ಭಾನುವಾರ, ಜೂನ್ 28, 2020

ಅನೂಹ್ಯ 20

ಸತ್ಯಂ ರಾವ್ ಅವರು ಸಂತೋಷದ ತುತ್ತತುದಿಯಲ್ಲಿ ಇದ್ದರು. ಇದುವರೆಗೆ ಎಲ್ಲಾ ತಾನೆಣಿಸಿದಂತೆಯೇ ನಡೆದಿದೆ. ಮುಂದೆಯೂ ಹಾಗೇ ನಡೆಯುತ್ತದೆ ಎಂಬ ಹಮ್ಮಿನಲ್ಲಿದ್ದರು.

"ಎಲ್ಲಾ ಸರಿ ಸತ್ಯ. ಆದರೆ ಒಂದು ವಿಷಯ. ನೀನ್ಯಾಕೆ ಸಮನ್ವಿತಾ ಮನೆಯಿಂದ ಹೋಗ್ತೀನಿ ಅಂದಾಗ ಒಪ್ಪಿಕೊಂಡಿದ್ದು? ಅವಳಿಲ್ಲೇ ಇದ್ದಿದ್ರೆ ನಮ್ಮ ಕಂಟ್ರೋಲಿನಲ್ಲಿ ಇರ್ತಿದ್ಲು. ಈಗ‌ ಅವಳು ಬೇರೆ ಕಡೆ‌ ಇರೋದು. ಏನು ಮಾಡ್ತಾಳೆ‌ ಒಂದೂ ಗೊತ್ತಾಗೋದಿಲ್ಲ. ಯಾಕೆ ಹೀಗೆ ಮಾಡ್ದೇ?" ಈಗಷ್ಟೇ ಬಣ್ಣದಿಂದ ಅಲಂಕೃತವಾದ ಬೆರಳುಗಳನ್ನೇ ನೋಡುತ್ತಾ ಕೇಳಿದರು ಮಾಲಿನಿ.

"ಅವಳು ಎಲ್ಲಿದ್ರೂ ನಮ್ಮಿಬ್ಬರ ಕಂಟ್ರೋಲಿಗೆ ಯಾವತ್ತೂ ಸಿಕ್ಕಲ್ಲ ಬಿಡು. ಅವಳು ಇಲ್ಲಿದ್ದಿದ್ರೆ ನನ್ನ ಪ್ಲಾನ್ ವರ್ಕೌಟ್ ಮಾಡೋದು ಕಷ್ಟ ಆಗಿರೋದು. ನಾವು ಅವಳ ಮದ್ವೆ ಪ್ಲಾನ್ ಮಾಡ್ತಿದ್ದೀವಿ ಅನ್ನೋ ಸಣ್ಣ ಅನುಮಾನ ಬಂದ್ರೂ ಸಾಕು.... ಜನ್ಮ ಜಾಲಾಡಿ ಬಿಡ್ತಿದ್ಲು. ನಾನು ಏನು ಮಾಡೋದು ಅಂತಾ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅವಳೇ ಬಂದು ನಾನು ಶಿಫ್ಟ್ ಆಗ್ತೀನಿ ಅಂದ್ಲು. ನನಗೂ ಅದೇ ಬೇಕಾಗಿತ್ತು. ನನ್ನ ಕೆಲ್ಸ ಆಗೋವರೆಗೂ ಅವಳಿಗೆ ಸ್ವಲ್ಪವೂ ಅನುಮಾನ ಬರ್ಬಾರದು ಅಂತ. ಅದಕ್ಕೆ ಇದೇ ಒಳ್ಳೆ ದಾರಿ ಅನಿಸಿ ಹೋಗು ಅಂದೆ" ತನ್ನ ಮಾತಿನಿಂದ ಮಗಳು ಎಷ್ಟು ನೊಂದುಕೊಂಡು ಮನೆಬಿಟ್ಟಳೆಂಬ ಅರಿವಿಲ್ಲದ ರಾವ್ ಎಂಬ ಧನದಾಹಿ ತನ್ನ ಹೆಂಡತಿಗೆ ಕಾರಣ ಹೇಳುತ್ತಿದ್ದ.

"ಅದೇನೋ ಸರಿ.ಆದರೆ ನಿನ್ನ ಕೆಲಸ ಯಶಸ್ವಿಯಾಗಿ ಮದುವೆ ನಿಶ್ಚಯವಾದ ಮೇಲೆ, ಮನೆ ಬಿಟ್ಟ ಮಗಳು ನಿನಗೆ ತಿರುಗಿಬಿದ್ದರೇ?" ಭವಿಷ್ಯದ ಮುನ್ಸೂಚನೆಯಂತೆ ಕೇಳಿದ್ದರು ಮಾಲಿನಿ.

"ಅವಳನ್ನು ಹೇಗೆ ಕರೆಸಬೇಕೆಂದು ತಿಳಿದಿದೆ ನನಗೆ. ಆ ಯೋಚನೆ ಬಿಡು. ನಮ್ಮ ಮಾತನ್ನು ತೆಗೆದುಹಾಕಬಹುದು ಆದರೆ ಅವಳು ಆ ಸಚ್ಚಿದಾನಂದ ಮತ್ತು ಮೃದುಲಾರ ಮಾತಿಗೆ ಬೆಲೆ ಕೊಟ್ಟೇ ಕೊಡುತ್ತಾಳೆ. ಅವರು ಕರೆದರೆ ಯಾಕೆ ಬರೋಲ್ಲ ಅಂತ ನಾನೂ ನೋಡ್ತೀನಿ" ಎಂದು ಮತ್ತಷ್ಟು ವಿಸ್ಕಿ ಹೊಟ್ಟೆಗಿಳಿಸಿದ್ದರು.

ಹೊರಗೆ ನಿಂತು ಇವರ ಮಾತುಗಳನ್ನು ಅರ್ಧಂಬರ್ಧ ಕೇಳಿಸಿಕೊಂಡ ಚೈತಾಲಿ ಗಾಬರಿಯಾಗಿದ್ದಳು.....!!

