ಸೋಮವಾರ, ಜೂನ್ 29, 2020

ಅನೂಹ್ಯ 36

ಘಳಿಗೆಗೊಮ್ಮೆ ಬಾಗಿಲಿನತ್ತ ನೋಟ ಹರಿಸುತ್ತಿದ್ದ ನವ್ಯಾಳ ಮನ ಪ್ರಕ್ಷುಬ್ಧಗೊಂಡಿತ್ತು. ಹೇಳಲಾರದ ಭಾವನೆಗಳ ಮೇಲಾಟ ಮನಸ್ಸನ್ನು ಘಾಸಿಗೊಳಿಸಿತ್ತು. ಸತ್ಯನಾರಾಯಣ ದಂಪತಿಗಳು ಯಾತ್ರೆಗೆಂದು ಮನೆ ಬಿಟ್ಟ ದಿನದಿಂದ ಆರಂಭವಾಗಿದ್ದ ದುಃಸ್ವಪ್ನಗಳ ನಿರಂತರ ಹಾವಳಿ ಅವಳನ್ನು ಕಂಗೆಡಿಸಿತ್ತು. ಅವಳು ತನ್ನ ಸ್ಥೈರ್ಯವನ್ನು ಕಳೆದುಕೊಂಡಿದ್ದಳು. ಮೇಲ್ನೋಟಕ್ಕೆ ಎಲ್ಲರೊಂದಿಗೆ ನಗುತ್ತಾ ಮಾತನಾಡಿಕೊಂಡಿದ್ದರೂ ಮನಸ್ಸು ಮುದುರಿ ಮುದ್ದೆಯಾಗಿತ್ತು. ಜೀವನ ಪ್ರೀತಿ ಕ್ಷೀಣಿಸತೊಡಗಿತ್ತು.

ತಿಂಡಿ ತಯಾರಿಸುತ್ತಲೇ ಗಡಿಯಾರದತ್ತ ನೋಡಿದಳು. ಒಂಬತ್ತು ನಲ್ವತ್ತು ತೋರಿಸುತ್ತಿತ್ತು. ಸತ್ಯನಾರಾಯಣ, ಮಂಗಳಾರನ್ನು ಕರೆತರಲು ಹೋಗಿದ್ದ ಕಾರ್ತಿಕ್. ಅವರ ನಿರೀಕ್ಷೆಯಲ್ಲೇ ಪದೇ ಪದೇ ಬಾಗಿಲಿನತ್ತ ಹೊರಳುತ್ತಿದ್ದವು ಅವಳ ಕಂಗಳು. ಇಂದು ಮಧ್ಯಾಹ್ನ ಸಮನ್ವಿತಾಳನ್ನು ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರು ಮೀರಾ. ಅವಳು ಬರುವುದರೊಳಗೆ ಮನೆಯನ್ನೊಮ್ಮೆ ಓರಣಗೊಳಿಸಬೇಕಿತ್ತು. ಎರಡು ದಿನದಿಂದ‌ ಕಾರ್ತಿಕ್ ಒಬ್ಬನೇ ಮನೆಯಲ್ಲಿ ಇದ್ದುದರಿಂದ ಮನೆಯೆಲ್ಲಾ ಕಿತ್ತು ಹರಡಿ ರಾಡಿ.

ಹಾಗಾಗಿಯೇ ನಸುಕಿನ ಜಾವವೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದಳು. ಕಿಶೋರ್ ಡಿಸ್ಚಾರ್ಜ್ ಪ್ರೊಸೀಜರ್ ಮುಗಿಸಿ ಸಮಾಳನ್ನು ಕರೆತರಲು ಅಲ್ಲೇ ಉಳಿದಿದ್ದ. ಮನೆಯ ಅವತಾರ ಸರಿಮಾಡಲು ಮೂರು ತಾಸು ಹಿಡಿದಿತ್ತು. ಆ ನಂತರ ಸ್ನಾನ ಮುಗಿಸಿ ಬಂದವಳು ಕಾರ್ತಿಕ್ ನನ್ನು ರೈಲ್ವೇ ಸ್ಟೇಷನ್ ಗೆ ಕಳುಹಿಸಿ, ಗಡಿಬಿಡಿಯಲ್ಲಿ ಉಪ್ಪಿಟ್ಟು ತಯಾರಿಸತೊಡಗಿದ್ದಳು. ಆದರೂ ಒಡಲೊಳಗೆಲ್ಲಾ ತಳಮಳ. ಮಂಗಳಾರ ಮುಖ ನೋಡುವವರೆಗೂ ಸಮಾಧಾನವಿಲ್ಲ ಅವಳಿಗೆ.

ಉಪ್ಪಿಟ್ಟು ತಯಾರಾದರೂ ಅವರು ಬರುವ ಲಕ್ಷಣಗಳು ಕಾಣದಾದಾಗ, ರೈಲು ತಡವಾಗಿರಬಹುದೆಂದುಕೊಂಡು ಹಾಲಿನ ಎದುರಿನ ಕೋಣೆಯನ್ನು ಸಮನ್ವಿತಾಳಿಗಾಗಿ ಸಿದ್ಧಪಡಿಸತೊಡಗಿದಳು. ಇವಳ ಕೆಲಸ ಮುಗಿಯುವುದಕ್ಕೂ ಮನೆ ಮುಂದೆ ಆಟೋ ನಿಲ್ಲುವುದಕ್ಕೂ ಸರಿಯಾಯಿತು.

ಓಡಿ ಬಾಗಿಲಿಗೆ ಬಂದಳಾದರೂ ಅಲ್ಲಿಂದ ಮುನ್ನಡೆಯಲಾರೆವೆಂದು ಕಾಲುಗಳು ಮುಷ್ಕರ ಹೂಡಿದವು. 'ಕನಸಿನಲ್ಲಿ ನಡೆದಂತೆ ಅಮ್ಮ ನನ್ನ ಬೈದು ಹೊರಗಟ್ಟಿದರೇ?' ಅದನ್ನು ಎಣಿಸಿಯೇ ಅವಳ ನಾಲಿಗೆಯ ಪಸೆ ಆರಿತು. ಆಸರೆಗೆ ಬಾಗಿಲಿಗೆ ಒರಗಿ ನಿಂತಳು. ಆಟೋದಿಂದ ಇಳಿದ ಸತ್ಯನಾರಾಯಣ ಮಂಗಳಾ ಗೇಟು ತೆರೆದುಕೊಂಡು ಒಳಬಂದರೆ ಕಾರ್ತಿಕ್ ಅವರ ಹಿಂದೆ ಲಗೇಜ್ ಹೊತ್ತು ತಂದ.

ಬಾಗಿಲಿಗೆ ಒರಗಿ ನಿಂತ ಸೊಸೆಯ ಅವಸ್ಥೆ ಕಂಡು ಮಂಗಳಾ ಗಾಬರಿಯಾದರು. ಬಹಳ ಇಳಿದು ಹೋಗಿದ್ದವಳ ಕಂಗಳು ಆಳಕ್ಕಿಳಿದು ಕಾಂತಿ ಹೀನವಾಗಿದ್ದವು.

"ನವ್ಯಾ, ಯಾಕೆ ಹೀಗಾಗಿದ್ದೀ? ಮೈಯಲ್ಲಿ ಹುಷಾರಿಲ್ವೇನು?" ಅವಳ ಹಣೆ ಮುಟ್ಟಿ ಜ್ವರವಿದೆಯೇನೋ ಎಂದು ಪರೀಕ್ಷಿಸುತ್ತಾ ಕೇಳಿದರು.

ಅವರ ಮಾತಿನಲ್ಲೇ ಅದೇ ಅಕ್ಕರೆ, ಮಮತೆ ಧ್ವನಿಸಿದಾಗ ಹೋದ ಉಸಿರು ಬಂದಂತಾಯಿತು. ಅಷ್ಟು ದಿನಗಳ ಮೇಲೆ ಅವರನ್ನು ಕಂಡ ಖುಷಿ, ತನ್ನ ಕನಸು ಸುಳ್ಳಾದ ನಿರಾಳತೆ, ಇಷ್ಟು ದಿನದ ವೇದನೆ ಎಲ್ಲವೂ ಒಟ್ಟಾಗಿ ದುಃಖ ಒತ್ತರಿಸಿ ಕಣ್ಣೀರು ತಾನೇ ತಾನಾಗಿ ಹರಿಯತೊಡಗಿತು.

ಆದರೆ ಅವರು ಗ್ರಹಿಸಿದ್ದೇ ಬೇರೆ....... 'ಸಮನ್ವಿತಾ ಆಸ್ಪತ್ರೆಗೆ ದಾಖಲಾಗಿದ್ದು ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ' ಎಂದುಕೊಂಡವರು,

"ಅಯ್ಯೋ ಹುಚ್ಚುಡುಗಿ, ಏನೂ ಆಗಿಲ್ಲ ಸಮನ್ವಿತಾಳಿಗೆ. ಯಾಕಿಷ್ಟು ಗಾಬರಿ? ಈಗ ಹೇಗೂ ನಾನು ಬಂದಾಯ್ತಲ್ಲ. ಅವಳು ಸಂಜೆ ಮನೆಗೆ ಬರ್ಲಿ. ಒಂದು ವಾರ ರಜೆ ಹಾಕಿಸಿ ಬಿಡೋಣ. ಎಲ್ಲಾ ಸರಿ ಹೋಗುತ್ತೆ. ಅದಕ್ಯಾಕೆ ಅಳು? ನಾನೂ ಇಲ್ದೇ ಆಸ್ಪತ್ರೆ, ಮನೆ ಎರಡೂ ಸಂಭಾಳಿಸೋದು ಕಷ್ಟ ಆಯ್ತಾ? ಕಿಶೋರ ಸಹಾಯ ಮಾಡಿದ್ದಾನು. ಇವ್ನು ನಿನ್ನ ಕೆಲಸ ಇನ್ನೂ ಜಾಸ್ತಿ ಮಾಡಿದ್ನೇನೋ ಅಲ್ವೇನೋ" ಮಗನೆಡೆಗೆ ಆಕ್ಷೇಪಣೆಯ ನೋಟ ಹರಿಸಿದರು.

"ಸಾರಿ ಅತ್ಗೇ. ಮನೆನೆಲ್ಲಾ ಹರಡಿ ರಂಪ ಮಾಡಿಟ್ಟಿದ್ದೆ. ನೀವು ಮೊದ್ಲೇ ಸುಸ್ತಾಗಿದ್ರಿ. ಕ್ಲೀನ್ ಮಾಡೋಕೆ ನಿಮ್ಗೆ ಸಾಕಾಯ್ತೇನೋ? ಪ್ಲೀಸ್ ಅಳ್ಬೇಡಿ" ಮುಖ ಚಿಕ್ಕದು ಮಾಡಿ ಹೇಳಿದ.

ಆದರೆ‌ ತನ್ನ ತಲ್ಲಣಗಳೇ ಬೇರೆ ಎಂದು ಹೇಗೆ ವಿವರಿಸಿ ಹೇಳಿಯಾಳು? ಸುಮ್ಮನೆ ಕಣ್ಣೊರೆಸಿಕೊಂಡು ಪೆಚ್ಚಾಗಿ ನಕ್ಕಳಷ್ಟೇ. ಭಾವನೆಗಳ ಮೇಲೆ ಹಿಡಿತ ಸಾಧಿಸಿ, ತನ್ನನ್ನು ತಾನು ನಿಯಂತ್ರಿಸಿಕೊಂಡವಳು, "ನೀನ್ಯಾಕೋ ಮುಖ ಸಣ್ಣ ಮಾಡ್ತೀಯಾ? ಸಮಾ ಪರಿಸ್ಥಿತಿ ನೆನಸ್ಕೊಂಡು ಬೇಜಾರಾಯ್ತಷ್ಟೇ. ಛೇ, ನನ್ನ ಬುದ್ಧಿಗಿಷ್ಟು….. ಬಾಗಿಲಲ್ಲೇ ನಿಂತ್ಕೊಂಡಿದ್ದೀರಲ್ಲ. ಒಳಗೆ ಬನ್ನಿ" ಎಂದವಳು ಕಾರ್ತಿಕ್ ಕೈಯಿಂದ ಬ್ಯಾಗ್ ತೆಗೆದುಕೊಂಡಳು.

