ಹಾಸ್ಯ/ವ್ಯಂಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಸ್ಯ/ವ್ಯಂಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜೂನ್ 10, 2020

ಉಳಿದವರು ಕಂಡಂತೆ

ಮದುವೆ ಮನೆಯ ವಾಲಗದ ಸದ್ದು ಇಡೀ ಊರನ್ನೇ ಆವರಿಸಿದಂತಿತ್ತು. ಕಲ್ಯಾಣ ಮಂಟಪದ ಮುಂಭಾಗ ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟು, ನವಶೋಭೆಯಿಂದ ಕಂಗೊಳಿಸುತ್ತಿತ್ತು. ಊರಿನ ಮುಕ್ಕಾಲು ಪಾಲು ಮಂದಿ ಅಲ್ಲೇ ಇದ್ದರು. ಅದೇ ಹಳ್ಳಿಗಳ ವಿಶೇಷತೆ. ಯಾರ ಮನೆಲೀ ಏನೇ ಸಮಾರಂಭ ನಡೆದರೂ ತಮ್ಮ ಮನೆಯದೇ ಕೆಲಸ ಅನ್ನೋವಷ್ಟು ಆತ್ಮೀಯತೆ ಅಲ್ಲಿರುತ್ತೆ. ಮತ್ತದು ಸೋಗಿನ ಆತ್ಮೀಯತೆಯಲ್ಲ.
ಊರಿನ ಗೌರವಾನ್ವಿತ ವ್ಯಕ್ತಿಯಾದ ಶಂಕರಯ್ಯನವರ ಮಗಳ ಮದುವೆ. ಹೇಳಿಕೊಳ್ಳುವಷ್ಟು ಸ್ಥಿತಿವಂತರಲ್ಲದಿದ್ದರೂ ಧರ್ಮಭೀರು ಮನುಷ್ಯ. ಬಹಳ ಮೃದು ಸ್ವಭಾವದವರು. ಶಂಕರಯ್ಯನವರು ತಮ್ಮ ಈ ಸ್ವಭಾವದಿಂದಲೇ ಊರಿನಲ್ಲಿ ಗೌರವ ಸಂಪಾದಿಸಿದವರು.
ಇವರ ಪತ್ನಿ ಮೀನಾಕ್ಷಮ್ಮ ಗೃಹಿಣಿ. ಬರುವ ಮಿತ ಆದಾಯದಲ್ಲೇ ಲಕ್ಷಣವಾಗಿ ಸಂಸಾರ ತೂಗಿಸುತ್ತಾರೆ. ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿಯವಳು ಕಾವೇರಿ. ವಿಧವೆ. ಮದುವೆಯಾಗಿ ಎರಡು ವರ್ಷಗಳ ನಂತರ ಗಂಡ ಕೆರೆಯಲ್ಲಿ ಮುಳುಗಿ ಸತ್ತಾಗ ಆರು ತಿಂಗಳ ಕೂಸನ್ನು ಹಿಡಿದು ತವರಿಗೆ ಬಂದವಳು ಇಲ್ಲೇ ಇದ್ದಾಳೆ.
ಈಗ ನಡೆಯುತ್ತಿರುವುದು ಎರಡನೇ ಮಗಳು ಕವನಳ ಮದುವೆ. ಎರಡನೇ ವರ್ಷದ ಬಿ.ಎ ವಿದ್ಯಾರ್ಥಿನಿ. ಶಂಕರಯ್ಯನವರಿಗೆ ಸಧ್ಯ ಮಗಳ ಮದುವೆ ಯೋಚನೆಯೇ ಇರಲಿಲ್ಲ. ಆದರೆ ಗಂಡಿನ ಮನೆಯವರು ಮನೆಬಾಗಿಲಿಗೆ ಬಂದು ಹೆಣ್ಣು ಕೇಳಿದ್ದರು. ಹುಡುಗ ಮೋಹನ್ ಇಂಜಿನಿಯರ್. ಮಸ್ಕತ್ ನಲ್ಲಿ ಕೆಲಸ. ತಂದೆ ತಾಯಿಗೆ ಒಬ್ಬನೇ ಮಗ. ಎಲ್ಲರ ವಾಸವೂ ಅಲ್ಲೇ. ಹಣಕಾಸಿಗೇನೂ ಕೊರತೆಯಿಲ್ಲ.ಜಾತಕವೂ ಸರಿ ಬಂದಿತ್ತು. ಮೋಹನನೂ ಕವನಳನ್ನು ಒಪ್ಪಿದ್ದ. ಶಂಕರಯ್ಯನವರಿಗೆ ಮಗಳನ್ನು ಅಷ್ಟು ದೂರ ಕಳಿಸಲು ಇಷ್ಟವಿರಲಿಲ್ಲ. ಆದರೆ ಮೋಹನ್ ಹಾಗೂ ಅವನ ತಾಯ್ತಂದೆಯರ ಒಳ್ಳೆಯ ಗುಣ ಅವರ ಮನಕ್ಕೆ ಹಿಡಿಸಿತ್ತು.
ಹಾಗಾಗಿ ಒಪ್ಪುವ ಮನಸ್ಸು ಮಾಡಿದ್ದರು. ಇನ್ನು ವರದಕ್ಷಿಣೆ ವರೋಪಚಾರದ ಮಾತೇ ಬೇಡ. ನಮಗೆ ಹಣಕ್ಕೇನೂ ಕೊರತೆಯಿಲ್ಲ. ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಧಾರೆಗೈದರೆ ಸಾಕೆಂದು ಬೀಗರು ಹೇಳಿದಾಗ ಶಂಕರಯ್ಯ, ಮೀನಾಕ್ಷಮ್ಮ ಮಗಳ ಅದೃಷ್ಟಕ್ಕೆ ಬೀಗಿದ್ದರು. ಹೀಗೆ ನಿಶ್ಚಯವಾಗಿತ್ತು ಕವನಳ ಮದುವೆ.

