ಮಂಗಳವಾರ, ಜೂನ್ 23, 2020

ಅನೂಹ್ಯ 17

ಸಮನ್ವಿತಾಳನ್ನು ಪಾರ್ಟಿಯಲ್ಲಿ ನೋಡಿದ ಕ್ಷಣವೇ ಅಭಿರಾಮ್ ಮನಕ್ಕೆ ಒಂದು ವಿಷಯ ಸ್ಪಷ್ಟವಾಗಿತ್ತು......

ನಾನಿವಳನ್ನು ಈ ಮೊದಲು ನೋಡಿದ್ದೇನೆ.........

ಮಾತನಾಡಿಸಿರುವೆನಾ? ಹೆಸರು ಗೊತ್ತಿತ್ತೇ? ಅದೊಂದೂ ತಿಳಿಯದು‌..... 

ಆದರೆ ಈ ಮೊದಲು ಈಕೆಯನ್ನು ನೋಡಿರುವುದಂತೂ ಸತ್ಯ........

ಆದರೆ ಎಲ್ಲಿ???

ಈ ಪ್ರಶ್ನೆಗೆ ಉತ್ತರ ಸಿಗದೆ ಹೆಣಗುತ್ತಿದ್ದ.

ಎಷ್ಟೇ ನೆನಪಿಸಿಕೊಂಡರೂ ಅವಳ ಮುಖಚರ್ಯೆಯ ಹೊರತು ಬೇರೇನೂ ನೆನಪಾಗದಾಯಿತು. ಆದರೆ ಹೀಗೇ ಎಲ್ಲೋ ನೋಡಿದ ಮುಖವೆನಿಸಲಿಲ್ಲ......

ಅವನು ಪ್ರಭಾವೀ ಉದ್ಯಮಿ. ದಿನಂಪ್ರತಿ ಹಲವಾರು ಜನರನ್ನು ಭೇಟಿಯಾಗುತ್ತಿರುತ್ತಾನೆ. ಅವರೆಲ್ಲರೂ ನೆನಪಿನಲ್ಲುಳಿಯುವುದಿಲ್ಲ.

ಆದರೆ ಅವಳ ಮುಖ ಕಂಡಕ್ಷಣವೇ ಅವನ ಮೆದುಳು, ಮನಸ್ಸು ಅವಳನ್ನು ಗುರುತಿಸಿತ್ತು. ಆದರೆ ಯಾವ ಸನ್ನಿವೇಶದಲ್ಲಿ ಭೇಟಿಯಾದೆ ಎಂಬುದು ಮಾತ್ರವೇ ನೆನಪಾಗಲಿಲ್ಲ….

ತಾನು ಸಾಮಾನ್ಯವಾಗಿ ಭೇಟಿ ನೀಡುವ ಆಫೀಸ್, ಫ್ಯಾಕ್ಟರಿ,ಕಲಾ ಗ್ಯಾಲರಿ, ಸ್ಪೋರ್ಟ್ಸ್ ಕ್ಲಬ್, ಹೋಟೆಲ್...... ಎಲ್ಲಾ ನೆನಪಿಸಿದರು ಆ ಮುಖದ ಹೊರತು ಬೇರೇನೂ ನೆನಪಾಗುತ್ತಿಲ್ಲ.

ಹೀಗೇ ಎಲ್ಲೋ ನೋಡಿರಬಹುದು ಎಂದು ಕೊಡವಿಕೊಳ್ಳಲು ನೋಡಿದ. ಆದರೆ ಅವನ ಮನವೇಕೋ ಅವಳ ಕುರಿತಾಗಿ ಸಣ್ಣ ಮಗುವಿನಂತೆ ರಚ್ಚೆ ಹಿಡಿದಂತಿತ್ತು......

