ಸೋಮವಾರ, ಜೂನ್ 22, 2020

ಅನೂಹ್ಯ 10

ನಾನು ಆ ದಿನ ಅತೀವ ಸಂತಸದಲ್ಲಿದ್ದೆ. ಇಂದು ನನ್ನ ಗೆಳತಿ ಹೊರಬರುತ್ತಾಳೆ ನರಕ ಸದೃಶ ಬದುಕಿನಿಂದ.......

ಅವಳು ಹೊರಬಂದಾಗ ಅವಳಿಗಾಗುವ ಸಂತೋಷ,  ಅವಳ ಕಣ್ಣುಗಳಲ್ಲಿ ಕಾಣಬಹುದಾದ ಬಿಡುಗಡೆಯ ನೆಮ್ಮದಿಯ ನಿರೀಕ್ಷೆಯಲ್ಲಿ ನಾನು ಕಾತರಳಾಗಿದ್ದೆ....... 

ಆ ಕ್ಷಣ ಕೊನೆಗೂ ಬಂದೇ ಬಿಟ್ಟಿತ್ತು.....

ಪೋಲೀಸರು ಕಮಲಾಬಾಯಿಯ (ರೂಬಿಯ ಮಾಲೀಕೆ) ಕೋಠಿಗೆ ರೈಡ್ ಮಾಡಲು ಹೊರಟಾಗ ನಾನೂ ಅವರೊಂದಿಗೆ‌ ಹೋಗಲು ತುದಿಗಾಲಲ್ಲಿ ನಿಂತಿದ್ದೆ. ಆದರೆ ಅವರು ಹಾಗೆಲ್ಲಾ ಕರೆದೊಯ್ಯಲಾಗದು ಎಂದಾಗ ಸ್ಟೇಷನ್ ನಲ್ಲೇ ಕಾಯುತ್ತಾ ಉಳಿಯಬೇಕಾಯಿತು. ಅಲ್ಲಿ ಇನ್ನೊಂದಿಷ್ಟು ಜನರಿದ್ದರು. ಅವರೂ ಕೂಡಾ ನನ್ನಂತೇ ಯಾರದೋ ನಿರೀಕ್ಷೆಯಲ್ಲಿದ್ದಂತೆ ಕಂಡಿತು. ಅವರ ಗುಂಪಿನಲ್ಲಿ ಹೆಂಗಸರು, ಮಕ್ಕಳು ಕೂಡಾ ಇದ್ದರು. ಅವರ ಮುಖಗಳಲ್ಲಿ ನೋವು ಬೆರೆತ ಕಾತುರತೆಯಿತ್ತು. ಹೆಂಗಸರು ಮೌನವಾಗಿ ಕಣ್ಣೀರು ಸುರಿಸುವಂತೆಯೂ ಅನಿಸಿತು. ಯಾಕೋ ಅಲ್ಲಿರಲು ಮನಸ್ಸಾಗದೆ ಹೊರಬಂದು ನಿಂತಿದ್ದೆ.

ಸಮಯ ಬಹಳ ನಿಧಾನವಾಗಿ ಸಾಗಿತ್ತು ಆ ದಿನ......

ದೇವರೇ, ಎಲ್ಲಾ ಸುಗಮವಾಗಿ ನಡೆಯಲಿ ಎಂದು ಅದೆಷ್ಟು ಬಾರಿ ಕೇಳಿಕೊಂಡೆನೋ ನನಗೇ ತಿಳಿಯದು.

ಕೊನೆಗೂ ಪೋಲಿಸ್ ವ್ಯಾನ್ ಬಂದೇ ಬಂದಿತು. ಪೋಲೀಸ್ ವ್ಯಾನ್ ಬಂದೊಡನೆ ನಾನು ಒಂದೇ ಏಟಿಗೆ ಹಾರಿಬಂದಿದ್ದೆ ಅವಳನ್ನು ಸ್ವಾಗತಿಸಲು. ಆದರೆ ಅವಳೊಂದಿಗಿದ್ದ ಇನ್ನೂ ನಾಲ್ವರು ಹುಡುಗಿಯರನ್ನು ಕಂಡು ನನಗೆ ಅಚ್ಚರಿಯಾಗಿತ್ತು. ಈ ಹುಡುಗಿಯರನ್ನೂ ಅಲ್ಲೇ ನೋಡಿದ್ದ ನೆನಪಾಯಿತು. 

