ಭಾನುವಾರ, ಜೂನ್ 28, 2020

ಅನೂಹ್ಯ 27

ಸಮನ್ವಿತಾಳ ವಾರ್ಡಿನಲ್ಲಿ ನವ್ಯಾಳನ್ನು ಕಂಡೊಂಡನೆ ಅಭಿರಾಮನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ದೊರಕಿತ್ತು. ಹರುಷಗೊಂಡ ಅವನ ಮನ ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ಮೆಲುಕು ಹಾಕತೊಡಗಿತು.

ಶರ್ಮಾ ಕಂಪನಿಯ ಕೆಲಸಗಾರರು ಇರುವುದು ಕಂಪನಿಯ ವತಿಯಿಂದ ನೀಡಲಾಗುವ ಕ್ವಾಟ್ರಸ್ ಗಳಲ್ಲಿಯೇ. ಅಲ್ಲಿನ ವ್ಯವಸ್ಥೆ, ನಿರ್ವಹಣೆ, ರಕ್ಷಣೆ, ನೋವು, ನಲಿವು ಎಲ್ಲದರ ಜವಾಬ್ದಾರಿ ಶರ್ಮಾ ಪರಿವಾರದ್ದೇ. ತಮಗಾಗಿ ದುಡಿಯುವ ಕೈಗಳಿಗೆ ಅಷ್ಟೂ ಮಾಡದಿದ್ದರೆ ಹೇಗೆ ಎಂಬ ಅನಿಸಿಕೆ ‌ಸಚ್ಚಿದಾನಂದರದು.

ಸರಿ ಸುಮಾರು ಮೂರುಮುಕ್ಕಾಲು ವರ್ಷಗಳ ಹಿಂದಿನ ಮಾತು. ಶರ್ಮಾ ಸಿಮೆಂಟ್ಸ್ ನ ಇಬ್ಬರು ನೌಕರರು ಕೌಟುಂಬಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕ್ವಾಟ್ರಸ್ಸಿನಲ್ಲಿ ಹೊಡೆದಾಡಿಕೊಂಡು, ಜಗಳ ವಿಪರೀತಕ್ಕೆ ಹೋಗಿ ಒಬ್ಬನ ತಲೆಗೆ ಪೆಟ್ಟು ಬಿದ್ದು ಪರಿಸ್ಥಿತಿ ಗಂಭೀರವಾಗಿ ಪೋಲೀಸ್ ಕೇಸ್ ದಾಖಲಾಗಿತ್ತು. ಹೊಡೆದವನನ್ನು ಪೋಲಿಸರು ಎಳೆದೊಯ್ದು ಲಾಕಪ್ಪಿನಲ್ಲಿ ಕೂರಿಸಿದ್ದರು. ಅವನ ಹೆಂಡತಿ ತನ್ನ ಮೂವರು ಮಕ್ಕಳೊಂದಿಗೆ ಸಚ್ಚಿದಾನಂದರ ಕಾಲು ಹಿಡಿದುಕೊಂಡು ಅಳುತ್ತಾ ಕೂತುಬಿಟ್ಟಿದ್ದಳು. ದುಡಿಯುವ ಕೈಯೇ ಇಲ್ಲವಾದರೆ ಜೀವನ ಹೇಗೆಂಬ ಚಿಂತೆ ಆ ಹೆಣ್ಣನ್ನು ಕಿತ್ತು ತಿನ್ನುತ್ತಿತ್ತು. ಆಕೆಯ ಗೋಳು ನೋಡಲಾರದೇ ಅಭಿರಾಮ್ ತಾನೆಲ್ಲಾ ವ್ಯವಸ್ಥೆ ಮಾಡುವೆನೆಂದು ಅಭಯ ನೀಡಿ ಆಕೆಯನ್ನು ಮನೆಗೆ ಕಳುಹಿಸಿದ್ದ.

ಈ ವಿಚಾರವಾಗಿ ಮಾತನಾಡಲು ಅವನು ಮರುದಿನ ಬೆಳಗ್ಗೆ ಠಾಣೆಗೆ ಹೋಗಿದ್ದ. ಆದರೆ ಯಾವುದೋ ಮುಖ್ಯವಾದ ಕೆಲಸದ ಮೇಲೆ ಎಸ್.ಐ ಹೊರಹೋಗಿದ್ದರು. ಹಾಗಾಗಿ ಸಂಜೆ ಮತ್ತೆ ಹೋಗಬೇಕಾಯಿತು. ಅಸಲಿಗೆ ಅವನೇ ಖುದ್ದಾಗಿ ಹೋಗಬೇಕಾದ ಅವಶ್ಯಕತೆ ಇರಲಿಲ್ಲವಾದರೂ ಆ ಹೆಂಗಸಿನ ಗೋಳಾಟ, ಮೂವರು ಮಕ್ಕಳು ಕಣ್ಣುಗಳಲ್ಲಿದ್ದ ಭಯ ಅವನ ಚಿತ್ತ ಕದಡಿತ್ತು.

