ಮಂಗಳವಾರ, ಜೂನ್ 30, 2020

ಅನೂಹ್ಯ 40

ಸಮನ್ವಿತಾ ಮನೆಯೊಳಗೆ ಬಂದಾಗ ಮೂವರು ಮೂರು ದಿಕ್ಕುಗಳಲ್ಲಿ ಕುಳಿತು ತಮ್ಮದೇ ಆಲೋಚನಾ ಲಹರಿಯಲ್ಲಿ ಮುಳುಗಿಹೋಗಿದ್ದರು. ಇವಳ ಆಗಮನದ ಅರಿವೂ ಅವರಿಗಾಗಲಿಲ್ಲ‌. ಆಗಲೇ ಅವಳ ಮನ ಏನೋ ಅಹಿತಕರ ಘಟನೆಯನ್ನು ಶಂಕಿಸಿತು.

ಬೆಳಗ್ಗಿನಿಂದಲೂ ಅವಳ ಮನಕ್ಕೆ ಸಮಾಧಾನವಿರಲಿಲ್ಲ. ಆಸ್ಪತ್ರೆಯಲ್ಲಿಯೂ ಸರಿಯಾಗಿ ತೊಡಗಿಕೊಳ್ಳಲು ಆಗಿರಲಿಲ್ಲ. ಏನೋ ಅನಾಹುತದ ಮುನ್ಸೂಚನೆ ದೊರೆತಂತಹ ಚಡಪಡಿಕೆ ವಿಪರೀತ ತಲೆನೋವಿಗೆ ನಾಂದಿಯಾಗಿತ್ತು. ಯಾವ ಕೆಲಸದಲ್ಲೂ ಉತ್ಸಾಹ ಮೂಡದೇ ಸುಮ್ಮನೆ ಕುಳಿತಿದ್ದವಳನ್ನು ಕಂಡು ಮೀರಾ ಲೀವ್ ತೆಗೆದುಕೊಂಡು ಸ್ವಲ್ಪ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಅದನ್ನೇ ಕಾದಿದ್ದವಳಂತೆ ಸರಿಯೆಂದು ತಲೆ ಆಡಿಸಿದ್ದಳು. ಸಂಜೆ ತಾನೇ ಆಸ್ಪತ್ರೆಯಿಂದ ಕರೆದೊಯ್ಯುವೆನೆಂದು ಹೇಳಿದ್ದ ಅಭಿಗೆ ತಾನು ಮನೆಗೆ ಹೋಗುತ್ತಿರುವುದಾಗಿ ಮೆಸೇಜ್ ಹಾಕಿ ಆಟೋ ಹಿಡಿದು ಮನೆಗೆ ಬಂದಿದ್ದಳು.

ಒಳಗೆ ಕಾಲಿಟ್ಟವಳನ್ನು ಉಸಿರುಗಟ್ಟಿಸುವ ಮೌನ ಸ್ವಾಗತಿಸಿತ್ತು. ಮೂರು ದಿಕ್ಕುಗಳಲ್ಲಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಕೂತಿದ್ದ ಮೂವರನ್ನು ನೋಡಿ ಅವ್ಯಕ್ತ ಭೀತಿ ಆವರಿಸಿತು ಅವಳನ್ನು. ಸತ್ಯನಾರಾಯಣರ ಮುಖದ ತುಂಬಾ ಚಿಂತೆಯ ಕಾರ್ಮೋಡಗಳು ಮುಸುಕಿದ್ದವು. ಗೋಡಿಗೊರಗಿ ಕುಳಿತಿದ್ದ ಮಂಗಳಮ್ಮನವರ ನಿರ್ಲಿಪ್ತ ಮುಖಭಾವ ಅವಳನ್ನು ಹೆದರಿಸಿತು.

ಅವರ ಪಕ್ಕದಲ್ಲಿ ನೆಲ ನೋಡುತ್ತಾ ಕೂತಿದ್ದ ನವ್ಯಾ ಕಂಡಳು. ಅತ್ತೂ ಅತ್ತೂ ಕೆಂಪೇರಿದ ಕಣ್ಣುಗಳು, ಬಾಡಿದ ವದನ…... ಅವಳ ಮುಖ ನೋಡಿದ್ದೇ ಸಮಾಳ ಮನ ದ್ರವಿಸಿತು. ಜೊತೆಗೆ ಏನಾಗಿರಬಹುದು ಎಂಬುದರ ಕಲ್ಪನೆಯೂ ಆಯಿತು ಅವಳಿಗೆ.

ನಿಧಾನವಾಗಿ ಒಳಬಂದವಳ ಹೃದಯದ ಬಡಿತ ಅವಳಿಗೇ ಕೇಳುವಷ್ಟು ವೇಗವಾಗಿತ್ತು. ಅವಳ ಹಗುರ ಹೆಜ್ಜೆಗಳ ದನಿಯೂ ಸ್ಪಷ್ಟವಾಗಿ ಕೇಳುವಂತಹ ನೀರವತೆ........

ಮಂಗಳಾರ ಬಳಿ ಹೋಗುವ ಧೈರ್ಯವಾಗಲಿಲ್ಲ ಅವಳಿಗೆ. ನವ್ಯಾಳ ಬಳಿ ಬಂದಳು. 

ಎದುರು ಯಾರೋ ನಿಂತಿರುವಂತೆ ಭಾಸವಾಗಿ ತಲೆಯೆತ್ತಿದಳು ನವ್ಯಾ.

ಕಣ್ಣೆದುರಿಗೆ ಅದೇ ದಾರಿದೀಪ.......

ಗಾಢ ತಿಮಿರವನ್ನು ಬಡಿದೋಡಿಸಿದ ಬೆಳಕಿನ ಸೆಲೆ......

ಗುಡಿಯೊಳಗಿನ ದೇವರೆಂಬ ಶಿಲೆಯೂ ತನ್ನ ಕೈ ಬಿಟ್ಟಾಗ, ಕೈ ಹಿಡಿದು ನಡೆಸಿದಾಕೆ…....

ತನ್ನಂತಹವಳ ಬದುಕಿಗೊಂದು ಭರವಸೆ ನೀಡಿ, ಭದ್ರ ನೆಲೆಕಾಣಿಸಿ, ಬದುಕುವ ದಾರಿ ತೋರಿಸಿದವಳು......

ಸಮನ್ವಿತಾಳನ್ನು ಕಂಡೊಂಡನೆ ಮತ್ತೆ ದುಃಖ ಉಮ್ಮಳಿಸಿ ಬಂತು. ಮಂಗಳಾರತ್ತ ಕೈ ತೋರಿ ಜೋರಾಗಿ ಅಳತೊಡಗಿದಳು. ಅವಳ ಪಕ್ಕ ಕುಳಿತು, "ಎಲ್ಲಾ ಹೇಳ್ಬಿಟ್ಯಾ?" ಎಂದು ಕೇಳಿದಳು ಮೆಲುದನಿಯಲ್ಲಿ. ಹೌದೆಂದು ತಲೆಯಾಡಿಸಿದವಳು, "ಪ್ಲೀಸ್ ಸಮಾ, ಅಮ್ಮನತ್ರ ಮಾತಾಡೋಕೆ ಹೇಳೇ…..‌ ಆಗ್ಲಿಂದ ಒಂದಕ್ಷರ ಮಾತಾಡದೇ ಕಲ್ಲಿನ ತರ ಕೂತಿದ್ದಾರೆ. ನಂಗೆ.... ನಂಗೆ ಭಯ ಆಗ್ತಿದೆ ಕಣೇ....." ಬಿಕ್ಕುತ್ತಾ ನುಡಿದಳು.

ಆದರೆ ಅದಷ್ಟು ಸುಲಭವೇ? ಮಂಗಳಾರಿಗೆ ಆದ ಆಘಾತ ದೊಡ್ಡದು. ಮುಚ್ಚಿಟ್ಟಿದ್ದ ವಿಷಯವೇ ಅಷ್ಟು ಗಂಭೀರವಾದುದಲ್ಲವೇ? ಅದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಸತ್ಯನಾರಾಯಣರೂ ಕೂಡಾ ಅವರನ್ನು ಮಾತನಾಡಿಸುವ ವಿಫಲ ಪ್ರಯತ್ನ ಮಾಡಿ ಕೈಚೆಲ್ಲಿ ಕುಳಿತ್ತಿದ್ದರು. ಈಗ ಸಮನ್ವಿತಾಳ ಸರದಿ........ ಸತ್ಯ ಮುಚ್ಚಿಡುವುದರಲ್ಲಿ ಅವಳ ಪಾಲೂ ಇತ್ತು. ಏನೋ ತಪ್ಪಿತಸ್ಥ ಭಾವ….... ಮಂಗಳಾರ ಮುಖ ನೋಡುವ ಧೈರ್ಯವೂ ಅವಳಿಗಿರಲಿಲ್ಲ. ಇನ್ನು ಅವರೊಂದಿಗೆ ಮಾತನಾಡುವುದಾದರೂ ಹೇಗೆ? ಒಂದು ದಿನಕ್ಕೆ ತನಗೇ ಈ ಪರಿ ಹಿಂಸೆಯಾಗುತ್ತಿರುವಾಗ ಪಾಪ ನವ್ಯಾ....... ಇಷ್ಟು ಸಮಯದಿಂದ ಅವಳ ಮನದಲ್ಲಿ  ದಾವಾನಲವೇ ಹರಿದಿರಬಹುದು ಎನಿಸಿತು.

ಹೇಗೋ ಸಂಭಾಳಿಸಿಕೊಂಡು ಮಂಗಳಮ್ಮನವರ ಬಳಿಗೆ ಬಂದಳು. ಹುಗಿದುಹೋಗಿದ್ದ ಗಂಟಲಿಗೆ ಕಷ್ಟಪಟ್ಟು ಜೀವತುಂಬಿ, "ಅಮ್ಮಾ......." ಎಂದಳು ಮುಂದೆ ಏನು ಹೇಳುವುದೆಂದು ಆಲೋಚಿಸುತ್ತಾ.

ಆದರೆ ಅವಳಿಗೆ  ಆ ಕಷ್ಟವನ್ನೇ ಕೊಡಲಿಲ್ಲ ಅವರು.....

ಅವಳನ್ನು ನೋಡಿದ್ದೇ ತಡ…. ಅವಳನ್ನೇ ಕಾದು ಕುಳಿತಿದ್ದವರಂತೆ ಮಾತನಾಡಿದರು ಮಂಗಳಾ.

"ಬಂದ್ಯಾ.... ಬಾರಮ್ಮಾ. ನಾನೊಂದು ಪ್ರಶ್ನೆ ಕೇಳ್ತೀನಿ. ಸತ್ಯವಾದ ಉತ್ತರ ಹೇಳ್ಬೇಕು ನೀನು. ಕಿಶೋರನಿಗೆ ಎಲ್ಲಾ ವಿಷಯ ಗೊತ್ತಿದೆಯಾ? ಒಂದು ಸುಳ್ಳಿಂದ ಇಷ್ಟೆಲ್ಲಾ ಅವಾಂತರ ಆಗಿದೆ. ಈಗ ಇನ್ನೊಂದು ಸುಳ್ಳು ಹೇಳಿ ವಿಷಯ ಮುಚ್ಚಿಡೋಕೆ ಪ್ರಯತ್ನಿಸಬೇಡ. ಸತ್ಯ ಹೇಳು ಕಿಶೋರನಿಗೆ ಇವಳ ಬಗ್ಗೆ….. ಎಲ್ಲಾ ಗೊತ್ತಿದೆಯಾ......." ಮಂಜಿನಲ್ಲಿ ಅದ್ದಿದಂತಹ ತಣ್ಣಗಿನ ಸ್ವರದಲ್ಲಿ ಕೇಳಿದ್ದರು ಮಂಗಳಾ.

ಸಮನ್ವಿತಾ ಒಮ್ಮೆ ನವ್ಯಾಳ ಮುಖ ನೋಡಿದವಳು ಮಂಗಳಾ ಅವರೆಡೆಗೆ ತಿರುಗಿ ಹೌದೆಂಬಂತೆ ತಲೆಯಾಡಿಸಿದಳು. 

"ಎಷ್ಟು ಸಮಯದಿಂದ ಅವನಿಗೆ ಗೊತ್ತಿತ್ತು?" ಮತ್ತದೇ ತಣ್ಣನೆಯ ಸ್ವರ.