ಒಳಬಂದವರಿಗೆ ಕುಡಿಯಲು ನೀರು ಕೊಟ್ಟು, "ನೀವಿಬ್ರೂ ಸ್ನಾನ ಮಾಡಿ ಬನ್ನಿ. ತಿಂಡಿ ರೆಡಿ ಇದೆ. ತಿಂದು ಸ್ವಲ್ಪ ರೆಸ್ಟ್ ಮಾಡಿ. ದೂರದ ಪ್ರಯಾಣ. ಸುಸ್ತಾಗಿರುತ್ತೆ. ಸಂಜೆ ಅಷ್ಟೊತ್ತಿಗೆ ಸಮಾ ಬರ್ತಾಳೆ" ಎಂದಳು.

ಸತ್ಯನಾರಾಯಣ, ಮಂಗಳಾ ಕೋಣೆಯತ್ತ ನಡೆದಾಗ, ಇವಳು ಅಡುಗೆ ಮನೆಯತ್ತ ಹೊರಟಳು. ಮಧ್ಯಾಹ್ನದ ಅಡುಗೆ ತಯಾರಿ ಮುಗಿಸಿ, ಲಗೇಜ್ ಬ್ಯಾಗನ್ನು ತೆರೆದು ಪ್ರಸಾದವನ್ನು ದೇವರು ಕೋಣೆಯಲ್ಲಿಟ್ಟು, ಬಟ್ಟೆಗಳನ್ನು ಒಗೆಯಲು ಹಾಕತೊಡಗಿದಳು. ಹಿಂದೆ ಯಾರೋ ನಿಂತಂತೆ ಭಾಸವಾಗಿ ತಟ್ಟನೆ ತಿರುಗಿದಳು.

"ಏನಾಯ್ತು ಕಾರ್ತಿಕ್?" ಅಚ್ಚರಿಯಿಂದ ಕೇಳಿದಳು.

"ಕೊಡಿ ಅತ್ಗೇ, ನಾನು ಬ್ಯಾಗ್ ಖಾಲಿ ಮಾಡಿ ಬಟ್ಟೆಗಳನ್ನು ವಾಶಿಂಗ್ ಮೆಷಿನಿಗೆ ಹಾಕ್ತೀನಿ" ಎಂದವನನ್ನು ನೋಡಿ ನಕ್ಕಳು. 

"ಎಲ್ಲಾ ಆಯ್ತು. ಇನ್ನು ಪೌಡರ್ ಹಾಕಿ ಮಿಷನ್ ರನ್ ಮಾಡ್ಬೇಕಷ್ಟೇ. ಸ್ವಲ್ಪ ಹೊತ್ತಿಗೆ ಮುಂಚೆ ಕರೆಂಟ್ ಹೋಯ್ತು. ಬಂದ್ಮೇಲೆ ಹಾಕ್ತೀನಿ. ಇದೆಲ್ಲಾ ನಿನ್ನ ಕೈಲಾಗೋ ಕೆಲ್ಸ ಅಲ್ಲ. ತಿಂಡಿ ಹಾಕ್ಕೊಡ್ತೀನಿ, ತಿನ್ನುವೆಯಂತೆ ಬಾ" ಅಡುಗೆ ಕೋಣೆಯತ್ತ ಹೊರಟವಳನ್ನು ಹಿಂಬಾಲಿಸಿದ.

"ಸಾರಿ ಅತ್ಗೇ… ಮನೆ ಕ್ಲೀನ್ ಮಾಡೋಷ್ಟರಲ್ಲಿ ಸುಸ್ತಾಯ್ತಲ್ವಾ ನಿಮ್ಗೆ? ನಾನು ಎರಡೂ ದಿನ ಗುಡ್ಸಿದ್ದೆ. ಆದ್ರೂ ಇಷ್ಟೊಂದು ಕಸ ಎಲ್ಲಿಂದ ಬಂತು ಅಂತಾನೇ ಗೊತ್ತಾಗ್ತಿಲ್ಲ" ಚಿಂತಿತ ವದನನಾಗಿ ಅಮಾಯಕನಂತೆ ಹೇಳಿದ.

"ಆಹಾಹಾ….. ಗುಡ್ಸಿದ್ಯಾ? ನೀನಾ? ಮುಖ ನೋಡು ಗುಡ್ಸೋನ್ದು. ಗುಡ್ಸೋದೆಲ್ಲಾ ಬಿಡು, ಎಕ್ಸಾಮ್ ಇದೆ ಓದ್ಕೋ ಅಂದ್ರೆ ಅದನ್ನೂ ಮಾಡಿಲ್ಲ ನೀನು. ಆ ಪಬ್ ಜಿ ಆಡ್ಕೊಂಡು ಕೂತಿದ್ದೇ ಅಂತ ಗೊತ್ತು ನನ್ಗೆ. ಈ ಓವರ್ ಆಕ್ಟಿಂಗ್ ಎಲ್ಲಾ ಬೇಡ‌. ನಾನು ಆಸ್ಪತ್ರೆಗೆ ಹೋದಲ್ಲಿಂದ ಈ ನೆಲ ಹಿಡಿ ಮುಖನೇ ನೋಡಿಲ್ಲ" ಅವನ ಕಿವಿ ಹಿಂಡಿ ಹೇಳಿದಳು..

"ಅಯ್ಯೋ ಅತ್ಗೇ ಕಿವಿ ಬಿಡಿ ಪ್ಲೀಸ್" ಅವಳ ಕೈಯಿಂದ ಕಿವಿ ಬಿಡಿಸಿಕೊಂಡವನು, "ಪ್ಲೀಸ್ ಅತ್ಗೇ, ನೀವು ಆಸ್ಪತ್ರೆಯಲ್ಲಿ ಇದ್ದ ಎರಡೂ ದಿನ ನಾನು ಮನೇನ ನೀಟಾಗಿ ಗುಡ್ಸಿ, ಒರೆಸಿ ತಳತಳ‌ ಹೊಳೆಸಿದ್ದೆ ಅಂತ ಅಪ್ಪ ಅಮ್ಮನತ್ರ ಹೇಳಿ ಪ್ಲೀಸ್. ಇಲ್ಲಾಂದ್ರೆ ನಂಗೆ ಸಹಸ್ತ್ರನಾಮಾರ್ಚನೆ ಗ್ಯಾರಂಟಿ. ಅದಲ್ಲದೇ ಮಂಗು ಡಾರ್ಲಿಂಗ್ ಕಿಂಡಲ್ ಬೇರೆ ಮಾಡ್ತಾಳೆ. ಅಕ್ಕಪಕ್ಕದವರತ್ರ ಎಲ್ಲಾ ಹೇಳ್ಕೊಂಡು ಬಂದು ನನ್ನ ಇಮೇಜ್ ಖರಾಬ್ ಮಾಡ್ತಾಳೆ" ಒಂದೇ ವರಾತ ಶುರುಹಚ್ಚಿದ. ಅವನ ಕಾಟ ತಡೆಯಲಾರದೆ "ತಥಾಸ್ತು" ಎಂದಳು. ಅಷ್ಟಾದ ಮೇಲೂ ಅವಳ ಹಿಂದೆ ಹಿಂದೆಯೇ ಸುತ್ತತೊಡಗಿದಾಗ, "ಇನ್ನೇನು?" ಕೇಳಿದಳು. 

"ಅದೂ.......ಮತ್ತೇ......... ನಾನು...... ನಾನು..."

"ಏನು ನೀನು ಓದೋದ್ ಬಿಟ್ಟು ಪಬ್ ಜಿ ಆಡ್ತಿದ್ದೆ ಅನ್ನೋದ್ನೂ ಹೇಳ್ಬಾರ್ದಾ? ಅದೆಲ್ಲಾ ಆಗೋಲ್ಲ. ಗುಡ್ಸೋದು, ಒರ್ರ್ಸೋದೆಲ್ಲಾ ಮಾಡಿಲ್ಲ ಓಕೆ. ಆದ್ರೆ ಎರಡು ದಿನದಲ್ಲಿ ಎಕ್ಸಾಮ್ ಇಟ್ಕೊಂಡು ಹೀಗ್ಮಾಡ್ತಾರಾ ಯಾರಾದ್ರೂ? ಇದ್ನ ನಿಮ್ಮಣ್ಣನಿಗೇ ಹೇಳೋದು, ನಿನ್ಗೆ ಅವ್ರೇ ಸರಿ" ಎಂದದ್ದೇ ಅವಳ ಕಾಲು ಹಿಡಿದ.

"ಅತ್ಗೇ ಹಾಗೊಂದು ಮಾಡ್ಬೇಡಿ, ಅಣ್ಣನಿಗೆ ಹೇಳ್ಬೇಡಿ.‌....." ಎನ್ನುವಷ್ಟರಲ್ಲಿ ಮಂಗಳಮ್ಮ ಅಡುಗೆ ಮನೆಯ ಬಾಗಿಲಲ್ಲಿದ್ದರು.

"ನೀನೇನೋ ಯಾವತ್ತೂ ಇಲ್ಲದ್ದು ಅಡ್ಗೆಮನೆಲೀ ಪ್ರತ್ಯಕ್ಷ ಆಗಿದ್ದು. ಅವಳಿಗೇನು ಛೊರೆ ನಿಂದು? ಸತ್ಯ ಹೇಳು ಏನ್ಮಾಡಿದ್ದೀ ಇಲ್ಲಿ?" ಕೇಳಿದರು.

"ಏನೂ ಇಲ್ವೇ ಮಂಗೂ ಡಾರ್ಲಿಂಗ್, ಅತ್ಗೇಗೆ ತಿಂಡಿ ಹಾಕೋಕೆ ಹೆಲ್ಪ್ ಮಾಡ್ತಿದ್ದೆ" ಎಂದು ಉಪ್ಪಿಟ್ಟಿನ ಪ್ಲೇಟು ತೋರಿಸಿ ನೈಸಾಗಿ ಪ್ಲೇಟ್ ಚೇಂಜ್ ಮಾಡಿದವನನ್ನು ನೋಡಿ 'ಕಲಾವಿದ' ಎಂದುಕೊಂಡು ಮನದಲ್ಲೇ ನಕ್ಕಳು ನವ್ಯಾ. 

ತಡವಾಗಿದ್ದರಿಂದ ಎಲ್ಲರೂ ಒಟ್ಟಿಗೆ ತಿಂಡಿಗೆ ಕುಳಿತರು. 

"ಸಮನ್ವಿತಾ ಎಷ್ಟೊತ್ತಿಗೆ ಬರ್ತಾಳೆ? ಯಾರು ಕಿಶೋರ ಕರ್ಕೊಂಡು ಬರ್ತಾನಾ?" ಕೇಳಿದರು ಸತ್ಯನಾರಾಯಣ.

"ಮಧ್ಯಾಹ್ನ ಡಿಸ್ಚಾರ್ಜ್ ಅಂದ್ರು. ಪ್ರೊಸೀಜರ್ ಎಲ್ಲಾ ಮುಗಿದು ಬರೋವಾಗ ಸಂಜೆ ನಾಲ್ಕು ಗಂಟೆ ಆಗ್ಬಹುದು ಅಪ್ಪಾಜಿ" ಎಂದಳು.

"ಅವ್ನು ನಾಲ್ಕು ಅಂದಿದ್ದಾನೆ ಅಂದ್ರೆ ಬಹುಶಃ ಬರುವಾಗ ಐದು ಗಂಟೆ ಕಳೀಬಹ್ದು. ಬೇಗ ಅಡುಗೆ ಮಾಡಿ, ಮಧ್ಯಾಹ್ನದ ಊಟ ಕಾರ್ತಿಕ್ ಕೈಯಲ್ಲಿ ಕಳ್ಸೋಣ" ಮಂಗಳಮ್ಮ ಹೇಳಿದರು.