ನನ್ನ ಕಣ್ಣಲ್ಲಿನ ಅಚ್ಚರಿ ಗಮನಿಸಿದ ಎಸ್.ಐ "ಇವರನ್ನೂ ರೂಬಿಯೊಂದಿಗೇ ಬಿಡಿಸಿಕೊಂಡು ಬಂದಿದ್ದೇವೆ ಅಲ್ಲಿಂದಲೇ" ಎಂದಾಗ ನನಗೆ ಇನ್ನಷ್ಟು ಆಶ್ಚರ್ಯ. ಈ ಹುಡುಗಿಯರನ್ನು ಯಾರು ಹುಡುಕುತ್ತಿರಬಹುದು? ಕಂಪ್ಲೈಂಟ್ ಕೊಟ್ಟವರ್ಯಾರು?  ಹುಡುಗಿಯರನ್ನು ಅಷ್ಟು ಸುಲಭವಾಗಿ ಈ ಕೋಠಿಗಳಿಂದ ಹೊರತರಲು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತಿತ್ತು. ಇದು ಹೇಗಾಯ್ತು? ಅರ್ಥವಾಗಲಿಲ್ಲ. ಪ್ರಶ್ನಾರ್ಥಕವಾಗಿ ಅವರತ್ತ ನೋಡಿದ್ದೆ.

"ನೋಡಿ, ministry of Home affairs ಅವರು anti human trafficking cell ಅಂತಾ ಒಂದು ಹೊಸ ವಿಂಗ್ ತೆರೆದಿದ್ದಾರೆ. ಮಕ್ಕಳು ಹಾಗೂ ಹುಡುಗಿಯರ ಅಪಹರಣ ಅಥವಾ ನಾಪತ್ತೆ ಪ್ರಕರಣಗಳಲ್ಲಿ ಯಾವುದೇ ವೈಯಕ್ತಿಕ ಕಾರಣ ಸಿಗದಿದ್ದರೆ ಮತ್ತು ಅವು human trafficking ಗೆ ಸಂಬಂಧಿಸಿವೆ ಅಂತ ಅನಿಸಿದರೆ ಆ ಕೇಸಿನ ಫೈಲುಗಳು ನೇರವಾಗಿ anti human trafficking cell ನ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗುತ್ತವೆ.ದೇಶದ ಪ್ರತಿಯೊಂದು ಪೋಲಿಸ್ ಠಾಣೆಯಲ್ಲೂ ಈ anti human trafficking cell ನ ಒಂದು ವಿಭಾಗವಿರುತ್ತೆ. ಹಾಗಾಗಿ ಯಾವುದೇ ಕೇಸಿನ ಫೈಲ್ ಈ cellನಲ್ಲಿ ಅಪ್ಲೋಡ್ ಆದಾಗ ಅದರ ಮಾಹಿತಿ ದೇಶದ ಎಲ್ಲಾ ಪೋಲೀಸ್ ಠಾಣೆಗಳಿಗೆ ನೇರವಾಗಿ ರವಾನೆಯಾಗುತ್ತದೆ. ನಾವು ಯಾವುದೇ ವೇಶ್ಯಾಗಾರಗಳನ್ನು ರೈಡ್ ಮಾಡಲು ಹೊರಡುವಾಗ ಈ cell ನಲ್ಲಿ ಅಪ್ಲೋಡ್ ಆಗಿರೋ ನಾಪತ್ತೆಯಾದ ಹುಡುಗಿಯರ ಮಾಹಿತಿಯನ್ನು ಇಟ್ಟುಕೊಂಡಿರುತ್ತೇವೆ. ಅದರಲ್ಲಿ ಯಾರಾದರೂ ರೈಡ್ ಮಾಡಿದಲ್ಲಿ ಸಿಕ್ಕರೆ ಅವರನ್ನೂ ಬಿಡಿಸಿಕೊಂಡು ಬರುತ್ತೇವೆ" ಎಸ್.ಐ ದೀರ್ಘವಾಗಿ ವಿವರಿಸಿದರು. 

