ಭಾನುವಾರ, ಜೂನ್ 28, 2020

ಅನೂಹ್ಯ 22

ಅಂದು ಬೆಳಗ್ಗಿನಿಂದಲೇ ಮನೆ ತುಂಬಾ ಸಂಭ್ರಮ.....

ಸಂಜೆ ಬರುವ ಅತಿಥಿಯನ್ನು ಸ್ವಾಗತಿಸಲು ಮನೆ ಬೆಳಗ್ಗಿನಿಂದಲೇ ಸಜ್ಜಾಗುತ್ತಿತ್ತು.....

ಅಡುಗೆಮನೆಯಲ್ಲಿ ತರಹೇವಾರಿ ಭಕ್ಷ್ಯಗಳ ತಯಾರಿ.....

"ಹಲೋ ಮಿಸ್ಟರ್ ಲಾಯರ್, ತಮ್ಮ ಆಫೀಸಿನ ಕಾರ್ಯಚಟುವಟಿಕೆಗಳಲ್ಲಿ ಮೈಮರೆತು ಸಂಜೆಯ ವಿಷಯ ಮರ್ತು ಬಿಡಬೇಡಿ. ಒಳ್ಳೆ ಪ್ರಶ್ನೆ ಪತ್ರಿಕೆ ಸಮೇತ ತಮ್ಮ ಪಾಟಿ ಸವಾಲಿಗೆ ತಯಾರಾಗಿ.ಳ"  ಆಫೀಸಿಗೆ ತಯಾರಾಗಿ ತಿಂಡಿ ತಿನ್ನಲು ಬಂದವನಿಗೆ ನೆನಪಿಸಿದಳು ಆಕೃತಿ.

"ಒಂದು ವೇಳೆ ನಾನು ಮರೆತ್ರೂ ನೀನಿದ್ದೀಯಲ್ಲ ನಕ್ಷತ್ರಿಕನ ತರ…. ನನ್ನ ಬೆಂಬಿಡದ ಬೇತಾಳ, ಕೋತಿ...."

"ನಾನು ನಿನ್ನ ಪಿ.ಎ ನೋಡು, ನಿನಗೆಲ್ಲ ನೆನಪಿಸ್ತಾ ಇರೋದು ಬಿಟ್ಟು ಬೇರೆ ಕೆಲ್ಸ ಇಲ್ವಲ್ಲ ನನಗೆ. ಅಂಥಾ ಎಕ್ಸಪೆಕ್ಟೇಷನ್ ಇವತ್ತಿನ ಮಟ್ಟಿಗಂತೂ ಇಟ್ಕೊಳ್ಳಲೇ ಬೇಡಿ ಕಲಾವಿದ ಮಹಾಶಯರೇ. ಇವತ್ತಂತೂ ನಾನು ನಿನ್ನ ವಿರೋಧ ಪಕ್ಷದ ಸದಸ್ಯೆ. ನಾನಷ್ಟೇ ಅಲ್ಲ. ಅಪ್ಪ ಅಮ್ಮ‌ನೂ ಕೂಡಾ…… ನಿನ್ನ ಪರವಾಗಿ ನೀನೊಬ್ನೇ ವಾದ ಮಾಡ್ಬೇಕು"

"ನಡೀಲಿ ನಡೀಲಿ, ಎಷ್ಟು ದಿನ ನಡಿಯುತ್ತೆ ನಿನ್ನ ಪಾರ್ಲಿಮೆಂಟರಿ ಸೆಷನ್ ಅಂತ ನಾನೂ ನೋಡ್ತೀನಿ. ಅಪ್ನಾ ಟೈಂ ಆಯೇಗಾ......" ಅಂದವನು "ಅಮ್ಮಾ ತಿಂಡಿ ಕೊಡಮ್ಮಾ, ಲೇಟಾಯ್ತು. ಇದರ ಮಧ್ಯೆ ಇವಳ ಪಿಟೀಲು ಬೇರೆ" ಅಡುಗೆಮನೆಯಲ್ಲಿದ್ದ ಮೃದುಲಾರನ್ನು ಕೂಗಿದ.

"ಅಬ್ಬಾ ಯಾಕಿಷ್ಟು ಜೋರಾಗಿ ಕಿರುಚ್ತೀ? ನನಗೇನು ಕಿವಿ ಕೆಪ್ಪಾ?" ರೇಗುತ್ತಲೇ ಇಬ್ಬರಿಗೂ ತಿಂಡಿ ಬಡಿಸಿದರು ಮೃದುಲಾ.

"ಡ್ಯಾಡ್ ಎಲ್ಲಿ?" ಕೇಳಿದ. "ಅವರ ಫ್ರೆಂಡ್ ಯಾರೋ ಫೋನ್ ಮಾಡಿದ್ದಾರೆ. ಆಮೇಲೆ ತಿಂಡಿ ತಗೋತೀನಿ ಅಂದ್ರು." ಎಂದ ಮೃದುಲಾ ಮಗನ ತಲೆಗೂದಲಲ್ಲಿ ಕೈಯಾಡಿಸುತ್ತ, "ಅಭಿ ನನಗೆ ನಿನ್ನ ನಿರ್ಧಾರಗಳ ಬಗ್ಗೆ ಗೌರವವಿದೆ. ನೀನೇನು ಮಾಡಿದ್ರೂ ತುಂಬಾ ಯೋಚಿಸಿ ಹೆಜ್ಜೆ ಇಟ್ಟಿರ್ತೀಯಾ ಅನ್ನೋದು ನನ್ನ ನಂಬಿಕೆ. ಆದರೆ ಈ ವಿಷಯದಲ್ಲಿ ನೀನು ಯಾಕೋ ಎಡವುತ್ತಿದ್ದೀಯಾ ಅನ್ನಿಸ್ತಾ ಇದೆ ಕಣೋ….. ರಾವ್ ಅವರ ಮೇಲಿನ ತಿರಸ್ಕಾರ ಸಮನ್ವಿತಾನೂ ಅದೇ ದೃಷ್ಟಿಯಿಂದ ನೋಡೋಕೆ ನಿನ್ನನ್ನು ಪ್ರೇರೇಪಿಸ್ತಾ ಇದೆ ಅಷ್ಟೇ. ಅಂತದ್ರಲ್ಲಿ ಇವತ್ತಿನ ಈ ಮಾತುಕತೆ ಬೇಕಾ? ಇದರಿಂದ ಅವಳ ಮನಸ್ಸಿಗೆ ನೋವಾಗೋದಿಲ್ವಾ?" ಕೇಳಿದ್ದರು.

