ಸೋಮವಾರ, ಜೂನ್ 22, 2020

ಅನೂಹ್ಯ 13

ಯಾಂತ್ರಿಕವಾಗಿ ಕಾರು ಚಲಾಯಿಸುತ್ತಿದ್ದರೂ ನನ್ನ ತಲೆತುಂಬಾ ಯೋಚನೆಗಳು ಕಾರಿಗಿಂತ ವೇಗವಾಗಿ ಓಡುತ್ತಿದ್ದವು. ಕಿಶೋರನ ಪ್ರಸ್ತಾಪಕ್ಕೆ ನವ್ಯಾ ಹೇಗೆ ಪ್ರತಿಕ್ರಿಯಿಸಬಹುದು? ಅವಳ ಹಿನ್ನೆಲೆ ತಿಳಿದ ಮೇಲೆ ಇವನು ಅವಳನ್ನು ಒಪ್ಪಬಹುದೇ? ಇದೇ ಎರಡು ಪ್ರಶ್ನೆಗಳು ಕಣ್ಮುಂದೆ ಬೃಹದಾಕಾರವಾಗಿ ಕುಣಿಯುತ್ತಿದ್ದವು. ಆದರೆ ಇದ್ಯಾವುದರ ಪರಿವೆ ಇಲ್ಲದೆ ಅವನು ನಿರಾಳನಾಗಿದ್ದ.

ನವ್ಯಾಳ ರೂಮಿನ ಬಳಿ ಕಾರು ನಿಲ್ಲಿಸಿದಾಗ ಅವನೇ ಮೊದಲು ಇಳಿದ. ನಾನು ನಿಧಾನವಾಗಿ ಇಳಿದು ರೂಮಿನತ್ತ ಹೊರಟವಳು ತಟ್ಟನೇ ನಿಂತು,

"ಕಿಶೋರ್, ಅದೇನೇ ಆದ್ರೂ ನಾನು ನವ್ಯಾನ ಯಾವ ವಿಚಾರದಲ್ಲೂ ಒತ್ತಾಯ ಮಾಡೋಲ್ಲ. ಅವಳ ನಿರ್ಧಾರ ಏನೇ ಆಗಿದ್ರು ನಾನು ಅದನ್ನು ಗೌರವಿಸ್ತೀನಿ. ಹಾಗಾಗಿ ಅವ್ಳು ನಿನ್ನ ಪ್ರಸ್ತಾಪನ ನಿರಾಕರಿಸಿದ್ರೆ ನಾನು ಒತ್ತಾಯ ಮಾಡಿ ಅವ್ಳನ್ನ ಒಪ್ಸೋಲ್ಲ ಅನ್ನೋ ಮಾತು ಯಾವತ್ತೂ ನೆನಪಿರಲಿ." ಅಂದಾಗ ಸರಿಯೆಂದು ತಲೆಯಾಡಿಸಿ ನನ್ನ ಹಿಂಬಾಲಿಸಿದ.

ಕರೆಗಂಟೆಯ ಸದ್ದಿಗೆ ಬಾಗಿಲು ತೆರೆದವಳು "ಎಲ್ಲೇ ಹೋಗಿದ್ದೆ? ಆಸ್ಪತ್ರೆ ಎಲ್ಲಾ ಹುಡ್ಕಿದೆ ಗೊತ್ತಾ. ಒಂದು ಫೋನ್ ಮಾಡೋದಲ್ವಾ? ಇವತ್ತು ಮನೆಗೆ ಹೋಗ್ತೀನಿ ಅಂದಿದ್ದೆ. ಇಷ್ಟೊತ್ತಿಗೆ ಬಂದ್...." ಇನ್ನೇನೋ ಹೇಳಲಿದ್ದವಳು ಕಿಶೋರ್ ಕಂಡೊಡನೆ ಮಾತು ನಿಲ್ಲಿಸಿದಳು.

"ನಿನ್ಹತ್ರ ತುಂಬಾ ಮುಖ್ಯವಾದ ವಿಷಯ ಮಾತಾಡ್ಲಿಕ್ಕಿದೆ. ಅದಕ್ಕೆ ಬಂದೆ. ಒಳಗೆ ಕೂತು ಮಾತಾಡೋಣ. ಬಾ ಕಿಶೋರ್ ಒಳಗೆ" ನವ್ಯಾ ಸರಿದಾಗ ಅವನೊಂದಿಗೆ ಒಳ ನಡೆದೆ. ಅವಳಿಗೆ ವಿಪರೀತ ಅಚ್ಚರಿಯಾಗಿತ್ತು ಕಿಶೋರನ ಆಗಮನದಿಂದ. ಅದು ಅವಳ ಕಣ್ಣುಗಳಲ್ಲಿ ಸ್ಪಷ್ಟವಾಗಿತ್ತು. ಕಾಫೀ ತರುತ್ತೇನೆಂದಾಗ ಇಬ್ಬರೂ ಬೇಡವೆಂದವು.

