ಸೋಮವಾರ, ಜೂನ್ 29, 2020

ಅನೂಹ್ಯ 37

"ನಾನು ಆಫೀಸಲ್ಲಿ ಟ್ರಾನ್ಸಫರ್ ರಿಕ್ವೆಸ್ಟ್ ಮಾಡಿದ್ದೀನಿ ಸಮಾ. ಅಹಮದಾಬಾದ್ ಗೆ" ಎಂದುಬಿಟ್ಟ ಕಿಶೋರ್.

ಅವನ ಈ ನಡೆಯ ನಿರೀಕ್ಷೆಯೇ ಇಲ್ಲದ ಸಮನ್ವಿತಾ ಅಚ್ಚರಿಯಿಂದ ಅವನನ್ನೇ ದಿಟ್ಟಿಸಿದಳು. ಅವನ ಮಾತನ್ನು ಅರಗಿಸಿಕೊಳ್ಳಲು ಕೆಲವು ಕ್ಷಣಗಳು ಬೇಕಾಯಿತವಳಿಗೆ. ಇವನಿಗೇನಾದರೂ ತಲೆ ಕೆಟ್ಟಿದೆಯಾ? ಅನುಮಾನ ಕಾಡಿತು.

"ನೀನೇನು ಮಾತಾಡುತ್ತಿದ್ದೀಯಾ ಅನ್ನೋ ಕಲ್ಪನೆಯಾದರೂ ಇದೆಯೋ ಹೇಗೆ? ನಾನು ಕೇಳಿದ್ದೇನು, ನೀನು ಹೇಳ್ತಿರೋದೇನು? ಇದೆಂತಹಾ ಪರಿಹಾರ ನವ್ಯಾಳ ಸಮಸ್ಯೆಗೆ? ಮನೆ, ಜಾಗ ಬದಲಾಯಿಸಿದ್ರೆ ಮನಸ್ಸು ಬದಲಾಗುತ್ತಾ? ಇಲ್ಲಾ ಅದರ ಯೋಚನೆಗಳು, ತವಕತಲ್ಲಣಗಳಿಗೆ ಪರಿಹಾರ ಸಿಗುತ್ತಾ? ಡೋಂಟ್ ಬಿಹೇವ್ ಲೈಕ್ ಅ ಸ್ಟುಪಿಡ್ ಕಿಶೋರ್. ನಿನ್ನೀ ನಿರ್ಧಾರದಿಂದ ಈಗಿರೋ ನೆಮ್ಮದಿಯೂ ಹಾಳಾಗುತ್ತೆ ಅಷ್ಟೇ. ಈ ರೀತಿಯ ನಿರ್ಧಾರ ತಗೊಳ್ಳೋ ಮುಂಚೆ ನಿನ್ನ ಅಪ್ಪ ಅಮ್ಮ ಮತ್ತೆ ತಮ್ಮನ ಬಗ್ಗೆ ಯೋಚನೆ ಮಾಡಿದ್ದೀಯಾ? ಅವ್ರು ನವ್ಯಾನ ಎಷ್ಟು ಹಚ್ಚಿಕೊಂಡಿದ್ದಾರೆ ಅಂತ ಗೊತ್ತಿಲ್ವಾ ನಿನಗೆ? ವಯಸ್ಸಾಗಿದೆ ಕಣೋ ಅಪ್ಪ ಅಮ್ಮನಿಗೆ. ಹೀಗೆ ಹಠಾತ್ತಾಗಿ ನೀನು ಅವಳೊಂದಿಗೆ ಹೊರಟ್ರೆ ಅವರ ಮನಸ್ಸಿಗೆ ಹೇಗನಿಸಬಹುದು? ಶಾಂತ ಸರೋವರದ ಹಾಗಿರೋ ಮನೆಮನಗಳಲ್ಲಿ ಏಳುವ ಪ್ರಶ್ನೆಗಳ ತರಂಗಗಳು ಎಂತಹ ಬಿರುಗಾಳಿಯನ್ನು ಸೃಷ್ಟಿಸಬಹುದು ಅಂತ ಒಮ್ಮೆಯಾದ್ರೂ ಯೋಚಿಸಿದ್ದೀಯಾ? ಅದು ಬಿಡು….. ಇದಕ್ಕೆ ಖುದ್ದು ನವ್ಯಾ ಒಪ್ತಾಳಾ? ಅವಳಿಗೆ ಜನರ ಮೇಲೆ, ಪ್ರಪಂಚದ ಮೇಲೆ ನಂಬಿಕೆ ಅಂತ ಬಂದಿದ್ದೇ ಈ ಮನೆಗೆ ಕಾಲಿಟ್ಟ ಮೇಲೆ. ನಿನ್ನ ಮನೆಯವರೊಂದಿಗೆ ಅವಳಿಗಿರುವ ಸಂಬಂಧ ಮನಸ್ಸು ಹಾಗೂ ಆತ್ಮದ ನಡುವಿನ ಬಂಧದಷ್ಟೇ ಗಾಢವಾದದ್ದು. ಅಮ್ಮನೊಂದಿಗೆ ಮಗುವಿಗೆ, ದೈವದೊಂದಿಗೆ ಭಕ್ತರಿಗೆ ಇರುವಷ್ಟು ಅವಿನಾಭಾವ ಸಂಬಂಧ ಅದು. ನೀನು ಈ ರೀತಿ ಹುಚ್ಚು ನಿರ್ಧಾರಗಳನ್ನು ತೆಗೆದುಕೊಂಡು ಅವಳ ಸಮಸ್ಯೆಯನ್ನು ಇಮ್ಮಡಿಗೊಳಿಸಲು ಹೊರಟಿರುವೆ ಕಿಶೋರ್. ಈ ನಿನ್ನ ನಿರ್ಧಾರಕ್ಕೆ ಕಟುವಾದ ವಿರೋಧ ಅವಳಿಂದಲೇ ಬರುತ್ತೆ ನೆನಪಿರಲಿ. ತಾನು ಮನೆಯವರಿಂದ ವಿಷಯ ಮುಚ್ಚಿಟ್ಟಿರುವೆ ಎಂದು ಪ್ರತಿಕ್ಷಣ ಬೇಯುತ್ತಿರುವವಳನ್ನು ತನ್ನಿಂದಾಗಿ ಒಂದು ಕುಟುಂಬವೇ ಒಡೆಯಿತು ಎಂಬ ಪಶ್ಚಾತ್ತಾಪದ ಕುಲುಮೆಯಲ್ಲಿ ಕುದಿಸಲು ಹೊರಟಿರುವೆಯಲ್ಲಾ...... ನಿನಗೆ ಏನೆನ್ನಲೀ?" ಅವನ ನಿರ್ಧಾರಕ್ಕೆ ತನ್ನ ಸಮ್ಮತಿಯಿಲ್ಲ ಎಂಬುದನ್ನು ಮಾತುಗಳಲ್ಲಿ ಸ್ಪಷ್ಟಪಡಿಸಿದಳು ಸಮನ್ವಿತಾ.

"ಈ ವಿಷಯ ಇನ್ನೂ ಯಾರಿಗೂ ಹೇಳಿಲ್ಲ. ನಿನ್ಗೇ ಫಸ್ಟ್ ಹೇಳ್ತಿರೋದು. ನಾನು ಅವ್ರನ್ನೆಲ್ಲಾ ಒಪ್ಪಿಸೋಕೆ ನಿನ್ನ ಸಹಾಯ ಕೇಳೋಣಾ ಅಂತ ನಿನ್ಹತ್ರ ವಿಷ್ಯ ಹೇಳಿದ್ರೆ, ನೀನು ನನ್ನ ನಿರ್ಧಾರ ಬದಲಾಯಿಸೋಕೆ ನೋಡ್ತಿದ್ಯಲ್ಲಾ. ನೀನೇ ಹೀಗೆ ಹೇಳಿದ್ರೆ ನಾನು ಅವ್ರನ್ನೆಲ್ಲಾ ಹೇಗೆ ಕನ್ವಿನ್ಸ್ ಮಾಡ್ಲೀ ಸಮಾ? ಪ್ಲೀಸ್ ಸಹಾಯ ಮಾಡೇ" ಅವನದು ಅದೇ ವಿನಂತಿ.

"ನೋಡು, ಈ ವಿಷಯ ಇಲ್ಲಿಗೇ ಬಿಟ್ಟುಬಿಡು ಅನ್ನೋದು ನನ್ನ ಆಗ್ರಹ. ಹಾಗೊಂದು ವೇಳೆ ಇದೇ ನಿನ್ನ ಅಂತಿಮ ನಿರ್ಧಾರವಾಗಿದ್ರೆ ಈ ವಿಚಾರದಲ್ಲಿ ನನ್ನನ್ನು ಮಧ್ಯೆ ತರಬೇಡ" ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟಳು.

