ಮಂಗಳವಾರ, ಜೂನ್ 30, 2020

ಅನೂಹ್ಯ 42

ಪತಿಯ ಹರಿತವಾದ ಮಾತುಗಳು ಮಂಗಳಾರ ವಿವೇಕವನ್ನು ಜಾಗೃತಗೊಳಿಸಿತ್ತು. ಮನಸ್ಸು ಆತ್ಮವಿಮರ್ಶೆಗೆ ಇಳಿದಿತ್ತು. ಆಳವಾಗಿ ಯೋಚಿಸಿದಷ್ಟೂ ನನ್ನ ಮನೆ, ನನ್ನ ಕುಟುಂಬ ಎಂದು ಸದಾ ತಮ್ಮ ಒಳಿತನ್ನೇ ಬಯಸುವ ಸೊಸೆಯ ಎದುರು, ಮಗನ ಉದಾತ್ತ ಯೋಚನೆಯೆದುರು, ಸಮನ್ವಿತಾಳ ನೈತಿಕ ಮೌಲ್ಯಗಳೆದುರು, ಪರಿಸ್ಥಿತಿ ಅರ್ಥೈಸಿಕೊಂಡ ಗಂಡನೆದುರು ತಾವು ತೀರಾ ಕುಬ್ಜರಾದಂತೆ ಎನಿಸಿತು. 

ಹೆತ್ತವರಿಂದ ಮಗನನ್ನು ದೂರ ಮಾಡಬಾರದೆಂಬ ಕಾರಣಕ್ಕೆ ಹಿಂದೂ ಮುಂದೂ ಯೋಚಿಸದೇ ಸತ್ಯ ನುಡಿದುಬಿಟ್ಟಳೆಂದರೆ ಅದೆಷ್ಟು ಪ್ರೀತಿ ವಿಶ್ವಾಸವಿರಬೇಕು ಅವಳಿಗೆ ನಮ್ಮ ಮೇಲೆ....?  ಅವಳೆಂದೂ ನನ್ನನ್ನು ಅತ್ತೆಯ ರೀತಿ ಕಾಣಲೂ ಇಲ್ಲ ಹಾಗೆ ಸಂಬೋಧಿಸಲೂ ಇಲ್ಲ. 'ಅಮ್ಮಾ' ಎಂದೇ ಕರೆಯುತ್ತಿದ್ದುದು. ಮಗಳಿಗೆ ಅಮ್ಮನ ಮೇಲಿರುವಂತಹ ಕಾಳಜಿ, ಅಕ್ಕರೆ ಅವಳಿಗೆ ನನ್ನ ಮೇಲೆ….. 

ಇಂತಹ ಪ್ರೀತ್ಯಾದರಕ್ಕೆ ತಾನು ಯೋಗ್ಯಳೇ?

ಅವರ ಅಂತರಾತ್ಮ ಗಹಗಹಿಸಿತು....

'ನೀನೆಂತಹಾ ಯೋಗ್ಯೆ...?

ಎಂತಹ ಗಟ್ಟಿ ಗುಂಡಿಗೆಯವರಾದರೂ ಹೇಳಲು ಸಾವಿರ ಬಾರಿ ಯೋಚಿಸಿ ಹೆದರುವಂತಹ ಸತ್ಯವನ್ನು ಅರೆಘಳಿಗೆ ಯೋಚಿಸದೇ ನುಡಿದವಳನ್ನು ಹೇಗೆ ನಡೆಸಿಕೊಂಡೆ? ನೀನು ಮಾತನಾಡಿ, ಬೈದಿದ್ದರೂ ಸಹಿಸುತ್ತಿತ್ತು ಆ ನೊಂದ ಜೀವ…... ಆದರೆ ನೀನು….? ಮೌನವೆಂಬ ಕಡು ಕ್ರೂರ ಶಿಕ್ಷೆ ವಿಧಿಸಿರುವೆ ಆ ಬಸವಳಿದ ಮನಕ್ಕೆ. ಆಡಿದ ಮಾತುಗಳು, ಬೈಗುಳಗಳು ಕಾಲಕ್ರಮೇಣ ಮನದ ಭಿತ್ತಿಯಿಂದ ಮರೆಯಾಗಬಹುದೇನೋ..... ಈ ಜಗದಲ್ಲಿಯೇ ಸಹಿಸಲಸಾಧ್ಯವಾದ ಶಿಕ್ಷೆ ಎಂದರೆ ನಮ್ಮ ಪ್ರೀತಿಪಾತ್ರರ ಕಡು ಮೌನವಲ್ಲವೇ.....? ಅದು ನಮ್ಮನ್ನು ಕುಗ್ಗಿಸಿ ಆತ್ಮಬಲವನ್ನೇ ಕಸಿಯುವುದಿಲ್ಲವೇ? ಅಂತಹ ಶಿಕ್ಷೆಯನ್ನು ನೀನು ನವ್ಯಾಳಿಗೆ ವಿಧಿಸಿಲ್ಲವೇ?

'ನೀನು ನನ್ನ ಮಗಳಂತೆ' ಅನ್ನುತ್ತಲೇ ಅವಳನ್ನು ಕ್ಷಣಾರ್ಧದಲ್ಲಿ ಪರಕೀಯಳನ್ನಾಗಿಸಿಬಿಟ್ಟೆಯಲ್ಲ…..? ಇನ್ನೆಂದೂ ಅವಳನ್ನು ಮಗಳೆಂದು ಕರೆಯಬೇಡ. ಆ ಯೋಗ್ಯತೆ ನಿನಗಿಲ್ಲ. 'ಅಕ್ಕಪಕ್ಕದವರು ಏನೆನ್ನುವರೋ? ಲೋಕ ಎಷ್ಟು ಆಡಿಕೊಳ್ಳುವುದೋ? ಸಂಪಾದಿಸಿದ ಗೌರವಕ್ಕೆ ಎಲ್ಲಿ ಕುಂದಾಗುವುದೋ?' ಎಂದೆಲ್ಲಾ ಯೋಚಿಸಿದ ನಿನಗೆ ಇಷ್ಟು ವರ್ಷ ಜೊತೆಗಿದ್ದ 'ಮಗಳಂತಹ' ಸೊಸೆಯ ಎದೆಯಲ್ಲಿ ಎಂತಹ ಜ್ವಾಲಾಮುಖಿ ಸ್ಫೋಟಗೊಂಡಿದೆ? ಅವಳು ಬದುಕಲ್ಲಿ ಎಷ್ಟು ನೊಂದಿದ್ದಾಳೆ? ಅವಳಿಗೆ ಈಗ ನಿನ್ನ ಅಗತ್ಯ ಎಷ್ಟಿದೆ ಎಂಬ ಯೋಚನೆಗಳೇ ಬರಲಿಲ್ಲವಲ್ಲ....... ಅದಕ್ಕೇ ತಾನೇ ಹೇಳುವುದು, ಮಗಳು ಮಗಳೇ, ಸೊಸೆ ಸೊಸೆಯೇ ಎಂದು.....?