ಪ್ರಾಯಶಃ ನಮ್ಮಿಬ್ಬರಿಗೂ ಏನೋ ವಿಚಾರ ಮಾತನಾಡಲಿದೆ ಎಂದುಕೊಂಡಳೇನೋ "ಸರಿ ನೀವಿಬ್ಬರೂ ಮಾತಾಡಿ, ನಾನು ಒಳಗಿರುತ್ತೇನೆ"  ಎಂದು ಹೊರಡಲನುವಾದಳು. ನಾನು ಏನು ಹೇಳುವುದೆಂದು ಯೋಚಿಸುವ ಮೊದಲೇ ಅವನು, "ನಿಂತ್ಕೊಳ್ಳಿ ನವ್ಯಾ, ನಾವು ನಿಮ್ಹತ್ರನೇ ಮಾತಾಡೋಕೆ ಬಂದಿರೋದು" ಅಂದುಬಿಟ್ಟಿದ್ದ.

ಅವಳು ಕಕ್ಕಾಬಿಕ್ಕಿಯಾಗಿ ನನ್ನತ್ತ ನೋಡಿದಳು. 

"ನನ್ಹತ್ರನಾ? ನನ್ಹತ್ರ ಮಾತಾಡೋ ವಿಚಾರ ಏನಿದೆ?" ಗೊಂದಲದಲ್ಲಿ ಕೇಳಿದಳು.

"ನಿಮ್ಗೆ ಸಂಬಂಧಿಸಿದ ವಿಚಾರ ನಿಮ್ಹತ್ರನೇ ಮಾತಾಡ್ಬೇಕಲ್ವಾ? ನಾನು ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಮಾತಾಡಲು ಪ್ರಯತ್ನಿಸಿ ಸೋತು ಮನೆಯಲ್ಲೇ ಮಾತಾಡೋಣ ಅಂತ ಇಲ್ಲಿಗೆ ಬಂದೆ" ಅವನಂದಾಗ,

"ನಾನು ನಿಮ್ಮನ್ನು ಮೂರ್ನಾಲ್ಕು ಸರ್ತಿ ಆಸ್ಪತ್ರೆಲಿ ನೋಡಿದ್ದು. ಹೇಳಿಕೊಳ್ಳುವಂತ ಆತ್ಮೀಯತೆ, ಪರಿಚಯ, ಸ್ನೇಹ ನಮ್ಮ ಮಧ್ಯೆ ಇಲ್ಲ. ಇಂಥದ್ರಲ್ಲಿ ನನ್ನ ಹತ್ರ, ಅದೂ ಮನೆಗೆ ಬಂದು ಮಾತಾಡುವಂತ ವಿಷಯ ನಿಮ್ಗೇನಿದೆ?" ಕೇಳಿದಳು ಕಸಿವಿಸಿಯಿಂದ.

ಇನ್ನು ಹೀಗೇ ಬಿಟ್ಟರೆ ಸರಿಹೋಗದೆನಿಸಿ ನಾನೇ ಮಧ್ಯಪ್ರವೇಶಿಸಿ, "ಒಂದ್ನಿಮಿಷ ಇಬ್ರೂ ಸುಮ್ನಿರಿ. ನವ್ಯಾ ಬಾ ಕೂತ್ಕೋ ಇಲ್ಲಿ" ಅವಳ ಕೈ ಹಿಡಿದು ಕೂರಿಸಿ, "ಕಿಶೋರ್ ಗೆ ಮಾತಾಡೋಕೆ ಬಿಡು.ಅವ್ನು ಏನ್ ಹೇಳ್ತಾನೆ ಅಂತ ಪೂರ್ತಿ ಕೇಳು. ಆಮೇಲೆ ನಿನ್ಗೇನ್ ಅನ್ಸುತ್ತೋ ಹೇಳು" ಸಲಹೆ ಕೊಟ್ಟೆನಾದರೂ ಅವನ ಪ್ರಸ್ತಾಪ ಕೇಳಿದೊಡನೆಯೇ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಾಳೆಂದು ನನಗೆ ಗೊತ್ತಿತ್ತು.

"ಸರಿ ಅದೇನೋ ಹೇಳಿ" ಕೇಳಿದಳು ಸಮಾಧಾನದಿಂದ.

ಅವನು ಅರೆ ಘಳಿಗೆ ಮೌನವಾಗಿದ್ದ. ಎಲ್ಲಿಂದ ಮಾತು ಆರಂಭಿಸಬೇಕು,ಹೇಗೆ ಹೇಳಬೇಕೆಂದು ಪೂರ್ವ ತಯಾರಿ ನಡೆಸಿದ್ದಂತೆ ಕಾಣಿಸಿತು. ಅವಳು ಶಾಂತವಾಗಿದ್ದಂತೆ ಕಂಡರೂ ಮನ ಗೊಂದಲದ ಗೂಡಾಗಿತ್ತು.

ಇದ್ದಕ್ಕಿದ್ದಂತೆ ಅವಳೆದುರು ಕೂತು, "ನವ್ಯಾ, ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಸ್ತೀನಿ. ಕಣ್ಣ್ರೆಪ್ಪೆ ತರ ಜೋಪಾನ ಮಾಡ್ತೀನಿ. ನನ್ನ ಮದ್ವೆ ಮಾಡ್ಕೋತೀಯ? ತುಂಬಾ ಯೋಚ್ಸಿ ತಗೊಂಡಿರೋ ನಿರ್ಧಾರ. ನನ್ನಲ್ಲಿ ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಪ್ಲೀಸ್ ಆಗೋಲ್ಲ ಅಂತ ಮಾತ್ರಾ ಹೇಳ್ಬೇಡ." ಅವಳ ಕೈಗಳನ್ನು ಹಿಡಿದು ಬಿನ್ನವಿಸಿದ್ದ.

