ಸೋಮವಾರ, ಜೂನ್ 22, 2020

ಅನೂಹ್ಯ 9

ಆ ಇಳಿಸಂಜೆಯಲ್ಲಿ ಹೀಗೆ ಶುರುವಾಗಿತ್ತು ನಮ್ಮ ಗೆಳೆತನ. ಅದು ಸ್ನೇಹವೋ ,ಇಲ್ಲ ಅವಳ ಮೇಲೆ ಉದಯಿಸಿದ ಕರುಣೆಯೋ, ಅವಳ‌ ಹಾಡಿನ ಮೇಲಿನ ಪ್ರೀತಿಯೋ, ಅವಳ ಮುಗುಳ್ನಗೆಯ ಸೆಳೆತವೋ, ಇಲ್ಲಾ ಈ ಜಗತ್ತಿನಲ್ಲೇ ನನ್ನಷ್ಟು ನೋವಿನ ಜೀವನ ಇನ್ಯಾರದ್ದು ಇಲ್ಲ ಎಂದುಕೊಂಡಿದ್ದ ನನ್ನ ನಂಬಿಕೆ ಸುಳ್ಳಾದ ಅಚ್ಚರಿಯೋ ನನಗೇ ತಿಳಿಯದು. ಒಟ್ಟಿನಲ್ಲಿ ನನಗೇ ತಿಳಿಯದೇ ಅವಳ ಬಗ್ಗೆ ನನ್ನಲ್ಲೊಂದು ಅಕ್ಕರೆ ಉದಯಿಸಿತ್ತು.

ವಾರದಲ್ಲಿ ಒಂದೆರಡು ಬಾರಿ ಆಕೆಯನ್ನು ಭೇಟಿಯಾಗುತ್ತಿದ್ದೆ. ಬಹುಶಃ ಆಕೆಗೂ ನನ್ನೊಂದಿಗಿನ ಮಾತುಕತೆ ಇಷ್ಟವಾಗಿತ್ತು. ಬಹಳಷ್ಟು ವಿಷಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು. ಆ ದಿನಗಳಲ್ಲಿ ನನಗಾಕೆ ಮತ್ತಷ್ಟು ಅರ್ಥವಾಗತೊಡಗಿದ್ದಳು.

ಆಕೆ ಪಶ್ಚಿಮ ಬಂಗಾಳದ ಬಾರಾಸಾತ್ ಹತ್ತಿರದವಳು. ಅಪ್ಪ ಅಮ್ಮನ ಒಬ್ಬಳೇ ಮಗಳು. ಕಿತ್ತು ತಿನ್ನುವ ಬಡತನವಿದ್ದರೂ ಹೆತ್ತವರ ಅಪರಿಮಿತ ಪ್ರೀತಿಯ ಸವಿಯುಂಡವಳು. ತಾಯ್ತಂದೆ ಇಬ್ಬರೂ ದಿನಮಜೂರಿ ಕಾರ್ಮಿಕರು. ಕೆಲಸ ಸಿಕ್ಕಿದರೆ ಒಪ್ಪತ್ತೂಟ, ಇಲ್ಲವಾದರೇ ಅದೂ ನಸೀಬಿಲ್ಲ. ಆದರೂ ಆ ಜೀವಗಳ ಕನಸಿಗೆ ಬರವಿರಲಿಲ್ಲ. ಆ ಕನಸುಗಳೆಲ್ಲಾ ಮಗಳ ಕುರಿತೇ. ಆಕೆ

