ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 31, 2022

ಜ್ಞಾನಪೀಠದಲ್ಲಿ ಕನ್ನಡದ ಮೆರುಗು

'ಸಕಲ ಲಿಪಿಗಳ ರಾಣಿ' ಎಂದು ವಿನೋಬಾ ಭಾವೆ ಅವರಿಂದ ಹೊಗಳಿಸಿಕೊಳಲ್ಪಟ್ಟ ಭಾರತದ ಅತೀ ಪುರಾತನ ಭಾಷೆಗಳಲ್ಲೊಂದು ನಮ್ಮ ಕನ್ನಡ. ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಮಾತನಾಡುವ ಭಾಷೆಗಳ ಸಾಲಿನಲ್ಲಿ ೨೯ನೇ ಸ್ಥಾನದಲ್ಲಿರುವ ಅಭಿಜಾತ ಭಾಷೆ ನಮ್ಮೀ ಚೆನ್ನುಡಿ. ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡದ ಮೊದಲ ಕನ್ನಡ - ಆಂಗ್ಲ ನಿಘಂಟನ್ನು ರಚಿಸಿದವರು. ಸಾಹಿತ್ಯಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಕನ್ನಡಮ್ಮನ ಕಿರೀಟದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳ ಗರಿಯಿದೆ. ರಾಷ್ಟ್ರೀಯ ಭಾಷೆ ಹಿಂದಿಯನ್ನು ಹೊರತುಪಡಿಸಿದರೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಭಾಷೆ ಕನ್ನಡ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಎಂಟು ಮಹನೀಯರು ಮತ್ತು ಪುರಸ್ಕೃತ ಕೃತಿಗಳ ಕಿರು ಪರಿಚಯ ಇಲ್ಲಿದೆ. 

 ೧. ಕುವೆಂಪು - ಶ್ರೀ ರಾಮಾಯಣ ದರ್ಶನಂ - ೧೯೬೭:
ಕುವೆಂಪು ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಪದ್ಮವಿಭೂಷಣ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಅಗ್ರಪಂಕ್ತಿಯ ಸಾಹಿತಿಗಳು. ಮಲೆನಾಡಿನ ಪ್ರಕೃತಿ ಸೌಂದರ್ಯವನ್ನೂ, ನವರಸಗಳನ್ನು ತಮ್ಮ ಕೃತಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ರಸಋಷಿ ಕುವೆಂಪು. 'ಮಲೆಗಳಲ್ಲಿ ಮದುಮಗಳು' ಹಾಗೂ 'ಕಾನೂರು ಹೆಗ್ಗಡತಿ' ಕುವೆಂಪು ಅವರು ರಚಿಸಿದ ಎರಡು ಬೃಹತ್ ಕಾದಂಬರಿಗಳು. ರಕ್ತಾಕ್ಷಿ, ಬೆರಳ್ಗೆ ಕೊರಳ್, ಮಹಾರಾತ್ರಿ, ಚಂದ್ರಹಾಸ, ಬಲಿದಾನ, ಶೂದ್ರ ತಪಸ್ವಿ ಮೊದಲಾದವು ಅವರ ಪ್ರಮುಖ ನಾಟಕಗಳು. ನೆನಪಿನ ದೋಣಿಯಲಿ ಇವರ ಆತ್ಮಕಥೆ. 'ಮನುಷ್ಯ ಜಾತಿ ತಾನೊಂದೇ ವಲಂ', 'ಮನುಜ ಮತ, ವಿಶ್ವ ಪಥ', 'ಓ ನನ್ನ ಚೇತನ, ಆಗು ನೀ ಅನಿಕೇತನ' ಎಂದು ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು. ತಮ್ಮ 'ಶ್ರೀ ರಾಮಾಯಣ ದರ್ಶನಂ' ಕೃತಿಯ ಮೂಲಕ ಅವರು ಕನ್ನಡಕ್ಕೆ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟರು. 'ಶ್ರೀ ರಾಮಾಯಣ ದರ್ಶನಂ' ಹಿಂದೂ ಮಹಾಕಾವ್ಯವಾದ ರಾಮಾಯಣವನ್ನು ಆಧರಿಸಿದ ಕೃತಿ. ಹಳೆಯ ಕಥೆ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರ ಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆ‌. ಇದು ಜ್ಞಾನಪೀಠ ಪ್ರಶಸ್ತಿಯೊಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೂ ಭಾಜನವಾಗಿದೆ. ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾ ಸಂಪುಟಂ, ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳನ್ನು ಈ ಮಹಾಕಾವ್ಯ ಒಳಗೊಂಡಿದೆ.
ಅಗ್ನಿ ಪರೀಕ್ಷೆಯ ಸನ್ನಿವೇಶದಲ್ಲಿ ಕುವೆಂಪು ವಾಲ್ಮೀಕಿ ರಾಮಾಯಣದಿಂದ ಅಚ್ಚರಿಯ ವಿಚಲನವನ್ನು ಮಾಡಿದ್ದಾರೆ. ಸೀತೆ ಅಗ್ನಿ ಪರೀಕ್ಷೆಗೆ ಗುರಿಯಾಗಿ ಅಗ್ನಿಗೆ ತನ್ನನ್ನು ಅರ್ಪಿಸಿಕೊಳ್ಳುವ ಕ್ಷಣದಲ್ಲಿ ರಾಮನೂ ಅವಳೊಂದಿಗೆ ಅಗ್ನಿಯನ್ನು ಪ್ರವೇಶಿಸುವ ಸನ್ನಿವೇಶ ಸೃಷ್ಟಿಸುವ ಮೂಲಕ ಮೂಲ ರಾಮಾಯಣಕ್ಕೆ ಭಿನ್ನವಾದ ಆಯಾಮವೊಂದನ್ನು ಒದಗಿಸಿದ್ದಾರೆ ಕುವೆಂಪು. ತನ್ನ ಬಲಗೈಯಲ್ಲಿ ಸೀತೆಯ ಹಸ್ತವನ್ನು ಹಿಡಿದು ರಾಮನು ಅಗ್ನಿ ಕುಂಡದಿಂದ ಹೊರಬರುವ ಮೂಲಕ ಸೀತೆಯ ಪಾವಿತ್ರತೆಯೊಂದಿಗೆ ರಾಮನ ನಿಷ್ಠೆ ಹಾಗೂ ಅವರಿಬ್ಬರ ಪ್ರೇಮವನ್ನೂ ಬಹಿರಂಗಪಡಿಸಿರುವುದು ಈ ಕೃತಿಯ ವೈಶಿಷ್ಟ್ಯಗಳಲ್ಲೊಂದು. ಜ್ಞಾನಪೀಠ ಪ್ರಶಸ್ತಿ ಸಮಿತಿ ಉಲ್ಲೇಖ: "ಕುವೆಂಪು ಅವರು ಸಾಹಿತ್ಯದ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೊಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು. ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ".

೨. ದ.ರಾ.ಬೇಂದ್ರೆ - ನಾಕುತಂತಿ - ೧೯೭೩
ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂಬ ಸರಳ ವಾಕ್ಯಗಳಲ್ಲಿ ಇಡೀ ಜೀವನದ ಪಾಠವನ್ನೇ ಬೋಧಿಸಿದವರು 'ಧಾರವಾಡದ ಅಜ್ಜ' ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಮೊದಲ ಕವಿತೆ 'ಬೆಳಗು' (ಮೂಡಣ ಮನೆಯಾ ಮುತ್ತಿನ ನೀರಿನ ಎರಕವಾ ಹೊಯ್ದಾ) ವಿನಿಂದ ಹಿಡಿದು 'ಇಳಿದು ಬಾ ತಾಯೆ ಇಳಿದು ಬಾ', 'ಬಾರೋ ಬಾರೋ ಸಾಧನ ಕೇರಿಗೆ', 'ನಾನು ಬಡವಿ, ಅಂತ ಬಡವ, ಒಲವೇ ನಮ್ಮ ಬದುಕು', ' ನೀ ಹಿಂಗ ನೋಡಬ್ಯಾಡ ನನ್ನ', 'ಪಾತರಗಿತ್ತಿ ಪಕ್ಕ ನೋಡಿದ್ಯೇನೆ ಅಕ್ಕಾ'...... ಹೀಗೆ ಬರೆದಷ್ಟು ಮುಗಿಯಲಾರದು ಇವರ ಕವನಗಳ ಪಟ್ಟಿ. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪರಿಚಿತರಾದ ಬೇಂದ್ರೆಯವರು 'ನಾಕುತಂತಿ' ಕವನದ ಮೂಲಕ ಕನ್ನಡಕ್ಕೆ ಎರಡನೇ ಜ್ಞಾನಪೀಠದ ಗರಿಯನ್ನು ತಂದವರು. ನಾಲ್ಕು ಭಾಗಗಳಲ್ಲಿರುವ ’ನಾಕು ತಂತಿ’ ಕವನ ಕಾರ್ಣಿಕದ ಒಡಪಿನ ರೂಪದಲ್ಲಿದೆ. ಅವರು ಬರೆದ ಅಡಿಟಿಪ್ಪಣಿಯ ಮೂಲಕ ಈ ಕಾರ್ಣಿಕದ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಕವನದ ನಾಲ್ಕು ಭಾಗಗಳೂ ಅವರೇ ಹೇಳುವಂತೆ ಒಂದೇ ಭಾಗದ ನಾಲ್ಕು ಮಗ್ಗಲುಗಳು. ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ. ಮೂರನೆಯ ಭಾಗದಲ್ಲಿ ಒಂದು ’ಸವಾಲ್-ಜವಾಬ್’ ಇದೆ. ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ವಿವರಿಸಿ ಹೇಳುತ್ತದೆ.
ಬೇಂದ್ರೆಯವರ ಪ್ರಕಾರ ಸಮಸ್ತ ಸೃಷ್ಟಿಯೇ ಒಂದು ವೀಣೆ. ಆ ವೀಣೆಯ ನಾಲ್ಕು ತಂತಿಗಳೆಂದರೆ 'ನಾನು', 'ನೀನು', 'ಆನು' , 'ತಾನು'. 'ನಾನು' ಎಂದರೆ ಪುರುಷ. ಆತ ಅಹಂ ಹಾಗೂ ತನ್ನತನದ ಪ್ರತೀಕ , 'ನೀನು' ಎಂಬುದು ಪ್ರಕೃತಿ (ಸ್ತ್ರೀ). ಆಕೆ ಕರುಣೆ, ಔದಾರ್ಯದ ಪ್ರತಿಮೆ. ಅವರ ಮಿಲನದ ಫಲವಾದ ಸಂತಾನವೇ ಈ 'ಆನು' ಎಂಬ ತತ್ವ. ಇದು ನಾನು ಎಂಬ ಅಹಂ ಹಾಗೂ ನೀನು ಎಂಬ ಔದಾರ್ಯಗಳ ಎರಕ, ಸಮಾಜದ ಬೇಕು ಬೇಡಗಳ ಪ್ರತಿಬಿಂಬ. ವಿಶ್ವವೆಂಬ ವೀಣೆಯ ನಾಲ್ಕನೇ ತಂತಿ 'ತಾನು'. 'ತಾನು' ಎಂದರೆ ಸೃಷ್ಟಿಕರ್ತ. ನಾನು, ನೀನು ಮತ್ತು ಆನುಗಳ ಮೂಲ. ಆತನಿಂದಲೇ ಸರ್ವವೂ ಸೃಷ್ಟಿಯಾಯಿತು ಮತ್ತು ಆತನಲ್ಲಿಯೇ ಸರ್ವವೂ ಅಡಗಿದೆ ಎಂಬುದನ್ನು ಈ ಕವನ ವಿವರಿಸುತ್ತದೆ. 