ಅರಿಶಿಣ ಎಣ್ಣೆ ಶಾಸ್ತ್ರ, ವರಪೂಜೆ ಸಾಂಗವಾಗಿ ನೆರವೇರಿತು. ಧಾರೆಗೆ ವರ ತಯಾರಾಗಿ ನಿಂತು ವಧುವಿನ ನಿರೀಕ್ಷಣೆಯಲ್ಲಿದ್ದ. ಮುಹೂರ್ತದ ಸಮಯವಾಯಿತು. ಬೇಗ ಹೆಣ್ಣನ್ನು ಕರ್ಕೊಂಡು ಬನ್ನಿ ಅಂತ ಪುರೋಹಿತರ ಗಲಾಟೆ ಬೇರೆ.
ಹೊತ್ತು ಸರಿಯುತ್ತಿದ್ದರೂ ವಧು ಬರುವ ಲಕ್ಷಣಗಳು ಕಾಣಲಿಲ್ಲ.....

ಅಷ್ಟರಲ್ಲೇ ವಧುವಿನ ಕೋಣೆಯಿಂದ ಕಾವೇರಿ ಗಾಬರಿಯಲ್ಲಿ ಓಡಿಬಂದು ತಂದೆ ತಾಯಿಯ ಬಳಿಯಲ್ಲಿ ಏನೋ ಉಸುರಿದಳು. ಅವರಿಬ್ಬರೂ ಕುಸಿದು ಕುಳಿತರು.

ಕಾವೇರಿಯ ಮಗ ಲೋಹಿತ್ ಹೊರಗಿನಿಂದ ಬಂದವನೇ, "ಅಮ್ಮಾ, ಎಲ್ಲಾ ಕಡೆ ನೋಡಿದೆ ಚಿಕ್ಕಿ ಎಲ್ಲೂ ಕಾಣ್ತಿಲ್ಲ" ಅಂದಾಗ ಇದ್ದಕ್ಕಿದ್ದಂತೆ ಮದುವೆ ಮನೆಯಲ್ಲಿ ಗಲಿಬಿಲಿ ಶುರುವಾಯಿತು. ಗುಸುಗುಸು ಪಿಸುಮಾತುಗಳು ಓಲಗದ ಸದ್ದು ಮೀರಿ ಹಬ್ಬತತೊಡಗಿದವು.

"ಅಯ್ಯೋ, ಹುಡುಗಿ ಕಾಣ್ತಿಲ್ವಂತೆ ಕಣ್ರೀ. ಇದೆಂಥಾ ಚೆಂದ? ಮದ್ವೆ ಮನೆಯಿಂದ ಹೇಳ್ದೇ ಕೇಳ್ದೆ ಹೋಗೋದೂಂದ್ರೆ ಏನರ್ಥ?" ಅಂದರು ಒಬ್ಬ ಹಿರಿಯರು.

" ಈಗಿನ ಕಾಲದ ಹುಡುಗೀರೋ, ಅವರ ಶೋಕಿಗಳೋ. ಎಲ್ಲಾ ಹದ್ದು ಮೀರಿ ಹೋಗಿದ್ದಾರೆ. ಮನೆಯವರು, ಹಿರಿಯರು ಅನ್ನೋ ಭಯಭಕ್ತಿ ಇಲ್ಲ." ಇನ್ನೊಬ್ಬರ ಉವಾಚ.

" ಹೌದೌದು. ನಮ್ಮ ಕಾಲದಲ್ಲೇ ಸರಿ ಇತ್ತು. ಹೆಣ್ಣು ಮಕ್ಕಳಿಗೆ ಶಾಲೆ ಓದೆಲ್ಲಾ ಯಾಕ್ಬೇಕು? ಮನೆಕೆಲಸ ಅಚ್ಚುಕಟ್ಟಾಗಿ ಕಲಿಸಿದ್ರೆ ಸಾಕಪ್ಪ. ಓದಿ ಮೆಡಲ್ ತಗೊಂಡು ಏನು ಯಜಮಾನಿಕೆ ಮಾಡೋಕಿದೆ? ಅಷ್ಟಲ್ಲದೆ ಹಿರೀಕರು ಗಾದೆ ಮಾಡಿದ್ರಾ, ಅಪ್ಪ ದುಡಿಬೇಕು ಅವ್ವ ಹಡೀಬೇಕು ಅಂತ" ತೊಂಬತ್ತು ಮಳೆಗಾಲ ಕಂಡ ಅಜ್ಜಮ್ಮ‌ ತಮ್ಮ ಗಾದೆಗಳ ಸಂಗ್ರಹದಿಂದ ಅಣಿಮುತ್ತೊಂದನ್ನು ತೆಗೆದರು.

ಶಂಕರಯ್ಯ ಗರಬಡಿದವರಂತೆ ಕೂತಿದ್ದರೆ ಮೀನಾಕ್ಷಮ್ಮ ಕಣ್ಣಿಗೆ ಸೆರಗು ಹಚ್ಚಿ ಅಳುತ್ತಿದ್ದರು. ಕಾವೇರಿ ಏನೂ ತೋಚದೆ ತಾಯಿಯನ್ನು ಸಮಾಧಾನಿಸುತ್ತಿದ್ದಳು.

