ಸೋಮವಾರ, ಜೂನ್ 22, 2020

ಅನೂಹ್ಯ 8

ಇಂಥಾ ನಿಶಾಲೋಕದಲ್ಲಿಯೇ ನಾನವಳನ್ನು ಮೊದಲು ಕಂಡದ್ದು......

ಇವಳ ಬದುಕಿನ ದಾರುಣತೆಯ ಮುಂದೆಯೇ ನನ್ನ ಬದುಕಿನ ಕೊರತೆ ಕನಿಷ್ಠ ಎನಿಸಿದ್ದು......

ಕೆಲವು ಸಮಾಜಮುಖಿ ಸಹೃದಯರ ಕಾಳಜಿಯಿಂದ ಇತ್ತೀಚೆಗೆ ಇಂತಹ ಕೆಂಪುದೀಪದ ಪ್ರದೇಶಗಳಲ್ಲಿ (red light areas) ವೈದ್ಯಕೀಯ ಶಿಬಿರಗಳು ನಡೆಯುತ್ತಿದೆ. ಈ ಶಿಬಿರಗಳ ಬಗ್ಗೆ ವೇಶ್ಯಾಗೃಹದ ಮಾಲಕಿಯರಿಗೂ ಸ್ವಲ್ಪ ಮಟ್ಟಿಗೆ ಆಸಕ್ತಿ. ಏಕೆಂದರೆ ಈ ಶಿಬಿರಗಳಿಂದ ಅವರ ಬಳಿ ಇರುವ "ಮಾಲು" ಆರೋಗ್ಯವಾಗಿದೆಯೋ ಇಲ್ಲ ದೇಹ ರೋಗದ ಗೂಡಾಗಿದೆಯೋ ಎಂದು ತಿಳಿಯುವುದಲ್ಲ...... ಒಂದುವೇಳೆ ರೋಗದ ಸುಳಿವು ಸಿಕ್ಕರೆ ಅಷ್ಟೇ...... ಆಕೆ ಬೀದಿಹೆಣವೇ.

ಇಂಥಾ ವೈದ್ಯಕೀಯ ಶಿಬಿರವೊಂದನ್ನು ಆಶ್ರಯ ಸಂಘಟನೆ ವತಿಯಿಂದ ನಡೆಸಿದ್ದಾಗಲೇ ನಾನಾಕೆಯನ್ನು ಮೊದಲ ಬಾರಿ ಕಂಡಿದ್ದು.

ಸಂಜೆಯಾಗಿತ್ತು..... ಬೆಳಗ್ಗಿನಿಂದ ಎಷ್ಟು ಹೆಣ್ಣು ಜೀವಗಳ ಮೌನರೋಧನೆ ಕಂಡೆನೋ ಲೆಕ್ಕವಿಲ್ಲ. ಒಬ್ಬೊಬ್ಬರದ್ದು ಒಂದೊದು ವ್ಯಥೆ. ಜೀವ ಚೈತನ್ಯವಿಲ್ಲದ ನಿಸ್ಸಾರ ಬದುಕು.......

ನೋಡಿ ನನ್ನ ಮೈ ನಡುಗಿತ್ತು. ತಾಯ್ತಂದೆಯರ ಪ್ರೀತಿ ಇಲ್ಲದಿದ್ದರೂ ಇವರಿಗಿಂತ ನನ್ನ ಬದುಕೇವಾಸಿ ಎಂದು ಪ್ರಥಮ ಬಾರಿಗೆ ಅನಿಸಿತ್ತು ಅಂದು. ವೇದನೆಯಿಂದ ತಲೆಭಾರವೆನಿಸಿ ಒಂದು ಕಪ್ ಕಾಫಿ ಕುಡಿಯೋಣವೆಂದು ಫ್ಲಾಸ್ಕ್ ನತ್ತ ಕೈಚಾಚುವಾಗಲೇ ಕೇಳಿಸಿತ್ತು ಅವಳ ಕೊರಳ ಇಂಚರ.......