'ಎಷ್ಟೋ ಜನರನ್ನು ಭೇಟಿಯಾಗಿಯೂ ಮರೆಯುವ ಕಾಲದಲ್ಲಿ ಈ ಪರಿಯಾಗಿ ನಿನ್ನ ಮನದಾಳದಲ್ಲಿ ಅಚ್ಚಳಿಯದೆ ಉಳಿದ ಮುಖವೆಂದರೆ ಸಿಕ್ಕ ಸನ್ನಿವೇಶವೂ ಬಹಳ ಗಾಢವಾಗಿಯೇ ಇರಬೇಕಲ್ಲವೇ?' ಎಂದು ಮೆದುಳು ಪ್ರಶ್ನಿಸತೊಡಗಿತ್ತು…..

ಯೋಚಿಸಿ ತಲೆಕೆಡಿಸಿಕೊಂಡನೇ ಹೊರತು ಏನೂ ನೆನಪಾಗಲಿಲ್ಲ. ಅದೇ ಯೋಚನೆಯಲ್ಲಿಯೇ ಯಾವಾಗ ನಿದ್ರೆಯಾವರಿಸಿತೋ ತಿಳಿಯಲಿಲ್ಲ...... 

                  *******************

ಇತ್ತ ಸಮನ್ವಿತಾಳೂ ಯೋಚನೆಗೆ ಬಿದ್ದಿದ್ದಳು.....

ಸಮನ್ವಿತಾಳಿಗೆ ಶರ್ಮಾ ಪರಿವಾರದವರ ಭೇಟಿ ಬಹಳ ಸಂತೋಷ ತಂದಿದ್ದು ಸುಳ್ಳಲ್ಲ. ಆದರೆ ಈ ಭೇಟಿ ಸಂತಸದೊಂದಿಗೆ ಆದಿ ಅಂತ್ಯವಿಲ್ಲದ ಹಲವಾರು ಚಿಂತನೆಗಳನ್ನು ಅವಳಲ್ಲಿ ಬಿತ್ತಿತ್ತು.

ಶರ್ಮಾ ಕುಟುಂಬ ಸಿರಿವಂತಿಕೆಯಲ್ಲಿ ತಮಗಿಂತ ಒಂದು ಪಟ್ಟು ಮೇಲೆಯೇ ಇರುವುದು. ಆದರೂ ಅವರ ಕುಟುಂಬದಲ್ಲಿ ಸದಸ್ಯರ ನಡುವೆ ಒಂದು ಬೆಸುಗೆಯಿದೆ, ಉತ್ತಮ ಬಾಂಧವ್ಯವಿದೆ.ಸಚ್ಚಿದಾನಂದ ಹಾಗೂ ಮೃದುಲಾ ಅವರಿಗೆ ಮಕ್ಕಳ ಜೊತೆ ಅದೆಂಥಾ ಆತ್ಮೀಯತೆ...... ಅವರು ಮಕ್ಕಳನ್ನು ದೂರವಿಟ್ಟಿಲ್ಲ ಬದಲಾಗಿ ಅವರನ್ನು ಗೆಳೆಯರಂತೆ ನೋಡುತ್ತಾರೆ. ಕಾಳಜಿ ತೋರುತ್ತಾರೆ. ಆದರೂ ಮಕ್ಕಳು ಅವರ ಮೇಲೆ ಅವಲಂಬಿತರಾಗಿಲ್ಲ. ಅವರಿಗೆ ಸ್ವಾತಂತ್ರ್ಯವಿದೆ. ಅದರ ಜೊತೆಗೆ ಹೆತ್ತವರ ಕಾಳಜಿ, ಮಮತೆಯೂ ಇದೆ. 