"ಅದೇನೂ ಬೇಡಮ್ಮಾ. ಮೃದುಲಾ ಅಮ್ಮ ಊಟ ತರ್ತೀನಿ ಅಂದಿದ್ದಾರೆ. ಅವ್ರೇ ಡಿಸ್ಚಾರ್ಜ್ ಆದ್ಮೇಲೆ ಅವಳನ್ನು ಇಲ್ಲಿ ಬಿಟ್ಟು ಹೋಗ್ತಾರೆ" ಎಂದವಳು, ರಾವ್ ಅವರ ಮದುವೆ ಪ್ರಪೋಸಲ್ ಇಂದ ಹಿಡಿದು ಎಲ್ಲವನ್ನೂ ಸಂಕ್ಷಿಪ್ತವಾಗಿ ಹೇಳಿದಳು. ಮಂಗಳಾರಿಗೆ ಕೆಲದಿನಗಳ ಹಿಂದೆಯೇ ಫೋನಿನಲ್ಲಿ ಅಭಿರಾಮ್ ಬಗ್ಗೆ ಹೇಳಿದ್ದಳು ನವ್ಯಾ. 'ಅವನು ನಮ್ಮ ಸಮಾಗೆ ಒಳ್ಳೆ ಜೋಡಿ ಅನ್ನಿಸ್ತಾನೆ' ಎಂದಿದ್ದಳು. ಈಗ ಎಲ್ಲಾ ವಿಷಯ ಕೇಳಿ ರಾವ್ ದಂಪತಿಗಳ ಬಗ್ಗೆ ಅಸಹ್ಯವೆನಿಸಿದರೂ, ಶರ್ಮಾ ಪರಿವಾರದ ಬಗ್ಗೆ ಕೇಳಿ ಸಮಾಧಾನವಾಯಿತು. 

"ಹೇಗೋ ಆ ಮಗುವಿಗೆ ಇನ್ನಾದ್ರು ಒಳ್ಳೇದಾದ್ರೆ ಅಷ್ಟೇ ಸಾಕು. ಚಿನ್ನದಂತಹ ಹುಡುಗಿ. ಪುಣ್ಯ ಮಾಡಿರ್ಬೇಕು ಅಂತಹ ಮಗಳನ್ನು ಪಡೆಯೋಕೆ. ಆದ್ರೇನು ಮಾಡೋದು, ಬಂಗಾರವೇ ದೊಡ್ಡದು ಅಂದುಕೊಂಡವನಿಗೆ ವಜ್ರದ ಮೌಲ್ಯ ತಿಳಿಯುವುದಿಲ್ಲ. ಹಾಗೆ ಹಣವೇ ಶ್ರೇಷ್ಠ ಅನ್ನುವ ಮನುಷ್ಯರಿಗೆ ಸಂಬಂಧಗಳು ಕಾಲಕಸವಾಗುತ್ತೆ" ಬೇಸರಿಸಿ ನುಡಿದರು ಮಂಗಳಮ್ಮ.

"ನಿಜವೇ... ಹಣದ ಹುಚ್ಚು ಏರಿದರೆ ಕರುಳ ಸಂಬಂಧವೂ ವ್ಯವಹಾರವಾಗುತ್ತದೆ. ಆದರೆ ಅನ್ಯಾಯ ಮಾಡಿ ನೆಮ್ಮದಿಯಿಂದ ಬದುಕಿದವರು ಯಾರಿಲ್ಲ. ಪಾಂಡವರು ದ್ರೌಪದಿಯನ್ನು ದ್ಯೂತದಲ್ಲಿ ಪಣಕ್ಕಿಟ್ಟು ಸೋಲುವಂತೆ ಜಾಲ ಹೆಣೆದು ಯಶಸ್ವಿಯಾದೆವೆಂದು ಬೀಗಿದ್ದೇ ಕೌರವರ ಹನನಕ್ಕೆ ನಿಮಿತ್ತವಾಯಿತಲ್ಲವೇ? ತಪ್ಪು ಮಾಡಿ ಸಿಕ್ಕಿಕೊಳ್ಳದೇ ಬಚಾವಾದೆವೆಂದು ಬೀಗುವುದು ಕ್ಷಣಿಕವಾದ ಭ್ರಮೆಯಷ್ಟೇ. ತಪ್ಪುಮಾಡಿದವನಿಗೆ ಶಿಕ್ಷೆ ‌ಖಚಿತ. ಅನ್ಯಾಯದ ಹಣದ ಮದದಲ್ಲಿ ಮೆರೆಯುತ್ತಾ ಬೀಗುವವರ ಕಾಲ ಕೆಳಗಿನ ಭೂಮಿ ಅವರಿಂದ ನೊಂದವರ ಕಣ್ಣೀರ ಶಾಪದಲ್ಲಿ ಮಿಂದಿರುತ್ತದೆ. ಆ ದಗ್ಧ ಭುವಿಯೇ ಅವರನ್ನು ಒಂದಲ್ಲಾ ಒಂದು ದಿನ ಆಪೋಶನ ತೆಗೆದುಕೊಳ್ಳುತ್ತದೆ" ವಿಶ್ಲೇಷಿಸಿ ನುಡಿದರು ಸತ್ಯನಾರಾಯಣ. 

'ಹಾಗಾದರೆ ನನ್ನಂತಹ ಸಾವಿರಾರು ಹೆಣ್ಣುಗಳನ್ನು  ವೇಶ್ಯಾವಾಟಿಕೆಯ ನರಕಕ್ಕೆ ತಳ್ಳುವುದನ್ನೇ ನಿರಂತರ ವೃತ್ತಿಯಾಗಿಸಿಕೊಂಡಿರುವ ತಲೆಹಿಡುಕ ದಲ್ಲಾಳಿಗಳು, ತಾನೂ ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ಆಕ್ರಂದನಕ್ಕೆ ಕಿವುಡಾಗುವ, ಸಾವಿರಾರು ಹೆಣ್ಣುಗಳ ದೇಹವನ್ನು ವಿಕ್ರಯಿಸಿ ಹಣ ಸಂಪಾದಿಸುವ ಕೋಠಿಗಳ ಮಾಲಕಿಯರು, ಹೆಣ್ಣು ಇರುವುದೇ ಹಾಸಿಗೆಯಲ್ಲಿ ಸುಖಿಸಲು ಎಂದುಕೊಳ್ಳುವ ಗಿರಾಕಿಗಳು...... ಇವರೆಲ್ಲರಿಗೂ ಯಾಕೆ ಕಠಿಣವಾದ ಶಿಕ್ಷೆಯಾಗುವುದಿಲ್ಲ? ವೇಶ್ಯೆಯೆಂದರೆ ಸಮಾಜಕ್ಕಂಟಿದ ವೃಣ ಎಂಬಂತೆ ಕಾಣುವ ಜನರ ನಡುವೆ, ನನ್ನ ಮನದೊಳಗಿನ ಹತಾಶೆಯೆಂಬ ರೋಗಕ್ಕೆ ಚಿಕಿತ್ಸೆ ನೀಡಿ, ಕಗ್ಗತ್ತಲಕೂಪದಿಂದ ಉಷೆಯೆಡೆಗೆ ಕೈ ಹಿಡಿದು ನೆಡೆಸಿದಾಕೆ ಸಮನ್ವಿತಾ. ಅಂತಹವಳಿಗೆ ಏಕಿಷ್ಟು ಕಠೋರವಾದ ಶಿಕ್ಷೆ?' ಸತ್ಯನಾರಾಯಣರ ಮಾತುಗಳ ಬಗ್ಗೆಯೇ ತೀವ್ರವಾಗಿ ಯೋಚಿಸತೊಡಗಿದಳು ನವ್ಯಾ.

ಅವಳ ಅನ್ಯಮನಸ್ಕತೆಯನ್ನು ಮೊದಲು ಗಮನಿಸಿದ್ದು ಕಾರ್ತಿಕ್. "ಯಾಕತ್ಗೆ? ಏನಾಯ್ತು?" ಅವಳ ಗಮನ ಸೆಳೆಯುತ್ತಾ ಕೇಳಿದ.

"ಏನಿಲ್ಲ. ಅಪ್ಪಾಜಿ ಹೇಳಿದ್ರ ಬಗ್ಗೆ ಯೋಚಿಸುತ್ತಿದ್ದೆ" ಎಂದಳು.

"ನೋಡು ಮಂಗು ಡಾರ್ಲಿಂಗ್, ಇಷ್ಟು ದಿನ ನಿನ್ನ ಕಾಟ ಇಲ್ದೇ ಮನೆ, ಮನಸ್ಸು ಶಾಂತವಾಗಿತ್ತು. ಈಗ ನೀನು ಘಟವಾಣಿ ಕಾಲಿಟ್ಟೆ. ಮನೆಯ ನೆಮ್ಮದಿ, ಶಾಂತಿ ಎಲ್ಲಾ ಮಂಗಳಯಾನಕ್ಕೆ ಹೋಯ್ತು. ಅದಿಕ್ಕೆ ಅತ್ತಿಗೆ ನೀನು ಬಂದ್ಕೂಡ್ಲೇ ಅತ್ತಿದ್ದು. ಈಗ ನಿನ್ನ ಜೊತೆ ಹೇಗಪ್ಪಾ ಏಗೋದು ಅಂತ‌ ಯೋಚ್ನೆ ಆಗಿದೆ ಅವರಿಗೆ. ನಾನು, ಅಣ್ಣ ಎಷ್ಟು ಚೆನ್ನಾಗಿ ನೋಡ್ಕೊಂಡಿದ್ವಿ ಅವ್ರನ್ನ. ಈ ಕಡೆ ಕಡ್ಡಿ ಎತ್ತಿ ಆ ಕಡೆ ಇಡೋಕೆ ಬಿಡ್ತಿರ್ಲಿಲ್ಲ ಗೊತ್ತಾ" ಹೆವಿ ಚಮಕ್ ಕೊಟ್ಟು, ಉಪ್ಪಿಟ್ಟು ಬಾಯಿಗೆ ಬಿಸಾಡುತ್ತಾ ಹೇಳಿದ ಕಾರ್ತಿಕ್.

ಅವನ ಮಾತು ಕೇಳಿ ತಿಂದಿದ್ದು ನೆತ್ತಿಗೇರಿ ಕೆಮ್ಮತೊಡಗಿದಳು. ಅವಳ ನೆತ್ತಿತಟ್ಟಿ ಕುಡಿಯಲು ನೀರು ಕೊಟ್ಟವರು, "ಇವಳ ನೆತ್ತಿಹತ್ತಿದ್ದು ನೋಡಿಯೇ ಗೊತ್ತಾಯ್ತು ನೀನು ಅದೆಷ್ಟು ಸೇವೆ ಮಾಡಿದ್ಯಾ ಅಂತ. ಏನು ನವ್ಯಾ, ಆಸ್ಪತ್ರೆಗೆ ಹೋದಲ್ಲಿಂದ ಇವ್ನು ಮನೆಯಲ್ಲಿ ಸಂಗ್ರಹಿಸಿದ್ದ ಕಸ ಎಲ್ಲಾ ಇವತ್ತು ಬೆಳಿಗ್ಗೆ ನೀನು ಕ್ಲೀನ್ ಮಾಡಿದ್ಯಾ? ಅದಕ್ಕೆ ಈ ರೀತಿ ಅವಸ್ಥೆ ಆಗಿರೋದು ನಿಂದು. ಮತ್ತೆ ಮಾತಾಡೋದು ನೋಡ್ಬೇಕು ದೊಡ್ಡ ಮನುಷ್ಯನ ತರ" ಮಂಗಳಾ ಅರ್ಚನೆಗೆ ಆರಂಭಿಸಿದಾಗ, ಸುಮ್ನಿರಲಾರ್ದೇ ಇರುವೆ ಬಿಟ್ಕೊಂಡಗಾಯ್ತು ಕಾರ್ತಿಕ್ ಪರಿಸ್ಥಿತಿ.  ಅತ್ತಿಗೆಯೆಡೆಗೆ ಕಳ್ಳ ನೋಟ ಹರಿಸಿದ ಏನೂ ಹೇಳಬೇಡಿ ಎಂಬ ಮನವಿಯೊಂದಿಗೆ.

"ಮತ್ತೇನ್ ಇವ್ನು ಕಸ ಗುಡ್ಸಿರ್ತಾನೆ ಅಂದ್ಕೊಂಡ್ಯಾ ನೀನು? ಇವ್ನು ಕಸ ಗುಡ್ಡೆ ಹಾಕಿ ಅದ್ರ ಮೇಲೇ ಮಲಗ್ತಾನಷ್ಟೇ..... ಗುಡಿಸಿ ಸಾರ್ಸೋದೆಲ್ಲಾ ದೂರದ ಮಾತು" ಸತ್ಯನಾರಾಯಣರೂ ಹೆಂಡತಿಯ ಮಾತನ್ನು ಅನುಮೋದಿಸಿದರು.