ಪುಣ್ಯ...... ದೇವರು ನಿನಗೆ ಮಗಳ ಭಾಗ್ಯವನ್ನು ದಯಪಾಲಿಸಲಿಲ್ಲ. ಅದೃಷ್ಟವಂತರಿಗೆ ಮಾತ್ರವೇ ಹೆಣ್ಣು ಮಗಳು ಜನಿಸುವುದು. ಆ ಅದೃಷ್ಟದ ಮಾತು ಬಿಡು. ನಿನಗೆ ಹೆಣ್ಣು ಮಗಳ ತಾಯಿಯಾಗುವ ಯೋಗ್ಯತೆಯಿಲ್ಲ. ಇನ್ನು ಮುಂದೆ ಪರರ ಭಾವನೆಗಳನ್ನು ಅರಿಯುವ ಸೂಕ್ಷ್ಮ, ಉದಾತ್ತ ಚಿಂತನೆಯ ಮನಸ್ಸು ನನ್ನದೆಂದು ಯಾರಲ್ಲೂ ಹೇಳಬೇಡ........ ಮೇಲ್ನೋಟಕ್ಕೆ ಹಾಗೆ ತೋರಿಸಿಕೊಂಡರೂ ಆಂತರ್ಯದಲ್ಲಿ ನೀನೂ ಇತರರಂತೆ ಸಂಕುಚಿತ ಮನೋಭಾವದ ಸ್ವಾರ್ಥಿಯೇ.....‌...

ನಿನ್ನ ಗಂಡನನ್ನು ನೋಡು…..... ಅವರು ನವ್ಯಾಳನ್ನು ಮಗಳೆಂದು ಕರೆದದ್ದು ಮನಸ್ಸಿನಿಂದ. ಹಾಗಾಗಿಯೇ ಈಗ ಮಗಳ ಕಷ್ಟ ಕಾಲದಲ್ಲಿ ಅವಳಿಗೆ ಒತ್ತಾಸೆಯಾಗಿ ನಿಂತು ಅವಳ ನೋವಿನ ಬಗ್ಗೆ, ಅದನ್ನು ಶಮನಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಅದೇ ನೀನು….....? ಸೊಸೆಯನ್ನು ಕೇವಲ ಬಾಯ್ಮಾತಿಗೆ ಮಗಳೆಂದು ಕರೆದೆಯೇ ಹೊರತು ಅವಳನ್ನೆಂದೂ ಮಗಳನ್ನಾಗಿ ಸ್ವೀಕರಿಸಲೇ ಇಲ್ಲ ನೀನು. 

ಅದೇ ನಿನಗೊಬ್ಬ ಮಗಳಿದ್ದು, ಆಕೆಯನ್ನು ಯಾರೋ ಇಂತಹ ನರಕ ಕೂಪಕ್ಕೆ ತಳ್ಳಿದ್ದರೇ….....? ಆಕೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಮಡಿಲಿನಾಸರೆಗಾಗಿ ಓಡಿ ಬಂದಿದ್ದರೇ…...? ಆಗಲೂ ಹೀಗೇ ಜನರ ಕುಹಕ, ಸಮಾಜ, ಮಾನ ಮರ್ಯಾದೆ, ಗೌರವವೆಂದು ಮಗಳೊಂದಿಗೆ ವ್ಯವಹರಿಸುತ್ತಿದ್ದೆಯಾ?' 

ದಿಗ್ಗನೆದ್ದು ಕೂತರು ಮಂಗಳಮ್ಮ. ಪತಿಯ ಕಟು ನುಡಿಗಳಿಗಿಂತಲೂ ಹೆಚ್ಚು ಘಾಸಿಗೊಳಿಸಿತು ಅಂತರಾತ್ಮದ ಪ್ರಶ್ನೆ. ತಾನು ಹೆತ್ತ ಮಗಳು ನವ್ಯಾಳ ಸ್ಥಿತಿಯಲ್ಲಿದ್ದರೆ….... ಅವಳನ್ನೂ ಹೀಗೇ ನಡೆಸಿಕೊಳ್ಳುತ್ತಿದ್ದೆನೇ…....?

ಖಂಡಿತಾ ಇಲ್ಲಾ……. ಆಗ ಈ ಸಮಾಜ, ಜನರ ಕಿಡಿನೋಟ, ಕುಹಕ, ಬಹಿಷ್ಕಾರದ ಭಯ ಯಾವುದೂ ತಡೆಯುತ್ತಿರಲಿಲ್ಲ ನನ್ನನ್ನು. ಅಷ್ಟೆಲ್ಲಾ ವೇದನೆ ಅನುಭವಿಸಿ ಒಮ್ಮೆ ಹೊಕ್ಕರೆ ಹೊರಬರಲಾರದ ನರಕದಿಂದ ಹೇಗೋ ಹೊರಬಂದ ಮಗಳನ್ನು ಇಡೀ ಜಗತ್ತನ್ನೇ ಎದುರು ಹಾಕಿಕೊಂಡಾದರೂ ಕಣ್ರೆಪ್ಪೆಯಂತೆ ಜೋಪಾನ ಮಾಡುತ್ತಿದ್ದೆ. ಅವಳ ಸ್ಥಿತಿಗೆ ಕಾರಣರಾದ ನೀಚರು ಸಿಕ್ಕರೆ ಕೈಯಾರೆ ಕೊಂದುಬಿಡುತ್ತಿದ್ದೆ. 

'ಅಲ್ಲಿಗೆ ಒಪ್ಪಿದೆಯಲ್ಲಾ... ನವ್ಯಾ ಮಗಳಲ್ಲವೆಂದು? ಕಡು ಸ್ವಾರ್ಥಿ…...' ಅಂತರಾತ್ಮ ಪಾತಾಳಕ್ಕೆ ನೂಕಿ ಗುಡುಗಿತು.