"ಮದುವೆಗೆ ಮುನ್ನವೇ ಅವನಿಗೆಲ್ಲವೂ ತಿಳಿದಿತ್ತು. ಎಲ್ಲಾ ತಿಳಿದೇ ನವ್ಯಾಳನ್ನು ಮದುವೆಗೆ ಒಪ್ಪಿಸೆಂದು ನನ್ನ ದುಂಬಾಲು ಬಿದ್ದಿದ್ದ. ಇವಳು ಸಾಧ್ಯವೇ ಇಲ್ಲವೆಂದು ಹಠ ಹಿಡಿದಿದ್ದಳು. ಕೊನೆಗೆ ಹಾಗೋ ಹೀಗೋ ಮಾಡಿ ಇವಳನ್ನು ಒಪ್ಪಿಸಿದೆವಾದರೂ 'ಮನೆಯವರಿಗೆಲ್ಲ ನನ್ನ ಹಿನ್ನೆಲೆ ತಿಳಿಸಿ. ಅವರು ಒಪ್ಪಿದರೆ ಮದುವೆಯಾಗೋಣ' ಎಂಬ ಷರತ್ತು ಹಾಕಿದ್ದಳು. ನವ್ಯಾ ಹಾಗೂ ತನ್ನ ಪ್ರೀತಿಯ ಬಗ್ಗೆ ಹೇಳುವಾಗಲೇ ಅವಳ ಹಿನ್ನೆಲೆಯನ್ನು ನಿಮಗೆ ಹೇಳಲು ಪ್ರಯತ್ನಿಸಿದ್ದ ಕಿಶೋರ್. ಆದರೆ ಅವಳಿಗೆ ಅಪ್ಪ ಅಮ್ಮ ಇಲ್ಲ ಎಂದಾಗಲಿನ ನಿಮ್ಮ ಪ್ರತಿಕ್ರಿಯೆಯನ್ನು ಕಂಡೇ ಅವನು ಹೆದರಿಬಿಟ್ಟ. ಇನ್ನು ಅವಳ ಹಿನ್ನೆಲೆ ತಿಳಿಸಿದರೇ ನೀವು ಖಡಾಖಂಡಿತವಾಗಿ ಇವಳನ್ನು ನಿರಾಕರಿಸುವಿರಿ ಎಂದುಕೊಂಡು ವಿಷಯ ಮುಚ್ಚಿಡುವ ನಿರ್ಧಾರ ಮಾಡಿದ್ದು....... ನಾವಿಬ್ಬರೂ ಕಲಿತ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ಇವಳನ್ನು ಅತೀ ಕಷ್ಟದಿಂದ ಈ ಮದುವೆಗೆ ಒಪ್ಪಿಸಿಬಿಟ್ಟೆವು‌. ಮುಂದೊಂದು ದಿನ ಇದೇ ವಿಷಯ ಅವಳ ನೆಮ್ಮದಿ ಕಸಿಯುವ ಉರುಳಾಗಬಹುದು ಎಂದೆನಿಸಿರಲಿಲ್ಲ ಆಗ. ಅಮ್ಮಾ….... ಈ ವಿಚಾರದಲ್ಲಿ ಇವಳ ತಪ್ಪಿಲ್ಲ. ಇಲ್ಲಿ ತಪ್ಪಾಗಿರುವುದು ಕಿಶೋರ್ ಹಾಗೂ ನನ್ನಿಂದ. ಇವಳು ಮದುವೆಯ ದಿನದವರೆಗೂ ಸತ್ಯ ಮುಚ್ಚಿಡುವುದು ಬೇಡವೆಂದು ಗೋಗರೆದಿದ್ದಳು. ಬದುಕಿನಲ್ಲಿ ನೋವನ್ನೇ ಉಂಡ ಗೆಳತಿಯ ಬದುಕು ಹಸನಾಗಲಿ ಎಂಬ ಆಸೆಯಲ್ಲಿ ಅವಳನ್ನು ಹಠಹಿಡಿದು ಒಪ್ಪಿಸಿದವಳು ನಾನೇ. ಅವಳನ್ನು ಆ ನರಕದಿಂದ ಹೊರತಂದವಳು ನಾನೇ ಆದ್ದರಿಂದ ನನ್ನ ಮಾತನ್ನು ಧಿಕ್ಕರಿಸಲಾರದೇ ಒಪ್ಪಿದಳಷ್ಟೇ..... ಹಾಗಿದ್ದ ಮೇಲೆ ತಪ್ಪು ನನ್ನದಲ್ಲವೇ? ಮದುವೆಯ ನಂತರವೂ ಸತ್ಯವನ್ನು ಹೇಳೋಣವೆಂದು ಪದೇಪದೇ ನನ್ನನ್ನು ಹಾಗೂ ಕಿಶೋರನನ್ನು ಬೇಡುತ್ತಿದ್ದವಳು ಇವಳೇ. ಅಷ್ಟೆಲ್ಲಾ ಏಕೆ? ನಿಮ್ಮಲ್ಲಿ ಸತ್ಯ ಹೇಳಿದರೆ ಒಂದೋ ಇವಳನ್ನು ಕಳೆದುಕೊಳ್ಳಬೇಕು ಇಲ್ಲಾ ನಿಮ್ಮಿಂದ ದೂರಾಗಬೇಕು… ಒಂದು ವೇಳೆ ಸತ್ಯ ಹೇಳದೇ ಹೋದರೆ ಇವಳು ಕೊರಗಿ ಕೊರಗಿಯೇ ಸಾಯುತ್ತಾಳೆ ಎಂಬ ಭೀತಿಯಲ್ಲಿ ಆಫೀಸಿನಿಂದ ವರ್ಗಾವಣೆ ಕೇಳಿ ಈ ಊರನ್ನೇ ಬಿಟ್ಟು ಅಹಮದಾಬಾದಿಗೆ ಇವಳೊಂದಿಗೆ ಹೋಗಿ ನೆಲೆಸುವ ನಿರ್ಧಾರ ಕೈಗೊಂಡಿದ್ದಾನೆ ಅವನು. ಅದೂ ಇವಳಿಗೂ ತಿಳಿಸದೆಯೇ..... ಅದಕ್ಕಾಗಿಯೇ ಅಹಮದಾಬಾದಿಗೆ ಹೋಗಿರುವುದವನು. ಬಹುಶಃ ಇಂದು ಅವನು ಇವಳಿಗೆ ಕರೆಮಾಡಿ ತಾವಿಬ್ಬರೂ ಅಹಮದಾಬಾದಿನಲ್ಲಿ ನೆಲೆ ನಿಲ್ಲುತ್ತಿರುವ ವಿಷಯ ತಿಳಿಸಿರಬೇಕು. ಅದಕ್ಕೇ ಇವಳೇ ನಿಮ್ಮ ಮುಂದೆ ಸತ್ಯ ಹೇಳುವ ನಿರ್ಧಾರ ಮಾಡಿದ್ದಾಳೆ. ಅಹಮದಾಬಾದಿಗೆ ಹೊರಟು ಕಿಶೋರನನ್ನು ನಿಮ್ಮಿಂದ ದೂರ ಮಾಡುವುದಕ್ಕಿಂತ ಸತ್ಯ ಹೇಳಿ ತಾನೇ ಎಲ್ಲರಿಂದ ದೂರಾಗುವುದೇ ನ್ಯಾಯ ಅನಿಸಿರಬೇಕು ಅವಳಿಗೆ........" ಎಲ್ಲವನ್ನೂ ಹೇಳಿ ಮುಗಿಸಿ ದೀರ್ಘವಾಗಿ ಉಸಿರೆಳೆದುಕೊಂಡಳು. 

