ಬಂಧುತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಂಧುತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜೂನ್ 21, 2020

ನೀ ಇಲ್ಲವಾದರೆ ನಾ....


'ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ       ನಿನ್ನ ಜೊತೆ ಇಲ್ಲದೆ ಮಾತಿಲ್ಲದೆ ಮನ ವಿಭ್ರಾಂತ

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ
ಚಿನ್ನ ನೀನಿಲ್ಲದೆ ದಿಮ್ಮೆನ್ನುತಿದೆ ರಮ್ಯೋದ್ಯಾನ......'

ಪ್ರತೀ ಸಂಜೆಯೂ ಇದೇ ಸಂಧ್ಯಾರಾಗ ಹೃದಯದ್ದು.... ಇಳಿಸಂಜೆಯ ಏಕಾಂತದಲ್ಲಿ, ನಟ್ಟಿರುಳ ನೀರವತೆಯಲ್ಲಿ ಬಿಟ್ಟೂ ಬಿಡದೆ ದಾಳಿಯಿಡುವ ನೆನಪುಗಳ ಮೆರವಣಿಗೆ ಹಿತವೇ ನನಗೆ. ಕಾಡುವ ನಿನ್ನ ಅನುಪಸ್ಥಿತಿಯಲ್ಲಿ ನನ್ನ ಜೀವಕ್ಕೆ ಚೈತನ್ಯದ ಒರತೆ ಆ ನೆನಪುಗಳೇ ತಾನೇ?

ಈ ಘಳಿಗೆ ಏನು ಮಾಡುತ್ತಿರುವೆ ಹುಡುಗಾ ನೀನು.....?
ಕೊರೆವ ಚಳಿಯಲ್ಲೂ ಕೊರಡಿನಂತೆ ನಿಂತು ಸರಹದ್ದನ್ನು ಕಾಯುತ್ತಿರುವೆಯಾ? ಇಲ್ಲಾ ಶತ್ರುಗಳ ದಾಳಿಗೆ ಎದೆಯೊಡ್ಡಿ ಕಾದಾಡುತ್ತಿರುವೆಯಾ? ಇಲ್ಲವೇ ಕೊಂಚ ವಿರಮಿಸಿಕೊಳ್ಳುತ್ತಾ ನಮ್ಮನ್ನು ನೆನೆಯುತ್ತಿರುವೆಯಾ? ವಾರಗಳೇ ಉರುಳಿವೆ ನಿನ್ನ ಧ್ವನಿ ಕೇಳದೇ.... ತಿಂಗಳುಗಳೇ ಕಳೆದಿವೆ ನಿನ್ನ ನಗುಮೊಗ ಕಾಣದೇ. ಕ್ಷೇಮವಾಗಿರುವೆಯಲ್ಲವೇ ನೀನು? ನೀನು ಸುರಕ್ಷಿತವಾಗಿರುವೆ ಎಂಬ ನಂಬಿಕೆಯ ಭರವಸೆಯಲ್ಲಿಯೇ ನಮ್ಮ ಬದುಕು......

ಅಬ್ಬಾ...... ಅದೆಷ್ಟು ಬದಲಾಗಿರುವೆ ನಾನು. ಇದು ನಾನೇ ಹೌದೇ ಅನ್ನುವ ಅಚ್ಚರಿ ನನಗೇ ಉಂಟಾಗುತ್ತದೆ ಒಮ್ಮೊಮ್ಮೆ. ಒಂದು ಕಾಲದಲ್ಲಿ ಹೇಗಿತ್ತು ನನ್ನ ಜೀವನಶೈಲಿ.  ಸ್ಥಿತಿವಂತ ಅಪ್ಪ ಅಮ್ಮನ ಏಕೈಕ ಸಂತಾನ ನಾನು. ಅತೀವ ಮುದ್ದಿನಿಂದ ಬೆಳೆದ ಕೊಂಚ ಹಠಮಾರಿ ಹೆಣ್ಣು. ಮನೆಯ ಕೆಲಸ, ಬೊಗಸೆಗಳೆಲ್ಲ ಎಂದಿಗೂ ನನ್ನ ಆದ್ಯತೆಯಾಗಿರಲಿಲ್ಲ. ಮೆಲುಮಾತು, ನಯ ನಾಜೂಕುಗಳಿಗೂ ನನಗೂ ದೂರದೂರದವರೆಗೂ ಯಾವುದೇ ಸಂಬಂಧವಿರಲಿಲ್ಲ. ಅಪ್ಪ ಅಮ್ಮನನ್ನು ಬಿಟ್ಟರೆ ಗೆಳೆಯರು, ನಗರ ಸಂಚಾರ, ಮೋಜು ಮಸ್ತಿ ಇಷ್ಟೇ ಜೀವನ ಎಂದುಕೊಂಡಾಕೆ. ಮೂಗಿನ ತುದಿಯಲ್ಲೇ ಕೋಪ, ಜವಾಬ್ದಾರಿಗಳಿಂದ ದೂರ ಓಡುವ ಪರಮ ಬೇಜವಾಬ್ದಾರಿಯ ಹೆಣ್ಣು. ಅಪ್ಪ ಅಮ್ಮನ ಚೆಲುವನ್ನು ಧಾರಾಳವಾಗಿ ಪಡೆದಿದ್ದ ನನಗೆ ನನ್ನ ಸೌಂದರ್ಯದ ಬಗ್ಗೆ ಎಲ್ಲೋ ಸ್ವಲ್ಪ ಅಹಂಕಾರವೂ ಇತ್ತು.

ಹಾಗಂತ ನಾನೇನು ದಾರಿತಪ್ಪಿದ ಮಗಳಲ್ಲ. ಅಪ್ಪ ಅಮ್ಮ ನೀಡಿದ ಸ್ವಾತಂತ್ರ್ಯವನ್ನು ಎಂದೂ ದುರುಪಯೋಗ ಪಡಿಸಿಕೊಂಡವಳಲ್ಲ. ಒಂದು ಮಿತಿಯನ್ನು ನನಗೆ ನಾನೇ ವಿಧಿಸಿಕೊಂಡು ಆ ಮಿತಿಯೊಳಗೆ ಸ್ವಚ್ಛಂದವಾಗಿ ಬದುಕುತ್ತಿದ್ದವಳು ನಾನು. ಅರಿಯದ ನಾಳೆಗಳ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲದೇ ಈ ಕ್ಷಣದ ಬದುಕನ್ನು ಈಗಲೇ ಉತ್ಕಟವಾಗಿ ಜೀವಿಸಿಬಿಡಬೇಕು ಎಂಬ ಬಯಕೆಯ ಹುಡುಗಿ. ಪರಸ್ಪರ ಸಾಮೀಪ್ಯವಿಲ್ಲದ, ಕಾಯುವಿಕೆಯ ಭಾವದಲ್ಲೇ ಒಲವ ಸುಧೆ ಹರಿಸುವಂತಹ ಪ್ರೀತಿ ಇರುವುದೇ ಸುಳ್ಳು ಎನ್ನುತ್ತಿದ್ದೆ ನಾನು........ ನೀನು ನನ್ನ ಬದುಕನ್ನು ಪ್ರವೇಶಿಸುವವರೆಗೆ........

