ಸೋಮವಾರ, ಜೂನ್ 22, 2020

ಅನೂಹ್ಯ 12

ಈ ನಡುವೆಯೇ ಯಾರದೋ ಹೃದಯದಲ್ಲಿ ಪ್ರೀತಿಯ ಮೊಳಕೆಯೊಂದು ಕುಡಿಯೊಡೆದಿತ್ತೆಂದು ಆ ಕ್ಷಣಕ್ಕೆ ನನಗೆ ತಿಳಿಯಲಿಲ್ಲ. ಆದರೆ ಬಹುಬೇಗ ಆ ಪ್ರೀತಿಯ ಘಮಲು ನನ್ನ ಕಣ್ಣ್ಮುಂದೆಯೇ ವ್ಯಾಪಿಸತೊಡಗಿತು. ಹಾಗೂ ಶೀಘ್ರವಾಗಿ ನನ್ನ ಕಣ್ಮುಂದೆಯೇ ತೆರೆದುಕೊಂಡಿತು ಕೂಡಾ.

ಕಿಶೋರ್ ನನಗೆ ಅಪರಿಚಿತನೇನಲ್ಲ. ನವ್ಯಾಳನ್ನು ಕಾಣುವ ಮುಂಚಿನಿಂದಲೂ ಅವನು ನನಗೆ ಸ್ನೇಹಿತ. 

ನನಗೆ ಸ್ನೇಹಿತರು ಬಹಳ ಕಡಿಮೆ. ಹೇಳಬೇಕೆಂದರೆ ಈವರೆಗೆ ನನಗಿರುವುದು ಇವರಿಬ್ಬರೇ ಸ್ನೇಹಿತರು. ನಾನು ಮಿತಭಾಷಿ. ಕಾಡು ಹರಟೆ ನನ್ನಿಂದಾಗದು.

ಕಿಶೋರ್ ಮತ್ತು ನನ್ನ ಸ್ನೇಹ‌ಕ್ಕೆ ಬುನಾದಿ ಹಾಕಿದ್ದು ಆಶ್ರಯ ಸಂಸ್ಥೆ. ಅಲ್ಲೇ ಅವನ ಪರಿಚಯವಾದದ್ದು. ಅವನ ಓರಗೆಯವರಂತೆ ಮೂರು ಹೊತ್ತು ಹುಡುಗಿಯರು, ಮೊಬೈಲ್, ಪಬ್, ಪಾರ್ಟಿ ಎಂದು ತಿರುಗುವ ಪೈಕಿಯಲ್ಲ. ಅವನಿಗೆ ಒಂದು ನಿರ್ದಿಷ್ಟ ಗುರಿ ಇತ್ತು. ಬದುಕಿನ ಬಗೆಗಿನ ಅವನ ಆಸ್ಥೆ, ಪರರ ಬಗೆಗಿನ ಆದರ, ಸಮಾಜದ ಬಗ್ಗೆ ಅವನಿಗಿದ್ದ ಕಾಳಜಿ ನನ್ನನ್ನು ಅತಿಯಾಗಿ ಪ್ರಭಾವಿಸಿದ್ದು. ನಮ್ಮಿಬ್ಬರ ಅಭಿರುಚಿಗಳು ಒಂದೇ ತೆರನಾದವು. ಹಾಗಾಗಿಯೇ ಬಹುಶಃ ನಮ್ಮ ಸ್ನೇಹ ಗಟ್ಟಿಯಾಯಿತೇನೋ.

ಅವನ ಮನೆಗೂ ವಾರದಲ್ಲೊಮ್ಮೆ ನನ್ನ ಭೇಟಿ ಖಾಯಂ. ಅಲ್ಲಿ ನನಗೆ ಅತೀ ಪ್ರಿಯವಾದರು ಅವನಮ್ಮ ಮಂಗಳಾ. ಮಿಸ್ಸೆಸ್ ಮಾಲಿನಿ ರಾವ್ ಅವರಿಗೂ ಮಂಗಳಮ್ಮನಿಗೂ ಎಷ್ಟು ವ್ಯತ್ಯಾಸ. ಮಾಲಿನಿಯವರನ್ನು ನಾನೆಂದೂ "ಅಮ್ಮ" ಎಂದು ಸಂಬೋಧಿಸಲೇ ಇಲ್ಲ. ಆಕೆಯೂ ಆ ಬಗ್ಗೆ ಎಂದೂ ಯೋಚಿಸಲಿಲ್ಲ. ಆದರೆ ಮಂಗಳಾರನ್ನು ನೋಡಿದ ಕೂಡಲೆ ಒಂದಿನಿತೂ ಪ್ರಯಾಸವಿಲ್ಲದೇ ಅಮ್ಮಾ ಎಂದಿದ್ದೆ. ಅದೇ ನನ್ನ ಮನದಲ್ಲಿದ್ದ ಅಮ್ಮನ ಚಿತ್ರ. ಅಂದಿನಿಂದ ಆಕೆ ನನ್ನಮ್ಮನೇ ಆದರು. ಸತ್ಯನಾರಾಯಣ ಅವರಂತು ತಂದೆಗಿಂತ ಸ್ನೇಹಿತರಂತೆ ಕಾರ್ತಿ ಹಾಗೂ ಕಿಶೋರನಿಗೆ. ಅಷ್ಟೊಂದು ನಿಕಟವಾಗಿದ್ದರು ಅವರು ಮಕ್ಕಳೊಂದಿಗೆ. ಇನ್ನು ಕಾರ್ತಿಕ್ ಚೂಟಿ.ಯಾವಾಗಲೂ ಹಾಸ್ಯ ಚಟಾಕಿ. ಹಾಗಾಗಿ ಅವನ ಮನೆಯವರೆಲ್ಲಾ ನನಗೆ ಆತ್ಮೀಯರೇ….‌.

