ಭಾನುವಾರ, ಜೂನ್ 28, 2020

ಅನೂಹ್ಯ 29

"ನವ್ಯಾ....." ಸಿಟ್ಟಿನಿಂದ ಅಬ್ಬರಿಸುತ್ತಿದ್ದ ಮಂಗಳಮ್ಮನ ಧ್ವನಿ ಕೇಳಿ ಭಯವಾಯಿತು ಅವಳಿಗೆ. ಹಿಂದೆ ಎಂದೂ ಅಮ್ಮ ಇಷ್ಟು ಕೋಪಗೊಂಡಿರಲಿಲ್ಲ. ಈಗೇಕೆ ಹೀಗೆ? ಏನಾಗಿರಬಹುದು? ಯಾತ್ರೆಗೆ ಹೋಗುವಾಗ ಆರಾಮಾಗಿದ್ದರು. ಮೊನ್ನೆ ಕರೆಮಾಡಿ ಸಮನ್ವಿತಾಳ ಬಗ್ಗೆ ವಿಚಾರಿಸಿದಾಗಲೂ ಅಕ್ಕರೆಯಿಂದಲೇ ಮಾತನಾಡಿದ್ದರು. ಮತ್ತೆ ಈಗ ಇದ್ದಕ್ಕಿದ್ದಂತೆ ಏನಾಯಿತು? 

ಅವರಿಗೇನಾದರೂ..... ನನ್ನ ಅತೀತದ ಸುಳಿವು ಸಿಕ್ಕಿರಬಹುದೇ.....?

ಈ ಯೋಚನೆ ತಲೆಗೆ ಬರುತ್ತಲೇ ಅವಳ ಮೈಯಲ್ಲಿನ ಶಕ್ತಿಯೆಲ್ಲಾ ಕಾಲಬುಡದಲ್ಲಿ ಸೋರಿಹೋದಂತಾಯಿತು.

"ನವ್ಯಾ….. ಎಲ್ಲಿದ್ದೀ? ಬಾ ಹೊರಗೆ" ಈಗ ಸತ್ಯನಾರಾಯಣರ ಧ್ವನಿ.

ನಿಧಾನವಾಗಿ ಎದ್ದು ಬಲಹೀನ ದೇಹವನ್ನು ಕಷ್ಟಪಟ್ಟು ಸಂಭಾಳಿಸಿಕೊಂಡು ಹೊರಬಂದು ಅವರೆದುರು ನಿಂತಳು ತಲೆತಗ್ಗಿಸಿ. ಮುಖ ನೋಡುವ ಧೈರ್ಯವಾಗಲಿಲ್ಲ.

"ಎಷ್ಟು ಚೆನ್ನಾಗಿ ನಾಟಕ ಮಾಡಿದ್ಯಲ್ಲೇ? ನಾವೇನು ಅನ್ಯಾಯ ಮಾಡಿದ್ವಿ ನಿಂಗೆ? ಯಾಕೆ ಹೀಗೆ ಗುಳ್ಳೆನರಿ ಹಾಗೆ ಸೋಗಿನಲ್ಲಿ ಈ ಮನೆ ಸೇರ್ಕೊಂಡೆ? ನಿನ್ನ ಮದ್ವೆ ಆಗೋ ಹುಚ್ಚಿಗೆ ನನ್ನ ಮಗನೇ ಬೇಕಿತ್ತಾ? 'ನಿನ್ನ ಮಗನಿಗೆ ಮದ್ವೆ ಆಗೋಕೆ ಬೇರ್ಯಾರೂ ಸಿಗ್ಲಿಲ್ವೇ? ಅವನೋ ಮೂರ್ಕಾಸಿಗೆ ಮೈ ಮಾರ್ಕೊಳ್ಳೋ ಹೆಂಗಸನ್ನು ಮದ್ವೆ ಮಾಡ್ಕೊಂಡು ಬಂದ. ಇನ್ನು ನೀನು ನನ್ನ ಸೊಸೆ ಗರತಿ ಗೌರಮ್ಮನ ತರ ಅಂತ ಊರ ತುಂಬಾ ಹೇಳ್ಕೊಂಡು ತಿರ್ಗಿದ್ದೇನು, ಮೆರೆಸಿದ್ದೇನು...' ಅಂತ ಊರೆಲ್ಲಾ ನಮ್ಮನ್ನ ಆಡ್ಕೊಂಡು ನಗೋ ಹಾಗೆ ಮಾಡ್ಬಿಟ್ಯಲ್ಲೇ. ಅಷ್ಟು ಅಕ್ಕರೆಯಿಂದ ನೋಡಿಕೊಂಡ್ವಲ್ಲಾ ನಿನ್ನಾ...... ಒಂದು ದಿನಕ್ಕಾದ್ರೂ ನಿನ್ನ ಸೊಸೆ ತರ ನೋಡಿದ್ದೀವಾ? ಹೊಟ್ಟೆಯಲ್ಲಿ ಹುಟ್ಟಿದ ಮಗಳ ಹಾಗೆ ನೋಡ್ಕೊಂಡಿದ್ವಲ್ಲ. ಅದಕ್ಕೆ ತಕ್ಕ ಪ್ರತಿಫಲ ಕೊಟ್ಬಿಟ್ಟೆ ಕಣೇ ನೀನು. ಇಷ್ಟು ಹೊಟ್ಟೆ ಉರಿಸಿದ್ಯಲ್ಲಾ…. ಖಂಡಿತಾ ಒಳ್ಳೆಯದಾಗಲ್ಲ ನಿನಗೆ ನೋಡ್ತಿರು…....." ಅಳು, ಸಿಟ್ಟಿನೊಂದಿಗೆ ಶಾಪ ಹಾಕುತ್ತಿದ್ದ ಮಂಗಳಮ್ಮನನ್ನು ಕಂಡು ವೇದನೆಯಾಯಿತು ಅವಳಿಗೆ.

'ನನ್ನಿಂದ ಯಾರಿಗೂ ನೆಮ್ಮದಿ ಇಲ್ಲ' ತನ್ನನ್ನು ತಾನೇ ಶಪಿಸಿಕೊಂಡಳು.....