"ಸಮಾ, ನನಗೆ ಮಾತ್ರ ಈ ಮನೆ, ಅಪ್ಪ, ಅಮ್ಮ, ಕಾರ್ತಿನ ಬಿಟ್ಟು ಹೋಗೋದು ಇಷ್ಟ ಅಂದ್ಕೊಂಡಿದ್ದೀಯಾ? ನನ್ನ ನಾನು ಸಂಭಾಳಿಸಿಕೊಳ್ಳೋಕೆ ಎಷ್ಟು ಕಷ್ಟ ಪಡ್ತಿದ್ದೀನಿ ಅಂತ ನನಗೆ ಮಾತ್ರ ಗೊತ್ತು. ಆದರೆ ಸಧ್ಯಕ್ಕೆ ಬೇರೆ ದಾರಿ ಇಲ್ಲ ನನ್ಹತ್ರ. ಈಗೀಗ ನವ್ಯಾಳ ಪರಿಸ್ಥಿತಿ ನೋಡಿದ್ರೆ ಹೆದರಿಕೆ ಆಗುತ್ತೆ. ಇಡೀ ರಾತ್ರಿ ಏನೇನೋ ಮಾತಾಡ್ಕೊಂಡು ಬೆಚ್ಚೋದು, ಅಳೋದು ಹೀಗೆಲ್ಲಾ ಮಾಡ್ತಾಳೆ. ಕೆಲವೊಮ್ಮೆ ಇಡೀ ರಾತ್ರಿ ನಿದ್ರೆಯಿಲ್ಲದೇ ಕಿಟಕಿಯಿಂದ ಆಕಾಶ ನೋಡ್ತಾ ನಿಂತಿರ್ತಾಳೆ. ಇದು ಹೀಗೇ ಮುಂದುವರೆದರೆ ನಾನೆಲ್ಲಿ ಅವಳನ್ನು ಕಳ್ಕೊಂಡ್ಬಿಡ್ತೀನೋ ಅನ್ನೋ ಭಯ ಶುರುವಾಗಿದೆ ಸಮಾ. ಇಂತಹ ಪರಿಸ್ಥಿತಿಯಲ್ಲಿ ಇರೋ ಸತ್ಯನ ಮನೆಯವರಿಗೆ ಹೇಳಿದ್ರೆ........! ಅದರ ಪರಿಣಾಮನ ಊಹಿಸೋಕೂ ಆಗ್ತಿಲ್ಲ ನನ್ನ ಕೈಲಿ. ಸತ್ಯ ಗೊತ್ತಾದ್ರೆ..... ಅದನ್ನು ಅರಗಿಸಿಕೊಳ್ತಾರಾ? ಎಲ್ಲಾ ಅವಳನ್ನ ದೂರ ಮಾಡ್ತಾರೆ ಅನ್ಸುತ್ತೆ. ಅಕ್ಕಪಕ್ಕದವರು, ಜನರ ಮಾತಿಗೆ ಹೆದರಿ ಒಂದು ವೇಳೆ ನವ್ಯಾನ ಮನೆಯಿಂದ ಹೊರಗೆ ಹಾಕಿದ್ರೆ? 'ನಿನ್ಗೆ ನಾನು ಬೇಕೋ, ಅವ್ಳು ಬೇಕೋ ನಿರ್ಧಾರ ಮಾಡು' ಅಂತ ಅಮ್ಮ ಹೇಳಿದ್ರೆ? ಆಗ ನಾನೇನ್ ಮಾಡ್ಲಿ ಸಮಾ? ನವ್ಯಾ ಬಗ್ಗೆ ನಿನ್ಗೂ ಚೆನ್ನಾಗಿ ಗೊತ್ತು. ಅಂತಹ ಪರಿಸ್ಥಿತಿ ಬಂದ್ರೆ ನನಗೂ ಹೇಳದೇ ಹೊರಟ್ಹೋಗ್ತಾಳೆಯೇ ಹೊರತು, ನಾನು ಅವಳ ಜೊತೆ ಹೋಗೋದನ್ನಂತೂ ಸುತಾರಾಂ ಒಪ್ಪಲ್ಲ ಅವ್ಳು. ಎಲ್ಲರ ಚುಚ್ಚುಮಾತುಗಳು, ನಿಂದನೆಗಳನ್ನ ಒಬ್ಬಳೇ ಎದುರಿಸಬೇಕಾಗುತ್ತೆ. ಇದು ಅನ್ಯಾಯ ಅಲ್ವಾ? ಅವಳೇನು ಮದ್ವೆ ಮಾಡ್ಕೋ ಅಂತ ನನ್ನ ಹಿಂದೆ ಬಿದ್ದಿರ್ಲಿಲ್ಲ. ಬೇಡಾ ಅಂತ ಸಾವಿರ ಸಲ ಹೇಳ್ತಿದ್ದವಳನ್ನು ನಾನೇ ಕನ್ವಿನ್ಸ್ ಮಾಡಿದ್ದು. ಅವಳ ಮಿತಿಗಳ ಅರಿವಿತ್ತು ಅವಳಿಗೆ. ಮದ್ವೆಗೆ ಮೊದಲೇ ಇರೋ ಸತ್ಯ ಎಲ್ಲಾ ಮನೆಯವರಿಗೆ ಹೇಳ್ಲೇಬೇಕು ಅಂತ ಅವ್ಳು ಒತ್ತಾಯ ಮಾಡಿದ್ಲು. ನೀನೂ ಕೂಡಾ ಅದನ್ನೇ ಹೇಳಿದ್ದೆ. ಆದ್ರೆ ವಿಷ್ಯ ಗೊತ್ತಾದ್ರೆ ಮನೆಯಲ್ಲಿ ಬೇಡ ಅಂತಾರೆ ಅನ್ನಿಸಿತ್ತು. ಯಾವ್ದೇ ಕಾರಣಕ್ಕೂ ನವ್ಯಾನ ಬಿಟ್ಟುಕೊಡೋ ಮನಸ್ಸಿರ್ಲಿಲ್ಲ. ಹಾಗಾಗಿ ಆಗ್ಲೂ 'ನಿಧಾನಕ್ಕೆ ಸರಿಯಾದ ಸಮಯ ನೋಡಿ ಮನೆಯಲ್ಲಿ ಹೇಳೋಣ' ಅಂತ ನಾನೇ ನಿಮ್ಮಿಬ್ಬರನ್ನೂ ಒಪ್ಪಿಸಿದ್ದೆ. ಆದ್ರೆ ಇವತ್ತಿನವರೆಗೂ ಸತ್ಯ ಹೇಳೋ ಧೈರ್ಯ ಬರಲೇ ಇಲ್ಲ. ಈಗ್ಲೂ ಅಷ್ಟೇ. ಸತ್ಯ ಹೇಳೋದು ಸುಲಭ. ಆದ್ರೆ ನಂತರದ ಅವರ‌ ಪ್ರತಿಕ್ರಿಯೆ ಇದ್ಯಲ್ಲಾ.... ಅದನ್ನು ಎದುರಿಸೋಕೆ ನಾನು ತಯಾರಿಲ್ಲ ಸಮಾ. ನನ್ಗೆ ಗೊತ್ತು. ಅವ್ರು ಒಪ್ಪೋದಿಲ್ಲ. ಒಂದು ಪಕ್ಷ ಅವರಿಗೆ ಒಪ್ಪೋ ಮನಸಿದ್ರೂ ಜನ ಏನಂತಾರೆ ಅಂತ ಹೆದರ್ತಾರೆ. ಅವರು ಸಮಾಜಕ್ಕೆ ಭಯಪಡುತ್ತಾರೆ.  ಆಗ ನವ್ಯಾ ಕಥೆ....? ನಂಗಾದ್ರೆ ಅಪ್ಪ, ಅಮ್ಮ,ಕಾರ್ತೀ ಇದ್ದಾರೆ.  ಆದ್ರೆ ನವ್ಯಾಗೆ ನಮ್ಮಿಬ್ರನ್ನ ಬಿಟ್ಟು ಬೇರೆ ಯಾರಿದ್ದಾರೆ ಸಮಾ? ಮೇಲಾಗಿ ಈ ವಿಚಾರದಲ್ಲಿ ನಮ್ಮ ಸಮಾಜವೂ ಅವಳ ವಿರುದ್ಧವೇ ನಿಲ್ಲುತ್ತೆ. 'ಅವ್ನು ಏನೋ ಗೊತ್ತಾಗ್ದೇ ಮದ್ವೆ ಮಾಡ್ಕೊಂಡಿದ್ದಾನೆ. ಅದ್ರಲ್ಲಿ ತಪ್ಪೇನು? ಅವ್ನು ಗಂಡಸು. ಇವ್ಳಿಗೆ ತನ್ನ ಕಸುಬು ಹೇಳೋಕೆ ಬಾಯಿ ಇರ್ಲಿಲ್ವಾ?' ಅಂತ ನವ್ಯಾಳನ್ನೇ ಅಪರಾಧಿಯಾಗಿಸುತ್ತೆ. ಅವಳ ಬದುಕು ಮತ್ತೆ ನರಕ ಆಗುತ್ತೆ. ಇದನ್ನೆಲ್ಲ ನೋಡೋ ಶಕ್ತಿ ನಂಗಿಲ್ವೇ. ನೀನೇ ಹೇಳು…… ಅಷ್ಟು ಆಸೆ, ಅಕ್ಕರೆಯಿಂದ ಅವಳನ್ನು ಆ ನರಕದಿಂದ ಬಿಡಿಸ್ಕೊಂಡು ಬಂದ ನೀನು ಅವಳು ಮತ್ತೆ ಅಂತಹದ್ದೇ ಯಾವ್ದೋ ನರಕದಲ್ಲಿ ನರಳೋದನ್ನು ನೆನಸ್ಕೊಳ್ಳೋಕಾಗುತ್ತಾ? ಒಂದು ಸಲ ಅವ್ಳು ಈ ಮನೆಯಿಂದ ಹೊರಬಿದ್ರೆ ಅವಳು ನಮ್ಮಿಬ್ಬರಿಗೂ ಮತ್ತೆ ಸಿಗೋಲ್ಲ ಸಮಾ. ಇಲ್ಲಿಗಂತೂ ಮತ್ತೆ ಕಾಲೇ ಇಡೋಲ್ಲ ಅವಳು ಅಮ್ಮನಿಗೆ ಹಿಂಸೆ ಆಗುತ್ತೆ ಅಂತ. ಇನ್ನು ಉಳಿದಿದ್ದು ನೀನು. ನೀನು ಅಭಿರಾಮ್ ಮಡದಿಯಾಗಬೇಕು ಅನ್ನೋ ಆಸೆ ಹೊತ್ತಿರುವವಳು ನವ್ಯಾ.  ತನ್ನಿಂದಾಗಿ ಶರ್ಮಾ ಪರಿವಾರದಲ್ಲಿ ನಿನ್ನ ಬಗ್ಗೆ ನೂರು ಪ್ರಶ್ನೆಗಳು ಏಳುತ್ತವೆ ಅಂತ ನಿನ್ಹತ್ರನೂ ಬರೋಲ್ಲ ಅವ್ಳು. ಬೀದಿಪಾಲಾಗ್ತಾಳೆ. ಅದನ್ನು ಮಾತ್ರ ಯಾವತ್ತೂ ಸಹಿಸೋಕಾಗದು ನಂಗೆ. ಅದ್ಕೇ ನಾನು ಈ ನಿರ್ಧಾರ ಮಾಡಿರೋದು. ಸ್ವಲ್ಪ ಸಮಯ ಅಲ್ಲಿದ್ದು ಅವಳ ಮನಸ್ಸು ಒಂದಿಷ್ಟು ತಹಬಂದಿಗೆ ಬರಲಿ. ಆಮೇಲೆ ನೋಡೋಣ ಏನ್ಮಾಡೋದು ಅಂತ. ಪ್ಲೀಸ್ ಹೆಲ್ಪ್ ಮೀ ಸಮಾ"

ಅವನ ಮಾತುಗಳಲ್ಲೇ ಕಳೆದುಹೋಗಿದ್ದವಳ ಕಣ್ಣಂಚಿನಲ್ಲಿ ಕಂಬನಿ ಶೇಖರವಾಗಿತ್ತು. ಮೊಗದಲ್ಲಿ ಅವನೆಡೆಗೊಂದು ಹೆಮ್ಮೆಯ, ಮೆಚ್ಚುಗೆಯ ಭಾವ.

