ಮಂಗಳವಾರ, ಜೂನ್ 23, 2020

ಅನೂಹ್ಯ 14

ಸಮನ್ವಿತಾ ಆಸ್ಪತ್ರೆಗೆ ಬಂದು ಡೆಲಿವರಿ ಕೇಸೊಂದನ್ನು ಮುಗಿಸಿ ಮನೆಗೆ ಹೊರಟಾಗ ರಾತ್ರಿ ಹನ್ನೆರಡು ದಾಟಿತ್ತು. ಏನೋ ಯೋಚಿಸುತ್ತಾ ರೂಮಿನತ್ತ ನಡೆದವಳನ್ನು ತಡೆದಿತ್ತು "ಎಕ್ಸ್ಯೂಸ್ ಮೀ ಮ್ಯಾಮ್" ಎಂಬ ನವಿರು ಧ್ವನಿ. ಅದು ಚೈತಾಲಿಯ ಸ್ವರವೆಂದು ಗುರ್ತಿಸಿ ತಿರುಗಿದಳು.

ಚೈತಾಲಿ ಸತ್ಯಂ ರಾವ್ ಅವರ ಪಿ.ಎ. ಅವರ ಬಿಸ್ನೆಸ್ ಹಾಗೂ ಮನೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಲ್ಲಿ ಅವಳೇ ಅವರ ಸಹಾಯಕಿ ಎನ್ನಬಹುದು. ಆದರೆ ಆ ಹೊತ್ತಿನಲ್ಲಿ ಅವಳನ್ನು ಅಲ್ಲಿ ಕಂಡು ಸಮನ್ವಿತಾಳ ಹುಬ್ಬೇರಿತು. 

ಅವಳ ಅಚ್ಚರಿ ಅರಿತವಳಂತೆ, "ನಿಮ್ಮನ್ನೇ ಕಾಯ್ತಿದ್ದೆ ಮ್ಯಾಮ್. ನಿಮಗೊಂದು ಇನ್ಫಾರ್ಮೇಷನ್ ಕೊಡೋದಿತ್ತು" ಚೈತಾಲಿ ನುಡಿದಾಗ,

"ಚೈತಾಲೀ, ನಾವಿಬ್ರೂ ಆಲ್ಮೋಸ್ಟ್ ಒಂದೇ ವಯಸ್ಸಿನವರು. ಪ್ಲೀಸ್ ಕಾಲ್ ಮೀ ಬೈ ನೇಮ್" ವಿನಂತಿಯೆಂಬಂತೆ ಕೇಳಿದಳು.

"ಅಯ್ಯೋ ಮ್ಯಾಮ್, ಅದು ಸರ್ ಗೆ ಇಷ್ಟ ಆಗೋಲ್ಲ." ತನ್ನ ಸಮಸ್ಯೆ ಹೇಳಿದಳು. ಅವಳು ಹೇಳಿದ್ದು ಅಕ್ಷರಶಃ ನಿಜ ಎಂಬುದು ಸಮನ್ವಿತಾಳಿಗೂ ತಿಳಿದ ವಿಷಯ.

"ಸರಿ ಹೋಗ್ಲಿ ಬಿಡು. ಹೇಳು ಅದೇನು ನನಗೆ ಕಾಯ್ತಾ ಕೂತ್ಕೋಳ್ಳುವಷ್ಟು ಮುಖ್ಯವಾದ ವಿಷ್ಯ?" ನೇರವಾಗಿ ಕೇಳಿದಳು.

"ಅದು ಮ್ಯಾಮ್, ನಾಳೆ ನೀವು ಮನೆಲೇ ಇರ್ಬೇಕಂತೆ. ಎಲ್ಲೂ ಹೋಗೋದು ಬೇಡ ಅಂತ ಹೇಳಿದ್ದಾರೆ" ಚೈತಾಲಿಯ ಮಾತು ಕೇಳಿ ಸಮನ್ವಿತಾಳಿಗೆ‌ ಆಶ್ಚರ್ಯವಾಯಿತು.

"ನಾನ್ಯಾಕೆ ಮನೆಲಿರ್ಬೇಕು? ಏನಿದೆ ನಾಳೆ?" ಕೇಳಿದಳು ಗೊಂದಲದಿಂದ.

"ಅದು ನಂಗೆ ಗೊತ್ತಿಲ್ಲ ಮ್ಯಾಮ್. ಸರ್ ತಾವೇ ಹೇಳೋಕಂತ ತುಂಬಾ ಹೊತ್ತು ಕಾಯ್ತಿದ್ರು. ನೀವ್ ಬರೋದು ಲೇಟಾಯ್ತಲ್ಲ. ಅವ್ರು ಯಾವುದೇ ಮುಖ್ಯವಾದ ಕೆಲ್ಸ ಅಂತ ಹೋದ್ರು. ವಿಷಯ ಅವ್ರೇ ಹೇಳ್ತಾರಂತೆ ನಾಳೆ. ನೀವು ಮನೇಲೇ ಇರ್ಬೇಕಂತೆ" ಮತ್ತೊಮ್ಮೆ ಒತ್ತಿ ಹೇಳಿದಳು.

"ಸರಿ ಬಿಡು ಚೈತಾಲಿ. ಹೇಳಿದ್ದಾಯ್ತಲ್ಲ. ತುಂಬಾ ಲೇಟಾಗಿದೆ. ಇಲ್ಲೇ ಗೆಸ್ಟ್ ರೂಮಿನಲ್ಲಿ ಉಳ್ಕೊ" 

ಸಮನ್ವಿತಾ ಮಾತು ಕೇಳಿ ಗಾಬರಿಯಾದ ಚೈತಾಲಿ, 

"ಏನು? ನಾನು ಗೆಸ್ಟ್ ರೂಮಲ್ಲಿ ಉಳ್ಯೋದಾ? ಅದು ಗಣ್ಯಾತಿಗಣ್ಯರಿಗೆ ಮಾತ್ರ ಮೀಸಲು. ಸರ್ ಗೆ ಗೊತ್ತಾದ್ರೆ ಅಷ್ಟೇ ನನ್ ಕಥೆ. ಕೆಲ್ಸ ಕಿತ್ಕೊಂಡು ಮನೆಗೆ ಕಳಿಸ್ತಾರೆ ಮ್ಯಾಮ್. ನಮ್ಮನೆ ಇಲ್ಲೇ ಹತ್ರದಲ್ಲಿರೋದು. ನಾನು ಮನೆಗೇ ಹೋಗ್ತೀನಿ" ನುಡಿದಾಗ ತಮಗಾಗಿ ದುಡಿಯುವ ಕೈಗಳ ಬಗ್ಗೆ ಒಂದಿನಿತೂ ಕನಿಕರವಿಲ್ಲದ ತಂದೆಯ ಬಗ್ಗೆ  ಸಮನ್ವಿತಾಳಿಗೆ ಜಿಗುಪ್ಸೆಯೆನಿಸಿತು. ಆದರೆ ಮಾತಾಡಿ ಪ್ರಯೋಜನವಿಲ್ಲವೆಂದು ಅರಿತು,

"ಸರಿ, ಹೇಗೆ ಹೋಗ್ತೀಯಾ?" ಕೇಳಿದಳು.