ಅದೇನೇ ಇದ್ದರೂ ಅವನು ಧನ್ವಂತರಿಗೆ ಎಂದೂ ಬಂದವನೇ ಅಲ್ಲ. ನಮ್ಮಿಬ್ಬರ ಭೇಟಿ ಒಂದೋ ಆಶ್ರಯದಲ್ಲಿ ಇಲ್ಲಾ ಅವನ ಮನೆಯಲ್ಲಿ. 

ಆದರೆ ಅದೇನು ವಿಧಿ ಲಿಖಿತವೋ ಇಲ್ಲಾ ಆಕಸ್ಮಿಕವೋ ಸಣ್ಣದಾಗಿ ಶುರುವಾದ ಜ್ವರ ಮಂಗಳಮ್ಮನವರನ್ನು ಬಳಲಿಸಿ ಬಿಟ್ಟಿತ್ತು. ಎರಡು ದಿನವಾದರೂ ಜ್ವರ ಇಳಿಯದೇ ನೀರೂ ಹೊಟ್ಟೆಯಲ್ಲಿ ನಿಲ್ಲದೇ ವಾಂತಿಯಾಗತೊಡಗಿದಾಗ ಹೌಹಾರಿದ ಕಿಶೋರ್ ನನಗೆ ಕರೆ ಮಾಡಿದ್ದ. ಕೂಡಲೇ ಆಸ್ಪತ್ರೆಗೆ ಕರೆತರಲು ಸೂಚಿಸಿದ್ದೆ. ಎಲ್ಲಾ ಪರೀಕ್ಷಿಸಿ ರಿಪೋರ್ಟ್ ಬಂದಾಗ ಡೆಂಗ್ಯೂದ ಲಕ್ಷಣಗಳು ಖಚಿತವಾಗಿತ್ತು. ಧನ್ವಂತರಿಯಲ್ಲೇ ಅಡ್ಮಿಟ್ ಆಗಿದ್ದಾಗ ಕಿಶೋರ್ ದಿನವೂ ಬರುತ್ತಿದ್ದ. ನಾನೂ ಸಮಯ ಸಿಕ್ಕಾಗಲೆಲ್ಲ ಅಮ್ಮನ ವಾರ್ಡಿಗೆ ಹೋಗಿ ಮಾತಾಡಿಸಿ ಬರುತ್ತಿದ್ದೆ.

ಆ ದಿನ ಅಮ್ಮನ ರಿಪೋರ್ಟುಗಳನ್ನು ನೋಡಿ ಡಾ.ಮೀರಾ "ನಾರ್ಮಲ್ ಇದೆ. ನಾಳೆ ಡಿಸ್ಚಾರ್ಜ್ ಮಾಡೋಣ. ಮೆಡಿಸಿನ್ ಮತ್ತೆ ಪಥ್ಯ ಕಂಟಿನ್ಯೂ ಮಾಡಿ. ಒಂದು ವಾರ ಬಿಟ್ಟು ಚೆಕ್ಅಪ್ ಗೆ ಕರ್ಕೊಂಡು ಬನ್ನಿ" ಅಂದಿದ್ದರು. ಆಗ ಕಿಶೋರ್ ಇರಲಿಲ್ಲ. ಸಂಜೆ ಆಸ್ಪತ್ರೆಗೆ ಬಂದವನು ಅಮ್ಮನ ಆರೋಗ್ಯ ಹಾಗೇ ಡಿಸ್ಚಾರ್ಜ್ ಬಗ್ಗೆ ವಿಚಾರಿಸಲು ನನ್ನ ಕ್ಯಾಬಿನ್ ಗೆ ಬಂದಿದ್ದ. 