"ನೀನು ನನ್ನ ಮೇಲಿಟ್ಟಿರೋ ನಂಬಿಕೆನ ಯಾವತ್ತೂ ಸುಳ್ಳಾಗಿಸೋಲ್ಲ ಅಮ್ಮಾ. ಸಮನ್ವಿತಾಳ ಮೇಲೆ ನನಗೇನು ತಿರಸ್ಕಾರವಿಲ್ಲ. ನಾನ್ಯಾರನ್ನೂ ಪ್ರೀತಿಸಿಲ್ಲ ನಿಜ ಆದರೆ ನನಗೂ ವಿವಾಹದ ಬಗ್ಗೆ ಹಲವಾರು ಕಸಸುಗಳಿವೆ. ಇವತ್ತು ಮದುವೆಯಾಗಿ ನಾಳೆ ಡೈವೋರ್ಸ್ ಅನ್ನುವಂತಾ ಬದುಕು ನನಗೆ ಬೇಕಾಗಿಲ್ಲ. ಜೀವನಪೂರ್ತಿ ಜೊತೆಗಿರಬೇಕಾದವರ ನಡುವೆ ಇರಬೇಕಾದ್ದು ಪ್ರೀತಿ ನಂಬಿಕೆಗಳೇ ಹೊರತು ಭಿನ್ನಾಭಿಪ್ರಾಯ, ತಪ್ಪುಕಲ್ಪನೆಗಳಲ್ಲ. ಒಂದು ಸಣ್ಣ ಮಾತುಕತೆಯಿಂದ ಗೋಜಲಾಗಿರುವ ಈ ಸನ್ನಿವೇಶದ ಸ್ಪಷ್ಟ ಚಿತ್ರಣ ಸಿಗುವುದಾದರೆ ಅದರಲ್ಲಿ ತಪ್ಪಿಲ್ಲ ಅಲ್ವಾ?" ಅವನ ಮನದಿಂಗಿತ ಸ್ಪಷ್ಟವಾಗಿ ಹೊರಗೆಡವಿದ. 

ಅವನು ಹೇಳಿದ ಮಾತುಗಳಲ್ಲಿ ಅರ್ಥವಿತ್ತು. ಎಲ್ಲಾ ಗೊಂದಲಗಳು ನೇರಾನೇರ ಪರಿಹಾರವಾದರೆ ಒಳ್ಳೆಯದು ಎನಿಸಿತು ಮೃದುಲಾರಿಗೂ.

ಆದರೂ ಸಮನ್ವಿತಾ ಏನಂದುಕೊಳ್ಳಬಹುದು ಎಂಬ ಭಯವಿತ್ತು ಅವರಿಗೆ.

ಅವರ ಭಯದ ಮೂಲ ತಿಳಿದವನಂತೆ, "ಅಮ್ಮಾ ನಿನ್ನ ಚಿಂತೆ ಏನು ಅಂತ ಗೊತ್ತು. ನಾನೇನು ಸಮನ್ವಿತಾನ ದ್ವೇಷಿಸುತ್ತಿಲ್ಲ. ಅವಳ ಮನಸ್ಸಿಗೆ ನೋವಾಗುವಂತೆ ನಾನೇನು ಮಾತಾಡೋಲ್ಲ I promise" ತಾಯಿಯ ಕೈ ಅದುಮಿದ. ಅವರು ನಕ್ಕು "ಆ ನಂಬಿಕೆ ನನಗಿದೆ. ಸರಿ ಹೊರಡು. ಮಧ್ಯಾಹ್ನ ಬಂದ್ಬಿಡು. ತಿಳೀತಾ" ಎಂದರು.

"ದಟ್ಸ್ ಲೈಕ್ ಮೈ ಮುದ್ದು ಅಮ್ಮ" ಅವರ ಹಣೆಗೊಂದು ಮುತ್ತಿಟ್ಟು, "ಮಧ್ಯಾಹ್ನ ನೆನಪಿಸ್ತೀಯಲ್ಲ ಕೋತಿ....." ಎಂದು ಆಕೃತಿಯ ಕೆನ್ನೆ ಹಿಂಡಿ ಹೊರಟ.

ಇಂದು ಸಂಜೆ ನನ್ನ ಅನುಮಾನಗಳೆಲ್ಲಾ ಪರಿಹಾರವಾಗುತ್ತವೆ. ಎಲ್ಲಕ್ಕೂ ಮಿಗಿಲಾಗಿ ಅವಳನ್ನು ಈ ಮುಂಚೆ ಎಲ್ಲಿ ನೋಡಿರುವೆನೆಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದುಕೊಂಡವ ಅದೇ ಉತ್ಸಾಹದಲ್ಲಿ ಕಾರನ್ನು ಆಫೀಸಿನತ್ತ ಚಲಾಯಿಸಿದ......... 

                ********************

ಅವಳು ಶರ್ಮಾ ಅವರ ಮನೆ ಮುಂದೆ ಬಂದಿಳಿದಾಗ ಸಮಯ ನಾಲ್ಕರ ಸಮೀಪವಿತ್ತು. ಮಧ್ಯಾಹ್ನದ ಎಲ್ಲಾ ಕೇಸುಗಳನ್ನು ಸಹೋದ್ಯೋಗಿ ವರ್ಷಾಳಿಗೆ ಒಪ್ಪಿಸಿ ಮೀರಾ ಅವರ ಅನುಮತಿ ಪಡೆದು ಬಂದಿದ್ದಳು. 

ಆಟೋದವನಿಗೆ ಹಣವಿತ್ತು ಮನೆಯತ್ತ ನಡೆದಳು. ಗೇಟಿನಲ್ಲಿದ್ದ ವಾಚ್ ಮ್ಯಾನ್ ಏನೊಂದೂ ಕೇಳದೇ ಒಳಬಿಟ್ಟಾಗ ರಾವ್ ಅವರ ಬಂಗಲೆಯ ನೆನಪಾಯಿತವಳಿಗೆ. ಆಟೋದಲ್ಲಿ ಬರುವವರ ಪ್ರವೇಶವೇ ಅಲ್ಲಿ ನಿಷಿದ್ಧ. ಅದನ್ನೇ ನೆನೆದು ಒಳಗಡಿಯಿಟ್ಟಳು. 

