ಪಿದ.

"ಹಾಗಾದ್ರೆ ಇದೇ ಖುಷಿಗೆ ಇನ್ನೊಂದ್ಸಲ ಬುರುಡೆ ಬಿಚ್ಲಾ?" ಅಭಿಯ ಮಾತನ್ನು ಕೇಳಿದ್ದೇ ಎರಡೂ ಕೈಯಲ್ಲಿ ತಲೆ ಹಿಡಿದುಕೊಂಡು "ನಾನು ಕಾರಿನ ಹತ್ರ ಇರ್ತೀನಿ. ನೀವು ಬನ್ನಿ. ಅತ್ಗೇನ ಕೇಳ್ದೇ ಅಂತ ಹೇಳು" ಎಂದವನೇ ತಿರುಗಿ ನೋಡದೇ ಓಡಿದ ತಲೆ ಉಳಿಸಿಕೊಳ್ಳಲು.

ಅವನು ಓಡಿದ ರೀತಿಯನ್ನು ನೆನೆಯುತ್ತಾ ವಾರ್ಡಿಗೆ ಹಿಂದಿರುಗಲು ಹೊರಟವನಿಗೆ ಕಿಶೋರ್ ಎದುರಾಗಿದ್ದ. 

"ಹೇ ಕಿಶೋರ್, ಎಲ್ಲಾ ಅಲ್ಲೇ ಇದ್ದಾರಲ್ಲ. ನೀವು ಎಲ್ಲಿಗೆ ಹೊರಟ್ರೀ?" ಕೇಳಿದ.

"ನಿಮ್ಮನ್ನೇ ಹುಡುಕಿಕೊಂಡು ಬಂದೆ. ನಿಮ್ಮ ಹತ್ರ ಒಂದು ಮುಖ್ಯವಾದ ವಿಷಯ ಮಾತಾಡ್ಬೇಕಿತ್ತು. ಇಲ್ಲೇ ಕೆಳಗೆ ಪಾರ್ಕ್ ಹತ್ತಿರ ಹೋಗೋಣ್ವೇ?" ಎಂದ ಕಿಶೋರ್. ಸರಿಯೆಂದು ತಲೆಯಾಡಿಸಿ ಅವನನ್ನು ಹಿಂಬಾಲಿಸಿದ ಅಭಿ. ತಿಂಡಿಯ ಸಮಯವಾದ್ದರಿಂದ ಜನ ಕಡಿಮೆಯೇ ಇದ್ದರು. ಒಂದು ಮೂಲೆಯಲ್ಲಿ ಮರದಡಿಯ ಕಲ್ಲು ಬೆಂಚಿನಲ್ಲಿ ಕುಳಿತರು.

"ಹೇಳಿ ಕಿಶೋರ್, ಏನು ವಿಷಯ?" ಅವನೇ ಕೇಳಿದ.

"ಸಮನ್ವಿತಾ ಬಗ್ಗೆ ಸ್ವಲ್ಪ ಮಾತಾಡ್ಬೇಕಿತ್ತು. 'ಅವಳ ಬಗ್ಗೆ ಮಾತಾಡೋಕೆ ಇವನ್ಯಾರು' ಅಂತ ನಿಮಗನ್ನಿಸಬಹುದು. ಆದರೆ ಈ ಬಗ್ಗೆ ಮಾತನಾಡುವವರು ಬೇರ್ಯಾರೂ ಇಲ್ಲ. ಅಲ್ಲದೇ ಕೆಲವು ವಿಷಯಗಳು ನಿಮಗೆ ತಿಳಿಯಲೇ ಬೇಕಾದ ಅನಿವಾರ್ಯತೆ ಇದೆ. ದುರಾದೃಷ್ಟವಶಾತ್ ಅವಳ ತಂದೆತಾಯಿಗಳಿಗೆ ಆ ವಿಷಯಗಳ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಹಾಗಾಗಿ ಅವಳ ಸ್ನೇಹಿತರಾಗಿ ನಾನು ಮತ್ತೆ ನವ್ಯಾ ಆ ಜವಾಬ್ದಾರಿ ತಗೊಂಡಿದ್ದೀವಿ. ಹಾಗಾಗಿ.... ಸಾರಿ, ತಪ್ಪು ತಿಳಿಯಬೇಡಿ." ಗಂಭೀರ ಪೀಠಿಕೆ ಹಾಕಿದ. 

ಅಭಿ ಅರೆಕ್ಷಣ ಸುಮ್ಮನಾದವನು ನಸುನಕ್ಕ.