ನೀ ನನ್ನ ನೋಡಲು ಬಂದ ದಿನ ನನ್ನ ನೆನಪಿನಾಳದಲ್ಲಿ ಇಂದಿಗೂ ಹಚ್ಚಹಸಿರಾಗಿದೆ. ನನಗಂತೂ ಮೊದಲ ನೋಟಕ್ಕೆ ಇಷ್ಟವಾಗಿದ್ದೆ ನೀನು. ಯಾರಾದರೂ ಇಷ್ಟ ಪಡುವಂತಹ ವ್ಯಕ್ತಿತ್ವ ನಿನ್ನದು. ಆದರೆ ಆ ದಿನಗಳಲ್ಲಿ ವ್ಯಕ್ತಿತ್ವ, ಗುಣ, ನಡವಳಿಕೆಯಂತಹ ಗಂಭೀರ ವಿಚಾರಗಳು ನನ್ನ ತಲೆಗೇ ಹೋಗುತ್ತಲೇ ಇರಲಿಲ್ಲ ಬಿಡು. ನನಗೆ ನಿನ್ನ ಹ್ಯಾಂಡ್ಸಮ್ ಪರ್ಸನಾಲಿಟಿ ಹಿಡಿಸಿತ್ತು. ಜೊತೆಗೆ ನೀನು ಆರ್ಮಿ ಮ್ಯಾನ್ ಎಂಬುದೂ ಹೆಮ್ಮೆಯ ವಿಷಯವಾಗಿತ್ತು ನನಗೆ. ಅದಷ್ಟೇ ಸಾಕಿತ್ತು ನನಗೆ ನಿನ್ನ ಒಪ್ಪಲು. ಆದರೆ ಯೋಧನೊಬ್ಬನ ಮಡದಿಯಾಗುವವಳ ಮಾನಸಿಕವಾಗಿ ಅದೆಷ್ಟು ಸದೃಢಳಾಗಿರಬೇಕು, ಅವಳ ಭಾವಪ್ರಪಂಚ ಹೇಗಿರುತ್ತದೆ ಎಂಬ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ ನಾನು. ನೀನೂ ನನ್ನನ್ನು ಒಪ್ಪಿದಾಗ ನನ್ನ ರೂಪ ಲಾವಣ್ಯದ ಬಗ್ಗೆ ಇನ್ನಷ್ಟು ಹಮ್ಮುಂಟಾಗಿತ್ತು ನನಗೆ.

ಅಪ್ಪ ಹಾಗೆ ಯಾರನ್ನೂ ನಂಬುವವರಲ್ಲ. ಅದರಲ್ಲೂ ಅವರ ಮುದ್ದಿನ ಅರಗಿಣಿಯಾದ ನನ್ನ ವಿಷಯದಲ್ಲಂತೂ ಅತೀವ ಕಾಳಜಿ ಅವರದು. ನನ್ನ ಮದುವೆಗಾಗಿ ಬಂದ ಪ್ರಸ್ತಾಪಗಳಲ್ಲಿ ಅವರು ಅಳಿಯನನ್ನು ಹುಡುಕುತ್ತಿರಲಿಲ್ಲ. ಬದಲಾಗಿ ಮಗನನ್ನು ಅರಸುತ್ತಿದ್ದರು. ಹಾಗಾಗಿಯೇ ಎಷ್ಟೋ ಪ್ರಸ್ತಾಪಗಳು ತಿರಸ್ಕೃತಗೊಂಡಿದ್ದವು. ಅಂತಹ ಅಪ್ಪ ಮದುವೆ ದಿನ ನನ್ನ ಕೈಯನ್ನು ನಿನ್ನ ಹಸ್ತದೊಳಗಿರಿಸಿ,
"ಒಬ್ಬಳೇ ಮಗಳು.... ನಮ್ಮ ಕಣ್ಬೆಳಕು. ಬಹಳ ಮುದ್ದಿನಿಂದ ಬೆಳೆದವಳು. ಹುಡುಗು ಬುದ್ದಿ. ಬದುಕಿನ ಬಗ್ಗೆ ಗಂಭೀರತೆ ಕೊಂಚ ಕಡಿಮೆ. ಅವಳ ಬದುಕನ್ನು ನಮ್ಮಷ್ಟೇ ಕಾಳಜಿ ಮಾಡುವ ಕೈಗಳಲ್ಲಿ ಇರಿಸಿರುವೆ ಎಂಬ ನಿಶ್ಚಿಂತೆ ನನಗಿದೆ" ಎಂದು ಹೇಳಿದ್ದು ನನಗಿನ್ನೂ ನೆನಪಿದೆ. ಆ ಕ್ಷಣ ನಿನ್ನ ಬಗೆಗೊಂದು ಅಚ್ಚರಿ ಭರಿತ ಹೆಮ್ಮೆ ಮೂಡಿತ್ತು. ನೀನಾದರೂ ಅಷ್ಟೇ. ಅಪ್ಪನ ಮಾತುಗಳನ್ನು ಎಂದೂ ಸುಳ್ಳಾಗಿಸಲಿಲ್ಲ.