"ನಿಮ್ಗೆಲ್ಲಾ ನನ್ನ ನೋಡಿ ಸ್ಟಮಕ್ ಬರ್ನ್. ಅದಕ್ಕೆ ನನ್ನಂತಹ ದೇವ್ರಂಥಾ ಮನುಷ್ಯನ ಮೇಲೆ ಇಲ್ಲ ಸಲ್ಲದ ಆರೋಪ ಹೊರಸ್ತಾ ಇದ್ದೀರಾ. ನೀವು ತೀರ್ಥಯಾತ್ರೆಗೆ ಹೋಗ್ಬಂದಿದ್ದು ವೇಸ್ಟು….." ನಿವಾಳಿಸಿದ.

"ಹೂಂ ದೇವ್ರಂಥಾ ಮನುಷ್ಯ ನಾಯಿಯಂತಾ ಬುದ್ಧಿ. ಆಗ್ಲೇ ಅಡ್ಗೆ ಮನೇಲೀ ನಿನ್ನತ್ತಿಗೆ ಹತ್ರ ಪೂಸಿ ಹೊಡೀತಿದ್ದಿದ್ದು ನಂಗೊತ್ತಾಗ್ಲಿಲ್ಲ ಅಂದ್ಕೊಂಡ್ಯಾ?" ಸರಿಯಾಗಿ ಕೇಳಿದರು ಮಂಗಳಾ.

"ಥೋ... ಅದನ್ನೂ ಕದ್ದು ಕೇಳ್ಸಿಕೊಂಡ್ಯಾ? ಮಂಗೂ, ನೀನು ಸಾಮಾನ್ಯದವಳಲ್ಲ. ನಿನ್ನ ಟ್ಯಾಲೆಂಟಿಗೆ ಭೂಮಿಯ ತೀರ್ಥಯಾತ್ರೆ ಸಾಕಾಗಲ್ಲ. ನಿನ್ನ ನಾಸಾಕ್ಕೆ ಕಳಿಸಿ ಮಿಶನ್ ಶನಿಯಾನ ಮಾಡ್ಸೋಣ. ಹೇಗೂ ಆ ಶನಿ ಸೀರೀಯಲ್ ನಿನ್ನ ಲೈಫ್ ಟೈ ಫೇವರೇಟ್ ಅಲ್ವಾ? ದಿನಕ್ಕೆ ಎರಡು ಸಲ ಟಿ.ವಿ ಲೀ, ಇನ್ನೊಂದ್ ಸಲ ವೂಟ್ ಅಲ್ಲಿ ನೋಡಿ ಸಂಜ್ಞಾ ದೇವಿ, ದೇವೇಂದ್ರನಿಗೆ ಬಾಯಿಗ್  ಬಂದ್ಹಾಗೆ ಬೈತಾ ಇರ್ತೀಯಲ್ಲ. ಶನಿ ಗ್ರಹಕ್ಕೇ ಹೋಗಿ ಡೈರೆಕ್ಟಾಗಿ ಅವ್ರನ್ನು ಮೀಟ್ ಆಗಿ ಮಕ್ಮಕಕ್ಕೆ ಉಗ್ದು ಬಾ" ಅವನ ಸಲಹೆ ಕೇಳಿ ಮಾವ, ಸೊಸೆ ಜೋರಾಗಿ ನಕ್ಕರೆ, ಮಂಗಳಾ ಅವನಿಗೆ ಒಂದೇಟು ಹಾಕಿದರು.

"ಹೌದೋ, ನಾನು ನೋಡ್ತೀನಿ. ಏನಾಯ್ತು ಈಗ. ನೀನೇನು ಕಮ್ಮಿ... ಅದ್ಯಾವುದೋ ಫೈಟಿಂಗ್ ಅಂತೆ, ಜಾನ್ಸನ್ ಅಂತೆ....  ಮುಖ, ಮೂತಿ ನೋಡದೇ ಕುರ್ಚಿ, ಟೇಬಲ್ ಎಲ್ಲಾ ಎತ್ತಿ ಹೊಡಿತಾ ಇದ್ರೆ, 'ಇನ್ನೂ ಹೊಡಿ, ಹಾಗೆ ಹೊಡಿ, ಹೀಗೆ ಹೊಡಿ' ಅಂತ ಕೂಗಾಡ್ತಾ ಇರೋಲ್ವಾ ನೀನು?"

"ಮಂಗೂ ಅದು ಡಬ್ಲ್ಯೂ ಡಬ್ಲ್ಯೂ ಎಫ್ ಅಂತ, ಮತ್ತವನು ಜಾನ್ಸನ್ ಅಲ್ಲ ಜಾನ್ ಸೀನಾ…. ಮೈ ಫೇವರಿಟ್. ಅದನ್ನು ನೋಡಿಲ್ಲಾ ಅಂದ್ರೆ ನಿನ್ನಂತಾ ಮಾರಿ ಅಮ್ಮನಿಂದ ತಪ್ಪಿಸ್ಕೊಳ್ಳೋದು ಹೇಗೆ? ಅಲ್ಲಿಂದನೇ ನಿನ್ನ ಜೊತೆ ಏಗೋಕೆ ಎನರ್ಜಿ ಬರೋದು ನಂಗೆ" ಎಂದವನು ಇನ್ನೂ ಇಲ್ಲೇ ಇದ್ದರೆ ಸಮಸ್ಯೆ ತಪ್ಪಿದಲ್ಲವೆಂದು, "ನಾನು ಓದ್ಕೋಬೇಕು" ಎಂದು ಎದ್ದು ರೂಮಿಗೋಡಿದ.

"ಏನ್ ಓದೋದೋ ಏನ್ ಕಥೆನೋ, ಈಗ ರೂಮಲ್ಲಿ ಕಿವಿಗೊಂದು ವೈರು ಸಿಕ್ಕಿಸಿ ಕುತ್ಕೋತಾನಷ್ಟೇ" ಗೊಣಗಿದರು ಮಂಗಳಾ.

"ಓದ್ಕೊತಾನೆ ಬಿಡಿ ಅಮ್ಮ. ಈಗೇನು ಕೆಲ್ಸ ಇಲ್ಲ. ಅಡುಗೆ ಆಗಿದೆ. ನೀವು, ಅಪ್ಪಾಜಿ ಸ್ವಲ್ಪ ವಿಶ್ರಾಂತಿ ತಗೊಳ್ಳಿ" ತೊಳೆಯುವ ಪಾತ್ರೆಗಳನ್ನು ಅಡುಗೆ ಮನೆಗೆ ಒಯ್ದಳು. ಮಂಗಳಾರಿಗೂ ಆಯಾಸದ ಸುಸ್ತಿಗೆ ಕಣ್ಣೆಳೆಯುತ್ತಿತ್ತು.

"ಅಷ್ಟು ಬೇಗ ಅಡುಗೇನೂ ಮಾಡಿ ಮುಗ್ಸಿದ್ಯಾ? ಹೇಳಿದ್ದು ಕೇಳೋಲ್ಲ ನೀನು. ಸರಿ, ನೀನೂ ತುಂಬಾ ಸುಸ್ತಾಗಿದ್ದಿ. ಮಲಕ್ಕೋ ಹೋಗು" ಎಂದವರು ಕೋಣೆಗೆ ನಡೆದರು. ಪಾತ್ರೆಗಳನ್ನು ತೊಳೆದು ಬಂದವಳಿಗೆ ಸುಸ್ತಾಗಿತ್ತಾದರೂ ಮಲಗಲು ಮನಸ್ಸಾಗದೇ ಹಾಲಿನ ದಿವಾನ್ ಮೇಲೆ ಕಾಲುಚಾಚಿ ಪತ್ರಿಕೆ ತಿರುವತೊಡಗಿದಳು ನವ್ಯಾ... 

              **************************

ಆ ಸಂಜೆ ಎಂದಿಗಿಂತಲೂ ಹೆಚ್ಚು ಚೇತೋಹಾರಿಯಾಗಿತ್ತು ಸತ್ಯನಾರಾಯಣರ ಮನೆಯಲ್ಲಿ. ನಗು, ಮಾತು, ಹರಟೆ ಯಾವುದೇ ಅಡೆತಡೆಯಿಲ್ಲದೇ ಅವ್ಯಾಹತವಾಗಿ ಸಾಗಿತ್ತು.

ಡಿಸ್ಚಾರ್ಜಿಂಗ್ ಸಮಯದಲ್ಲಿ ಕೊಟ್ಟ ಇಂಜೆಕ್ಷನ್ ಪ್ರಭಾವದಿಂದಾಗಿ ಸಮನ್ವಿತಾ ಮನೆಗೆ ಬಂದೊಡನೇ ಮಲಗಿಬಿಟ್ಟಿದ್ದಳು. ಆಕೃತಿ ಮತ್ತು ಮೃದುಲಾರಿಗೆ ಅವಳನ್ನು ತಮ್ಮ ಮನೆಗೇ ಕರೆದೊಯ್ಯುವ ಆಸೆ ಇತ್ತಾದರೂ ಅಭಿಯೇ ಅವಳಿಗೆ ಮುಜುಗರವಾಗಬಹುದೆಂದು ಬೇಡವೆಂದಿದ್ದ. ಹಾಗಾಗಿ ಅವಳನ್ನು ಇಲ್ಲಿಗೆ ಬಿಡಲು ಅವರೆಲ್ಲರೂ ಬಂದಿದ್ದರು.

ಅಡುಗೆ ಮನೆಯಲ್ಲಿ ಮಂಗಳಾ, ನವ್ಯಾರೊಂದಿಗೆ ಮೃದುಲಾ ಕೂಡಾ ಸೇರಿದ್ದರಿಂದ ಅಡುಗೆಯೊಂದಿಗೆ ಹೆಂಗೆಳೆಯರ ಮಾತುಗಳಿಗೇನೂ ಕೊರತೆ ಇರಲಿಲ್ಲ. ಇತ್ತ ಹಜಾರದಲ್ಲಿ ಗಂಡೈಕಳ ದುಂಡು ಮೇಜಿನ ಪರಿಷತ್ತಿನಲ್ಲಿ ವಿಚಾರ ವಿಮರ್ಶೆ, ವಿಶ್ಲೇಷಣೆಗಳು ಸಾಗಿದ್ದವು. ಪಾಕಶಾಲೆ ಬೋರು ಎಂದು ಆಕೃತಿಯೂ ಸಧ್ಯ ಕಿಶೋರ್, ಸತ್ಯನಾರಾಯಣ, ಕಾರ್ತಿಕ್, ಅಪ್ಪ, ಅಣ್ಣನೊಂದಿಗೆ ಹಜಾರವಾಸಿ ಆಗಿದ್ದಳು. ಇವರೆಲ್ಲರ ನಡುವೆ ಹ್ಯಾಪ್ ಮೋರೆಗೆ ಹ್ಯಾಟ್ ಹಾಕ್ಕೊಂಡು ಅನ್ ಹ್ಯಾಪಿಯಾಗಿ ಕುಳಿತ್ತಿದ್ದ ಶೆರ್ಲಾಕ್ ಹೋಮ್ಸ್ ಕೂಡಾ ಇದ್ದರು.

ಇವನ್ಯಾಕಪ್ಪ ಇಲ್ಲಿಗೆ ಬಂದ? ಹೇಗೆ ಬಂದ? ಅಂತ ಯೋಚನೆ ಮಾಡ್ತಿದ್ದೀರಾ? ಅದೇನಾಯ್ತು ಅಂದ್ರೆ ಚೈ ಡಾರ್ಲಿಂಗ್ ಸಮನ್ವಿತಾಳನ್ನು ನೋಡೋಕೆ ಆಸ್ಪತ್ರೆಗೆ ಬರ್ತಾಳೆ ಅಂತ ಖುಷಿಯಲ್ಲಿ ಬೆಳಿಗ್ಗೆ ಎದ್ದು, ಮೆನ್ಸ್ ಪಾರ್ಲರ್ ಗೆ ಹೋಗಿ ಇದ್ದಬದ್ದ ಸೌಂದರ್ಯ ಸಾಧನಗಳನ್ನೆಲ್ಲಾ ಬಳಸಿ ಗೋಧಿ ಬಣ್ಣದ ವದನಾರವಿಂದವನ್ನು ಬೆಳ್ಳಕ್ಕಿ ಬಿಳಿಯಾಗಿಸಿ, ಅಲಂಕಾರವೆಲ್ಲಾ ಮುಗಿಸಿ ಸೂಟು, ಬೂಟು, ಹ್ಯಾಟು, ಗ್ಲೌಸು, ಟೈ ತೊಟ್ಟು ಸಿಗಾರ್ ಹಿಡಿದು ಇವನು ಆಸ್ಪತ್ರೆಗೆ ಬರುವುದರೊಳಗಾಗಿ ಚೈ ಡಾರ್ಲಿಂಗ್ ಬೈ ಹೇಳಿ ಹೊರಟೇಹೋಗಿದ್ದಳು. ಅದೇ ಫೀಲಿಂಗಲ್ಲಿ ವಾಪಾಸು ಹೊರಟ್ಟಿದ್ದವನನ್ನು ಕಿಶೋರ್ ಹಠ ಹಿಡಿದು ಮನೆಗೆ ಕರೆತಂದಿದ್ದ. 