ಇದನ್ನು ಅವಳೆಂದೂ ನಿರೀಕ್ಷಿಸಿರಲಿಲ್ಲ. ಅವಳಿಗೊಂದು ರೀತಿ ಆಘಾತವಾಗಿತ್ತು. "ನವ್ಯಾ ಮಾತಾಡಮ್ಮ" ಎಂಬ ಅವನ ಕರೆಗೆ ಎಚ್ಚೆತ್ತವಳು ತನ್ನ ಕೈ ಅವನ ಹಿಡಿತದಲ್ಲಿರುವುದನ್ನು ನೋಡಿ ಕೆಂಡ ಸೋಕಿದವಳಂತೆ ತಟ್ಟನೆ ಕೈ ಹಿಂತೆಗೆದುಕೊಂಡವಳು, " ನೋಡಿ, ನನಗೆ ತಿಳಿದ ಮಟ್ಟಿಗೆ ನಿಮ್ಮ ಮನಸ್ಸಲ್ಲಿ ಈ ರೀತಿ ಭಾವನೆಗಳು ಹುಟ್ಟೋ ತರ ನಾನ್ಯಾವತ್ತೂ ನಡ್ಕೊಂಡಿಲ್ಲ. ಹಾಗೊಂದು ವೇಳೆ ತಿಳಿದೇ ನನ್ನಿಂದ ಏನಾದ್ರೂ ಅಂಥ ತಪ್ಪಾಗಿದ್ರೆ ದಯವಿಟ್ಟು ಕ್ಷಮಿಸಿ. ಆದರೆ ನಿಮ್ಮ ಪ್ರಸ್ತಾಪಕ್ಕೆ ನನ್ನ ನೇರವಾದ ನಿರಾಕರಣೆ ಇದೆ. ಇದು ಯಾವತ್ತಿಗೂ ಸಾಧ್ಯವಿಲ್ಲ. ಕ್ಷಮಿಸಿ"  ಅಲ್ಲಿಂದ ಎದ್ದು ಹೋಗಲು ತವಕಿಸಿದಳು.

ಆದರೆ ಅವನು ಶತಾಯಗತಾಯ ಅವಳನ್ನು ಒಪ್ಪಿಸಿಯೇ ತೀರಬೇಕೆಂದು ನಿರ್ಧರಿಸಿಬಿಟ್ಟಿದ್ದ. ಅವಳನ್ನು ತಡೆದು,

"ಯಾಕೆ ಸಾಧ್ಯವಿಲ್ಲ? ಬೇರೆ ಯಾರನ್ನಾದರೂ ಇಷ್ಟಪಟ್ಟಿದ್ದೀಯಾ?" ಕೇಳಿದ.

"ಆಗೋಲ್ಲ ಅಂದ್ರೆ ಆಗೋಲ್ಲ ಅಷ್ಟೇ. ನನ್ನ ಪಾಡಿಗೆ ನನ್ನ ಬಿಡಿ" ಕೈ ಮುಗಿದಳು.

"ಸಾಧ್ಯವಿಲ್ಲ ಅಂದ್ರೆ ಯಾಕೆ ಅಂತ ಅದಕ್ಕೊಂದು ಗಟ್ಟಿಯಾದ ಸ್ಪಷ್ಟ ಕಾರಣಕೊಡು. ಆಗ ನೋಡೋಣ." ಅವನ ಮಾತಿನ ವರಸೆಗೆ ಅವಳು ಗಲಿಬಿಲಿಗೊಂಡಳು. "ನನ್ನ ಮದ್ವೆಯಾಗೋಕೆ ಏನು ಸಮಸ್ಯೆ ಅಂತ ಹೇಳು ಸಾಕು. ಆಮೇಲೆ ನಾನು ಒತ್ತಾಯ ಮಾಡೋಲ್ಲ" ಮತ್ತೆ ಕೇಳಿದ್ದ.

ಅವನ ಪ್ರಶ್ನೆಗೆ ಹೇಗೆ ಉತ್ತರಿಸಬೇಕೋ ತಿಳಿಯದೇ ಅವಳು ನನ್ನತ್ತ ನೋಟಹರಿಸಿದಳು. ಅವಳ ಈಗಿನ ಮನೋವಿಪ್ಲವ ನನ್ನಷ್ಟು ಚೆನ್ನಾಗಿ ಬಲ್ಲವರಾರು? 

"ಅವಳು ಸಾಧ್ಯವಿಲ್ಲ ಅನ್ನೋಕೆ ಕಾರಣ ಕೊಡೋಕೆ ಮುಂಚೆ ನೀನು ಅವಳನ್ನೇ ಮದ್ವೆ ಆಗ್ಬೇಕಂತ ಹಠ ಹಿಡಿಯೋಕೆ ಕಾರಣ?" ಅವಳ ಪರವಾಗಿ ನಾನೇ ಕೇಳಿದ್ದೆ.