ಸಂಜೆ ಅವನು ಠಾಣೆಗೆ ಬಂದಾಗ ಅಲ್ಲಿನ ಸ್ಥಿತಿ ಬೆಳಗಿನಂತಿರಲಿಲ್ಲ. ಬಹಳಷ್ಟು ಜನರಿದ್ದರು. ಹೆಂಗಸರು, ಮಕ್ಕಳೂ ಕೂಡಾ. ಆ ಗುಂಪಿನವರೆಲ್ಲರೂ ವಿಪರೀತ ಅಳುತ್ತಿದ್ದ ನಾಲ್ವರು ಹುಡುಗಿಯರನ್ನು ಸಂತೈಸುತ್ತಿರುವುದನ್ನು ಕಂಡು ಬಹುಶಃ ಅವರೆಲ್ಲ ಆ ಹುಡುಗಿಯರ ಮನೆಯವರಿರಬೇಕೆಂದು ಗ್ರಹಿಸಿದ್ದ. ಎಲ್ಲರೂ ಅಳುತ್ತಾ, ಸಮಾಧಾನಿಸಿಕೊಳ್ಳುತ್ತಾ, ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಿದ್ದರು. ಏನೋ ನಡೆದಿದೆ ಈ ಹೆಣ್ಣುಮಕ್ಕಳ ಬಾಳಲ್ಲಿ ಎನಿಸಿತಾದರೂ ಏನೆಂದು ತಿಳಿಯಲಿಲ್ಲ ಅವನಿಗೆ....

ಒಳಗೆ ಎಸ್.ಐ ಯಾರೊಂದಿಗೋ ಏನೋ ಮಾತನಾಡುತ್ತಿದ್ದರು. ಹೊರಗೆ ಕಾಯುತ್ತಾ ನಿಂತು ಆ ಗುಂಪನ್ನೇ ನೋಡುತ್ತಿದ್ದ.(ಈ ಘಟನೆಗೆ ಸರಿಯಾಗಿ ಲಿಂಕ್ ಸಿಗದಿದ್ದರೇ ಹತ್ತನೇ ಅಧ್ಯಾಯವನ್ನು ಓದಿರಿ)

ಅವರಲ್ಲೊಬ್ಬ ವಯಸ್ಸಾದ ಹೆಂಗಸು ನಾಲ್ವರನ್ನೂ ಸಮಾಧಾನಿಸುತ್ತಾ "ಆಗಿದ್ದು ಆಗೋಗದೆ ಬಿಡ್ರವಾ. ತೆಪ್ಪ್ ಯಾರದು ಇಲ್ಲಾ. ಆದ್ರೂ ದ್ಯಾವರು ದೊಡ್ಡೋನು ಈಗಾರ ಹೆಂಗೋ ಆ ನರ್ಕ ಮುಗೀತಲಾ... ಅದ್ಯಾವ ಪುಣ್ಯಾಸ್ತ್ರೀ ಹೆತ್ತ ಮಗಾನೋ, ಆ ಸಿವಾ ಆಕಿ ಹೊಟ್ಟಿ ತಣ್ಣ್ಗಿಟ್ಟಿರ್ಲಿ" ಎಂದು ಒಬ್ಬಳನ್ನು ಅಪ್ಪಿ ಸಂತೈಸಿದ್ದಳು. ಈ ಹುಡುಗಿಯರು ಯಾವುದೋ ಜಾಲಕ್ಕೆ ಸಿಲುಕಿ ನೊಂದಿದ್ದಾರೆ. ಯಾರೋ ಅವರನ್ನು ಅಲ್ಲಿಂದ ಬಿಡಿಸಿಕೊಂಡಿದ್ದಾರೆ ಎಂದು ಸ್ಪಷ್ಟವಾಯಿತು ಅವನಿಗೆ. ಯಾರಿರಬಹುದು ಎಂದು ಕುತೂಹಲವಾಯಿತು...