ಅವಳಿಗೆ ಸ್ಪಷ್ಟವಾಗಿ ಏನೊಂದೂ ತಿಳಿಯದಿದ್ದರೂ ಸಮನ್ವಿತಾಳಿಗೆ ಅರಿವಿಲ್ಲದೇ ಯೋಜನೆಯೊಂದು ತಯಾರಾಗುತ್ತಿದೆ ಎಂಬುದು ಗೊತ್ತಾಗಿತ್ತು. ಅವಳಿಗೆ ಸಮನ್ವಿತಾಳೆಂದರೆ ಹೇಳಲಾರದಷ್ಟು ಅಂತಃಕರಣ.

ಹಣವೆಂದು ಸಾಯುವ ಪಿಶಾಚಿಗಳ ನಡುವೆ ಅವಳೊಬ್ಬಳೇ ಮಂದಾನಿಲದಂತೆ ಇದ್ದವಳು.

ಕೂಡಲೆ ತಲೆಯೋಡಿಸಿ  ಲಾನ್ ಬಳಿ ಬಂದು ಸಮನ್ವಿತಾಳಿಗೆ ಕರೆ ಮಾಡಿ ತನ್ನ ಬಾಸ್ ಏನೋ ಷಡ್ಯಂತ್ರ ಹೆಣೆಯುತ್ತಿದ್ದಾರೆಂದೂ, ಆ ಕುತಂತ್ರದಲ್ಲಿ ನಿಮ್ಮನ್ನು ಎಳೆದಿರುವ ಬಗ್ಗೆ ಅನುಮಾನವಿದೆಯೆಂದೂ ತಿಳಿಸಿಬಿಟ್ಟಳು ಹುಡುಗಿ.

ಅವಳ ಮಾತು ಕೇಳಿಸಿಕೊಂಡ ಸಮನ್ವಿತಾ ಅದೇನೆಂದು ತೀವ್ರವಾಗಿ ಯೋಚಿಸಲಿಲ್ಲವಾದರೂ ತಾನು ಜಾಗ್ರತೆಯಾಗಿರುವೆನೆಂದು ಚೈತಾಲಿಗೆ ಸಮಾಧಾನ ಹೇಳಿದ್ದಳು.

ಚೈತಾಲಿಯ ಮಾತಿನ ಒಳಾರ್ಥ ಸಧ್ಯದಲ್ಲೇ ತಿಳಿಯಲಿತ್ತು ಸಮನ್ವಿತಾಳಿಗೆ.  

                **********************

ತನ್ನ ಹಾಗೂ ಸಮನ್ವಿತಾಳ ವಿವಾಹ ಪ್ರಸ್ತಾಪದ ಬಗ್ಗೆ ತಿಳಿದು ಅಭಿರಾಮ್ ದಂಗಾಗಿದ್ದ. ತಂದೆಗೆ‌ ಯೋಚಿಸಿ ನಿರ್ಧಾರ ತಿಳಿಸುವೆನೆಂದು ಹೇಳಿ ರೂಮಿಗೆ ಬಂದವನ ತಲೆ ಕೆಟ್ಟಂತಾಗಿತ್ತು. 

ಸಮನ್ವಿತಾಳೊಂದಿಗೆ ತನ್ನ ವಿವಾಹ.....!!

ಇಂಥಾ ನಿರೀಕ್ಷೆಯೇ ಅವನಿಗಿರಲಿಲ್ಲ. ಅವರ ಬಿಸ್ನೆಸಿನಲ್ಲಿ ಹೂಡಿಕೆ ಮಾಡಲು ಕೇಳಬಹುದು ಇಲ್ಲಾ ಜಂಟಿಯಾಗಿ ಹೊಸ ಬಿಸ್ನೆಸ್ ಶುರುಮಾಡುವ ಪ್ರಸ್ತಾವನೆ ಇರಬಹುದು ಎಂದುಕೊಂಡಿದ್ದನಷ್ಟೇ.

ಆದರೆ ಮದುವೆ....... ಅದೂ ಯಾರೊಂದಿಗೆ?

ಎಲ್ಲಿ ನೋಡಿರುವೆನೆಂದು ತಿಳಿಯದೇ ಯಾರ ಬಗ್ಗೆ ತಲೆಕೆಡಿಸಿಕೊಂಡು ಯೋಚಿಸುತ್ತಿರುವೆನೋ ಅವಳೊಂದಿಗೆ.....!!

ಅಸಲಿಗೆ ಮದುವೆಯ ಬಗ್ಗೆ ಅವನು ಯೋಚಿಸಿರಲೇ ಇಲ್ಲ. ವ್ಯವಹಾರ, ಕಲೆ, ಸಂಗೀತ, ಕುಟುಂಬ, ಸ್ನೇಹಿತರ ನಡುವೆ ಆರಾಮಾಗಿದ್ದ ಅವನು. ಈಗ ಒಂದೇ ಬಾರಿಗೆ ಈ ಪ್ರಸ್ತಾಪ.

ಹುಡುಗಿ ಬೇರ್ಯಾರೋ ಆಗಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದನೇನೋ, ಆದರೆ ಸಮನ್ವಿತಾಳನ್ನು ನೋಡಿದಾಗಿನಿಂದ ಅವನೇ ವಿಪರೀತ ಗೊಂದಲದಲ್ಲಿದ್ದ. ಕೊಡವಿಕೊಳ್ಳಲು ನೋಡಿದಷ್ಟೂ ಮೆದುಳು ಹಟ ಹಿಡಿದು ಅವಳನ್ನೇ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಹಿಡಿತ ಮೀರುತ್ತಿರುವ ಮನಸ್ಸಿನ ಲಗಾಮು ಹಿಡಿಯಲು ಪ್ರಯತ್ನಿಸಿ ಸೋತಿದ್ದ.

ಅವನ ಅಂಕೆ ಮೀರಿದ ಅವಳ ನೆನಪು ಅವನಿಗೆ ಅಪ್ಯಾಯಮಾನವಾಗತೊಡಗಿದ್ದು ಸುಳ್ಳಲ್ಲ. ಬೇಡವೆಂದಷ್ಟು ತಲೆಯೊಳಗೆ ಸುಳಿಸುಳಿದು ಕಾಡುವ ಸ್ಮೃತಿ ಹಿತವೆನಿಸತೊಡಗಿತ್ತು. ಮನದೊಳಗೆ ಚಿಟ್ಟೆಗಳು ಹಾರಾಡಿದಂತೆ…….

ಆದರೆ......

