ಸೋಮವಾರ, ಜೂನ್ 29, 2020

ಅನೂಹ್ಯ 35

ಅದೇ ಸಂಧ್ಯೆಯ ಹೊನ್ನಿನ ಬೆಡಗನ್ನು ಆಸ್ವಾದಿಸುತ್ತಾ ತನ್ನ ಆತ್ಮದಂತಹಾ ಗೆಳತಿಗೆ ಪ್ರೇಮ ನಿವೇದಿಸಲು ರಾಶಿ ಕನಸುಗಳ ಚಾದರ ಹೊದ್ದು ಹೊರಟಿದ್ದ ಅಭಿರಾಮ್....

ತನ್ನ ಬದುಕಿನಲ್ಲಿ ಇಂತಹದ್ದೊಂದು ಅನಿರೀಕ್ಷಿತ ತಿರುವು ಬಂದೊದಗಬಹುದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಅವನು. ಪ್ರೀತಿ ಪ್ರೇಮ ಎಂದೂ ಅವನ ಆದ್ಯತೆಯಾಗಿರಲಿಲ್ಲ. ತನ್ನ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಎಂದೂ ಅಂತಹದಕ್ಕೆ ಆಸ್ಪದವಿತ್ತಿರಲಿಲ್ಲ. ಅವನ ಲಕ್ಷ್ಯವೆಲ್ಲಾ ಓದು, ಕೆಲಸ, ಸಂಗೀತ, ಸಾಹಿತ್ಯ ಹಾಗೂ ಬಣ್ಣಗಳ ನಡುವೆ ಹುದುಗಿತ್ತು. ಹಾಗಂತ ಅವನು ಪ್ರೀತಿ, ಪ್ರೇಮವೆಂದರೆ ಎಂದರೆ ಸಿಡುಕು ಮೋರೆ ತೋರುವ, ಮದುವೆಯ ಬಂಧವೇ ಬೇಡವೆಂಬ ಮನಸ್ಥಿತಿಯವನಲ್ಲ. ಅಪ್ಪ ಅಮ್ಮ ಆರಿಸಿದ ಹುಡುಗಿಯನ್ನೇ ಮದುವೆಯಾಗಬೇಕೆಂಬ ಮನೋಭಿಲಾಷೆ ಅವನದು. ಅರೇಂಜ್ ಮ್ಯಾರೇಜ್ ಅವನ ಮನಕ್ಕೆ ಹಿತ. 

ಎಲ್ಲೋ ಹುಟ್ಟಿ ಬೆಳೆದ ಎರಡು ಅಪರಿಚಿತ ಜೀವಗಳನ್ನು ಮದುವೆಯೆಂಬ ಮೂರು ಗಂಟಿನ ನಂಟು ಜೀವನಪರ್ಯಂತ ಬೆಸೆಯುವ ಪರಿಕಲ್ಪನೆಯೇ ಅವನ ಪಾಲಿಗೆ ರೋಮಾಂಚಕಾರಿ. ಘಳಿಗೆಗೆ ಮುಂಚೆ ಏನೂ ಅಲ್ಲದವಳು ಕ್ಷಣ ಮಾತ್ರದಲ್ಲಿ ತನ್ನ ಬದುಕಿನ ಸರ್ವಸ್ವವೂ ಆಗುವುದು ಅದೆಷ್ಟು ಸೋಜಿಗ? ಗಂಡಿಗೆ ವಿವಾಹವೆಂದರೆ ಸಂಗಾತಿಯೆಂಬ ಸಹಚಾರಿಣಿಯ ಆಗಮನವಷ್ಟೇ. ಆದರೆ ಹೆಣ್ಣಿಗೆ? ಆಕೆಗೆ ವಿವಾಹವೆಂದರೆ ಹತ್ತು ಹಲವು ಭಾವನೆಗಳು ಮೇಳೈಸುವ ಸಂಪುಟ. ತನ್ನವರನ್ನು ತೊರೆದು ಹೊಸ ಮನೆ, ಮನಸ್ಸುಗಳನ್ನು ತನ್ನವರನ್ನಾಗಿಸಿಕೊಳ್ಳುವ ಸವಾಲು, ಅವರ ರೀತಿನೀತಿಗಳಿಗೆ ಹೊಂದಿಕೊಳ್ಳುವ ಪರೀಕ್ಷೆ, ಅಲ್ಲಿಯವರೆಗೆ ಮುಚ್ಚಟೆಯಾಗಿ ಬೆಳೆದವಳ ಹೆಗಲ ಮೇಲೆ ಒಮ್ಮೆಲೇ ಏರುವ ಸಂಸಾರವೆಂಬ ಜವಾಬ್ದಾರಿಯ ನೊಗವನ್ನು ಯಶಸ್ವಿಯಾಗಿ ಹೊರುವ ಸವಾಲು, ಮಡದಿ, ಸೊಸೆ, ನಾದಿನಿ, ಅತ್ತಿಗೆ, ಗೃಹಿಣಿ ಎಂಬ ಹಲವು ಪಾತ್ರಗಳನ್ನು ಸಮಾನಾಂತರವಾಗಿ ನಿಭಾಯಿಸುವ ಸವಾಲು. ಇವೆಲ್ಲಕ್ಕಿಂತ ಹೆಚ್ಚಾಗಿ ತವರಿನ ಅಗಲಿಕೆಯ ನೋವನ್ನು ನುಂಗಿ ಹೊಸ ಜಾಗ ಹಾಗೂ ಜನರ ನಡುವೆ ಮನದಲ್ಲಿ ಕಾಡುವ ಹಿಂಜರಿಕೆ, ಅಸುರಕ್ಷಿತ ಭಾವಗಳನ್ನು ಮೀರಿ ಅವರೊಡನೆ ಬೆರೆತು, ತನ್ನವರನ್ನಾಗಿಸಿಕೊಳ್ಳುವ ಸವಾಲು….. ಅದೆಲ್ಲವನ್ನೂ ನಿಭಾಯಿಸುತ್ತಾಳೆ ಆಕೆ. ಅದೇ ಗಂಡಿಗೆ ಈ ಸವಾಲುಗಳು ಎದುರಾಗಿದ್ದರೆ? ನಿಭಾಯಿಸಬಲ್ಲನೇ? ಇಲ್ಲವೆನಿಸುತ್ತಿತ್ತು ಅವನಿಗೆ. ಗಂಡು 'ನಾನು' ಎಂಬ ಪುರುಷಾಹಂಕಾರದಿಂದ ಮೆರೆಯಬಹುದು. ಆದರೆ ಅವಳಿಲ್ಲದೇ ತಾನು ಸಂಪೂರ್ಣನಲ್ಲ ಎಂಬ ಸತ್ಯ ಅವನಿಗೂ ತಿಳಿದಿರುತ್ತದೆ. ಗಂಡು ಸಬಲ, ಹೆಣ್ಣು ಅಬಲೆ, ಅವನ ಆಶ್ರಯವಿಲ್ಲದೇ ಅವಳು ಬದುಕಲಾರಳು ಎಂಬೆಲ್ಲಾ ರೂಢಿಗತ ಮಾತುಗಳ ನಡುವೆ, ಆ ಅಬಲೆಯ ಸಹಕಾರ ಇಲ್ಲದೇ ಈ ಸಬಲ ಹೊಣೆಗಾರಿಕೆ ನಿಭಾಯಿಸಲಾರ ಎಂಬುದೂ ವಾಸ್ತವಿಕ. ಹೆಣ್ಣು ಎಷ್ಟು ಸೂಕ್ಷ್ಮ ಹಾಗೂ ಕೋಮಲೆಯೋ ಅಷ್ಟೇ ಪ್ರಬಲೆ ಹಾಗೂ ದೃಢ ಮನಸ್ಕಳೂ ಹೌದು. ರಚ್ಚೆ ಹಿಡಿದ ಮಗುವಿಗೆ ತಾಯಿಯ ಮಡಿಲು ಹೇಗೋ, ಹಾಗೆಯೇ ಗಂಡಿಗೆ ಹೆಣ್ಣಿನ ಆಸರೆ. ಇದು ಎಲ್ಲಾ ಗಂಡಸರಿಗೂ ತಿಳಿದಿದ್ದರೂ ತಮ್ಮ ಅಹಂ ಬದಿಗಿಟ್ಟು ಅದನ್ನು ಒಪ್ಪಿಕೊಳ್ಳುವವರು ಕಡಿಮೆ. ಆದರೆ ಅವನಿಗೆ ಅದನ್ನು ಒಪ್ಪಿಕೊಳ್ಳಲು ಯಾವುದೇ ಹಿಂಜರಿಕೆ, ಕೀಳರಿಮೆ ಖಂಡಿತಾ ಇಲ್ಲ. ಅದಕ್ಕೆ ಕಾರಣ ಸಚ್ಚಿದಾನಂದ್ ಹಾಗೂ ಮೃದುಲಾ. ಅವರದ್ದು ಮನೆಯವರು ನಿಶ್ಚಯಿಸಿದ ವಿವಾಹವಾದರೂ ಪ್ರೀತಿಸಿ ಮದುವೆಯಾದವರಿಗಿಂತ ಹೆಚ್ಚಿನ ಹೊಂದಾಣಿಕೆ, ಸಹಭಾಗಿತ್ವವಿತ್ತು ಅವರಲ್ಲಿ. ಅದಕ್ಕೂ ಹೆಚ್ಚಾಗಿ ಪರಸ್ಪರ ಮಾತು, ನಿರ್ಧಾರಗಳಲ್ಲಿ ಗೌರವವಿತ್ತು. ಆಕೆ ಅಚ್ಚುಕಟ್ಟಾಗಿ ಪರಿಪಕ್ವತೆಯಿಂದ ಸಂಸಾರವನ್ನು ನಿಭಾಯಿಸಿದ್ದರಿಂದಲೇ ತಾನು ಔದ್ಯೋಗಿಕವಾಗಿ ಅಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಸಚ್ಚಿದಾನಂದ್. ಅಪ್ಪ ಅಮ್ಮನ ಅನುರೂಪ ದಾಂಪತ್ಯವೇ ಅವನ ಅರೇಂಜ್ ಮ್ಯಾರೇಜ್ ಆಸೆಯ ಬೆನ್ನೆಲುಬಾಗಿದ್ದಿದ್ದು. ಅವನು ಆ ಬಗ್ಗೆ ಅಚಲನಾಗಿದ್ದ....... ವರ್ಷಗಳ ಹಿಂದೆ ಸಮನ್ವಿತಾಳನ್ನು ಪೋಲೀಸ್ ಸ್ಟೇಷನ್ನಿನಲ್ಲಿ ನೋಡುವವರಿಗೆ.......