ನಮ್ಮಂತಾಗಬಾರದು…. ಓದಬೇಕವಳು…. ಅವಳ ಬದುಕು ಹಸನಾಗಬೇಕೆಂಬ ಹಂಬಲ. ಸಾಲ ಸೋಲ ಮಾಡಿ ಮಗಳನ್ನು ಶಾಲೆಯ ಮೆಟ್ಟಿಲು ಹತ್ತಿಸಿದ್ದರು. ಇವಳೂ ಓದುವುದರಲ್ಲಿ ಚುರುಕಿದ್ದುದು ತಾಯ್ತಂದೆಯರ ಕನಸಿಗೆ ರೆಕ್ಕೆ ಮೂಡಿದಂತಾಗಿರಬಹುದು. ಶಾಲೆಯಲ್ಲಿ ಯಾವಾಗಲೂ ತಾನೇ ತರಗತಿಗೆ ಪ್ರಥಮಳಾಗಿರುತ್ತಿದ್ದೆ. ಅವಾಗೆಲ್ಲ ಮಾ ಮತ್ತೆ ಬಾಬಾನ ಸಂತೋಷಕ್ಕೆ ಎಣೆಯೇ ಇರ್ತಿರ್ಲಿಲ್ಲ ಅಂತ ಹೇಳೋವಾಗ ಅವಳ ಕಣ್ಣಲ್ಲಿ ಕೋಟಿ ನಕ್ಷತ್ರಗಳು. ಅವಳು ಕಲಿಕೆಯಲ್ಲಿ ಬಹಳ ಚುರುಕು ಅನ್ನೋದು ನನ್ನ ಗ್ರಹಿಕೆಗೂ ಬಂದಿತ್ತು. ಬೆಂಗಾಲಿ ಜೊತೆಗೆ ಹಿಂದಿ ಸಲೀಸು. ಇಂಗ್ಲೀಷು ಕೂಡಾ ತಕ್ಕಮಟ್ಟಿಗೆ. ಇಲ್ಲಿ ಬಂದ ನಂತರ ಕನ್ನಡ ಮಾತನಾಡಲು ಕಲಿತಿದ್ದಳು ಬರುವ ಗಿರಾಕಿಗಳ ಅಲ್ಪಸ್ವಲ್ಪ ಮಾತಿನ ಜೊತೆ ಇಲ್ಲಿದ್ದ ಕನ್ನಡದ ಹೆಣ್ಣುಗಳಿಂದ. ಸ್ವಲ್ಪ ಬೆಂಗಾಲಿ ಛಾಯೆ ಕಂಡರೂ ಸ್ಪಷ್ಟ ಕನ್ನಡ ಮಾತಾಡುತ್ತಾಳೆ. 

ಅವಳ ಬಾಬಾ ಪೋಹ್ಲಾ ಬೋಯ್ಶಾಖ್( ಪೆಹೆಲಾ ಬೈಶಾಖ್ - ಬೆಂಗಾಲಿ ಹೊಸವರ್ಷ) ನಲ್ಲಿ ಕೊಡಿಸಿದ ಸೊಂದೇಶ್(ಒಂದು ಬಗೆಯ ಸಿಹಿತಿಂಡಿ) ನೆನಪು ಇನ್ನೂ ಅವಳ ಮನದಲ್ಲಿದೆ.

ಹೀಗೇ ಸುಂದರವಾಗಿದ್ದ ಬದುಕು ಅವಳ ಬಾಬಾನ ಸಾವಿನ ನಂತರ ಅಂದಗೆಡತೊಡಗಿತ್ತು. ಬಾಬಾ ತೀರಿ ವರ್ಷದೊಳಗೇ ಅವಳಮ್ಮನೂ ಅವರದೇ ಹಾದಿ ಹಿಡಿದು ಇಹಯಾತ್ರೆ ಮುಗಿಸಿದಾಗ ಅವಳ ಬದುಕೇ ಶೂನ್ಯವಾಯಿತು. ದೂರದ ಸಂಬಂಧಿಯೊಬ್ಬರು ಅವಳನ್ನು ತಮ್ಮೊಂದಿಗೆ ಕರೆದೊಯುತ್ತೇನೆಂದಾಗ 'ಬರುವುದಿಲ್ಲ' ಎನ್ನುವ ಆಯ್ಕೆ ಅವಳಿಗಿರಲಿಲ್ಲ. ತನ್ನ ಹಿಂದಿನ ಸಂತಸದ ಬದುಕು ಇನ್ನು ಸಿಗದೆಂಬ ಅರಿವಿದ್ದರೂ ತನ್ನ ಭವಿಷ್ಯ ಎಷ್ಟು ಹೀನಾಯವಾಗಿರಬಹುದೆಂಬ ಕಲ್ಪನೆ ಅವಳಿಗಾಗ ಇರಲಿಲ್ಲ. ಆದರೆ ಕರೆದೊಯ್ದವರ ಉದ್ದೇಶ‌ ಏನೆಂದು ಅವಳಿಗೆ ಅಲ್ಲಿ ಹೋದ ಎರಡೇ ದಿನದಲ್ಲಿ ತಿಳಿದುಹೋಗಿತ್ತು. ಅವಳಿಗೆ ಇಪ್ಪತೈದು ಸಾವಿರ ರೂಪಾಯಿಗಳ ಬೆಲೆ ಕಟ್ಟಿ ಗುರುತು ಪರಿಚಯವಿಲ್ಲದ ದಲ್ಲಾಳಿಯೊಬ್ಬನಿಗೆ ಮಾರಾಟ ಮಾಡಿದ್ದ. ಆ ದಲ್ಲಾಳಿ ಅವಳನ್ನು ಇಲ್ಲಿಗೆ ತಂದಿದ್ದ. ಅಲ್ಲಿಂದ ಮುಂದೆಲ್ಲವೂ ಯಾತನಾ ಪರ್ವವೇ. 