ಅಯ್ಯೋ…… ಖಂಡಿತಾ ಇಲ್ಲಾ. ಅವಳು ನನ್ನ ಮಗಳೇ.....! ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತಲೂ ಹೆಚ್ಚು. ಏಕೆ ಹೀಗೆ ಮಾಡಿಬಿಟ್ಟೆ ನಾನು? ಪಾಪ…. ನವ್ಯಾಳ ಮನಸ್ಥಿತಿ ಏನಾಗಿರಬಹುದು? ನೆನಸಲೂ ಭಯವಾಗುತ್ತಿದೆಯಲ್ಲಾ.......  ಇಲ್ಲ ಇಲ್ಲಾ..... ಇನ್ನೆಂದೂ ನಿನ್ನನ್ನು ಒಂಟಿಯಾಗಿಸಲಾರೆ. ಈ ಸಮಾಜ, ಜನರೆಲ್ಲಾ ಹಾಳಾಗಲೀ. ಅವರ್ಯಾರೂ ನಿನಗಿಂತಲೂ ಮುಖ್ಯವಲ್ಲ ನನಗೆ. ಮಗಳ ಬದುಕಿಗಿಂತ ಹೆಚ್ಚು ಯಾವುದಿದೆ? ನೀನೇ ಮುಖ್ಯ ನನಗೆ….‌

ತಮ್ಮ ಸ್ಪಂದನರಹಿತ ಯೋಚನಾಶೈಲಿಗೆ ಅಂತರಾತ್ಮ ನೀಡಿದ ವಜ್ರಾಘಾತಕ್ಕೆ ತತ್ತರಿಸಿದರು. ಉಕ್ಕಿ ಬಂದ ಕಣ್ಣೀರನ್ನು ತಡೆಯಲೂ ಪ್ರಯತ್ನಿಸದೇ ಕೋಣೆಯಿಂದ ಹೊರಬಂದರು. ಅವರ ತಲೆಯಲ್ಲಿದ್ದುದ್ದು ಒಂದೇ...... ನವ್ಯಾ......!

ಹಜಾರದ ಸೋಫಾದಲ್ಲಿ ದೀರ್ಘಾಲೋಚನೆಯಲ್ಲಿ ಮುಳುಗಿದ್ದರು ಸತ್ಯನಾರಾಯಣ. ಮಹಡಿಗೆ ಸಾಗುವ ಮೆಟ್ಟಿಲಿನ ಬದಿಯಲ್ಲಿ ಸುಮ್ಮನೆ ಗೋಡೆ ನೋಡುತ್ತಾ ಕುಳಿತ ಸಮನ್ವಿತಾಳ ಮಡಿಲಿನಲ್ಲಿ ಮುದುರಿ ಮಲಗಿದ್ದ 'ಮಗಳು' ಕಂಡಳು. ಇನ್ನೂ ಬಿಕ್ಕುತ್ತಲೇ ಇದ್ದಳೆಂಬುದು ಅವಳ ಉಸಿರ ಏರಿಳಿತಗಳಿಂದಲೇ ಸ್ಪಷ್ಟವಾಗಿತ್ತು.

ಅವರಿಬ್ಬರ ಬಳಿ ಸಾಗಿದವರು ಬೇರೇನೂ ಯೋಚಿಸದೇ ಸಮನ್ವಿತಾಳ ಮಡಿಲಿನಲ್ಲಿದ್ದ ನವ್ಯಾಳನ್ನು ಎಬ್ಬಿಸಿ ತಮ್ಮ ಎದೆಗಾನಿಸಿಕೊಂಡರು. ಅಷ್ಟೇ ಸಾಕಾಯ್ತು ಅವಳ ಮನದ ಬೇಗುದಿ ಶಮನವಾಗಲು…... ಅವರನ್ನು ಗಟ್ಟಿಯಾಗಿ ತಬ್ಬಿ ಮಧ್ಯಾಹ್ನದಿಂದ ತಾನು ಅನುಭವಿಸಿದ ಯಾತನೆಯನ್ನೆಲ್ಲಾ ವಿವರಿಸುವಂತೆ ಮತ್ತೆ ಅಳತೊಡಗಿದಳು. 

ಅವಳ ಕಣ್ಣಿನ ಪ್ರತೀ ಹನಿಯ ಹಿಂದಿನ ಭಾವವೂ ಅರಿವಾಗದೇ ಆ ತಾಯಿ ಹೃದಯಕ್ಕೆ.....? ಅವರ ಹಸ್ತದ ಆ ಅಮೃತ ಸ್ಪರ್ಶ ಮಗಳ ಇಷ್ಟು ವರ್ಷಗಳ ಒಡಲುರಿಗೆ ತಂಪೆರೆಯದೇ.....? ಇಬ್ಬರಿಗೂ ಮಾತು ಬೇಡವಾಗಿತ್ತು. ಅಮ್ಮನ ಭದ್ರತೆಯ ಅಪ್ಪುಗೆಯಲ್ಲಿನ ಸಾಂತ್ವನ ಮಗಳಿಗೆ ಹರುಷ ತಂದರೆ, ಮಗಳು ನನ್ನ ಮಮತೆಯ ಆಸರೆಯಲ್ಲಿ ಭದ್ರವಾಗಿದ್ದಾಳೆ ಎಂಬ ನೆಮ್ಮದಿ ತಾಯಿಗೆ......

ತಮ್ಮ ಮಾತುಗಳನ್ನು ಬಹಳ ಬೇಗನೆ ಅರ್ಥೈಸಿಕೊಂಡು ಆಗುತ್ತಿದ್ದ ತಪ್ಪನ್ನು ತಿದ್ದಿಕೊಂಡ ಮಡದಿಯ ಬಗ್ಗೆ ಹೆಮ್ಮೆಯಾಯಿತು ಸತ್ಯನಾರಾಯಣರಿಗೆ. ಅವರ ಮೇಲಿದ್ದ ಅಲ್ಪಸ್ವಲ್ಪ ಅಸಮಾಧಾನ ಹೇಳಹೆಸರಿಲ್ಲದಂತೆ ಮಾಯವಾಯಿತು. ಈಗ ಸಮಾಜಕ್ಕೆ ಏನೆಂದು ಉತ್ತರಿಸುವುದೆಂಬ ಚಿಂತೆ ಅಷ್ಟಾಗಿ ಕಾಡಲಿಲ್ಲ ಅವರನ್ನು. ಬದುಕಿನಲ್ಲಿ ನೆಮ್ಮದಿಯೆಂಬುದು ಕೌಟುಂಬಿಕ ಸಂಬಂಧಗಳ ಮೇಲೆ ನಿಂತಿರುತ್ತದೆ. ಸಂಬಂಧಗಳಲ್ಲಿ ಪರಸ್ಪರ ಗೌರವ, ಪ್ರೀತಿ, ನಂಬಿಕೆಗಳಿದ್ದರೆ ಬದುಕೇ ನಂದನ. ಅದರ ಮುಂದೆ ಅಕ್ಕಪಕ್ಕದವರು, ಜನ, ಲೋಕದ ನಿಂದನೆಗಳೆಲ್ಲವೂ ಗೌಣವೇ.