"ಯಾಕಮ್ಮಾ ಹೀಗೆ ಮಾಡಿದೆ. ನೀನು ಬದುಕಿನಲ್ಲಿ ತುಂಬಾ ನೋವನುಭವಿಸಿರಬಹುದು. ಇಲ್ಲವೆನ್ನುವುದಿಲ್ಲ ನಾವು. ಆದರೆ ನೀನು ಹೀಗೆ ಸುಳ್ಳಿನ ಅಡಿಪಾಯದಲ್ಲಿ ಈ ಮದುವೆಯಾಗಬಾರದಿತ್ತು. ಮದುವೆಯಾಗಿ ವರ್ಷಗಳುರುಳಿವೆ. ಇಷ್ಟು ದಿನದಲ್ಲಿ ಒಮ್ಮೆಯಾದರೂ ನಮಗೆ ಹೇಳಬೇಕೆನಿಸಲಿಲ್ಲವೇ ನಿನಗೆ? ಯಾರೋ ಮೂರನೆಯವರ ಅಪನಿಂದೆಯ ಮಾತುಗಳಿಂದ ನಮಗೆ ವಿಷಯ ತಿಳಿಯುವಂತಾಯಿತು. ಅವರು ಅಷ್ಟೊಂದು ಜನರೆದುರು ಎಷ್ಟು ಅಸಹ್ಯಕರ ಮಾತುಗಳನ್ನು ಹೇಳಿದರು ಎಂಬ ಅರಿವಿದೆಯೇ ನಿನಗೆ?" 

ಸತ್ಯನಾರಾಯಣರ ಮಾತು ಕೇಳಿ ಭರ್ಜಿಯಿಂದ ಇರಿದಂತಾಯಿತು. ಆದರೆ ಅವರು ಹೇಳಿದ ಪ್ರತೀ ಪದವೂ ಸತ್ಯವೇ‌ ಅಲ್ಲವೇ? ಏನು ತಪ್ಪಿದೆ ಅವರ ಮಾತಿನಲ್ಲಿ? ಕುಸಿದು ಕುಳಿತವಳ ಕಣ್ಣಿಂದ ನೀರು ನಿಶ್ಯಬ್ದವಾಗಿ ಜಾರುತ್ತಿತ್ತು…….

ಅವಳೆದುರು ಬಂದು ಅವಳನ್ನು ಎತ್ತಿ ನಿಲ್ಲಿಸಿದ ಮಂಗಳಮ್ಮ ಕೈ ಮುಗಿದು, "ನೋಡು ತಾಯಿ, ಬಹಳ ಒಳ್ಳೆ ಕೆಲಸ ಮಾಡಿದ್ದೀ. ಇಷ್ಟು ದಿನ ನಿನ್ನನ್ನು ನಮ್ಮ ಕೈಲಾದಷ್ಟು ಚೆನ್ನಾಗಿ ನೋಡಿಕೊಂಡು ಸಾಕಿರೋದಕ್ಕೆ ಒಂದೇ ಒಂದು ಉಪಕಾರ ಮಾಡ್ಬಿಡು. ನಾಲ್ಕು ಜನರ ಮಧ್ಯೆ ನಮ್ಮ ಮರ್ಯಾದೆ ಹೋಗಿ ಆಯ್ತು. ಇನ್ನು ಎಲ್ಲಾ ಸೇರಿ ನಮಗೆ ಬಹಿಷ್ಕಾರ ಹಾಕೋ ಮೊದ್ಲು ಇಲ್ಲಿಂದ ಹೊರಟ್ಬಿಡು. ಇದೊಂದು ಸಹಾಯ ಮಾಡು" ಎಂದವರೇ ರೂಮಿಗೆ ಹೋಗಿ ಅವಳ ಬಟ್ಟೆಗಳನ್ನೆಲ್ಲಾ ಕೈಗೆ ಸಿಕ್ಕ ಸೂಟ್ಕೇಸ್ ಒಂದಕ್ಕೆ ತುಂಬಿ ತಂದು ಅವಳ ಕೈಗಿತ್ತರು.

"ನೋಡು ಕಿಶೋರ್ ಬರೋ ಮೊದ್ಲು ಹೊರಟು ಬಿಡು. ಅವನನ್ನು ಆಮೇಲೆ ಹೇಗೋ ಸಮಾಧಾನ ಮಾಡ್ಕೋತೀವಿ. ದಯವಿಟ್ಟು ಹೋಗಮ್ಮ" ಎಂದಾಗ ಅವಳಿಗೆ ಇನ್ಯಾವ ಆಯ್ಕೆಯಿತ್ತು? 

ಹೋಗ್ಬೇಕು. ಹೋಗ್ತೀನಿ ಕೂಡಾ…... ಆದರೆ ಹೋಗುವ ಮುನ್ನ ಒಮ್ಮೆ ಕಿಶೋರನನ್ನು ಕಾಣಬೇಡವೇ?

"ಅಮ್ಮ ನಾ ಮಾಡಿರೋದು ಕ್ಷಮಿಸುವಂತಹ ತಪ್ಪಲ್ಲ ಅಂತ ಗೊತ್ತು. ನಾನು ಖಂಡಿತಾ ಹೋಗ್ತೀನಿ. ಏನೂ ತೊಂದ್ರೆ ಕೊಡೋಲ್ಲ. ಆದ್ರೆ ಹೋಗೋಕೆ ಮುಂಚೆ ಒಂದೇ ಒಂದು ಸಾರಿ……. ಒಂದು ಕೊನೆಯ ಬಾರಿಗೆ ಕಿಶೋರನನ್ನ ನೋಡಿ ಹೋಗ್ತೀನಮ್ಮ. ಇದೇ ಕೊನೆ. ಇನ್ಯಾವತ್ತೂ ಅವರನ್ನು ನೋಡೋಕಾಗಲ್ಲ. ನಿಮ್ಮ ದಮ್ಮಯ್ಯ ಒಂದ್ಸಲ ಅವ್ರನ್ನ ನೋಡಿ ಹೋಗ್ತೀನಿ ಅಷ್ಟೇ….. ಮಾತಾಡ್ಸೋಲ್ಲ….." ಆರ್ತಳಾಗಿ ಬೇಡಿದಳು.

ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು, ಇನ್ನೂ ಯಾರ್ಯಾರೋ ಬಂದರು. ಅವಳ ಅಂಗಲಾಚುವಿಕೆಗೆ ಬೆಲೆ ಸಿಗಲಿಲ್ಲ. ಅವಳ ಕೂದಲು ಹಿಡಿದು ಹೊರಗೆಳೆದೊಯ್ದರು. ಅತ್ತೆ, ಮಾವ, ಮೈದುನನ ಕಣ್ಣಲ್ಲಿದ್ದ ಭಾವಗಳು ಏನು? ಕಾಣುತ್ತಿಲ್ಲ ಅವಳಿಗೆ. ಅಕ್ಕಪಕ್ಕದ ಮನೆಯ ಹೆಂಗಸರು, ನಿನ್ನೆಯವರೆಗೆ ಕಷ್ಟ ಸುಖ ವಿಚಾರಿಸುತ್ತಾ ಅಕ್ಕ ತಂಗಿಯರಂತಿದ್ದವರು‌ ಈಗ ಅವಳಿಗೆ ಬಾಯಿಗೆ ಬಂದಂತೆ ಬೈಯುತ್ತಾ, ಥಳಿಸುತ್ತಿದ್ದಾರೆ...‌‌..... 'ಮಾಡೋದೆಲ್ಲಾ ಹಲ್ಕಾ ಕೆಲಸ, ಮೇಲೆ ಗರತಿ ಮುಖವಾಡ ಬೇರೆ' , 'ಇಂತಾ ಮನೆಹಾಳಿನ ಕಲ್ಲು ಹೊಡೆದು ಸಾಯಿಸಬೇಕು' , 'ಮುಂಚೆಯೆಲ್ಲಾ ಆ ಸೂಳೆಗೇರಿಲಿ ಮಾತ್ರ ಇರ್ತಿದ್ರು ಈಗ ನೋಡ್ರೀ ಧೈರ್ಯನಾ? ನಮ್ಮಂತ ಮರ್ಯಾದಸ್ತರ ಕೇರಿಲಿ ಬಂದು ಗರತಿ ತರ ಇದ್ಕೊಂಡು ಹಾದರ ನಡ್ಸೋಕೆ ಶುರು ಮಾಡಿದ್ದಾರೆ' ಇನ್ನೂ ಏನೇನೋ ಮಾತುಗಳು ಕೇಳುತ್ತಿವೆ…... ನಿತ್ರಾಣಳಾಗುತ್ತಿದ್ದಾಳೆ ಅವಳು…... 

