ಮಾಹಿತಿಯುತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಾಹಿತಿಯುತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜೂನ್ 30, 2020

ಅನೂಹ್ಯ ಪಯಣ

ಇದು ನನ್ನ ಮೊದಲ ಕಾದಂಬರಿ. ನಾನೆಂದಿಗೂ ಕಾಲೇಜು ಅಸೈನ್ಮೆಂಟುಗಳನ್ನು ಬಿಟ್ಟು ಬೇರೇನನ್ನೂ ಬರೆದವಳಲ್ಲ. ಓದುವ ಹುಚ್ಚು ಬಹಳವಾದರೂ ಎಂದೂ ಬರೆಯುವ ಬಗ್ಗೆ ಯೋಚಿಸಿರಲಿಲ್ಲ. ಸುಮ್ಮನೆ ಮನೆಯಲ್ಲಿ ಕುಳಿತು ವ್ಯರ್ಥ ಕಾಲಹರಣ ಮಾಡುವ ಬದಲು ಏನಾದರೂ ಬರೆಯಬಹುದಲ್ಲಾ ಅನ್ನುವ ಯೋಚನೆ ಬಂದಾಗ ಬರೆಯಲಾರಂಭಿಸಿದ ಕಥೆ ಅನೂಹ್ಯ.

ಏನು ಬರೆಯಲಿ ಎಂದು ಯೋಚಿಸಿದಾಗ ಮೊದಲು ತಲೆಗೆ ಬಂದ ವಿಷಯವಿದು.... ಒಂದು ಪುಟ್ಟ ಕಥೆ, ಕವನ ಏನೋ ಗೀಚುವ ಬದಲು ಇಂತಹ ವಿಷಯವನ್ನಿಟ್ಟುಕೊಂಡು ಕಾದಂಬರಿ ಬರೆಯಬೇಕು ಎಂದು ಅದೇಕೆ ಅನಿಸಿತೋ ನನಗೂ ತಿಳಿಯದು. ಒಮ್ಮೊಮ್ಮೆ ನನಗೇ ಹುಚ್ಚು ಎನಿಸಿದ್ದಿದೆ. ಮೊದಲ ಪ್ರಯತ್ನಕ್ಕೆ ಇಂತಹ ವಿಷಯ, ವಿಸ್ತಾರವಾದ ಪರಿಕಲ್ಪನೆ ಬೇಕಾ ಅಂತ. ಆದರೆ ನನ್ನ ಮನಸ್ಸು ಕೇಳಲೇ ಇಲ್ಲ. ಇದರ ನಡುವಿನಲ್ಲೇ ಕೆಲವು ಸಣ್ಣ ಕಥೆ, ಕವನ, ಹಾಸ್ಯ ಬರಹಗಳನ್ನು ಬರೆದಿರುವೆನಾದರೂ ಒಟ್ಟಾರೆಯಾಗಿ ನನ್ನ ಮೊದಲ ಬರಹ ಅನೂಹ್ಯ.

ಬರವಣಿಗೆಯ ಬಗ್ಗೆ ಏನೇನೂ ಅನುಭವವಿರಲಿಲ್ಲ. ಹತ್ತು ಸಂಚಿಕೆಗಳಲ್ಲಿ ಮುಗಿಯಬಹುದು ಅಂದುಕೊಂಡಿದ್ದೆ. ಈಗ ಹಿಂತಿರುಗಿ ನೋಡಿದರೆ ನನಗೇ ಅಚ್ಚರಿಯಾಗುತ್ತದೆ.