ಮದುವೆಯವರೆಗೆ ನನ್ನದೇ ಲೋಕದಲ್ಲಿ ವಿಹರಿಸುತ್ತಿದ್ದವಳಿಗೆ ಮದುವೆಯ ನಂತರದ ಬದಲಾವಣೆಗೆ ಒಗ್ಗಿಕೊಳ್ಳಲು ಉಸಿರುಗಟ್ಟಿದಂತಾಗಿದ್ದು ಸುಳ್ಳಲ್ಲ ಹುಡುಗಾ. ನಿನ್ನ ಕುಟುಂಬದವರೆಲ್ಲರೂ ಸಂಸ್ಕಾರವಂತರೇ. ಎಂದೂ ನನಗೆ ನೋವು ಕೊಟ್ಟವರಲ್ಲ. ಆದರೆ ಅಪ್ಪ ಅಮ್ಮನ ಮುಚ್ಚಟೆಯಲ್ಲಿ ಬೆಳೆದ ನನ್ನನ್ನು ಒಮ್ಮೆಲೆ ಬದಲಾದ ಬದುಕು, ಹೆಗಲೇರಿದ ಹೊಸ ಜವಾಬ್ದಾರಿಗಳು ದಿಗಿಲಿಗೆ ನೂಕಿತ್ತು. ನಿನ್ನ ಮಡದಿಯಾಗುವ ಬಗ್ಗೆ ಮಾತ್ರ ಯೋಚಿಸಿದ್ದ ನನಗೆ ನಿನ್ನ ಹೆತ್ತವರಿಗೆ ಸೊಸೆಯಾಗಿ, ನಿನ್ನ ತಮ್ಮನಿಗೆ ಅತ್ತಿಗೆಯಾಗಿ ಜವಾಬ್ದಾರಿ ನಿಭಾಯಿಸುವುದು ಕ್ಲಿಷ್ಟಕರವಾಗಿತ್ತು. ಬಹುಶಃ ಮದುವೆಯ ಆರಂಭಿಕ ಹಂತದಲ್ಲಿ ಪ್ರತೀ ಹೆಣ್ಣೂ ಇಂತಹದೊಂದು ಸವಾಲಿಗೆ ಮುಖಾಮುಖಿಯಾಗಿಯೇ ಇರುತ್ತಾಳೆ. ಮದುವೆ ಎಂಬ ಮೂರುಗಂಟಿನ ನಂಟು ಅವಳ ಬದುಕಿನಲ್ಲಿ ತರುವ ಬದಲಾವಣೆಗಳನ್ನು ಅರಗಿಸಿಕೊಂಡು ನಿಭಾಯಿಸಲು ಅವಳಿಗೆ ಅಗತ್ಯವಾಗಿ ಬೇಕಾಗುವುದು ಒಂದಿಷ್ಟು ಸಮಯ ಹಾಗೂ ಕೈ ಹಿಡಿದವನ ಭರವಸೆಯ ಸಹಕಾರ....... ಅದೇ ನನ್ನ ಪಾಲಿಗೆ ಇಲ್ಲವಾಗಿದ್ದು. ಮದುವೆಯಾಗಿ ಸ್ವಲ್ಪ ಸಮಯಕ್ಕೇ ರಜೆ ಮುಗಿದು ನೀನು ಕರ್ತವ್ಯಕ್ಕೆ ವಾಪಾಸಾಗಿದ್ದೆ. ಆ ನಿನ್ನ ಅನುಪಸ್ಥಿತಿ ನನ್ನನ್ನು ಅತಿಯಾಗಿ ಕಾಡಿತ್ತು. ಬಹುಶಃ ನೀನು ಸದಾಕಾಲ ನನ್ನ ಜೊತೆಗಿದ್ದರೆ ನಿನ್ನ ಬೆಂಬಲದಿಂದ ಎಲ್ಲವನ್ನೂ ಕಷ್ಟಪಡದೇ, ಗೊಂದಲಗಳಿಲ್ಲದೇ ನಿಭಾಯಿಸುತ್ತಿದ್ದೆನೇನೋ.... ಆದರೆ ನೀನು ದೇಶಕ್ಕಾಗಿ ನಿನ್ನನ್ನು ಮುಡಿಪಿಟ್ಟವನು. ಸದಾ ನನ್ನೊಂದಿಗಿರಲು ನಿನಗಾದರೂ ಎಲ್ಲಿಂದ ಸಾಧ್ಯವಿತ್ತು?
ವೈವಾಹಿಕ ಬದುಕಿನ ಸವಿಗನಸುಗಳನ್ನು ಹೆಣೆಯುವ ಆ ಸಮಯದಲ್ಲಿ ನೀನಿರದೇ ಹೋದುದು ನನ್ನನ್ನು ಕಲ್ಪನಾ ಪ್ರಪಂಚದಿಂದ ವಾಸ್ತವಕ್ಕೆ ದೂಕಿತ್ತು. ಯಾವ ಸಂಬಂಧವನ್ನು ನಿಭಾಯಿಸಲಿ, ಹೇಗೆ ನಿಭಾಯಿಸಲಿ ಎಂಬ ಗೊಂದಲ...... ಯಾಕೆ ಬೇಕಿತ್ತು ಈ ಮದುವೆಯೆಂಬ ಜಂಜಾಟ ಎನ್ನುವ ತನಕವೂ ಯೋಚನೆ ಬಂದಿದ್ದಿದೆ.

ಆದರೆ ಒತ್ತಡಗಳ ಸಂಘರ್ಷದಲ್ಲಿ ಹೈರಾಣಾಗಿದ್ದ ನನ್ನ ಕೈ ಹಿಡಿದು ನಡೆಸಿದ್ದು ಮಾತ್ರ.......  ನೀನೇ......

ಮೇರುವಿನೆತ್ತರದ ವ್ಯಕ್ತಿತ್ವದವನು ನೀನು. ನಿನ್ನ ಯೋಚನೆ, ಚಿಂತನೆಗಳೆಲ್ಲ ಮೇಲ್ಮಟ್ಟದ್ದು. ನಿನ್ನ ಪ್ರತೀ ಮಾತಿಗೂ ಒಂದು ತೂಕವಿರುತ್ತದೆ. ಇಂತಹ ನೀನು ಅದ್ಯಾಕೆ ನನ್ನನ್ನು ಇಷ್ಟಪಟ್ಟು ಒಪ್ಪಿದೆಯೋ ಇಂದಿಗೂ ಅರ್ಥವಾಗದ ಚಿದಂಬರ ರಹಸ್ಯ ನನ್ನ ಪಾಲಿಗೆ. ಎಷ್ಟು ಬಾರಿ ನಿನ್ನಲ್ಲಿ ಈ ಪ್ರಶ್ನೆ ಕೇಳಿದ್ದೇನೆಯೋ ಲೆಕ್ಕವಿಲ್ಲ. 'ನೋಡಿದ ಕೂಡಲೇ ಮನಸಿಗೆ ಬಂದವಳು, ನನ್ನ ಹೃದಯದ ಮಿಡಿತವಾದವಳು, ಆತ್ಮಸಂಗಾತಿ ಎನಿಸಿದವಳು ನೀನೊಬ್ಬಳೇ ಕಣೇ ಹುಡುಗಿ' ಎನ್ನುವೆ ಪ್ರತೀ ಬಾರಿ....

ಅದೇನೇ ಆದರೂ ನನ್ನ ಪಾಲಿಗೆ ನೀನೆಂದರೆ ನಾನು.... ನಾನು ನನಗೆಷ್ಟು ಆಪ್ತಳೋ ಅಷ್ಟೇ ಆಪ್ತ ನನಗೆ ನೀನು.  ದೂರವಿದ್ದೂ ಮನಕ್ಕೆ ಅತೀ ಸಮೀಪವಾದವನು, ಆಗೀಗ ಮಾಡುವ ಕರೆಗಳ ಮೂಲಕವೇ ನಮ್ಮ ನಡುವಿನ ಭೌತಿಕ ಅಂತರಕ್ಕೆ ಭಾವಗಳ ಸೇತುವೆ ಕಟ್ಟಿದವನು, ಒಲವ ಮಳೆ ಸುರಿಸಿ ಒಲುಮೆಯಲಿ ತೋಯಿಸಿದವನು.......

ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲಾರೆ ಎಂಬ ನನ್ನ ಭಯವನ್ನು ಹೋಗಲಾಡಿಸಿ ನನ್ನಲ್ಲಿ ಭರವಸೆ ತುಂಬಿದವನು ನೀನು. ಅದೆಷ್ಟು ಸಹನೆ ನಿನಗೆ? ಭೂಮಿ ತೂಕದ ಸಹನೆ ಎಂಬ ಪದಕ್ಕೆ ಅನ್ವರ್ಥ ನೀನು. ನಾನೆಷ್ಟೇ ಕಿರುಚಿ, ಸಿಟ್ಟು ತೋರಿದರೂ ಅದೇ ನಿಷ್ಕಲ್ಮಶ ನಗುವಿನೊಂದಿಗೆ ಅಮ್ಮನಂತೆ ನನ್ನ ಮೇಲೆ ಮಮತೆಯ ಹೊಳೆ ಹರಿಸಿದವನು, ಅಪ್ಪನಂತೆ ನನ್ನ ಕಾಳಜಿ ಮಾಡಿದವನು, ಗೆಳೆಯನಂತೆ ನನಗೆ ಬೆನ್ನೆಲುಬಾಗಿ ನಿಂತವನು, ಗುರುವಿನಂತೆ ತಿದ್ದಿದವನು...... ಇನಿಯನಾಗಿ ಒಲವ ಮಳೆ ಸುರಿಸುವುದರಲ್ಲಿಯಂತೂ ನಿನಗೆ ಸಾಟಿ ಯಾರಿಲ್ಲ ಬಿಡು..... ಆ ನಿನ್ನ ಕಾಡಿಸುವಿಕೆಯ ಚೇಷ್ಟೆಗಳು ನೆನೆದಾಗಲೆಲ್ಲಾ ತುಟಿಯಂಚಿನಲ್ಲಿ ಹೂನಗೆಯನ್ನರಳಿಸುತ್ತವೆ......