ಈ ಬಾರಿ ಏನನ್ನೂ ಮುಚ್ಚಿಡುವ ಪ್ರಯತ್ನವನ್ನೇ ಮಾಡಲಿಲ್ಲ ಅವಳು. ಮುಚ್ಚಿಟ್ಟ ಒಂದು ಸತ್ಯ ಎಷ್ಟೆಲ್ಲಾ ಮನೋವಿಪ್ಲವಗಳಿಗೆ ಕಾರಣವಾಯಿತೆಂಬುದನ್ನು ಕಣ್ಣಾರೆ ಕಂಡಿದ್ದಳು. ಮತ್ತೆ ಅಂತಹದೇ ಸುಳಿಯಲ್ಲಿ ಬದುಕುಗಳು ಸಿಲುಕುವುದು ಬೇಕಾಗಿರಲಿಲ್ಲ. ನವ್ಯಾಳ ನಿರ್ಧಾರ ಎಲ್ಲಾ ನಿಟ್ಟಿನಿಂದಲೂ ಸರಿಯೆನಿಸಿತು. ಈ ನಿರ್ಧಾರದಿಂದಾಗಿ ಅವಳ ಹಾಗೂ ಈ ಮನೆಯವರ ಅನುಬಂಧ ಅನಿಶ್ಚಿತತೆಯ ಬಿರುಗಾಳಿಗೆ ಸಿಲುಕಿರುವುದು ನಿಜವೇ. ಆದರೆ ಸಕಾರಾತ್ಮಕವೋ ನಕಾರಾತ್ಮಕವೋ…. ಇದರಿಂದಾಗಿ ಭವಿಷ್ಯದಲ್ಲಿ ಒಂದು ಸ್ಪಷ್ಟ ಫಲಿತಾಂಶವಂತೂ ಖಚಿತವಾಗಿ ಹೊರಬೀಳುತ್ತದ. ನವ್ಯಾಳ ಪರಿಸ್ಥಿತಿಯನ್ನು ಅವಳ ಸ್ಥಾನದಲ್ಲಿ ನಿಂತು ಅವಲೋಕಿಸಿ ಅರ್ಥೈಸಿಕೊಂಡು ಸ್ವೀಕರಿಸಿದರೆ ಬಾಂದಳದ ತಾರೆ ಕೈಸೇರಿದಷ್ಟೇ ಸಂತೋಷ..... ಒಂದು ವೇಳೆ ಗೊಡ್ಡು ಸಂಪ್ರದಾಯಗಳು, ಹುರುಳಿಲ್ಲದ ನೀತಿ ನಿಯಮಗಳು, ಅರ್ಥಹೀನ ಕಟ್ಟಳೆಗಳ ಸೋಗಿನ ಸೆರಗಲ್ಲಿ ಮಾನವೀಯತೆ ಮರೆತ ಸಮಾಜದ ಭಯಕ್ಕೆ ಹೆದರಿ ಅವಳ ಕೈಬಿಟ್ಟರೆ ಬೇಸರವಿಲ್ಲ ಎನ್ನಲಾರೆ. ಆದರೆ ಅವಳಲ್ಲಾ ನೋವುಗಳಲ್ಲಿ ಪಾಲುದಾರಳಾಗಿ, ಕೈ ಹಿಡಿದು ನಡೆಸಲು ಊರುಗೋಲಾಗಿ ಸದಾ ನಾನಿರುತ್ತೇನೆ. ಎಲ್ಲಾ ವಿಷಯ ತಿಳಿದಿರುವ ಅಭಿ ಕೂಡಾ ಈ ಪಯಣದಲ್ಲಿ ನಮ್ಮ ಜೊತೆಗಿರುತ್ತಾರೆ ಎಂಬ ಧೈರ್ಯ ಅವಳಿಗೆ. ಏನಾದರೂ ಆಗಲಿ, ಬಂದಿದ್ದನ್ನು ಎದುರಿಸುವ ಎಂಬ ನಿಲುವಿಗೆ ಬದ್ಧಳಾಗಿದ್ದಳು ಸಮನ್ವಿತಾ.

ಇವಳ ಮಾತುಗಳನ್ನೆಲ್ಲಾ ಕೇಳಿದ ಮಂಗಳಮ್ಮ ಏನೊಂದೂ ನುಡಿಯದೇ ಅಲ್ಲಿಂದ ಎದ್ದು ಸೀದಾ ತಮ್ಮ ಕೋಣೆಯತ್ತ ನಡೆದಾಗ ಸತ್ಯನಾರಾಯಣರು ಸೊಸೆಯೆಡೆಗೊಂದು ಮಮತೆಯ ನೋಟ ಬೀರಿ ಅವರನ್ನು ಹಿಂಬಾಲಿಸಿದರು.  ನವ್ಯಾ ಅಧೀರಳಾದಳು. ಅವಳು ಸತ್ಯ ನುಡಿದಲ್ಲಿಂದ ಅವಳೊಂದಿಗೆ ಮಾತಿರಲೀ ಅವಳ ಮುಖವನ್ನೂ ಸಹ ನೋಡಿರಲಿಲ್ಲ ಮಂಗಳಮ್ಮ. 'ಅಷ್ಟು ಹೀನಳೇ ನಾನು?' ಪ್ರಶ್ನಿಸಿಕೊಂಡಳು. 'ಹೌದು. ನೀನು ಹೀನಳೇ... ಕಾಲು ಭಾಗದ ಬದುಕನ್ನೇ ವೇಶ್ಯೆಯಾಗಿ ಕಳೆದಾಕೆ ನೀನು. ಇಂತಹ ಸಂಸ್ಕಾರವಂತ ಕುಟುಂಬದ ಕಣ್ಣಿಗೆ ಸುಳ್ಳಿನ ಮಣ್ಣೆರಚಿ ಗರತಿಯಾಗಿ ಮೆರೆಯಲು ಹೊರಟ ನೀನು ಅವಕಾಶವಾದಿಯಲ್ಲವೇ?' ಎಂದು ಚುಚ್ಚಿದ ಅಂತರಾತ್ಮಕ್ಕೆ ಬದಲು ನೀಡಲಾಗದೇ ಮತ್ತೆ ಕಣ್ಣೀರಾದಳು ನವ್ಯಾ.

ಕಣ್ಣೀರ ಮಳೆ ಸುರಿದು ಮನದ ಬಾನು ಕೊಂಚವಾದರೂ ಹಗುರವಾಗಲಿ ಎಂದುಕೊಂಡ ಸಮನ್ವಿತಾ ನವ್ಯಾಳನ್ನು ಅವಳ ಪಾಡಿಗೆ ಬಿಟ್ಟು ಹೊರಗೆ ಬಂದಳು. ಮಾಡಬೇಕಾದ ಬಹುಮುಖ್ಯ ಕೆಲಸವೊಂದಿತ್ತು. ಅಭಿಗೆ ಕರೆ ಮಾಡಲು ಫೋನ್ ತೆಗೆದಾಗ ಅವನ ಹಾಗೂ ಕಿಶೋರನ ಮಿಸ್ ಕಾಲುಗಳು ಕಂಡವು. ಅಭಿರಾಮನಿಗೆ ಫೋನಾಯಿಸಿದಳು. ಇವಳ ಕರೆಗೇ ಕಾದಿದ್ದವನಂತೆ ಒಂದು ರಿಂಗಿಗೆ ಸ್ವೀಕರಿಸಿದ.