ನಾನು ಮೀರಾ ಮೇಡಂ ಹೇಳಿದ್ದನೆಲ್ಲಾ ತಿಳಿಸಿ ಡಿಸ್ಚಾರ್ಜ್ ಪ್ರೋಸೀಜ಼ರ್ ಗಳ ಬಗ್ಗೆಯೂ ಹೇಳಿದ್ದೆ. ಮೆಡಿಸಿನ್ ಪಥ್ಯದ ಬಗ್ಗೆ ವಿವರಿಸುತ್ತಿದ್ದಾಗ ನವ್ಯಾ ಬಂದಿದ್ದಳು. ನನ್ನ ಕೆಲಸದ ಅವಧಿ ನಿರ್ದಿಷ್ಟವಲ್ಲ. ಆದರೆ ಅವಳದು ಫಿಕ್ಸೆಡ್. ಅವಳ ಕೆಲಸದ ಸಮಯ ಮುಗಿದು ಮನೆಗೆ ಹೊರಡುವ ಮುನ್ನ ಒಂದು ಬಾರಿ ನನ್ನನ್ನು ಕಂಡು ಮನೆಗೆ ಬರುವೆನೋ ಇಲ್ಲವೋ ಕೇಳಿ ಮಾತಾಡಿಸಿ ಹೋಗುವುದು ಅವಳ ಅಭ್ಯಾಸ. ಹಾಗೆಯೇ ಅಂದೂ ಬಂದಿದ್ದಳು.

ಇವನನ್ನು ಕಂಡು ಕ್ಯಾಬಿನ್ ಇಂದ ವಾಪಾಸಾಗಲು ಹೊರಟವಳನ್ನು ತಡೆದು ನಾನೇ ಇಬ್ಬರನ್ನೂ ಪರಸ್ಪರ ಪರಿಚಯಿಸಿದ್ದೆನಲ್ಲವೇ? ನನ್ನಿಂದಾಗಿ ಪರಸ್ಪರ ಭೇಟಿಯಾದ ಇವರಿಬ್ಬರ ಬದುಕಿನ ಹಾದಿಗಳು ಭವಿಷ್ಯದಲ್ಲಿ ಸೇರಲಿವೆ ಎಂಬ ಕನಿಷ್ಟ ಕಲ್ಪನೆಯೂ ಆಗ ನನಗಿರಲಿಲ್ಲ.

ದಿನ ಕಳೆದಂತೆ ಮಂಗಳಮ್ಮ ಚೇತರಿಸಿಕೊಂಡರೂ ಬಹಳ ಬೇಗ ಸುಸ್ತಾಗುತ್ತಿದ್ದರಿಂದ ಆಗಾಗ ಆಸ್ಪತ್ರೆಗೆ ಎಡತಾಕಬೇಕಾಯಿತು. ಈ ಸಮಯದಲ್ಲಿ ಅವನು ಯಾರೊಂದಿಗೂ ಹೆಚ್ಚು ಬೆರೆಯದ ನವ್ಯಾಳ ಮೇಲೆ ಆಸಕ್ತಿ ಬೆಳೆಸಿಕೊಂಡನಾ? ನನಗೂ ತಿಳಿಯದು.....

ಅದೊಂದು ಮಧ್ಯಾಹ್ನ  ಕರೆ ಮಾಡಿದವನು " ಸಮಾ, ನಿನ್ಹತ್ರ ತುಂಬಾ ಮುಖ್ಯವಾದ ವಿಷಯವೊಂದನ್ನು ಮಾತಾಡೋದಿದೆ. ಮನೆ ಅಥವಾ ಆಸ್ಪತ್ರೆಯಲ್ಲಿ ಮಾತಾಡೋಕಾಗಲ್ಲ. ಸಂಜೆ ಹೊರಗೆಲ್ಲಾದ್ರೂ ಸಿಗ್ತೀಯಾ? " ಎಂದಿದ್ದ.

"ಇವತ್ತೇ ಸಿಗ್ಬೇಕೇನೋ? ತುಂಬಾ ಕೆಲ್ಸ ಇದೆ. ನಾಳೆ ಆಗೋಲ್ವಾ?" ಕೇಳಿದ ತಕ್ಷಣವೇ "ಏನೇ ಕೆಲ್ಸ ಇದ್ರೂ ಆಮೇಲೆ ಮಾಡ್ಕೋಮ್ಮ. ತುಂಬಾ ಜರೂರು. ಪ್ಲೀಸ್ ಸಮಾ" ಅಂದಾಗ "ಸರಿ ಎಲ್ಲಿ ಸಿಗ್ಲಿ?" ಕೇಳಿದ್ದೆ.

"ನಾಲ್ಕೂವರೆ ಹೊತ್ತಿಗೆ ಗಾಂಧಿ ಪಾರ್ಕ್ ಹತ್ರ ಇರು. ನಾನೂ ಬರ್ತೀನಿ" ಸರಿಯೆಂದು ಕರೆ ಕಡಿತಗೊಳಿಸಿದೆ. 