ಈಗ ಹೆಂಗಸರೆಲ್ಲಾ ಹಿಂದೆ ಸರಿದರು. ಸುತ್ತ ಮುತ್ತ ಅಪರಿಚಿತ ಗಂಡಸರು. ಮಂತ್ರ, ಶ್ಲೋಕಗಳನ್ನು, ಸುವಿಚಾರಗಳನ್ನು ಹೇಳುವ ಬಾಯಲ್ಲಿಯೇ ಕೆಟ್ಟ ಮಾತುಗಳು ಅವಳ ಚಾರಿತ್ರ್ಯದ ಬಗ್ಗೆ ಮಂತ್ರಪುಷ್ಪದಂತೆ ಉದುರುತ್ತಿವೆ. ಹಾಗೆ ಮಾತಾಡುತ್ತಲೇ ಹತ್ತಿರ ಬರುತ್ತಿದ್ದಾರೆ. ಅವಳ ಸೀರೆ ಸೆಳೆಯುತ್ತಿದ್ದಾರೆ ಮಾನವಂತ ಜನರು……. ಮನಬಂದಂತೆ ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ ಸಂಪ್ರದಾಯಸ್ಥ, ಮರ್ಯಾದಸ್ತ ಕೇರಿಯ ಗಂಡಸರು......

ಅಷ್ಟರಲ್ಲಿ ಅದೆಲ್ಲಿಂದಲೋ ಅವರು ನಡುವಿನಿಂದ ಓಡಿ ಬಂದಿದ್ದ ಕಿಶೋರ್.

ತನ್ನ ಕಿಶೋರ್............

ಈ ಡೋಂಗಿ ಸಮಾಜದ ಡಾಂಭಿಕ ತೋರಿಕೆಯ ಹಂಗಿಲ್ಲದ ಕಿಶೋರ್‌‌………

ತನ್ನ ದೇಹದ ಮೇಲೆ ಕಿಂಚಿತ್ ಕಾಮನೆಯಿಲ್ಲದೇ ತನ್ನ ಆತ್ಮವನ್ನು ಆರಾಧಿಸುವ, ಗೌರವಿಸುವ ಕಿಶೋರ್.......

ಇನ್ನೊಂದೆಡೆಯಿಂದ ಆ ಜನರನೆಲ್ಲಾ ತಳ್ಳಿ ದಾರಿ ಮಾಡಿಕೊಂಡು ಬಂದಳು ಸಮನ್ವಿತಾ........

ಯಾರಿವಳು……..? 

ಏನಾಗಬೇಕು ತನಗೆ…...? 

ಅಮ್ಮನಾ? ಮಗಳಾ? ಗೆಳತಿಯಾ? ಗುರುವಾ? ದೇವತೆಯಾ……..? ಎಲ್ಲವೂ ಇವಳೇ.... 

ಇವಳು ನನ್ನ ಅಸ್ತಿತ್ವ….... ನನ್ನ ಅಸ್ಮಿತೆ........

ಸಂತೆಯಲ್ಲಿ ತಪ್ಪಿಹೋಗಿ ಒಬ್ಬಂಟಿಯಾಗಿ ಕಾರ್ಗತ್ತಲ ಕಾನನದಲ್ಲಿ ಭೀತಿಯಿಂದ ಹೆದರಿದ ಪುಟ್ಟ ಕಂದಮ್ಮನ ಎದುರಲ್ಲಿ ತಾಯಿಯ ಮೊಗ ಕಂಡರೆ ಅದೆಂತಹ ಆನಂದ…….. ಅವಳಿಗೂ ಅಷ್ಟೇ ಸಂತಸವಾಯಿತು……. ನಿತ್ರಾಣಗೊಂಡ ದೇಹಕ್ಕೆ ಚೈತನ್ಯದ ಸಂಚಾರವಾದಂತಾಯಿತು.

ಇಬ್ಬರೂ ಅವಳ ಬಳಿಸಾರಿ ಸುತ್ತುವರೆದರು ಅವಳನ್ನು ರಕ್ಷಾಕವಚದಂತೆ. ಈಗ ಜನರೆಲ್ಲಾ ಅವರಿಬ್ಬರನ್ನೂ ಎಳೆದಾಡುತ್ತಿದ್ದಾರೆ. ಆದರೂ ಇವರದೇ ಕೈ ಮೇಲು. ನನ್ನ ಸುತ್ತಲಿಂದ ಕದಲಲೇ ಇಲ್ಲ ಇಬ್ಬರೂ…....

ಎಲ್ಲಿಂದಲೋ ಕಲ್ಲುಗಳ ಸುರಿಮಳೆಯಾಗತೊಡಗಿತು. ಸುತ್ತಲಿದ್ದವರ ಕೈಯಲ್ಲಿ ಕಲ್ಲುಗಳು……..

ಕಿಶೋರನ ಮೈ ಮೊಗ ಅರಿವೆಯೆಲ್ಲಾ ರಕ್ತಸಿಕ್ತ…....

"ಕಿಶೋರ್, ಪ್ಲೀಸ್ ಇಲ್ಲಿಂದ ಹೋಗಿ ಸಮನ್ವಿತಾನ ಕರ್ಕೊಂಡು. ಇಲ್ಲಾಂದ್ರೆ ಕೊಂದೇ ಬಿಡ್ತಾರೆ" ಕಾಲು ಹಿಡಿದು ಬೇಡಿದೆ........ 

ಆದರವನು ಅದಕ್ಕೆ ಕಿವಿಗೊಡಲಿಲ್ಲ. ಕಲ್ಲೆಸೆತ ಮುಂದುವರೆಯಿತು.