ನಿನ್ನ ಈ ಪರಿಯಿಂದಲೇ ಜವಾಬ್ದಾರಿಗಳನ್ನು, ಸಂಬಂಧಗಳನ್ನೂ ನಿಭಾಯಿಸಲು ಕಲಿತಿದ್ದು ನಾನು. ನನಗೇ ಅರಿವಿಲ್ಲದ ನನ್ನ ಸಾಮರ್ಥ್ಯಗಳನ್ನು ಪರಿಚಯಿಸಿ ಕೊಟ್ಟವನು ನೀನು. ನನ್ನಿಂದ ಎಲ್ಲವೂ ಸಾಧ್ಯ ಎಂಬ ಭರವಸೆಯನ್ನು ನೀಡಿದ್ದು ನೀನು. ಒಬ್ಬ ಬೇಜವಾಬ್ದಾರಿ ಕೊಂಚ ಗರ್ವಿಷ್ಟ ಹುಡುಗಿ ಅದ್ಯಾವಾಗ ಬದಲಾದಳೋ, ಪ್ರಿಯನ ಒಲುಮೆಗೆ ಒಡತಿಯಾಗುವುದರ ಜೊತೆಗೆ ಅದ್ಯಾವ ಕ್ಷಣದಲ್ಲಿ ಅತ್ತೆ ಮಾವನ ಪ್ರೀತಿಯ ಸೊಸೆಯಾಗಿ, ಮೈದುನನ ಅಕ್ಕರೆಯ ಅತ್ತಿಗೆಯಾಗಿ, ಪರಿಪೂರ್ಣ ಗೃಹಿಣಿಯಾಗಿ ಬದಲಾದಳೋ ಖುದ್ದು ಅವಳರಿವಿಗೇ ಬರಲಿಲ್ಲ. ನೀನು ನನ್ನೊಂದಿಗೆ ಕಳೆದ ಕ್ಷಣಗಳು ಕಡಿಮೆಯೇ ಆದರೂ ಆ ಅಲ್ಪ ಸಮಯದಲ್ಲೇ ನೀ ನನ್ನನ್ನು ಆವರಿಸಿದ ಪರಿಗೆ ಏನೆನ್ನಲ್ಲಿ? ಅದ್ಯಾವ ಕ್ಷಣದಲ್ಲಿ ನೀನೇ ನಾನಾಗಿ, ನಾನೇ ನೀನಾಗಿ, ನೀನು ನನ್ನ ಅಸ್ತಿತ್ವವಾಗಿಬಿಟ್ಟೆಯೋ ಅರಿವೇ ಆಗಲಿಲ್ಲ ನನಗೆ.

ಈಗ ನಿನ್ನ ಪತ್ನಿಯಾಗಿ ನನ್ನ ಪಾಲಿನ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸಲೀಸಾಗಿ ನಿರ್ವಹಿಸುತ್ತಿರುವೆ ನಾನು. ಎಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ಸನ್ನಿವೇಶಗಳನ್ನು ಎದುರಿಸುವುದನ್ನು ನಿನ್ನಿಂದಲೇ ಕಲಿತಿರುವೆ. ಮಾವ ರಾತ್ರೋರಾತ್ರಿ ಪಾರ್ಶ್ವವಾಯುವಿನ ಹೊಡೆತಕ್ಕೆ ಸಿಲುಕಿದಾಗ ನೀನು ಸೀಕ್ರೆಟ್ ಮಿಷನ್ ನ ಭಾಗವಾಗಿ ಇಂಡೋ ಚೈನಾ ಗಡಿಯಲ್ಲೆಲ್ಲೋ ಕಾದಾಡುತ್ತಿದ್ದೆ. ಎಲ್ಲರೂ ಕಂಗಾಲಾದಾಗಲೂ ನಾನು ಧೈರ್ಯಗೆಡದೆ ಎಲ್ಲವನ್ನೂ ನಿಭಾಯಿಸಿದ್ದೆ.