"ಕಿಶೋರ್, ನಿಮ್ಮ ಮೂವರ ಒಡನಾಟ ಎಂತಹದ್ದು ಅನ್ನುವ ಅರಿವಿದೆ ನನಗೆ. ಇನ್ ಫ್ಯಾಕ್ಟ್ ನಾನೇ ನಿಮ್ಮ ಹತ್ರ  ಮಾತಾಡ್ಬೇಕು ಅಂದ್ಕೊಂಡಿದ್ದೆ. ಅಷ್ಟರಲ್ಲಿ ನೀವೇ ಬಂದ್ರಿ. ನಿಮ್ಮಿಬ್ಬರಷ್ಟು ಚೆನ್ನಾಗಿ ಸಮನ್ವಿತಾಳನ್ನು ಅರ್ಥೈಸಿಕೊಂಡಿರೋರು ಇನ್ಯಾರೂ ಇಲ್ಲ. ಯಾಕೆಂದ್ರೆ ಈ ಇಡೀ ಪ್ರಪಂಚದಲ್ಲಿ ಅವಳಿಗೆ ಸ್ನೇಹಿತರು ಅಂತ ಇರೋದು ನೀವಿಬ್ರೇ. ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್ ಅವರಿಗಂತೂ ನೀವು ಹೇಳಿದಂತೆ ಅವಳ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ, ತಿಳಿದುಕೊಳ್ಳಬೇಕೆಂಬ ಕಾಳಜಿಯೂ ಇದ್ದಂತಿಲ್ಲ. ಅವರ ಬಗೆಗಿನ ಮಾತು ನಿರರ್ಥಕ. ಆದರೆ ನನಗೆ ಅವಳ ಬಗ್ಗೆ ತಿಳಿಯಬೇಕಾದ ಅನಿವಾರ್ಯತೆಯೊಂದಿಗೆ ಅವಳ ಅಂತರಾಳ ಅರಿಯಬೇಕೆಂಬ ಆಸ್ಥೆಯೂ ಇದೆ. ಸೋ….  ಯಾವುದೇ ಮುಜುಗರ, ಮುಚ್ಚುಮರೆಯಿಲ್ಲದೆ ನಿಮ್ಮ ಮನಸ್ಸಿಗೆ ಏನೇನು ಹೇಳ್ಬೇಕು ಅನ್ಸತ್ತೋ ಅದೆಲ್ಲವನ್ನೂ ನನ್ಹತ್ರ ಹೇಳಿ. ನಿಮ್ಮನ್ನ ಬಿಟ್ಟು ಬೇರೆ ಯಾರಿಂದಲೂ ಇದು ಸಾಧ್ಯವಿಲ್ಲ" ಅಭಿಯ ಮಾತುಗಳು ಕಿಶೋರನ ಹಿಂಜರಿಕೆಯನ್ನು ಬೇರು ಸಮೇತ ಕಿತ್ತು ಹಾಕಿದವು. ಅವನು ನಿರಾಳ ಭಾವದಿಂದ ಮಾತಿಗಾರಂಭಿಸಿದ.