ನೋಡು ನೋಡುತ್ತಲೇ ಸಮನ್ವಿತಾ ನೆಲಕ್ಕೊರಗಿದಳು ಸುರಿವ ನೆತ್ತರಿನೊಂದಿಗೆ…….. ತುಟಿಯಂಚಿನಲ್ಲಿ ಸಣ್ಣ ನಗು……... 'ನೋಡು ನಿನಗಿಂತ ಮೊದಲು ನನ್ನ ಪ್ರಾಣ ಹೋಗ್ತಿದೆ' ಎಂಬ ಮುಗುಳ್ನಗುವೇ…..? ಇಲ್ಲಾ 'ಈ ದರಿದ್ರ ಸಮಾಜಕ್ಕೆ ನನ್ನ ಧಿಕ್ಕಾರ' ಎಂಬ ಕುಹಕದ ನಗುವಾ…...? ತಿಳಿಯಲಿಲ್ಲ.

"ಸಮಾ" ಜೋರಾಗಿ ಚೀರಿದಳು ನವ್ಯಾ....

"ನವ್ಯಾ ಏನಾಯ್ತು? ಯಾಕೆ ಕಿರುಚ್ಕೊಂಡೆ?" ಕಿಶೋರನ ದನಿ ಕೇಳಿ ಕಣ್ಬಿಟ್ಟು ಸುತ್ತ ನೋಡಿದಳು. ಆಸ್ಪತ್ರೆ…..... ಪಕ್ಕದ ಬೆಡ್ ನಲ್ಲಿ ಮಲಗಿದ್ದ ಸಮನ್ವಿತಾಳಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಅಂದರೆ.... ಛೇ ಮತ್ತೆ ಅದೇ ತೆರನಾದ ಕನಸು…….

ಹಣೆಯೊತ್ತಿದಳು. ಈಗ್ಗೆ ಕೆಲವು ದಿನಗಳಿಂದ ದಿನಾ ಇಂತಹ‌ ಕನಸುಗಳೇ. ಅದಕ್ಕೆ ಹೊತ್ತುಗೊತ್ತಿಲ್ಲ. ಅರೆ ಘಳಿಗೆ ಕಣ್ಮಚ್ಚಿದರೆ ಸಾಕು ಹೀಗೆ ಏನೇನೋ ಹುಚ್ಚಚ್ಚು ಕನಸು ಬೀಳುತ್ತಿತ್ತು. ಕ್ರಮ ಬೇರೆಯಾದರೂ ತಾತ್ಪರ್ಯ ಒಂದೇ. ಅವಳು ಹಿಂದೆ ವೇಶ್ಯೆಯಾಗಿದ್ದಳೆಂದು ಮನೆಯಲ್ಲಿ ಎಲ್ಲರಿಗೂ ತಿಳಿದುಬಿಟ್ಟಿದೆ. ಬೈದು ಹೊರಹಾಕುತ್ತಾರೆ. ಸುತ್ತಮುತ್ತಲಿನ ಜನ ಕುಹಕವಾಡುವಾಗ ಕಿಶೋರ್ ಮತ್ತು ಸಮನ್ವಿತಾ ಅವಳಿಗೆ ಜೊತೆಯಾಗುತ್ತಾರೆ. ಕೊನೆಗೆ ಮೂವರೂ ಗಾಯಗೊಳ್ಳುವುದೋ, ಸಾಯುವುದೋ ಹೀಗೇನೋ ಆಗಿ ಕೊನೆಗೊಳ್ಳುವ ಕನಸು ನವ್ಯಾಳ ಜೀವ ಹಿಂಡತೊಡಗಿತ್ತು. ಏಕಿಂತಹಾ ಕನಸು? ತಾನು ಮನೆಯಿಂದ ಬೀದಿಪಾಲಾಗಲಿದ್ದೇನೆಯೇ? ತನ್ನಿಂದಾಗಿ ಕಿಶೋರ್, ಸಮನ್ವಿತಾ ಅಪಾಯಕ್ಕೊಳಗಾಗುವರೇ? ಬರೀ ಪ್ರಶ್ನೆಗಳೇ…….. ಉತ್ತರ ದೊರಕುತ್ತಿರಲಿಲ್ಲ.

"ನವ್ಯಾ" ಕಿಶೋರ್ ಭುಜ ಹಿಡಿದು ಅಲುಗಿಸಿದಾಗ ಬಾಹ್ಯ ಪ್ರಪಂಚಕ್ಕೆ ಬಂದಳು.

"ಏನಾಯ್ತೇ? ಯಾಕೆ ಕಿರ್ಚಿದ್ದು? ಕೆಟ್ಟ ಕನಸೇನಾದರೂ ಬಿತ್ತಾ? ಸುಮಾರು ದಿನದಿಂದ ಹೀಗೆ ಆಡ್ತಿದ್ದೀ ಯಾಕೆ?" ಪ್ರಶ್ನೆಗಳ ಸುರಿಮಳೆ ಅವನಿಂದ.

"ಏನಿಲ್ಲ ಕಿಶೋರ್, ಹೀಗೆ ಏನೋ ಕೆಟ್ಟ ಕನಸು ಅಷ್ಟೇ" ಅವನಿಗೆ ಹೇಳಿ ನೋವು ಮಾಡುವುದೇಕೆ ಎಂದುಕೊಂಡು ಮಾತು ತೇಲಿಸಿದಳು‌.

"ಏನೇನೋ ಯೋಚನೆ ಮಾಡಿದ್ರೆ ಹೀಗೇ ಆಗೋದು. ನಾವು ಏನು ಯೋಚಿಸ್ತೀವೋ ಅದೇ ಕನಸುಗಳಾಗಿ ಕಾಡೋದು. ಇಲ್ಲಸಲ್ಲದ ಯೋಚನೆ ಬಿಟ್ಟು ಆರಾಮಾಗಿರು. ಆಗ ಎಲ್ಲಾ ಸರಿಹೋಗುತ್ತೆ. ಅರ್ಥ ಆಯ್ತಾ" ನೆತ್ತಿ ಚುಂಬಿಸಿ ಕೇಳಿದ. ತಲೆಯಾಡಿಸಿದಳು.

ಅಷ್ಟರಲ್ಲಿ ಮೀರಾ ಬಂದರು ಅಭಿರಾಮ್ ಹಾಗೂ ವೈಭವನೊಂದಿಗೆ. ಡ್ಯೂಟಿ ಡಾಕ್ಟರ್ ಇದ್ದರೂ  ಸಮನ್ವಿತಾಳ ಜವಾಬ್ದಾರಿಯನ್ನು ತಾವೇ ಖುದ್ದು ವಹಿಸಿಕೊಂಡಿದ್ದರಾಕೆ. ಪರೀಕ್ಷಿಸಿದವರಿಗೆ ನಿರಾಳವೆನಿಸಿತು. "ಎಲ್ಲಾ ನಾರ್ಮಲ್ ಇದೆ. ಜ್ವರ ಏನೂ ಇಲ್ಲ" ಎಂದವರು ಡ್ರಿಪ್ಸ್ ಬದಲಾಯಿಸಿದರು. ಜ್ವರ ಇಲ್ಲದಿದ್ದರೂ ನಿಶ್ಯಕ್ತಿಯ ಕಾರಣ ಡ್ರಿಪ್ಸ್ ಮುಂದುವರಿಕೆಯಾಗಿತ್ತು. ನರ್ಸ್ ಕರೆದು ಕೆಲವು ಸೂಚನೆ ನೀಡಿ ರೌಂಡ್ಸ್ ಗೆ ಹೋದರಾಕೆ.