ಇದೆಲ್ಲದರ ಮಧ್ಯೆ ಕವನಳ ಸ್ನೇಹಿತರು ಗಲಿಬಿಲಿಯಲ್ಲಿ ಹುಡುಕುತ್ತಿದ್ದರು. ಪಿಸುಮಾತುಗಳು, ಕಣ್ಸನ್ನೆಯಲ್ಲಿ ಏನೋ ಗುಟ್ಟಿದ್ದಂತೆ ಕಂಡಿತು.

ಮೀನಾಕ್ಷಮ್ಮನ ಅಣ್ಣ ನರಹರಿರಾಯರು "ಏನು ಹುಡುಗ್ರಾ. ಭಾರೀ ಪಂಚಾಯಿತಿ ನೆಡ್ಸಿದಂಗೆ ಕಾಣುತ್ತೆ. ಅವಳೆಲ್ಲಿ ಹೋಗಿದ್ದಾಳೆ ಗೊತ್ತಾ? ನಿಮ್ಗೆ ಹೇಳಿ ಹೋದಳಾ? ಇಲ್ಲಾ ನೀವೇ ಕಳ್ಸಿದ್ರಾ?" ಕೇಳೇಬಿಟ್ಟರು

ಮುಖ ಮುಖ ನೋಡಿಕೊಂಡರೇ ಹೊರತು ಒಬ್ಬರೂ ಉಸಿರೆತ್ತಲಿಲ್ಲ. ಮನೆಯವರ ಅನುಮಾನ ಬಲವಾಯಿತು.

"ಅರೆ! ನಿಮ್ಮೊಂದಿಗೆ ಇನ್ನೊಬ್ಬ ಹುಡುಗನಿದ್ದ ಅಲ್ವೇ? ಎಲ್ಲವನು ಕಾಣ್ತಿಲ್ಲ" ಸೂಕ್ಷ್ಮವಾಗಿ ಗಮನಿಸಿ ಕೇಳಿದಳು ಕಾವೇರಿ.

ಹುಡುಗರ ತಲೆ ಇನ್ನಷ್ಟು ತಗ್ಗಿತು. ಕಣ್ಣುಗಳು ನೆಲ ದಿಟ್ಟಿಸುತ್ತಿದ್ದವು. ಇವರ ನಡವಳಿಕೆಯಿಂದಲೇ ಮೀನಾಕ್ಷಮ್ಮ ಇವರಿಗೇನೋ ತಿಳಿದಿದೆ ಆದರೆ ಮುಚ್ಚಿಡ್ತಿದ್ದಾರೆ ಅಂತ ಗ್ರಹಿಸಿಬಿಟ್ಟರು.

"ಅಪ್ಪಾ, ಬೆಳಿಗ್ಗೆ ಕವನ ಇವ್ರನ್ನೆಲ್ಲ ನನ್ನ ಕಾಲೇಜಿನ ಗೆಳೆಯರು ಅಂತ ಪರಿಚಯಿಸಿದಾಗ ಇನ್ನೊಬ್ಬ ಹುಡುಗ ಇದ್ದ. ಅವನೀಗ ಕಾಣ್ತಿಲ್ಲ" ಅಂದಳು ಮಗಳು.

ಇಷ್ಟಾದ ಮೇಲೆ ಕೇಳಬೇಕೆ? ಮದುವೆಗೆ ಬಂದ ಅತಿಥಿಗಳ ಕಲ್ಪನೆಯ ಕುದುರೆಗೆ ರೆಕ್ಕೆ ಮೂಡಿತು. ಅವರು ತಮ್ಮ ವಿಚಾರ ಲಹರಿಗಳನ್ನು ಪಸರಿಸತೊಡಗಿದರು.

" ಅದೇನ್ ಹುಡುಗ್ರೋ ಏನ್ ಕಥೆನೋ. ಹೈಸ್ಕೂಲು ಮೆಟ್ಟಿಲು ಹತ್ತೊದೇ ತಡ, ಲೋಕ ಕಾಣಲ್ಲ. ಹೆತ್ತೋರ ಹೊಟ್ಟೆ ಉರ್ಸೋಕಂತಾನೆ ಕಾಯ್ತಿರ್ತಾವೆ ಪಾಪಿಮುಂಡೇವು"

" ಆ ಹಾಳ್ ಮೊಬೈಲ್ ಫೋನು ಬಂತು ನೋಡಿ. ಅಲ್ಲಿಂದಾನೇ ಎಲ್ಲಾ ಅವಾಂತರ ಶುರುವಾಗಿದ್ದು. ಫೇಸ್ಬುಕ್ , ವಾಟ್ಸಾಪ್ , ಸ್ಕೈಪ್ ಹಾಳು ಮೂಳು ಅಂತ ಮೂರ್ಹೊತ್ತೂ ಅದ್ರಲ್ಲೇ ಸಾಯ್ತಾವೆ."

" ಸರಿಯಾಗಿ ಹೇಳಿದ್ರಿ ನೋಡಿ. ಟಿ.ವಿ, ಮೊಬೈಲು, ಶಾಪಿಂಗ್ , ಫ್ರೆಂಡ್ಸ್ ಅಂತ ಮುಂಡಾಮೋಚ್ತು."

" ಕಾಲೇಜಿಗೆ ಹೋಗೋದು, ಲವ್ವು-ಗಿವ್ವು ಅಂತ ಮರಸುತ್ತೋದು, ಮನೆಯವ್ರ ಮಾತು ಕೇಳ್ದೇ ಓಡ್ಹೋಗಿ ಮದ್ವೆ ಆಗೋದು, ಮೂರು ದಿನದಲ್ಲಿ ಡೈವೋರ್ಸ್ ಕೊಡೋದು. ಮದ್ವೆ ಅಂದ್ರೆ ಹುಡುಗಾಟಿಕೆ ಆಗೋಗಿದೆ"

ಅಭಿಪ್ರಾಯಗಳು, ಟೀಕೆ-ಟಿಪ್ಪಣಿಗಳು ಅವ್ಯಾಹತವಾಗಿ ಸಾಗಿದವು.