ಮಾತುಕತೆಗಳು ಮುಂದುವರೆದಂತೆ ಈ ಹುಡುಗಿಯರನ್ನು ವೇಶ್ಯಾಗೃಹವೊಂದರಿಂದ ಬಿಡಿಸಿ ತರಲಾಗಿದೆ ಎಂಬುದು ಅವನಿಗೆ ವೇದ್ಯವಾಯಿತು. ತಟ್ಟನೆ ತಲೆ ಎತ್ತಿ ಆ ಹೆಣ್ಣುಮಕ್ಕಳನ್ನು ನೋಡಿದ. ಹೆಚ್ಚುಕಮ್ಮಿ ಆಕೃತಿಯ ವಯಸ್ಸಿನವರು........ ಕನಸುಗಳು, ನಿರೀಕ್ಷೆಗಳು, ಸಾವಿರ ಆಸೆಗಳು ತುಂಬಿರಬೇಕಾದ ನಯನಗಳಲ್ಲಿ ಇದ್ದದ್ದು ನೋವು, ಯಾತನೆ, ಆತಂಕ...... ಬದುಕಿನ ಬಗ್ಗೆ ಕನಸುಗಳು ಚಿಗುರಬೇಕಾದ ವಯಸ್ಸಿನಲ್ಲಿ ಆಗಲೇ ವೈರಾಗ್ಯದಂಚಿಗೆ ತಲುಪಿದ ವಿರಾಗಿನಿಯರಂತೆ ಕಂಡರು…….

ಚಿಗುರು ಕೊನರುವ ಮುನ್ನವೇ ಮುರುಟಿಸಿ ಎಸೆದ ಜಗದ ಮೇಲೆ ರೋಷವುಕ್ಕಿತ್ತು ಅವನಿಗೆ. ಪದೇ ಪದೇ ಆಕೃತಿಯ‌ ನೆನಪಾಗಿ ಕಣ್ಣಂಚು ಒದ್ದೆಯಾಗಿತ್ತು.

ಅಷ್ಟರಲ್ಲಿ ಎಸ್.ಐ ಕ್ಯಾಬಿನ್ ಇಂದ ಇಬ್ಬರು ಹುಡುಗಿಯರು ಹೊರಬಂದಿದ್ದರು.‌ ಅವರನ್ನು ನೋಡುತ್ತಲೇ ಈ ನಾಲ್ವರೂ ಓಡಿಬಂದು ಅವರಿಬ್ಬರನ್ನೂ ಸುತ್ತುವರೆದಿದ್ದರು. ಅವರು ಒಬ್ಬಳನ್ನು ಅಪ್ಪಿ ಅಳತೊಡಗಿದರು. ಅವಳ ಕಣ್ಣುಗಳಲ್ಲಿ ನೀರಿದ್ದರೂ ಕೆನ್ನೆ ಮೇಲೆ ಇಳಿಯದಂತೆ ತಡೆದಿದ್ದಳು. ಅವಳ ಕಣ್ಣುಗಳಲ್ಲಿಯೂ ಜನ್ಮಾಂತರದ ವೇದನೆಯೊಂದು ಕುಳಿತಿತ್ತು. ಅವಳೂ ಇವರೊಂದಿಗೆ ಇದ್ದವಳೆಂದು‌ ಅವನಿಗೆ ಅನಿಸಿತ್ತು. ಆ ನಾಲ್ವರು ಅವಳಿಗೆ ವಿದಾಯ ಹೇಳಿ ಎಸ್. ಐ ಕ್ಯಾಬಿನ್ ಹೊಕ್ಕಿದ್ದರು.

ಇವರಿಬ್ಬರೂ ಹೊರಗೆ ಹೊರಡಬೇಕು ಎನ್ನುವಾಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಅವರನ್ನು ತಡೆದು ನಿಲ್ಲಿಸಿದ್ದರು. ಅವರು ಆ ಇನ್ನೊಬ್ಬ ಹುಡುಗಿಯ ಬಳಿ ಬಂದು ಅವಳ ಕೈಗಳನ್ನು ಕಣ್ಣಿಗೊತ್ತಿಕೊಂಡು ಅವಳ ಬಳಿ ಮಾತನಾಡತೊಡಗಿದ್ದರು.

ಅವರ ಮಾತುಗಳನ್ನು ಕೇಳಿದವನು‌ ಅವಕ್ಕಾಗಿದ್ದ…..

ಅವರು ತಮ್ಮ ಮಗಳನ್ನು ವೇಶ್ಯಾಗೃಹದಿಂದ ಬಿಡಿಸಿದ್ದಕ್ಕೆ ಆ ಹುಡುಗಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು.