"ಗೆಳತಿಗೋಸ್ಕರ ಗೆಳೆಯನಿಗೇ ಪಾಟಿಸವಾಲು" ಅವನು ನಸುನಕ್ಕ. "ಕಾರಣ ಕೊಡಲಾರೆ ಸಮನ್ವಿತಾ. ಹಾಗೊಂದು ವೇಳೆ ಕೊಟ್ಟರೆ ಆ ನವಿರಾದ ಭಾವಕ್ಕೆ ಚ್ಯುತಿಯಾದೀತು. ಕೆಲವು ಭಾವಗಳೇ ಹಾಗೆ…. ವಿವರಣೆಗೆ ನಿಲುಕದವು..... ಪ್ರೀತಿಯೂ ಅಂಥದೇ ನವಿರಾದ ಎಳೆಗಳ ಕುಸುರಿ...... ಆ ಕುಸುರಿಯ ಕಸೂತಿ ಯಾವ ಘಳಿಗೆಯಲ್ಲಿ, ಯಾರ ಬದುಕಿನ ಪತ್ತಲದಲ್ಲಿ ಚಿತ್ತಾರ ಮೂಡಿಸುವುದೋ ಬಲ್ಲವರಾರು? ಅದೊಂದು ದಿವ್ಯ ಅನುಭೂತಿಯಷ್ಟೇ....... ಅದಕ್ಕೆ ಎಂದಿಗೂ ಕಾರಣ ಕೊಡಲಾಗದು. ನಿನ್ನ ಗೆಳತಿಯೊಂದಿಗಿನ ನನ್ನ ಪರಿಚಯ ಅತ್ಯಲ್ಪವಾದರೂ ಆ ಅಲ್ಪದಲ್ಲೇ ಅಗಾಧ ಪ್ರೇಮದ ಅಮೃತವಾಹಿನಿಯೊಂದು ಸುಪ್ತವಾಗಿ ಹರಿದಿರುವುದರ ಮರ್ಮ ನನಗೂ ತಿಳಿಯದು. ಆದರೆ ಈ ಸೆಲೆ ಎಂದೂ ಬರಡಾಗದು. ಮೇಲ್ಮುಖಕ್ಕೆ ಗೋಚರವಾಗದಿದ್ದರೂ ಅಂತರಾಳದಲ್ಲಿ ಗುಪ್ತಗಾಮಿನಿಯಾಗಿ ನನ್ನಿಡೀ ಜೀವಕ್ಕೆ ಚೈತನ್ಯ ತುಂಬುವುದು ಅವಳೇ ಎಂಬುದು ನನಗೀಗ ಸ್ಪಷ್ಟ." 

ಅವನ ಮಾತಿನ ಲಹರಿಗೆ ನಾನು ನಿರುತ್ತರಳಾದೆ. ಅವು ಕೇವಲ ಮೇಲ್ನೋಟದ ಮಾತುಗಳಲ್ಲ. ಬಹಳ ಚಿಂತಿಸಿ ಮಥಿಸಿದ ನಿರ್ಧಾರಗಳೆನಿಸಿತು. ಅದಲ್ಲದೇ ಕಿಶೋರನನ್ನು ನನ್ನಷ್ಟು ಬಲ್ಲವರಾರು? ಅವನೆಂದೂ ಸುಳ್ಳಾಡಲಾರ. ಆದರೆ ಅವನ ಅರಿವಿಗೆ ಬಾರದ ಅತೀತವೆಂಬ ಕಟುಸತ್ಯವೊಂದು ಅವಳ ಬೆನ್ನು ಹತ್ತಿದ ಬೇತಾಳದಂತೆ ಹೀಗೇಕೆ ಕಾಡುತ್ತಿದೆ? ಹೇಳಿ ಬಿಡಲೇ ಅವನಿಗೆಲ್ಲ?

"ಏನ್ರೀ? ತಲೆ ಕೆಟ್ಟಿದ್ಯಾ? ಏನು ಹೇಳ್ತಿದ್ದೀರಿ ಅನ್ನೋ ಪ್ರಜ್ಞೆ ಇದ್ಯಾ ನಿಮಗೆ?" ನನ್ನ  ಯೋಚನೆಗಳ ಸರಪಳಿ ತುಂಡರಿಸುವಂತೆ ಕೋಪದಲ್ಲಿ ಕೇಳಿದ್ದಳು ನವ್ಯಾ.

"ನನ್ಗೆ ಹುಚ್ಚೂ ಹಿಡ್ದಿಲ್ಲ, ತಲೆಯೂ ಕೆಟ್ಟಿಲ್ಲ. ಬಹಳ‌ ಯೋಚಿಸಿಯೇ ಹೇಳ್ತಿದ್ದೀನಿ. ನಾನು ನಿನ್ನ ತುಂಬಾ ಪ್ರೀತಿಸ್ತೀನಿ. ಯಾವುದೇ ಕಾರಣಕ್ಕೂ ನಿನ್ನ ಕಳ್ಕೊಳೋಕೆ ನಾನು ತಯಾರಿಲ್ಲ."