ಇತ್ತ ಕವನಳ ಮನೆಯವರು ಅವಳ ಸ್ನೇಹಿತರ ಬಾಯಿ ಬಿಡಿಸುವ ಪ್ರಯತ್ನದಲ್ಲಿದ್ದರು. ಆದರೆ ಇವರ ಯಾವ ಪ್ರಶ್ನೆಗಳಿಗೂ ಗೆಳೆಯರ ಬಳಗದಿಂದ ಉತ್ತರವಿಲ್ಲ. ಇದನ್ನು ನೋಡಿ ನರಹರಿರಾಯರ ಮಗ ಶ್ರೀಕಂಠನಿಗೆ ನಖಶಿಖಾಂತ ಸಿಟ್ಟೇರಿತು.ಬಂದವನೇ ಒಬ್ಬ ಹುಡುಗನ ಕುತ್ತಿಗೆ ಪಟ್ಟಿ ಹಿಡಿದು ನಾಲ್ಕು ಬಾರಿಸಲು ತಯಾರಾದಾಗ ಹುಡುಗಿಯರು ನಡುಗಿದರು.
ಅವರಲ್ಲೊಬ್ಬಳು "ಅದೂ.... ಚೇತನ್ ಕೂಡಾ ಕಾಣ್ತಿಲ್ಲ" ಭಯದಲ್ಲಿ ಒದರಿಬಿಟ್ಟಳು.
"ಕವನ, ಚೇತನ್ ಇಬ್ರೂ ಒಟ್ಟಿಗೆ ಹೋಗಿದ್ದು ನಾನು ನೋಡಿದೆ" ಇನ್ನೊಬ್ಬನೆಂದ.

ಇದನ್ನು ಕೇಳಿದ್ದೇ ಮದುವೆ ಮನೆ ರಣರಂಗವಾಗುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿದವು. ಇಷ್ಟರವರೆಗೆ ಯುವಜನಾಂಗಕ್ಕೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದವರ ಫೋಕಸ್ ಸಡನ್ನಾಗಿ ಜಾತಿ, ಕುಲದ ಮರ್ಯಾದೆಯ ರಕ್ಷಣೆಗೆ ಶಿಫ್ಟ್ ಆಯಿತು.

"ಯಾರೋ ಅವನು ಚೇತನ್? ಯಾರ ಮಗ? ಮನೆ ಎಲ್ಲಿ? ಯಾವ ಜಾತಿ? ಎಷ್ಟು ಧೈರ್ಯ ನಮ್ಮ ಹುಡುಗೀನ ಓಡ್ಸಿಕೊಂಡು ಹೋಗೋಕೆ. ಹುಡುಕ್ರೋ ನನ್ಮಗನ್ನ ಹುಟ್ಲಿಲ್ಲಾ ಅನ್ಸಿಬಿಡೋಣ"

"ನಾವು ಸುಮ್ನಿದ್ರೆ ಈ ಹುಡುಗ್ರು ಮಿತಿಮೀರ್ತಾರೆ. ಮದ್ವೆ ಮನೆಯಿಂದ ಹುಡುಗಿನ ಕರ್ಕೊಂಡು ಹೋಗೋಷ್ಟು ಧೈರ್ಯ? ಹೀಗೇ ಬಿಟ್ರೆ ಆಗಲ್ಲ. ಹಿಡಿದುತಂದು ಸಿಗ್ದು ಊರಬಾಗ್ಲಿಗೆ ತೋರಣ ಕಟ್ಟಿ. ಇನ್ಯಾರೂ ಈ ತರ ಹಲ್ಕಾ ಕೆಲಸ ಮಾಡಬಾರ್ದು"

" ನಡಿರೋ ಹುಡ್ಕೋಣ. ಎಷ್ಟುದೂರ ಹೋಗಿರ್ತಾರೆ?"

"ಮೊದ್ಲು ಒಂದು ಪೋಲೀಸ್ ಕಂಪ್ಲೈಂಟ್ ಕೊಡ್ರೋ ಓಡ್ಹೋಗಿದ್ದಾರೆ ಅಂತ"

" ಹುಡ್ಕೊಂಡು ಹೋಗೋಣ. ದಾರಿಲ್ಲೇ ಸ್ಟೇಷನ್ ಇದ್ಯಲ್ಲಾ. ಅಲ್ಲೇ ಕಂಪ್ಲೈಂಟ್ ಕೊಡೋಣ"

ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರ ನೆತ್ತರೂ ಕುದಿಯುತ್ತಿತ್ತು. ಓಡಿಹೋದವರ ಗೋಣುಮುರಿಯಲು ಎಲ್ಲರೂ ಪಣತೊಟ್ಟರು.
ಅದಕ್ಕೆ ಅಡಿಪಾಯ ಹಾಕುವಂತೆ ಓಡಿಹೋದವರನ್ನು ಹುಡುಕಿ ಸಿಗಿದು ತೋರಣಕಟ್ಟಲು ಕತ್ತಿ, ಮಚ್ಚು, ಕೊಡಲಿಗಳನ್ನು ಹಿಡಿದು ಊರಿನ ಗಂಡ್ಹೈಕಳು ತಂಡಗಳಲ್ಲಿ ಅಷ್ಟ ದಿಕ್ಕುಗಳಲ್ಲಿ ಹೊರಟರು.