ಜೀನಾ ಯಹಾ ಮರ್ನಾ ಯಹಾ

ಇಸಕೆ ಸಿವಾ ಜಾನಾ ಕಹಾ

ಜೀ ಚಾಹೆ ಜಬ್ ಹಮ್ ಕೊ ಆವಾಜ಼್ ದೋ

ಹಮ್ ಹೆ ವಹೀ ಹಮ್ ಥೇ ಜಹಾ

ಅಪನೀ ಯಹೀ ದೋನೋ ಜಹಾ

ಇಸಕೆ ಸಿವಾ ಜಾನಾ ಕಹಾ......

ತೀರಾ ಹತ್ತಿರದಲ್ಲೇ ಎಲ್ಲೋ ಸಣ್ಣ ದನಿಯಲ್ಲಿ ಗುನುಗುನಿಸುತ್ತದ್ದಂತೆ......

ಬದುಕೂ ಇಲ್ಲೇ ಸಾವೂ ಇಲ್ಲೇ....... ಎಂಥಹಾ ಗೀತೆ..... ಈ ಹೆಣ್ಮಕ್ಕಳ ಬದುಕಿಗೆ ಎಷ್ಟು ಸಾಮ್ಯವಾಗುತ್ತದೆ ಸಾಹಿತ್ಯ.....

ಯಾಕೋ ಹಾಡುಗಾರ್ತಿಯ ಇನಿದನಿಯೊಳಗಿನ ಭಾವ ತೀವ್ರವಾಗಿ ಸೆಳೆದಿತ್ತು. ಕಾಫಿ ಮರೆತು ಗಾನ ಲಹರಿಯ ಹಿಂಬಾಲಿಸಿ ಹೊರಟವಳ ಕಣ್ಣಿಗೆ ಬಿದ್ದದ್ದು ಅನತಿ ದೂರದಲ್ಲಿ ಮರವೊಂದರ ಬುಡದಲ್ಲಿ ಕೂತು ನೀಲಿಬಾನಿನಲ್ಲಿನ ಬಾನಾಡಿಗಳೆಡೆ ದೃಷ್ಟಿ ನೆಟ್ಟು ತನಗೆ ತಾನೇ ಹಾಡಿಕೊಳ್ಳುತ್ತಿದ್ದಾಕೆ. ಅದ್ಯಾಕೋ ಅವಳನ್ನು ಮಾತಾಡಿಸಬೇಕೆಂಬ ಅದಮ್ಯ ಹಂಬಲ ಹುಟ್ಟಿತ್ತು ನನ್ನಲ್ಲಿ. ಅವಳತ್ತ ನಡೆದಿದ್ದೆ.

ನನ್ನದೇ ವಯಸ್ಸಿನವಳಿರಬೇಕು. ಬಹಳ ಮುದ್ದಾಗಿದ್ದಾಳೆ. ಸುಶ್ರಾವ್ಯ ಕಂಠ. ಬಹುಶಃ ಈ ನರಕದ ಹೊರಗಿದ್ದಿದ್ದರೆ ಅತ್ಯುತ್ತಮ ಗಾಯಕಿಯಾಗಬಹುದಿತ್ತೇನೋ…. ಇಲ್ಲಾ ಅಮ್ಮನ ಬೆಚ್ಚನೆ ಮಡಿಲಲ್ಲಿ, ಇನಿಯನ ಒಲವಿನಾಸರೆಯಲ್ಲಿ ಇರುತ್ತಿದ್ದಳೇನೋ?

ಹಾಡು ಅದಾಗಲೇ ನಿಂತು ನನ್ನನ್ನೇ ದಿಟ್ಟಿಸುತ್ತಿದ್ದಳ ತುಟಿಯಂಚಿನಲ್ಲಿ ಕಂಡೂ ಕಾಣದ ಮಂದಹಾಸವೊಂದಿತ್ತು. 