ಚಿಂಟು ಕಾಲೇಜಿನಲ್ಲಿ ಅಪಾತ್ರರ ಸಂಗ ಬೆಳೆಸಿ ಸಿಗರೇಟು, ಶರಾಬು, ಹುಡುಗಿಯರು ಎಂದು ಸುತ್ತುತ್ತಿರುವ ವಿಚಾರ ಕಿವಿಗೆ ಬಿದ್ದಾಗ ಅದೆಷ್ಟು ಯಾತನೆಯಾಗಿತ್ತು ನನಗೆ... ಈ ವಿಚಾರ ತಿಳಿದರೆ ನಿನಗೆ, ಅತ್ತೆ ಮಾವನಿಗೆ ಹೇಗಾಗಬಹುದು ಎಂಬ ಚಿಂತೆಯೇ ನನ್ನನ್ನು ಹೈರಾಣಾಗಿಸಿತ್ತು. ಅತ್ತೆ ಮಾವನ ಮುಂದೆಯೂ ಈ ವಿಚಾರ ಮಾತನಾಡುವಂತಿರಲಿಲ್ಲ.
ಮರುದಿನ ಮಧ್ಯಾಹ್ನ ಚಿಂಟುವಿನ ಕಾಲೇಜಿನತ್ತ ನಡೆದಿದ್ದೆ. ಕಾಲೇಜು ರಸ್ತೆಯಲ್ಲಿ ಸಿಗರೇಟು ಹೊಗೆಯುಗುಳುತ್ತಾ, ಹುಡುಗಿಯರನ್ನು ಛೇಡಿಸುತ್ತಿದ್ದವನ ಕೆನ್ನೆಗೆರಡು ಬಿಗಿದು ಹತ್ತಿರದ ಪಾರ್ಕಿಗೆ ಎಳೆತಂದಿದ್ದೆ. ನನ್ನೆತ್ತರಕ್ಕೆ ಬೆಳೆದು ನಿಂತವನಿಗೆ ಕೋಪದ ಭರದಲ್ಲಿ ಹೊಡೆದಿದ್ದಕ್ಕೆ ನನಗೇ ನೋವಾಗಿತ್ತು. ತಲೆತಗ್ಗಿಸಿ ನಿಂತವನನ್ನು ಕಂಡು ಅವನಿಗೆ ಹೇಗೆ, ಏನು ವಿವರಿಸಬೇಕೋ ಅರಿವಾಗದೇ ಹೋಗಿತ್ತು. ಈಗ ನೀನಿರಬೇಕಿತ್ತು ಚಿಂಟೂವಿಗೆ ತಿಳಿಹೇಳಲು ಎನಿಸಿಬಿಟ್ಟಿತು. ಎಲ್ಲಾ ವಿಚಾರ ನಿನ್ನಲ್ಲಿ ಹೇಳಿಕೊಂಡು ನಿನ್ನ ಮಡಿಲ ಸಾಂತ್ವನದಲ್ಲಿ ನಿರಾಳವಾಗಲು ಮನ ರಚ್ಚೆ ಹಿಡಿದಿತ್ತು. ಆದರದು ಸಾಧ್ಯವೇ...? ಯಾಕೋ ತಡೆಯಲಾರದೇ ಕಂಬನಿ ಜಾರತೊಡಗಿತ್ತು. ಎಂದೂ ಮನೆಯವರೆದುರು ಕಣ್ಣೀರು ತೋರಗೊಟ್ಟವಳಲ್ಲ ನಾನು. ಸದಾ ನಿನ್ನ ಕುಶಲದ ಚಿಂತೆಯಲ್ಲಿರುವವರನ್ನು ನನ್ನ ಅಳು ಇನ್ನಷ್ಟು ದುರ್ಬಲವಾಗಿಸುತ್ತದೆ ಎಂಬುದನ್ನು ಬಲ್ಲೆ. ಆದರೆ ಅಂದೆಕೋ ಹರಿವ ಕಣ್ಣೀರನ್ನು ತಡೆಯಲಾರದಷ್ಟು ದುರ್ಬಲಳಾಗಿಬಿಟ್ಟಿದ್ದೆ. ನನ್ನ ಅಳುವನ್ನು ಕಂಡು ಬೆದರಿ ಚಿಂಟು ತಾನೂ ಅಳತೊಡಗಿದಾಗಲೇ ವಾಸ್ತವದ ಅರಿವಾಗಿದ್ದು ನನಗೆ. ನನ್ನ ನಾನು ನಿಯಂತ್ರಿಸಿಕೊಂಡು ಅವನನ್ನು ಬಳಿಯಲ್ಲಿ ಕೂಡಿಸಿಕೊಂಡು ಅಮ್ಮನಂತೆ ಸಮಾಧಾನಿಸಿದ್ದೆ. ಹಿರಿಯಕ್ಕನಂತೆ ಸೂಕ್ಷ್ಮವಾಗಿ ಅವನು ಹೋಗುತ್ತಿರುವ ಹಾದಿ ತಪ್ಪೆಂದು ಬುದ್ಧಿ ಹೇಳಿದ್ದೆ. ಅಪ್ಪ ಅಮ್ಮ, ಅಣ್ಣನ ಬಗ್ಗೆ ಯೋಚಿಸಲಿಲ್ಲವೇ ನೀನು ಎಂದು ಗದರಿಸಿದ್ದೆ ಕೂಡಾ. ಬಾರಿ ಬಾರಿ ಕ್ಷಮೆ ಕೇಳಿದವನು ಇನ್ನೆಂದೂ ಇಂತಹ ಕೆಲಸಗಳನ್ನು ಮಾಡುವುದಿಲ್ಲವೆಂದು ಮಾತು ಕೊಟ್ಟಿದ್ದ. ಯಾವುದೋ ಆಕರ್ಷಣೆಯಲ್ಲಿ ಬಿದ್ದಿದ್ದನಷ್ಟೇ.... ಒಳ್ಳೆಯ ಹುಡುಗ ಅವನು... ಕೊಟ್ಟ ಮಾತನ್ನು ಉಳಿಸಿಕೊಂಡ ಕೂಡಾ.... ಅವನು ತನ್ನ ಸ್ನೇಹಿತರ ಬಳಗ ಬದಲಿಸಿ, ಓದಿನೆಡೆಗೆ ಮತ್ತೆ ಆಸಕ್ತಿ ಬೆಳೆಸಿಕೊಂಡಾಗ ಅದೆಷ್ಟು ಸಂತೋಷವಾಗಿತ್ತು ಗೊತ್ತೇ.... ನೀನು ಶತ್ರುಗಳ ಮೇಲೆ ಯುದ್ಧ ಗೆದ್ದಾಗ ಆಗುವುದಲ್ಲ ಅಂತಹದೇ ಸಂಭ್ರಮ ನನ್ನಲ್ಲಿ......

ಅತ್ತೆ ಮಾವನ ಆರೈಕೆ, ಆಸ್ಪತ್ರೆ ಹಾಗೂ ಔಷಧೋಪಚಾರಗಳು, ಚಿಂಟೂವಿನ ಓದು, ಸ್ನೇಹಿತರು, ಸಂಗ, ಸಹವಾಸಗಳು ಎಲ್ಲವನ್ನೂ ಅತ್ಯಂತ ಪ್ರೀತಿಯಿಂದ, ಅಕ್ಕರಾಸ್ಥೆಯಿಂದ ನಿಭಾಯಿಸುತ್ತೇನೆ ನಾನು. ಮದುವೆಗೆ ಮುನ್ನ ಒಂದು ಕಡ್ಡಿ ಎತ್ತಿ ಬದಿಗಿರಿಸದವಳು ಈಗ ಇಡೀ ಮನೆಯನ್ನು ನಿಭಾಯಿಸುತ್ತೇನೆ. ದಿನಸಿಯಿಂದ ಹಿಡಿದು ಅಡುಗೆಯ ತನಕ ಎಲ್ಲವೂ ನನ್ನದೇ....ಇಂದು ಊರಿಗೆ ಊರೇ ಹೇಳುತ್ತದೆ 'ಕುಟುಂಬದ ಜವಾಬ್ದಾರಿ ನಿರ್ವಹಿಸುವುದನ್ನು ಇವಳ ನೋಡಿ ಕಲಿಯಬೇಕು' ಎಂದು‌. ಅಪ್ಪ ಅಮ್ಮನಿಗೂ ಆಶ್ಚರ್ಯ ಇದು ನಮ್ಮ ಮಗಳೇನಾ ಎಂದು.....!!

ಈ ಕೆಲಸಗಳೆಲ್ಲವೂ ನನಗೆ ಅತೀವ ಸಂತಸ ನೀಡುತ್ತವೆ. ಏಕೆಂದರೆ ಇವೆಲ್ಲವೂ ನಾನು ನೀನಾಗಿ, ನೀನೇ ನಾನಾಗಿರುವ ಕ್ಷಣಗಳು. ಆದ ಕಾರಣದಿಂದಲೇ ಅತ್ತೆಮಾವ ನನ್ನಲ್ಲಿ ನಿನ್ನನ್ನು ಕಾಣುತ್ತಾರೆ. ಚಿಂಟೂಗೆ ಅಣ್ಣನ ಅನುಪಸ್ಥಿತಿ ಕಾಡುವುದಿಲ್ಲ. ಇದಕ್ಕಿಂತ ಹೆಚ್ಚು ನನಗೇನು ಬೇಕು ಹೇಳು? ನಿನ್ನ ಇಲ್ಲದಿರುವಿಕೆಯಲ್ಲೂ ನಿನ್ನ ಇರುವನ್ನು ಅನುಭವಿಸಿ ಖುಷಿಪಡುತ್ತೇವೆ ನಾವು.....