ಠಾಣೆಯಲ್ಲಿ ಅವಳನ್ನು ಕಂಡ ದಿನ ಮೊದಲ ಬಾರಿಗೆ ಅವನ ಮನಸ್ಸು ವಿಚಲಿತಗೊಂಡಿತ್ತು. ಕಾರಣ ಬದುಕಿನ ಬಗ್ಗೆ ಅವಳ ಸ್ಪಷ್ಟ ನಿಲುವು. 'ಜನ ಏನೆನ್ನುತ್ತಾರೆ?' ಎಂಬ ಯೋಚನೆಯ ಗೊಡವೆಗೆ ಹೋಗದೇ ವೇಶ್ಯಾವಾಟಿಕೆಯ ಕಬಂಧ ಬಾಹುಗಳಿಂದ ಹುಡುಗಿಯರನ್ನು ಬಿಡಿಸಿದವಳ ಛಾತಿ ಅವನನ್ನು ದಂಗು ಬಡಿಸಿತ್ತು. ಜೀವನದಲ್ಲಿ ಪ್ರಥಮವಾಗಿ ಆಕೆಯನ್ನು ಅರಸಿದ್ದ. ಸಿಗದಿದ್ದಾಗ 'ಅರೇ.....ತಾನೇಕೆ ಅವಳನ್ನು ಹುಡುಕುತ್ತಿರುವೆ' ಎಂದು ಪ್ರಶ್ನಿಸಿಕೊಂಡಿದ್ದ. ಪ್ರೀತಿಸುತ್ತಿರುವೆನೆಂದು ಒಪ್ಪಿಕೊಳ್ಳಲು ಅವನ ಅಚಲ ನಿರ್ಧಾರ ಅಡ್ಡಿಯಾಗಿತ್ತು. ಅವಳ ನಿಲುವು, ದೃಢತೆಯನ್ನು ಮೆಚ್ಚಿ ಸ್ನೇಹಹಸ್ತ ಚಾಚಲಷ್ಟೇ ಅರಸುತ್ತಿರುವೆ ಎಂಬುದನ್ನು ಅಂತರಾತ್ಮ ಒಪ್ಪಿರಲಿಲ್ಲ. ಈ ನಿರ್ಧಾರ ಹಾಗೂ ಅಂತರಾತ್ಮದ ಕಲಹದಲ್ಲಿ ಆ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ ಅವನಿಗೆ. ಹಾಗಾಗಿ ಏನನ್ನೂ ನಿರ್ಧರಿಸದೇ ಅವಳನ್ನು ತನ್ನ ನೆನಪಿನ ಮೂಲೆಯಲ್ಲೆಲ್ಲೋ ಹುದುಗಿಸಿ ಮರೆತಿದ್ದ ಅಥವಾ ಮರೆತಂತೆ ನಟಿಸಿದ್ದನೇನೋ….... 

ಆದರೆ ವಿಧಿ ವಿಲಾಸ ವಿಚಿತ್ರವಲ್ಲವೇ........ ವರ್ಷಗಳ ನಂತರ ಅವಳು ಅವನ ಕಣ್ಮುಂದೆ ಬಂದಿದ್ದಳು. ಉದ್ದೇಶವೇನೇ ಇದ್ದರೂ ವಿಸ್ಮಯವೆಂಬತೆ ಈ ಭೇಟಿ ಅವರಿಗೇ ತಿಳಿಯದಂತೆ ಇಬ್ಬರ ಕವಲು ಹಾದಿಗಳನ್ನು ಬೆಸೆದು ಒಂದಾಗಿಸುವ ಹುನ್ನಾರವಾಗಿತ್ತು. ಅವಳನ್ನು ಎಲ್ಲಿ ನೋಡಿರುವೆನೆಂದು ನೆನಪಿಸಿಕೊಳ್ಳುವ ತವಕವನ್ನೇ ಅತಿಯಾಗಿ ಪ್ರೀತಿಸಿದ್ದನಾತ. ಅವಳನ್ನು ನೆನಪಿಸಿಕೊಳ್ಳುವುದೇ ಒಂದು ಸಂಭ್ರಮವಾಗಿತ್ತು ಮನಕ್ಕೆ. ಅಂತಹ ಹಿತವಾದ ಅನುಭವವನ್ನು ಕಸಿದಿದ್ದು ರಾವ್ ಅವರ ಪ್ರಸ್ತಾಪ. ಆ ನಂತರದಲ್ಲಿ ತನ್ನ ಮನಸ್ಸು, ಹೃದಯದ ಮಾತಿಗೆ ವಿರುದ್ಧವಾಗಿ ಅವಳನ್ನು ದ್ವೇಷಿಸಲು ಪ್ರಯತ್ನಿಸಿ ಹಿಂಸೆ‌ ಅನುಭವಿಸಿದ್ದ. ಅಪ್ಪ, ಅಮ್ಮ, ಆಕೃತಿ ಮೂವರು ಅವಳನ್ನೇ ವಹಿಸಿಕೊಂಡು ಪಟ್ಟು ಹಿಡಿದಾಗ ಅಪ್ಪ ಅಮ್ಮ ಒಪ್ಪಿದ ಹುಡುಗಿಯನ್ನೇ ಮದುವೆಯಾಗಬೇಕೆಂಬ ತನ್ನ ನಿಲುವನ್ನು ತಾನೇ ಶಪಿಸಿ, ಕೋಪಿಸಿಕೊಂಡಿದ್ದ ಅವಳ ಮೇಲೆ. ಅವಳು ಮನೆಗೆ ಬಂದ ದಿನ ನಡೆದ ಘಟನೆಗಳು, ಅವಳ ನಡವಳಿಕೆ, ಅರಿವಾದ ಸತ್ಯ ಅವನನ್ನು ಗೊಂದಲಕ್ಕೆ ದೂಡಿದ್ದು ಸುಳ್ಳಲ್ಲ. ಅವಳನ್ನು ಒಪ್ಪಿಕೊಳ್ಳಲಾರದೇ ಇತ್ತ ಕಡೆ ದ್ವೇಷಿಸಲೂ ಸಾಧ್ಯವಾಗದೆ ಒದ್ದಾಡಿಹೋಗಿದ್ದ.

ಆದರೆ ಆಸ್ಪತ್ರೆಯಲ್ಲಿ ನವ್ಯಾಳನ್ನು ಕಂಡ ಕ್ಷಣದಲ್ಲಿ ಮೋಡಕವಿದ ಮನದಲ್ಲಿ ಜಡಿಮಳೆಯಾಗಿ ತಮವೆಲ್ಲಾ ಕಳೆದು ಮನದ ಬಾನಿನಲ್ಲಿ ಉಷೆಯ ಆಗಮನವಾಗಿತ್ತು. ವರ್ಷಗಳ ಹಿಂದೆ ತನ್ನ ನಿಲುವನ್ನು ಅಲುಗಾಡಿಸಿ ಕಾಡಿದಾಕೆ, ತಾನು ಮಾಸಗಟ್ಟಲೆ ಅರಸಿದರೂ ಸಿಗದೇ ಮರೆಯಾದ ಮಾಯಾ ಜಿಂಕೆ, ತನಗೇ ತಿಳಿಯದಂತೆ ಮನದೊಳಗೇ ವರ್ಷಗಟ್ಟಲೇ ಸುಪ್ತವಾಗಿ ಉಳಿದಾಕೆ ಇವಳೇ ಎಂಬುದು ಬಹಳ ಸ್ಪಷ್ಟವಾಗಿತ್ತು ಅವನಿಗೆ. ಎಲ್ಲಕ್ಕಿಂತ ಸಂತೋಷವೆಂದರೆ ತಾನು‌ ಮನದಲ್ಲಿ ಧ್ಯಾನಿಸಿದವಳೇ ತನ್ನ ಅಪ್ಪ ಅಮ್ಮನ ಆಯ್ಕೆಯೂ ಕೂಡಾ...... ಇಷ್ಟಾದ ಮೇಲೆ ಅವನ ಖುಷಿಗೆ ಎಣೆಯುಂಟೇ? ನವ್ಯಾಳನ್ನು ಕಂಡು ಎಲ್ಲಾ ನೆನಪಾದ ಕ್ಷಣವೇ ಸಮನ್ವಿತಾಳೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಬೇಕೆಂದುಕೊಂಡಿದ್ದ. ಆದರೆ ಪರಿಸ್ಥಿತಿ ವೈಪರೀತ್ಯದಿಂದಾಗಿ ಸುಮ್ಮನಾಗಿದ್ದ. ಆ ಸುದಿನ ಇಂದು ಒದಗಿ ಬಂದಿತ್ತು.

ಮನದ ತುಂಬಾ ಹರುಷ ಹುಚ್ಚು ಹೊನಲು…...

ಅವನ ಆ ಸುಂದರ ಪ್ರೇಮ ಸಂಜೆಯ ಆಹ್ಲಾದಕ್ಕೆ ಜೊತೆಯಾದದ್ದು ಕಿಶೋರ್ ಕುಮಾರ್ ಅವರ ಮಾಂತ್ರಿಕ ಧ್ವನಿ. ಅದರೊಂದಿಗೆ ತಾನೂ ದನಿಗೂಡಿಸುತ್ತಾ ಸಾಗಿದ್ದ.

ತೂ ಕ್ಯಾ ಜಾನೇ ತೇರೀ ಖಾ಼ತಿರ್ ಕಿತನಾ ಹೆ ಬೇತಾಬ್ ಎ ದಿಲ್

ತೂ ಕ್ಯಾ ಜಾನೇ ದೇಖ್ ರಹಾ ಹೆ ಕೈಸೇ ಕೈಸೇ ಕ್ವಾಬ್ ಎ ದಿಲ್

ದಿಲ್ ಕೆಹತಾ ಹೆ, ತೂ ಹೆ ಯಹಾ ತೋ ಜಾತಾ ಲಮ್ಹಾ ಥಮ್ ಜಾಯೇ

ವಕ್ತ್ ಕ ದರಿಯಾ ಬೆಹತೇ ಬೆಹತೇ ಇಸ್ ಮಂಜ಼ರ್ ಮೆ ಜಮ್ ಜಾಯೇ

ತೂನೇ ದಿವಾನಾ ದಿಲ್ ಕೊ ಬನಾಯಾ ಇಸ್ ದಿಲ್ ಪರ್ ಇಲ್ಜಾಮ್ ಹೆ ಕ್ಯಾ?

ಸಾಗರ್ ಜೈಸೀ ಆಂಕೋ ವಾಲಿ ಯೆ ತೊ ಬತಾ ತೆರಾ ನಾಮ್ ಹೆ ಕ್ಯಾ?

ಹಾಡಿನ ಮುಕ್ತಾಯದೊಂದಿಗೆ ಅವನ ಕಾತರತೆಯ ಪಯಣವೂ ಅಂತ್ಯಗೊಂಡು ತನ್ನ ಗಮ್ಯ ತಲುಪಿದ್ದ.  ಮೊದಲಿಗೆ ಮೀರಾರೊಂದಿಗೆ ಮಾತನಾಡಿ ಅವಳ ಆರೋಗ್ಯದ ಬಗ್ಗೆ ವಿಚಾರಿಸಿದ. ಅವರು ನಾಳೆಯೇ ಡಿಸ್ಚಾರ್ಜ್ ಮಾಡುವ ಎಂದಾಗ ಮನಸ್ಸು ಹಗುರಾಯಿತು. ಅವರೊಂದಿಗೆ ನಾಲ್ಕು ಮಾತನಾಡಿ ಹಾರುವ ನಡಿಗೆಯಲ್ಲೇ ವಾರ್ಡಿನ ಬಳಿ ಬಂದಿದ್ದ.

