ಭಾನುವಾರ, ಜೂನ್ 28, 2020

ಅನೂಹ್ಯ 28

ಅವತ್ತು ಬೆಳಗಿನಿಂದಲೇ ಚೈತಾಲಿಯ ಎಡಗಣ್ಣು ಹೊಡೆದುಕೊಳ್ಳುತ್ತಿತ್ತು. 'ಯಾಕಪ್ಪ ದೇವ್ರೇ ಈ ತರ ಹೊಡ್ಕೋತಿದೆ ಶನಿ. ಯಾವ್ದೋ ಧೈರ್ಯದಿಂದ ಕೆಲಸ ಬೇರೆ ಬಿಟ್ಬಿಟ್ಟೆ. ಬೇರೆ ಕೆಲ್ಸ ಹುಡುಕಬೇಕು. ಇನ್ನೇನು ಗ್ರಹಚಾರ ಕಾದಿದೆಯೋ' ತನ್ನಲ್ಲೇ ಗೊಣಗಿದಳು.

ಪಾಪ ಅವಳಿಗೇನು ಗೊತ್ತು ಗ್ರಹಚಾರ ನಿನ್ನೆ ರಾತ್ರಿಯಿಂದಲೇ ಅವಳ ಬೆನ್ನು ಬಿದ್ದಿದೆ, ಈಗಾಗಲೇ ಕಾರಿನಲ್ಲಿ ಕುಳಿತು ಅವಳ ಮನೆಯ ಪಡಸಾಲೆಗೆ ಆಗಮಿಸುತ್ತಿದೆ ಎಂದು.

ರಾತ್ರಿ ಬಂದೊಡನೆ ಅಪ್ಪ ಅಮ್ಮನಲ್ಲಿ ನಡೆದ ಘಟನೆಯನೆಲ್ಲಾ ಹೇಳಿ ತಾನು ಕೆಲಸ ಬಿಟ್ಟೆ ಎಂದಿದ್ದಳು. ಅವರಿಗೆ ಮಗಳು ಸತ್ಯಂ ರಾವ್ ಅವರಲ್ಲಿ ಕೆಲಸ ಮಾಡುವುದು ಮುಂಚಿನಿಂದಲೂ ಇಷ್ಟವಿರಲಿಲ್ಲ. ಹಾಗಾಗಿ ಅವರಿಗೆ ಅವಳ ನಿರ್ಧಾರ ಆನಂದ ತಂದಿತ್ತು.‌ ಇವಳು ಇನ್ನೊಂದು ಕೆಲಸ ಅಂತ ಹುಡುಕುವ ಮುನ್ನ ಯೋಗ್ಯ ವರನನ್ನು ನೋಡಿ ಮದುವೆ ಮಾಡಬೇಕು ಎಂಬ ಯೋಚನೆ ಅವರದ್ದು. ಮಧ್ಯಮ ವರ್ಗದ ಸಂಪ್ರದಾಯಸ್ಥ ಧರ್ಮಭೀರು ಕುಟುಂಬವದು. ಮಾನ ಮರ್ಯಾದೆಗೆ ಅಂಜುವ ಜನರು. ಮನೆಯ ವಾತಾವರಣವೂ ಹಾಗೆಯೇ ಇತ್ತು. ನಗರದಿಂದ ಹೊರಭಾಗದಲ್ಲಿದ್ದ ಮನೆಯಲ್ಲಿ ಗ್ರಾಮ್ಯ ಸೊಗಡು ಹಾಸುಹೊಕ್ಕಾಗಿತ್ತು.

ಆದರೆ ಮಕ್ಕಳಿಬ್ಬರೂ ಆಧುನಿಕತೆಯ ಪ್ರಭಾವಳಿಗೆ ಸಿಕ್ಕವರು. ಚೈತಾಲಿ ಓದು ಮುಗಿದ ಮೇಲೆ ಹಟ ಹಿಡಿದು ಕೆಲಸಕ್ಕೆ ಸೇರಿದ್ದಳು. ಅವರು ಬೇಡವೆಂದರೂ ಕೇಳಿರಲಿಲ್ಲ. ಅವಳಿಗೆ ಆಧುನಿಕ, ಸಿರಿವಂತ ಜೀವನದ ಆಸೆ ಜಾಸ್ತಿ. ಹಾಗಂತ ದುರಾಸೆಯಲ್ಲ. ಆ ಜೀವನ ಶೈಲಿಯ ಮೇಲೆ ವ್ಯಾಮೋಹ. ಯಾವುದೋ ಸ್ಟಾರ್ ಹೋಟೆಲ್ ರಿಸೆಪ್ಷನಿಸ್ಟ್, ದೊಡ್ಡ ಸಿರಿವಂತರ ಪಿ.ಎ ಇಂತ ಕೆಲಸಗಳೇ ಬೇಕು ಎಂಬ ಹಂಬಲವಿತ್ತು. ಅದಕ್ಕೆ ಸರಿಯಾಗಿ ಒದಗಿಬಂದಿತ್ತು ಈ ರಾವ್ ಅವರ ಪಿ.ಎ ಕೆಲಸ. ಮನೆಯವರನ್ನು ಹಟ ಹಿಡಿದು ಒಪ್ಪಿಸಿ ಸೇರಿದ್ದು ಕೆಲಸಕ್ಕೆ.

ಮೊದಲಿಗೆ ಎಲ್ಲಾ ಸುಂದರವೆನಿಸಿದರೂ ನಿಧಾನವಾಗಿ ಶ್ರೀಮಂತಿಕೆಯ ಸೋಗಿನ ಬದುಕಿನ ಮರ್ಮ ಅರಿವಾಗತೊಡಗಿತ್ತು. ಆ ಹಣದ ಜಗಮಗದ ಕೃತಕ ಬೆಳಕಿನ ತಳದಲ್ಲಿ ಅವಿತಿರುವ ಸೋಗಿನ ಬದುಕು, ಬಗೆ ಬಗೆ ಹುನ್ನಾರಗಳು ಅವಳನ್ನು ಚಿಂತೆಗೆ ದೂಡಿತ್ತು. ಅದೇನೇ ಇದ್ದರೂ ಆ ಇಡೀ ವಾತಾವರಣದಲ್ಲಿ ಚೈತಾಲಿಗೆ ಅತ್ಯಾಪ್ತೆಯಾಗಿ ಕಂಡದ್ದು ಸಮನ್ವಿತಾ. ಅವಳೆಂದರೆ ಅಪರಿಮಿತ ಪ್ರೀತಿ, ಗೌರವ. ಕಸ್ತೂರಿ ಮೃಗದಂತೆ ತನ್ನ ಸುತ್ತಮುತ್ತೆಲ್ಲಾ ಕಂಪುಬೀರುವ ಅವಳ ಒಳ್ಳೆಯತನ, ಯಾವ ಭೇದಭಾವವಿಲ್ಲದೆ ಎಲ್ಲರೊಡನೆ ಒಡಗೂಡುವ ನಡವಳಿಕೆ ಚೈತಾಲಿಗೆ ಅವಳ ಮೇಲಿದ್ದ ಗೌರವವನ್ನು ನೂರ್ಮಡಿಗೊಳಿಸುತ್ತಿತ್ತು.

ಅಂತಹ ಸಮನ್ವಿತಾಳನ್ನೇ ತಮ್ಮ ಬದುಕಿನಲ್ಲಿ ಉಳಿಸಿಕೊಳ್ಳಲು ಯೋಗ್ಯತೆಯಿಲ್ಲದ ಈ ಜನ ನಾಳೆ ತನ್ನೊಂದಿಗೆ ಹೇಗೆಲ್ಲಾ ವ್ಯವಹರಿಸಬಹುದು ಎಂಬ ಯೋಚನೆ ತಲೆಯಲ್ಲಿ ಸುಳಿದದ್ದೇ ಹಿಂದೆಮುಂದೆ ಯೋಚಿಸದೆ ಕೆಲಸ ಬಿಟ್ಟಿದ್ದಳು. ಆ ಬಗ್ಗೆ ಅವಳಿಗ್ಯಾವ ಬೇಸರವೂ ಇರಲಿಲ್ಲ. ಈಗ ಬೇರೆ ಯಾವುದಾದರೂ ಕೆಲಸ ಹುಡುಕಬೇಕೆಂಬ ಯೋಚನೆಯೊಂದೇ ಅವಳ ತಲೆಯಲ್ಲಿ. ಜೊತೆಗೆ ಒಮ್ಮೆ ಸಮನ್ವಿತಾಳನ್ನು ಕಂಡು ಬರಬೇಕೆನಿಸುತ್ತಿತ್ತು.

ಅದೇ ಯೋಚನೆಯಲ್ಲಿಯೇ ಆಗತಾನೆ ಕೊಯ್ದ ಮಲ್ಲಿಗೆ ಹೂವನ್ನು ಎದುರು ಹಾಕಿಕೊಂಡು ಮಾಲೆ ಕಟ್ಟುತ್ತಿದ್ದಳು. 

"ಏನೇ ಸುಬ್ಬವ್ವ, ಅದೇನು ಇವತ್ತು ಮನೇಲೇ ಇದ್ದೀಯಾ? ಸೂಟಿಯೇನು ಇವತ್ತು?" ಕೇಳಿತು ಗುಂಡಮ್ಮ.  

ಚೈತಾಲಿ ಹಣೆಯೊತ್ತಿಕೊಂಡು,"ಅಜ್ಜಿ, ಇನ್ನೊಂದ್ಸಲ ಸುಬ್ಬವ್ವ ಅಂದ್ರೆ ಸರಿಯಿರೋಲ್ಲ ನೋಡು ಮತ್ತೆ. ಅದೇನ್ ಬೆಳಿಗ್ಗೆಯಿಂದ ಹಾಳಾಗಿರೋ ಟೇಪ್ ರೆಕಾರ್ಡರ್ ತರಾ ಅದೇ ಕೇಳ್ತಿದ್ದೀ? ಇದು ಐದನೇ ಸಲ ಕೇಳ್ತಿರೋದು ನೀನು. ಹೇಳ್ದೇ ತಾನೇ ಆ ಕೆಲಸ ಬಿಟ್ಟೆ ಅಂತ. ನಿಂದೊಳ್ಳೆ ಕಾಟ ನನಗೆ" ರೇಗಿದಳು.