"ನನ್ನ ತಮ್ಮನಿಗೆ ಮೆಸೇಜ್ ಮಾಡಿದ್ದೀನಿ. ಗೇಟ್ ಹೊರಗೆ ಕಾಯ್ತಿದ್ದಾನೆ. ನಾನು ಹೊರಡ್ತೀನಿ ಮ್ಯಾಮ್. ನಾಳೆ ಮನೆಲಿರೋದು ಮರಿಬೇಡಿ" ಮತ್ತೊಮ್ಮೆ ನೆನಪಿಸಿ ಹೋದವಳತ್ತಲೇ ನೋಡಿದಳು. ಅವಳ "ಮ್ಯಾಮ್ ಮ್ಯಾಮ್" ಎಂಬ ಸಂಬೋಧನೆ ನೆನಪಾಗಿ ನಗುಮೂಡಿತು ಸಮನ್ವಿತಾಳ ಮೊಗದಲ್ಲಿ. ಒಳ್ಳೆ ಹುಡುಗಿ. ತಂದೆಯ ಎಲ್ಲಾ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವಾಕೆ ಚೈತಾಲಿ. ಆದರೂ ಈ ಅಪರಾತ್ರಿಯಲ್ಲಿ ಹೊರಡಬೇಡ. ಇಲ್ಲೆ ಉಳಿದು ಬೆಳಗ್ಗೆ ಮನೆಗೆ ಹೋಗು ಎನ್ನುವಷ್ಟು ಮಾನವೀಯತೆ ಇಲ್ಲದ ಜನರು.

"ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ" ಎಂಬ ಕಾರ್ಲ್ ಮಾರ್ಕ್ಸ್ ನ ಉಕ್ತಿ ಅವಳಿಗೆ ಪದೇ ಪದೇ ನೆನಪಾಯಿತು. ಉಳ್ಳವರಿಗೆ ತಮ್ಮಲ್ಲಾ ಕಾರ್ಯಗಳನ್ನು ಸಲೀಸಾಗಿ ನಿರ್ವಹಿಸಲು ಇಲ್ಲದವರ ಸಹಕಾರ ಬೇಕು. ಆದರೆ ಅವರಿಗೆ ನ್ಯಾಯವಾಗಿ ದಕ್ಕಬೇಕಾದುದನ್ನೂ ತಾವೇ ಕಿತ್ತುಕೊಳ್ಳುವ ಕ್ರೌರ್ಯತೆ ಬಂಡವಾಳಶಾಹಿತ್ವದ ಮೂಲಗುಣ. ಶತಮಾನಗಳೇ ಕಳೆದರೂ ಇದು ಬದಲಾಗದ ಸತ್ಯವೆನಿಸಿತು ಅವಳಿಗೆ. 

ತಲೆ ಕೊಡವಿ ತಂದೆ ನಾಳೆ ತನ್ನನ್ನೇಕೆ ಮನೆಯಲ್ಲೇ ಉಳಿಯಲು ಹೇಳಿರಬಹುದೆಂದು ಯೋಚಿಸತೊಡಗಿದಳು. ಅವಳಿಗೆ ತಿಳಿದಂತೆ ಮಿಸ್ಟರ್ ರಾವ್ ಅವರಿಗೆ ಅವಳ ಬಳಿ ಚರ್ಚಿಸುವಂತಹ ಯಾವುದೇ ವಿಚಾರಗಳಿಲ್ಲ. ಇವಳು ಅವರ ಇಷ್ಟದ ವಿರುದ್ಧ ಧನ್ವಂತರಿಯಲ್ಲಿ ವೃತ್ತಿ ಆರಂಭಿಸಿದ ನಂತರ ಅಪ್ಪ ಮಗಳ ನಡುವೆ ಮಾತುಕತೆ ಇರಲೇ ಇಲ್ಲ ಅನ್ನಬಹುದೇನೋ. ಅಂಥದ್ದರಲ್ಲಿ ತನ್ನನ್ನು ಮನೆಯಲ್ಲೇ ನಿಲ್ಲಲು ಹೇಳುವಂಥಾ ವಿಷಯ ಯಾವುದಿರಬಹುದು? ಅವಳಿಗೇನೂ ಹೊಳೆಯಲಿಲ್ಲ. ಇರಲಿ, ಹೇಗಿದ್ದರೂ ನಾಳೆ ತಿಳಿಯುತ್ತದೆ ಎಂದು ಸುಮ್ಮನಾದಳು.

ಅವಳು ಇಲ್ಲದಿದ್ದರೂ ಮುಂದಿನ ಎರಡು ದಿನಗಳಿಗೆ ರಜೆ ಪಡೆದಿದ್ದಳು. ಮೀರಾ ಮಾತು ಕೊಟ್ಟಂತೆ ಕ್ವಾಟ್ರಸ್ ಒಂದನ್ನು ಅವಳಿಗಾಗಿ ಸಿದ್ಧಗೊಳಿಸಿದ್ದರು. ನಾಳೆ ಮಿಸ್ಟರ್ ಅಂಡ್ ಮಿಸ್ಸೆಸ್ ರಾವ್ ಅವರಿಗೆ ವಿಷಯ ತಿಳಿಸಿ ಇಲ್ಲಿಂದ ಕ್ವಾಟ್ರಸ್ ಗೆ ಶಿಫ್ಟ್ ಆಗಲು ತೀರ್ಮಾನಿಸಿದ್ದಳು. ರೂಮಿಗೆ ಬಂದವಳೇ ತನ್ನ ಬಟ್ಟೆ, ಪುಸ್ತಕಗಳನ್ನೆಲ್ಲಾ ಜೋಡಿಸಿ ಪ್ಯಾಕ್ ಮಾಡಿ ಮಲಗುವಾಗ ತುಂಬಾ ತಡವಾಯಿತು. ಬೆಳಿಗ್ಗೆ ನಿಧಾನವಾಗಿ ಎದ್ದರಾಯಿತು ಅಂದುಕೊಂಡೆ ಮಲಗಿದಳು.