ಇತ್ತ ಹಜಾರದಲ್ಲಿ "ಹೆಂಡತಿಯ ಗುಲಾಮನಾಗುವ ತನಕ" ಎಂಬ ವಿಷಯದ ಬಗ್ಗೆ ಸೂರು ಕಿತ್ತು ಹೋಗುವಷ್ಟು ಜೋರಿನಲ್ಲಿ ಬಿಸಿಬಿಸಿ ಚರ್ಚೆಯಾದರೆ, ಅತ್ತ ಅಡುಗೆ ಕೋಣೆಯಲ್ಲಿ "ಗಂಡನ ದಾಸ್ಯದಿಂದ ಮುಕ್ತರಾಗುವ ತನಕ" ಎಂಬ ವಿಚಾರದ ವಿಶ್ಲೇಷಣೆ ಗ್ಯಾಸಿನ ಮೇಲಿದ್ದ ಸಾರಿಗಿಂತ ಬಿರುಸಾಗಿ ಕುದಿಯುತ್ತಿತ್ತು. ಎರಡೂ ಕಡೆ ನಡೆಯುತ್ತಿದ್ದದ್ದು ಚರ್ಚೆಯೇ ಆದರೂ ಪಾಕಶಾಲೆಯ ಚರ್ಚೆ ಹದವಾದ ಪಾಕದಂತೆ ಅಚ್ಚುಕಟ್ಟಾಗಿದ್ದರೆ, ಹಜಾರದ ಚರ್ಚೆಯ ಕಥೆ ಕೆಸರಿನ ಹೊಂಡದಲ್ಲಿ ಬಿದ್ದ ಕೋಣದಂತಾಗಿತ್ತೆನ್ನಿ. 

ಹಜಾರದ ಚರ್ಚೆಗೆ ವಿಪರೀತ ಕಾವೇರಿ, ಎಲ್ಲಾ ಗಣ್ಮಕ್ಕಳ ಸ್ವರಗಳೂ ತಾರಕಕ್ಕೇರಿದ್ದವು. ಕಾರಣ...... ಇವರ ನಡುವಿದ್ದ ಗುಂಪಿಗೆ ಸೇರದ ಪದ.... ಆಕೃತಿ! ಇವರು ಹೇಳಿದ್ದಕ್ಕೆಲ್ಲಾ ಅವಳದು ಒಂದೇ ವಿರೋಧ. ಎಷ್ಟಾದರೂ ಅವಳು ಪಾಕಶಾಲೆಯ ಸದಸ್ಯೆಯಲ್ಲವೇ. ಇವಳ 'ಐ ಅಬ್ಜೆಕ್ಟ್' ಹರತಾಳ ನೋಡಿ ನಮ್ಮ ಗಂಡುಗಲಿ ಹುಲಿ ಸಿಂಹಗಳಿಗೆ ತಲೆಬೇನೆ ಆರಂಭವಾಯಿತು. ನೋಡುವಷ್ಟು ನೋಡಿದ ಅಭಿರಾಮ್ ಇನ್ನು ಸಾಧ್ಯವಿಲ್ಲವೆಂಬಂತೆ,

"ಮಿಸ್ ಆಕೃತಿ ಶರ್ಮಾ, ಅಡ್ಗೆ ಮನೆಗೆ ಹಾಳಾಗ್ ಹೋಗೋಕೆ ಏನ್ ರೋಗ ನಿಂಗೆ?" ಕೇಳೇಬಿಟ್ಟ.

"ನಾನು ಹೋಗಲ್ಲ ಕಣೋ. ನಿನ್ಗೆ ತಾನೇ ಪ್ರಾಬ್ಲಮ್ ಆಗಿರೋದು? ನೀನೇ ಹೋಗು. ಆದ್ರೆ ಹೋಗೋಕೆ ಮುಂಚೆ ನನ್ನ ಪಾಯಿಂಟ್ಸ್ ಗೆ ಉತ್ತರ ಕೊಡೋಕಾಗ್ದೇ ಸೋತು, ಶಸ್ತ್ರತ್ಯಾಗ ಮಾಡಿ, ಯುದ್ಧರಂಗದಲ್ಲಿ ಹೇಡಿಯಂತೆ ಬೆನ್ನುತೋರಿಸಿ ಓಡ್ತಿದ್ದೀಯಾ ಅಂತ ಒಪ್ಪಿಕೊಂಡು ಹೋಗೋ ಉತ್ತರಕುಮಾರ….." 

"ಏನ್ ದೊಡ್ಡ ಪಾಯಿಂಟ್ ಪರಿಮಳ ಇವ್ಳು. ಯುದ್ಧರಂಗ ಅಂತೆ, ಶಸ್ತ್ರತ್ಯಾಗ ಅಂತೆ... ನನ್ನೇ ಉತ್ತರಕುಮಾರ ಅಂತಾಳೆ ಗೋಸುಂಬೆ, ಹಿಡಿಂಬೆ, ಶೂರ್ಪನಖಿ.... ಹೀಗೇ ಆಡ್ತಿದ್ರೆ ಮೂಗು ಕಟ್ ಮಾಡಿ ಜೇಬಿಗೆ ಹಾಕ್ಕೋತೀನಿ ನೋಡ್ತಿರು."

"ಲೊಟ್ಟೆ, ನೀನು ಅಷ್ಟು ಮಾಡೋವರೆಗೆ ನಾನೇನು ಕಡ್ಲೇಪುರಿ ತಿಂತಾ ಕೂತಿರ್ತೀನಿ ನೋಡು. ನನ್ನ ಸುದ್ದಿಗೆ ಬಂದ್ರೆ ಚೆನ್ನಾಗಿರೋಲ್ಲ"

"ಅಯ್ಯಯ್ಯೋ, ಹೆದ್ರಿಕೆ ಆಗ್ತಿದೆ ನಂಗೆ. ಕಾಪಾಡ್ರಪ್ಪೋ.....!!  ಹೋಗೆಲೇ ಚಂಬಲ್ ರಾಣಿ ಪೂಲನ್ ದೇವಿ, ಇಷ್ಟಕ್ಕೂ ನೀನು ಅಡ್ಗೆ ಮನೆಗೆ ಹೋಗದೇ ಇರೋದಲ್ಲ. ಅವ್ರೇ ನಿನ್ನ ಅಲ್ಲಿಂದ ಹೊರಗಟ್ಟಿರೋದು. ನೀನು ಒಳಗಿದ್ರೆ ಒಂದೋ ಅವರು ಮಾಡಿದ ಭಕ್ಷ್ಯ ಭೋಜನಗಳನ್ನೆಲ್ಲಾ ಎಮ್ಮೆ ಹಿಂಡಿ ಬೂಸಾ ತಿಂದ್ಹಾಗೆ ಮೇಯ್ದು ನಮ್ಮನ್ನೆಲ್ಲಾ ಉಪವಾಸ ಸಾಯೋಹಾಗೆ ಮಾಡ್ತೀಯಾ ಇಲ್ಲಾ ನಮ್ಮ ದುರಾದೃಷ್ಟಕ್ಕೆ ದೇವ್ರು ನಿಂಗೆ ಅಡುಗೆ ಮಾಡೋ ದುರ್ಬುದ್ಧಿ ಕೊಟ್ಟು ನೀನು ಮಾಡಿದ 'ಇವದೋಪೂ' ತಿಂದ್ರಂತೂ ನಾವು ಬದುಕೋ ಚಾನ್ಸೇ ಇಲ್ಲ. ಹಾಗಾಗಿ ಜೀವಭಯದಿಂದ ಲೇಡೀಸ್ ಯೂನಿಯನ್ ನಿನ್ನ ಅಡಿಗೆಮನೆಯಿಂದ ಬಾಯ್ಕಾಟ್ ಮಾಡಿದ್ದಾರೆ. ಅದಕ್ಕೆ ಇಷ್ಟೆಲ್ಲಾ ಚಮಕ್ ಬೇರೆ ಕೇಡು."

"ಅಣ್ಣಾ......‌" ಕೋಪದಿಂದ ಕನಲಿ ಎದ್ದವಳನ್ನು ನೋಡಿದ್ದೇ ಹೌಹಾರಿ ಸೋಫಾದಿಂದ ಛಂಗನೆ ನೆಗೆದ ವೈ.

"ಅಯ್ಯಮ್ಮಾ ತಾಯಿ, ದಯವಿಟ್ಟು ಸುಮ್ನಿರಮ್ಮ ಕಾಲಿಗೆ ಬೀಳ್ತೀನಿ. ನೀವಿಬ್ಬರೂ ಬಾಯಿಗೆ ಬಂದ್ಹಾಗೆ ಮಾತಾಡ್ಕೊಳ್ಳೋ ತಪ್ಪಿಗೆ ಬಲಿ ಕಾ ಬಕರಾ ಆಗಿ ಹಲಾಲ್ ಆಗೋದು ಮಾತ್ರ ನಾನೇ. ಲೋ ಬೀರ್, ಆಗ್ಲೇ ನಿಮ್ಮಿಬ್ರ ಜಗಳದ ದೆಸೆಯಿಂದ ಜಗ್ಗಲ್ಲಿ ಪೂಜೆ ಆಗಿ ನನ್ನ ಫೇಸ್ಕಟ್ಟು ಅರ್ಧ ಸ್ಕ್ರಾಪ್ ಆಗಿದೆ. ಈಗ ನೀನವ್ಳನ್ನ ಚಂಬಲ್ ರಾಣಿ ಅಂದು ಅವ್ಳು ನನ್ಗೆ ಚೊಂಬಲ್ ಹೊಡೆದ್ರೇ ನಾನು ಗುಜುರಿ ಅಂಗಡಿ ಪಾಲಾಗ್ಬೇಕಾಗುತ್ತಷ್ಟೇ..... ಆ ತರದ ಪ್ಲಾನ್ ಏನಾದ್ರೂ ಇದ್ರೆ ಮುಂಚೆನೇ ಹೇಳ್ಬಿಡು. ನಾನು ಇಲ್ಲಿಂದ ಜೂಟ್ ಆಗ್ತೀನಿ. ಆಮೇಲೆ ನೀವಿಬ್ರೂ ಕತ್ತಿವರಸೆ ಮಾಡ್ಕೊಂಡು ಸಾಯ್ರೀ" ಎಂದ.

ಈ ವಿಷಯದ ಬಗ್ಗೆ ಹೊಸ ಚರ್ಚೆಗಳು ಆರಂಭವಾಗುವುದರೊಳಗೆ ಪಾಕಶಾಲಾ ತಜ್ಞರು "ಊಟ ತಯಾರಿದೆ" ಎಂದು ಕದನವಿರಾಮ ಘೋಷಿಸಿದರು. ಅಲ್ಲಿಗೆ ಚರ್ಚೆಗಳೆಲ್ಲಾ ಗುಂಡಿಗೆ ಬಿದ್ದು ಉದರಪೂಜೆಗೆ ತೊಡಗಿದರು ಎಲ್ಲರೂ.

ಊಟ ಮುಗಿಸಿ ವೈಭವನೊಂದಿಗೆ ಶರ್ಮಾ ಪರಿವಾರ ಮನೆಗೆ ವಾಪಾಸು ಹೊರಟಾಗಲೂ ಸಮನ್ವಿತಾಳಿಗೆ ಮಂಪರಿನಿಂದ ಎಚ್ಚರವಾಗಿರಲಿಲ್ಲ. ಅವಳ ಬಗ್ಗೆ ಚಿಂತಿಸುವುದು ಬೇಡವೆಂದು ಭರವಸೆ ನೀಡಿ ಕಳಿಸಿಕೊಟ್ಟರು ಮಂಗಳಾ, ನವ್ಯಾ.

"ನೀವು ಇರುವಾಗ ನಮಗೆಂತಾ ಯೋಚನೆ‌. ಇಲ್ಲಿದ್ರೆ ನಮ್ಮನೆಯಲ್ಲೇ ಇದ್ದಹಾಗೆ. ಆಗಾಗ ನಾವೂ ಬರ್ತಾ ಇರ್ತೀವಿ" ಎಂದಿದ್ದರು ಮೃದುಲಾ.