"ನಿನ್ನನ್ನು ನನ್ನ ಸ್ನೇಹಿತ ಅಂತ ಹೇಳ್ಕೊಳ್ಳೋಕೆ ನನ್ಗೆ ಹೆಮ್ಮೆಯಾಗುತ್ತೆ ಕಿಶೋರ್. ರಿಯಲೀ.... ನಿನ್ನ ತರಹ ಯೋಚ್ಸೋರು ಲಕ್ಷಕ್ಕೊಬ್ರು ಸಿಗೋಲ್ಲ ಕಣೋ. ಇದೊಂದು ವಿಚಾರದಲ್ಲಿ ದೇವ್ರು ಅವಳ ಕೈ ಬಿಟ್ಟಿಲ್ಲ. ಆದ್ರೂ ನಿನ್ನ ನಿರ್ಧಾರಕ್ಕೆ ನನ್ನೊಪ್ಪಿಗೆ ಇಲ್ಲ. ಯಾಕೆಂದ್ರೆ ನಿನ್ನ ಈ ನಿರ್ಧಾರ ಭವಿಷ್ಯದಲ್ಲಿ ಇನ್ನೂ ಹತ್ತು ಹಲವು ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಮದುವೆಗೆ ಮುನ್ನ ಸತ್ಯ ಹೇಳದೇ ಸೃಷ್ಟಿಯಾಗಿರೋ ಸಮಸ್ಯೆಗಳಿಂದಲೇ ಇನ್ನೂ ಹೊರಬರೋಕಾಗ್ತಿಲ್ಲ. ಇನ್ನು ನೀನು ಈ ರೀತಿ ಮಾಡಿದ್ರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಷ್ಟೇ" ಎಂದು ಅಲ್ಲಿಂದ ಎದ್ದು ರೂಮಿನತ್ತ ಹೊರಟವಳು ಮತ್ತೆ ನಿಂತು ಅವನೆಡೆಗೆ ತಿರುಗಿದಳು.

"ಕಿಶೋರ್, ಒಂದು ಮಾತು ಚೆನ್ನಾಗಿ ನೆನಪಿಟ್ಟುಕೋ. ಮರೆಮಾಚಿದ ಸತ್ಯ ಅನ್ನೋದು ದಹಿಸುವ ಲಾವಾರಸದಂತೆ. ಅದು ಪ್ರತೀ ಕ್ಷಣಕ್ಕೂ ಕುದಿಯುತ್ತಾ, ಸತ್ಯವನ್ನು ಮುಚ್ಚಿಟ್ಟಿರುವ ವ್ಯಕ್ತಿಯ ಒಡಲನ್ನು ದಹಿಸುತ್ತಿರುತ್ತದೆ. ಆ ಉರಿ ಅಂತರಾತ್ಮಕ್ಕೆ ಪದೇಪದೇ ಸತ್ಯವನ್ನು ನೆನಪಿಸುತ್ತಿರುತ್ತದೆ. ಉರಿಕೆಂಡದಂತಹ ಸತ್ಯವನ್ನು ಸೆರಗಲ್ಲಿ ಕಟ್ಟಿಕೊಂಡು ಎಲ್ಲಿಯವರೆಗೆ ಓಡಬಹುದು? ಉದರದೊಳಗಿನ ಭ್ರೂಣವೂ ನವಮಾಸಗಳಷ್ಟೇ ಕಾಯುವುದು..... ಒಂದಲ್ಲಾ ಒಂದು ದಿನ ಲಾವಾ ಉಕ್ಕಿ, ಜ್ವಾಲಾಮುಖಿ ಸಿಡಿಯಲೇ ಬೇಕು. ನವ್ಯಾಳ ಮನದ ದಾವಾಗ್ನಿ ಸಿಡಿಯುವ ಸಮಯ ಸನ್ನಿಹಿತವಾಗಿದೆ ಕಿಶೋರ್. ನೀನೆಷ್ಟೇ ಪ್ರಯತ್ನಿಸಿದರೂ ಅವಳಿನ್ನು ತಡೆಯಲಾರಳು....." ಎಂದವಳೇ ಅವನ ಉತ್ತರಕ್ಕೂ ಕಾಯದೆ ಸ್ನಾನ ಮುಗಿಸಲು ಕೋಣೆಗೆ ನಡೆದುಬಿಟ್ಟಳು.

'ನೀನು ಹೇಳಿದ್ದೆಲ್ಲಾ ನಿಜವೇ ಆದರೂ ಸಧ್ಯದ ನವ್ಯಾಳ ಪರಿಸ್ಥಿತಿಯಲ್ಲಿ ಈ ಸತ್ಯ ಮನೆಯವರಿಗೆ ತಿಳಿಯದಿರುವುದೇ ಒಳಿತು. ಟ್ರಾನ್ಸಫರ್ ಸಿಕ್ಕೇ ಸಿಗುತ್ತದೆ. ಅಮ್ಮ, ಅಪ್ಪಾಜಿ ಮತ್ತು ಕಾರ್ತಿಯನ್ನು ಹೇಗೋ ಒಪ್ಪಿಸಬಲ್ಲೆ. ಆದರೆ ನೀನೆಂದಂತೆ ನವ್ಯಾಳನ್ನು ಒಪ್ಪಿಸುವುದೇ ಕಷ್ಟ. ಕೈ ಕಾಲಿಗೆ ಬಿದ್ದಾದರೂ ಒಪ್ಪಿಸಿಯೇ ಒಪ್ಪಿಸುವೆ. ಕ್ಷಮಿಸು ಸಮಾ, ಈ ಒಂದು ವಿಚಾರದಲ್ಲಿ ನಿನ್ನಷ್ಟೇ ಹಠ ನನಗೂ. ಇವತ್ತೇ ಆಫೀಸಿನಲ್ಲಿ ಟ್ರಾನ್ಸಫರ್ ವಿಚಾರ ಮಾತನಾಡಿ ಫೈನಲೈಸ್ ಮಾಡ್ಬೇಕು.....' ಎಂದುಕೊಂಡವನು ತನ್ನ ಕೋಣೆಯತ್ತ ಹೊರಟ.

ಇತ್ತ ಸ್ನಾನ ಮಾಡಲು ಬಂದವಳ ತಲೆಯಲ್ಲಿ ಕಿಶೋರನ ಮಾತುಗಳದೇ ಪ್ರದಕ್ಷಿಣೆ. 'ಅವನ ಉದ್ದೇಶ ಒಳ್ಳೆಯದಾದರೂ, ಅದರ ಮುಂದಿನ ಪರಿಣಾಮಗಳನ್ನು ಯೋಚಿಸುತ್ತಿಲ್ಲ ಕಿಶೋರ್. ಇದು ಯಾವುದೇ ಕಾರಣಕ್ಕೂ ಆಗಕೂಡದು. ಇದನ್ನು ತಡೆಯುವುದು ಹೇಗೆ?' ಬಿಸಿನೀರು ಮೈ ಮೇಲೆ ಸುರುವಿಕೊಳ್ಳುತ್ತಿದ್ದವಳ ತಲೆ ಕಾದ ಹೆಂಚು. ಹಾಗೆ ಯೋಚಿಸುತ್ತಿದ್ದವಳ ತಲೆಯಲ್ಲಿ ಕಿಶೋರ್ ಈಗ ಸ್ವಲ್ಪ ಹೊತ್ತಿಗೆ ಮುಂಚೆ ಹೇಳಿದ ಮಾತೊಂದು ಪದೇ ಪದೇ ಸುಳಿಯತೊಡಗಿತು. ಹಾಗೆ ಸುಳಿದಾಡುತ್ತಾ ಅದು ಬಹಳ ಪ್ರಾಮುಖ್ಯತೆಯನ್ನು ಪಡೆದುಬಿಟ್ಟಿತು!

'ನವ್ಯಾಳನ್ನು ಈ ಮನೆಯಿಂದ ಒಮ್ಮೆ ಹೊರಹಾಕಿದರೆ ಅವಳು ನಿನ್ನಲ್ಲಿಗೂ ಬರುವುದಿಲ್ಲ ಸಮಾ. ಅವಳ ಅತೀತ ನಿನ್ನ ಹಾಗೂ ಅಭಿರಾಮ್ ಸಂಬಂಧವನ್ನು ಕೊನೆಗಾಣಿಸಬಹುದು. ಶರ್ಮಾ ಪರಿವಾರದಲ್ಲಿ ನಿನ್ನ ನಡತೆಯ ಮೇಲೂ ಪ್ರಶ್ನೆಗಳು ಹುಟ್ಟಬಹುದೆಂದು ಅವಳು ನಿನ್ನಿಂದಲೂ ದೂರವಾಗುತ್ತಾಳೆ' ಎಂಬರ್ಥದ ಮಾತನ್ನಾಡಿದ್ದ ಕಿಶೋರ್.

'ಅರೇ….. ಹೌದಲ್ಲವೇ...... ಅವನ ಮಾತು ಅಕ್ಷರಶಃ ಸತ್ಯ. ಇಲ್ಲಿಂದ ಹೊರಬಿದ್ದರೆ ಈ ಬಾರಿ ನನ್ನ ಬಳಿ ಬರುವುದಿಲ್ಲ ಅವಳು. ನಾನೇಕೆ ಈ ಬಗ್ಗೆ ಮುಂಚೆಯೇ ಯೋಚಿಸಲಿಲ್ಲ? ಸತ್ಯ ತಿಳಿದ ಮೇಲೆ ಈ ಮನೆಯವರು ಏನು ಮಾಡುವರೋ ನನಗೂ ತಿಳಿದಿಲ್ಲ. ಆದರೂ ಒಂದು ವೇಳೆ ಅವರು ನವ್ಯಾಳನ್ನು ತಿರಸ್ಕರಿಸಿದರೇ? ಕಿಶೋರ್ ಈ ಮನೆಬಿಟ್ಟು ಅವಳೊಂದಿಗೆ ಬರಲು ಅವಳೇ ಸಮ್ಮತಿಸಲಾರಳು. ಕಿಶೋರನೆಂದಂತೆ ನನ್ನ ಬಳಿಯೂ ಬರಲಾರಳು ನವ್ಯಾ.....

ಛೇ... ಇಲ್ಲಾ.......

ಹಾಗಾಗಕೂಡದು......

ನವ್ಯಾ ಕೇವಲ ನನ್ನ ಸ್ನೇಹಿತೆಯಲ್ಲ. ನನ್ನ ಒಬ್ಬಂಟಿ ಪಯಣದ ಹಾದಿಯಲ್ಲಿ ಜೊತೆಯಾದವಳು. ನನ್ನ ನೋವುಗಳಿಗೆ ಸಾಂತ್ವನ ನೀಡುವ ಹೆಗಲಾದವಳು. ನನ್ನ ಅಂತರಾಳವನ್ನು ಅರ್ಥೈಸಿಕೊಂಡಿರುವವಳು. ಅಮ್ಮನಂತಹ ಅಕ್ಕರೆ,ಮಮತೆ ಸುರಿಸುವ ಜೀವದ ಗೆಳತಿಯವಳು. ಈ ಮನೆ, ಸಮಾಜ ಅಷ್ಟೇ ಏಕೆ? ಇಡೀ ಜಗತ್ತೇ ಅವಳ ವಿರುದ್ಧವಿದ್ದರೂ ಸರಿಯೇ‌. ನಾನು ಮಾತ್ರ ಯಾವುದೇ ಕಾರಣಕ್ಕೂ ನಡುನೀರಿನಲ್ಲಿ ಅವಳ ಕೈ ಬಿಡಲಾರೆ. ಅಭಿರಾಮ್ ಹಾಗೂ ಅವನ ಮನೆಯವರಿಗೆ ನವ್ಯಾಳಿಂದಾಗಿ ನನ್ನ ನಡತೆಯ ಬಗ್ಗೆ ಪ್ರಶ್ನೆ ಹುಟ್ಟುವಂತಿದ್ದರೆ ನನ್ನ ಬದುಕಿನಲ್ಲಿ ಅವರ ಅಗತ್ಯವಿಲ್ಲ. ಆದರೆ.........

