ಗುರುವಾರ, ಜೂನ್ 4, 2020

ಮೃತ್ಯುಂಜಯ

ಪುಸ್ತಕದ ಹೆಸರು        : ಮೃತ್ಯುಂಜಯ
ಮೂಲ ಲೇಖಕರು      : ಶಿವಾಜಿ ಸಾವಂತ(ಮರಾಠಿ)
ಅನುವಾದ               : ಅಶೋಕ ನೀಲಗಾರ
ಪ್ರಕಾಶಕರು              : ಅಮಿತ ಪ್ರಕಾಶನ, ಬೆಳಗಾವಿ
ಪ್ರಥಮ ಮುದ್ರಣ      : 1991
ಪುಟಗಳು                  : 973        
ಬೆಲೆ                          :125 ರೂ      


'ಮಹಾಭಾರತ'ವೆಂಬ ಮಹಾಕಾವ್ಯದ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿದೆ. ಪ್ರತಿಯೊಂದು ಪಾತ್ರವೂ ತನ್ನ ಗುಣ ಸ್ವಭಾವದ ಮೂಲಕ ಜಗತ್ತಿಗೆ ಯಾವುದೋ ಒಂದು ಮೌಲ್ಯವನ್ನು, ಇಲ್ಲವೇ ಕಲಿಯಬೇಕಾದ ಪಾಠವನ್ನು ಸಾರಿ ಹೇಳುತ್ತದೆ. ಮೂಲ ಮಹಾಭಾರತವು ಶತಶತಮಾನಗಳ ಅವಧಿಯಲ್ಲಿ ಬೇರೆ ಬೇರೆ ಕವಿಗಳ, ಲೇಖಕರ ಕಲ್ಪನೆಯ ಮೂಸೆಯಲ್ಲಿ ಹಲವು ಬದಲಾವಣೆಗಳೊಂದಿಗೆ ಬೇರೆ ಬೇರೆ ಸ್ವರೂಪದಲ್ಲಿ ನಮ್ಮ ಮುಂದೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ನಮ್ಮ ಕನ್ನಡದಲ್ಲೇ ಪಂಪ, ರನ್ನ, ಕುಮಾರವ್ಯಾಸ ಇನ್ನೂ ಅನೇಕ ಕವಿಗಳು ತಮ್ಮ ಕೃತಿಗಳಲ್ಲಿ ಮಹಾಭಾರತವನ್ನು ಬೇರೆ ಬೇರೆ ಆಯಾಮಗಳಿಂದ ವಿಶ್ಲೇಷಿಸಿದ್ದಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಮಹಾಭಾರತದ ಪಾತ್ರಗಳು ಅಗಣಿತ ಕಾವ್ಯ, ಕಥೆ, ಕಾದಂಬರಿ, ಲೇಖನಗಳಿಗೆ ಸ್ಪೂರ್ತಿಯಾಗಿವೆ. 

ಮಹಾಭಾರತದಲ್ಲಿ ತನ್ನ ವಿಶಿಷ್ಟ ಜೀವನಗಾಥೆಯಿಂದ ಗಮನಸೆಳೆಯುವುದು ಅಂಗರಾಜ ಕರ್ಣ. ಸಾಕ್ಷಾತ್ ಸೂರ್ಯಪುತ್ರನಾಗಿಯೂ ಸೂತಪುತ್ರನೆನೆಸಿಕೊಂಡ, ಕೌಂತೇಯನಾಗಿಯೂ ರಾಧೇಯನಾದ, ಜೇಷ್ಠ ಪಾಂಡವನಾಗಿಯೂ ಕೌರವರ ಪಕ್ಷದಲ್ಲಿ ಗುರುತಿಸಿಕೊಂಡ ಕರ್ಣನ ಬದುಕೇ ಅಪಮಾನ, ನಿಂದನೆ ಹಾಗೂ ಶಾಪಗಳಿಂದ ಕೂಡಿದ ದುರಂತ ಕಾವ್ಯ. ವೀರತ್ವ, ದಾನಶೂರತ್ವ ಹಾಗೂ ತ್ಯಾಗದ ಪ್ರತೀಕವೆನಿಸಿದರೂ ಕರ್ಣನ ಬದುಕಿನ ತುಂಬಾ ವಿಧಿಯ ಶಾಪಗಳೇ ಅಪಸವ್ಯದ ಸರಮಾಲೆಯಾಗಿ ಎದ್ದು ಕಾಣುವುದು ವಿಪರ್ಯಾಸ. ಪ್ರಾಯಶಃ ಈ ಕಾರಣಕ್ಕಾಗಿಯೇ ಮಹಾಕವಿ ಪಂಪ 'ನೆನೆಯದಿರಣ್ಣ ಭಾರತದೊಳಿನ್ ಪೆರರಾರನುಂ ಒಂದೆ ಚಿತ್ತದಿಂ ನೆನೆದುದಾರ್ದೊಡೆ ಕರ್ಣನಂ ನೆನೆಯಾ ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ' ಎಂದಿರಬಹುದೇನೋ.