'ಏನು ಮಾತಾಡಬೇಕಾಗಿದೆ ಇವನಿಗೆ? ಅಮ್ಮನ ಆರೋಗ್ಯ ನಾರ್ಮಲ್ ಆಗಿದೆ. ತೊಂದರೆಯೇನಿಲ್ಲ. ಕೆಲವು ದಿನಗಳಿಂದ ಇವನ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಎಂದೇಕೆ ಅನಿಸುತ್ತಿದೆ? ಏನೋ ಹೇಳಬೇಕೆಂದು ಬಹಳ ಪ್ರಯತ್ನಿಸಿ ಸೋಲುತ್ತಿದ್ದಾನೆಯೇ?' ಇಂಥಾ ಯೋಚನೆಗಳಲ್ಲೇ ಸ್ವಲ್ಪ ಬೇಗನೇ ಹೊರಟು ಗಾಂಧಿ ಪಾರ್ಕಿನತ್ತ ಗಾಡಿ ಚಲಾಯಿಸಿದೆ.

ಆಶ್ಚರ್ಯವೆಂದರೆ ಅವನು ನನಗಿಂತ ಮೊದಲೇ ಬಂದು ಕಾಯುತ್ತಿದ್ದ. ಟೈಮ್ ಸೆನ್ಸ್ ಇಲ್ಲವೆಂದು ನನ್ನಿಂದ ಯಾವತ್ತೂ ಬೈಸಿಕೊಳ್ಳುತ್ತಿದ್ದವ ಇಂದು ನನಗಿಂತ ಮುಂಚೆ ಬಂದು ಕಾದಿರುವನೆಂದರೆ ಬಹಳ ಮುಖ್ಯವಾದ ವಿಚಾರವೇ ಇರಬೇಕು ಎಂದು ಅವನ ಬಳಿ ಸಾಗಿದೆ. 

ಲೋಕವನ್ನೇ ಮರೆತು ಗಹನವಾದ ಯೋಚನೆಯಲ್ಲಿದ್ದವನಿಗೆ ನನ್ನ ಆಗಮನದ ಅರಿವಾಗಲಿಲ್ಲ. 

"ಏನ್ ಸರ್ ಅಂಥಾ ತಲೆ ಹೋಗೋ ವಿಚಾರ. ಹೇಳಿದ್ರೆ ತಿಳ್ಕೊಂಡು ನಾವು ಸ್ವಲ್ಪ ಜ್ಞಾನ ಸಂಪಾದಿಸ್ತೀವಪ್ಪ"  ತಮಾಷೆಯಾಗಿ ಕೇಳಿದೆ.

"ಓಹ್, ಬಂದ್ಯಾ ನೀನು. ಸಾರಿ ಮಾ, ಏನೋ ಯೋಚನೇಲಿ ನಂಗೊತ್ತಾಗ್ಲಿಲ್ಲ" ಎಂದ.

"ಅದೇನು ಘನಂದಾರಿ ಕೆಲಸ ಇದೆ ಅಂತ ಈಗ ನನ್ನ ಕರ್ಸಿದ್ದು. ನಾಳೆ ಬರ್ತೀನಿ ಅಂದ್ರೂ ಕೇಳ್ಲಿಲ್ಲ?. ಇರೋ ಕೆಲ್ಸಾ ಬಿಟ್ಟು ಓಡೋಡಿ ಬಂದ್ರೆ ನೀನೋ ಪಕ್ಕದಲ್ಲಿ ಜ್ವಾಲಾಮುಖಿ ಸಿಡಿದರೂ ಗೊತ್ತಾಗದಿರುವಷ್ಟು ಯೋಚನೆ ಮಾಡ್ತಿದ್ದೀ. ಏನು ಸಮಾಚಾರ? " ಕೇಳಿದೆ.

ಅವನೇನೂ ಮಾತಾಡಲಿಲ್ಲ. ನಾನು ಅವನೇ ಮಾತಾಡಲಿ ಎಂದು ಕಾದೆ. ಎಷ್ಟಾದರೂ ಮಾತನಾಡಲಿಕ್ಕಿದೆ ಅಂತ ಕರೆಸಿದ್ದು ಅವನೇ ತಾನೇ?

ನಮ್ಮಿಬ್ಬರ ನಡುವೆ ಮೌನ ತಾಂಡವವಾಡಿತು. ಅವನ ನೋಟ ದಿಗಂತದಲ್ಲಿದ್ದರೆ, ನಾನು ಬೆಂಚಿನ ಮೇಲೆ ಕುಳಿತು ಅಲ್ಲೇ ಆಡುತ್ತಿದ್ದ ಮಕ್ಕಳನ್ನು ನೋಡತೊಡಗಿದೆ. ಸಮಯ ಸರಿಯತೊಡಗಿತು. 