ಅವಳು ಸತ್ಯಂ ರಾವ್ ಅವರ ಮಗಳು. ಆ ವ್ಯಕ್ತಿ ಶಕುನಿಯಂತೆ. ಈ ವಿವಾಹ ಪ್ರಸ್ತಾಪದ ಹಿಂದೆ ಏನೋ ಗೂಢವಾದ ಉದ್ದೇಶವಿರುವುದಂತೂ ಸ್ಪಷ್ಟ. ಅವರ ವ್ಯವಹಾರ ಪಾತಾಳದಲ್ಲಿದೆ. ಈ ವಿವಾಹಕ್ಕೂ, ನಷ್ಟದಲ್ಲಿರುವ ಅವರ ವ್ಯವಹಾರಕ್ಕೂ ಸಂಬಂಧವಿದೆಯೇ? ಅವನ ಮೆದುಳು ಸರಿಯಾಗಿಯೇ ಲೆಕ್ಕಾಚಾರ ಹಾಕಿತು. ಕೂಡಲೇ ತನ್ನ ಪಿ.ಎ ಗೆ ಫೋನ್ ಮಾಡಿ ಆದಷ್ಟು ಬೇಗ ರಾವ್ ಅವರ ಬಿಸ್ನೆಸಿನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ತನಗೆ ವಿವರ ನೀಡುವಂತೆ ಹೇಳಿದ. ಸಿಕ್ಕ ವಿವರಗಳನ್ನು ಪರಿಶೀಲಿಸಿದಾಗ ಅವನ ಊಹೆ ನಿಜವೆನಿಸಿತು.

ಬಹುಶಃ ವ್ಯವಹಾರದ ಗತಿ ಬದಲಾಯಿಸಲು ಈ ವಿವಾಹವನ್ನು ಮೆಟ್ಟಿಲಾಗಿ ಬಳಸಲಿದ್ದಾರೆ ಎನಿಸಿತು. 

ತಂದೆ ಮಗಳು ಒಟ್ಟಾಗಿ ಕಾರ್ಯಗತಗೊಳಿಸಿದ ಯೋಜನೆಯೇ?

ಇರಬೇಕು......

ಸಂಬಂಧಗಳನ್ನು ವ್ಯವಹಾರಕ್ಕಾಗಿ ಬಳಸುವವರ ಜೊತೆ ಸಂಬಂಧ ಬೆಳೆಸುವುದು ಎಷ್ಟರ ಮಟ್ಟಿಗೆ ಸರಿ?

ಈ ಮನೆಯಲ್ಲಿ ಸಂಬಂಧ ಹಾಗೂ ವ್ಯವಹಾರಕ್ಕೆ ಸ್ಪಷ್ಟ ವ್ಯತ್ಯಾಸವಿದೆ. ಈಗ ಇವಳಿಂದಾಗಿ ಆ ವ್ಯತ್ಯಾಸದ ಗೆರೆ ಅಳಿಸಿದರೇ?

ತಂದೆಯ ಯೋಜನೆಯ ಎಲ್ಲಾ ಹಂತದಲ್ಲೂ ಮಗಳು ಕೈ ಜೋಡಿಸಿರಬಹುದೇ? ಅದಕ್ಕೇ ಅಂದು ಪಾರ್ಟಿಯಲ್ಲಿ ನಯವಾಗಿ ವರ್ತಿಸಿ ಮನೆಯವರ ನಂಬಿಕೆ ಗೆದ್ದಳೇ?

ಯಾಕೋ ಸಮನ್ವಿತಾಳ ಬಗ್ಗೆ ಹಾಗೆ ಯೋಚಿಸಲು ಅವನೇ ಹಿಂಜರಿದ. ಅವಳ ಪ್ರತೀ ನಡವಳಿಕೆಯಲ್ಲಿ ನೇರತೆ ಇತ್ತೇ ಹೊರತು ತೋರಿಕೆ ಇರಲಿಲ್ಲ. ಸೋಗಿನ ನಟನೆಯವರು ಎದುರಿರುವವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ಮಾಡಲಾರರು. ಅವಳ ನೋಟದಲ್ಲಿ ಸತ್ಯವಿತ್ತಷ್ಟೇ. ಬಹುಶಃ ತಂದೆಯ ಪರಿಸ್ಥಿತಿಗೆ ಮರುಗಿ ಒಪ್ಪಿಕೊಂಡಿರಬಹುದು ಎಂದುಕೊಂಡ.

ಈಗ ನಾನೇನು ಮಾಡಬೇಕು? ನಾನ್ಯಾರನ್ನೂ ಪ್ರೀತಿಸಿಲ್ಲ. ಹರೆಯದ ಪ್ರೀತಿ ಪ್ರೇಮದ ಬಗ್ಗೆ ನನಗ್ಯಾವ ನಂಬಿಕೆಯೂ ಇಲ್ಲ. ಪ್ರೀತಿ, ಪ್ರೇಮವೆಲ್ಲ ವಿವಾಹದ ನಂತರ ಎಂಬುದು ನನ್ನ ನಿಲುವು. ಹಾಗಾಗಿ ವಿವಾಹಕ್ಕೆ ನನ್ನಿಂದ ಯಾವ ವಿರೋಧವೂ ಇಲ್ಲ. 

ಆದರೆ ಸಮಸ್ಯೆ ಇರುವುದು ರಾವ್ ಪರಿವಾರದಲ್ಲಿ.

ತೀರಾ ದುರಾಸೆಯ ಜನ. ಈ ಪ್ರಸ್ತಾಪ ದೂರಾಲೋಚನೆಯಿಂದಲೇ ಕೂಡಿರುತ್ತದೆ. ಬಹುಶಃ ಸಮನ್ವಿತಾ ಅಂತಹ‌ ಹೆಣ್ಣಲ್ಲದಿರಬಹುದು. 