ಇಂತಹ ಕರ್ಣನ ಜೀವನವನ್ನೇ ಆಧಾರವಾಗಿಸಿ ಅವನ ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಬೃಹತ್ ಕಾದಂಬರಿ 'ಮೃತ್ಯುಂಜಯ'. ಕರ್ಣ, ಕುಂತಿ, ದುರ್ಯೋಧನ, ವೃಷಾಲಿ, ಶೋಣ ಈ ಐದು ಪಾತ್ರಗಳ ಸ್ವಗತದಲ್ಲಿ ಸಾಗುವ ಕಥೆಯು ಶ್ರೀ ಕೃಷ್ಣನ ಸ್ವಗತದೊಂದಿಗೆ ಮುಕ್ತಾಯವಾಗುತ್ತದೆ. ಮೊದಲಿನ ಐದು ಪಾತ್ರಗಳ ಮೂಲಕ ಕರ್ಣನ ಜೀವನವನ್ನು ವಿಶ್ಲೇಷಿಸುತ್ತಾ ಸಾಗುವ ಕಥೆಗೆ ಭಗವಾನ್ ಶ್ರೀ ಕೃಷ್ಣನ ಸ್ವಗತದೊಂದಿಗೆ ಉಪಸಂಹಾರ ನೀಡಿರುವ ಲೇಖಕರ ಜಾಣ್ಮೆ ಅಭಿನಂದನಾರ್ಹ . ಇಲ್ಲಿ ಕರ್ಣನ ಕಥಾನಾಯಕನಾದ ಕಾರಣ ಇದು ಮೂಲ ವ್ಯಾಸ ಭಾರತಕ್ಕೆ ಸಂಪೂರ್ಣ ನಿಷ್ಠವಾದ ಕೃತಿಯಲ್ಲ. ಕರ್ಣನ ಜೀವನದ ಎಲ್ಲಾ ಮಹತ್ತರ ಘಟನೆಗಳನ್ನು ವ್ಯಾಸ ಭಾರತದಿಂದ ತೆಗೆದುಕೊಂಡು ಅದನ್ನೇ ಕೇಂದ್ರವಾಗಿಸಿದ್ದರೂ ಕೂಡಾ ಕರ್ಣನ ವ್ಯಕ್ತಿತ್ವ, ಮನಸ್ಥಿತಿಯನ್ನು ಪರಿಚಯಿಸಲು ಬೇಕಾದಂತೆ ಹಲವು ಪಾತ್ರಗಳು ಇಲ್ಲಿವೆ. ಕರ್ಣನ ಭಾವ ಪ್ರಪಂಚವನ್ನು ಅನಾವರಣಗೊಳಿಸುವ ಮಾಧ್ಯಮಗಳಾಗಿ ಅವನ ತಮ್ಮ ಶೋಣ, ಪತ್ನಿ ವೃಷಾಲಿ, ವೃಷಾಲಿಯ ಅಣ್ಣ ಸಾರಥಿ ಸತ್ಯಸೇನನ ಪಾತ್ರಗಳಿಗೆ ಇಲ್ಲಿ ಮಹತ್ವವಿದೆ. ಹಾಗೆಯೇ ಪೌರಾಣಿಕ ಹಿನ್ನೆಲೆಗೆ ಹೊರತಾಗಿ ಈ ಕಥೆಯಲ್ಲಿ ಬಹಳ ಪ್ರಬಲವಾದ ಸಾಮಾಜಿಕ ಅಂಶಗಳಿವೆ. ಹಾಗಾಗಿಯೇ ಈ ಕಾದಂಬರಿಯ ಹಲವು ವಿಚಾರಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತವೆನಿಸುತ್ತವೆ. 