"ಗುಡ್ ಇವ್ನಿಂಗ್ ಫೋಕ್ಸ್" ಎಂಬ ಧ್ವನಿ ಕೇಳಿ ತಮ್ಮ ಹರಟೆ ಕೊಂಚ ನಿಲ್ಲಿಸಿ ಬಾಗಿಲ ಕಡೆ ಗಮನ ಹರಿಸಿದರು.

"ಹಾಯ್ ಅಭಿರಾಮ್. ಇಷ್ಟು ಬೇಗ ಸಂಜೆ ಆಯ್ತಾ? ಟೈಮ್ ಹೋಗಿದ್ದೇ ಗೊತ್ತಾಗ್ಲಿಲ್ಲ" ಎಂದು ತಲೆಕೆರೆದು ಕೊಂಡ ಕಿಶೋರ್.

"ಅಬ್ಬಾ, ಹೇಗೂ ನೀವು ಬಂದ್ರಲ್ಲ. ಇನ್ಮೇಲೆ ಈ ಜಗಳಗಂಟಿ ಹುಡುಗಿ ಜವಾಬ್ದಾರಿ ನಿಮ್ದು. ನಾವು ಹೇಳಿದ್ದಂತೂ ಇವಳ ತಲೆ ಮೇಲೆ ಹೋಗುತ್ತೇ ಹೊರತು ತಲೆಯೊಳಗೆ ಇಳಿಯೋಲ್ಲ. ನೀವ್ ಹೇಳಿದ್ದು ತಲೆಯೊಳಗೆ ಹೋಗ್ಬಹುದೇನೋ ನೋಡಿ" ತಮಾಷೆಯಾಗಿ ಹೇಳಿದಳು ನವ್ಯಾ.

ಸಿಟ್ಟೇರಿದ ವದನ 'ಕೆಂ'ದಾವರೆಯಾಯಿತು…...

"ನಾನು ಬಾಯ್ತೆರೆಯೋದೆ ಕಡಿಮೆ. ಅಂತದ್ರಲ್ಲಿ ನಾನೇನು ಮಾಡ್ದೆ ಅಂತ ಈ ಜಗಳಗಂಟಿ ಅನ್ನೋ ಬಿರುದು ಕೊಟ್ಟೆ? ಮತ್ತೆ ನಿನ್ನ ಯಾವ ಮಾತು ಕೇಳ್ಲಿಲ್ಲ ನಾನು?" ಬಿರುಸಾಗಿ ಕೇಳಿದಳು.

"ಅಲ್ಲಾ ಡಾಕ್ಟ್ರೇ, ಅಂಗೈ ಮದರಂಗಿಗೆ ಕನ್ನಡಿ ಯಾಕೆ? ನೀವು ಮುಖನ ಬ್ಯಾಡಗಿ ಮೆಣಸಿನ ತರ ಕೆಂಪು ಮಾಡ್ಕೊಂಡು ಕೇಳೋದ್ರಲ್ಲೇ ಗೊತ್ತಾಗಲ್ವಾ ನೀವೆಷ್ಟು ಪಾಪ ಅಂತ? ಇಷ್ಟೆಲ್ಲಾ ಸಿಟ್ಟು ಮಾಡ್ಕೊಂಡ್ರೆ ಬಿಪಿ ಏರುತ್ತೆ, ಆಮೇಲೆ ನಾಳೆ ಡಿಸ್ಚಾರ್ಜ್ ಆಗೋಲ್ಲ ಅಂತ ಡಾಕ್ಟರಮ್ಮನಿಗೆ ಗೊತ್ತಿಲ್ವೇ?" ಅಣಕಿಸಿ ಕೇಳಿದ. ಅವನತ್ತ ಚೂಪು ನೋಟ ಬೀರಿ ಮುಖ ತಿರುಗಿಸಿ ಕೂತಳು.

"ಹೇಗೂ ನೀವಿದ್ದೀರಲ್ಲ ಇಲ್ಲಿ. ನಾವು ಇವಳ ಕ್ವಾಟ್ರಸ್ಸಿಗೆ ಹೋಗಿ ಸ್ನಾನ, ಖಾನಾ, ಪಾನ ಮಾಡ್ಕೊಂಡು ನಿಧಾನಕ್ಕೆ ಬರ್ತೀವಿ. ಅಷ್ಟೊತ್ತಿನ ತನಕ ಇರ್ತೀರಲ್ಲ ಇಲ್ಲಿ" ಅವರಿಬ್ಬರೇ ಮಾತನಾಡಿಕೊಳ್ಳಲಿ ಎಂದು ಕಿಶೋರ್ ಕೇಳಿದ. ಕಣ್ಣಿನಲ್ಲೇ ಅವನಿಗೆ ಧನ್ಯವಾದ ಹೇಳಿದವನು, "ಖಂಡಿತಾ. ನೀವು ಹೋಗ್ಬನ್ನಿ. ನನ್ನ ನೋಡ್ಕೊಳ್ಳೋಕೆ ಡಾಕ್ಟ್ರು ಇದ್ದಾರೆ. ಯೋಚ್ನೇ ಮಾಡ್ಬೇಡಿ" ಎಂದ. ನವ್ಯಾ, ಕಿಶೋರ್ ಸಮನ್ವಿತಾಳಿಗೊಂದು ಬಾಯ್ ಹೇಳಿ ಹೊರಟರು.

"ಇವರಿಬ್ರೂ ನಿಮ್ಗೆ ಸರಿಯಾಗಿದ್ದಾರೆ. ಕಂತೆಗೆ ತಕ್ಕ ಬೊಂತೆ ಅನ್ನೋಹಾಗೆ. ಮೂವರು ಸೇರಿ ಏನ್ ಪ್ಲಾನ್ ಮಾಡಿದ್ದೀರಾ? ಅಲ್ರೀ ಅಭಿರಾಮ್, ನಾನು ಪೇಷೆಂಟ್, ನಿಮ್ಮನ್ನ ನೋಡ್ಕೋಬೇಕಾ? ನೋಡ್ಕೊಳ್ಳೋವಂತಹ ದೊಡ್ಡ ರೋಗ ಏನಾಗಿದ್ಯೋ ತಮಗೆ?"

"ಏನ್ ಡಾಕ್ಟ್ರೇ, ಏನೋ ಪಾಪ, ಬೆಳಗ್ಗೆಯಿಂದ ಇಲ್ಲೇ ಕುತ್ಕೊಂಡು ಅವ್ರಿಗೂ ಬೇಜಾರಾಗಿರೋಲ್ವಾ. ಹೋಗ್ಬರ್ಲಿ ಬಿಡ್ರೀ‌. ಮತ್ತೆ ಅದು ಡಾಕ್ಟ್ರನ್ನ ನೋಡ್ಕೊಳ್ಳೋಕೆ ನಾನಿದ್ದೀನಿ ಅಂತ ಹೇಳೋಕೆ ಹೋದೆ... ನಿಮ್ಮ ಕೋಪಿಷ್ಟ ವದನ ಕಂಡು ಟಂಗ್ ಸ್ಲಿಪ್ ಆಗಿ ಉಲ್ಟಾ ಆಯ್ತು ಅಷ್ಟೇ" ಸ್ಪಷ್ಟೀಕರಣ ನೀಡಿದವನು ಮತ್ತೆ, "ಹೌದು ಡಾಕ್ಟ್ರೇ, ನಂಗೆ ತುಂಬಾ ದೊಡ್ಡ ರೋಗ ಬಂದಿದೆ. ನಿನ್ನೆಯಿಂದ ಎಲ್ಲಿ ನೋಡಿದ್ರೂ ನೀವೇ ಕಾಣ್ತೀರಾ ಅಂತೀನಿ..." 

ಒಮ್ಮೆ ಉರಿಗಣ್ಣಿನಲ್ಲಿ ಗುರಾಯಿಸಿದಳು. 

"ಅಯ್ಯೋ ಡಾಕ್ಟ್ರೇ, ನೀವೇನು ಜಮದಗ್ನಿ ಅಪರಾವತಾರಾನಾ? ಆ ತರ ನೋಡ್ಬೇಡಿ. ನಾನು ಸುಟ್ಟೋದ್ರೆ ಕಷ್ಟ. ನಮ್ಮಪ್ಪ ಅಮ್ಮನಿಗೆ ನಾನೋಬ್ನೇ ಮಗ. ಆಕೃತಿಗೂ ನಾನೊಬ್ನೇ ಅಣ್ಣ ಇರೋದು. ಅದಲ್ಲದೇ ನಮ್ಮ ಮಾವನ ಮಗಳು ನಾನು ಬಂದು ತಾಳಿ ಕಟ್ಟಿ ಕರ್ಕೊಂಡು ಹೋಗ್ತೀನಿ ಅಂತ ಬಕ ಪಕ್ಷಿ ಹಾಗೆ ಒಂಟಿ ಕಾಲಲ್ಲಿ ಕಾದು ನಿಂತಿದ್ದಾಳೆ. ದೇವ್ರಂಥಾ ಹುಡುಗಿ ಆದ್ರೆ ಸ್ವಲ್ಪ ಮೆಂಟ್ಲು. ಮೊನ್ನೆ ನಮ್ಮಾವನತ್ರ ಜಗಳ ಆಡ್ಕೊಂಡು ಬಂದು ಸಿಟ್ಟಲ್ಲಿ ಇಡೀ ರಾತ್ರಿ ಶವರ್ ಕೆಳಗೆ ಕೂತು ಬೆಳಿಗ್ಗೆ ಹಾಸ್ಪಿಟಲ್ನಲ್ಲಿ ಡ್ರಿಪ್ಸ್ ಹಾಕ್ಕೊಂಡು ಮಲ್ಗಿದ್ದಾಳೆ‌ ನೋಡಿ... "

"ರೀ ಯಾರ್ರೀ ಮೆಂಟಲ್? ನಾನು ನೀವು ತಾಳಿ ಕಟ್ತೀರಾ ಅಂತ ಬಕ ಪಕ್ಷಿ ತರ ಕಾಯ್ತಿದ್ದೀನಾ? ಯಾಕೆ, ನಟ್, ಬೋಲ್ಟ್ ಲೂಸಾಗಿದ್ಯಾ?" 

"ಅಯ್ಯೋ ನೀವಲ್ಲಾರೀ. ನಮ್ಮಾವನ ಮಗಳು. ಆದ್ರೂ ನೀವಿಷ್ಟು ಆಸೆ ಪಡ್ತಿದ್ದೀರಾ ಅಂದ್ರೆ ನಂಗೇನೂ ತೊಂದ್ರೆ ಇಲ್ಲಪ್ಪಾ. ಹೇಳಿ ಯಾವಾಗ ಮದ್ವೆಯಾಗೋಣ ಡಾಕ್ಟ್ರೇ...."

ತನ್ನ ಮಾತನ್ನು ತನಗೇ ವಾಪಾಸಾಗಿಸಿದ ಅವನ ವರಸೆಗೆ ನಕ್ಕವಳು, "ಹಳ್ಳಕ್ಕೆ ಬೀಳೋದು ಯಾವಾಗಾದರೇನು? ಈಗ್ಲೇ ಆಗ್ಬಿಡೋಣ. ಬೇಗ ಹೋಗಿ ತಾಳಿ ತಗೊಂಡ್ಬನ್ನಿ" ಮತ್ತೆ ನಕ್ಕಳು. ಅವಳನ್ನೇ ತದೇಕಚಿತ್ತದಿಂದ ನೋಡಿದ.