ಗುಂಡಮ್ಮ ಚೈತಾಲಿಯ ಅಜ್ಜಿ. 90+ ವಯಸ್ಸು. ಕಿವಿ ಸರಿಯಾಗಿ ಕೇಳಿಸದು. ಹಾಗೇ ಮರೆವು ವಿಪರೀತ ಜಾಸ್ತಿ. ಅತೀ ಮಡಿಯ ಹೆಂಗಸು. ಶೌಚಕ್ಕೆ ಹೋದಾಗಲೆಲ್ಲ ಸ್ನಾನವಾಗಬೇಕು. ಬೇರೆಲ್ಲ ಮರೆಯುವಾಕೆ ದಿನಕ್ಕೆ ಮೂವತ್ತು ಬಾರಿ ಸ್ನಾನ ಮಾಡುವುದೊಂದನ್ನು ಮರೆಯದಿದ್ದದ್ದು ವಿಸ್ಮಯವೇ ಸರಿ. ದಿನ ಬೆಳಿಗ್ಗೆ ತಯಾರಾಗಿ ಹೋಗುತ್ತಿದ್ದ ಮೊಮ್ಮಗಳು ಮನೆಯಲ್ಲೇ ಇದ್ದದ್ದು ಕಂಡು ಐದಾರು ಬಾರಿ ಅದೇ ಪ್ರಶ್ನೆ ರಿಪೀಟ್ ಮೋಡ್ ನಲ್ಲಿ ಬಂದಿತ್ತು. ಜೊತೆಗೆ ಸುಬ್ಬವ್ವ ಎಂಬ ನಾಮಧೇಯ ಬೇರೆ. ಅದು ಚೈತಾಲಿಯ ಹುಟ್ಟು ಹೆಸರು. ಜಗವೆಲ್ಲ ಅವಳನ್ನು ಚೈತಾಲಿ ಎಂದರೂ ಅವಳಜ್ಜಿಗೆ ಅವಳು ಸುಬ್ಬವ್ವನೇ.

"ಅಯ್ಯೋ, ಈಗ ನಾನೇನು ಕೇಳ್ಬಾರದ್ದು ಕೇಳಿದ್ದೇ ಅಂತ ಈ ಪಾಟಿ ಹಾರಾಡ್ತೀ? ಕೆಲ್ಸ ಬುಟ್ಟಿದ್ದು ಒಳ್ಳೆದಾತು ತಗಾ. ಹೆಣ್ಣ್ ಮಕ್ಳು ಹಿಂಗೆಲ್ಲ ಹೊರಹೋಗಿ ತಿರ್ಗುದು ಅದೇನ್ ಚಂದಾ ಅಂತೀನಿ? ನಮ್ ಕಾಲದಾಗೆ ಸರೀಗಿತ್ತು. ಹೆಣ್ಮಕ್ಕಳು ಅಂದ್ರೆ ಲಕ್ಷಣವಾಗಿ ಅಡಿಗೆ ಕೆಲ್ಸ ಬೊಗ್ಸೆ ಕಲ್ತು ಕೊಟ್ಟ ಮನೇಲೀ ತವ್ರಿಗೆ ಕೀರ್ತಿ ತರ್ರ್ಬೇಕು. ಅದು ಬಿಟ್ಟು ಕೆಲಸ ಕಛೇರಿ ಅಂತ ಸುತ್ತಿದ್ರೇ ಅಡಿಗೆ ಗಂಡ ಮಾಡ್ಲಕ್ಕೇನು? ಅದೇನ್ ಚಂದನೇನೋ? ದಿವಿನಾಗಿ ಸೀರೆ ಉಟ್ಟು, ಕಾಸಗಲ ಕುಂಕುಮ, ಕೈಗೆ ಬಳೆ ಇಟ್ಟು ಮನ್ಯಾಗ ಇರೋದ್ ಬುಟ್ಟು ಅದೇನ್ ಮೊಣಕಾಲ್ ಮೇಲೆ ಬಟ್ಟೆ ಹಾಕಿ, ಕೈಗೆ ಬಳೆ ಇಲ್ಲ, ಕಿವಿಲೀ ವಾಲೆ ಇಲ್ಲ, ಬೋಳು ಹಣೆ ಹೊತ್ತು ಗಂಡ ಸತ್ತ ಮುಂಡೆ ತರ ಹೋಗೋ ಚಂದಾನೋ..‌……..."  ರಾಗ ಎಳೆದರು ಗುಂಡಮ್ಮ.

"ಹೌದೇ ಅಕ್ಕ, ಸ್ವಲ್ಪ ಗುಂಡುನ ನೋಡಿ ಕಲಿ. ನೋಡು ಎಷ್ಟ್ ಆರಾಮಾಗಿ ದಿನಕ್ಕೆ ಮಿನಿಮಮ್ ಇಪ್ಪತ್ತೈದ್ ಸಲ ಸ್ನಾನ ಮಾಡಿ, ಮಡಿ ಮಾಡಿ, ಜಪಸರ ಹಿಡ್ಕೊಂಡು ದೇವ್ರ ಕಿವಿ ತೂತಾಗಿ ರಕ್ತ ಬರೋವರೆಗೆ ಜಪಮಾಡುತ್ತೆ. ಮೋಸ್ಟಲೀ ಗುಂಡು ಕಾಟ ತಾಳಕಾಗ್ದೇ ದೇವ್ರು ಕಲ್ಲಾಗಿರ್ಬೇಕು..‌….. " ಆಗ ತಾನೇ ಕಾಲೇಜಿನಿಂದ ಬಂದ ಅವಳ ತಮ್ಮ ಚೇತನ್ ಅಜ್ಜಿಯನ್ನು ಕಿಚಾಯಿಸುತ್ತಾ ಟಿ.ವಿ ಹಾಕಿದ.

ಕಾಲೇಜಿನಲ್ಲಿ ಓದುತ್ತಿದ್ದ ಅವನಿಗೆ ಪಾಶ್ಚಾತ್ಯ ‌ವ್ಯಾಮೋಹ ಹೆಚ್ಚೇ. ತನ್ನ ಚಿತ್ರ ವಿಚಿತ್ರ ಸ್ವಾಗ್ ಸ್ಟೈಲ್ ಗಳಿಂದಾಗಿ ಆಗಾಗ ಅವನಜ್ಜಿಯಿಂದ ಮಂಗಳಾರತಿ ಪೂಜೆ ಆಗುತ್ತಿದ್ದದ್ದೂ ಉಂಟು.

"ಅಷ್ಟು ಮಡಿ ಮೈಲಿಗೆ ಇಲ್ಲಾಂದ್ರೇ ಅದೆಂತ ಚೆಂದ? ನನ್ನ ಮಡಿ ಬಗ್ಗೆ ಆಡ್ಕೊಂಡ್ರೇ ನರಕಕ್ಕೆ ಹೋಗ್ತಿ ಮುಂಡೆದೇ" ಶಾಪ ಹಾಕಿತು ಮುದುಕಿ.

"ಉದಯ ಕಾಲದಲೆದ್ದು ಗಡಗಡ ನಡುಗುತ 

ನದಿಯಲಿ ಮಿಂದೆನೆಂದು ಹಿಗ್ಗುತಲಿ

ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು ಬದಿಯಲ್ಲಿದ್ದವರಿಗಾಶ್ಚರ್ಯ ತೋರುವುದು

ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟು ಕೊಂಡರೆ ಅದು ಮಡಿಯಲ್ಲ

ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ ಬಿಟ್ಟು ನಡೆದರೆ ಅದು ಮಡಿಯು"  

ಪುರಂದರ ದಾಸರ ಎರಡು ಕೀರ್ತನೆಗಳನ್ನು mash up ಮಾಡಿ ಕರ್ಕಶ ಕಂಠದಲ್ಲಿ ಅರಚತೊಡಗಿದ ಚೇತನ್. ಚೇತನನ ಕಂಠ ಸಿರಿ ಕೇಳುತ್ತಾ ಗುಂಡಮ್ಮನ ಚೇತನವೆಲ್ಲಾ ಕಾಲಬುಡದಲ್ಲಿ ಸೋರಿ ಅಚೇತನವಾಗತೊಡಗಿದರು.

ಅವನ ಅಮೋಘ ಕಂಠದ ಗಾರ್ಧಬ ಗಾನ ಕೇಳಲಾಗದೇ "ಮೊದ್ಲು ಹೋಗಿ ಸ್ನಾನ ಮುಗಿಸಿ ಬಾ. ಕಾಲೇಜಿನಿಂದ ಬಂದ ಕೂಡ್ಲೇ ಟಿ.ವಿ ಹಾಕ್ಕೊಂಡು ಕೂತಿರ್ತಿಯಲ್ಲ" ಗದರಿಸಿದಳು ಚೈತಾಲಿ. ಕೊಟ್ಟಿಗೆಯಿಂದ ಹಾಲು ಕರೆದುಕೊಂಡು ಬಂದ ಅವನಮ್ಮನೂ ಕೂಡಾ ಸೇರಿದರು ಬೈಯಲು.

ಅವನ ಹಾಡೇನೋ ನಿಂತಿತು. ಆದರೂ ಅವನೇನು ಸ್ನಾನಕ್ಕೆ ಹೋಗಲಿಲ್ಲ. ಅಲ್ಲೇ ಚೇರಿಗೊರಗಿ ಟಿ.ವಿ ಚಾನೆಲ್ ಬದಲಾಯಿಸಿ ಮ್ಯೂಸಿಕ್ ಚಾನೆಲ್ ಒಂದನ್ನು ಹಾಕಿದ. ಯಾವುದೋ ಒಂದು ಹಾಡು.... ಒಂದಷ್ಟು ಜನ ಗಂಡು ಹೆಣ್ಣುಗಳು ಹುಚ್ಚು ಕುಣಿತ ಕುಣಿಯುತ್ತಿದ್ದರು. ಇದನ್ನು ಕಂಡು ಮಡಿ ಗುಂಡಮ್ಮನ ಪಿತ್ತ ನೆತ್ತಿಗೇರಿತು.