ಅಂದರೆ ಈ ಹುಡುಗಿಯರನ್ನು ಬಿಡಿಸಿದ್ದು ಇವಳಾ?

ಅಚ್ಚರಿಯಿಂದ ಅವಳನ್ನು ಒಂದು ಘಳಿಗೆ ದಿಟ್ಟಿಸಿದ್ದ.

ನಿರಾಭರಣ, ಸರಳ ಸುಂದರಿ. ಆದರೆ ಅವನನ್ನು ಸೆಳೆದದ್ದು ಕಣ್ಣುಗಳಲ್ಲಿ ನೇರತೆ, ಆತ್ಮವಿಶ್ವಾಸ, ದೃಢತೆ.

ಅವಳು ಆ ವ್ಯಕ್ತಿಗೆ ಕ್ಯಾಬಿನ್ ಒಳಗೆ ಹೋಗಲು ತಿಳಿಸಿ ಇನ್ನೊಬ್ಬ ಹುಡುಗಿಯೊಂದಿಗೆ ಹೊರಟು ಬಿಟ್ಟಳು.

ಅಷ್ಟರಲ್ಲಿ ಆ ಇನ್ನೊಬ್ಬ ಹುಡುಗಿ ಹಿಂದಿರುಗಿ ಬಂದು ಆ ವ್ಯಕ್ತಿಗೆ ಏನೋ ಹೇಳಿದಳು. ಆದರೆ ಅವನು ಅದ್ಯಾವುದನ್ನೂ ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಅವನ ತಲೆ ತುಂಬಾ ಅವಳೇ ತುಂಬಿದ್ದಳು. ಯಾರಿರಬಹುದು ಈಕೆ? ಈ ಲೋಕದ ಜನ ನಾನು, ನನ್ನದು, ನನ್ನವರು ಎಂಬ ಪರಿಧಿ ಬಿಟ್ಟು ಹೊರಗೆ ತಲೆಹಾಕರು. ನಾವು ಚೆನ್ನಾಗಿದ್ದರೆ ಸಾಕು ಬೇರೆಯವರು ಹಾಳಾಗಿ ಹೋದ್ರೆ ನಮಗೇನು ಎಂದು ಯೋಚಿಸುವುದಲ್ಲದೇ ಪರರು ಎಡವಿದಾಗ ಆಡಿಕೊಂಡು ನಗುವವರೇ ಜಾಸ್ತಿ. ಇಷ್ಟು ಸಂಕುಚಿತ ಮನಸ್ಥಿತಿಯ ಜಗದಲ್ಲಿ ಒಬ್ಬ ಹೆಣ್ಣುಮಗಳು ತನ್ನ ಸ್ವಂತ ಆಸಕ್ತಿಯಿಂದ ವೇಶ್ಯಾವಾಟಿಕೆಯ ಕೂಪದಲ್ಲಿ ಬೇಯುತ್ತಿದ್ದ ಐವರನ್ನು ಬಿಡಿಸಿಕೊಂಡು ಬಂದಿರುವಳೆಂದರೆ........ ಅವಳ ಮನೋಸ್ಥೈರ್ಯವನ್ನು ಅಳೆಯದಾಗಿದ್ದ. ಬಹಳ ಧೈರ್ಯಸ್ಥೆಯೇ ಈಕೆ. ಇಲ್ಲವಾದರೇ ಈ  ಸಮಾಜದ ನೀತಿ ನಿಯಮ, ಕಟ್ಟುಪಾಡುಗಳು, ಹುಚ್ಚು ಜನರ ಚುಚ್ಚು ಮಾತುಗಳನ್ನು ಮೀರಿ ಈ ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಯಾರಿರಬಹುದು ಈಕೆ ಎಂದು ಅವಳತ್ತ ಮತ್ತೆ ನೋಟಹರಿಸುವುದರೊಳಗೆ ಅವರಿಬ್ಬರೂ ಹೊರಟೇ ಹೋಗಿದ್ದರು. ಠಾಣೆಯ ಹೊರಗೂ ಇಬ್ಬರೂ ಕಾಣಲಿಲ್ಲ. ಆದರೆ ಅವರಿಬ್ಬರ ಮುಖಗಳೂ ಅವನ ಮನದಲ್ಲಿ ಅಚ್ಚಾಗಿತ್ತು. ಆ ದಿನ ಠಾಣೆಯ ಕೆಲಸ ಮುಗಿಸಿ ಮನೆಗೆ ಬಂದವನು ಆಕೃತಿಯನ್ನು ತಬ್ಬಿ ತಲೆ ನೇವರಿಸಿದ್ದ. ಕಣ್ಣಂಚು ತೇವವಾಗಿತ್ತು ವಿನಾಕಾರಣ.....‌.. 