೩. ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - ೧೯೭೮:
ಕಡಲತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶ ಡಾ.ಶಿವರಾಮ ಕಾರಂತ ರ ಬರವಣಿಗೆಯ ಶೈಲಿಗೆ ಮನಸೋಲದವರುಂಟೇ? 'ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ಸಾಹಿತ್ಯ ಪ್ರಕಾರವಿಲ್ಲ' ಅನ್ನುವಷ್ಟು ಮಟ್ಟಿಗಿನ ಕ್ರಿಯಾಶೀಲ ಸಾಹಿತ್ಯ ಕೃಷಿ ಅವರದ್ದು. ಸಾಹಿತ್ಯವಷ್ಟೇ ಅಲ್ಲದೇ ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದಲ್ಲೂ ಹಲವು ಪ್ರಯೋಗಗಳನ್ನು ಮಾಡಿದವರು ಕಾರಂತಜ್ಜ. ಚಲನಚಿತ್ರ ರಂಗದಲ್ಲೂ ಆಸಕ್ತಿ ಹೊಂದಿದ್ದ, ತಮ್ಮ ಹಲವು ಕೃತಿಗಳಿಗೆ ತಾವೇ ಮುಖಪುಟವನ್ನೂ ರಚಿಸಿದ ಬಹುಮುಖ ಪ್ರತಿಭೆಯ ಸಾಹಿತಿ ಇವರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಕೇಂದ್ರ ಸರ್ಕಾರ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ವಾಪಾಸು ಮಾಡಿದ್ದರು ಕಾರಂತರು. ನಾಟಕ, ವಿಜ್ಞಾನ, ಸಾಹಿತ್ಯ, ಚಲನಚಿತ್ರ, ಯಕ್ಷಗಾನ, ರಂಗಭೂಮಿ, ಚಿತ್ರಕಲೆ, ಸಂಗೀತ, ಶಿಕ್ಷಣ.... ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಹಲವಾರು ಕೃತಿಗಳನ್ನು ರಚಿಸಿರುವ ಕಾರಂತರ ಕೆಲವು ಪ್ರಮುಖ ಕೃತಿಗಳೆಂದರೆ, ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ, ಚೋಮನ ದುಡಿ, ಚಿಗುರಿದ ಕನಸು, ಬೆಟ್ಟದ ಜೀವ, ಸರಸಮ್ಮನ ಸಮಾಧಿ, ಮೈ ಮನಗಳ ಸುಳಿಯಲ್ಲಿ, ಅಳಿದ ಮೇಲೆ ಮುಂತಾದುವು. "ಹುಚ್ಚು ಮನಸ್ಸಿನ ಹತ್ತು ಮುಖಗಳು" ಅವರ ಆತ್ಮಕಥೆ. ಕಾರಂತರ 'ಮೂಕಜ್ಜಿಯ ಕನಸುಗಳು' ಕೃತಿ ಕನ್ನಡಕ್ಕೆ ಇನ್ನೊಂದು ಜ್ಞಾನಪೀಠದ ಗರಿಯನ್ನು ಏರಿಸಿದೆ. ಈ ಕೃತಿ ಅಜ್ಜಿ ಮತ್ತು ಮೊಮ್ಮಗನ ನಡುವಿನ ಸಂಭಾಷಣೆಯ ಮೂಲಕವೇ ಹಲವು ವಿಚಾರಗಳಿಗೆ ಕನ್ನಡಿ ಹಿಡಿಯುತ್ತಾ ಸಾಗುತ್ತದೆ. ಕಾದಂಬರಿಯ ಮುಖ್ಯ ಪಾತ್ರವಾದ ಮೂಕಜ್ಜಿಗೆ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುವ ಒಂದು ವಿಸ್ಮಯವಾದ ಶಕ್ತಿ‌. ಹೊರಗಿನ ಜನಕ್ಕೆ ಮುಪ್ಪಿನ ಮರುಳಾಗಿ ಕಾಣಿಸುವ ಅವಳ ಬಡಬಡಿಕೆಯನ್ನು ಅದ್ಭುತಾತಿಶಯ ಶಕ್ತಿಯೆಂದು ಗ್ರಹಿಸುವುದು ಕೇವಲ ಮೊಮ್ಮಗ ಸುಬ್ರಾಯ ಮಾತ್ರ. ನಾಲ್ಕೈದು ಸಾವಿರ ವರ್ಷಗಳಿಂದ ಹರಿದುಬಂದಿರುವ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಲು ಯತ್ನಿಸುವ ಅವಾಸ್ತವಿಕತೆಯ ಪ್ರತೀಕವೆನಿಸುವ ಅಜ್ಜಿ ಮತ್ತು ವಾಸ್ತವದ ಪ್ರತಿನಿಧಿಯಾಗುವ ಮೊಮ್ಮಗ ಇಲ್ಲಿನ ಕೇಂದ್ರಬಿಂದು. ಜತೆಗೆ ಪಾತ್ರಧಾರಿಗಾಗಿ ಬರುವ ನಾಗಿ, ರಾಮಣ್ಣ, ಜನ್ನ ಮತ್ತಿತರರು ಆ ಮಂಥನದ ಭಾಗವಾಗುತ್ತಾರೆ.
"ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ", "ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು" ಎಂಬ ಮುನ್ನುಡಿಯ ಸಾಲುಗಳು ಇಡೀ ಕಥೆಯ ಸಾರಾಂಶ ಹಾಗೂ ಆಶಯವನ್ನು ತಿಳಿಸುತ್ತವೆ. 

೪. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಚಿಕವೀರ ರಾಜೇಂದ್ರ - ೧೯೮೩
ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 'ಮಾಸ್ತಿ ಕನ್ನಡದ ಆಸ್ತಿ' ಎಂದೇ ಖ್ಯಾತರಾದವರು. ತೀರಾ ಬಡತನದಲ್ಲಿ ಬೆಳೆದು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ ಮಾಸ್ತಿ ಅವರು .ಸಿವಿಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ವೃತ್ತಿ ಜೀವನ ಆರಂಭಿಸಿದ ಇವರು ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಇವರು ಕಣ್ಣಿಗೆ ಕಟ್ಟುವಂತೆ ಕಥೆ ಬರೆಯುವಲ್ಲಿ ನಿಸ್ಸೀಮರಾಗಿದ್ದರು. ಮಾಸ್ತಿಯವರ ಹಲವು ಕಥೆಗಳು ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಹಾಗೆಯೇ ಮಾಸ್ತಿ ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀ ರಾಮ ಪಟ್ಟಾಭಿಷೇಕ, ಚಿಕವೀರ ರಾಜೇಂದ್ರ, ಚನ್ನಬಸವ ನಾಯಕ, ಕಾಕನಕೋಟೆ ಇವರ ಕೆಲ ಪ್ರಮುಖ ಕೃತಿಗಳು. 'ಭಾವ' ಮಾಸ್ತಿಯವರ ಆತ್ಮ ಕಥೆ. 