ಅಭಿರಾಮ್ ವೈಭವವನ್ನು ಮನೆಗೆ ಕಳುಹಿಸಿ ತಾನು ಅಲ್ಲೇ ಉಳಿದ. ಅವಳಿಗೆ ಎಚ್ಚರವಾಗಿ ಒಮ್ಮೆ ಮಾತನಾಡದ ಹೊರತು ಸಮಾಧಾನವಿರಲಿಲ್ಲ ಅವನಿಗೆ. ಕಿಶೋರ್ ನವ್ಯಾ ಬೆಳಗ್ಗಿನಿಂದ ಅಲ್ಲೇ ಇದ್ದದ್ದು ಗಮನಿಸಿದ್ದ ಅಭಿ. ಹೇಗೂ ಸಮನ್ವಿತಾಳ ಕ್ವಾಟ್ರಸ್ ಪಕ್ಕದಲ್ಲೇ ಇದ್ದುದರಿಂದ ಊಟಮಾಡಿ ಸ್ವಲ್ಪ ವಿರಮಿಸಿ ಬನ್ನಿ ಎಂದರೆ ನವ್ಯಾ ಒಪ್ಪಲೇ ಇಲ್ಲ. ಕಡೆಗೆ ಅವರಿಬ್ಬರನ್ನೂ ಒತ್ತಾಯಿಸಿ ಸ್ನಾನ, ಊಟ ಮುಗಿಸಿ ಬರಲು ಕಳುಹಿಸುವಾಗ ಸಾಕು ಬೇಕಾಯ್ತು ಅವನಿಗೆ. 

ಅವರಿಬ್ಬರೂ ಹೋದ ಮೇಲೆ ಮನೆಗೊಂದು ಫೋನ್ ಮಾಡಿ ತಾನು ಬರುವುದು ತಡವಾಗುವುದೆಂದು ಹೇಳಿ ವಾರ್ಡಿನೊಳಗೆ ಬಂದ. ಯಾಕೋ ಊಟ ಬೇಕೆನಿಸಲಿಲ್ಲ. ಅಲ್ಲಿದ್ದ ಚೇರಿನಲ್ಲಿ ಸುಮ್ಮನೆ ಕುಳಿತು ಸಮನ್ವಿತಾಳನ್ನೇ ದಿಟ್ಟಿಸತೊಡಗಿದ. ಒಂದೇ ದಿನದಲ್ಲಿ ಬಿಳಚಿಕೊಂಡಿದ್ದಾಳೆ ಎನಿಸಿತು. ಡ್ರಿಪ್ಸ್ ಚುಚ್ಚಿದ್ದ ಕೈ ಬಾತುಕೊಂಡಿತ್ತು. ಮೆಲ್ಲಗೆ ಮುಂಗುರುಳು ಸವರಿದ. ಅವಳ ಕೈಯನ್ನು ತನ್ನ ಹಸ್ತದಲ್ಲಿ ಹಿಡಿದು ಕುಳಿತ.

ಹಾಗೇ ಕುಳಿತಿದ್ದ. ನಿಮಿಷಗಳು ಜಾರುತ್ತಿತ್ತು. ಅವಳು ಮೆಲ್ಲಗೆ ಕದಲಿದಳು.  ಕೈ ಬೆರಳುಗಳ ನಿಧಾನ ಚಲನೆ ಅರಿವಾಯಿತು ಅವನ ಹಸ್ತದಲ್ಲಿ. 

ಅವಳಿಗೆ ನಿಧಾನವಾಗಿ ಮಂಪರು ಹರಿಯತೊಡಗಿತು. ಮೂಗಿಗೆ ಬಡಿದ ವಾಸನೆ ತಾನು ಆಸ್ಪತ್ರೆಯಲ್ಲಿರುವೆನೆಂಬ ಅರಿವು ನೀಡಿತು. ತಲೆಭಾರವೆನಿಸಿತು. ನಿಧಾನವಾಗಿ ಕಣ್ತೆರೆಯಲು ಪ್ರಯತ್ನಿಸಿದಳು. ಎಡಗೈ ಕದಲಿಸಲು ಸಾಧ್ಯವಾಗದಷ್ಟು ನೋವು. ಕ್ಷಣದಲ್ಲೇ ಡ್ರಿಪ್ಸ್ ಹಾಕಿರುವುದು ತಿಳಿಯಿತು. ಎಷ್ಟೆಂದರೂ ವೈದ್ಯೆಯಲ್ಲವೇ? ಆ ಪ್ರಯತ್ನ ಬಿಟ್ಟು ಬಲಗೈ ಕದಲಿಸಲು ನೋಡಿದಳು. ಏನೋ ಅಡ್ಡಿ. ಕೈ ಯಾರದೋ ಹಿಡಿತದಲ್ಲಿತ್ತು. ಅಪರಿಚಿತ ಸ್ಪರ್ಶ. ಯಾರೋ ಪಕ್ಕದಲ್ಲಿ ಕುಳಿತಿರುವಂತೆ ಭಾಸವಾಯಿತು. ತನ್ನ ಕೈ ಅವರ ಹಿಡಿತದಲ್ಲೇ ಇದೆ. ಯಾರು?

ಕಷ್ಟಪಟ್ಟು ಬೆಳಕಿಗೆ ಕಣ್ಣು ಹೊಂದಿಸಿಕೊಂಡು ಕಣ್ಣು ತೆರೆದಳು. ಬಲಬದಿಗೆ ಯಾವುದೋ ಬಿಂಬ ಮಸುಕು ಮಸುಕಾಗಿ ಕಾಣಿಸಿತು. ತಾನು ಪ್ರಜ್ಞೆ ತಪ್ಪುವ ಮುನ್ನ ತನ್ನೊಂದಿಗೆ ಇದ್ದದ್ದು ನವ್ಯಾ, ಕಿಶೋರ್……. ನೆನಪಿಸಿಕೊಂಡಳು. ಆದರೆ ಎದುರು ಕುಳಿತಿರುವುದು ಅವರಿಬ್ಬರೂ ಅಲ್ಲ ಎಂಬುದು ತಿಳಿಯುತಿತ್ತು ಅವಳಿಗೆ. ಮತ್ತಷ್ಟು ಪ್ರಯತ್ನಿಸಿ ನೋಡತೊಡಗಿದಳು ಎದುರಿದ್ದ ವ್ಯಕ್ತಿಯನ್ನು.