"ಹಾಳು ಮುಂಡೇವು. ಅಲ್ಲಾ ಆ ಗಂಡ್ಮಕ್ಕಳು ಲಕ್ಷಣವಾಗಿ ಮೈ ತುಂಬಾ ಬಟ್ಟೆ ಹಾಕ್ಕೊಂಡವೆ. ಈ ಹೆಣ್ಮಕ್ಕಳಿಗೆ ಏನ್ ಬಂದದೆ ದೊಡ್ಡ್ ರೋಗ ಅಂತ. ಅದೆಂತ ಬಟ್ಟೆನೋ? ಈ ಪಿಚ್ಚರ್ ಮುಂಡೇವ್ಕೆ ಗಂಡಸರಿಗೆ ಮೈತುಂಬಾ ಬಟ್ಟೆ ಹಾಕ್ಸಕೆ ಕಾಸಿರುತ್ತೆ. ಹೆಣ್ಣ್ಮಕ್ಕಳಿಗೆ ಬಟ್ಟೆ ಹಾಕ್ಸಕೆ ಮಾತ್ರ ಯಾಕೆ ಕಾಸಿಲ್ಲ ಅಂತೀನಿ? ಇವರ ಮನೆ ಕಾಯೋಗ, ಛೇ ನಮ್ಮ್ ಕಾಲದಾಗೆ ಹಿಂಗಿರ್ಲಿಲ್ಲಪ್ಪ" ಅವಲತ್ತುಕೊಂಡರು.

"ಇನ್ಹೇಗಿತ್ತು ನಿನ್ನ ಕಾಲದಲ್ಲಿ. 'ಪುಟ್ಟಗೌರಿ' ಅಲ್ಲಲ್ಲ 'ಮಂಗಳಗೌರಿ ಮದುವೆ' ತರಾ ನಿಂದೂ 'ಗುಂಡುಗೌರಿ ಮದುವೆ' ಆಗಿತ್ತಾ ತಾತನ ಜೊತೆ? ಇಲ್ಲಾ 'ಅಗ್ನಿಸಾಕ್ಷಿ' ತರಾ 'ಮಡಿಸಾಕ್ಷಿ'ಯಾಗಿ ತಮ್ಮ ಪರಿಣಯ ಆಗಿತ್ತಾ?" ಕೇಳಿದ ಗುಂಡುವಿನ ಹೆಗಲ ಮೇಲೆ ಕೈ ಹಾಕಿ.

ಅವನ ಕೈ ಹೆಗಲು ಸೋಕಿದ್ದೇ ಹಾವು ಕಂಡವರಂತೆ ಕುಮುಟಿ ಎದ್ದ ಮುದುಕಿ, "ಅಯ್ಯೋ ಅನಿಷ್ಟವೇ... ನನ್ನ ಮಡಿಯೆಲ್ಲ ಮೈಲಿಗೆ ಆಯ್ತಲ್ಲೋ, ಕಾಲೇಜಿಂದ ಬಂದೋನಿಗೆ ಒಂದು ಚೊಂಬು ನೀರು ಸುರ್ಕೊಳ್ಳೋಕೆ ಏನೋ ದೊಡ್ಡ್ ರೋಗ ನಿಂಗೆ, ಪಾಪಿಷ್ಟ ಮುಂಡೇದು" ಬೈಗುಳದ ಸಹಸ್ತ್ರ ನಾಮಾರ್ಚನೆ ಮಾಡುತ್ತಾ ಬಚ್ಚಲಿಗೆ ನಡೆದರು ಗುಂಡಮ್ಮ.

ಇದೇ ಸಮಯದಲ್ಲಿ ಅತ್ತ ಹಾಸ್ಪಿಟಲ್ ಕಡೆಯಿಂದ ಅಭಿಯೊಂದಿಗೆ ಡಿಟೆಕ್ಟಿವ್ ವೈಭವ್ ಅವರು ತಮ್ಮ ಪ್ರಿಯತಮೆಯನ್ನು ಕಾಣಲು ಕಾತುರದಿಂದ ಆಗಮಿಸುತ್ತಿದ್ದರು. ಸತ್ಯಂ ರಾವ್ ಅವರ ಬಂಗಲೆಯನ್ನು ದಾಟಿ ನಗರದ ಹೊರವಲಯದತ್ತ ಕಾರು ವೇಗವಾಗಿ ಓಡುತ್ತಿತ್ತು. ಆದರೂ ಅದು ನಿಧಾನವಾಗಿ ಓಡುತ್ತಿದೆ ಎನಿಸಿತು ವೈಭವನಿಗೆ. 

"ಬೀರ್ ಫಾಸ್ಟಾಗಿ ಹೋಗೋ. ಯಾಕಿಷ್ಟು ನಿಧಾನ?"  ಹೇಳೇ ಬಿಟ್ಟ ಧೈರ್ಯ ಮಾಡಿ.

"ಯಾಕೆ ಮಗಾ, 'ಅತೀ ವೇಗ ತಿಥಿ ಬೇಗ' ಅಂತ ಕೇಳಿಲ್ವಾ? ಒಳ್ಳೆ ಆರ್ ತಿಂಗ್ಳಿಗೆ ಹುಟ್ಟ್ದೋನ ಹಾಗೆ‌ ಆಡ್ತೀಯಲ್ಲೋ. ಸ್ವಲ್ಪ ಸುಮ್ನಿರು" ಗದರಿಸಿದ.

ಕಾರು ಚೈತಾಲಿಯ ಮನೆ ಮುಂದೆ ನಿಂತಿತು. ಮನೆ ಎದುರಿನ ರಂಗೋಲಿ, ಸುತ್ತ ಮುತ್ತಲಿನ ಹೂವಿನ ಗಿಡಗಳು ಎಲ್ಲವನ್ನೂ ಕುತೂಹಲದಿಂದ ಡಿಟೆಕ್ಟಿವ್ ಕಣ್ಣಿನಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದವನನ್ನು ನೋಡಿ, "ಏನೋ ಮಾವನ ಮನೆನ ಕಣ್ಣಲ್ಲೇ ಸ್ಕಾನಿಂಗ್ ಮಾಡ್ತಿದ್ದೀ. ಮನೆ ಪರಿಸರ ನೋಡಿ ಒಳಗಿರೋ ಅತ್ತೆ ಮಾವನ್ನ ಅಳೆಯೋ ಯೋಚನೆಯಾ?" ಕಾಲೆಳೆದ ಅಭಿರಾಮ್.

"ಶು.... ಅತ್ತೆ, ಮಾವ, ಹೆಂಡತಿ ಎಲ್ಲಾ ಸೆಕೆಂಡರಿ, ಮೊದ್ಲು ನಾನು ಡಿಟೆಕ್ಟಿವ್. ಹೋದ ಜಾಗವನ್ನು ಕೂಲಂಕುಷವಾಗಿ ಪರಿಶೀಲಿಸುವುದು ಪತ್ತೇದಾರನಾಗಲು ಬೇಕಾದ ಮೊದಲ ಕ್ವಾಲಿಫಿಕೇಷನ್ಞೀರಜಾ ರ" ಎದೆಯುಬ್ಬಿಸಿ ಹೇಳಿದ. ಅಷ್ಟರಲ್ಲಿ ಅಭಿರಾಮ್ ಆಫೀಸಿನಿಂದ ಕರೆ ಬಂದಿದ್ದರಿಂದ ವೈಭವನಿಗೆ ಒಂದೆರಡು ನಿಮಿಷ ಕಾಯುವಂತೆ ಹೇಳಿ ಅಲ್ಲೇ ಮಾತಾಡುತ್ತಾ ನಿಂತ. 

ಆದರೆ ಡಿಟೆಕ್ಟಿವ್ ಸಾಹೇಬರು ಸುಮ್ಮನಿರಬೇಕಲ್ಲ.... ನಿಧಾನಕ್ಕೆ ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕಿ ಗೇಟಿನೊಳಗೆ ಕಾಲಿಟ್ಟೇಬಿಟ್ಟ. ಹಾಗೇ ಸುತ್ತಮುತ್ತ ಪರಿಶೀಲಿಸುತ್ತಿದ್ದವನ ಮೂಗಿಗೆ ಏನೋ ವಾಸನೆ ಬಡಿಯತೊಡಗಿತು. ಜೊತೆಗೆ ಪಕ್ಕದಿಂದ ಏನೋ ಸದ್ದು. ನಮ್ಮ ಶೆರ್ಲಾಕ್ ಹೋಮ್ಸ್ ಅವರು ನಿಧಾನವಾಗಿ ಸದ್ದಿನ ಜಾಡನ್ನು ಹಿಂಬಾಲಿಸಿದಾಗ ಎದುರು ಒಣ ಹುಲ್ಲಿನ ಬಣವೆ ಕಂಡಿತು. ಇದೇನಿರಬಹುದು? ಎಂದು ಯೋಚಿಸಿದ. ತಿಳಿಯಲಿಲ್ಲ. ಆದರೆ ಸದ್ದು ಅದರ ಹಿಂಭಾಗದಿಂದ ಬರುತ್ತಿತ್ತು. ಜೊತೆಗೆ ಆ ವಾಸನೆ ಇನ್ನಷ್ಟು ದಟ್ಟವಾಗಿತ್ತು. (ಪಾಪ ಸಗಣಿ, ಗಂಜಲದ ವಾಸನೆ ಹೇಗಿರುತ್ತೆ ಅಂತ ಗೊತ್ತಿಲ್ಲ ನಮ್ಮ ಪತ್ತೇದಾರರಿಗೆ)

ಥಟ್ಟನೇ ಅವನ ತಲೆಯಲ್ಲಿನ LED ಬಲ್ಬ್ ಹೊತ್ತಿಕೊಂಡಿತು. 'ಮೋಸ್ಟಲೀ ಇದರ ಹಿಂದೆ ಹಾವು ಗೀವು ಏನಾದ್ರೂ ಇರಬಹುದಾ? ವಾಸನೆ ಬರ್ತಿರೋದು ನೋಡಿದ್ರೆ ಅನಕೊಂಡ ನೇ ಇರ್ಬಹುದಾಂತ. ಇರ್ಲೀ ನಾನೂ ನೋಡೇ ಬಿಡ್ತೀನಿ' ಎಂದವನೇ ಎರಡು ಕೈಗಳನ್ನು ಮುಂದೆ ಚಾಚಿ ಕಬ್ಬಡಿ ಆಡುವವನಂತೆ ಅನಕೊಂಡಾ ಹಿಡಿಯಲು ತಯಾರಾದ.