"ನನ್ನ ಬಗ್ಗೆ ಏನ್ರೀ ಗೊತ್ತು ನಿಮ್ಗೆ? ನಾನು ಯಾರು? ಹಿಂದೆ ಏನಾಗಿದ್ದೆ? ಏನು ಗೊತ್ತು? ಏನು ತಿಳಿದಿದೆ ನಿಮ್ಗೆ ನನ್ನ ಬಗ್ಗೆ?" ಕಂಪಿಸುವ ಧ್ವನಿಯಲ್ಲಿ ತಲೆ ಹಿಡಿದುಕೊಂಡು ಚೀರಿದ್ದಳು ಹುಚ್ಚಿಯಂತೆ. 

ನಾನು ಬೆಚ್ಚಿ ಅವಳನ್ನು ಸಮಾಧಾನಿಸುತ್ತಾ, "ಕಿಶೋರ್, ನಾನಾಗ್ಲೇ ಹೇಳಿದ್ದೆ. ಅವಳ ನಿರ್ಧಾರವೇ ಅಂತಿಮ. ನಾನು ಒತ್ತಾಯ ಮಾಡೋಲ್ಲ ಅಂತ. ಅವಳಿಗೆ ಇಷ್ಟ ಇಲ್ಲ ಅಂತ ಆಯ್ತಲ್ಲಾ. ಪ್ಲೀಸ್ ನೀನು ಹೊರಟ್ಬಿಡು." ಹೇಳಿದೆ.

ಅವನು ಹೊರಡಲಿಲ್ಲ. ಬದಲಾಗಿ ಅವಳೆದುರು ಕುಳಿತು ಮೆಲ್ಲಗೆ ಮುಂದಲೆ ಸವರಿ, "ನನ್ಗೆ ನಿನ್ನ ಬಗ್ಗೆ ಎಲ್ಲವೂ ಗೊತ್ತು. ನೀನು ಎಲ್ಲಿದ್ದೆ, ಇವ್ಳು ನಿನ್ನ ಎಲ್ಲಿಂದ ಕರ್ಕೊಂಡು ಬಂದ್ಲು, ನೀನ್ಯಾಕೆ ಇಷ್ಟು ಮೌನವಾಗಿರುತ್ತೀ, ಎಲ್ಲವೂ‌ ಗೊತ್ತು ನವ್ಯಾ...." 

ಮಗುವನ್ನು ಸಾಂತ್ವನಿಸಿ ರಮಿಸುವ ತಾಯಿಯಂತೆ ಅವನು ಹೇಳುತ್ತಿದ್ದರೆ ನನಗೆ ಪ್ರಪಂಚವೇ ನನ್ನ ಸುತ್ತ ತಿರುಗುತ್ತಿರುವಂತೆ ಭಾಸವಾಯಿತು. ಅವಳೋ ಬಿಕ್ಕುವುದನ್ನು ಮರೆತು ಎವೆಯಿಕ್ಕದೆ ಅವನ್ನನ್ನೇ ನೋಡುತ್ತಿದ್ದಳು....

ನಾನು ಗೊಂದಲದಲ್ಲಿ ಬಿದ್ದಿದ್ದೆ. ನಾನಂತೂ ಹೇಳಿಲ್ಲ. ಅವಳು ಹೇಳಿಕೊಳ್ಳುವ ಪ್ರಮೇಯವೇ ಇಲ್ಲ. ಮತ್ತೆ ಹೇಗೆ ತಿಳಿಯಿತು ಇವನಿಗೆ?

"ನಿನ್ಗೆ.... ನಿನ್ಗೆ ಹೇಗೆ ಗೊತ್ತಾಯ್ತು? ಯಾರು ಹೇಳಿದ್ರು?" ಗೊಂದಲ ಪರಿಹರಿಸಿಕೊಳ್ಳಲು ಕೇಳಿದ್ದೆ.

"ಯಾರೋ ಯಾಕೆ ಹೇಳ್ಬೇಕು? ನಾನೂ ಆಶ್ರಯದಲ್ಲಿ ಇದ್ದೀನಿ ಅನ್ನೋದನ್ನ ಮರ್ತುಬಿಟ್ಯಾ? ನವ್ಯಾ ಅಲ್ಲಿಗೆ ಬಂದ ದಿನದಿಂದಲೇ ನನಗೆಲ್ಲಾ ತಿಳಿದಿತ್ತು ಸಮಾ. ಸಾಮಾನ್ಯವಾಗಿ ಯಾರೊಂದಿಗೂ ಬೆರೆಯದ ನೀನು ವೈಯಕ್ತಿಕವಾಗಿ ಅಷ್ಟೊಂದು ಆಸಕ್ತಿವಹಿಸಿ ಬಿಡಿಸಿಕೊಂಡಾಕೆಯ ವ್ಯಕ್ತಿತ್ವ ಹೇಗಿರಬಹುದೆಂಬ ಅನ್ನೋ ಕುತೂಹಲ ಬಹಳವಿತ್ತು. ಆ ಕುತೂಹಲದಿಂದಲೇ ಅವಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ್ದು. ಅದ್ಯಾವಾಗ ಒಲುಮೆ ಒಡಮೂಡಿತೋ ತಿಳಿಯದು" ಸರಳವಾಗಿ ಹೇಳಿದ್ದ.