"ಹಲೋ, ನಾನು ಸಮನ್ವಿತಾ ಅಂತ. ನಿಮ್ಮ ಹೆಸರು?"

ನನ್ನ ಪ್ರಶ್ನೆಗೆ ಜೋರಾಗಿ ನಕ್ಕಳಾಕೆ. ನಾನು ಅಚ್ಚರಿಯಿಂದ ಅವಳನ್ನೇ ನಿರುಕಿಸುತ್ತಿದ್ದೆ. ಅವಳ ನಗು ಅವ್ಯಾಹತವಾಗಿ ಸಾಗಿತ್ತು. ಹುಚ್ಚುಗಿಚ್ಚು ಹಿಡಿದಿರಬಹುದೇ ಈಕೆಗೆ? ಮನ ಖೇದಗೊಂಡಿತು.

"ಯಾಕೆ ಏನಾಯ್ತು?" ಮತ್ತೆ ಕೇಳಿದ್ದೆ. ಕಷ್ಟಪಟ್ಟು ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುತ್ತಾ "ಯಾರ್ರೀ ಮೇಡಂ ನೀವು? ನನ್ನ ಹೆಸರು ಕೇಳ್ತಿದ್ದೀರಿ" ಅಂದಿದ್ದಳು.

"ಯಾಕೆ ಕೇಳಬಾರದೇ?" 

"ಕೇಳ್ಬಾರ್ದೂ ಅಂತೇನಿಲ್ಲ, ಆದರೆ ಇದುವರೆಗೂ ಇಲ್ಲ್ಯಾರೂ ಹೆಸರು ಕೇಳಿರಲಿಲ್ಲ. ಇಲ್ಲಿಗೆ ಬರೋರು ಕೇಳೋದೇ ಬೇರೆ.... ಹೆಸರು ಕೇಳೋ ಮನಸ್ಸು, ಆಸಕ್ತಿ ಯಾರಿಗೂ ಇರೋಲ್ಲ. ಅದಕ್ಕೆ ನಗು ಬಂತು" ಮತ್ತೆ ನಕ್ಕಳಾಕೆ. ಕೊನೆಯಿಲ್ಲದ ವಿಷಾದವೊಂದು ಆಕೆಯ ನಗುವಿನಲ್ಲಿ ನರಳಿತು.

"ಯಾರೂ ಕೇಳಿರಲಿಲ್ಲ.ಆದ್ರೂ ನಾನು ಕೇಳ್ತಿದ್ದೀನಿ ಹೇಳಿ ನಿಮ್ಮ ಹೆಸರೇನು?"

"ಇಲ್ಲಿ ಎಲ್ಲರೂ ನನ್ನ ರೂಬಿ ಅಂತ ಕರೀತಾರೆ"

"ಅಂದ್ರೆ?" ಅರ್ಥವಾಗದೇ ಕೇಳಿದೆ.

"ಅಂದ್ರೆ ನನ್ನ ಮಾಲಕೀನ್ ಇಲ್ಲಿ ಬರೋ ಗಿರಾಕಿಗಳಿಗೆಲ್ಲಾ ನನ್ನ ರೂಬಿ ಅಂತಾ ಪರಿಚಯಿಸ್ತಾಳೆ"

"ನೀನು ಹುಟ್ಟಿದ್ದು ಇಲ್ಲೇ ಏನು?" ಆಕೆಯ ತಾಯಿಯೂ ಇಲ್ಲೇ ಇರುವಳಾ ಎಂಬ ಅನುಮಾನದಿಂದ ಕೇಳಿದೆ.

"ಇಲ್ಲಾ, ನನಗೆ ಸುಮಾರು ಹದಿನೈದು ವರ್ಷಗಳಿದ್ದಾಗ ಇಲ್ಲಿಗೆ ಬಂದದ್ದು"

"ಹಾಗಾದರೆ ಇಲ್ಲಿಗೆ ಬರುವ ಮೊದಲು ನಿನಗೊಂದು ಚೆಂದದ ಹೆಸರಿದ್ದಿರಬಹುದಲ್ಲ. ನಿನ್ನ ತಂದೆತಾಯಿ ಇಟ್ಟಿದ್ದು?" ಅಕ್ಕರೆಯಿಂದ ಕೇಳಿದ್ದೆ.