ಸದ್ದಾಗದಂತೆ ಹುಲ್ಲಿನ ಬಣವೆಯ ಹಿಂಬದಿಗೆ ಬಂದವನು, ಲಬಕ್ಕನೇ ಎರಡು ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡು ಅನಕೊಂಡ ಹಿಡಿದೇಬಿಟ್ಟೆ‌ ಅಂತ ಕಣ್ಣ್ಬಿಟ್ಟು ನೋಡ್ತಾನೆ…….

ಎದುರಿಗೆ............

ಆಳೆತ್ತರದ ಗೀರ್ ಹಸು......‌‌. 

ಅವನನ್ನೇ ಗುರಾಯಿಸಿಕೊಂಡು ನೋಡ್ತಿದಿದ್ದು ಝಾಡಿಸಿ ಒದ್ದು ಬಿಡೋದಾ?

ಪಾಪ ಅದಾದ್ರೂ ಏನ್ಮಾಡುತ್ತೆ?

ಈ ಎಡವಟ್ಟು ವೈಭವ್ ಅನಕೊಂಡಾ ಅಂತ ಅದ್ರ ಬಾಲ ಹಿಡಿದ್ರೆ ಅದು ಸುಮ್ನೆ ಬಿಡುತ್ತಾ?

ಅದು ಒದ್ದ ಏಟಿಗೆ ಡಿಟೆಕ್ಟಿವ್ ಸಾಹೇಬ್ರು ಎದ್ನೋ ಬಿದ್ನೋ ಅಂತ ತರಾತುರಿಲಿ ಸೊಂಟ ಹಿಡ್ಕೊಂಡು ಒಂದೇ ಓಟ. ಇವನ ಉಸೇನ್ ಬೋಲ್ಟ್ ಮಾದರಿಯ ಓಟದ ಪರಿಕಂಡು ಅಲ್ಲೇ ಅಂಗಳದ ತುಂಬಾ ಕಿವಿಗೆ ಗಾಳಿ ಹೊಕ್ಕಂತೆ ಓಡುತ್ತಿದ್ದ ಪುಟಾಣಿ ಕರುವಿಗೆ ಕನ್ಫ್ಯೂಷನ್ ಆಯ್ತು. ಯಾರಿವ ನನಗೇ ಕಾಂಪಿಟೇಶನ್ ಕೊಡ್ತಾನೆ ಅಂದಿದ್ದೆ ಅವನ ಹಿಂದೆಯೇ ಓಡಿಕೊಂಡು ಬಂತು. ಈಗ ವೈಭವ್ ಪತ್ತೇದಾರಿಕೆ, ಪ್ರೀತಿ,ಪ್ರೇಮ ಎಲ್ಲಾ ಮರೆತು 'ಯಪ್ಪಾ ಜೀವ ಉಳಿದ್ರೆ ಸಾಕು' ಎಂಬಂತೆ ಓಡತೊಡಗಿದ.

ಹಾಗೆ ಓಡುವ ಗಡಿಬಿಡಿಯಲ್ಲಿ ಆಗಷ್ಟೇ ಒಂದು ಚೊಂಬು ನೀರು ಸುರ್ಕೊಂಡು, ಮೈಲಿಗೆ ಕಳೆದು ಮಡಿಶುದ್ಧವಾಗಿ ಬರುತ್ತಿದ್ದ ಗುಂಡುಗೆ ಡಿಕ್ಕಿಹೊಡೆದು ಮುಂದೆ ಓಡಿಬಿಟ್ಟ ವೈಭವ್.

ಅಷ್ಟೇ ಆಗಿದ್ರೇ ಪರವಾಗಿರಲಿಲ್ಲ. ಆದರೆ ಇವ 'ಡೀ' ಹೊಡೆದ ರಭಸಕ್ಕೆ ಮುದುಕಿ ಬ್ಯಾಲೆನ್ಸ್ ತಪ್ಪಿ ಅಂಗಳಕ್ಕೆ ಸಾರಿಸಲು ರಾಶಿ ಹಾಕಿದ್ದ ಸಗಣಿ ಮೇಲೆ ಬೀಳೋದಾ ಶಿವನೇ? ಕಷ್ಟಪಟ್ಟು ಎದ್ದುಕೊಂಡಿತು ಗುಂಡಜ್ಜಿ. ಬಿದ್ದ ಏಟಿಗೆ, ಮಡಿ ಎಕ್ಕುಟ್ಟಿ ಹೋದ ಕೋಪಕ್ಕೆ ಒರಲತೊಡಗಿತು ಮುದುಕಿ.

ಆ ಸದ್ದಿಗೆ ಮನೆಯೊಳಗಿದ್ದವರು ಹೊರ ಬಂದರೆ, ಫೋನಿನಲ್ಲಿದ್ದ ಅಭಿರಾಮ್ ಗೇಟಿನಿಂದ ಒಳಬಂದ.

ಅಜ್ಜಿಯ ಒರಲಾಟ ಕೇಳಿ ಕರು ಹೆದರಿ ಕೊಟ್ಟಿಗೆಗೋಡಿತು. ವೈಭವ್ ತಿರುಗಿದರೇ ಎದುರಿಗೆ...... ಮೈತುಂಬಾ ಸಗಣಿ ಮೆತ್ತಿಕೊಂಡು ನಿಂತಿತ್ತು ಒಂದು ಬಾಡಿ...... ಜೊತೆಗೆ ಅದೇ ವಾಸನೆ.....

"ಓಹ್ ಶಿಟ್ ಮ್ಯಾನ್. ಇಟ್ಸ್ ಘೋಸ್ಟ್. ಘೋಸ್ಟ್ ಈ ತರಾ ಸ್ಮೆಲ್ ಇರುತ್ತೆ ಅಂತ ನಂಗೊತ್ತಿರಲಿಲ್ಲ. ಇಟ್ಸ್ ಘೋಸ್ಟ್, ಎಲ್ಲಾ ಓಡಿ ಕ್ವಿಕ್" ಎಂದರಚಿದ.

ಗುಂಡಮ್ಮನ ಅಪರಾವತಾರ ಕಂಡು ಮನೆಯವರೆಲ್ಲಾ ಮೂಕವಿಸ್ಮಿತರಾಗಿದ್ದರೆ, ಈ ಎಡವಟ್ಟುರಾಯನ ಯಾಕಾದ್ರೂ ಕರ್ಕೋಂಡ್ಬಂದ್ನಪ್ಪ ಎಂದು ಸಿಟ್ಟಾಗಿದ್ದ ಅಭಿ.

ಅಷ್ಟರಲ್ಲಿ ಶಾಕಿನಿಂದ ಎಚ್ಚೆತ್ತ ಚೈತಾಲೀ, "ಯಾರ್ರೀ ನೀವು? ಏನ್ ಮಾಡ್ತೀದ್ದೀರಾ ಇಲ್ಲಿ? ನಮ್ಮನೆಯೊಳಗೆ ಯಾಕೆ ಬಂದ್ರೀ?" ಕೇಳಿದಳು ಕೋಪದಲ್ಲಿ.

"ಅಯ್ಯೋ ನನ್ನ ಬಿಡು ಕುಳ್ಳಿ ಡಾರ್ಲಿಂಗ್, ಮೊದ್ಲು ಈ ಘೋಸ್ಟ್ ಓಡ್ಸಬೇಕು. ಎಲ್ಲಿ ಬಡಿಗೆ ಕೊಡಿ."

"ಏನು? ಕುಳ್ಳಿ ಡಾರ್ಲಿಂಗಾ? ಲೇ ಯಾವನಲೇ ನೀನು? ಡಾರ್ಲಿಂಗ್ ಗೀರ್ಲಿಂಗ್ ಅಂದ್ರೆ ನನ್ಮಗನೇ ಸೀಲಿಂಗ್ ಗೆ ನೇತ್ಹಾಕಿ ಬಿಡ್ತೀನಿ" ಕನಲಿದಳು.

"ಅಯ್ಯೋ ಬೇಬಿ ಸುಮ್ನಿರು ಸ್ವಲ್ಪ... ಮೊದ್ಲು ಈ ಭೂತಕ್ಕೆ ಹಿಡ್ದಿರೋ ಗ್ರಹಚಾರ ಬಿಡ್ಸಬೇಕು" ಬಡಿಗೆಯಿಂದ ಬಡಿಯಲು ತಯಾರಾದ.

"ಅಯ್ಯೋ ಯಾರಾದ್ರೂ ಕಾಪಾಡ್ರೋ, ನನ್ನ ಪ್ರಾಣ ತೆಗಿಯುತ್ತೇ ಶನಿ ಮುಂಡೇದು" ಎಂದು ಕಿರುಚತೊಡಗಿದರು ಗುಂಡಮ್ಮ.