"ಇವತ್ತು ನಿಮಗೆ ತುಂಬಾ ಖುಷಿಯಾಗಿದೆ ಅಲ್ವಾ ಡಾಕ್ಟ್ರೇ?" ಅವಳ ಮನಸ್ಸನ್ನು ಓದಿದಂತೆ ನುಡಿದ. ಕ್ಷಣ ಯೋಚಿಸದೆ ಹೌದೆಂದು ತಲೆಯಾಡಿಸಿದಳು.

"ಯಾಕೆ ಅಂತ ಕೇಳಬಹುದಾ?"

"ಅಯ್ಯೋ ರಾಮ, ಏನ್ರೀ ಹೀಗೆ ಕೇಳ್ತಿದ್ದೀರಿ? ನೀವು ನನ್ನ ಮದ್ವೆ ಮಾಡ್ಕೋತೀರಾ ಅಂತ ನಾನು ಇಷ್ಟು ಸಂತೋಷದಲ್ಲಿದ್ರೆ, ನೀವು ಖುಷಿಗೆ ಕಾರಣ ಕೇಳ್ತಿದ್ದೀರಲ್ಲ…..." ಬೇಸರದಿಂದ ಹೇಳಿದಳು. ಅವನು ನಸುನಕ್ಕ.

"ಹ್ಮಂ... ಅದೂ ಹೌದಾದ್ರೂ ಅದಕ್ಕೂ ಮೀರಿದ ಕಾರಣವೇನೋ ಇದೆ. ನೀನು ಈ ತರ ಮಾತಾಡೋಳಲ್ಲ. ಇಷ್ಟು ಮಾತಂತೂ ಆಡೋದೇ ಇಲ್ಲ ಈ 'ಮಾತು ಬೆಳ್ಳಿ ಮೌನ ಬಂಗಾರ'ದ ಹುಡುಗಿ.

ನಿಮ್ಮಪ್ಪ ಅಮ್ಮ ಬಂದಿದ್ರಾ?"ಕೇಳಿದ.

ತಟ್ಟನೆ ತಲೆ ಎತ್ತಿ ಅವನ ಕಣ್ಣುಗಳಲ್ಲಿ ಇಣುಕಿದಳು. 'ಯಾರೀತ? ಕೆಲದಿನಗಳ ಮುಂಚಿನ ಪರಿಚಯ, ಹಾಗೆ ನೋಡಿದರೆ ಅವನ ಮನೆಯ ಉಳಿದ ಸದಸ್ಯರಷ್ಟು ಪರಿಚಿತನಲ್ಲ. ನನ್ನ ತಂದೆಯ ಷಡ್ಯಂತ್ರದಲ್ಲಿ ಅನಿವಾರ್ಯವಾಗಿ ನಮ್ಮ ಬದುಕಿನ ಹಾದಿಗಳು ಮುಖಾಮುಖಿಯಾದ್ದರಿಂದ ಪರಿಚಯ ಕೊಂಚ ವಿಸ್ತಾರವಾಗಿದೆಯಷ್ಟೇ. ಅದರ ಹೊರತು ಈತ ಅಪರಿಚಿತನೇ. ಆದರೆ ನಾನು ಯಾರೊಂದಿಗೂ ಹೇಳಿಕೊಳ್ಳದೇ ಆಂತರ್ಯದಲ್ಲಿ ಉಳಿಸಿಕೊಳ್ಳುವ ಕೊರಗು ಇವನಿಗೆ ಹೇಗೆ ತಿಳಿದುಬಿಡುತ್ತದೆ? ನಿನ್ನೆಯಿಂದ ಗಮನಿಸುತ್ತಿರುವೆ. ನನ್ನ ಮನದ ಮಾತನ್ನು ಹೇಳದೇ ಸ್ಪಷ್ಟವಾಗಿ ಅರಿಯುತ್ತಾನೆ ಇವನು. ನನಗೂ ಇಂದು ಬೆಳಗಿನಿಂದಲೇ ತಂದೆಯ ಆಗಮನದ ನಿರೀಕ್ಷೆಯಿತ್ತು. ಏನೋ ದುಗುಡ, ಚಡಪಡಿಕೆ ಕಾಡಿತ್ತು. ನವ್ಯಾ, ಕಿಶೋರನೊಂದಿಗೂ ಹೇಳಿಕೊಂಡಿರಲಿಲ್ಲ. ಆದರೆ ಇವನು ಅದನ್ನೇ ಬೆಳಿಗ್ಗೆ ನನಗೆ ಹೇಳಿಹೋಗಲಿಲ್ಲವೇ? ನನಗೆ ಭಾಸವಾದದ್ದು ಅವನಿಗೂ ತಿಳಿಯುವುದೆಂತು? ಅಷ್ಟೇ ಏಕೆ....? ಅಪ್ಪನ ಕುಟಿಲ ಪ್ರಸ್ತಾಪದ ಬಗ್ಗೆ ತಿಳಿದ ಆ ಕ್ಷಣ, ಏನೂ ತೋಚದೇ, ಪೆಟ್ಟು ತಿಂದ ಪಕ್ಷಿಯಂತೆ ಒದ್ದಾಡುತ್ತಿದ್ದ ನನ್ನ ಮನಸ್ಥಿತಿಯನ್ನು ಅದೆಷ್ಟು ಸರಿಯಾಗಿ ಅರ್ಥೈಸಿಕೊಂಡಿದ್ದ. ನನ್ನ ಮೌನವನ್ನು ತೆರೆದಿಟ್ಟ ಪುಸ್ತಕದಂತೆ ಓದಬಲ್ಲ ಏಕೈಕ ವ್ಯಕ್ತಿ ಇವನು ಎಂದು ಅಂದೇ ಅನಿಸಿತ್ತು. ತಾಯ್ತಂದೆ ಎಂಬ  ರಕ್ತಸಂಬಂಧಗಳೇ ಅಪರಿಚಿತರಾಗಿ ಉಳಿದ ನನ್ನ ಬದುಕನ್ನು ಈ ಕಿರು ಪರಿಚಯ ಏಕಿಷ್ಟು ಗಾಢವಾಗಿ ಆವರಿಸುತ್ತಿದೆ? ನನ್ನ ಮನಸ್ಸೇಕೆ ಬೇಡವೆಂದರೂ ಈತನೆಡೆಗೆ ವಾಲುತ್ತಿದೆ? ಇವನೊಂದಿಗೆ ಇದ್ದರೆ ಅದೆಷ್ಟು ಸುರಕ್ಷತಾ ಭಾವ........ ನಾನು ನನ್ನೊಡನೇ ಇದ್ದೇನೆ ಎನ್ನುವಷ್ಟು ಆಪ್ತತೆ…...... ನನ್ನೆಲ್ಲಾ ಅಸಂಪೂರ್ಣತೆಗಳ ನಡುವೆಯೂ ನಾನು ಪರಿಪೂರ್ಣಳು ಎಂಬ ಭಾವ ಇವನು ಬಳಿ ಇದ್ದಾಗ ಮಾತ್ರ ನನಗೆ ಭಾಸವಾಗುವುದು. ಯಾರೊಂದಿಗೂ ಹೆಚ್ಚು ಬೆರೆಯದ, ಮಾತನಾಡದ, ರಿಸರ್ವ್ಡ್ ಎನ್ನಬಹುದಾದ ಹುಡುಗಿ ನಾನು‌. ನವ್ಯಾಳೊಂದಿಗೆ ಒಂದೇ ಭೇಟಿಯಲ್ಲಿ ಆತ್ಮೀಯತೆ ಬೆಳೆದದ್ದಕ್ಕೆ ಗಹನವಾದ ಕಾರಣವಿತ್ತು. ಇನ್ನು ಕಿಶೋರನೊಂದಿಗೆ ಆತ್ಮೀಯತೆ ಬೆಳೆಸಿಕೊಂಡದ್ದೂ ಭೇಟಿಯಾಗಿ ಎರಡು ತಿಂಗಳುಗಳ ನಂತರವೇ. ಆದರೆ ಒಡನಾಟವೇ ಇಲ್ಲದ ಇವನೊಂದಿಗೆ ಕಳೆದೆರಡು ದಿನದಿಂದ ನಾನೆಷ್ಟೊಂದು ಸಲಿಗೆಯಿಂದ ಹರಟುತ್ತಿದ್ದೇನೆ……. ಏಕೆ ಹೀಗೆ?' 

"ಯಾಕಮ್ಮಾ ಏನೂ ಮಾತಾಡ್ತಿಲ್ಲ ನೀನು? ನಿಮ್ಮಪ್ಪ ಬೈದ್ರಾ ನಿಂಗೆ?" ತನ್ನನ್ನೇ ನೆಟ್ಟ ನೋಟದಲ್ಲಿ ನೋಡುತ್ತಿದ್ದವಳನ್ನು ಕೇಳಿದ.

"ಹಾಗೇನೂ ಇಲ್ಲ. ತುಂಬಾ ಪ್ರೀತಿಯಿಂದ ಮಾತಾಡಿದ್ರು. ಮನೆಗೆ ಹೋಗೋಣ ಅಂತ ಒತ್ತಾಯ ಮಾಡಿದ್ರು. ನಾನು ಮೊನ್ನೆ ತುಂಬಾ ಒರಟಾಗಿ ನಡ್ಕೊಂಡ್ಬಿಟ್ಟೆ ಅವರ ಹತ್ರ ಅನ್ನಿಸ್ತು. ಮನೆ ಅಂದ್ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ. ಅದನ್ನೇ ದೊಡ್ಡದಾಗಿ ಮಾಡ್ಬಾರ್ದಿತ್ತು ನಾನು. ಅವ್ರು ನನ್ನೊಳ್ಳೇದಕ್ಕೇ ಮಾಡಿರೋದಲ್ವಾ? ಅದಕ್ಕೇ ನಾಳೆ ಡಿಸ್ಚಾರ್ಜ್ ಆಗಿ ಅಲ್ಲಿಗೇ ಹೋಗ್ತೀನಿ. ಬರ್ತಾರೆ ಅವ್ರು ಕರ್ಕೊಂಡುಹೋಗೋಕೆ"  ಅವನನ್ನು ಪರೀಕ್ಷಿಸಲೆಂದೇ ಹೇಳಿದ್ದಳು. 

ಅವನು ಮೌನವಾಗಿ ಅವಳನ್ನೇ ನೋಡತೊಡಗಿದ. ಕ್ಷಣಗಳು ಉರುಳಿದರೂ ನೋಟವೂ ಸರಿಯಲಿಲ್ಲ,  ಮಾತೂ ಹುಟ್ಟಲಿಲ್ಲ. ಅವನ ನೋಟದಲ್ಲಿದ್ದ ಭಾವನೆ ಅರ್ಥೈಸಿಕೊಳ್ಳಲಾಗದೇ ಚಡಪಡಿಸಿದಳು. ಅಸಹನೀಯ ಮೌನ ಬೇರೆ....