ನಿಧಾನವಾಗಿ ಅವಳ ನೋಟ ಸ್ಪಷ್ಟವಾಗತೊಡಗಿ ಎದುರು ನಸುನಗುತ್ತಾ ಕುಳಿತವನ ಮೊಗ ಸ್ಫುಟವಾಗತೊಡಗಿದಂತೆ‌ ಅವಳ ಹುಬ್ಬುಗಳು ಸಂಕುಚಿತವಾಗಿ ನೋಟ ಪ್ರಶ್ನಾರ್ಥಕವಾಯಿತು.

"ನೀವು…….. ನೀವಿಲ್ಲಿ ಹೇಗೆ?" ಸುತ್ತಮುತ್ತ ನೋಟ ಹರಿಸಿದಳು ನವ್ಯಾ ಹಾಗೂ ಕಿಶೋರನಿಗಾಗಿ.

"ನಿಮ್ಮ ಫ್ರೆಂಡ್ಸ್ ಇಬ್ರೂ ಬೆಳಗ್ಗಿನಿಂದ ಇಲ್ಲೇ ಇದ್ರು. ಈಗ ಸ್ವಲ್ಪ ಹೊತ್ತಿಗೆ ಮುಂಚೆ ನಾನೇ ಸ್ನಾನ, ಊಟ ಮುಗಿಸಿ ಬನ್ನಿ ಅಂತ ಒತ್ತಾಯ ಮಾಡಿ ಕಳಿಸಿದೆ" ಅವಳ ಹುಡುಕಾಟ ಅರಿತವನಂತೆ ನುಡಿದ.

"ಅಂದ್ರೆ ನಾನು ಬೆಳಿಗ್ಗೆಯಿಂದ ಇಲ್ಲೇ ಇದ್ದೀನಾ?" ಗಾಬರಿಯಿಂದ ಕೇಳಿದಳು. 

"ಹೌದು ಮೇಡಂ, ನೀವು ಬೆಳಗ್ಗಿನಿಂದ ಇಲ್ಲೇ ಪ್ರಜ್ಞೆ ಇಲ್ದೇ ಡ್ರಿಪ್ಸ್ ಏರಿಸಿಕೊಂಡು ಮಲ್ಗಿದ್ದೀರಿ. ನಮ್ಮಂತಾ ಬಡಪಾಯಿಗಳ ಜೀವ ಬಾಯಿಗೆ ಬರಿಸಿ ನೀವು ಆರಾಮಾಗಿ ಮಲ್ಗಿರೋದು ನೋಡಿ…...." 

ಅವಳಿಗೆ ಮೊದಲೇ ಮುಜುಗರ. ಅವನನ್ನು ಇಲ್ಲಿ ನಿರೀಕ್ಷಿಸಿರಲಿಲ್ಲ ಆಕೆ. ಮೊದಲು ಹೇಗೋ ಈಗ ಈ ಮದುವೆ ಎಂಬ ಪ್ರಸ್ತಾಪ ಬೇರೆ ನಡುವಲ್ಲಿತ್ತು. ಎದುರಲ್ಲಿ ಕುಳಿತವನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಯಾವುದೋ ಸಂಕೋಚ, ಹಿಂಜರಿಕೆ..... ಕಣ್ಣಲ್ಲಿ ಕಣ್ಣಿಡುವುದು ದೂರದ ಮಾತು….. ಅವಳಿಗೆ ಅವನ ಮೊಗವನ್ನು ದಿಟ್ಟಿಸಲೇ ಸಾಧ್ಯವಾಗಲಿಲ್ಲ....... ಅದೇನೆಂದು ಸ್ಪಷ್ಟವಾಗದು……..

ಅದಕ್ಕೆ ಸರಿಯಾಗಿ ಅವಳ ಕೈಯನ್ನು ತನ್ನ ಹಸ್ತಗಳ ನಡುವೆ ಹಿಡಿದಿದ್ದನಾತ. ಇವಳು ಕೊಸರಿಕೊಂಡರೂ ಆಸಾಮಿ ಕೈ ಬಿಡುವ ಲಕ್ಷಣಗಳು ಗೋಚರಿಸಲಿಲ್ಲ. ಅವಳ ಬಲಗೈ ಇನ್ನೂ ಅವನ ಹಿಡಿತದಲ್ಲೇ ಇತ್ತು.

ಇವಳ ಮುಜುಗರ ಅವನಿಗೆ ಅರಿವಾಗಲಿಲ್ಲ ಎಂದೇನಿಲ್ಲ. ಅವಳು ಕೈ ಬಿಡಿಸಿಕೊಳ್ಳಲು ಪರದಾಡುತ್ತಿದ್ದಾಳೆ ಎಂದು ಅವನಿಗೂ ಗೊತ್ತು. ಆದರೆ ಅವನು ಅವಳ ಕೈ ಬಿಡಲು ತಯಾರಿಲ್ಲ ಅಷ್ಟೇ. 

ಇಬ್ಬರ 'ನೀ ಕೊಡೆ, ನಾ ಬಿಡೆ' ತಕರಾರಿನಲ್ಲಿ ಕೊನೆಗೆ ಸೋತದ್ದು ಸಮನ್ವಿತಾಳೇ. ಎಲ್ಲಾ ರೀತಿಯ ಕೊಸರಾಡಿದರೂ ಅವನು ಕೈ ಹಿಡಿತ ಸಡಿಲಿಸದಾಗ ಕೈಯನ್ನು ನೇರ ಹಿಂದೆಳೆದು ಮಲಗಿದ್ದಲ್ಲಿಂದ ಏಳಲು ಪ್ರಯತ್ನಿಸಿದಳು. ಆದರೆ ಅವನ ಹಿಡಿತ ಬಲವಾಗಿತ್ತು.

"ರೀ ಡಾಕ್ಟ್ರೇ, ನೀವೀಗ ಡಾಕ್ಟರ್ ಅಲ್ಲಾ ಪೇಷೆಂಟ್ ಅನ್ನೋದು ನೆನಪಿರ್ಲಿ. ನೀವು ಪೇಷೆಂಟುಗಳಿಗೆ ಏನೆಲ್ಲಾ ಎಚ್ಚರಿಕೆ ಹೇಳ್ತಿದ್ರಿ ನೆನಪಿಸ್ಕೊಳ್ಳಿ. ಅದೆಲ್ಲಾ ಈಗ ನಿಮ್ಗೂ ಅಪ್ಲಿಕೇಬಲ್. ಸೋ ಸುಮ್ನೆ ನಂಗೆ ಕೋಪ ಬರಿಸದೇ ಮಲ್ಕೊಳ್ಳಿ. ಇಲ್ಲಾಂದ್ರೆ ಈ ಕೈಗೂ ಡ್ರಿಪ್ಸ್ ಹಾಕ್ಸಿ ಬಿಡ್ತೀನಷ್ಟೇ. ಅದೇನು ಡಾಕ್ಟ್ರೇನೋ?" 