                    *************

ಗಾಢನಿದ್ರೆಯಲ್ಲಿದ್ದವಳನ್ನು ಇಂಟರ್ಕಾಮ್ ನ ಕರ್ಕಶ ಸದ್ದು ಬಡಿದೆಬ್ಬಿಸಿತು. ಗಡಿಯಾರದತ್ತ ನೋಡಿದರೆ ಹನ್ನೊಂದುವರೆ ತೋರಿಸುತ್ತಿತ್ತು. ಫೋನ್ ರಿಸೀವ್ ಮಾಡಿದರೆ ಅತ್ತ ಕಡೆಯಿಂದ ಕೇಳಿದ್ದು ಮಾಲಿನಿಯವರ ದನಿ. "ನಮ್ಮ ರೂಮಿಗೆ ಬಾ. ನಿನ್ಹತ್ರ ಮಾತಾಡೋದಿದೆ" ಅಷ್ಟೇ ಹೇಳಿದ್ದು ಅವಳಮ್ಮ. ಏನೋ ಗಹನವಾದ ವಿಚಾರವೇ ಇರಬೇಕೆಂದುಕೊಂಡಳು.

"ಅರ್ಧಗಂಟೆಯೊಳಗೆ ಬರ್ತೀನಿ" ಇನ್ನೊಂದು ಮಾತಿಗೆ ಅವಕಾಶವಿಲ್ಲದಂತೆ ಫೋನು ಕುಕ್ಕಿದಳು. 

ಸ್ನಾನಮಾಡಿ ತಯಾರಾಗಿ 'ಅತೀ ಅಪರೂಪಕ್ಕೆ ಸಿಗುವ' ವ್ಯಕ್ತಿಗಳೊಂದಿಗೆ ಮಾತಾಡಲು ಅವರ ರೂಮಿನ ಹತ್ತಿರ ಬಂದು ಮೆಲ್ಲಗೆ ಬಾಗಿಲು ತಟ್ಟಿ, 

"ಮೇ ಐ ಕಮ್ ಇನ್?" ಅಪ್ಪಣೆ ಕೇಳಿದಳು. ಅವಳಿಗಾಗಿಯೇ ಕಾದಿದ್ದವರಂತೆ ಮಾಲಿನಿ ಕೈ ಹಿಡಿದು ಒಳಗೆ ಕರೆದೊಯ್ದರು. ರಾವ್ ಅವರು ಅವಳನ್ನು ಕಂಡೊಡನೆ "ಹೌ ಆರ್ ಯು ಮೈ ಚೈಲ್ಡ್" ಎನ್ನುತ್ತಾ ತಮ್ಮ ಆತ್ಮೀಯತೆ ಪ್ರದರ್ಶಿಸಿದರು. ಇಬ್ಬರೂ ಒಟ್ಟಿಗೆ ತನಗಾಗಿ ಕಾದಿರುವುದು ನೋಡಿಯೇ ಏನೋ ಭಯಂಕರ ಪ್ಲಾನ್ ಇರೋ ಹಾಗಿದೆ ಅಂದುಕೊಂಡವಳು, "ನಾನು ಚೆನ್ನಾಗಿದ್ದೀನಿ ಡ್ಯಾಡ್"  ಕೋಣೆಯನ್ನೇ ಅವಲೋಕಿಸುತ್ತಾ ನುಡಿದಳು. ಅತಿಯಾದ ಶ್ರೀಮಂತಿಕೆಯ ಕೆಟ್ಟ ಪ್ರದರ್ಶನವಿತ್ತು ಅಲ್ಲಿ. ಎಲ್ಲಾ ಪರದೇಶಿ ವಸ್ತುಗಳನ್ನು ಗುಡ್ಡೆಹಾಕಿದಂತಿತ್ತು. ಅಂದವಾದ, ಒಪ್ಪ ಓರಣದ ಅಲಂಕಾರಕ್ಕಿಂತ ಸಿರಿವಂತಿಕೆಯ ಪ್ರತಿಷ್ಟೆ ತೋರಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆಂದು ಊಹಿಸಿದಳು. ಇದರ ಉಸಾಬರಿ ತನಗೇಕೆ ಎಂದುಕೊಂಡು 

"ಏನು ವಿಷಯ ಡ್ಯಾಡ್? ಇವತ್ತು ಮನೆಲ್ಲಿ ಇರೋಕೆ ಹೇಳಿದ್ರಂತೆ?" ನೇರವಾಗಿ ವಿಷಯಕ್ಕೆ ಬಂದಳು.

"ಇತ್ತೀಚೆಗೆ ಮನೇಲೇ ಇರೋಲ್ಲ ನೀನು ಅಂತಿದ್ಲು ಮಾಲಿನಿ. ಯಾವಾಗ್ಲೂ ಆಸ್ಪತ್ರೆ, ರೋಗಿಗಳು ಅಂತ ಹಗ್ಲೂ ರಾತ್ರಿ ಓಡಾಡ್ತಿದ್ರೆ ನಿನ್ನ ಆರೋಗ್ಯದ ಗತಿಯೇನು ಮೈ ಬೇಬಿ?" ಮಾತಿನಲ್ಲೇ ಅತೀವ ಕಾಳಜಿ ಸುರಿಸಿದಾಗ ಸಮನ್ವಿತಾಳ ಮೈಮೇಲೆ ಮುಳ್ಳುಗಳೆದ್ದಂತಾಯಿತು. ಈ ತೋರಿಕೆಯ, ಸೋಗಿನ ಮಾತುಗಳು ಅಗತ್ಯವೇ? ಇಷ್ಟು ವರ್ಷಗಳಲ್ಲಿ ಎಂದೂ ಇಲ್ಲದ ಅಕ್ಕರೆ, ಪ್ರೀತಿ ಈಗೇಕೆ? ಅವಳು ಜಾಣೆ. ಸರಿಯಾಗಿ ಅರ್ಥೈಸಿಕೊಂಡಳು. ತನ್ನಿಂದ ಏನೋ ಕಾರ್ಯಸಾಧನೆ ಆಗಬೇಕಾಗಿದೆ. ಅದಕ್ಕೆ ತನ್ನ ಮೇಲೆ ಇಂದು ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದು.

"ಡ್ಯಾಡ್ ಪ್ಲೀಸ್. ನಿಮ್ಗೆ ಏನಾಗ್ಬೇಕು ನೇರವಾಗಿ ಹೇಳಿ. ಈ ರೀತಿ ಏನೇನೋ ಮಾತಾಡಿ ನಿಮ್ಮ ಟೈಂ ವೇಸ್ಟ್ ಮಾಡ್ಕೋಬೇಡಿ" ಮುಖದ ಮೇಲೆ ಹೊಡೆದಂತೆ ಹೇಳಿದಾಗ ಗಂಡ ಹೆಂಡತಿ ಮುಖ ಮುಖ ನೋಡಿಕೊಂಡರು.