ಅವಳಿದನ್ನು ಎಂದಿಗೂ ಒಪ್ಪಲಾರಳು. ಅವಳಿಗೆ ಬೇಕಾಗಿರುವುದು ಒಂದೇ. ನನ್ನ ಅಭಿರಾಮ್ ವಿವಾಹ‌. ಬಿಟ್ಟರೆ ಇಂದೇ ನಮ್ಮಿಬ್ಬರ ಮದುವೆ ಮಾಡಿಸಲೂ ಸಿದ್ಧ ಅವಳು. ಅಂತಹವಳು ನನ್ನೀ ನಿರ್ಧಾರದ ಬಗ್ಗೆ ತಿಳಿದ ಕ್ಷಣ ಕಿಶೋರನೆಂದಂತೆ ನನ್ನನ್ನು ತೊರೆಯುತ್ತಾಳೆ. ಮತ್ತೇನು ಮಾಡಲಿ?' ಕಿಶೋರ್ ಚರ್ಚೆಯ ಭರದಲ್ಲಿ ಹೇಳಿದ ಮಾತು ಸಮನ್ವಿತಾಳ ತಲೆಯನ್ನು ಗುಂಗಿ ಹುಳುವಿನಂತೆ ಕೊರೆಯತೊಡಗಿತು.

ಅತ್ತ ಕಿಶೋರ್ ಯಾವುದೇ ಕಾರಣಕ್ಕೂ ಸತ್ಯ ಮನೆಯವರಿಗೆ ತಿಳಿಯಬಾರದೆಂಬ ಹುಕಿಗೆ ಬಿದ್ದು ನವ್ಯಾಳನ್ನು ಬೇರೆಡೆ ಕರೆದೊಯ್ಯುವ ಯೋಜನೆಯಲ್ಲಿದ್ದರೆ, ಇತ್ತ ಸಮನ್ವಿತಾ ಸತ್ಯ ಮನೆಯವರಿಗೆ ತಿಳಿದ ನಂತರದ ನವ್ಯಾಳ ಬದುಕಿನ ಬಗ್ಗೆ ಯೋಚನೆಗೆ ಬಿದ್ದಿದ್ದಳು. ಆದರೆ  ಇಬ್ಬರ ಯೋಚನೆಗಳ ಕೇಂದ್ರಬಿಂದುವಾದ ನವ್ಯಾಳ ಮನ ಯೋಚಿಸುವ, ಚಿಂತಿಸುವ ಶಕ್ತಿಯನ್ನೇ ಕಳೆದುಕೊಂಡಂತೆ ಅರೆಜೀವವಾಗಿ ಒದ್ದಾಡುತ್ತಿತ್ತು......

        ********************************

'ರಾವ್ ಮ್ಯಾನ್ಶನ್'ಗೆ ಸಂಪೂರ್ಣ ಮಂಕು ಕವಿದಿತ್ತು. ದಿನನಿತ್ಯ ಪಾರ್ಟಿ, ಗೆಟ್ ಟುಗೆದರ್, ಮೋಜಿನ ಕೂಟಗಳೆಂದು ದೀಪಗಳ ಬೆಳಕಿನಲ್ಲಿ ಜಗಮಗಿಸುತ್ತಿದ್ದ ಅರಮನೆ ಈಗ ಅಲಂಕಾರ ತೆಗೆದ ಅಭಿನೇತ್ರಿಯಂತಾಗಿತ್ತು. ಮನೆಯೊಳಗಿನ ಚಟುವಟಿಕೆಗಳೂ ನೀರಸ. ಹಗಲೆಲ್ಲಾ ಆ ಮನೆ ನೀರವ ಮೌನದೊಳಗೇ ಅವಿತಿರುವುದು ಸಾಮಾನ್ಯವೇ. ಆದರೆ ಈಗೀಗ ಅದು ರಾತ್ರಿಗೂ ವಿಸ್ತರಿಸತೊಡಗಿತ್ತು. ಆ ಮನೆಯ ಪರಿಸರ ಎಂದಿಗೂ ಜೀವಂತವಾಗಿರದಿದ್ದರೂ ಸಮನ್ವಿತಾ ಇದ್ದಾಗ ಎಲ್ಲೋ ಅಲ್ಪಸ್ವಲ್ಪ ಚಟುವಟಿಕೆಗಳಿದ್ದವು. ಈಗ ಅದೂ ನಶಿಸತೊಡಗಿತ್ತು.

ಸತ್ಯಂ ರಾವ್ ಅವರ ರೋಗಗ್ರಸ್ತ ಉದ್ಯಮ ಪತನವಾಗಲು ಕ್ಷಣಗಣನೆ ಶುರುವಾಗಿತ್ತು. ಬ್ಯಾಂಕುಗಳು ಹಾಗೂ ಇತರ ವ್ಯಕ್ತಿಗಳಿಗೆ ಕೊಡಬೇಕಾದ ಸಾಲದ ಅಸಲು - ಬಡ್ಡಿ, ಹೂಡಿಕೆದಾರರು ಹಾಗೂ ಷೇರುದಾರರಿಗೆ ಕೊಡಬೇಕಾದ ಪಾಲು, ಸರ್ಕಾರಕ್ಕೆ ಕಟ್ಟದೇ ಬಾಕಿ ಉಳಿಸಿದ್ದ ತೆರಿಗೆಗಳು ಎಲ್ಲಾ ಸೇರಿ ಬಹುತೇಕ ಸ್ಥಿರ ಚರಾಸ್ತಿಗಳ ಮುಟ್ಟುಗೋಲು ಖಚಿತವೆಂದು ಅವರ ವಕೀಲರು ಹಿಂದಿನ ದಿನವೇ ತಿಳಿಸಿದ್ದರು. ಹೆಚ್ಚೆಂದರೆ ಈ ಮನೆಯೊಂದಿಗೆ ಒಂದು ಮೂರು ನಿವೇಶನಗಳು ಉಳಿಯಬಹುದು ಎಂದು ಲೆಕ್ಕಹಾಕಿ ಅಂದಾಜಿಸಿ ಹೇಳಿದ್ದರಾತ. ಇದರಿಂದ ತಪ್ಪಿಸಿಕೊಳ್ಳಲು ಉಳಿದಿದ್ದ ಏಕೈಕ ಹಾದಿ….. ಮಗಳ ಮದುವೆ. ಆದರೆ ಅಲ್ಲಿ ಇವರ ಲೆಕ್ಕಾಚಾರ ಸಂಪೂರ್ಣ ತಪ್ಪಿತ್ತು. ಸಂಧಾನಕ್ಕೆಂದು ಆಸ್ಪತ್ರೆಗೆ ನೀಡಿದ ಭೇಟಿಯೂ ಫಲಪ್ರದವಾಗಲಿಲ್ಲ.

ಸತ್ಯಂ ಮತ್ತು ಮಾಲಿನಿ ಆಸ್ಪತ್ರೆಯಿಂದ ಮರಳಿದ ಮೇಲೆ ರಾವ್ ಮ್ಯಾನ್ಶನ್ ಬಹಳಷ್ಟು ವಿಚಿತ್ರ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಕೈಗೊಬ್ಬ, ಕಾಲಿಗೊಬ್ಬ ಎಂಬಂತಿದ್ದ ಆಳುಗಳನ್ನು ಕೆಲಸದಿಂದ ತೆಗೆಯಲಾಗಿತ್ತು. 'ತೆಗೆಯುವುದು' ಎನ್ನುವುದಕ್ಕಿಂತ 'ಕಿತ್ತೊಗೆಯಲಾಗಿತ್ತು' ಎನ್ನುವುದು ಸೂಕ್ತವೇನೋ. ಈಗ ಒಬ್ಬ ವಾಚ್ಮನ್ ಸೇರಿ ಐವರು ಮಾತ್ರವೇ ಉಳಿದಿದ್ದು. ಮುಂಚೆ ವಾಚ್ಮನ್ ಗಳೇ ನಾಲ್ವರಿದ್ದರು. ಸಂತೋಷ ಕೂಟಗಳು, ಪಾನಗೋಷ್ಟಿಗಳು ಸಂಪೂರ್ಣ ಬಂದ್. ಯಾವಾಗಲೂ ಮನೆಯಿಂದ ಹೊರಗೇ ತಿರುಗುತ್ತಿದ್ದ ಒಡೆಯ, ಒಡತಿ ಈಗ ಸ್ವ ಇಚ್ಛೆಯಿಂದ ಗೃಹಬಂಧನದಲ್ಲಿದ್ದರು. 

ಇದೆಲ್ಲಕ್ಕಿಂತ ಮುಖ್ಯವಾಗಿ ಆದರ್ಶ ದಂಪತಿಗಳು ಆದರ್ಶ ವೈರಿಗಳಾಗಿ ಬದಲಾಗಿದ್ದರು. ಯಾವತ್ತೂ ಇಬ್ಬರೂ ಸೇರಿ ಪರರ ಮೇಲೆ ಕಿರುಚಾಡುತ್ತಿದಾದರೇ ವಿನಃ ಇಷ್ಟು ವರ್ಷಗಳಲ್ಲಿ ಎಂದೂ ರಾವ್ ದಂಪತಿಗಳ ಕಲಹಕ್ಕೆ ಆ ಬಂಗಲೆ ಸಾಕ್ಷಿಯಾಗಿರಲಿಲ್ಲ. ಅಷ್ಟು ಅನ್ಯೋನ್ಯ ದಾಂಪತ್ಯ ಅವರದು. ಅದಕ್ಕೆ ಇಬ್ಬರ ಅಭಿಪ್ರಾಯ, ಅಭಿರುಚಿಗಳ ಸಾಮ್ಯತೆ ಒಂದು ಪುಟ್ಟ ಕಾರಣವಾದರೆ, ಹಣ ಮತ್ತು ಅಂತಸ್ತಿನ ಪ್ರತಿಷ್ಟೆ ಇವರ ಸುಖಿ ದಾಂಪತ್ಯದ ದಿವ್ಯ ರಹಸ್ಯ. ಇಬ್ಬರೂ ಒಟ್ಟಿಗೆ ಕುಳಿತು ಪೆಗ್ ಮೇಲೆ ಪೆಗ್ ಏರಿಸುವಷ್ಟು ಹೊಂದಾಣಿಕೆ….... ಪಾರ್ಟಿಗಳಲ್ಲಿ ಯಾರದೋ ಹೆಂಡತಿಯೊಂದಿಗೆ ತನ್ನ ಗಂಡ ಕುಣಿದರೂ, ಇನ್ಯಾರದೋ ಗಂಡನೊಂದಿಗೆ ತನ್ನ ಹೆಂಡತಿ ಕುಣಿದರೂ ಅದನ್ನು ಹೈ ಸೊಸೈಟಿ ಕಲ್ಚರ್ ಎಂದು ಹೊಗಳಿಕೊಳ್ಳುವಷ್ಟು ವಿಶಾಲ ಮನೋಭಾವದ ಗಂಡ-ಹೆಂಡತಿ.......