"ಸಮನ್ವಿತಾ ಮತ್ತವಳ ಹೆತ್ತವರ ನಡುವಿನ ಸಂಬಂಧದ ಬಗ್ಗೆ ನಾನು ಹೇಳಬೇಕಾದ ಅಗತ್ಯವಿಲ್ಲ. ಈ ಮದುವೆ ಪ್ರಸ್ತಾಪದ ಅವಾಂತರದಲ್ಲಿ ನಿಮಗೇ ಎಲ್ಲಾ ತಿಳಿದಿದೆ. ನಾನು ಹೇಳಬೇಕಿರುವುದು ನನ್ನ ಸ್ನೇಹಿತೆಯ ಬಗ್ಗೆ. ನಮ್ಮದೇನು ಚಿಕ್ಕಂದಿನ ಪರಿಚಯವಲ್ಲ. ನಮ್ಮ ಮೂವರದೂ ಐದಾರು ವರ್ಷಗಳ ಪರಿಚಯವಷ್ಟೇ. ಆದರೆ ಈ ಅವಧಿಯಲ್ಲಿ ನಮ್ಮ ನಡುವೆ ಬೆಸೆದುಕೊಂಡ ಅನುಬಂಧ ಹಣ, ಅಂತಸ್ತಿನ ಹಂಗಿಲ್ಲದ ಪರಿಶುದ್ಧ ಸ್ನೇಹದ್ದು. ನಾನು, ನವ್ಯಾ ಯಾವ ವಿಧದಲ್ಲೂ ಅವಳಿಗೆ ಸರಿಸಾಟಿಯಲ್ಲ. ಆದರೂ ನಮ್ಮ ನಡುವೆ ಪದಗಳಲ್ಲಿ ವೇದ್ಯವಾಗದ ಸ್ನೇಹ ಸಂಬಂಧವೊಂದು ಬೆಸೆದುಕೊಂಡಿತು. ಈ ಬಂಧ ಬೆಸೆಯಲೇಬೇಕೆಂದು ವಿಧಾತ ಟೊಂಕಕಟ್ಟಿ ನಿಂತಿದ್ದನೇನೋ ಎಂದು ನನಗೆ ಒಮ್ಮೊಮ್ಮೆ ಬಲವಾಗಿ ಅನಿಸುತ್ತದೆ ಅಭಿರಾಮ್. ಇಲ್ಲವಾದರೇ, ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ, ವಿದೇಶದಲ್ಲಿ ಓದಿದವಳು, ಅಲ್ಲಿಯೇ ಉತ್ತಮ ಉದ್ಯೋಗದ ಅವಕಾಶಗಳಿದ್ದರೂ ಎಲ್ಲವನ್ನು ತಿರಸ್ಕರಿಸಿ ಇಲ್ಲಿಗೆ ಹಿಂತಿರುಗುತ್ತಿದ್ದಳೇ? ಹಿಂತಿರುಗಿದರೂ ಯಾವುದೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೋ ಇಲ್ಲಾ ತಾನೇ ಸ್ವತಃ ಒಂದು ಆಸ್ಪತ್ರೆ ಆರಂಭಿಸುವ ಯೋಜನೆಗೋ ಹೋಗದೆ ಧನ್ವಂತರಿಯಂತಹ‌ ಧರ್ಮಾಸ್ಪತ್ರೆಗೆ, ಆಶ್ರಯದಂತಹ NGOಗೆ ಸೇರುತ್ತಿದ್ದಳೇ? ಇದೆಲ್ಲವೂ ನಮ್ಮ ಭೇಟಿಗೆ ನಿಮಿತ್ತ ಮಾತ್ರವೇನೋ. ಚಿಕ್ಕಂದಿನಲ್ಲೇ ಹೆತ್ತವರಿಂದ, ತಾಯ್ನಾಡಿನಿಂದ ದೂರವಾಗಿ ಅಜ್ಞಾತ ಸ್ಥಳದಲ್ಲಿ ಅಪರಿಚಿತರೊಂದಿಗಿನ ಜೀವನ ಅವಳ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿದೆ. ಎಂದಿಗೂ ಹೇಳಿಕೊಳ್ಳದಿದ್ದರೂ ಅಲ್ಲಿ ಅವಳು ಬಹಳಷ್ಟು ಮಾನಸಿಕ ಯಾತನೆ ಅನುಭವಿಸಿದ್ದಾಳೆ. ಅದಕ್ಕೆ ಮೂಲ ಕಾರಣ ತನ್ನೆಡೆಗೆ ಹೆತ್ತವರ ದಿವ್ಯ ನಿರ್ಲಕ್ಷ್ಯ. ಓದು ಮುಗಿದು ಲಂಡನ್ನಿನಲ್ಲೇ ಕೆಲಸಕ್ಕೆ ಆಫರ್ ಬಂದಾಗ ಅದನ್ನೇ ಒಪ್ಪಿಕೋ ಎಂದು ರಾವ್ ದಂಪತಿಗಳು ಒತ್ತಾಯಿಸಿದ್ದರಂತೆ. ಆದರೆ ತಾನು ಇಲ್ಲೇ ಕೆಲಸ ಹಿಡಿದು ನಿಂತರೆ ತಂದೆತಾಯಿ ತನ್ನನ್ನು ಮರೆತೇ ಬಿಡುವರೆಂಬ ಭಯ ಅವಳನ್ನು ಬಿಟ್ಟೂ ಬಿಡದೆ ಕಾಡಿದೆ. ಹಾಗಾಗಿಯೇ ಓದು ಮುಗಿದ ಕೂಡಲೇ  ಇಲ್ಲಿಗೆ ವಾಪಾಸಾಗಿದ್ದಾಳೆ. ಇಲ್ಲಿಗೆ ಬಂದ ನಂತರ ತಂದೆ ತಾಯಿ ತನ್ನನ್ನು ಗಮನಿಸುತ್ತಾರೆ ಎಂಬ ಆಸೆಯಲ್ಲಿದ್ದವಳಿಗೆ ತನ್ನದು ಭ್ರಮೆಯಷ್ಟೇ ಎಂಬುದು ಬೇಗನೆ ಅರಿವಾಗಿದೆ. ತಾಯ್ತಂದೆಯರಿಗೆ ತಾನು ಬೇಡದ ಕೂಸು ಎಂಬ ಸತ್ಯ ಅವಳೊಳಗೆ ಒಂದು ದಾವಾಲನವನ್ನೇ ಸೃಷ್ಟಿಸಿದೆ. ದೂರದಲ್ಲಿದ್ದು ಹಿಂಸೆ ಅನುಭವಿಸಿದ್ದಕ್ಕಿಂತ ಎದುರಿಗಿದ್ದೂ ನಿರ್ಲಕ್ಷ್ಯಗೊಂಡಿದ್ದು ಬಹಳವಾಗಿ ಕಾಡಿದೆ. ಇವೆಲ್ಲಾ ಅವಳೊಳಗೆ ಹೆತ್ತವರ ಮೇಲೊಂದು ತಣ್ಣನೆಯ ದ್ವೇಷಕ್ಕೆ ನಾಂದಿ ಹಾಡಿದೆ. ಅದನ್ನು ತೋರ್ಪಡಿಸಿ ಮನಸ್ಸನ್ನು ಹಗುರಾಗಿಸಿಕೊಳ್ಳುವುದಕ್ಕೆ ಅವಳು ಕಂಡುಕೊಂಡ ವಿಧಾನವೇ ವಿರೋಧಿಸುವಿಕೆ. ಅಲ್ಲಿಂದ ಅವರು ಹೇಳಿದ್ದನ್ನೆಲ್ಲ ಮನಸ್ಪೂರ್ತಿಯಾಗಿ ವಿರೋಧಿಸುವ ಜಿದ್ದಿಗೆ ಬಿದ್ದಿದ್ದು.... ಇಂದಿಗೂ ಮುಂದುವರೆದಿದೆ. ಇಂತಹ ಹುಡುಗಿ ನನ್ನ ಸ್ನೇಹಕ್ಕೆ ಯಾಕೆ ಕೈಚಾಚಿದಳೋ ನನಗೇ ತಿಳಿಯದು. ಸಾಮಾನ್ಯ ಕುಶಲೋಪರಿಯ ಮುಗುಳ್ನಗೆಯಿಂದ ಆರಂಭವಾದ ಪರಿಚಯ ನಿಷ್ಕಲ್ಮಶ ಸ್ನೇಹಕ್ಕೆ ತಿರುಗಿತು. ಇನ್ನು ನವ್ಯಾ ನನಗೆ ಪರಿಚಯವಾದದ್ದೇ ಸಮನ್ವಿತಾಳಿಂದ. ಅವರಿಬ್ಬರ ಪರಿಚಯ, ಸ್ನೇಹವಂತೂ ಅನೂಹ್ಯ. ನನಗೆ ಅವರಿಬ್ಬರ ಸ್ನೇಹದಷ್ಟು ವಿಶಿಷ್ಟ ಈ ಜಗದಲ್ಲಿ ಮತ್ತೊಂದಿಲ್ಲ. ಆ ಬಗ್ಗೆ ಹೆಚ್ಚಿನ ವಿವರ ಹೇಳಲಾರೆ. ಆದರೆ ನವ್ಯಾಳ ಬದುಕನ್ನು ಕಟ್ಟಿಕೊಟ್ಟವಳು ಮಾತ್ರ ಇದೇ ಸಮನ್ವಿತಾ. ಎಲ್ಲರೊಂದಿಗೆ ನಗುತ್ತಾ ಮಾತನಾಡಿದರೂ ಯಾರೊಂದಿಗೂ ಬೆರೆಯದ ಅಂತರ್ಮುಖಿ ಸ್ವಭಾವದ ಹುಡುಗಿ ಅವಳು. ಯಾರಗೂ ತನ್ನ ಭಾವವಲಯವನ್ನು ತೋರ್ಪಡಿಸುವುದಿಲ್ಲ. ಮೊದಲ ಬಾರಿ ನೋಡಿದವರಿಗೆ ಅವಳ ಈ ವರ್ತನೆ ಹಣದ ಅಹಂಕಾರದಂತೆ ಭಾಸವಾಗುತ್ತದೆ. ಆದರೆ ಅದು ಬದುಕು ಅವಳಿಗೆ ಕಲ್ಪಿಸಿರುವ ಪಾಠ. ಹೊರಜಗತ್ತಿನ ಪಾಲಿಗೆ ಅವಳು ಶ್ರೀಮಂತ ಅಪ್ಪ ಅಮ್ಮನ ಗಟ್ಟಿ ವ್ಯಕ್ತಿತ್ವದ ಮಗಳು. ಆದರೆ ಅವಳ ಆಂತರ್ಯದ ಅಂತರ್ಗತ ಸತ್ಯ ಬೇರೆಯೇ ಇದೆ. ಆ ಗಟ್ಟಿಗಿತ್ತಿಯ ಮುಖವಾಡದೊಳಗೆ ಹಿಡಿ ಪ್ರೀತಿಗೆ ಹಪಹಪಿಸುವ ಮನಸ್ಸೊಂದಿದೆ. ಒಡೆದು ಚೂರಾದ ಬಾಲ್ಯದ ಕನಸುಗಳ ನಿಟ್ಟುಸಿರಿದೆ. ಎಲ್ಲಾ ಇದ್ದೂ ಏನೂ ಇಲ್ಲದ ಖಾಲಿತನವಿದೆ. ಯಾರ ಮೇಲೆ ಎಂದು ತಿಳಿಯದ ಕೊನೆ ಮೊದಲಿಲ್ಲದ ರೋಷವಿದೆ. ಆ ರೋಷದ ಹಿಂದೆಯೇ ಇನ್ನೊಬ್ಬರಿಗಾಗಿ ಮರುಗುವ ಹೃದಯವೊಂದಿದೆ. ಯಾರೊಂದಿಗೂ ಬೆರೆಯದ ಆದರೂ ಎಲ್ಲರೂ ಖುಷಿಯಾಗಿರಬೇಕೆಂದು ಬಯಸುವ ಹಾರೈಕೆಯಿದೆ. ಹೆತ್ತವರನ್ನು ದ್ವೇಷಿಸುವೆನೆಂದು ರಚ್ಚೆ ಹಿಡಿಯುತ್ತಲೇ ಇಂದಲ್ಲಾ ನಾಳೆ ಅವರು ನನ್ನನ್ನು ಪ್ರೀತಿಸಬಹುದೇನೋ ಎಂದು ನಿರೀಕ್ಷಿಸುವ ಜೀವನಪ್ರೀತಿಯಿದೆ........‌ ಇನ್ನೂ ಏನೇನನ್ನು ತನ್ನೊಳಗೆ ಅಡಗಿಸಿಕೊಂಡಿರುವಳೋ ಅವಳಿಗೇ ಗೊತ್ತು. ಅವಳೊಂದು ಕಡಲಿನಂತೆ. ಮೇಲ್ಮೆಯಲ್ಲಿ ಅಲೆಗಳ ನರ್ತನವಷ್ಟೇ ಕಾಣುವುದು. ಆದರೆ ಅದೇ ಕಡಲಲ್ಲ. ಆಳಕ್ಕಿಳಿದಾಗ ಮಾತ್ರವೇ ಕಡಲಿನ ಒಡಲಿನ ಸೆಳಹುಗಳು ತೆರೆದುಕೊಳ್ಳುವುದು, ಅದರ ವಿಸ್ತಾರದ ಅರಿವಾಗುವುದು. ನಮ್ಮ ಪಾಲಿಗೆ ಅವಳು ವಿಸ್ಮಯಗಳ ಸಂಪುಟವಷ್ಟೇ..... ಇಂತಹ ಹುಡುಗಿ ಇಷ್ಟು ವರ್ಷಗಳಲ್ಲಿ ನಮ್ಮೆದುರು ಕಣ್ಣೀರು ಹಾಕಿದ್ದು ನಿನ್ನೆ. ಇಲ್ಲಿಯವರೆಗೆ ಎಂತಹ ಸಂದರ್ಭದಲ್ಲೂ ಇನ್ನೊಬ್ಬರೆದುರು ಕಣ್ಣಿಂದ ಒಂದು ಹನಿ ಜಾರಲು ಬಿಟ್ಟವಳಲ್ಲ ಆಕೆ. ಆದರೆ ನಿನ್ನೆ ಅವಳ ಕಣ್ಣೀರು, ಅವಳ ಬಾಯಿಂದ ಬಂದ ಮಾತುಗಳು....