ಅವರಿಬ್ಬರೂ ಅಂತಹವರಲ್ಲ ಅಂತ ಹೇಳುತ್ತಿದ್ದ ಗೆಳೆಯರ ಬಳಗದ ಕೂಗು ಅರಣ್ಯರೋಧನವಾಯಿತು.

ಮೀನಾಕ್ಷಮ್ಮನ ಗೋಳು ಹೇಳತೀರದು. ಮಗಳನ್ನು ಶಪಿಸಿ ಎದೆ ಬಡಿದುಕೊಂಡು ಅಳುತ್ತಿದ್ದರು.
ಶಂಕರಯ್ಯ ಭೂಮಿಗಿಳಿದು ಹೋಗಿದ್ದರು. ಎಂದೂ ತಮ್ಮ ಮಾತು ಮೀರದ ಮುದ್ದಿನ ಮಗಳು....
"ಅಪ್ಪಾ ನೀವು ಯಾರನ್ನ ತೋರ್ಸಿ ಮದುವೆಯಾಗೂ ಅಂತಿರೋ ಇನ್ನೊಂದು ಮಾತಿಲ್ದೇ ತಾಳಿ ಕಟ್ಟಿಸ್ಕೋತೀನಿ. ನನಗೆ ಯಾರು ಸರಿ ಅಂತ ನಿಮ್ಗಲ್ದೇ ಇನ್ಯಾರಿಗೆ ಗೊತ್ತಿರುತ್ತೆ" ಅಂತಿದ್ದವಳು ಇದೇನು ಮಾಡಿದ್ಲು. ಇಲ್ಲಾ.. ಆ ಹುಡುಗನೇ ಇವಳ ತಲೆ ಕೆಡಿಸಿರಬೇಕು. ಇಷ್ಟು ವರ್ಷ ಎಷ್ಟು ಮರ್ಯಾದೆಯಿಂದ ಬಾಳಿದೋರು ನಾವು. ಇನ್ನು ಹೇಗೆ ಲೋಕಕ್ಕೆ ಮುಖ ತೋರಿಸೋದು..... ಇಂಥಾ ಹತ್ತಾರು ಯೋಚನೆಗಳು ಅವರನ್ನು ಮುತ್ತಿದ್ದವು.

ತಾಯ್ತಂದೆಯರೊಂದಿಗೆ ಮಾತಾಡುತ್ತಿದ್ದ ಮೋಹನ್ ಅವರ ಬಳಿ ಬಂದಾಗ ಅವನಿಗೆ ಮುಖತೋರಿಸಲಾಗದೇ ತಲೆತಗ್ಗಿಸಿದರು.
ಅಯ್ಯೋ, ಇವನಿಗೇನು ಹೇಳಲಿ? ಮಂಟಪದಲ್ಲಿ ಮದುವೆ ಮುರಿದು ಬೀಳುವುದೆಂದರೆ ಯಾರಿಗಾದರೂ ಅವಮಾನಕರ ವಿಷಯ. ಛೇ... ಎಂಥಾ ಪರಿಸ್ಥಿತಿ ತಂದಿಟ್ಟಳು ಕವನ...... ಅವರು ಯೋಚಿಸುತ್ತಲೇ ಮೋಹನನ ಕೈ ಹಿಡಿದು "ದಯವಿಟ್ಟು ನಮ್ಮನ್ನು ಕ್ಷಮಿಸ್ಬಿಡಪ್ಪಾ. ನನ್ನ ಮಗಳು ತುಂಬಾ ಒಳ್ಳೆಯವಳು. ಅವನೇ ತಲೆಕೆಡ್ಸಿರಬೇಕು ಕೇಡಿ. ಅದೇನೇ ಆದ್ರೂ ಇದರಿಂದ ತುಂಬಾ ಅವಮಾನ ಆಗಿದ್ದು ನಿಂಗೆ" ಅವರ ಗಂಟಲುಕಟ್ಟಿತು.

"ಮಾವ ನೀವ್ಯಾಕೆ ಕ್ಷಮೆ ಕೇಳ್ತಿದ್ದೀರಾ? ಇದ್ರಲ್ಲಿ ನಿಮ್ಮ ತಪ್ಪೇನಿಲ್ಲ ಬಿಡಿ" ಮೋಹನ್ ಅಂದಾಗ ಎಷ್ಟು ಸಂಸ್ಕಾರವಂತ ಹುಡುಗನಪ್ಪಾ ಅಂದುಕೊಂಡರು ಮದುವೆ ಮನೆಯಲ್ಲಿ ಉಳಿದವರು.

ಮೋಹನ ಮಾತು ಮುಂದುವರೆಸುತ್ತಾ " ಮಾವ, ಆಗಿದ್ದು ಆಗ್ಹೋಯ್ತು. ಏನೂ ಮಾಡೋಕಾಗಲ್ಲ. ಆದ್ರೆ ಮಂಟಪದಲ್ಲಿ ಮದ್ವೆ ನಿಂತ್ರೆ ಅವಮಾನದ ಜೊತೆಗೆ ಅಶುಭವೂ ಕೂಡಾ. ಅದಕ್ಕೆ ನಾನು ಅಪ್ಪ ಅಮ್ಮನ ಜೊತೆ ಮಾತಾಡಿ ಒಂದು ನಿರ್ಧಾರಕ್ಕೆ ಬಂದಿದ್ದೀನಿ. ನೀವು ಒಪ್ಪಿದ್ರೆ ನಾನು ಕಾವೇರಿನ ಮದ್ವೆ ಮಾಡ್ಕೋತೀನಿ. ಲೋಹಿತ್ ನ ನನ್ನ ಸ್ವಂತ ಮಗನ ತರ ನೋಡ್ಕೋತೀನಿ" ನೇರವಾಗಿ ಕೇಳಿದಾಗ ಮದುವೆ ಮನೆಯಲ್ಲಿದ್ದವರೆಲ್ಲಾ ಆಶ್ಚರ್ಯದಿಂದ ಅವನತ್ತ ನೋಡಿದರು.