"ರೀ ಮಿಸ್ಟರ್ ಬಿಡ್ರೀ, ಘೋಸ್ಟು ಇಲ್ಲ ಬೀಸ್ಟೂ ಇಲ್ಲ. ಅದು ನಮ್ಮಜ್ಜಿ. ಬಿಡ್ರೀ ಅವ್ರನ್ನ" ಎಂದ ಚೇತನ್

ಎಚ್ಚೆತ್ತುಕೊಂಡ ಅಭಿ ಹೀಗೆ ಬಿಟ್ಟರೆ ಹೊಡೆದೇ ಬಿಡುತ್ತಾನೆ ಎಂದುಕೊಂಡು ಓಡಿಬಂದು ಅವನ ಕೈಯಲ್ಲಿದ್ದ ಬಡಿಗೆ ಎಸೆದ. "ಲೋ ಹೇಳಿದ್ದೆ ತಾನೇ. ಹೊರಗೇ ನಿಂತಿರು ನಾನು ಫೋನಲ್ಲಿ ಮಾತಾಡೋವರ್ಗೂ ಅಂತ. ಮತ್ಯಾಕೋ ಒಳಗೆ ಬಂದೆ? ಸ್ವಲ್ಪನೂ ಸೀರಿಯಸ್ನೆಸ್ ಇಲ್ವಲ್ಲ ನಿನಗೆ? ನಾನು ಯಾಕಾದ್ರೂ ಕರ್ಕೊಂಡು ಬಂದ್ನೋ" 

ಅಭಿರಾಮ್ ಮುಖ ಕಂಡದ್ದೇ ಪರಿಚಯ ಹತ್ತಿತು ಚೈತಾಲಿಗೆ. ಅಂದಿನ ಪಾರ್ಟಿಯಲ್ಲಿ ಕಂಡ ನೆನಪಿತ್ತು. ಇವರ್ಯಾಕೆ ತನ್ನ ಮನೆಗೆ ಬಂದಿದ್ದಾರೆ? ಅವಳಿಗೇನೂ ಅರ್ಥವಾಗಲಿಲ್ಲ.

"ನೀವು.......  ನೀವು ಇಲ್ಲೇನು ಮಾಡ್ತಿದ್ದೀರಾ?" ಕೇಳಿದಳು ಗೊಂದಲದಿಂದ.

"ಹಲೋ ಚೈತಾಲಿ, ನಾನು ಅಭಿರಾಮ್ ಶರ್ಮಾ ಅಂತ. ನಿಮ್ಮ ಹತ್ರ ಸ್ವಲ್ಪ ಮಾತಾಡ್ಬೇಕಿತ್ತು. ಅದಕ್ಕೇ ಬಂದ್ವಿ. ಇವ್ನು ವೈಭವ್ ಅಂತ. ನನ್ನ ನಕ್ಷತ್ರಿಕ. ಸ್ವಲ್ಪ ಎಡವಟ್ಟು ಜಾಸ್ತಿ. ಏನೋ ಮಾಡೋಕೆ ಹೋಗಿ ಹೀಗಾಗಿದೆ. ದಯವಿಟ್ಟು ಕ್ಷಮಿಸಿ" ತನ್ನನ್ನು ಪರಿಚಯಿಸಿಕೊಂಡು ಕೈ ಮುಗಿದ.

"ಇರ್ಲಿ ಬಿಡಪ್ಪ. ಏನೋ ಹುಡುಗು ಬುದ್ದಿ. ಗೊತ್ತಿಲ್ದೇ ಆಗಿದೆ ಅಷ್ಟೇ. ಒಳಗೆ ಬನ್ನಿ. ಕುತ್ಕೊಂಡು ಮಾತಾಡುವಿರಂತೆ" ಒಳಗೆ ಕರೆದರು ಚೈತಾಲಿಯ ತಾಯಿ. ಎಲ್ಲರೂ ಒಳ ನಡೆದರು ಗುಂಡಮ್ಮ ಒಬ್ಬರನ್ನು ಬಿಟ್ಟು. "ಮತ್ತೆ ಒಂದು ಚೊಂಬು ನೀರು ಸುರ್ಕೊಂಡು ಬರೋಹಾಗಾಯ್ತು. ಎಲ್ಲಾ ಈ ಪ್ರಾರಬ್ಧದಿಂದ" ಗೊಣಗುತ್ತಾ ಬಚ್ಚಲೆಡೆಗೆ ಹೊರಟಿತು ಮುದುಕಿ.

ಮುಂದೆ ಹೋದ ವೈಭವ್ ತಿರುಗಿ ಬಂದು, "ಸಾರಿ ಓಲ್ಡ್ ಲೇಡಿ, ಗೊತ್ತಾಗ್ಲಿಲ್ಲ. ಬಟ್ ಒಂದು ಚೊಂಬು ನೀರು ಹಾಕ್ಕೊಂಡ್ರೇ ಸಾಲಲ್ಲ. ಒಂದು ಡ್ರಮ್ ಮಿನಿಮಮ್ ಬೇಕು. ನೀವು ಹೂಂ ಅಂದ್ರೆ ನಾನೇ ಬಾವಿಯಿಂದ ನೀರು ಸೇದಿ ಮೇಲೆ ಸುರೀಲಾ?" ಒಂದು ಬಂಪರ್ ಆಫರ್ ಕೊಟ್ಟ.

"ಅಷ್ಟಾವಕ್ರ ಮುಂಡೆದೇ, ಬಿಡೋ ನನ್ನ. ಜೀವನಾದ್ರೂ ಉಳ್ಸೋ" ಬೊಬ್ಬಿರಿಯಿತು ಮುದುಕಿ.

ಅಭಿ ಓಡಿ ಬಂದವನು ಅಜ್ಜಿಯನ್ನು ಅಲ್ಲಿಂದ ಕಳುಹಿಸಿ, "ಅಯ್ಯಾ ಮನೆಹಾಳ, ನೀನು ಬಿಟ್ರೆ ಅಜ್ಜಿನೇ ಬಾವಿಗೆ ಎತ್ತಾಕ್ತೀ. ಮುಚ್ಚ್ಕೊಂಡು ಬಾ. ಇಲ್ಲಿಂದ ವಾಪಾಸಾಗೋವರೆಗೆ ನಿನ್ನ ಬಾಯಿಂದ ಒಂದು ಶಬ್ದ ಬರ್ಬಾರ್ದು ತಿಳೀತಾ" ಎಚ್ಚರಿಕೆ ಹೇಳಿಯೇ ಒಳಕರೆತಂದ.

"ಕುತ್ಕೊಳ್ಳಿ" ಚೇರಿನೆಡೆಗೆ ಕೈ ತೋರಿಸಿ ತಾಯಿಯ ಹಿಂದೆ ಅಡುಗೆಮನೆಯತ್ತ ನಡೆದಳು. ಪುಟ್ಟದಾದರೂ ಅಚ್ಚುಕಟ್ಟಾಗಿತ್ತು ಮನೆ. ಎಲ್ಲೆಡೆ ದೇವರ ಚಿತ್ರಪಟಗಳನ್ನು ಕಂಡು ವೈಭವ್, "ಅಲ್ಲಾ ಇದೇನು ಮನೆಯಾ ಇಲ್ಲಾ ದೇವಸ್ಥಾನವಾ? ಹೇಗೂ ನಮ್ಮ ರಾಜ್ಯದ ರಾಜಕಾರಣಿಗಳು ಮಾಡೋ ಕೆಲ್ಸ ಬಿಟ್ಟು ಮೂರ್ಹೊತ್ತು ಟೆಂಪಲ್ ರನ್ ಮಾಡ್ತಿರ್ತಾರೆ. ಅವರಿಗೆಲ್ಲ ನನ್ನ ಡಾರ್ಲಿಂಗ್ ಮನೆ ಅಡ್ರೆಸ್ ಕೊಟ್ರೆ ಪ್ರಜೆಗಳ ದುಡ್ಡಾದ್ರೂ ಉಳಿಯುತ್ತೆ" ಪಿಸುಗುಟ್ಟಿದ.

"ಈಗ ಸುಮ್ನಿದ್ರೆ ಸರಿ. ಇಲ್ಲಾಂದ್ರೆ ಮಗನೇ ಟೆಂಪಲ್ ರನ್ ಅಲ್ಲ, ನಿನ್ನ ಚಟ್ಟ ಏರಿಸಿ ಸ್ಮಶಾನ ರನ್ ಮಾಡ್ಸಿಬಿಡ್ತೀನಷ್ಟೇ" ಉರಿಗಣ್ಣಿನಲ್ಲಿ ನೋಡುತ್ತಾ ಹೇಳಿದ.

ಕಾಫಿ, ಕುರುಕಲು ತಿಂಡಿ ಸರಬರಾಜಾಯಿತು. ತಿಂದು ಮುಗಿಯುವಷ್ಟರಲ್ಲಿ ನಮ್ಮ ಗುಂಡಮ್ಮನವರ ಮಡಿಯೂ ಆಗಿತ್ತು. ಜಪಸರ ಹಿಡಿದು ಹೊರಬಂದಾಕೆ ಕೆಂಗಣ್ಣಿನಿಂದ ವೈಭವವನ್ನು ನೋಡಿ ದೇವರಕೋಣೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟರು. ವೈಭವ್ ತಲೆಕೆರೆದುಕೊಂಡಾಗ ಚೇತನ್, "ಡೋಂಟ್ ವರಿ ಡ್ಯೂಡ್, ಶಿ ಈಸ್ ಮಡಿ ಗುಂಡಮ್ಮ. ನೀನು ಬೀಳ್ಸಿಲ್ಲಾ ಅಂದಿದ್ರೂ ಏನಾದ್ರೂ ನೆಪ ಹುಡುಕಿ ನೀರು ಸುರ್ಕೊಂಡಿರೋದು ಮುದುಕಿ. ಸ್ನಾನ ಮಾಡೋದು ಗುಂಡು ಹಾಬಿ ಯು ನೋ….. ದಿನಕ್ಕೆ ಕಡಿಮೆ ಅಂದ್ರೂ ಇಪ್ಪತ್ತು ಸಲ ಸ್ನಾನ ಮಾಡುತ್ತೆ ಮಡಿ ಮುದ್ಕಿ. ನಮ್ಮ ದೇಶದಲ್ಲಿ ನೀರಿನ ಪ್ರಾಬ್ಲಂ ಆಗೋಕೆ ಮುಕ್ಕಾಲು ಪರ್ಸೆಂಟ್ ಈ ಕಾಗೆ ಮುದ್ಕಿನೇ ಕಾರಣ" ದೀರ್ಘವಾಗಿ ಗುಂಡಾಯಣವನ್ನು ಪಾರಾಯಣ ಮಾಡಿದ.