ಪರಸ್ಪರ ಸಾಮೀಪ್ಯವಿಲ್ಲದ, ಕಾಯುವಿಕೆಯ ಭಾವದಲ್ಲೇ ಒಲವ ಸುಧೆ ಹರಿಸುವಂತಹ ಪ್ರೀತಿ ಇರುವುದೇ ಸುಳ್ಳು ಎನ್ನುತ್ತಿದ್ದ ನನಗೆ ಈಗ ಕಾಯುವಿಕೆಯೇ ಅತ್ಯಾಪ್ತ. ನಿನ್ನ ಪರವಾಗಿ, ನಿನ್ನ ಜವಾಬ್ದಾರಿಗಳನ್ನು ನಿಭಾಯಿಸುವ ಪ್ರತೀ ಘಳಿಗೆಯಲ್ಲೂ ನಿನ್ನ ಅಗೋಚರ ಸಾಮೀಪ್ಯದ ಭಾವವಿರುತ್ತದೆ ನನ್ನಲ್ಲಿ. ಆ ಸಾಮೀಪ್ಯದ ಸವಿಯನ್ನು ಅನುಭವಿಸುತ್ತಾ ನಿನ್ನ ಸಾಂಗತ್ಯಕ್ಕಾಗಿ ಕಾಯುವುದು ಬಹಳ ಹಿತವೆನಿಸಿಬಿಟ್ಟಿದೆ. ನನ್ನ ಹಾಗೆ ನೀನೂ ಅಲ್ಲಿ ನನ್ನ ಸಾಮೀಪ್ಯದ ಭಾವದಲ್ಲಿ ಬಂಧಿಯಾಗಿರುವೆ ಎಂಬುದು ತಿಳಿದಿದೆ ಈ ಹೃದಯಕ್ಕೆ ‌‌...... ಆದರೂ..... ನಿನ್ನ ನೋಡಿ ಕಣ್ತುಂಬಿಕೊಳ್ಳುವ ಆಸೆ ನಮಗೆಲ್ಲಾ. ಎಷ್ಟು ಸಮಯವಾಗಿಹೋಯ್ತು‌ ನಿನ್ನ ಮೊಗ ಕಾಣದೇ? ಎಂದು ಬರುವೆ ನೀನು?

ನಿನಗೆ ಗೊತ್ತೇನು? ನಮ್ಮ ಪ್ರೀತಿಯ ಕುಡಿ ನನ್ನುದರದಲ್ಲಿ ಚಿಗುರೊಡೆಯುತ್ತಿದೆ. ಇನ್ನೂ ಯಾರಲ್ಲೂ ಹೇಳಿಲ್ಲ ನಾನು. ನಮ್ಮ ದಾಂಪತ್ಯದ ಸಾರ್ಥಕತೆಯ ಈ ಸಂತೋಷವನ್ನು ನಿನ್ನೊಂದಿಗೇ ಮೊದಲು ಹಂಚಿಕೊಳ್ಳಬೇಕು ಎಂಬ ಪುಟ್ಟ ಆಸೆ. ಆ ಘಳಿಗೆ ನಿನ್ನ ಮೊಗದಲ್ಲಿ ಸ್ಫುರಿಸುವ ಸಂತೋಷದಲ್ಲಿ ಭಾಗಿಯಾಗುವ ನನ್ನ ಆಸೆಯನ್ನು ನೆರವೇರಿಸುವೆಯಾ.....? ನನಗಂತೂ ಮಗಳೇ ಬೇಕು.... ನಿನಗೂ ನನ್ನ ತರ ಇರೋ ಮಗಳೇ ಬೇಕು ಅಂತ ಆಸೆ ಅಲ್ವಾ......?
ಮತ್ತೆ ಈಗಲೇ ಹೇಳುತ್ತಿದ್ದೀನಿ....... ನಮ್ಮ ಮಗಳು ಹುಟ್ಟುವಾಗ ನನ್ನ ಬದಿಯಲ್ಲೇ ಇರಬೇಕು ನೀನು‌. ಅವಳು ಈ ಜಗತ್ತಿನಲ್ಲಿ ಮೊದಲು ಕಾಣುವ ವ್ಯಕ್ತಿ, ಅವಳ ಹೀರೋ ಅವಳಪ್ಪನೇ ಆಗಿರಬೇಕು ಗೊತ್ತಾಯಿತಲ್ಲ.....

ಏನು ಅಷ್ಟೊಂದು ಯೋಚನೆ ಮಾಡ್ತೀದ್ದೀ? ಓಹ್....... ನನ್ನ ಹೆರಿಗೆ ಸಮಯದಲ್ಲಿ ನಿನಗೆ ನನ್ನ ಬಳಿ ಇರಲು ಆಗುವುದೋ ಇಲ್ಲವೋ ಅನ್ನುವ ಚಿಂತೆಗೆ ಬಿದ್ದೆಯಾ....? ಚೋ.... ಚ್ವೀಟ್ ನೀನು....   ನಿನ್ನ ಸಮಸ್ಯೆ ನನಗೆ ಅರ್ಥ ಆಗೋಲ್ಲವೆ ಹುಡುಗಾ? ನೀನು ನನ್ನ ಬಳಿ ಇರಬೇಕು ಅನ್ನೋ ಆಸೆ ಇದೆಯಾದರೂ ನಿನ್ನ ಕರ್ತವ್ಯಗಳ ಅರಿವೂ ನನಗಿದೆ. ನನ್ನ ಬಳಿ ನೀನಿಲ್ಲದಿದ್ದರೂ ನಿನ್ನ ಮನಸು, ಹೃದಯ ಸದಾ ಕಾಲ ನನ್ನ ಬಳಿಯಲ್ಲೇ ಇರುತ್ತೆ. ಅದೆಂದೂ ನನ್ನಿಂದ ದೂರಾಗದು‌‌......

ನೀನೇನೂ ಯೋಚಿಸಬೇಡ. ಅತ್ತೆ, ಮಾವ, ಚಿಂಟುವಿನ ಜೊತೆಗೆ ನನ್ನನ್ನೂ, ನನ್ನೊಳಗಿನ ನಿನ್ನನ್ನೂ, ನಮ್ಮ ಮಗಳನ್ನೂ ಜೋಪಾನ ಮಾಡುವೆ ನಾನು. ಆ ಬಗ್ಗೆ ನಿಶ್ಚಿಂತೆಯಾಗಿ ನಿನ್ನ ಕರ್ತವ್ಯಗಳೆಡೆಗೆ ಗಮನ ಹರಿಸು. ತಿಂಗಳುಗಟ್ಟಲೆ ನಿನ್ನ ಕರೆ ಬಾರದಿದ್ದರೂ, ವರ್ಷಗಟ್ಟಲೆ ನಿನ್ನ ಮೊಗ ಕಾಣದಿದ್ದರೂ ನೀನು ಕ್ಷೇಮವಾಗಿರುವೆ ಎಂಬ ಭಾವವನ್ನು ನಿನ್ನ ಉಸಿರಿನ ಮಂದಾನಿಲ ಹೊತ್ತು ನನ್ನ ಬಳಿ ತರುತ್ತಿದ್ದರೆ ನನಗಷ್ಟೇ ಸಾಕು...... ಆ ಮಂದಾನಿಲವನ್ನು ಉಸಿರಾಡುತ್ತಲೇ ನಿನ್ನೊಳಗೆ ಐಕ್ಯಳಾಗಬಲ್ಲೆ ನಾನು....