ಕಾವೇರಿ ಈ ಅನಿರೀಕ್ಷಿತ ಪ್ರಸ್ತಾಪಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದಳು.
ಮೀನಾಕ್ಷಮ್ಮನ ಸ್ಥಿತಿಯೂ ಹಾಗೇ ಇತ್ತು.

ಶಂಕರಯ್ಯ ಸಾವರಿಸಿಕೊಂಡು "ಏನು ಮಾತಾಡ್ತಿದ್ದೀಯ ಮೋಹನ. ಅವಳು ಗಂಡ ಸತ್ತ ವಿಧವೆ. ಅವಳನ್ನು ಮದ್ವೆ....... ಅದ್ಹೇಗಪ್ಪ. ಜನ ಸಾವಿರ ಮಾತಾಡ್ತಾರೆ" ಅಂದರು.

"ಜನರ ಮಾತಿಗೆ ನಾನು ತಲೆಕೆಡ್ಸಿಕೊಳ್ಳೋಲ್ಲ ಮಾವ. ನನ್ನ ಲೈಫ್ ನಂದು. ಕಾವೇರಿ ಒಳ್ಳೆಯ ಗುಣದವಳು. ನಮಗಷ್ಟೇ ಸಾಕು.ನನಗೆ ನಮ್ಮನೆಯೋರಿಗೆ ಏನೂ ತೊಂದ್ರೆ ಇಲ್ಲ. ನೀವೆಲ್ಲಾ ಒಪ್ಪಿದ್ರೆ ಸಾಕು" ಅಂದಾಗ ಅವನಪ್ಪ ಅಮ್ಮನೂ ಅದನ್ನು ಅನುಮೋದಿಸಿದರು. "ನೀವು ಮೂವರು ಮಾತಾಡಿ ಒಳ್ಳೆ ನಿರ್ಧಾರಕ್ಕೆ ಬನ್ನಿ. ನಿಮ್ಗೆ ಒಪ್ಪಿಗೆ ಅಂದ್ರೆ ಇವತ್ತೇ ಮದುವೆ ಮುಗ್ಸೋಣ" ಮೋಹನನ ತಾಯಿ ಹೇಳಿದಾಗ ಮದುವೆಗೆ ಬಂದವರೆಲ್ಲಾ ಮೋಹನ್ ಮತ್ತವನ ಮನೆಯವರ ಚಿನ್ನದಂಥಾ ಗುಣಕ್ಕೆ ಸೋತರು. ಬಂಗಾರದಂತಹ ಹುಡುಗ, ಕವನಳಿಗೆ ಅದೃಷ್ಟವಿಲ್ಲ, ಹುಚ್ಚು ಅವಳಿಗೆ ಅಂತ ಎಲ್ಲಾ ಮಾತಾಡಿಕೊಂಡರು.

ಕಾವೇರಿ " ಅಪ್ಪಾ, ನಂಗೇನೂ ತಿಳೀತಿಲ್ಲ. ನೀವೇ ನಿರ್ಧಾರ ಮಾಡಿ" ಅಂತ ಅವರಿಗೇ ವಹಿಸಿದಳು. ಮೀನಾಕ್ಷಮ್ಮ, ಶಂಕರಯ್ಯ ವಿಚಾರ ವಿಮರ್ಶೆ ನಡೆಸಿ ಅವರಿಗೆ ಸಮ್ಮತವೆಂದರೆ, ಮಗಳಿಗೊಂದು ಒಳ್ಳೆಯ ಬದುಕು ಸಿಗುವುದಾದರೇ ಯಾಕಾಗಬಾರದು. ಮಾಡಿಕೊಡೋಣವೆಂದು ನಿರ್ಧರಿಸಿದರು.

ಮತ್ತೆ ಮದುವೆ ಮನೆಯಲ್ಲಿ ಓಲಗದ ಸದ್ದು ಆರಂಭವಾಯಿತು.
ಈ ಬಗ್ಗೆ ಜಂಗಮವಾಣಿಯಿಂದ ಮಾಹಿತಿ ತಿಳಿದು, ಇಂಥಾ ವಿಧವಾ ವಿವಾಹದ ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಲೆಂದು ಓಡಿದವರನ್ನು ಹುಡುಕಹೋಗಿದ್ದ ಗಂಡಸರೂ ವಾಪಾಸಾದರು. ಮದುವೆ ಮುಗಿದಮೇಲೆ ಹುಡುಕಿ ಸಿಗಿಯುವ ಎಂದುಕೊಂಡರು.
ಕಾವೇರಿ ಸರ್ವಾಲಂಕಾರದೊಂದಿಗೆ ವಧುವಾಗಿ ಮಂಟಪಕ್ಕೆ ಕಳೆತಂದಳು.

ಮಂತ್ರಘೋಷ, ಮಂಗಳವಾದ್ಯಗಳ ನಡುವೆ ಮಾಂಗಲ್ಯಧಾರಣೆಗೆ ವೇದಿಕೆ ಸಜ್ಜಾಗಿತ್ತು.

ಆದರೆ ಅಷ್ಟರಲ್ಲಿ ಎಲ್ಲರ ಅಚ್ಚರಿಗೆಂಬಂತೆ ಚಲನಚಿತ್ರಗಳಲ್ಲಿ ಎಲ್ಲಾ ಮುಗಿದ ಮೇಲೆ ರಂಗಪ್ರವೇಶ ಮಾಡುತ್ತಿದ್ದ ಪೋಲೀಸರು ತಾಳಿ ಕಟ್ಟೋಕು ಮುಂಚೆನೇ ಬಂದಿದ್ದಲ್ಲಾ ಮಾರ್ರೆ!!!!!
ಅದಲ್ಲದೇ ತಮ್ಮೊಟ್ಟಿಗೆ ಓಡಿಹೋದವರನ್ನೂ ಕರೆತರಬೇಕೇ???

ತಣ್ಣಗಾದ ರಕ್ತ ಮತ್ತೆ ಕುದಿಯತೊಡಗಿತು. ಕೈ ಕತ್ತಿ, ಮಚ್ಚು, ಕೊಡಲಿಗಳನ್ನು ಹುಡುಕತೊಡಗಿತು.

ಕಾವೇರಿಗೆ ಈಗೇನು ಮಾಡಬೇಕೆಂಬ ಗೊಂದಲ... ಶಂಕರಯ್ಯ, ಮೀನಾಕ್ಷಮ್ಮ ಉಳಿದವರಿಗೆ ‌ಸಿಟ್ಟು.....

ಇಂತಿಪ್ಪ ಸಮಯದಲ್ಲಿ ಇರೋ ಟೆನ್ಷನ್ ಸಾಲ್ದು ಅಂತ ಪೋಲೀಸರು ಹೋಗಿ ಮೋಹನ, ಅವನಪ್ಪ ಅಮ್ಮನ್ನ ಹಿಡ್ದು ಸಮಾ ನಾಲ್ಕು ಕೊಟ್ಟಿದ್ದಲ್ಲ ಮಾರ್ರೆ ಕೆನ್ನೆಗೆ!!!!!
ಮದ್ವೆ ಮನೆಲ್ಲಿದ್ದೋರ ಮಂಡೆಬೆಚ್ಚ ಆಗದೇ ಇರುತ್ತಾ???

ನರಹರಿರಾಯರು, " ಅಯ್ಯೋ ಸರ್, ಮೋಹನ್ ನ ಯಾಕೆ ಹೋಡೀತೀರಾ? ಇವರಿಬ್ರೂ ಇದ್ದಾರೆ ನೋಡಿ ಇವರನ್ನ ಹೋಡೀರೀ" ಕಿರುಚಿದರು.

"ಅಯ್ಯೋ ಸುಮ್ನಿರೀ ಯಜಮಾನ್ರೇ. ಇವ್ನು ಮೋಹನನೂ ಅಲ್ಲ ಮುರಾರಿನೂ ಅಲ್ಲ. ಇವನ ನಿಜ ನಾಮಧೇಯ ಹರಿದಾಸ್ ಸಾಳ್ವಿ ಅಂತ. ಈ ಲೋಫರ್ ಗಳನ್ನು ನಮ್ಮಿಡೀ ಡಿಪಾರ್ಟ್ಮೆಂಟೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡ್ಕುತಿದೆ. ಇವನಿದಾನಲ್ಲ ಈ ಲಫಂಗ ಇವ್ನ ಬಿಸಿನೆಸ್ ಇದು. ಬಡ ಕುಟುಂಬದ ಹೆಣ್ಣ್ಮಕ್ಕಳನ್ನು ಮದ್ವೆ ಮಾಡ್ಕೊಂಡು ಅರಬ್ ದೇಶಗಳಿಗೆ ಅವ್ರನ್ನ ಮಾರೋದು. ಇವರಿಬ್ರೂ ಇವನ ಪಾರ್ಟ್ನರ್ ಗಳು. ಬೇರೆ ಬೇರೆ ರಾಜ್ಯಗಳಲ್ಲಿ ಇವನ ಮೇಲೆ ಸುಮಾರು ಕಂಪ್ಲೈಂಟ್ ಗಳಿವೆ. ಎಲ್ಲೂ ಸಿಕ್ಕಿರ್ಲಿಲ್ಲ. ಇವತ್ತು ಇವರಿಬ್ಬರ ಸಮಯಪ್ರಜ್ಞೆಯಿಂದ ಸಿಕ್ಕಿಹಾಕೊಂಡ ನೋಡಿ" ಎಸ್. ಐ ಹೇಳಿದಾಗ ಮದ್ವೆ ಮನೆ ಸ್ಥಬ್ದವಾಯಿತು.

"ಹೌದಪ್ಪಾ, ನನಗೂ ಚೇತನ್ ಹೇಳಿದ್ಮೇಲೆ ಗೊತ್ತಾಗಿದ್ದು. ನಿಮಗೆಲ್ಲಾ ಹೇಳಿ ಮದ್ವೆ ನಿಲ್ಲಿಸೋಣ ಅಂದೆ. ಆದ್ರೆ ಆಗ ಈ ಮೋಹನ್ ಮತ್ತವನ ಚೇಲಾಗಳು ತಪ್ಪಿಸ್ಕೊಂಡು ಬಿಡ್ತಾರೆ. ನೀನಿರು ಬೇಗ ಹೋಗಿ ಪೋಲೀಸ್ ಕರ್ಕೋಂಡು ಬರ್ತೀನಿ ಅಂದ. ಅಷ್ಟೊತ್ತಿಗೆ ಅಕ್ಕ ನನ್ನ ಮಂಟಪಕ್ಕೆ ಕರ್ರ್ಯೋಕೆ ಅಂತ ಬರೋದು ಕಾಣಿಸ್ತು. ಇಲ್ಲಿದ್ರೆ ಮದುವೆ ಮಾಡ್ಸಿಬಿಡ್ತಾರೆ. ಏನ್ ಮಾಡೋದು ಗೊತ್ತಾಗ್ದೇ ನಾನೂ ಅವನ್ ಜೊತೆ ಹೋದೆ" ಕವನ ಹೇಳುತ್ತಿದ್ದರೆ ಕಾವೇರಿ ಬೆವರತೊಡಗಿದಳು. ಒಂದು ವೇಳೆ ತನ್ನ ಮದುವೆಯಾಗಿಬಿಟ್ಟಿದ್ದರೆ....... ತನ್ನ , ಲೋಹಿತನ ಗತಿ ಏನಾಗುತಿತ್ತು? ಮಗನನ್ನು ಗಟ್ಟಿಯಾಗಿ ಹಿಡಿದುಕೊಂಡಳು.