"ಅಯ್ಯೋ, ನಮ್ಗೇನೂ ಆಗ್ಬೇಕಿಲ್ಲ. ಇವತ್ತು ಸಂಜೆ ಒಂದು ಚಿಕ್ಕ ಗೆಟ್ ಟುಗೆದರ್ ಇದೆ. ನೀನೂ ಇರ್ಬೇಕು. ಹಾಗಾಗಿ ಮನೆಯಲ್ಲೇ ಇರೋಕೆ ಹೇಳಿದ್ದು" ಮಾಲಿನಿ ಹೇಳಿದಾಗ ಹುಬ್ಬೇರಿಸಿದಳು. 

"ನಿಮ್ಮ ಗೆಟ್ ಟುಗೆದರ್ ಪಾರ್ಟಿಗಳು ವಾರದಲ್ಲಿ ಆರು ದಿನ ಇರುತ್ತೆ. ಅದಕ್ಕೆಲ್ಲ ಲೀವ್ ತಗೋತಾ ಹೋದ್ರೆ ನಾನು ಕೆಲ್ಸ ಬಿಟ್ಟು ಪರ್ಮನೆಂಟಾಗಿ ಮನೇಲೇ ಇರ್ಬೇಕಾಗುತ್ತೆ. ಯಾವತ್ತೂ ಇಲ್ಲದ್ದು ಇವತ್ತೇನು ವಿಶೇಷ? ನನ್ಗೆ ಈ ಥರ ಪಾರ್ಟಿಸ್ ಇಷ್ಟ ಆಗೋಲ್ಲ ಅಂತ ನಿಮ್ಗೂ ಗೊತ್ತು. ನೀವು ಏನಾದ್ರೂ ಮಾಡ್ಕೋಳಿ. ಬಟ್ ಡೋಂಟ್ ಫೋರ್ಸ್ ಮೀ." ಖಡಾಖಂಡಿತವಾಗಿ ಹೇಳಿದಳು.

ಆದರೆ ಇವತ್ತಿನ ಸಂತೋಷಕೂಟದಲ್ಲಿ ಅವಳ ಇರುವಿಕೆ ಅವರಿಗೆ ಅತೀ ಮುಖ್ಯವಾಗಿತ್ತು. ಹಾಗಾಗಿ ಶತಾಯಗತಾಯ ಅವಳನ್ನು ಒಪ್ಪಿಸಲೇಬೇಕಾಗಿತ್ತು. ಹಾಗಾಗಿ ಇನ್ನಷ್ಟು ನಯವಾಗಿ,

"ನಿನಗೆ ಪಾರ್ಟಿಗಳು ಇಷ್ಟವಿಲ್ಲ ಅಂತ ನಮಗೂ ಗೊತ್ತು. ನಾವು ಯಾವತ್ತಾದ್ರೂ ನಿನ್ನ ಒತ್ತಾಯ ಮಾಡಿದ್ದೀವಾ? ಇಲ್ಲ ತಾನೇ? ಆದ್ರೆ ಇವತ್ತು ಸ್ಪೆಷಲ್ ಗೆಸ್ಟ್ ಗಳು ಬರ್ತಿರೋದು. ಸೋ ನೀನು ಇರ್ಲೇಬೇಕಮ್ಮ" ಅವಳಪ್ಪ ಅನುನಯಿಸಿದಾಗ ಅವರ ಕಿರಿಕಿರಿ ತಾಳಲಾರದೆ ಒಪ್ಪಿದರೂ "ನನಗೆ ಅಲ್ಲಿರೋಕೆ ಇಷ್ಟ ಆಗ್ಲಿಲ್ಲ ಅಂದ್ರೆ ನಾನು ನಿಲ್ಲೋದಿಲ್ಲ" ಷರತ್ತು ಹಾಕಿದಳು. ಅವಳು ಒಪ್ಪಿದ್ದೇ ಸುಕೃತವೆಂಬಂತೆ ಅವರು ಅವಳು ಹೇಳಿದ್ದಕ್ಕೆ ತಲೆಯಾಡಿಸಿ "ಥ್ಯಾಂಕ್ಯೂ ಬೇಬಿ" ಅಂದರು.

"ಡ್ಯಾಡ್ ಮಾಮ್, ನಿಮ್ಮ ಹತ್ರ ಇನ್ನೊಂದು ವಿಷಯ ಹೇಳ್ಬೇಕು" ತಾನು ಕ್ವಾಟ್ರಸ್ ಗೆ ಶಿಫ್ಟ್ ಆಗುವ ಬಗ್ಗೆ ಹೇಳಲು ಹೊರಟಾಗ, "ಸಾರಿ ಬೇಬಿ, ಸಂಜೆ ಪಾರ್ಟಿ ಪ್ರಿಪರೇಷನ್ಸ್ ಎಲ್ಲಾ ಆಗ್ಬೇಕು. ತುಂಬಾ ಕೆಲ್ಸ ಇದೆ. ನಾಳೆ ಫುಲ್ ಡೇ ನಿನಗೆ. ಆಗ ಮಾತಾಡೋಣ. ಒಕೆ?" ಅವರು ಎದ್ದಾಗ, ಏಳುವುದು ಅವಳಿಗೆ ಅನಿವಾರ್ಯವಾಯಿತು. "ಕೆಲಸ ಆಗೋವರ್ಗೂ ಒಂಥರಾ, ಆಮೇಲೆ ಇನ್ನೊಂಥರಾ. ನಾಳೆ ನನ್ನ ನೆನಪೇ ಇರೋಲ್ವೇನೋ" ತನ್ನಲ್ಲೇ ಗೊಣಗಿಕೊಳ್ಳುತ್ತಾ, ಹೊರಡುವ ಮುನ್ನ ಹೇಳಿದರಾಯ್ತು ಎಂದುಕೊಂಡು ಸುಮ್ಮನಾದಳು.