"ಈಸ್ ಎವ್ವೆರಿಥಿಂಗ್ ಫೈನ್? ಯಾಕೆ ಹಾಗೆ ಮೆಸೇಜ್ ಹಾಕಿ ಮನೆಗೆ ಹೋದೆ ಸಮನ್ವಿತಾ? ಆಗ್ಲಿಂದ ಫೋನ್ ಮಾಡ್ತಾನೇ ಇದ್ದೀನಿ ತೆಗೀತಿಲ್ಲ ನೀನು. ಏನಾದ್ರೂ ಸಮಸ್ಯೆಯಾ?" ವಿಚಾರಿಸಿದ.

"ಅಭಿ, ನವ್ಯಾ ಮನೆಯಲ್ಲಿ ಎಲ್ಲಾ ವಿಷಯನೂ ಹೇಳ್ಬಿಟ್ಟಿದ್ದಾಳೆ. ಇಲ್ಲಿನ ಪರಿಸ್ಥಿತಿ ಸ್ವಲ್ಪವೂ ಸರಿಯಿಲ್ಲ. ನನಗೊಂದು ಸಹಾಯ ಬೇಕಿತ್ತು. ಕಿಶೋರನಿಗೆ ಫ್ಲೈಟ್ ಟಿಕೆಟ್ ಅರೇಂಜ್ ಮಾಡೋಕೆ ಸಾಧ್ಯವೇ? ಈಗಿನ ಸ್ಥಿತಿಯಲ್ಲಿ ಇಲ್ಲಿ ಅವನಿರುವು ಬಹಳ ಮುಖ್ಯ. ಅದರಲ್ಲೂ ಅಮ್ಮನ ಬಳಿ ಮಾತಾಡಲು ನಮ್ಮಿಂದ ಸಾಧ್ಯವಿಲ್ಲ. ಅವ್ನು ಆದಷ್ಟು ಬೇಗ ಇಲ್ಲಿರಬೇಕು" ಎಂದಳು.

"ಹ್ಮಾಂ, ಐ ವಿಲ್ ಅರೇಂಜ್. ನವ್ಯಾ ಹೇಗಿದ್ದಾಳೆ? ನಾನು ಮನೆಗೆ ಬರ್ಲಾ?" ಕೇಳಿದ

"ಯಾರು ಹೇಗಿದ್ದಾರೆ, ಯಾರ ಮನಸ್ಸಲ್ಲಿ ಎಂತಹ ಬಿರುಗಾಳಿ ಎದ್ದಿದೆ ಏನೊಂದೂ ತಿಳಿಯುತ್ತಿಲ್ಲ. ಆದರೆ ನೀವು ಇಲ್ಲಿಗೆ ಬರಬೇಡಿ. ಈಗಾಗಲೇ ನವ್ಯಾಳ ಸತ್ಯ ತಿಳಿದು ಸಮಾಜವನ್ನು ಹೇಗೆ ಎದುರಿಸುವುದು ಎಂಬ ಭೀತಿಗೆ ಸಿಲುಕಿದ್ದಾರೆ ಮನೆಯವರು. ನಿಮಗೂ ವಿಚಾರ ತಿಳಿದಿದೆ ಅಂತ ಗೊತ್ತಾದರೆ ಹೆದರಿದವರ ಮೇಲೆ ಹಾವು ಎಸೆದಂತಾಗುತ್ತದೆ. ಹಾಗೆಯೇ ಅದು ನವ್ಯಾಳಿಗೂ ಕಸಿವಿಸಿ ಉಂಟುಮಾಡಬಹುದು. ನಿಮಗೆ ಸತ್ಯ ಗೊತ್ತಿದೆ ಅನ್ನುವ ವಿಚಾರ ನಮ್ಮಿಬ್ಬರ ನಡುವೆಯೇ ಉಳಿದುಬಿಡಲಿ. ಕಿಶೋರನಿಗೆ ನಾನೇ ಕರೆ ಮಾಡಿ ವಿಚಾರ ತಿಳಿಸಿ ಕೂಡಲೇ ಹೊರಡುವಂತೆ ಹೇಳುತ್ತೇನೆ. ನೀವು ಟಿಕೆಟ್ ಅರೇಂಜ್ ಮಾಡಿ ಹೇಗಾದರೂ ಅವನಿಗೆ ತಲುಪಿಸಿದರೆ ಸಾಕು" ಅವಳ ಮಾತು ಅವನಿಗೂ ಸರಿಯೆನಿಸಿತು.

"ಸರಿ ನೀನು ಕಿಶೋರನೊಂದಿಗೆ ಮಾತನಾಡುವಷ್ಟರಲ್ಲಿ ನಾನು ಟಿಕೇಟಿಗೆ ವ್ಯವಸ್ಥೆ ಮಾಡುತ್ತೇನೆ. ಹೆಚ್ಚು ಚಿಂತಿಸಬೇಡ. ಎಂದಾದರೂ ಹೊರಬರಲೇ ಬೇಕಿದ್ದ ಸತ್ಯ ಇಂದೇ ಅನಾವರಣವಾದದ್ದು ಒಳ್ಳೆಯದಾಯಿತು ಎಂದುಕೊಳ್ಳೋಣ. ಕಿಶೋರ್ ಮನೆಬಿಡುವುದೂ ತಪ್ಪಿತು ಹಾಗೆಯೇ ನವ್ಯಾಳ ಮನಕ್ಕೂ ತುಸು ನಿರಾಳ. ಸ್ವಲ್ಪ ಸಮಯ ನೀಡಿದರೆ ಎಲ್ಲವೂ ಸರಿಹೋಗಬಹುದು. ಹಾಗೆಯೇ ಆಶಿಸೋಣ‌. ಅದೇನೇ ಆಗಲೀ ನಾನು ನಿನ್ನೊಂದಿಗಿರುವೆ. ಟೇಕ್ ಕೇರ್. ಬೆಳಕು ಹರಿಯುವುದರೊಳಗೆ ಕಿಶೋರ್ ಮನೆಯಲ್ಲಿರುತ್ತಾನೆ. ಅಲ್ಲಿಯವರೆಗೆ ಆದಷ್ಟು ಮೂವರನ್ನು ಸಂಭಾಳಿಸು......" ಎಂದವನು ಕರೆ ಕಡಿತಗೊಳಿಸಿದ.