ಆದರೆ ಅವಳೊಂದಿಗಿನ ವಿವಾಹ ಸಮಸ್ಯೆಯನ್ನು ತಂದೊಡ್ಡುವುದಂತೂ ದಿಟ. ಇದು ಕೇವಲ ನನ್ನ ಪರಿವಾರದ ಪ್ರಶ್ನೆಯಲ್ಲ. ನಮ್ಮನ್ನೇ ನಂಬಿಕೊಂಡು, ನಮಗಾಗಿಯೇ ದುಡಿಯುತ್ತಿರುವ ಶರ್ಮಾ ಎಂಪೈರ್ ನ ಲಕ್ಷಾಂತರ ಜನರ ಬದುಕಿನ ಪ್ರಶ್ನೆ….. ಅವರು ನನ್ನ ಪರಿವಾರವಲ್ಲವೇ? ಅವರ ಜವಾಬ್ದಾರಿಯೂ ನನ್ನ ಮೇಲಿದೆಯಲ್ಲವೇ?

ಈಗೇನೋ ನಾನು ಸಮನ್ವಿತಾಳನ್ನು ಮದುವೆಯಾಗಲು ಒಪ್ಪಿ, ಅವಳಪ್ಪ ರಾವ್ ಎಂಬ ಕುಟಿಲ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿ, ನಾಳೆ ನನ್ನ ಈ ನಿರ್ಧಾರದಿಂದ ನನ್ನ ವ್ಯವಹಾರಕ್ಕೆ, ನನ್ನ ನಂಬಿರುವ ಲಕ್ಷಾಂತರ ಜನರಿಗೆ ಅನ್ಯಾಯವಾದರೆ…?

ಇಲ್ಲ......! ಹಾಗಾಗಬಾರದು…...! ಖಂಡಿತ ಹಾಗಾಗಬಾರದು.....!

ಹಾಗಾದರೆ ಈ ಪ್ರಸ್ತಾಪ ಇಲ್ಲಿಗೇ ಕೈ ಬಿಡಲೇ?

ಪಾಪ ಸಮನ್ವಿತಾ..... ಅವಳ ತಪ್ಪೇನು?

ಛೇ ನಾನೇಕೆ ಪದೇ ಪದೇ ಅವಳ ಬಗ್ಗೆ ಯೋಚಿಸತೊಡಗಿರುವೆ. ಏನಾಗಿದೆ ನನಗೆ?

ಬಹಳ ಯೋಚಿಸಿ, ಚಿಂತಿಸಿ ಏನೋ ನಿರ್ಧರಿಸಿದವನಂತೆ ತಂದೆಯನ್ನು ಹುಡುಕಿಕೊಂಡು ಬಂದ. ಇವನ ನಿರ್ಧಾರ ಕೇಳಲು ಮೃದುಲಾ ಹಾಗೂ ಆಕೃತಿ ಕೂಡಾ ಬಂದರು ಅವನ ಹಿಂದೆ.

ಹಾಲಿನಲ್ಲಿ ಕುಳಿತು ಪೇಪರ್ ತಿರುವುತ್ತಿದ್ದವರ ಬಳಿ ಬಂದು, "ಡ್ಯಾಡ್, ಈ ಪ್ರಸ್ತಾಪ ಬೇಡ. ಆಗೋದಿಲ್ಲ ಅಂತ ರಾವ್ ಅವರಿಗೆ ಹೇಳ್ಬಿಡಿ" ಎಂದ.

ಸಚ್ಚಿದಾನಂದ್ ಮಗನ ಮುಖ ನೋಡಿ ನಸುನಕ್ಕರು. "ನಿನ್ನ ಮಾತಿನಲ್ಲಿ, ಧ್ವನಿಯಲ್ಲಿ ಗೊಂದಲ ಎದ್ದು ಕಾಣುತ್ತಿದೆ. ನೀನು ಇಬ್ಬದಿಯ ಸಂಕಟದಲ್ಲಿದ್ದೀಯ" ಅವನ ಮನಸ್ಸನ್ನು ಸರಿಯಾಗಿ ಗ್ರಹಿಸಿ ಹೇಳಿದ್ದರು.ಅವನು ಮೌನವಾಗಿದ್ದ. 

"ನೋಡು ಅಭಿ. ನಿನ್ಗೆ ಮದುವೆ ಈ ವರ್ಷವೇ ಮಾಡೋ ಯೋಚನೆ ನಮ್ಗೆ ಮುಂಚೆಯೇ ಇತ್ತು. 'ನೀವು ಯಾವ ಹುಡುಗಿ ತೋರಿಸಿದ್ರೆ ಅವಳನ್ನು ನಾನು ಮದ್ವೆ‌ ಆಗ್ತೀನಿ. ಪ್ರೀತಿ ಪ್ರೇಮ ಅಂತ ತಲೆಕೆಡಿಸಿಕೊಳ್ಳೋಕೆ ನಂಗಿಷ್ಟವಿಲ್ಲ' ಅಂದಿದ್ದೆ. ಈಗ ಮದುವೆಯ ಪ್ರಸ್ತಾಪ ಅವರ ಕಡೆಯಿಂದಲೇ ಬಂದಿದೆ. ಅದಕ್ಕೂ ಮುಖ್ಯವಾಗಿ ಸಮನ್ವಿತಾ ನಮ್ಮೆಲ್ಲರಿಗೂ ಒಪ್ಪಿಗೆಯೇ. ಹಾಗಾಗಿ ಇದು ನಾವು ನೋಡಿರೋ ಸಂಬಂಧ ಅಂತಾನೇ ಲೆಕ್ಕ. ಮತ್ತೇನೋ ತೊಂದ್ರೆ ನಿನಗೆ?" ಮೃದುಲಾ ಆಕ್ಷೇಪಿಸಿದರು.

"ಅಮ್ಮಾ ಇದು ನೀನಂದುಕೊಂಡಷ್ಟು ಸರಳವಾದ ವಿಚಾರವಲ್ಲ. ಎಲ್ಲರೂ ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡ್ಕೊಳ್ಳಿ. ಈ ಮದುವೆ ರಾವ್ ಅವರಿಗೆ ಅನಿವಾರ್ಯ ‌ಆಯ್ಕೆ. ಸತ್ಯಂ ರಾವ್ ಅವರ ಕಂಪನಿಯ ಷೇರುಗಳ ಬೆಲೆ ನೆಲಕ್ಕಚ್ಚಿದೆ. ಷೇರುದಾರರ ನಂಬಿಕೆನ ಕಳ್ಕೊಂಡಿದೆ. ಪಡೆದ ಕೋಟಿಗಟ್ಟಲೆ ಸಾಲ ಬಡ್ಡಿ ಸಮೇತ ತೀರಿಸದಿದ್ರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತೀವಿ ಅಂತ ಬ್ಯಾಂಕಿನಿಂದ ನೋಟಿಸ್ ಬೇರೆ ಸಿಕ್ಕಿದೆಯಂತೆ.