"ಏನೋ ಅಣ್ಣಾ? ಏನಾಯ್ತು? ಯಾಕೆ ಅಳ್ತಿದ್ದೀ?" ಗಾಬರಿಯಿಂದ ಕೇಳಿದ್ದಳು ಆಕೃತಿ.

"ಏನಿಲ್ಲ ಪುಟ್ಟ, ಹೀಗೆ ಸುಮ್ಮನೆ..." ಎಂದು ಮಾತು ತೇಲಿಸಿದ್ದ.

ನಂತರದ ದಿನಗಳಲ್ಲಿ ಅವರಿಬ್ಬರನ್ನು ಹುಡುಕಲು ಬಹಳ ಪ್ರಯತ್ನಿಸಿ ಸೋತಿದ್ದ. ಅವನಿಗಿರುವ ಪ್ರಭಾವ ಬಳಸಿ ಪೋಲಿಸ್ ಠಾಣೆಯಿಂದಲೇ‌ ವಿಷಯ ಸಂಗ್ರಹಿಸಬಹುದಿತ್ತಾದರೂ,‌ ಅದರಿಂದ ಮುಂದೆ ಆ ಐವರು ಹೆಣ್ಣುಮಕ್ಕಳ ಬದುಕಲ್ಲಿ ಸಮಸ್ಯೆ‌ ತಲೆದೋರಬಹುದು ಎನ್ನಿಸಿತ್ತವನಿಗೆ. ಹೇಗೋ ಆ ನರಕದಿಂದ ತಪ್ಪಿಸಿಕೊಂಡು ಈಗಿನ್ನೂ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ತಾನು ಏನೋ ಮಾಡಲು ಹೋಗಿ ಆ ಹುಡುಗಿಯರ ಐಡೆಂಟಿಟಿ ಲೀಕ್ ಆಗಿ, ಈ ಸೋ ಕಾಲ್ಡ್ ಸಭ್ಯ ಸಮಾಜದ ಮೂಳೆ ಇಲ್ಲದ ನಾಲಿಗೆಗೆ ಆಹಾರವಾಗುವುದು ಬೇಡ ಎನಿಸಿ ಸುಮ್ಮನಾಗಿದ್ದ.

ನಿಧಾನವಾಗಿ ಈ ಘಟನೆ ಅವನ ನೆನಪಿನಾಳದಲ್ಲಿ ಎಲ್ಲೋ ಹುದುಗಿ ಧೂಳು ಹಿಡಿದಿತ್ತು. ಸಮನ್ವಿತಾ ಕಣ್ಣಿಗೆ ಬೀಳುವ ತನಕ…….. ಅವಳನ್ನು ಕಂಡಂದಿನಿಂದ ಅವನ ಚಿತ್ತ ಸ್ವಾಸ್ಥ್ಯವೇ ಕದಡಿತ್ತು. ನೆನಪಿಸಿಕೊಳ್ಳಲು ಪ್ರಯತ್ನಿಸಿ ಸೋಲುತ್ತಿದ್ದ. ಇಂದು ನವ್ಯಾಳನ್ನು ಕಂಡಕೂಡಲೇ ಮಿಸ್ಸಿಂಗ್ ಲಿಂಕ್ ಸಿಕ್ಕಿದಂತಾಗಿತ್ತು. ನೆನಪಿನ ಕೊಂಡಿಗಳು ಒಂದಕ್ಕೊಂದು ಜೋಡಣೆಗೊಂಡು ಎಲ್ಲಾ ನೆನಪಾಗಿತ್ತು ಅವನಿಗೆ. 

             *************************

"ಬೀರ್…. ವೈ ಆರ್ ಯು ಸಿಟ್ಟಿಂಗ್ ಹಿಯರ್ ಮ್ಯಾನ್" ಎಂಬ ವೈಭವನ ಮಾತು ಅಭಿರಾಮ್ ನೆನಪಿನ ಸರಪಳಿಯನ್ನು ತುಂಡರಿಸಿತು.