ಚೇತನ್ ಶಂಕರಯ್ಯನವರ ಬಳಿ ಬಂದು " ನಾನು ಈ ರಾಸ್ಕಲ್ ನ ನೋಡಿದ ಕೂಡ್ಲೇ ಗುರ್ತಿಸ್ದೆ ಅಂಕಲ್.ಇವ್ನು ನಮ್ಮ ಸಂಬಂಧಿಕರ ಮಗಳೊಬ್ಬಳನ್ನ ಮದ್ವೆಯಾಗಿ ಕರ್ಕೊಂಡು ಹೋದವನು ನಾಪತ್ತೆಯಾಗ್ಬಿಟ್ಟ. ಅವಳೆಲ್ಲಿ ಅಂತಾ ಯಾರಿಗೂ ಗೊತ್ತಿಲ್ಲ. ಹುಡುಕೀ ಸಾಕಾಯ್ತು. ಪೋಲಿಸ್ ಕಂಪ್ಲೈಂಟ್ ಕೊಟ್ಟಾಗ್ಲೇ ಗೊತ್ತಾಗಿದ್ದು ಇವನೆಂಥಾ ನೀಚ ಅಂತ. ಅವಳಿನ್ನೂ ಸಿಕ್ಕಿಲ್ಲ. ಅಲ್ಲೂ ಇವರಿಬ್ರೇ ಇವ್ನ ಅಪ್ಪ ಅಮ್ಮ ಅಂತ ಬಂದಿದ್ರೂ. ನಾವು ಹಿಂದೆ ಮುಂದೆ ವಿಚಾರಿಸ್ದೇ, ಇವರ ಮಾತಿಗೆ ಮರುಳಾಗಿ ಮದ್ವೆ ಮಾಡಿದ್ವಿ. ಈಗ ಎಲ್ಲಾ ಕಣ್ಣೀರು ಹಾಕೋದೇ ಆಗಿದೆ. ಇವರನ್ನು ಇಲ್ಲಿ ನೋಡಿದ ಕೂಡಲೇ ನಂಗೊತ್ತಾಯ್ತು. ಇವರು ನಿಮ್ಗೂ ಮದ್ವೆ ಹೆಸರಲ್ಲಿ ಮೋಸಮಾಡ್ತಿದ್ದಾರೆ ಅಂತ. ಇವ್ರುನ್ನ ಹಿಡಿಯೋಕೆ ಹೀಗೆ ಮಾಡ್ಬೇಕಾಯ್ತು." ವಿವರಿಸಿದ.

ಪೋಲೀಸರು ಹರಿದಾಸ್ ಸಾಳ್ವಿ ಉರುಫ್ ಮೋಹನ್ ಮತ್ತವನ ನಕಲಿ ಅಪ್ಪ ಅಮ್ಮನನ್ನು ಬಂಧಿಸಿ ಕರೆದೊಯ್ಯುತ್ತಿದ್ದರೆ, ಇಲ್ಲಿಯವರೆಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಂಧು ಮಿತ್ರರು ಇಂಗು ತಿಂದ ಮಂಗನಂತಾಗಿದ್ದರು.

ಓಡಿಹೋದವರನ್ನು ಹಿಡಿದು ಸಿಗಿದು ತೋರಣ ಕಟ್ಟಲು ಶಸ್ತ್ರಾಸ್ತ್ರಗಳೊಂದಿಗೆ ತಯಾರಾಗಿದ್ದವರು ತಮ್ಮ ಚಿಂತನೆಗೆ ನಾಚಿ ಶಸ್ತ್ರತ್ಯಾಗ ಮಾಡಿ ಮನೆಗಳತ್ತ ಹೊರಟರು.

ಶಂಕರಯ್ಯ, ಮೀನಾಕ್ಷಮ್ಮ ಮಾತ್ರ ದಿಗ್ಬ್ರಾಂತರಾಗಿದ್ದರು. ಪೂರ್ವಾಪರ ವಿಚಾರಿಸದೇ ತರಾತುರಿಯಲ್ಲಿ ಮದುವೆ ನಿಶ್ಚಯಿಸಿದ್ದಕ್ಕೆ ತಮ್ಮನ್ನು ತಾವೇ ಹಳಿದುಕೊಂಡರು. ಆದರೂ ಕೊನೆಗಳಿಗೆಯಲ್ಲಿ ಮಗಳು ಬಾಳು ಹಾಳಾಗುವುದು ತಪ್ಪಿಸಿದ ಚೇತನ್ ಗೂ ಹಾಗೂ ದೇವರಿಗೂ ಕೋಟಿ ನಮನ ಸಲ್ಲಿಸಿ ನಿಟ್ಟುಸಿರು ಬಿಟ್ಟರು.

********ಮುಕ್ತಾಯ********