ಮನೆಯೆದುರಿನ ವಿಶಾಲವಾದ ಜಾಗದಲ್ಲಿ ಹರಡಿಕೊಂಡಿದ್ದ ಹೂದೋಟ ಅವಳ ಕಣ್ಮನ ತಣಿಸಿತು. ಅಲ್ಲೇ ನಿಂತವಳು ಎಚ್ಚೆತ್ತಿದ್ದು ಆಕೃತಿಯ ಧ್ವನಿ ಕೇಳಿದಾಗಲೇ........

"ಏನು ಇಲ್ಲಿಂದಾನೇ ವಾಪಾಸು ಹೋಗೋ ಯೋಚನೆಯಾ?" ನಗುತ್ತಾ ಕೇಳಿದಳು ಆಕೃತಿ.

"ಹಾಗೇನಿಲ್ಲ. ಮನಸ್ಸಿಗೆ ಹಿತವೆನಿಸಿತು. ಅದಕ್ಕೇ ಇಲ್ಲೇ ನಿಂತೆನಷ್ಟೇ" ಅದೇ ಕಿರುನಗುವಿತ್ತು ಅವಳ ಮುಖದಲ್ಲಿ.

"ಸರಿ ಸರಿ. ಈಗ ಬನ್ನಿ ಒಳಗೆ ಹೋಗೋಣ. ಎಲ್ಲಾ ನಿಮಗೇ ಕಾಯ್ತಿದ್ದಾರೆ" ಕೈಹಿಡಿದು ಒಳಗೆ ಎಳೆದೊಯ್ದಳು.

"ಅಮ್ಮಾ, ನೋಡು ಯಾರು ಬಂದಿದ್ದಾರೆ ಅಂತ"  ಮಗಳ ಕೂಗಿಗೆ ಸಂಭ್ರಮದಿಂದ ಹೊರಬಂದವರು, "ಅಂತೂ ಬಂದೆಯಲ್ಲ. ಬರ್ತೀಯೋ ಇಲ್ವೋ ಅನ್ನೋ ಅನುಮಾನವಿತ್ತು" ಮೃದುಲಾ ಮನದ ಮಾತನ್ನೇ ಹೇಳಿದ್ದರು.

"ನೀವು ಕರೆದ್ರೆ ಇಲ್ಲಾ ಅನ್ನೋಕೆ ನನ್ನಿಂದಾಗದು ಅಮ್.... ನೀವು ತಪ್ಪು ತಿಳಿಯಲ್ಲ ಅಂದ್ರೆ ನಾನು ನಿಮ್ಮನ್ನು ಅಮ್ಮ ಅಂತ ಕರೆಯಲಾ?" ಕೇಳಿದಳು.

"ಇದೂ ಕೇಳುವ ವಿಷಯವೇ? ನಿನ್ನ ಮಗಳೇ ಅಂತ ಕರೆದ ಮೇಲೆ ನಾನು ನಿನ್ನ ಅಮ್ಮನೇ ತಾನೇ" ತಲೆದಡವಿದರು.

ಅಷ್ಟರಲ್ಲೇ ಸಚ್ಚಿದಾನಂದ "ಏನು ಅಮ್ಮ ಮಕ್ಕಳದ್ದು ಗಹನವಾದ ಚರ್ಚೆ ಆಗ್ತಿದೆ. ಯಾವ ವಿಷಯದ ಬಗ್ಗೆಯೋ?" ಎನ್ನುತ್ತಾ ಮಾತಿಗೆ ಜೊತೆಯಾದರು. 

ಈ ಮಾತಿನ ಮಧ್ಯೆ‌ ಆಕೃತಿ "ಒಂದು ನಿಮಿಷ ಬಂದೆ" ಎಂದು ಅಭಿಯನ್ನು ಕರೆತರಲು ಅವನ ರೂಮಿನತ್ತ ಹೊರಟಳು.

ಅವನು ರೂಮಿನಲ್ಲೆಲ್ಲೂ ಕಾಣದಾಗ ಸೀದಾ ಟೆರೇಸಿನತ್ತ ನಡೆದಳು. ಕ್ಯಾನ್ವಾಸ್, ಬಣ್ಣಗಳು ಎಲ್ಲಾ ಇದ್ದವಾದರೂ ಕುಂಚ ಹಿಡಿದವನು ಕ್ಯಾನ್ವಾಸಿನ ಮುಂದೆ ಕಾಣದಾಗ ಸುತ್ತ ನೋಟಹರಿಸಿದಳು. ಟೆರೇಸಿನ ಮೂಲೆಯ ಕಟ್ಟೆಯೊಂದಕ್ಕೆ ಒರಗಿ ಏನೋ ಯೋಚನೆಯಲ್ಲಿ ಮುಳುಗಿದ್ದ ಅಭಿ. ಕುಂಚ ಕೈಯಲ್ಲಿಯೇ ಇತ್ತು. ಆಕೃತಿ ಬಂದಿದ್ದು ತಿಳಿಯದಷ್ಟು ಯೋಚನಾಮಗ್ನನಾಗಿದ್ದವನು ಅವಳು ಭುಜ ಹಿಡಿದು ಅಲುಗಿಸಿದಾಗ ಎಚ್ಚೆತ್ತ.

"ಏನಾಯ್ತು ಆಕೃತಿ" ಅವಳನ್ನು ಕೇಳಿದ. ಅವರು ನಿಂತಿದ್ದ ಜಾಗದಿಂದ ಮನೆಯ ಮುಖ್ಯ ಗೇಟ್, ಗಾರ್ಡನ್ ಎಲ್ಲಾ ಕಾಣುತ್ತಿತ್ತು. ಅವಳು ಏನೋ ಲೆಕ್ಕ ಹಾಕಿದವಳು, "ಒಹೋ ಇದಾ ವಿಷ್ಯಾ, ಅಂದ್ರೆ ಸಾಹೇಬರು ಸಮನ್ವಿತಾ ಬಂದಿದ್ದು, ಗಾರ್ಡನ್ ಅಲ್ಲಿ ನಿಂತಿದ್ದಿದ್ದು ಎಲ್ಲಾ ಇಲ್ಲಿಂದಲೇ ನೋಡ್ತಾ ಕಣ್ತುಂಬಿಕೋತಾ ಇದ್ರು...... ಛೀ  ಕಳ್ಳ....! ಪೈಂಟಿಂಗ್ ಮಾಡೋಕೆ ಅಂತ ಬಂದವನು ಅತ್ತಿಗೆನ ನೋಡಿ ಫ್ಲಾಟ್ ಆಗ್ಬಿಟ್ಯಾ?" ಛೇಡಿಸಿದಳು.