ಇಂಥಾ ಸ್ಥಿತಿಯಲ್ಲಿ ಈ ಮದುವೆ ಖಂಡಿತಾ ಅವರಿಗೆ ಬೆಸ್ಟ್ ಆಯ್ಕೆ. ಈ ಮದುವೆಯಿಂದ ರಾವ್ ಅವರು ನಮಗೆ ಸಂಬಂಧಿಗಳಾಗ್ತಾರೆ. ಆಗ ಸಹಜವಾಗಿಯೇ ಷೇರುದಾರರಿಗೆ ಒಂದು ಭರವಸೆ ಸಿಗುತ್ತೆ.ಅವರ ಷೇರು ಮೌಲ್ಯ ಏರುತ್ತದೆ. ಅದರ ಜೊತೆಗೆ ಮುಂದೆ ಅವರು ಶರ್ಮಾ ಎಂಪೈರ್ ನಲ್ಲಿ ಹೂಡಿಕೆ ಮಾಡ್ತೀನಿ ಅಂತ ಪಾಲುದಾರಿಕೆ ಕೇಳಬಹುದು ಇಲ್ಲಾ ನಮ್ಮನ್ನು ಅವರ ಕಂಪನಿಯಲ್ಲಿ ಹೂಡಿಕೆ ಮಾಡೋಕೆ ಹೇಳಬಹುದು. ಇಲ್ಲಾ ಇನ್ನೂ ತುಂಬಾ ಆಯ್ಕೆಗಳಿರುತ್ತೆ ಅವರಿಗೆ. ಒಟ್ಟಿನಲ್ಲಿ ಎಲ್ಲಾ ರೀತಿಯಿಂದಲೂ ಇದು ಅವರಿಗೆ ಲಾಭದಾಯಕ. ಹಾಗಾಗಿಯೇ ಅವರು ಈ ಪ್ರಸ್ತಾಪ ತಂದಿರೋದು" ವಿಶ್ಲೇಷಿಸಿ ಹೇಳಿದ.

"ನಾವಿಲ್ಲಿ ನಿನ್ನ ಮದುವೆ ಬಗ್ಗೆ ಮಾತಾಡ್ತಿದ್ರೇ ನೀನು ನಿನ್ನ ಬಿಸ್ನೆಸ್ ಬಗ್ಗೆ ಮಾತಾಡ್ತೀ. ಸಮನ್ವಿತಾ ಬಗ್ಗೆ ಅಭಿಪ್ರಾಯ ಹೇಳು ಅಂದ್ರೆ ಅವಳಪ್ಪನ ಪ್ರವರ ಹೇಳ್ತಿದ್ದೀಯಲ್ಲಾ ಏನಾಗಿದೆ ನಿನ್ಗೆ?" ಮಗನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಮೃದುಲಾ.

"ನಿನ್ನಮ್ಮ ಹೇಳ್ತಿರೋದು ಸರಿಯಾಗಿದೆ ಅಭಿ. ಈ ಮನೆ ಯಾವಾಗಲೂ ವ್ಯವಹಾರಕ್ಕೂ, ಸಂಬಂಧಗಳಿಗೂ ಮಧ್ಯೆ ಒಂದು ಅಂತರವನ್ನು ಕಾಯ್ದುಕೊಂಡು ಬಂದಿದೆ. ಅದು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರೋ ನಿಯಮ. ನೀನು ಎರಡನ್ನೂ ಜೋಡಿಸಬೇಡ. ರಾವ್ ಅವರ ವ್ಯವಹಾರದಲ್ಲಿ ಸಾವಿರ ತರದ ಮೋಸ ಇರಬಹುದು. ಆದರೆ ನಾವು ರಾವ್ ಅವರೊಂದಿಗೆ ವ್ಯವಹರಿಸಲು ಹೊರಟಿಲ್ಲ. ನಾವು ಸಮನ್ವಿತಾಳನ್ನು ನಮ್ಮ ಪರಿವಾರಕ್ಕೆ ಸ್ವಾಗತಿಸುವ ಇಚ್ಛೆಯಲ್ಲಿದ್ದೇವೆ. ಇಲ್ಲಿ ಮಗಳು ಮುಖ್ಯವೇ ಹೊರತು ಅವಳ ತಂದೆಯ ವ್ಯವಹಾರದಿಂದ ನಮಗೆ ಆಗಬೇಕಾದ್ದು ಏನೂ ಇಲ್ಲ" ಹೆಂಡತಿಯ ಮಾತನ್ನು ಒಪ್ಪಿದರು ಸಚ್ಚಿದಾನಂದ.

"ಡ್ಯಾಡ್, ಐ ಅಗ್ರೀ, ನಮ್ಮ ಮನೆಯಲ್ಲಿ ವ್ಯವಹಾರ ಹಾಗೂ ಸಂಬಂಧಗಳ ನಡುವೆ ಅಂತರವಿದೆ. ಆದರೆ ಆ ಅಂತರ ರಾವ್ ಅವರ ಕುಟುಂಬದಲ್ಲಿ ಇಲ್ಲಾ ಅನ್ನೋದು ನಿಮ್ಗೂ ಗೊತ್ತು. ಈ ಸಂಬಂಧದ ಹಿಂದಿನ ಉದ್ದೇಶವೇ ವ್ಯವಹಾರ ಆಗಿರೋವಾಗ ಹೇಗೆ ಒಪ್ಪಿಕೊಳ್ಳಲಿ?"

"ಹಾಗಂತ ನೀನು ರಾವ್ ಹೆಸರು ಹೇಳಿ ಸಮನ್ವಿತಾನ ತಿರಸ್ಕರಿಸಿದ್ರೆ ಅದು ಸರಿ ಅನ್ಸುತ್ತಾ? ನಿನ್ನ ಮನಃಸಾಕ್ಷಿಯಾಗಿ ಹೇಳು…. ರಾವ್ ಅವರ ಮಗಳಾಗಿದ್ದೇ ಅವಳ ತಪ್ಪಾ?" ಮೃದುಲಾ ಶತಾಯಗತಾಯ ಮಗನನ್ನು ಒಪ್ಪಿಸುವ ಜಿದ್ದಿಗೆ ಬಿದ್ದಿದ್ದರು ಹಾಗೂ ಅವರಿಗೆ ಉಳಿದ ಇಬ್ಬರ ಪೂರ್ಣ ಸಹಕಾರವಿತ್ತು.