ಅವನು ತುಟಿ ಎರಡು ಮಾಡುವ ಲಕ್ಷಣ ಕಾಣದಿದ್ದರೂ ನನ್ನ ತಲೆಕೆಡುವ ಎಲ್ಲಾ ಲಕ್ಷಣಗಳು ಗೋಚರಿಸಿದವು. ಇನ್ನು ನನ್ನ ತಾಳ್ಮೆ ತಪ್ಪುವುದು ಖಚಿತವೆನಿಸಿದಾಗ ಸೀದಾ ಎದ್ದು ಅವನ ಮುಂದೆ ನಿಂತು, "ಮೌನವ್ರತ ಮಾಡೋಕೆ ಕಂಪನಿಗೆ ನಾನೇ ಬೇಕಿತ್ತಾ? ಅರ್ಜೆಂಟ್ ಮಾತಾಡ್ಬೇಕು ಬಾ ಅಂತ ಕರ್ಸಿ ಆಕಾಶ ನೋಡ್ಕೊಂಡು ಕೂತ್ಕೊಂಡ್ಬಿಟ್ರೆ? ಬಾಯ್ಬಿಟ್ಟು ಹೇಳಿದ್ರೆ ತಾನೇ ಅರ್ಥ ಆಗೋದು. ನೋಡು ಕಿಶೋರ್, ಏನಾದ್ರೂ ಹೇಳೋದಿದ್ರೆ ಹೇಳು. ಇಲ್ಲಾ ನಾನು ಹೊರಟೆ" ಸಿಟ್ಟಿನಿಂದ ಹೊರಟವಳನ್ನು ಹಿಂಬಾಲಿಸಿ "ಸಮಾ ಪ್ಲೀಸ್ ನಿಲ್ಲು. ಹೋಗ್ಬೇಡಾ" ಅಂದ.

"ಮತ್ತೇನೋ ನಿಂದು. ನಾನೂ ಬಂದಲ್ಲಿಂದ ನೋಡ್ತಿದ್ದೀನಿ. ಏನೋ ಹೇಳ್ಬೇಕು ಅಂತ ಸುಮ್ನೆ ನಿಂತಿದ್ದೀ. ನನ್ಗೇನು ಫೇಸ್ ರೀಡಿಂಗ್, ಮೈಂಡ್ ರೀಡಿಂಗ್ ಎಲ್ಲಾ ಬರುತ್ತಾ? ಅದೇನ್ ಹೇಳ್ಬೇಕು ಅಂತಿದ್ದೀಯೋ ಬೇಗ ಹೇಳು" ರೇಗಿದೆ.

"ತುಂಬಾ ದಿನಗಳಿಂದ ನಿಂಗೆ ಹೇಳ್ಬೇಕು ಅಂದ್ಕೋತಿದ್ದೀನಿ ಆದ್ರೆ ಆಗ್ತಿಲ್ಲ. ಅದು ನಾ....."

"ನೆಟ್ಟಗೆ ವಿಷಯಕ್ಕೆ ಬಂದರೆ ಸರಿ. ಅದೂ, ಇದೂ, ನಾನೂ, ನೀನೂ ಅಂತ ರಾಗ ಎಳದ್ಯೋ... ಅಷ್ಟೇ… ಚೆನ್ನಾಗಿರೋಲ್ಲ ಮತ್ತೆ"

"ನಾನು ನಿನ್ನ ಫ್ರೆಂಡ್ ನ ಮದ್ವೆ ಮಾಡ್ಕೋಬೇಕು ಅಂತ ನಿರ್ಧಾರ ಮಾಡಿದ್ದೀನಿ. ನೀನು ಅವಳ್ಹತ್ರ ಮಾತಾಡಿ ಒಪ್ಸಬೇಕು."

ಸಿಟ್ಟಿನಲ್ಲಿ ಬೈಯಲು ಸರ್ವತಯಾರಿಯೊಂದಿಗೆ ನಿಂತಿದ್ದ ನನಗೆ ಮೊದಲು ಅವನ ಮಾತು ಅರ್ಥವಾಗಲಿಲ್ಲ. ಮತ್ತೆ ಮತ್ತೆ ಅವನ ಮಾತನ್ನು ಮೆಲುಕು ಹಾಕಿದೆ. ಯಾವಾಗ ಅವನ ಮಾತಿನ ಇಂಗಿತ ಅರಿವಾಯಿತೋ ನಾನು ನಿಂತಲ್ಲೇ ಕಂಪಿಸಿದೆ. ಎಲ್ಲಾ ಅಯೋಮಯವೆನಿಸಿ "ನೀನೇನು ಹೇಳ್ದೆ ಮತ್ತೆ ಹೇಳು. ನನಗೆ ಸರಿಯಾಗಿ ಅರ್ಥ ಆಗ್ತಿಲ್ಲ. ನನ್ನ ಫ್ರೆಂಡ್ ಅಂದ್ರೆ?" ಅನುಮಾನ ಪರಿಹರಿಸಿಕೊಳ್ಳಲು ಕೇಳಿದೆ.