ಇವರ ಐತಿಹಾಸಿಕ ಕಾದಂಬರಿ ಚಿಕವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅದು ಕೊಡಗಿನ ಕೊನೆಯ ಅರಸ ಚಿಕವೀರ ರಾಜೇಂದ್ರನ ಕುರಿತಾದ ಕಾದಂಬರಿ. ಇಕ್ಕೇರಿಯ ರಾಜ ಮನೆತನದ ಕೊಂಡಿಯಿಂದ ಕೊಡಗಿಗೆ ಬಂದು ನೆಲೆನಿಂತ ಪಲೆರಿ ರಾಜ ಮನೆತನ ಹೈದರನನ್ನೂ, ಟಿಪ್ಪೂವನ್ನೂ ಸಮರ್ಥವಾಗಿ ಎದುರಿಸಿ ನಿಲ್ಲುತ್ತಾರೆ. ಆದರೆ ಗಂಡು ಸಂತಾನವಿಲ್ಲದ ಅರಸ ದೊಡ್ಡವೀರ ರಾಜ, ತನ್ನ ಮಗಳು ದೇವಮ್ಮಾಜಿ ರಾಜ್ಯವಾಳಬೇಕೆಂದು ಬಯಸಿ ಅವಳನ್ನು ಅರಸಿಯನ್ನಾಗಿಸುತ್ತಾನೆ. ಆದರೆ ದೊಡ್ಡವೀರ ರಾಜನ ತಮ್ಮ, ಲಿಂಗರಾಜ(ಚಿಕವೀರ ರಾಜೇಂದ್ರನ ತಂದೆ)ನಿಂಗೆ ಈ ನಿರ್ಧಾರ ಹಿಡಿಸುವುದಿಲ್ಲ. ದೇವಮ್ಮಾಜಿಗೆ ದಿವಾನನಾಗಿ ಇದ್ದುಕೊಂಡು ಅವಳ ವಿರುದ್ಧವೇ ಷಡ್ಯಂತ್ರ ರಚಿಸಿ, ಆಕೆಯನ್ನು ಬಂಧಿಸಿಟ್ಟು ತಾನೇ ರಾಜನಾಗುತ್ತಾನೆ. ಒಂಭತ್ತು ವರ್ಷ ಆಳ್ವಿಕೆ ನಡೆಸಿ ಆತ ಕಾಲವಾದ ನಂತರ ಅವನ ಮಗ ಚಿಕವೀರ ರಾಜ ಅರಸನಾಗುತ್ತಾನೆ. ಕೊಡಗಿನ ವಂಶದ ಕೊನೆಯ ಅರಸನಾದ ಇವನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಕೊಡಗು ಸಂಸ್ಥಾನ ಬ್ರಿಟಿಷರ ವಶವಾಗುತ್ತದೆ. ವೈಯಕ್ತಿಕವಾಗಿ ಬಹಳ ಅಸಹಜ, ಅಸಭ್ಯ ಮತ್ತು ವಿಲಕ್ಷಣ ವ್ಯಕ್ತಿಯಾಗಿದ್ದ ಚಿಕವೀರ ರಾಜ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ವಿಫಲನಾಗುತ್ತಾನೆ. ಈ ಕಾದಂಬರಿಯು ಆತನ ಕ್ರೌರ್ಯ ಮತ್ತು ದುಷ್ಕೃತ್ಯದ ವಿವರಗಳನ್ನೊಳಗೊಂಡಿದೆ.
ಮೂಲಕಥೆಯ ನಂತರ, ಅದಕ್ಕೆ ಹೊರತಾದ ಐತಿಹಾಸಿಕ ವಿಷಯವನ್ನು ಸಮಾರೋಪದಲ್ಲಿ ದಾಖಲಿಸಿರುವುದು ಈ ಕಾದಂಬರಿಯ ಒಂದು ವಿಶೇಷ. ಚಿಕವೀರ ರಾಜೇಂದ್ರನ ಮಗಳು ಗೌರಮ್ಮ(ಪುಟ್ಟಮ್ಮ) ಅವರು ಕ್ರೈಸ್ತಮತಕ್ಕೆ ಸೇರಿದ ಬಗ್ಗೆ, ಗೌರಮ್ಮ ಅವರ ಪತಿ ಕ್ಯಾಪ್ನನ್ ಕ್ಯಾಂಬೆಲ್ ಹಾಗೂ ಅವರ ಮಗಳು ಎಡಿತ್ ಸಾತು ಅವರನ್ನು ಇಂಗ್ಲೆಂಡಿನಲ್ಲಿ ಮಾಸ್ತಿಯವರ ಮಿತ್ರರು ಭೇಟಿಯಾದ ವಿಚಾರವನ್ನು ಬರೆದಿದ್ದಾರೆ. 
 
೫. ವಿ. ಕೃ. ಗೋಕಾಕ್ - ಸಮಗ್ರ ಸಾಹಿತ್ಯ - ೧೯೯೦
ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ವಿನಾಯಕ ಕೃಷ್ಣ ಗೋಕಾಕ ಅವರು ಕನ್ನಡದ ಪ್ರತಿಭಾವಂತ ಸಾಹಿತಿ‌. ವಿದ್ಯಾಭ್ಯಾಸದ ಸಲುವಾಗಿ ಧಾರವಾಡದಲ್ಲಿದ್ದಾಗ ವರಕವಿ ಬೇಂದ್ರೆಯವರ ಸಂಪರ್ಕಕ್ಕೆ ಬಂದ ಗೋಕಾಕರಿಗೆ ಸ್ಪೂರ್ತಿ, ಗುರು, ಮಾರ್ಗದರ್ಶಕ ಎಲ್ಲವೂ ಬೇಂದ್ರೆಯವರೇ. ಇಂಗ್ಲೀಷಿನಲ್ಲಿ ಎಂ. ಎ ಮುಗಿದ ತಕ್ಷಣವೇ ಪುಣೆಯ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ. ನಂತರ ಕಾಲೇಜಿನ ವತಿಯಿಂದಲೇ ಉನ್ನತ ವ್ಯಾಸಾಂಗಕ್ಕೆಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಯಿತು. ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿ ಇವರದ್ದು. ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲಾ ಪ್ರಸಿದ್ಧಿಗಳನ್ನು ಪಡೆದ ಸಾಹಿತಿಯಾದ ಇವರು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ಗೋಕಾಕರ ಬರಹ ತುಂಬ ವಿಪುಲ ಹಾಗೂ ವ್ಯಾಪಕವಾದುದು. ಹಲವು ಕವನ ಸಂಕಲನಗಳು, ವಿಮರ್ಶೆಗಳಲ್ಲದೇ‌, ಸಮರಸವೇ ಜೀವನ, ಇಜ್ಜೋಡು, ಏರಿಳಿತ, ಸಮುದ್ರಯಾನ ಮೊದಲಾದ ಕಾದಂಬರಿಗಳನ್ನು ಬರೆದಿದ್ದಾರೆ. ಗೋಕಾಕರು ಭಾರತ ಸಿಂಧು ರಶ್ಮಿ ಎಂಬ ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳುಳ್ಳ ಮಹಾಕಾವ್ಯ ರಚಿಸಿದ್ದಾರೆ. ಋಗ್ವೇದ ಕಾಲದ ಜನಜೀವನದ ಕುರಿತಾಗಿ ಈ ಕೃತಿ ರಚಿತಗೊಂಡಿದೆ. ಕನ್ನಡ ಸಾಹಿತ್ಯಕ್ಕೆ ಇವರ ಅನನ್ಯ ಕೊಡುಗೆ ಗಮನಿಸಿ ಜ್ಞಾನಪೀಠ ಪುರಸ್ಕಾರ ನೀಡಿ ಗೌರವಿಸಲಾಗಿದೆ. 
 
೬. ಡಾ|| ಯು. ಆರ್. ಅನಂತಮೂರ್ತಿ - ಸಮಗ್ರ ಸಾಹಿತ್ಯ - ೧೯೯೪
ಪದ್ಮಭೂಷಣ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿ, ಚಿಂತಕ ಹಾಗೂ ವಿಮರ್ಶಕ. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿರುವ ಅನಂತಮೂರ್ತಿ ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮುಗಿಸಿದ್ದಾರೆ. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹಲವಾರು ದೇಶಿ ಹಾಗೂ ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸಂಸ್ಕಾರ, ಭಾರತೀಪುರ, ಅವಸ್ಥೆ, ಭಾವ, ದಿವ್ಯ ಹಾಗೂ 'ಪ್ರೀತಿ ಮೃತ್ಯು ಮತ್ತು ಭಯ' ಇವರ ಕಾದಂಬರಿಗಳು. ಘಟಶ್ರಾದ್ಧ, ಮೌನಿ, ಸೂರ್ಯನ ಕುದುರೆ, ಎಂದೆಂದೂ ಮುಗಿಯದ ಕಥೆ, ಪ್ರಶ್ನೆ.... ಇನ್ನೂ ಹಲವು ಕಥೆಗಳನ್ನೂ ಇವರು ಬರೆದಿದ್ದಾರೆ. ಅಲ್ಲದೇ ವಿಮರ್ಶೆಗಳು, ನಾಟಕ, ಕವನ ಸಂಕಲನಗಳನ್ನೂ ರಚಿಸಿರುವ ಇವರ ಹಲವು ಕೃತಿಗಳು ಚಲನಚಿತ್ರವಾಗಿಯೂ ಜನಮನ್ನಣೆ ಗಳಿಸಿವೆ. ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿದ ಚಲನಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ. 'ಸುರಗಿ ' ಇವರ ಆತ್ಮ ಕಥನ. ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ 'ಪ್ರೀತಿ ಮೃತ್ಯು ಮತ್ತು ಭಯ' ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು.
ಸಂಸ್ಕಾರ, ಘಟಶ್ರಾದ್ಧ ಮೊದಲಾದ ವಿಶಿಷ್ಟ ಕಥೆಗಳ ಮೂಲಕ ಹಾಗೂ ಧಾರ್ಮಿಕ, ರಾಜಕೀಯ ವಿಚಾರಗಳಲ್ಲಿ ತಮ್ಮ ಕ್ರಾಂತಿಕಾರಿ ನಿಲುವುಗಳ ಮೂಲಕ ಎಡಪಂಥೀಯ ಚಿಂತಕರೆಂಬ ಹಣೆಪಟ್ಟಿ ಹೊತ್ತುಕೊಂಡವರು ಅನಂತಮೂರ್ತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿರುವ ಅನಂತಮೂರ್ತಿ ಕನ್ನಡ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು. ೨೦೧೩ರಲ್ಲಿ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಕೂಡಾ ಇವರು ನಾಮನಿರ್ದೇಶಗೊಂಡಿದ್ದರು. 