ಆದರೆ.........

ಆ ಮಂದಾನಿಲದಲ್ಲಿ ನಿನ್ನ ಉಸಿರಾಟದ ಕುರುಹುಗಳು ಕಾಣದ ದಿನವನ್ನು ಮಾತ್ರ ಎಂದೂ ನನಗಾಗಿ ತರಬೇಡ ಗೆಳೆಯಾ........ ಅದನ್ನು ಮಾತ್ರ ನಾನು ಸಹಿಸಲಾರೆ. ನೀನು ಆಗಾಗ ಮನೆಗೆ ಬಾರದಿದ್ದರೂ ತೊಂದರೆಯಿಲ್ಲ..... ಆದರೆ ದಯವಿಟ್ಟು ತ್ರಿವರ್ಣ ಧ್ವಜವನ್ನು ಹೊದ್ದ ಪೆಟ್ಟಿಗೆಯೊಳಗೆ ಶಾಶ್ವತವಾಗಿ ವಿರಮಿಸಿ ನೀ ನನ್ನ ದ್ವಾರಕ್ಕೆ  ಬರಬೇಡ....... ಇದೊಂದೇ ಬೇಡಿಕೆ ನನ್ನದು....'

ಹೀಗಂದುಕೊಳ್ಳುತ್ತಲೇ ಮಲಗಿದಲ್ಲೇ ಮಗ್ಗುಲಾದಳು ಅವಳು......

ಬೀಸಿ ಬಂದು ಸೋಕಿದ ತಂಗಾಳಿಯ ಪಿಸುಮಾತುಗಳನ್ನು ಆಲಿಸಿದಂತೆ ಬಸ್ಸಿನ ಸೀಟಿಗೊರಗಿ ಕಿಟಕಿಯಿಂದಾಚೆ ನೋಡುತ್ತಿದ್ದ ಅವನ ತುಟಿಯಂಚಿನಲ್ಲಿ ನವಿರಾದ ಮಂದಹಾಸವೊಂದು ಅರಳಿತು. ಹೃದಯದ ತುಂಬಾ ಹರುಷದ ಬುಗ್ಗೆಗಳು.‌.... ಬೀಸುವ ಗಾಳಿಯ ತುಂಬಾ ತನ್ನವಳ ಮನದ ಮಾತುಗಳ ಸಂದೇಶದ ಕಂಪಿದೆ ಎಂದು ಅವನೂ ಬಲ್ಲ...... ಅದನ್ನೇ ತನ್ಮಯವಾಗಿ ಆಲಿಸುತ್ತಾ ಸಂತಸಗೊಂಡ ಮನ ಮನದನ್ನೆಯೊಂದಿಗೆ ಸ್ವಗತಕ್ಕಿಳಿದಿತ್ತು.....

'ಕೇಳೇ ಹುಡುಗಿ..... ನೀ ಸನಿಹದಲಿಲ್ಲ ಎಂಬೊಂದು ಕೊರತೆ ಬಿಟ್ಟರೆ ಆರಾಮಾಗಿರುವೆ ನಾನು. ಇಷ್ಟಕ್ಕೂ ನನ್ನೆಲ್ಲಾ ಜವಾಬ್ದಾರಿಗಳನ್ನು ನನಗಿಂತಲೂ ಸಮರ್ಥವಾಗಿ ನೀನು ನಿರ್ವಹಿಸುತ್ತಿರುವಾಗ ನನಗ್ಯಾವ ಚಿಂತೆ ಹೇಳು. ನಾನು ದೇಶ ಕಾಯುವ ಯೋಧನಾದರೆ ನೀನು ನನ್ನ ಕಾಯುವ ಯೋಧೆ. ನನ್ನ ಬದುಕಿನ ಹೋರಾಟದ ಜವಾಬ್ದಾರಿಯನ್ನು ನೀನು ವಹಿಸಿಕೊಂಡಿರುವುದರಿಂದಲೇ ನಾನು ನಿಶ್ಚಿಂತನಾಗಿ ಮಾತೃಭೂಮಿಯ ಸೇವೆಗಾಗಿ ಹೋರಾಡುತ್ತಿರುವೆ. ಅಂದ ಮೇಲೆ ನೀ ನನ್ನ ಬೆನ್ನಿಗಿದ್ದರೆ ಮಾತ್ರವೇ ನನ್ನ ಬದುಕಿಗೆ, ಅಸ್ತಿತ್ವಕ್ಕೆ ಬೆಲೆಯಲ್ಲವೇನೇ ಚೆಲುವೆ. ಅದೆಷ್ಟು ಧೈರ್ಯವಂತೆ ಹಾಗೂ ಪ್ರಬುದ್ಧೆ ನೀನು? ಮನೆಯ ಯಾವ ಸಮಸ್ಯೆಗಳೂ ನನ್ನತ್ತ ಸುಳಿದು ಕಂಗೆಡಿಸದಂತೆ ಅದೆಷ್ಟು ಚೆನ್ನಾಗಿ ಎಲ್ಲವನ್ನೂ ನಿರ್ವಹಿಸಿಬಿಡುವೆ.... ಪದೇ ಪದೇ ಕೇಳುವೆಯಲ್ಲ ಅದೇಕೆ ನನ್ನ ಒಪ್ಪಿ ಮದುವೆಯಾದಿರಿ ಎಂದು. ನಿನ್ನ ಮೊದಲ ಬಾರಿಗೆ ಕಂಡಾಗಲೇ ನಿನ್ನ ತುಂಟ ಕಣ್ಣುಗಳ ಆಳದಲ್ಲಿ ಒಂದು ಜವಾಬ್ದಾರಿಯುತ ಪ್ರಬುದ್ಧತೆಯನ್ನು ಗುರುತಿಸಿದ್ದೆ. ಅದಕ್ಕೇ ಸೋತಿದ್ದು ನಾನು. ಯೋಧನ ಮಡದಿ ಕೂಡಾ ಯೋಧಳೇ. ಒಬ್ಬ ಯೋಧನಿಗಿರುವಷ್ಟೇ ದೃಢಮನಸ್ಕತೆ ಅವನ ಮಡದಿಗೂ ಇರಬೇಕು. ನಿಜ ಹೇಳಬೇಕೆಂದರೆ ಮಡದಿ ತನ್ನ ಕೌಟುಂಬಿಕ ಕರ್ತವ್ಯಗಳನ್ನು ನಿಭಾಯಿಸುವಳೆಂಬ ಧೈರ್ಯವೇ ಯೋಧನ ಶಕ್ತಿ. ಅಂತಹ ಧೀಶಕ್ತಿಯನ್ನು ನಿನ್ನಲ್ಲಿ ಗುರುತಿಸಿದ್ದೆ ನಾನು. ನನ್ನ ನಂಬಿಕೆಯನ್ನು ಎಂದೂ ಸುಳ್ಳಾಗಿಸಲಿಲ್ಲ ನೀನು.