"ಆಕೃತಿ ನೀನು ಯಾಕೆ ಬಂದೆ ಇಲ್ಲಿಗೆ ಅದನ್ನು ಹೇಳು ಮೊದಲು" ಅವನು ತೀರಾ ಗಂಭೀರವಾಗಿ ಕೇಳಿದ.

ಅವನ ಗಂಭೀರವದನ ಕಂಡು ಅವಳಿಗೆ‌ ಮತ್ತೆ ಛೇಡಿಸುವ ಧೈರ್ಯವಾಗದೇ "ಕೆಳಗೆ ಬಾ, ಸಮನ್ವಿತಾ ಬಂದಿದ್ದಾರೆ.ಎಲ್ಲಾ ಅಲ್ಲೇ ಇದ್ದಾರೆ. ನಿನ್ನ ಕರೆಯೋಕೆ‌ ಬಂದೆ" ಎಂದ ತಂಗಿಗೆ, " ನೀನು ಹೋಗಿರು ನಾನು ಬರ್ತೀನಿ" ಎಂದು ಸಾಗಹಾಕಿದ.

ಆಕೃತಿ ಹೇಳಿದಂತೆ ಸಮನ್ವಿತಾ ಬಂದಿದ್ದು ನೋಡಿದ್ದ ಅವನು. ಆಫೀಸಿನಿಂದ ಬೇಗ‌ ಬಂದಿದ್ದ. ಬಣ್ಣಗಳು ಕಣ್ಣಿಗೆ ಬಿದ್ದಾಗ ಕ್ಯಾನ್ವಾಸ್, ಬಣ್ಣಗಳು, ಕುಂಚ ಹಿಡಿದು ಟೆರೇಸಿಗೆ ನಡೆದಿದ್ದ. ಏನೋ ಮನಸ್ಸಿಗೆ ತೋಚಿದ್ದನ್ನು ಕ್ಯಾನ್ವಾಸ್ ಮೇಲೆ ಮೂಡಿಸುತ್ತಿದ್ದವನಿಗೆ ಯಾಕೋ ಬೇಸರವೆನಿಸಿತ್ತು. ಮನಸ್ಸು ಯಾರದೋ ನಿರೀಕ್ಷೆಯಲ್ಲಿದ್ದಂತೆ ಚಡಪಡಿಸುತ್ತಿತ್ತು. ಅಲ್ಲೇ ಟೆರೇಸಿನ ಗೋಡೆಗೊರಗಿ ಸುತ್ತ ನೋಟಹರಿಸತೊಡಗಿದವನ ಗಮನ ಮನೆಯ ಮುಂದೆ ಬಂದು ನಿಂತ ಆಟೋದತ್ತ ಹರಿದಿತ್ತು. 

ಅದರಿಂದ ಇಳಿದವಳು ಸಮನ್ವಿತಾ.......  

'ದೇಶದ ಅತ್ಯಂತ ಪ್ರಸಿದ್ಧ ಉದ್ಯಮಿಯ‌ ಮಗಳು ಆಟೋದಲ್ಲಿ ಓಡಾಡುತ್ತಾಳೆಯೇ? ಅವಳ ಮನೆಯಲ್ಲಿ ಕಾರುಗಳಿಗೇನು ಬರವೇ? ಮತ್ತೇಕೆ ಆಟೋದಲ್ಲಿ ಬಂದಿದ್ದಾಳೆ? ಕೋಟ್ಯಂತರ ರೂಪಾಯಿಗಳ ಒಡತಿಯಾದರೂ ಆಟೋದಲ್ಲಿ ಓಡಾಡುವಷ್ಟು ಸರಳ ಮನಸ್ಥಿತಿ ಇರುವಾಕೆಗೆ ಏನೆಲ್ಲಾ ಪ್ರಶ್ನೆ ಕೇಳಬೇಕೆಂದಿರುವೆ…. ಇದು ಅಗತ್ಯವೇ? ವ್ಯಕ್ತಿಯ ವ್ಯಕ್ತಿತ್ವ ಅವನ ನಡೆನುಡಿಗಳಲ್ಲಿ ಸ್ಪಷ್ಟವಾಗದೇ? ಅದನ್ನು ಬಾಯಿಬಿಟ್ಟು ಕೇಳಿಯೇ ತಿಳಿಯಬೇಕೆ?':ಮತ್ತೊಮ್ಮೆ ಅವನ ಮನಸ್ಸು, ಮೆದುಳು ಅವನೊಂದಿಗೆ ಜಿದ್ದಿಗೆ ಬಿದ್ದಿದ್ದವು.

ಅವಳು ಗೇಟಿನಿಂದ ಒಳಬಂದವಳು ಐಶಾರಾಮಿ ಮನೆಯನ್ನಾಗಲೀ, ಅಲ್ಲಿನ ಶ್ರೀಮಂತ ವ್ಯವಸ್ಥೆ, ವಾಸ್ತುಶಿಲ್ಪವನ್ನಾಗಲೀ ಅವಲೋಕಿಸಲಿಲ್ಲ. ಅದರತ್ತ ನೋಟ ಕೂಡ ಹೊರಳಿಸಲಿಲ್ಲ. ಅವಳ ಮನಸೆಳೆದದ್ದು ಆ ಹೂದೋಟ ಮಾತ್ರವೇ. ಗಾರ್ಡನ್ ನ ಪ್ರತಿಯೊಂದು ಮೂಲೆಯನ್ನೂ ಗಮನಿಸುತ್ತಾ ನಿಂತಿದ್ದ ಕಿನ್ನರಿ ಅವನ ಮನದ ವೀಣೆಯನ್ನು ಮೌನವಾಗಿ ಮೀಟಿದ್ದಳು......

ಆಕೃತಿ ಅವಳನ್ನು ಒಳಗೆ ಕರೆದೊಯ್ದರೂ ಅವನ ಕಣ್ಣುಗಳ ಮುಂದೆ ಅವಳ ಅಸ್ತಿತ್ವ ಸ್ಪಷ್ಟವಾಗಿತ್ತು. ಅದೇ ಪರವಶ ಭಾವದಲ್ಲಿದ್ದವನನ್ನು ಆಕೃತಿಯ ಕರೆ ಎಚ್ಚರಿಸಿತ್ತು.