ಸಮನ್ವಿತಾ ಕೂಡಲೇ ಕಿಶೋರನಿಗೆ ಕರೆ ಮಾಡಿದಳು. ಅವನಾಗಲೇ ಎಲ್ಲರಿಗೂ ಕರೆ ಮಾಡಿ ಯಾರೂ ಕರೆ ಸ್ವೀಕರಿಸದಿದ್ದುದನ್ನು ಕಂಡು ಗಾಬರಿಯಾಗಿ ಮನೆಗೆ ವಾಪಾಸಾಗಲು ಫ್ಲೈಟ್ ಟಿಕೆಟ್ ವಿಚಾರಿಸಲು ಹೊರಟುಬಿಟ್ಟಿದ್ದ. ಅವನ ಮನಸ್ಸಿಗೆ ನವ್ಯಾ ಹೀಗೆ ಏನೋ ಮಾಡಿರಬಹುದೆಂದು ಬಲವಾಗಿ ಅನಿಸತೊಡಗಿತ್ತು. ಫೋನಿನಲ್ಲಿ ಅವಳಿಗೆ ವಿಷಯ ತಿಳಿಸಿದ್ದಕ್ಕೆ ತನ್ನನ್ನು ತಾನೇ ಅದೆಷ್ಟು ಹಳಿದುಕೊಂಡನೋ…….. ಆಗಲೇ ಸಮಾಳ ಕರೆ ಬಂದಿತ್ತು. 

"ಮನೆಲೀ ಎಲ್ಲಾ ವಿಷಯ ಗೊತ್ತಾಯ್ತಾ? ನವ್ಯಾ ಎಲ್ಲಾ ಹೇಳ್ಬಿಟ್ಲಾ?" ಕರೆ ಸ್ವೀಕರಿಸಿದ ಕೂಡಲೇ ಕೇಳಿದ್ದ.

"ಹೌದು ಕಿಶೋರ್. ಇನ್ನು ಮುಚ್ಚಿಡಲು ಏನೂ ಉಳಿದಿಲ್ಲ. ನೀನು ಪರವೂರಿಗೆ ಓಡುವ ಅಗತ್ಯವೂ ಇಲ್ಲ. ಅಭಿರಾಮ್ ನಿನಗೆ ಟಿಕೆಟ್ ಅರೇಂಜ್ ಮಾಡ್ತಾರೆ. ಕೂಡಲೇ ಹೊರಟು ಬಾ. ಅಮ್ಮನ ಮನಸ್ಥಿತಿ ಊಹೆಗೂ ನಿಲುಕುತ್ತಿಲ್ಲ ಕಣೋ. ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಯಾಕೋ ಭಯವಾಗುತ್ತಿದೆ..... ಪ್ಲೀಸ್ ಬೇಗ ಬಾ ಕಿಶೋರ್...." ಸಣ್ಣ ದನಿಯಲ್ಲಿ ಹೇಳಿದಳು. ಕೂಡಲೇ ಹೊರಡುವುದಾಗಿ ಹೇಳಿ ಫೋನಿಟ್ಟ.

ಇವಳು ಒಳಗೆ ಬಂದಾಗ ನವ್ಯಾ ಅಲ್ಲೇ ಮುದುರಿ ಕುಳಿತು ಬಿಕ್ಕುತ್ತಿದ್ದಳು. ಎಬ್ಬಿಸಿ ಕೋಣೆಗೆ ಕರೆದೊಯ್ಯಲು ನೋಡಿದಳಾದರೂ ಅವಳು ಅಲ್ಲಿಂದ ಕದಲಲಿಲ್ಲ. ಕಡೆಗೆ ಸೋತು ಅಲ್ಲೇ ಅವಳೊಂದಿಗೆ ಕುಳಿತಳು. ಮಂಗಳಮ್ಮ ಕೋಣೆಯಲ್ಲಿ ಬಿಮ್ಮನೆ ಕುಳಿತಿದ್ದರು. ಸತ್ಯನಾರಾಯಣರು ಅವರನ್ನು ಮಾತನಾಡಿಸುವ ಪ್ರಯತ್ನ ಯಶಸ್ವಿಯಾಗದೇ ಮುಂದೇನು ಎಂಬ ಯೋಚನೆಯಲ್ಲಿದ್ದರು. ಊಟ ದೂರದ ಮಾತು, ಯಾರೊಬ್ಬರಿಗೂ ಹನಿ ನೀರನ್ನೂ ಸೇವಿಸುವ ಮನವಿರಲಿಲ್ಲ. 

ನವ್ಯಾಳತ್ತ ನೋಟ ಹರಿಸಿದಳು. ಬಿಕ್ಕುವಿಕೆಯೇನೋ ನಿಂತಿತ್ತು. ಆದರೆ ಅವತ್ತು ವೇಶ್ಯಾಗೃಹದಲ್ಲಿ ಮೊದಲಬಾರಿಗೆ ನೋಡಿದಾಗ ಹೇಗೆ ಕಂಡಿದ್ದಳೋ ಇಂದು ವರ್ಷಗಳ ನಂತರ ಮತ್ತೆ ಅದೇ ತೆರನಾದ ಶೂನ್ಯತೆಯ ಭಾವ ನವ್ಯಾಳ ಮುಖದಲ್ಲಿತ್ತು. 'ಇದಕ್ಕಾಗಿ ಇವಳನ್ನು ಬಿಡಿಸಿಕೊಂಡು ಬಂದೆಯಾ? ಇದೇ ಏನು ನೀನು ಇವಳ ಬದುಕನ್ನು ರೂಪಿಸಿದ ರೀತಿ?' ಎಂಬ ಮನದ ಪ್ರಶ್ನೆಗೆ ಉತ್ತರ ಸಿಗದೇ ಹೋಯಿತು.

ಮೊದಲು ಮಂಗಳಮ್ಮ ತಮ್ಮ ಮೌನ ಮುರೀಯಬೇಕು. ಮಂಗಳಾರೊಂದಿಗೆ ಈಗ ಯಾರಾದರೂ ಮಾತನಾಡಬಲ್ಲರೆಂದರೆ ಅದು ಕಿಶೋರ್ ಮಾತ್ರ. ಹಜಾರದಲ್ಲಿ ನವ್ಯಾಳ ಪಕ್ಕ ಕುಳಿತು ಕಿಶೋರನ ಆಗಮನವನ್ನೇ ನಿರೀಕ್ಷಿಸತೊಡಗಿದಳು ಸಮನ್ವಿತಾ. ಅದರ ಹೊರತು ಇನ್ಯಾವ ಆಯ್ಕೆಗಳೂ ಇರಲಿಲ್ಲ ಅವಳಿಗೆ......... 