"ಅದ್ಯಾಕೆ ಹಾಗೆ ನೋಡ್ತಿದ್ದೀರಾ? ಏನಾದ್ರೂ ಮಾತಾಡಿ" ಇನ್ನು ಮೌನ ಸಹಿಸಲಾರೆನೆಂಬಂತೆ ಕೇಳಿದಳು.

"ನಿಮ್ಮಪ್ಪ ಅಮ್ಮ ನೀನು ಹೂಂ ಅಂದ್ರೆ ಈಗ್ಲೇ ನಿನ್ನ ಮನೆಗೆ ಕರ್ಕೊಂಡು ಹೋಗ್ತಾರೆ. ಇವತ್ತೂ ಅದೇ ಉದ್ದೇಶದಿಂದ ಇಲ್ಲಿಗೆ ಬಂದಿರ್ತಾರೆ. ಆದ್ರೆ ....... ನೀನು ಹೋಗ್ಬೇಡಾ ಸಮನ್ವಿತಾ. ಯಾಕೆಂದ್ರೆ ನೀನಲ್ಲಿಗೆ ಹೋದ್ರೆ ಹೆಚ್ಚೆಂದ್ರೆ ವಾರದೊಳಗೆ ನೀನು ಮಿಸ್ಸೆಸ್ ಅಭಿರಾಮ್ ಶರ್ಮಾ ಆಗ್ತೀಯಾ......... ಅದು ನಿನ್ಗೂ ಚೆನ್ನಾಗಿ ಗೊತ್ತು." ಅವಳ ಮೇಲಿನ ನೋಟ ಸರಿಸದೇ ಹೇಳಿದ.

"ಆಗ ನಿಮ್ಗೆ ಇನ್ನೂ ಒಳ್ಳೇದಾಯ್ತಲ್ವಾ? ನನ್ನ ಹಿಂದೆ ಹೀಗೆ ಅಲೆಯೋದು ತಪ್ಪುತ್ತೆ. ನಿಮ್ಮ ಮನೆಯವರೆಲ್ಲಾ ಆಸೆಪಟ್ಟಂತೆ ನಡೆಯುತ್ತೆ. ನೀವೂ ನಿನ್ನೆಯಿಂದ ಮದ್ವೆ ಮಾಡ್ಕೋ ಅಂತ ತಾನೇ ದುಂಬಾಲು ಬಿದ್ದಿರೋದು?" ಹುಬ್ಬು ಹಾರಿಸಿ ಕೇಳಿದಳು.

"ಪರವಾಗಿಲ್ವೇ ಹುಡುಗಿ. ಭಾರಿ ಜೋರಿದ್ದೀ ನೀನು. ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದೇ ಇರೋ ಅಬೋಧ ಬಾಲಕಿ ತರ ಇರ್ತೀಯಾ. ನಾನೆಷ್ಟು ಕಷ್ಟ ಪಟ್ಟು ಸರ್ಕಸ್ ಮಾಡ್ತಿದ್ರೆ ನೀನು ಆರಾಮಾಗಿ ಕುತ್ಕೊಂಡು ಮಜಾ ತಗೋತಿದ್ಯಾ? ನಿನ್ನ ಈ ರೂಪದ ಬಗ್ಗೆ ನನಗೇನು ಗೊತ್ತಿರ್ಲಿಲ್ಲ"

"ಆಕ್ಚುಲಿ ನನಗೂ ಗೊತ್ತಿರ್ಲಿಲ್ಲ ನಾನು ಹೀಗೆಲ್ಲಾ ಆಡ್ತೀನಿ ಅಂತ. ನೀವು ಬಂದ್ಮೇಲೆ ಹೀಗಾಗಿರೋದು. ಅದೇನೋ ಹೇಳ್ತಾರಲ್ಲ. ಕೋತಿ ತಾನು ಕೆಡೋದಲ್ದೇ ವನನೆಲ್ಲಾ ಕೆಡಿಸ್ತು ಅಂತ. ಹಾಗಾಯ್ತು ಕಥೆ…..." ನಿಜವನ್ನೇ ಉಸುರಿದ್ದಳು. ಉಳಿದವರೆದುರು ಘನ ಗಂಭೀರೆ ಅವಳು. ಇವನನ್ನು ನೋಡಿದರೆ ಮಾತ್ರ ಮನಸ್ಸು ಹಾದಿ ತಪ್ಪುತಿತ್ತು.

"ತಗೋಳಪ್ಪಾ, ಮಾಡೋದೆಲ್ಲಾ ಮಾಡಿ ಕೊನೆಗೆ ಎಲ್ಲಾ ನನ್ನ ತಲೆ ಮೇಲೆ ಎತ್ತಾಕಿದ್ರೆ ಆಯ್ತು. ಥೂ, ಒಳ್ಳೇ ಡಸ್ಟ್ ಬಿನ್ ತರ ಆಗೋಯ್ತು ನನ್ನ ಕಥೆ. ರೀ ಡಾಕ್ಟ್ರೇ, ನಾನ್ಯಾವತ್ತು ನಿಮ್ಗೆ ಇಂತಹ ವಿದ್ಯೆ ಧಾರೆ ಎರ್ದಿದ್ದು? ನನ್ನಂತ ಒಳ್ಳೇ ಹುಡುಗನ್ನ ಕೋತಿ ಮಾಡ್ಬಿಟ್ರಲ್ಲಾ. ಇರ್ಲಿ ಬಿಡಿ ಒಳ್ಳೇದೇ. ಈಗ ನಾನು ಕೋತಿ ಆದ್ರೆ, ನಮ್ಮಾವನ ಮಗಳು, ಭಾವಿ ಹೆಂಡ್ತಿ ನೀವೂ ಕೋತಿನೇ ಅಲ್ವಾ. ನೀವು ಕಂಪನಿ ಕೊಡ್ತೀರಾ ಅಂದ್ರೆ ನಾನು ಕೋತಿ ಯಾಕೆ ವಾಟಾಳ್ ನಾಗರಾಜ್ ಅವರ ಕತ್ತೆ ಆಗೋಕೂ ರೆಡಿ"

"ಮತ್ತೆ ಸುತ್ತಿ ಬಳಸಿ ಅಲ್ಲಿಗೇ ಬಂತು ಮಾತು. ಏನು ಹೇಳಿದ್ರೂ ಕೊನೆಗೆ ಅಲ್ಲೇ ತಂದು ನಿಲ್ಲಿಸ್ತೀರಾ. ಅದು ಬಿಡಿ, ನನ್ನ ಪ್ರಶ್ನೆಗೆ ಉತ್ತರವೇ ಹೇಳ್ಲಿಲ್ಲ ನೀವು. ನಮ್ಮಪ್ಪ ವಾರದೊಳಗೆ ನನ್ನ ಮದುವೆ ಮಾಡ್ಸಿದ್ರೆ ರೋಗಿ ಬಯಸಿದ್ದು ವೈದ್ಯ ಹೇಳಿದ್ದೂ ಎರಡೂ ಒಂದೇ ಆಗೋಲ್ವಾ? ಮತ್ಯಾಕೆ ನನ್ನ ಮನೆಗೆ ಹೋಗ್ಬೇಡ ಅಂದಿದ್ದು" ಅವಳಿಗೆ ಅವನ್ಯಾಕೆ ಹಾಗೆ ಹೇಳಿದ ಎಂಬುದನ್ನು ತಿಳಿಯಬೇಕಿತ್ತು‌.

"ಹೇಳ್ಲೇಬೇಕಾ?"

"ಇಲ್ಲೇನು ಅಮಿತಾಭ್ ಬಚ್ಚನ್ ಕೆ.ಬಿ.ಸಿ ನೆಡ್ಸಿಕೊಡ್ತಿದ್ದಾರಾ ನಿಮ್ಗೆ ನಾಲ್ಕು ಆಯ್ಕೆ ಕೊಡೋಕೇ? ಹೇಳ್ಬೇಕು ಅಂದ್ರೆ ಹೇಳ್ಬೇಕಷ್ಟೇ. ಬೇರೆ ಆಯ್ಕೆ ಇಲ್ಲ." ತೋರು ಬೆರಳು ತೋರಿ ವಾರ್ನಿಂಗ್ ಮಾಡುವವಳಂತೆ ಹೇಳಿದಳು.

'ಥತ್ತೇರಿ, ಇವಳನ್ನು ಮದ್ವೆ ಆದ್ಮೇಲೆ ಪಕ್ಕಾ ನಾನು ನಮ್ಮಪ್ಪನ್ನೂ ಮೀರಿಸೋ ಅಮ್ಮಾವ್ರ ಗಂಡ ಆಗೋದು ಗ್ಯಾರಂಟಿ. ಒಳ್ಳೆ ನಾಗವಲ್ಲಿ ರೇಂಜಿಗೆ ಕೇಳ್ತಾಳಲ್ಲಪ್ಪಾ' ಅವನ ಮನ ಸ್ವಗತದವಲ್ಲಿ ಭವಿಷ್ಯವನ್ನು ಯೋಚಿಸತೊಡಗಿತು.

"ಪ್ಲೀಸ್ ಹೇಳಿಪ್ಪಾ, ನೀವ್ಯಾಕೆ ಹಾಗೆ ಹೇಳಿದ್ದು?" ಗೋಗರೆದಳು ಪುಟ್ಟ ಮಗುವಿನಂತೆ. ಅವಳ ಬಿನ್ನಹದ ಪರಿ ಕಂಡು ನಕ್ಕವನು ಗಂಭೀರನಾದ.

"ಹಾಗೆ ನಿಮ್ಮಪ್ಪ ವಾರದಲ್ಲಿ ಮದ್ವೆ ಮಾಡ್ಸಿದ್ರೆ ನಿನ್ಗೆ ಸಂತೋಷನಾ? ಖುಷಿಯಾಗಿರ್ತೀಯಾ ನೀನು?"

ಅವನ ಪ್ರಶ್ನೆಗೆ ಉತ್ತರ ಹೇಳಬೇಕೆನಿಸಲಿಲ್ಲ ಅವಳಿಗೆ. ಅವನು ಉತ್ತರವನ್ನು ನಿರೀಕ್ಷಿಸಲಿಲ್ಲ ಕೂಡಾ.... 