"ಎಂಥಾ ಪ್ರಶ್ನೆ? ಎಷ್ಟು ಜನ ಫ್ರೆಂಡ್ಸ್ ಇದ್ದಾರೆ ನಿಂಗೆ? ಇರೋದೇ ಇಬ್ರು.." ಗೊಣಗಿದವನು "ಸಮನ್ವಿತಾ, ಮನೆಲೀ ಮದ್ವೆ ಮಾಡ್ಕೋ ಅಂತ ಒತ್ತಾಯ ಮಾಡ್ತಿದ್ದಾರೆ. ಕೆಲವು ಪ್ರಪೋಸಲ್ಸ್ ಕೂಡಾ ಬಂದಿದೆ. ನಾನು ನವ್ಯಾನ ಇಷ್ಟಪಟ್ಟಿದ್ದೀನಿ. ಅವಳ ಹತ್ರ ಈ ಬಗ್ಗೆ ನೀನು ಮಾತಾಡು ಅಂತ ಹೇಳ್ತಿದ್ದೀನಿ. ಅವಳಿಗೆ ಅತ್ಯಂತ ಆತ್ಮೀಯ ಬಂಧು ಅಂತ ಇರೋದು ನೀನೊಬ್ಳೇ." 

ಅತೀ ಸ್ಪಷ್ಟವಾಗಿ ಇನ್ನೊಂದು ಪ್ರಶ್ನೆಗೆ ಅವಕಾಶವಿಲ್ಲದಂತೆ ಹೇಳಿದ್ದ. ನಾನು ಮತ್ತೆ ಬೆಂಚಿನ ಮೇಲೆ ಕುಳಿತು ಸುಧಾರಿಸಿಕೊಳ್ಳತೊಡಗಿದೆ. ಕಳೆದ ಕೆಲವು ದಿನಗಳಿಂದ ಇವನ ಒದ್ದಾಟ, ಗೊಂದಲಗಳನ್ನು ಗಮನಿಸಿದ್ದೆ. ಇಂದು ಕರೆ ಮಾಡಿ ಮಾತಾಡಬೇಕೆಂದಾಗ ಏನೋ ಗಹನವಾದ ವಿಚಾರವಿರಬೇಕೆಂದು ಲೆಕ್ಕ ಹಾಕಿದ್ದೆ ಕೂಡಾ.

ಆದರೆ......

ಇವನು ಈ ರೀತಿ ನೇರವಾಗಿ ನವ್ಯಾಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸುವನೆಂಬ ಚಿಕ್ಕ ಕಲ್ಪನೆಯೂ ಸಹ ನನಗಿರಲಿಲ್ಲ. ಅಸಲಿಗೆ ಹೆಚ್ಚೆಂದರೆ ಮೂರ್ನಾಲ್ಕು ಬಾರಿ ಭೇಟಿಯಾಗಿರುವ ನವ್ಯಾಳನ್ನು ಇವನು ಪ್ರೀತಿಸುತ್ತಿದ್ದೇನೆ ಎನ್ನುತ್ತಿರುವುದೇ ವಿಚಿತ್ರವೆನಿಸಿತು. ಹೇಗೆ ಸಾಧ್ಯ? ಅವಳೋ ಮಹಾ ಮೌನಿ. ಇವನು ಅವಳನ್ನು ಇಷ್ಟು ಪಟ್ಟಿದ್ದು ಹೇಗೆ?

ಪ್ರಶ್ನೆಗಳ ದಾಳಿಗೆ ನನ್ನ ತಲೆ ಛಿದ್ರವಾಗತೊಡಗಿದಾಗ, ಅರೇ... ಯಾಕಿಷ್ಟು ಗೊಂದಲ....ಎದುರಿಗೇ ಇದ್ದಾನಲ್ಲ  ನೇರವಾಗಿ ಕೇಳೋಣ ಅನಿಸಿ "ನೀನು ನವ್ಯಾನ ಪ್ರೀತಿಸ್ತಿದ್ದೀಯಾ? ಹೇಗೆ ಸಾಧ್ಯ? ಅವಳನ್ನು ನೀನು ನೋಡಿರೋದೇ ನಿನ್ನೆ ಮೊನ್ನೆ. ಅದೂ ಒಂದೆರಡ್ಮೂರು ಸಲ ಇರ್ಬಹುದು. ಮಾತಾಡ್ಸಿದ್ದಂತು ನಾನು ನೋಡಿಲ್ಲ. ಮತ್ತೆ..... ಪ್ರೀತಿ....? ಅದೂ ಮದ್ವೆಯಾಗುವಷ್ಟು ಪ್ರೀತಿ? ನಂಗೊಂದೂ ಅರ್ಥವಾಗ್ತಿಲ್ಲ ಕಿಶೋರ್" ನನ್ನ ಧ್ವನಿಯಲ್ಲಿ ತೀರದ ಅಚ್ಚರಿಯಿತ್ತು.