ಸಂಜೆಯ ಪಾರ್ಟಿ ತಯಾರಿಗಳು ಭರದಿಂದ ಸಾಗಿದ್ದವು. ಇವತ್ತಿನ ಸಂಜೆಗೆ ತನ್ನ ಇರುವಿಕೆಗೆ ಏಕಿಷ್ಟು ಒತ್ತಾಯ ಎಂಬ ಪ್ರಶ್ನೆ ಪದೇ ಪದೇ ಮನದಲ್ಲಿ ಸುಳಿಯಿತಾದರೂ ಆ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ.ರೂಪುರೇಷೆಗಳ ಅರಿವಿಲ್ಲದಿದ್ದರೂ ಯಾವುದೋ ವಿಶೇಷ ಯೋಜನೆಯೊಂದು ತನ್ನ ತಂದೆಯ ತಲೆಯಲ್ಲಿದೆ ಎಂದವಳಿಗೆ ಸ್ಪಷ್ಟವಾಗಿತ್ತು. ಆದರೆ ಆ ಯೋಜನೆ ಅವಳ ಬದುಕಿನಲ್ಲಿ ಅತೀ ಪ್ರಮುಖವಾದ ತಿರುವನ್ನು ತರಲಿತ್ತು.

                 ******************

ಮಧ್ಯಾಹ್ನ ಊಟವಾಗಿ ಸತ್ಯನಾರಾಯಣರು ಗಡದ್ದಾದ ನಿದ್ರೆಯಲ್ಲಿದ್ದರು. ಮಂಗಳಮ್ಮ ಸೋಫಾದಲ್ಲಿ ಕೂತು ಪತ್ರಿಕೆ ಮಗುಚುತ್ತಿದ್ದರು. ಸ್ವಲ್ಪ ಮಲಗಿ ಎಂದು ನವ್ಯಾ ನೂರು ಬಾರಿ ಹೇಳಿದರೂ ಅವರು ಕೇಳರು. ಮಧ್ಯಾಹ್ನದ ನಿದ್ರೆ ಅವರಿಗಾಗದು. 

ಬಾಗಿಲು ಬಡಿದ ಸದ್ದಿಗೆ ಅವರೇ ಕದ ತೆರೆದರು. ಎದುರಿಗೆ ಕಿಶೋರ್ ನಿಂತಿದ್ದ. "ಏನೋ ಮಧ್ಯಾಹ್ನನೇ ಬಂದು ಬಿಟ್ಟಿದ್ದಿ ಇವತ್ತು?" ಅಚ್ಚರಿಯಿಂದ ಕೇಳಿದರು. 

"ಹೌದಮ್ಮ. ಕೆಲ್ಸ ಜಾಸ್ತಿ ಇರ್ಲಿಲ್ಲ. ಸ್ವಲ್ಪ ತಲೆ ನೋವಿತ್ತು. ಅದ್ಕೇ ಅರ್ಧ ದಿನ ರಜಾ ತಗೊಂಡು ಬಂದೆ" ಹೇಳಿದವನು, "ನವ್ಯಾ, ಒಂದು ಕಪ್ ಕಾಫಿ ಕೊಡ್ತೀಯಾ?" ಅಲ್ಲಿಂದಲೇ ಕೂಗಿದ. ಅತ್ತಲಿಂದ ಏನೂ ಉತ್ತರ ಬಾರದೇ ಅಡಿಗೆಮನೆಗೆ ಹೊರಟವನಿಗೆ "ನೀನು ಕೂತ್ಕೋ, ನಾನು ನೋಡ್ತೀನಿ" ಎಂದು ತಾವೇ ಹೊರಟರು ಮಂಗಳಮ್ಮ.

ಅಡಿಗೆ ಮನೆಯಲ್ಲಿ ಎಲ್ಲಾ ಸ್ವಚ್ಚಮಾಡಿ, ಸಾರನ್ನು ಬಿಸಿಮಾಡಲು ಇಟ್ಟಿದ್ದ ನವ್ಯಾ ಅಲ್ಲೇ ಒರಗಿ ಯೋಚಿಸುತ್ತಿದ್ದಳು. ಅವಳಿಗೆ ಕಿಶೋರ್ ಬಂದದ್ದೂ ಗೊತ್ತಾಗಿರಲಿಲ್ಲ. ಗ್ಯಾಸ್ ಆಫ್ ಮಾಡಿದ ಮಂಗಳಮ್ಮ ನವ್ಯಾಳನ್ನು ಅಲುಗಾಡಿಸಿ, "ಏನಾಯ್ತೇ ನವ್ಯಾ, ಏನು ಯೋಚಿಸ್ತಿದ್ದೀಯ?" ಕೇಳಿದಾಗ ವಾಸ್ತವಕ್ಕೆ ಬಂದವಳು ಎದುರು ನಿಂತ ಅತ್ತೆಯನ್ನು ನೋಡಿ, "ಏನಾಯ್ತಮ್ಮ" ಕೇಳಿದಳು.

"ನವ್ಯಾ, ನೀನು ಇತ್ತೀಚೆಗೆ ತುಂಬಾ ಯೋಚಿಸ್ತಿರ್ತೀಯ. ಯಾವಾಗ್ಲೂ ಏನೋ ಚಿಂತೆಲಿರ್ತೀಯ. ಯಾಕೆ ಮಗೂ? ನಿನ್ನ ಅಪ್ಪ ಅಮ್ಮ ನೆನಪಾದ್ರ? ಏನಾದ್ರೂ ಸಮಸ್ಯೆ ಇದ್ರೆ ನಮ್ಮ ಹತ್ರ ಹೇಳ್ಕೋಬಾರ್ದ ತಾಯೀ" ಕಕ್ಕುಲತೆಯಿಂದ ವಿಚಾರಿಸಿದಾಗ,

"ಅಯ್ಯೋ, ಹಾಗೇನೂ ಇಲ್ಲಮ್ಮ. ನೀವೆಲ್ಲಾ ಇರೋವಾಗ ನನಗೆಂಥಾ ಯೋಚನೆ?" ಎಂದಳು ನವ್ಯಾ. 

ಅಷ್ಟರಲ್ಲಿ ಅಡುಗೆಮನೆಗೆ ಬಂದಿದ್ದ ಕಿಶೋರ್ ಕೂಡಾ ತಾಯಿಯನ್ನು ಅನುಮೋದಿಸುತ್ತಾ, "ಹೌದು ನವ್ಯಾ, ಅಮ್ಮ ಹೇಳಿದ್ದು ಅಕ್ಷರಶಃ ಸತ್ಯ" ಎಂದಾಗ,

"ನೀವ್ಯಾವಾಗ ಬಂದಿದ್ದು?" ಅಚ್ಚರಿಯಿಂದ ಕೇಳಿದಳು.

"ನೋಡಮ್ಮಾ, ಇವಳಿಗೆ ನಾನು ಬಂದಿದ್ದೇ ಗೊತ್ತಿಲ್ಲ. ಅದಕ್ಕೆ ಹೇಳಿದ್ದು ಕಣೇ ನೀನು ಫಿಸಿಕಲೀ ಪ್ರೆಸೆಂಟ್ ಮೆಂಟಲೀ ಆಬ್ಸೆಂಟ್ ಆಗಿದ್ಯಾ ಅಂತ" ಅಣಕಿಸಿದ.