ಅಪ್ಪ ಅಮ್ಮನಿಗೆ ಮಗನಾಗಿ, ಚಿಂಟುವಿಗೆ ಅಣ್ಣನಂತೆ ನನ್ನ ಜವಾಬ್ದಾರಿಗಳೆಲ್ಲವನ್ನೂ ಅಕ್ಕರೆಯಿಂದ ನಿನ್ನದಾಗಿಸಿಕೊಂಡಿರುವ ನಿನ್ನ ಋಣ ನಾನು ತೀರಿಸಲುಂಟೇ....? ನೀನಿರದೇ ಹೋಗಿದ್ದರೆ ಈ ಬದುಕು ಎಂತಿರುತ್ತಿತ್ತೋ ಊಹಿಸಲೂ ಆಗದು ನನಗೆ. ನನಗಾಗಿ, ನಮಗಾಗಿ ಇಷ್ಟೆಲ್ಲಾ ಮಾಡುವ ನಿನಗಾಗಿ ಒಂದಿಷ್ಟು ಸಮಯ ಕೊಡಲೂ ಸಾಧ್ಯವಾಗದ ಸ್ಥಿತಿ ನನ್ನದು. ಆದರೂ ನನ್ನ ಬಗ್ಗೆ ಯಾವುದೇ ದೂರುಗಳಿಲ್ಲ ನಿನ್ನಲ್ಲಿ. ಅದೆಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವೆ ನನ್ನನ್ನು..... ನನ್ನ ಮುದ್ದು ನೀನು....

ಅದ್ಯಾಕೋ ನಿನ್ನ ನೋಡಬೇಕೆಂಬ ತುಡಿತ ಬಲವಾಗಿತ್ತು. ನೀನು ನನ್ನಲ್ಲಿ ಏನೋ ಹಂಚಿಕೊಳ್ಳಲು ಬಯಸಿರುವೆಯೆಂಬ ಭಾವವನ್ನು ತಂಗಾಳಿ ಪದೇ ಪದೇ ಹೊತ್ತು ತರುತ್ತಿತ್ತು. ಅದಕ್ಕೆ ರಜೆ ಪಡೆದು ಹೊರಟುಬಿಟ್ಟೆ ಹುಡುಗಿ..... ನಿನ್ನ ಪ್ರೀತಿಗೆ ಬದಲಾಗಿ ನೀಡಲು ನನ್ನ ಬಳಿ ಸಮಯದಷ್ಟು ಮೌಲ್ಯವಾದುದು ಬೇರೇನೂ ಇಲ್ಲ. ಯೋಧನ ಮಡದಿಗೆ ಅವನ ಸಮಯ ಹಾಗೂ ಸಾಮೀಪ್ಯದಷ್ಟು ಸಂತಸ ತರುವ ಉಡುಗೊರೆ ಬೇರ್ಯಾವುದಿದೆ ಅಲ್ಲವೇ...?

ಇನ್ನೇನು ನಿಮಿಷಗಳ ಅಂತರವಷ್ಟೇ..... ನಾನು ನಿನ್ನ ಅಂಗಳದಲ್ಲಿರುವೆ. ನಿನಗೆ ಹೇಳಿಲ್ಲ ನಾ ಬರುವ ವಿಚಾರ. ನನ್ನ ಎದುರಲ್ಲಿ ಕಂಡು ಸಂತಸದಿಂದ ಅರಳುವ ಆ ಕಣ್ಣುಗಳನ್ನು, ತುಟಿಯಂಚಿನಲ್ಲಿ ಅರಳುವ ಮಂದಹಾಸವನ್ನೂ, ನಿನ್ನ ಸಂತಸವನ್ನೂ ಕಣ್ತುಂಬಿಕೊಳ್ಳಬೇಕು ನಾನು. ಅಪ್ಪನ ಆತ್ಮೀಯ ಅಪ್ಪುಗೆಯನ್ನೂ, ಅಮ್ಮನ ಮಮತೆಯನ್ನೂ, ಚಿಂಟುವಿನ ಅಕ್ಕರೆಯನ್ನೂ ಆನಂದಿಸಬೇಕು. ನಿಮ್ಮೆಲ್ಲರ ಸಂತೋಷವನ್ನೂ, ಅಚ್ಚರಿಯನ್ನೂ ಜತನದಿಂದ ನನ್ನ ನೆನಪುಗಳ ಬುತ್ತಿಗೆ ಸೇರಿಸಬೇಕು........'

ಎಂದೆಲ್ಲಾ ಯೋಚಿಸುತ್ತಲೇ ಬಸ್ಸಿಳಿದು ಐದು ನಿಮಿಷಗಳ ಹಾದಿ ಕ್ರಮಿಸಿ ತನ್ನ ಮನೆಯೆದುರು ನಿಂತಿದ್ದ ಅವನು. ತನ್ನ ಪಾಲಿನ ಸ್ವರ್ಗವನ್ನು ಕಣ್ತುಂಬಿಕೊಳ್ಳುತ್ತಲೇ ಗೇಟನ್ನು ತೆರೆದು ಒಳಗಡಿಯಿಟ್ಟ......

ಗೇಟಿನ ಶಬ್ದಕ್ಕೆ  'ಈ ಹೊತ್ತಿನಲ್ಲಿ ಯಾರಿರಬಹುದು' ಎಂದುಕೊಳ್ಳುತ್ತಲೇ ತಲೆಗೂದಲನ್ನು ತುರುಬಾಗಿಸಿಕೊಳ್ಳುತ್ತಾ ಬಾಗಿಲಿಗೆ ಬಂದವಳ ಕಾಲ ಅರಘಳಿಗೆ ಅಲ್ಲೇ ಸ್ಥಂಭಿಸಿದಂತಿತ್ತು. ಎಚ್ಚೆತ್ತವಳ ಕಣ್ಣುಗಳಲ್ಲಿ ಕೋಟಿ ನಕ್ಷತ್ರಗಳ ಪ್ರಭಾವಳಿ. ಹಾರುವ ನಡಿಗೆಯಲ್ಲಿ ಅವನ ಬಳಿ ಸಾರಿದವಳನ್ನು ಹಗುರವಾಗಿ ಬಳಸಿ ನೆತ್ತಿಗೆ ಮುತ್ತಿಕ್ಕಿದ.

ತನ್ನೆದೆಗೆ ಒರಗಿದವಳನ್ನು ಇನ್ನಷ್ಟು ಬಲವಾಗಿ ಅಪ್ಪಿ ನಿಧಾನವಾಗಿ ಮನೆಯೊಳಗೆ ಹೆಜ್ಜೆಯಿಟ್ಟನವನು ತನ್ನವಳೊಂದಿಗೆ...........

ತನ್ನವರನ್ನು ಕಾಣುವ ಕಾತರದಿಂದ.........

ಪೂರ್ಣ ಚಂದಿರ ಬೆಳದಿಂಗಳ ಚಪ್ಪರದೊಂದಿಗೆ ಇಡೀ ಭುವಿಯನ್ನು ರಜತ ಪ್ರಭೆಯಲ್ಲಿ ಆವರಿಸಿಕೊಳ್ಳುವ ವೇಳೆಗೆ ಆ ಮನೆಯಲ್ಲಿ ಸಂಭ್ರಮ ಹೊನಲಾಗಿ ಹರಿಯುತ್ತಿತ್ತು..........

****************