"ನಿನಗೆ ಹೇಳದೇ ಮದುವೆ ಪ್ರಸ್ತಾಪ ಮಾಡಿದಕ್ಕೆ ಅಷ್ಟೊಂದು ಘಾಸಿಗೊಂಡ ನೀನು, ವಾರದೊಳಗೆ ನನ್ನ ಮದ್ವೆಯಾಗಿ ಸಂತೋಷವಾಗಿರ್ತೀಯಾ ಅಂತ ಭ್ರಮಿಸುವಷ್ಟು ಮೂರ್ಖ ನಾನಲ್ಲ. ಅದು ನಿನ್ಗೆ ಜೀವನ ಪರ್ಯಂತ ಹಿಂಸೆ ಕೊಡ್ತಾನೆ ಇರುತ್ತೆ. ನಿನಗೆ ಅದನ್ನು ಸಹಿಸಿಕೊಂಡು ಬದುಕೋ ಶಿಕ್ಷೆ ಕೊಡೋಕೆ ನಾನು ತಯಾರಿಲ್ಲ. ಹೌದು..... ನನಗೆ ನೀನೂಂದ್ರೇ ಬಹಳ ಇಷ್ಟ. ಈ ದಿನಗಳಲ್ಲಿ ನಿನ್ನನ್ನು, ನಿನ್ನ ವ್ಯಕ್ತಿತ್ವವನ್ನು ಪ್ರೀತಿಸಿದಷ್ಟು, ಆರಾಧಿಸಿದಷ್ಟು ನನ್ನನ್ನು ನಾನು ಪ್ರೀತಿಸಿಲ್ಲ. ಆದ್ರೆ ಅದು ನನ್ನ ಭಾವನೆಗಳು. ನನ್ನಂತೆ ನಿನಗೂ ನಿನ್ನದೇ ಆದ ಭಾವನೆಗಳಿವೆಯಲ್ಲವೇ? ನಿನ್ನ ಭಾವನೆ, ಅನಿಸಿಕೆಗಳನ್ನು ಕೊಂದುಕೊಂಡು ನನ್ನ ಜೊತೆ ಜೀವನ ನಡೆಸುವ ಒತ್ತಡಕ್ಕೆ ನೀನ್ಯಾವತ್ತೂ ಒಳಗಾಗಬಾರದು. ಮದುವೆ ಅನ್ನೋದು ಎರಡು ಮನಸ್ಸುಗಳನ್ನು ಸೇರಿಸುವ ಸೇತುವೆ……. ಅದು ಬಂಧವಾಗಬೇಕೇ ವಿನಹಾ ಬಂಧನವೆನಿಸಬಾರದು. ಎರಡು ಮನಸ್ಸುಗಳು ಇಷ್ಟಪಟ್ಟು ಆ ಬಂಧ ಏರ್ಪಟ್ಟರೇ ಚೆಂದ. ಯಾರದೋ ಒತ್ತಾಯಕ್ಕೆ ಮಣಿದು ನೀನು ನನ್ನ ವರಿಸುವುದು ಸುತಾರಾಂ ಇಷ್ಟವಿಲ್ಲ ನನಗೆ. ನೀನು ನಿನ್ನ ಮನಃಪೂರ್ವಕವಾಗಿ ನನ್ನ ಒಪ್ಪಿದರೆ ಸಾಕು. ನಿಮ್ಮಪ್ಪನ ಅನುಮತಿ, ಅಪ್ಪಣೆಯೂ ನನಗೆ ಬೇಕಿಲ್ಲ. ನೀನು ಒಪ್ಪಲಿಲ್ಲಾ ಅಂದ್ರೆ........" ಮಾತು ನಿಲ್ಲಿಸಿದ. ಅವನ ಮಾತು ಮತ್ತೆ ಅವಳನ್ನು ಕಾಡಿಸತೊಡಗಿತು.

"ನನಗೇನು ಹೇಳ್ಬೇಕೋ ತಿಳಿಯುತ್ತಿಲ್ಲ ಮಿಸ್ಟರ್ ಶರ್ಮಾ. ನೀವು ಬಹಳ ಒಳ್ಳೆಯವರು. ಅಷ್ಟೇ ಚೆಂದದ ಮನವಿದೆ. ನಿಮ್ಮಷ್ಟೇ ಸರಳ, ಸಜ್ಜನರಿಂದ ತುಂಬಿದ ಕುಟುಂಬವಿದೆ. ತನು, ಮನ, ಧನ ಮೂರರಲ್ಲೂ ಸಿರಿವಂತರು. ಸಮಾಜದಲ್ಲಿ ಒಳ್ಳೆಯ ಹೆಸರಿದೆ. ನೀವು ಹೂಂ ಅಂದ್ರೆ ಅಷ್ಟೇ ಸುಗುಣ, ಸಜ್ಜನ ಪರಿವಾರದ ಒಳ್ಳೆಯ ಹುಡುಗಿಯರಿಗೇನು ಬರವೇ? ಅದೆಲ್ಲಾ ಬಿಟ್ಟು ನೀವ್ಯಾಕೆ ನನ್ನಂತಹ ನತದೃಷ್ಟಳ ಹಿಂದೆ ಬಿದ್ದಿದ್ದೀರಾ? ನಾನು ಒಳ್ಳೆಯವಳಲ್ಲ ಅನ್ನೋದಕ್ಕಿಂತ ನನ್ನ ಪರಿಸ್ಥಿತಿಗಳು ಸರಿಯಿಲ್ಲ. ಅಪ್ಪ ಅಮ್ಮನಿಗೇ ಅಗತ್ಯವಿಲ್ಲದ ಮಗಳು, ಇನ್ನು ಅವರೋ ತಮ್ಮ ಸ್ವಾರ್ಥಕ್ಕಾಗಿ ಯಾರನ್ನಾದ್ರೂ ಬಲಿ ಕೊಡೋ ಕಟುಕರು, ಹೈಲೀ ಇನ್ಸೆಕ್ಯೂರ್ಡ್ ಹುಡುಗಿ, ನನ್ನ ಸುರಕ್ಷತಾ ವಲಯ ಬಿಟ್ಟು ಬೇರೆಯವರೊಂದಿಗೆ ಹೊಂದಿಕೊಳ್ಳಲು ಕಷ್ಟಪಡುವಾಕೆ.... ಇಂತಹ ನನ್ನ ಜೊತೆ ಯಾರೂ ಸಂತೋಷವಾಗಿರೋಕೆ ಸಾಧ್ಯವೇ ಇಲ್ಲ. ನನ್ನ ಫ್ರೆಂಡ್ಸ್ ಆಗಿರೋ ತಪ್ಪಿಗೆ ಇವತ್ತು ನವ್ಯಾ ಮತ್ತೆ ಕಿಶೋರ್ ಕೂಡಾ ನಮ್ಮಪ್ಪ ಅಮ್ಮನ ಬಾಯಿಗೆ‌ ಆಹಾರವಾಗಬೇಕಾಯ್ತು…... ಅಂತಹ ಆಸಕ್ತಿ ನಿಮಗ್ಯಾಕೆ? ನನ್ನನ್ನು ಮದ್ವೆ ಆಗೋನಿಗೆ, ಅವನ ಕುಟುಂಬದವರಿಗೆ ಕಷ್ಟ ಕಾರ್ಪಣ್ಯಗಳು ಫ್ರೀ ಪ್ಯಾಕೇಜಲ್ಲಿ ಸಿಗುತ್ತೆ ನಮ್ಮಪ್ಪ ಅಮ್ಮನ ರೂಪದಲ್ಲಿ. ಪ್ರತೀ ಕ್ಷಣ ಅವರೊಟ್ಟಿಗೆ ಏಗಬೇಕು ಅವನು. ಇದೆಲ್ಲಾ ಬೇಕಾ ನಿಮ್ಗೇ? am imperfect match to you Mr.Perfect" ತನ್ನ ಮನದ ತಳಮಳ ವಿವರಿಸಿ ಹೇಳಿದಳು ಹುಡುಗಿ.

"ಅದೇನೋ ಸರಿಯೇ. ಇವಳು ಹೈಲೀ ಇನ್ಸೆಕ್ಯೂರ್ಡ್ ಹುಡುಗಿ, ರಿಸರ್ವ್ಡ್ ನೇಚರ್. ನನ್ನ ಬಿಟ್ಟು ಬೇರ್ಯಾರ ಹತ್ರವೂ ಹೀಗೆ ಬಾಯಿಬಡ್ಕಿ ತರ ಆಡಲ್ಲ ನೀನು. ಅದ್ಕೇ ನನಗೆ ನೀನಂದ್ರೆ ತುಂಬಾ ಇಷ್ಟ…...." ಅವನು ಕೆನ್ನೆ ಹಿಂಡಿ ಹೇಳಿದಾಗ ಅವಳಿಗೆ ಹಣೆ ಚಚ್ಚಿಕೊಳ್ಳುವಂತಾಯಿತು. ಅವನಿಗೆ ಇನ್ನು ಹೇಗೆ ವಿವರಿಸಬೇಕೋ ತಿಳಿಯಲಿಲ್ಲ ಅವಳಿಗೆ.

"ಪ್ಲೀಸ್ ಅಭಿರಾಮ್, ಮತ್ತೆ ಅದೇ ತರ ಮಾತಾಡ್ಬೇಡಿ. ನೀವು ಹೀಗೆ ಮಾತಾಡಿದ್ರೆ ನನ್ನನ್ನು ನಾನು ಸಂಭಾಳಿಸಿಕೊಳ್ಳೋಕೆ ತುಂಬಾ ಕಷ್ಟ ಆಗುತ್ತೆ. ನನ್ನ ಮನಸ್ಸು ಹಿಡಿತ ತಪ್ಪುತ್ತೆ."

"ಯಾಕೆ ಹೇಳು? ಯಾಕೇಂದ್ರೆ ನಿನಗೂ ನಾನಂದ್ರೇ ಇಷ್ಟವೇ...... ನೀನು ಒಪ್ಕೋಳ್ಳೋಕೆ ತಯಾರಿಲ್ಲ ಅಷ್ಟೇ."

"ಹೌದು, ನನಗೂ ನೀವು ಅಂದ್ರೆ ಇಷ್ಟವೇ. ನಿಮ್ಮಮ್ಮ ಅಂದ್ರೆ ನಿಮಗಿಂತಲೂ ಇಷ್ಟ. ಅವ್ರನ್ನು ನೋಡ್ದಾಗಲೆಲ್ಲ ಅಂದ್ಕೊಂಡಿದ್ದೀನಿ ನಮ್ಮಮ್ಮ ಯಾಕೆ ಇವರ ಹಾಗಿಲ್ಲ ಅಂತ. ಅವ್ರು ಮತ್ತೆ ಅಂಕಲ್ ನಿಮ್ಮ ಬಗ್ಗೆ, ಆಕೃತಿ ಬಗ್ಗೆ ತೋರಿಸೋ ಕಾಳಜಿ, ಮಕ್ಕಳನ್ನು ಫ್ರೆಂಡ್ಸ್ ತರ ಟ್ರೀಟ್ ಮಾಡೋ ರೀತಿ ಎಲ್ಲವೂ ಇಷ್ಟ. ನೀವು, ನಿಮ್ಮ ಸ್ವಭಾವ, ಇನ್ನೊಬ್ಬರ ಭಾವನೆಗಳಿಗೆ ನೀವು ಕೊಡೋ ಗೌರವ, ನಿಮ್ಮ ಕಾಳಜಿ, ಪ್ರೀತಿ……  ಎಲ್ಲವೂ ನಂಗಿಷ್ಟ. ಆದರೆ ನನ್ನ ಈ ಇಷ್ಟ ಭವಿಷ್ಯದಲ್ಲಿ ನಮ್ಮಪ್ಪನ ರೂಪದಲ್ಲಿ ನಿಮ್ಮ ನಂದನದಂತಹ ಮನೆಯನ್ನು ನಾಶ ಮಾಡೋದು ಬೇಕಾಗಿಲ್ಲ ನಂಗೆ. ದಯವಿಟ್ಟು ಇದನ್ನೆಲ್ಲ ಇಲ್ಲಿಗೆ ಬಿಟ್ಟುಬಿಡಿ." 