ನನಗೆ ಈ ಬಗ್ಗೆ ತಿಳಿದಿರಲಿಲ್ಲ. ಸರಿಯಾಗಿ ನಿರ್ವಹಿಸಿದರೆ ಬಹಳ ಪರಿಣಾಮಕಾರಿಯಾಗಬಲ್ಲ ವ್ಯವಸ್ಥೆ ಇದು. ವೈಯಕ್ತಿಕ ಕಂಪ್ಲೈಂಟ್ ದಾಖಲಾಗದಿದ್ದರೂ, ದೇಶದ ಯಾವುದೋ ಒಂದು ಭಾಗದಿಂದ ಅಪಹರಿಸಲ್ಪಟ್ಟು human trafficking ನ ಕರಿನೆರಳಿಗೆ ಸಿಲುಕಿದ ಎಷ್ಟೋ ಅಮಾಯಕ ಮಕ್ಕಳು ಹಾಗೂ ಯುವತಿಯರು ಯಾವುದೇ ಮೂಲೆಯಲ್ಲಿದ್ದರೂ ಈ ವ್ಯವಸ್ಥೆಯಿಂದ ಅವರನ್ನು ಹುಡುಕುವುದು ಸುಲಭವಾಗುತ್ತದೆ ಎನಿಸಿತು. 

ಐವರನ್ನು ಹಾಗೂ ನನ್ನನ್ನು ಠಾಣೆಯೊಳಗೆ ಬರಹೇಳಿ ಎಸ್.ಐ ಒಳನಡೆದಾಗ ನನ್ನ ಯೋಚನೆಯಿಂದ ಹೊರಬಂದೆ. ಐವರೂ ವ್ಯಾನ್ ನಿಂದ ಇಳಿಯುತ್ತಿದ್ದರು. ಆ ನಾಲ್ವರು ಹುಡುಗಿಯರ ಮುಖದಲ್ಲಿ ನರಕದಿಂದ ಹೊರಬಂದ ನೆಮ್ಮದಿಯೊಂದಿಗೆ ಮುಂದೇನು ಎಂಬ ಯೋಚನೆಯೂ ಮಿಳಿತವಾಗಿತ್ತು. 

ಆಗ ನೆನಪಾಯಿತು..... ಒಳಗೆ ಅಳುತ್ತಿದ್ದ ಹೆಂಗೆಳೆಯರು...... ಬಹುಶಃ ಈ ಹುಡುಗಿಯರ ಮನೆಯವರಿರಬೇಕು.

ಅವರು ಒಳನಡೆದಾಗ ನಾನು ನನ್ನ ಗೆಳತಿಯ ಬಳಿ ನೆಡೆದೆ. ಅವಳು ಭಾವತೀವ್ರತೆಗೆ ಒಳಗಾಗಬಹುದೆಂಬುದು ನನ್ನ ಅನಿಸಿಕೆಯಾಗಿತ್ತು.

ಅದೇ ನಿರೀಕ್ಷೆಯಲ್ಲಿಯೇ ಅವಳನ್ನು ಸಮಾಧಾನಿಸಲು ತಯಾರಾಗಿದ್ದೆ ಕೂಡಾ. 

ಆದರೆ... ಅವಳು ನನ್ನ ಕಂಡು ನಸುನಕ್ಕಳಷ್ಟೇ. ಆ ಕ್ಷಣ ಅವಳು ಅಳಲಿಲ್ಲ, ಬಿಕ್ಕಲಿಲ್ಲ, ಖುಷಿಯಿಂದ ಕುಣಿದಾಡಲೂ ಇಲ್ಲ. ನಿರ್ಲಿಪ್ತಳಂತೆ ಕಂಡಿದ್ದಳು.