ಚಂಪಾನಗರದಲ್ಲಿ ಧೃತರಾಷ್ಟ್ರನ ಸಾರಥಿ ಅಧಿರಥ ಹಾಗೂ ರಾಧೆಯ ಪುತ್ರನಾಗಿ ತಮ್ಮ ಶೋಣ(ಶತೃತಪ) ನೊಂದಿಗೆ ಗಂಗಾತೀರದಲ್ಲಿ ಬಾಲ್ಯವನ್ನು ಕಳೆಯುವ ಕರ್ಣ(ವಸುಸೇನ)ನ ಸ್ವಗತದ ಮೂಲಕ ಆರಂಭವಾಗುವ ಕಾದಂಬರಿ ಕೃಷ್ಣನಿಂದ ಕುಮಾರಿ ಭೂಮಿಯ ಮೇಲೆ ಕರ್ಣನ ಅಂತ್ಯಕ್ರಿಯೆ ಹಾಗೂ ವೃಷಾಲಿಯ ಆತ್ಮಾರ್ಪಣೆಯೊಂದಿಗೆ ಪರಿಸಮಾಪ್ತಿಯಾಗುತ್ತದೆ. ಈ ಆದಿಯಿಂದ ಅಂತ್ಯದ ನಡುವಿನ ಪಯಣದಲ್ಲಿ ಮಹಾಭಾರತವು ಕರ್ಣನ ಆಯಾಮದಲ್ಲಿ ತೆರೆದುಕೊಳ್ಳುತ್ತದೆ. 

ಜನ್ಮದಾರಭ್ಯ ದೊರೆತ ಅಭೇದ್ಯ ಕವಚ ಕುಂಡಲಗಳು, ಸೂರ್ಯಪ್ರಭೆಯ ಕಾಯ, ಕ್ಷತ್ರಿಯರಿಗೆ ಭೂಷಣವಾಗುವಂತಹ ವೀರತ್ವ, ಪರಾಕ್ರಮಗಳ ಗಣಿಯಾದ ಕರ್ಣ ಬೆಳೆಯುವುದು ಮಾತ್ರ ಸಾರಥಿ ಪುತ್ರನಾಗಿ. ಇಡೀ ಲೋಕ ಅವನನ್ನು ಅವನ ಕುಲದ ಆಧಾರದಲ್ಲಿಯೇ ಗುರುತಿಸಿ ಆ ಮಿತಿಯೊಳಗೇ ಅವನನ್ನು ಬಂಧಿಸಲು ಯತ್ನಿಸುತ್ತದೆ. ಅವನ ಪ್ರತೀ ಪರಾಕ್ರಮದ ಸನ್ನಿವೇಶದಲ್ಲೂ 'ನೀನು ಸೂತನಿರುವೆ. ಕ್ಷತ್ರಿಯನಾಗಲು ಯತ್ನಿಸಬೇಡ' ಎಂದು ಅಪಹಾಸ್ಯಗೈಯುವ ಸಮಾಜ ಅವನನ್ನು ಪದೇ ಪದೇ ಅಪಮಾನಿಸಿ ಜರ್ಜರಿತಗೊಳಿಸುತ್ತದೆ. ಇಡೀ ಲೋಕವೇ ತನ್ನನ್ನು ಕೇವಲ ಕುಲದ ಆಧಾರದಲ್ಲಿ ತಿರಸ್ಕರಿಸುವಾಗ ತನ್ನ ಸಾಮರ್ಥ್ಯವನ್ನು ಅರಿತು, ಕರ್ತೃತ್ವದ ಆಧಾರದಲ್ಲಿ ಅಂಗರಾಜನೆಂಬ ಕ್ಷತ್ರಿಯ ಪದವಿ ನೀಡಿ ಪುರಸ್ಕರಿಸುವ ದುರ್ಯೋಧನ ಸ್ವಾಭಾವಿಕವಾಗಿಯೇ ಕರ್ಣನ ಪಾಲಿಗೆ ಪರಮಾಪ್ತನೆನಿಸುತ್ತಾನೆ. ಆ ಕಾರಣಕ್ಕಾಗಿಯೇ ಕೊನೆಕೊನೆಗೆ ದುರ್ಯೋಧನನ ರಾಜಕಾರಣ ಆಟದಲ್ಲಿ ತಾನು ದಾಳವಾಗಿದ್ದೂ ತಿಳಿದರೂ ಅವನೆಡೆಗಿನ ಸ್ವಾಮಿನಿಷ್ಠೆಯನ್ನು ತೊರೆಯುವುದಿಲ್ಲ ಕರ್ಣ. 