ಅರೆಕ್ಷಣ ಅಲ್ಲಿ ಮೌನ ರಾಜ್ಯವಾಳಿತು...... ಆ ಮೌನ ಭೇದಿಸಿ ನುಡಿದಿದ್ದ ಅವನು.....

"ನೋಡಮ್ಮಾ, ನಾನು ಈಗಾಗ್ಲೇ ಇದೇ ತಪ್ಪು ಮಾಡಿ ಬದುಕನ್ನು ಗೋಜಲಾಗಿಸಿಕೊಂಡಿದ್ದೆ. ಈಗ ನೀನು ಅದನ್ನೇ ಮಾಡ್ತಿದ್ದೀ. ನಾನು ಹೇಳೋದನ್ನು ಗಮನವಿಟ್ಟು ಕೇಳು. ನಾನು ಮುಂಚೆಯಿಂದಲೂ ಅಪ್ಪ ಅಮ್ಮ ಆರಿಸಿದ ಹುಡುಗಿಯನ್ನೇ ಮದ್ವೆ ಆಗ್ಬೇಕು ಅಂತ ನಿರ್ಧರಿಸಿದ್ದೆ. ಅವತ್ತು ಪಾರ್ಟಿಲಿ ನಿನ್ನ ನೋಡಿದ ದಿನವೇ ಅವರು ನಿನ್ನ ಆರಿಸಿದ್ರು….. ಆಮೇಲೆ ರಾವ್ ಅವರ ಪ್ರಸ್ತಾಪ ಎಲ್ಲಾ ನಿನಗೆ ತಿಳಿದಿದ್ದೇ. ಆದರೆ ನಿನಗೆ ಗೊತ್ತಿಲ್ಲದ ಒಂದು ವಿಷ್ಯ ನಾನು ಹೇಳ್ತೀನಿ ಕೇಳು. ಒಂದು ವೇಳೆ ನಿಮ್ಮಪ್ಪ ಈ ಮದುವೆ ಮಾತುಕತೆ ಆಡಿರ್ಲಿಲ್ಲಾ ಅಂದ್ರೆ ನಮ್ಮಪ್ಪ ಅಮ್ಮನೇ ನಿಮ್ಮನೆಗೆ ಬರ್ತಿದ್ರು ಹೆಣ್ಣು ಕೇಳೋಕೆ. ಅಷ್ಟರಮಟ್ಟಿಗೆ ಅವರು ನಿರ್ಧರಿಸಿದ್ರು. ನನಗೂ ನಿನ್ನ ಬಗ್ಗೆ ಒಳ್ಳೆ ಅಭಿಪ್ರಾಯವೇ ಇತ್ತು. ಅಷ್ಟರೊಳಗೆ ರಾವ್ ಅವ್ರೇ ಬಂದಿದ್ರಿಂದ ಅವ್ರು ಸುಮ್ನಾದ್ರು. ಆದ್ರೆ ಯಾವಾಗ ರಾವ್ ಈ ಪ್ರಸ್ತಾಪ ತಂದ್ರೋ ಆಗ ನಾನೂ ಈಗ ನೀನು ಮಾಡ್ತಿರೋ ತಪ್ಪನ್ನೇ ಮಾಡಿದೆ. ಮಗಳ ಬಗ್ಗೆ ಯೋಚಿಸೋದು ಬಿಟ್ಟು ಅವಳಪ್ಪನ ಬಗ್ಗೆ ಯೋಚಿಸಿದೆ. ಅದ್ರಿಂದ್ಲೇ ಇಷ್ಟೆಲ್ಲಾ ಆಗಿದ್ದು. ರಾವ್ ಅವರ ಸಂಪೂರ್ಣ ಪೂರ್ವಾಪರ ಗೊತ್ತಿತ್ತು ನನಗೆ. ಆದರೆ ನಿನ್ನ ಬಗ್ಗೆ ತಿಳ್ಕೊಳ್ಳೋ ಸಣ್ಣ ಪ್ರಯತ್ನಾನೂ ನಾನು ಮಾಡ್ಲಿಲ್ಲ. ನೀನು ಈಗ್ಲಾದ್ರೂ ರಾವ್ ಅವರ ಬಗ್ಗೆ ಯೋಚ್ಸೋದು ಬಿಟ್ಟು ನಿನ್ನ ಬಗ್ಗೆ ಯೋಚಿಸು ಹುಡುಗಿ. ನಾನು ನಿನ್ನ ಮದ್ವೆ ಮಾಡ್ಕೋ ಅಂತ ಕೇಳ್ತಿರೋದು. ನಿನ್ನ ತಂದೆಯನ್ನು ಇದರ ಮಧ್ಯೆ ತಂದು ನಿನಗೆ ನೀನೇ ಮೋಸ ಮಾಡ್ಕೋಬೇಡ. ಅವರೇ ಅಷ್ಟು ಸ್ವಾರ್ಥಿಗಳಾಗಿರುವಾಗ ನೀನ್ಯಾಕೆ ಇಷ್ಟು ಯೋಚಿಸ್ತೀಯಾ? ಇನ್ನು ಅವರಿಂದ ನಮಗೇನಾದರೂ ತೊಂದ್ರೆ ಆಗುತ್ತೆ ಅಂತ ನಿನಗೆ ಅನ್ನಿಸಿದ್ರೆ ಅದನ್ನು ತಲೆಯಿಂದ ತೆಗೆದು ಹಾಕು. ಹೀ ಕಾಂಟ್ ಡೂ ಎನಿಥಿಂಗ್. ಅದು ಅವ್ರಿಗೂ ಗೊತ್ತು. ಹಾಗೆ ಮಾಡೋಕೆ ಸಾಧ್ಯವಾಗಿದ್ರೆ ನಿನ್ನ ಹಿಂದೆ ಬೀಳ್ತಾನೇ ಇರ್ಲಿಲ್ಲ ಅವ್ರು. ಇಷ್ಟು ಪ್ರೀತ್ಯಾದರ ತೋರಿಸಿ ಮನೆಗೆ ಬಾ ಮಗಳೇ ಅಂತ ಕರೆಯೋದು ಕನಸಿನ ಮಾತಾಗಿತ್ತು. ಅವರ ಹಾದಿಗಳೆಲ್ಲಾ ಬಂದ್ ಆಗಿರೋದ್ರಿಂದ್ಲೇ ನಿನ್ ಹಿಂದೆ ಬಿದ್ದೀದ್ದಾರೇ ಹೊರತು ಪ್ರೀತಿ, ಕಾಳಜಿ ಎಲ್ಲಾ ಶೂನ್ಯವೇ......"

"ಅದೂ ಸರೀನೇ ಅನ್ನಿ. ಕನಸಲ್ಲೂ ಅಂತಹ ಅದೃಷ್ಟ ಪಡ್ಕೊಂಡಿಲ್ಲ ನಾನು" ನಕ್ಕಳು.

"ಸಮನ್ವಿತಾ.... ಐ ಅಗ್ರೀ.... ನಿನ್ನ ಬದುಕಿನಲ್ಲಿ ಹಲವು ಕೊರತೆಗಳಿವೆ, ಸಮಸ್ಯೆಗಳಿವೆ. ಹಾಗಾಗಿ ನಿನ್ಗೆ ನೀನು ಅಸಂಪೂರ್ಣ ಅನಿಸಬಹುದು. ಆದರೆ ನಿನ್ನೆಲ್ಲಾ ಕೊರತೆಗಳು, ಮಿತಿಗಳ ಸಮೇತ ನಂಗೆ ನೀನಿಷ್ಟ. ಯಾಕೆಂದ್ರೆ ನಿನ್ನ ಇರುವಿಕೆ ನನ್ನನ್ನು ಸಂಪೂರ್ಣಗೊಳಿಸುತ್ತೆ. You make me complete. ನೀನು ಜೊತೆಗಿದ್ದಾಗ.... I feel that as my comfort zone. ನೀನೇ ಸೃಷ್ಟಿಸಿಕೊಂಡಿರೋ ಭ್ರಮೆಯ ವ್ಯೂಹದಿಂದ ಒಮ್ಮೆ ಹೊರಗೆ ಬಾ. ಬದುಕು ನಿನಗೆ ಬಹಳ ಕಠಿಣ ಪರೀಕ್ಷೆಗಳನ್ನು ಒಡ್ಡಿರಬಹುದು. ಆದರೆ ಈಗ ಆ ಪರೀಕ್ಷಾ ಕಾಲ ಮುಗಿದಿದೆ. ಎಲ್ಲರೂ ನಿನ್ನಪ್ಪ ಅಮ್ಮನಂತೆ ಇರೋದಿಲ್ಲ. ನಿನಗೋಸ್ಕರ ನಿನ್ನ ತುಂಬಾನೇ ಇಷ್ಟ ಪಡೋ ಮೂವರು ನಮ್ಮನೆಯಲ್ಲಿ ಕಾಯ್ತಾ ಇದ್ದಾರೆ. ನಾನಂತೂ ವರ್ಷಗಳಿಂದ ಕಾಯ್ತಿದ್ದೀನಿ. ನೀನು ತಗೊಂಡ ನಿರ್ಧಾರಕ್ಕೆ ಬದುಕಿನಲ್ಲಿ ಎಂದೂ ಪಶ್ಚಾತಾಪ ಪಡದಂತೆ‌ ನೋಡ್ಕೋಳ್ಳೋ ಜವಾಬ್ದಾರಿ ನನ್ನದು. ಹೇಳು ಸಮನ್ವಿತಾ............ ನಿನ್ನ ಆತ್ಮ ಸಖನಾಗಿ ಜೀವನಪರ್ಯಂತ ನಿನ್ನ ಜೊತೆ ಹೆಜ್ಜೆ ಹಾಕೋಕೆ ಅವಕಾಶ ಕೊಡ್ತೀಯಾ?"

ಅವನ ಮಾತಿಗೆ ಏನುತ್ತರಿಸಬೇಕೋ ತಿಳಿಯದೇ ಚಡಪಡಿಸಿದಳು. "ಅಭಿರಾಮ್…...." ಆರ್ತಳಾಗಿ ಅವನತ್ತ ನೋಟ ಹರಿಸಿದವಳು, "ಹೀಗೆ ಒಮ್ಮೆಲೇ ಕೇಳಿದ್ರೆ ನಾನು ಏನಂತ ಹೇಳಲೀ? ಅಪ್ಪ ಮನಸ್ಸಿಗೆ ಮಾಡಿರೋ ಗಾಯ ಬಹಳ ಆಳವಾದದ್ದು. ಅದರಿಂದ ಚೇತರಿಸಿಕೊಳ್ಳೋದೇ ಕಷ್ಟ ಆಗಿದೆ. ಇನ್ನು ಮದುವೆ..... ನನಗೆ ಸ್ವಲ್ಪ ಸಮಯ ಬೇಕು ಅಭಿರಾಮ್…..."

"ನನಗೆ ನಿನ್ನ ಪರಿಸ್ಥಿತಿ ಅರ್ಥ ಆಗುತ್ತೆ. ನಮ್ಮವರು ಅನ್ನಿಸಿಕೊಂಡವರು ಇಷ್ಟು ಸ್ವಾರ್ಥಿಗಳಾದರೆ ಮನಸ್ಸಿಗೆ ತುಂಬಾ ಬಲವಾದ ಹೊಡೆತ ಬೀಳುತ್ತೆ. ನಿನ್ಗೆ ಬೇಕಾದಷ್ಟು ಸಮಯ ತಗೋ. ಆದ್ರೆ........"