ಸಮನ್ವಿತಾಳನ್ನು ಮೊದಲಬಾರಿ ಕಂಡಾಗಲೇ ಅರಿಯದ ಮಮಕಾರವೊಂದು ಅರಳಿತ್ತು ಅವರಲ್ಲಿ. ಅವಳ ಚರ್ಯೆ, ನಡವಳಿಕೆ ಎಲ್ಲವೂ ಮೇಲ್ಮಟ್ಟದ್ದು. 

ತಾಯಿ ಹೃದಯಕ್ಕೆ ಅವಳ ವೇದನೆಯ ಅರಿವಾಗಿತ್ತೇನೋ…... ಇನ್ನೊಬ್ಬ ಮಗಳು ಕಂಡಿದ್ದಳು ಅವಳೊಳಗೆ. 

ರಾವ್ ಅವರು ಪ್ರಸ್ತಾಪಿಸದಿದ್ದರೇ ತಾವೇ ಈ ವಿಷಯ ಮಾತನಾಡಬೇಕೆಂದು ಅವರು ನಿರ್ಧರಿಸಿಬಿಟ್ಟಿದ್ದರು!

ಅಭಿಗೆ ತಿಳಿದಿರಲಿಲ್ಲವಷ್ಟೇ!

ಈಗಂತೂ ಖಂಡಿತಾ ಬಿಡಲಾರರು….

"ನಾನೆಲ್ಲಿ ಹೇಳಿದೆ ಹಾಗಂತ? ಅವಳದ್ದೇನೂ ತಪ್ಪಿಲ್ಲ. ನನ್ನ ನಿರ್ಧಾರಕ್ಕೆ ಅವಳು ಕಾರಣಕರ್ತಳೂ ಅಲ್ಲ. ಆದರೆ ಈ ಮದುವೆ ಸಾಧ್ಯವಿಲ್ಲ. ಇದು ನಮ್ಮ ಕುಟುಂಬವೊಂದರ ಪ್ರಶ್ನೆಯಲ್ಲ. ಇದು ನಮ್ಮನ್ನೇ ನಂಬಿಕೊಂಡಿರುವ ಶರ್ಮಾ ಎಂಪೈರ್ ನ ಲಕ್ಷಾಂತರ ಜನರ ಬದುಕಿನ ಪ್ರಶ್ನೆ. ಆ ರಾವ್ ಎಂಬ ಕ್ರಿಮಿ ಒಮ್ಮೆ ಒಳಸೇರಿತೆಂದರೆ ಮುಗಿಯಿತು. ನಮ್ಮಿಡೀ ಉದ್ಯಮಕ್ಕೆ ಗೆದ್ದಲು ಹಿಡಿಯುತ್ತೆ. ಆಗ ಅಲ್ಲಿನ ಲಕ್ಷಾಂತರ ಕಾರ್ಮಿಕರ ಗತಿಯೇನು? ಈ ತಪ್ಪನ್ನು ನಾನು ಖಂಡಿತಾ ಮಾಡಲಾರೆ"

"ನೀನು ಹೇಳುವುದು ನಿಜವೇ. ಒಪ್ಪುತ್ತೇನೆ. ಆದರೆ ರಾವ್ ಹಾಗೆ ಮಾಡಲು ನಾವು ಆಸ್ಪದ ನೀಡದಿದ್ದರಾಯಿತು. ನಮ್ಮನ್ನು ತುಳಿಯುವುದು ಸುಲಭವೇನು? ಅದೆಲ್ಲಾ ನೀನಂದುಕೊಂಡಷ್ಟು ಸುಲಭವಿಲ್ಲ" ಎಂದರು ಸಚ್ಚಿದಾನಂದ್.

"ಇಲ್ಲಾ ಅಪ್ಪಾ, ಆ ಮನುಷ್ಯ ಗುಳ್ಳೆನರಿ ಜಾತಿಗೆ ಸೇರಿದವನು. ವ್ಯವಹಾರಕ್ಕಾಗಿ ಮಗಳನ್ನು ಏಣಿಯಂತೆ ಬಳಸುತ್ತಿರುವವನು ಹಣಕ್ಕಾಗಿ ಏನು ಬೇಕಾದರೂ ಮಾಡಬಲ್ಲ. ನನಗೆ ಈ ಮದುವೆ ಬೇಡ ಅಷ್ಟೇ" ಮಾತು ಮುಗಿಯಿತು ಎನ್ನುವಂತೆ ಹೇಳಿದ.

ಇಷ್ಟು ಹೊತ್ತು ಸುಮ್ಮನಿದ್ದ ಆಕೃತಿಗೆ ಅಣ್ಣನ ಮೇಲೆ ಕೋಪ ನೆತ್ತಿಗೇರಿತು. "ನಿನಗೆ ನಿನ್ನ ಶರ್ಮಾ ಎಂಪೈರ್ ನ ಎಲ್ಲರ ಸಮಸ್ಯೆ ಅರ್ಥ ಆಗುತ್ತೆ ಆದ್ರೆ ನಿನ್ನ ಮನೆಯವರು ಅನಿಸಿಕೊಂಡಿರೋ ಮೂರು ಜನರ ಆಸೆ ಅರ್ಥ ಆಗಲ್ಲ‌ ಅಲ್ವಾ? ರಾವ್ ಅಂಕಲ್ ಕೆಟ್ಟೋರು ಹಾಗಾಗಿ ಸಮನ್ವಿತಾ ಕೂಡಾ ಕೆಟ್ಟೋರು, ಕುತಂತ್ರಿ ಅಂತ ಡಿಸೈಡ್ ಮಾಡ್ಬಿಟ್ಟೆ ಅಲ್ವಾ? ಅವರಿಗೆ ಗತಿ ಇಲ್ಲಾ ನೋಡು. ಥೂ ಐ ಹೇಟ್ ಯು ಅಣ್ಣಾ. ಅವ್ರ ಬಗ್ಗೆ ಈ ರೀತಿ ಯೋಚಿಸ್ತೀಯಲ್ಲ. ನಾಚಿಕೆ ಆಗೋಲ್ವಾ? ನಾಳೆ ನನಗೆ ಹುಡುಗನನ್ನು ಹುಡುಕುವಾಗ ಅವ್ನೂ ಇವಳು ಶರ್ಮಾ ಅವರ ಮಗಳು. ಅವಳ ಬುದ್ದಿನೂ ಹಾಗೇ ಇರುತ್ತೆ, ದುಡ್ಡಿನ ಸೊಕ್ಕು, ಅಹಂಕಾರ ಅಂತ ಹೇಳಿ ನನ್ನ ರಿಜೆಕ್ಟ್ ಮಾಡಬಹುದಲ್ವಾ? ಆಗ ಅವನದ್ದೂ ಅದರಲ್ಲಿ ಏನೂ ತಪ್ಪಿರಲ್ಲ ಅಲ್ವಾ?"