ಭಾಮೈದ ಇಷ್ಟು ಮಾತನಾಡಿದ್ದು ನೋಡಿ ಖುಷಿಯಾದ ವೈಭವ್ 'ಇವ್ನು ನನ್ನ ಪಾರ್ಟಿ ತರ ಇದ್ದಾನೆ. ಸ್ವಲ್ಪ ಮಾತಾಡಿ ಕ್ಯಾಚ್ ಹಾಕ್ಕೊಂಡ್ರೇ ನಮ್ಗೆ ಬೇಕಾದಾಗ ವರ್ಕೌಟ್ ಮಾಡ್ಕೋಬಹುದು' ಎಂದು ಅವನೊಂದಿಗೆ ಹರಟೆಗೆ ಶುರುವಿಟ್ಟ.

ಇತ್ತ ಅಭಿ ಮಾತನಾಡಲಿದೆ ಎಂದಾಗ ಚೈತಾಲಿ ಅವನನ್ನು ಅಂಗಳಕ್ಕೆ ಕರೆದೊಯ್ದಳು. ಅವನಿಗೆ ತನ್ನ ಬಳಿ ಮಾತನಾಡಲು ಏನಿರಬಹುದೆಂಬ ಗೊಂದಲ ಅವಳಿಗಿದ್ದರೆ, ಅವಳು ಏನು ಹೇಳಬಹುದೆಂಬ ಕುತೂಹಲ ಅವನಿಗೆ.

"ನೋಡಿ ಚೈತಾಲಿ, ಸುತ್ತಿ ಬಳಸಿ ಮಾತಾಡೋಲ್ಲ ನಾನು, ನೇರ ವಿಷಯಕ್ಕೆ ಬಂದು ಬಿಡ್ತೀನಿ. ನೀವು ಸತ್ಯಂ ರಾವ್ ಅವರ ಪಿ.ಎ ಆದ್ದರಿಂದ ನಿಮಗೇ ಗೊತ್ತಿರೋ ವಿಷಯವೇ ಅಂದ್ಕೋತೀನಿ. ಮಿಸ್ಟರ್ ರಾವ್ ಸ್ವಲ್ಪ ದಿನಗಳ ಹಿಂದೆ ನನ್ನ ಹಾಗೂ ಸಮನ್ವಿತಾ ಮದುವೆ ಪ್ರಸ್ತಾಪ ಮಾಡಿದ್ರು. ನನ್ನ ಮನೆಯವರಿಗೆಲ್ಲಾ ಅದು ಸಮ್ಮತವೂ ಆಗಿತ್ತು. ಆದರೆ ನಾನೇ ಹಿಂಜರಿದಿದ್ದೆ. ಯಾಕೆಂದ್ರೆ ನಿಮ್ಮ ಬಾಸ್ ಬಗ್ಗೆ ನನಗೆ ಅಂತಹ ಒಳ್ಳೆ ಅಭಿಪ್ರಾಯ ಇಲ್ಲ. ಅಂತಹವರ ಮಗಳು ಅಂದ್ರೆ‌….... ನಾನೂ ಯೋಚನೆಗೆ ಬಿದ್ದಿದ್ದೆ. ಅಪ್ಪ ಮಗಳು ಸೇರಿ ಏನಾದ್ರೂ ಪ್ಲಾನ್ ಮಾಡಿರಬಹುದಾ ಅಂತ. ಅದೆಲ್ಲದರ ಜೊತೆ ನನ್ನ ಮನೆಯವರೆಲ್ಲ ಅವಳನ್ನು ಒಪ್ಪಿದ್ದು, ನಾನೂ ಒಪ್ಪದೇ ವಿಧಿಯಿಲ್ಲ ಅನ್ನೋ ಹಾಗೆ ಆಗಿತ್ತು. ಹಾಗಾಗಿ ನೇರಾ ನೇರವಾಗಿ ಸಮನ್ವಿತಾಳ ಹತ್ರನೇ ಎಲ್ಲಾ ವಿಷಯ ಮಾತಾಡೋಣ ಅಂದುಕೊಂಡು ಅವಳನ್ನು ನಿನ್ನೆ ನಮ್ಮನೆಗೆ ಕರೆದಿದ್ದೆ. ಅವಳನ್ನು ಮನೆಗೆ ಇನ್ವೈಟ್ ಮಾಡೋಕೆ ಕರೆ ಮಾಡಿದಾಗ್ಲೇ ಏನೋ ಸರಿ ಇಲ್ಲ ಅಂತ ಅನ್ನಿಸಿತ್ತು ನನ್ಗೆ. ಆದ್ರೆ ಅದನ್ನ ನೆಗ್ಲೆಕ್ಟ್ ಮಾಡಿಬಿಟ್ಟೆ. ನಿನ್ನೆ ಮನೆಯಲ್ಲಿ ಮಾತಾಡ್ತಾ ಈ ವಿಷ್ಯ ಬಂತು. ಈ ವಿಷ್ಯ ಕೇಳಿದಾಗ ಅವಳು ಪ್ರತಿಕ್ರಿಯಿಸಿದ ರೀತಿ...... ಶಿ ವಾಸ್ ಬ್ಲಾಂಕ್......ಬಹುಶಃ ನಮ್ಮಿಂದಲೇ ಅವಳಿಗೆ ವಿಷಯ ಫಸ್ಟ್ ಟೈಮ್ ಗೊತ್ತಾಯ್ತು ಅನಿಸಿತು. ನಾನು ಅವಳ ಹತ್ರ ಕೇಳಿದೆ ನಿನ್ಗೆ ವಿಷಯ ಗೊತ್ತಿರ್ಲಿಲ್ವಾ ಅಂತ. ಬಟ್ ಅವಳೇನು ಹೇಳ್ಲಿಲ್ಲ ಸರಿಯಾಗಿ. ಸೋ ಐ ನೀಡ್ ಯುವರ್ ಹೆಲ್ಪ್. ನಿನ್ನೆ ರಾವ್ ಮ್ಯಾನ್ಶನ್ ಅಲ್ಲಿ ಏನಾಯ್ತು? ನನ್ನ ಅನುಮಾನ ನಿಜ ಅಲ್ವಾ? ರಾವ್ ಅವರನ್ನು ಕೇಳೋಕಾಗಲ್ಲ, ಸಮನ್ವಿತಾ ಹೇಳಲ್ಲ, ಸೋ ನೀವೊಬ್ಬರೇ ಇದನ್ನೆಲ್ಲಾ ಹೇಳ್ಬಹುದು. ಪ್ಲೀಸ್ ಚೈತಾಲಿ, ಟ್ರಸ್ಟ್ ಮಿ, ಎಂಡ್ ಟೆಲ್ ಮಿ ದಿ ಟ್ರುಥ್. ನನಗೊಂತರಾ ಗಿಲ್ಟ್ ಕಾಡ್ತಿದೆ. ನಾನು ಹೇಳಿನೇ ಹೀಗೆಲ್ಲಾ ಆಯ್ತಾ ಅಂತ. ಜೊತೆಗೆ ಸಮನ್ವಿತಾ ಬಗ್ಗೆ ತುಂಬಾ ತಪ್ಪಾಗಿ ಅರ್ಥೈಸಿಕೊಂಡಿದ್ದೆ ಅನ್ಸುತ್ತೆ.

ಒಟ್ಟಾರೆ ನಾನು ಮಾಡಿರೋ ತಪ್ಪನ್ನೆಲ್ಲಾ ಸರಿಪಡಿಸಬೇಕು. ಅದಾಗಬೇಕು ಅಂದ್ರೆ ಮೊದ್ಲು ನನಗೆ ವಿಷಯ ಎಲ್ಲಾ ಸರಿಯಾಗಿ ಅರ್ಥ ಆಗ್ಬೇಕು. ಸೋ ಪ್ಲೀಸ್ ಹೆಲ್ಪ್ ಮೀ ಔಟ್ ಚೈತಾಲಿ"  ಕೇಳಿದವನತ್ತಲೇ ನೋಡಿದಳು.

'ಇದು ಬಹಳ ಸೂಕ್ಷ್ಮ ವಿಚಾರ, ಹೇಳಬಹುದಾ ಇವರಿಗೆ? ಏನ್ಮಾಡ್ಲೀ? ಒಳ್ಳೆಯವರಂತೆ ಕಾಣ್ತಾರೆ. ಹೊರಗೂ ಒಳ್ಳೆಯ ಹೆಸರಿದೆ ಇವರಿಗೆ‌ ಹಾಗೂ ಇವರ ಮನೆಯವರಿಗೆ. ಆದರೆ ಇವರು ಸತ್ಯಂ ರಾವ್ ಅವರಂತಲ್ಲ. ಆತನಿಗೆ ಹೆಸರಿರುವುದು ಅವನ ಹಣಬಲದಿಂದ ಮಾತ್ರ. ಎದುರಿಗೆ ನಿಂತು ಸಲಾಂ ಹಾಕುವವರು ಹಿಂದಿನಿಂದ ಹಿಡಿ ಶಾಪ ಹಾಕುತ್ತಾರೆ ಅವನಿಗೆ. ಆದರೆ ಶರ್ಮಾಸ್ ಎಂದರೆ ಹಾಗಿಲ್ಲ. ಹಣ ಗುಣ ಎರಡರಲ್ಲೂ ಮೇಲಿದ್ದಾರೆ. ಆದರೆ? ಸಮನ್ವಿತಾ ಮ್ಯಾಮ್ ಬಗ್ಗೆ ಇವರಿಗೆ ಹೇಳುವುದು ಸರಿಯಾ?' ಯೋಚನೆಗೆ ಬಿದ್ದಳು.