"ಆದ್ರೆ....ಏನು?" ಕುತೂಹಲದಿಂದ ಕೇಳಿದಳು.

"ಆದರೆ ನೀನು ಒಪ್ಪಿಕೊಳ್ಳೋವರೆಗೂ ನನ್ನ ಕಾಟ ಡೈಲೀ ಸಹಿಸ್ಕೋಬೇಕು ನೀನು. ನಾನು ನಕ್ಷತ್ರಿಕನ ವಂಶಸ್ಥ ಬೇರೆ. ಇವತ್ತಿಂದ ನಾನು ನಿನ್ನ ಬೆನ್ನು ಬಿಡದ ಬೇತಾಳ…..." ಮೂಗೆಳೆದ.

"ಉಫ್, ಇದಕ್ಕಿಂತ ಈಗ್ಲೇ ಒಪ್ಪೋದೇ ವಾಸಿನಾ ಅಂತ" ನಿಟ್ಟುಸಿರಿನಲ್ಲಿ ಹೇಳಿದಳು.

"ಸೂಪರ್, ನಂಗೆ ಓಕೆ ಮಾವನ ಮಗ್ಳೇ. ಇನ್ನು ನಿನ್ನತ್ತೆ, ಮಾವ, ನಾದಿನಿಗಂತೂ ಡಬಲ್ ಓಕೆ. ತಾಳಿ ಕಟ್ಲಾ?" ಅವನು ಕೇಳಿದಾಗ ತಲೆಯಾಡಿಸಿ ನಕ್ಕಳು.

"ಯಾವಾಗ್ಲೂ ಹೀಗೆ ನಗ್ತಾ ಇರೋಕೆ ಏನ್ರೀ ರೋಗ ನಿಮ್ಗೆ? ಅಂದ್ಹಾಗೆ ನಿಮ್ಮ ಗಾಯಕ್ಕೆ ಔಷಧಿ ಇರೋದು ನನ್ಹತ್ರನೇ ಡಾಕ್ಟ್ರೇ. ಈ ಪೇಷೆಂಟ್ ಡಾಕ್ಟ್ರನ್ನ ರಿಪೇರಿ ಮಾಡೋ ಏಕೈಕ ಡಾಕ್ಟ್ರು ನಾನೇ….."  ಕಾಲರ್ ಮೇಲೆತ್ತಿ ಹೇಳಿದವನ ವರಸೆಗೆ ಮತ್ತೂ ನಕ್ಕಳು.

"ಹೌದು... ನಾನು ಯಾರತ್ರನೂ ಹೇಳ್ದಿರೋ ವಿಷಯಗಳು, ನನ್ನ ಮನಸ್ಸಿಲ್ಲೇ ಉಳಿದ ಮಾತುಗಳು ಎಲ್ಲಾ ನಿಮಗ್ಹೇಗೆ ತಿಳಿಯುತ್ತೆ?" ಜ್ಞಾಪಿಸಿಕೊಂಡು ಕೇಳಿದಳು.

"ಜಿ.ಪಿ.ಎಸ್ ಟ್ರಾಕರ್ ತರ ನಿಮ್ಮ ಮನಸ್ಸನ್ನು ಟ್ರಾಕ್ ಮಾಡೋ ಡಿವೈಸ್ ಇದೆ ನನ್ಹತ್ರ" ನಗುತ್ತಾ ಹೇಳಿದ.

"ತಮಾಷೆ ಅಲ್ಲ ಸೀರೀಯಸ್ಲೀ ಹೇಳಿ."

"ಟಾಪ್ ಸಿಕ್ರೇಟ್. ಇಷ್ಟು ವರ್ಷಗಳಿಂದ ನಿನ್ನ ಬಗ್ಗೆನೇ ಧ್ಯಾನ ಮಾಡುತ್ತಿದ್ದ ನನ್ನ ತಪಸ್ಸಿಗೆ ಮೆಚ್ಚಿ ದೇವರು ಕೊಟ್ಟಿರೋ ವರ ಅಂದ್ಕೋ. ಅದೇನೋ ನೀನು ಹೇಗೆಲ್ಲಾ ಯೋಚಿಸ್ತಿಯಾ ಅಂತ ನನಗನ್ನಿಸುತ್ತೋ ನೀನೂ ಅದೇ ತರ ಯೋಚಿಸಿರ್ತೀಯಾ" ಎಂದ.

'ವರ್ಷಗಳಿಂದ' ಅನ್ನುವ ಪದವನ್ನು ಎರಡು ಬಾರಿ ಬಳಸಿದ್ದನ್ನು ಗಮನಿಸಿದ್ದಳು ಅವಳು. 'ವರ್ಷಗಳಿಂದ ಕಾಯ್ತಿದ್ದೀನಿ' 'ವರ್ಷಗಳಿಂದ ಧ್ಯಾನಿಸಿದ್ದೆ' ಎಂಬ ಮಾತುಗಳು. ಮತ್ತೊಂದು ಪ್ರಶ್ನೆ ಉದ್ಭವಿಸಿತ್ತು.

"ಅಲ್ಲಾ‌....."

"ಅಲ್ಲಾನೂ ಇಲ್ಲ, ಏಸುನೂ ಇಲ್ಲ‌…... ಅಬ್ಬಾ ಅದೆಷ್ಟು ಪ್ರಶ್ನೆ ಕೇಳ್ತೀಯ? ನಾನಲ್ಲಮ್ಮಾ…. ನೀನು ಕೆ.ಬಿ.ಸಿ ಪ್ರೋಗ್ರಾಮ್ ನಡ್ಸಿರೋದು"

"ಸುಮ್ನಿರಿ...... ವರ್ಷಗಳಿಂದ ಅಂದ್ರಲ್ಲ. ನಾವಿಬ್ರೂ ಭೇಟಿಯಾಗಿದ್ದೇ ಇತ್ತೀಚೆಗೆ. ಮತ್ಹೇಗೆ? ನಿಮ್ಗೆ ನಾನು ಮುಂಚೆಯಿಂದನೇ ಗೊತ್ತಾ?"

"ಅಬ್ಬಾ, ಎಂತಾ ಡಿಸ್ಕವರಿ ಮಾಡ್ಬಿಟ್ಟೆ. ಮೇಡಂ ಮೇರಿ ಕ್ಯೂರಿ ನೋಡು ನೀನು" ಅವನ ತಮಾಷೆ ಅವಳನ್ನು ತಾಕಲಿಲ್ಲ. ಅವನನ್ನೇ ಪರಿಶೀಲನಾ ದೃಷ್ಟಿಯಿಂದ ನೋಡುತ್ತಿದ್ದಳು.

ದೀರ್ಘವಾಗಿ ಉಸಿರೆಳೆದುಕೊಂಡವನು, "ಹೌದು ಕೆಲವು ವರ್ಷಗಳ ಹಿಂದೆ ಒಂದ್ಸಾರಿ ನಿನ್ನ ನೋಡಿದ್ದೆ. ನಿನ್ನ ಮುಖ ಅಚ್ಚಳಿಯದೇ ಉಳಿದಿತ್ತು ಮನಸಲ್ಲಿ. ಪಾರ್ಟಿಯಲ್ಲಿ ನಿನ್ನ ನೋಡ್ದಾಗಿನಿಂದ ನೆನಪಿಸಿಕೊಳ್ತಿದ್ದೇ. ಬಟ್ ಜ್ಞಾಪಕ ಬರ್ತಿರ್ಲಿಲ್ಲ. ನಿನ್ನೆ ನವ್ಯಾ ಅವರನ್ನು ನೋಡಿದಾಗ ನೆನಪಾಯ್ತು. ಅವತ್ತು ನಿಮ್ಮಿಬ್ರನ್ನೂ ಒಟ್ಟಿಗೆ ನೋಡಿದ್ದೆ.....  ಈಗ ಎಲ್ಲಿ, ಯಾವಾಗ, ಯಾಕೆ, ಏನು ಅಂತ ಪ್ರಶ್ನೆ ಕೇಳಿದ್ಯೋ ಅಷ್ಟೇ ಮತ್ತೆ" ಅವಳು ಮುಂದೆ ಪ್ರಶ್ನೆ ಕೇಳಿದಂತೆ ತಡೆದ. ಅವಳೂ ಆಸ್ಪತ್ರೆಯಲ್ಲಿ ನೋಡಿರಬಹುದೆಂದು ಸುಮ್ಮನಾದಳು.

ಇಬ್ಬರೂ ತಮ್ಮ ಮನದ ಭಾವನೆಗಳನ್ನು ಹಂಚಿಕೊಂಡು ಹಗುರಾಗಿದ್ದರು. ಆತ್ಮೀಯ ಸ್ನೇಹಿತರಂತೆ ಹರಟಿದರು ಇಬ್ಬರೂ. ಅವನು ಅವಳನ್ನು ರೇಗಿಸಿದಾಗ ಅವಳೂ ಅವನ ಕಾಲೆಳೆಯುವುದರಲ್ಲಿ ಹಿಂದೆ ಬೀಳಲಿಲ್ಲ. ಬಹಳ ಹೊತ್ತಿನ ಬಳಿಕ ಕಿಶೋರ್, ನವ್ಯಾ ಬಂದಾಗ ಅಲ್ಲೊಂದು ಮೋಡಗಳಿಲ್ಲದ ಶುಭ್ರ ಆಗಸದ ಬೆಡಗಿತ್ತು. ಇಬ್ಬರ ನಿರಾಳ ಮುಖಭಾವವೇ ಸಾಕಿತ್ತು ಅರ್ಥೈಸಿಕೊಳ್ಳಲು…... ಅವರಿಬ್ಬರಿಗೂ ಹೇಳ ತೀರದ ಸಂತಸ.

ಮಾತಿನ ಉಗಿಬಂಡಿಗೆ ಅವರಿಬ್ಬರ ಸೇರ್ಪಡೆಯಾದದ್ದು ಸಮನ್ವಿತಾಳಿಗೆ ಪೀಕಲಾಟ ತಂದಿತು. ಇದ್ದವನೊಬ್ಬ ಸಾಲದೇನೋ ಎಂಬಂತೆ ಬಂದವರಿಬ್ಬರೂ ಅವನೊಂದಿಗೆ ಸೇರಿ ಅವಳನ್ನು ರೇಗಿಸಿ ಗೋಳುಹೊಯ್ದುಕೊಂಡಿದಕ್ಕೆ ಅವಳ ಕೆಂಪಾದ ಕೆನ್ನೆಯೊಂದೇ ಮೂಕ ಸಾಕ್ಷಿಯಾಗಿತ್ತು.

ನಾಲ್ವರ ಸಂಭ್ರಮ ಕಂಡು ಬಾಂದಳದ ಜೋತ್ಸ್ನೆ ಇನ್ನಷ್ಟು ತಂಪಾಗಿ ಹೊಳೆದಿದ್ದಳು....... 

        ******ಮುಂದುವರೆಯುತ್ತದೆ******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