ವೈಭವನೊಂದಿಗೆ ಸಚ್ಚಿದಾನಂದ್ ಹಾಗೂ ಮೃದುಲಾ ಕೂಡಾ ಇದ್ದರು. ಮೃದುಲಾ ಅವನ ಬಳಿ ಬಂದು,

"ಇದೇನೋ ಇಲ್ಲಿ ಕೂತಿದ್ದಿ? ಸಮನ್ವಿತಾ ಎಲ್ಲಿ? ಹೇಗಿದ್ದಾಳೆ?" ಗಾಬರಿಯಲ್ಲಿ ಕೇಳಿದರು.

"ಟೇಕ್ ಇಟ್ ಈಸಿ಼ ಮಾ. ಏನಾಗಿಲ್ಲ. ಸ್ವಲ್ಪ ನಿಶ್ಯಕ್ತಿಯಿಂದಾಗಿ ಪ್ರಜ್ಞೆ ತಪ್ಪಿದೆಯಷ್ಟೇ" ಸಮಾಧಾನಿಸಿ, "ಅವಳಿಗೆ ಎಚ್ಚರ ಇಲ್ಲ. ಹಾಗೆ ಇಲ್ಲಿ ಕುತ್ಕೊಂಡೆ ಅಷ್ಟೇ. ಈಗ ಒಳಗೆ ಹೋಗೋಣ ಬಾ" ಎಂದು ಎಲ್ಲರೂ ವಾರ್ಡಿನತ್ತ ನಡೆದರು.

ಅಭಿರಾಮ್ ಇನ್ನು ಯಾರೇ ಬರಲಿ, ಏನೇ ಆಗಲಿ ಎಲ್ಲದಕ್ಕೂ ಸೈ ಎಂದುಕೊಂಡವ ಉಲ್ಲಾಸದಿಂದ ವಾರ್ಡಿನೊಳಗೆ ಹೆಜ್ಜೆ ಹಾಕಿದ.....

ಯೋಚನೆಯಲ್ಲಿ ಮುಳುಗಿದ್ದ ನವ್ಯಾಳಿಗೆ ಯಾರೋ ವಾರ್ಡಿನೊಳಗೆ ಬರುತ್ತಿರುವಂತೆ ಅನಿಸಿ ತಟ್ಟನೆ ಬಾಗಿಲಿನತ್ತ ನೋಡಿದಳು.

ಒಳಬಂದ ನಾಲ್ವರೂ ಅವಳಿಗೆ ಅಪರಿಚಿತರೇ. ಅಭಿರಾಮ್ ಬಗ್ಗೆ ಕೇಳಿದ್ದೇ ಹೊರತು ನೋಡಿರಲಿಲ್ಲ ಎಂದೂ. ಅವಳು ಗಲಿಬಿಲಿಗೊಂಡು ಎದ್ದು ನಿಂತಳು. ಅವಳಿಗೆ‌ ಅಪರಿಚಿತ ಗಂಡಸರನ್ನು ನೋಡಿದ್ದೇ ಭಯದಿಂದ ಕೈಕಾಲು ನಡುಗುತ್ತದೆ. ಇದು ಅವಳ ಗತ ಜೀವನ ಅವಳಿಗಿತ್ತ ಕೊಡುಗೆ. ಇವರ್ಯಾರೋ, ನನಗೇನಾದರೂ ಹಾನಿ ಮಾಡಲು ಬಂದಿರಬಹುದೇನೋ ಎಂಬ ಭಯ ಬೆಂಬಿಡದ ಭೂತ ಅವಳಿಗೆ. ಆದರೂ ಜೊತೆಯಲ್ಲಿದ್ದ ಮೃದುಲಾರನ್ನು ಕಂಡು ಸ್ವಲ್ಪ ಧೈರ್ಯ ತಂದುಕೊಂಡಳು.

ನವ್ಯಾಳ ಮುಖ ಕಂಡು ಅವಳ ಪರಿಸ್ಥಿತಿ ಒಂದು ಮಟ್ಟಿಗೆ ಅರ್ಥವಾಯಿತು ಅಭಿರಾಮ್ ಗೆ. ಅವನು ನಸುನಕ್ಕು, "ಹಲೋ, ನನ್ನ ಹೆಸರು ಅಭಿರಾಮ್. ಇವರಿಬ್ಬರೂ ನನ್ನ ತಂದೆ ತಾಯಿ ಹಾಗೇ ಅವನು ನನ್ನ ಫ್ರೆಂಡ್. ನೀವು ನವ್ಯಾ, ರೈಟ್?" ಪರಿಸ್ಥಿತಿ ತಿಳಿಗೊಳಿಸುತ್ತಾ ಕೇಳಿದ.