"ಚೈತಾಲಿ, ನೀವು ಯಾವ ಹಿಂಜರಿಕೆ ಇಲ್ಲದೇ ನನ್ನ ಹತ್ರ ಮಾತಾಡಬಹುದು. ಈ ವಿಚಾರ ನನ್ನ ಬಿಟ್ಟು ಬೇರೆಯವರ ಕಿವಿಗೆ ಹೋಗೋಲ್ಲ. ಆದರೆ ನನಗೆ ತಿಳಿಯಲೇಬೇಕಾದ ಅನಿವಾರ್ಯತೆ ಇದೆ. ಸಮನ್ವಿತಾಳ ಮನಸ್ಸಿನಲ್ಲೇನಿದೆ ಅಂತ ತಿಳಿಯದೇ ನಾನೇನೂ ಮಾಡಲಾರೆ" ಮತ್ತೆ ಹೇಳಿದ.

ಅವನ ಮಾತಿನಲ್ಲಿ, ಕಣ್ಣಿನಾಳದಲ್ಲಿ ಯಾವುದೋ ಭರವಸೆ ಸಿಕ್ಕಿತೇನೋ ಚೈತಾಲಿಗೆ, ನಿನ್ನೆ ನಡೆದ ಪ್ರತಿಯೊಂದನ್ನೂ ಇಂಚಿಂಚಾಗಿ ವಿವರಿಸಿದಳು. 

ಚೈತಾಲಿ ಎಲ್ಲವನ್ನೂ ಹೇಳಿ ಹಗುರಾದರೆ, ಎಲ್ಲವನ್ನೂ ಕೇಳಿ ಅಭಿರಾಮ್ ಮನ ಭಾರವಾಯಿತು.... ಪರಿಸ್ಥಿತಿ ತನ್ನೆಣಿಕೆಗಿಂತ ವಿಪರೀತವಾಗಿದೆ ಅನಿಸತೊಡಗಿತು ಅವನಿಗೆ. ಸಮನ್ವಿತಾಳ ಅನಿಸಿಕೆ ಪ್ರಕಾರ ಅವಳಪ್ಪ ಅವಳನ್ನು ನಮಗೆ ಮಾರಾಟಮಾಡಿದ್ದಾರೆ. ಅವಳಿಗೆ ಹೆತ್ತವರು ತಲೆಹಿಡುಕರೆನಿಸಿದ್ದಾರೆ. ಹಾಗಾದಲ್ಲಿ ಈಗ ಅವಳ‌ ಪ್ರಕಾರ ನಾವು? ಮುಂದೆ ಯೋಚಿಸಲು ಭಯವೆನಿಸಿತು ಅವನಿಗೆ.

ಈಗೇನು ಮಾಡಲಿ? ಈ ಹುಡುಗಿ ನನ್ನ ಮದುವೆಯಾಗಲು ಒಪ್ಪಬಹುದೇ? ಹೇಗೆ ಒಪ್ಪಿಸುವುದು? 

ಒಪ್ಪಿಸಲೇಬೇಕು…... ಒಪ್ಪಿಸಿಯೇ ತೀರುತ್ತೇನೆ......!

ಬಿಡುವ ಮಾತಂತೂ ಖಂಡಿತಾ ಸಾಧ್ಯವಿಲ್ಲ. ಬಿಟ್ಟರೆ ನನಗೆ ಬದುಕೆಲ್ಲಿದೆ?

ಇದೆಲ್ಲಕ್ಕೂ ಮೂಲ ಕಾರಣ ಅವಳಪ್ಪ. ಏನು ಮಾಡಲಿ ಈ ರಾವ್ ಎಂಬ ರಕ್ಕಸನನ್ನು. ತುಳಿದು ಹೊಸಕಿ ಹಾಕಲೇ? ಮಗಳು ಇವನ ಕಂಪನಿಯಲ್ಲಿ ತಯಾರಾಗುವ ಮಾರಾಟದ ವಸ್ತುವೇ? ದುಡ್ಡಿಗಾಗಿ ಯಾರನ್ನೂ ಮಾರಲು ತಯಾರೇನೋ? ಸರಿಯಾಗಿ ಬುದ್ಧಿ ಕಲಿಸಬೇಕು. ಕೊಡುವ ಪೆಟ್ಟು ಜೀವನಪರ್ಯಂತ ನೆನಪಿರಬೇಕು. ಈಗೆಲ್ಲಾದರೂ ಎದುರು ಸಿಕ್ಕರೆ. ಹಲ್ಮುಡಿ ಕಚ್ಚಿ ಮುಷ್ಟಿ ಬಿಗಿಯಾಗಿಸಿದ.

ಅವನನ್ನು ನೋಡಿದವಳು, "ಯಾಕೆ? ಏನಾಯ್ತು?" ಕೇಳಿದಳು.

"ಏನಿಲ್ಲಾ ನಿಮ್ಮ ಬಾಸ್ ನೆನಪಾಗಿ ಪ್ರೀತಿ ಉಕ್ಕಿತು" 

"ನೋ ವೇ….., ಹಿ ಈಸ್ ನಾಟ್ ಮೈ ಬಾಸ್ ನೌ. ನಿನ್ನೆ ರಾತ್ರಿಯೇ ಆ ಕೆಲಸ ಬಿಟ್ಹಾಕಿ ಬಂದೆ. ಚಿನ್ನದಂತಹ ಮಗಳನ್ನೇ ಉಳಿಸಿಕೊಳ್ಳೋ ಯೋಗ್ಯತೆ ಇಲ್ಲದವನ ಹತ್ರ ನಾನೆಷ್ಟು ಸೇಫ್ ಅನ್ನುವ ಯೋಚನೆ ಬಂತು. ಕೆಲ್ಸ ಇಲ್ದೇ ಮನೆಯಲ್ಲಿದ್ರು ಪರವಾಗಿಲ್ಲ ಆದ್ರೆ ಆ ಮನುಷ್ಯನ ಹತ್ರ ಕೆಲಸ ಮಾಡೋಲ್ಲ. ಮನುಷ್ಯರ ಬೆಲೆ ಗೊತ್ತಿಲ್ಲದ ಮುಟ್ಟಾಳ. ತಾನು, ತನ್ನ ದುಡ್ಡು ಇದೆರಡು ಬಿಟ್ಟು ಬೇರೇನೂ ಬೇಡ ಅವನಿಗೆ. ನಾನು ಚೆನ್ನಾಗಿದ್ರೆ ಸಾಕು, ನನ್ನವರು ಅನ್ನಿಸ್ಕೊಂಡೋರು ಹಾಳಾದ್ರೂ ತೊಂದ್ರೆ ಇಲ್ಲ ಅಂತಾರೆ ಗಂಡ ಹೆಂಡತಿ. ಯಾಕಿಷ್ಟು ಸ್ವಾರ್ಥಿಗಳಾಗ್ತಾರೆ ಮನುಷ್ಯರು? ಯಾಕೆ ಆ ದೇವರು ಇಂಥಾ ಸ್ವಾರ್ಥಿಗಳಿಗೆ ಸಮನ್ವಿತಾ ಮ್ಯಾಮ್ ಅಂಥಾ ಮಗಳನ್ನು ಕೊಟ್ಟಿದ್ದು. ಅವರ ತಂದೆ ತಾಯಿ ಅನ್ನಿಸ್ಕೊಳ್ಳೋ ಯೋಗ್ಯತೆ‌ನೇ ಇಲ್ಲ ರಾವ್ ದಂಪತಿಗಳಿಗೆ. ಸಮನ್ವಿತಾ ಮ್ಯಾಮ್ ನ ಸರಿಯಾಗಿ ಅರ್ಥ ಮಾಡಿಕೊಂಡವರಿಗೆಲ್ಲಾ ಅನ್ನಿಸೋ ಒಂದು ಕಾಮನ್ ವಿಷಯ ಶಿ ಡಿಸರ್ವ್ಸ್ ಬೆಟರ್ ಪೇರೆಂಟ್ಸ್ ಅಂತ….." ಬೇಸರದಲ್ಲಿ ನುಡಿದಳು.

"ಆ ರಾವ್ ಗೆ ಸರಿಯಾಗಿ ಮಾಡ್ತೀನಿ. ಸುಮ್ಮನೆ ಬಿಡೋದಿಲ್ಲ. ಅದು ಬಿಡಿ. ಈಗ ಏನ್ಮಾಡಬೇಕು ಅಂತಿದ್ದೀರಿ? ಡು ಯು ವಿಷ್ ಟು ವರ್ಕ್?"

"ಅಯ್ಯೋ ಬಿಡಿ ಸರ್, ಅವರೊಬ್ರೇನಾ ಇರೋದು ಕೆಲ್ಸ ಕೊಡೋಕೆ? ಬೇರೆ ಹುಡುಕ್ತೀನಿ. ಸರ್, ಅದು..... ಅದೂ..... ಮೋಸ ಗೀಸ ಏನೇ ಆಗಿರ್ಲೀ ಆದರೆ ನಿಮ್ಮ ಸಮನ್ವಿತಾ ಮ್ಯಾಮ್ ಜೋಡಿ ಚೆನ್ನಾಗಿರುತ್ತೆ….." ಮೆಲುವಾಗಿ ಅಂದಳು. ನಸುನಕ್ಕವನು ಜೇಬಿನಿಂದ ಒಂದು ಕಾರ್ಡ್ ತೆಗೆದು ಅವಳಿಗೆ ನೀಡಿ,

"ನಿಮಗೆ ಇಂಟ್ರೆಸ್ಟ್ ಇದ್ರೆ ನಾಳೆ ಈ ವಿಳಾಸಕ್ಕೆ ಬನ್ನಿ. ಕೆಲಸ ಸಿಗುತ್ತೆ. ನೀವು ಬರ್ತೀರಾ ಅನ್ನೋ ನಂಬಿಕೆ ನಂದು. ಒಂದು ವೇಳೆ ನೀವು ಬರ್ದಿದ್ರೇ, ನೀವು ಕೆಲಸ ಬಿಟ್ಟ ಸುದ್ದಿ ತಿಳಿದು, 'ನನ್ನಿಂದಾಗಿ ಚೈತಾಲಿ ಕೆಲಸ ಬಿಡೋ ಹಾಗಾಯ್ತು' ಅಂತ ನಿಮ್ಮ ಮ್ಯಾಮ್ ಬೇಜಾರಾಗ್ತಾರೆ ಅಷ್ಟೇ. ಹಾಗೆನೇ ನಿಮ್ಮ ಹಾರೈಕೆಯಂತೆ ಒಂದು ವೇಳೆ ನಿಮ್ಮ ಮ್ಯಾಮ್ ನನ್ನ ಜೋಡಿ ಆದ್ರೆ ಅವರಿಗೂ ಆಫೀಸಲ್ಲಿ ನಿಮ್ಮನ್ನು ನೋಡಿ ಖುಷಿ ಆಗುತ್ತಲ್ವಾ?" ಅವನ ಮಾತಿನಲ್ಲೊಂದು ತುಂಟತನವಿತ್ತು.