"ಸಾಕು ಸುಮ್ನಿರೋ, ಅವಳನ್ಯಾಕೆ ಆಡ್ಕೋತಿಯಾ. ಅಡ್ಗೆ ಮನೆಲಿದ್ಲಲ್ಲ ಅವಳಿಗೆ ಕೇಳಿರ್ಲಿಕ್ಕಲ್ಲ ನೀನು ಕೂಗಿದ್ದು" ಅವನಿಗೆ ಹೇಳಿದವರು, "ಸರಿ ನೀವಿಬ್ರೂ ಕಾಫಿ ಕುಡಿತಾ ಮಾತಾಡ್ತಿರಿ. ನಾನೊಂಚೂರು ವನಜಮ್ಮನ ಮನೆಗೆ ಹೋಗಿ ಬರ್ತೀನಿ" ಮಂಗಳಮ್ಮ ಹೊರಟಾಗ ನವ್ಯಾ "ಅಮ್ಮ ತುಂಬಾ ಬಿಸಿಲಿದೆ ಸ್ವಲ್ಪ ತಡೆದು ಹೋಗಿ. ನಿಮ್ಗೂ ಕಾಫಿ ಮಾಡ್ತೀನಿ" ಎಂದಳು.

"ಇಲ್ಲಮ್ಮ. ಅವರು ಮಾವಿನ ಮಿಡಿ ಉಪ್ಪಿಗೆ ಹಾಕಿದ್ದಾರಂತೆ. ಒಂಚೂರು ಮಸಾಲೆ ರೆಡಿಮಾಡಿ ಉಪ್ಪಿನಕಾಯಿ ಕಲೆಸಿಕೊಡಿ. ನೀವು ಮಾಡೋ ಉಪ್ಪಿನಕಾಯಿ ತುಂಬಾ ರುಚಿ ಅಂದ್ರು. ಅದ್ಕೆ ಹೋಗಿ ಮಾಡ್ಕೊಟ್ಟು ಬರ್ತೀನಿ. ಕಾಫಿ ಅಲ್ಲೇ ಆಗುತ್ತೆ" ಹೊರಟೇ ಬಿಟ್ಟರು ಮಂಗಳಮ್ಮ.

ಕಿಶೋರ್ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಹಾಲಿಗೆ ಬರುವ ವೇಳೆಗೆ ಕಾಫಿ ತಂದು ಕೊಟ್ಟ ನವ್ಯಾ ತಾನೊಂದು ಕಪ್ ಹಿಡಿದು ಎದುರು ಕೂತಳು.

"ಮತ್ತೆ ಅದೇ ವಿಷ್ಯ ಯೋಚಿಸ್ತಿದ್ದೀಯಾ ನವ್ಯಾ. ಏನಾದ್ರೂ ಪರಿಹಾರ ಹುಡ್ಕೋಣ ಇರು" ಎಂದ.

ಅವಳು ನಿಟ್ಟುಸಿರು ಬಿಟ್ಟು, "ಅದೂ ಯೋಚನೆ ಇದೆ. ಆದ್ರೆ ನಾನೀವಾಗ ಸಮಾ ಬಗ್ಗೆ ಯೋಚಿಸ್ತಾ ಇದ್ದೆ" ಎಂದಳು.

"ಏನು ಸಮನ್ವಿತಾ ಬಗ್ಗೆನಾ? ಯಾಕೆ ಅವಳಿಗೇನಾಯ್ತು?" ಕೇಳಿದ ಗಾಬರಿಯಲ್ಲಿ.

"ಗಾಬರಿ ಆಗೋಂಥದ್ದು ಏನೂ ಆಗಿಲ್ಲ. ಬೆಳಗ್ಗೆ ಫೋನ್ ಮಾಡಿದ್ಲು. ಅವ್ಳು ಹಾಸ್ಪಿಟಲ್ ಕ್ವಾಟ್ರಸ್ ಗೆ ಶಿಫ್ಟ್ ಆಗ್ತಿದ್ದಾಳಂತೆ" 

"ಓ ಅದಾ. ನನ್ಗೂ ಹೇಳಿದ್ಲೂ. ಒಂದು ವಾರದ ಹಿಂದೆನೇ ಕೇಳಿದ್ಲಂತೆ ಕ್ವಾಟ್ರಸ್. ಮೊನ್ನೆ ಕೊಟ್ರು ಅಂದ್ಲು. ಶಿಫ್ಟಿಂಗಿಗೆ ಬರ್ಲಾ ಅಂತ ಕೇಳ್ದೆ. ಬೇಡ ಅಷ್ಟೇನು ಲಗೇಜ್ ಇಲ್ಲ. ಅಲ್ಲಿಗೆ ಹೋದ್ಮೇಲೆ ಶಾಪಿಂಗ್ ಮಾಡೋಕೆ ನೀವಿಬ್ಬರೂ ಬೇಕು ಅಂದ್ಲು"

"ಕಿಶೋರ್ ನಾನು ಅವಳನ್ನ ಮೊದಲು ಭೇಟಿ ಮಾಡಿದಲ್ಲಿಂದ ನೋಡಿದ್ದೀನಿ. ಅವಳ್ಯಾವತ್ತೂ ಮನೆ,ಅಪ್ಪ, ಅಮ್ಮ ಯಾವುದ್ರ ಬಗ್ಗೆಯೂ ಮಾತಾಡೋದೆ ಇಲ್ಲ. ಕೇಳಿದ್ರೆ ವಿಷ್ಯ ಬದ್ಲಾಯಿಸ್ತಾಳೆ. ಯಾಕೆ? ಅವಳಪ್ಪ ತುಂಬಾ ಶ್ರೀಮಂತರು ಅಂತ ಆಸ್ಪತ್ರೆಯಲ್ಲಿ ಎಲ್ಲಾ ಮಾತಾಡೋದು ಕೇಳಿದ್ದೀನಿ. ಮತ್ಯಾಕೆ ಅವಳು ಅಪ್ಪ ಅಮ್ಮ ಮನೆ ಎಲ್ಲಾ ಬಿಟ್ಟು ಕ್ವಾಟ್ರಸಲ್ಲಿ ಇರ್ಬೇಕು?" ನವ್ಯಾ ಕೇಳಿದಾಗ ಕಿಶೋರ್ ಮುಖದಲ್ಲಿ ಅವ್ಯಕ್ತ ಭಾವವೊಂದು ಹಾದು ಹೋಯಿತು.