ಇವಳ್ಯಾರು? ಏಕೆ ನನ್ನನ್ನು ಹೀಗೆ ಕಾಡುತ್ತಿದ್ದಾಳೆ? ರಾವ್ ಅವರ ಪಾರ್ಟಿಯಲ್ಲಿ ಇವಳನ್ನು ಕಂಡಾಗಿನಿಂದ ಬೇಡಬೇಡವೆಂದರೂ ಮನಸ್ಸನ್ನು ಆವರಿಸಿಬಿಟ್ಟಿರುವಳಲ್ಲ. ಅವಳನ್ನು ಈ ಮುಂಚೆ ನೋಡಿರುವುದು ಮನಸ್ಸಿಗೆ‌ ಅತ್ಯಂತ ಸ್ಪುಟವಾಗಿದೆ. ಆದರೆ ಎಲ್ಲಿ? ಏನಾದರಾಗಲೀ ಇವತ್ತು ಎಲ್ಲವನ್ನೂ ಕೇಳಬೇಕು ಎಂದುಕೊಂಡು ರೂಮಿಗೆ ಬಂದವ ಬಣ್ಣಗಳಲ್ಲಿ ಮುಳುಗೆದ್ದ ಕೈ ತೊಳೆದು, ಬಟ್ಟೆ ಬದಲಾಯಿಸಿ ಹಾಲಿಗೆ‌ ಬಂದಾಗ ನಾಲ್ವರ ನಗು, ಮಾತುಕತೆ ಕಳೆಗಟ್ಟಿತ್ತು.

"ಅಂತೂ ಹರಟೆ ಬಹಳ‌ ಜೋರಾಗಿಯೇ ಇದೆ" ಎಂದವನ ದನಿಗೆ ತಲೆ ಎತ್ತಿದ ಸಮನ್ವಿತಾ ಅವನನ್ನು ಕಂಡು, "ಹಲೋ ಮಿಸ್ಟರ್ ಶರ್ಮಾ" ಮುಗುಳ್ನಕ್ಕಳು.

"ಹಲೋ ಮಿಸ್ ರಾವ್. ಹೇಗಿದ್ದೀರಾ? ಅಂತೂ ನಮ್ಮನೆಗೆ ಬರುವ ಕೃಪೆ ತೋರಿದ್ರೀ. ನಾವೇ ಧನ್ಯರು" ಎಂದ. 

"ನಿಮ್ಮ ಅಮ್ಮ ಅಷ್ಟೊಂದು ಪ್ರೀತಿಯಿಂದ ಕರೆದಾಗ ಬರೋದಿಲ್ಲ ಅನ್ನೋಕೆ ಮನಸ್ಸಾಗಲಿಲ್ಲ. ಅದಕ್ಕೇ….."ಅವಳು ಮತ್ತೆ ನಸುನಕ್ಕಳು.

"ನಾನು ಕರೆದಿದ್ರೆ ಬರ್ತಿರ್ಲಿಲ್ಲ ಅಂತ ಪರೋಕ್ಷವಾಗಿ ಹೇಳ್ತಿದ್ದೀರಿ ಅನ್ನಿ" ಕೆಣಕಿದ.

"ಮೇ ಬಿ......." ಅವಳು ಮಾತು ತೇಲಿಸಿದಳು.

"ನೀನು ಆ ತರಾ ಕರೆದರೆ ಯಾರು ಬರ್ತಾರೆ? ಬರೋರು ಸುಮ್ನಾಗ್ತಾರೆ ಅಷ್ಟೇ" ಮೃದುಲಾ ಅವರ ಮಾತಿಗೆ ಆಕೃತಿ, "ಹೌದಮ್ಮ ನೀನು ಹೇಳಿದ್ದು ಸರಿ. ಇವ್ನು ಎಲ್ಲರನ್ನೂ ಅವ್ನ ಬಿಸ್ನೆಸ್ ಕ್ಲೈಂಟ್ ಅನ್ನೋ ತರಾನೇ ಟ್ರೀಟ್ ಮಾಡ್ತಾನೆ" ಅಂದಳು.

"ಸಾಮಾನ್ಯವಾಗಿ ಈ ಕ್ಷೇತ್ರದಲ್ಲಿರೋರ ಮನಸ್ಥಿತಿ ಹಾಗೇ ಇರುತ್ತೇ. ಆದ್ರೂ ಪ್ರತೀ ವಿಷಯನೂ ಬಿಸ್ನೆಸ್ ದೃಷ್ಟಿಯಿಂದನೇ ನೋಡೋರ ಮಧ್ಯೆ ನಿನ್ನ ಅಣ್ಣ ಬೆಟರ್. ಅವನಿಗೆ ವ್ಯಕ್ತಿ ಮತ್ತೆ ವ್ಯವಹಾರದ ನಡುವಿನ ವ್ಯತ್ಯಾಸ ಚೆನ್ನಾಗಿ ತಿಳಿದಿದೆ" ಮಗನ ಬೆನ್ನು ತಟ್ಟಿ ನುಡಿದರು ಸಚ್ಚಿದಾನಂದ.

ಮತ್ತೆ ತಂದೆಯ ನೆನಪಾಯಿತು ಸಮನ್ವಿತಾಳಿಗೆ. ಪಕ್ಕಾ ವ್ಯವಹಾರಸ್ಥ. ಹಣದ ಮುಂದೆ ಬೇರೆಲ್ಲವೂ ತೃಣ ಸಮಾನ. ಹಣಕ್ಕಾಗಿ ಎಂಥ ಹೀನ ಕೆಲಸಕ್ಕೂ ಹಿಂಜರಿಯಲಾರದಂತ ಮನಸ್ಥಿತಿಯವರು ಸತ್ಯಂ ರಾವ್ ಎನಿಸಿತು ಅವಳಿಗೆ.

"ಏನಾಯ್ತು ಸಮನ್ವಿತಾ" ಅವಳ ಅನ್ಯಮನಸ್ಕತೆ ಗಮನಿಸಿ ಕೇಳಿದರು ಮೃದುಲಾ. "ಹಾ........ ಏನಿಲ್ಲ ಹೀಗೇ ಏನೋ ನೆನಪಾಯ್ತು"  ಕೆಲಸದವನು ತಂದ ಟೀ ಕೈಗೆತ್ತಿಕೊಳ್ಳುತ್ತಾ ನುಡಿದಳು. 