ಸಮನ್ವಿತಾ ಕಾಣದ ದೇವರಿಗೆ ಅದೆಷ್ಟು ವಂದಿಸಿದಳೋ...... ಇಂದು ನವ್ಯಾಳ‌ ಬದುಕನ್ನು ಸರಿಯಾದ ದಡಕ್ಕೆ ತಲುಪಿಸಿದೆ ಅನ್ನುವ ನಿರಾಳ ಭಾವ ಆವರಿಸಿತು ಅವಳನ್ನು. ಒಂದು ವೇಳೆ ಈ ಮನೆ ನವ್ಯಾಳನ್ನು ಸ್ವೀಕರಿಸದಿದ್ದರೆ ತಾನೇ ಅವಳ ಜವಾಬ್ದಾರಿ ವಹಿಸಿಕೊಳ್ಳುವೆನೆಂದು ನಿರ್ಧರಿಸಿದ್ದಳಾದರೂ ಆಗ ನವ್ಯಾ ಸಂತೋಷವಾಗಿರುತ್ತಿರಲಿಲ್ಲ ಎಂಬುದು ಸಮಾಳಿಗೆ ತಿಳಿದ ವಿಷಯ. ಅಂತಹ ಸ್ಥಿತಿ ಎದುರಾದರೆ ಭಾವನೆಗಳನ್ನೇ ತನ್ನ ಸುತ್ತ ಬೇಲಿಯಾಗಿಸಿಕೊಂಡು ಅದರೊಳಗೆ ಅವಳೊಂದು ದ್ವೀಪವಾಗಿಬಿಡುವ ಭಯ ಸಮನ್ವಿತಾಳನ್ನು ಕಾಡತೊಡಗಿತ್ತು. ಆದರೆ ನವ್ಯಾಳ ಬಾಳನ್ನು ಹಸನಾಗಿಸಬೇಕೆಂಬ ಇವಳ ಛಲಕ್ಕೆ, ಕಿಶೋರನ ಒಲುಮೆಗೆ, ನವ್ಯಾಳ ನಿಷ್ಕಲ್ಮಶ ಮನಸ್ಸಿಗೆ ವಿಧಾತನೂ ತಲೆಬಾಗಿ ಹರಸಿದನೇನೋ..... 

ಸಮನ್ವಿತಾಳ ಕಣ್ಣಿಂದ ಹನಿಯೊಂದು ಬಿಡುಗಡೆ ಪಡೆದು ಭೂಶಾಯಿಯಾಯಿತು. ಎಲ್ಲಾ ತಲ್ಲಣಗಳಿಂದ ಅವಳನ್ನು ಮುಕ್ತಗೊಳಿಸುವಂತೆ...... ಹಿಂದಿನಿಂದ ಕೈಯೊಂದು ಭುಜ ಬಳಸಿದಾಗ ತಿರುಗಿದಳು. ಸತ್ಯನಾರಾಯಣರು….. ಕಂಬನಿದುಂಬಿದ ಅಕ್ಷಿಗಳೊಂದಿಗೆ ಅವರ ಭುಜಕ್ಕೊರಗಿದಳು. ಅವಳನ್ನು ಸಮಾಧಾನಿಸುವಂತೆ ತಲೆದಡವಿದವರು, "ನಿನ್ನ ನೋಡಿದರೆ ಹೆಮ್ಮೆ ಎನಿಸುತ್ತೆ ಮಗಳೇ….. ನಿನ್ನಂತಹ ಮಗಳನ್ನು ಪಡೆದ ಹೆತ್ತವರು ಜಗತ್ತಿನಲ್ಲೇ ಅತೀ ಪುಣ್ಯವಂತರು..." ಎಂದರು.

ಅವರ ಮಾತಿಗೆ ಕಣ್ಣೀರಿನ ನಡುವೆಯೇ ನಕ್ಕಳವಳು. "ಅವರು ಪುಣ್ಯವಂತರೋ ಇಲ್ಲಾ ನಾನೇ ಅದೃಷ್ಟಹೀನಳೋ ಹೇಳೋದು ಕಷ್ಟ ಅಪ್ಪ….." ಎಂದಳು.

"ಎರಡೂ ಅಲ್ಲ. ನಿನ್ನಪ್ಪ ಅಮ್ಮ ಕೈ ಚೆಲ್ಲಿದ ಭಾಗ್ಯದಿಂದಾಗಿ ನಾನು, ಮಂಗಳಾ ಹಾಗೇ ಶರ್ಮಾ ದಂಪತಿಗಳು ಅದೃಷ್ಟಶಾಲಿಗಳಾದ್ವಿ....." ನಕ್ಕು ನುಡಿದವರ ಎದೆಗೊರಗಿ ಮತ್ತೆ ಕಣ್ಣೀರಾದಳು ಹುಡುಗಿ.

ಹಾಗೆ ಆ ನಸುಕಿನಲ್ಲಿ ಇಬ್ಬರು ಬಂಗಾರದಂತಹ ಹೆಣ್ಣು ಮಕ್ಕಳ ಹೆತ್ತವರೆನಿಸಿಕೊಳ್ಳುವ ವರ ಪಡೆದು ಭಾಗ್ಯವಂತರಾದರು ಸತ್ಯನಾರಾಯಣ ಹಾಗೂ ಮಂಗಳಾ.

ನಾಲ್ವರ ಮನದ ಬೇಗುದಿ ಇಳಿದು ಮನಗಳು ಶುಭ್ರ ಆಗಸದಷ್ಟು ಹಗುರಾದ ಸಮಯಕ್ಕೆ....... 

ಜಗತ್ತಿನ ಬೇಗುದಿಯನ್ನೆಲ್ಲಾ ತನ್ನಲ್ಲೇ ಹೊತ್ತು, ಸಂಪೂರ್ಣ ಕದಡಿದ ಚಿತ್ತ ಸ್ವಾಸ್ಥ್ಯದೊಂದಿಗೆ, ದೇಹವನ್ನು ಹೊರಲಾರದಷ್ಟು ನಿಶ್ಯಕ್ತಿ ಆವರಿಸಿದ್ದ ಕಾಲುಗಳನ್ನು ಎಳೆದುಕೊಂಡು, ಇನ್ನೇನು ನಿಂತೇ ಬಿಡುತ್ತೇನೆಂದು ಹಠ ಹಿಡಿಯುತ್ತಿದ್ದ ಎದೆಬಡಿತದೊಂದಿಗೆ ಗುದ್ದಾಡುತ್ತಾ ಮನೆಗೆ ಬಂದಿದ್ದ ಕಿಶೋರ್.