೭. ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - ೧೯೯೮:
ಪದ್ಮಭೂಷಣ ಗಿರೀಶ್ ರಘುನಾಥ್ ಕಾರ್ನಾಡ್ ಕನ್ನಡದ ಖ್ಯಾತ ಸಾಹಿತಿ, ನಾಟಕಕಾರ, ರಂಗಕರ್ಮಿ, ಸಿನಿಮಾನಟ, ನಿರ್ದೇಶಕ, ಚಿಂತಕ ಹಾಗೂ ಪ್ರಗತಿಪರ ಹೋರಾಟಗಾರಾಗಿ ಗುರುತಿಸಿಕೊಂಡವರು. ತಮ್ಮ ನೇರ ನುಡಿ ಹಾಗೂ ವಿಚಾರಧಾರೆಗಳಿಂದ ಎಡಪಂಥೀಯ ಚಿಂತಕ ಎನಿಸಿಕೊಂಡವರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಹೋರ್ಡ್ಸ್ ಸ್ಕಾಲರ್ಷಿಪ್ ಪಡೆದುಕೊಂಡು ಹೆಚ್ಚಿನ ವ್ಯಾಸಂಗಕ್ಕೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ್ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್. ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಬುದ್ಧಿಜೀವಿ ಕಾರ್ನಾಡ್ ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾದರು.
ನಾಟಕ ರಚನೆಯಲ್ಲಿ ಪಳಗಿದ ಕೈ ಹೊಂದಿದ್ದ ಕಾರ್ನಾಡರ ಯಯಾತಿ, ಹಯವದನ, ತುಘಲಕ್, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು ಮೊದಲಾದ ನಾಟಕಗಳು ಸುಪ್ರಸಿದ್ಧ. 'ಆಡಾಡತ ಆಯುಷ್ಯ' ಇವರ ಆತ್ಮಕಥನ.
ಅನಂತಮೂರ್ತಿಯವರ ಕಾದಂಬರಿ ಆಧಾರಿತ ಸಂಸ್ಕಾರ ಚಿತ್ರಕ್ಕೆ ಚಿತ್ರಕಥೆ ಬರೆದು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಕಾರ್ನಾಡರು, ಭೈರಪ್ಪ ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಉತ್ಸವ್(ಹಿಂದಿ), ಗೋಧೂಳಿ (ಹಿಂದಿ) ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು (ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ) ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೂ ಕಾರ್ನಾಡ್ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಪ್ರಮುಖವಾಗಿ ನಾಟಕ ಪ್ರಕಾರಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. 

೮. ಚಂದ್ರಶೇಖರ ಕಂಬಾರ - ಸಮಗ್ರ ಸಾಹಿತ್ಯ - ೨೦೧೧:
ಡಾ. ಚಂದ್ರಶೇಖರ ಕಂಬಾರ ಅವರು ಕಾದಂಬರಿಕಾರರು ಹಾಗೂ ನಾಟಕಕಾರರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು ಹಾಗೆಯೇ ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಚಿಕಾಗೊ,ನ್ಯೂಯಾರ್ಕ್,ಬರ್ಲಿನ್,ಮಾಸ್ಕೋ,ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು. ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದಾಗ ಅದ್ಯಕ್ಷತೆ ವಹಿಸಿದ್ದ ಖ್ಯಾತ ಕವಿಗಳೊಬ್ಬರು 'ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ' ಎಂದು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರಂತೆ. ಅಂದೇ ಕಂಬಾರರು ಕಾವ್ಯವನ್ನು ಪಳಗಿಸಿಕೊಳ್ಳುವತ್ತ ದೃಢಸಂಕಲ್ಪ ಕೈಗೊಂಡಿದ್ದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಗಳಲ್ಲಿ ಹಾಸುಹೊಕ್ಕಾಗಿಸುವ ಚಂದ್ರಶೇಖರ ಕಂಬಾರರು ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ ಹಾಗೆಯೇ ರಾಜಕಾರಣಿಯೂ ಕೂಡಾ ಹೌದು.
ತಮ್ಮ ಊರಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು.ಡಾ.ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು. ಅವರ ಸಾಹಿತ್ಯದಲ್ಲಿ ಅಲ್ಲಿನ ಗ್ರಾಮ್ಯ ಭಾಷೆಯ ಸೊಗಡು ಢಾಳಾಗಿ ಕಾಣಸಿಗುತ್ತದೆ. 

ಕರಿಮಾಯಿ, ಕಾಡುಕುದುರೆ, ಸಿಂಗಾರೆವ್ವ ಮತ್ತು ಅರಮನೆ ಕಂಬಾರರ ಪ್ರಖ್ಯಾತ ಕೃತಿಗಳು. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳನ್ನಾಗಿಸಿದರು‌. 'ಕರಿಮಾಯಿ' , 'ಸಂಗೀತಾ' , 'ಕಾಡುಕುದುರೆ', 'ಸಿಂಗಾರವ್ವ ಮತ್ತು ಅರಮನೆ' ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಈ ಚಿತ್ರಗಳಿಗೆ ತಾವೇ ಸಂಗೀತವನ್ನೂ ನೀಡಿದ್ದಾರೆ. ಕಾಡುಕುದುರೆ ಚಿತ್ರದ ಶೀರ್ಷಿಕೆ ಗೀತೆ 'ಕಾಡು ಕುದುರೆ ಓಡಿಬಂದಿತ್ತಾ.....' ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕವೂ ದೊರಕಿದೆ. 'ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಸ್ವತಃ ಉತ್ತಮ ಹಾಡುಗಾರರೂ ಆಗಿರುವ ಕಂಬಾರರು ತಮ್ಮ ಜಾನಪದ ಶೈಲಿಯ ಹಾಡುಗಳಿಗಾಗಿ ಜನಪ್ರಿಯರು.
ಹಲವು ಕಾವ್ಯಗಳು, ನಾಟಕಗಳು, ಸಂಶೋಧನಾ ಗ್ರಂಥಗಳು ಹಾಗೂ ಕಾದಂಬರಿಗಳನ್ನು ಬರೆದಿರುವ ಕಂಬಾರರ ಪ್ರಮುಖ ಕೃತಿಗಳು; ಜೋಕುಮಾರ ಸ್ವಾಮಿ, ಸಂಗ್ಯಾ ಬಾಳ್ಯಾ, ಕಾಡುಕುದುರೆ, ಹರಕೆಯ ಕುರಿ, ಸಿರಿಸಂಪಿಗೆ, ಮಹಾಮಾಯಿ, ಚಕೋರಿ(ಮಹಾಕಾವ್ಯ), ಕರಿಮಾಯಿ, ಜಿ.ಕೆ ಮಾ‌ಸ್ತರ್ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ ಪ್ರಮುಖವಾದುವು. ಇವುಗಳಲ್ಲಿ ಹೆಚ್ಚಿನವು ಚಲನಚಿತ್ರಗಳಾಗಿ ರಾಷ್ಟ್ರೀಯ ಮನ್ನಣೆ ಗಳಿಸಿವೆ ಎಂಬುದು ಗಮನಾರ್ಹ ಸಂಗತಿ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವಿಶೇಷವಾಗಿ ಜಾನಪದ ಸಾಹಿತ್ಯದ ತಮ್ಮ ಕೊಡುಗೆಗಾಗಿ ಕಂಬಾರರು ೨೦೧೧ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಇವರಲ್ಲದೇ ಇನ್ನೂ ಹಲವು ಶ್ರೇಷ್ಠ ಸಾಹಿತಿಗಳು ನಮ್ಮಲ್ಲಿದ್ದಾರೆ. ಕನ್ನಡ ನಾಡು ನುಡಿಯ ಔನತ್ಯವನ್ನೂ, ಕೀರ್ತಿಯನ್ನು ಜಗತ್ತಿನ್ನೆಲ್ಲೆಡೆ ಪಸರಿಸುತ್ತಿರುವ ಸಾಹಿತಿಗಳೆಲ್ಲರಿಗೂ ಗೌರವಪೂರ್ಣ ವಂದನೆಗಳು. ಈ ನಾಡು-ನುಡಿಯ ಸೇವೆ, ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ. ಕನ್ನಡಾಂಬೆಯ ಮಕುಟಕ್ಕೆ ಇನ್ನಷ್ಟು ಸಮ್ಮಾನದ ಗರಿಗಳು ಅಲಂಕೃತವಾಗಲಿ ಎಂಬ ಹಾರೈಕೆಯೊಂದಿಗೆ..... 

 ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.....

ಮಂಗಳವಾರ, ಜುಲೈ 7, 2020

ಲೋಕರೀತಿ.....

ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಾಜಪೂತ್ ನಟನೆಯ ಇನ್ನೂ ಬಿಡುಗಡೆಯಾಗಬೇಕಿರುವ ಬಹು ನಿರೀಕ್ಷಿತ(ಆತನ ಸಾವಿನ ಕಾರಣ) 'ದಿಲ್ ಬೇಚಾರಾ' ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಯಿತು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದಿದೆ. ರೆಕಾರ್ಡ್ ಬ್ರೇಕಿಂಗ್ ಫಾಸ್ಟೆಸ್ಟ್ ಮಿಲಿಯನ್ ಲೈಕ್ಸ್, ಲಕ್ಷಾಂತರ ಶೇರ್ ಗಳು, ಹೊಗಳಿಕೆಗಳ ಅಬ್ಬರ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕಣ್ಣಿಗೆ ರಾಚುತ್ತಿದೆ. ಇವನ್ನೆಲ್ಲಾ ನೋಡಿದಾಗ ಬೇಡವೆಂದರೂ ಮನವನ್ನಾವರಿಸಿದ್ದು ಒಂದೇ ಪ್ರಶ್ನೆ........ ಇದೇ ಸುಶಾಂತ್ ಸಿಂಗ್ ರಾಜಪೂತ್ ಎಂಬ ಯಾವುದೇ ಗಾಡ್ ಫಾದರ್ಗಳಿಲ್ಲದ, ಸ್ವಸಾಮರ್ಥ್ಯದಿಂದ ಮೇಲೆ ಬಂದ ಹುಡುಗ ಇಂದು ನಮ್ಮ ನಡುವೆ ಬದುಕಿದ್ದಿದ್ದರೆ ಈ ಟ್ರೇಲರ್ ಇಷ್ಟೊಂದು ಸದ್ದು ಮಾಡುತ್ತಿತ್ತೇ......? 