ಅವಳನ್ನು ನೋಡಿ ನನಗೇ ಅಚ್ಚರಿಯಾಗಿತ್ತು.

ಬಹುಶಃ ತಾನು ಆ ಕಸಾಯಿಖಾನೆಯಿಂದ ಹೊರಬರುವೆನೆಂಬ ಆಸೆಯನ್ನೇ ಕೈ ಬಿಟ್ಟಿದ್ದ ಅವಳಿಗೆ ಹೊರಬಂದಾಗ ಆದ ಸಂತೋಷಕ್ಕೆ ಶಾಕ್ ಆಗಿರಬಹುದು ಎಂದುಕೊಂಡೆ. ಅವಳ ಕೈ ಹಿಡಿದು ಒಳಗೆ ಕರೆದೊಯ್ದೆ.

ಪೋಲಿಸ್ ಠಾಣೆಯಲ್ಲಿ ಕೆಲವು ಅಗತ್ಯ ಪ್ರೊಸೀಜ಼ರ್ ಗಳನ್ನು ಮುಗಿಸಬೇಕಿತ್ತು. ನಾನು ಅವಳೊಂದಿಗೆ ಎಸ್.ಐ ಕ್ಯಾಬಿನ್ ಕಡೆ ಹೋಗುವಾಗ ಆ ನಾಲ್ವರು ಹುಡುಗಿಯರು ತಮ್ಮ ಜೀವಮಾನದ ಹಿಂಸೆ, ನೋವನ್ನೆಲ್ಲಾ  ಹೊರಹಾಕುವಂತೆ ತಮ್ಮ ‌ತಾಯಂದಿರ ತೆಕ್ಕೆಯಲ್ಲಿ ಅಳುತ್ತಿದ್ದರು.

ನಾನು ಅವಳೊಂದಿಗೆ ಎಸ್.ಐ ಕ್ಯಾಬಿನ್ ಹೊಕ್ಕಿದ್ದೆ. ಅವರಿಗೆ ಅವಳ ವಿವರಗಳು ಬೇಕಿದ್ದವು. ಅವರು ಹೆಸರೇನೆಂದು ಕೇಳಿದಾಗ ನಾನು ಅವಳು ಬಾಯ್ತೆರೆಯುವ ಮುನ್ನವೇ "ನವ್ಯಾ" ಎಂದಿದ್ದೆ.

ಅವಳು ತಬ್ಬಿಬ್ಬಾಗಿ ನನ್ನೆಡೆ ನೋಡಿದ್ದಳು. ಅವರು ಅವಳ ಇತರೆ ವಿವರಗಳನ್ನು ಬರೆದುಕೊಂಡು "ಮೇಡಂ, ನೀವು ಇವರ ಗಾರ್ಡಿಯನ್ ಆಗಿ ಎಲ್ಲಾ ಜವಾಬ್ದಾರಿ ತಗೋತೀರಾ ಅಂತ ಎ.ಸಿ.ಪಿ ಸರ್ ಹೇಳಿದ್ರೂ" ಅಂದಾಗ ನಾನು ಹೌದೆಂದು ತಲೆಯಾಡಿಸಿದೆ. ಅವರು ಒಂದು ಸಹಿ ಹಾಕಿಸಿ " ಇಷ್ಟೇ. ಎಲ್ಲಾ ಪ್ರೊಸೀಜ಼ರ್ ಮುಗೀತು. ನೀವಿನ್ನು ಹೊರಡಿ" ಅಂದರು. ನಾನು ನವ್ಯಾಳೊಂದಿಗೆ ಹೊರಬಂದೆ.