ಅವನ ಮಾತಿನ ಶೈಲಿ ಅವಳ ಮೊಗದಲ್ಲಿ ನಗು ಮೂಡಿಸಿತು. "ಖಂಡಿತಾ ಬರ್ತೀನಿ. ಅಲ್ಲಿಗೆ ಸಮನ್ವಿತಾ ಮ್ಯಾಮ್ ಜೋಡಿ ಆಗೋ ಆಸೆಯಂತು ನಿಮಗೆ ಇದೆ ಅಂತಾಯ್ತು" ಅವನದೇ ಧಾಟಿಯಲ್ಲಿ ಕೇಳಿದಳು.

"ನನಗೆ ಆಸೆ ಇದ್ಯೋ ಇಲ್ವೋ ಅನ್ನೋದಕ್ಕಿಂತ ನಿಮ್ಮ ಮ್ಯಾಮ್ ನನ್ನ ಜೋಡಿ ಆಗೋಕೆ ಒಪ್ತಾರೋ ಇಲ್ವೋ ಅನ್ನೋದೆ ಈಗಿರೋ ಪ್ರಶ್ನೆ"  ಜಾಣತನದಿಂದ ಉತ್ತರಿಸಿ ನಕ್ಕವನೊಂದಿಗೆ ಚೈತಾಲಿಯ ನಗುವೂ ಮಿಳಿತವಾಯಿತು.

ಅಷ್ಟರಲ್ಲಿ ಒಳಗಿನಿಂದ ಚೈತಾಲಿಯ ಅಮ್ಮನ ಕರೆ ಬಂದಿದ್ದರಿಂದ ಇಬ್ಬರೂ ಒಳಬಂದಾಗ ಗುಂಡಮ್ಮ ವ್ಯಾಕುಲರಾಗಿದ್ದರೆ, ವೈಭವ್ ಚಿಂತಾಕ್ರಾಂತನಾಗಿದ್ದ. ಚೇತನ್ ಮಾತ್ರ ಹೊಟ್ಟೆ ಹಿಡಿದು ನಗುತ್ತಿದ್ದ.

ಅಭಿರಾಮ್ ವೈಭವವನ್ನು ಎಬ್ಬಿಸಿಕೊಂಡು ಮನೆಯವರಿಗೆ ಹೊರಡುತ್ತೇವೆ ಎಂದು ಹೇಳಿ ಹೊರಟ.

"ಊಟ ಮಾಡಿಕೊಂಡು ಹೋಗಿ ಸರ್" ಹಿಂದಿನಿಂದ ಬಂದ ಚೈತಾಲಿ ಹೇಳಿದಳು.

"ಇಲ್ಲಾ ಚೈತಾಲಿ, ಲೇಟಾಯ್ತು, ಹಾಸ್ಪಿಟಲ್ ಗೆ ಹೋಗ್ಬೇಕು. ಇನ್ನೊಮ್ಮೆ ಬರ್ತೀನಿ" ಎಂದ.

"ಹಾಸ್ಪಿಟಲ್?" ಪ್ರಶ್ನಾರ್ಥಕವಾಗಿ ಕೇಳಿದಳು.

"ಓ ಸಾರಿ, ಹೇಳಲು ಮರೆತೆ" ಎಂದವ ಸಮನ್ವಿತಾ ಅಡ್ಮಿಟ್ ಆದದ್ದನ್ನು ತಿಳಿಸಿ, ಗಾಬರಿಯಾಗುವ ಪ್ರಮೇಯವಿಲ್ಲ ಎಂದು ವಿವರಿಸಿದ.

"ಸರ್ ನಾನೂ ಬರ್ತೀನಿ" ಎಂದಳು.

"ನಾಳೆ ಬನ್ನಿ ಚೈತಾಲೀ. ಸಮನ್ವಿತಾಳಿಗೆ ಇನ್ನೂ ಪ್ರಜ್ಞೆ ಬಂದಿರಲಿಲ್ಲ. ಸೋ ಬಂದ್ರೂ ಮಾತನಾಡಿಸಲು ಆಗೋಲ್ಲ" ಅವನೆಂದಾಗ ಅದು ಸರಿ ಎನಿಸಿತು ಅವಳಿಗೆ.

ಅಭಿರಾಮ್ ಕಾರು ಆಸ್ಪತ್ರೆಯೆಡೆಗೆ ತಿರುಗಿಸಿದ. ವೈಭವ್ ತನ್ನ ಭಾಮೈದನೊಂದಿಗಿನ ಮಾತುಕತೆಯ ವರದಿ ಒಪ್ಪಿಸುತ್ತಿದ್ದ. ಕೇಳುತ್ತಾ ಡ್ರೈವ್ ಮಾಡುತ್ತಿದ್ದವ ಒಮ್ಮೆ ಪಕ್ಕ ನೋಡಿದಾಗ ವೈಭವ್ ಕೈಯಲ್ಲಿದ್ದ ಬಟ್ಟೆಗಳು ಕಾಣಿಸಿತು...

"ಏನೋ ಇದು?" ಕೇಳಿದ ಅಚ್ಚರಿಯಿಂದ.

"ನೋಡು ಬೀರ್ ಆ ಮುದ್ಕಿನ. ನನಗೆ 'ತಂಗೊಂಡ್ಹೋಗಪ್ಪಾ' ಅಂತ ಈ ಪ್ಯಾಂಟುಗಳನ್ನು ಕೊಟ್ಟಿದೆ" ಅವಲತ್ತುಕೊಂಡ.

"ಅದೇನಾಯ್ತು ಅಂತ ಸರಿಯಾಗಿ ಹೇಳು" ಗದರಿ ಕೇಳಿದ. ನಡೆದ ಘಟನೆಯನೆಲ್ಲಾ ವಿವರಿಸಿದ ವೈಭವ್.

ಅಸಲಿಗೆ ಆಗಿದ್ದಿಷ್ಟು…...

ಗುಂಡಮ್ಮ ಜಪ ಮುಗಿಸಿ ಎದ್ದು ಬಂದಾಗ ಚೇತನ್, ವೈಭವ್ ಹರಟೆ ಹೊಡೆಯುತ್ತಿದ್ದರು. ಅಲ್ಲೇ ಬಂದು ಕುಳಿತ ಮುದುಕಿ ಕಣ್ಣಿಗೆ ವೈಭವನ ಫ್ಯಾಷನೇಬಲ್ ಜೀನ್ಸ್ ಬಿದ್ದಿತ್ತು.. ಎಲ್ಲೆಂದರಲ್ಲಿ ಬ್ಲೇಡ್ ಹಾಕಿ ಹರಿದಂತಿದ್ದ ಇವನ ಬಟ್ಟೆ ಕಂಡು ಗುಂಡುವಿನ ಕರುಣೆಯ ಕಟ್ಟೆ ಒಡೆದಿತ್ತು. ಒಳಗೆ ಹೋಗಿ ಚೇತನ್ ನ ನಾಲ್ಕಾರು ಹಳೆ ಪ್ಯಾಂಟ್ ಆರಿಸಿ ತಂದು ಕೊಟ್ಟಿತ್ತು ಮುದುಕಿ.

"ನೋಡು ಮಗಾ. ಇದು ಒಂದೆರಡು ಕಡೆ ಹರ್ದಿದ್ರೆ ಹೊಲಿಗೆ ಹಾಕಬಹುದಿತ್ತು. ಇದಾಗಲ್ಲ ಬಿಡು. ಇನ್ಮೇಲೆ ಈ ತರ ಹರ್ದಿರೋ ಬಟ್ಟೆ ಹಾಕ್ಬೇಡ" ಎಂದು ಸಮಾಧಾನಿಸಿ ಬೇಡವೆಂದರೂ ಕೇಳದೆ ಬಟ್ಟೆ ಕೊಟ್ಟು ಕಳಿಸಿತ್ತು.

ಅಭಿಗೆ ತಾನು ಚೈತಾಲಿಯೊಡನೆ ಮಾತು ಮುಗಿಸಿ ಮನೆಯೊಳಗೆ ಹೋದಾಗಿನ ಮೂವರ ಎಕ್ಸ್ಪ್ರೆಷನ್ ನೆನಪಾಯಿತು. ಅದರ ಅರ್ಥ ಈಗ ಹೊಳೆಯಿತು ಕೂಡಾ. ಹೊಟ್ಟೆ ಹುಣ್ಣಾಗುವಂತೆ ನಕ್ಕ.

"ಏನೋ ನನ್ನ ಕುಳ್ಳಿ ಡಾರ್ಲಿಂಗ್ ಅಜ್ಜಿ ಅಂತ ಸುಮ್ನೆ ತಗೊಂಡೆ. ಇಲ್ಲಾಂದಿದ್ರೆ ನನ್ನ ಮಗಂದು ಕಾಗೆ ಮುದ್ಕಿ ತಿಥಿ ಮಾಡ್ತಿದ್ದೆ" ಹಾಗೆಯೇ ಮುಂದುವರೆದಿತ್ತು ಅವನ ಪುರಾಣ…...

ಅಭಿ ಮಾತ್ರ ಇವನ ಪಾಡು ನೆನೆದು ಆಸ್ಪತ್ರೆ ತಲುಪುವವರೆಗೂ ನಗುತ್ತಲೇ ಇದ್ದ......

         ******* ಮುಂದುವರೆಯುತ್ತದೆ ********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