"ಅಣ್ಣ ಅಂತೂ ಆಗಾಗ ಅಲ್ಲ, ದಿನಾ ಮೂರು ಹೊತ್ತೂ ಹಾಜರಿ ಹಾಕೇ ಹಾಕ್ತಾನೆ" ಛೇಡಿಸಿದ್ದಳು ಆಕೃತಿ.

"ಅಯ್ಯೋ, ನಮ್ಮ ಡಾಕ್ಟ್ರನ್ನ ನೋಡೋಕೆ ನಾವು ಬಂದೇ ಬರ್ತೀವಪ್ಪಾ. ಅದು ನಮ್ಮ ಜನ್ಮಸಿದ್ಧ ಹಕ್ಕು. ನಿನಗ್ಯಾಕೆ ಹೊಟ್ಟೆಉರಿ...." ದಬಾಯಿಸಿ ಬಾಯಿ ಮುಚ್ಚಿಸಿದ್ದ.

ಸತ್ಯನಾರಾಯಣ ಹಾಗೂ ಮಂಗಳಾರಿಗೂ ಶರ್ಮಾರ ಸರಳತೆ, ಸಜ್ಜನಿಕೆ, ಸೋಗಿಲ್ಲದ ನೇರ ನಡವಳಿಕೆ ಬಹಳವಾಗಿ ಹಿಡಿಸಿತು. ಅಭಿರಾಮ್ ಸಮನ್ವಿತಾಳಿಗೆ ತಕ್ಕ ಜೋಡಿ ಎಂದು ಅವರೂ ಅಂದುಕೊಂಡರು. 

                 *********************

ಕಾರಿನಲ್ಲಿ ವೈಭವ್ ಮತ್ತು ಆಕೃತಿಯ ಜುಗಲ್ ಬಂದಿ ತಾರಕಕ್ಕೇರಿತ್ತು. ಅವರಿಬ್ಬರ ದಯೆಯಿಂದ ನಗೆಯ ಕಡಲಲ್ಲಿ ತೇಲುತ್ತಿದ್ದರು ಸಚ್ಚಿದಾನಂದ ಮತ್ತು ಮೃದುಲಾ. ಆದರೆ ಡ್ರೈವ್ ಮಾಡುತ್ತಿದ್ದ ಅಭಿರಾಮ್ ಮಾತ್ರ ಗಂಭೀರವಾಗಿ ಯೋಚಿಸುತ್ತಿದ್ದ. 

"ಅಭಿ ಏನು ಅಷ್ಟೊಂದು ಗಹನವಾಗಿ ಯೋಚನೆ ಮಾಡ್ತಿದ್ದೀಯಾ?" ಬಹಳ ಹೊತ್ತಿನಿಂದ ಗಂಭೀರವಾಗಿದ್ದ ಮಗನನ್ನು ಕಂಡು ಸಚ್ಚಿದಾನಂದ್ ಕೇಳಿದಾಗ ಉಳಿದ ಮೂವರೂ ತಮ್ಮ ಹಾಸ್ಯಲಹರಿಯಿಂದ ಹೊರಬಂದು ಅವನತ್ತ ನೋಟ ಹರಿಸಿದರು.

"ರಾವ್ ಅವರ ಬಗ್ಗೆ ಡ್ಯಾಡ್. ಒಮ್ಮೆ ಅವರನ್ನು ಭೇಟಿಯಾಗಿ ಮುಖಕ್ಕೆ ಉಗಿದು ಬರ್ಲಾ ಇಲ್ಲಾ ಅವ್ರ ಬಿಸ್ನೆಸ್ ಎಲ್ಲಾ ಮುಳುಗಿಸೋದಾ ಅಂತ ಯೋಚಿಸ್ತಾ ಇದ್ದೆ. ಹೇಗೂ ಕುತ್ತಿಗೆ ತನಕ ಮುಳುಗಿದ್ದಾರೇ......"  ಹೇಳಿದ.

"ಅದರ ಅಗತ್ಯವೇ ಇಲ್ಲ ಅಭಿ. ಈಗ ಅವನ ಹಣಕಾಸಿನ ಹಾಗೂ ವ್ಯವಹಾರಿಕ ಸ್ಥಿತಿ ನೆಲಕ್ಕಚ್ಚಿದೆ. ಸಾಲಗಾರರು ಕುತ್ತಿಗೆ ಮೇಲಿದ್ದಾರೆ. ಅವ್ನ ಈ ಸ್ಥಿತಿ ಎಲ್ಲರಿಗೂ ತಿಳಿದಿದೆ. ಹಾಗಾಗಿ ಯಾರಾದ್ರೂ ಸಾಲ ಕೊಡ್ತಾರೆ ಅನ್ನೋದು ಕನಸಿನ ಮಾತು. ಸಧ್ಯದಲ್ಲೇ ಸಾಲಗಾರರು ಅವನ ಅಸೆಟ್ಸ್ ಎಲ್ಲಾ ಸೀಜ಼್ ಮಾಡ್ತಾರೆ ಅಂತಾನೂ ಸುದ್ದಿ ಇದೆ. ಸೋ ಯಾವ ಕ್ಷಣದಲ್ಲಾದ್ರೂ ಅವನು ದಿವಾಳಿಯಾಗಬಹುದು. ನಾವೇನೂ ಮಾಡೋದೇ ಬೇಡ. ಅವನ ಕರ್ಮಗಳೇ ಅವನನ್ನು ಮುಳುಗಿಸುತ್ತೆ ಬಿಡು" ಎಲ್ಲಾ ನಿಟ್ಟಿನಿಂದ ಯೋಚಿಸಿ ನುಡಿದಿದ್ದರು ಸಚ್ಚಿದಾನಂದ್.

ಸರಿ ಎಂದು ತಲೆ ಆಡಿಸಿದರೂ, "ಬಟ್ ಸ್ಟಿಲ್ ಆ ಮನುಷ್ಯನ್ನ ಒಂದು ಸಾರಿ ನೇರಾನೇರ ಭೇಟಿ ಮಾಡಿ ಮಾತಾಡದ ಹೊರತು ನನಗೆ ಸಮಾಧಾನ ಇಲ್ಲ ಡ್ಯಾಡ್. ಅವ್ರಿಂದಾಗಿ ಎಷ್ಟೆಲ್ಲಾ ಸಮಸ್ಯೆಗಳಾಯ್ತು. ಕಡೆಗೆ ಸಮನ್ವಿತಾ ಎಲ್ಲಾ ಮನಸ್ಸಿಗೆ ಹಚ್ಚಿಕೊಂಡು ಆಸ್ಪತ್ರೆ ಸೇರಿದ್ರೆ ಅಲ್ಲಿಗೂ ಬಂದು ತನ್ನ ಬೇಳೆಕಾಳು ಬೇಯಿಸ್ಕೊಳ್ಳೋಕೆ ನೋಡಿದ್ದಾರಲ್ಲ. ಅವ್ರತ್ರ ಒಂದೆರಡು ಮಾತಾಡ್ಬೇಕು" ಎಂದ.  

ಇದನ್ನೇ ನೆಪವಾಗಿಟ್ಟುಕೊಂಡು ಅಣ್ಣನ ಕಾಲೆಳೆಯಲಾರಂಭಿಸಿದಳು ಆಕೃತಿ.

"ಯಾರೋ ಒಬ್ರು ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದ್ನೇಕಾಯಿ ಹಾಗೇ ಹೀಗೆ ಅಂತ ಪ್ರವಚನ ಕೊಡ್ತಿದ್ರು. ಈಗ ನೋಡಿದ್ರೆ ಫ್ಯೂಚರಲ್ಲಿ ಅಮ್ಮಾವ್ರ ಗಂಡ ಆಗೋ ಎಲ್ಲಾ ಲಕ್ಷಣಗಳೂ ಕಾಣಿಸ್ತಾ ಇದೆ. ಇನ್ನೂ ಮದ್ವೇನೇ ಆಗಿಲ್ಲ. ಈಗ್ಲೇ ಭಾವಿ ಪತ್ನಿ ಬಗ್ಗೆ ಏನು ಕಾಳಜಿ.  ಸಚ್ಚಿದಾನಂದ ಸ್ವಾಮಿಗಳೇ ನಿಮ್ಮ ಮಗ ಹೆಂಡತಿ ಸೇವೆ ಮಾಡೋದ್ರಲ್ಲಿ ನಿಮ್ಮನ್ನೂ ಮೀರಿಸ್ತಾನೆ ನೋಡ್ತಿರಿ" ಕಿಚಾಯಿಸಿದಳು.

"ಅಬ್ಬಬ್ಬಾ, ಬಂದ್ಬಿಟ್ಲು ಸುಪ್ನಾತಿ ಸುಬ್ಬಿ. ನಾನು ಮದ್ವೆಗೆ ಓಕೆ ಅನ್ನೋಕೆ ಮುಂಚೆನೇ ನನ್ನ ಅತ್ತಿಗೆ, ನನ್ನ ಸೊಸೆ ಅಂತ ಓಡಾಡ್ತಿದ್ದೋರು ಯಾರೋ? ಮೂರೂ ಜನ ಅವಳ ಪಕ್ಷ ವಹಿಸ್ಕೊಂಡು ನನ್ನನ್ನೇ ಕ್ಯಾರೇ ಅಂತಿರ್ಲಿಲ್ಲ. ಈಗ ಬಂದ್ಬಿಟ್ಲು ನಂದೆಲ್ಲಿಡ್ಲೀ ನಂದಗೋಪಾಲ ಅಂತ...." ಅವನೂ ಬಿಡಲಿಲ್ಲ.

"ಅರ್ಥ ಆಯ್ತೇನೇ ಸುಪ್ನಾತಿ ಸುಬ್ಬಮ್ಮ" ಅಭಿಯ ಮಾತುಗಳಿಂದ ಪ್ರೇರೇಪಿತಗೊಂಡು ನಾಲಿಗೆ ಚಾಚಿ ಅಣಕಿಸಿದ ವೈಭವ್. 

"ನೋಡೋ ಆಲ್ರೆಡಿ ಅರ್ಧ ಮುಖ ಊದಿ ಆಂಬೊಡೆ ತರ ಆಗಿದೆ. ಹೀಗೇ ಆಡ್ತಿದ್ರೆ ಇನ್ನರ್ಧ ಮುಸುಡಿ ಊದಿಸಿ ತಿಥಿ ವಡೆ ಮಾಡಿ ಹಾಕ್ತೀನಷ್ಟೇ. ಬಂದ್ಬಿಟ್ಟ ಸೀಮೆಗಿಲ್ಲದ ಪತ್ತೇದಾರ" ಕೆರಳಿದ ಸರ್ಪಿಣಿಯಂತೆ ಬುಸುಗುಟ್ಟಿದಳು.

"ಅಮ್ಮಾ ತಾಯಿ, ತಾವು ಈಗ ಮಾಡಿರೋ ಡ್ಯಾಮೇಜೇ ಸಾಕು. ದಯವಿಟ್ಟು ಕ್ಷಮಿಸಿ" ಹಾಸ್ಪಿಟಲಿನಲ್ಲಿ ನಡೆದದ್ದನ್ನೆಲ್ಲಾ ಎಣಿಸಿ ಕೈ ಮುಗಿದ ವೈ.

"ಅಂದ ಹಾಗೇ ಕೇಳೋದೇ ಮರೆತೆ ನೀನ್ಯಾಕೆ ಆಸ್ಪತ್ರೆಗೆ ಬಂದಿದ್ದು? ಆರಾಮಿಲ್ವಾ ನಿನ್ಗೆ?" ಕಕ್ಕುಲತೆಯಿಂದ ವಿಚಾರಿಸಿದರು ಮೃದುಲಾ.

"ಹೂನಮ್ಮಾ, ಆರಾಮಿಲ್ಲ. ಡಿಟೆಕ್ಟಿವ್ ಹಾರ್ಟಿಗೆ ಲವ್ವು ಅನ್ನೋ ವೈರಸ್ ಅಟ್ಯಾಕ್ ಆಗಿ ಡಿಫೆಕ್ಟಿವ್ ಆಗ್ಬಿಟ್ಟಿದೆ. ಆ ರೋಗ ಉಲ್ಬಣವಾದ ಹಿನ್ನೆಲೆಯಲ್ಲಿ ಪತ್ತೇದಾರ ಬೇರೆ ದಾರಿ ಕಾಣದೇ ಆಸ್ಪತ್ರೆ ದಾರಿ ಹಿಡ್ದಿದ್ದು" ವೈ ರೋಗವನ್ನು ಗುಣಲಕ್ಷಣಗಳ ಸಮೇತ ವಿವರಿಸಿದ ಅಭಿ.