ಆ ನಾಲ್ವರು ಹುಡುಗಿಯರು ನಮ್ಮನ್ನು ಕಂಡೊಡನೆ ಓಡಿಬಂದರು. ನವ್ಯಾಳನ್ನು ಅಪ್ಪಿಕೊಂಡು ಅಳತೊಡಗಿದರು. ಅವಳ ಕಣ್ಣುಗಳು ಮಂಜಾದರೂ ಕೆನ್ನೆ ಮೇಲೆ ಇಳಿಯದಂತೆ ತಡೆದಳು. ಐವರೂ ಒಬ್ಬರನ್ನೊಬ್ಬರು ಸಾಂತ್ವನಿಸುವಂತೆ ಕಂಡಿತು. ಅಷ್ಟರಲ್ಲೇ ಅವರನ್ನು ಎಸ್.ಐ ಒಳಗೆ ಕರೆದರು. ಆ ನಾಲ್ವರು ನನ್ನೆಡೆಗೆ ಒಂದು ಕೃತಜ್ಞತೆಯ ನೋಟಬೀರಿ ಅವಳಿಗೆ ಕೈಬೀಸಿ ಹೊರಟರು. ಅವರ ಕುಟುಂಬದವರೂ ನನಗೆ ಕೈ ಮುಗಿದಾಗ ನನಗೇನೂ ಅರ್ಥವಾಗಲಿಲ್ಲ. ಎಲ್ಲಾ ಅಯೋಮಯವೆನಿಸಿತು. 

ಅವಲ್ಲೊಬ್ಬರು ನನ್ನ ಬಳಿ ಬಂದು, 

"ನೀ ಮಾಡಿರೋ ಉಪಕಾರ ಹ್ಯಾಂಗ ತೀರ್ಸಬೇಕೋ ಗೊತ್ತಿಲ್ಲೇ ನಮ್ಮವ್ವ. ಆರ್ ವರ್ಸದಿಂದ ಶ್ಯಾನೆ ತಿರ್ಗೀವೇ ತಾಯಿ. ನಾವ್ ಮಗಿನ ಮಾರಿ ಮತ್ತ್ ಕಾಣ್ತೀವ ಅನ್ನು ಆಸೀನ ಬುಟ್ಟಿದ್ವಿ ಕನವ್ವ. ನೀ ಯಾರೋ ಆ ತಾಯಿ ಯಲ್ಲವ್ವನಂಗೆ ಬಂದು ಕೊನಿಗೂ ಜೀವ ಹೋಗೂ ಮುಂದಾ ಮಗಿನ ಮಾರಿ ನೋಡೋಹಂಗಾತು ಮಗಾ" ಅಂತ ನನ್ನ ಕೈಯನ್ನು ಕಣ್ಣಿಗೊತ್ತಿದ್ದರು.

ನಾನು ಏನು ಹೇಳಬೇಕೆಂದು ತಿಳಿಯದೆ ಮೌನವಾದೆ. ಆದರೆ ಅವರ ಕಣ್ಣಲ್ಲಿನ ಆ ಭಾವ ಮಾತ್ರ ನನ್ನ ಜೀವಮಾನದಲ್ಲಿ ಮರೆಯಲಾರೆ. "ಸರ್ ಒಳಗೆ ಕರೀತಿದ್ದಾರೆ ಹೋಗಿ. ಎಲ್ಲಾ ಮುಗಿಸಿ ಅವ್ರನ್ನ ಮನೆಗೆ ಕರ್ಕೊಂಡು ಹೋಗಿ" ಅಂದು ನವ್ಯಾಳೊಂದಿಗೆ ಹೊರಟೆ. 