ತೆರೆದ ಬಾಗಿಲಿನಿಂದ ಒಳ ಪ್ರವೇಶಿಸಿದವನು ಸ್ತಂಭೀಭೂತನಾಗಿದ್ದ. ಅರೆಕ್ಷಣ ತಾನು ಕಾಣುತ್ತಿರುವುದು ಕನಸಿರಬಹುದೇನೋ ಎನಿಸಿತು. ಬೇರೆಯವರ ಮನೆಗೆ ಬಂದಿರುವೆನಾ ಎಂಬ ಅನುಮಾನವೂ ಕಾಡದಿರಲಿಲ್ಲ. ಕಣ್ಣುಜ್ಜಿಕೊಂಡು ನೋಡಿದ….. ಇಲ್ಲ...... ಅವನದೇ ಮನೆ. ಇರುವ ನಾಲ್ಕು ಮುಖಗಳೂ ಅವನ ಮನಕ್ಕೆ ಅತ್ಯಂತ ಆಪ್ತವಾದುವು. ಆದರೆ......

ಮನೆಯ ಪರಿಸ್ಥಿತಿ ಅವನೆಣಿಕೆಗೆ ಸಂಪೂರ್ಣ ವಿರುದ್ಧವಾಗಿತ್ತು. 'ಅಪ್ಪ ಅಮ್ಮ ನನ್ನ ಮೇಲೆ ಮುನಿಸಿಕೊಂಡಿರುತ್ತಾರೆ. ಅವರನ್ನು ಸಮಾಧಾನಿಸುವುದೆಂತು? ಅವರು ನವ್ಯಾಳನ್ನು ಬಿಟ್ಟುಬಿಡಲು ಹೇಳಬಹುದು. ಅದು ಅವಳಿಗೂ ಒಪ್ಪಿಗೆಯಿರಬಹುದು. ನಾನು ಮನೆಬಿಟ್ಟು ಅವಳೊಂದಿಗೆ ಇರುವೆನೆಂದರೆ ಅಪ್ಪ ಅಮ್ಮನಿಗಿಂತ ಮೊದಲು ಅವಳೇ ವಿರೋಧಿಸುತ್ತಾಳೆ. ಹೇಗೆ ಸಮಾಧಾನಿಸಲಿ ಎಲ್ಲರನ್ನು? ಎಲ್ಲಕ್ಕೂ ಮಿಗಿಲಾಗಿ ನಾನು ಹೋಗುವವರೆಗೆ ನವ್ಯಾ ಮನೆಯಲ್ಲಿರುವಳಾ?' ಎಂದೆಲ್ಲಾ ಯೋಚಿಸಿ ಹೈರಾಣಾಗಿದ್ದ. 

ಇಲ್ಲಿ ನೋಡಿದರೇ…... ಅಪ್ಪ ಸಮನ್ವಿತಾ ಏನೋ ಮಾತನಾಡುತ್ತಿದ್ದರೇ ಅಮ್ಮ, ಅವರ ಮಡಿಲಲ್ಲಿ ಮಲಗಿದ್ದ ನವ್ಯಾ ಇಬ್ಬರೂ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಬಾಗಿಲ ಬಳಿ ಸದ್ದಾದಾಗ ನಾಲ್ವರೂ ತಿರುಗಿದರು.

ಇವನನ್ನು ನೋಡಿದ್ದೇ ಮಂಗಳಮ್ಮ ಮುಖ ತಿರುಗಿಸಿ ಕುಳಿತುಬಿಟ್ಟರು. ಅಪ್ಪ ಹಾಗೂ ಸಮಾಳ ನಿರಾಳ ಮುಖಭಾವ ಅವನ ಬೆಂದ ಮನಸ್ಸಿಗೆ ಕೊಂಚ ಸಮಾಧಾನ ನೀಡಿತು. ನಿಧಾನವಾಗಿ ಮಡದಿಯ ಬಳಿ ಬಂದಿದ್ದ. ನವ್ಯಾ ಅವನನ್ನು ನೋಡದೇ ನೆಲದತ್ತ ನೋಟ ಹರಿಸಿ,

"ಕ್ಷಮಿಸಿ ಕಿಶೋರ್, ನಿಮ್ಮ ಈ ರೀತಿಯ ನಿರ್ಧಾರ ನಾನು ಊಹಿಸಿರಲಿಲ್ಲ. ಅದು ನನಗೆ ಬೇಕಾಗಿಯೂ ಇರಲಿಲ್ಲ. ಸಮಸ್ಯೆಗೊಂದು ಪರಿಹಾರ ಬೇಕಿತ್ತೇ ಹೊರತು ಸಮಸ್ಯೆಯಿಂದ ದೂರ ಓಡುವುದು ಬೇಕಾಗಿರಲಿಲ್ಲ ನನಗೆ. ಓಡಿದರೂ ಎಷ್ಟು ದೂರ ಓಡಬಹುದಿತ್ತು? ಒಂದಲ್ಲಾ ಒಂದು ದಿನ ಸಮಸ್ಯೆ ನಮ್ಮ ಮುಂದೆಯೇ ಬರ್ತಿತ್ತು ಅಲ್ವಾ? ಅದಕ್ಕೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ನಾನೇ ಕಂಡುಹುಡುಕಲು ನಿರ್ಧರಿಸಿದೆ. ಎಲ್ಲಾ ಹೇಳ್ಬಿಟ್ಟೆ. ಇಷ್ಟು ವರ್ಷಗಳಿಂದ ಮನಸ್ಸು ಸುಡುತ್ತಿದ್ದ ಎಲ್ಲವನ್ನೂ ಹೇಳಿದೆ. ಮತ್ತೆ ನಿಮ್ಗೆ ಗೊತ್ತಾ....... ಅಪ್ಪ, ಅಮ್ಮ ನನಗೆ ಬೈಯಲಿಲ್ಲ. ಮನೆಯಿಂದ ಹೊರಗೂ ಹಾಕ್ಲಿಲ್ಲ. ಅವ್ರು ನನ್ನ ಪರಿಸ್ಥಿತಿನ ಅರ್ಥ ಮಾಡ್ಕೊಂಡ್ರು. ನಾವು ಇನ್ನೆಲ್ಲಿಗೂ ಓಡೋ ಅಗತ್ಯ ಇಲ್ಲ ಕಿಶೋರ್…..." ಅವಳ ಧ್ವನಿಯಲ್ಲಿ ಅವನು ಈವರೆಗೆ ಎಂದೂ ಕೇಳದ ಆನಂದವಿತ್ತು. ಅತ್ತೂ ಅತ್ತು ಕೆಂಪಡರಿದ್ದ ಮುಖವೂ ಅವಳಲ್ಲಿ ಸ್ಪುರಿಸುತ್ತಿದ್ದ ಸಂತೋಷವನ್ನು ಕುಂಠಿತಗೊಳಿಸಿರಲಿಲ್ಲ. ಇಷ್ಟು ವರ್ಷಗಳಲ್ಲಿ ಅವಳ ಇಂತಹ ಸಂಭ್ರಮಕ್ಕೆ ಮೊದಲ ಬಾರಿಗೆ ಸಾಕ್ಷಿಯಾಗಿದ್ದರು ಎಲ್ಲರೂ…...