ಇದೆಲ್ಲವನ್ನೂ ಆಕೆ ನನ್ನ ಬಳಿ ಹೇಳಿಕೊಂಡಿದ್ದಳು. ಅವಳ ನೋವಿಗೆ ನಾನು ಕಿವಿಯಾಗುತ್ತಾ ಹೋದಂತೆಲ್ಲಾ ನನ್ನ ನೋವು ತೃಣವಾಗತೊಡಗಿತು. 

ಈ ವಯಸ್ಸಿಗೇ ಈಕೆ ಅನುಭವಿಸಿರುವ ನೋವಿನ ಆಳವೆಷ್ಟು‌‌…...? ಅದನ್ನೂ ಮೀರಿದ ಅವಳ ಜೀವನಪ್ರೀತಿಗೆ ಸಾಟಿಯುಂಟೇ….?

ಯಾರದೋ ತಪ್ಪಿಗೆ ನಾನೇಕೆ ಸಾಯಲಿ? ನಾನು ಖಂಡಿತಾ ಸಾಯಲಾರೆ ಅನ್ನುವವಳೀಕೆ......

ಅದೆಂಥದೋ ಮಮಕಾರ ನನಗವಳ ಮೇಲೆ....

ಅದ್ಯಾವ ಜನುಮದ ಬಂಧುವೇನೋ ಅನಿಸತೊಡಗಿತ್ತು. ಹೊರಜಗತ್ತಿಗೆ ಈ ಸಮನ್ವಿತಾ ಗಂಭೀರೆ. ಆದರವಳೊಂದಿಗೆ ನನ್ನಷ್ಟು ವಾಚಾಳಿ ಮತ್ತೊಬ್ಬರಿಲ್ಲ ಅನ್ನುವಂತಿರುತ್ತಿತ್ತು ನನ್ನ ವರ್ತನೆ.

ಈ ಇಡೀ ಜಗದಲ್ಲಿ ನನ್ನ ಅಂತರಂಗ ಬಲ್ಲಾಕೆ ಅವಳೊಬ್ಬಳೇ..... ನನ್ನ ಆತ್ಮದಂತಹ ಗೆಳತಿ...... ಅವಳಿಗೆ ನನ್ನ ನೋವೆಲ್ಲಾ ಗೊತ್ತು. 

ಒಮ್ಮೆ ಹೇಳಿದ್ದೆ ಅವಳಲ್ಲಿ......

ನಿನ್ನ ಬದುಕಿನ ಮುಂದೆ ನನ್ನ ನೋವೆಲ್ಲಾ ತೃಣವೆನಿಸಿತು ಗೆಳತಿ, ನೀ ಕಾಣುವವರೆಗೂ ಜಗದಲ್ಲಿ ನನ್ನಂಥ ದುರಾದೃಷ್ಟವಂತೆ ಬೇರ್ಯಾರೂ ಇಲ್ಲವೆಂದೇ ನನ್ನ ಭಾವನೆಯಾಗಿತ್ತೆಂದು. ಅದಕ್ಕವಳು ನಸುನಕ್ಕು ಎಂಥಾ ಚೆಂದದ ಉತ್ತರ ಕೊಟ್ಟಿದ್ದಳು..........