ಅವಳಿಗೆ ನಿಮ್ಮ ಮನೆಯವರ ಬಗ್ಗೆ, ಅದರಲ್ಲೂ ನಿಮ್ಮ ತಾಯಿಯ ಬಗ್ಗೆ ಯಾವುದೋ ಅರಿಯದ ಸೆಳೆತವಿದೆ. ನಿಮ್ಮೆಲ್ಲರನ್ನು ಭೇಟಿಯಾದಾಗಿನಿಂದ ಅದೆಷ್ಟು ಬಾರಿ ಮೃದುಲಾರ ಬಗ್ಗೆ ನವ್ಯಾಳಲ್ಲಿ ಹೇಳಿರುವಳೋ ಲೆಕ್ಕವಿಲ್ಲ. ಆದ ಕಾರಣವೇ ಅವರು ಮನೆಗೆ ಕರೆದ ಕೂಡಲೇ ಆಹ್ವಾನವನ್ನು ಒಪ್ಪಿ ನಿಮ್ಮ ಮನೆಗೆ ಬಂದಿದ್ದು. ರಾವ್ ಅವರ ಪ್ರಸ್ತಾಪದ ಬಗ್ಗೆ ಅವಳಿಗೇನೂ ತಿಳಿದಿರಲಿಲ್ಲ ಅಭಿರಾಮ್. ಅವಳು ನಿಮ್ಮ ಬಗ್ಗೆ ಹೇಳಿದ ದಿನದಿಂದಲೇ ನಾನು ನವ್ಯಾ ನಿಮ್ಮ ಪೂರ್ವಾಪರಗಳನ್ನು ಕಲೆ ಹಾಕಿದ್ದೆವು. ನೀವೇ ಅವಳಿಗೆ ಸೂಕ್ತ ಸಂಗಾತಿ ಎಂದು ನಮಗೆ ಬಲವಾಗಿ ಅನಿಸಿತ್ತು. ಅವಳಿಗೆ ನಿಮ್ಮ ಕುಟುಂಬದವರ ಮೇಲೆ ಮಮಕಾರ. ನಿಮ್ಮೊಂದಿಗೆ ಅವಳೂ ಸುರಕ್ಷಿತ ಹಾಗೂ ಅವಳ ಕನಸಿನ ಕುಟುಂಬವೂ ಅವಳಿಗೆ ದೊರಕುವುದು ಎಂಬ ಆಸೆ ನಮಗೆ. ನಾವಿಬ್ಬರೂ ನಿಮ್ಮ ಬಳಿ ಈ ಬಗ್ಗೆ ಮಾತನಾಡಲೂ ತೀರ್ಮಾನಿಸಿದ್ದೆವು. ಆ ನಂತರ ಅವಳನ್ನು ಒಪ್ಪಿಸುವ ಮಾತೂ ಆಗಿತ್ತು. ಅಷ್ಟರೊಳಗೆ ನಮ್ಮ ಕೈ ಮೀರಿ ಇಷ್ಟೆಲ್ಲಾ ನಡೆದು ಹೋಯಿತು. ಈಗ ಅವಳ ತಂದೆಯ ಈ ಅವಾಂತರದ ಪ್ರಸ್ತಾಪ ಅವಳಲ್ಲಿ ಹೇಳಲಾರದ ವೇದನೆಯೊಂದನ್ನು, ತೀರದ ವಿಷಾದವೊಂದನ್ನು ಸೃಷ್ಟಿಸಿದೆ. ಮಾರಾಟಕ್ಕಿಟ್ಟ ವಸ್ತುವಿನಂತೆ ತನಗೆ ಬೆಲೆ ಕಟ್ಟಿ ವಿಕ್ರಯಿಸಿದ್ದಾರೆ ಅನ್ನುವಷ್ಟು ಯೋಚಿಸಿದ್ದಾಳೆ. ಇಂತಹ ಸ್ಥಿತಿಯಲ್ಲಿ ಅವಳೊಂದಿಗೆ ಹೇಗೆ, ಏನು ಮಾತನಾಡುವುದೆಂದೇ ಗೊತ್ತಾಗುತ್ತಿಲ್ಲ. ಅದಕ್ಕೇ ನಿಮ್ಮ ಬಳಿ ಎಲ್ಲಾ ಹೇಳಿಬಿಡುವುದೇ ಸೂಕ್ತ ಎನಿಸಿತು. ನೀವೇ ನೇರವಾಗಿ ಸಮನ್ವಿತಾಳ ಬಳಿ ಮಾತನಾಡಿ. ಅವಳಿಗೆ ಒಪ್ಪಲು ಕಷ್ಟವೆನಿಸಬಹುದು. ಆದರೆ ಸ್ವಲ್ಪ ಸಮಯಾವಕಾಶದ ಮಾತಷ್ಟೇ. ಕಹಿ ನುಂಗಿ ಸಿಹಿಯಾಗಿ ನಗುವ ಕಲೆ ಅವಳಿಗೆ ಕರಗತವಾಗಿದೆ. ನಾವೂ ಆದಷ್ಟು ಅವಳೊಂದಿಗೆ ಸೂಚ್ಯವಾಗಿ ಮಾತನಾಡಿದ್ದೇವೆ‌. ಆದರೆ ಅವಳನ್ನು ಒಪ್ಪಿಸುವುದು ನಿಮ್ಮದೇ ಜವಾಬ್ದಾರಿ ಅಭಿರಾಮ್. ನಾವು ಸಹಕರಿಸಬಲ್ಲೆವಷ್ಟೇ..... ಇದಕ್ಕೆ ನಿಮ್ಮಷ್ಟು ಸೂಕ್ತ ವ್ಯಕ್ತಿ ಇನ್ನೊಬ್ಬರಿಲ್ಲ. ಅವಳೊಳಗೆ ನಿಮ್ಮ ಮೇಲೊಂದು ನಂಬಿಕೆ ಹಾಗೂ ಪುಟ್ಟ ಭರವಸೆಯನ್ನು ಸೃಷ್ಟಿಸಿಕೊಡಬೇಕು ನೀವು. ಅವಳಿಗೆ ನಿಮ್ಮ ಬಗ್ಗೆ ಒಳ್ಳೆಯ ಭಾವನೆಯಿದೆ. ಹಾಗಾಗಿ ನೀವು ಖಂಡಿತಾ ಇದನ್ನು ಸುಲಭವಾಗಿ ಮಾಡಬಲ್ಲಿರಿ ಅಭಿರಾಮ್" ಅವನ ಕೈ ಹಿಡಿದು ಹೇಳಿದ ಕಿಶೋರ್.