"ನೀವು ಏನು ಮಾಡ್ತೀರಾ? ಐ ಮೀನ್ ನಿಮ್ಮ ತಂದೆಯ ಬಿಸ್ನೆಸ್ ಸಂಭಾಳಿಸ್ತೀರಾ? ಇಲ್ಲಾ ನಿಮ್ಮ ಸ್ವಂತ ಬಿಸ್ನೆಸ್ ಇದ್ಯಾ?" ಕುತೂಹಲದಿಂದ ಕೇಳಿದ ಅಭಿರಾಮ್ ಮಾತಿಗೆ ಅವಳಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗುತ್ತಿದ್ದವಳನ್ನು ನೋಡಿ ನಾಲ್ವರೂ ಗಲಿಬಿಲಿಗೊಂಡರು.

"ಯಾಕಮ್ಮಾ ನಗ್ತಿದ್ದೀ?" ಕೇಳೇ ಬಿಟ್ಟರು ಸಚ್ಚಿದಾನಂದ. "ಮತ್ತೇನು ಮಾಡ್ಲೀ ಅಂಕಲ್ ಈ ತರ ತಮಾಷೆ ಮಾಡಿದ್ರೇ?" ನಗುವನ್ನು ಹತೋಟಿಗೆ ತರುತ್ತಾ ಕೇಳಿದಳು.

"ಇದ್ರಲ್ಲಿ ತಮಾಷೆ ಏನ್ಬಂತು? ಅಣ್ಣ ನಿಮ್ಮ ಬಿಸ್ನೆಸ್ ಬಗ್ಗೆ ಕೇಳಿದ ಅಷ್ಟೇ" ಎಂದಳು ಆಕೃತಿ.

"ನನ್ನ ನೋಡಿದ್ರೆ ನಮ್ಮಪ್ಪನ ಬಿಸ್ನೆಸ್ ಸಂಭಾಳಿಸುವ ತರಾ ಕಾಣ್ತೀನಾ?" ಅಪನಂಬಿಕೆಯಿಂದ ಕೇಳಿದಳು.

"ನೀವೇನು ಮಾತಾಡ್ತಿದ್ದಿರೋ ನನಗಂತೂ ಅರ್ಥ ಆಗ್ತಿಲ್ಲ" ಗೊಂದಲದಲ್ಲಿ ಕೇಳಿದ ಅಭಿರಾಮ್.

"ಆಕ್ಚುಲಿ ನೀವೆಲ್ಲಾ ಏನು ಕೇಳ್ತಿದ್ದಿರೋ ನನಗೆ ಅರ್ಥ ಆಗ್ತಿಲ್ಲ. ಮೆಡಿಕಲ್ ಓದಿರೋ ನಾನು ನಮ್ಮ ಅಪ್ಪನ ಬಿಸ್ನೆಸ್ ಹೇಗೆ‌ ನೋಡ್ಕೊಳಲಿ? ನಾನೊಬ್ಬ ವೈದ್ಯೆ" ಅವಳ ಮಾತಿಗೆ ಶರ್ಮಾ ಪರಿವಾರ ದಂಗಾಗಿತ್ತು.

"ನೀವೂ ಡಾಕ್ಟರ್?" ಎಂದವನ ಮಾತಿಗೆ "ಯಸ್ ಮಿಸ್ಟರ್ ಶರ್ಮಾ ಆಮ್ ಅ ಡಾಕ್ಟರ್" ಎಂದಳು.

"ಛೇ ನೋಡು, ಇಷ್ಟೊಂದು ಮಾತಾಡಿದ್ರೂ ನೀನು ಏನು ಮಾಡ್ತಿದ್ಯಾ ಅಂತ ನಾವೂ ಕೇಳ್ಲಿಲ್ಲ. ನೀನೂ ಹೇಳ್ಲಿಲ್ಲ" ಎಂದರು ಮೃದುಲಾ.

"ನೀನು ಇಂಜಿನಿಯರಿಂಗ್, ಎಂ.ಬಿ.ಎ ಆ ತರದ ಕೋರ್ಸ್ ಮಾಡಿ ನಿಮ್ಮ ತಂದೆಯೊಂದಿಗೆ ವ್ಯವಹಾರ ನೋಡ್ಕೋತಿದ್ದೀಯಾ ಅಂದುಕೊಂಡಿದ್ದೆ" ಎಂದರು ಸಚ್ಚಿದಾನಂದ.

"ನೀವು ಅಂದುಕೊಂಡಿದ್ದು ಸರಿಯೇ ಅಂಕಲ್. ನನ್ನ ಅಪ್ಪನಿಗೆ ನಾನು ಇಂಥದೇ ಯಾವುದಾದ್ರೂ ಕೋರ್ಸ್ ಮಾಡಬೇಕೆಂದು ಆಸೆ ಇತ್ತು. ಬಟ್ ನನಗೆ ಈ ಕೋರ್ಸ್ ಗಳಲ್ಲಿ ಆಸಕ್ತಿ ಇರಲಿಲ್ಲ. ನಾನು ಇಷ್ಟಪಟ್ಟು ಆರಿಸಿಕೊಂಡ ಕೋರ್ಸ್ ಮೆಡಿಸಿನ್." ಎಂದಳು.

"ಸೋ ಇಟ್ಸ್ ಡಾಕ್ಟರ್ ಸಮನ್ವಿತಾ. ಮನೇಲಿ ಯಾರಿಗಾದ್ರೂ ಹುಷಾರಿಲ್ಲ ಅಂದ್ರೆ ಸೀದಾ ನಿಮ್ಮ ಹತ್ರ ಬರಬಹುದು" ಆಕೃತಿಯ ಹೇಳಿಕೆಗೆ ನಕ್ಕಳು.

"ಹುಷಾರು ತಪ್ಪಿದ್ರೆ ಡಾಕ್ಟರ್ ಸಮನ್ವಿತಾ ಅವರನ್ನು ಯಾವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಲೀ ಹುಡುಕಬೇಕು? ಇಲ್ಲಾ ಅವರದ್ದೇ ಒಂದು ಸ್ವಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದ್ಯಾ? ಬಿಲ್ ನಮ್ಮ ಕೈಲಿ ಕಟ್ಟೋಕಾಗುತ್ತಾ?" ತಮಾಷೆಯಾಗಿ ಕೇಳಿದ.

