ಗುರುವಾರ, ಜೂನ್ 11, 2020

ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ....

ಹೆಣ್ಣಿನ ಶೋಷಣೆಗೆ ಎಷ್ಟು ಮುಖಗಳು.....?
ಒಂದು? ಹತ್ತು? ಸಾವಿರ........?
ಬಹುಶಃ ಈ ಪ್ರಶ್ನೆಗೆ ಸಮರ್ಪಕ ಉತ್ತರ ಎಂದೂ ದೊರಕದು. ಏಕೆಂದರೆ ಸ್ತ್ರೀ ಶೋಷಣೆಗೆ ಅಗಣಿತ ಮುಖಗಳು, ಅಸಂಖ್ಯ ಆಯಾಮಗಳಿವೆ. ಮಹಾಕಾವ್ಯಗಳಿಂದ ಹಿಡಿದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ, ದಾಖಲಾಗದೇ ಉಳಿದ ಹೆಣ್ಣಿನ ಕಣ್ಣೀರು, ನೋವಿನ ನಿಟ್ಟುಸಿರುಗಳನ್ನು ಲೆಕ್ಕ ಇಟ್ಟವರ್ಯಾರು? ಸ್ತ್ರೀ ಶೋಷಣೆ ಎಂಬುದು ಅನಾದಿಕಾಲದಿಂದ ನಮ್ಮ ಸಮಾಜದಲ್ಲಿ ಬೇರು ಬಿಟ್ಟು ಭ್ರಷ್ಟ ವ್ಯವಸ್ಥೆಯಿಂದ ಪೋಷಣೆ ಪಡೆದು ಬಲಿಷ್ಠವಾಗಿ ಬೆಳೆದು ರೆಂಬೆ ಕೊಂಬೆಗಳಾಗಿ ಟಿಸಿಲೊಡೆದಿರುವ ವಿಷವೃಕ್ಷ. ಇನ್ನು ವರ್ತಮಾನದಲ್ಲಂತೂ ಟಿವಿಯ ಬ್ರೇಕಿಂಗ್ ನ್ಯೂಸಿನಿಂದ ಹಿಡಿದು ವೃತ್ತ ಪತ್ರಿಕೆಯ ತಲೆಬರಹದ ತನಕ ಕಣ್ಣಿಗೆ ರಾಚುವ ಬಹುಪಾಲು ಸುದ್ದಿಗಳು ಇದಕ್ಕೆ ಸಂಬಂಧಪಟ್ಟಿದ್ದೇ. ಇಂತಹ ಸುದ್ದಿಗಳ ಪುನರಾವರ್ತನೆಯಾಗದಿರಲಿ ಎಂಬ ಆಶಯದಲ್ಲಿ ನಮ್ಮ ಚಿಂತನೆಗಳನ್ನು ಶುದ್ಧೀಕರಿಸುವ ಪ್ರಾಮಾಣಿಕ ಪ್ರಯತ್ನ ಈ 'ಶುದ್ಧಿ'.


ಹಾಗೆ ನೋಡಿದರೆ ಈ ಸಿನಿಮಾದಲ್ಲಿ ಇದುವರೆಗೂ ಯಾರೂ ಹೇಳದಂತಹ ನವೀನ ವಿಚಾರವೇನೂ ಇಲ್ಲ. ಸ್ತ್ರೀಯರ ಮೇಲಿನ ದೌರ್ಜನ್ಯವನ್ನೇ ತಿರುಳಾಗಿಸಿಕೊಂಡ ಪ್ರತೀಕಾರದ ಹಲವು ಸಿನಿಮಾಗಳು ಈಗಾಗಲೇ ಬಂದಿವೆ. ಜೊತೆಗೆ ಈ ಸಿನಿಮಾದ ಕಥೆಯಲ್ಲಿನ ಹೆಚ್ಚಿನ ಅಂಶಗಳು ನಮ್ಮ ದೇಶದಲ್ಲಿ ನಡೆದ ಹಲವು ನೈಜ ಘಟನೆಗಳ ಮರುಸೃಷ್ಟಿಯಷ್ಟೇ. 2012ರಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯ ಪ್ರಕರಣ ಹಾಗೂ ಅದರ ನಂತರ ವಿಪರೀತ ಚರ್ಚೆಗೆ ಗ್ರಾಸವಾದ ಬಾಲ ನ್ಯಾಯಿಕ ಕಾಯಿದೆ (juvenile justice act), 2013ರ ಬೆಂಗಳೂರಿನ ಎಟಿಎಂ ಹಲ್ಲೆ ಪ್ರಕರಣ, ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಕರಾವಳಿಯಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ನೈತಿಕ ಪೋಲಿಸ್ ಗಿರಿ, ಮಾದಕ ದ್ರವ್ಯದ ಚಟಕ್ಕೆ ಬಿದ್ದು ನಶೆಯಲ್ಲಿ ತೇಲುತ್ತಿರುವ ಯುವವರ್ಗ, ಸಣ್ಣಪುಟ್ಟ ಗಲ್ಲಿಗಳಲ್ಲೂ ದೊರಕುವ ಅಕ್ರಮ ಶಸ್ತ್ರಾಸ್ತ್ರಗಳು, ತಪ್ಪಿತಸ್ಥರನ್ನು ಶಿಕ್ಷೆಯಿಂದ ಬಚಾವು ಮಾಡಲು ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರುವ ವ್ಯವಸ್ಥೆ, ಮಿತಿಮೀರುತ್ತಿರುವ ಕ್ರೌರ್ಯ, ಅವಸಾನವಾಗುತ್ತಿರುವ ಮಾನವೀಯ ಮೌಲ್ಯಗಳು...... ಇಂತಹ ಹತ್ತು ಹಲವು ವಾಸ್ತವಿಕ ಘಟನೆಗಳೇ ಈ ಸಿನಿಮಾದ ಹೂರಣ.