ಅವಳು ಎರಡು ಹೆಜ್ಜೆ ನನ್ನೊಂದಿಗೆ ಬಂದವಳೇ ಮತ್ತೆ ನಿಂತು ಅವರನ್ನು ಕರೆದು "ಸರ್, ನಿಮ್ಮ ಮಕ್ಕಳು ತುಂಬಾ ನೋವು ತಿಂದಿದ್ದಾರೆ. ಅವ್ರನ್ನ ಆದಷ್ಟು ಚೆನ್ನಾಗಿ ನೋಡ್ಕೋಳಿ. ಒಬ್ಬೊಬ್ಬರನ್ನೇ ಬಿಡಬೇಡಿ. ಯಾರನ್ನೂ ನಂಬಿ ಹೆಣ್ಮಕ್ಕಳನ್ನು ಕಳಿಸಬೇಡಿ. ಅವ್ರು ತುಂಬಾ ಹತ್ರದವರಾದರೂ ಹೆಣ್ಮಕ್ಕಳ ವಿಷಯದಲ್ಲಿ ಜಾಗ್ರತೆ ಮಾಡಿ. ಹಾಗೇ........ ಸಾಧ್ಯವಾದ್ರೆ ನೀವಿರೋ ಊರು ಬಿಟ್ಟು ಬೇರೆ ಕಡೆ ಹೋಗಿ ಸರ್. ಜನರ ನಾಲಿಗೆ ತುಂಬಾ ಹರಿತವಾಗಿರುತ್ತೆ. ಅದು ಕೊಡೋ ನೋವು ಬೇರೆಲ್ಲಕ್ಕಿಂತ ಭಯಂಕರವಾಗಿರುತ್ತೆ. ಆ ಯಾತನೆ ಈವರೆಗೆ ಅವರು ಸಹಿಸಿದಕ್ಕಿಂತಲೂ ಭೀಕರವಾಗಿರುತ್ತೆ" ಅಂದು ಹೊರನಡೆದಾಗ ನಾನು ಮೌನಗೌರಿಯಾಗಿ ಅವಳನ್ನು ಹಿಂಬಾಲಿಸಿದ್ದೆ. 

ಆ ಮಾತುಗಳನ್ನು ನಾನೂ ನವ್ಯಾಳ ವಿಷಯದಲ್ಲಿ ಅನ್ವಯಿಸಿಕೊಳ್ಳಬೇಕಿತ್ತು…...

ಕಾರ್ ಪಾರ್ಕ್ ಮಾಡಿದಲ್ಲಿಗೆ ನಡೆಯುವಾಗ "ಅದ್ಯಾಕೆ ನನ್ನ ಹೆಸರು ನವ್ಯಾ ಅಂದೆ" ಕೇಳಿದಳು. ನಾನು ಕಿರುನಗುತ್ತಾ "ನಿನ್ನ ಮಾ ಬಾಬಾ ಇಟ್ಟಿರೋ ಹೆಸರು ನೀನು ಹೇಳೋಲ್ಲ. ರೂಬಿ ಅಂತ ನಿನ್ನ ಕರ್ಯೋಕೆ ನಂಗಿಷ್ಟ ಇಲ್ಲ, ಕೇಳೋಕೆ ನಿಂಗೂ ಇಷ್ಟ ಇಲ್ಲ ಅಂತ ನಂಗೊತ್ತು. ಇವತ್ತಿಂದ, ಈ ಕ್ಷಣದಿಂದ ನಿನ್ನ ಹಳೆಯ ಬದುಕಿನ ಪೊರೆ ಕಳಚಿದೆ ಅಂದ್ಕೋ. ಈಗಿನಿಂದ ನೀನು ಹೊಸ ಪ್ರಪಂಚಕ್ಕೆ, ಹೊಸ ಬದುಕಿಗೆ ಕಾಲಿಡ್ತಿದ್ದೀಯ. ಹೊಸ ಬದುಕಿಗೆ ಹೊಸ ಹೆಸರು…. ನವ್ಯಾ….. ನಂದೇ ಸೆಲೆಕ್ಷನ್. ಯಾಕೆ ಚೆನ್ನಾಗಿಲ್ವಾ ಹೆಸರು?" ಕೇಳಿದೆ. 

"ಚೆನ್ನಾಗಿದೆ" ತಲೆ ಆಡಿಸಿದಳು.

ಕಾರು ವೇಗವಾಗಿ ಚಲಾಯಿಸತೊಡಗಿದೆ. ಅವಳು ಸುತ್ತ ನೋಡುತ್ತಿದ್ದರೂ ತಲೆಯಲ್ಲಿ ನೂರಾರು ಯೋಚನೆಗಳಿದ್ದವೆಂದು ನನಗೂ ತಿಳಿದಿತ್ತು. ನಾನೂ  

ಅವಳ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೆ.