ಅಭಿರಾಮ್ ಮೌನವಾಗಿ ಕಿಶೋರನ ಮಾತುಗಳನ್ನು ಮನನ ಮಾಡಿಕೊಳ್ಳುತ್ತಿದ್ದ. "ಅಭಿರಾಮ್ ಏನಾಯ್ತು?" ಇನ್ನೊಮ್ಮೆ ಕರೆದಾಗ, 

"ಏನಿಲ್ಲ ಕಿಶೋರ್, ನಿಮ್ಮ ಮಾತುಗಳನ್ನು ಅರ್ಥೈಸಿಕೊಳ್ಳುತ್ತಿದ್ದೆ. ಥ್ಯಾಂಕ್ಯೂ ಸೋ ಮಚ್. ನನ್ನ ಹಲವು ಗೊಂದಲಗಳಿಗೆ ಪರಿಹಾರ ಸಿಕ್ಕಿತು ನಿಮ್ಮಿಂದ. ನಿಮ್ಮ ಮಾತುಗಳು ಯಾವಾಗಲೂ ನನ್ನ ನೆನಪಿನಲ್ಲಿರುತ್ತವೆ. ಹಾಗೆ ನಿಮ್ಮ ಮೂವರ ಸ್ನೇಹವೂ. ಇನ್ನು ನಮ್ಮ ಡಾಕ್ಟ್ರನ್ನು ಒಪ್ಪಿಸೋದು….. ಸ್ವಲ್ಪ ಕಷ್ಟದ ಕೆಲಸವೇ. ಬಟ್ ಯಾವತ್ತಿದ್ದರೂ ಡಾಕ್ಟ್ರೇ ನಮ್ಮನೆ ಸೊಸೆ ಅಂತ ನಿನ್ನೆಯೇ ನಿರ್ಧಾರ ಮಾಡ್ಬಿಟ್ಟಿದ್ದೀನಿ. ಆದ್ರೂ ನೀವಿಬ್ಬರೂ ದಂಪತಿಗಳು ನಿಮ್ಮ ಗೆಳತಿಗೆ ನಾನೇ ಸರಿಯಾದ ಜೋಡಿ ಅಂತ ಮುಂಚೆನೇ ತೀರ್ಮಾನಿಸಿದ್ರಿ ಅಂದ್ರಲ್ಲ. ಅದು ಕೇಳಿ ತುಂಬಾ ಖುಷಿಯಾಯ್ತು ಕಿಶೋರ್. ಸತ್ಯಂ ರಾವ್ ಅವರು ನನ್ನ ಚೂಸ್ ಮಾಡಿದ್ದು ನನಗೇನೂ ಅನ್ನಿಸ್ಲಿಲ್ಲ. ಬಟ್ ನೀವಿಬ್ಬರೂ ನನ್ನ ಆಯ್ಕೆ ಮಾಡಿದ್ವಿ ಅಂದಿದ್ದು.....‌. ಇಟ್ ಮೀನ್ಸ್ ಅ ಲಾಟ್ ಟು ಮಿ. ಡಾಕ್ಟ್ರ ಬಗ್ಗೆ ಇನ್ನೇನೂ ಯೋಚನೆ ಮಾಡ್ಬೇಡಿ. ಮಿಕ್ಕಿದ್ದು ನಾನು ನೋಡ್ಕೋತೀನಿ" ಭರವಸೆಯಿಂದ ಕೈ ಅದುಮಿದ.