ಒಂದು ಕೊಲೆಯ ತನಿಖೆಯ ಮೂಲಕ ಆರಂಭವಾಗುವ ಸಿನಿಮಾ ನಂತರದಲ್ಲಿ ಆಗಷ್ಟೇ ವಿದೇಶದಿಂದ ಭಾರತಕ್ಕೆ ಆಗಮಿಸಿದ ಕ್ಯಾರೋಲಿನ್ ಸ್ಮಿತ್ ಎಂಬ ಮಹಿಳೆಯ ಮೇಲೆ ಕೇಂದ್ರೀಕೃತವಾಗುತ್ತದೆ. ಆಕೆಯ ನಿಗೂಢ ನಡೆಗಳು, ಭೇಟಿ ನೀಡುವ ಪ್ರದೇಶಗಳು/ಭೇಟಿಯಾಗುವ ವ್ಯಕ್ತಿಗಳು, ಅವಳಿಗೆ ಬರುವ ಅಜ್ಞಾತ ಕರೆಗಳು, ದುಃಸ್ವಪ್ನವಾಗಿ ಕಾಡುವ ಅಸ್ಪಷ್ಟ ಚಹರೆಗಳು ಅವಳ ಬಗೆಗೊಂದು ಸಂಶಯವನ್ನು ಸೃಷ್ಟಿಸಿದರೆ ಆಕೆಯ ಮುಖದಲ್ಲಿ ಹೆಪ್ಪುಗಟ್ಟಿರುವ ಗುರುತಿಸಲಾಗದ ಭಾವಗಳು ವೀಕ್ಷಕರ ಮನದಲ್ಲಿ ವಿಪ್ಲವವನ್ನೆಬ್ಬಿಸುತ್ತವೆ. ಆ ಭಾವವನ್ನು ಗ್ರಹಿಸಿ ಏನನ್ನೋ ಕಲ್ಪಿಸುವ ಹೊತ್ತಿಗೆ ಮತ್ತೆ ಕಥೆ ಬೇರೊಂದು ಮಜಲಿಗೆ ಹೊರಳುತ್ತದೆ. ಮಹಿಳಾ ಶೋಷಣೆಯ ವಿರುದ್ಧ ದನಿಯೆತ್ತಿ ಬೀದಿ ನಾಟಕಗಳ ಮುಖೇನ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಜ್ಯೋತಿ ಹಾಗೂ ದಿವ್ಯ ಎಂಬ ಇಬ್ಬರು ಯುವ ಪತ್ರಕರ್ತೆಯರ ಸಾಮಾಜಿಕ ಕಾಳಜಿಗೆ ಚಿತ್ರ ತೆರೆದುಕೊಳ್ಳುತ್ತದೆ. ಹೀಗೆ ಪದೇ ಪದೇ ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಘಟನೆಗಳೊಂದಿಗೆ ಸಾಗುವ ಕಥೆ ನೋಡುಗನನ್ನು ಆಗೀಗ ಗೊಂದಲಕ್ಕೆ ಕೆಡವುತ್ತದೆ. ಹಾಗೆ ಗೊಂದಲ ಸೃಷ್ಟಿಸುತ್ತಲೇ ನಮ್ಮಲ್ಲಿ ಒಂದು ಕುತೂಹಲವನ್ನು ಸೃಷ್ಟಿಸುತ್ತದೆ. ಇವೆಲ್ಲಾ ಕುತೂಹಲಗಳಿಗೆ ಉತ್ತರ ಸಿಗುವುದು, ಗೊಂದಲಗಳು ಸಂಪೂರ್ಣ ಪರಿಹಾರವಾಗುವುದು ಕೊನೆಯ ಹತ್ತು ನಿಮಿಷಗಳಲ್ಲಿ.