ಅವಳನ್ನು ಹಗುರವಾಗಿ ತಬ್ಬಿದ ಕಿಶೋರ್, "ನೀನು ನನ್ನ ಕ್ಷಮಿಸು ನವ್ಯಾ. ನಾನು ನಿನ್ನ ಮನದ ಹೊಯ್ದಾಟವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಸತ್ಯ ತಿಳಿದರೆ ಈ ಜಗತ್ತೇ ನಮ್ಮ ವಿರುದ್ಧ ನಿಂತು ನಿನ್ನ ನನ್ನಿಂದ ದೂರ ಮಾಡುತ್ತೆ ಅಂತ ಅನ್ನಿಸಿಬಿಡ್ತು. ನಿನ್ನ ಕಳೆದುಕೊಂಡು ಬದುಕೋ ಶಕ್ತಿ ನನಗಿಲ್ಲ. ಮನೆಯಲ್ಲೂ ಒಪ್ಪಲ್ಲ ಅನ್ನಿಸ್ತು. ಇತ್ತೀಚಿನ ನಿನ್ನ ವರ್ತನೆ, ನೀನು ಇಡೀ ರಾತ್ರಿ ನಿದ್ದೆ ಇಲ್ಲದೇ ಆಕಾಶ ನೋಡ್ತಾ ಸಮಯ ಕಳೆಯುತ್ತಿದ್ದದ್ದು, ಆ ನಿನ್ನ ಕನಸುಗಳು….... ನನ್ನ ಕೈಲಿ ನಿನ್ನ ಸಂಕಟ ನೋಡೋಕಾಗ್ಲಿಲ್ಲ. ಹೀಗೇ ಬಿಟ್ಟರೆ ನೀನು ಮಾನಸಿಕ ರೋಗಿ ಆಗ್ತಿಯೇನೋ ಅನ್ನಿಸೋಕೆ ಶುರುವಾಯ್ತು. ಮನೆಯಲ್ಲಿ ಸತ್ಯ ಹೇಳೋಕೆ ಧೈರ್ಯ ಬರ್ಲಿಲ್ಲ. ಹಾಗೆ ನಿನ್ನ ಹಿಂಸೆನೂ ನೋಡೋಕಾಗ್ಲಿಲ್ಲ. ಅದಕ್ಕೆ ಸ್ವಲ್ಪ ಸಮಯ ಮನೆಯಿಂದಲೇ ನಿನ್ನ ದೂರ ಇಡೋಣ. ಆಮೇಲೆ ಏನು ಮಾಡೋದು ಅಂತ ವಿಚಾರ ಮಾಡೋಣ ಅನ್ನಿಸ್ತು. ಅದಕ್ಕೆ ಹೀಗೆ ಮಾಡಿದೆ. ಆದರೆ ಇದ್ರಿಂದಾಗಿಯೇ ನೀನು ಮನೆಯವರಿಗೆ ಎಲ್ಲಾ ಸತ್ಯ ಹೇಳೋ ರಿಸ್ಕ್ ತಗೋತಿಯಾ ಅಂತ ಅನ್ನಿಸ್ಲಿಲ್ಲಾ….. ಆದ್ರೂ ನಾನು ವಾಪಾಸಾಗೋವರೆಗೂ ಕಾಯೋದು ಬಿಟ್ಟು ಒಬ್ಬಳೇ ಎಲ್ಲಾ ಹೇಳಿದ್ಯಲ್ಲಾ......" ಆಕ್ಷೇಪಿಸುತ್ತಲೇ ಅವಳನ್ನು ಸಮಾಧಾನಿಸಿದ.

ತನ್ನನ್ನು ತಾನು ಸಂಭಾಳಿಸಿಕೊಂಡ ನವ್ಯಾ ಅವನಿಂದ ಬಿಡಿಸಿಕೊಂಡು ಮಂಗಳಾರತ್ತ ಕೈ ತೋರಿದಳು‌ 'ಅಮ್ಮನನ್ನು ಸಮಾಧಾನಿಸಿ' ಎನ್ನುವಂತೆ…...

ಈಗ ಅವನಿಗೆ ನಿಜಕ್ಕೂ ಭಯವಾಯಿತು. ಅಪ್ಪನೊಂದಿಗಾದರೂ ಮಾತನಾಡಿ ವಿವರಿಸಬಲ್ಲನೇನೋ ಆದರೆ ಅಮ್ಮ….... ಇಂತಹ ಗಹನವಾದ ವಿಚಾರವನ್ನು ಅವರಿಂದ ಮುಚ್ಚಿಟ್ಟಿದ್ದು ಅವರಿಗೆ ದೊಡ್ಡ ಆಘಾತವನ್ನೇ ನೀಡಿದೆಯೆಂಬ ಅರಿವು ಅವನಿಗಿತ್ತು. ಈಗ ಹೇಗೆ ಅವರನ್ನು ಎದುರಿಸಲೀ ಏನೆಂದು ಸಮಾಧಾನಿಸಲೀ ಎಂಬುದೇ ಅರಿವಾಗಲಿಲ್ಲ ಅವನಿಗೆ.