ಅವಳನ್ನು ಅಲ್ಲಿಂದ ಹೊರಗೇನೋ ಕರೆತಂದಿದ್ದೆ. ಆದರೆ ಇಲ್ಲಿ ಅವಳ ಬದುಕನ್ನು ಕಟ್ಟಿಕೊಡುವುದು ಸುಲಭದ ಸವಾಲಲ್ಲ. ಮೊದಲೇ ಸೂಕ್ಷ್ಮ ಮನಸ್ಸಿನವಳು. ಅವಳಲ್ಲಿ ಧೈರ್ಯ ತುಂಬಿ, ಈ ವಾತಾವರಣಕ್ಕೆ ಅವಳನ್ನು ಒಗ್ಗಿಸಬೇಕಿತ್ತು. ಮೊದಲಿಗೆ ಅವಳನ್ನು ಇರಿಸುವುದೆಲ್ಲಿ? ನನ್ನ ಮನೆಗೆ ಕರೆದೊಯ್ಯಲು ಸಾಧ್ಯವೇ ಇರಲಿಲ್ಲ. ನಾನೇ ಪರಕೀಯಳು ಎನಿಸುವಲ್ಲಿ ಇವಳನ್ನು ಹೇಗಿರಿಸಲಿ? 

ಅವಳಿಗೆ ಏನಾದರೊಂದು ಕೆಲಸ ನೋಡಬೇಕಿತ್ತು. ಕೈ ತುಂಬಾ ಕೆಲಸವಿದ್ದರೆ ಚಿಂತೆಗೆ ಜಾಗವಿರುವುದಿಲ್ಲ. ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಒಂದು ಬಗೆಯ ಧೈರ್ಯವನ್ನು ನೀಡುತ್ತದೆ. ಮೊದಲು ಇವಳಿಗೊಂದು ಕೆಲಸ ಹುಡುಕಬೇಕು. ನಂತರ ಅದಕ್ಕೆ ಸರಿಯಾಗುವಂತೆ ಒಂದು ಪುಟ್ಟ ಮನೆ ನೋಡಿದರಾಯಿತು. ಅಲ್ಲಿಯವರೆಗೆ ಇವಳನ್ನು "ಆಶ್ರಯ"ದಲ್ಲಿ ಇರಿಸಲು ನಿರ್ಧರಿಸಿದ್ದೆ.

ದಾರಿಯಲ್ಲಿ ಶಾಪಿಂಗ್ ಮಾಲ್ ಒಂದು ಕಂಡಾಗ ನವ್ಯಾಳಿಗೆ ಬಟ್ಟೆ ಕೊಳ್ಳಬೇಕೆಂದು ನೆನಪಾಗಿ ಅಲ್ಲಿಗೆ ಕರೆದೊಯ್ದೆ. ಅವಳು "ನಂಗೇನೂ ಗೊತ್ತಾಗೋಲ್ಲ. ನೀನೇ ನೋಡಮ್ಮ" ನನಗೇ ಬಿಟ್ಟಳು. ನಾನೇ ಒಂದಷ್ಟು ಉಡುಪುಗಳನ್ನು ಆರಿಸಿ ಪ್ಯಾಕ್ ಮಾಡಿಸಿದೆ. ಇನ್ನೊಂದಿಷ್ಟು ಅಗತ್ಯ ವಸ್ತುಗಳನ್ನು ಖರೀದಿಸಿದೆ. ಹೊಟ್ಟೆ ಚುರುಗುಟ್ಟತೊಡಗಿದಾಗ ಊಟದ ನೆನಪಾಯಿತು. ಹೋಟೆಲೊಂದನ್ನು ಹೊಕ್ಕೆವು. ಮೆನು ನೋಡುವ ತೊಂದರೆಯನ್ನೇ ತಗೊಳ್ಳದೇ ಎರಡು ಮೀಲ್ಸ್ ಹೇಳಿದೆ. 