ಛೇ...ನನ್ನ ಬುದ್ಧಿಗಿಷ್ಟು! ಅವನು ನನ್ನಂತೆ ಆಶ್ರಯದ ಒಡನಾಡಿ ಎನ್ನುವುದೇ ಮರೆತೆ. ಅಂದರೆ..… ಇವನಿಗೆಲ್ಲಾ ತಿಳಿದಿದೆ.

"ಅವಳ ಬಗ್ಗೆ ಎಲ್ಲಾ ತಿಳಿದೂ....." ನಾನು ತಡವರಿಸಿದಾಗ,

"ಯಾಕೆ ನಿಲ್ಲಿಸ್ದೆ? ಮದ್ವೆಯಾಗುವ ನಿರ್ಧಾರ ಮಾಡಿದೀಯಾ ಅಂತ ತಾನೇ ನಿನ್ನ ಪ್ರಶ್ನೆ?" ಅವನೇ ಮಾತು ಪೂರ್ತಿ ಮಾಡಿದಾಗ ನಾನು

"ಹಾಗಲ್ವೋ. ಸಾಮಾನ್ಯ ಜನರ ಯೋಚನಾ ಮಟ್ಟದ ಆಧಾರದಲ್ಲಿ ನಾನು ಕೇಳಿದ್ದು. ಅದೆಷ್ಟೇ ಮುಂದುವರೆದಿರುವ ಪ್ರಗತಿಪರರಾದರೂ ಓರ್ವ ವೇಶ್ಯೆಯ ಸಂಗಾತಿಯಾಗುವುದೆಂದರೇ ಈ ಸಮಾಜ ಅವನನ್ನು ನೋಡುವ ರೀತಿಯೇ ಬೇರೆ ಕಿಶೋರ್. ನೀನೇ ಯೋಚಿಸಿ ನೋಡು" ಆಲೋಚಿಸಿ ನುಡಿದಿದ್ದೆ.

ಅಷ್ಟರವರೆಗೆ ಸುಮ್ಮನೆ ಅಳುತ್ತಿದ್ದ ನವ್ಯಾ ಕೂಡಾ "ಹೌದು ಕಿಶೋರ್, ವೇದಿಕೆ ಹತ್ತಿ ಸುಧಾರಣೆಯ ದೊಡ್ಡ ಮಾತುಗಳನ್ನಾಡುವುದು ಬೇರೆ. ಅಂತಹವರನ್ನು ಈ ಸಮಾಜ ಪರಿವರ್ತನೆಯ ಹರಿಕಾರರೆಂದು ಗೌರವಿಸುತ್ತದೆ. ಆದರೆ ವಿಪರ್ಯಾಸವೆಂದರೆ ಆ ಸುಧಾರಣೆಯನ್ನು ನಿಜ ಜೀವನದಲ್ಲಿ ಮಾಡಿತೋರಿದರೆ ಅವರನ್ನು ಇದೇ ಸಮಾಜ ಬಹಿಷ್ಕರಿಸುತ್ತದೆ. ಇವರು ಸಮುದಾಯದಲ್ಲಿ ಬದುಕಲು ಯೋಗ್ಯತೆ ಇಲ್ಲದವರು ಎಂದು ಜರಿಯುತ್ತದೆ. ಈ ಆದರ್ಶಗಳೆಲ್ಲಾ ಮಾತಿನಲ್ಲಷ್ಟೇ ಚೆಂದ. ಆಚರಣೆಗೆ ತಂದರೆ ನಿಮ್ಮೊಂದಿಗೆ ನಿಮ್ಮ ಇಡೀ ಕುಟುಂಬ ಜನರ ಬಾಯಿಗೆ ಸಿಕ್ಕು ಮೂರಾಬಟ್ಟೆಯಾಗುತ್ತೆ. ದಯವಿಟ್ಟು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ" ಅವಳ ಮಾತಿನಲ್ಲಿ ವಿನಂತಿಯಿತ್ತು.