ಆದರೆ ತನ್ನ ಬದುಕಿನಲ್ಲಿ? ತನ್ನ ಹೆತ್ತವರು ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಗೆ ಕೊಡುವ ಪರಿಭಾಷೆಯೇ ಬೇರೆ. ಸ್ವಾತಂತ್ರ್ಯ ನೀಡುವುದು, ಹೆತ್ತವರ ಮೇಲೆ ಅವಲಂಬಿತರಾಗದಂತೆ ಬೆಳೆಸುವುದೆಂದರೆ ಹೇಗೆ?  ಭೂಮಿಗೆ ಬಿದ್ದ ಮರುಕ್ಷಣವೇ ಕೂಸನ್ನು ಆಯಾಗಳ ಕೈಗೆ ಕೊಡುವುದೇ? ಬುದ್ಧಿ ತಿಳಿಯದ ವಯಸ್ಸಿನಲ್ಲೇ ವ್ಯಾಸಾಂಗದ ನೆಪವೊಡ್ಡಿ ಹೇರಳವಾದ ಹಣದೊಂದಿಗೆ ಪರದೇಶಕ್ಕೆ ಕಳಿಸುವುದೇ? ಸ್ವಾತಂತ್ರ್ಯ, ಸ್ವಾವಲಂಬನೆಯ ನೆಪವೊಡ್ಡಿ ವರ್ಷಾಂತರ ಭೇಟಿಯಾಗದಿರುವುದೇ? ಯಾರಿಗೆ ಬೇಕಾಗಿದೆ ಇಂಥಾ ಸ್ವಾತಂತ್ರ್ಯ? 

ನಮಗೂ, ಶರ್ಮಾ ಪರಿವಾರದವರಿಗೂ ಎಷ್ಟೊಂದು ಅಂತರ........ ನಾವು ಬರೀ ಹಣದಲ್ಲಷ್ಟೇ ಸಿರಿವಂತರು. ಅವರು ಹಣ, ಗುಣ, ಸಂಬಂಧಗಳು ಎಲ್ಲದರಲ್ಲೂ ಸಿರಿವಂತರೇ......

ಆದರೆ ಜಗತ್ತಿಗೆ ಕಾಣುವುದು, ಬೇಕಾಗಿರುವುದು ಹಣದ ಸಿರಿವಂತಿಕೆಯಷ್ಟೇ........

ಉಳಿದೆಲ್ಲವನ್ನೂ ಹಣ ಮುಚ್ಚಿಹಾಕುತ್ತದೆ. ಹಣಕ್ಕಿರುವ ಬೆಲೆ ಬದುಕಿಗಿಲ್ಲ ಇಲ್ಲಿ.........

ಏನೇ ಆದರೂ ಇಂದಿನ ಸಂತೋಷಕೂಟ ಎಂದಿಗೂ ತನ್ನ ನೆನಪಿನಲ್ಲಿ ಉಳಿಯುತ್ತದೆ ಎಂದುಕೊಂಡಳು. ಬೆಳಗ್ಗೆ ಬೇಗ ಎದ್ದು ಕ್ವಾಟ್ರಸ್ ಗೆ ಹೋಗುತ್ತಿರುವ ವಿಷಯ ಮಾತನಾಡಬೇಕು ಎಂದುಕೊಂಡು, ಸಂಜೆಯಿಂದ ಯಾವುದೋ ಮೂಲೆಯಲ್ಲಿ ಬಿದ್ದಿದ್ದ ಫೋನನ್ನು ಎತ್ತಿಕೊಂಡಳು. ಸಂದೇಶವೊಂದು ಕಾದು ಕುಳಿತಿತ್ತು. ಓದಿದವಳ ತುಟಿಯಂಚಿನಲ್ಲಿ ಮುಗುಳ್ನಗೆ ಮೂಡಿತು.... ಆಕೃತಿಯ ಸಂದೇಶವದು.

ಪಾರ್ಟಿ ಬಹಳ ಸಂತೋಷ ತಂದಿತು, ನಿಮ್ಮನ್ನು ಕಂಡದ್ದು ಅದಕ್ಕಿಂತ ಹೆಚ್ಚು ಖುಷಿಕೊಟ್ಟಿತೆಂಬುದರ ಜೊತೆಗೆ ತಮ್ಮ ಮನೆಗೆ ಬರಲೇಬೇಕೆಂಬ ಒತ್ತಾಯಪೂರ್ವಕ ಆಹ್ವಾನವಿತ್ತು ಎಲ್ಲರ ಕಡೆಯಿಂದ.