ಅಪ್ಪನನ್ನು ನೋಡಿದ. 'ಏನೂ ಆಗದು. ನಿಧಾನಕ್ಕೆ ಮಾತನಾಡಿ ವಿವರಿಸು' ಎಂಬಂತಿತ್ತು ಅವರ ಮುಖಭಾವ. "ಅವ್ರು ನಿನ್ನಮ್ಮ ಕಣೋ….. ತಪ್ಪು ಮಾಡಿದ್ದೀ. ಒಪ್ಪಿಕೊಂಡು ಕ್ಷಮೆ ಕೇಳು. ಕ್ಷಮಿಸುತ್ತಾರೆ" ಮೆಲುವಾಗಿ ಹೇಳಿದಳು ಗೆಳತಿ.

ಬೇರೆಡೆ ಮುಖಮಾಡಿ ಕುಳಿತ ಅಮ್ಮನ ಬಳಿಗೆ ಬಂದು ಅವರ ಕಾಲ ಬಳಿಯಲ್ಲಿ ಕುಳಿತು, ಅವರ ಎರಡೂ ಕೈಗಳನ್ನು ಹಿಡಿದು ಎದೆಗೊತ್ತಿಕೊಂಡ.

"ಅಮ್ಮಾ....." ಮೆಲುವಾಗಿ ಕರೆದವನ ಧ್ವನಿ ಆರ್ದ್ರವಾಗಿತ್ತು. ಆದರೆ ಮಂಗಳಮ್ಮ ಪ್ರತಿಕ್ರಿಯಿಸಲಿಲ್ಲ‌.

"ಅಮ್ಮಾ, ನೀನು ನನ್ನಮ್ಮ ಅಲ್ವಾ…...? ನಾನು ಚಿಕ್ಕವನು. ಏನೋ ಗೊತ್ತಿಲ್ದೇ ತಪ್ಪು ಮಾಡ್ತಾ ಇರ್ತೀನಿ. ನೀನು ಎಲ್ಲಾ ತಿಳಿದವಳು. ಮಾಡಿರೋ ತಪ್ಪಿಗೆ ಒಂದೆರಡು ಏಟು ಹಾಕು. ಆ ಅಧಿಕಾರ ನಿನಗಿದೆ. ಆದ್ರೆ ಏಟು ಹಾಕಿದ್ಮೇಲೆ ಕ್ಷಮಿಸಿ ಬಿಡಮ್ಮ. ನಾನು ನೋಡು ಅದೆಷ್ಟು ದಡ್ಡ ಅಂತ….. ನೀನು ಕಲಿಸಿರೋ ವಿದ್ಯೆ, ಬುದ್ಧಿ, ಆದರ್ಶಗಳನ್ನೇ ನಾನು ಅಳವಡಿಸಿಕೊಂಡಿರೋದು. ಚಿಕ್ಕಂದಿನಿಂದಲೂ ನೀನು ನನ್ನಮ್ಮ ಅಂತ ಹೇಳ್ಕೊಳ್ಳೋಕೆ ನಂಗೆ ತುಂಬಾ ಹೆಮ್ಮೆ. ಈ ದೇಹ, ವ್ಯಕ್ತಿತ್ವ ಎರಡೂ ನಿನ್ನದೇ ಪ್ರತಿಬಿಂಬ. ತಾಯಿಯಂತೆ ಮಗು ಅಲ್ವೇನಮ್ಮಾ….. ಮತ್ತೆ ಅದ್ಹೇಗೆ ನೀನು ನವ್ಯಾನ ಒಪ್ಪಲ್ಲ, ಮನೆಯಿಂದ ಹೊರಗೆಹಾಕ್ತೀ ಅಂತೆಲ್ಲಾ ಭ್ರಮಿಸಿದೆ ನಾನು? ತುಂಬಾ ಕೆಟ್ಟದಾಗಿ ಯೋಚಿಸಿಬಿಟ್ಟೆ ಅಮ್ಮಾ. ದಯವಿಟ್ಟು ನನ್ನ ಕ್ಷಮಿಸ್ತೀಯಾ....." ಅವನು ಮುಂದೇನು ಹೇಳಲಿದ್ದನೋ...... ಆದರೆ ಮಂಗಳಮ್ಮ ಅವನ ಮಾತುಗಳನ್ನು ಅಲ್ಲೇ ತಡೆದಿದ್ದರು. ಮಗನ ಮಾತುಗಳು ಮತ್ತೊಮ್ಮೆ ಅವರಿಗೇ ಅವರ ಯೋಚನೆಗಳ ಬಗ್ಗೆ ಅಸಹ್ಯ ಹುಟ್ಟುವಂತೆ ಮಾಡಿದ್ದವು.

"ನಾನಲ್ಲ ಕಿಶೋರಾ, ನೀನೆ ನನ್ನ ಕ್ಷಮಿಸಪ್ಪಾ. ನಾನು ನೀನು ಭ್ರಮಿಸಿದ ಹಾಗೇ ಯೋಚಿಸಿಬಿಟ್ಟೆ ಕಣೋ. ಅದೇನಾಗಿತ್ತೋ ನನ್ನ ಬುದ್ಧಿಗೆ.... ಬಹಳ ಕೆಟ್ಟದಾಗಿ ಯೋಚಿಸಿಬಿಟ್ಟೆ ಮಗೂ. ನಿಮ್ಮಪ್ಪಾಜಿ ನನ್ನ ಯೋಚನೆಗಳ ಹಾದಿ ಬದಲಿಸದಿದ್ದಿದ್ರೆ ಈ ಮಗೂನಾ ಮನೆಯಿಂದಲೇ ಹೊರಹಾಕ್ತಿದ್ದೆನೇನೋ.... ಅಷ್ಟರಲ್ಲಿ ನಿಮ್ಮಪ್ಪ ನನ್ನ ತಪ್ಪನ್ನು ನನಗೆ ಅರಿಕೆ ಮಾಡಿಸಿದರು. ನೀನು ನನ್ನ ಪ್ರತಿಬಿಂಬ ಅಲ್ಲಪ್ಪಾ….. ನಿನ್ನ ಯೋಚನೆಗಳು ಬಹಳ ಎತ್ತರದವು. ನಾನು ಓದಿದ ವಿದ್ಯೆ, ಬುದ್ಧಿ, ಆದರ್ಶಗಳನ್ನು ನಿನಗೆ ಹೇಳಿಕೊಟ್ಟೆನೇ ಹೊರತು ನಾನು ಅವುಗಳನ್ನು ಸರಿಯಾಗಿ ಅರ್ಥೈಸಿ ಅಳವಡಿಸಿಕೊಳ್ಳಲಿಲ್ಲ. ಅದೇ ನೀನು ನಾನು ಹೇಳಿದ್ದವುಗಳನ್ನು ನಿನ್ನ ನಡೆ, ನುಡಿ, ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡೆ ಕಿಶೋರಾ.... ನೀನೇ ನನ್ನ ಕ್ಷಮಿಸು ಮಗೂ. ಹಾಗೆಯೇ ನೀನೂ ಸಾಧ್ಯವಾದರೇ ಈ ಅಮ್ಮನನ್ನು ಕ್ಷಮಿಸಿಬಿಡು ಮಗಳೇ...... ನಿನ್ನನ್ನೂ ಅನುಮಾನಿಸಿದೆ ಸಮನ್ವಿತಾ.... ನಿಮ್ಮಷ್ಟು ಎತ್ತರಕ್ಕೆ ಯೋಚಿಸಲಾರದೇ ಹೋದೆ. ಎಲ್ಲರೂ ಕ್ಷಮಿಸಿ ನನ್ನನ್ನು" ಹನಿಗಣ್ಣಾಗಿ ನುಡಿದರು.