ಅವನ ಈ ಪರಿಗೆ ಗಪ್ ಚಿಪ್ ಆದಳು ಹುಡುಗಿ. ಕೈ ಬಿಡಿಸಿಕೊಳ್ಳುವ ಪ್ರಯತ್ನಕ್ಕೆ ಎಳ್ಳುನೀರು ಬಿಟ್ಟಳು.

"ಯಾಕೆ ಡಾಕ್ಟ್ರೇ ಹೀಗೆಲ್ಲಾ ಮಾಡ್ಕೊಂಡ್ರೀ?" ಅವನ ಧ್ವನಿ ಭಾರವಾಗಿತ್ತು.

"ನೀವೇ ಹೇಳಿದ್ರಲ್ಲಾ ನಾವು ಪೇಷೆಂಟ್ಸ್ ಗೆ ರಾಶಿ ಎಚ್ಚರಿಕೆ ಕೊಡ್ತೀವಿ ಅಂತ. ಒಂದು ಸಲ ರೋಗಿಗಳ ಮನಸ್ಥಿತಿ ಹೇಗಿರುತ್ತೆ ಅಂತ ನೋಡೋಣ ಅನ್ನಿಸ್ತು. ಅದಕ್ಕೆ ನಾನೇ ಪೇಷೆಂಟ್ ಆದೆ" ನಕ್ಕಳು.

"ತುಮ್ ಇತನಾ ಜೋ ಮುಸ್ಕುರಾ ರಹೇ ಹೋ

ಕ್ಯಾ ಗಮ್ ಹೆ ಜಿಸಕೋ ಚುಪಾ ರಹೇ ಹೋ?

ಆಕೋಂ ಮೆ ನಮೀ ಹಸೀ ಲಬೋಂ ಪರ್

ಕ್ಯಾ ಹಾಲ್ ಹೈ ಕ್ಯಾ ದಿಖಾ ರಹೇ ಹೋ?"

ತಟ್ಟನೆ ತಲೆ ಎತ್ತಿದಳು ಸಮನ್ವಿತಾ. ತನ್ನ ಪರಿಸ್ಥಿತಿಗೆ ತಕ್ಕ ಸಾಲುಗಳು…...ನಗುತ್ತೇನೆ ಅಳುವ ಮರೆಸಿ….. ಅತ್ತು ದುಃಖವನ್ನು ಹೊರಹಾಕಲೂ ಅದೃಷ್ಟ ಬೇಕು...... ಇಲ್ಲವಾದರೆ ನನ್ನಂತೆ ರಾತ್ರಿಯಿಡೀ ಒಬ್ಬಳೇ ಅತ್ತು ತನ್ನ ತಾನೇ ಸಮಾಧಾನಿಸಿಕೊಂಡು ನಗಬೇಕು.

ಆದರೆ ಇವನು ಹಾಡುತ್ತಿರುವನೋ ಇಲ್ಲಾ ತನ್ನನ್ನು ಕೇಳುತ್ತಿರುವನೋ? ಗೊಂದಲದಲ್ಲಿ ಬಿದ್ದಳು. ಅವನ ಕಣ್ಣುಗಳಲ್ಲಿ ಉತ್ತರ ಅರಸಿದಳು. ಎರಡನೇಯದೇ ಸರಿಯಾ?

"ವೈದ್ಯರೇ, ಹಾಗೆ ನೋಡ್ಬೇಡ್ರೀ. ನಂಗೇನು ದೃಷ್ಟಿಯಾಗಲ್ಲ….. ಆದ್ರೆ ನಿಮ್ಗೇ ತೊಂದರೆಯಾಗಬಹುದು" ಕಣ್ಣು ಮಿಟುಕಿಸಿದ.

"ಪರ್ವಾಗಿಲ್ವೇ….. ನಿಮ್ಮನ್ನ ಏನೋ ಅಂದ್ಕೊಂಡಿದ್ದೆ. ತುಂಬಾ ಚೆನ್ನಾಗಿ ಹಾಡ್ತೀರಾ." 

"ಏನಂದ್ಕೊಂಡಿದ್ರಿ ಡಾಕ್ಟ್ರೇ?"

"ಏನಿಲ್ಲ ಬಿಡಿ"

"ನನಗೆ ಈ ಬಿಸ್ನೆಸ್ ಬಿಟ್ಟು ಬೇರಿನ್ನೇನೂ ಗೊತ್ತಿಲ್ಲ ಅಂತ ಅಂದ್ಕೊಂಡಿದ್ದೆ ಅಲ್ವಾ? ನಾನು ‌ಹೈಲೀ ಟ್ಯಾಲೆಂಟೆಡ್ ಪರ್ಸನ್ ಕಣಮ್ಮಾ. ಬೇಕಿದ್ರೆ ಅಡಿಗೆ ಕೂಡಾ ಮಾಡ್ತೀನಿ ಗೊತ್ತಾ?"

"ನಿಮಗೆ ಮಾತಾಡೋಕೇ ಬರೋಲ್ಲ ಅಂದ್ಕೊಂಡಿದ್ನಲ್ರೀ ನಾನು. ನೀವು ನೋಡಿದ್ರೆ ಗುರ್ತು ಪರಿಚಯ‌ ಇಲ್ಲದವಳತ್ರ ಹೀಗೆ ನಾನ್ ಸ್ಟಾಪ್ ಮಾತಾಡ್ತಿದ್ದೀರಲ್ಲ."

"ಏನು? ಯಾರಿಗೆ ಯಾರ ಗುರುತು, ಪರಿಚಯ ಇಲ್ಲ? ಯಾಕೆ? ಮೆಮೋರಿ ಲಾಸ್ ಆಗಿದ್ಯಾ?" ಚೇರಿನಿಂದ ಮುಂದೆ ಬಂದು ಕೇಳಿದ ಗಾಬರಿಯಲ್ಲಿ.