ಈ ಸಿನಿಮಾ ನೋಡುಗರನ್ನು ಆವರಿಸಿಕೊಳ್ಳುವುದು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಘಟನೆಗಳಿಗೆ ಸಂಬಂಧ ಕಲ್ಪಿಸಿರುವ ರೀತಿ ಹಾಗೂ ಅದನ್ನು ಚಿತ್ರಕಥೆಯ ಸೂತ್ರಕ್ಕೆ ಅಳವಡಿಸಿರುವ ಶೈಲಿಯಿಂದ. ಎಲ್ಲರಿಗೂ ತಿಳಿದಿರುವ ವಿಚಾರಗಳನ್ನು ಹೇಳುತ್ತಲೇ ಚಿತ್ರದ ಕೇಂದ್ರದಲ್ಲೊಂದು ಕೌತುಕವನ್ನಿಟ್ಟು, ಪ್ರತೀ ಹಂತದಲ್ಲೂ ವೀಕ್ಷಕರೊಳಗೆ ಆ ಬಗ್ಗೆ ಒಂದು ಗೊಂದಲವನ್ನು ಸೃಷ್ಟಿಸುತ್ತ ಇಡೀ ಚಿತ್ರವನ್ನು ನಿರೂಪಿಸಿರುವ ಪರಿಯನ್ನು ಮೆಚ್ಚಲೇಬೇಕು. ಚಿತ್ರದ ಅಂತಿಮ ಘಟ್ಟದವರೆಗೂ ಯಾರು ಯಾರಿಗಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ, ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಸುಳಿವು ದೊರಕುವುದಿಲ್ಲ. ಕೊನೆಯವರೆಗೂ ನಮ್ಮ ಊಹೆಗಳಿಗೆ ಸ್ಥಾನಕಲ್ಪಿಸಿ ಕ್ಲೈಮ್ಯಾಕ್ಸ್ ನಲ್ಲಿ ನಮ್ಮೆಲ್ಲಾ ಕಲ್ಪನೆಗಳನ್ನು ತಿರುವುಮುರುವಾಗಿಸಿ ಚಿತ್ರ ಕೊನೆಗೊಳ್ಳುತ್ತದೆ. ಈ ಇಡೀ ಸಸ್ಪೆನ್ಸ್ ಸೃಷ್ಟಿಯಾಗಿರುವುದು ಕೇವಲ ಚಿತ್ರದ ಘಟನಾವಳಿಗಳ ಕಾಲಕ್ರಮದ ಮೇಲೆ ಎಂಬುದು ಗಮನಾರ್ಹ ಸಂಗತಿ. 

ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಬೀದಿ ನಾಟಕದ ರೂಪದಲ್ಲಿ ಕಥೆಯೊಳಗೆ ತೋರಿಸಿದ್ದಾರೆ ನಿರ್ದೇಶಕರು. ಕೆಲವೇ ಕೆಲವು ಕ್ಷಣಗಳಲ್ಲಿ ಹಲವು ವಿಚಾರಗಳನ್ನು ನೋಡುಗರಿಗೆ ದಾಟಿಸುವ ಬೀದಿ ನಾಟಕಗಳ ಸಾಮರ್ಥ್ಯವನ್ನೂ ಈ ಸಣ್ಣ ಚುಟುಕು ದೃಶ್ಯಗಳು ತೋರುತ್ತವೆ. ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರು ರಂಗಭೂಮಿ ಹಾಗೂ ಕಿರುತೆರೆಯ ಹಿನ್ನೆಲೆಯವರು. ಕ್ಯಾರೋಲಿನ್, ಜ್ಯೋತಿ ಹಾಗೂ ದಿವ್ಯಾ ಪಾತ್ರದಲ್ಲಿ ಲಾರೆನ್ ಸ್ಪಾರ್ಟಾನೋ, ನಿವೇದಿತಾ ಹಾಗೂ ಅಮೃತಾ ಕರಗಡ ನೆನಪಿನಲ್ಲುಳಿಯುತ್ತಾರೆ. ಇವರೊಂದಿಗೆ ಶಶಾಂಕ್ ಪುರುಷೋತ್ತಮ್, ಸಿದ್ಧಾರ್ಥ್ ಮಾಧ್ಯಮಿಕ, ಸಂಚಾರಿ ವಿಜಯ್, ಅಜಯ್ ರಾಜ್, ನಾಗಾರ್ಜುನ ರಾಜಶೇಖರ್ ಮುಂತಾದವರು ಪೋಷಕ ಪಾತ್ರದಲ್ಲಿದ್ದಾರೆ. ವಾಸುಕಿ ವೈಭವ್ ಕೂಡಾ ಒಂದು ದೃಶ್ಯದಲ್ಲಿ ಮುಖ ತೋರಿ ಮರೆಯಾಗುತ್ತಾರೆ.