ಆಕೃತಿ ನೆನಪಾದಳು..... ಮನಸ್ಸು ಮತ್ತೆ ಹುಚ್ಚು ಕುದುರೆಯಂತೆ ಓಡತೊಡಗಿತು....ತನಗೂ ಒಡಹುಟ್ಟಿದವರೆಂದು ಯಾರಾದರೂ ಇರಬೇಕಿತ್ತು. ಆಗ ತನ್ನ ಸುಖ, ದುಃಖ ವನ್ನು ಹಂಚಿಕೊಳ್ಳಲು ಒಬ್ಬರು ಇದ್ದಂತಾಗುತ್ತಿತ್ತು. ಅವರೊಂದಿಗೆ ಹರಟೆ ಹೊಡೆಯಬಹುದಿತ್ತು, ಕಾಲೆಳೆದು ಹಾಸ್ಯ ಮಾಡಬಹುದಿತ್ತು, ನನ್ನ ಭಾವನೆಗಳನ್ನು ಹಂಚಿಕೊಳ್ಳಬಹುದಿತ್ತು.

ತನ್ನ ಯೋಚನೆಗೆ ತಾನೇ ನಕ್ಕಳು.....

ಏನೇ ಆದರೂ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್ ಏನೂ ಬದಲಾಗುತ್ತಿರಲಿಲ್ಲ. ಈಗ ತಾನೊಬ್ಬಳೇ ಅಳುತ್ತಿರುವೆ. ಒಡಹುಟ್ಟಿದವರು ಇದ್ದರೆ ಇಬ್ಬರೂ ಸೇರಿ ದುಃಖಿಸಬಹುದಿತ್ತಷ್ಟೇ. ತನ್ನೊಂದಿಗೆ ಇನ್ನೊಂದು ಬಲಿ ಕಾ ಬಕರಾ ತಯಾರಾಗುತ್ತಿತ್ತು......

ಆಕೃತಿಗೊಂದು ಧನ್ಯವಾದದ ಜೊತೆ ಗುಡ್ ನೈಟ್ ಹೇಳಿ ತಾನೂ ಮಲಗಿದಳು. 

ಆದರೆ ತನ್ನನ್ನು ಈ ಮೊದಲು ಎಲ್ಲಿ ನೋಡಿರುವೆ ಎಂಬ ಯೋಚನೆಯಲ್ಲಿ ತಲೆಕೆಡಿಸಿಕೊಂಡು ಅಭಿರಾಮ್ ನಿದ್ರೆ ಬಿಟ್ಟು ನೆನಪಿಸಿಕೊಳ್ಳುತ್ತಿರುವನೆಂಬ ಸಣ್ಣ ಕಲ್ಪನೆ ಕೂಡಾ ಅವಳಿಗಿಲ್ಲ. ಕಾರಣ.... ಅವಳು ಅವನನ್ನು ನೋಡಿದ್ದು ಇದೇ ಮೊದಲು. ಈ ಹಿಂದೆ ಅವಳೆಂದೂ ಅಭಿರಾಮ್ ಶರ್ಮಾನನ್ನು ಭೇಟಿಯಾಗಿರಲಿಲ್ಲ. ಹಾಗಂತ ಅವನ ಬಗ್ಗೆ ತಿಳಿದಿಲ್ಲವೆಂದಲ್ಲ. ಅವಳು ಅವನ ಬಗ್ಗೆ ಕೇಳಿದ್ದಾಳೆ…! ಸಚ್ಚಿದಾನಂದ ಶರ್ಮಾರ ಬಗ್ಗೆಯೂ......

ಎಲ್ಲಿ, ಹೇಗೆ ಎಂದಿರಾ?

ಧನ್ವಂತರಿಯಲ್ಲಿ...‌...

ಮೀರಾ ಅವರ ಮಾತುಗಳಲ್ಲಿ........