"ಯಾಕೆ? ಒಂದೆರಡ್ ಸರಿ ನೋಡಿರೋರ್ನ ಪ್ರೀತಿಸ್ಬಾರ್ದು ಅಂತ ರೂಲ್ಸ್ ಏನಾದ್ರೂ ಇದ್ಯಾ?" ಅಂತ ನಕ್ಕವನು ಗಂಭೀರವಾಗಿ "ನಿನ್ನ ಪ್ರಶ್ನೆಗಳಿಗೆ ಉತ್ತರಿಸೋದು ತುಂಬಾ ಕಷ್ಟ ಕಣೇ. ನೀನು ಹೇಳಿದ್ದೆಲ್ಲಾ ನಿಜವೇ. ನನ್ನ ಅವಳ ಪರಿಚಯವೇ ತೀರಾ ಇತ್ತೀಚಿನದು. ನಾನು ಹತ್ರ ಹೋದಷ್ಟು ಅವಳು ದೂರಾಗ್ತಾಳೆ. ಮಾತಾಡ್ಸೋಕೆ ಪ್ರಯತ್ನಿಸಿದ್ರೂ ಅವಳು ಮೌನ ಮುರ್ಯೋಲ್ಲ. ಇನ್ಫಾಕ್ಟ್ ಅವಳು ಇದ್ವರ್ಗೂ ನನ್ಹತ್ರ ಮಾತಾಡೇ ಇಲ್ಲ. ಆದ್ರೂ ಅವಳೂಂದ್ರೆ ನಂಗಿಷ್ಟ....... ಯಾಕೇ?? ನಂಗೂ ಗೊತ್ತಿಲ್ಲ...... ಪ್ರೀತಿ ಯಾರ ಮೇಲೆ,ಯಾಕೆ, ಯಾವಾಗ ಹುಟ್ಟುತ್ತೆ ಅನ್ನೋದೇ ನಿಗೂಢ ಅಂತಾ ಯಾರೋ ಪುಣ್ಯಾತ್ಮರು ಹೇಳಿಲ್ವಾ. ನನ್ನ ಪ್ರೀತಿನೂ ಹಾಗೇ ಅಂದ್ಕೊ."

"ನೀನು ನವ್ಯಾ ಹತ್ರ ಇದ್ರ ಬಗ್ಗೆ ಮಾತಾಡಿದ್ದೀಯಾ" ನಾನು ಹಣೆಯುಜ್ಜಿ ಕೇಳಿದ್ದೆ. 

"ಆಗ್ಲೇ ಹೇಳಿದ್ನಲ್ಲ. ನಾನು ಮಾತಾಡ್ಸೋಕೆ ಟ್ರೈ ಮಾಡಿ ಸೋತಿದ್ದೀನಮ್ಮ. ನಾನು ಇದ್ದ ಜಾಗದಲ್ಲಿ ಅವಳ ನೆರಳೂ ಬೀಳೋಕೆ ಬಿಡೋದಿಲ್ಲ. ಹಾಗೆ ಮಾಯ ಆಗ್ತಾಳೆ ನಿನ್ನ ನವ್ಯಾ"

ಕಿಶೋರ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವನಂತವರು ಬಹಳ ಅಪರೂಪ. ತನ್ನ ಜವಾಬ್ದಾರಿಗಳನ್ನು ಅರಿತವ. ಒಳ್ಳೆಯ ಮಗ, ಅಣ್ಣ, ಗೆಳೆಯ ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ಮನುಷ್ಯ. ಇಷ್ಟೆಲ್ಲಾ ಆದವನು ನಾಳೆ ಖಂಡಿತಾ ಒಳ್ಳೆಯ ಗಂಡನೂ ಆಗಿರುತ್ತಾನೆ. ನವ್ಯಾಳನ್ನು ಕಣ್ರೆಪ್ಪೆಯಂತೆ ಜೋಪಾನ ಮಾಡಬಲ್ಲ. ಓಹ್ ದೇವರೇ!! ನವ್ಯಾಳಿಗಾಗಿ ಎಂಥಾ ವರನನ್ನು ಕಳಿಸಿದ್ದಿ.... ಇವನ ಕೈಯಲ್ಲಿ ಅವಳ ಭವಿಷ್ಯ ಸುಭದ್ರ.. ಅವಳ ಭವಿಷ್ಯದ ಬಗ್ಗೆ ನನಗಿದ್ದ ಎಲ್ಲಾ ಚಿಂತೆಗಳನ್ನೂ ದೂರ ಮಾಡಿದೆ..... ಅವಳ ಹಳೆಯ ನೋವುಗಳೆಲ್ಲಾ ಇಲ್ಲಿಗೇ ಕೊನೆ..... ಹೀಗೇ ಖುಷಿಯ ಕಲ್ಪನೆಯ ಕುದುರೆಯೇರಿದವಳಿಗೆ ಹಠಾತ್ತನೆ ನೆನಪಾಯಿತು..............

ಇದು...... ಈ ಮದುವೆ......ಸಾಧ್ಯವಿಲ್ಲ....... ಕಾರಣ.... ನವ್ಯಾಳ ಅತೀತ.....!! ಅದನ್ನು ಹೇಗೆ ಮರೆತೆ? 