"ಅದು ಸಹಜವೇ ಸಮಾ. ಪರರ ಎದೆಗೆ ತಾಕಿದ ಶೂಲಕ್ಕಿಂತ ಯಾವತ್ತೂ ನಮ್ಮ ಕಾಲಿಗೆ ಚುಚ್ಚಿದ ಮುಳ್ಳಿನ ನೋವೇ ಹೆಚ್ಚು. ಪರರ ನೋವಿಗೆ ಸ್ಪಂದಿಸಬಹುದಷ್ಟೇ. ಆದರೆ ಅದು ಅನುಭವಕ್ಕೆ ಸಿಕ್ಕುವುದು, ಅದರಾಳ ಅರಿವಾಗುವುದು ನಮಗೆ ನೋವಾದಾಗ ಮಾತ್ರ. ನನಗೂ ಹಾಗೆಯೇ ನನ್ನ ನೋವೇ ಅಧಿಕ ಎನ್ನಿಸುತ್ತಿತ್ತು. ಆದರೆ ಇಲ್ಲಿ ಇತರೆ ಹುಡುಗಿಯರ ಕಥೆ ಕೇಳಿದಾಗ ಅನಿಸಿತು. ಈ ಜಗದಲ್ಲಿ ನೋವಿಲ್ಲದ ಜೀವವಿಲ್ಲ. ಪ್ರತಿ ಜೀವಿಯೂ ಹುಟ್ಟಿನೊಂದಿಗೆ ನೋವು ನಲಿವಿನ ಬುತ್ತಿ ಹೊತ್ತೇ ಬರುತ್ತದೆ. ನೋವು ನಲಿವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಅವರವರ ಕರ್ಮಫಲದಂತೆ ಇವುಗಳ ಹಂಚಿಕೆ. ಯಾರು ತನಗಿಂತ ಅಧಿಕ ಯಾತನೆಯಲ್ಲಿರುವವರನ್ನು ಕಂಡು ಇವರಿಗಿಂತ ನನ್ನ ಬದುಕೇ ಚೆನ್ನ ಎಂದುಕೊಳ್ಳುವನೋ ಅವನು ಜೀವನದಲ್ಲಿ ನೆಮ್ಮದಿಯಾಗಿರುತ್ತಾನೆ. ಏಕೆಂದರೆ ಆತ ದೇವರು ತನಗೆ ಕೊಟ್ಟ ಶಾಪಗಳಿಗಿಂತ ನೀಡಿದ ವರಗಳನ್ನು ಯಾವಾಗಲೂ ನೆನೆಯುತ್ತಾನೆ."

ಅಂದು ಅವಳ ತಿಳುವಳಿಕೆಗೆ ನಿಜವಾಗಿಯೂ ಬೆರಗಾಗಿದ್ದೆ. ನಾನು ಅವಳಿಗಿಂತ ಬುದ್ಧಿವಂತೆ, ಮೇಧಾವಿ ಅನ್ನುವುದನ್ನು ಯಾರು ಬೇಕಾದರೂ ಒಪ್ಪಬಲ್ಲರು. ಅದಕ್ಕೆ ದಾಖಲೆಯಾಗಿ ನನ್ನ ವಿದ್ಯಾರ್ಹತೆ, ಸಾಧನೆಗಳ ಸರ್ಟಿಫಿಕೇಟುಗಳೂ ಇವೆ. ಆದರೆ ಅವಳದು ನನ್ನಂತೆ ಕೇವಲ ಕೋಶಜ್ಞಾನವಲ್ಲ. ಅದು ಜೀವನಾನುಭವದ ಮೂಸೆಯಿಂದ ದೊರೆತ ಪಾಠ. ಯಾವ ವಿಶ್ವವಿದ್ಯಾಲಯಗಳಲ್ಲೂ ದೊರೆಯದ್ದು. ಬದುಕಿಗಿಂತ ಮಿಗಿಲಾದ ಗುರುವ್ಯಾರು ಜಗದಲ್ಲಿ???

ಅಂದೇ ನಿರ್ಧರಿಸಿದ್ದೆ ಇದು ಇವಳಿರುವ ಜಾಗವೇ ಅಲ್ಲ. ಇವಳು ಈ ನರಕದಿಂದ ಹೊರಬರಲೇಬೇಕು. ನನ್ನೊಡನೆ ಇರಬೇಕು ನನ್ನ ಅಮ್ಮನಂತೆ, ಅಕ್ಕನಂತೆ, ಆತ್ಮಬಂಧುವಿನಂತೆ ಎಂದು. 