ಶರ್ಮಾ ಎಂಪೈರ್ ನ ಸಚ್ಚಿದಾನಂದ ಶರ್ಮಾ ಹಾಗೂ ಅವರ ಮಗ ಅಭಿರಾಮ್ ತಮ್ಮ ಆಸ್ಪತ್ರೆಗೆ ಹಣ, ಶಸ್ತ್ರಚಿಕಿತ್ಸಾ ಸಲಕರಣೆಗಳು, ಲ್ಯಾಬ್ ಹೀಗೆ ಬಹಳಷ್ಟು ಕೊಡುಗೆ ನೀಡಿರುವುದಲ್ಲದೇ, ಅತ್ಯಾಚಾರ ಹಾಗೂ ಆಸಿಡ್ ದಾಳಿ ಸಂತ್ರಸ್ತರಿಗೆ ಎಲ್ಲಾ ಖರ್ಚುವೆಚ್ಚಗಳನ್ನು ತಾವೇ ಭರಿಸಿ ಚಿಕಿತ್ಸೆ ಕೊಡಿಸುತ್ತಾರೆಂದು, ಆದರೆ ಎಂದಿಗೂ ಅದನ್ನು ಹೊರಜಗತ್ತಿಗೆ ತೋರಿಸಿಕೊಂಡಿಲ್ಲವೆಂದೂ ಮೀರಾ ಹೇಳಿದ್ದ ನೆನಪಿತ್ತು. ಒಮ್ಮೆ ಭೇಟಿಯಾಗಬೇಕೆಂಬ ಆಸೆ ಇತ್ತವಳಿಗೆ. ಪಾರ್ಟಿ ನೆಪದಲ್ಲಿ ಆ ಆಸೆ ಪೂರ್ತಿಯಾಗಿತ್ತು.....

ಆದರೆ ಶರ್ಮಾ ಪರಿವಾರದ ಯಾರೊಂದಿಗೂ ತಾನು ಧನ್ವಂತರಿಯಲ್ಲಿರುವುದಾಗಿ ಹೇಳಿರಲಿಲ್ಲ ಅವಳು. ವೈಯಕ್ತಿಕವಾದ ಯಾವ ವಿಷಯವನ್ನೂ ಮಾತನಾಡಿರಲಿಲ್ಲ ಅವರು. 

               ************************

ಸತ್ಯನಾರಾಯಣ ಹಾಗೂ ಮಂಗಳಾ ಅವರು ತೀರ್ಥಯಾತ್ರೆಗೆ ಹೊರಟ್ಟಿದ್ದರು. ಅವರ ಲಗೇಜು ಪ್ಯಾಕ್ ಮಾಡುತ್ತಿದ್ದವಳಿಗೆ ಇಪ್ಪತ್ತು ದಿನ ಹೇಗೆ ಕಳೆಯುವುದೆಂಬ ಯೋಚನೆ ಹತ್ತಿ ಬೇಸರವಾಗಿತ್ತು. 

ಅವಳು ಮದುವೆಯಾಗಿ ಬಂದಲ್ಲಿನಿಂದ ಮನೆಯಲ್ಲಿ ಬೇರ್ಯಾರು ಇಲ್ಲದಿದ್ದರೂ ಮಂಗಳಮ್ಮ ಇದ್ದೇ ಇರುತ್ತಿದ್ದರು. ಹತ್ತಿರ ಹತ್ತಿರ ಒಂದು ತಿಂಗಳ ಮಟ್ಟಿಗೆ ಅವರು ಇರುವುದಿಲ್ಲವೆಂದು, ಎಲ್ಲವನ್ನೂ ತಾನೇ ನಿಭಾಯಿಸಬೇಕೆಂದು ಯೋಚಿಸಿಯೇ ದಿಗಿಲಾಗಿತ್ತವಳಿಗೆ.

ಮನೆ ನಿರ್ವಹಣೆ ಅವಳಿಗೆ ಕಷ್ಟವಲ್ಲ. ಆದರೆ ಅತ್ತೆ ಮಾವನ ಇರುವಿಕೆ ಅವಳಿಗೊಂದು ಭದ್ರತಾ ವಲಯವನ್ನು ಸೃಷ್ಟಿಸುತ್ತಿತ್ತು. ತನ್ನ ಅತೀತ ಅವರಿಗೆ ತಿಳಿಯಬಹುದೆಂಬ ಭಯವಿದ್ದರೂ ಅವರಿದ್ದರೆ ಅವಳಿಗೇನೋ ಧೈರ್ಯ. ಎಷ್ಟೆಂದರೂ ನರಕದ ಹಿಂಸೆಯನ್ನು ಉಂಡ ಜೀವವಲ್ಲವೇ. ಅವಳ ಮನ ಯಾವಾಗಲೂ ಅವರ ಅಕ್ಕರೆಯ ಆಸರೆಯನ್ನು ಬಯಸುತ್ತಿತ್ತು. 