ಇಂತಹ ದಂಪತಿಗಳು ಕಳೆದೆರಡು ದಿನಗಳಿಂದ ಹುಚ್ಚುನಾಯಿಗಳಂತೆ ಕಚ್ಚಾಡಲಾರಂಭಿಸಿದ್ದರು. ಮಾತು ಮಾತಿಗೂ ಕದನ. ರಾವ್ ಸಾಮ್ರಾಜ್ಯ ಹೀಗೆ ಅವಸಾನಗೊಳ್ಳಲು ನೀನೇ ಕಾರಣ ಎಂದು ಪರಸ್ಪರ ಆರೋಪ ಪ್ರತ್ಯಾರೋಪ..... ಇಲ್ಲಿಯವರೆಗೆ 'ನಾವು ನಮ್ಮದು' ಎಂಬ ಪದಗಳು ಬಳಕೆಯಾಗುತ್ತಿದ್ದೆಡೆ ಈಗ 'ನಾನು ನನ್ನದು' , 'ನೀನು ನಿನ್ನದು' ಎಂಬ ಪದಗಳು ಬದಲಿಯಾಗಿ ಬಂದಿದ್ದವು. ಮುಂಚೆ ಒಟ್ಟಿಗೆ ಕುಳಿತು ಕುಡಿಯುತ್ತಿದ್ದವರು ಈಗ ತಮ್ಮ ತಮ್ಮ ಕೋಣೆಗಳಲ್ಲಿ ಒಂಟಿಯಾಗಿ ಕುಡಿಯತೊಡಗಿದ್ದರು. ಮಾಲಿನಿ ಲಗೇಜ್ ಸಮೇತ ಗಂಡನ ಕೋಣೆಯಿಂದ ಅತಿಥಿಗಳ ಕೋಣೆಗೆ ಶಿಫ್ಟ್ ಆಗಿದ್ದರು. ಒಟ್ಟಾರೆ ಇವೆಲ್ಲದರಿಂದ ಇಬ್ಬರಿಗೂ ಕಂಠ ಪೂರ್ತಿ ಕುಡಿಯಲು ಉತ್ತಮ ಕಾರಣ ಸಿಕ್ಕಿದ್ದಷ್ಟೇ ಭಾಗ್ಯ.

ಇಂದು ಆ ಕಲಹ ಚರಮ ಸೀಮೆಯಲ್ಲಿತ್ತು. ವಾರದಿಂದ ಕಾರಣವಿಲ್ಲದೇ ಕಚ್ಚಾಡುತ್ತಿದ್ದವರು ಇಂದು ರಣರಂಗ ಪ್ರವೇಶಿಸಲು ಬಲವಾದ ಕಾರಣವಿತ್ತು.

ಈಗ ಸ್ವಲ್ಪ ಹೊತ್ತಿಗೆ ಮುಂಚೆ ಸತ್ಯಂ ರಾವ್ ಅವರಿಗೆ ಕೋರ್ಟಿನ ನೋಟಿಸ್ ಒಂದು ಬಂದಿತ್ತು. ಯಾರೋ ಸಾಲಗಾರರು ಕಳಿಸಿರಬಹುದೆಂದು ಯೋಚಿಸುತ್ತಾ ತೆರೆದು ನೋಡಿದವರಿಗೆ ಒಳಗಿದ್ದ ನೋಟಿಸ್ ಕಂಡು ಪ್ರಜ್ಞೆ ತಪ್ಪುವುದೊಂದು ಬಾಕಿ. ಏಕೆಂದರೆ ಅದರೊಳಗಿದ್ದದ್ದು ಪ್ರೀತಿಯ ಮಡದಿ ಕಳಿಸಿದ್ದ ವಿವಾಹ ವಿಚ್ಛೇದನ ಕೋರಿದ್ದ ಅರ್ಜಿ. ಇದನ್ನು ನೋಡಿ ಮೊದಲು ಬಿಳುಚಿಕೊಂಡರೂ ನಂತರ ಕೋಪ ಏರಿತ್ತು. ಮಾಲಿನಿಯವರನ್ನು ಕರೆದು ವಾಚಾಮಗೋಚರವಾಗಿ ಬೈಯತೊಡಗಿದ್ದರು. ಆಕೆಯೇನು ಕಡಿಮೆಯೇ? ಕೇಂದ್ರ ಸಚಿವ ಮಹೇಶ್ವರ ಪಾಟೀಲರ ತಂಗಿ. ಆತನೇ ತಂಗಿಗೆ ಡೈವೋರ್ಸ್ ಕೇಳಿ ಆಲ್ಮೋನಿ ಹಣವನ್ನು ತಗೊಂಡು ಬಾ ಎಂಬ ಅತ್ಯದ್ಬುತ ಸಲಹೆ ಕೊಟ್ಟಿದ್ದು. ಗಂಡನ ಪ್ರತೀ ಬೈಗುಳದ ಅಸ್ತ್ರಕ್ಕೂ ಪ್ರತ್ಯಸ್ತ್ರ ಹೂಡುತ್ತಿದ್ದಳಾಕೆ. ಪ್ರಸ್ತುತ ಆ ವಿಷಯವಾಗಿಯೇ ದಂಪತಿಗಳ ಚೀರಾಟ, ಕೂಗಾಟ, ದೊಂಬರಾಟ ನಡೆಯುತ್ತಿತ್ತು. ಅದೂ ಅವರ ರೂಮಿನಲ್ಲಲ್ಲ. ಮನೆಯ ಹಾಲಿನಲ್ಲೇ ಕಚ್ಚಾಟಕ್ಕಿಳಿದಿದ್ದರು ಸತಿಪತಿಗಳು.

ಇಂತಹ‌ ಅಮೋಘ ಸನ್ನಿವೇಶದಲ್ಲಿ ಮನೆಯೊಳಗೆ ಪ್ರವೇಶಿಸಿದ್ದ ಅಭಿರಾಮ್. ಅವನು ಬಂಗಲೆಯ ಗೇಟಿನೆದುರು ಬಂದಾಗ ಗೇಟು ತೆರೆದೇ ಇತ್ತು. ಇದ್ದೊಬ್ಬ ವಾಚ್ ಮನ್ ತನ್ನ ಸ್ಥಾನದಲ್ಲಿ ಇರಲಿಲ್ಲ. ಹಾಗಾಗಿ ಸೀದಾ ಒಳಬಂದಿದ್ದ. ರಾವ್ ದಂಪತಿಗೆ ಜಗಳದಲ್ಲಿ ಪೋರ್ಟಿಕೋದಲ್ಲಿ ಕಾರು ನಿಂತದ್ದೂ ತಿಳಿಯಲಿಲ್ಲ. ಉಳಿದ ನಾಲ್ವರು ಸರ್ವೆಂಟುಗಳು ಅಡುಗೆಮನೆಯಲ್ಲಿ ಹಾಗೂ ಕ್ಲೀನಿಂಗಿನಲ್ಲಿ ನಿರತರಾದ್ದರಿಂದ ಸೀದಾ ಒಳಗೆ ಬಂದಿದ್ದ ಅಭಿರಾಮ್. ಅವನು ಬಂದು ನಿಂತು ನಿಮಿಷಗಳಾದರೂ ಅವನಿರುವಿಕೆಯ ಸೂಚನೆ ಸಿಗಲಿಲ್ಲ ರಾವ್ ಹಾಗೂ ಮಾಲಿನಿಯವರಿಗೆ. ಅವರ ಹಿಡಿತವಿಲ್ಲದ ನಾಲಿಗೆಯ ಅರಚಾಟದಲ್ಲಿಯೇ ಸಂಪೂರ್ಣ ವಿಷಯ ತಿಳಿದುಹೋಗಿತ್ತು ಅವನಿಗೆ. ಅವನು ಈ ಬೆಳವಣಿಗೆಯಿಂದ ದಂಗಾಗಿದ್ದ.

ಹಣ, ಅಧಿಕಾರ, ಅಂತಸ್ತು ಇದ್ದ ಕಾಲದಲ್ಲಿ ಸತ್ಯಂ ರಾವ್ ಮಾತಿಗೆ ಬದಲು ನುಡಿಯುತ್ತಿರಲಿಲ್ಲ ಆಕೆ. ಅವರು ಹೇಳಿದ್ದಕ್ಕೆಲ್ಲಾ ಸಹಮತವೇ. ವ್ಯವಹಾರ ನಿರ್ವಹಣೆಯಲ್ಲಿ ಅವರ ತಾಳಮೇಳದ ಮಿಳಿತ ಅತೀ ಅಪರೂಪದ್ದು. ಅದಕ್ಕಾಗಿಯೇ ಇಡೀ ಉದ್ಯಮ ವಲಯ ಅವರನ್ನು ಅನುರೂಪ ದಾಂಪತ್ಯಕ್ಕೆ ಉದಾಹರಿಸುತ್ತಿದ್ದುದು. ಒಮ್ಮೊಮ್ಮೆ ಅವರ ಹೊಂದಾಣಿಕೆ ಕಂಡು ಅವನೂ ಅಚ್ಚರಿಪಟ್ಟಿದ್ದುಂಟು. ಆದರೆ ಸಚ್ಚಿದಾನಂದ ಶರ್ಮಾ ಯಾವತ್ತೂ ಹೇಳುತ್ತಿದ್ದರು....... 'ಅವರದ್ದು ಅನುರೂಪ ದಾಂಪತ್ಯವಲ್ಲ, ಅದು ವ್ಯವಹಾರಿಕ ದಾಂಪತ್ಯ. ಹಣವೇ ಅವರ ಸಂಬಂಧದ ಬುನಾದಿ...' ಎಂದು.