ತನ್ನ ಜೀವನದ ಬಹುಪಾಲು ತಾನು ಯಾರಿದ್ದೇನೆ ಎಂಬ ಗೊಂದಲದಲ್ಲೇ ಜೀವಿಸುವ ಕರ್ಣನ ತಾಕಲಾಟಗಳನ್ನು ಕಾದಂಬರಿ ಬಹಳ ಸಮರ್ಥವಾಗಿ ಹಿಡಿದಿಡುತ್ತದೆ. ತಾನು ಸೂತಪುತ್ರನಿದ್ದೂ ಕೂಡಾ ತನಗೇಕೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ಸಿಗದ ಪ್ರಶ್ನೆ ಅವನನ್ನು ಹಗಲಿರುಳು ಕಾಡುತ್ತದೆ. ತನ್ನ ಪ್ರಥಮ ಪುತ್ರ ಸುದಾಮ ಕವಚ ಕುಂಡಲ ರಹಿತವಾಗಿ ಜನಿಸಿದಾಗಲಂತೂ ಅವನ ಮನೋವಿಪ್ಲವಗಳು ತೀವ್ರವಾಗುತ್ತದೆ. ತನ್ನ ಈ ಕವಚಕುಂಡಲಗಳಿಂದಲೇ ತಾನು ಸೂತಪುತ್ರನೆಂಬ ಸತ್ಯವನ್ನು ತನಗೆ ಒಪ್ಪಿಕೊಳ್ಳಲಾಗುತ್ತಿಲ್ಲ ಎಂಬ ಭಾವ ಸದಾ ಅವನನ್ನು ಕಾಡುತ್ತದೆ. ಕೊನೆಗೆ ಕೃಷ್ಣನಿಂದ ತನ್ನ ಜನ್ಮರಹಸ್ಯ ತಿಳಿದಾಗಲಷ್ಟೇ ಅವನ ಗೊಂದಲಗಳಿಗೆ ಉತ್ತರ ಸಿಗುತ್ತದೆ. ಆದರೆ ಆ ವೇಳೆಗಾಗಲೇ ಅವನ ಬದುಕು ಹಿಂದಿರುಗಿ ಬರಲಾಗದಷ್ಟು ಮುಂದೆ ಸಾಗಿಹೋಗಿರುತ್ತದೆ.

ಈ ಕಾದಂಬರಿಯಲ್ಲಿನ ಇನ್ನೊಂದು ಪ್ರಮುಖ ಅಂಶ ಕರ್ಣ ಹಾಗೂ ಅಶ್ವತ್ಥಾಮರ ಬಾಂಧವ್ಯ. ಅವರಿಬ್ಬರ ಮಿತ್ರತ್ವ ಹಾಗೂ ಅವರ ನಡುವಿನ ಚರ್ಚೆಗಳಲ್ಲಿ ಹಲವು ಸಾಮಾಜಿಕ, ಆಧ್ಯಾತ್ಮಿಕ ಚಿಂತನೆಗಳ ಹರಿವು ಕಾದಂಬರಿಯ ತುಂಬಾ ಹರಡಿಕೊಂಡಿದೆ. ಕರ್ಣನ ಪ್ರತೀ ಗೊಂದಲಕ್ಕೆ ಅಶ್ವತ್ಥಾಮನ ಸಾತ್ವಿಕ ತತ್ವದ ಉತ್ತರಗಳು ಬಹಳ ಪ್ರಸ್ತುತವೆನಿಸುತ್ತದೆ. 