ಮಂಗಳಮ್ಮನಿಗೂ ಅವಳನ್ನು ಬಿಟ್ಟು ಹೊರಡಲು ಬೇಸರವೇ. ಆದರೆ ಮೂವರೂ ಒತ್ತಾಯಮಾಡಿ ಹೊರಡಿಸಿದ್ದರು. ಜೊತೆಗೆ ಒಂದು ಬಾರಿ ಹೋಗಿಬರುವ ಎಂದು ಸತ್ಯನಾರಾಯಣ ಅವರೂ ಹೇಳಿದ್ದರಿಂದ ಹೊರಟಿದ್ದರು.

ಬಾಡಿದ ಮುಖ ಹೊತ್ತು, ಬಟ್ಟೆಗಳನ್ನು ಪ್ಯಾಕ್ ಮಾಡುತ್ತಿದ್ದ ಸೊಸೆಯನ್ನು ಕಂಡು, "ನವ್ಯಾ ಬಾ ಇಲ್ಲಿ" ಕರೆದರು ಮಂಗಳಾ.

"ಏನಾಯ್ತು ಅಮ್ಮಾ?" ಕೇಳುತ್ತಲೇ ಬಂದವಳ ಕೈ ಹಿಡಿದು, "ಬಾ ಕುತ್ಕೋ ಇಲ್ಲಿ" ಎಂದು ತಮ್ಮ ಪಕ್ಕ ಮಂಚದಲ್ಲಿ ಕೂಡಿಸಿಕೊಂಡರು.

ಪಕ್ಕ ಕುಳಿತು ಸುಮ್ಮನೆ ಅವರ ಮಡಿಲಲ್ಲಿ ತಲೆಯಿಟ್ಟು ಕಣ್ಮುಚ್ಚಿಕೊಂಡವಳ ತಲೆಗೂದಲಲ್ಲಿ ಕೈಯಾಡಿಸುತ್ತಾ, "ಇಪ್ಪತ್ತು ದಿನ ಹೇಗೆ ಕಳೆಯೋದು ಅಂತ ತಾನೆ ನಿನ್ನ ಯೋಚನೆ. ಏನೂ ಯೋಚನೆ ಮಾಡಬೇಡ. ಕಿಶೋರ, ಕಾರ್ತಿ ಇಬ್ಬರಿಗೂ ಹೇಳ್ತೀನಿ ಆದಷ್ಟು ಮನೆಯಲ್ಲೇ ಇರೋಕೆ. ಇಪ್ಪತ್ತುದಿನ ಬೇಗ ಕಳ್ದು ಬಿಡುತ್ತೆ ಮಗು." 

"ಹಾಗೇನಿಲ್ಲ ಅಮ್ಮ, ಹಗಲೆಲ್ಲಾ ಒಬ್ಬಳೇ ಇರ್ಬೇಕಲ್ಲ. ಬೋರಾಗುತ್ತೆ ಅಂತ ಅಷ್ಟೇ.‌ ನೀವು, ಅಪ್ಪಾಜಿ ಆರಾಮಾಗಿ ಯೋಚನೆ ಮಾಡದೇ ಹೋಗಿಬನ್ನಿ" ಎಂದು ಎದ್ದವಳು ತನ್ನ ಕೆಲಸ ಮುಂದುವರೆಸಿದ್ದಳು.