              ************************

ನವ್ಯಾಳ ಬಾಯಿಂದ ಹೊರಬಿದ್ದ ಮಾತುಗಳನ್ನು ಇನ್ನೂ ನಂಬಲಾಗುತ್ತಿರಲಿಲ್ಲ ಮಂಗಳಮ್ಮನವರಿಗೆ. ಅವರು ಮಾತನಾಡಲಾರದಷ್ಟು ಹೈರಾಣಾಗಿದ್ದರು. ನವ್ಯಾಳ ಮೇಲೆ ವಿಪರೀತ ಸಿಟ್ಟು ಬಂದಿದ್ದೂ ನಿಜವೇ……. ತಮ್ಮ ಮನೆಯ ಶಾಂತಿಯನ್ನೇ ನಾಶಮಾಡಿ, ನಾಲ್ಕು ಜನರೆದುರು ಮರ್ಯಾದೆ ಹರಾಜು ಹಾಕಲು ತಯಾರಾಗಿರುವವಳನ್ನು ಮನೆಯಿಂದ ಹೊರಹಾಕಬೇಕು ಎನಿಸುತ್ತಿತ್ತು ಕೂಡಾ. ಆದರೆ ಯಾಕೋ ಅವರ ಸ್ವರವೇಳುತ್ತಿರಲಿಲ್ಲ……. ಮೊದಲಿನಿಂದಲೂ ತೀರಾ ಸಾತ್ವಿಕ ಸ್ವಭಾವವನ್ನು ಮೈಗೂಡಿಸಿಕೊಂಡವರು. ಸೊಸೆಯ ಮೇಲೆ ದನಿಯೆತ್ತಲು ಮೆದುಳು ಪ್ರೇರೇಪಿಸುತ್ತಿದ್ದರೂ ಯಾಕೋ ಸಾಧ್ಯವಾಗಲೇ ಇಲ್ಲ. ನವ್ಯಾಳ ಮುಖ ನೋಡಿದ ಯಾರಿಗೂ ಅವಳನ್ನು ದಂಡಿಸುವುದಿರಲೀ, ಅವಳಿಗೆ ದನಿಯೆತ್ತಿ ಗದರಲೂ ಸಾಧ್ಯವಾಗದು. ಅಷ್ಟು ಮಗುವಿನಂತಹ ಮುಗ್ಧ ಮೃದು ಭಾವಗಳ ಹುಡುಗಿಯವಳು. 

'ಆ ಮುಗ್ಧ ಮುಖ ನೋಡಿಯೇ ಮೋಸ ಹೋದೆವಾ ನಾವು? ಅದೆಷ್ಟು ಚೆನ್ನಾಗಿ ಇಷ್ಟು ವರ್ಷಗಳು ನಟಿಸಿಬಿಟ್ಟಳು….? ಒಂದಿನಿತೂ ಅನುಮಾನ ಬರಲಿಲ್ಲ ನಮಗೆ. ಇವತ್ತೂ ಅವಳಾಗೇ ಹೇಳದಿದ್ದರೆ ನಮಗೆ ಈ ವಿಚಾರ ತಿಳಿಯುತ್ತಲೇ ಇರಲಿಲ್ಲವೇನೋ. ಎಂತಹ ನಯವಾದ ಮೋಸ......

ಬಾಯ್ತುಂಬಾ 'ಅಮ್ಮಾ' ಎಂದು ಕರೆಯುತ್ತಲೇ ಬೆನ್ನಿಗೆ ಇರಿಯುವ ಕೆಲಸಮಾಡಿಬಿಟ್ಟೆಯಲ್ಲವೇ…... ಆ ಬಗ್ಗೆ ಯೋಚಿಸಿದರೇ ಮೈ ಮೇಲೆ ಮುಳ್ಳುಗಳು ಎದ್ದಂತಾಗುತ್ತೆ. ನೀನು ಮಾಡಿರೋ ಕೆಲಸಕ್ಕೆ ಬಡಿದು ಮನೆಯಿಂದ ಹೊರಹಾಕುವ ಅನ್ನಿಸುತ್ತೆ. ಯಾಕೇ ಹೀಗ್ಮಾಡಿದೆ? ಏನು ಕಡಿಮೆ ಮಾಡಿದ್ವಿ ನಿಂಗೆ? ನನ್ನ ಮಕ್ಕಳಿಗಿಂತ ಹೆಚ್ಚಾಗಿ ಆದರಿಸಿದೆ ನಿನ್ನ. ಇಡೀ ಊರು ತುಂಬಾ ನನ್ನ ಸೊಸೆ ಹಾಗೇ, ನನ್ನ ಸೊಸೆ ಹೀಗೆ, ಚಿನ್ನ, ವಜ್ರ, ವೈಢೂರ್ಯದಂತಹವಳು ಅಂತ ಎಷ್ಟು ಮೆರೆಸಿದ್ದೆ. ಆದ್ರೆ ನೀನು ಮಾಡಿದ್ದೇನು? ನಮ್ಮನೆಯ ಗೌರವವನ್ನೇ ಬೀದಿಗೆ ತಂದು ನಿಲ್ಲಿಸಿಬಿಟ್ಟೆ. ಇಷ್ಟು ವರ್ಷಗಳು ಎಷ್ಟು ಮರ್ಯಾದೆಯಿಂದ ಬಾಳಿದ್ದೀವಿ. ಈಗ ನೀನ್ಯಾರು, ನಿನ್ನ ಕಸುಬೇನು ಅಂತ ನಾಲ್ಕು ಜನಕ್ಕೆ ಗೊತ್ತಾದ್ರೇ ಜನ ನಮ್ಮ ಮುಖಕ್ಕೆ ಉಗಿಯೋಲ್ವಾ? ಇಷ್ಟು ವರ್ಷದಲ್ಲಿ ಒಂದೇ ಒಂದು ಸಲಕ್ಕೂ ನಮಗೆ ಸತ್ಯ ಹೇಳ್ಬೇಕು ಅನ್ನಿಸ್ಲಿಲ್ವಾ ನಿನಗೆ? ಆತ್ಮಸಾಕ್ಷಿ ಅನ್ನೋದೇ ಇಲ್ವಾ…. ಅದೂ ಸರಿಯೇ. ಹುಚ್ಚು ನನಗೆ….. ಹೋಗಿ ಹೋಗಿ ಯಾರ್ಹತ್ರ ಕೇಳ್ತಿದ್ದೀನಿ ನೋಡು.... ಸ್ವಂತ ಮಗಳ ತರ ನೋಡ್ಕೊಂಡೆ ನಿನ್ನ. ನನ್ನ ಹೊಟ್ಟೆ ಉರಿಸುತ್ತಿದ್ದೀಯಲ್ಲೇ.... ನೀನು ಖಂಡಿತಾ ಉದ್ದಾರ ಆಗೋಲ್ಲ ಕಣೇ….. ನಿನ್ನ ಮದುವೆಯ ಆಸೆಗೆ ನನ್ನ ಮಗನೇ ಬೇಕಾಗಿತ್ತಾ? ನಾವು ಮಾನವಂತ ಜನ. ಮರ್ಯಾದೆಗೋಸ್ಕರವೇ ಬದ್ಕೋರು. ನಾಲ್ಕಾರು ಜನಕ್ಕೆ ವಿಷಯ ತಿಳಿದ್ರೇ ನಮ್ಮ ಗತಿ ಏನು? ಇಂತಾ ಹುಡುಗಿನ ಮನೇಲಿ ತಂದಿಟ್ಕೊಂಡು ದಂಧೆ ನಡೆಸ್ತಿದ್ದಾರೆ ಅಂತ ನಮಗೆ ತಲೆಹಿಡುಕರ ಪಟ್ಟ ಕಟ್ತಾರೆ. ಸಮಾಜದಿಂದ ಬಹಿಷ್ಕಾರ ಹಾಕ್ತಾರೆ. ಯಾಕೇ ಹೀಗೆ ಮಾಡ್ಬಿಟ್ಟೆ? ಅದೇನು ಹೇಳಿ ಬಲೆಗೆ ಬೀಳಿಸಿದೆ ನನ್ನ ಮಗನನ್ನು? ಪಾಪದವ್ನು ಅವ್ನು. ಕಷ್ಟ ಅಂದ್ರೇ ಕರಗಿ ಬಿಡ್ತಾನೆ. ಹಿಂದೆಮುಂದೆ ನೋಡ್ದೇ ಸಹಾಯ ಮಾಡೋಕೆ ಓಡುತ್ತಾನೆ. ಅದನ್ನೇ ಅಸ್ತ್ರವಾಗಿ ಬಳಸ್ಕೊಂಡು ನಮ್ಮ ಮನೆಗೆ ಬಂದು ಸೇರ್ಕೊಂಡ್ಯಾ?' ಮಂಗಳಾ ಮನದಲ್ಲಿಯೇ ನವ್ಯಾಳೊಂದಿಗೆ ಜಗಳಕ್ಕಿಳಿದಿದ್ದರು.