"ಹ್ಮಂ ನವ್ಯಾ. ಅವಳ ಅಪ್ಪ ದೇಶದ ಅತೀ ಸಿರಿವಂತರಲ್ಲೊಬ್ಬರು. ಹಲವು ತಲೆಮಾರುಗಳು ಕೂತು ತಿಂದರೂ ಕರಗದಷ್ಟು ಸಂಪತ್ತಿದೆ. ಆದರೇನು ಬಂತು. ಗುಣದಲ್ಲಿ ಆತ ಕಡುಬಡವ. ಹಣದ ಮುಂದೆ ಬೇರೆಲ್ಲವೂ ಗೌಣ ಆ ಮನುಷ್ಯನಿಗೆ. ಹೆಂಡತಿಯೂ ಅವನಂತೆಯೇ. ದುಡ್ಡು, ಪಾರ್ಟಿ, ಮೋಜು, ಮಸ್ತಿ ಇದೇ ಅವರ ಜೀವನ. ಇಂಥಾ ದಂಪತಿಗಳಿಗೆ ಸಮನ್ವಿತಾಳಂಥಾ ಮಗಳು..... ಅವಳ ಗುಣ ಸ್ವಭಾವಗಳು ಇವರಿಗೆ ತದ್ವಿರುದ್ಧ. ಅವಳನ್ನು ನೋಡಿದವರ್ಯಾರೂ ಅವಳು ದಿ ಗ್ರೇಟ್ ಸತ್ಯಂ ರಾವ್ ಅವರ ಮಗಳು ಅಂತ ಹೇಳೋಕಾಗಲ್ಲ. ಅವಳು ಓದಿದ್ದೆಲ್ಲಾ ವಿದೇಶದಲ್ಲೇ. ಒಂದು ಸಾರಿ ವಿದೇಶಕ್ಕೆ ಹೋಗಿ ಬಂದ್ರೆ ಜೀವನ ಪರ್ಯಂತ ಅಲ್ಲಿದೇ ಗುಣಗಾನ ಮಾಡೋ ಜನರ ಮಧ್ಯೆ ಇವಳು ಕ್ಷಣಕ್ಕೂ ಅದನ್ನು ನೆನಪಿಸಿಕೊಳ್ಳೋಲ್ಲ. ಅಪ್ಪ ಅಮ್ಮನ ಜೀವನಶೈಲಿಯ ಬಗ್ಗೆ ಅವಳಿಗೆ ತಿರಸ್ಕಾರ. ಹೊರಗೆ ಎಷ್ಟು ಖುಷಿಯಿಂದ ಇರೋ ಹಾಗೆ ತೋರಿಸ್ಕೊಂಡರೂ, ತಾಯ್ತಂದೆಯರು ತನ್ನನ್ನು ಮಗಳ ತರಾ ನೋಡ್ಲೇ ಇಲ್ಲ, ಹೆತ್ತವರ ಅಕ್ಕರೆ, ಆದರ, ಪ್ರೀತಿ, ಮಮತೆ ಯಾವುದೂ ತನಗೆ ಸಿಕ್ಕಲಿಲ್ಲ ಅನ್ನೋ ವಿಷಾದ ಅವಳ ಆಂತರ್ಯದಲ್ಲಿ ಬಹಳ ಗಾಢವಾಗಿದೆ. ಅದು ಅವಳ ಬಾಲ್ಯದಿಂದಲೇ ಬೇರೂರಿರುವ ಭಾವನೆ. ಅವಳು ತುಂಬಾ ಸಣ್ಣವಳಿದ್ದಾಗಲೇ ವಿದೇಶದಲ್ಲಿ ಬೋರ್ಡಿಂಗ್ ಸ್ಕೂಲಿಗೆ ಸೇರಿದ್ದಂತೆ. ಮೆಡಿಸಿನ್ ಕೋರ್ಸ್ ಮುಗಿದ ಮೇಲೇ ಇಲ್ಲಿಗೆ ವಾಪಾಸಾಗಿದ್ದಂತೆ ಅವಳು. ಹೆತ್ತವರು ಅನ್ನಿಸ್ಕೊಂಡ ಜನ ತನ್ನ ಬಾಲ್ಯನ ಕಿತ್ಕೊಂಡಿದ್ದಾರೆ. ಎಲ್ಲರೂ ಇದ್ದೂ ಯಾವುದೋ ದೇಶದಲ್ಲಿ ಗೊತ್ತಿಲ್ಲದ ಜನರ ನಡುವೆ ಅನಾಥೆ ತರ ಬೆಳೆಯೋಹಾಗೆ ಮಾಡಿದ್ದಾರೆ ಅನ್ನೋ ಭಾವನೆ ಅವಳಲ್ಲಿ ಹಾಸುಹೊಕ್ಕಾಗಿದೆ." ದೀರ್ಘವಾಗಿ ಹೇಳಿದ.

ವಿಷಾದದ ನಗುವೊಂದು ನವ್ಯಾಳ ತುಟಿಗಳಲ್ಲಿ ಕುಳಿತಿತು. "ನಾನು ಹುಟ್ಟಿದ್ದು ತುಂಬಾ ಬಡತನದಲ್ಲಿ ಕಿಶೋರ್. ಆಯಿ ಬಾಬಾ ದಿನ ಮಜೂರಿ ಮಾಡುತ್ತಿದ್ದದ್ದು. ಆ ದಿನ ಕೆಲಸ ಸಿಕ್ಕಿದರೆ ಒಪ್ಪತ್ತೂಟ ಇಲ್ಲವಾದರೇ ಅದೂ ಇಲ್ಲ. ನಮ್ಮದೊಂದು ಸಣ್ಣ ಗುಡಿಸಲಿತ್ತು. ನಾಲ್ಕಾರು ಪಾತ್ರೆಗಳು ಇಷ್ಟೆ ನಮ್ಮಾಸ್ತಿ. ಆದರೂ ಇಂದಿಗೂ ಆ ದಿನಗಳು ನನ್ನ ನೆನಪಲ್ಲಿ ಹಚ್ಚಹಸಿರು. ಆ ನೆನಪುಗಳೇ ಆಹ್ಲಾದಕಾರಿ. ಹಣವಿರದಿದ್ದರೂ ಪ್ರೀತಿಗೆ ಕೊರತೆಯಿರಲಿಲ್ಲ. ನಾನು ಶಾಲೆಯಲ್ಲಿ ಓದುತ್ತಿದ್ದಾಗ ಹಿಂದಿಯಲ್ಲೊಂದು ಪದ್ಯವಿತ್ತು. ನೀವೂ ಓದಿರಬಹುದು. ಸುಭದ್ರ ಕುಮಾರಿ ಚೌಹಾಣ್ ಅವರದ್ದು.