ಮರುದಿನ ನಸುಕಿನ ಟ್ರೈನಿಗೆ ಹೊರಡಬೇಕಿತ್ತು. ಆ ರಾತ್ರಿ ಊಟದ ನಂತರ ಕಿಶೋರ್, ಕಾರ್ತಿಕ್ ಇಬ್ಬರನ್ನೂ ಕೂರಿಸಿಕೊಂಡು, 

"ನೋಡ್ರೋ ಮಕ್ಕಳಾ, ಇಪ್ಪತ್ತು ದಿನ ಮನೆಕಡೆ ಗಮನ ಇರಲಿ. ಪಾಪ ಅವಳೊಬ್ಬಳಿಗೆ ಎಲ್ಲಾ ಮಾಡ್ಕೊಳ್ಳೋಕೆ ಕಷ್ಟ ಆಗಬಹುದು, ಇಬ್ರೂ ಅವಳೊಟ್ಟಿಗೆ ಕೈ ಜೋಡಿಸಿ" ಎಂದವರು, "ಕಿಶೋರ, ಮೂರ್ಹೊತ್ತೂ ಆಫೀಸ್ ಅಂತ ಅಲ್ಲೇ ಇರ್ಬೇಡ. ಲೇಟಾಗಿ ಹೋಗಿ ಬೇಗ ಮನೆಗೆ ಬಾ ಒಂದಿಪ್ಪತ್ತು ದಿನ ಅಷ್ಟೇ" ಕಿಶೋರನಿಗೆ ಹೇಳಿದಾಗ ಮಧ್ಯೆ ಬಾಯಿ ಹಾಕಿದ ಕಾರ್ತಿಕ್,

"ಮಂಗೂ ಡಾರ್ಲಿಂಗ್, ಆಫೀಸ್ ನಮ್ಮಾವಂದು ನೋಡು ನಾವ್ ಹೇಳಿದ್ದೆಲ್ಲಾ ಕೇಳ್ತಾರೆ. ನೀನು ಹೂಂ ಅನ್ನು ಸಾಕು, ಅಣ್ಣನ ಆಫೀಸಿನೋರೆ ಮನೆಗೆ ಬಂದು ಅಡಿಗೆ ಮಾಡಿ, ತೊಳ್ದು, ಬಳ್ದು, ಗುಡಿಸಿ, ಸಾರಿಸಿ ರಂಗೋಲಿ ಹಾಕಿ ಹೋಗ್ತಾರೆ" ಎಂದ.

"ಅಮ್ಮಾ ನಾನೆಲ್ಲಾ ನೋಡ್ಕೋತೀನಿ. ನೀನೇನು ಚಿಂತೆ ಮಾಡ್ಬೇಡ ಆರಾಮಾಗಿ ಹೋಗಿ ಬನ್ನಿ" ಎಂದ ಕಿಶೋರ್ ಮಾತಿಗೆ ನವ್ಯಾಳೂ, "ಅಮ್ಮಾ, ನನಗೆ ಇಲ್ಲೇನೂ ತೊಂದ್ರೆ ಇಲ್ಲಮ್ಮ" ಎಂದಳು.

"ಮಂಗೂ, ಟೇಕ್ ಇಟ್ ಈಸಿ಼, ಜಸ್ಟ್ ಚಿಲ್, ವಿ ವಿಲ್ ಮ್ಯಾನೇಜ್" ಎಂದವನಿಗೆ "ನನ್ಹತ್ರ ನಿನ್ ಇಂಗ್ಲೀಷು ಮಾತಾಡೋಕೆ ಬರಬೇಡ. ಎಲ್ಲಕ್ಕಿಂತ ದೊಡ್ಡ ತಲೆಬಿಸಿ ನಿಂದೇ ನೋಡು. ಕಾಲೇಜು ಮುಗಿಸಿ ಸೀದಾ ಮನೆಗೆ ಬಾ. ಆ ನಿನ್ ಕಪಿಸೇನೆ ಜೊತೆ ಬೀದಿ ಸುತ್ತೋದು ಮಾಡಿದ್ಯೋ ಕಾಲು ಮುರ್ದು ಕೈಗೆ ಕೊಡ್ತೀನಿ ನೋಡ್ತಿರು" ಗದರಿದರು.