ಈ ಚಿತ್ರದ ನಿರ್ದೇಶಕ ಆದರ್ಶ್ ಈಶ್ವರಪ್ಪ ಹಾಲಿವುಡ್ ಗರಡಿಯಲ್ಲಿ ಪಳಗಿರುವವರು ಎಂಬುದಕ್ಕೆ ಶುದ್ಧಿಯ ತಂತ್ರಗಾರಿಕೆಯೇ ನಿದರ್ಶನ. ಒಂದಕ್ಕೊಂದು ತಾಳೆಯಾಗದ ನಾನ್ ಲೀನಿಯರ್ ನಿರೂಪಣೆ, ಇಡೀ ಕಥೆ ನಮ್ಮ ಸಮ್ಮುಖದಲ್ಲೇ ನಡೆಯುತ್ತಿದೆ ಎನ್ನುವಷ್ಟು ನೈಜತೆಯಿಂದ ನೋಡುಗನನ್ನು ಒಳಗೊಳ್ಳುವ ಛಾಯಾಗ್ರಹಣದಿಂದಾಗಿ ಹಾಲಿವುಡ್ ಚಿತ್ರವನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಕತ್ತಲಿನ ಗಾಢತೆಯ ಮೂಲಕವೇ ಕಥೆಯ ಹೊಳಹುಗಳನ್ನು ಕೆದಕುವ ಆಂಡ್ರಿಯೋ ಅವರ ಛಾಯಾಗ್ರಹಣ, ನಿಶ್ಯಬ್ದತೆಯ ಅಂತರಾಳವನ್ನು ಕಲುಕುತ್ತಲೇ ಸನ್ನಿವೇಶಗಳ ತೀವ್ರತೆಯನ್ನು ನೋಡುಗರ ಮನಸ್ಸಿಗೆ ದಾಟಿಸುವಂತಹ ಜೆಸ್ಸಿ ಕ್ಲಿಂಟನ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾವನ್ನು ತಾಂತ್ರಿಕವಾಗಿ ಸಶಕ್ತಗೊಳಿಸಿದೆ.

ಸ್ತ್ರೀ ಶೋಷಣೆಯ ಹತ್ತು ಹಲವು ಆಯಾಮಗಳನ್ನು ತೋರುತ್ತಲೇ ನೋಡುಗನ ಚಿಂತನೆಗಳನ್ನು ಕೆಣಕುತ್ತಾ, ಪದೇ ಪದೇ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾ ಯೋಚನೆಗೆ ತಳ್ಳುವ ಸಿನಿಮಾ ಇದು. ಇದೇ ಅಂತರಂಗ ಶುದ್ಧಿ ಇದುವೇ ಬಹಿರಂಗ ಶುದ್ಧಿ ಎಂಬಂತೆ ಯಾವುದನ್ನೂ ವೈಭವೀಕರಿಸದೇ ನಿಶ್ಯಬ್ದವಾಗಿಯೇ ಮನಶುದ್ಧಿ ಹಾಗೂ ಆತ್ಮಶುದ್ಧಿಗೆ ಮೂಲವಾದ ಚಿಂತನೆಗಳ ಶುದ್ಧೀಕರಣಕ್ಕೆ ಇಂಬು ಕೊಡುವ ಈ ಸಿನಿಮಾ Netflixನಲ್ಲಿ ಲಭ್ಯವಿದೆ. ವ್ಯವಸ್ಥೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸುವ ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದ ಸಿನಿಮಾ ಇದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