ಆಕೃತಿಯ ಮಾತುಗಳು ಅವನ ಅಂತಃಸತ್ವವನ್ನೇ ಅಲುಗಾಡಿಸಿಬಿಟ್ಟಿತು. 'ಛೇ..... ರಾವ್ ಅವರನ್ನು ಗಮನದಲ್ಲಿಟ್ಟುಕೊಂಡು ಸಮನ್ವಿತಾಳನ್ನು ಅಳೆಯುತ್ತಿದ್ದೇನೆಯೇ? ಸಮನ್ವಿತಾ ಕುತಂತ್ರಿಯೇ?' ಹಾಗೆ ಯೋಚಿಸಲೂ ಕಷ್ಟವೆನಿಸಿತು ಅವನಿಗೆ. ಆಕೃತಿ ಹೇಳಿದಂತೆ ತನಗಾಗಿ ದುಡಿಯುವರ ಬಗ್ಗೆ ಅಷ್ಟೊಂದು ಯೋಚಿಸುತ್ತಿರುವ ನಾನು ನನಗಾಗಿಯೇ ಜೀವಿಸುತ್ತಿರುವವರ ಆಸೆಯನ್ನು ಕಡೆಗಣಿಸುತ್ತಿರುವೆನಲ್ಲ? ಈ ಮನೆಯಲ್ಲಿರುವವರೆಲ್ಲಾ ಪ್ರೀತಿಯನ್ನೇ ಉಸಿರಾಡುತ್ತಿರುವವರು. ದ್ವೇಷ, ಕಪಟ ಇವೆಲ್ಲಾ ಅವರ ಹತ್ತಿರಕ್ಕೂ ಸುಳಿಯದು. ಸರ್ವೇ ಜನಾ ಸುಖಿನೋ ಭವಂತು ಎನ್ನುವವರು. ಇವರೆಲ್ಲರಿಗೂ ಸಮನ್ವಿತಾ ಅಷ್ಟೊಂದು ಇಷ್ಟವಾಗಿದ್ದಾಳೆಂದರೆ ಅವಳು ರಾವ್ ಅವರಂತಿರಲು ಹೇಗೆ ಸಾಧ್ಯ? ಈ ಯೋಚನೆ ಮನಸ್ಸಿಗೆ ಬಂದಿದ್ದೇ ಅವನು ಒಂದೈದು ನಿಮಿಷ ಯೋಚಿಸಿ ಒಂದು ನಿರ್ಧಾರಕ್ಕೆ ಬಂದ.

"ನೀವೆಲ್ಲ ಹೇಳೋದು ಸರಿಯಾಗಿಯೇ ಇದೆ. ನಾನೇ ಸ್ವಲ್ಪ ಅಧಿಕ ಯೋಚನೆ ಮಾಡಿದೆ. ಆದರೂ ನನ್ನ ಅನುಮಾನವೂ ಅಸಾಧ್ಯವಾದುದಲ್ಲ ಅಂತ ನಿಮ್ಗೂ ಗೊತ್ತು ಡ್ಯಾಡ್. ಸೋ ಬೆಟರ್ ಒಂದು ಕೆಲಸ ಮಾಡೋಣ. ನೇರವಾಗಿ ಸಮನ್ವಿತಾ ಹತ್ರನೇ ಮಾತನಾಡಿ ನಮ್ಮ ಅನುಮಾನ ಅವಳೆದುರು ಇಡೋಣ. ಆಗ ಎಲ್ಲರ ಸಮಸ್ಯೆಗಳು ನೇರವಾಗಿ ಪರಿಹಾರವಾಗುತ್ತಲ್ಲ? ಅವಳ ಉತ್ತರ ಸಮಾಧಾನಕರವಾಗಿದ್ರೆ ನನಗೇನೂ ಸಮಸ್ಯೆಯಿಲ್ಲ" ಎಂದ.

"ಏನು? 'ನಿಮ್ಮಪ್ಪ ಕುತಂತ್ರಿ ನೀವೂ ಹಾಗೇನಾ' ಅಂತ ಕೇಳೋದಾ? ಆಗವರು ಸುಮ್ನೆ ಇರ್ತಾರಾ? ನಿನ್ಗೇ ನಾಲ್ಕು ಬಾರಿಸೋಲ್ವಾ?" ಕೇಳಿದಳು ಆಕೃತಿ.

ಆದರೆ ಅವನ ಮಾತು ಸಚ್ಚಿದಾನಂದ, ಮೃದುಲಾ ಇಬ್ಬರಿಗೂ ಸರಿಯೆನಿಸಿತು. ಸಮನ್ವಿತಾ ಕತ್ತಿಯಲುಗಿನಂತೆ ಹರಿತವಾಗಿ ಮಾತನಾಡುತ್ತಾಳೆಂದು ತಿಳಿದಿತ್ತು ಅವರಿಗೆ. ಹಾಗಾಗಿ ನೇರಾನೇರ ಮಾತನಾಡಿದರೆ ಅವನ ಗೊಂದಲಗಳೆಲ್ಲಾ  ಪರಿಹಾರವಾಗುತ್ತವೆ ಎನಿಸಿತು. ಅವಳೆಂದೂ ಸುಳ್ಳಾಡಳು ಎಂಬ ನಂಬಿಕೆ ಅವರಿಗೆ ಮಾತ್ರವಲ್ಲ ಅಭಿಗೂ ಇತ್ತು. ಹಾಗಾಗಿ ಸರಿ ಎಂದು ಅನುಮತಿ ಇತ್ತರು.