"ಉಫ್, ಹೋಗ್ಲಿ ಬಿಡು ಮಂಗೂ, ನಾನ್ಯಾವತ್ತೂ ಹೇಳ್ತಿರೋಲ್ವಾ. ನಂಗೆ ನಿಂಗೆ ತುಂಬಾ ಜನರೇಷನ್ ಗ್ಯಾಪ್ ಇದೆ ಅಂತ. ನಾವು ಮಿಷನ್ ಮಾರ್ಸ್ ಅಂತ ಬೇರೆ ಗ್ರಹಕ್ಕೆ ಹೋಗೋಕೆ ಹೊರಟಿದ್ರೆ ನೀನು ಇಲ್ಲೇ ಪಕ್ಕದ ರಾಜ್ಯಕ್ಕೆ ಹೋಗೋಕೆ ಇಷ್ಟು ಬಿಲ್ಡಪ್ ಬೇಕಾ?" ಅಣಕಿಸಿದವನ ತಲೆಗೊಂದು ಮೊಟಕಿ "ಹೇಳಿದ್ದಷ್ಟು ಮಾಡು" ಎಂದರು.

"ಅಯ್ಯೋ ‌ಮಂಗಳಮ್ಮ, ನಾನು ನೀನು ಹೋಗೋದ್ನೇ ಕಾಯ್ತಿದ್ದೀನಿ. ನೀನು ಒಂದು ಸರಿ ಮನೆಯಿಂದ ಹೊರಗೆ ಕಾಲಿಡು ಸಾಕು. ಆಮೇಲೆ ಇಪ್ಪತ್ತು ದಿನ ಟ್ವೆಂಟಿ ಟ್ವೆಂಟಿ ಮ್ಯಾಚ್ ತರ ಕಳ್ದೋಗುತ್ತೆ. ನೀನು ಯಾತ್ರೆ ಮುಗ್ಸಿ ವಾಪಾಸ್ ಬರೋವಾಗ ಅತ್ತಿಗೆನ ಹೆಂಗೆ ರೆಡಿ ಮಾಡಿರ್ತೀನಿ ಅಂದ್ರೆ, 'ಅಮ್ಮಾ ನೀವು ಇನ್ನೊಂದು ನಾಲ್ಕು ತಿಂಗಳು ಯಾತ್ರೆ ಮಾಡ್ಕೋಬನ್ನಿ' ಅನ್ಬೇಕು. ನೋಡ್ತಿರು. ಈಗ ಮೊದ್ಲು ಹೋಗಿ ಮಲ್ಕೋ. ಬೆಳಿಗ್ಗೆ ಬೇಗ ಹೊರಡಬೇಕು" ಎಂದಾಗ ಎಲ್ಲರೂ ಅವನ ಮಾತಿಗೆ ನಕ್ಕು ಮಲಗಲು ಹೊರಟರು.

ಹಾಗೆ ಮರುದಿನ ಬೆಳಿಗ್ಗೆ ಹೊರಟವರನ್ನು ಮೂವರು ಟ್ರೈನ್ ಹತ್ತಿಸಿ ಬಂದಿದ್ದರು. ಹೊರಡುವವರೆಗೂ ಮಕ್ಕಳಿಬ್ಬರಿಗೂ ತನ್ನನ್ನು ಜಾಗೃತೆಯಾಗಿ ನೋಡಿಕೊಳ್ಳಿ ಎನ್ನುತ್ತಿದ್ದ ಅತ್ತೆಯನ್ನು ಕಂಡು ನವ್ಯಾಳ ಮನತುಂಬಿತ್ತು. ಕಿಶೋರ್ ಸಂಜೆ ಬೇಗ ಬರುತ್ತೇನೆಂದು ಆಫೀಸಿಗೆ ಹೊರಟಿದ್ದ. ಇನ್ನು ಮನೆಯಲ್ಲೇ ಇರುತ್ತೇನೆ ಎನ್ನುತ್ತಿದ್ದ ಕಾರ್ತಿಕ್ ನನ್ನು ಅವಳೇ ಒತ್ತಾಯಿಸಿ ಕಾಲೇಜಿಗೆ ಕಳುಹಿಸಿ ಬೇಸರ ಮೆಟ್ಟಿ ತನ್ನ ಕೆಲಸದಲ್ಲಿ ತೊಡಗಿದ್ದಳು ನವ್ಯಾ.

    **********ಮುಂದುವರೆಯುತ್ತದೆ************



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