ಈ ಬಾರಿಯೂ ಆಕೆ ಸಣ್ಣಗೆ ನಕ್ಕಳು. ಬಹುಶಃ ಮನೆಯವರ ನೆನಪಿನಿಂದಿರಬಹುದು. ನಗುವಿನ ಗರ್ಭದಿಂದ ಅಳು ಉಕ್ಕಿರಬೇಕು. ಕಣ್ಣೀರು ಸುರಿಯತೊಡಗಿತು. ಅವಳ ಅವಸ್ಥೆ ನೋಡಿ 'ಛೇ ನಾನೀ ಪ್ರಶ್ನೆ ಕೇಳಬಾರದಿತ್ತು' ಎನಿಸಿತು. ಏನೂ ಹೇಳಲು ತೋಚದೇ ಸುಮ್ಮನಾದೆ.

"ಹೌದು. ಇದಕ್ಕೂ ಹಿಂದೆ ನನಗೊಂದು ಚೆಂದದ ಹೆಸರಿತ್ತು. ಆ ಹೆಸರಿನಲ್ಲಿ ನನ್ನ ಬದುಕಿನ ಅತ್ಯಂತ ಸುಂದರ, ಅಮೂಲ್ಯ ಕ್ಷಣಗಳಿವೆ. ನನ್ನಮ್ಮನ ಮಮತೆಯ ಬುತ್ತಿಯಿದೆ. ನನ್ನಪ್ಪನ ಬೆಚ್ಚನೆಯ ಆಸರೆಯಿದೆ. ನನ್ನ ಭವಿಷ್ಯದ ಬಗೆಗಿನ ಅವರ ಅಗಣಿತ ಕನಸುಗಳಿವೆ. ನನ್ನ ಕಳೆದ ದಿನಗಳ ಅಸ್ತಿತ್ವವಿದೆ. ನಾನೆಂದು ಇಲ್ಲಿಗೆ ಕಾಲಿಟ್ಟೆನೋ ಅಂದೇ ಆ ಹೆಸರಿನಾಕೆ ಸತ್ತಳು. ಆ ಹೆಸರು ಇನ್ನೆಂದಿಗೂ ಯಾರಿಗೂ ಹೇಳಲಾರೆ. ಅದು ನನ್ನೊಡನೆ ಮಣ್ಣಾಗುತ್ತದೆ. ಇಲ್ಲಿರುವಾಕೆ ರೂಬಿ ಅಷ್ಟೇ" ತುಸು ಸಮಯದ ಬಳಿಕ ಸ್ಪಷ್ಟ ದನಿಯಲ್ಲಿ ಆಕೆಯೆಂದಿದ್ದಳು.

"ಬಹಳ ಚೆನ್ನಾಗಿ ಹಾಡುತ್ತೀರಿ" ವಿಷಯಾಂತರಿಸಿ ಹೇಳಿದ್ದೆ. ಮತ್ತೆ ಅದೇ ಮೆಲುನಗೆ ಅವಳ ತುಟಿಯನ್ನು ಅಲಂಕರಿಸಿತ್ತು.