ಇನ್ನು ಕಥೆಯ ವಿಷಯಕ್ಕೆ ಬರುವುದಾದರೇ, ಬರವಣಿಗೆ ಓದುಗರ ಚಿಂತನೆಗಳನ್ನು ಓರೆಗೆ ಹಚ್ಚಬೇಕು ಎಂದು ಆಶಿಸುವವಳು ನಾನು. ಹಾಗಾಗಿಯೇ ನನ್ನ ಸುತ್ತಮುತ್ತಲಿನ ಸಮಾಜದಲ್ಲಿ ನಾನು ಕಂಡ ವಿಶಿಷ್ಟ ವ್ಯಕ್ತಿತ್ವಗಳನ್ನು ಆಯ್ದುಕೊಂಡು ಈ ಕಥೆ ರಚಿಸಿದ್ದು.‌ ಇದರಲ್ಲಿಯ ಎಲ್ಲಾ ಪಾತ್ರಗಳೂ ನಮ್ಮ ನಡುವಿನವೇ (ವೈಭವ್ ಹೊರತುಪಡಿಸಿ). ಬಹಳವಾಗಿ ಕಾಡಿದಂತಹ ಕೆಲ ವ್ಯಕ್ತಿತ್ವಗಳು, ಕೇಳಿದ ಕೆಲವೊಂದು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಅದಕ್ಕೊಂದಿಷ್ಟು ಕಲ್ಪನೆ, ಆಶಯ ಬೆರೆಸಿ ಹೆಣೆದ ಕಥೆಯಿದು. ಕಥೆಯಲ್ಲಿ ವೇದನೆ, ವಾಸ್ತವದ ಕ್ರೌರ್ಯತೆಯೇ ಮೇಲಾಗಿದ್ದಾಗ ಅದಕ್ಕೊಂದಿಷ್ಟು ವಿರಾಮ ನೀಡಲು ಪೂರ್ವಯೋಜನೆ ಇಲ್ಲದೇ ಸೃಷ್ಟಿಸಿದ ಪಾತ್ರ ವೈಭವನದು.

ಕೊನೆಯದಾಗಿ ಹಾಗೂ ಬಹಳ ಮುಖ್ಯವಾಗಿ……. ಈ ಕಥೆಯ ಮುಕ್ತಾಯ ಸುಖಾಂತ್ಯವಾಗಿದ್ದು ಹಲವರಿಗೆ ಇಷ್ಟವಾದರೂ ಕೆಲವರಿಗೆ ವಾಸ್ತವಕ್ಕೆ ದೂರ ಎನ್ನಿಸಬಹುದು. ಅದಕ್ಕೆ ನನ್ನದೊಂದು ಸಣ್ಣ ಸ್ಪಷ್ಟೀಕರಣ.

ಹೌದು…. ವಾಸ್ತವದಲ್ಲಿ ನವ್ಯಾಳ ಪರಿಸ್ಥಿತಿಯಲ್ಲಿರುವ ಹೆಣ್ಣುಮಕ್ಕಳನ್ನು ಕುಟುಂಬ, ಸಮಾಜ ಎರಡೂ ಧಿಕ್ಕರಿಸುವುದು ನೂರಕ್ಕೆ ತೊಂಬತ್ತು ಪ್ರತಿಶತ ಸತ್ಯ. ಎಲ್ಲೋ ಲಕ್ಷಕ್ಕೊಬ್ಬರು ಆ ಹೆಣ್ಣಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಸಿಗಬಹುದು. ಇನ್ನು ಲೋಕದ ಜನರ ಮಾತಂತೂ ಬೇಡವೇ ಬೇಡ. ಹೊಲಸು ನಾಲಿಗೆಯನ್ನು ಮನಬಂದಂತೆ ಹರಿಯಬಿಡುತ್ತಾರೆ.

ಆದರೆ ನಾನು ಈ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿಯೇ ಆದರೂ ಬದಲಾವಣೆಯ ಆಶಯದೊಂದಿಗೆ ಬರೆದಿರುವೆ. ಈ ವಾಸ್ತವ ಬದಲಾಗಲೀ, ಅಂತಹ ನೊಂದ ಹೆಣ್ಣುಮಕ್ಕಳ ಬಾಳೂ ಬೆಳಗಲಿ ಎಂಬ ಆಶಯ ನನ್ನದು. ತಮ್ಮದಲ್ಲದ ತಪ್ಪಿಗೆ ಜೀವಂತವಾಗಿಯೇ ನರಕ ದರ್ಶನ ಮಾಡಿದ್ದಾರೆ ಇಂತಹ ಹೆಣ್ಣುಮಕ್ಕಳು. ಅವರನ್ನು ಸಾಂತ್ವನಿಸಬೇಕಲ್ಲವೇ ನಾವು…..? ಸಾಂತ್ವನಿಸದಿದ್ದರೂ ಚಿಂತೆಯಿಲ್ಲ ಕಡೇಪಕ್ಷ ಅವರ ಬಗ್ಗೆ ಕೇವಲವಾಗಿ ಮಾತನಾಡದೇ ಸುಮ್ಮನಿರಬಹುದಲ್ಲವೇ? ನಮ್ಮಂತೆಯೇ ಗೌರವಯುತವಾಗಿ ಬಾಳುವ ಹಕ್ಕು ಅವರಿಗೂ ಇದೆ ಎಂಬುದನ್ನೇಕೆ ಅರ್ಥೈಸಿಕೊಳ್ಳುವುದಿಲ್ಲ ನಾವುಗಳು…..?