"ಅಲ್ಲ…. ಏನೋ ಅವತ್ತು ಪಾರ್ಟಿಲಿ ಒಂದ್ಸಲ ನೋಡಿದ್ದು. ಆಮೇಲೆ ನಿನ್ನೆ ಒಂದಷ್ಟು ಮಾತಾಡಿದ್ದು. ಅಷ್ಟೇ"

"ತಮ್ಮ ಪ್ರಕಾರ ಗುರುತು, ಪರಿಚಯ ಅಂದ್ರೆ ಏನು ಡಾಕ್ಟ್ರೇ? ಬ್ಲಡ್ ಗ್ರೂಪ್, ಬಿ.ಪಿ, ಶುಗರ್ ಲೆವೆಲ್, WBC, RBC ಕೌಂಟ್, ಪಾಸ್ಪೋರ್ಟ್, ವೀಸಾ, ಪ್ಯಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಎಲ್ಲಾ ಆಧಾರ್ ಕಾರ್ಡಿಗೆ ಲಿಂಕ್ ಮಾಡಿ ಬಯೋಮೆಟ್ರಿಕ್ ಮೆಷಿನಲ್ಲಿ ಹೆಬ್ಬೆಟ್ಟು ಒತ್ತಿ ಗುರುತು ಪರಿಚಯ ಮಾಡ್ಕೋಬೇಕಾ?" ಅವನ ಕೇಳಿಕೆಗೆ ಅವಳು ಜೋರಾಗಿ ನಗತೊಡಗಿದಳು.

ಅಭಿರಾಮನಿಗೆ ಸಿಟ್ಟು ಬಂದಿತ್ತು. 'ಇಷ್ಟು ಸರ್ತಿ ನೋಡಿ, ಮಾತಾಡಿ, ಗುರುತು ಪರಿಚಯ ಇಲ್ವಾ ನಿಂಗೆ. ಮತ್ತೆ ನಗು ಬೇರೆ….. ಮಾಡ್ತೀನಿ ಇರು' ಎಂದುಕೊಂಡವನು,

"ಅಮ್ಮಾ ತಾಯೇ.... ಎಲ್ಲರತ್ರ ಹೀಗೆ ಮಾತಾಡೋಕೆ ನನ್ಗೇನು ಹುಚ್ಚಾ? ಮನೆಯಲ್ಲೂ ಹೀಗೆ ಮಾತಾಡಲ್ಲ ನಾನು ಗೊತ್ತಾ? ಏನೋ ಪಾಪ ನನ್ನ ಹೆಂಡ್ತಿ…..! ಡಾಕ್ಟ್ರಾಗಿದ್ದೋಳು ಈಗ ಪೇಷೆಂಟಾಗಿ ಕೈಗೆಲ್ಲಾ ಗ್ಲುಕೋಸ್ ಚುಚ್ಚಿಸ್ಕೊಂಡು ಮಲ್ಗಿದ್ದಾಳೆ. ಅವಳಿಗೆ ಬೇಜಾರಾಗ್ಬಾರ್ದು ಅಂತ ನಾನು ಮಾತಾಡ್ತಿದ್ರೆ ನೋಡು ಹೇಗ್ಹೇಳ್ತಿದ್ದೀ?" 

ತಟ್ಟನೆ ನಿಂತಿತು ನಗು......

"ಏನಂದ್ರಿ? ಏನಂದ್ರಿ ನೀವು? ಹೆಂಡ್ತಿನಾ? ಯಾರ್ರೀ ನಿಮ್ಮ ಹೆಂಡತಿ"

"ಓ…. ಹೆಂಡ್ತಿ ಆಗಿಲ್ಲ ಅಲ್ವಾ ಇನ್ನೂ…. ಸಾರಿ ಅದು ಬರಿ ಹೆಂಡ್ತಿ ಅಲ್ಲ ಭಾವಿ ಹೆಂಡ್ತಿ. ನೋಡಮ್ಮಾ ಭಾವೀ ಪತ್ನಿ. ನಿನ್ನಿಂದಾಗಿ ನಾನು ಮನೇಲೀ ಎಲ್ಲರತ್ರ ಉಗಿಸ್ಕೋತಾ ಇದ್ದೀನಿ. ಮಾತಾಡ್ಬೇಕು ಅಂತ ಮನೆಗೆ ಕರ್ದು ನಮ್ಮ ಭಾವಿ ಸೊಸೆನ ಅಳ್ಸಿ ಆಸ್ಪತ್ರೆ ಸೇರ್ಸಿದ್ಯಾ ಅಂತ ಅಮ್ಮ ಮತ್ತೆ ಡ್ಯಾಡ್, ಡಾಕ್ಟರ್ ಆಗಿದ್ದ ನನ್ನ ಭಾವಿ ಅತ್ತಿಗೆನ ಪೇಷೆಂಟ್ ಮಾಡಿದ್ಯಾ ಅಂತ ಆಕೃತಿ ನನ್ಹತ್ರ ಮಾತಾಡುತ್ತಿಲ್ಲ. ನೋಡಿ ಡಾಕ್ಟ್ರೇ….. ನಾನೊಬ್ಬ ಅಬೋಧ ಬಾಲಕ ಎಷ್ಟೆಲ್ಲಾ ಸಮಸ್ಯೆಗೆ ಸಿಕ್ಕಿ ನರಳ್ತಾ ಇದ್ದೀನಿ. ಅದ್ಕೇ ನೀವು ಹುಷಾರಾಗೋ ತನಕ ಇಲ್ಲಿಂದ ಅಲ್ಲಾಡಲ್ಲ ನಾನು. ಕಂಪೆನಿ, ಆಫೀಸ್ ಕೆಲ್ಸ ಎಲ್ಲಾ ಬೇರೆಯವರಿಗೆ ವಹಿಸ್ಬಿಟ್ಟಿದ್ದೀನಿ. ನೀವು ಬೇಗ ಹುಷಾರಾಗಿ ಬಿಡಿ. ತಾಳಿ ಕಟ್ಟಿ ನಿಮ್ಮನ್ನ ನಿಮ್ಮ ಅತ್ತೆ, ಮಾವ, ನಾದಿನಿ ಜೊತೆ ಬಿಟ್ಮೇಲೆನೇ ಬೇರೆ ಕೆಲ್ಸ"

ಅವನ ಮಾತಿನಲ್ಲಿದ್ದ ಭಾವನೆಯನ್ನು ಗ್ರಹಿಸಲಿಲ್ಲ ಅವಳು…….. ಈಗವಳಿಗೆ ನೆನಪಾದದ್ದು ತಂದೆ ಎನಿಸಿಕೊಂಡಾತ ಮಾಡಿದ್ದ ಮದುವೆ ಪ್ರಸ್ತಾಪ.

ಅದಕ್ಕೇ ಅಭಿರಾಮ್ ಹೀಗೆ ಮಾತನಾಡುತ್ತಿದ್ದಾನೆ. ಏನೆಂದು ಉತ್ತರಿಸುವುದು……?

ತನಗೇ ತಿಳಿಯದೇ ತನ್ನ ಮದುವೆಯ ನಿಶ್ಚಯಿಸಿದ್ದಾರೆ ತನ್ನ ಸ್ವಾರ್ಥಿ ತಂದೆ ಎಂದಿವನಿಗೆ‌ ಹೇಗೆ ವಿವರಿಸಲಿ……?

ಸಪ್ಪಗಾದಳು ಹುಡುಗಿ.........

         ******ಮುಂದುವರೆಯುತ್ತದೆ******



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