ಅವನು ಕೆಲಹೊತ್ತು ಮಾತಾಡಲಿಲ್ಲ. ನಂತರ ನಮ್ಮೆಡೆ ತಿರುಗಿ ಗಂಭೀರವಾಗಿ, "ಸಮಾಜ? ಯಾವುದು ಸಮಾಜ? ಎಲ್ಲಿದೆ ಸಮಾಜ? ಅಂಥ ಮಾದರಿ ಸಮಾಜವೊಂದು ಇದ್ದಿದ್ರೆ ನಿನ್ನದೇನೂ ತಪ್ಪೇ ಇಲ್ಲದಿದ್ರೂ ಹೀಗೆ ತಲೆ ತಗ್ಗಿಸಿ ಅಳೋ ಪ್ರಮೇಯ ಬರ್ತಿರ್ಲಿಲ್ಲ ನವ್ಯಾ. ಅಷ್ಟು ನೈತಿಕ ಮೌಲ್ಯಗಳು ಈ ದರಿದ್ರ ಸಮಾಜದಲ್ಲಿ ಇದ್ದಿದ್ರೆ ಯಾವ ಹೆಣ್ಣ್ಮಗಳೂ ವೇಶ್ಯೆಯ ಹಣೆಪಟ್ಟಿ ಹೊತ್ಕೋತಿರ್ಲಿಲ್ಲ ಅಲ್ವಾ?ನಾವು ಹೇಗಿದ್ರೂ ಜನ ನೂರು ಕೊಂಕು ಮಾತಾಡ್ತಾರೆ. 'ಕುಛ್ ತೋ ಲೋಗ್ ಕಹೇಂಗೇ, ಲೋಗೋಂಕಾ ಕಾಮ್ ಹೆ ಕೆಹನಾ' ಅಂತಾರಲ್ಲ ಹಾಗೆ. ತನ್ನ ಅಗತ್ಯಕ್ಕೆ ತಕ್ಕಂತೆ ನೀತಿ ನಿಯಮಗಳನ್ನು ಬೇಕಾಬಿಟ್ಟಿ ಬದ್ಲಾಯಿಸೋ ಈ ಗೋಸುಂಬೆ ಹೊಣೆಗೇಡಿ ಸಮಾಜಕ್ಕೆ ನಾನ್ಯಾವತ್ತೂ ಬೆಲೆ ಕೊಟ್ಟಿಲ್ಲ, ಮುಂದೆ ಕೊಡೋದು ಇಲ್ಲ. ನನಗೆ ಬದುಕಿನ ಮೌಲ್ಯಗಳು ಮುಖ್ಯವೇ ಹೊರತು ಸಮುದಾಯದ ಕಟ್ಟುಪಾಡುಗಳಲ್ಲ. ಆ ಮೌಲ್ಯಗಳು ನಿನ್ನಲ್ಲಿವೆ ನವ್ಯಾ. ರಕ್ತ ಹೀರುವ ಸಮಾಜದ ಕ್ರೌರ್ಯದ ನಡುವೆ ನಲುಗಿದರೂ ಅದನ್ನು ಮೀರುವ ಜೀವನಪ್ರೀತಿ ನಿನ್ನಲ್ಲಿದೆ. ಅದೇ ನನಗಿಷ್ಟವಾಗಿದ್ದು. ನನಗೆ ನಿನ್ನ ಒಪ್ಪಿಗೆ ಬೇಕೇ ಹೊರತು ಸಮಾಜ ನಿನಗೆ ಕೊಡುವ ಕ್ಯಾರೆಕ್ಟರ್ ಸರ್ಟಿಫಿಕೇಟ್ ಅಗತ್ಯವಿಲ್ಲ" ಅವನು ನಿರ್ಧಾರದಲ್ಲಿ ಕತ್ತಿಯಲುಗಿನ ಹರಿತವಿತ್ತು.

ನವ್ಯಾ ಗೊಂದಲದಲ್ಲಿದ್ದಳು. ಆದರೆ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನವ್ಯಾಳ ಬರಡು ಬಾಳಿನಲ್ಲಿ ಪ್ರೀತಿಯ ಸೆಲೆಯೊಡೆದಿದೆ. ಅದೂ ಕಿಶೋರನಂತ ಸಂಗಾತಿ….! ಅದಕ್ಕೂ ಮುಖ್ಯವಾಗಿ ಅವನಿಗೆ ಅವಳ ಹಿನ್ನೆಲೆ ತಿಳಿದಿದೆ ಹಾಗೂ ಅದರ ಬಗ್ಗೆ ಅವನಿಗೆ ತಿರಸ್ಕಾರವಿಲ್ಲ...... ನವ್ಯಾಳಿಗೂ ಆಂತರ್ಯದಲ್ಲಿ ಅವನ ಮೇಲೆ ಒಲವಿದೆ, ಅವನ ಮತ್ತವನ ಕುಟುಂಬ ತನ್ನಿಂದಾಗಿ ತಲೆ ತಗ್ಗಿಸಬಾರದೆಂದು ಹೀಗೆಲ್ಲಾ ಮಾಡುತ್ತಿದ್ದಾಳೆಂಬುದು ನನಗೆ ಸ್ಪಷ್ಟವಾಗತೊಡಗಿತ್ತು.

ನಾನಾಗಲೇ ನಿರ್ಧರಿಸಿಬಿಟ್ಟಿದ್ದೆ. ಅದೇನೇ ಆಗಲಿ ನವ್ಯಾಳನ್ನು ಒಪ್ಪಿಸಿಯೇ ತೀರುತ್ತೇನೆ, ಶತಾಯಗತಾಯ ಈ ಮದುವೆ ನಡೆಯಲೇ ಬೇಕೆಂದು.