"ನವ್ಯಾ, ಬೇರೆನಾದ್ರೂ ಬೇಕಾ?" ಊಟ ಮಾಡುತ್ತಾ ಕೇಳಿದೆ. ಉತ್ತರ ಬರದಾಗ ಅವಳತ್ತ ನೋಡಿದೆ. ಅವಳ ನೋಟ ಎದುರಿನ ಟೇಬಲ್ ಮೇಲಿದೆ ಅನಿಸಿದಾಗ ಮೆಲ್ಲಗೆ ಆ ನೋಟವನ್ನು ಹಿಂಬಾಲಿಸಿತು ನನ್ನ ಕಣ್ಗಳು...

ಎದುರಿನ ಟೇಬಲ್ ನಲ್ಲಿ ಮೂವರು ಹುಡುಗಿಯರು ಲೋಕವನ್ನೇ ಮರೆತು ಹರಟುತ್ತಿದ್ದರು. ನಡುವೆ ಸೆಲ್ಫೀ ಬೇರೆ. ಊಟದ ಮೇಲೆ ಗಮನವೇ ಇರಲಿಲ್ಲ. ಇವಳ್ಯಾಕೆ ಇವರನ್ನು ಹೀಗೆ ಗಮನಿಸುತ್ತಿದ್ದಾಳೆ? ಯೋಚಿಸಿದೆ. ಅವರ ಮಾತನ್ನು ಗಮನವಿಟ್ಟು ಕೇಳಿದಾಗ ಗೊತ್ತಾಯಿತು.

ಆ ಹುಡುಗಿಯರು ಬೆಂಗಾಲಿ ಮಾತಾಡುತ್ತಿದ್ದರು.

ಎಷ್ಟೆಂದರೂ ಅವಳ ಮಾತೃಭಾಷೆ......... ಅದರ ಸೊಗಡೇ ಬೇರೆ....... ಅವಳ ಕಣ್ಣಲ್ಲಿ ಸಂತೋಷ ಕಂಡು ನಕ್ಕು  ಕೇಳಿದ್ದೆ ಅವರು ಏನು ಮಾತಾಡ್ತಿದ್ದಾರೆ ಎಂದು. "ಹೀಗೆ ಒಣಹರಟೆ" ಅಂದಳು. "ನೀನೂ ಸೇರ್ಕೋತೀಯಾ ಹರಟೆಗೆ" ಕೇಳಿದಾಗ ಇಲ್ಲಾ ಎಂಬಂತೆ ತಲೆಯಾಡಿಸಿದ್ದಳು.

ಊಟ ಮುಗಿಸಿ ನೇರವಾಗಿ ಆಶ್ರಯಕ್ಕೆ ಕರೆದೊಯ್ದಿದ್ದೆ. ಅಲ್ಲಿ ಅವಳಿಗೆಲ್ಲಾ ವ್ಯವಸ್ಥೆ ಮಾಡಿಸಿ "ಸಧ್ಯಕ್ಕೆ ಇಲ್ಲಿರು ನವ್ಯಾ. ಇಲ್ಲಿರೋರೆಲ್ಲಾ ನಂಗೊತ್ತು. ಇಲ್ಲೇನು ತೊಂದರೆ ಇಲ್ಲಾ. ನೀನು ಸ್ನಾನ ಮಾಡಿ, ವಿಶ್ರಾಂತಿ ತಗೋ. ಬೇಜಾರ್ ಮಾಡ್ಕೋಬೇಡ. ನಂಗೆ ನೈಟ್ ಡ್ಯೂಟಿ ಇದೆ. ಮುಗಿಸ್ಕೊಂಡು ಬೆಳಿಗ್ಗೆ ಸೀದಾ ಇಲ್ಲಿಗೆ ಹಾಜರ್. ನಾಳೆ ಮಾತಾಡೋಣ ಒಕೆ ನಾ" ಎಂದು ಹೊರಟಿದ್ದೆನಷ್ಟೇ.

ಬಂದು ನನ್ನ ಕೈಹಿಡಿದವಳೇ ಇನ್ನಿಲ್ಲದ ಅಪ್ಯಾಯಮಾನತೆಯಿಂದ ಆಗ ಕೇಳಿದ್ದಳವಳು............

                    ಮುಂದುವರೆಯುತ್ತದೆ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