ಇಂದು ತಂದೆಯ ಮಾತು ಎಷ್ಟು ಸತ್ಯ ಎನಿಸಿಬಿಟ್ಟಿತು. ಯಾಕೋ ವಿಪರೀತ ರೇಜಿಗೆ ಹುಟ್ಟಿತು ಮಾಲಿನಿಯವರ ಮೇಲೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸತ್ಯಂ ರಾವ್ ವ್ಯವಹಾರಿಕ ವಿಚಾರಗಳಲ್ಲಿ, ಮಗಳ ವಿಷಯದಲ್ಲಿ ಎಷ್ಟೇ ಕುತಂತ್ರಿಯಾಗಿದ್ದರೂ ಮಡದಿಯ ವಿಚಾರದಲ್ಲಿ ಆತ ಅತೀ ಧಾರಾಳಿ. ಎಂದೂ ಯಾವುದನ್ನು ಆಕೆಯ ಮೇಲೆ ಹೇರಿದವರಲ್ಲ. ಮಡದಿಯ ಮೇಲೆ ಪ್ರಶ್ನಾತೀತವಾದ ಪ್ರೇಮ, ನಂಬಿಕೆಯಿತ್ತು ಆತನಿಗೆ. ಆದರೆ ಆಕೆ....! ಧನಲಕ್ಷ್ಮಿ ಮನೆಯಿಂದ ಹೊರಹೋಗುವ ಸೂಚನೆ ಸಿಕ್ಕಕೂಡಲೇ ತಾನು ವಿಚ್ಚೇದನ ಹಾಗೂ ಪರಿಹಾರದ ಹಣವನ್ನು ತೆಗೆದುಕೊಂಡು ಇಲ್ಲಿಂದ ನುಣುಚಿಕೊಳ್ಳಲು ಎಲ್ಲಾ ತಯಾರಿ ನಡೆಸಿದ್ದಳು.

ದಂಪತಿಗಳು ಇಹದ ಪರಿವೆಯಿಲ್ಲದೆ ಕಚ್ಚಾಡುತ್ತಿದ್ದರು. ಬಿಟ್ಟಿದ್ದರೆ ಅವರ ಜಗಳ ಮನೆಯ ತಾರಸಿಯನ್ನು ದಾಟಿ ಹೊರಹೋಗುತ್ತಿತ್ತೇನೋ......ಆದರೆ ಅದನ್ನು ಕೇಳುತ್ತಾ ನಿಲ್ಲುವಷ್ಟು ತಾಳ್ಮೆ ಅವನಿಗಿರಲಿಲ್ಲ.

"ಹಲೋ ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್, ಮೇ ಐ ಹ್ಯಾವ್ ಯುವರ್ ಅಟೆನ್ಷನ್ ಪ್ಲೀಸ್" ಎಂಬ ಧ್ವನಿ ಬಂದತ್ತ ಬೈಯ್ಯುತ್ತಲೇ ತಿರುಗಿದ ಗಂಡ-ಹೆಂಡತಿ ಎದುರು ನಿಂತಿದ್ದವನನ್ನು ಕಂಡು ಬೆಚ್ಚಿಬಿದ್ದಿದ್ದರು. ಇಬ್ಬರ ಮುಖವೂ ಅರಕ್ತವಾಗಿ ಬಿಳುಪೇರಿತು. ಬೇರೆ ಯಾರಾದರೂ ಆಗಿದ್ದರೆ ಕತ್ತಿಡಿದು ಆಚೆ ದಬ್ಬುತ್ತಿದ್ದರು. ಆದರೆ ಎದುರು ನಿಂತಿದ್ದವನು ಅಭಿರಾಮ್. ಗಂಟಲಿನಿಂದ ಸ್ವರ ಹೊರಡಿಸಲು ಅವರಿಗೆ ನಿಮಿಷಗಳೇ ಬೇಕಾಯಿತು. ಸಾಧ್ಯವಾದಷ್ಟು ಚೇತರಿಸಿಕೊಂಡು ತೊದಲುತ್ತಲೇ ಬಾಯಿ ತೆರೆದರು ಮಾಲಿನಿ.

"ಅರೇ... ವಾಟ್.... ವಾಟ್ ಅ ಸರ್ಪ್ರೈಸ್ ಅಭಿರಾಮ್... ವಿತ್ ಔಟ್ ಇನ್ಫಾರ್ಮೇಷನ್ ಬಂದಿದ್ದೀಯಾ. ಈ ಸರ್ವೆಂಟುಗಳು ಸ್ಟುಪಿಡ್ ಫೆಲೋಸ್.... ಏನೂ ಹೇಳಿಲ್ಲ....." ಎಂದು ಇದ್ದ ನಾಲ್ಕು ಆಳುಗಳು ಮತ್ತು ವಾಚ್ ಮನ್ ಗೆ ಬೈದರು‌. ಸತ್ಯಂ ರಾವ್ ಆದ ಅವಮಾನ ಹಾಗೂ ಹೆಂಡತಿಯ ನಂಬಿಕೆ ದ್ರೋಹದಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ಬೆಪ್ಪಾಗಿ ಸೋಫಾದಲ್ಲಿ ಕೂತಿದ್ದರು.

"ಕಮ್ ಅಭಿ, ಹ್ಯಾವ್ ಯುವರ್ ಸೀಟ್" ಎಂದು ಅತೀ ಆತ್ಮೀಯತೆ ತೋರುತ್ತಾ, ಅಡುಗೆಯವನಿಗೆ ಟೀ ತರಲು ಹೇಳಿದರು. ಆದರೆ ಎರಡನ್ನೂ ನಿರಾಕರಿಸಿದ ಅಭಿ. 

"ಮಿಸ್ಟರ್ ಎಂಡ್ ಮಿಸ್ಸೆಸ್ ರಾವ್, ನಿಮ್ಮ ಉಪಚಾರದ ಅಗತ್ಯವಿಲ್ಲ. ನಾನು ಹೇಳೋದನ್ನು ಸರಿಯಾಗಿ ಕೇಳಿಸ್ಕೊಳ್ಳಿ. ನಿಮ್ಮ ವ್ಯವಹಾರವನ್ನು ಸಂಪೂರ್ಣವಾಗಿ ಮುಳುಗಿಸೋದು ನನಗೆ ಚಿಟಿಕೆ ಹೊಡೆಯುವಷ್ಟು ಸುಲಭ. ಆದ್ರೆ ಅದು ನನಗೆ ಬೇಕಾಗಿಲ್ಲ. ಆದರೆ ಒಂದು ವಿಷಯ. ಸಮನ್ವಿತಾನ ಅವಳ ಪಾಡಿಗೆ ಬಿಟ್ಟುಬಿಡಿ. ಮತ್ಯಾವುದೇ ನಾಟಕಗಳು, ಜಾಲಗಳು ಬೇಡ. ಅಪ್ಪಿತಪ್ಪಿ ಅವಳ ಸುದ್ದಿಗೇನಾದರೂ ಹೋದರೆ, ಅದರ ಮರುಘಳಿಗೆ ನೀವು ಬೀದಿಯಲ್ಲಿ ಇರ್ತೀರಿ ಅನ್ನೋದು ಮಾತ್ರ ನೆನಪಿನಲ್ಲಿರಲಿ. ಅದನ್ನೇ ಹೇಳಿಹೋಗೋಣ ಅಂತ ಬಂದೆ" ಎಂದವನು ಇಬ್ಬರ ಮುಖಗಳನ್ನೂ ಬದಲಿಸಿ ಬದಲಿಸಿ ನೋಡಿದ.

" 'ಯಾರ ಪಾಪವನ್ನೂ ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗೆಯೇ ಇನ್ನೊಬ್ಬರ ಪುಣ್ಯ ನಿನಗೆ ಸಿಗುವುದಿಲ್ಲ. ನಾವು ಏನು ಅನುಭವಿಸುತ್ತೇವೆಯೋ ಅದು ನಾವು ಮಾಡಿದ ಕರ್ಮದ ಫಲವಷ್ಟೇ...' ಅಂತ ಗೀತೆಯಲ್ಲಿ ಕೃಷ್ಣ ಒಂದು ಕಡೆ ಹೇಳಿದ್ದಾನೆ. ನಿಮ್ಮಿಬ್ಬರನ್ನೂ ನೋಡಿ ಯಾಕೋ ನೆನಪಾಯ್ತು. ಇದಿನ್ನೂ ಆರಂಭವಷ್ಟೇ. ನೀವಿಬ್ಬರೂ ಮಾಡಿದ ಕರ್ಮದ ಫಲಗಳು ಇನ್ನೂ ಸಿಗಲಿವೆ. ನಾನು ಹೊರಡ್ತೀನಿ. ಹೇಳಿದ ಎಚ್ಚರಿಕೆ ಯಾವತ್ತೂ ನೆನಪಿನಲ್ಲಿರಲಿ. ಹೋಗೋಕೆ ಮುಂಚೆ ಒಂದು ಮಾತು.... ನಿಮ್ಮ ಮಗಳನ್ನು ಹತ್ತಿರದಿಂದ ಬಲ್ಲವರೆಲ್ಲರೂ ಯಾವಾಗ್ಲೂ ಅವಳ ಬಗ್ಗೆ ಹೇಳುವ ಮಾತು. ನಾನೂ ಒಪ್ಪುತ್ತೇನೆ ಅದನ್ನು. ಬಹುಶಃ ಇದೇ ನಮ್ಮ ಕೊನೆಯ ಭೇಟಿಯೇನೋ..... ಹಾಗಾಗಿ ಹೊರ ಹೋಗುವ ಮುನ್ನ....... ನಿಮಗೆ ಸಮನ್ವಿತಾಳ ಅಪ್ಪ ಅಮ್ಮ ಅನ್ನಿಸ್ಕೊಳ್ಳೋ ಯೋಗ್ಯತೆಯೇ ಇಲ್ಲ. ಯು ನೆವರ್ ಎವರ್ ಡಿಸರ್ವ್ ಹರ್" ಎಂದವನೇ ತಿರುಗಿಯೂ ನೋಡದೆ ಹೊರಟುಹೋದ.