ಅವಳು ಬಡಪೆಟ್ಟಿಗೆ ಒಪ್ಪಲಿಲ್ಲ. ಆದರೆ ಕಿಶೋರನೊಂದಿಗೆ ನಾನೂ ಕೈಜೋಡಿಸಿದ್ದೆನಲ್ಲ?  ಕಲಿತ ಬುದ್ಧಿಯನ್ನಲ್ಲಾ ಉಪಯೋಗಿಸಿ ಕೊನೆಗೂ ಅವಳ ಮನವೊಲಿಸಿದ್ದೆವು. ನವ್ಯಾ ಕೊನೆಯವರೆಗೂ ಮನೆಯವರಿಗೆ ಸತ್ಯ ವಿಷಯ ಹೇಳಿ ಎಂದು ಹಠ ಹಿಡಿದರೂ ಕೊನೆಗೆ ನಮ್ಮಿಬ್ಬರ ವಿನಂತಿಗೆ ತಲೆಬಾಗಿದ್ದಳು. ಅವನು ಮನೆಯವರಿಗೆ ಮದುವೆಗೆ ಮೊದಲೇ ಎಲ್ಲಾ ವಿಷಯ ಹೇಳಲಿ ಎಂದು ನಾನೂ ಬಯಸಿದ್ದೆನಾದರೂ ಅದ್ಯಾಕೋ ಪರಿಸ್ಥಿತಿ ನಮ್ಮ ಕೈ ಹಿಡಿಯಲಿಲ್ಲ. ಅವನು ಮನೆಯವರಿಗೆ ಅರ್ಧಸತ್ಯ ಮಾತ್ರ ಹೇಳಿ ಉಳಿದದ್ದು ಬಚ್ಚಿಟ್ಟ. ಮದುವೆಯಾಗಿ ಆ ಗೂಡು ಸೇರಿದ ನವ್ಯಾ ಆ ನಂದಗೋಕುಲದ ಅಕ್ಕರೆಯ ಸದಸ್ಯೆಯಾದಳು.

ಹೀಗೆ ಗಾಢಾಂಧಕಾರ ಕೂಪದಿಂದ ಹೊರಬಿದ್ದ ಮಸಣದ ಹೂವೊಂದು ನಂದಗೋಕುಲದ ಬೃಂದಾವನವನ್ನು ಸೇರಿತ್ತು. ಅಂದು ನನಗೆ ನವ್ಯಾ ತನ್ನ ಮಾ ಬಾಬಾನ ಮಡಿಲು ಸೇರಿದಷ್ಟೇ ನೆಮ್ಮದಿಯಾಗಿತ್ತು........

ಆದರೆ ಮುಚ್ಚಿಟ್ಟ ಸತ್ಯ ಅವಳನ್ನು ಈ ಮಟ್ಟಿಗೆ ದಹಿಸಬಹುದೆಂದು, ಅದೇ ಕೊರಗನ್ನು ಹಚ್ಚಿಕೊಂಡು ಹೀಗವಳು ನೆಮ್ಮದಿ ಕೆಡಿಸಿಕೊಳ್ಳಬಹುದೆಂದು ನಾನಾಗಲೀ, ಕಿಶೋರನಾಗಲೀ ಊಹಿಸಿರಲಿಲ್ಲ.

ಈ ಸಮಸ್ಯೆ ಹರಿಯುವ ಬಗೆ ಹೇಗೆ? ನವ್ಯಾ ಹಠ ಹಿಡಿದಂತೆ ಮದುವೆಗೆ ಮುನ್ನವೇ ಹೇಳಿದ್ದರೆ ಇಂದು ಹೀಗೆ ಪರದಾಡಬೇಕಿರಲಿಲ್ಲ. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಈಗ ಮನೆಯವರೆಲ್ಲಾ ಅವಳನ್ನು ಪ್ರೀತ್ಯಾದರಗಳಿಂದ ಮೀಯಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ಸತ್ಯ ತಿಳಿದರೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಅದನ್ನು ಅರಗಿಸಿಕೊಳ್ಳುವುದು ಸುಲಭವೇ? ಅವರಿಗೆ ಆಘಾತವಾಗಬಹುದು. ಒಂದು ವೇಳೆ....... ಅವರು ನವ್ಯಾಳನ್ನು ತಿರಸ್ಕರಿಸಿದರೇ.......?! ಅದನ್ನು ನೆನೆಸಲೇ ಭಯವಾಗುತ್ತಿದೆ..... ನವ್ಯಾ ಇದನ್ನು ಹೇಗೆ ಸ್ವೀಕರಿಸಬಹುದು?

ಸಮನ್ವಿತಾಳ ಯೋಚನೆ ಅದರ ಸುತ್ತಲೇ ಗಿರಕಿಹೊಡೆಯುತಿತ್ತು.

ಇದೇ ಯೋಚನೆಯಲ್ಲಿ ಎಷ್ಟೋ ಹೊತ್ತು ಮುಳುಗಿದ್ದವಳನ್ನು ಫೋನ್ ಕರೆ ವಾಸ್ತವಕ್ಕೆ ಕರೆತಂದಿತು. ಕಿಶೋರ್, ನವ್ಯಾ ಹೋಗಿ ಬಹಳ ಹೊತ್ತಾಗಿತ್ತು. ಕತ್ತಲಾವರಿಸಿ ಹೋಟೆಲ್ಲಿನಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಎಮರ್ಜೆನ್ಸಿ ಕೇಸ್ ಇದೆ ಎಂಬ ಮಾಹಿತಿ ಸಿಕ್ಕಾಗ ಎದ್ದು ಆಸ್ಪತ್ರೆಯತ್ತ ಹೊರಟ ಸಮನ್ವಿತಾಳ ತಲೆ ತುಂಬಾ ನವ್ಯಾಳೇ ಇದ್ದಳು.

       ******** ಮುಂದುವರೆಯುತ್ತದೆ**********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