"ಏನೂ ಇವ್ನಿಗೆ ಲವ್ವಾ? ಆ ಹುಡುಗಿ ಕಥೆ ಲಬ್ ಲಬ್ಬೋ ಲಬ್ ಲಬ್ಬೋನೇ ಗ್ಯಾರಂಟಿ. ಯಾರಣ್ಣ ಈ ಬಂಪರ್ ಬಹುಮಾನ ವಿಜೇತ ಅದೃಷ್ಟವಂತೆ" ಕುತೂಹಲದಿಂದ ಕೇಳಿದಳು.

"ಚೈತಾಲಿ ಅಂತ. ಸತ್ಯಂ ರಾವ್ ಅವರ ಮಾಜಿ ಪಿ.ಎ. ಇವನ ಅತೀ ಪ್ರಿಯ ಮಡಿ ಗುಂಡಮ್ಮನ ಮೊಮ್ಮಗಳು. ಅವಳು ಇವತ್ತು ಸಮನ್ವಿತಾನ ನೋಡೋಕೆ ಆಸ್ಪತ್ರೆಗೆ ಬರ್ತೀನಿ ಅಂದಿದ್ಲು. ಅದಕ್ಕೇ ಸಾಹೇಬರು ಹುಡುಗಿ ಮಿಸ್ ಆಗಿ ಬೇರೆಯವ್ರ ಮಿಸ್ಸೆಸ್ ಆಗ್ಬಾರ್ದೂ ಅಂತ ಬೆಳಿಗ್ಗೆ ಬೀಳೋ ಮೋದಿ ಕನಸೂ ಮಿಸ್ ಮಾಡ್ಕೊಂಡು ಆಸ್ಪತ್ರೆಗೆ ಓಡೋಡಿ ಬಂದಿದ್ದು" ವಿವರಿಸಿದ.

ಎಲ್ಲರೂ ನಗುತ್ತಿದ್ದರೆ, "ಎಷ್ಟು ಚೆನ್ನಾಗಿ ತಯಾರಾಗಿ ನಾರಿ ದರ್ಶನಕ್ಕೆ ಅಂತ ಬಂದ್ರೆ ಬೆಳಿಗ್ಗೆನೆ ಮಾರಿ ದರ್ಶನ ಆಗಿ ಮಂತ್ರಾಕ್ಷತೆ ಮಂಗಳಾರತಿನೂ ಆಯ್ತು" ಎಂದ‌ ಉಬ್ಬಿದ ಹಣೆ ಸವರಿಕೊಳ್ಳುತ್ತಾ.

"ನೋಡು ವೈಭವ್, ಹುಡುಗಿ ಒಲಿಸ್ಕೊಬೇಕು ಅಂದ್ರೆ ಮೊದ್ಲು ಅಡುಗೆ ಕಲಿ. ಈ ಹೆಂಗಸರಿಗೆ ಅಡುಗೆ ಮಾಡಲು ಬರೋ ಗಂಡಸರು ಇಷ್ಟ ಆಗ್ತಾರೆ" ಸಲಹೆ ನೀಡಿದರು ಸಚ್ಚಿದಾನಂದ.

"ಓ…. ಅಡುಗೆ ಎಲ್ಲಾ ಚೆನ್ನಾಗಿ ಬರುತ್ತೆ ಅಂಕಲ್ ನನಗೆ. ನಾಳೆ ಚೈ ಡಾರ್ಲಿಂಗಿಗೆ ಪ್ರಪೋಸ್ ಮಾಡೋಕೆ ಹಾಗಲಕಾಯಿ ಹಲ್ವಾ ಮಾಡ್ಲಾ ಇಲ್ಲಾ ಬದನೇಕಾಯಿ ಪಾಯಸ ಮಾಡ್ಲಾ?" 

"ಎರಡೂ ಬೇಡ, ಸೀಗೆ ಕಾಯಿ, ಅಂಟುವಾಳ ಕಾಯಿ(ನೊರೆಕಾಯಿ) ಎರಡೂ ಸೇರಿಸಿ ಉಪ್ಪಿಟ್ಟು ಮಾಡಿ ತಿನ್ಸು" ಅದ್ಬುತ ಸಲಹೆ ನೀಡಿದಳು ಆಕೃತಿ.

"ಪತ್ತೇದಾರಿ ಪರಂಧಾಮ, ಲೋ ಮಗಾ, ಇದೆಲ್ಲಾ ಬಿಡು. ಮೊದ್ಲು ನೆಟ್ಟಗೊಂದು ಟೀ ಮಾಡೋದು ಕಲಿ ನೋಡೋಣ" ಸವಾಲೆಸೆದ ಅಭಿ.

"ಬೀರ್, ಐ ನೋ ಹೌ ಟು ಪ್ರಿಪೇರ್ ಟೀ. ನಂಗೊತ್ತು" ಎಂದ.

"ಎಲ್ಲಿ ಟೀ ಮಾಡೋಕೆ ಏನೇನು ಬೇಕೋ ಹೇಳು ನೋಡೋಣ" ಮೃದುಲಾ ತಮ್ಮದೊಂದು ಪ್ರಶ್ನೆ ಕೇಳಿದರು.

"ಅದು ಟೀ ಪೌಡರ್, ಸಕ್ಕರೆ, ಹಾಲು, ನೀರು ಬೇಕು" ಎಂದಾಗ ಎಲ್ಲರೂ ಚಪ್ಪಾಳೆ ತಟ್ಟಿದರೆ ಅಭಿ "ಶಹಾಬ್ಬಾಸ್" ಎಂದು ಅವನ ಬೆನ್ನು ತಟ್ಟಿದ. ಇದರಿಂದ ಉತ್ಸಾಹಗೊಂಡವನು ಟೀ ಮಾಡುವ ವಿಧಾನ ವಿವರಿಸಿದ.....

"ಹಾಲು, ಸಕ್ಕರೆ, ರುಚಿಗೆ ತಕ್ಕಷ್ಟು ನೀರು, ಟೀ ಪುಡಿ ಎಲ್ಲಾ ಹಾಕಿ ಕುಕ್ಕರಿನಲ್ಲಿ ಮೂರು ವಿಷಲ್ ಹಾಕ್ಸಿಬಿಟ್ಟರೇ ಮುಗೀತು.... ಟೀ ರೆಡಿ...."

ಅವನ ಮಾತು ಮುಗಿಯುವುದರೊಳಗೆ ಗಾಡಿಗೆ ಬ್ರೇಕ್ ಬಿದ್ದ ಸ್ಪೀಡಿಗೆ ಎಲ್ಲರೂ ಒಮ್ಮೆ ಮುಂದೆ ಮುಗ್ಗರಿಸಿದರು. 

"ವಾಟ್ ಈಸ್ ದಿಸ್ ಬೀರ್? ಆಲ್ರೆಡಿ ನನ್ನ ಮುಖ ಡ್ಯಾಮೇಜ್ ಮಾಡಿದ್ದೀರಾ. ಈಗ ಹೀಗೆ. ನನ್ನ ಸಾಯ್ಸೋಕೆ ದೇಶದ್ರೋಹಿಗಳತ್ರ ಸುಪಾರಿ ತಗೊಂಡಿದ್ದೀಯಾ ಹೇಗೆ?" ಎಂದವನು ಕಾರಿನಲ್ಲಿದ್ದ ಎಲ್ಲರೂ ತನ್ನನ್ನೇ ಗುರಾಯಿಸುತ್ತಿರುವುದು ಕಂಡು, "ವಾಟ್ ಹ್ಯಾಪನ್ಡ್?" ಎಂದ.

"ನಿನ್ನ ಸುಪಾರಿ ಅಲ್ಲಾ ಜರ್ದಾ, ಗುಟ್ಕಾನೂ ತಂಗೊಂಡಿದ್ದೀನಿ ಕಣಲೋ ಪಿರ್ಕಿ.... ಲೋ ಯಾವೂರ ಗಮಾರನಲೇ ನೀನು. ಟೀನ ಕುಕ್ಕರಿನಲ್ಲಿ ಮಾಡೋನು ಐರನ್ ಬಾಕ್ಸ್ ಮೇಲೆ ಅನ್ನ ಮಾಡೋಲ್ವಾ ನೀನು? ತಂದೇ... ನಿನ್ನ ಪಾದ ಜೆರಾಕ್ಸು...... ಒಂದೇ ಒಂದು ಸಹಾಯ ಮಾಡು. ನೀನು ಈ ಸಾಹಸ ಮಾಡಿದ ದಿನ ನನಗೊಂದು ಫೋನ್ ಮಾಡಿ ಹೇಳ್ಬಿಡು ಆಯ್ತಾ" ಕೈ ಮುಗಿದು ಗಾಡಿ ಚಲಾಯಿಸತೊಡಗಿದ.

"ಅಯ್ಯೋ ನಿನಗಷ್ಟು ಆಸೆನಾ ಬೀರ್, ಫೋನ್ ಮಾಡೋದು ಯಾಕೆ? ಇವತ್ತು ನಿಮ್ಮನೇಲಿ ಎಲ್ಲರಿಗೂ ನಂದೇ ಟೀ ಸೇವೆ" ಘೋಷಿಸಿದ.

"ಡಬ್ಬಾ ನನ್ಮಗನೇ ಇನ್ನೊಂದು ಸಲ ಟೀ ಸುದ್ದಿ ಎತ್ತಿದ್ರೇ ನಿನ್ನ ಎತ್ತಿ ರೋಡಿಗೆ ಬಿಸಾಕಿ ಮೇಲೆ ಬುಲ್ಡೋಜರ್ ಹತ್ತಿಸ್ಬಿಡ್ತೀನಿ ನೋಡು." 

"ರೋಡಿಗೆ ಎಸೆಯೋದೇನೋ ಸರಿ, ಆದ್ರೆ ಮೇಲೆ ಕಾರು ಹತ್ತಿಸೋದು ಬಿಟ್ಟು ಬುಲ್ಡೋಜರ್ ಯಾಕೆ ಅಂತ ಗೊತ್ತಾಗ್ಲಿಲ್ಲ?" ತನ್ನ ಅನುಮಾನ ಕೇಳಿದ. ಪಕ್ಕದಲ್ಲಿದ್ದವನ ಉರಿ ನೋಟ ಕಂಡು ಹೆದರಿ ಕೈ ಕಟ್ ಬಾಯ್ ಮುಚ್ ಪೊಸಿಶನ್ನಿನಲ್ಲಿ ಕುಳಿತ ಮನೆ ತಲುಪುವವರೆಗೂ......

              **************************

ನವ್ಯಾ ಕಾಫಿ ಹಿಡಿದು ಬಂದಾಗ ಸಮನ್ವಿತಾ, ಕಿಶೋರ್ ಇಬ್ಬರೂ ಬೆಳಗಿನ ಎಳೆ ಬಿಸಿಲಿನಲ್ಲಿ, ಮೇಲಿನ ಬಾಲ್ಕನಿಯಲ್ಲಿ ಮಾತನಾಡುತ್ತಾ  ಕುಳಿತಿದ್ದರು. ಅದು ಕಿಶೋರನ ರೂಮಿಗೆ ಅಂಟಿಕೊಂಡಿದ್ದ ಬಾಲ್ಕನಿ. ಅದರ ತುಂಬಾ ತರಹೇವಾರಿ ಹೂವಿನ ಗಿಡಗಳನ್ನು ಬೆಳೆಸಿದ್ದಳು ನವ್ಯಾ. ಮಧ್ಯದಲ್ಲಿ ಒಂದು ಟೇಬಲ್, ಆರು ಚೇರುಗಳಿದ್ದವು. ಭಾನುವಾರದ ಸಂಜೆಯ ಟೀ ಸಮಯಕ್ಕೆ ಈ ಜಾಗ ಮೀಸಲು. ಎತ್ತರದಲ್ಲಿದ್ದುದರಿಂದ ಚೆನ್ನಾಗಿ ಗಾಳಿಯೂ ಬೀಸುತ್ತಿತ್ತು. ವಿವಿಧ ಹೂಗಳ ಕಂಪು, ಹಿತವಾದ ಗಾಳಿ, ಎಳೆ ಬಿಸಿಲು….... ಒಟ್ಟಾರೆ ಆಹ್ಲಾದಕರವಾಗಿತ್ತು. 