ಪ್ರಾಯಶಃ ಇಲ್ಲ..... ಇದು ಆತನ ನಟನೆಯ ಕೊನೆಯ ಸಿನಿಮಾ ಎಂಬುದೇ 'ದಿಲ್ ಬೇಚಾರ' ಎಂಬ ಸಿನಿಮಾದ ಟ್ರೇಲರನ್ನು ಟ್ರೆಂಡಿಂಗ್ ಲಿಸ್ಟಿಗೆ ತಲುಪಿಸಿರುವುದು ಅನ್ನುವುದು ಅರಗಿಸಿಕೊಳ್ಳಲು ಕಠಿಣವಾದರೂ ಸತ್ಯ. ಬದುಕಿದ್ದಾಗ ಪ್ರತಿಭೆಗೆ ಸಿಗದ ಬೆಲೆ, ಮನ್ನಣೆ ಸತ್ತ ನಂತರ ಸಿಕ್ಕರೆಷ್ಟು ಬಿಟ್ಟರೆಷ್ಟು? ಈ ಖ್ಯಾತಿ, ಹೊಗಳಿಕೆ, ಆತನ ನಟನೆ ಹಾಗೂ ಹೃದಯವಂತಿಕೆಯ ಬಗೆಗಿನ ಸಾಲು ಸಾಲು ವಿಡಿಯೋ, ಪೋಸ್ಟ್, ಟ್ವೀಟ್ ಇತ್ಯಾದಿಗಳು ಅವನ ಅತ್ಯಾಪ್ತ ವಲಯದಲ್ಲಿ ಆತನ ಸಾವು ಸೃಷ್ಟಿಸಿದ ಖಾಲಿತನವನ್ನು ತುಂಬಬಲ್ಲದೇ? ಆತನ ಅನಿರೀಕ್ಷಿತ ಸಾವಿನ ಹಿನ್ನೆಲೆಯಲ್ಲಿ 'ದಿಲ್ ಬೇಚಾರ' ಸಿನಿಮಾಕ್ಕೆ ಸಿಗುತ್ತಿರುವ ಈ ಖ್ಯಾತಿ ಅದರ ನಿರ್ಮಾಪಕ, ನಿರ್ದೇಶಕ, ವಿತರಕರ ಜೇಬು ತುಂಬಿಸಬಹುದೇ ಹೊರತು ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಆ ತಂದೆಯ ಜೀವನಪರ್ಯಂತದ ನೋವನ್ನು, ತೆರೆಯ ಮೇಲೆ ಮಗನ ಮೊಗ ಕಂಡಾಗಲೆಲ್ಲಾ ಭಾರವಾಗುವ ಮನವನ್ನು ಸಾಂತ್ವನಿಸಬಲ್ಲದೇ? ಇದನ್ನು ಯೋಚಿಸುವಾಗ ಮೀನಾ ಕುಮಾರಿಯವರ ಸಾವಿನ ನಂತರದ 'ಪಾಕೀಜಾ಼' ಚಿತ್ರದ ಅಭೂತಪೂರ್ವ ಯಶಸ್ಸು ನೆನಪಾಗುತ್ತದೆ. 

ಬದುಕಿದ್ದಾಗ ತಿಳಿಯದ ವ್ಯಕ್ತಿಯ ಬೆಲೆ ಆತ ಕಣ್ಮರೆಯಾದ ನಂತರ ಅರಿವಿಗೆ ಬರುವುದು ವಿಪರ್ಯಾಸವಲ್ಲದೆ ಮತ್ತೇನು? ಒಬ್ಬ ವ್ಯಕ್ತಿ ಜೀವಂತವಿದ್ದಾಗಲೇ ಅವನ ಅಸ್ತಿತ್ವವನ್ನು ಮರೆತವರಂತೆ ವರ್ತಿಸಿ ಆತ ಅಳಿದ ಮೇಲೆ ಇಡೀ ಜಗಕ್ಕೆ ತಿಳಿಯುವಂತೆ ಶೋಕಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸುವ ನಮ್ಮ ರೀತಿ ಕನಸುಗಳ ಸಮಾಧಿಯ ಮೇಲೆ ಚಂದದ ಸ್ಮಾರಕ ಕಟ್ಟಿದಂತೆಯೇ ಅಲ್ಲವೇ?

ಮಂಗಳವಾರ, ಮೇ 26, 2020

ಇವರನ್ನೇನ್ರೀ ಮಾಡೋಣ.....??

ನನಗೆ ಮಗಳು ಹುಟ್ಟಿದಾಗಲೇ ನಿರ್ಧರಿಸಿಬಿಟ್ಟಿದ್ದೆ. ಅವಳು ನನ್ನ ಅಮ್ಮ, ಆಯಿ, ಮಾ, ಮಾಯಿ, ಅಪ್ಪೆ, ಅಬ್ಬೆ, ಅವ್ವ ಏನಾರಾ ಅನ್ಲೀ ಇಲ್ಲಾ ಹೆಸರು ಹಿಡಿದು "ಲೇ ನೀತಾ ಬಾರೇ ಇಲ್ಲಿ" ಅಂತ ಕರೆದ್ರೂ ತೊಂದ್ರೆ ಇಲ್ಲ ಆದ್ರೆ ಅಪ್ಪಿ ತಪ್ಪಿನೂ ಅವಳ ಬಾಯಲ್ಲಿ "ಈಜಿಪ್ಟಿಯನ್ ಮಮ್ಮಿ" ಆಗ್ಬಾರ್ದು ಅಂತ ಪ್ರತಿಜ್ಞೆ ಮಾಡಿದ್ದೆ.

ಹುಟ್ಟಿದಾಗಿನಿಂದ ಇದೇ ಟ್ರೈನಿಂಗು. ಬಾಣಂತನದಲ್ಲಿ ಯಾವೆಲ್ಲ ಐಟಂಗಳು ನಿಷಿದ್ಧವೋ ಆ ಲಿಸ್ಟಿಗೆ ಮಮ್ಮಿ ಅನ್ನೋದ್ನೂ ಸೇರಿಸಿ ಮೂಟೆ ಕಟ್ಟಿ ಅಟ್ಟಕ್ಕೆ ಎಸೆದಾಯ್ತು. ಇನ್ನು ಮನೆಗೆ ಮಗು ನೋಡೋಕೆ ಬರೋ ನೆಂಟ್ರು "ಎಲ್ಲಿ ಮಮ್ಮಿ ಅನ್ನು" ಅಂದಾಗೆಲ್ಲಾ ಅವ್ರನ್ನ ಬಡ್ದು ಬಾಯಿಗ್ ಹಾಕ್ಕೊಂಬಿಡ್ಲಾ ಅನ್ಸೋದು. ನೋಡೋಷ್ಟು ನೋಡ್ದೇ... ಆಮೇಲೆ ನೈಸಾಗಿ ಅವರಿಗೇ ಹೇಳೋಕೆ ಶುರು ಮಾಡ್ದೆ.. "ನೋಡಿ ಅಮ್ಮಾ ಅಂತ ಹೇಳ್ಕೊಡಿ.." ಅಂತ. ಅವಳು ತೊದಲುತ್ತಾ ನುಡಿ ಕಲಿತು "ಅಮ್ಮಾ" ಅನ್ನೋಕೆ ಶುರು ಮಾಡ್ದಾಗ ಯುದ್ಧ ಗೆದ್ದಷ್ಟು ಖುಷಿ.

ಇಷ್ಟೆಲ್ಲಾ ಸಾಹಸ ಮಾಡಿ ಜತನದಿಂದ ಮಗಳನ್ನು "ಮಮ್ಮಿ"ಯಿಂದ ಕಾಪಾಡಿಕೊಂಡಿದ್ದೆ. "ಮಮ್ಮಿ" ವೈರಸ್ ಅಟ್ಯಾಕ್ ಆಗ್ದೇ ಇನ್ನೇನು ಎರಡು ವರ್ಷ ತುಂಬುತ್ತೆ  ಅಂತ ಖುಷಿಯಲ್ಲಿರೋವಾಗ್ಲೇ ನಿನ್ನೆ ಮಟಮಟ ಮಧ್ಯಾಹ್ನ "ಮsssಮ್ಮೀsss" ಅಂತ ರಾಗವಾಗಿ ಹೇಳ್ಕೊಂಡು ಓಡ್ಬಂದಿದ್ದು ನೋಡಿ ನನಗೆ ಹೇಗಾಗ್ಬೇಡ ನೀವೇ ಹೇಳಿ? 

ನನ್ನ ಪ್ರತಿಜ್ಞೆ ನುಚ್ಚು ನೂರಾಗಿ, ನಂಗೆ ತಾರಾಮಾರ ಸಿಟ್ಟು ಬಂದು ಈ ವೈರಸ್ ಎಲ್ಲಿಂದ ಅಟ್ಯಾಕ್ ಆಯ್ತು ಅಂತ ಕಂಡ್ಹಿಡಿಲೇ ಬೇಕು ಅಂತ ಹೊಸ ಪ್ರತಿಜ್ಞೆ ಮಾಡಿದೆ. ನಮ್ಮ ವೈಭವನಿಗಿಂತ ಫಾಸ್ಟ್ ಎಂಡ್ ಪರ್ಫೆಕ್ಟ್ ಆಗಿ ಪತ್ತೇದಾರಿಕೆ ಮಾಡಿ ಹತ್ತೇ ಹತ್ತು ನಿಮಿಷದಲ್ಲಿ ಕಂಡ್ಹಿಡಿದೂ ಬಿಟ್ಟೆ.

ಆ ಸಿಟ್ಟನ್ನು ಹೊರಗೆ ಹಾಕ್ಲಿಕಂತಲೇ ಪೆನ್ನು ಹಿಡಿದು... ಸಾರಿ ಮೊಬೈಲ್ ಹಿಡಿದು ಸ್ಕ್ರೀನ್ ಒಟ್ಟೆಯಾಗಿ ಮೊಬೈಲ್ ಗುಡ್ಸಿ ಗುಂಡಾಂತ್ರ ಆದ್ರೂ ತೊಂದ್ರೆ ಇಲ್ಲ ಅಂತ ಕೀಪ್ಯಾಡ್ ಕುಟ್ಟಿ ಈ ಲೇಖನ ಬರೀತಿದ್ದೀನಿ ಆಯ್ತಾ.

ಇದಿಷ್ಟು ಮುನ್ನುಡಿ. ಈಗ ವಿಷ್ಯಕ್ಕೆ ಬರ್ತೀನಿ.

ನನ್ನ ಮಗಳಿಗೆ ಈ ಮಮ್ಮಿ ವೈರಸ್ ಹತ್ತಿಸಿದೋಳು ಯಾರು ಗೊತ್ತಾ.... 

ಅವಳೇ... ಅವಳೇ..