"ಪರವಾಗಿಲ್ಲವೇ. ನಿಮ್ಗೂ ಕಟ್ಟೋಕಾಗದಷ್ಟು ಬಿಲ್ ಮಾಡೋ ಆಸ್ಪತ್ರೆಗಳೂ ಇವೆಯೆನ್ನಿ" ತಾನೂ ಅವನ ಕಾಲೆಳೆದವಳು, "ನಾನು ಧನ್ವಂತರಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದೀನಿ" ಎಂದಳು. ಈಗ ಮತ್ತೆ ಅಚ್ಚರಿಯಾಗುವ ಸರದಿ ನಾಲ್ವರದ್ದೂ.

"ನೀವು... ಧನ್ವಂತರಿಯಲ್ಲಿ ಡಾಕ್ಟರ್? ಯಾವ ಧನ್ವಂತರಿ?" ಬೇರೆ ಯಾವುದೋ ಧನ್ವಂತರಿ ಇರಬಹುದೆಂದು ಕೇಳಿದ ಅನುಮಾನ ಪರಿಹರಿಸಿಕೊಳ್ಳಲು.

"ಡಾ. ಮೀರಾ ಅವರ ಧನ್ವಂತರಿ " ಸ್ಪಷ್ಟವಾಗಿ ಹೇಳಿದಳು.

"ಅಲ್ಲಮ್ಮಾ, ಅದು ಚಾರಿಟಿ ಪರ್ಪಸ್ ಹಾಸ್ಪಿಟಲ್. ಸ್ಯಾಲರಿನೂ ತುಂಬಾ ಕಡಿಮೆ. ನೀನು ಅಲ್ಲಿ ಕೆಲಸ ಮಾಡ್ತೀಯಾ? ಸತ್ಯಂ ರಾವ್ ಮಗಳು ಧನ್ವಂತರಿಯಲ್ಲಿ ಕೆಲಸ ಅಂದ್ರೇ......"

"ಹೌದು ಅಂಕಲ್, ನಾನು ಅಲ್ಲೇ ಕೆಲಸ ಮಾಡೋದು. ಸ್ಯಾಲರಿ ಕಡಿಮೆ ಆದ್ರೆ ನೆಮ್ಮದಿ, ಆತ್ಮತೃಪ್ತಿ ಜಾಸ್ತಿ ಇದೆ. ನನ್ನ ಅವಶ್ಯಕತೆಗಳು ಬಹಳ ಕಡಿಮೆ. ಹಾಗಾಗಿ ಜಾಸ್ತಿ ಸಂಬಳ ಅಗತ್ಯ ಇಲ್ಲ. ನೀವು ಹೇಗೆ ನಿಮ್ಮ ಸಂತೋಷಕ್ಕಾಗಿ ಧನ್ವಂತರಿಗೆ ಹಣ ಡೊನೇಟ್ ಮಾಡ್ತೀರೋ ಹಾಗೇ ನಾನೂ ನನ್ನ ಸಂತೋಷಕ್ಕೆ ಅಲ್ಲಿ ಕೆಲಸ ಮಾಡ್ತೀನಿ. ಇನ್ನು ಸತ್ಯಂ ರಾವ್ ಅವರ ಸಂಪಾದನೆ ಅವರಿಗೆ ಸಂಬಂಧಿಸಿದ್ದು. ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ಬಿಟ್ಟಳು.

ಅವಳ ಮಾತುಗಳನ್ನು ಕೇಳಿ ಮೂವರೂ ಅಭಿಯತ್ತ ನೋಟಹರಿಸಿದ್ದರು ನಿನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಿತಲ್ಲ ಎಂಬಂತೆ. ಅವನೂ ಮೌನವಾಗಿದ್ದ ಹೌದೆಂಬಂತೆ. 

'ಎಷ್ಟು ಸ್ಪಷ್ಟ ಹಾಗೂ ನೇರ ಮನೋಭಾವದ ಹೆಣ್ಣಿವಳು. ಯಾರ ಹಂಗಿಗೂ ಬೀಳದವಳು. ಸತ್ಯಂ ರಾವ್ ಅಂತಹ ವ್ಯಕ್ತಿಯ ಜೊತೆಗಿದ್ದೂ ಪದ್ಮ ಪತ್ರದ ಮೇಲಿನ ಜಲಬಿಂದುವಿನಂತೆ, ಅಂಟಿಯೂ ಅಂಟದಂತೆ ಇರುವಳೆಂದರೆ ಅದೆಷ್ಟು ದೃಢಮನಸ್ಕಳಾಗಿರಬೇಕು? ಅವಳಾಡಿದ ಒಂದೊಂದು ಮಾತೂ ನಾನು ಕೇಳಬೇಕೆಂದುಕೊಂಡ ಪ್ರಶ್ನೆಗಳಿಗೆ, ನನ್ನ ಯೋಚನಾ ಮಟ್ಟಕ್ಕೆ ಚಾಟಿಯೇಟಿನಂತಹ ಉತ್ತರದಂತಿದೆ. ಅದು ಹೇಗೆ ಆ ಮಟ್ಟಕ್ಕೆ ಯೋಚಿಸಿ ಬಿಟ್ಟೆ ಇಂಥಾ ಹುಡುಗಿಯ ಬಗ್ಗೆ? ಒಂದು ವೇಳೆ ನನ್ನ ಅನುಮಾನಗಳನ್ನು ಪ್ರಶ್ನೆಗಳಾಗಿಸಿ ಇವಳ ಮುಂದಿಟ್ಟಿದ್ದರೆ ಅವಳ ಧೀರೋದಾತ್ತ ನಿಲುವಿನೆದುರು ನಾನು ಎಷ್ಟು ಕೇವಲನಾಗುತ್ತಿದ್ದೆ. ಇನ್ನು ಯಾವ ಪ್ರಶ್ನೋತ್ತರಗಳಿಗೂ ಜಾಗವಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗಿಗೆ ಕಣ್ಮುಚ್ಚಿ ತಾಳಿ ಕಟ್ಟುತ್ತೇನೆಂದವನು ನಾನೇ..... ಈಗ ವಿಧಿ ಇವಳನ್ನು ನನ್ನ ಮುಂದೆ ನಿಲ್ಲಿಸಿದೆ. ಯಾರಾದರೂ ಅನುಕರಿಸಬಹುದಾದ ಗುಣ,ನಡತೆ, ಮನಸ್ಥಿತಿ ಹೊಂದಿರುವಾಕೆ ಇವಳು. ರಾವ್ ಅವರೇ ತಂದ ಪ್ರಸ್ತಾಪ ಎಂದರೆ ಇವಳಿಗೆ ಈ ಬಗ್ಗೆ ಯಾವುದೇ ವಿರೋಧವಿಲ್ಲ. ಇವಳಂಥಾ ನಿರ್ಮಲ ಮನಸ್ಸಿನ ಸಂಗಾತಿ ಎಲ್ಲರ ಅದೃಷ್ಟದಲ್ಲಿರುವುದಿಲ್ಲ.‌ ಅಂತದರಲ್ಲಿ ತಾನಾಗಿಯೇ ನನ್ನನ್ನು ಅದೃಷ್ಟವೇ ಅರಸಿ ಬಂದಿದೆ. ನಾನೂ ಇವಳನ್ನು ಕಂಡಂದಿನಿಂದ ಜಿಜ್ಞಾಸೆಗೆ ಒಳಗಾಗಿದ್ದು ಸತ್ಯ. ಭಾವನೆಗಳ ಹೋರಾಟವೇ ನನ್ನೊಳಗೆ ನಡೆದಿಲ್ಲವೇ? ಹೇಗಿದ್ದರೂ ನನ್ನ ಮನಸ್ಸು, ಮೆದುಳು ಎರಡೂ ಇವಳ ವಿರುದ್ಧ ಒಂದು ಮಾತನ್ನೂ ಕೇಳಲು ಬಯಸವು....... ಹೀಗಿರುವಾಗ ಇನ್ನೇನು ಮರುಯೋಚಿಸಬಾರದು' ಎಂದು ನಿರ್ಧರಿಸಿದವನೇ,