ಈ ಕಾದಂಬರಿಯ ಇನ್ನೊಂದು ಪ್ರಮುಖ ಅಂಶ ಉಪಮೆ, ರೂಪಕ ಹಾಗೂ ಪ್ರತಿಮೆಗಳ ಬಳಕೆ. ಕಥೆಯ ಪ್ರತಿಯೊಂದು ಪ್ರಮುಖ ಸನ್ನಿವೇಶಗಳಲ್ಲೂ ಭವಿಷ್ಯವನ್ನು ಸೂಚಿಸುವ, ಪರಸ್ಪರ ವೈರುಧ್ಯವನ್ನು ಧ್ವನಿಸುವ ಪ್ರತಿಮೆಗಳನ್ನು ಸಮರ್ಥವಾಗಿ ಬಳಸಿದ್ದಾರೆ ಲೇಖಕರು. ಬಾಲ್ಯದಲ್ಲಿ ಮಥುರೆಯ ಅರಮನೆಯಲ್ಲಿ ಗೂಡಿನಿಂದ ಬಿದ್ದ ಚಾಂಡೋಲ ಪಕ್ಷಿಯ ಮರಿಯನ್ನು ಮರಳಿ ಗೂಡಿಗೆ ಸೇರಿಸಲು ತನ್ನ ತಂದೆ ಮಹಾರಾಜ ಶೂರಸೇನರನ್ನೇ ಮರದ ಮೇಲೆ ಹತ್ತಿಸುವ ಪೃಥೆ ಮುಂದೊಮ್ಮೆ ತಾನೇ ಹೆತ್ತ ಹಸುಗೂಸನ್ನು ತುಂಬಿ ಹರಿಯುವ ಅಶ್ವನದಿಯಲ್ಲಿ ತೇಲಿಬಿಡುತ್ತಾಳೆ. ಬದುಕಿನುದ್ದಕ್ಕೂ ಸಂಯಮ ಪಾಲಿಸುವ, ಅಪಮಾನಗಳನ್ನು ಹಲ್ಮುಡಿ ಕಚ್ಚಿ ಸಹಿಸುವ ಕರ್ಣ ದ್ರೌಪದಿಯ ವಸ್ತ್ರಾಪಹರಣದ ಸನ್ನಿವೇಶದಲ್ಲಿ ಪ್ರಜ್ಞಾಶೂನ್ಯನಾಗಿ ದ್ರೌಪದಿಯ ಅಪಮಾನಗೈಯುತ್ತಾನೆ. ದ್ರೋಣರ ಗುರುಕುಲದಲ್ಲಿ ಪ್ರಥಮ ಬಾರಿಗೆ ಕರ್ಣಾಜುನರ ಭೇಟಿಯಾಗುವ ಕ್ಷಣದಲ್ಲಿ ಹಾರುತ್ತಿದ್ದ ಗರುಡ ಪಕ್ಷಿಯ ಚುಂಚಿನಲ್ಲಿದ್ದ ಅರೆಜೀವದ ಸರ್ಪ ಇಬ್ಬರ ನಡುವೆ ಬೀಳುವುದು ಅವರಿಬ್ಬರ ವೈರತ್ವವೇ ತುಂಬಿದ ಭವಿಷ್ಯವನ್ನು ಧ್ವನಿಸುವಂತೆ ಅನ್ನಿಸಿಬಿಡುತ್ತದೆ. ರಾಜಮಾತೆ ಕುಂತೀದೇವಿ ತಮ್ಮ ಆರು ಕುದುರೆಗಳ ರಥಕ್ಕೆ ಐದೇ ಕುದುರೆಗಳನ್ನು ಕಟ್ಟುವುದು, ಪರಸ್ಪರ ಎದುರಾದಗಲೆಲ್ಲಾ ಕರ್ಣನ ಪಾದಗಳನ್ನೇ ಏಕದೃಷ್ಟಿಯಿಂದ ನೋಡುವ ಯುಧಿಷ್ಠರ…. ಹೀಗೆ ಹಲವು ಸಂಗತಿಗಳನ್ನು ಇಲ್ಲಿ ಉದಾಹರಿಸಬಹುದು.