"ನವ್ಯಾ, ನಿನ್ನ ಗಾರ್ಡನ್ ತುಂಬಾ ಚೆನ್ನಾಗಿದೆ ಕಣೆ" ಕಾಫಿ ತೆಗೆದುಕೊಳ್ಳುತ್ತಾ ಸಮನ್ವಿತಾ ಹೇಳಿದಾಗ ನಕ್ಕು, ಇನ್ನೊಂದು ಕಪ್ ಕಿಶೋರನಿಗೆ ನೀಡಿ, "ಅದೆಲ್ಲಾ ಆಮೇಲೆ ನೋಡೋಣ. ನೀರು ಬಿಸಿ ಇದೆ. ಕಾಫಿ ಕುಡಿದು ಮೊದ್ಲು ಸ್ನಾನ ಮಾಡಿ ಕೆಳಗೆ ಬಾ, ತಿಂಡಿ ತಿನ್ನೋಣ. ಅಮ್ಮ ಸಿರಿಧಾನ್ಯಗಳ ದೋಸೆಗೆ ರೆಡಿ ಮಾಡಿದ್ದಾರೆ. ನಿನ್ನೆ ರಾತ್ರಿ ಇಂಜೆಕ್ಷನ್ ಮಂಪರೇ ಆಗೋಯ್ತು. ಏನೂ ತಿಂದಿಲ್ಲ. ಬೇಗ ಬಾ" ಎಂದು ಅಡುಗೆಮನೆಗೆ ನಡೆದಳು. ಬೆಳಿಗ್ಗೆ ಅವಳು ತುಂಬಾ ಬ್ಯುಸಿಯೇ.

"ಅವಳು ಹೇಳಿದ್ದು ಸರಿಯೇ. ಬೇಗ ಸ್ನಾನ ಮುಗ್ಸು. ಎಲ್ಲಾ ಒಟ್ಟಿಗೆ ತಿಂಡಿ ತಿನ್ನೋಣ. ಇಲ್ಲಾಂದ್ರೆ ಈಗ ತಿಂಡಿ ತಿನ್ಸೋಕೆ ಅಭಿರಾಮ್ ಬಂದ್ಬಿಡ್ತಾರೆ. ಆಲ್ರೆಡಿ ಬೆಳಿಗ್ಗೆ ಮುಂಚೆನೇ ಫೋನ್ ಮಾಡಿ ವಿಚಾರಿಸಿಕೊಂಡ್ರು....." ಕಿಶೋರ್ ಮಾತು ಕೇಳಿ ಅವಳ ಮನಸ್ಸಿಗೆ ಹಾಯೆನಿಸಿತು. ಇಂತಹ ಕಾಳಜಿಯನ್ನೇ ಮನ ಬಯಸುವುದು. ಇದೇ ಚಿಕ್ಕಂದಿನಿಂದಲೂ ಮರೀಚಿಕೆ ಅವಳ ಪಾಲಿಗೆ. ಇದುವರೆಗೆ ಇಂತಹ ಕಾಳಜಿ ತೋರಿದ್ದು ಕಿಶೋರ್ ಹಾಗೂ ನವ್ಯಾ. ಅದಕ್ಕೆ ಅವಳ ಬದುಕಿನಲ್ಲಿ ಅವರು ಸ್ಥಾನ ಬಹಳ ಎತ್ತರದ್ದು. ಈಗ ಹೊಸದಾಗಿ ಚಿಗುರೊಡೆದ ಬಂಧವೊಂದು ಬಳ್ಳಿಯಂತೆ ಬದುಕನ್ನು ಆವರಿಸುತ್ತಿತ್ತು. ಅದರ ಕಾಳಜಿ, ಅಕ್ಕರೆಯೂ ಮಲ್ಲಿಗೆ ಮೊಗ್ಗಿನಿಂದ ಸೆರೆಯೊಡೆದ ಗಂಧದಂತೆ ಮನಸಿಗೆ ಹಿತ. ಅವಳ ಕದಪುಗಳು ರಾಗರಂಜಿತವಾದವು.

"ಓಹೋ! ಏನು ಮೇಡಂ, ಅಭಿರಾಮ್ ಬಗ್ಗೆ ಹೇಳಿದ್ದೇ ಎದುರು ಕೂತಿರೋ ಸ್ನೇಹಿತನೂ ಮರೆಯೋವಷ್ಟು ಗುಂಗು.... ಹಾಗಿದ್ರೆ ತಿಂಡಿ ತಿನ್ನಿಸೋಕೆ ಅವ್ರನ್ನೇ ಕರ್ಯೋದು ಒಳ್ಳೇದಾ ಅಂತ?" ಛೇಡಿಸಿದ‌.

"ಕಿಶೋರ್!" ಹೊಡೆಯುವಂತೆ ಕೈಯೆತ್ತಿದವಳು, "ಸುಮ್ನೆ ರೇಗಿಸ್ಬೇಡಾ ನನ್ನ….." ತೋರು ಬೆರಳು ತೋರಿ ವಾರ್ನಿಂಗ್ ಕೊಟ್ಟಳು. ಕ್ಷಣಗಳ ತರುವಾಯ,

"ಹೇ ಕಿಶೋರ್, ಮೊನ್ನೆ ಆಸ್ಪತ್ರೆಲೀ ನವ್ಯಾ ಹತ್ರ ಅದೇನೋ ಕನಸು ಅಂತ ಕೇಳ್ತಿದ್ಯಲ್ಲಾ ಏನದು?" ನೆನಪಿಸಿಕೊಂಡು ಕೇಳಿದಾಗ ಅವನು ನಿಡಿದಾದ ಉಸಿರು ದಬ್ಬಿದ.

"ಹೇಳು ಅದೇನು ಅಂತ. ಇತ್ತೀಚೆಗೆ ಅವಳ್ಯಾಕೋ ತುಂಬಾ ಡಿಸ್ಟರ್ಬ್ ಆಗಿರುತ್ತಾಳೆ. ಬಿಳುಚಿಕೊಂಡು ಕಾಯಿಲೆ ಬಂದೋರ ತರ ಆಗಿದ್ದಾಳೆ. ಏನಾಗಿದೆ?" ಒತ್ತಾಯಿಸಿ ಕೇಳಿದಾಗ ಅವನಿಗೆ ಹೇಳುವುದು ಅನಿವಾರ್ಯವಾಯಿತು.

ಅವಳ ಕನಸುಗಳ ಬಗ್ಗೆ ವಿವರಿಸಿದವನು, "ಇದೇ ಅವಳಿಗೊಂದು ಶಾಪದ ತರ ಆಗಿದೆ ಕಣೇ. ಅಮ್ಮ ಅಪ್ಪ ತೀರ್ಥಯಾತ್ರೆ ಹೋದಾಗಿಂದ ಶುರುವಾಗಿರೋದು. ಅವ್ಳಿಗೆ ಭಯ. ಅವಳ ದೆಸೆಯಿಂದ ನನ್ಗೇ ಮತ್ತೆ ನಿನ್ಗೆ ತೊಂದರೆ ಆಗುತ್ತೆ, ಕೆಟ್ಟದಾಗುತ್ತೆ ಅಂತ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗೀ ಕೊರಗೀ ಹೀಗಾಗಿದ್ದಾಳೆ ನೋಡು. ನಾನೂ ಸಮಾಧಾನ ಮಾಡಿ ಸಾಕಾಯ್ತು. ಆದ್ರೆ ಅವಳ ಮನಸ್ಸಿನ ಭಯವೂ ಒಂದು ರೀತಿ ಸರಿಯೇ. ಮನೆಯವರಿಂದ, ಅಮ್ಮನಿಂದ ವಿಷಯ ಮುಚ್ಚಿಟ್ಟಿರೋದು ಹೇಳಲಾರದಂತಹ ಪಾಪಪ್ರಜ್ಞೆಯಾಗಿ ಅವಳನ್ನು ಕಾಡ್ತಿದೆ. ತೀರ್ಥಯಾತ್ರೆಗೆ ಹೋದಾಗಿಂದ ಇವಳ ಯೋಚನೆಗಳು ವಿಪರೀತವಾಗಿ ಅದೇ ಕನಸಲ್ಲೂ ಬರೋಕೆ ಶುರುವಾಗಿದೆ. ಅವಳ ಕಷ್ಟ ನೋಡೋಕಾಗ್ತಿಲ್ಲ ಸಮನ್ವಿತಾ......" ಮುಖ ಕಿವುಚಿದ.

ಅವಳಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ನವ್ಯಾಳಿಗೊಂದು ಸುಭದ್ರ, ಸುಂದರ ಬದುಕನ್ನು ಕಟ್ಟಿಕೊಡುವ ಭರದಲ್ಲಿ ಅವಳ ಅಂತರಾತ್ಮದ ಕೂಗನ್ನು ನಿರ್ಲಕ್ಷ್ಯಿಸಿದೆವೇನೋ ಎಂದು ಅನಿಸತೊಡಗಿತು. ಮದುವೆಗೆ ಮೊದಲೇ ಇರುವ ವಿಷಯವನ್ನೆಲ್ಲಾ ಮನೆಯವರಿಗೆ ಹೇಳೋಣ ಎಂದು ಪಟ್ಟುಹಿಡಿದಿದ್ದಳು ನವ್ಯಾ. ನಾವೇ ಅವಳ ಮಾತನ್ನು ತಳ್ಳಿಹಾಕಿ ಅವಳನ್ನು ಒಪ್ಪಿಸಿದ್ದು. ಈಗ ಅದೇ ವಿಷಯ ಅವಳ ನೆಮ್ಮದಿಗೆ ಬೆಂಕಿ ಹಾಕಿದೆ. ಇದಕ್ಕೆ ಪರಿಹಾರವೆಂತು? ಯೋಚಿಸಿದಷ್ಟೂ ಅವಳ ತಲೆಕೆಡತೊಡಗಿತು.... ಕೊನೆಗೊಮ್ಮೆ,

"ಈಗೇನು ಮಾಡೋದು ಕಿಶೋರ್, ಇದೇ ರೀತಿ ಮುಂದುವರೆದ್ರೆ ಅವಳು ಮಾನಸಿಕ ರೋಗಿಯಾಗ್ತಾಳಷ್ಟೇ. ಇದಕ್ಕಾ ನಾನವಳನ್ನು ಆ ನರಕದಿಂದ ಹೊರತಂದಿದ್ದು? ಇವಳ ಸ್ಥಿತಿ ನೋಡಿದ್ರೆ ಜಾಸ್ತಿ ದಿನ ತಡೆಯೋಲ್ಲ. ಯಾವ ಕ್ಷಣದಲ್ಲಾದ್ರೂ ಅವಳ ಒಡಲ ಬೇಗುದಿ ಸಿಡಿಯಬಹುದು. ಆಗ ತಾನೇ ಎಲ್ಲಾ ವಿಷಯ ಅಮ್ಮನತ್ರ ಹೇಳ್ತಾಳೆ. ಅವ್ರು ಹೇಗೆ ರಿಯಾಕ್ಟ್ ಮಾಡಬಹುದು? ನನಗ್ಯಾಕೋ ಭಯ ಕಣೋ…….... ಏನು ಮಾಡೋದು?" ಅಸಹಾಯಕತೆಯಿಂದ ಕೇಳಿದಳು.

ಸ್ವಲ್ಪ ಹೊತ್ತು ಸುಮ್ಮನಿದ್ದವನು ಒಮ್ಮೆಲೆ, "ನಾನು ಆಫೀಸಲ್ಲಿ ಟ್ರಾನ್ಸಫರ್ ರಿಕ್ವೆಸ್ಟ್ ಮಾಡಿದ್ದೀನಿ ಸಮಾ. ಅಹಮದಾಬಾದ್ ಗೆ" ಎಂದುಬಿಟ್ಟ.

ಅವನ ಈ ನಡೆಯ ನಿರೀಕ್ಷೆಯೇ ಇಲ್ಲದ ಸಮನ್ವಿತಾ ಅಚ್ಚರಿಯಿಂದ ಅವನನ್ನೇ ದಿಟ್ಟಿಸಿದಳು.

        *******ಮುಂದುವರೆಯುತ್ತದೆ*******












     



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