ಬಾರ್ ಬಾರ್ ಆತೀ ಹೈ ಮುಜ಼್ ಕೋ ಮಧುರ್ ಯಾದ್ ಬಚ್ಪನ್ ತೇರೀ

ಗಯಾ ಲೇ ಗಯಾ ತೂ ಜೀವನ್ ಕೀ ಸಬ್ ಸೇ ಮಸ್ತ್ ಖುಷಿ ಮೇರಿ

ಊಚ್- ನೀಚ್ ಕಾ ಜ್ಞಾನ್ ನಹೀ ಥಾ ಚುವಾಚೂತ್ ಕಿಸನೇ ಜಾನಿ?

ಬನೀ ಹುಯೀ ಥೀ ವಹಾಂ ಜೋಪಡಿ ಔರ್ ಚಿಥಡೋಂ ಮೆ ರಾನಿ 

ಹೀಗೆ ಮುಂದುವರಿಯುತ್ತೆ ಪದ್ಯ. ಅದನ್ನು ಮೊದಲು ಓದಿದಾಗಿನಿಂದ ಇಂದಿನವರೆಗೂ ಅದು ನನಗಂತಲೇ ಬರೆದಿದ್ದು ಅನ್ಸುತ್ತೆ. ನನ್ನ ಬಾಲ್ಯ ಹಾಗೇ ಇದ್ದಿದ್ದು ಕಿಶೋರ್. ಏನಿಲ್ಲದಿದ್ರೂ ನೆನಪಿಸಿಕೊಳ್ಳೋಕೆ ಅಂಥ ಒಂದು ಸುಂದರ ಬಾಲ್ಯ, ಮಾ ಬಾಬಾನ ಪ್ರೀತಿ ಎಲ್ಲಾ ಇದೆ. ಎಷ್ಟೇ ಬಡವರಾದರೂ ಪ್ರತೀ ತಾಯ್ತಂದೆ ತಮ್ಮ ಮಕ್ಕಳಿಗೊಂದು ಸುಂದರ ಬಾಲ್ಯದ ಅನುಭೂತಿ ನೀಡಲು ಹಗಲಿರುಳು ಶ್ರಮಿಸುತ್ತಾರೆ. ಅಂಥದೊಂದು ಬೆಚ್ಚನೆ ನೆನಪು ಪ್ರತೀ ಮಗುವಿನ ಹಕ್ಕು ಕೂಡಾ. 

ಆದರೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸಮನ್ವಿತಾಳಂಥ ಹುಡುಗಿಯ ಬದುಕಿನಲ್ಲಿ ಇಂಥಾ ನೋವಿದೆ ಅಂತ ನನಗೆ ತಿಳಿದಿರಲಿಲ್ಲ. ಅವಳ್ಯಾವತ್ತೂ ಅದನ್ನ ತೋರಿಸಿಕೊಳ್ಳಲಿಲ್ಲ ಅನ್ಸುತ್ತೆ.ಅವಳ ಭಾವನೆಗಳಲ್ಲಿ, ಆಸೆಯಲ್ಲಿ ಏನೂ ತಪ್ಪಿಲ್ಲ. ಅಂಥಾ ಹುಡುಗಿಗೆ ಅಪ್ಪ ಅಮ್ಮ ಅಂತ ಹೇಳ್ಕೊಳ್ಳೋದೇ ಕೂಡಾ ಹೆಮ್ಮೆಯ ವಿಚಾರ. ಎಷ್ಟು ಪುಣ್ಯ ಮಾಡಿದ್ರೋ ಅಂಥಾ ಮಗಳನ್ನು ಪಡೆಯೋಕೆ. ಅಂಥಾ ಮಗಳ ಮನಸ್ಸು ನೋಯ್ಸೋರು ಎಂಥವರಿರಬಹುದು? ಛೇ!" ಅವಳಿಗೆ ನಿಜಕ್ಕೂ ಅತೀವ ವೇದನೆಯೆನಿಸಿತ್ತು.

ಅರೆ ಘಳಿಗೆ ಸುಮ್ಮನಿದ್ದವನು ನೆನಪಿಸಿಕೊಂಡವನಂತೆ, "ಅದಕ್ಕೇ ಅವಳು ಆದಷ್ಟು ಮನೆಯಿಂದ ಹೊರಗಿರೋದು. ಎಲ್ಲರ ಜೊತೆನೂ ಮಾತಾಡಿದ್ರೂ ಅವಳಿಗೆ ಆತ್ಮೀಯರು ಅಂತ ಇರೋದು ನಾನು, ನೀನು, ನಮ್ಮನೆಯವರು, ಡಾ.ಮೀರಾ ಮಾತ್ರ.... ನಮ್ಮನೆಗೆ ಬರೋದಂದ್ರೆ ಅವಳಿಗೆ ತುಂಬಾ ಇಷ್ಟ. ನಮ್ಮ ಮಧ್ಯೆ ತಾನು ಕಳ್ಕೊಂಡಿರೋ ವಾತ್ಸಲ್ಯನ ಹುಡ್ಕೊಳ್ಳೋಕೆ ಪ್ರಯತ್ನಿಸ್ತಾಳೆ. ಅವಳ ತಾಯ್ತಂದೆಯರನ್ನು ಕರೀತಾಳೋ ಇಲ್ವೋ, ಆದ್ರೆ ನನ್ನ ಅಪ್ಪ ಅಮ್ಮನ್ನ ಅವಳೂ ಬಾಯ್ತುಂಬಾ ಅಪ್ಪಾ ಅಮ್ಮಾ ಅಂತಾನೇ ಕರ್ಯೋದು." ಹೇಳಿದ.

"ಮತ್ತೆ ನನ್ನಪ್ಪ- ಅಮ್ಮ ಅಂದ್ರೆ ಸುಮ್ನೆನಾ?" ನವ್ಯಾ ನಕ್ಕು ಕೇಳಿದಾಗ, "ಆದ್ರೂ ಸೊಸೆ ಬಂದ್ಮೇಲೆ ಮಗನ ವ್ಯಾಲ್ಯೂ ಸ್ವಲ್ಪ ಕಮ್ಮಿ ಆಗಿದೆ" ಅವಳ ಕೆನ್ನೆ ಹಿಂಡಿ ಹೇಳಿದ. 

ಇಬ್ಬರ ಮನಸ್ಸೂ ಸಮನ್ವಿತಾಳ ಮುಂದಿನ ಬದುಕಾದರೂ ಹಸನಾಗಿರಲೀ ಅಂತ ಹಾರೈಸಿದವು.

          ***** ಮುಂದುವರೆಯುತ್ತದೆ *****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