"ಸರಿ ಹಾಗಿದ್ರೇ ನಾಳೆನೇ ಅವಳನ್ನು ಮನೆಗೆ ಬರೋಕೆ ಹೇಳ್ತೀನಿ. ಅವಳ ಮನೆಯಲ್ಲಿ ಮಾತಾಡೋಕಾಗಲ್ಲ. ಇಲ್ಲೇ ಮಾತಾಡೋಣ. ಫೋನ್ ಮಾಡಿ ಕರೆಯಮ್ಮ" ಅಂದಾಗ,

"ಹಲೋ ಮಗನೇ, ಅನುಮಾನ ಪಿಶಾಚಿಯಾಗಿರೋನು ನೀನು. ನೀನು ಮಾತಾಡ್ಕೋ. ನಮಗೆ ಅವಳ ಮೇಲೆ ಪೂರ್ತಿ ನಂಬಿಕೆ ಇದೆ." ಎಂದವರೇ "ನಾನಂತೂ ಫೋನ್ ಮಾಡಲ್ಲ. ಆಕೃತಿ ಸಮನ್ವಿತಾ ನಂಬರ್ ಕೊಡು ಅವನೇ ಫೋನ್ ಮಾಡಿ ಕರೀಲೀ"  ಎಂದು ಎದ್ದು ಹೊರಟರು ಮೃದುಲಾ. 

ಅಪ್ಪನೆಡೆಗೆ ನೋಡಿದಾಗ ಅವರು ಹೆಂಡತಿಯತ್ತ ನೋಟ ಹರಿಸಿದರು. "ಏನು? ನಾಳೆ ಬ್ರೇಕಿಂಗ್ ನ್ಯೂಸಲ್ಲಿ ನಿಮ್ಮನ್ನ ಬ್ರೇಕ್ ಮಾಡಿ ಬೆಂಡೆತ್ತಿದ ನ್ಯೂಸ್ ಬರ್ಬೇಕಾ?" ಎಂದು ಕೇಳಿದ ಮಡದಿಯನ್ನು ನೋಡಿ ಮಹಾಕಾಳಿಯ ನೆನಪಾಗಿ, "ಹೈಕಮಾಂಡ್ ಆರ್ಡರ್ ಆದ್ಮೇಲೆ ಮುಗೀತು. ನಂದೂ ಅದೇ" ಎಂದವರು ತಮ್ಮ ನ್ಯೂಸ್ ರೀಡರ್ ಜೊತೆ ಬ್ರೇಕಿಂಗ್ ನ್ಯೂಸ್ ಓದಲು ಹೋದರು.

ಅವನು "ಆಕೃತಿ" ಎಂದು ಕೂಡಲೇ ಸಮನ್ವಿತಾ ನಂಬರ್ ವಾಟ್ಸಾಪ್ ಮಾಡಿ, "ಯಾರೋ ಆಕೃತಿ? ನಾನು ಕೋತಿ. ಅಲ್ಲಾ, ಎಲ್ಲರೂ ತಮ್ಮ ಹುಡುಗಿನ ರೊಮ್ಯಾಂಟಿಕ್ ಡೇಟ್ಗೆ ಕರ್ಕೊಂಡು ಹೋದ್ರೆ ಇವ್ನು ಮನೆಗೆ ಕರೆದು ನೀನು ಕೆಟ್ಟೋಳಾ, ನಿಮ್ಮಪ್ಪ ಕೆಟ್ಟೋನಾ ಅಂತ ಒಳ್ಳೆ  ಸಿ.ಎಸ್.ಪಿ ರೇಂಜಿಗೆ ಕ್ರಾಸ್ ಎಕ್ಸಾಮಿನೇಷನ್ ಮಾಡ್ತಾನಂತೆ. ದೊಡ್ಡ ಉಜ್ವಲ್ ನಿಕ್ಕಂ ಇವ್ನು. ಹೋಗಲೇ.... ನಂಬರ್ ವಾಟ್ಸಾಪ್ ಮಾಡಿದೀನಿ ನೋಡ್ಕೋ" ಎಂದು ಬಾಯಿಗೆ ಬಂದಂತೆ ಬೈದುಕೊಂಡು ರೂಮಿಗೆ ಹೊರಟಳು.

ಮೂವರ ವರ್ತನೆ ನೋಡಿ ಬೆಪ್ಪಾದವನು, 'ಈಗ್ಲೇ ಹೀಗೆ, ನಾನೆಲ್ಲಾದ್ರೂ ಇವ್ಳನ್ನ ಮದ್ವೆ ಆದ್ರೆ ನಾನು ಚಟ್ನಿಯಾಗೋದು ಗ್ಯಾರಂಟಿ' ಎಂದುಕೊಂಡು, ಈಗ ನಾನೇ ಫೋನ್ ಮಾಡಿ ಸಾಯ್ಬೇಕಾ? ಇನ್ನೇನು ಮಾಡೋದು ಎಲ್ಲಾ ನನ್ನ ಕರ್ಮ ಎಂದುಕೊಂಡು ಸಮನ್ವಿತಾಳಿಗೆ ಕರೆಹಚ್ಚಿದ ಅಭಿರಾಮ್.

ಕುತಂತ್ರದ ಯೋಜನೆ ರೂಪಿಸಿ ತಾನು ಗೆದ್ದೇ ಬಿಟ್ಟೇ ಎಂದು ಬೀಗುತ್ತಿದ್ದ ರಾವ್ ನ ಆಲೋಚನೆಗೂ ಬಾರದಂತೆ, ಯೋಜನೆಯ ಪಥ ಬದಲಿಸಲು ತಯಾರಾಗಿ ವಿಧಿ ನಗುತ್ತಿತ್ತು......!

ಯಾವುದು ನಡೆಯಬಾರದೆಂದು ರಾವ್ ಬಯಸಿದ್ದನೋ ಅದೇ ನಡೆಯಲಿತ್ತು.......!!

ಅವನ ಊಹೆಗೂ ನಿಲುಕದಂತೆ......!!

         ********ಮುಂದುವರೆಯುತ್ತದೆ*******



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