ಅಲ್ಲೊಂದು ಗಾಢ ಮೌನವಷ್ಟೇ ಉಳಿದಿತ್ತು. ಅವನ ಮಾತುಗಳ ಗುಂಗಿನಲ್ಲೇ ಕುಳಿತಿದ್ದರು ಇಬ್ಬರೂ. ಆದರೆ ಅವನು ಹೇಳಿದ ಮಾತುಗಳ್ಯಾವುವೂ ಅವರ ಮನಸ್ಸನ್ನು ಮುಟ್ಟಲೇ ಇಲ್ಲ. ವ್ಯವಹಾರದ ಅವಸಾನ ತಡೆಯಲು ಇದ್ದ ಕೊನೆಯ ಅವಕಾಶವನ್ನೂ ಮೂರ್ಖ ಮಗಳು ಹಾಳುಗೆಡವಿದಳು ಎಂಬ ಪರಿತಾಪವೊಂದೇ ಅವರ ಯೋಚನೆಯಲ್ಲಿದ್ದದ್ದು. ಎಷ್ಟೋ ಹೊತ್ತಿನ ಮೇಲೆ, "ಆಯ್ತಲ್ಲಾ ನಿನ್ನ ಪ್ಲಾನಿನ ತಿಥಿ. ಎಲ್ಲಾ ಹಾಳಾಗ್ಲೀ. ಐ ವಾಂಟ್ ಡಿವೋರ್ಸ್. ನಿನ್ನ ಉಳಿದ ಆಸ್ತಿ ಮಾರ್ತೀಯೋ, ಇಲ್ಲಾ ನಿನ್ನೇ ನೀನು ಮಾರ್ಕೋತಿಯೋ, ಅದೇನ್ ಮಾಡ್ತೀಯೋ ಮಾಡು. ಐ ಡೋಂಟ್ ಕೇರ್. ನಾನು ಕೇಳಿದಷ್ಟು ಆಲ್ಮೋನಿ ಅಮೌಂಟ್ ಕೊಡ್ಬೇಕು ಕೊಡ್ತೀಯಾ ಅಷ್ಟೇ. ಅದನ್ನು ತಗೊಂಡು ನಾನು ಅಣ್ಣನ ಮನೆಗೆ ಹೋಗ್ತೀನಿ" ಎಂದು ಕಾಲನಪ್ಪಳಿಸುತ್ತಾ ಕೋಣೆಗೆ ಹೋದರು ಮಾಲಿನಿ. ರಾವ್ ಆಕೆಗೆ ಬೈಗುಳದ ಮಳೆ ಸುರಿಸುತ್ತಾ ಕುಡಿಯತೊಡಗಿದರು.

ಅಷ್ಟಿರದೇ ಸರ್ವಜ್ಞ ಹೇಳಿರುವನೇ......

ಮೂರ್ಖಂಗೆ ಬುದ್ಧಿಯನು 

ನೂರ್ಕಾಲ ಹೇಳಿದರೆ 

ಬೋರ್ಕಲ್ಲ ಮೇಲೆ ಮಳಿಗರಿದರಾ

ಕಲ್ಲು ನೀರ್ಕೊಳ್ಳಬಹುದೆ ಸರ್ವಜ್ಞ...... ಎಂದು?

        ******************************

ದಿನಗಳು ಯಾರ ಅಪ್ಪಣೆಗೂ ಕಾಯದೇ ಉರುಳುತ್ತಿದ್ದವು. ಸಮನ್ವಿತಾ ಮತ್ತೆ ಆಸ್ಪತ್ರೆಗೆ ಹೋಗತೊಡಗಿದ್ದಳು. ಆದರೆ ಮಂಗಳಮ್ಮ, ಮೃದುಲಾ ಇಬ್ಬರೂ ಹಠ ಹಿಡಿದು ಅವಳ ಕ್ವಾಟ್ರಸ್ ವಾಸವನ್ನು ಅಂತ್ಯಗೊಳಿಸಿದ್ದರು. ಅವಳೀಗ ಕಿಶೋರನ ಮನೆಯಿಂದಲೇ ಆಸ್ಪತ್ರೆಗೆ ಹೋಗಿ ಬರುತ್ತಿದ್ದಳು. ಹೋಗುವಾಗ ಕಿಶೋರ್ ಅವಳನ್ನು ಬಿಟ್ಟರೆ, ಬರುವಾಗ ಅಭಿರಾಮ್ ಜೊತೆಯಾಗುತ್ತಾನೆ. ಮದುವೆಗೆ ಸಮ್ಮತಿಯೆಂದು ಇಲ್ಲಿಯವರೆಗೆ ಬಾಯಿಬಿಟ್ಟು ಹೇಳದಿದ್ದರೂ ಅವಳ ಒಪ್ಪಿಗೆ ಮುಖದಲ್ಲಿಯೇ ವೇದ್ಯವಾಗುತ್ತದೆ. ಆದರೂ ಒಮ್ಮೆ ಬಾಯಿ ಬಿಟ್ಟು ಹೇಳಿ ಡಾಕ್ಟ್ರೇ ಎಂಬುದು ಅಭಿಯ ಅಳಲು. ಕಿಶೋರನ ಟ್ರಾನ್ಸಫರ್ ಬಹುತೇಕ ಖಚಿತವಾಗಿದೆ. ಒಂದೆರಡು ಸಹಿಗಳು ಮಾತ್ರ ಬಾಕಿಯಿದೆ. ಎಲ್ಲಾ ಕ್ಲಿಯರ್ ಆಗಿ ಆರ್ಡರ್ ಕೈಗೆ ಬಂದ ಮೇಲೆ ಮನೆಯವರಿಗೆ ಹೇಳುವ ನಿರ್ಧಾರ ಅವನದು. ಅದಕ್ಕೂ ಮುನ್ನವೇ ಒಮ್ಮೆ ಅಹಮದಾಬಾದಿಗೆ ಹೋಗಿ ವ್ಯವಸ್ಥೆಗಳನ್ನು ಮಾಡಿಕೊಂಡು ಬನ್ನಿ ಎಂದಿದ್ದರು ಅವನ ಬಾಸ್. ಹಾಗಾಗಿಯೇ ಈ ವಾರಾಂತ್ಯದಲ್ಲಿ ಅಲ್ಲಿಗೆ ಹೋಗುವ ಯೋಜನೆ ಹಾಕಿದ್ದ. ಹೋಗುವ ಮುನ್ನ ನವ್ಯಾಳಿಗೆ ತಿಳಿಸಿ ಅವಳಿಗೆ ಒಂದಿಷ್ಟು ಯೋಚಿಸಲು ಸಮಯ ನೀಡುವುದು ಸೂಕ್ತ ಎಂಬ ನಿರ್ಧಾರ ಅವನದು. 

ಆದರೆ ನವ್ಯಾ ಮಾತ್ರಾ ಅಂತರ್ಮುಖಿಯಾಗತೊಡಗಿದ್ದಾಳೆ. ನಗು, ಮಾತು ಎಲ್ಲವೂ ಕಡಿಮೆಯಾಗತೊಡಗಿದೆ. ಅದು ಮನೆಯವರೆಲ್ಲರ ಗಮನಕ್ಕೂ ಬಂದಿದೆ. ಅವಳ ಖಿನ್ನತೆಯ ಕಾರಣ ತಿಳಿದ ಇಬ್ಬರು ಒಂದೊಂದು ಬಗೆಯ ಪರಿಹಾರ ಯೋಚಿಸಿದ್ದಾರೆ. ಮಂಗಳಮ್ಮನವರಿಗಂತೂ ಸೊಸೆಯದೇ ಚಿಂತೆಯಾಗಿದೆ.

ಇತ್ತೀಚೆಗೆ ಸಮನ್ವಿತಾ ಯಾವುದೋ ಯೋಚನೆಯಲ್ಲಿ ಮುಳುಗಿರುವುದನ್ನು ಗಮನಿಸಿದ್ದ ಅಭಿರಾಮ್. ನಗುತ್ತಾ ಮಾತನಾಡುತ್ತಿದ್ದಳಾದರೂ ಗಂಭೀರತೆಯ ಒಳಗೆ ಅವಿತಿರುತ್ತಿದ್ದ ಲವಲವಿಕೆ ಮಾಯವಾಗಿತ್ತು. ಏನೋ ಕೊರತೆ. ಇದೇ ರೀತಿಯ ಬದಲಾವಣೆಯನ್ನು ನವ್ಯಾಳಲ್ಲೂ ಗಮನಿಸಿದ್ದ. ಅವಳಂತೂ ಮಾತಿಲ್ಲದ ಮೌನ ಗೌರಿ. ಮಂಗಳಮ್ಮನವರು ಅದನ್ನೇ ದಿನಕ್ಕೆ ನೂರು ಬಾರಿ ಹೇಳುತ್ತಿದ್ದರು ಕೂಡಾ. ಇಬ್ಬರ ಬದಲಾದ ನಡವಳಿಕೆಗಳು ಅವನೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ನವ್ಯಾಳ ಹಿನ್ನೆಲೆಯಿಂದ ಅವಳ ಹಾಗೂ ಕಿಶೋರ್ ನಡುವೆ ಏನಾದರೂ ಸಮಸ್ಯೆ ಉದ್ಭವಿಸಿರಬಹುದೇ....? ಎಂಬ ಗೊಂದಲ ಅವನದು. ಎಷ್ಟೋ ಬಾರಿ ಸಮನ್ವಿತಾಳೊಂದಿಗೆ ಕೇಳಬೇಕು ಎಂದುಕೊಳ್ಳುತ್ತಿದ್ದ. ಆದರೆ ಯಾಕೋ ಮನಸ್ಸು ತಡೆಯುತ್ತಿತ್ತು.

ಇಂದೂ ಅವಳನ್ನು ಆಸ್ಪತ್ರೆಯಿಂದ ಮನೆಯತ್ತ ಕರೆದುಕೊಂಡು ಹೊರಟಿದ್ದ. ಅವಳದು ಅದೇ ದಿವ್ಯ ಮೌನ. ಕಾರಿನ ಗಾಜಿನಿಂದ ಆಚೆ ನೋಡುತ್ತಾ ಕುಳಿತ್ತಿದ್ದವಳ ಮುಖದಲ್ಲಿ ವೇದನೆಯ ಗೆರೆಯೊಂದು ಸ್ಪಷ್ಟವಾಗಿತ್ತು. ಎಂದಿನಂತೆ ಸುಮ್ಮನಿರಲಾಗಲಿಲ್ಲ ಅವನಿಗೆ. ಕಾರು ನಿಲ್ಲಿಸಿದ ಅರಿವಾದಾಗ ಸುತ್ತ ನೋಟ ಹರಿಸಿದಳು. ಇನ್ನೂ ಮನೆ ತಲುಪಿರಲಿಲ್ಲ. ಮಧ್ಯದಲ್ಲೇ ನಿಲ್ಲಿಸಿದ್ದ. ಪ್ರಶ್ನಾರ್ಥಕವಾಗಿ ಅವನೆಡೆಗೆ ನೋಟ ಹರಿಸಿದವಳಿಗೆ ಅವನ ಮುಖದಲ್ಲೂ ಪ್ರಶ್ನೆಯೇ ಕಂಡಿತು. 

"ಸಮನ್ವಿತಾ, ಸುಮಾರು ದಿನದಿಂದ ನೋಡ್ತಿದ್ದೀನಿ. ನೀನು ಏನೋ ಚಿಂತೆಯಲ್ಲಿದ್ದೀಯಾ. ಏನಂತಹಾ ಯೋಚನೆ?" ನೇರವಾಗಿತ್ತು ಅವನ ಪ್ರಶ್ನೆ.