ಅಭಿರಾಮ್ ಹೆಸರು ಕೇಳಿದ್ದೆ ಅವಳ ಮುಖದಲ್ಲಿ ನಗುಮೂಡಿತು. "ಓಹ್ ನೀವಾ? ಸಾರಿ ನಿಮ್ಮನ್ಯಾವತ್ತೂ ನೋಡಿರಲಿಲ್ಲ. ಹಾಗಾಗಿ ಗೊತ್ತಾಗ್ಲಿಲ್ಲ" ಎಂದಳು.

"ಇರ್ಲಿ ಬಿಡಮ್ಮಾ. ಅಂದ್ಹಾಗೆ ನೀನು?" ಕೇಳಿದರು ಮೃದುಲಾ.

"ಅಮ್ಮ, ಇವ್ರು ನವ್ಯಾ ಅಂತ. ಸಮನ್ವಿತಾ ಫ್ರೆಂಡ್" ಅವನೇ ಹೇಳಿದ. ನವ್ಯಾ ಕೈ ಜೋಡಿಸಿದಳು. ಅಷ್ಟರಲ್ಲಿ ಫೋನಿನಲ್ಲಿ ಮಾತು ಮುಗಿಸಿದ ಕಿಶೋರ್ ಒಳಗೆ ಬಂದಿದ್ದ. ನವ್ಯಾ ಅವರನ್ನು ಪರಸ್ಪರ ಪರಿಚಯಿಸಿದಳು. 

"ಇಟ್ಸ್ ಗ್ರೇಟ್ ಪ್ಲೆಷರ್ ಟು ಮೀಟ್ ಯು ಮಿಸ್ಟರ್ ಅಭಿರಾಮ್"  ಕೈ ಚಾಚಿದ ಕಿಶೋರ್. ಅವನೇ ನವ್ಯಾಳೊಂದಿಗೆ ಅಭಿಯನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದ ಸಮನ್ವಿತಾಳ‌ ಬಗ್ಗೆ ಮಾತನಾಡಲು. ಅಭಿರಾಮನ ಬಿಗುಮಾನವಿಲ್ಲದ ನಡವಳಿಕೆ ಬಹಳ ಹಿಡಿಸಿತು ಇಬ್ಬರಿಗೂ.

ಹೀಗೆ ಶುರುವಾದ ಮಾತುಕತೆ ಕೆಲವೇ ನಿಮಿಷಗಳಲ್ಲಿ ಬಹು ವರ್ಷಗಳ ಆತ್ಮೀಯರಂತೆ ಹರಟುವ ತನಕ ಬೆಳೆಯಿತು. ಮಧ್ಯೆ ಮಧ್ಯೆ ವೈಭವನ ಒಗ್ಗರಣೆ ಬೇರೆ. ಇವರ ಎಕ್ಸಪ್ರೆಸ್ ಟ್ರೈನಿನಂತಹಾ ಮಾತುಕತೆಗೆ ಬ್ರೇಕ್ ಬಿದ್ದದ್ದು ಮೀರಾ  ಒಳಗೆ ಬಂದಾಗಲೇ. ಸಮನ್ವಿತಾಳನ್ನು ಇನ್ನೊಮ್ಮೆ ಪರೀಕ್ಷಿಸಿ ಇನ್ನೊಂದು ಇಂಜೆಕ್ಷನ್ ಕೊಟ್ಟು ಡ್ರಿಪ್ಸ್ ಬದಲಾಯಿಸಿದರು.

ಅವಳಿಗೆ ಸಧ್ಯದಲ್ಲಿ ಎಚ್ಚರವಾಗುವ ಲಕ್ಷಣವಿರಲಿಲ್ಲ. ಜ್ವರ ಕಡಿಮೆಯಾದರೂ ನಿಶ್ಯಕ್ತಿ, ಸುಸ್ತು ಬಹಳವಿತ್ತು. ಸಚ್ಚಿದಾನಂದ್ ದಂಪತಿಗಳು ಮರುದಿನ ಬರುವೆವು ಎಂದು ಮೀರಾರೊಂದಿಗೆ ಹೊರಟರು. 

ಚೈತಾಲಿಯನ್ನು ಭೇಟಿಯಾಗಬೇಕಿತ್ತು ಅಭಿಗೆ. ಹಾಗಾಗಿ ಅವನೂ ಸಂಜೆಗೆ ಬರುವೆನೆಂದು ವೈಭವನೊಂದಿಗೆ ಹೊರಟ.