"ಸಮಯವು ನಿಮ್ಮತ್ತ ಮಂದಹಾಸ ಬೀರುವಂತಾಗಿದೆ...ನಾನು ನಿಮ್ಮವಳೇ ವಿಜೆ ಅಮೈರಾ... 

ಸರಿ ಹೇಳಿದ್ನಾ ಮಮ್ಮಿ?....

ಮಮ್ಮಿ….???

ಮಮ್ಮಿ….???

ಮಮ್ಮಿ…..!!????"

ಈ ಸಂತೂರ್ ಮಮ್ಮಿನೇ ನನ್ನ ಮಗಳಿಗೆ ಮಮ್ಮಿ ವೈರಸ್ ಹತ್ಸಿದ್ದು ನೋಡಿ….

ಅವಳ ಮುಸುಂಟಿಗೆ ನಾಲ್ಕು ಬಡ್ದು ಹಾಕಿರೋ ಮೇಕಪ್ ಅಷ್ಟೂ ಉದ್ರಿಸಿಬಿಡೋಣ ಅನ್ಸಿತ್ತು. ಆದ್ರೆ 20 ರುಪಾಯಿ ಸೋಪಿಗೋಸ್ಕರ ಸಾವ್ರಾರು ರೂಪಾಯಿಯ ಟಿವಿಯನ್ನು ಯಾಕೆ ಒಡ್ಯೋದು ಅಂತ ಸೈಲೆಂಟಾದೆ...

ಮಾಯಾ ಪೆಟ್ಟಿಗೆಯೆಂಬ ಮಾಯಾಂಗನೆಯ ಕೈಯಲ್ಲಿರುವ ಮಂತ್ರದಂಡವೇ ಈ ಜಾಹೀರಾತು... ಇದು ಮಾಡೋ ಅವಾಂತರ ಒಂದಾ ಎರಡಾ? ಈ ಸೋಪಿನ ವಿಷ್ಯನೇ ತಗೋಳಿ... 

'ಮಗಳಿಗಿಂತಲೂ ಚಿಕ್ಕಪಾಪು ಸಂತೂರ್ ಮಮ್ಮಿ

ಗುಲಾಬಿಗಿಂತಲೂ ಒನಪು ಲಕ್ಸ್ ಮಮ್ಮಿ

ಹಾಲಿಗಿಂತ ಬಿಳುಪು ಡವ್ ಮಮ್ಮಿ

ಅಮೃತಶಿಲೆಗಿಂತ ನುಣುಪು ರೆಕ್ಸೋನಾ ಮಮ್ಮಿ

ಎಲ್ಲರಿಗಿಂತಲೂ ಶಾನೇ ಟಾಪು ಪತಂಜಲಿ ಮಮ್ಮಿ...'

ನಮ್ಮನೆ ಹಳೆಯಮ್ಮ(ನನ್ನಜ್ಜಿ)  90+ ವಯಸ್ಸಿನ ಚಿರಯುವತಿ. ಇವ್ರು ಡೈಲೀ ಲಕ್ಸ್ ಮಾರ್ಜಕದಲ್ಲೇ ಮಜ್ಜನ ಮಾಡೋದು. ಅದು ಬಿಟ್ಟು ಬೇರೆ ಬ್ರಾಂಡ್ ಆಗೋಲ್ಲ ನಮ್ಮಜ್ಜಿಗೆ. ಇಂತಹ ನೀಯತ್ತಿರೋ ನಮ್ಮಜ್ಜಿನ ಲಕ್ಸ್ ಮಾರ್ಜಕಕ್ಕೆ ಬ್ರಾಂಡ್ ಮಾಡೆಲ್ ಮಾಡ್ಬಹುದಾ ಅಂತ….? ವಯಸ್ಸಾಗಿದೇ ಅನ್ನೋದೊಂದು ಬಿಟ್ರೆ ನಮ್ಮಜ್ಜಿನೂ ಕರೀನಾ ಕಪೂರೇ…..

ಇನ್ನು ಈ ಮುಸುಡನ್ನು ಗೋಡೆ ಸುಣ್ಣದಷ್ಟು ಬೆಳ್ಳಗಾಗಿಸುವ ಫೇಸ್ ಕ್ರೀಮುಗಳದ್ದೋ ಇನ್ನೊಂದು ವ್ಯಥೆ.

ಇವರ ಪ್ರೋಡಕ್ಟುಗಳ ಮೇಲೆ ಇವರಿಗೇ ನಂಬಿಕೆ ಇರುವುದಿಲ್ಲ. ಕೇಸರಿ, ಚಂದನ, ಲೋಳೆಸರ,ಪಪ್ಪಾಯಿ, ಸ್ಟ್ರಾಬೆರಿ, ಕಲ್ಲಂಗಡಿ, ನಿಂಬೆ, ಜೇನು, ಮಣ್ಣು ಮಸಿ ಅಂತ ದಿನಕ್ಕೊಂದು ಐಟಂ ಹಾಕಿ ರುಬ್ಬಿ ನಮ್ಮ ಮುಖಾರವಿಂದವನ್ನು ಬ್ಲೀಚಿಂಗ್ ಪೌಡರ್ ಹಾಕಿ ತಿಕ್ಕಿರೋ ಬಚ್ಚಲಿನ ತರ ಪಳ್ಗುಟ್ಟಿಸ್ತೀವಿ ಅಂತಾರೇ.

ಈ anti wrinkle ಕ್ರೀಮ್ ಹೇಗೆ ಕೆಲ್ಸ ಮಾಡುತ್ತೆ ಅನ್ನೋ ಜಿದ್ದಿಗೆ ಬಿದ್ದಿದ್ದ ನನ್ನ ಪ್ರಯೋಗಮುಖಿ ತಮ್ಮನ ಕಣ್ಣಿಗೆ ಬಿದ್ದದ್ದು ನಮ್ಮಜ್ಜಿ.. ಅಜ್ಜಿ ಮುಖದ ರಿಂಕಲ್ ಗಳನ್ನೆಲ್ಲಾ ತೆಗೆದು ಅವರ ಮುಖನಾ ರಿಂಗಾ ರಿಂಗಾ ರೋಸಸ್ ತರ ಮಾಡ್ಬೇಕು ಅಂತ ಒಂದು ತಿಂಗ್ಳು ಕ್ರೀಮ್ ಬಳ್ದಿದ್ದೇ ಬಳ್ದಿದ್ದು...ಬುಲ್ ಡಾಗ್ ತರ ಇದ್ದ ಅಜ್ಜಿ ಮುಖ ಲ್ಯಾಬ್ರಡಾರ್  ತರ ಆಗ್ಲೇ ಇಲ್ಲ ನೋಡಿ....

ಈಗ ಅದೇನೋ ಹೊಸದಾಗಿ HD ಗ್ಲೋ ಕ್ರೀಮ್ ಬೇರೇ ಬಂದಿದ್ಯಲ್ಲಾ... ಅದ್ನ ಹಚ್ಕೊಂಡವರು ಬರೀ ಕಣ್ಣಿಗೆ ಕಾಣ್ತಾರಾ ಇಲ್ಲ HD ಗ್ಲಾಸ್  ಹಾಕ್ಕೊಂಡ್ರೆ ಮಾತ್ರಾ ಕಾಣ್ತಾರಾ ಅನ್ನೋದು ನನ್ನ ಹೈ ಡೆಫಿನಿಷನ್ ಡೌಟ್..

ಇವರೆಲ್ಲರಿಗಿಂತ ಭಯಂಕರ ವಿಚಿತ್ರ ನಮ್ಮ ದಾಳಿಂಬೆ ಹಲ್ ಸೆಟ್ಟುಗಳ ರಕ್ಷಣೆಕಾರರದ್ದು. 

ನಿಮ್ಮ ಟೂತ್ಪೇಸ್ಟಿನಲ್ಲಿ......

ಉಪ್ಪು ಇದೆಯೇ?

ಬೇವು ಇದೆಯೇ?

ಲವಂಗ ಇದೆಯೇ?

ಕರ್ಪೂರ ಇದೆಯೇ?....

ಇನ್ನು ಸ್ವಲ್ಪ ದಿನ ಹೋದ್ರೆ ಈ ಪುಣ್ಯಾತ್ಮರು 'ನಿಮ್ಮ ಟೂತ್ಪೇಸ್ಟಿನಲ್ಲಿ ಹಲ್ಲು ಇದೆಯೇ?' ಅಂತಲೇ ಕೇಳ್ತಾರೆ ನೋಡ್ತಿರಿ. ಈ ದಂತಮಂಜಕದ ವರಸೆನೇ ನಂಗೆ ಬೇಜಾರು.

ನಾವು ಭಾರತೀಯರು ಪುರಾತನ ಕಾಲದಿಂದಲೂ ಮರ್ಯಾದೆಯಿಂದ ಒಲೆ ಕೆಂಡದ ಚೂರಲ್ಲಿ ಜೀಂಕ್ ಜೀಂಕ್ ಅಂತ ಹಲ್ ತಿಕ್ಕಿ ಬಿಸಾಕ್ತಿದ್ವಿ. ಈ ಯುವನ ದೇಶದ ಬಿಳಿತಲೆ ಕೆಂಪು ಮುಸುಡಿನ ಮಹಾನುಭಾವರು ಬಂದು ಈ ತರ ಮಾಡ್ಬಾರ್ದು, ಇದು ಅನ್ ಹೈಜೀನಿಕ್ ಕಣ್ರೋ ಅಂತ ಕರಿ ಮಸಿ ಬಿಸಾಡಿ ಶ್ವೇತ ಬಿಳುಪಿನ ಪೇಸ್ಟ್ ಕೈಗಿಟ್ರು. ಅಲ್ಲಿಂದ ತಗೊಳಪ್ಪ ಶುರುವಾಯ್ತು…. ಬ್ರಶ್ ತಗೊಂಡು ಗಸ ಗಸ ಉಜ್ಜಿದ್ದೇ ಉಜ್ಜಿದ್ದು....