"ನಾನಿಲ್ಲಿ ಬಂದು ಎಷ್ಟು ಸಮಯವಾಗಿದೆಯೋ ತಿಳಿಯದು. ಬಂದ ಹೊಸತರಲ್ಲಿ ದಿನಗಳನ್ನು ಲೆಕ್ಕವಿಡುತ್ತಿದ್ದೆ. ಏಕೆಂದರೆ ನಾನಾಗಲೇ ಎರಡು ನಿರ್ಧಾರಗಳನ್ನು ಮಾಡಿದ್ದೆ . ಒಂದು ಇವರೇನೇ ಮಾಡಿದರೂ ನಾನು ಈ ಕೆಲಸ ಮಾಡುವುದಿಲ್ಲ, ಎರಡನೇಯದಾಗಿ ನಾನು ಇಲ್ಲಿಂದ ಹೊರಹೋಗಿಯೇ ತೀರುತ್ತೇನೆ ಅಂತ. ಆದರೆ ಬಹಳ ಬೇಗ ಈ ಎರಡೂ ನನ್ನ ಭ್ರಮೆಗಳಷ್ಟೇ ಎಂಬುದು ನನಗೆ ಸ್ಪಷ್ಟವಾಯಿತು. ಇಲ್ಲಿಂದ ಹೊರಹೋಗಲಂತೂ ಸಾಧ್ಯವೇ ಇಲ್ಲ. ಹಾಗೂ ಈ ವೃತ್ತಿ ಮಾಡುವುದು ಬಿಡುವುದು ನನ್ನ ಆಯ್ಕೆಯಲ್ಲ , ಅನಿವಾರ್ಯತೆ…... ಅಂದಿನಿಂದ ದಿನಗಳ ಎಣಿಕೆ ಬಿಟ್ಟೆ. ಒಮ್ಮೊಮ್ಮೆ ಬದುಕಿ ಉಳಿಯಲು ಏನಿದೆ? ಯಾರಿದ್ದಾರೆ ಎನಿಸುತ್ತಿರುತ್ತದೆ. ಆದರೆ ನಾನು ಸಾಯಲಾರೆ. ನನ್ನದಲ್ಲದ ತಪ್ಪಿಗೆ ನಾನ್ಯಾಕೆ ಸಾಯಬೇಕು? ಇಂತಹ ಸ್ಥಿತಿಯಲ್ಲಿ ಬದುಕಲೂ ಏನಾದರೊಂದು ಮನಸ್ಸು ತಿಳಿಗೊಳಿಸುವ ಸಾಧನ ಬೇಕಲ್ಲವೇ? ಅದೇ ಹಾಡು. ನನ್ನ ಮನಸ್ಸಿನ ಭಾರ ಕಳೆಯುವವರೆಗೂ, ಸಾಯುವ ಯೋಚನೆ ಮರೆಯುವವರೆಗೂ ಹಾಡುತ್ತೇನೆ"  ಮತ್ತೊಮ್ಮೆ ನಕ್ಕಳಾಕೆ.

ಆ ಇಳಿಸಂಜೆಯಲ್ಲಿ ಹೀಗೆ ಶುರುವಾಗಿತ್ತು ನಮ್ಮ ಗೆಳೆತನ. ಅದು ಸ್ನೇಹವೋ, ಇಲ್ಲ ಅವಳ ಮೇಲೆ ಉದಯಿಸಿದ ಕರುಣೆಯೋ, ಅವಳ‌ ಹಾಡಿನ ಮೇಲಿನ ಪ್ರೀತಿಯೋ, ಅವಳ ಮುಗುಳ್ನಗೆಯ ಸೆಳೆತವೋ, ಇಲ್ಲಾ ಈ ಜಗತ್ತಿನಲ್ಲೇ ನನ್ನಷ್ಟು ನೋವಿನ ಜೀವನ ಇನ್ಯಾರದ್ದು ಇಲ್ಲ ಎಂದುಕೊಂಡಿದ್ದ ನನ್ನ ನಂಬಿಕೆ ಸುಳ್ಳಾದ ಅಚ್ಚರಿಯೋ ನನಗೇ ತಿಳಿಯದು. ಒಟ್ಟಿನಲ್ಲಿ ನನಗೇ ತಿಳಿಯದೇ ಅವಳ ಬಗ್ಗೆ ನನ್ನಲ್ಲೊಂದು ಅಕ್ಕರೆ ಉದಯಿಸಿತ್ತು.

ಮುಂದುವರೆಯುತ್ತದೆ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