ಸತ್ಯ ತಿಳಿದ ಮೇಲೆ ನವ್ಯಾಳ ಪ್ರತೀ ನಡವಳಿಕೆಯೂ ಪ್ರಶ್ನಾರ್ಹವಾಗಿ ಕಾಣತೊಡಗಿತ್ತು. ಅವರು ವಿವೇಚನಾರಹಿತರಾಗಿ ಯೋಚಿಸತೊಡಗಿದ್ದರು.

ಈಗವರಿಗೆ ಸೊಸೆ ವೇಶ್ಯೆಯಾಗಿದ್ದಳು ಎಂಬುದಕ್ಕಿಂತಲೂ ಈ ವಿಷಯ ಹೊರಜಗತ್ತಿಗೆ ತಿಳಿದರೆ ನೆರೆಕರೆಯ ಜನರು, ಈ ಸಮಾಜ ನಮ್ಮನ್ನು ಹೇಗೆ ಕಾಣಬಹುದು ಎಂಬುದೇ ಚಿಂತೆಯಾಗಿಹೋಗಿತ್ತು. 

ಅವರಿಗಿದ್ದುದು ಸಮಾಜದ ಭಯ. ಆ ಭಯವೇ ಈಗ ಅವರ ಯೋಚನೆಗಳನ್ನು ಆಳುತ್ತಿದ್ದುದು. ಇದರಲ್ಲಿ ಅವರ ತಪ್ಪಿದೆ ಎಂದೂ ಹೇಳಲಾಗದು. ತಲೆತಲಾಂತರದಿಂದ ನಾವು ಬದುಕಿರುವುದೇ ಹೀಗಲ್ಲವೇ? ನಮಗೆ ನಮ್ಮ ಹಾಗೂ ನಮ್ಮವರ ಮೇಲಿನ ಪ್ರೀತಿ, ನಂಬಿಕೆಗಿಂತ ಸಮಾಜದ ಮೇಲಿನ 'ಗೌರವ' ಎಂಬ ಭಯವೇ ವಿಪರೀತ. ಎಷ್ಟಾದರೂ ಈ ಲೋಕದಲ್ಲಿ ನಮ್ಮ ಆತ್ಮಸಾಕ್ಷಿಗಿಂತ ಸಮಾಜದ ಕಂದಾಚಾರಗಳಿಗೆ ಬೆಲೆ ಹೆಚ್ಚಲ್ಲವೇ….. ಯೋಚನೆಗಳೇ ಪೂರ್ವಾಗ್ರಹ ಪೀಡಿತವಾಗಿರುವಾಗ ಶಾಂತಿ, ನೆಮ್ಮದಿ ದೊರಕುವುದಾದರೂ ಎಲ್ಲಿಂದ…...?

ಶಾಂತಿ ಮಾಡಿಸಲು ತಣ್ಣಗಾಗುವವು

ರಾಹು ಕೇತು ಮಿಕ್ಕೆಲ್ಲಾ ನವಗ್ರಹ

ಭ್ರಾಂತಿ ಮೂಡಿಸಿ ಬಿಡದೆ 

ಕಾಡುವುದೊಂದೆ ಪೂರ್ವಾಗ್ರಹ!

(ಕೃಪೆ: ಅಂತರ್ಜಾಲ)

ಜಗದಲ್ಲೇ ಅತೀ ಬುದ್ಧಿವಂತ, ಪ್ರಜ್ಞಾವಂತ, ವಿದ್ವತ್ಪೂರ್ಣ ಜೀವಿ ಮಾನವ. ಆದರೆ ಅದೇ ಅವನ ಮಿತಿಯೂ ಹೌದೇನೋ….. ಬೇರ್ಯಾವ ಜೀವಿಗಳಲ್ಲೂ ಇರದ ಪೂರ್ವಾಗ್ರಹ ಪೀಡಿತ ಆಲೋಚನೆಗಳು ಮನುಜನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಅದರಿಂದ ಯಾರು ಉದ್ಧಾರವಾಗದೇ ಹೋದರೂ, ಅದರಿಂದಾಗಿ ಹಾಳಾದ ಮನಸ್ಸುಗಳಿಗೆ ಲೆಕ್ಕವಿಲ್ಲ.

ಅಂತಹದೇ ಪೂರ್ವಾಗ್ರಹ ಪೀಡಿತ ಕಟ್ಟುಪಾಡುಗಳ ಹಂಗಿಗೆ ಬಿದ್ದಿದ್ದರು ಮಂಗಳಮ್ಮ. ಅವರ ಯೋಚನೆಗಳು ಸಮಾಜದ ಸ್ವೀಕೃತಿಯ ಸುತ್ತ ಪರಿಭ್ರಮಿಸತೊಡಗಿದ್ದವು.

     *********ಮುಂದುವರೆಯುತ್ತದೆ**********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