ನಿಮ್ಮ ಬ್ರಶ್ ಹಲ್ಲಿನ ಕೋಣೆಗಳನ್ನು ತಲುಪುತ್ತಿಲ್ಲ, ಅದು ಫ್ಲೆಕ್ಸಿಬಲ್ ಇಲ್ಲ, ಸ್ಮೂತ್ ಇಲ್ಲ, ಕ್ರಿಸ್ಕ್ರಾಸ್ ಇಲ್ಲ ಅಂತ ನೂರಾರು ತರದ ಬ್ರಷ್ಗಳು ಬೇರೆ.

ಬೆಳ್ಳಗಿದ್ದ ಪೇಸ್ಟ್ ಕೆಂಪಾಯ್ತು, ನೀಲಿ ಆಯ್ತು, ಬಿಳಿ ನೀಲಿ ಪಟ್ಟಾಪಟ್ಟಿನೂ ಆಯ್ತು ಅರಿಶಿನ, ಚಂದನದ ಬಣ್ಣ ಆಯ್ತು, ಪೇಸ್ಟೊಳಗೆ ಕೂಲಿಂಗ್ ಕ್ರಿಸ್ಟಲ್ಸ್ ಬಂದು ಬೆಳಿಗ್ಗೆ ಬ್ರಷ್ ಬಾಯಿಗೆ ಹೆಟ್ಟಿದ ಕೂಡ್ಲೇ ಶಿಮ್ಲಾ, ಕಾಶ್ಮೀರಕ್ಕೆ ಹೋಗ್ಬಂದ ಫೀಲ್ ತಗೊಂಡು ಆಯ್ತು, ಮೌತ್ ವಾಶ್ ಬಂತು ಬಾಯೆಲ್ಲಾ ಸು'ನಾಥ' ಬರೋ ತರ ಆಯ್ತು. ಈ ಬದಲಾವಣೆಗಳ ಬಗ್ಗೆ ಬೇಜಾರಿಲ್ಲ ನಂಗೆ..... 

ಆದ್ರೆ… ಆದ್ರೆ....

ಇಷ್ಟೆಲ್ಲಾ ಆದ್ಮೇಲೆ ಈಗ..... ಈಗ..... 

ಈ ಡಬ್ಬಾ ನನ್ಮಕ್ಕಳು ಆಕ್ಟೀವೇಟೆಡ್ ಚಾರ್ಕೋಲ್ ಟೂತ್ಪೇಸ್ಟ್ ಬಳಸಿ ಹಲ್ಲನ್ನು ಹೊಳೆಸಿ ಅಂತಿದ್ದಾರಲ್ಲ..,

ಮುಂಚೆ ನಾವ್ ಹಿಡ್ಕೊಂಡಿದ್ದ ಮಸಿಕೆಂಡ ಏನ್ ಸುಟ್ಟ ಗೇರ್ ಬೀಜದ್ಹಾಗೆ ಕಾಣ್ಸಿತ್ತಾ ನಿಮ್ಗೆ????

ಇದೆಲ್ಲಕ್ಕಿಂತ ಹೈಲೀ ಇರಿಟೇಟಿಂಗ್ ಅಂದ್ರೆ.....

ಈ ಟಾಯ್ಲೆಟ್ ಕ್ಲೀನರುಗಳು...

ಏನಾದ್ರೂ ತಿನ್ನೋಣ ಅಂತ ಕೈಗೆ ತಗೊಂಡ್ರೇ ಸಾಕು…. ಕೈ ಬಾಯಿಯ ಸನಿಹವಾಗೋ ಟೈಮಲ್ಲಿ ಠಣ್ ಅಂತ ಪ್ರತ್ಯಕ್ಷವಾಗ್ತಾರೆ ಈ ಕ್ಲೀನರುಗಳು.

ವಾಹ್.... ಏನ್ ಟೈಮಿಂಗೂ ಗುರೂ...

ಯಾರ್ಯಾರ್ದೋ ಮನೆಯ ಶುಭ್ರವಾದ ಟಾಯ್ಲೆಟ್ಟಿಗೆ  ಹೋಗಿ ಕ್ಲೀನ್ ಮಾಡೋದಲ್ದೇ,

"ನಾವು ನಿಮ್ಮ ಮನೆಗೂ ಬರಬೇಕೇ???? ಹಾಗಿದ್ದರೆ ಈ ಕೂಡಲೇ ಮಿಸ್ ಕಾಲ್ ಕೊಡಿ......" ಅಂತ ಚಮಕ್ ಬೇರೆ.

ಇಷ್ಟೆಲ್ಲಾ ಬಿಲ್ಡಪ್ ಕೊಡ್ತೀರಲ್ಲಾ, ಅಷ್ಟು ಧಮ್ ಇದ್ರೆ, ಕೊಳೆತು ಗಬ್ಬು ನಾರುವ ಪಬ್ಲಿಕ್ ಟಾಯ್ಲೆಟ್ಗಳನ್ನು ಒಂದ್ಸಾರಿ ಕ್ಲೀನ್ ಮಾಡಿ ತೋರ್ಸಿಬಿಡಿ ನೋಡುವಾ..

ಅಂದ್ಹಾಗೆ ಈ ಟಾಯ್ಲೆಟ್ ಕ್ಲೀನರ್ ಹಾಗೇ ಫ್ಲೋರ್ ಕ್ಲೀನರ್ ಕಂಪನಿಯವರಿಗೆ ನನ್ನದೊಂದು ಡೌಟ್.

ಅಲ್ಲಾ ಸ್ವಾಮಿ, ನಿಮ್ಮ ಎಲ್ಲಾ ಪ್ರಾಡಕ್ಟ್ಸ 99.9% ಜೆರ್ಮ್ಸ್ ಕಿಲ್ ಮಾಡಿ, ಒಂದು ಕೀಟಾಣುನ ಮಾತ್ರ ಉಳ್ಸಿರುತ್ತಲ್ಲ ಅದ್ಯಾಕೆ? ಅವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಂತಲಾ?? ಇಲ್ಲಾ ಕೀಟಾಣುಗಳ ಸಂತತಿ ಸಂಪೂರ್ಣ ನಶಿಸದಿರಲಿ ಅಂತಲಾ? ನಂಗ್ಯಾಕೋ ಅನುಮಾನ.... 100% ಕೀಟಾಣುಗಳು ಸತ್ರೆ ನಿಮ್ಮ ಪ್ರಾಡಕ್ಟ್ ಯಾರೂ ಪರ್ಚೇಸ್ ಮಾಡಲ್ಲ ಅಂತ್ಹೇಳಿ ಆ .1% ಕೀಟಾಣು ಉಳ್ಸಿದ್ರೇನೋ ಅಂತ.

ಹೀಗೆ ಹೇಳ್ತಾ ಹೋದ್ರೆ ಇವ್ರ ಪುರಾಣ ಇನ್ನೂ ತುಂಬಾ ಇದೆ. ಅದು ಬಿಟ್ಹಾಕಿ. ಈ ಮಂಡೆಕೆಟ್ ಜಾಹೀರಾತುಗಳು ಸಾಲ್ದೂ ಅಂತ ನಮ್ಮನ್ನ ಮಂಗ್ಯ ಮಾಡೋಕೇ ಇವರತ್ರ ಇರೋ ಇನ್ನೆರಡು ಅಸ್ತ್ರಗಳು..... 

ಒಂದು ಡಿಸ್ಕೌಂಟು..... ಇನ್ನೊಂದು ನೋ ಕೌಂಟು.....

ಅರೇ... ಡಿಸ್ಕೌಂಟೇನೋ ಗೊತ್ತಾಯ್ತು, ಇದೇನು ನೋ ಕೌಂಟು ಅಂದ್ರಾ????

ನೌ ಕೌಂಟ್ ಅಂದ್ರೇ.... ಇದು ಕೊಂಡರೆ ಅದು ಸಂಪೂರ್ಣ ಫ್ರೀ..... ಫ್ರೀ...... ಫ್ರೀ..... ಅಂತಾರಲ್ಲ ಅದು.

ಈ ಡಿಸ್ಕೌಂಟ್ ಅನ್ನೋದು ನಮಗೇ ತಿಳಿಯದೇ ನಮ್ಮನ್ನು ಮುಂಡಾಯ್ಸೋ ಸೂಪರ್ ವಿಧಾನ. ಇದ್ರ ಬೇಸ್ ವೆರಿ ಸಿಂಪಲ್. 1 ರೂಪಾಯಿ ಐಟಂನ 10ರೂಪಾಯಿ ಅನ್ನೋದು. ಆಮೇಲೆ ನೀವು ನಿಮ್ಮ ಚೌಕಾಸಿ ಕೌಶಲ್ಯ ಎಲ್ಲಾ ತೋರ್ಸಿ ಮುಗ್ದ ಮೇಲೆ, ಏನೋ ಪಾಪ ನಿಮ್ಗೆ ಅಂತ ಲಾಸ್ಟ್ 5ರೂಪಾಯಿಗೆ ಕೊಡ್ತೀನಿ. ಬೇಕಾದ್ರೇ ತಗೊಳ್ಳಿ ಅನ್ನೋದು.

ಆಗ ನಾವು 10 ರೂಪಾಯಿ ವಸ್ತು 5ರೂಪಾಯಿಗೆ ಬಂತು ಅಂತ ನಮ್ಮ 4ರೂಪಾಯಿ ಮುಂಡಾಮೋಚ್ತು ಅನ್ನೋ ಐಡಿಯಾನೇ‌ ಇಲ್ದೇ  ಜಂಬದ ಕೋಳಿ ಆಗೋದು.

ಇಷ್ಟೇ ಲಾಜಿಕ್. ಈ ಡಿಸ್ಕೌಂಟಿಂಗಿನ ಇನ್ನೊಂದು ಪ್ರಸಿದ್ದ ಸ್ಟ್ರಾಟೆಜಿ "ಡಿಜಿಟ್ಸ್ ಪ್ಲೇ" ಸಂಖ್ಯೆಗಳ ಆಟ. ಒಂಬತ್ತು ಅನ್ನೋದು ಡಿಸ್ಕೌಂಟರ್ ಗಳ ಹಾಟ್ ಫೇವರಿಟ್ ಅಂಕೆ. ಕೇವಲ 99, ಕೇವಲ 999, ಕೇವಲ 9999......