ಯೋಚಿಸದಿರು ಗೆಳತೀ.... ಈ ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ನಿನ್ನ ಕನಸು, ಆಸೆಯನ್ನು ನಾನು ಖಂಡಿತಾ ನೆರವೇರಿಸುವೆ. ನಾನೇ ಹಣತೆಯಾಗುವೆ. ದಾರಿತೋರುವೆ ಹೊಸದಿಗಂತಕ್ಕೆ, ನವ ಮನ್ವಂತರಕೆ. ಇದೇ ನನ್ನ ಉಡುಗೊರೆ ನಿನಗೆ. ನಿನ್ನ ಅದಮ್ಯ ಜೀವನೋತ್ಸಾಹಕೆ....

ಗೆಳತೀ..... ಹೌದು..... ನಾನು ಅವಳನ್ನೆಂದೂ ರೂಬೀ ಎಂದು ಸಂಭೋದಿಸಲೇ ಇಲ್ಲ. ನನ್ನ ಮನಸ್ಸು ಆ ಹೆಸರನ್ನು ಉಚ್ಚರಿಸಲು ಯಾಕೋ ಮನಸ್ಸು ಮಾಡಲಿಲ್ಲ. ನಾನವಳನ್ನು ಭೇಟಿಯಾದಗಲೆಲ್ಲಾ ಗೆಳತಿ ಎಂದೇ ಕರೆದದ್ದು.....‌

                       **************

ಆಗಿನಿಂದಲೇ ಕಾರ್ಯೋನ್ಮುಖಳಾಗಿದ್ದೆ ನನ್ನ ಗೆಳತಿಯನ್ನು ಬಿಡುಗಡೆಗೊಳಿಸಲು. ನನ್ನ NGO ಹಾಗೇ ಪೋಲಿಸ್ ಇಲಾಖೆಯಲ್ಲಿದ್ದ ಸ್ನೇಹಿತ ವಿಕ್ರಂ ನ ಸಹಾಯ ಪಡೆದೆ. ನಕಲಿ ಅಪ್ಪ ಅಮ್ಮನ ಸೃಷ್ಟಿಸಿ ಅವರ ಕೈಯಲ್ಲಿ ಮಗಳು ಕಾಣೆಯಾಗಿರುವಳೆಂದು ಕಂಪ್ಲೈಂಟ್ ಕೊಡಿಸಿದೆ. ಇದೇ ಜಾಗದಲ್ಲಿರುವಳೆಂದು ಸುಳಿವೂ ಕೊಡಿಸಿದೆ. ರೈಡ್ ಆಯಿತು. ಅದಕ್ಕೂ ಹೆಚ್ಚಾಗಿ ನನ್ನ ಅಪ್ಪನ ಹೆಸರು ಹಾಗೂ ಹಣ ಸಹಾಯ ಮಾಡಿತೆನ್ನುವುದರಲ್ಲಿ ಎರಡು ಮಾತಿಲ್ಲ. ಜೀವನದಲ್ಲಿ ಪ್ರಥಮ ಬಾರಿಗೆ ಮಿಸ್ಟರ್. ಸತ್ಯಂ ರಾವ್ ಅವರ ಹಣ ಮತ್ತು ಹೆಸರಿನ ಪವರ್ ಬಗ್ಗೆ ಅತೀವ ಸಂತಸವಾಗಿತ್ತು. ಬಹುಶಃ ಅವೆರಡೂ ಒಳ್ಳೆಯ ಉದ್ದೇಶವೊಂದಕ್ಕೆ ಬಳಕೆಯಾದದ್ದು ಇದೇ ಮೊದಲಿರಬೇಕು.

ನಾನು ಆ ದಿನ ಅತೀವ ಸಂತಸದಲ್ಲಿದ್ದೆ. ಇಂದು ನನ್ನ ಗೆಳತಿ ಹೊರಬರುತ್ತಾಳೆ ನರಕ ಸದೃಶ ಬದುಕಿನಿಂದ.......

ಅವಳು ಹೊರಬಂದಾಗ ಅವಳಿಗಾಗುವ ಸಂತೋಷವನ್ನು,  ಅವಳ ಕಣ್ಣುಗಳಲ್ಲಿ ಕಾಣಬಹುದಾದ ಬಿಡುಗಡೆಯ ನೆಮ್ಮದಿಯ ನಿರೀಕ್ಷೆಯಲ್ಲಿ ನಾನು ಕಾತರಳಾಗಿದ್ದೆ....... 

ಆ ಕ್ಷಣ ಕೊನೆಗೂ ಬಂದೇ ಬಿಟ್ಟಿತ್ತು.....



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