ಕಥೆಯ ಕೊನೆಯಲ್ಲಿ ತನ್ನ ಅಂತಿಮ ಘಳಿಗೆಯಲ್ಲಿರುವ ಕರ್ಣ ತನ್ನ ಸುವರ್ಣ ದಂತಗಳನ್ನು ಯಾಚಕನಿಗೆ ದಾನ ನೀಡುವ ಸನ್ನಿವೇಶ ಅವನಿಡೀ ಬದುಕಿಗೆ ಭಾಷ್ಯ ಬರೆದಂತೆ ಕಾಣುತ್ತದೆ. ಸಾವಿನ ದ್ವಾರದಲ್ಲೂ ಬದಲಾಗದ ಅವನ ಜೀವನದೆಡೆಗಿನ ವಿಚಾರ ಧಾರೆ, ಕರ್ತವ್ಯ ನಿಷ್ಠೆ  ಆ ಸನ್ನಿವೇಶದಲ್ಲಿ ಪ್ರತಿಫಲಿತವಾಗಿದೆ. ಸಾಯುವ ಮುನ್ನಿನ ಅವನ ಅಸ್ಪಷ್ಟ ಕನವರಿಕೆಗಳು ಅವನಿಡೀ ಬದುಕಿನ ದ್ವಂದ್ವವನ್ನು ಧ್ವನಿಸಿದಂತೆ ಭಾಸವಾಗುತ್ತದೆ. ಕರ್ಣನ ಶವವನ್ನು ಶೋಧಿಸುತ್ತಾ ಬರುವ ಕೃಷ್ಣನಿಗೆ ಕಾಣುವುದು ತನ್ನ ಒಡೆಯನ ಶವದ ಹತ್ತಿರ ಕುಳಿತು ತನ್ನ ಬಾಲದ ಚಮರಿಯನ್ನು ಬೀಸುವ ವಾಯುಜಿತ….! ಅದು ಸ್ವತಃ ಕೃಷ್ಣನಿಗೇ 'ಜಗತ್ತಿನ ಮೇಲೆ ಪ್ರಕೃತಿಯ ವಿಜಯದಂತೆ ಭಾಸವಾಯಿತು' ಎಂಬ ಸಾಲುಗಳು ಕಾಡುತ್ತವೆ. ಕೈಯಲ್ಲಿ ಒಂದೊಂದು ಹಣತೆ ಹಿಡಿದು ಕೃಷ್ಣನ ಅರಸುತ್ತಾ ಕರ್ಣನ ಉರಿವ ಚಿತೆಯೆದುರು ಪಾಂಡವರು ಬರುವ ಸನ್ನಿವೇಶ ಒಂದು ಚಿತೆ ಐದು ಹಣತೆಗಳಿಗೆ ನೇಹವಾಯಿತೇನೋ ಎಂಬ ಭಾವವನ್ನು ಹುಟ್ಟಿಸಿಬಿಡುತ್ತದೆ. 

ಒಟ್ಟಿನಲ್ಲಿ ಈ ಕಾದಂಬರಿ ಓದಿ ಮುಗಿಸಿದಾಗ 
ಕರ್ಣನ ಬದುಕನ್ನು ಅವನು ರೂಪಿಸಿಕೊಳ್ಳಲಿಲ್ಲ ಅದನ್ನು ಪರಿಸ್ಥಿತಿಗಳೇ ರೂಪಿಸಿದವು ಅನ್ನಿಸಿಬಿಡುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ವಿಧಿ ನಡೆಸಿದಂತೆ ನಡೆದರೂ ತನ್ನ ವಿಚಾರಧಾರೆಗಳಿಗೆ ನಿಷ್ಠನಾದ ಕರ್ಣನಿಗೆ ಕೊನೆಯವರೆಗೂ ಸ್ಪೂರ್ತಿಯಂತೆ ಜೊತೆಯಾಗುವುದು, ಕುಗ್ಗುವ ಅವನ ಮನಕ್ಕೆ ಚೈತನ್ಯ ತುಂಬಿ ಅವನೊಂದಿಗೆ ಸಾಗುವುದು ಸೂರ್ಯದೇವನ ಪ್ರಕಾಶ ಹಾಗೂ ಹರಿವ ಗಂಗೆಯ ತೆರೆಗಳು ಮಾತ್ರವೇ. ಒಂದೇ ಮಾತಿನಲ್ಲಿ ಹೇಳುವುದಾದರೇ ಕರ್ಣನು ಯೋಧನಾಗಿ ರಣರಂಗದಲ್ಲಿ ಹೋರಾಡಿದ್ದಕ್ಕಿಂತ ತನ್ನ ಮನೋರಂಗದಲ್ಲಿನ ಅಗಣಿತ ಗೊಂದಲಗಳೊಂದಿಗೆ ಹೋರಾಡಿದ್ದೇ ಹೆಚ್ಚು. ಆ ಹೋರಾಟಗಳ ಕಥನವೇ ಮೃತ್ಯುಂಜಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