"ಸಮನ್ವಿತಾ ನಿಮ್ಮ ತಂದೆಯವರ ಪ್ರಸ್ತಾಪಕ್ಕೆ ನಮ್ಮೆಲ್ಲರ ಒಪ್ಪಿಗೆ ಇದೆ" ಎಂದುಬಿಟ್ಟ.

ಅವನು ಒಪ್ಪಲಿ ಎನ್ನುವ ಆಸೆ, ಒಪ್ಪಿಸಲೇಬೇಕೆನ್ನುವ ಭಾವ ಎಲ್ಲರಿಗೂ ಇತ್ತಾದರೂ, ಹೀಗೆ ಅನಿರೀಕ್ಷಿತವಾಗಿ ಸಮನ್ವಿತಾಳೆದುರೇ ಹೇಳುತ್ತಾನೆಂದು ಅವರ್ಯಾರೂ ಎಣಿಸಿರಲಿಲ್ಲ. ಆದರೆ ಅವರೆಲ್ಲರಿಗೂ ಅತೀವ ಸಂತಸವಾಗಿತ್ತು. ಮೂವರು ಅವನ ನಿರ್ಧಾರವನ್ನು ಸಮ್ಮತಿಸಿ ಅಭಿನಂದಿಸುತ್ತಿದ್ದರೇ ಸಮನ್ವಿತಾ ಏನೊಂದೂ ಅರ್ಥವಾಗದೇ ಬಿಟ್ಟು ಕಣ್ಣುಗಳಿಂದ ಅವರನ್ನೇ ನೋಡುತ್ತಿದ್ದಳು.

"ಕಂಗ್ರಾಜುಲೇಷನ್ಸ್ ಎಂಡ್ ಥ್ಯಾಂಕ್ಯೂ ಸೋ ಮಚ್ ಮಗಳೇ" ಮೃದುಲಾ ಅಕ್ಕರೆಯಿಂದ ತಬ್ಬಿದಾಗ, "ಯಾಕೇ…...?ನೀವೆಲ್ಲಾ ಯಾವ ವಿಷಯದ ಬಗ್ಗೆ ಮಾತಾಡ್ತಿದ್ದೀರಿ ಅಂತ ಗೊತ್ತಾಗ್ತಿಲ್ಲ ಅಮ್ಮಾ" ಗೊಂದಲದ ಗೂಡಾದ ಮನವನ್ನು ಸಂಭಾಳಿಸುತ್ತಾ ಕೇಳಿದಳು.

"ಇದೇನು ಅತ್ತಿಗೆ  ಹೀಗೆ ಕೇಳ್ತಿದ್ದೀರಿ? ಎಲ್ಲಾ ತಿಳಿದೂ ಏನೂ ಗೊತ್ತಿಲ್ಲದ ರೀತಿ " ಆಕೃತಿಯ ಮಾತಿನಲ್ಲಿ "ಅತ್ತಿಗೆ" ಎಂಬ ಪದಪ್ರಯೋಗ ಅವಳನ್ನು ಇನ್ನಷ್ಟು ಗಲಿಬಿಲಿಗೊಳಿಸಿತು. ಅಯೋಮಯವಾಗಿ ಕಸಿವಿಸಿಯಿಂದ ಎಲ್ಲರೆಡೆ ನೋಟಹರಿಸಿದಳು. 

ಅವಳ ಗೊಂದಲದ ನೋಟವನ್ನು ಸರಿಯಾಗಿ ಗಮನಿಸಿದ್ದು ಅಭಿರಾಮ್ ಮಾತ್ರ. ಹಿಂದಿನ ದಿನ ಫೋನಿನಲ್ಲಿ ಅವಳೊಂದಿಗೆ ಮಾತನಾಡಿದಾಗ ಮೂಡಿದ್ದ ಪ್ರಶ್ನೆಗಳು ಮತ್ತೆ ಅವನ ಮನವನ್ನಾಕ್ರಮಿಸಿತು.

ಅವಳ ಗೊಂದಲಭರಿತ ವದನ ಕಂಡು ಸಚ್ಚಿದಾನಂದರು, "ಅಯ್ಯೋ, ಅದ್ಯಾಕಷ್ಟು ಗೊಂದಲ ಮಗು. ನಿನ್ನ ತಂದೆ ನಿನ್ನ ಮತ್ತು ಅಭಿರಾಮ್ ಮದುವೆಯ ಪ್ರಸ್ತಾಪ ತಂದಿದ್ರಲ್ಲ ಅದು ನಮ್ಮೆಲ್ಲರಿಗೂ ಸಂಪೂರ್ಣ ಸಹಮತ ಅಂತ ಹೇಳಿದ್ದು ಅವನು" 

ಅವರು ಮುಂದೆ ಏನು ಮಾತನಾಡಿದರೋ ಅವಳಿಗೊಂದೂ ಕೇಳಲಿಲ್ಲ.......!!

         ******ಮುಂದುವರೆಯುತ್ತದೆ******



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