"ಅಯ್ಯೋ ನೋಡೇ, ಈ ಟಾಪ್ ಜಸ್ಟ್ 999 ಗೊತ್ತಾ?" 

"ಹೌದೇನೇ 999 ಅಷ್ಟೇನಾ? ಬರೀ ತ್ರೀ ಡಿಜಿಟ್ಸ್ ಅಮೌಂಟ್" ಅಂತ ಬೀಗೋ ಮುಂಚೆ ಒಮ್ಮೆ ಯೋಚ್ನೆ ಮಾಡಿ...

999+1 =1000....... ಅಂದ್ರೆ... 3 ಡಿಜಿಟ್ಸ್ + 1= 4 ಡಿಜಿಟ್ಸ್

9999+1=10000.......

ಇಟ್ಸ್ ಸಿಂಪಲ್.....

ಇನ್ನು ಒಂದು ಕೊಂಡರೆ ಒಂದು ಉಚಿತದಷ್ಟು ಮರ್ಲ್ ಸ್ಕೀಮ್ ಇನ್ನೊಂದಿಲ್ಲ ನನಗೆ. ಈಗ 'ಪುಳಿಯೋಗರೆ ಪೌಡರ್ ತಗೊಂಡ್ರೆ ಸಾಂಬಾರ್ ಪುಡಿ ಉಚಿತ, ಟೀ ಪುಡಿಯೊಂದಿಗೆ ಗ್ಲಾಸ್ ಉಚಿತ' ಅಂದ್ರೆ ಓಕೆ. ಏನೋ ಒಂದು ಲಿಂಕ್ ಸಿಗುತ್ತೆ.

ಆದ್ರೆ ಈ ಸೋಪು ತಗೊಂಡ್ರೆ ಚಮಚ ಉಚಿತ,

ಶ್ಯಾಂಪುವಿನೊಂದಿಗೆ ಪೆನ್ನು ಉಚಿತ ಅಂತ ಕೊಡ್ತಾರಲ್ಲ… ಅದೇ ನನ್ನ ತಲೆ ಕೆಡ್ಸೋದು. ಸ್ಪೂನ್ ಫ್ರೀ ಕೊಡೋಕೆ ಅದೇನು ಸೋಪಾ ಇಲ್ಲಾ ಟೊಮೇಟೋ ಸೂಪಾ??

ಶ್ಯಾಂಪೂ ಜೊತೆ ಪೆನ್ನು ಫ್ರೀಯಾಗಿ ಕೊಡೋದು ಮಾರಾಯ್ರೇ. ಮೋಸ್ಟ್ ಲೀ ಶ್ಯಾಂಪೂ ಬಳಸೋಕೆ ಶುರು ಮಾಡಿದ್ಮೇಲೆ ತಲೆಕೂದ್ಲು ಎಷ್ಟು ಸೆಂಟಿಮೀಟರ್ ಉದ್ದ ಆಗಿದೆ ಅಂತ ವಾರವಾರ ಅಳತೆ ತೆಗ್ದು ಬರೆದಿಡಿ ಅಂತಿರ್ಬಹುದೇನೋ.

ಎಷ್ಟೋ ಸಲ ಜಾಹೀರಾತು ನೋಡಿ ನಾವು ಕಳ್ದೇ ಹೋಗಿರ್ತೀವಿ. ಆದರೆ ವಾಸ್ತವವೇ ಬೇರೆ ಇರುತ್ತೆ. ನಾನು ITCಯವರ ಕ್ಲಾಸ್ಮೇಟ್ ನೋಟ್ ಬುಕ್ಕಿನ ಜಾಹೀರಾತು ನೋಡಿ ಬಹಳ ಇಂಪ್ರೆಸ್ ಆಗಿದ್ದೆ. ಆ ಪುಸ್ತಕವೂ ಹಾಗೇ. ಚೆಂದದ ಹೊರ ರಟ್ಟು, ಓಪನ್ ಮಾಡಿದೊಡನೇ ಒಳಬದಿಯಲ್ಲಿ 'ಡು ಯು ನೋ' ಅನ್ನೋ ಮಾಹಿತಿಯುಕ್ತ ವಿಚಾರಗಳು, ಕೊನೆಯ ಪೇಜಿನ ಪದಬಂಧ ಎಲ್ಲಾ ನನ್ನನ್ನು ಮಂತ್ರಮುಗ್ಧಳನ್ನಾಗಿಸಿತ್ತು. ಯಾವಾಗಲೂ ಅದೇ ಪುಸ್ತಕ ಬೇಕಿತ್ತು ನನಗೆ. ಒಮ್ಮೆ ಉಗ್ರಕುತೂಹಲದಿಂದ ITC  ಅಂತ ಗೂಗಲ್ ಮಾಡಿದೆ. ITC ವಿಸ್ತೃತ ರೂಪ ನೋಡಿ ನನ್ನ ಕಣ್ಣನ್ನು ನನಗೇ ನಂಬೋಕಾಗ್ಲಿಲ್ಲ…. ITC ಮುಂಚೆ ಇಂಪೀರಿಯಲ್ ಟೊಬ್ಯಾಕೋ ಕಂಪನಿ ಆಗಿದಿದ್ದು ಈಗ ಇಂಡಿಯನ್ ಟೊಬ್ಯಾಕೋ ಕಂಪನಿ ಆಗಿದೆ ಅಂತಿತ್ತು. ಏಷ್ಯಾದ 81% ಬೀಡಿ, ಸಿಗರೇಟ್ ಮಾರಾಟಗಾರರು ಇವರೇ. ಗೋಲ್ಡ್ ಫ್ಲೇಕ್ಸ್ ಸಿಗರೇಟು ಬ್ರಾಂಡ್ ಇವರದ್ದೇ ಅಂತ ಆಗ ಗೊತ್ತಾಯ್ತು ನನಗೆ. ಆಶೀರ್ವಾದ್, ಸನ್ ಫೀಸ್ಟ್, ಬಿಂಗೋ, ಯಿಪ್ಪೀ, ಫಿಯಾಮಾ, ವಿವೆಲ್, ಸ್ಯಾವ್ಲಾನ್ ಎಲ್ಲಾ ಇವ್ರದ್ದೇ ಅಂತ ಅವತ್ತೇ ಗೊತ್ತಾಗಿದ್ದು.

ವಿಮಲ್ ಅಡ್ವರ್ಟೈಸ್ಮೆಂಟ್ ನೋಡಿದ್ರೆ ಅದು ಪಾನ್ ಮಸಾಲನೋ ಇಲ್ಲಾ ಕೇಸರಿ ಪ್ಯಾಕೇಟ್ಟೋ ಅನ್ನೋ ಅನುಮಾನ ಬರೋದು ಸಹಜವೇ. 'ಬಸುರಿ ಹೆಣ್ಣಿಗೆ ಹಾಲಿಗೆ ಒಂದು ಪ್ಯಾಕ್ ವಿಮಲ್ ಬೆರೆಸಿ ಕೊಡಿ. ಕೇಸರಿಯಂತ ಪಾನ್ ಪರಿಮಳದ ಮಗು ಪಡೆಯಿರಿ' ಅನ್ನೋದೊಂದು ಬಾಕಿ ಇದೆ. ಈ ವಾಷಿಂಗ್ ಪೌಡರ್ ಗಳ ಅವತಾರವೋ ದೇವರಿಗೆ ಪ್ರೀತಿ. ಪೋರಪೋ ಅಂತೆ, ಗುಲೆಗುಲೆ ಅಂತೆ ಎಲ್ಲಾ ನೋಡಿ ನಾವು ಕುಲೆಕುಲೆ(ಪ್ರೇತ) ಆಗ್ದಿದ್ರೆ ಸಾಕು.

ತಮಾಷೆಯನ್ನು ಒತ್ತಟ್ಟಿಗಿಟ್ಟು ನೋಡಿದ್ರೂ ಈ ಜಾಹೀರಾತು ಎಂಬ ಮಾಯಾಜಾಲದ ಮಹಿಮೆಯೇ ಅಪಾರ. ಇದು ಇಲ್ಲದ್ದನ್ನು ಇದೆ ಎಂದು ಭ್ರಾಂತಿಗೊಳಿಸುವ‌ ಇಂದ್ರಜಾಲ. ಈ ಇಂದ್ರಜಾಲ ಬೇಡಬೇಡವೆಂದರೂ ನಮ್ಮನ್ನು ಸೆಳೆದು ನಮ್ಮ ದೈನಂದಿನ ವಸ್ತುಗಳ ಆಯ್ಕೆಯಲ್ಲಿ ತನ್ನಿರುವನ್ನು ಸ್ಪಷ್ಟಪಡಿಸುತ್ತದೆ.

ಬೇಡಬೇಡವೆಂದರೂ ಹುಚ್ಚುಚ್ಚು ಜಾಹೀರಾತುಗಳ ಮೂಲಕ ನಮ್ಮನ್ನು ಹಾಳ್ಮಾಡಿದ್ದು ಸಾಲ್ದು ಅಂತ ನನ್ನ ಪ್ರತಿಜ್ಞೆ ಯಕ್ಕುಟ್ಸಿ ನನ್ನ ಮಗಳ ಬಾಯಲ್ಲಿ ನನ್ನ ಈಜಿಪ್ಟಿಯನ್ ಮಮ್ಮಿ ಮಾಡಿದ ಇವರನ್ನೇನ್ರೀ ಮಾಡೋಣ?????

ಅಗೋ ಮತ್ತೆ ಬಂತು ನನ್ನ ಜಾನ್ಸನ್ ಬೇಬಿ….

'ಮಮ್ಮಿsss'....... ಅಂದ್ಕೊಂಡು.

ಥೋ….. ಮೊದ್ಲು ಇವಳ ಮಮ್ಮಿ ವೈರಸ್ ಗೆ ಮದ್ದು ಮಾಡ್ಬೇಕು. ನಾ ಹೊಂಟೆ.

ಹೋಗೋಕೂ ಮುನ್ನ.....

ನೀವೇ ಹೇಳಿ.....

ಇವರನ್ನೇನ್ರೀ ಮಾಡೋಣ???


ಅರ್ಪಣೆ: ಸಂತೂರ್ ಮಮ್ಮಿಗೆ