ಅವಳಿಗೂ ಅವನ ಬಳಿ ಎಲ್ಲವನ್ನೂ ಹೇಳಿಕೊಳ್ಳುವ ಮನಸ್ಸು. ಒಂದು ವೇಳೆ ಸತ್ಯ ತಿಳಿದು ನವ್ಯಾಳನ್ನು ಮನೆಯಿಂದ ಹೊರತಳ್ಳಿದರೆ ನಮ್ಮೊಂದಿಗೆ ಅವಳಿರಬಹುದೇ ಎಂದು ಕೇಳುವ ಆಸೆ ಕೂಡಾ… ಅವನು ನವ್ಯಾಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾನೆ ಎಂದು ಮನಸ್ಸು ಹೇಳಿದರೂ ಒಪ್ಪಲಾರದ ಚಡಪಡಿಕೆ. ಅಲ್ಲೂ ಅಡ್ಡಿಯಾಗುತ್ತಿದ್ದುದು ನವ್ಯಾಳ ಅತೀತವೇ. ಅವಳ ಬಗ್ಗೆ ತಿಳಿದು ಇವನೂ ಎಲ್ಲರಂತೆ ಅವಳನ್ನು ತಿರಸ್ಕರಿಸಿ ಆಡಿಕೊಂಡರೇ…? ಅದನ್ನು ತಡೆದುಕೊಳ್ಳುವ ಶಕ್ತಿಯಂತೂ ಅವಳಿಗಿಲ್ಲ. ಆ ಗೊಂದಲದಿಂದಲೇ ಅವಳು ಹೈರಾಣಾಗಿದ್ದಳು.

"ನವ್ಯಾ ಕೂಡಾ ಇತ್ತೀಚಿಗೆ ತುಂಬಾ ಮೌನಿಯಾಗಿದ್ದಾರೆ. ಏನೋ ಸಮಸ್ಯೆ ಇದೆ ಅನಿಸುತ್ತೆ. ನಿನ್ನ ಚಿಂತೆಗೂ ನವ್ಯಾಳ ಸಮಸ್ಯೆನೇ ಕಾರಣನಾ?" ಈ ಬಾರಿ ತನಗೆ ಅನಿಸಿದ್ದನ್ನು ಕೇಳಿದ.

ಅವನೇ ನವ್ಯಾಳ ವಿಷಯ ತೆಗೆದಾಗ ಹೌದೆಂದು ತಲೆಯಾಡಿಸಿದವಳು, "ಅಭಿರಾಮ್, ನಾನೇನೋ ಕೇಳ್ಬೇಕಿತ್ತು ನಿಮ್ಮ ಹತ್ರ. ಮೊನ್ನೆಯಿಂದ ಯೋಚಿಸ್ತಾ ಇದ್ದೀನಿ. ಆದ್ರೆ ಹೇಗೆ ಕೇಳೋದು ಅಂತ ಗೊತ್ತಾಗ್ತಿಲ್ಲ" ಎಂದಳು ಮೆಲ್ಲಗೆ.

ಅವನು ಮೆಲುನಗೆ ನಕ್ಕು ಅವಳ ಕೈ ಹಿಡಿದುಕೊಂಡು, "ನೋಡಮ್ಮಾ, ನೀನು ನನ್ಹತ್ರ ಯಾವ ವಿಷಯನಾದ್ರೂ ಯಾವುದೇ ಸಂಕೋಚ ಇಲ್ಲದೇ ಮಾತಾಡಬಹುದು. ಆದ್ರೆ ದಯವಿಟ್ಟು ಈ ತರ ಯಾವ್ದೊ ಯೋಚನೆಯಲ್ಲಿ, ಚಿಂತೆಯಲ್ಲಿ ಮುಳುಗಿ ಕಳ್ದು ಹೋಗಬೇಡ ಅಷ್ಟೇ. ಒಂದು ವಿಷಯ ನೆನಪಿಡು. ಐ ಟ್ರಸ್ಟ್ ಯು. ನಾನು ನಿನ್ನ ನನಗಿಂತಲೂ ಜಾಸ್ತಿ ನಂಬ್ತೀನಿ. ಈಗ ಹೇಳು ಏನು ವಿಷಯ……." ಅವನ ಮಾತಿನಲ್ಲಿ ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನೊಂದಿಗೆ ಇರುವೆ ಎನ್ನುವ ಭರವಸೆಯಿತ್ತು. ಮತ್ತೇನೂ ಯೋಚಿಸಲಿಲ್ಲ ಅವಳು.

"ಅಭಿ, ಏನೋ ಕಾರಣದಿಂದ ನವ್ಯಾ ಕಿಶೋರನ ಮನೆಯಿಂದ ಹೊರಬರೋ ಪರಿಸ್ಥಿತಿ ಬಂದ್ರೆ, ಯಾವುದೇ ಪ್ರಶ್ನೆಗಳಿಲ್ಲದೇ ಅವಳನ್ನು ನಮ್ಮ ಜೊತೆ ಇರಿಸಿಕೊಳ್ಳೋಕೆ ಒಪ್ತೀರಾ?"

ನವ್ಯಾಳ ಹಿನ್ನೆಲೆ ಕಿಶೋರ್ ಮತ್ತವನ ಮನೆಯವರಿಗೆ ತಿಳಿದಿಲ್ಲ ಎಂಬ ಸಂಶಯ ಸಮನ್ವಿತಾಳ ಬೇಡಿಕೆಯಿಂದ ಬಲವಾಗತೊಡಗಿತು ಅಭಿಯ ಮನದಲ್ಲಿ.

"ಖಂಡಿತಾ. ನಾನೂ ಒಪ್ತೀನಿ, ಮನೆಯಲ್ಲೂ ಸಂತೋಷದಿಂದ ಒಪ್ತಾರೆ. ಆದರೆ ಹಾಗಾಗೋದು ಬೇಡ ಅಂತ ನಾನು ಬಯಸ್ತೀನಿ ಸಮನ್ವಿತಾ....."

ಒಂದೂ ಪ್ರಶ್ನೆ ಕೇಳದೇ ಒಪ್ಪಿದವನ ಬಗ್ಗೆ ಅಕ್ಕರೆಯೆನಿಸಿತು. "ಥ್ಯಾಂಕ್ಯೂ ಸೋ ಮಚ್ ಅಭಿ. ನನ್ನದೂ ಅದೇ ಆಸೆಯೇ. ಆದ್ರೆ…. ಕೆಲವು ಸತ್ಯಗಳು, ಸಮಾಜದ ಕೆಲವು ಕಟ್ಟುಪಾಡುಗಳು...... ಬದುಕನ್ನು ಬಲಿ ತಗೊಳ್ಳುವಷ್ಟು ಕಠೋರವಾಗಿರುತ್ತವೆ" ಎಂದಳು ಖೇದದಲ್ಲಿ.

ತನಗೆ ಸತ್ಯ ತಿಳಿದಿದೆ ಎಂದು ಅವಳಿಗೆ ಹೇಳಲೋ ಬೇಡವೋ ಎಂಬ ಜಿಜ್ಞಾಸೆಗೆ ಬಿದ್ದಿದ್ದ ಅವನು. ಯಾಕೋ ಮುಚ್ಚಿಡುವುದು ಸರಿಕಾಣಲಿಲ್ಲ. ತನ್ನಿಂದ ಏನಾದರೂ ಸಹಾಯವಾಗಬಹುದೇನೋ ಎನಿಸಿತು.

"ಸಮನ್ವಿತಾ......"

ಅವನು ಕರೆದಾಗ ಏನು ಎಂಬಂತೆ ಅವನತ್ತ ನೋಡಿದಳು.

"ನಾನು ನಿನ್ನ ಹಲವು ವರ್ಷಗಳ ಮುಂಚೆ ನವ್ಯಾಳ ಜೊತೆ ನೋಡಿದ್ದೆ ಅಂತ ಅವತ್ತು ಆಸ್ಪತ್ರೆಯಲ್ಲಿ ಹೇಳಿದ್ದೆ ನೆನಪಿದೆಯಾ?" 

ಅವಳು ಹೌದೆಂದು ತಲೆಯಾಡಿಸಿದಳು. ಆದರೂ ಈಗೇಕೆ ಆ ಮಾತು ಎಂಬ ಪ್ರಶ್ನೆಯಿತ್ತು ಅವಳ ಕಣ್ಣುಗಳಲ್ಲಿ.

"ನಾನು ನಿಮ್ಮಿಬ್ಬರನ್ನು ಎಲ್ಲಿ ನೋಡಿದ್ದು ಅಂತ ಕೇಳಲೇ ಇಲ್ಲ ನೀನು?"

"ನೀವೇ ತಾನೆ ಅವತ್ತು ಮತ್ತೇನೂ ಪ್ರಶ್ನೆ ಕೇಳ್ಬೇಡಾ ಅಂದಿದ್ದು. ಆಸ್ಪತ್ರೆಯಲ್ಲಿ ನೋಡಿರ್ಬಹುದು. ಇನ್ನೆಲ್ಲಿ ನೋಡಿರ್ತೀರಾ? ಹೇಗೂ ಆಗಾಗ ಡೊನೇಷನ್ ಕೊಡೋಕೆ ಅಂತ ಅಲ್ಲಿಗೆ ಬರ್ತಾ ಇದ್ರಲ್ಲ" ಎಂದಳು.

"ನಾನು ನಿನ್ನ ಧನ್ವಂತರಿಯಲ್ಲಿ ನೀನು ಅಡ್ಮಿಟ್ ಆದಾಗ್ಲೇ ನೋಡಿದ್ದು. ನೀನಲ್ಲಿ ಕೆಲ್ಸ ಮಾಡ್ತಿದ್ದೆ ಅಂತ ಅವತ್ತು ನೀನು ಹೇಳ್ದಾಗ್ಲೇ ಗೊತ್ತಾಗಿದ್ದು….." ಎಂದಾಗ ಅವಳಿಗೆ ಅಚ್ಚರಿಯಾಯಿತು. ಜೊತೆಗೊಂದು ಸಣ್ಣ ಅನುಮಾನ.

"ಮತ್ತೆ ನೀವು ನನ್ನ ಎಲ್ಲಿ ನೋಡಿದ್ದು? ಅದೂ ನವ್ಯಾ ಜೊತೆಯಲ್ಲಿ…....?"

"ಪೋಲಿಸ್ ಸ್ಟೇಷನಲ್ಲಿ... ಸುಮಾರು ನಾಲ್ಕು ವರ್ಷಗಳ ಹಿಂದೆ. ನೀನು, ನವ್ಯಾ ಜೊತೆಗೆ ಇನ್ನೂ ನಾಲ್ವರು ಹುಡುಗಿಯರಿದ್ದರು…....." ನಿಧಾನವಾಗಿ ಅವನು ಹೇಳುತ್ತಿದ್ದರೇ ಸಮನ್ವಿತಾ ಅವನನ್ನೇ ಬೆರಗುಗಣ್ಣಿನಿಂದ ದಿಟ್ಟಿಸುತ್ತಾ ಶಿಲೆಯಿಂತೆ ಕುಳಿತುಬಿಟ್ಟಳು....

          ******ಮುಂದುವರೆಯುತ್ತದೆ******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