ಇದನ್ನೆಲ್ಲ ಅರಿತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಒಟ್ಟಾಗಿ ಪ್ರಯತ್ನಿಸೋಣ ಎಂಬ ಆಶಯದಿಂದ ಬರೆದ ಕಥೆಯಿದು. ಹಾಗಾಗಿ ವಾಸ್ತವದಲ್ಲಿ ಕಷ್ಟಸಾಧ್ಯವಾದ ಅಂತ್ಯವನ್ನು ನಾನು ಕಥೆಯಲ್ಲಿ ಸಾಧ್ಯವಾಗಿಸಿದ್ದೇನೆ ಮುಂದೊಂದು ದಿನ ಈ ಕಥೆಯ ಅಂತ್ಯವೇ ವಾಸ್ತವವಾಗಲೀ ಎಂಬ ಆಶಯದಿಂದ.

ಈ ಕಥೆಯ ಓದುಗರಿಗೆ ಧನ್ಯವಾದಗಳೊಂದಿಗೆ ಒಂದು ಸಣ್ಣ ಕೋರಿಕೆ…... ಇದನ್ನು ಕಥೆಯೆಂದು ಓದಿ ಇಲ್ಲಿಗೇ ಮರೆತುಬಿಡಬೇಡಿ. ಇಲ್ಲಿ ಪ್ರಸ್ತಾಪವಾಗಿರುವ ವಿಚಾರದ ಬಗ್ಗೆ ಚಿಂತಿಸಿ, ಸಾಧ್ಯವಾದರೆ ಕೆಟ್ಟದ್ದನ್ನು ಬದಲಿಸಿ, ಒಳ್ಳೆಯ ವಿಚಾರ ಯೋಚನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಷ್ಟು ವೈಶಾಲ್ಯತೆಯನ್ನು ತೋರೋಣ. ಈ ಕಥೆಯನ್ನು ಓದಿ ಕಡೆಯ ಪಕ್ಷ ಒಬ್ಬ ವ್ಯಕ್ತಿಯಾದರೂ ತನ್ನ ಚಿಂತನಾ ವಿಧಾನವನ್ನು ಬದಲಾಯಿಸಿಕೊಂಡರೆ ನನ್ನ ಬರವಣಿಗೆ ಸಾರ್ಥಕವಾದಂತೆ. ಈ ಬಗ್ಗೆ ಯೋಚಿಸುವಿರಲ್ಲ.......?

ಇನ್ನೇನು ಹೇಳಲಿ.... ಇಲ್ಲಿಗೆ ಭಾವನೆಗಳನ್ನು ಬಸಿದು ಕೊಂಚ ಹಗುರವಾದ, ಈ ಪಯಣ ಮುಗಿಯಿತು ಎಂದು ಒಂದಿಷ್ಟು ಭಾರವಾದ ಮನದಿಂದ ಈ ಕಥೆಗೆ ವಿದಾಯ ಹೇಳುತ್ತಿರುವೆ. ನನ್ನೀ ಪ್ರಯತ್ನವನ್ನು ಮೆಚ್ಚಿ ಆಶೀರ್ವದಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.


ಬದಲಾವಣೆಯ ಆಶಯದೊಂದಿಗೆ......

ನೀತಾ ಸುಧೀರ್😊☺️