ಕಿಶೋರ್ ಒಳ್ಳೆಯವನೇ ಇರಬಹುದು. ಅವನಿಗೆ ಸಮಾಜಸೇವೆಯಲ್ಲಿ ಆಸಕ್ತಿ ಇರಬಹುದು. ಪರರಿಗೆ ಬುದ್ದಿ ಹೇಳಿ, ಸಹಾಯಮಾಡಿ  ಸಮಾಜವನ್ನು ಸರಿಪಡಿಸುವುದು ಸುಲಭ. ಆದರೆ ಆ ನಿಯಮಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವಷ್ಟು ಬದ್ಧತೆ ಯಾರಿಗಿದೆ? ಯಾವ ಗಂಡಸು ಓರ್ವ ವೇಶ್ಯೆಯನ್ನು ತನ್ನ ಹೆಂಡತಿಯೆಂದು ಸಮಾಜಕ್ಕೆ ಪರಿಚಯಿಸಬಲ್ಲ? ಪರರ ಕೊಂಕು ನುಡಿಗಳನ್ನೂ, ಕಿಡಿನೋಟಗಳನ್ನೂ ಸಹಿಸಬಲ್ಲ? ಛೇ... ಇದೆಂಥಾ ಅವಸ್ಥೆ? ಇವನಿಂದ ಅವಳ ಹಿನ್ನೆಲೆ ಮುಚ್ಚಿಟ್ಟರೇ? ಊಹೂಂ... ಅದು ತಪ್ಪು. ಇವನಿಗೆಲ್ಲಾ ಹೇಳಿಬಿಡೋಣ. ಆಗ ಅವನೇ ನಿರ್ಧಾರಗಳನ್ನು ಬದಲಿಸುತ್ತಾನೆ..... 

ಆದರೆ.... ನವ್ಯಾಳಿಗೇ ತಿಳಿಸದೇ ಅವಳ ಪೂರ್ವಾಪರಗಳನ್ನು ಇವನಿಗೆ ಹೇಳಲೇ?

ಕಿಶೋರ್ ನನ್ನ ಬಳಿ ಎಲ್ಲಾ ಹೇಳಿ ನನಗೆ ಯೋಚಿಸಲು ಸಮಯ ಕೊಟ್ಟಂತೆ ಸುಮ್ಮನೆ ಕೂತಿದ್ದ. ಆದರೆ ನನ್ನ ತಲೆಸಿಡಿಯತೊಡಗಿತು. ಏನು ಮಾಡಲೀ ಎಂದರಿವಾಗದ ಅತಂತ್ರ ಸ್ಥಿತಿ.ಏನೇ ಹೇಳುವುದಾದರೂ ಮುಚ್ಚಿಡುವುದಾದರೂ ಅದು ನವ್ಯಾಳದೇ ನಿರ್ಧಾರ. ನಾನವಳಿಗೆ ಗೆಳತಿಯಾಗಿ ಸಹಾಯ, ಸಲಹೆ ನೀಡಬಹುದೇ ಹೊರತು, ಇದು ಅವಳ ಜೀವನದ ಪ್ರಶ್ನೆ.. ಅವಳೇ ನಿರ್ಧರಿಸಬೇಕು ಎಂಬ ದೃಢನಿಶ್ಚಯಕ್ಕೆ ಬಂದದ್ದೆ ಎದ್ದು ಕಿಶೋರನೆದುರು ನಿಂತು

"ಒಂದು ವೇಳೆ ಅವ್ಳು ನಿನ್ಹತ್ರ ಮಾತಾಡಿದರೇ ಇದ್ನೆಲ್ಲಾ ಅವಳಿಗೆ ವಿವರಿಸಿ ಅರ್ಥ ಮಾಡಿಸ್ಬಲ್ಲೇ ಅನ್ನೋ ನಂಬಿಕೆ ನಿನಗಿದ್ಯಾ?" ಗಂಭೀರವಾಗಿ ಕೇಳಿದೆ.

"ಅವಳು ನನ್ಹತ್ರ ಮಾತಾಡಿದ್ರೆ ನಿನ್ನ ಹೀಗೆ‌ ತಲೆತಿಂತಿರ್ಲಿಲ್ವೇ. ಅವಳ್ಹತ್ರನೇ ಎಲ್ಲಾ ವಿಷಯ ಹೇಳಿ ಒಪ್ಪಿಸ್ತಿದ್ದೆ" ಅವನ ಧ್ವನಿಯಲ್ಲಿ ವಿಶ್ವಾಸವಿತ್ತು.

"ಸರಿ ನಡಿ ಹಾಗಾದ್ರೆ ಅವ್ಳ ಮನೆಗೇ ಹೋಗೋಣ. ನಿಮ್ಮಿಬ್ಬರ ಬದುಕು ನೀವೇ ಮಾತಾಡಿ ನಿರ್ಧರಿಸಿ" ಎಂದೆ.

ಅವನು ಮರು ನುಡಿಯದೇ ನನ್ನ ಹಿಂಬಾಲಿಸಿದ........

ಹೀಗೊಂದು ಪರೀಕ್ಷೆ ನವ್ಯಾಳ ಬಾಳಲ್ಲಿ ಆರಂಭವಾಗಿತ್ತು.....

                  ಮುಂದುವರೆಯುತ್ತದೆ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