ಅದರ ಹಿಂದೆಯೇ ಮಂಗಳಮ್ಮ ಕರೆ ಮಾಡಿದ್ದರು. ಕಾರ್ತಿಕ್ ವಿಷಯ ಹೇಳಿದ್ದರಿಂದ ಗಾಬರಿಯಲ್ಲಿ ಕರೆ ಮಾಡಿದ್ದರಾಕೆ. ಅವರಿಗೆ ವಿಷಯ ತಿಳಿಸಿ ಗಾಬರಿಯಾಗುವಂತದ್ದು ಏನೂ ಇಲ್ಲವೆಂದು ಸಮಾಧಾನಿಸಿದಳು‌ ನವ್ಯಾ. ಇನ್ನೆರಡು ದಿನದಲ್ಲಿ ಹಿಂದಿರುಗುವವರಿದ್ದರಾಕೆ. ತಾನು ವಾಪಾಸಾದ ಕೂಡಲೇ ಒಂದು ವಾರ ರಜೆ ಹಾಕಿಸಿ ಸಮನ್ವಿತಾಳನ್ನು ತಾನೇ ನೋಡಿಕೊಳ್ಳುವುದಾಗಿ ಹೇಳಿದವರ ಮಾತು ಕೇಳಿ ಹೆಮ್ಮೆಯೆನಿಸಿತು ಆ ತಾಯಿಯ ಬಗ್ಗೆ ನವ್ಯಾಳಿಗೆ. ಆಕೆ ಹಾಗಿರುವುದರಿಂದಲೇ ಕಿಶೋರ್ ಇಷ್ಟು ಒಳ್ಳೆಯ ವ್ಯಕ್ತಿಯಾಗಿರುವುದು ಎನಿಸದಿರಲಿಲ್ಲ. ಸತ್ಯನಾರಾಯಣ ಅವರು ಯೋಗಕ್ಷೇಮ ವಿಚಾರಿಸಿ ಫೋನಿಟ್ಟರು.

ನವ್ಯಾ, ಕಿಶೋರ್ ಮಾತ್ರ ಉಳಿದರು ಸಮನ್ವಿತಾಳೊಡನೆ. ಕಾರ್ತಿಕ್ ತಾನು ಹೊರಗೆ ಊಟತಿಂಡಿ ಮಾಡಿಕೊಳ್ಳುವೆ, ಸಂಜೆ ಆಸ್ಪತ್ರೆಗೇ ಬರುವೆ ಎಂದಿದ್ದರಿಂದ ಮನೆಯತ್ತ ಹೋಗಲಿಲ್ಲ ಇಬ್ಬರೂ.

ಅವರಿಬ್ಬರ ಯೋಚನೆಯೂ ಒಂದೇ ದಿಕ್ಕಿನಲ್ಲಿ ಸಾಗುತ್ತಿತ್ತು.

ಅದರ ಗಮ್ಯ..... ಅಭಿರಾಮ್.......

ಅವನ ಹಾಗೂ ಅವನ ಮನೆಯವರ ಮಾತುಕತೆಯ ಶೈಲಿಯಿಂದಲೇ ಅವರು ಸುಸಂಸ್ಕೃತರೆಂದು ತಿಳಿಯುತ್ತಿತ್ತು. ಹಾಗೆಯೇ ಅವರ ಮಾತಿನಲ್ಲಿ ಸಮಾಳ ಬಗ್ಗೆ ಅಕ್ಕರೆಯಿತ್ತು.

ಇಬ್ಬರೂ ಆ ಬಗ್ಗೆಯೇ ಚರ್ಚಿಸತೊಡಗಿದರು.

ಹೇಗಾದರೂ ಸಮನ್ವಿತಾಳನ್ನು ಈ ಮದುವೆಗೆ ಒಪ್ಪಿಸಿ ಆ ಪರಿವಾರಕ್ಕೆ ಸೇರಿಸಬೇಕೆಂಬ ಯೋಜನೆಗೆ ರೂಪುರೇಷೆಗಳು ತಯಾರಾಗತೊಡಗಿದವು.

ಸಮನ್ವಿತಾ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ನೆಮ್ಮದಿಯಾಗಿ ಮಲಗಿದ್ದಳು.

ನೆಮ್ಮದಿ........!?

ನೆಮ್ಮದಿ ಇತ್ತೋ ಇಲ್ಲವೋ ಯಾರಿಗೂ ತಿಳಿಯದಾಗಿತ್ತು........ 

     ********ಮುಂದುವರೆಯುತ್ತದೆ*********



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