ಕಿಶೋರನಿಗೆ ನೆಮ್ಮದಿಯಾಯಿತು. ತಟ್ಟನೇ ಅಭಿರಾಮ್,

"ಹೌದು, ನಿಮ್ಮಿಬ್ಬರ ಮದುವೆಯ ರೂವಾರಿನೂ ಡಾಕ್ಟ್ರೇನಾ?" ಕೇಳಿದ.

"ನಾನು ನವ್ಯಾನ ಇಷ್ಟಪಟ್ಟಿದ್ದೆ. ಮನೆಯಲ್ಲಿ ಹೇಳಿ, ಒಪ್ಪಿಸುವುದರಲ್ಲಿ ಸಮಾಳ ಪಾತ್ರ ದೊಡ್ಡದು. ಮದುವೆಯ ಓಡಾಟವೆಲ್ಲಾ ಅವಳದೇ...." ಮಂದಹಾಸದೊಂದಿಗೆ ಹೇಳಿದ.

ಕಿಶೋರನಿಗೆ ನವ್ಯಾಳ ಹಿನ್ನೆಲೆಯ ಅರಿವಿದೆಯೇ ಎಂಬ ಅನುಮಾನ ಕಾಡುತ್ತಿತ್ತು ಅಭಿಗೆ. ಎಷ್ಟೋ ಬಾರಿ ಸಮನ್ವಿತಾಳ ಬಳಿ ಕೇಳಬೇಕೆಂದುಕೊಂಡರೂ ಏನೋ ಒಂದು ಅವನನ್ನು ತಡೆಯುತ್ತಿತ್ತು. ಇವತ್ತಿನ ಕಿಶೋರ್ ಮಾತು ಕೇಳಿ ಅವನಿಗೆಲ್ಲಾ ತಿಳಿದಿದೆಯೇನೋ ಎನಿಸಿತ್ತು. ಇನ್ನು ಯಾವತ್ತೂ ಈ ಬಗ್ಗೆ ಕೇಳಬಾರದು ಎಂದುಕೊಂಡ. ಕಿಶೋರನ ಬಗ್ಗೆ ಅಭಿಮಾನ, ಗೌರವ ಮೂಡಿತು.

"ಯು ಮೇಕ್ ಅ ಗುಡ್ ಪೇರ್" ಮನದುಂಬಿ ಹೇಳಿದ.

"ಐ ನೋ.... ಬಟ್ ಅವಳನ್ನು ಒಪ್ಪಿಸೋಕೆ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದೀನಿ ಅಭಿರಾಮ್. ನಿಮ್ಮ ಡಾಕ್ಟ್ರನ್ನು ಒಪ್ಪಿಸೋಕೆ ಅಷ್ಟು ಕಷ್ಟ ಆಗ್ಲಿಕ್ಕಿಲ್ಲ" ಭರವಸೆ ನೀಡುವವನಂತೆ ಹೇಳಿದ.

"ಅಬ್ಬಾ, ಈಗ ಸ್ವಲ್ಪ ಧೈರ್ಯ ಬಂತು" ಎದೆಯ ಮೇಲಿನ ಕೈಯಿಟ್ಟು ಗಾಬರಿ ನಟಿಸಿ ಹೇಳಿದ ಅಭಿ.

ಇಬ್ಬರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡು ತಮ್ಮ ತಮಾಷೆಯನ್ನು ತಾವೇ ಆಸ್ವಾದಿಸುತ್ತಾ ಜೋರಾಗಿ ನಕ್ಕರು. ಅವರ ಮನಗಳು ಹಗುರವಾಗಿತ್ತು.......

      ********ಮುಂದುವರೆಯುತ್ತದೆ**********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