ತಮ್ಮ ಪೂರ್ವಾಗ್ರಹ ಪೀಡಿತ ಯೋಚನೆಯ ಬಗ್ಗೆ ಖೇದದ ಜೊತೆಗೇ ಈಗಿನ ಯುವ ಪೀಳಿಗೆ ತಮ್ಮಂತೆ ಗೊಡ್ಡು ಸಂಪ್ರದಾಯ, ಕಟ್ಟುಪಾಡು, ಕಂದಾಚಾರಗಳಿಗೆ ಸೊಪ್ಪು ಹಾಕದೆ ಸರಿ ತಪ್ಪುಗಳನ್ನು ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುವುದನ್ನು ಕಂಡು ಹೆಮ್ಮೆಯೆನಿಸಿತು ಮಂಗಳಾರಿಗೆ.

"ಅಮ್ಮಾ..... ದಯವಿಟ್ಟು ಹೀಗೆಲ್ಲಾ ಮಾತಾಡ್ಬೇಡಿ" ಅವರ ತೋಳಿಗೊರಗಿ ನವ್ಯಾ ಹೇಳಿದರೆ, ಕಿಶೋರ್ ಅಮ್ಮನ ಮಡಿಲಿಗೆ ತಲೆಯೊರಗಿಸಿದ್ದ. 

"ನಾನು ಅಪ್ಪನ ಮಗಳು....." ಸಮನ್ವಿತಾ ಸತ್ಯನಾರಾಯಣರ ಹೆಗಲಿಗೊರಗಿ ನುಡಿದಾಗ  ಉಳಿದವರೂ ನಕ್ಕರು.

ಅಂದಿನ ನಸುಕು ಆ ಮನೆ ಮನಗಳಲ್ಲಿ ಸಂತೋಷವನ್ನು ಹೊನಲಾಗಿಸಿತ್ತು…...

ತಪ್ಪು ಮಾಡುವುದು ಮನುಜನ ಸಹಜ ಗುಣ. ಆ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು ಸಾತ್ವಿಕ ಮನದ ಗುಣ. ತಪ್ಪು ಮಾಡಿದಾಗ ಕ್ಷಮೆ ಕೇಳಿದರೆ ಮನಸ್ಸು ಹಗುರಾಗುತ್ತದೆ. ಕ್ಷಮೆ ಕೇಳಲು ವಯಸ್ಸಿನ ಹಂಗಿಲ್ಲ. 'ನಾವು ಹಿರಿಯರು, ಕಿರಿಯರೆದುರು ಕ್ಷಮೆ ಕೇಳಿದರೆ ಸಣ್ಣವರಾಗುತ್ತೇವೆ' ಎಂಬುದು ತಪ್ಪುಕಲ್ಪನೆಯಷ್ಟೇ. ಕ್ಷಮೆ ಕೇಳಲೂ ಧೈರ್ಯ ಬೇಕು. ಮಾಡಿದ ತಪ್ಪಿಗೆ ಕ್ಷಮೆ ಕೇಳಿ ತಿದ್ದಿಕೊಳ್ಳುವವರು ದೊಡ್ಡವರಾಗುತ್ತಾರೆ. ಹೇಗೆ ಕ್ಷಮಿಸುವವನು ದೊಡ್ಡವನೋ ಹಾಗೆಯೇ ಕ್ಷಮೆ ಕೇಳುವ ಮನಸ್ಸುಳ್ಳವನೂ ಎತ್ತರದ ವ್ಯಕ್ತಿತ್ವದವನಲ್ಲವೇ…..?

ಮಂಗಳಾ ಕೋಪದ ಭರದಲ್ಲಿ ವಿವೇಚನೆ ಮರೆತು ಕೆಟ್ಟದಾಗಿ ಯೋಚಿಸಿದ್ದು ನಿಜವಾದರೂ ಗಂಡನ ಮಾತುಗಳಿಂದ ಎಚ್ಚೆತ್ತುಕೊಂಡರು. ಆತ್ಮವಿಮರ್ಶೆ ಮಾಡಿಕೊಂಡರು. ತಮ್ಮ ಯೋಚನೆ ತಪ್ಪೆನಿಸಿದಾಗ ಯಾವುದೇ ಹಿಂಜರಿಕೆಯಿಲ್ಲದೇ ಕ್ಷಮೆ ಕೇಳಿ ಹಿರಿತನ ಉಳಿಸಿಕೊಂಡರು.

ಸತ್ಯ ಹೊರಬಿದ್ದಿತ್ತು. ತಪ್ಪು ಕಲ್ಪನೆಗಳು ದೂರಾಗಿತ್ತು. ಸಂಬಂಧಗಳ ಬೆಸುಗೆ ಇನ್ನಷ್ಟು ಗಟ್ಟಿಯಾಗಿತ್ತು. 

ನವ್ಯಾ ಬದುಕಿನ ಅತೀ ದೊಡ್ಡ ಹಾಗೂ ನಿರ್ಣಾಯಕ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಳು........

ನವ್ಯಾಳ ಬದುಕನ್ನು ಹಸನಾಗಿ ಕಟ್ಟಿಕೊಡಬೇಕೆಂಬ ಸಮನ್ವಿತಾಳ ಆಸೆ ಕೊನೆಗೂ ಈಡೇರಿತ್ತು........

ಈಗ ಸಭ್ಯ ಸಮಾಜವನ್ನು ಎದುರಿಸುವ ಬಗ್ಗೆ ಒಗ್ಗಟ್ಟಾಗಿ ಯೋಚಿಸಬೇಕಿತ್ತು........

        ********ಮುಂದುವರೆಯುತ್ತದೆ**********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